ಗಾಂಧೀತಾತನ ಕತೆಯನ್ನು ನೀವೆಲ್ಲ ಕೇಳಿದ್ದೀರಲ್ಲ? ಅವರ ಹೆಸರನ್ನು ಅನೇಕ ಸಂಘಗಳಿಗೆ ಇಟ್ಟಿರುತ್ತಾರೆ ಎಂದೂ ನಿಮಗೆ ಗೊತ್ತರಬಹುದು. ಬೆಂಗಳೂರಿನ ಮಲ್ಲೇಶ್ವರದಲ್ಲಿ ಗಾಂಧೀ ಸಾಹಿತ್ಯ ಸಂಘ ಅನ್ನುವುದು ಅಂಥ ಒಂದು ಸಂಘ ಅಲ್ಲಿ ದೊಡ್ಡವರು ಓದಲು ಬೇಕಾದಷ್ಟು ಪುಸ್ತಕಗಳಿವೆ. ಭಾಷಣ, ವಾಚನ, ನಾಟಕ, ಎಲ್ಲ ಅಲ್ಲಿ ನಡೆಯುತ್ತವೆ. ಪುಟ್ಟ ಮಕ್ಕಳಿಗೂ ಅಲ್ಲಿ ಕಾರ್ಯಕ್ರಮಗಳು ಉಂಟು. ಓದಲು ಪುಟ್ಟಾ ಪುಸ್ತಕಗಳಿವೆ, ಆಟ-ಪಾಠ ಸ್ಪರ್ಧೆಗಳೂ ಇವೆ.

ಗಾಂಧೀಜಿಗೆ ಮಕ್ಕಳು ಎಂದರೆ ಪ್ರಾಣ. ತಮಗೆ ಎಷ್ಟೇ  ಕೆಲಸ ಇರಲಿ, ಎಷ್ಟೇ ಕಷ್ಟವಾದ ಸಮಸ್ಯೆ ಇರಲಿ, ಮಕ್ಕಳು ಬಂದರೆ ಸಾಕು, ಎಲ್ಲ ಮರೆತು ಅವರ ಜೊತೆಗೆ ಸೇರಿ ಆಡುತ್ತಿದ್ದರು. ಅದಕ್ಕೇ  ಗಾಂಧೀ ಸಾಹಿತ್ಯ ಸಂಘದಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮ ಇರುವುದು.

ಗಾಂಧೀಜಿಯವರನ್ನು ಕುರಿತು ಬೇಕಾದಷ್ಟು ಪುಸ್ತಕ ಇವೆ. ಅವುಗಳಲ್ಲಿ “ಪರ್ಣಕುಟಿ” ತುಂಬ ಹೆಸರುವಾಸಿ. ಗಾಂಧೀಜಿಯ ಗುಣ ಏನು? ಅವರ ದಾರಿ ಎಂಥದು? ಎಂಬುದು ಅದರಲ್ಲಿ ಸ್ವಾರಸ್ಯವಾಗಿ ತಿಳಿಸಿದೆ.  “ಪರ್ಣಕುಟಿ” ಗೆ ಸಮನಾದ ಪುಸ್ತಕ ಇನ್ನೊಂದಿಲ್ಲ. ಅದರಲ್ಲಿ ಗಾಂಧೀಜಿಯವರನ್ನು “ಚುಕ್ಕೆಗಳ ಚಂದ್ರಾಮ” ಅಂದಿದ್ದಾರೆ. ಆಕಾಶದಲ್ಲಿ ಮಿನುಗುವ ಚುಕ್ಕೆಗಳ ಹಾಗೆ ಮಕ್ಕಳು, ನಡುವೆ ಬೆಳುದಿಂಗಳನ್ನು ಚೆಲ್ಲುವ ಚಂದ್ರನ ಹಾಗೆ ಗಾಂಧೀಜಿ! ದೊಡ್ಡವರಾದ ಮೇಲೆ ನೀವು “ಪರ್ಣಕುಟಿ” ಯನ್ನು ಓದಬೇಕು.

ಈ ಸಂಘವನ್ನು ಕಟ್ಟಿದವರು, ಈ “ಪರ್ಣಕುಟಿ”ಯನ್ನು ಬರೆದವರು ಯಾರು ಗೊತ್ತೇ? ಅವರೇ ಸಿದ್ದವನಹಳ್ಳಿ ಕೃಷ್ಣಶರ್ಮರು. ಅವರು ಇದರ ಹಾಗೇ ಇನ್ನೂ ಎಷ್ಟೋ ಸಂಘಗಳನ್ನು ಕಟ್ಟಿ  ಬೆಳಸಿದರು. ಇನ್ನೂ ಬೇಕಾದಷ್ಟು ಪುಸ್ತಕಗಳನ್ನು ಬರೆದರು.

ತಂದೆತಾಯಿ

ಒನಕೆ ಓಬವ್ವನ ಕತೆ ಕೇಳಿದ್ದೀರಲ್ಲ? ಆ ಓಬವ್ವನ ಊರು ಚಿತ್ರದುರ್ಗ. ಅಲ್ಲಿ ಭಾರಿ ಕೋಟೆ; ಅಲ್ಲಿ ಆಳುತ್ತಿದ ನಾಯಕರು ಕಟ್ಟಿಸಿದ್ದು,. ಈಗಲೂ ಸ್ವಲ್ಪ ಸ್ವಲ್ಪ ಇದೆ. ಆ ಚಿತ್ರದುರ್ಗ ಪುರಾಣ ಕಾಲದಿಂದಲೂ ಪ್ರಸಿದ್ದವಾದ ಪ್ರದೇಶ. ಒಳ್ಳೆ ಗಂಡುಭೂಮಿ. ಈಗಲೂ ಹೆಸರು ವಾಸಿ. ಕೃಷ್ಣಶರ್ಮರೂ ಚಿತ್ರದುರ್ಗದವರು.

ಚಿತ್ರದುರ್ಗದ ಹತ್ತಿರ ಸಿದ್ದವನಹಳ್ಳಿ ಅಂತ ಒಂದು ಊರು ಅಲ್ಲಿ ರಂಗಾಚಾರ್ಯರದು ಗುರುಮನೆ. ಅವರದು ತೆಲಗು ದೇಶದಿಂದ ಬಂದ ವಂಶ. ಆಚಾರವಂತರು, ಸತ್ಯವಂತರು. ಸುತ್ತಲ ಜನರೆಲ್ಲ “ಸ್ವಾಮಿ, ನೀವು ತಿಳಿದವರು, ಒಳ್ಳೆ ನಡತೆಯವರು. ನಮಗೆ ಗುರುಗಳಾಗಿ ಇಲ್ಲೇ ಇರಬೇಕು” ಅಂತ ಕರೆಸಿಕೊಂಡರಂತೆ. ನೂರಾರು ವರ್ಷದ ಹಿಂದಿನ ಮಾತು ಇದು. ಇಲ್ಲಿ ಅವರಿಗೆ ಮನೆ ಕಟ್ಟಿಕೊಟ್ಟರು, ಜಮೀನು ಕೊಟ್ಟರು. ಭಕ್ತಿಯಿಂದ ನಡೆದುಕೊಂಡರು. ಗುರುಗಳಿಗೂ ಅಷ್ಟೆ, ಶಿಷ್ಯರ ಮೇಲೆ ವಿಶ್ವಾಸ. ಊರಿನಲ್ಲಿ ಏನೇ ನಡೆಯಲಿ, ಗುರುಗಳು ಬಂದು ಅಪ್ಪಣೆ ಕೊಡಬೇಕು. ಏನೇ ವ್ಯಾಜ್ಯ ಬರಲಿ ಅವರು ಬಗೆಹರಿಸಬೇಕು. ಅವರ ತಾತನ ಅಣ್ಣ ಮೈಸೂರಿನ ಪರಕಾಲ ಮಠದಲ್ಲಿ ಸ್ವಾಮಿ ಆಗಿದ್ದರು. ಶ್ರೀನಿವಾಸ ಬ್ರಹ್ಮತಂತ್ರ ಸ್ವಾಮಿ ಅಂತ. ಮಹಾರಾಜರ ಗುರುಗಳು. ಒಳ್ಳೆ ಯೋಗಿಗಳು. ಇಂಥ ವಂಶ ಅವರದು.

ರಂಗಾಚಾರ್ಯರು ಸರಳವಾದ ವ್ಯಕ್ತಿ. ಊರಿನವರಿಗೆ ಬೇಕಾದವರಾಗಿದ್ದರು. ಅವರಿಗೆ ಊರಿನ ಸುತ್ತ ಮರ ಬೆಳೆಸುವುದು ತುಂಬಾ ಇಷ್ಟ; ಊರಿಗೆ ಒಳ್ಳೆಯದಾಗಲಿ ಅಂತ. ಅವರು ಬೆಳೆಸಿದ ಮರಗಳು ಇನ್ನೂ ಇವೆ. ರಂಗಾಚಾರ್ಯರ ಹೆಂಡತಿ ಶೇಷಮ್ಮ. ಮನೆಗೆ ಮಾತ್ರವಲ್ಲ ಊರಿಗೆಲ್ಲ ತಾಯಿಯ ಹಾಗೆ ಇದ್ದರು. ಕಾಯಿಲೆಗಳಿಗೆ ಔಷಧ ಕೊಡುವರು. ಶಿಷ್ಯರನ್ನು ಪ್ರೀತಿಯಿಂದ ನೋಡಿ ಕೊಳ್ಳುವರು. ಆ ಕಾಲದಲ್ಲಿ ಗುರುಗಳು ಶಿಷ್ಯರನ್ನು ನೋಡಲು ಪಲ್ಲಕ್ಕಿ, ಗಾಡಿಯಲ್ಲಿ ಹೋಗುತ್ತಿದ್ದರಂತೆ. ಮುಂದೆ ಕೊಂಬು, ಕಹಳೆ ಊದುವವರು, ಸ್ತುತಿ ಪಾಠಕರು ಎಲ್ಲ, ಅಷ್ಟು ಮರ್ಯಾದೆ.

ನಾಲ್ಕು ಜನರೊಂದಿಗೆ ಸಹನೆ, ಹೊಂದಾಣಿಕೆಯಿಂದ ಇರುವುದು, ಇನ್ನೊಬ್ಬರಿಗೆ ಸಹಾಯ ಮಾಡುವುದು, ಏನು ಸಮಸ್ಯೆ ಬಂದರೂ ಸಮಾಧಾನವಾಗಿ ಬಿಡಿಸುವುದು, ಸರಳವಾಗಿರುವುದು ಇಂಥ ಗುಣಗಳೆಲ್ಲ ಶರ್ಮರಿಗೆ ತಂದೆ-ತಾಯಿಗಳಿಂದಲೇ ಬಂದಿದ್ದವು.

ರಂಗಾಚಾರ್ಯರ ಮೂರನೆಯ ಮಗ ಕೃಷ್ಣಶರ್ಮ. ಹುಟ್ಟಿದ್ದು ೧೯೦೪ ರ ಜುಲೈ ೪ ರಂದು. ಮುದ್ದು ಮಗು. ಕೃಷ್ಣ ಅಂತ ಹೆಸರಿಟ್ಟರು. ಕೃಷ್ಣಸ್ವಾಮಿ ಅಂತಲೂ ಕರೆಯುತ್ತಿದ್ದರು. ಶಾಲೆಯಲ್ಲಿ ಬರೆಸಿದ್ದು ಹಾಗೆಯೇ. ಒಂದು ಸಲ ಮಗು ಜಗಲಿ ಮೇಲೆ ಆಡುತ್ತಿತ್ತು. ಆಗ ಒಂದು ನಾಗರಹಾವು ಬಂದು ಪಕ್ಕದಲ್ಲಿ ಹೆಡೆಯಾಡಿಸುತ್ತಾ ಇತ್ತಂತೆ. ಮನೆಯವರು ಬರುವಷ್ಟರಲ್ಲಿ ಸುಮ್ಮನೆ ಹೊರಟು ಹೋಯಿತು. ಮಗು ಉಳಿಯಿತಲ್ಲ ಅಂತ ಎಲ್ಲರಿಗೂ ಆಶ್ಚರ್ಯ. ಆಮೇಲೆ “ಅನಂತಕೃಷ್ಣ” ಅಂತಲೂ ಕರೆದರು. ಅನಂತ ಅಂದರೆ ನಾಗರಾಜ. ಮುಂದೆ ಬರಬರುತ್ತ ಕೃಷ್ಣಶರ್ಮ ಅನ್ನುವ ಹೆಸರೇ ಉಳಿದುಕೊಂಡಿತು.

ತುಂಟಬುದ್ದಿವಂತ

ಶರ್ಮ ಬಲು ತುಂಟ, ಚೂಟಿ ಹುಡುಗ, ಪಟಪಟನೆ ಮಾತು. ಶ್ಲೋಕವೋ, ಪದ್ಯವೋ, ಪಾಠವೋ ಒಂದು ಸಲ ಕೇಳಿದರೆ ಸಾಕು ತಿಳಿದುಕೊಂಡು ಬಿಡುತ್ತಿದ್ದ. ತಂದೆಯವರೇ ಸ್ತೋತ್ರ, ತೆಲಗು ಪಾಠ ಹೇಳಿ ಕೊಟ್ಟರು. ಶಾಲೆಯಲ್ಲಿ ಶರ್ಮನೇ ಎಲ್ಲರಿಗಿಂತ ಮುಂದು. ಹಳ್ಳಿಯ ಪ್ರಾಥಮಿಕ ಶಾಲೆ ಮುಗಿಸಿದ ಮೇಲೆ ಚಿತ್ರದುರ್ಗದಲ್ಲಿ ಮನೆ ಮಾಡಿ ಮಾಧ್ಯಮಿಕ ಶಾಲೆಗೆ ಸೇರಿಸಿದರು. ಅಲ್ಲೂ ಶರ್ಮ ಪಾಠದಲ್ಲಿ ಎಲ್ಲರಿಗಿಂತ ಮುಂದು. ಮುಂದೆ ಮೇಷ್ಟ್ರು ಏನು ಪ್ರಶ್ನೆ ಕೇಳುತ್ತಾರೆಯೋ ಎಂದು ಮೊದಲೇ ಊಹಿಸಿ ಅದಕ್ಕೆ ಉತ್ತರ ಸಿದ್ಧವಾಗಿಟ್ಟಿರುತ್ತಿದ್ದ. “ನಿನಗೆ ನಾವೇನು ಪಾಠ ಹೇಳುವುದು? ನಮಗೇ ಹೇಳಿಕೊಡುತ್ತೀಯಲ್ಲ?” ಅನ್ನುತ್ತಿದ್ದರು ಮೇಷ್ಟ್ರು. ಇವನು ಬರೆದ ಉತ್ತರವನ್ನು ತರಗತಿಯಲ್ಲಿ ಮಾದರಿಯಾಗಿ ಓದಿಸಿ, “ನೋಡಿ, ಹೀಗೆ ಬರೆಯಬೇಕು” ಅಂತ ಹುಡುಗರಿಗೆ ಹೇಳುತ್ತಿದ್ದರು ಶಾಲೆಯಲ್ಲಿ ನಡೆಯುತ್ತಿದ್ದ ಸಾಹಿತ್ಯದ ಕಾರ್ಯಕ್ರಮ, ಚರ್ಚೆ ಎಲ್ಲದರಲ್ಲೂ ಶರ್ಮನೇ ಮೊದಲಿಗ. ಚರ್ಚಾ ಕೂಟ ನಡೆಯುವಾಗ ಕೃಷ್ಣ ಇಲ್ಲ. ನಮಗೆ ಸೋಲು” ಅಂತ. ಬಾಗಿಲಲ್ಲಿ ಈ ಪುಟಾಣಿ ಕಾಣಿಸಿದನೋ ಇಲ್ಲವೋ, “ಹೋ ಕೃಷ್ಣ ಬಂದ, ನಾವು ಗೆದ್ದೆವು” ಅಂತ ಕುಣಿದಾಡುತ್ತಿದ್ದರು.

ಕನ್ನಡ ಪಂಡಿತರಾದ ಗರಳಿ ರಂಗಾಚಾರ್ಯರಿಗೆ ಶರ್ಮರ ಮೇಲೆ ಬಲು ವಿಶ್ವಾಸ. ಕನ್ನಡದಲ್ಲಿ ಆಸಕ್ತಿ ಹುಟ್ಟಿಸಿದ್ದೇ ಅವರು. ಮನೆಯಲ್ಲಿ ಚಿಕ್ಕಪ್ಪ ತಂದಿದ್ದ. ಮುದ್ದಣನ ಕಾವ್ಯಗಳು, ಪುಸ್ತಕ ಭಂಡಾರದಿಂದ ತಂದ ಆಳಸಿಂಗರಾಚಾರ್ಯರ ರಾಮಾಯಣ, ಭಾರತ, ಭಾಗವತಗಳು, ತನಗೆ ಬಹುಮಾನ ಬಂದ “ವಿಷವೃಕ್ಷ”, “ವಂಗವಿಜೇತ” ಪುಸ್ತಕಗಳು-ಇವನ್ನೆಲ್ಲ ಓದಿ ಶರ್ಮರಿಗೆ ಸಾಹಿತ್ಯದಲ್ಲಿ ಅಭಿಮಾನ ಬೇರೂರಿತು. ತಾನೂ ಕತೆ, ಕವನ, ಹರಟೆ ಬರೆಯುವುದೂ ನಡೆಯುತ್ತಿತ್ತು.

ಹೈಸ್ಕೂಲಿನಲ್ಲಿ ನಾಟಕ ಆಡುವುದು ಬೇರೆ. ಹಾಗೆಯೇ ದುರ್ಗದ ಬೆಟ್ಟಗುಡ್ಡಗಳಲ್ಲಿ ಓಡಾಟ, ಅಲ್ಲಿನ ಚರಿತ್ರೆ ತಿಳಿದುಕೊಳ್ಳುವುದು- ಹೀಗೆ ಎಳೆತನದಿಂದಲೇ ಶರ್ಮರಿಗೆ ಸಾಹಿತ್ಯ, ಇತಿಹಾಸಗಳಲ್ಲಿ ಮನಸ್ಸು ಬೆಳೆಯಿತು. ಬಿಡುವಾದಾಗಲೆಲ್ಲ. ಓದುವುದೇ ಕೆಲಸ. ಆಟಗಳಿಗೆ ಹೋಗುತ್ತಿದ್ದುದು ಕಡಿಮೆ.

ಮಗ ಬುದ್ಧಿಶಾಲಿ. ಲಾಯರ್ ಆಗಿ ಚಿತ್ರದುರ್ಗದಲ್ಲಿ ನೆಲೆಸಿದರೆ ಒಳ್ಳೆ ಹೆಸರು, ಹಣ ಸಂಪಾದಿಸಬಹುದು, ಮನೆತನದ ಗೌರವ ಬೆಳೆಸಬಹುದು ಅಂತ ತಂದೆಯವರು ಮೈಸೂರಿನಲ್ಲಿ ಮನೆ ಮಾಡಿ ಶರ್ಮರನ್ನು ಕಾಲೇಜಿಗೆ ಸೇರಿಸಿದರು.

ಸ್ವಾತಂತ್ರ್ಯ ಚಳುವಳಿಗೆ ಕಾಲಿಟ್ಟರು

ಆಗ ೧೯೨೦ ರ ಸಮಯ. ದೇಶದಲ್ಲೆಲ್ಲ ಸ್ವಾತಂತ್ರ್ಯ ಚಳುವಳಿ ಬೆಳೆಯುತ್ತಿದ್ದ ಕಾಲ. ಬಾಲಗಂಗಾಧರ ತಿಲಕರು, ಲಾಲಾ ಲಜಪತ್ ರಾಯ್, ಅರವಿಂದರು ಮೊದಲಾದ ದೊಡ್ಡವರೆಲ್ಲ ಜನರಲ್ಲಿ ದೇಶಪ್ರೇಮವನ್ನು ಉಕ್ಕಿಸುತ್ತಿದ್ದರು. ಮೈಸೂರಿನಲ್ಲೂ ಸಭೆ ಮೆರವಣಿಗೆ ನಡೆಯುತ್ತಿದ್ದವು. ತಾತಯ್ಯ ಅಂತ ಹೆಸರು ಪಡೆದಿದ್ದ ವೆಂಕಟಕೃಷ್ಣಯ್ಯನವರು, ಪ್ರಜೆಗಳ ಪರವಾಗಿ ಕೆಲಸ ಮಾಡುತ್ತಿದ್ದರು. ಇವೆಲ್ಲ ಶರ್ಮರನ್ನೂ ಸೆಳೆದವು. ತಿಲಕರು ಸತ್ತಾಗ, ಶೋಕ ಸೂಚಿಸಲೆಂದು ಹುಡುಗರು ಮೆರವಣಿಗೆ ಹೊರಟರು. ಮುಂದಿನ ಸಾಲಿನಲ್ಲಿ ಶರ್ಮ. ಕೈಯಲ್ಲಿ ಮಹಾರಾಜರ ಪಟ ಇತ್ತು. ನಡುವೆ ಪೊಲೀಸರು ಬಂದು ಮುಂದೆ ಹೋಗಬೇಡಿ ಅಂತ ತಡೆದರು. ಹುಡುಗರು ಕೇಳದೆ ಅಲ್ಲೆ ಕೂತುಬಿಟ್ಟರು. ಪೊಲೀಸರು ಲಾಠಿ ಏಟು ಆರಂಭಿಸ್ದರು. ಗುಂಪೆಲ್ಲ ಚೆಲ್ಲಾಪಿಟ್ಟಿ ಆಯಿತು. ಶರ್ಮರ ಕೈಲಿದ್ದ ಪಟಕ್ಕೆ ಲಾಠಿ ತಗುಲಿತು. ಪಟ ಚೂರಾಯಿತು. ಹುಡುಗರೆಲ್ಲ ಅದನ್ನೇ ನೆಪ ಮಾಡಿಕೊಂಡು “ಪೊಲೀಸರು ಮಹಾರಾಜರಿಗೆ ಅವಮಾನ ಮಾಡಿದರು” ಅಂತ ಕೂಗುತ್ತಾ ಮೈದಾನಕ್ಕೆ ಓಡಿದರು. ಅಲ್ಲಿ ಸಭೆ ಮಾಡಿ ” ಈ ಪೋಲಿಸಿನವರನ್ನು ಶಿಕ್ಷಿಸಬೇಕು” ಅಂತ ಮಹಾರಾಜರಿಗೆ ತಂತಿ ಕಳಿಸಿದರು. ಹೀಗೆ ಶುರುವಾಯಿತು. ದೇಶಪ್ರೇಮದ ಪ್ರಭಾವ.

ಈ ನಡುವೆ ಗಾಂಧೀಜಿ ಬೆಂಗಳೂರಿಗೆ ಬಂದರು. ಅವರನ್ನು ನೋಡಲು ಮೈಸೂರಿನಿಂದ ಹೊರಟ ತರುಣರ ಪೈಕಿ ಶರ್ಮರು ಒಬ್ಬರು. ಭಾಷಣ ಆಗುವಾಗ ಭಾರಿ ಮಳೆ ಬಂತು. ಆದರೂ ಸಾವಿರಗಟ್ಟಲೆ ಜನ ಶಾಂತವಾಗಿ ಕೂತು ಮಹಾತ್ಮರ ಮಾತನ್ನು ಕೇಳಿದರು.

 

ಹುಡುಗರು ಕುಳಿತರು. ಪೊಲೀಸರು ಲಾಠಿ ಏಟು ಆರಂಭಿಸಿದರು.

ಕಾಲೇಜಿನಿಂದ ಒಂದು ಪತ್ರಿಕೆ ಹೊರಡುತ್ತಿತ್ತು. ಶರ್ಮರು ಅದಕ್ಕೆ ಒಂದು ಲೇಖನ ಬರೆದರು. ಸ್ವರಾಜ್ಯದ ಮೇಲೆ  ಜೋರಾಗಿತ್ತು. ಅದನ್ನು ಓದಿ ಪ್ರಿನ್ಸಿಪಾಲರು ಗಾಬರಿಯಾದರು. “ಯಾರು ಇದನ್ನು ಸೇರಿಸಿದ್ದು?” ಅಂತ ಮೇಷ್ಟ್ರನ್ನೇ ತರಾಟೆಗೆ ತೆಗೆದುಕೊಂಡರು. ಲೇಖನವನ್ನು ತೆಗೆಸಿಬಿಟ್ಟರು.

ದೇಶಪ್ರೇಮದ ಜೊತೆಗೇ ನಾಟಕದ ಗೀಳು ಬೆಳೆಯುತ್ತಿತ್ತು. ಶರ್ಮರ ಎತ್ತರಕ್ಕೆ ಸರಿ ಹೋಗುವಂಥ ಪಾತ್ರ ಸಿಗುತ್ತಿತ್ತು. ಮುದ್ದಾದ ಮಾತು, ಚುರುಕು ಓಡಾಟ, ಅಂದ ಚೆಂದಗಳಿಂದ ಶರ್ಮ ಎಲ್ಲರ ಗಮನವನ್ನೂ ಸೆಳೆಯುತ್ತಿದ್ದರು. ಅವರ ನಾಟಕದ ಗುಂಪು ಆಗಾಗ ಬೆಂಗಳೂರಿಗೂ ಹೋಗಿ ನಾಟಕ ಆಡುತ್ತಿತ್ತು. ಅಲ್ಲೂ ಅಂಥ ತಂಡ ಇತ್ತು. ಅದರಲ್ಲಿ ಬಳ್ಳಾರಿ ರಾಘವಾಚಾರ್ ದೊಡ್ಡ ನಟ. ಶರ್ಮರಿಗೆ ಬಳಗದವರೇ. ಅವರ ಪರಿಚಯ ಆಯಿತು. ಅವರ ಮೂಲಕ ಅವರ ಗುರು ತಾರಾನಾಥ ರಾಯರ ದರ್ಶನವೂ ಆಯಿತು. ತಾರಾನಾಥರು ದೊಡ್ಡ  ವಿದ್ವಾಂಸರು, ನಟ, ಸಂಗೀತಗಾರ, ಯೋಗಿ, ದೇಶಭಕ್ತ, ಭಾಷಣಕಾರ. ನೋಡಲು ಕಣ್ಣು ತುಂಬುವಂಥ ಅಕಾರ. ಶರ್ಮರಿಗೆ ಅವರಲ್ಲಿ ಗೌರವ ಬೆಳೆಯಿತು.

ಇದೆಲ್ಲದರ ನಡುವೆ ಶರ್ಮರ ಓದು ಹಿಂದಾಯಿತು. ಮುಂದೆ ಅವರು ಕಲಿತದ್ದೆಲ್ಲ ಅನುಭವದಿಂದಲೇ. ಮಗನ ದಾರಿ ಹೀಗಾಯಿತಲ್ಲ ಅಂತ ತಂದೆಯವರಿಗೆ ಕೊರಗು. ಮೈಸೂರು ಬಿಟ್ಟು ಚಿತ್ರದುರ್ಗಕ್ಕೇ ವಾಪಸ್ಸು ಹೋದರು.

ಸಾಹಿತಿಗಳ ನಂಟು

೧೯೨೨ರಲ್ಲಿ ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ. ಟಿ.ಎಸ್.ವೆಂಕಣ್ಣಯ್ಯನವರು ಬಹು ದೊಡ್ಡ ವಿದ್ವಾಂಸರು. ಅವರ ಜೊತೆ ಶರ್ಮರೂ ಹೋಗಿದ್ದರು. ಅಲ್ಲಿ ಸರ್ವಜ್ಞನ ಮೇಲೆ ಒಂದು ಲೇಖನ ಓದಿದರು. ಮೈಸೂರು, ಮಂಗಳೂರು, ಧಾರವಾಡ ಎಲ್ಲ ಕಡೆಗಳಿಂದ ಭಾರಿ ವಿಧ್ವಾಂಸರೆಲ್ಲ ಬಂದಿದ್ದರು. ಈ ಹುಡುಗನ ಮಾತು ಕೇಳಿ ಎಲ್ಲರಿಗೂ ಆಶ್ಚರ್ಯ ಆಯಿತು. ಕೆಲವರಂತೂ ಇವನನ್ನು ಎತ್ತಿಕೊಂಡು ಕುಣಿದಾಡಿದರು. ಅಷ್ಟು ಖುಷಿ! ಅಲ್ಲೆ ದ.ರಾ.ಬೇಂದ್ರೆ ಅವರ ಪರಿಚಯ ಆಯಿತು. “ಕುಣಿಯೋಣು ಬಾರಾ”, “ಮೂಡಲ ಮನೆಯ ಮುತ್ತಿನ  ನೀರಿನ ಎರಕವಾ ಹೊಯ್ದು” ಈ ಹಾಡುಗಳನ್ನು ಕೇಳಿದ್ದಿರಲ್ಲ ? ಅವನ್ನು ಬರೆದವರೇ ಬೇಂದ್ರೆ, ದೊಡ್ಡ ಕವಿ. ಶರ್ಮರಿಗೆ ಅವರಿಗೆ ಬಲವಾದ ಸ್ನೇಹ ಬೆಳೆಯಿತು. ಇಬ್ಬರೂ ಮಾತಿಗೆ ಕುಳಿತರೆ ರಾತ್ರಿಯೆಲ್ಲ ಮಾತೇ! ಬೇಂದ್ರೆಯವರ ಜೊತೆಯಲ್ಲೆ ಶರ್ಮ ಧಾರವಾಡಕ್ಕೆ ಹೋದರು. ಅಲ್ಲಿ ಗೆಳೆಯರ ಗುಂಪು ಅಂತ ಇತ್ತು. ದೊಡ್ಡ ದೊಡ್ಡ ಕವಿಗಳ ತಂಡ, ಎಲ್ಲ ಬುದ್ಧಿವಂತರು, ದೇಶಪ್ರೇಮಿಗಳು. ಜೊತೆಗೆ ಹಿರಿಯರು ಆಲೂರು ವೆಂಕಟರಾಯರು, ಮುಂದೆ ಇವರೆಲ್ಲರೂ ಕನ್ನಡದಲ್ಲಿ ದೊಡ್ಡ ಕೆಲಸ ಮಾಡಿದರು.

ಎಲ್ಲರೂ ಸೇರಿ ಚರ್ಚೆ ಮಾಡುವುದು, ಪುಸ್ತಕ ಓದುವುದು, ಸಾಹಿತ್ಯ, ಇತಿಹಾಸ, ಸಂಸ್ಕೃತಿ ತಿಳಿದುಕೊಳ್ಳುವುದು, ಜನರಲ್ಲಿ ದೇಶಪ್ರೇಮವನ್ನು, ಕನ್ನಡ ಪ್ರೇಮವನ್ನು ಉಂಟುಮಾಡುವ ಕಾರ್ಯಕ್ರಮ ನಡೆಸುವುದು, ಬರೆಯುವುದು, “ಜಯಕರ್ನಾಟಕ” ಪತ್ರಿಕೆ ನಡೆಸುವುದು ಇದೆಲ್ಲ ಗುಂಪಿನ ಕೆಲಸ. ಎಲ್ಲರಲ್ಲೂ ಗೆಳೆತನ. ಅದನ್ನು ಬೆಳೆಸುವುದೇ ದೊಡ್ಡ ಸಾಧನೆ.

ಗುಂಪಿನ ಸಹವಾಸದಿಂದ ಶರ್ಮರ ಬುದ್ಧಿ ಇನ್ನೂ ಹರಿತವಾಯಿತು. ಪತ್ರಿಕೆ ನಡೆಸುವ ಅನುಭವ ಬಂತು. ಕನ್ನಡಕ್ಕಾಗಿ ದುಡಿಯುವ ಆಸಕ್ತಿ ಬಂತು. ನಾಲ್ಕು ಜನರೊಂದಿಗೆ ಸಾರ್ವಜನಿಕ ಸೇವೆ ಮಾಡುವುದು ರೂಢಿ ಯಾಯಿತು. ಸಭೆ ಸಮ್ಮೇಳನಗಳಿಗೆ ಹೋದರು. “ಜಯಕರ್ನಾಟಕ”ದ ಪ್ರಚಾರಕ್ಕೋಸ್ಕರ ಓಡಾಡಿದರು.

ಅವರ ಹರಟೆಗಳು ಅನ್ನುವ ಹಾಸ್ಯ ಲೇಖನಗಳೂ ಆ ಪತ್ರಿಕೆಯಲ್ಲಿ ಬಂದವು. ಕನ್ನಡದ ಕಿಡಿಗಳು” ಅಂತ ಲೇಖನಗಳನ್ನು ಬರೆದರು. ಸಣ್ಣ ಲೇಖನದಲ್ಲಿ ಆಯಾ ವ್ಯಕ್ತಿಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವುದು ವ್ಯಕ್ತಿಚಿತ್ರ ಅಂತ. ಶರ್ಮರೇ ಮೊದಲು ಕನ್ನಡದಲ್ಲಿ ಅಂಥದನ್ನು ಬರೆದದ್ದು. ಅದರಿಂದ ಅವರಿಗೆ ಬಹಳ ಖ್ಯಾತಿ ಬಂತು.

ಸಕ್ಕರೆ ಬಾದಾಮಿ ತಿಂದಿದ್ದೀರಲ್ಲ? ಮೇಲೆ ಸಕ್ಕರೆ ಸಿಹಿ, ಒಳಗೆ ಬಾದಾಮಿ ಪುಷ್ಟಿಕರ ಅಲ್ಲವೆ? ಹಾಗೆ ಶರ್ಮರ ‘ಹರಟೆಗಳು’. ಮೇಲೆ ತಿಳಿಹಾಸ್ಯ, ಒಳಗೆ ತುಂಬ ವಿಚಾರ. ‘ಹರಟೆಮಲ್ಲ’ ಅಂತಲೇ ಅವರಿಗೆ ಹೆಸರು ಆಗಿಹೋಗಿತ್ತು.

ಮದುವೆ

ತಾರಾನಾಥರಾಯರು ತುಂಗಭದ್ರಾ ನದಿ ಪಕ್ಕದಲ್ಲಿ ಆಶ್ರಮ ಕಟ್ಟಿಕೊಂಡಿದ್ದರು. ಪ್ರೀಮಾಯಾತನ ಅಂತ. ಪ್ರೀತಿಯೇ ದೇವರು ಅನ್ನುವುದು ಅವರ ತತ್ತ್ವ. ಆಶ್ರಮದಲ್ಲಿ ಆಯುರ್ವೇದ ಚಿಕಿತ್ಸೆ, ಯೋಗ ಸಾಧನೆ, ‘ಪೆಮ’ ಅಂತ ಪತ್ರಿಕೆ ಎಲ್ಲ ನಡೆಯುತ್ತಿದ್ದವು.

ಕೃಷ್ಣಶರ್ಮರಿಗೆ ಮೊದಲೇ ತಾರಾನಾಧರ ಆಕರ್ಷಣೆ ಇತ್ತು. ಸರಿ, ಆಶ್ರಮಕ್ಕೆ ಹೊರಟೇಬಿಟ್ಟರು. ಯೋಗ ಸಾಧನೆ, ಧ್ಯಾನ ಅಂತ ಏನೇನೋ ವಿಚಾರ ಅವರಲ್ಲಿ. ಇನ್ನೂ ತರುಣ. ಠೀಕಾಗಿದ್ದರು. ತಾನೇ ಬುದ್ಧಿವಂತ, ಮಾತಿನಲ್ಲಿ ತನ್ನನ್ನು ಸೋಲಿಸುವವರು ಯಾರೂ ಇಲ್ಲ ಅನ್ನುವ ಹೆಮ್ಮೆ, ಯಾರ ಜೊತೇಲಾದರೂ ವಾದಕ್ಕೆ ಸಿದ್ಧ. ತಾರಾನಾಥರಿಗೂ ಎದುರು ಮಾತಾಡುವ ಧೈರ್ಯ. ಆದರೆ ರಾಯರ ಮಹತ್ವ ತಿಳಿದಂತೆಲ್ಲ, ಶರ್ಮರ ಮನಸ್ಸು ಹದವಾಯಿತು. ವಿನಯ ಬಂತು. ಮಾತಿನಲ್ಲಿ ಬಿರುಸು ಹೋಗಿ ನಯ ಬಂತು. ಜಪ-ತಪ ಬೇರೆ.

ಈ ಕಡೆ ಊರಲ್ಲಿ ಮಗ ಎಲೊ ಆಶ್ರಮ ಸೇರಿದನಂತೆ. ಸಂನ್ಯಾಸಿ ಆಗುತ್ತಾನಂತೆ ಅಂತ ತಂದೆ-ತಾಯಿಗಳಿಗೆ ಕಳವಳ. ಅಳಿಯ ಶಿನಿವಾಚಾರ‍್ಲು ಕೈಲಿ ಹೇಳಿ ಕಳಿಸಿದರು. ಆಚಾರ‍್ಲು ಅವರ ಮೇಲೆ ಶರ್ಮರಿಗೆ ತುಂಬ ಗೌರವ. ಅವರು ಹೋಗಿ ಶರ್ಮರನ್ನು ಊರಿಎ ಕರೆ ತಂದರು. ಇವರ ಜಪ, ಧ್ಯಾನ ಎಲ್ಲ ನೋಡಿ ಮನೆಯವರಿಗೆಲ್ಲ ಚಿಂತೆ ಹೆಚ್ಚಾಯಿತು., ಶರ್ಮರು ಮತ್ತೆ ಆಶ್ರಮಕ್ಕೆ ಹೋದರು.

ಮದುವೆ ಮಾಡಿಬಿಟ್ಟರೆ ಸರಿಹೋಗುತ್ತೆ ಅಂತ ಅದರ ಪ್ರಯತ್ನ ಶುರುವಾಯಿತು. ಹೊಸಪೇಟೇಲಿ ಶರ್ಮರ ಬಳಗದ ಹಿರಿಯರು ಶ್ರೀನಿವಾಸ ಕೋಳಪ್ಪಳಾಚಾರ್ ತುಂಬಾ ಓಡಾಡಿ ಮದುವೆ ಗೊತ್ತು ಮಾಡಿದರು. ಹೆಣ್ಣು ಅವರ ಹೆಂಡಿತಿಯ ತಂಗಿ ಪ್ರಮೀಲಮ್ಮ. ಹೈದರಾಬಾದಿನ ಪೊಲೀಸು ಅಧಿಕಾರಿ ಕಸ್ತೂರಿ ರಂಗಾಚಾರ‍್ಯರ ಮಗಳು. ಸಂನ್ಯಾಸಿ ಅಳಿಯ ಸಿಕ್ಕಿದ ಅಂತ ಬೇಜಾರೇ ಆಗಿತ್ತು ಅವರಿಗೆ. ಆದರೂ ಹೇಗೋ ಹೊಸ ಪೇಟೇಲೆ ಮದುವೆ ಆಯಿತು.

ಆಮೇಲೆ ಶರ್ಮರು ಸ್ವಲ್ಪ ಕಾಲ ಊರಲ್ಲೀ ಇದ್ದರು. ಹೊಸ-ಗದ್ದೆ ಓಡಾಟ, ಜೊತೆಗೆ ಜಪ, ಧ್ಯಾನ. ದಿನಕ್ಕೆ ಒಂದೇ ಊಟ. ಮಾತಿಲ್ಲ, ಕತೆಯಿಲ್ಲ. ಕೆಲವು ದಿನ ಹೀಗೇ. ಒಂದು ದಿನ ಹೈದರಾಬಾದಿಗೆ ಹೊರಟೇಬಿಟ್ಟರು.

ಹೈದರಬಾದಿನಲ್ಲಿ

ಆಗ ಹೈದರಾಬಾದು ಬೇರೆ ಸಂಸ್ಥಾನ ಆಗಿತ್ತು. ಅಲ್ಲಿ ನಿಜಾಮರ ದರಬಾರು. ಅಲ್ಲಿ ಶರ್ಮರಿಗೆ ಶಾಲೆಯಲ್ಲಿ ಕನ್ನಡ ಮಾಸ್ತರರ ಕೆಲಸ ಸಿಕ್ಕಿತು. ಸ್ವಲ್ಪ ದಿನದಲ್ಲೀ ಅವರು ಎಲ್ಲರಿಗೂ ಅಚ್ಚುಮೆಚ್ಚಾದರು.

ಭಾರತದಲ್ಲೆಲ್ಲ ಸ್ವಾತಂತ್ರ್ಯ ಹೋರಾಟ ಜೋರಾಗಿ ನಡೆಯುತ್ತಿತ್ತು. ಹೈತರಾಬಾದಿನಲ್ಲಿ ಮಾತ್ರ ಏನೂ ಇರಲಿಲ್ಲ. ತಣ್ಣಗೆ ಇತ್ತು. ಇಲ್ಲೂ ಚಟುವಟಿಕೆ ನಡೆಸಬೇಕು ಅಂತ ಶರ್ಮರು ಜೊತೆಗಾರರನ್ನು ಸೇರಿಸಿದರು. ನೂಲುವ ಮಂಡಲಿ, ಖಾದಿ ಅಂಗಡಿ ತೆರೆದರು. ಸಭೆ, ಚರ್ಚೆ, ಭಾಷಣ ಶುರು ಆದವು. ನಿಜಾಮರು ಪ್ರಜೆಗಳ ಅಭಿಪ್ರಾಯ ಕೇಳಬೇಕು, ಹಕ್ಕು-ಬಾಧ್ಯತೆಗಳನ್ನು ಕೊಡಬೇಕು ಅನ್ನುವ ವಿಚಾರ ಹೊರಟಿತು.

ಹೈದರಾಬಾದಿನಲ್ಲಿ ಮೂರು ಭಾಗ, ಕನ್ನಡದ ಭಾಗ, ತೆಲುಗಿನ ತಲಂಗಾಣ, ಮರಾಠಿಯವರ ಮರಾಠಾವಾಡ. ಹಿಂದೂಗಳೇ ಹೆಚ್ಚು. ಆದರೂ ಎಲ್ಲೆಲ್ಲೂ ಉರ್ದು ಮಾತೇ. ನಿಜಾಮರ ಸರ್ಕಾರ ಪ್ರಜೆಗಳ ಮಾತಿಗೆ ಕಿವಿಗೊಡುತ್ತಿರಲಿಲ್ಲ. ಬಹುಸಂಖ್ಯೆಯ ಜನರಿಗೆ ತುಂಬ ಅನ್ಯಾಯವಾಗಿತ್ತು. ಅವರಿಗೆ ಕೆಲಸ, ಅಧಿಕಾರ, ಸಂಘ-ಸಂಸ್ಥೆ ಏನೂ ಇರಲಿಲ್ಲ. ಜೀವವೇ ಇಲ್ಲ ಅನ್ನುವಂತೆ ಇತ್ತು.

ಶರ್ಮರ ಮನೆಮಾತು ತೆಲುಗು, ಕನ್ನಡದಲ್ಲಂತೂ ಪ್ರವೀಣರು. ಸ್ವಲ್ಪ ದಿನಗಳಲ್ಲೇ ಮರಾಠಿ, ಉರ್ದುಗಳನ್ನೂ ಕಲಿತರು. ಸರಿ ಎಲ್ಲರ ಜೊತೆಯಲ್ಲೂ ಸೇರಲು ಅನುಕೂಲವಾಯಿತು.

ತೆಲುಗಿನವರು ಆಂಧ್ರ ಮಹಾಸಭಾ ಅಂತ ಸಂಸ್ಥೆ ಕಟ್ಟಿದರು. ಪ್ರತಾಪರೆಡ್ಡಿ, ಎಂ. ಹನುಮಂತರರಾವ್, ಬಿ. ರಾಮಕೃಷ್ಣರಾವ್ ಇವರೆಲ್ಲ ಅದರ ನಾಯರು. ಮರಾಠಿಯವರು ಮಹಾರಾಷ್ಟ್ರ ಪರಿಷತ್ತನ್ನು ಆರಂಭಿಸಿದರು. ಗೋವಿಂದರಾವ್ ನಾನಲ್, ವಾಮನರಾವ್ ನಾಯಕ್, ರಮಾನಂದತೀರ್ಥ ಮೊದಲಾದವರು ಅಲ್ಲಿ ಮುಖಂಡರು. ಎರಡರಲ್ಲೂ ಶರ್ಮರು ಓಡಾಡಿದರು. ಕನ್ನಡದವರೂ ಒಂದಾಗಬೇಕು ಅಂತ ವಿಚಾರ ಎದ್ದಿತು. ಜಿ. ರಾಮಾಚಾರ್, ಜನಾರ್ಧನರಾವ್ ದೇಸಾಯಿ, ಡಾಕ್ಟರ್ ಮೇಲುಕೋಟೆ ಮುಂತಾದವರೆಲ್ಲ ಸೇರಿದರು. ನಿಜಾಮ ಕರ್ನಾಟಕ ಪರಿಷತ್ತನ್ನು ಸೇರಿಸಿದರು. ಅದರ ಕೆಲಸವೆಲ್ಲ ಶರ್ಮರದೇ. ಜನರಲ್ಲಿ ಹೀಗೆ ಸ್ವಲ್ಪ ಎಚ್ಚರ ಆಗುತ್ತಿತ್ತು.

ಶರ್ಮರ ಕೆಲಸಕಾರ್ಯ ಸರ್ಕಾರದ ಕಣ್ಣು ತಪ್ಪಿಸಲು ಆಗಲಿಲ್ಲ. ಆದರೆ ಶರ್ಮರು ಇದ್ದ ಶಾಲೆ ಇಂಗ್ಲೀಷಿನವರದು. ನಿಜಾಮರು ಅಧೀನದಲ್ಲಿರಲಿಲ್ಲ. ಆದರೂ ‘ಈತ ಅಪಾಯದ ಆಸಾಮಿ. ನಮ್ಮ ವಿರುದ್ಧ ಜನರನ್ನ ಎತ್ತಿ ಕಟ್ಟುತ್ತಿದ್ದಾನೆ. ಇವನನ್ನು ಮಟ್ಟ ಹಾಕಬೇಕು’ ಅಂತ ನಿಜಾಮರು ಸರ್ಕಾರ ಶಾಲೆಗೆ ಹೇಳಿತು. ಶಾಲೆಯ ಮುಖ್ಯಸ್ಥರು, “ನೋಡಿ  ಶರ್ಮ, ನೀವು ನಮಗೆ ಬೇಕಾದವರು. ಒಳ್ಳೆ ಮೇಷ್ಟ್ರು. ಆದರೆ ಏನು ಮಾಡೋಣ, ಸರ್ಕಾರ ಹೀಗೆ ಹೇಳುತ್ತಾ ಇದೆ!” ಅಂತ ಶರ್ಮರಿಗೆ ಹೇಳಿದರು. “ನನ್ನಿಂದ ನಿಮಗೆ ಯಾಕೆ ತೊಂದರೆ? ನಾನೇ ಹೋಗುತ್ತೇನೆ” ಅಂತ ಶರ್ಮ ಕೆಲಸ ಬಿಟ್ಟುಬಿಟ್ಟರು.

 

ಸೆರೆಮನೆಯಲ್ಲಿ ಸಿದ್ದವನಹಳ್ಳಿ ಕೃಷ್ಣ ಶರ್ಮ ಕೃಷ್ಣಶರ್ಮರು-ಅವರ ಕೃತಿಗಳು

ಸ್ವಲ್ಪ ದಿನ ಧಾರವಾಡಕ್ಕೆ ಹೋಗಿದ್ದರು. “ಜಯ ಕರ್ನಾಟಕ” ಎಂಬ ಪತ್ರಿಕೆಯ ಕೆಲಸದಲ್ಲಿ ಸಹಾಯ ಮಾಡಲು. ಅಷ್ಟರಲ್ಲಿ ಮತ್ತೆ ಹೈದರಾಬಾದಿನ ಕರೆ ಬಂತು… ಹಿಂದಕ್ಕೆ ಬಂದರು.

ಗಡಿಪಾರು

ರಾಮಕೃಷ್ಣ ಧೂತ್ ಅನ್ನುವವರು ಶರ್ಮರ ಗೆಳೆಯರು ದೇಶಭಕ್ತ. ತಾನು ಇದ್ದ ಏಷ್ಯಟಿಕ್ ಇನ್ ಷೂರೆನ್ಸ್ ಕಂಪೆನಿಯಲ್ಲಿ ಶರ್ಮರಿಗೆ ಒಂದು ಪ್ರತಿನಿಧಿ ಕೆಲಸ ಕೊಡಿಸಿದರು. ಜನರಿಂದ ವಿಮೆ ಮಾಡಿಸಿದರೆ ಕಮಿಷನ್ ಹಣ ಸಿಗುತ್ತಿತ್ತು. ಶರ್ಮರಿಗೆ ಊರೆಲ್ಲ ಗುರುತೇ. ಎಲ್ಲರೂ ತಾವೇ ಬಂದು ವಿಮೆ ಮಾಡಿಸುತ್ತಿದ್ದರು. ಸಂಸಾರ ಸಾಗುವುದಕ್ಕೆ ದಾರಿ ಆಯಿತು.

ಚಟುವಟಿಕೆ ಮತ್ತೆ ಮೊದಲಾಯಿತು. ಜನ ಎಚ್ಚೆತ್ತಿದ್ದರು. ಯುವಕರು ಹೋರಾಡಲು ಧೈರ್ಯದಿಂದ ಬರುತ್ತಿದ್ದರು. ಕನ್ನಡಿಗರು, ತೆಲುಗರು, ಮರಾಠಿಯವರು, ಮುಸಲ್ಮಾನರು, ಹಿರಿಯರು-ಯುವಕರು ದೊಡ್ಡ ಮನುಷ್ಯರು, ಸಾಮಾನ್ಯರು ಎಲ್ಲರನ್ನೂ ಜೊತೆಗೂಡಿಸಿ ದೇಶದ ಕೆಲಸಕ್ಕೆ ಹೂಡುವುದು ಶರ್ಮರ ಕೆಲಸವಾಯಿತು.

ಆಗ ಅಲ್ಲಿನ ದಿವಾನ, ಅಂದರೆ ಪ್ರಧಾನಮಂತ್ರಿ ಸರ್ ಅಕ್ಬರ್ ಹೈದರಿ, ಜನರಿಗೆ ಸ್ವಲ್ಪ ಸುಧಾರಣೆಯ ಆಸೆ ತೋರಿಸಿದರೆ ಗಲಾಟೆ ಮಾಡದೆ ಸುಮ್ಮನಿದ್ದಾರು ಅಂದುಕೊಂಡು, ಒಂದು ಸುಧಾರಣಾ ಸಮಿತಿ ಏರ್ಪಡಿಸಿದ. ಜನರ ಕುಂದು ಕೊರತೆಗಳು ಏನು, ರಾಜಕೀಯ ವ್ಯವಸ್ಥೆ ಹೇಗಿರಬೇಕು ಎನ್ನುವುದನ್ನೆಲ್ಲ ಸೂಚಿಸುವುದು ಸಮಿತಿಯ ಗುರಿ.

ಸಮಿತಿಗೆ ಜನತೆಯ ಅಭಿಪ್ರಾಯ ತಿಳಿಸಲು ಒಂದು ವರದಿ ತಯಾರಿಸೋಣ ಅಂತ ಎಲ್ಲ ವರ್ಗದ ನಾಯಕರೂ ಸೇರಿದರು. ಶರ್ಮ, ರಾಮಾಚಾರ್, ರಾಮಕೃಷ್ಣರಾವ್, ರಾಮಕೃಷ್ಣ ಧೂತ್, ಜನಾರ್ಧನರಾವ್ ದೇಸಾಯಿ, ಎಲ್ಲರಿಗೂ ಹಗಲು-ರಾತ್ರಿ ಕೆಲಸ. ಸರ್ಕಾರ ಹೇಗಿರಬೇಕು, ಪ್ರಜೆಗಳ ಹಕ್ಕು ಯಾವುವು ಚುನಾವಣೆ ಹೇಗೆ ನಡೆಯಬೇಕು- ಎಲ್ಲವನ್ನೂ ವಿವರಿಸಿ ದೊಡ್ಡ ವರದಿ ತಯಾರಿಸಿದರು.

ಅಷ್ಟು ಸಾಲದು, ಇಲ್ಲಿ ಕಾಂಗ್ರೆಸ್ ಸಂಸ್ಥೆ ಕಟ್ಟಬೇಕು ಅಂತ ಎಲ್ಲರೂ ತೀರ್ಮಾನಿಸಿದರು. ಹೈದರಾಬಾದ್ ಕಾಂಗ್ರೆಸ್ ಆರಂಭವಾಯಿತು, ೧೯೩೮ ರ ಫೆಬ್ರುವರಿಯಲ್ಲಿ ಆದರೆ ಸರ್ಕಾರ ಬಿಡಲಿಲ್ಲ. ಸಂಸ್ಥೆ ನಡೆಯಕೂಡದು ಅಂತ ನಿರ್ಬಂಧಿಸಿತು. ಕಾಂಗ್ರೆಸ್ ಅದನ್ನು ವಿರೋಧಿಸಿ ಸತ್ಯಾಗ್ರಹ ಹೂಡಿತು. ಅಕ್ಟೋಬರ್ ೨೪ ರಂದು ಆರಂಭ. ಬಹು ಜನ ನಾಯಕರು ಸೆರೆಮನೆ ಸೇರಿದರು. ಸಭೆ, ಮೆರವಣಿಗೆ, ಲಾಠಿ ಏಟು, ಗುಂಡಿನೇಟು ಎಲ್ಲ ಜೋರಾಯಿತು. ಆಗ ಶರ್ಮರ ಮನೆಯೇ ಕಾಂಗ್ರೆಸ್ ಕಛೇರಿ ಆಯಿತು. ಹಗಲು-ರಾತ್ರಿ ಕೆಲಸ. ಸತ್ಯಾಗ್ರಹಕ್ಕೆ ಜನರನ್ನು ಸಿದ್ಧ ಮಾಡುವುದು, ಪತ್ರಿಕೆ ಹಂಚುವುದು. ಚಳುವಳಿ ಸಮಾಚಾರವನ್ನು ಪತ್ರಿಕೆಗಳಿಗೆ ಕಳುಹಿಸುವುದು. ಚಳುವಳಿ ಹೆಚ್ಚಿ ಸರ್ಕಾರಕ್ಕೆ ಪಜೀತಿ ಆಯಿತು. ಈ ಎಲ್ಲದರ ಹಿಂದೆ ಕೃಷ್ಣಶರ್ಮನದೇ ಕೈವಾಡ, ಇವನನ್ನು ಓಡಿಸಿಬಿಡಬೇಕು ಅಂತ ತೀರ್ಮಾನಿಸಿತು.

ಒಂದು ರಾತ್ರಿ ಪೊಲೀಸರು ಬಂದರು. ಶರ್ಮರನ್ನು ಎಬ್ಬಿಸಿದರು. “ನಿನಗೆ ಗಡೀಪಾರು ಆಗಿದೆ. ಹೊರಡು” ಎಂದರು. ಗುಟ್ಟಾಗಿ ಕಾರಿನಲ್ಲಿ ದೂರದ ಸಣ್ಣ ರೈಲು ನಿಲ್ದಾಣಕ್ಕೆ ಸಾಗಿಸಿ, ಬೆಂಗಳೂರು ರೈಲಿಗೆ ಹತ್ತಿಸಿಬಿಟ್ಟರು. ಅಷ್ಟರಲ್ಲಿ ಸಮಾಚಾರ ಕೇಳಿ ನೂರಾರು ಜನ ಓಡಿಬಂದರು. ಕಣ್ಣೀರು ಹಾಕುತ್ತಾ ಬೀಳ್ಕೊಟ್ಟರು. ಹೀಗೆ ಶರ್ಮರು ಮನೆ-ಮಠ ಹೆಂಡತಿ-ಮಕ್ಕಳು ಎಲ್ಲರನ್ನೂ ಬಿಟ್ಟು ಹೊರಡಬೇಕಾಯಿತು.

 

ಗಾಂಧೀಜಿ-ಸಿದ್ದವನಹಳ್ಳಿ ಕೃಷ್ಣಶರ್ಮ

ಗಾಂಧೀಜಿಯ ಆಶ್ರಮಗಾಂಧೀ ಸಾಹಿತ್ಯ

 

ಶರ್ಮ ಬೆಂಗಳೂರಿನಿಂದ ವಾರ್ಧಾಕ್ಕೆ ಹೋದರು. ಗಾಂಧೀಜಿ ಆಶ್ರಮಕ್ಕೆ ಅಲ್ಲಿ ಗಾಂಧೀಜಿ, ನೆಹರು, ಪಟೇಲರನ್ನು ಕಂಡರು. ಎಲ್ಲಾ ಪರಿಸ್ಥಿತಿ ವಿವರಿಸಿದರು. ಆಗ ಗಾಂಧೀಜಿಯವರೇ ಹೈದರಾಬಾದು ದಿವಾನರೊಂದಿಗೆ ಪತ್ರ ವ್ಯವಹಾರ ನಡೆಸಿದರು ಅವರ ಮಾತಿನ ಪ್ರಕಾರ ಸತ್ಯಾಗ್ರಹ ನಿಂತಿತು. ಅದರಿಂದ ಜನರಲ್ಲಿ ತುಂಬ ಉತ್ಸಾಹ, ಧೈರ್ಯ ಉಂಟಾಗಿತ್ತು.

ಸ್ವಲ್ಪ ಕಾಲ ಶರ್ಮರು ಮುಂಬಯಿಗೆ ಹೋಗಿ ಸಂಸ್ಥಾನ ಪ್ರಜೆಗಳ ಪರಿಷತ್ತಿನಲ್ಲಿ ಕೆಲಸ ಮಾಡಿದರು. ನೆಹರೂ ಜೊತೆಯಲ್ಲಿ ಸ್ವಲ್ಪ ದಿನ ಹೊಸಪೇಟೇಲಿ ಇದ್ದರು. ಆಗಲೇ “ವಾರ್ಧಾಯಾತ್ರೆ”, “ಪರ್ಣಕುಟಿ” ಪುಸ್ತಕಗಳನ್ನು ಬರೆದರು. ಗಾಂಧೀಜಿ ಅಶ್ರಮದಲ್ಲಿ ತಿಂಗಳುಗಟ್ಟಲೆ ಇದ್ದರಲ್ಲ? ಅಲ್ಲಿನ ಅನುಭವಗಳೆನ್ನಲ್ಲ “ವಾರ್ಧಾಯಾತ್ರೆ” ಯಲ್ಲಿ ಅಂದವಾಗಿ ಬರೆದರು. “ಪರ್ಣಕುಟಿ” ಗಾಂಧೀಜಿ ಮೇಲೆ ಬರೆದದ್ದು. ಮುದ್ದಾದ ಮಾತು, ಪುಟ್ಟ ವಾಕ್ಯ. ಅದರಲ್ಲಿ ತುಂಬ ಅರ್ಧ, ಕಣ್ಣಿಗೆ ಕಟ್ಟುವ ಹಾಗೆ, ಚಿತ್ರ ಬರೆದು ತೋರಿಸುವ ಹಾಗೆ ವಿವರಣೆ . ಎರಡು ಪುಸ್ತಕಗಳೂ ತುಂಬ ಹೆಸರು ಪಡೆದವು ಶರ್ಮರ ಖ್ಯಾತಿ ಎಲ್ಲೆಲ್ಲೂ ಹರಡಿತು.

ಲಾಭಕ್ಕೋಸ್ಕರ ಹೋರಾಡಲಿಲ್ಲ

೧೯೪೭ ರಲ್ಲಿ ಭಾರತ ಸ್ವತಂತ್ರವಾದರೂ ಹೈದರಾಬಾದಿನವರ ಕಷ್ಟ ತಪ್ಪಲಿಲ್ಲ. ಕೆಲವು ಕ್ರೂರಿಗಳು ನಿಜಾಮರ ತಲೆ ಕೆಡಸಿ ಹುಚ್ಚು ದರಬಾರು ನಡೆಸಿದ್ದರು. ಬಹು ಜನರಿಗೆ ಹಿಂಸೆ ಆಗುತ್ತಿತ್ತು. ಮಂತ್ರಿ ಆಗಿದ್ದ ಜೀ ರಾಮಾಚಾರ್ ಇದನ್ನೆಲ್ಲ ವಿರೋಧಿಸಿ ನಿಜಾಮರಿಗೆ ದೂರು ಕೊಟ್ಟರು. ಕೊನೆಗೆ ಕೆಲಸಾನೇ ಬಿಟ್ಟುಬಿಟ್ಟರು. ಇದಕ್ಕೆಲ್ಲ ಶರ್ಮರದೇ ಸಲಹೆ, ಸಹಾಯ. ರಾಮಾಚಾರ್ ಕಳುಹಿಸುತ್ತಿದ್ದ ಸಮಾಚಾರವನ್ನೆಲ್ಲ ಜೋಡಿಸಿ ಬರೆದು ಸರ್ದಾರ್ ಪಟೇಲರಿಗೆ ಕಳುಹಿಸುವುದು ಅವರು ಎಲ್ಲವನ್ನೂ ನೋಡಿ, ನಿರ್ಧಾರ ಮಾಡುವುದು ಹೀಗೆ, ಕೊನೆಗೆ ಭಾರತದ ಸೇನೆ ಹೋಗಿ ದುಷ್ಟರನ್ನೆಲ್ಲ ಅಡಗಿಸಿತು. ಹೈದರಾಬಾದು ಭಾರತದಲ್ಲಿ ಸೇರಿಹೋಯಿತು. ಶರ್ಮರ ಮೇಲಿನ ಗಡೀಪಾರು ಆಜ್ಞೆ ೧೯೪೬ ರವರೆಗೂ ಇತ್ತು. ಆಗ ಶರ್ಮರು ಹೊರಗೆ ಇದ್ದುಕೊಂಡೇ ಅಲ್ಲಿನ ಕೆಲಸ ಮಾಡುತ್ತಿದ್ದರು. ಗಡೀಪಾರು ಹೋದ ಮೇಲಂತೂ ಅಲ್ಲಿಗೇ ಹೋಗುತ್ತಿದ್ದರು, ಏನು ಸಮಸ್ಯೆ ಬಂದರೂ.

ಹೈದರಾಬಾದಿನಲ್ಲಿ ಶರ್ಮರು ಮಾಡಿದ್ದು ಬರೀ ರಾಜಕೀಯ ಕೆಲಸ ಅಲ್ಲ. ಸಾಹಿತ್ಯ, ಖಾದಿ, ಹರಿಜನ ಸೇವೆ, ಕನ್ನಡ ಶಾಲೆ ಎಲ್ಲ ನಡೆಸಿದರು. ಕನ್ನಡ ಸಾಹಿತ್ಯ ಮಂದಿರ ಆರಂಭಿಸಿದರು. ಭೀಮಾಚಾರ್ ಚಿಮ್ಮಲಗಿಯವರೊಂದಿಗೆ ಸೇರಿ ನೃಪತುಂಗ ಶಾಲೆ ತೆರೆದರು. ಈಗ ಅದು ದೊಡ್ಡದಾಗಿ ಬೆಳೆದಿದೆ. ಜನರ ಮನಸ್ಸು ಬೆಳೆಯುವುದಕ್ಕೆ ಪುಸ್ತಕ ಸಹಾಯ ಮಾಡುತ್ತದೆ. ಆದ್ದರಿಂದ ಆದಷ್ಟು ಪುಸ್ತಕ ಓದಲು ಅನುಕೂಲ ಮಾಡಬೇಕು. ಪುಸ್ತಕ ಭಂಡಾರ ಹೆಚ್ಚಬೇಕು ಅನ್ನುವುದು ಶರ್ಮರ ವಿಚಾರ. ಅದರಂತೆಯೇ ತಮ್ಮ ಮನೆಯಲ್ಲೇ ಪುಸ್ತಕ ಭಂಡಾರ ನಡೆಸಿದರು. ವಾರವಾರವೂ ಗೆಳೆಯರನ್ನೆಲ್ಲ ಮನೆಯಲ್ಲಿ ಸೇರಿಸಿ ತಿಂಡಿಕೊಟ್ಟು ಸಾಹಿತ್ಯ, ರಾಜಕೀಯ, ಧರ್ಮ ಎಲ್ಲ ಚರ್ಚಿಸುವುದು. ಹೀಗೆ ಗೆಳೆಯರ ಬಳಗವನ್ನು ಬೆಳೆಸಿದರು.

ತೆಲಗು, ಮರಾಠಿ, ಹಿಂದಿ ಸಂಘಗಳಲ್ಲೂ ಶರ್ಮರು ದುಡಿದರು. ಹರಿಜನರಿಗೋಸ್ಕರ ಕೆಲಸ ಮಾಡಿದರು. ಏನೂ ಭೇದ ಮಾಡದೆ ಮನೆಯಲ್ಲೇ ಹರಿಜನರನ್ನು ಕರೆಸಿ ಆದರಿಸುತ್ತಿದ್ದರು. ಊರಲ್ಲಿ ಗಲಭೆ ನಡೆದಾಗಲೆಲ್ಲ ಜೀವದ ಹಂಗು ತೊರೆದು ಗಲಭೆ ಇದ್ದ ಸ್ಥಳಕ್ಕೆ ಓಡಿ ಹೋಗಿ ಜನರಿಗೆ ಸಮಾಧಾನ ಹೇಳುತ್ತಿದ್ದರು ಶರ್ಮಾಜಿ.

“ನಮಗೋಸ್ಕರ ಇಷ್ಟೆಲ್ಲ ಕಷ್ಟಪಟ್ಟಿದ್ದೀರಿ. ಈಗ ಇಲ್ಲೇ ಬನ್ನಿ ದೊಡ್ಡ ಕೆಲಸ ಕೊಡತೀವಿ. ಇಲ್ಲಿ ಪತ್ರಿಕೆ ನಡೆಸೋಣ. ಸಂಬಳ, ಬಂಗಲೆ, ಕಾರು ಎಲ್ಲ ಒದಗಿಸುತ್ತಿವಿ” ಅಂತ ಮುಖ್ಯಮಂತ್ರಿ ರಾಮಕೃಷ್ಣರಾಯರು, ಇತರ ಸ್ನೇಹಿತರು ಎಷ್ಟೋ ಹೇಳಿದರು. ಶರ್ಮ ಒಪ್ಪಲಿಲ್ಲ. “ನನ್ನ ಕೆಲಸ ಆಯಿತು. ಈಗ ಬೆಂಗಳೂರಲ್ಲೇ ನೆಲೆಸಿದ್ದಾಯಿತು. ಲಾಭಕ್ಕೋಸ್ಕರ ನಾವೆಲ್ಲ ಹೋರಾಡಲಿಲ್ಲ. ದೇಶದ ಕೆಲಸ ಮಾಡಿದ್ದಾಯಿತು” ಅಂದುಬಿಟ್ಟರು. ಈಗಲೂ ನೂರಾರು ಜನ ಅವರ ಶಿಷ್ಯರು, ಸ್ನೇಹಿತರು ಹೈದರಾಬಾದಿನಲ್ಲಿ ಇದನ್ನು ನೆನಸಿಕೊಳ್ಳುತ್ತಾರೆ.

ಚಿತ್ರದುರ್ಗ

ಗಡಿಪಾರಾದ ಮೇಲೆ ಶರ್ಮರ ಸಂಸಾರ ಹೈದರಾಬಾದಿನಲ್ಲೇ ಎರಡು ವರ್ಷ ಇತ್ತು. ಬಹಳ ಕಷ್ಟದ ಕಾಲ. ಆದರೂ ಪ್ರಮೀಲಮ್ಮನವರು ಧೈರ್ಯದಿಂದ ನಿಭಾಯಿಸಿದರು. ಆಮೇಲೆ ಇಬ್ಬರು ದೊಡ್ಡ ಮಕ್ಕಳನ್ನು ಓದಲು ಅಲ್ಲೆ ಬಿಟ್ಟು, ಉಳಿದವರೆಲ್ಲ ಚಿತ್ರದುರ್ಗಕ್ಕೆ ಬಂದರು. ಶರ್ಮರೂ ಅಲ್ಲಿಗೆ ಬಂದರು.

ಸರಿ ಅಲ್ಲಿ ಕೆಲಸ ಶುರು. ಶ್ರರ್ಮರ ಸುತ್ತ ಗುಂಪು ಸೇರಿತು. ತರುಣರೆಲ್ಲ ಸೇರಿದರು. ಹಿರಿಯರು ಜೊತೆಗೆ ಬಂದರು. ಎಲ್ಲರೂ ಸೇರಿ ಕರ್ನಾಟಕ ಸಂಘವನ್ನು ಬೆಳಸಿದರು. ಆ ಒಂದೆರಡು ವರ್ಷ ಕಾರ್ಯಕ್ರಮದ ಮೇಲೆ ಕಾರ್ಯಕ್ರಮ. ದೊಡ್ಡ ಸಾಹಿತಿಗಳೆಲ್ಲ ಬಂದರು. ಜೊತೆಗೆ ಅಲ್ಲಿನವರೂ ಬರೆಯುವಂತೆ ಶರ್ಮರು ಪ್ರೋತ್ಸಾಹಿಸಿದರು. ಶರ್ಮರೇ ಕಿರಿಯರಿಗೆಲ್ಲ ಹಿರಿಯ ಸಾಹಿತಿಗಳ ಪರಿಚಯ ಮಾಡಿಸಿ ಸ್ಪೂರ್ತಿ ತುಂಬಿದರು. ಚಿತ್ರದುರ್ಗ ಮಾತ್ರವಲ್ಲ ಸುತ್ತಲ ಹಳ್ಳಿಗಳಲ್ಲೂ ಹೋಗಿ ಕಾರ್ಯಕ್ರಮ ನಡೆಸಿದ್ದು ವಿಶೇಷ.

ವಿಶ್ವ ಕರ್ನಾಟಕ

೧೯೪೧ರ ಸುಮಾರು. ಬೆಂಗಳೂರಿನ “ವಿಶ್ವ ಕರ್ನಾಟಕ” ದೇಶಪ್ರೇಮಕ್ಕೆ ಹೆಸರಾದ ಪತ್ರಿಕೆ. ತಿರುಮಲೆ ತಾತಾಚಾರ್ಯ ಶರ್ಮರು ಅದರ ಸಂಪಾದಕರು. ಕೃಷ್ಣ ಶರ್ಮರಿಗೆ ಹಿರಿಯರು, ಬಳಗದವರು. ದೊಡ್ಡ ದೇಶ ಭಕ್ತರು, ತ್ಯಾಗಿಗಳು. ಅವರ ಮಾತು ಸಿಡಿಲಿನ ಹಗೆ, ಬರವಣಿಗೆ ಮಿಂಚಿನ ಹಾಗೆ. ಅವರಿಗೆ ಹುಷಾರಿಲ್ಲದೆ ಇದ್ದಾಗ, ಕೃಷ್ಣಶರ್ಮರು ಬಂದು, “ವಿಶ್ವಕರ್ನಾಟಕ”ದಲ್ಲಿ ಸಹಾಯಕ್ಕೆ ನಿಂತರು ಅವರ ಚೂಪು ಮಾತೂ ಸೇರಿ, ಬೆಂಕಿಗೆ ಗಾಳಿ ಸೇರಿದಂತಾಯಿತು. ಪತ್ರಿಕೆ ಓದಿದರೆ ಮೈ ಜುಂ ಅನ್ನಿಸುತ್ತಿತ್ತು. ಅದು ಕರ್ನಾಟಕದಲ್ಲೆಲ್ಲ ಸ್ವಾತಂತ್ರ್ಯದ ಸಂದೇಶವನ್ನು ತಿಳಿಸುತ್ತಿತ್ತು. ಸತ್ಯಾಗ್ರಹವನ್ನು ಬೋಧಿಸುತ್ತಿತ್ತು.

ಸ್ವಲ್ಪ ಕಾಲದ ಮೇಲೆ ಕೃಷ್ಣಶರ್ಮರೇ ಸಂಪಾದಕರಾದರು. ಗಾಂಧೀಜಿ ಇಂಗ್ಲೀಷಿನಲ್ಲಿ “ಹರಿಜನ” ಅಂತ ಪತ್ರಿಕೆ ನಡೆಸುತ್ತಿದ್ದರು. ಅದರಲ್ಲಿ ತಮ್ಮ ವಿಚಾರವನ್ನು ಜನರಿಗೆ ತಿಳಿಸುತ್ತಿದ್ದರು. ಅದನ್ನು ಓದಿ ದೇಶಭಕ್ತರಾದವರು ಲೆಕ್ಕವಿಲ್ಲದಷ್ಟು ಜನ. ಶರ್ಮರು ಗಾಂಧೀ ವಿಚಾರ ನಮ್ಮ ಜನಕ್ಕೂ ತಿಳಿಯಲಿ ಅಂತ. ಕನ್ನಡದಲ್ಲಿ “ಹರಿಜನ” ಆರಂಭಿಸಿದರು. “ವಿಶ್ವಕರ್ನಾಟಕ”ದೊಂದಿಗೆ ಅದೂ ನಡೆಯುತ್ತಿತ್ತು.

೧೯೪೨ ರಲ್ಲಿ ಭಾರೀ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ನಾಯಕರೆಲ್ಲ ಜೈಲಿಗೆ ಹೋದರು. ಜನ ದಂಗೆಯದ್ದರು. “ಹರಿಜನ” ನಿಂತಿತು. ಕನ್ನಡ “ಹರಿಜನ”ವೂ ನಿಂತಿತು. ಪೊಲೀಸರು ಬಂದು “ವಿಶ್ವಕರ್ನಾಟಕ” ವನ್ನು ನಿಲ್ಲಿಸಿ, ಇಬ್ಬರು ಶರ್ಮರನ್ನೂ ಜೈಲಿಗೆ ಸೇರಿಸಿದರು. ತಾತಾಚಾರ್ಯ ಶರ್ಮರನ್ನು ಬೇಗ ಬಿಟ್ಟುಬಿಟ್ಟರು. ಕೃಷ್ಣಶರ್ಮರನ್ನು ಇನ್ನೂ ಸ್ವಲ್ಪಕಾಲ ಇಟ್ಟುಕೊಂಡಿದ್ದರು.

ಬಿಡುಗಡೆ ಆದಮೇಲೆ ಮತ್ತೆ “ವಿಶ್ವಕರ್ನಾಟಕ”ದ ಮೊಳಗು ಶುರುವಾಯಿತು. ರಾಮನ ಬಾಣದ ಹಾಗೆ ಶರ್ಮರ ಮಾತಿನ ಬಾಣದ ಮಳೆ. ಸರ್ಕಾರ ಮತ್ತೆ ಅವರನ್ನು ಸೆರೆಮನೆಗೆ ತಳ್ಳಿತು. ಕೆಲವು ಕಾಲದ ಮೇಲೆ ಬಿಡುಗಡೆ ಆಯಿತು.

“ವಿಶ್ವಕರ್ನಾಟಕ”ದಲ್ಲಿ ತಮ್ಮ ಜೊತೆಗೇ ಇತರ ತರುಣ ಸಾಹಿತಿಗಳಿಗೂ ಪತ್ರಿಕೆಯ ಕೆಲಸ ಕಲಿಸಿದರು ಶರ್ಮರು. ಯಾವಾಗಲೂ ಅಷ್ಟೆ ಇತರರನ್ನೂ ತಮ್ಮ ಜೊತೆಗೇ ಕರೆದೊಯ್ಯುವುದು. ಎಷ್ಟೋ ಜನ ಹೀಗೇ ತಾಯಾರಾದರು. ಸಾಹಿತಿಗಳು, ಪತ್ರಕರ್ತರು ವಿದ್ವಾಂಸರು ಆದರು. ಎಲ್ಲರಿಗೂ ಶರ್ಮರೇ ಗುರುಗಳು.

ಆಗ “ವಾಣಿ”, “ಪ್ರಜಾಮತ” ಮೊದಲಾದ ಪತ್ರಿಕೆಗಳಲ್ಲೂ ಬರೆಯುತ್ತಿದ್ದರು. “ಮಾತಿನ ಮಂಟಪ” ಅನ್ನುವ ಅವರ ಬರವಣಿಗೆ ಕರ್ನಾಟಕದಲ್ಲೆಲ್ಲ ಮನೆ ಮಾತಾಗಿತ್ತು.

ಜೊತೆಗೇ ಗಾಂಧೀ ಪುಸ್ತಕಗಳನ್ನು ಕನ್ನಡದಲ್ಲಿ ಬರೆದರು. “ದೀಪಮಾಲೆ”, ಕುಲದೀಪಕರು” ಅಂತ ರಾಷ್ಟ್ರ ನಾಯಕರ ವ್ಯಕ್ತಿಚಿತ್ರಗಳನ್ನು ಬರೆದರು.

ಮಾತಿನ ಮಲ್ಲಕೃತಿಯ ಧೀರ

ಬರವಣಿಗೆಯ ಜೊತೆಗೆ ಭಾಷಣ. ಊರೂರಲ್ಲೂ ದೇಶಭಕ್ತಿಯನ್ನು ಗಾಂಧೀ ವಿಚಾರವನ್ನೂ ತಿಳಿಸುವುದು. ಅವರ ಮಾತಿನಲ್ಲಿ ನಯ, ಬೇಕಾದ ಕಡೆ ನಯ, ಬಿರುಸು ಬೇಕಾದಾಗ ಬಿರುಸು ಇರುತ್ತಿತ್ತು. ಮಾತು ಮಿಂಚಿನ ಹಾಗೆ ಬಾಣ ಬಿಟ್ಟ ಹಾಗೆ. ಸಾವಿರಗಟ್ಟಲೆ ಜನ ಕೇಳಿ ಸಂತೋಷ ಪಡುತ್ತಿದ್ದರು. ಅದರಲ್ಲೂ ತರುಣರಿಗೆ ಶರ್ಮರ ಮಾತು, ಲೇಖನ ಅಂದರೆ ರಸಕವಳ ಅವರು ಎಲ್ಲಿ ಹೋಗಲಿ ಸುತ್ತ ತರುಣರು ಸೇರುತ್ತಿದ್ದರು. ಹಿಂದೆ ಋಷಿಗಳ ಸುತ್ತ ಶಿಷ್ಯರು ಇರುತ್ತಿದ್ದರಲ್ಲ ಹಾಗೆ.

ಒಂದು ಸಲ ನಂಜನಗೂಡಿನಲ್ಲಿ ವಿದ್ಯಾರ್ಥಿಗಳ ಭಾರಿ ಸಭೆ. ಸಾವಿರಾರು ತರುಣರು ಸೇರಿದ್ದರು. ಶರ್ಮರೂ ಹೋಗಿದ್ದರು. ಜನ ಹತೋಟಿ ಮೀರುವ ಹಾಗಿತ್ತು. ಯಾರ ಮಾತೂ ಕೇಳುವ ಹಾಗಿರಲಿಲ್ಲ. ಆಗ ಶರ್ಮರೂ ಹೋಗಿದ್ದರು. ಜನ ಹತೋಟಿ ಮೀರುವ ಹಾಗಿತ್ತು. ಯಾರ ಮಾತೂ ಕೇಳುವ ಹಾಗಿರಲಿಲ್ಲ. ಆಗ ಶರ್ಮರು ಮಾತಾಡಿದರು. ಪುಂಗಿ ಬಾರಿಸಿದರೆ ಹಾವು ಹತೋಟಿಗೆ ಬರುವುದಿಲ್ಲವೇ? ಹಾಗೆ ಆ ಯುವಕರೆಲ್ಲ ಶಾಂತರಾದರು. ಪೊಲೀಸರ ಬೆದರಿಗೆ ಹೆಚ್ಚಾಯಿತು. ನಾಯಕರೆಲ್ಲ ಹೊರಡಬೇಕಾಯಿತು. ಶರ್ಮರು ಮಾತ್ರ ಅಲ್ಲೇ ನಿಂತು ವಿದ್ಯಾರ್ಥಿಗಳೆಲ್ಲ ಕ್ಷೇಮವಾಗಿ ವಾಪಸ್ಸು ಹೋಗುವಂತೆ ನೋಡಿಕೊಂಡರು. ಇಂಥ ಸಭೆ ಸಮ್ಮೇಳನ ಎಷ್ಟೋ!.

“ಯುವಕರಲ್ಲಿ ತುಂಬ ಉತ್ಸಾಹ ಇರುತ್ತೆ, ಶಕ್ತಿ ಇರುತ್ತೆ. ಅದನ್ನು ಸರಿಯಾದ ದಾರಿಯಲ್ಲಿ ನಡೆಸಿದರೆ ದೊಡ್ಡ ಕೆಲಸ ಸಾಧಿಸಬಹುದು. ಅವರನ್ನು ದೇಶಸೇವೆಗೆ ಸಿದ್ಧಗೊಳಿಸಬೇಕು. ಅವರಲ್ಲಿ ಪ್ರಾಮಾಣಿಕತೆ, ಒಳ್ಳೆ ನಡತೆ, ಸೇವೆಯ ಬುದ್ಧಿಗಳನ್ನು ತುಂಬಬೇಕು. ದೇಶ ಕಟ್ಟಬೇಕಾದರೆ ಯುವಕರನ್ನು ಕಟ್ಟಬೇಕು” ಅನ್ನುವುದೇ ಶರ್ಮರ ವಿಚಾರವಾಗಿತ್ತು.

ಗಾಂಧೀ ಸಾಹಿತ್ಯ ಸಂಘ

ಅದಕ್ಕೋಸ್ಕರವೇ ಅನೇಕ ಸಂಗ-ಸಂಸ್ಥೆಗಳಲ್ಲಿ ದುಡಿದರು. ೧೯೪೨ ರಲ್ಲಿ ಬೆಂಗಳೂರಿನಲ್ಲಿ ಗಾಂಧೀ ಸಾಹಿತ್ಯ ಸಂಘ ಆರಂಭಿಸಿದರು. ಅಲ್ಲಿ ತರುಣರೇ ಮುಖ್ಯ. ಅವರ ಬುದ್ಧಿ ಬೆಳೆಯಲು ಪುಸ್ತಕ ಭಂಡಾರ, ಉಪನ್ಯಾಸ, ಅಭ್ಯಾಸ ಮುಂತಾದ ಕಾರ್ಯಕ್ರಮ ನಡೆಯುತ್ತವೆ. ಬಡಜನರ ಸೇವೆ, ಹಳ್ಳಿಗಳಲ್ಲಿ ಸೇವೆ, ಗಾಂಧೀಜಯಂತಿ, ಕನ್ನಡದ ಕೆಲಸ, ಖಾದಿ, ಪತ್ರಿಕೆ, ಮಕ್ಕಳ ಕಾರ್ಯಕ್ರಮ ಎಲ್ಲ ಊಂಟು. ಅಲ್ಲಿ ಅಧ್ಯಕ್ಷ ಕಾರ್ಯದರ್ಶಿ ಮೊದಲಾದ ಸ್ಥಾನಗಳಿಲ್ಲ. ಸೇವೆಯೇ ಮುಖ್ಯ. ಹೀಗೇ ಇವತ್ತಿಗೂ ನಡೆದಿದೆ. ಸಂಘ ಬೆಳೆದು ದೊಡ್ಡದಾಗಿದೆ. ಕಟ್ಟಡ ಕಟ್ಟಿಕೊಂಡಿದೆ. ಅಲ್ಲಿ ಬೆಳೆದ ನೂರಾರು ಜನ ದೇಶದಲ್ಲೆಲ್ಲ ಇದ್ದಾರೆ. ಸಾಹಿತಿಗಳು, ಪತ್ರಿಕಾ ಕರ್ತರು, ಹಳ್ಳಿಯಲ್ಲಿ ಸೇವಕರು, ಗಾಂಧೀ ವಿನೋಬಾ ಆಶ್ರಮಗಳಲ್ಲಿ ಕೆಲಸಗಾರರು, ರಾಮಕೃಷ್ಣ ಆಶ್ರಮದಲ್ಲಿ ಸಂನ್ಯಾಸಿಗಳು ಆಗಿ ಸೇವೆ ಮಾಡುತ್ತಿದ್ದಾರೆ.

ಭಾರತ ಸ್ವತಂತ್ರವಾದಾಗ ಮೈಸೂರಿನಲ್ಲೂ ಪ್ರಜಾರಾಜ್ಯಬೇಕು ಅಂತ ಚಳುವಳಿ ನಡೆಯಿತು. ಸಾವಿರಾರು ಜನ ಜೈಲಿಗೆ ಹೋದರು. ಶರ್ಮರೂ ಹೋದರು. ಸುಮಾರು ಒಂದು ತಿಂಗಳು ಚಳವಳಿ. ಸರ್ಕಾರ ಜನರ ಮಾತಿಗೆ ಒಪ್ಪಿತು. ಎಲ್ಲರನ್ನೂ ಬಿಟ್ಟಿತು. ಪ್ರಜೆಗಳಿಗೆ ಅಧಿಕಾರ ಬಂತು. ಆಗ ನಾಯಕರು ಮುಂದೆ ಬರಲು ಶರ್ಮರು ಬಹಳ ಸಹಾಯ ಮಾಡಿದರು. ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಲು ಓಡಾಡಿದರು. ಶರ್ಮರ ಭಾಷಣ ಅಂದರೆ ಓಟು ಸಿಕ್ಕಹಾಗೆಯೇ. ಹೀಗೆ ದೇಶದಲ್ಲೆಲ್ಲ ನೂರಾರು ಸಭೆ, ದಿನಕ್ಕೆ ನಾಲ್ಕೈದು ಭಾಷಣ, ಬಿಡುವಿಲ್ಲದೆ ಓಡಾಟ ಶರ್ಮರಿಗೆ.

ಏನು ಸಮಸ್ಯೆ ಬಂದರೂ ನಾಯಕರು ಶರ್ಮರ ಮನೆಗೆ ಓಡಿ ಬರುತ್ತಿದ್ದರು. ಸಲಹೆ ಪಡೆಯುತ್ತಿದ್ದರು. ಇವರ ಹರಿತವಾದ ಬುದ್ಧಿ, ವಿವೇಕದ ಮಾತು ಎಲ್ಲರಿಗೂ ತುಂಬ ಬೇಕಾಗಿದ್ದವು. ಇಷ್ಟೆಲ್ಲ ಆದರೂ ಇವರು ಮಾತ್ರ ಏನೂ ಅಧಿಕಾರ, ಏನೂ ಲಾಭ ಪಡೆಯಲಿಲ್ಲ. ಭಗವದ್ಗೀತೆಯಲ್ಲಿ ಹೇಳಿದೆ-ಫಲದ ಆಸೆ ಇಟ್ಟುಕೊಳ್ಳದೆ ನಮ್ಮ ಕರ್ತವ್ಯ ಮಾಡಬೇಕು ಅಂತ. ಗಾಂಧೀಜಿ ಹಾಗೆಯೇ ದುಡಿದರಲ್ಲವೇ? ಶರ್ಮರದೂ ಅದೇ ರೀತಿ, ತಮ್ಮ ಸೇವೆಗೆ ಏನೂ ಪ್ರತಿಫಲ ಬಯಸುತ್ತಿರಲಿಲ್ಲ.

ಗಾಂಧೀ ಸ್ಮಾರಕ ನಿಧಿಯಲ್ಲಿ ಶರ್ಮರು ಕೆಲಸ ಮಾಡಿದಾಗ, ವಿಚಾರ ಪ್ರಚಾರ, ಪುಸ್ತಕ ಪ್ರಕಟಣೆ, ಹಳ್ಳಿಯ ಜನರ ಸೇವೆ, ಕುಷ್ಟರೋಗಿಗಳ ಸೇವೆ, ಕಾಡಿನ ಗಿರಿಜನರ ಸೇವೆ ಎಲ್ಲಕ್ಕೂ ಏರ್ಪಾಟು ಮಾಡಿದರು.

ಗಾಂಧೀಜಿಯ ವಿಚಾರವನ್ನೆಲ್ಲ ಕನ್ನಡದಲ್ಲಿ ಬರೆಯಬೇಕು. ಅಂತ ಗಾಂಧೀಸ್ಮಾರಕ ನಿಧಿ ಏರ್ಪಡಿಸಲಾಯಿತು. ಶರ್ಮರೂ ಅದರಲ್ಲಿ ಮುಖ್ಯವಾದ ಕೆಲಸ ಮಾಡಿದರು. ಇಪ್ಪತ್ತು ಅಂದವಾದ ಪುಸ್ತಕಗಳು ತಯಾರಾದವು. ವಿನೋಬಾಜಿ ಭೂದಾನ ಯಜ್ಞ ಆರಂಭಿಸಿದರು. ಆಸ್ತಿ ಎಲ್ಲ ದೇವರದು, ನಾವೆಲ್ಲ ಹಂಚಿಕೊಂಡು ಬಾಳಬೇಕು. ಕೆಲವರಿಗೆ ಜಾಸ್ತಿ, ಕೆಲವರಿಗೆ ಇಲ್ಲ ಎನ್ನುವಂತೆ ಆಗಬಾರದು. ಎಲ್ಲರೂ ಒಂದೇ ಮನೆಯವರಂತೆ ಇರಬೇಕು ಅಂತ. ಇದೇ ಸರ್ವೋದಯ. ಇದನ್ನು ಕರ್ನಾಟಕದಲ್ಲೆಲ್ಲ. ಹರಡುವುದಕ್ಕೆ ಶರ್ಮರು ತುಂಬ ಶ್ರಮ ಪಟ್ಟರು. ಪತ್ರಿಕೆ ನಡೆಸಿದರು ಪುಸ್ತಕ ಬರೆದರು. ಪ್ರವಾಸ ಮಾಡಿದರು. ಕೆಲಸಗಾರರನ್ನು ಸಿದ್ದಪಡಿಸಿದರು. ಸರ್ವೋದಯದ ಗುರುವಾದರು.

ಕನ್ನಡ ಸಾಹಿತ್ಯ ಪರಿಷತ್ತು, ದಕ್ಷಿಣ ಭಾರತ ಪುಸ್ತಕ ಸಂಸ್ಥೆ ಪ್ರಕಾಶಕರ ಸಂಘ, ಹಿಂದೀ ಸಭೆ, ಶಿಕ್ಷಣ ಸಂಸ್ಥೆಗಳು, ಗೋಸೇವಾಸಂಗ ಹೀಗೆ ಅನೇಕ ಕಡೆ ದುಡಿದರು. ಬಡವರ್ಗಿಎ ಅನುಕೂಲವಾಗಲೆಂದು ಶ್ರೀರಾಮ ಸಹಕಾರ ಬ್ಯಾಂಕು, ಆಂಜನೇಯ ಸಹಕಾರ ಬ್ಯಾಂಕುಗಳನ್ನು ಕಟ್ಟಿದರು. ತಾವೇ ನಿಂತು ಪ್ರಾಮಾಣಿಕವಾಗಿ ಕೆಲಸ ಆಗುವಂತೆ ವ್ಯವಸ್ಥೆ ಮಾಡಿದರು. ಶ್ರೀನಿವಾಸ ಮಂದಿರ ಅನ್ನುವ ಅನಾಥಾಲಯಕ್ಕೆ ಅನೇಕ ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ರಾಜಕೀಯದಿಂದ ದೂರವಾಗಿ ಸೇವೆಯಲ್ಲಿ ಮುಳುಗಿದ್ದರು.

ಇವುಗಳ ಮಧ್ಯೆ ಬರೆಯುವುದೂ ಸಾಗಿತ್ತು. ನೆಹರು, ವಿನೋಬಾ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್ ರ ಮೇಲೆ ಪುಸ್ತಕ ಬರೆದರು.”ಕೃಷ್ಣಾವತಾರ” ಅನ್ನುವ ಇಂಗ್ಲೀಷಿನ ಪುಸ್ತಕವನ್ನು ಕನ್ನಡದಲ್ಲಿ ಬರೆದರು. “ರಾಮಾವತಾರ” ಅನ್ನುವ ರಾಮಾಯಣವನ್ನು ಬರೆದರು.

ಇಷ್ಟೆಲ್ಲ ದುಡಿತದಲ್ಲಿ ಅವರ ಅರೋಗ್ಯ ಕೆಟ್ಟಿತು. ಕೆಲವು ಕಾಲ ಮಲಗಿದ್ದರು. ಕೊನೆಗೆ ೧೯೭೩ ರ ಅಕ್ಟೋಬರ್ ೧೪ ರಂದು ಸಂಜೆ ದೇವರ ಪಾದ ಸೇರಿಕೊಂಡರು.

ವ್ಯಕ್ತಿತ್ವ

ಕೃಷ್ಣಶರ್ಮ ಕುಳ್ಳ ವ್ಯಕ್ತಿ, ಆದರೆ ಆಕರ್ಷಕ. ಮುಖದಲ್ಲಿ ಕಾಂತಿ, ಮಾತಿನಲ್ಲಿ ಮೆದು. ತುಂಬ ಸರಳರು. ಖಾದಿ ಪಂಚೆ, ಜುಬ್ಬಾ ಅಷ್ಟೆ ಅವರ ಬಟ್ಟೆ ಕಾಲಿಗೆ ಚಪ್ಪಲಿಯೂ ಇಲ್ಲ, ಓಡಾಟ, ಸಭೆ, ಚರ್ಚೆ, ಭಾಷಣ, ಬರವಣಿಗೆ- ಯಾವಾಗಲೂ ಏನಾದರೂ ಕೆಲಸವೇ. ಚೂರು-ಪಾರು ಕಾಗದವನ್ನೂ ಹಾಳು ಮಾಡುತ್ತಿರಲಿಲ್ಲ. ಪುಟಾಣಿ ಅಕ್ಷರದಲ್ಲಿ, ಖಾಲಿ ಜಾಗದಲ್ಲಿ ಬರೆಯುತ್ತಿದ್ದರು ಇತರರಿಗಾಗಿ, ಅದರಲ್ಲೂ ಯುವಕರ ಏಳಿಗೆಗಾಗಿ ಅವರು ಮಾಡಿದ್ದು ಬಹಳ.

ದೊಡ್ಡ ನಾಯಕರು ಇಂಗ್ಲೀಷಿನಲ್ಲೋ ಹಿಂದಿಯಲ್ಲೋ ಮಾತನಾಡಿದರೆ, ಇವರು ಆ ಕ್ಷಣದಲ್ಲೇ ಅದನ್ನು ಕನ್ನಡದಲ್ಲಿ ಅನುವಾದ ಮಾಡಿ ಹೇಳುತ್ತಿದ್ದರು. ಮಾತಿಗೆ ಮಾತು. ಸೊಗಸಾಗಿರುತ್ತಿತ್ತು. ತಾವೇ ಮಾತಾಡಲು ನಿಂತರೆ ಗಂಟೆಗಟಲೆ ಸ್ವಾರಸ್ಯಕರವಾಗಿ ಮಾತಾಡುತ್ತಿದ್ದರು. ಶರ್ಮರು ಬರೆದ ನೂರಾರು ಪುಸ್ತಕಗಳಲ್ಲಿ ಗಾಂಧೀ ವಿಚಾರ, ವಿನೋಬಾರವರ ವಿಚಾರವೇ ಮುಖ್ಯ. ಅವರ ಬರವಣಿಗೆಯ ರೀತಿಯೇ ವಿಶೇಷ ಮನ ಸೆಳೆಯುವ ಹಾಗೆ ಇದೆ.

ಹೀಗೆ ರಾಜಕೀಯ, ಸಾಹಿತ್ಯ, ಪತ್ರಿಕೆ, ಜನಸೇವೆ ಎಲ್ಲದರಲ್ಲೂ ಕೃಷ್ಣಶರ್ಮರು ದೊಡ್ಡ ಕೆಲಸ ಮಾಡಿ, ಮೇಲುಪಂಕ್ತಿ ಹಾಕಿಕೊಟ್ಟರು. ನಾವೆಲ್ಲ ಅದನ್ನು ಅನುಸರಿಸಿದರೆ ನಮಗೂ ಒಳ್ಳೆಯದು, ದೇಶಕ್ಕೂ ಒಳ್ಳೆಯದು.

ಸಿದ್ದವನಹಳ್ಳಿಯವರ ಬರಹ ಎಲ್ಲ ಜನರಿಗೆ ಅರ್ಥವಾಗುವಂತಹ, ಎಲ್ಲರ ಮನಸ್ಸಿಗೆ ಬೆಳಕಾಗುವಂತಹ ಬರಹ ಎಲ್ಲ ಜನರಿಗೆ ಅರ್ಥವಾಗುವಂತಹ, ಎಲ್ಲರ ಮನಸ್ಸಿಗೆ ಬೆಳಕಾಗುವಂತಹ ಬರಹ. ಪುಟ್ಟ-ಪುಟ್ಟ ವಾಕ್ಯಗಳು. ಲವ-ಲವಿಕೆಯ ಶೈಲಿ. ವರ್ಣಿಸಿದ್ದು ಕಣ್ಣಿಗೆ ಕಟ್ಟುತ್ತದೆ. ಅಭಿಪ್ರಾಯ ಹೇಳುವ ವಾಕ್ಯ ಮನಸಿನಲ್ಲಿ ಮನೆ ಮಾಡುತ್ತದೆ. ಒಂದು ಉದಾಹರಣೆ: “ಪರ್ಣಕುಟಿ” ಎಂಬ ಪುಸ್ತಕದಲ್ಲಿ ಗಾಂಧೀಜಿಯು ಪ್ರಾರ್ಥನಾ ಸಭೆಯ ವರ್ಣನೆ ಇದು:

ಗಾಂಧೀಜಿಯ ಈ ಅವರ್ಣನೀಯ ಪ್ರಭಾವವನ್ನು ನೆನೆದರೆ ಒಂದು ಚಿತ್ರ ಕಣ್ಣಿಗೆ ಕಟ್ಟಿ ನಿಲ್ಲುತ್ತದೆ. ಅವರ ಜೀವನದ ಈ ವಿಲಕ್ಷಣ ಶಕ್ತಿಯ ಸೆಲೆ ಎಲ್ಲಿದೆ ಎಂಬ ವಿಚಾರ ಬಂದಾಗ ಒಂದು ನೋಟ ನೆನಪಿಗೆ ಬರುತ್ತದೆ. ಗಾಂಧೀಜಿಯ ಹೆಸರನ್ನು ಕೇಳಿದರೆ ಸಾಕು. ನೂರಾರು ಮೈಲಿ ದಾಟಿ ಆ ದ್ವನಿ ಕೇಳಿ ಬರುತ್ತದೆ.

ಒಂದೇ ಮನಸ್ಸಿನಿಂದ, ಅಖಂಡ ಶ್ರದ್ಧೆಯಿದ ಗುಂಪಿಗೆ ಗುಂಪೇ ರಾಮಧುನ್ ಹಾಡುತ್ತಿದ್ದಾರೆ. ರಾಮ ನಾಮವು ಕಡಲಿನ ತೆರೆಗಳಂತೆ ಉಕ್ಕಿ ಬರುತ್ತಿದೆ: ಪರಿಮಳ ಗಾಳಿಯಲ್ಲಿ ಹರಡಿದಂತೆ ಸುತ್ತಲಿನ ಬಯಲಿನಲ್ಲಿ ಸವಿಯಾಗಿ ಕರಗಿ ಹೋಗುತ್ತಿದೆ. ಯಜ್ಞನಾರಾಯಣನ ಕುಡಿಗಳು ಮೇಲೇರಿ ಹೋಗುವಂತೆ ಮುಗಿಲಿನ ಕಡೆಗೆ ಸಾಗಿ ಹೋಗುತ್ತಿದೆ. ನಸುಕಿನ ಕತ್ತಲು. ಮೇಲೆ ಕಾಣುವ ಚಿಕ್ಕೆಗಳ ಬೆಳಕಿನಲ್ಲಿ ಮೋರೆ ಅಸ್ಪಷ್ಟವಾಗಿದೆ. ಜಗತ್ತಿಗೆ ಜಗತ್ತೇ ನಿಶ್ಯಬ್ದವಾಗಿದೆ. ಸಾವಿನಲ್ಲೂ ಜೀವ ಕೊನರಿ ನಿಲ್ಲುವ ಹಾಗೆ ಸರ್ವ ವ್ಯಾಪಿಯಾದ ಮೌನದಲ್ಲಿ ಈ ರಾಮನಾಮ!

ಪಕ್ಕದಲ್ಲೇ ಪರ್ಣಕುಟಿ. ಸುತ್ತಲೂ ಶಿಷ್ಯವರ್ಗ ಅಥವಾ ಜೊತೆಗಾರರು. ನಡುವೆ ಪದ್ಮಾಸನದಲ್ಲಿ ಬಾಪೂಜಿ. ಆಶ್ರಮದ ಗುಡಿಸಲಾಗಲಿ, ದೂರದ ಗಿಡ ಮರಗಳಾಗಲಿ ಕಾಣುವು. ಗಾಂಧೀಜಿಯ ಮೋರೆ ಪೂರಾ ಅರಳಿದ ಕಮಲದ ಹೂವಿನಂತೆ ವರ್ಣಿಸಲು ಬಾರದ ಒಂದು ಆನಂದದಿಂದ ತುಂಬಿದೆ. ಪ್ರಕಾಶಮಾನವಾದ ವಿದ್ಯುದ್ದೀಪದ ಬೆಳಕಿನ ಕಾಂತಿ ಸುತ್ತಲೂ ಹರಡಿದಂತೆ ಆ ಆನಂದದ ತೆರೆಗಳು ಸುತ್ತಲೂ ಹೊಳೆ-ಹೊಳೆವ ರೂಪಿನಿಂದ ಹರಿದಿವೆ. ಅಲ್ಲಿ ನೆನಪು-ತಿಳಿವು ಇದ್ದೂ ಇಲ್ಲದಂತೆ ಕರಗಿ-ಹೋಗಿದೆ. ಆಟವಾಡಿ ಸೋತು ನಿದ್ದೆಗೆ ಬಂದ ಮಗುವಿನ ಮೈಯಮೇಲೆ ತಾಯಿ ಹೊದಿಸಿದ ತನ್ನ ಸೆರಗಿನಂತೆ ಅಖಂಡ ಶಾಂತಿಯ ಒಂದು ಭಾವ ತುಂಬಾ ಕವಿದಿದೆ.

ನೂರಾರು ಮೈಲು ದಾಟಿ ಈಗಲೂ ಕೇಳಿಸುತ್ತಿದ್ದ ಹಾಗೆ ಅನಿಸುತ್ತಿದೆ: ಅದೇ ದ್ವನಿ, ಅದೇ ಗಾಂಭೀರ್ಯ!

ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
“.