ಬಯಸದಿದ್ದ ಬಯಕೆಯೊಂದು
ಬಂದು ಎದೆಯ ತಟ್ಟಿತು,
ಬಾಗಿಲು ತೆರೆ ಎಂದಿತು !
ಬಾಗಿಲು ತೆರೆದೊಳಗೆ ಕರೆದೆ,
ಒಳಗೆ ಬಂತು
ಅದರ ತಂತು ನನ್ನ ಎದೆಯ ಬಿಗಿಯಿತು.
ಏನೊ ಆಸೆ, ಏನೊ ಚೆಲುವು
ಮನವ ಸೂರೆಗೊಂಡಿತು.
ಚಿತ್ತದಲ್ಲಿ ಬಿತ್ತವೊಂದು
ಬಿದ್ದು ಮೊಳೆತು ಎದ್ದಿತು.
ಎದೆಯ ನೀರ ಹೀರಿತು !

ತೆರೆದ ಬಾಗಿಲಾಚೆಯಿಂದ
ಏನೇನೋ ಕಂಡಿತು.
ಇಂದ್ರಲೋಕ
ಚಂದ್ರಲೋಕ
ಸುಂದರಿಯರ ಮಂದಹಾಸ
ಮಂದಾರದ ಆ ಸುವಾಸ
ಗಂಧರ್ವರ ವಾದ್ಯಘೋಷ
ಮನದ ತುಂಬ ತುಂಬಿತು
ಜೀವ ‘ಆಹಾ’ ಎಂದಿತು !

ನೋಡುತಿದ್ದೆ, ನೋಟವಿದ್ದ-
ಕಿದ್ದ ಹಾಗೆ ಮಾಯವಾಯಿತು.
ಕನಸೊಡೆಯಿತು ; ಒಡೆದ ಮೊಟ್ಟೆ-
ಯಿಂದ ಹೊಗೆಯು ಹೊಮ್ಮಿತು.
ಮೊಳೆತ ಸಸಿಯ ಕಿತ್ತು ಎಸೆದು
ಬಯಕೆ ಹಾರಿಹೋಯಿತು.

ಹೇಗೊ ಬಂದು ಏನೊ ಒಂದು
ನೋವ ತಂದು ಬಿತ್ತುವ
ಬೆಳಕಿನಂತೆ ಎದೆಗೆ ಬಂದು
ಕಿಚ್ಚನಿಟ್ಟು ಹಾರುವ
ಆಟದ ಪರಿ ಎಂಥದೆಂದು
ಮನವು ತಿಳಿಯದಾಯಿತು
ಸುಮ್ಮನೆ ನಿಡುಸುಯ್ಯಿತು !