ಗುಡ್ಡ ಹಾಗೂ ಎತ್ತರ ಪ್ರದೇಶಗಳಲ್ಲಿ ಅತ್ಯಾಧುನಿಕ ಸಾಮಾಗ್ರಿಗಳನ್ನ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ದೊಡ್ಡ ದೊಡ್ಡ ಕಂಪನಿಗಳು, ಆಣೇಕಟ್ಟುಗಳು ವಿದ್ಯುತ್ ಉತ್ಪಾದಿಸುತ್ತವೆ. ಆದಾಗ್ಯೂ ವಿದ್ಯುತ್ ಕೊರತೆ ನೀಗಿಸಲು ಸಾಧ್ಯವಾಗಿಲ್ಲ. ವಿದ್ಯುತ್ ಸಚಿವ ಕೆ.ಎಸ್.ಈಶ್ವರಪ್ಪ ಅಂತೂ ಮಳೆಯಾಗದಿದ್ದರೆ ದೇವರೇಗತಿ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಬಳಕೆದಾರರಿಗೆ ಸಮರ್ಪಕ ವಿದ್ಯುತ್ ಒದಗಿಸುವುದು ದುಸ್ಸಾಹಸದ ಮಾತೆ ಸರಿ.

ಈ ಕಾರಣದಿಂದಲೇ ಸಾಯಂಕಾಲ ಹಾಗೂ ಬೆಳಗಿನ ಸಮಯದಲ್ಲಿ ಪವರ್‌ಗೆ ಲೋಡ್‌ಶೆಡ್ಡಿಂಗ್ ಮಾಡಲು ಪೀಕ್‌ ಅವರ್ ಇದ್ದ ಹಾಗೆ. ಇಂತಹ ಸಮಯದಲ್ಲಿ ಅದು ಪಟ್ಟಣಗಳೇ ಆಗಿರಲಿ ಹಳ್ಳಿಗಳೇ ಆಗಿರಲಿ ಒಟ್ಟಾರೆ ಜನವಸತಿ ಪ್ರದೇಶಗಳು ದೀಪಗಳಿಲ್ಲದೇ ತಮ-ತಮ ಕತ್ತಲಮಯವಾಗಿರುತ್ತವೆ.

ನಮ್ಮ ರಾಜ್ಯದಲ್ಲಿ ಅಷ್ಟೆ ಏಕೆ ಇಡೀ ದೇಶದಲ್ಲಿಯೇ ವಿದ್ಯುತ್ ಅಭಾವ ತಲೆದೂರಿ ಲೋಡ್‌ಶೆಡ್ಡಿಂಗ್ ಅನವಾರ್ಯವಾಗಿ.

ಆಶ್ಚರ್ಯ ಎಂದರೆ ನಾಡೆಲ್ಲ ಕಗ್ರಾಸ್‌ನಲ್ಲಿ ಮುಳುಗಿರುವಾಗ ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಬಂಡೆಮ್ಮನ ನಗರದ ಅನತಿ ದೂರದಲಿನ ಕಾಡಿನಲ್ಲಿರುವ ಒಂದು ಒಂದು ಕುಟೀರದಲ್ಲಿ ಮಾತ್ರ ಹಗಲು ಹೊತ್ತಿನ ಸೂರ್ಯನನ್ನೇ ನಾಚಿಸುವ ಹಾಗೆ ರಾತ್ರಿ ಸಮಯದಲ್ಲಿ ಹೊಂಬೆಳಕು ಮಿನುಗುತ್ತಿರುತ್ತದೆ. ಒಂದಲ್ಲ… ಎರಡಲ್ಲ… ಮನೆಯ ಒಳಗೆ ಹೊರಗೆ ಹೀಗೆ ಲೆಕ್ಕ ಹಾಕಿದರೆ ಬರೊಬ್ಬರಿ ನಾಲ್ಕು ದೀಪಗಳು, ಒಂದು ಟಿ.ವಿ ಕಾರ್ಯನಿರ್ವಹಿಸುತ್ತವೆ. ಲೋಡ್‌ಶೆಡ್ಡಿಂಗ್‌ನ ಪರಿಚಯವೇ ಇವರಿಗೆ ಇಲ್ಲ. ದಿನದ ೨೪ ಗಂಟೆ ಇವರ ಮನೆಯಲಿ ಕರೆಂಟ್ ಇರುತ್ತದೆ. ಹಾಗಂತ ನೀವೇನಾದ್ರೂ “ಏನ್ರಿ ಮಹಾರಾಯ್ರೆ ವಿದ್ಯುತ್ ಅಭಾವದ ಈ ದಿನಗಳಲ್ಲಿ ಈಷ್ಟೊಂದು ಪ್ರಮಾಣದಲ್ಲಿ ದೀಪ ಹಾಕ್ಕೊಂಡು ಕುಳಿತೀರಲ್ಲ ನಿಮಗೇನು ಕರೆಂಟ್ ಬಿಲ್ ಹೆಚ್ಚಿಗೆ ಬರೋದಲ್ಲೇನ್ರಿ?” ಎಂದು ಕೇಳಿದರೆ ಆ ಕುಟೀರದ ಯಜಮಾನ ‘ವಿದ್ಯುತ್ ಅಭಾವ ಎಲ್ಲಿಯ ಮಾತ್ರಿ, ನಮಗೆ ಬಳಕೆಯಾಗಿ ಹೆಚ್ಚೆಚ್ಚಿಗೆ ಕರೆಂಟ್ ನಮ್ಮ ಮನ್ಯಾಗ ಉಳಿತೈತ್ರಿ, ಬೇಕಾದ್ರ ನೀವೊಂದಿಷ್ಟು ತೊಗೊಂಡು ಹೋಗ್ರಿ, ಇನ್ನು ವಿದ್ಯುತ್ ಬಿಲ್ ಮಾಡೋಕೆ ಮೀಟರ್ ರೀಡರ್ ನಮ್ಮ ಮನೆಯ ಹತ್ತಿರ ಸುಳಿಯುವುದೇ ಇಲ್ಲ” ಎಂದು ಕೇಳಿದವರಿಗೆ ಶಾಕ್ ನೀಡುತ್ತಾರೆ.

ಪವನ ಯಂತ್ರಕ್ಕೆ ಬಿಗಿದಿರುವ ತಗಡಿನ ರೆಕ್ಕೆಗಳು.

ಅಂದ ಹಾಗೆ ಈ ಯಜಮಾನನ ಗೆಲುವಿನ ಮಾತಿನ ಹಿಂದೆ ವಿದ್ಯುತ್‌ನ ಕರಾಮತ್ತು ಅಡಗಿದೆ. ಬಮಡೆಮ್ಮನ ನಗರದ ಜಮೀನಿನಲ್ಲಿಯೇ ಮನೆ ಮಡಿಕೊಂಡು ಸುಮಾರು ೨೫ ವರ್ಷಗಳಿಂದ ಕುಟುಂಬದ ಸದಸ್ಯರೊಂದಿಗೆ ವಾಸವಾಗಿರುವ ರೈತ ಸಿದ್ದಪ್ಪ ಹುಲಜೋಗಿ (ಹಿತ್ತಲಮನಿ) ಇತನೇ ವಿದ್ಯುತ್ ಕ್ಷೇತ್ರದಲ್ಲಿ ಸ್ವಾಲಂಬಿಯಾಗಿ ಬದುಕುತ್ತಿರವ ಸಾಧಕ.

ಮನೆಯಲ್ಲಿರುವ ಕಚ್ಚಾವಸ್ತುಗಳಿಂದ ತಾವೇ ನಿರ್ಮಿಸಿಕೊಂಡಿರುವ ಪವನಯಂತ್ರದ ಮೂಲಕ ತನ್ನ ಮನೆಯ ಬಳಕೆಗಾಗಿ ಬೇಕಾಗುವುದಕ್ಕಿಂತ ಹೆಚ್ಚಿಗೇನೆ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಹಾಗಂತ ಅದಕ್ಕೆನೂ ಸಾಕಷ್ಟು ಹಣ ಸುರಿದಿಲ್ಲ, ನಗರಕ್ಕೆ ಹೋಗಿ ವಿದ್ಯುತ್ ಉತ್ಪಾದನೆಗೆಂದು ಹೈಟೆಕ್ ಸಾಮಗ್ರಿಗಳನ್ನು ತಂದಿಲ್ಲ. ಆತನದೇನಿದ್ದರೂ ಶೂನ್ಯ ಬಂಡವಾಳದಲ್ಲಿ ದೊರಕಿದ ವಿದ್ಯುತ್.

ನಿರುಪಯುಕ್ತ ಕೃಷಿ ಉಪಕರಣಗಳು, ಟ್ರ್ಯಾಕ್ಟರ್‌ನ ಬಿಡಿ ಭಾಗಗಳೇ ಇತನ ಕಚ್ಚಾಸಾಮಾಗ್ರಿಗಳು. ಇವುಗಳನ್ನೇ ಬಳಸಿಕೊಂಡು ಅದರ ಜೊತೆಗೆ ತನ್ನ ಬುದ್ದಿ ಚಾತುರ್ಯತೆ ಉಪಯೋಗಿಸಿ ಗಾಳಿ ವಿದ್ಯುತ್ ಉತ್ಪಾದನೆ ಮಾಡಿ ಈಗ ಬೆಳಕಿನಲ್ಲಿ ರಾತ್ರಿ ಕಳೆಯುತ್ತಿದ್ದಾನೆ.

ಪವನ ಯಂತ್ರದಲ್ಲಿ ಜೋಡಿಸಿರುವ ಸನ್ನೆಗಳು.

ಕಾಡಿನ ಮಧ್ಯೆ ಸಹೋದರರಿಬ್ಬರೂ ಒಂಟಿ ಮನೆ ಮಾಡಿಕೊಂಡು ಸೀಮೆ ಎಣ್ಣೆಯ ದೀಪ ಬೆಳಗಿಸಿಕೊಂಡು ಮಕ್ಕಳೊಂದಿಗೆ ವಾಸವಾಗಿದ್ದರು. ಒಣ ಬೇಸಾಯವಾಗಿದ್ದರಿಂದ ಅವರಗೆ ವಿದ್ಯುತ್ ದೀಪದ ಮಾತು ದೂರವೇ ಆಗಿತ್ತು. ಕ್ರಮೇಣ ಮಕ್ಕಳು ಬೆಳೆಯುತ್ತಿದ್ದಂತೆ ಓದುವ ಹಾಗೂ ಇತರರ ಮನೆಯಲ್ಲಿ ನೋಡಿದ ಟಿ.ವಿ, ಟೇಪರೆಕಾರ್ಡರ್ ನಂತಹ ಹೈಟೆಕ್ ಉಪಕರಣಗಳ ಬಗ್ಗೆ ಆಗಾಗ ಆಸೆಗಣ್ಣಿನಿಂದ ಮಾತಾಡುತ್ತಿದ್ದರು. ನಮ್ಮ ಮಕ್ಕಳಿಗೂ ಆ ಸೌಲಭ್ಯ ಒದಗಿಸಕೊಡಬೇಕು ಎಂಬ ಆಸೆ ಸಿದ್ದಪ್ಪನ ಮನದಲ್ಲಿ ಬೆಳೆಯ ತೊಡಗಿತು. ತಾಲ್ಲೂಕಿನ ವಿದ್ಯುತ್ ಕಚೇರಿಗೆ ತೆರಳಿ ನಮ್ಮ ಮನೆಗೆ ವಿದ್ಯುತ್ ಸೌಲಭ್ಯ ಕಲ್ಪಸಿಕೊಡಿ ಎಂದು ಅರ್ಜಿ ಕೊಟರು. ಆದರೆ ಅದಕ್ಕೆ ಬಂದ ಉತ್ತರ ಏನು ಗೊತ್ತೆ? ‘ನಿಮ್ಮದು ತೋಟ ಇದ್ದರೆ ವಿದ್ಯುತ್ ಕೊಡಬಹುದಿತ್ತು, ಅದೆಲ್ಲ ಒಣಬೇಸಾಯವಾಗಿದೆ, ಮನೆಗೆ ಕೊಡೋಣ ಎಂದರೆ ಕಾಡಿನಲ್ಲಿ ನಿರ್ಮಿಸಿದ ನಿಮ್ಮ ಮನೆಗೆ ಯಾವುದೇ ದಾಖಲೆಗಳಿಲ್ಲ, ನಿಮಗೆ ವಿದ್ಯುತ್ ಬೇಕೆ ಬೇಕು ಎಂದರೆ ಹಳ್ಳದ ನೀರೆತ್ತಲೂ ವಿದ್ಯುತ್ ಕೊಡಿ ಎಂದು ಅರ್ಜಿ ಕೊಡಿ, ಅದಕ್ಕೆ ಸುಮಾರು ಹತ್ತಾರು ಸಾವಿರ ರೂಪಾಯಿ ಖರ್ಚಾಗುತ್ತದೆ, ಹೀಗಾದರೆ ಮಾತ್ರ ವಿದ್ಯುತ್ ಸಂಪರ್ಕ ಕೊಡಲು ಸಾಧ್ಯ’ ಎಂದು ಉತ್ತರ ಬಂತು. ಇಷ್ಟೆಲ್ಲ ಗೋಜಲಮಯ ಮಾತು ಕೇಳಿದ ಸಿದ್ದಪ್ಪ ನಮ್ಮ ಮನೆಗೆ ವಿದ್ಯುತ್ ಬೇಡವೇ ಬೇಡ ಸೀಮೆ ಎಣ್ಣೆಯ ದಿಪವೇ ಸಾಕು ಎಂಬ ನಿರ್ಧಾರಕ್ಕೆ ಬಂದರು.

ಹತ್ತಾರು ವರ್ಷಗಳಿಂದ ಟ್ರ್ಯಾಕ್ಟರ್ ಹಾಗೂ ಕೃಷಿ ಯಂತ್ರಗಳನ್ನು ಬಳಸಿದ ಅನುಭವ ಇವರಲ್ಲಿದ್ದರಿಂದ ಸಹಜವಾಗಿ ಕೊಂಚ ತಾಂತ್ರಿಕ ಜ್ಞಾನ ಅವರಲ್ಲಿತ್ತು. ಯಾವುದೇ ಹೊರಗಿನಿಂದ ಸಂಪರ್ಕವಿಲ್ಲದೇ ಬೆಳಕು ಒದಗಿಸುವ ಈ ಯಂತ್ರಗಳಿರುವಂತೆ ನಾನು ಏಕೆ ಇದೇ ರೀತಿ ಗಾಳಿಯಿಂದ ವಿದ್ಯುತ್ ತಯಾರಿಸಬಾರದು ಎಂಬ ಆಲೋಚನೆ ಬಂತು. ಅದಕ್ಕೆ ಪೂರಕವಾಗಿ ತನ್ನ ಹೋಲದ ಸೀಮೆಯ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಪವನ ಯಂತ್ರಗಳ ಚಿತ್ರ ಕಣ್ಮೂಂದೆ ಬಂತು. ಅದಕ್ಕೆ ತಕ್ಕಂತೆ ತಲೆಯಲ್ಲಿ ಮಿಂಚಿನಂತೆ ಒಂದು ನೀಲನಕ್ಷೆ ದೊರೆಯಿತು. ಆ ಚಿತ್ರಣವೇ ಇಂದು ಸ್ವಾಲಂಬಿ ವಿದ್ಯುತ್ ನೀಡುವ ಯಂತ್ರವಾಗಿದೆ.

ಮನೆಯ ಮುಂದೆ ಕೆಟ್ಟು ಬಿದ್ದಿದ್ದ ಟ್ರ್ಯಾಕ್ಟ್‌ರ್, ಜೋಪಡಿಯ ಮುಂದೆ ಹೊದಿಕೆಯಾಗಿದ್ದ ತಗಡು, ಕೆಲಸ ಮಾಡಲು ಅಸಮರ್ಥವಾಗಿದ್ದ ರಾಶಿಯಂತ್ರಗಳ ಬಿಡಿಭಾಗಗಳನ್ನು ತೆಗೆದುಕೊಂಡು ಕೆಲಸ ಆರಂಭಿಸಿದರು.

ಖರ್ಚಿಲ್ಲದ ಕಟ್ಟಿಗೆ ಸೆಟ್

ಆರಂಭದಲ್ಲಿ ಯಶ ಸಿಗಬಹುದೇ ಎಂಬ ದುಗುಡು ಇತ್ತು. ಅದಕ್ಕಾಗಿ ಪ್ರಾಯೋಗಿಕವಾಗಿ ತಾತ್ಕಾಲಿಕವಾಗಿ ತಗಡುಗಳನ್ನು ರೆಕ್ಕೆಗಳನ್ನಾಗಿ (ಫ್ಯಾನ್) ಮಾಡಿ ಟ್ರ್ಯಾಕ್ಟರ್‌ನ ಎಕ್ಸೆಲ್‌ಗೆ ಬಿಗಿದು ಕಟ್ಟಿಗೆಗೆ ನೇತು ಬಿಟ್ಟು ಬ್ಯಾಟರಿಗೆ ಸಂಪರ್ಕ ನೀಡಿದಾಗ ತಗಡುಗಳು ಎಂಟು ಸುತ್ತು ಸುತ್ತುವುದರೊಳಗೆ ಬ್ಯಾಟರಿಯಲ್ಲಿ ಹಳದಿ ಬಲ್ಪು ಹೊತ್ತಿ ಉರಿಯಿತು. ತಾನು ಮಾಡಿದ ಪ್ರಯೋಗ ಸಫಲವಾಯಿತು ಎಂಬ ಆನಂದ ದೊರಕಿತು. ಅದೇ ಸೂತ್ರವನ್ನು ಮೂಲವಾಗಿಟ್ಟುಕೊಂಡು ಅಭಿವೃದ್ಧಿಪಡಿಸಿ ಈಗ ಮನೆ ತುಂಬ ವಿದ್ಯುತ್ ದೀಪ ಉರಿಯುತ್ತಿವೆ, ಟಿ.ವಿ ಚಾಲು ಆಗಿದೆ, ಟೇಪರೆಕರ್ಡರ್ ಹಾಡುತ್ತಿದೆ. ಆದಾಗ್ಯೂ ಇನ್ನೂ ಬ್ಯಾಟರಿಯಲ್ಲಿ ವಿದ್ಯುತ್ ಹಾಗೆ ಉಳಿದಿರುತ್ತದೆ.

ವಿದ್ಯುತ್ ಸೆಟ್ :

ಸಿದ್ದಪ್ಪನ ವಿದ್ಯುತ್‌ಉತ್ಪಾದನಾ ಸೆಟ್ಟೇ ಒಂದು ವಿಚಿತ್ರವಾಗಿದೆ. ಜಮೀನಿನ ಎತ್ತರದ ಸ್ಥಳದಲ್ಲಿ ಮರದ ಐದು ಕಂಬಗಳನ್ನು ನೆಡು ಹಾಕಿ ಅದರ ಮೇಲೊಂದು ಆರು ಕಾಲಿನ ಕಟ್ಟಿಗೆ ಅಟ್ಟ ನಿರ್ಮಿಸಿದ್ದಾರೆ. ಅಟ್ಟದ ಒಂದು ಭಾಗದಲ್ಲಿ ಗಾಳಿ ಬೀಸುವ ದಿಕ್ಕಿಗೆರಡು ಕವಲು ನೆಡು ಹಾಕಿ ಅದರಲ್ಲಿ ಟ್ರ್ಯಾಕ್ಟರ್‌ನಲ್ಲಿ ಹಾಳಾಗಿರುವ ಒಂದು ಎಕ್ಸೆಲ್‌ಗೆ ಬಿಗಿಯಾಗಿ ನೆಟ್‌ಬೋಲ್ಟ್‌ನಿಂದ ಗಾಳಿಗೆ ಜುಮ್ಮೆನ್ನದ ಹಾಗೆ ಬಿಗಿದಿದ್ದಾರೆ. ಇಲ್ಲಿ ಬಳಸಲಾದ ಬ್ಯಾಟರಿ, ಬೆಲ್ಟ್, ಬೇರಿಂಗ್, ತಂತಿ, ನಟ್-ಬೋಲ್ಟ್… ಹೀಗೆ ಎಲ್ಲವೂ ಮನೆಯ ಮೂಲೆಯಲ್ಲಿ ನಿರುಪಯಯುಕ್ತವಾಗಿ ಬಿದ್ದಿದ್ದ ಸಾಮಗ್ರಿಗಳೇ ಮಾರುಕಟ್ಟೆಯಿಂದ ಯೂನಿಟರ್ ಒಂದನ್ನು ಬಿಟ್ಟರೆ ಮತ್ತಿನ್ನೇನೂ ಹೊರಗಿನಿಂದ ತಂದಿಲ್ಲ. ಇದಕ್ಕೆ ತಗುಲಿದ ಖರ್ಚು ಕೇವಲ ಎರಡು ಸಾವಿರ ರೂಪಾಯಿ ಮಾತ್ರ. ಇಲ್ಲಿ ಬಳಸಲಾಗಿರುವ ಕಬ್ಬಿಣದ ವಸ್ತುಗಳನ್ನು ಗುಜರಿಗೆ ಮಾರುವುದಕ್ಕಾಗಿ ಹಿಂದೊಮ್ಮೆ ಕೇಳಿದ್ದಾಗ ಅಂಗಡಿಯವರು ಒಂದು ಸಾವಿರ ರೂಪಾಯಿ ಕೊಡುತ್ತೇವೆ ಎಂದಿದ್ದರಂತೆ. ಈಗ ಅದೇ ಸಾಮಗ್ರಿಗಳಿಗೆ ಸಿದ್ದಪ್ಪ ಬಂಗಾರದ ಬೆಲೆ ನೀಡಿದ್ದಾರೆ.

ಡಿ.ಸಿ ವಿದ್ಯುತ್ ಯೂನಿಟರ್ ಮೂಲಕ ಪರಿವರ್ತಿಸುತ್ತಿರುವ ನಾಗಪ್ಪನ ಮಗ ವಿಂಡ್‌ಪೌವರ್

ಕಟ್ಟಿಗೆ ಅಟ್ಟದ ಮೇಲೆ ಫಿಕ್ಸ್ ಮಾಡಿರುವ ಎಕ್ಸೆಲ್‌ನ ಒಂದು ತುದಿಗೆ ದುಂಡನೆಯ ಕಬ್ಬಿಣದ ರಿಂಗ್ ಜೋಡಿಸಿ ನಾಲ್ಕು ತಗಡುಗಳನ್ನು ಫಿಟ್ ಮಾಡಿದ್ದರೆ ಇನ್ನೊಂದು ತುದಿಗೆ ಬೆಲ್ಟ್‌ಹಾಕಿ ಅದರಿಂದ ಮೋಟರ್ ತಿರುಗುಂತೆ ಮಾಡಿದ್ದಾರೆ. ಸ್ವಲ್ಪು ಗಾಳಿ ಬೀಸಿದರೆ ಸಾಕು ದಡ್… ದಡ್ ಎಂದು ತಗಡುಗಳು ಸುತ್ತಲು ಆರಂಭಿಸುತ್ತವೆ. ತಗಡುಗಳು ತಿರುಗುತ್ತಿದ್ದಂತೆ ಗಿರ್… ಎಂದು ಮೋಟರ್ ತಿರುಗುತ್ತಾ ಅದರ ಪಕ್ಕದ ಒಂದು ದೊಡ್ಡ ಚಕ್ರ ತಿರುಗಿಸುತ್ತದೆ, ಆ ದೊಡ್ಡ ಚಕ್ರ ಮತ್ತೊಂದು ಸಣ್ಣ ಚಕ್ರವನ್ನು ಸ್ಪೀಡ್ ಆಗಿ ತಿರುಗುವಂತೆ ಮಡುತ್ತದೆ. ಹೀಗೆ ನಾಲ್ಕಾರು ಸನ್ನೆಗಳ ಮೂಲಕ ತಿರುಗುತ್ತಾ ಕೊನೆಯ ಚಕ್ರ ಭಾರಿ ವೇಗದಲ್ಲಿ ಡೈನಮೋಅನ್ನು ತಿರುಗಿಸುತ್ತದೆ.

ಅಬ್ಬಬ್ಬಾ... ಎಷ್ಟೊಂದು ಬೆಳಕು.

ಯಾವಾಗ ಡೈನಮೋ ತಿರುಗುತ್ತದೆಯೋ ಆಗ ಅಟ್ಟದ ಕೆಳಗಡೆ ಇಟ್ಟಿರುವ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹ ಕಾರ್ಯ ಆರಂಭವಾಗುತ್ತದೆ. ಇಲ್ಲಿಂದ ವಿದ್ಯುತ್‌ನ್ನು ಯುನಿಟರ್‌ಗೆ ಹಾಯಿಸಿ ಅಲ್ಲಿಂದ ವಯರ್‌ಗಳ ಮೂಲಕ ಮನೆಗೆ ಸಾಗಿಸುತ್ತಾರೆ. ಅದರಿಂದ ತನ್ನ ಇಡೀ ಕುಟುಂಬಕ್ಕೆ ಬೇಕಾಗುವಷ್ಟು ವಿದ್ಯುತ್‌ನ್ನ ಪಡೆಯುತ್ತಿದ್ದಾನೆ. ತಗಡಿನ ಚಕ್ರ ನೂರು ಸುತ್ತು ತಿರುಗಿದರೆ ಸಾಕು (ಕನಿಷ್ಠ ಅರ್ಧ ಗಂಟೆ ಆಗಬಹುದು) ಸಿದ್ದಪ್ಪನಿಗೆ ಆರು ಗಂಟೆ ನಿರಂತರ ಬಳಸಲು ವಿದ್ಯುತ್ ದೊರೆತಂತೆ.

ಚಂದ್ರು ಬ್ಯಾಸರಾಗೈತೆ ಟೇಪಿನೊಳಗೆ ಜನಪದ ಹಾಡು ಹಾಕಪಾ ತಮ್ಮಾ.

೨೫ ವ್ಯಾಟಿನ ನಾಲ್ಕು ಬಲ್ಬ, ಟೇಪ್‌ರೆಕಾರ್ಡರ್, ಟಿವಿಗೆ ಇದರಿಂದ ವಿದ್ಯುತ್‌ನ್ನು ಸರಬರಾಜುವಾಗುವಂತೆ ಮಾಡಿದ್ದಾನೆ. ಒಟ್ಟಾರೆ ಈ ಯೋಜನೆಯಿಂದ ೮೦ ರಿಂದ ೧೦೦ ವ್ಯಾಟ್‌ನಷ್ಟು ವಿದ್ಯುತ್ ಪಡೆಯುತ್ತಿದ್ದಾನೆ. ಹೆಸರಿಗೆ ಅನಕ್ಷರಸ್ಥನಾದರೂ ತಾಂತ್ರಿಕ ವಿಚಾರದಲ್ಲಿ ಅಕ್ಷರಸ್ಥನೇ ಸರಿ. ಗಾಳಿಗೆ ಚಕ್ರ ಒಂದು ಸುತ್ತು ತಿರುಗಿದರೆ ಡೈನಮೋ ಚಕ್ರ ೧೫೦ (ಆರ್.ಪಿ.ಎಂ) ಸುತ್ತು ತಿರುಗಬೇಕು,  ಗಂಟೆಗೆ ೧೦ ಕಿ.ಮೀ. ಗಿಂತಲೂ ವೇಗವಾಗಿ ಗಾಳಿ ತಿರುಗಿದರೆ ಮಾತ್ರ ಅಂದಾಗ ಮಾತ್ರ ವಿದ್ಯುತ್ ಉತ್ಪಾದನೆ ಆಗುತ್ತದೆ ಎಂಬ ಅರಿವು ಸಿದ್ದಪ್ಪನಿಗಿದೆ. ಈ ಸೆಟ್‌ನಿಂದ ಸಿದ್ದಪ್ಪನ ಕುಟೀರ ೧೫೦ ಅಡಿ ದೂರವಿದೆ. ಅಷ್ಟು ದೂರ ಬ್ಯಾಟರಿ ವಿದ್ಯುತ್ ಸಾಗಿಸುವುದಿಲ್ಲ ಜೊತೆಗೆ ಉತ್ಪಾದನೆಯಾಗುವ ಡಿ.ಸಿ ವಿದ್ಯುತ್‌ಗೆ ದೀಪ ಉರಿಯಯುವುದಿಲ್ಲ ಎಂದು ಮನಗಂಡು ೬೦೦ ವ್ಯಾಟ್ ಸಾಮರ್ಥ್ಯದ ಯೂನಿಟರ್ ಖರೀದಿಸಿ ಅದರ ಮೂಲಕ ಡಿ.ಸಿ ವಿದ್ಯುತ್ ಹಾಯಿಸಿ ಎ.ಸಿ ವಿದ್ಯುತ್‌ಆಗಿ ಪರಿವರ್ತಿಸಿ ವಯರ್ ಮೂಲಕ ಮನೆಗೆ ಸಾಗಿಸುತ್ತಾರೆ. ಈಗ ಮನೆಯಲ್ಲಿ ಒಂದು ಬಣ್ಣದ ಟಿ.ವಿ, ಟೇಪ್ ರೆಕಾರ್ಡರ್ ಬಂದಿವೆ, ನಾಲ್ಕಾರು ದೀಪಗಳು ಉರಿಯುತ್ತವೆ. ಇಷ್ಟು ವಸ್ತುಗಳು ಕಾರ್ಯ ನಿರ್ವಹಿಸಲು ಭಾರಿ ಪ್ರಮಾಣದ ವಿದ್ಯುತ್ ಅವಶ್ಯಕತೆ ಬೇಕಾಗಿಲ್ಲ. ಈ ಕಾರಣದಿಂದಲೇ ಇಡೀ ದಿನ ಚಕ್ರ ತಿರುಗಿಸುವ ಗೋಜಿಗೆ ಹೋಗದೇ ಗಾಳಿ ವೇಗವಾಗಿ ಬೀಸುತ್ತಿರುವ ಸಮಯದಲ್ಲಿ ನಾಲ್ಕಾರು ಗಂಟೆ ತಿರುಗಿದರೆ ಸಾಕು ತನ್ನ ಮನೆ ಬಳಕೆಗೆ ಬೇಕಾಗುವಷ್ಟು ಶಕ್ತಿ ದೊರಕುತ್ತದೆ. ನಂತರ ಚಕ್ರಕ್ಕೆ ಬೆಲ್ಟ್ ಹಾಕಿ ತಿರುಗದಂತೆ ಕಟ್ಟಿ ಹಾಕುತ್ತಾರೆ.

ಈ ಯಂತ್ರ ಇನ್ನು ಸುಧಾರಣೆಯಾಗಬೇಕು, ಇದರಿಂದ ಹಿಟ್ಟಿನ ಗಿರಣಿ ಬೀಸಬೇಕು, ಬೋರ್‌ವೆಲ್ ಚಾಲು ಆಗಬೇಕು… ಎಂಬೆಲ್ಲ ಮುಂದಿನ ಗುರಿ ಹಾಕಿಕೊಂಡಿದ್ದಾನೆ.

ಕತ್ತಲೆಯಿಂದ ಬೆಳಕಿನೆಡೆಗೆ :

ಸುಮಾರು ೨೫ ವರ್ಷಗಳ ಕಾಲ ಕತ್ತಲಿನಲ್ಲಿಯೇ ಅದು ಅರಣ್ಯದ ಪ್ರದೇಶದಲ್ಲಿ ಬಾಳು ನೂಕಿದ್ದ ಈ ಕುಟುಂಬಕ್ಕೆ ತಮ್ಮ ಮನೆಯಲ್ಲಿ ಬೆಳಕು ಹರಿಯುತ್ತಿದ್ದಂತೆ ಅದೇನೋ ಒಂದು ತರಹ ಬದುಕಿನಲ್ಲಿ ಬೆಳ್ಳಿ ರೇಖೆ ಮೂಡಿ ದೀಪ ಕಂಡು ಹಿಡಿದ ವ್ಯಾಟ್ಸನ್‌ಗಿಂತ ಹೆಚ್ಚು ಖುಷಿಪಟ್ಟರು.

ಅನಕ್ಷರಸ್ಥನಾದರೂ ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗುವ ಜಾಯಮಾನ ಅವರದು. ಸಿದ್ದಪ್ಪ ಪವನ ಯಂತ್ರ ನಿರ್ಮಿಸಲು ಕಟ್ಟಿಗೆ ಅಟ್ಟ ನಿರ್ಮಿಸುವುದನ್ನು ನೋಡಿದ ಅನೇಕರು ನಕ್ಕು ಗೇಲಿ ಮಾಡಿದ್ದರೂ ಇದಾವುದಕ್ಕೆ ತಲೆ ಕೆಡಿಸಿಕೊಳ್ಳದೇ ತನ್ನ ಗುರಿಯತ್ತ ಸಾಗುವಲ್ಲಿ ಗಮನ ಕೇಂದ್ರಿಕರಿಸಿದ್ದ. ಬಂದು ಹೋಗುವರಿಗೆಲ್ಲ ನಾನು ಇಲ್ಲೇ ವಿದ್ಯುತ್ ತಯಾರ ಮಾಡ್ತೀನಿ, ಮನಗೆ ಲೈಟ್ ಹಾಕ್ತೀನಿ, ಟ.ವಿ ತರತೀನಿ ಎಂದೆಲ್ಲ ಹೇಳುತ್ತಿದ್ದ. ವಾರಗಟ್ಟಲೇ ಬಿಸಲು-ನೆರಳೆನ್ನದೇ ತಾತ್ಕಾಲಿಕ ಕಟ್ಟಿಗೆ ಅಟ್ಟ ನಿರ್ಮಿಸಿ ತಗಡಿನ ರೆಕ್ಕೆ ಜೋಡಿಸಿದ್ದರು. “ಇನ್ನೇನು ಅಟ್ಟ ಹಾಗೂ ಫ್ಯಾನಿನ ಕೆಲ್ಸ ಮುಗಿತು, ನಾಳೆ ಡೈನಮೋ ಹಾಕಿ ವಯರ್ ಎಳಿದು ಲೈಟ್ ಹಾಕಬೇಕು ಎಂದು ವಿಚಾರ ಮಾಡಿಕೊಂಡು ಹೋಗಿದ್ದ, ಆದರೆ ಮಾರನೇ ದಿನ ಬೆಳಿಗ್ಗೆ ಆ ಕಟ್ಟಿಗೆ ಅಟ್ಟದ ದೃಶ್ಯ ನೋಡಿದ ವ್ಯಕ್ತಿಯೊಬ್ಬರು ‘ಏ… ಸಿದ್ದಪ್ಪ ಎಂತಪರಿ ಲೈಟ್ ಹತ್ಯಾವೂ… ಎಲ್ಲ ಲ್ಯಟ್ ಆರಿಸು, ಅಬ್ಬಬ್ಬಾ ಫ್ಯಾನ್ ಭಾರಿ ತಿರಗತೈತಪಾ, ಏ… ಎಲ್ಲಾರೂ ನಿನ್ನ ನೋಡಿ ಹೀಂಗ ಮಾಡಬೇಕು ನೋಡಪಾ, ಅಂದ್ರ ಬಾಳ್ವಿ ಸುದ್ದಾಕೈತೆ’ ಎಂದು ಕುಹಕ ಮಾತು ಆಡಿದ್ದರು “ಈ ಮಾತು ನನಗೆ ಭಾಳ ನೋವು ಆತು, ಹೋಗಿ ನೋಡಿದೆ ರಾತ್ರಿ ಬೀಸಿದ್ದ ಗಾಳಿಗೆ ಅಟ್ಟ, ಫ್ಯಾನ್ ಮುರುಕೊಂಡು ಅನಾಥವಾಗಿ ನೆಲಕ ಬಿದ್ದಿದ್ದವು, ಅವರು ಆಡಿದ ಆ ರೀತಿಯ ಮಾತು, ನಿನ್ನೆ ನಿರ್ಮಿಸಿದ್ದ ಆ ಅಟ್ಟ ಈ ರೀತಿ ಬಿದ್ದಿದ್ದು ಒಂದು ಕ್ಷಣ ಎಲ್ಲ ತೆಗೆದು ಹಾಕಿ ಬಿಡೋಣ ಎಂಬ ವಿಚಾರ ಬಂತು. ಆದರೆ ಅದನ್ನೇ ಒಂದು ಚಾಲೆಂಜ್‌ಆಗಿ ತೊಗೊಂಡೆ” ಎಂದು ಹೇಳುವ ಸಿದ್ದಪ್ಪ ಮಾರನೇ ದಿನವೇ ಗಟ್ಟಿ ಮುಟ್ಟಾದ ಕಂಬಗಳನ್ನು ನೆಡು ಹಾಕಿ ಮುರಿದು ಬಿದ್ದಿದ್ದ ತಗಡುಗಳನ್ನು ಕಟ್ಟಿ ಎರಡೇ ದಿನದಲ್ಲಿ ಮನೆಯ ತುಂಬ ಬೆಳಕು ಮಾಡಿದ್ದ, ಅಂದ ಹಾಗೆ ಹಿಂದಿನ ದಿನ ಕುಹಕ ಮಾತನಾಡಿದ್ದ ವ್ಯಕ್ತಿಯ ಕೈಯಿಂದಲೇ ಸಿದ್ದಪ್ಪ ಲೈಟ್ ಆಫ್ ಮಾಡಿಸಿದರಂತೆ.

ಕುಟುಂಬದ ಸದಸ್ಯರು ಟಿ.ವಿ ವೀಕ್ಷಣೆಯಲ್ಲಿ.

ಬೆಳಕು ಬಂದ ದಿನದ ಬದುಕು :

ಮೊದಮೊದಲು ಗಂಡ ಕೃಷಿ ಕೆಲಸ ಬಿಟ್ಟು ಈ ರೀತಿ ಸ್ಪ್ಯಾನರ್ ಹಿಡಿದು ಬಿಸಿಲಲ್ಲಿ ಕುಳಿತುಕೊಳ್ಳುವುದಕ್ಕೆ ಬೇಸರಗೊಂಡ ಸಿದ್ದಪ್ಪನ ಧರ್ಮ ಪತ್ನಿ ಭೀಮವ್ವ,  ಇದೊಂದ ಗಂಡನ ಹುಚ್ಚು ಕೆಲಸ ಎಂದೇ ಅರಿತಿದ್ದಳು. ಆದರೆ ಕತ್ತಲನ್ನು ಓಡಿಸುವ ವಿದ್ಯುತ್ ದೀಪ ಮನೆಯಲ್ಲಿ ಬೆಳಗಿದಾಗ ಬೀಮವ್ವಳ ಮೊಗ ಮೊರದಗಲದಷ್ಟು ಅರಳಿ ಗಂಡನ ಮೇಲೆ ಎಲ್ಲಿಲ್ಲದ ಪ್ರೇಮ ಉಕ್ಕಿತ್ತು. ಅಡುಗೆ ಮನೆಯ ಕಾರ್ಯದಲ್ಲಿ ಕತ್ತಲಿನಲ್ಲಿ ಕೈಯಾಡಿಸುವ ಕುರುಡು ತಾಪತ್ರೆಯ ಅವಳಿಗೀಗ ತಪ್ಪಿತ್ತು. “ಎಲ್ರೂ ನನ್ನ ಗಂಡನ ಕೆಲ್ಸ ನೋಡಿ ಬೈಯೋರೆ ಆಗಿದ್ರು, ನಾನು ಅವುರೊಳಗ ಒಬ್ಬಾಕಿ ಆಗಿದ್ದೆ, ಆದ್ರ ಇವತ್ತು ನಮ್ಮ ಮನ್ಯಾಗ ಅಮವಾಸ್ಯೆ ಹೋಗಿ ಹುಣ್ಣಿಮಿ ಬೆಳದಿಂಗಳ ತುಂಬಿಕೊಂಡತಂದ್ರ ಯಾರಿಗೆ ಖುಸಿ ಆಗೋದಿಲ್ರಿ ಸಾಹೇಬ್ರ” ಎಂದು ಗೆಲುವಾಗಿ ಹೇಳುತ್ತಾಳೆ. ಮನೆಯಲ್ಲಿನ ದೀಪದ ಬೆಳಕು ಮಂದವಾಗುತ್ತಿದ್ದಂತೆ ಮಗ ನಾಗಪ್ಪ ಪ್ಯಾನಿಗೆ ಕಟ್ಟಿರುವ ಬೆಲ್ಟ್ ಹಾರಿಸಿ ಬರುತ್ತಾರೆ, ಚಕ್ರ ತಿರುಗುತ್ತದೆ, ದೀಪ ಪ್ರಕಾಶಮಾನವಾಗಿ ಉರಿಯುತ್ತವೆ.

ಕ್ರಿಮಿನಾಶಕ ಸಿಂಪರಣೆಗೆ ಬಳಸುವ ಡಿಸೈಲ್ ಪಂಪ್‌ಗೆ ಗಾಳಿಯಂತರದಿಂದ ದೊರಕುವ ವಿದ್ಯುತ್‌ನ್ನು ಪುಟ್ಟ ಬ್ಯಾಟರಿಗೆ ಸಂಗ್ರಹಿಸಿಕೊಂಡು ಸಿಂಪರಣೇ ಮಾಡುತ್ತಾರೆ. ದೀಪದ ಬೆಳಕಿನಲ್ಲಿ ಓದಲು ಬೇಸರಿಸುವ ಮಕ್ಕಳೀಗ ಇಡೀ ರಾತ್ರಿಯೆಲ್ಲಾ ಕುಳಿತು ಓದಿದರೂ ಅವರಿಗೆ ಬೇಸರವಾಗುವುದಿಲ್ಲ, ರಾತ್ರಿ ಸಮಯದಲ್ಲಿ ಹುಳು, ಹುಪ್ಪಡಿ, ಜಂತುಗಳಿಗೆ ಹೆದರಿ ಕತ್ತಲಾಗುತ್ತಿದ್ದಂತೆ ಹಕ್ಕಿಗಳ ಹಾಗೆ ಮನೆಯೊಳಗೆ ಸೇರಿಕೊಳ್ಳುತ್ತಿದ್ದ ಕುಟುಂಬದ ಸದಸ್ಯರು ಈಗ ಮನೆಯ ಒಳಗೆ-ಹೊರಗೆ ಹಾಕಿದ ದೀಪದ ಬೆಳಕಿನಲ್ಲಿ ಹಾಯಾಗಿ ಕುಳಿತುಕೊಳ್ಳುತ್ತಾರೆ, ದುಡಿದು ಆಯಾಸಗೊಂಡಿರುವ ಮನಸ್ಸಿಗೆ ಚೈತನ್ಯ ತುಂಬಿಕೊಳ್ಳಲು ಬಣ್ಣದ ಟಿ.ವಿ ಆನ್ ಮಾಡುತ್ತಾರೆ, ಸಾಲದ್ದಕ್ಕೆ ಮನೆಯ ಮುಂದಿನ ಜಗುಲಿಯಲ್ಲಿ ಬೀಸುವ ತಂಗಾಳಿಗೆ ಮೈಯೊಡ್ಡಿ ಟೇಪರೆಕಾರ್ಡರ್ ಚಾಲುಮಾಡಿ ಹಾಡು ಕೇಳುತ್ತಾರೆ. ಸಾಕೆ? ಇನ್ನೂ ಬೇಕೆ? ಸಿದ್ದಪ್ಪ ಮಾಡಿದ ಸಾಧನೆಗೆ ಕುಟುಂಬ ಸದಸ್ಯರು ಹೊದಿರುವ ಸಂತಸದ ಲವಲವಿಕೆ.

ಕೃಷಿ ಇಲಾಖೆ ನೀಡಿದ ಸುಧಾರಿತ ಬಿತ್ತು ನೇಗಲನ್ನು ಮತ್ತಷ್ಟು ಸುಧಾರಿಸಿ ಮೂರು ಜನ ಕೆಲಸಗಾರರು ಮಾಡುವ ಕೆಲಸವನ್ನು ತಾನೊಬ್ಬನೇ ನಿಭಾಯಿಸುತ್ತಾನೆ, ಅಲ್ಲದೆ ಬೆಳೆಯಲ್ಲಿ ಕಳೆ ತೆಗಯುವ ಕುಂಟೆಗೆ ಮೂರು ಕುಂಟೆಗಳನ್ನ ಜೋಡಿಸಿ ಮೂರು ಜನ ಕೆಲಸಗಾರರ ಪಾಲುಗಾರಿಕೆಯನ್ನು ಕಡಿತಗೊಳಿಸಿಕೊಂಡಿದ್ದಾನೆ. ಹಿಂದೆ ವಿದ್ಯುತ್ ಇಲ್ಲದ ಸಮಯದಲ್ಲಿ ತನ್ನ ಮೊಬೈಲ್ ಚಾರ್ಜ ಮಾಡಲು ಸೈಕಲ್ ಬಳಸಿ ಚಾರ್ಜ ಮಾಡಿಕೊಳ್ಳುತ್ತಿದ್ದರು. ಈಗಲೂ ಎಲ್ಲರೆದಿರು ಸ್ಯಕಲ್ ತುಳಿದು ಮೊಬೈಲ್ ಚಾರ್ಜ ಮಾಡುವುದನ್ನು, ಅದೇ ಸೈಕಲ್‌ನಿಂದ ಟೆಪರೆಕಾರ್ಡರ್ ಹಾಡುವುದನ್ನು ತೋರಿಸಿ ಬಂದವರಿಗೆ ಆಶ್ಚರ್ಯಮೂಡಿಸಿ ಇದು ಜಾದು ಅಲ್ರಿ ತಂತ್ರಜ್ಞಾನ ಎನ್ನುತ್ತಾರೆ.

ಇದೆ ನೋಡ್ರಿ, ಸೈಕಲ್ ಮುಲಕ ಮೊಬೈಲ್ ಚಾರ್ಜ ಮಾಡುತ್ತಿರವುದು.

ಪ್ರವಾಸಿ ತಾಣವಾದ ಸಿದ್ದಪ್ಪನ ವಿದ್ಯುತ್ ಘಟಕ :

ಇಂದು ಮನೆಗೆ ಹಾಗೂ ಹೊಲಕ್ಕೆ ವಿದ್ಯುತ್ ಸಂಪರ್ಕ ಪಡೆಯಬೇಕೆಂದರೆ ಸಾವಿರಾರು ರೂಪಾಯಿಗಳನ್ನ ವ್ಯಯಿಸಬೇಕು. ಅಷ್ಟನ್ನೂ ನೀಡಿದರು ಸರಿಯಾಗಿ ವಿದ್ಯುತ್ತ ದೊರಕುತ್ತಿಲ್ಲ ಸಿದ್ದಪ್ಪ ಹೇಗೆ ಮಾಡಿದ್ದಾರೆ ? ಆ ರೀತಿ ನಾವು ಮಾಡಬಹುದೇ? ಎಂಬೆಲ್ಲ ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ಸುತ್ತಲಿನ ಹಳ್ಳಿಗರು ಸೇರಿದಂತೆ ಸಮೀಪದ ನಗರದ ಜನರು ಈಗ ಸಿದ್ದಪ್ಪನ ಹೊಲಕ್ಕೆ ದೌಡಾಯಿಸುತ್ತಾರೆ, ಅಷ್ಟೆ ಏಕೆ ಶಿಕ್ಷಕರು ಶಾಲಾ ಮಕ್ಕಳನ್ನು ಕರೆದುಕೊಂಡು ಬಂದು ಪವನ ಯಂತ್ರ ಎಂದರೇನು? ಅದರಿಂದ ಹೇಗೆ ವಿದ್ಯುತ್ ತಯಾರಾಗುತ್ತದೆ? ಎಂದು ಈ ಅಟ್ಟದ ಮುಂದೆ ಮಕ್ಕಳನ್ನು ಕೂಡಿಸಿ ಪಾಠ ಮಾಡಿದ್ದಾರೆ. ಬಂದವರಿಗೆ ವಿವರಣೆ ನೀಡುವುದಕ್ಕಾಗಿ, ಕುಡಿಯಲು ನೀರು, ಕುಳಿತುಕೊಳ್ಳಲು ಚಾಪೆ, ಬಂದ ವಾಹನಗಳಿಗೆ ನಿಲ್ಲಿಸಲು ಸ್ಥಳದ ವ್ಯವಸ್ಥೆ ಇಷ್ಟೆಲ್ಲ ವ್ಯವಸ್ಥೆ ಮಾಡಬೇಕಾದ ಹೊಸ ಸಮಸ್ಯೆ ಸಿದ್ದಪ್ಪನಿಗೀಗ ಬಂದೆರಗಿದೆ. ಮಾಹಿತಿ ನೀಡಲು ಇಲ್ಲವೆ ವ್ಯವಸ್ಥೆ ಕಲ್ಪಿಸಲು ಹಿಂದೇಟಾಕಿದರೆ ದೂರದಿಂದ ಬಂದಿರುವ ಜನರು ಅಪಾರ್ಥ ಮಾಡಿಕೊಳ್ಳುತ್ತಾರೆ, ಅನುಕೂಲ ಮಾಡುತ್ತಾ ಹೋದರೆ ತನ್ನೆಲ್ಲ ಕೆಲಸ ಬದಿಗೊತ್ತಿ ನಿತ್ಯ ಇದೇ ಕಾಯಕ ಮಾಡಬೇಕಾಗುತ್ತದೆ ಹೇಗಿದೆ ಸಿದ್ದಪ್ಪನ ಸಾಧನೆಯ ಪ್ರಚಾರ.

‘ಸಾಹೇಬ್ರ, ಇಷ್ಟು ದಿವ್ಸ ಒಂದು ತ್ರಾಸಾಗಿತ್ತು, ಈಗ ಇದು ಮತ್ತೊಂದು ತ್ರಾಸಾಗೈತೆ ನೋಡ್ರಿ, ದಿನ ಹತ್ತಾರು ಮಂದಿ ಬರ‍್ತಾರ ಎಲ್ಲರಿಗೂ ಇದರ ವಿವರಣೆ ಕೊಟ್ಟು-ಕೊಟ್ಟು ನನ್ನ ಕೃಷಿ ಕೆಲಸ ನಿಲ್ಲಕತ್ಯಾವ, ಅಲ್ಲಿಲ್ಲೇ ನನ್ನ ನಂಬರ್ ತಿಳಕೊಂಡವರು ನಾನು ಮಾಡಿದ ವರ್ಷದ ಕೆಲಸವನ್ನು ಒಂದೇ ಉಸುರಿಗೆ ಫೋನ್ಯಾಗ ಕೇಳ್ತಾರ ಹ್ಯಾಂಗ ಮಾಡಬೇಕು ಅನ್ನೊದ ನನಗ ತಿಳಿಯೊಲ್ತು, ದಯವಿಟ್ಟು ಪೇಪರ‍್ನ್ಯಾಗ ನನ್ನ ಫೋನ್ ನಂಬರ ಮಾತ್ರ ಹಾಕಬಾಡ್ರಿ” ಎಂದು ಕೇಳಿಕೊಳ್ಳುತ್ತಾನೆ.

ಕೃಷಿ ಕಾಯಕದಲ್ಲಿ ಸಿದ್ದಪ್ಪ.

ಅನಕ್ಷರಸ್ಥನ ಸಾಧನೆ ಬದುಕು :

ಈ ಸಾಮಾನ್ಯ ರೈತನ ಸಾಧನೆ ಆಗಾಧವಾದದ್ದು. ಆದ್ದರಿಂದ ಇಂದು ಉತ್ಸಾಹಿ ರೈತರು ಸರ್ಕಾರದ ಮೇಲೆ ಅವಲಂಬನೆಯಾಗದೇ ಸಿದ್ದಪ್ಪನಂತೆ ಶೂನ್ಯ ಬಂಡವಾಳದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ. ಎಲೆಮರೆಕಾಯಿಯಂತೆ ಬದುಕಿ ತನ್ನ ಬದುಕು ಹಸನ ಮಾಡಿಕೊಳ್ಳುವುದರ ಜೊತೆಗೆ ಬಡ ರೈತರಿಗೆ ಮಾರ್ಗದರ್ಶಿಯಾದ ಈ ಸಿದ್ದಪ್ಪನನ್ನು ನಾವು ಗೌರವಿಸಲೇ ಬೇಕಾಗಿದೆ, ಸರ್ಕಾರ ಕೃಷಿಕರಿಗೆ ನೀಡುವ ಕೃಷಿ ಪಂಡಿತ ಪ್ರಶಸ್ತಿಗೆ ಈ ಬಾರಿ ಸಿದ್ದಪ್ಪನ ಹೆಸರು ಆಯ್ಕೆ ಮಾಡಿಕೊಂಡರೆ ಶ್ರಮಕ್ಕೆ ಗೌರವ ಸಿಕ್ಕಂತಾಗುತ್ತದೆ” ಎಂಬ ಕಳಕಳಿ ಮಾತು ಸದಾ ಸಿದ್ದಪ್ಪನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಸ್ಥಳೀಯ ಭೈರಬಹಟ್ಟಿ ಶ್ರೀಮಠದ ವೀರೇಶ್ವರಸ್ವಾಮಿ ದೊರೆಸ್ವಾಮಿಯವರ ಮಾತಾಗಿದೆ.

ಸಿದ್ದಪ್ಪ ಸಾಮಾನ್ಯ ರೈತ ನೋಡಿ

ಬಡತನದ ಬದುಕು :

೪೦ ವರ್ಷದ ಅನಕ್ಷರಸ್ಥ ಸಿದ್ದಪ್ಪ ಬಾಲಕನಿರುವಾಗಲೇ ತಂದೆಯ ಜೊತೆಗೂಡಿ ಆಡು ಕುರಿ ಕಾಯ್ದುಕೊಂಡು ಸುಮಾರು ೩೦ ವರ್ಷಗಳವರೆಗೆ ಕಾಡಿನ ಜೋಪಡಿಯಲ್ಲಿಯೇ ಜೀವನ ಕಳೆದಿದ್ದಾನೆ. ಶಾಲೆಗೆ ಹೋಗಬೇಕು, ಬಾಲಕನಿದ್ದಾಗ ಎಲ್ಲರಂತೆ ಅಕ್ಷರ ಕಲಿಯಬೇಕೆಂಬ ಆದಮ್ಯ ಹಂಬಲವಿದ್ದರೂ ಬೆನ್ನಗಂಟಿದ ಬಡತನದಿಂದಾಗಿ ಶಾಲೆಯ ಭಾಗ್ಯ ಇವರಿಗೆ ದೊರಕಲಿಲ್ಲ. ಹಳ್ಳಿಯ ಮಕ್ಕಳು ಪಾಟಿ ಚೀಲ ಹೆಗಲಿಗೆ ಹಾಕಿಕೊಂಡು ಶಾಲೆಯ ಕಡೆಗೆ ಗುಂಪಾಗಿ ಹೋಗುವುದನ್ನು ದೂರದಲ್ಲೇ ನಿಂತು ನೋಡಿ ಆನಂದ ಕಣ್ತುಂಬಿಕೊಳ್ಳುತ್ತಿದ್ದನಂತೆ. “ಅಪ್ಪ ಏನೇ ಮಾಡಲಿ ನಾನು ಶಾಲೆಗೆ ಹೋಗಲೇಬೇಕು ಅಂತಾ ಆಶಾ ಆಕ್ತಿತ್ತು, ಹುಡುಗರ ಜೊತೆಗೆ ಕೆಲಬಾರಿ ಶಾಲಾ ಅಂಗಳದ ವರೆಗೂ ಹೋಗಿದ್ದೇ ಆದ್ರೆನು ಮಾಡೋದ್ರಿ, ಪಾಟಿ-ಪೇಣೆ ತಂದ್ರ ಮಾಸ್ತರ ಸಾಲ್ಯಾಗ ಕರಕೊಂತಾರ ಅಂತ ಹುಡುಗ್ರು ಹೇಳಿದ್ರು, ನಂತಾಕ ಅದೇನು ಇದ್ದಿಲ್ಲ ಅಪ್ಪನ ಕೇಳಿ ತಗೊಂಡು ನಾಳೇ ಶಾಲೆಗೆ ಬಂದರಾಯ್ತು ಅಂತ ಮನೆಗೆ ಬಂದು ಹೇಳಿದ್ದಕ್ಕೆ ಅಪ್ಪ “ತಾಸೊತ್ತಾತು ಕುರಿ ಹಸಿದು ಒಂದ ಸವನ ಬ್ಯಾ… ಬ್ಯಾ… ಅಂತ ಒದರಾಕತ್ಯಾವ ಅದನ್ನ ಬಿಟ್ಟು ನೀನು ಸಾಲಿಕಡಿ ಹೋಗಿಯ್ಯಾ’ ಅಂತ ಸಿಟ್ಟಗೇರಿ ಹಸಿ ಬರಲಿಲೇ ಬಾರು ಮೂಡಂಗ ಹೊಡೆದು ಕುರಿ ಹಿಂಡಿನೊಂದಿಗೆ ದಬ್ಬಿದ್ರು, ಅವತ್ತಿಂದ ಶಾಲೆಯ ಉಸಾಬರಿಯೇ ಬಿಟ್ಟೆ… ಈಗ ಆ ಮಾತ್ಯಾಕ ಬಿಡ್ರಿ ಸಾಹೇಬ್ರ ನಾನು ಅನುಭವಿಸಿದ ಕಷ್ಟ ನನ್ನ ಮಕ್ಕಳಿಗೆ ಬರಬಾರ‍್ದು ಅಂತ ಮಕ್ಕಳಿಗೆ ಯಾವುದೇ ತೊಂದರೆ ಆಗಲಾರದಗ ಅನುಕೂಲ ಮಾಡಿ  ಓದಸಕತ್ತೀನ್ರಿ, ಮಗಳು ಎಸ್ಸೆಸ್ಸೆಲ್ಸಿ ಅದಾಳ ಮಗ ಆರನೆತ್ತ ಓದಕತ್ಯಾನ’ ಎನ್ನುತ್ತಾರೆ. ಅಪ್ಪ ಮಕ್ಕಳನ್ನು ಶಾಲೆಗೆ ಕಳಿಸುತ್ತಾನೆ, ಮಕ್ಕಳು ಶಾಲೆಯಲ್ಲಿ ಓದಿ ಬಂದದ್ದನ್ನು ಅಪ್ಪನಿಗೆ ಹೇಳುವುದರಿಂದ ಸಿದ್ದಪ್ಪ ಈಗ ಕನ್ನಡ ಅಷ್ಟೇ ಏಕೆ ಚಾರೂಚೂರಿ ಇಂಗ್ಲೀಷ ಓದುತ್ತಾನೆ ಜೊತೆಗೆ ಬರೆಯುತ್ತಾನೆ.