ಮೊದಲೇ ಬಿನ್ನಾ ಹೇಳಿದ ಪ್ರಕಾರ, ಮಣ್ಣೆತ್ತಿನ ಅಮವಾಸೆಯ ದಿನ ಮಧ್ಯರಾತ್ರಿಯ ಸುಮಾರಿಗೆ ಲಕ್ಷ್ಮಣ್ಣ, ನರಸ್ಯಾ, ಬಾಬು, ಗೋಪಾಲಿ ಸುನಗದ ಗುಡ್ಡದಿಂದ ತೆಗ್ಗಿಯ ಕಡೆಗೆ ಹೊರಟರು. ಅಮವಾಸೆಯ ಕಾರ್ಗತ್ತಲೆ ಸುತ್ತಲೂ ವ್ಯಾಪಿಸಿತ್ತು. ರಾತ್ರಿಯಲ್ಲೆ ತಿರುಗಾಡಿದ ಅವರಿಗೆ ಕತ್ತಲೆಯ ಭಯವೇ ಇರಲಿಲ್ಲ. ಕಾಡಮೃಗಗಳ ಅಂಜಿಕೆಯಂತೂ ಮೊದಲೇ ಇರಲಿಲ್ಲ. ಲಕ್ಷ್ಮಣನ ಕೈಯಲ್ಲಿ ಕೊಡಲಿ ಇತ್ತು. ನರಸ್ಯಾನ ಹೆಗಲಿಗೆ ಬಂದೂಕು ಇತ್ತು. ಸಾಬು ಗೋಪಾಲಿಯರ ಕೈಯಲ್ಲಿ ಭರ್ಚಿಗಳಿದ್ದವು. ಸದ್ದು ಮಾಡದೇ ನಾಲ್ವರೂ ಬೀಳಗಿಯ ಕಣವಿ ದರ್ಗಾ ದಾಟಿ ನಾಗರಾಳ ಹಳ್ಳಕ್ಕೆ ಬಂದು, ಅಲ್ಲಿಂದ ಕಪ್ಪರ ಪಡಿಯವ್ವನ ಗುಡ್ಡದ ಕಡೆಗೆ ಸಾಗಿದರು. ನಡೆಯುತ್ತ ಹೋಗುವಾಗ ದಾರಿಯಲ್ಲಿ ಲಕ್ಷ್ಮಣ

ನರಸ್ಯಾ

ಯಾಕ ಮಾಂವಾ? ಎಂದ ನರಸ್ಯಾ

ಈವತ್ತ ಬೆಳಗಿನ ಜಾವದಾಗ ನನಗೊಂದ ಕನಸ ಬಿದ್ದಿತ್ತು

ಎಂಥಾ ಕನಸು ಮಾಂವಾ ಸಾಬು ಕೇಳಿದ

ಭಂಯಕರ ಕನಸು ಭಯಾನಕ ಕನಸು

ಹೌದಾ ಮಾಂವಾ

ಕ್ವಾಣಾ ಹತಿಗೊಂಡು ಯಮಾ ಬಂದಾ. ಮನ್ಯಾಗ ನಾನು ಚಂದ್ರಿ ಒಂದ.. ಹಾಸಿಗ್ಯಾಗ ಮಲಗಿದ್ವಿ. ಯಮಾ ಬಂದವ್ನ.. ನನ್ನ ಕುತ್ತಿಗ್ಗೆ ಹಗ್ಗ ಹಾಕಿ ಜಗ್ಗಾಕ ಹತ್ತಿದ್ದಾ

ಹೌದಾ ಮಾಂವಾ

ಚಂದ್ರಿಗೆ ಎಚ್ಚರಾತು. ಯಮನ್ನ ನೋಡಿ ಹೌಹಾರಿದಳು. ನನ್ನ ಗಂಡನ್ನ ಬಿಟ್ಟ ಬಿಡು ಅಂತ ಯಮನ ಕಾಲಿಗಿ ಬಿದ್ದು ಗೋಗರೆದಳು. ಆದರೂ ಯಮಾ ಕೇಳಲಿಲ್ಲಾ

ಮುಂದೇನಾತು ಮಾಂವಾ? ನರಸ್ಯಾ ಕೇಳಿದ

ಯಮಾ ಚಂದ್ರೀ ಹಣೀಮ್ಯಾಗಿನ ಕುಂಕಮಾ ಅಳಿಕಿಸಿದಾ

ಮಾಂವಾ! ಮೂವರೂ ಅಳಿಯಂದಿರು ಗಾಬರಿಯಾದರು.

ಕೊಳ್ಳಗಿನ ತಾಳೀ ಸರಾ ಹರದಾ

ಮಾಂವಾ!

ಕೈಯಾಗಿನ ಬಳಿ ಒಡದಾ

ಮಾಂವಾ!, ಇದೇನೊ ಘಾತ ಆಗೂವಂಗ ಕಾಣತೈತಿ, ನರಸ್ಯಾ ಹೇಳಿದ.

ಇಂಥಾ ಕೆಟ್ಟ ಕನಸ ಬೀಳಬೇಕಾರ ಮುಂದ ನಿನಗೇನೊ ಅನಿಷ್ಟ ಅಕ್ಕಿರಬೇಕು ಸಾಬು ಹೇಳಿದ ಮಾಂವಾ ಈಗ ಉಣ್ಣಾಕ ಹೋಗೂದು ಬ್ಯಾಡಾ

ಈಗ ನಾವು ತಿರಗಿ ಜಾನಮಟ್ಟಿಗೆ ಹೋಗೂನು ನಡಿ ಮಾಂವಾ

ಬೆಳಗಿನ ಜಾವದಾಗ ಬಿದ್ದ ಕನಸು ನಿಜಾ ಆಗತಾವಂತ ಶಾಬಾದದ ಪೂಜೇರಿ ಶರಣಪ್ಪ ನನಗ ಹೇಳಿದ್ದಾ. ಆ ನಿಡೋಣಿ ದುಂಡ್ಯಾ ಸಾಯುವ ಮುಂದೂ ನನಗ ಇಂಥಾದ್ದ ಒಂದ ಕೆಟ್ಟ ಕನಸ ಬಿದ್ದಿತ್ತು. ನರಸ್ಯಾ ಈಗ ಉಣ್ಣಾಕ ಹೋಗಬೇಕೊ ಬಿಡಬೇಕೊ ತಿಳಿದಂಗಾತು. ಅದರಾಗ ತೆಗ್ಗಿ ನಾಯಕರು ಹೇಳಿ ಕಳಿಸ್ಯಾರ…”

ಮಾಂವಾ ಮಣ್ಣೆತ್ತಿನ ಅಮಾಸಿ ತೆಗ್ಗಿ ನಾಯಕರು ಕಪ್ಪರ ಪಡಿಯವ್ವನ ಹರಕಿ ಹಬ್ಬಾ ಮಾಡಿಸ್ಯಾರ. ಬ್ಯಾಟಿ ಅಡಿಗಿ. ಉಣ್ಣಾಕ ಬರ್ರೆಂತ ವಾಲೀಕಾರ ಶಿವಪ್ಪನ್ನ ಕೊಟ್ಟು ಮುದ್ದಾಮ ಕಾಳಜೀ ಮಾಡಿ ಹೇಳಿ ಕಳಿಸ್ಯಾರ. ಹೋಗದಿದ್ರ ತಪ್ಪಾಗೂದಿಲ್ಲ ಮಾಂವಾ? ನರಸ್ಯಾ ಲಕ್ಷ್ಮಣನನ್ನೂ ಕೇಳಿದ.

ಅದೆಲ್ಲಾ ಹೌದೊ ನರಸಣ್ಣಾ, ಆದ್ರ ಆವತ್ತ ಉಣ್ಣಾಕ ಹೇಳಾಕ ಜಾನಮಟ್ಟಿಗಿ ಬಂದಿದ್ದ ವಾಲೀಕಾರ ಶಿವಪ್ಪನ ಮಾರಿ, ಒಂದ ನಮೂನಿ ಕರ್ರಗ ಆಗಿತ್ತು ಸಾಬು ಸಂಶಯ ವ್ಯಕ್ತಪಡಿಸಿದ.

ಎಂದಿನಂಗ ಅವನ ಬಾಯಾಗಿಂದ ಮಾತೂ ನಿಚ್ಚಳಾಗಿ ಬರಲಿಲ್ಲ ಸಾಬುನ ಮಾತಿಗೆ ಗೋಪಾಲಿ ಪುಸ್ಟಿಕೊಟ್ಟ.

“ಮಾಂವಾ ಒಂದ ತಿಳಿ ಅಂದ್ರ, ಹತ್ತ ತಿಳೀತಾವ. ಗೇನಸ್ಕೊತ ನಿಂತ್ರ ತಡಾ ಅಕ್ಕತಿ. ಶಿವಪ್ಪಾ ನಮ್ಮ ದಾರಿ ನೋಡತಿರಬೇಕು. ನಡ್ರಿ ಗಡಾನ ಹೋಗೂನು” ನರಸ್ಯಾ ಅವಸರ ಮಾಡಹತ್ತಿದ.

“ಹೌದ್ರಲೇ, ನರಸ್ಯಾ ಹೇಳೂ ಮಾತೂ ಖರೇ ಐತಿ. ಈಗ ನಾವು ಉಣ್ಣಾಕ ಹೋಗದಿದ್ರ ನಾಯಕರು ಮನಸಿಗೆ ನೋವ ಮಾಡಿಕೊಳ್ಳಾಕಿಲ್ಲ? ನಡ್ರಿ ನಾಯಕರ ಮನಸು ನರಸವ್ವ ತಾಯಿ ಹೊಟ್ಟಿಯಿದ್ದಂಗ. ನಮ್ಮ ಹಣೇಬರಾನ ಕೆಟ್ಟಯಿದ್ದರ ನಾಯಕರೇನ ಮಾಡತಾರ? ನಡ್ರಿ ನಡ್ರಿ ಹೋಗೂನು” ಲಕ್ಷ್ಮಣ ಹೊರಡಲನುವಾದನು.

ಹತ್ತು ಹೆಜ್ಜೆ ಮುಂದೆ ಹೋಗುವಷ್ಟರಲ್ಲಿ ಗಿಡದಲ್ಲಿ ಕುಳಿತಿದ್ದ ಗೂಗಿಯೊಂದು ಒದರಿತು.

ಅಗಾ ಮಾಂವಾ ಗೂಗಿ ಒದರಾಕ ಹತ್ತ್ಯು. ಯಾಳೆ ಸುಮಾರ ಇದ್ದಂಗೈತಿ, ಸಾಬುನ ಸಂಶಯ ಬಲಿಯ ತೊಡಗಿತು.

ಹೌದಲ್ರೆಲೆ, ನನ್ನ ಎಡಗಣ್ಣೂ ಹಾರಕ ಹತ್ತ್ಯು. ಏನ ಆಗಲಿ ಅಮಾಸೀ ದಿನ ಇದ್ದ ಜಾಗಾ ಬಿಡಬ್ಯಾಡ್ರಿ ಅಂತ ಚಿಗರಿ ಯಮನಪ್ಪನೂ ಹೇಳಿದ್ಯಾ, ನರಸ್ಯಾ ನಮಗೇನಾರ.. ಲಕ್ಷ್ಮಣ ಮಾತು ನಿಲ್ಲಿಸಿದ.

“ಮಾಂವಾ ಅದ… ದಿಕ್ಕಿನಾಗ ಚಿಕ್ಕಿಬಿತ್ತು” ಗೋಪಾಲಿ ಶಕುನ ನುಡಿದ.

ಮಾಂವಾ ಶಕುನಾ ನೋಡೇ ಹೆಜ್ಜೆ ಇಡದಾದ್ರ ಹೆಂಗಸರಿಗೆ ನಮಗ ಭೇದ ಏನಿ ಉಳಿತು? ಆರೋಪ ಹೊತ್ತಕೊಂಡು ಯಾವತ್ತ ಊರಬಿಟ್ಟ ಹೊರಬಿದ್ದಿವೋ ಅಂದ ನಾವು ಸತ್ತೀವಿ. ಈಗ ಸಾವಿಗ್ಯಾಕ ಅಂಜಬೇಕು? ಸಾವಿಗಂಜಿದ್ರ ನಾವು ಸರಕಾರದ ವಿರುದ್ಧ ಸಡ್ಡಹೊಡೆದು ಏನ ಸಾಧಿಸಿದಂಗಾತು? ಈಗ ಊಟಕ್ಕ ಹೋಗೂದ ಬ್ಯಾಡ ಅಂದ್ರ ಸೋತೀವಿ ಅಂತ ಹೇಳಿ, ಸುಮ್ಮನ ಸರಕಾರಕ್ಕ ಶರಣ ಹೋಗೂದ… ಪಾಡ ಅಲ್ಲೇನು? ಇದು ನರಸ್ಯಾನ ಸೂಚನೆ.

ನರಸ್ಯಾ, ಧೈರೇ ಐತಿಲ್ಲೊ ಅಂತ, ನೀನು ನನ್ನ ಎದ್ದಿ ಬಡದುಕೇಳಾಕ ಹತ್ತೀದಿ ಅಂಧಂಗಾತು. ಧೈರ್ಯ ಬಿಟ್ರ ಈ ಲಕ್ಷ್ಮಣನ ಹಂತೇಕ ಇನ್ನೇನ ಉಳೀತೈತಿ. ನರಸ್ಯಾ, ಸರ್ಕಾರಕ್ಕ ಶರಣ ಹೋಗೂದು ಪಾಡ ಅಂದೆಲ್ಲಾ… ಈ ಲಕ್ಷ್ಮಣನ ಜೀವನದಾಗ ಸೋಲು, ಶರಣು ಇವರೆಡ ಮಾತು ಸಾವ ಬಂದ್ರೂ ಸಾಧ್ಯಯಿಲ್ಲ. ಹೇಳಿ ಕಳಿಸ್ಯಾರ ಅಂದಾಗ ಉಣ್ಣಾಕ ಬರತೀನಿ ಅಂತ ನಾನು ಶಿವಪ್ಪಗ ಮಾತ ಕೊಟ್ಟ ಕಳಿಸೀನಿ. ಹೋಗಬೇಕಾದದ್ದು ನನ್ನ ಧರ್ಮಾ ಮುಂದೇನಾರ ಕೆಡಕ ಕಾದಿತ್ತಂದ್ರ ಅದು ನನ್ನ ಕರ್ಮಾ. ಯಾಕ ಚಿಂತಿ ಮಾಡತೀರಿ ನಡ್ರಿ ಹೋಗೂನು ಲಕ್ಷ್ಮಣ ಮುಂದೆ ಮುಂದೆ ಹೆಜ್ಜೆ ಹಾಕುತ್ತ ನಡೆದ. ಆಗ ಮೂವರು ಅಳಿಯಂದಿರು,

ಆಗಲಿ ನಡೀ ಮಾಂವಾ… ನಿನ್ನ ಮಾತ ನಾವ್ಯಾಕ ಮೀರೂನು? ನರಸ್ಯಾ ಸಾಬು ಗೋಪಾಲಿ ಮೂವರೂ ತಮ್ಮ ಮಾಂವನೊಂದಿಗೆ ಹೆಜ್ಜೆ ಹಾಕುತ್ತ ಕಪ್ಪರ ಪಡಿಯವ್ವನ ಗುಡ್ಡಕ್ಕೆ ತಲುಪಿದರು.

ಗುಡ್ಡದಡಿಯಲ್ಲಿ ಪಡಿಯವ್ವನ ಗುಡಿಯ ಮುಂದಿನ ಬಾವಿಯ ಹತ್ತರ ಸ್ವಲ್ಪ ಬಯಲಿನಲ್ಲಿ ಬ್ಯಾಟಿ ಅಡಿಗೆ ತಯಾರಿಸಿಕೊಂಡು ತೆಗ್ಗಿಯ ವಾಲೀಕಾರರಾದ ಶಿವಪ್ಪ ಮತ್ತು ಪಾಮಲಿ ಸೋಮ ಸಿಂಧೂರಿನವರು ಬರುವುದನ್ನೇ ಕಾಯುತ್ತ ನಿಂತಿದ್ದರು.

ಸರಿರಾತ್ರಿ ಮಿಕ್ಕಿ ಹೋತು. ಸಿಂಧೂರ ಮಂದಿ ಇನ್ನ ಬರಲಿಲ್ಲಾ ನಾವು ಹಾಕಿದ್ದು ಅವ್ರಗೇನಾರ ಗೊತ್ತಾಗಿರಬೇಕನೆ ಸೋಮಾ? ಶಿವಪ್ಪ ಪ್ರಶ್ನಿಸಿದ.

ಹಾಂಗೇನಿಲ್ಲ ಬಿಡೊ ಶಿವಪ್ಪ ಈ ಠವ್ವ ಹಾಕಿದವರು ನಾವಿಬ್ರ ಅಲ್ಲೇನೂ ನಮ್ಮ ಗೌಡ್ರಿಗೆ ಸತೆ ಗೊತ್ತಿಲ್ಲಪಾ. ಈಗ ನಾವು ಮಾಡಿದ ಮಸಲತ್ತು.

ನಮ್ಮಿಬ್ಬರಿಗೆ ಯಾಕೋ ಆ ಗಾರ್ಮನ್ ಸಾಹೇಬ್ರಿಗೆ ಗೊತ್ತಿಲ್ಲೇನು? ಆ ಲಕ್ಷ್ಮಣ್ಣನ್ನ ನಾವು ಮುಗಸ್ತೀವೆಂತ ಅವರಿಗೆ ಹೇಳಿಲ್ಲೇನು?

ಗಾರ್ಮನ್ ಸಾಹೇಬ್ರಿಗೆ ಗೊತ್ತೈತಿ ಬಿಡರೀ ಮತ್ತ. ಅದಕ.. ಅವರು ಲಕ್ಷ್ಮಣನ ಕೊಂದ ಅಪವಾದಾ ನಿಮ್ಮ ಗೌಡ್ರಮ್ಯಾಲೆ ನಿಮ್ಮ ಮ್ಯಾಲೆ ಬರಲಾರದಂಗ ನಾನು ಯವಸ್ತಾ ಮಾಡತೀನಿ. ಒಬ್ಬ ಪೋಲಿಸಾ, ಲಕ್ಷ್ಮಣ್ಣಗ ಗುಂಡ ಹಾಕ್ಯಾನಂತ ಸರ್ಕಾರಿ ಕಚ್ಚೇರ್ಯಾಗ ಬರತೀನೆಂತ ಹೇಳ್ಯಾರ.

ಇದರಾಗ ನಮ್ಮ ಗೌಡ್ರು ಉಳೀತಾರ, ನಾವೂ ಉಳೀತೀವಿ. ಮತ್ತಿನ್ನ ಅಂಜ್ಕಿ ಯಾಕ? ಸೊಮಾ ನೀ ಮಾತ್ರ ಬಾಳ ಹುಶ್ಯಾರದಿಂದ ಈ ಕೆಲಸ ಮಾಡಬೇಕ ನೋಡು. ಅಕಸ್ಮಾತ್ ಗುರೀ ತಪ್ಪಿ ಗುಂಡ ಬಡೀಲಿಲ್ಲಾ ಅಂದ್ರ, ಇಇಲೆ ನಮ್ಮಿಬ್ಬರೂ ಕತಿ ಮುಗಿಸಿ ಬಿಡತಾನ ಆ ಲಕ್ಷ್ಮಣ್ಣಾ

ಮೀನಿಗೆ ಈಸ ಕಲಸ್ತೀಯೇನೂ ಶಿವಪ್ಪಾ ಈ ಪಾಮಲಿ ಸೋಮಾ ಎಷ್ಟಬ್ಯಾಟಿ ಆಡ್ಯಾನ ಗೊತ್ತೈತಿಲ್ಲ ನಿನಗ? ಸೋಮನ ಗುರಿ ತಪ್ಪಿದ್ರ ಹುಟ್ಟಬೇಕ ಯಾಕ ಈ ಮಗಾ ಬ್ಯಾಡರ ಜಾತ್ಯಾಗ. ನೀವು ಕಂದೀಲ ಎತ್ತಿ ನನಗ ತೋರಿಸಿ ಅದನ್ನ ಲಕ್ಷ್ಮಣ್ಣನ ಮುಂದ ಇಟ್ಟ ಬಿಡು. ಅದ… ಗುರ್ತಿನ ಮ್ಯಾಲೇ ನಾನು ಗುಂಡ ಹಾರಸ್ತೀನಿ.

ಹೂಂ. ಹೆಜ್ಜೆ ಸಪ್ಪಳ ಕೇಳಿ ಬರತೈತಿ ಬ್ಯಾಟಿ ಬರಾಕಹತ್ತೇತಿ. ಬಂದೂಕ ಬಾರ್ ಮಾಡಿಕೊಂಡು ಕೈಯಾಗ ತಯಾರ ಇರ್ಲಿ. ಹೋಗ ನೀನು ಕಂಟೀ ಹಿಂದಿನ ಕಲ್ಲಬಂಡಿ ಹಿಂದೆ ಅಡಗಿಕೊಂಡ ಕುಂಡ್ರೂ.

ಸೋಮ ಹೋಗಿ ಮರೆಯಲ್ಲಿ ಅಡಗಿ ಕುಳಿತ. ಲಕ್ಷ್ಮಣ, ಸಾಬು, ಗೋಪಾಲಿ, ಒಬ್ಬರ ಹಿಂದೊಬ್ಬರು ಬಂದು, ಕಪ್ಪರ ಪಡಿಯವ್ವ ದೇವಿಗೆ ನಮಸ್ಕಾರ ಮಾಡಿ, ಕೆಳಗೆ ಇಳಿದು, ಅಡಿಗೆ ಮಾಡಿದ ಸ್ಥಳಕ್ಕೆ ಬಂದರು.

ಶಿವಪ್ಪಾ, ಲಕ್ಷ್ಮಣ ಕರೆದ.

ಬರ್ರೆಪ್ಪ ಲಕ್ಷ್ಮಪ್ಪ ಎಷ್ಟ ತಡಾ ಮಾಡಿದ್ರಿ? ಅಡಿಗಿ ಆರಿ ಹೋಗತೈತಿ ಉಣ್ಣಾಕ ಕುಂತ…ಬಿಡ್ರಿ. ಶಿವಪ್ಪ ಅವರಿಗೆ ತಾಟು ಹಾಕಿದನು.

ಶಿವಪ್ಪ ಆ ಗುಡ್ಡದ ವಾರ್ಯಾಗ ಏನೋ ಬೆಳಕ ಕಾಣತೈತೆಲ್ಲ? ನರಸ್ಯಾ ಸಂಶಯ ಬಂದು ಕೇಳಿದ.

ಅದು ತೆಗ್ಗಿ ಮಂದಿ ಊಟಾ ಮುಗ್ಗಿಸ್ಕೊಂಡು ಊರಿಗೆ ಹೊಂಟಾರ. ಅಮಾಸಿ ಕತ್ತಲಾ ದಾರಿ ಕಾಣೂದಿಲ್ಲಾಂತ ಹಿಲಾಲ ದೀಪಾ ಹಚಿಗೊಂಡ ಹೊಂಟಾರಪೋ.

ಶಿವಪ್ಪಾ ಬೀಳಗಿ ದಾರಿ ಹಿಡಿದು ಈವತ್ತ ಎತ್ತಿನಗಾಡಿ ತೆರಪಿಲ್ಲದ ಸಾಲಗಟ್ಟಿ ಹೋಗಾಕ ಹತ್ತ್ಯಾವಲ್ಲ

ನಾಳಿಗೆ ಕಣವಿ ದರ್ಗಾದ ಹಸನ ಡೋಂಗ್ರಿ ಪೀರನ ಉರಸ ಐತಪೋ ಆದಕ ದೇವರಿಗೆ ಬೇಡಿಕೊಂಡ ಭಕ್ತರು ಜಾತ್ರಿಗೆ ಹೊಂಟಾರ.

ನರಸ್ಯಾ, ಕಣವಿ ದರ್ಗಾದ ಡೋಂಗ್ರಿ ಪೀರ ಸತ್ಯುಳ್ಳ ದೇವರು ಅಂತ ಕೇಳೀನಿ ನಾಳೆ ನಾವು ದರ್ಗಾಕ ಹೋಗಿ, ದೇವರಿಗೆ ಸಕ್ರಿ ಊದಿಸಿ ಬರೂನು

ಆಗಲಿ ಮಾಂವಾ ಹಾಂಗ… ಮಾಡನು ನರಸ್ಯಾ ಹೇಳಿದ.

ಶಿವಪ್ಪ ಅವರ ಮುಂದಿನ ತಟ್ಟೆಯಲ್ಲಿ ಊಟಕ್ಕೆ ಬಡಿಸಿದ.

ಲಕ್ಷ್ಮಪ್ಪಾ ತಗೊಳ್ರೆಪಾ ಊಟಾ ಮಾಡ್ರಿ. ನಾಲ್ವರು ಊಟ ಮಾಡಲಾಂರಂಭಿಸಿದರು. ಶಿವಪ್ಪ ಅಡಿಗಿ ಬಾಳ ರುಚಿಕಟ್ಟಾಗೈತೆಪ ಇಂಥಾ ಬ್ಯಾಟೀ ಊಟಾ ನಾ ಎಂದೂ ಮಾಡಿಲ್ಲ ನೋಡು.

ಮುದ್ದಾಮ ನಿನ್ನ ಸಲುವಾಗೇ ಈವತ್ತ ಪೇಶೆಲ್ ಅಡೀಗಿ ಮಾಡಿಸೇನೆಪೋ ಲಕ್ಷ್ಮಣ್ಣಾ ಅಡಿಗಿ ರುಚಿಯಾಗೈತೆಲ್ಲ? ಶಿವಪ್ಪ ಕಂದೀಲು ಎತ್ತಿ ಹಿಡಿಯುವನು.

ಶಿವಪ್ಪಾ, ಕಂದೀಲ ಯಾಕ ಎತ್ತಿ ಹಿಡೀತೀದಿ? ಉಣ್ಣಾಕ ನಮಗಿಲ್ಲಿ ಕತ್ತಲು ಆಗೂದಿಲ್ಲೇನು? ಕೆಳಗ ಇಡು ಕಂದೀಲ ನರಸ್ಯಾ ಹೇಳಿದ.

ಇದರಾಗ ಎಣ್ಣಿ ಐತಿಲ್ಲೋ ಅಂತ ನೋಡೀದ್ನೆಪ್ಪಾ. ನರಸಪ್ಪಾ ಎಣ್ಣಿ ಇರೂತನಕಾ ದೀಪಾ ಉರೀತೈತಿ. ಎಣ್ಣಿ ತೀರಿದ ಮ್ಯಾಲೆ ದೀಪ ಆರಿ ಕತ್ತಲಾಗತೈತಿ. ನಿಮ್ಮ ಊಟ ಮುದಿಯೂತನಕಾನರ ದೀಪಾ ಉರಿಬೇಕಲ್ಲಪಾ ಶಿವಪ್ಪ ಕಂದೀಲನ್ನು ಲಕ್ಷ್ಮಣನ ಮುಂದೆ ಇಟ್ಟನು.

ಲಕ್ಷ್ಮಪ್ಪಾ ಗಡಬಿಡಿ ಮಾಡಬ್ಯಾಡ್ರಿ, ನಿದಾನಿಸಿ ಸಾವಕಾಸ ಹೊಟ್ಟೆತುಂಬ ಊಟಾ ಮಾಡ್ರಿ. ನಿಮಗ ಕುಡಿಯಾಕ ನಾನು ನೀರ ತಗೊಂಡಬರತೀನಿ.

ಶಿವಪ್ಪ ಅವರಿಂದ ದೂರಸರಿದು ಮರೆಯಾದನು. ನಾಲ್ವರೂ ಊಟ ಮಾಡುತ್ತಿರುವಾಗ ಬಂಡೆಗಲ್ಲಿನ ಮರೆಯಲ್ಲಿದ್ದ ಪಾಮಲಿ ಸೋಮ ಬಂದೂಕಿನಿಂದ ಗುಂಡು ಹಾರಿಸಿದ. ಢಮ್ ಅಂತ ಶಬ್ದ ಮಾಡಿ ಅದು ಲಕ್ಷ್ಮಣಗ ಬಡೆಯಿತು.

ಹಾಯ್…. ಘಾತ ಆತಲೇ ನರಸ್ಯಾ ಘಾತ ಆತು. ಯಾರೋ ನನಗ ಗುಂಡ ಹಾಕಿದ್ರು ಲಕ್ಷ್ಮಣ ಅರಚಿಕೊಂಡು ನೆಲಕ್ಕೆ ಉರುಳಿದ. ಬಾಯಲ್ಲಿ ಹಾಕಿಕೊಂಡಿದ್ದ ಅನ್ನ ಬಾಯಿಂದ ಹೊರಬಂದಿತು.

ಮಾಂವಾ ಉಣ್ಣಾಕ ಹೋಗೂದು ಬ್ಯಾಡಂದ್ರೂ ನೀನು ಕೇಳಲಿಲ್ಲ ಗಾಬರಿಯಾದ ಸಾಬು ಹೇಳಿದ.

ನಮ್ಮ ಪಾಲಿನ ಎಡೀ ನಾವ… ಉಣ್ಣಬೇಕಲ್ಲವೇ ಸಾಬು. ಈವತ್ತ ಇಲ್ಲೆ ನನ್ನ ಸಲುವಾಗೇ ಬ್ಯಾಟೀ ಅಡೀಗಿ ಮಾಡಸಿದ್ರೂ… ಅದನ್ನ ನಾ ಉಂಡ್ನಿ.

ಮಾಂವಾ, ನಮಗ ಮೋಸ ಮಾಡಿಬಿಟ್ರು. ಈಗೇನ ಮಾಡೂದು ಮಾಂವಾ? ನರಸ್ಯಾ ಕೇಳಿದ.

ನರಸ್ಯಾ ಸಾಬು. ಗೋಪಾಲಿ ನೀವೆಲ್ಲ ಇಲ್ಲಿಂದ ಓಡಿ ಹೋಗಿ ಬಿಡ್ರಿ ಓಡಿ ಹೋಗಿ ಬಿಡ್ರಿ. ಇಲ್ಲಾಂದ್ರ ನೀವು ಪೋಲಿಸ್ರ ಕೈಗೆ ಸಿಕ್ಕಬಿಡತೀರಿ. ಓಡಿ ಹೋಗ್ರಿ ಮದ್ಲ.

ಮಾಂವಾ, ನಿನ್ನ ಇಂಥಾ ಸ್ಥಿತಿಯಾಗ ಬಿಟ್ಟು ನಾವು ಓಡಿ ಹೋಗಬೇಕಾ. ಸಾಧ್ಯಯಿಲ್ಲ ಮಾಂವಾ, ನಿನ್ನ ಎತ್ತಿಕೊಂಡ ನಾವಿಲ್ಲಿಂದ ಹೋಗತೀವಿ. ಎಂದವರೇ ಗುಂಡು ತಾಗಿ ಗಾಯಗೊಂಡು ರಕ್ತ ಸುರಿಯುತ್ತಿದ್ದ ಲಕ್ಷ್ಮಣನನ್ನು ನರಸ್ಯಾ ತನ್ನ ಹೆಗಲ ಮೇಲೆ ಹಾಕಿಕೊಂಡ. ಮೂರು ಮಂದಿ ಗುಡ್ದವನ್ನೇರಿ ಹೋದರು. ಅಲ್ಲಿ ತಾವು ಠಾವು ಮಾಡಿಕೊಂಡಿದ್ದ ಕಲ್ಲ ಗುತ್ತಿಯ ಹತ್ತರವಿದ್ದ ಒಂದು ಕಲ್ಲು ಬಂಡೆಯ ಆಸರಕ್ಕೆ ಲಕ್ಷ್ಮಣನನ್ನು ಕೂಡ್ರಿಸಿದರು. ವಿಪರೀತ ರಕ್ತ ಸ್ರಾವದಿಂದ ಲಕ್ಷ್ಮಣ ನಿಶ್ಯಕ್ತನಾಗಿದ್ದ, ಗುಂಡೇಟಿನ ಘಾಯದಿಂದಾದ ನೋವಿನಿಂದ ಸಂಕಟಪಡುತ್ತಲಿದ್ದ.

ನನಗ ನಾನ.. ತಂದಕೊಂಡ ಗತಿಯಿದು.. ನಾ ಮಾಡಿದ ಕರ್ಮದ ಫಲಾಯಿದು. ಚಾವಡೀ ಚಾಕರೀ ಮಾಡಿಕೊಂಡು ಊರಾಗ ಇದ್ದಿದ್ದನೆಂದ್ರ ಗೃಹಸ್ತಾ. ಬಾಳಿಷ್ಟಾ ಅನ್ನಿಸಿಕೊಳ್ಳತಿದ್ನಿ. ಯಾವುದೋ ಕೆಟ್ಟ ಯಾಳೇದಾಗ ಏನೋ ದುರ್ಬುದ್ದಿ ಹುಟ್ಟಿ, ದರೋಡೆಖೋರಾ ಅನಿಸಿಕೊಂಡ್ನಿ. ನನ್ನಂಥವಗ ಒಳ್ಳೇ ಸಾವ ಹ್ಯಾಂಗ ಬಂದೀತು? ಹಡದ ತಾಯಿನ್ನ ಕೈಹಿಡಿದ ಹೇಣ್ತಿನ ಪರದೇಶಿ ಮಾಡಿ, ಇಷ್ಟ ದೂರದ ನಾಡಿಗೆ ಬಂದು ದಿಕ್ಕಿಲ್ಲದ ಹಂಗಾ ಆಗಬೇಕಂತ ನನ್ನ ಹಣಿಯಾಗ ಬರದಿತ್ತು. ಅಷ್ಟಾತು. ಆದ್ರ ನಾವು ಸೊಕ್ಕಿನ ಶ್ರೀಮಂತರ ವಿರುದ್ಧ ಆ ಕೆಂಪಮಾರಿ ಇಂಗ್ರೇಜಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದು ಸುಳ್ಳೇನು? ಈ ಲಕ್ಷ್ಮಣ್ಣ ಸೈನ್ಯ ಕಟ್ಟಲಾರದ, ಕೇವಲ ಐದು ಮಂದಿ ಕೂಡಿ, ಆ ಪಿರಂಗೇರ್ನ ಇಲ್ಲಿಂದ ಓಡಿಸಿ, ನಮ್ಮ ದೇಶದಾಗ ನಮ್ಮದ… ಸರ್ಕಾರ ತರೂದಕ್ಕ ಮಾಡಿದ್ದು ಹೋರಾಟ ಅಲ್ಲಾ, ಅದು.. ಯುದ್ಧ. ನಾವು ಬ್ರಿಟಿಶರ ವಿರುದ್ಧ ಮಾಡಿದ ಯುದ್ಧ ಅದು… ಯುದ್ಧ ಆ…ದು. ಲಕ್ಷ್ಮಣ ಆಯಾಸದಿಂದ ಸಂಕಟ ಪಡಹತ್ತಿದ.

ಸಾಬು, ಗೋಪಾಲಿ ನೀವು ಇಲ್ಲೆ ಮಾಂವನ್ನ ನೋಡಿಕೊಂಡಯಿರ್ರಿ. ನಾನು ಜಾನಮಟ್ಟಿಗೆ ಹೋಗಿ, ಚಿಗರಿ ಯಮನಪ್ಪನ್ನ ಕರಕೊಂಡ ಬರತೀನಿ. ನರಸ್ಯಾ ಅವಸರದಿಂದ ಜಾನಮಟ್ಟಿ ದಾರಿ ಹಿಡಿದ.

ನಾನು ಇಂಗ್ರೇಜಿ ಸರ್ಕಾರದ ವಿರುದ್ಧ ಸಿಡಿದೆದ್ದು ಆ ಸರ್ಕಾರಕ್ಕೆ ಚಳ್ಳೆ ಹಣ್ಣ ತಿನಿಸಿ, ಏಳ ಕೇರಿ ನೀರ್ರ ಕುಡಿಸಿದರೂ ಸರ್ಕಾರದ ಕಚೇರ್ಯಾಗ ಈ ಸಿಂಧೂರ ಲಕ್ಷ್ಮಣ ನಾಯಕನ ಹೆಸರು ದರೋಡೆಖೋರಾ ಅಂತ ದಾಖಲೆಯಾಗಿ ಉಳೀತು. ಈ ಲಕ್ಷ್ಮಣ್ಣನಾಯಕನ ಕತಿ ಮುಗೀತು…. ಮೋಸದಿಂದ ನನಗ ಗುಂಡ ಹಾಕಿಸಿ ಕೊಂದಿರೋ ಪಾಪಿಗಳನ್ನ ಆ ದೇವರು ಕ್ಷಮಿಸಲಿ, ಆ ಪಾಪಿಗಳನ್ನ ದೇವರು ಕ್ಷಮಿಸಲೀ… ಎವ್ವಾ… ಚಂದ್ರೀ… ಭೀಮ.. ರಾ..ಯಾ/ ಅವನ ದೇಹದ ಗೂಡಿನೊಳಗಿಂದ ಪ್ರಾಣಪಕ್ಷಿ ಹಾರಿ ಹೋಯಿತು.

ಆಗ ಚುಮಚುಮ ಬೆಳಗು ಹರಿಯುತ್ತಿತ್ತು. ಗುಂಡು ತಾಗಿದ ಲಕ್ಷ್ಮಣನನ್ನು ಹೊತ್ತುಕೊಂಡು ಅವನ ಅಳಿಯಂದಿರು ಹೊತ್ತುಕೊಂಡು ಗುಡ್ಡ ಏರಿ ಹೋದ ಸುದ್ದಿ ಗೊತ್ತಾಗಿ. ಪೋಲೀಸರು ಅವರನ್ನು ಶೋಧಿಸಲು ಗುಡ್ಡ ಏರಿ ನಡೆದರು. ನರಸ್ಯಾ ಲಕ್ಷ್ಮಣನನ್ನು ಹೊತ್ತುಕೊಂಡು ಹೋಗುವಾಗ ಲಕ್ಷ್ಮಣನ ದೇಹದ ಗಾಯದಿಂದ ಸುರಿಯುತ್ತಿದ್ದ ರಕ್ತದ ತೊಟ್ಟುಗಳು ದಾರಿಯಲ್ಲಿ ಬಿದ್ದಿದ್ದವು. ಅವುಗಳ ಜಾಡು ಹಿಡಿದು ಪೋಲೀಸರು ಗುಡ್ಡದ ಮೇಲೇರಿ, ಕಲ್ಲಗುತ್ತಿಯ ಸಮೀಪಕ್ಕೆ ಬಂದರು. ಅದೇ ಆಗ ಸೂರ್ಯ ಕ್ಷಿತಿಜದಂಚಿನಿಂದ ಮೇಲೆ ಬಂದಿದ್ದ, ಲಕ್ಷ್ಮಣನ ದೇಹ ಬಂಡೆಗಲ್ಲಿಗೆ ಆನಿಸಿತ್ತು. ದೂರದಿಂದ ನೋಡಿದ ಪೋಲಿಸರು ಲಕ್ಷ್ಮಣ ಇನ್ನೂ ಜೀವಂತವಾಗಿದ್ದಾನೆಂದು ಭಾವಿಸಿ, ತಮ್ಮ ರೈಫಲ್‍ನಿಂದ ಗುಂಡು ಹಾರಿಸಿದರು. ಗುಂಡು ತಾಗಿ ಲಕ್ಷ್ಮಣನ ದೇಹ ನೆಲಕ್ಕೆ ಒರಗಿ ಬಿತ್ತು. ಆಗ ಪೋಲೀಸರಿಗೆ ಖಾತ್ರಿಯಾಯಿತು. ಲಕ್ಷ್ಮಣ ಸತ್ತಿದ್ದಾನೆಂದು. ಪೋಲೀಸರನ್ನು ನೋಡಿದ ಸಾಬು, ಗೋಪಾಲಿಯರು ಓಡಹತ್ತಿದರು. ಧಾವಿಸಿ ಬಂದ ಪೋಲೀಸರು ಸಾಬು, ಗೋಪಾಲಿಯನ್ನು ಬಂಧಿಸಿದರು.

ಎತ್ತಿನ ಚಕ್ಕಡಿಯಲ್ಲಿ ಹೇರಿಕೊಂಡು ಲಕ್ಷ್ಮಣನ ಹೆಣವನ್ನು ಬೀಳಗಿ ಕಚೇರಿಗೆ ತಂದರು. ಕಚೇರಿ ಮುಂದಿನ ಬೇವಿನಕಟ್ಟೆಯ ಮೇಲೆ ಅವನ ಹೆಣವನ್ನು ಇಳಿಸಿದರು. ಸರ್ಕಾರಿ ಅಧಿಕಾರಿಗಳೆಲ್ಲರೂ ಸೇರಿದರು. ಬಾಗಲಕೋಟೆಯ ದವಾಖಾನೆಯಿಂದ ಬಂದಿದ್ದ ಸರ್ಕಾರಿ ಡಾಕ್ಟರರು ಹೆಣದ ಪೋಸ್ಟಮಾರ್ಟಮ್ ಮಾಡಿದರು. ಲಕ್ಷ್ಮಣನ ಹೆಣ ನೋಡಲು ಸಮೀಪದ ಹಳ್ಳಿಗಳಿಂದ ಸಾಕಷ್ಟು ಜನ ಬಂದಿದ್ದರು. ಪೋಲೀಸಿನವರು ಯಾರನ್ನು ಹೆಣದ ಸಮೀಪಕ್ಕೆ ಬಿಡಲಿಲ್ಲ. ಊರು ಬಿಟ್ಟು ಬರುವಾಗ ನಾಲ್ವರಿದ್ದರು. ನಂತರ ಐವರಾದರು. ಮತ್ತೆ ನಾಲ್ವರೇ ಉಳಿದರು. ಈಗ ಲಕ್ಷ್ಮಣ ಏಕಾಂಗಿ ಅದೂ ಹೆಣವಾಗಿ ಆ ದಿನ ತಾರೀಖು ೧೫.೭.೧೯೨೨.

ಬೀಳಗಿಯಲ್ಲಿ ಪೋಸ್ಟಮಾರ್ಟಮ್ ನಂತರ ಅಧಿಕಾರಿಗಳು ಲಕ್ಷ್ಮಣನ ದೇಹವನ್ನು ಹುಗಿಯಲು ಸರ್ಕಾರಿ ಹಳಬರಿಗೆ ಒಪ್ಪಿಸಿದರು. ಹಳಬರು ಕಟ್ಟಿದ ಚಟ್ಟಿನ ಮೇಲೆ ಹೆಣವನ್ನು ಹಾಕಿ ಹೊತ್ತೊಯ್ದು ಕಚೇರಿ ಎದುರಿನ ಬಳ್ಳೂರ ರಸ್ತೆಯ ಬದಿಗೆ ಬಂದು ಕಡೆ ಗೋರಿ ಅಗೆದು ಅದರಲ್ಲಿ ಲಕ್ಷ್ಮಣನ ದೇಹವನ್ನು ಮಲಗಿಸಿ, ಮೇಲೆ ಮಣ್ಣು ಮುಚ್ಚಿದರು.

ಮಹಾರಾಷ್ಟ್ರದ ನೆಲದಲ್ಲಿ ಹುಟ್ಟಿದ ಸಿಂಧೂರ ಹುಲಿ, ಕನ್ನಡ ನಾಡಿಗೆ ಬಂದು, ಹೆಣವಾಗಿ ಮಲಗಿದ್ದು ಬೀಳಗಿಯ ಮಣ್ಣಲ್ಲಿ. ಎಲ್ಲವೂ ವಿಧಿಯ ವೈಚಿತ್ರ್ಯ ಹಳಬರು ಲಕ್ಷ್ಮಣನ ಹೆಣವನ್ನು ಮಣ್ಣಲ್ಲಿ ಹುಗಿಯುತ್ತಿರುವಾಗ ಎಲ್ಲಿಂದಲೋ ಒಂದು ಧ್ವನಿ ಕೇಳಿ ಬಂತು.

ಲಕ್ಷ್ಮಣನಾಯಕ ಈ ಭೂಮಿ ಮ್ಯಾಲೆ ನಿನ್ನಂಥವರು ಹುಟ್ಟೊಂದು ಕೋಟಿಗೊಬ್ಬರು. ಜಗತ್ತಿನಾಗ ಬಾಳಮಂದಿ ಬದುಕಿದ್ದರೂ ಸತ್ತಂಗಯಿರತಾರ. ಆದ್ರ ನೀ ಮಾತ್ರ ಸತ್ತರೂ ಬದುಕಿದ್ದೀಯಪ್ಪಾ.. ನೀನು ಸತ್ತರೂ ಬದುಕಿದ್ದಿ. ಎಲ್ಲೀತನಕಾ ಸೂರ್ಯ ಚಂದ್ರ ಇರತಾರ ಅಲ್ಲೀತನಕಾ ಜನರ ಬಾಯಾಗ ನೀನು ಜನಪದ ಹಾಡಾಗಿಯಿರತೀದಿ. ನೀನು ಜನಪದ ಹಾಡಿನಾಗ ಜೀವಂತ ಆಗಿರತೀದಿ. ಸಾಬು ಗೋಪಾಲಿಯರನ್ನು ಬಂಧಿಸಿ ಪೋಲಿಸರು ಜಮಂಖಂಡಿಗೆ ಒಯ್ದು ತುರಂಗದಲ್ಲಿರಿಸಿದರು. ನಂತರ ವಿಚಾರಣೆಯಾಗಿ ಅವರಿಗೆ ಗಲ್ಲು ಶಿಕ್ಷೆಯಾಯಿತು. ಜಮಖಂಡಿ ಊರ ಹೊರಗೆ ಹೂಗಾರ ಮಸಾರಿಯಲ್ಲಿ ಹುಡುಗರಿಬ್ಬರೂ ಗಲ್ಲಿನ ಹಗ್ಗದ ಕುಣಿಕೆಗೆ ಕತ್ತು ನೀಡಿ ಸತ್ತು ಹೋದರು.

ಸಿಂಧೂರ ಲಕ್ಷ್ಮಣನ ವಿರುದ್ಧ ಅವನ ಹತ್ಯಯಲ್ಲಿ ನೆರವು ಮಾಡಿದ ಬಗ್ಗೆ ಬ್ರಿಟಿಶ್ ಸರ್ಕಾರ ಒಂದು ವರ್ಷದ ನಂತರ ತೆಗ್ಗಿಯ ಪೋಲಿಸ ಪಾಟೀಲರಾದ ರಾಮಚಂದ್ರ ಗೌಡರಿಗೆ ಒಂದು ತಲವಾರವನ್ನು ಕಾಣಿಕೆಯಾಗಿ ಕೊಟ್ಟರು. ಅಷ್ಟರೊಳಗಾಗಿ ವೆಂಕನಗೌಡರು ಕಾಲವಾಗಿದ್ದರು. ತಲವಾರ ಮೇಲೆ ಬರೆದ ಬರಹ ಹೀಗಿದೆ.

Presented to Ramachandragouda Venkanagaouda Policepatil of Teggi for his good work in the operations against Laxmya Sindhur in Bijapur District. G.R.H.D. No.೩೦೦೬, ೧೦.೨.೧೯೨೩

            “ಸಿಂಧೂರಾಗ ಲಕ್ಷ್ಮಣ ಹುಟ್ಟ್ಯಾನ ಬಂಟ ಅನಿಸ್ಯಾನ
            ಕೊಟ್ಟ ವಚನಾ ಅವಾ ಎಂದೂ ತಪ್ಪಲಿಲ್ಲ
            ಘಟಾ ಹೋಗುತನಕ ಹಿಡದ ಹಟಾ ಬಿಡಲಿಲ್ಲ.”