-೧-

ಸೊನ್ನಲಿಗೆಯ ಕೆರೆಯ ನಡುವಣ ಗೊಪೆಯನ್ನು ಪ್ರವೇಶಿಸಿ ಸಿದ್ಧರಾಮನು ಮಹಾಸಮಾಧಿಗೆ ಸಂದ ಅಂದಿನಿಂದ ಇಂದಿನವರೆಗೆ, ಅವನ ವ್ಯಕ್ತಿತ್ವದ ಮಹಿಮಾತಿಶಯವು, ವಿವಿಧ ಜಾನಪದ ಅಭಿವ್ಯಕ್ತಿಗಳಲ್ಲಿ, ಬಹು ಸಂಖ್ಯೆಯ ಶಿಲಾ ಶಾಸನಗಳಲ್ಲಿ ಹಾಗೂ ಅವನ ಹೆಸರಿನ ದೇವಸ್ಥಾನಗಳಲ್ಲಿ, ಕನ್ನಡ ಕವಿಗಳ ಕೃತಿಗಳಲ್ಲಿ, ಮತ್ತು ಸಿದ್ಧರಾಮನೇ ತನ್ನ ಜೀವಿತ ಕಾಲದಲ್ಲಿ ಬರೆದ ವಚನಗಳು ಹಾಗೂ ತ್ರಿವಿಧಿಗಳಲ್ಲಿ ಪ್ರಕಟಗೊಂಡಿದೆ. ಹನ್ನೆರಡನೆಯ ಶತಮಾನದಿಂದ ಹಿಡಿದು ಹದಿನಾಲ್ಕನೆಯ ಶತಮಾನದವರೆಗೂ ಕರ್ನಾಟಕದ ಒಳಗೂ ಮತ್ತು ಹೊರಗೂ ಸಿದ್ಧರಾಮನನ್ನು ಕುರಿತ ಇಪ್ಪತ್ತೊಂದರಷ್ಟು ಸಂಖ್ಯೆಯ ಶಿಲಾಶಾಸನಗಳು ದೊರೆಯುತ್ತವೆ. ಈ ಶಾಸನಗಳಲ್ಲಿ ಸಿದ್ಧರಾಮನ ಆದೇಶವೂ, ವ್ಯಕ್ತಿತ್ವವನ್ನು ವರ್ಣಿಸುವ ವಿಶೇಷಣಗಳೂ, ಅವನ ಇಷ್ಟದೈವವಾದ ಕಪಿಲಸಿದ್ಧ ಮಲ್ಲಿಕಾರ್ಜುನನಿಗೆ ನೀಡಿದ ದಾನ ದತ್ತಿಗಳ ವಿವರಗಳೂ ಉಲ್ಲೇಖಗೊಂಡಿವೆ. ಸೊನ್ನಲಿಗೆಯನ್ನು ‘ಅಭಿನವ ಶ್ರೀಶೈಲ’ವನ್ನಾಗಿಯೂ ‘ಯೋಗರಮಣೀಯಕ್ಷೇತ್ರ’ವನ್ನಾಗಿಯೂ ಅವನು ಮಾರ್ಪಡಿಸಿದ ವಿಷಯವು ಈ ಶಾಸನಗಳಲ್ಲಿ ಮತ್ತೆ ಮತ್ತೆ ಉಲ್ಲೇಖಿತವಾಗಿದೆ. ಕನ್ನಡದಲ್ಲಿ ಬಸವಾದಿ ಶಿವಶರಣರನ್ನು ಕುರಿತ ಶಾಸನಗಳು ಸಾಕಷ್ಟು ಇರುವುವಾದರೂ, ಸಿದ್ಧರಾಮನನ್ನು ಕುರಿತು ರಚಿತವಾದಷ್ಟು ವಿಪುಲಸಂಖ್ಯೆಯ ಶಾಸನಗಳು ಬೇರಾವ ಶರಣರನ್ನೂ ಕುರಿತು ರಚಿತವಾಗಿಲ್ಲ ಅನ್ನುವ ಸಂಗತಿ ಕರ್ನಾಟಕದ ಜನರ ಬದುಕಿನ ಮೇಲೆ ಸಿದ್ಧರಾಮನು ಮಾಡಿದ ಗಾಢವಾದ ಪ್ರಭಾವಕ್ಕೆ ಒಂದು ಸಂಕೇತವಾಗಿದೆ. ಅಷ್ಟೆ ಅಲ್ಲ, ಹರಿಹರ, ರಾಘವಾಂಕರಿಂದ ಮೊದಲುಗೊಂಡು ಇತ್ತೀಚಿನ ಶ್ರೀಮತಿ ಜಯದೇವಿ ತಾಯಿ ಲಿಗಾಡೆಯವರವರೆಗೆ ಮೂವತ್ತಕ್ಕೂ ಹೆಚ್ಚಿನ ಕನ್ನಡ ಕವಿ ಕೃತಿಗಳಲ್ಲಿ ಸಿದ್ಧರಾಮನ ವಿಷಯವು ನಿರೂಪಿತವಾಗಿದೆ. ಆದರೆ ಸಿದ್ಧರಾಮನ ಸಮಗ್ರ ಚರಿತ್ರೆಯನ್ನು ನಿರೂಪಿಸುವ ಪ್ರಾಚೀನ ಕೃತಿಗಳಲ್ಲಿ ರಾಘವಾಂಕನ ‘ಸಿದ್ಧರಾಮ ಚಾರಿತ್ರ’ವೆ ಮೊದಲನೆಯದಾಗಿದೆ. ಈ ಎಲ್ಲ ಸಂಗತಿಗಳಿಂದ ಹೇಳುವುದಾದರೆ ವೀರಶೈವ ಧರ್ಮ ಹಾಗೂ ವಚನ ವಾಙ್ಮಯದ ಒಂದು ಭಾಗವಾಗಿರುವ ಸಿದ್ಧರಾಮ ಕನ್ನಡನಾಡು ಕಂಡ ಒಬ್ಬ ವಿಶೇಷ ಮಹಿಮಾಶಾಲಿಯಾದ ವ್ಯಕ್ತಿಯಾಗಿದ್ದಾನೆ.

ಬಸವಾದಿಗಳ  ಸಮಕಾಲೀನನಾಗಿ ಅಂದು ಕರ್ನಾಟಕದಲ್ಲಿ ಸಂಭವಿಸಿದ ಸಾಮಾಜಿಕ- ಧಾರ್ಮಿಕ ಸ್ವರೂಪದ ಒಂದು ಅಪೂರ್ವವಾದ ಕ್ರಾಂತಿಯಲ್ಲಿ ಪಾಲುಗೊಂಡ ಸಿದ್ಧರಾಮನ ನಿಖರವಾದ ಜೀವಮಾನಾವಧಿಯನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ.[1] ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ ಹಾಗೂ ಇನ್ನೂ ಹಲವರ ವಚನಗಳಲ್ಲಿ ಸಿದ್ಧರಾಮನ ಉಲ್ಲೇಖಗಳಿದ್ದರೂ, ಅವನನ್ನು ಕುರಿತ ತೀರಾ ಪ್ರಾಚೀನವಾದ ಶಾಸನದ ಕಾಲ ಕ್ರಿ.ಶ. ೧೧೯೦ ಎಂಬುದು ನಿಜವಾದರೂ, ಆತ ಜನಿಸಿದ್ದು ಯಾವಾಗ, ಸೊನ್ನಲಿಗೆಯಲ್ಲಿ ಎಷ್ಟುಕಾಲ ಇದ್ದ, ಅವನು ಕಲ್ಯಾಣಕ್ಕೆ ಯಾವಾಗ ಹೋದ, ಆತ ಅಲ್ಲಿಂದ ತನ್ನೂರಿಗೆ ಮರಳಿ ಯಾವಾಗ ಬಂದ- ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ದೊರೆಯದಾಗಿದೆ. ಆದರೆ ಆತ ಬಸವಾದಿಗಳ ಸಮಕಾಲೀನನಾಗಿ ಹನ್ನೆರಡನೆಯ ಶತಮಾನದಲ್ಲಿ ಇದ್ದದ್ದೂ, ಅವನು ಸೊನ್ನಲಿಗೆಯಲ್ಲಿ ಹುಟ್ಟಿದ್ದೂ, ಅನಂತರ ಅವನು ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವನ್ನು ಸ್ಥಾಪಿಸಿ ದೇವಾಲಯ ತಟಾಕಾದಿಗಳನ್ನು ನಿರ್ಮಿಸಿ ಸೊನ್ನಲಿಗೆಯನ್ನು ಒಂದು ಯೋಗರಮಣೀಯ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದ್ದೂ ನಿರ್ವಿವಾದವಾದ ಸಂಗತಿಗಳಾಗಿವೆ.

ಸಿದ್ಧರಾಮನು ಅಂದು ಕುಗ್ರಾಮವಾಗಿದ್ದ ಸೊನ್ನಲಿಗೆಯಲ್ಲಿ ಹುಟ್ಟಿದ್ದು ಕುಡಿಯರ ಕುಲದ ದಂಪತಿಗಳಲ್ಲಿ; ಅಂದರೆ ಶೂದ್ರ ಜನಾಂಗಕ್ಕೆ ಸೇರಿದ ಒಕ್ಕಲಿಗರ ಮನೆಯಲ್ಲಿ. ಅವನ ತಂದೆ- ತಾಯಂದಿರ ಮನೆದೈವ ಧೂಳಿ ಮಾಕಾಳ ಎಂಬ ಒಂದು ಕ್ಷುದ್ರ ದೇವತೆ. ಹೀಗೆ ಶೂದ್ರ ಕುಲದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ಸ್ವಯಂ ಸಾಧನೆಯಿಂದ ಸಿದ್ಧರಾಮನೆಂಬ ಅಭಿದಾನವನ್ನು ಪಡೆದು, ತನ್ನ ಕಾಯಕದ ಮೂಲಕ ಜನದ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತ ಅಪ್ರತಿಮ ಶಿವಯೋಗಿಯಾಗಿ ರೂಪುಗೊಂಡು, ಅಂದಿನ ಕಲ್ಯಾಣ ಕ್ರಾಂತಿಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬನಾಗಿ, ಶತಮಾನಗಳ ಉದ್ದಕ್ಕೂ ಮಹಿಮಾಶಾಲಿಯಾಗಿ ಕನ್ನಡ ಜನದ ಬದುಕಿನ ಒಂದು ಭಾಗವಾಗಿ ಉಳಿದಿರುವುದು ಸಾಮಾನ್ಯವಾದ ಸಂಗತಿಯೇನಲ್ಲ.

ಸಿದ್ಧರಾಮನ ಜೀವನ ಹಾಗೂ ಸಾಧನೆಗಳನ್ನು ಪರಿಚಯಮಾಡಿಕೊಡುವ ಕನ್ನಡ ಕವಿಗಳ ಕೃತಿಗಳನ್ನೂ, ಸಿದ್ಧರಾಮನು ಬರೆದಿರುವ ವಚನ ಹಾಗೂ ತ್ರಿವಿದಿಗಳನ್ನೂ ಮತ್ತು ಅಂದಿನ ವಚನಕಾರರು ಸಿದ್ಧರಾಮನ ವಿಚಾರದಲ್ಲಿ ತೋರಿರುವ ಪ್ರತಿಕ್ರಿಯೆಗಳನ್ನೂ ಒಟ್ಟಾಗಿ ಹಿಡಿದು ನೋಡಿದರೆ, ಅವನ ಬದುಕು ಸ್ಥೂಲವಾಗಿ ಮೂರು ಹಂತಗಳಲ್ಲಿ ತಿರುವನ್ನೂ, ವಿಕಾಸವನ್ನೂ ಪಡೆದುಕೊಂಡಂತೆ ತೋರುತ್ತದೆ. ಮೊದಲನೆಯದು, ಆತ ಸೊನ್ನಲಿಗೆಯ ಮುದ್ದಗೌಡ ಮತ್ತು ಸುಗ್ಗವ್ವೆಯರ ಮಗನಾಗಿ ಹುಟ್ಟಿ, ಕೇವಲ ಅಂತರ್ಮುಖಿಯಾಗಿ, ಏಕಾಂಗಿಯಾಗಿ ತನ್ನ ಜನ್ಮೋದ್ದೇಶವನ್ನು ನೆನಪುಮಾಡಿಕೊಳ್ಳುತಿದ್ದಾನೆಯೋ ಎಂಬಂತೆ ‘ಜಡನಾಗಿ’ ‘ಮೂಕನಾಗಿ’ ‘ಮರುಳಂತೆ’ ಇದ್ದ ಒಂದು ಕಾಲಘಟ್ಟ. ಎರಡನೆಯದು, ಶ್ರೀಶೈಲದ ಮಲ್ಲಯ್ಯನೆಂಬ ಜಂಗಮನು ನವಣೆಯ ಹೊಲದ ಬಳಿ ಕಾಣಿಸಿಕೊಂಡು, ಆತನೊಳಗಿದ್ದ ದೈವೀಭಾವವನ್ನು ಎಚ್ಚರಿಸಿದ ಕಾರಣದಿಂದ, ಆ ದೈವೋನ್ಮಾದದಲ್ಲಿ ಸಿದ್ಧರಾಮನು ಶ್ರೀಶೈಲಕ್ಕೆ ಹೋಗಿ ಅಲ್ಲಿ ಅವನ ಜನ್ಮೋದ್ದೇಶದ ಕಾರಣವನ್ನರಿತು, ಕರ್ಮಯೋಗ ದೀಕ್ಷೆಗೊಂಡು, ಸೊನ್ನಲಿಗೆಗೆ ಹಿಂದಿರುಗಿ ಬಂದು, ಮಲ್ಲಿಕಾರ್ಜುನ ಲಿಂಗವನ್ನು ಪ್ರತಿಷ್ಠಾಪಿಸಿ ಕೆರೆ-ಬಾವಿ-ದೇವಾಲಯ-ಅರವಟ್ಟಿಗೆ ಮೊದಲಾದವುಗಳನ್ನು ನಿರ್ಮಿಸಿ, ಬಹುಸಂಖ್ಯೆಯ ಶಿಷ್ಯರ ನಡುವೆ ‘ಜಗದಗುರು’ವಾಗಿ, ಹಲವು ಬಗೆಯ ಮಹಿಮೆಗಳನ್ನೂ ಸಾಮರ್ಥ್ಯಗಳನ್ನೂ ಪ್ರಕಟಿಸುತ್ತ, ಸೊನ್ನಲಿಗೆಯನ್ನು ‘ಅಭಿನವ ಶ್ರೀಶೈಲ ಕ್ಷೇತ್ರ’ವನ್ನಾಗಿ ರೂಪಿಸಿದ ಕಾಲಘಟ್ಟ. ಮೂರನೆಯದು, ಅಲ್ಲಮಪ್ರಭುವಿನ ಆಗಮನದಿಂದ, ಹಾಗೂ ಆತನ ಮಾತುಗಳಿಂದ ಸಿದ್ಧರಾಮನಲ್ಲಿ ಹೊಸ ಎಚ್ಚರವೊಂದು ಹುಟ್ಟಿ, ಅಲ್ಲಮನ ಜತೆಗೆ ಬಸವಣ್ಣನವರ ಕಲ್ಯಾಣಕ್ಕೆ ಹೋಗಿ ಅಲ್ಲಿನ ಶರಣಗೋಷ್ಠಿಯಲ್ಲಿ ಬೆರೆದು, ಶೈವ ಸಂಪ್ರದಾಯದ ಸ್ಥಾವರ ಲಿಂಗಾರ್ಚನೆಯಿಂದ ವೀರಶೈವ ಧರ್ಮದ ಇಷ್ಟಲಿಂಗ ಧಾರಣೆಯ ಮಾರ್ಗಕ್ಕೆ ಪರಿವರ್ತನೆಗೊಂಡು, ವೀರಶೈವ ಧರ್ಮದ ಶರಣರಲ್ಲಿ ಪ್ರಮುಖನೂ ಮುಖ್ಯ ವಚನಕಾರರಲ್ಲಿ ಒಬ್ಬನೂ ಆದ ಕಾಲಘಟ್ಟ.

ಸಿದ್ಧರಾಮನ ಬದುಕಿನ ಮೊದಲೆರಡು ಹಂತಗಳಲ್ಲಿ ಅವನ ವ್ಯಕ್ತಿತ್ವವನ್ನು ರೂಪಿಸಿ ನಿರ್ದೇಶಿಸಿದವರು ರೇವಣಸಿದ್ಧರು ಮತ್ತು ಶ್ರೀ ಶೈಲದ ಮಲ್ಲಯ್ಯ ಎನ್ನುವವರು. ಸಿದ್ಧರಾಮನು ಹುಟ್ಟುವ ಮೊದಲೆ ಒಂದು ದಿನ ರೇವಣಸಿದ್ಧರು ಸೊನ್ನಲಿಗೆಗೆ ಬಂದು, ಸಿದ್ಧರಾಮನ ತಾಯಿಯಾಗಲಿದ್ದ ಸುಗ್ಗವ್ವೆಯನ್ನು ಕಂಡು ಆಕೆಯ ಬಸಿರನ್ನು ಮುಟ್ಟಿ ನಮಸ್ಕರಿಸಿ, ಈ ಸೊನ್ನಲಿಗೆಯಲ್ಲಿ ಇಷ್ಟರಲ್ಲಿಯೇ ಅಪ್ರತಿಮ ಶಿವಯೋಗಯುತನಾದ ಮಗನೊಬ್ಬ ನಿನ್ನ ಹೊಟ್ಟೆಯಲ್ಲಿ ಹುಟ್ಟುತ್ತಾನೆ, ಅವನಿಗೆ ತಪ್ಪದೆ ಸಿದ್ಧರಾಮನೆಂದು ನಾಮಕರಣ ಮಾಡು ಎಂದು ಹೇಳುತ್ತಾರೆ. ಈ ವಿಷಯ ಹರಿಹರನ ರೇವಣಸಿದ್ಧೇಶ್ವರ ರಗಳೆಯಲ್ಲಿಯೂ, ರಾಘವಾಂಕನ ಸಿದ್ಧರಾಮ ಚಾರಿತ್ರದಲ್ಲಿಯೂ ಸೂಚಿತವಾಗಿದೆ. ಮಹಾವ್ಯಕ್ತಿಗಳ ಜನನದ ಸುದ್ದಿಯನ್ನು ಮುಂಗಡವಾಗಿ ಸೂಚಿಸುವ ಅಥವಾ ಘೋಷಿಸುವ ವಿಶೇಷ ವ್ಯಕ್ತಿಗಳ ಅಥವಾ ಪ್ರವಾದಿಗಳ ಆಗಮನ, ಜಗತ್ತಿನ ವಿವಿಧ ಧಾರ್ಮಿಕ ವ್ಯಕ್ತಿಗಳ ಜೀವನದ ಚರಿತ್ರೆಯಲ್ಲಿ ಅಪರಿಚಿತವಾದುದೇನೂ ಅಲ್ಲ. ಈ ಹಿನ್ನೆಲೆಯಿಂದ ಹೇಳುವುದಾದರೆ, ಹನ್ನೆರಡನೆಯ ಶತಮಾನದ ಕರ್ನಾಟಕದ ಕಲ್ಯಾಣಕೇಂದ್ರದಲ್ಲಿ ನಡೆದ ಬಸವಕ್ರಾಂತಿಯ ಶರಣಸಮೂಹದಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬನಾದ ಸಿದ್ಧರಾಮನ ಜನನದ ಸುದ್ದಿಯನ್ನು ಮೊದಲು ಘೋಷಿಸಿದವರು ರೇವಣಸಿದ್ಧರು. ಅವರು ಸಿದ್ಧರಾಮನ ತಾಯಿಯಾದ ಸುಗ್ಗವ್ವೆಯ ಬಸಿರನ್ನು ಮುಟ್ಟಿ ನಮಸ್ಕರಿಸಿದರೆಂದು ಹರಿಹರ ರಾಘವಾಂಕರಿಬ್ಬರೂ ಹೇಳಿದರೆ, ರೇವಣಸಿದ್ಧರ ಚರಿತ್ರೆಯನ್ನು ಒಳಗೊಳ್ಳುವ ‘ಸಿದ್ಧಾಂತ ಶಿಖಾಮಣಿ’ ಎಂಬ ಸಂಸ್ಕೃತ ಭಾಷೆಯ ಗ್ರಂಥಕ್ಕೆ ವ್ಯಾಖ್ಯಾನ ಬರೆದ ಮರಿತೋಂಟದಾರ‍್ಯ ಮತ್ತು ಸೋಸಲೆ ರೇವಣಾರಾಧ್ಯರು, ಸಿದ್ಧರಾಮನನ್ನು ‘ರೇವಣ ಸಿದ್ಧೇಶ್ವರನ ದೃಷ್ಟಿಗರ್ಭಸಂಭೂತ’ನೆಂದು ವರ್ಣಿಸಿರುವುದು ಅರ್ಥಪೂರ್ಣವಾಗಿದೆ. ಸಾರಾಂಶವೇನೆಂದರೆ ಸಿದ್ಧರಾಮನು ಮೂಲತಃ ರೇವಣಸಿದ್ಧರ ಸಂಪ್ರದಾಯಕ್ಕೆ ಸೇರಿದವನೆಂಬುದು.

ರೇವಣಸಿದ್ಧರು ಬಸವ-ಸಿದ್ಧರಾಮಾದಿಗಳ ಜನನಪೂರ್ವದಲ್ಲಿ ತಮ್ಮ ಮಹಿಮಾ ವಿಶೇಷಗಳಿಂದ ತುಂಬ ಹೆಸರು ಮಾಡಿದ ವ್ಯಕ್ತಿಯಾಗಿದ್ದರು. ಅವರು ಹುಟ್ಟಿದ್ದು ಶ್ರೀಶೈಲ ಪರ್ವತದ ಉತ್ತರಕ್ಕೆ ಇರುವ ಕೊಲ್ಲಿಪಾಕಿ ಎಂಬ ಊರಿನಲ್ಲಿ. ವೇದ ವೇದಾಂತ ಸಮ್ಮತವಾದ ಶಿವಾದ್ವೈತ ಶಾಸ್ತ್ರ ಪಾರಂಗತರಾಗಿ, ಯಂತ್ರ ಮಂತ್ರ ಕಲಾಸಿದ್ಧಿಗಳನ್ನು ಕೈವಶಮಾಡಿಕೊಂಡು ಯೋಗಿಯಾದ ರೇವಣಸಿದ್ಧರು, ಅನೇಕ ಪವಾಡಗಳನ್ನು ಮಾಡಿದರೆಂದು ಹೇಳಲಾಗಿದೆ. ಅವರಿಗೆ ರೇಣುಕ ಎಂಬುದು ಇನ್ನೊಂದು ಹೆಸರು. ವೀರಶೈವ ಸಿದ್ಧಾಂತಗ್ರಂಥಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವ ‘ಸಿದ್ಧಾಂತ ಶಿಖಾಮಣಿ’ ಎಂಬ ಸಂಸ್ಕೃತ ಭಾಷೆಯ (ಸು.ಕ್ರಿ.ಶ ೧೩ ಅಥವಾ ೧೪ನೆಯ ಶತಮಾನದ) ಕೃತಿಯಲ್ಲಿ ಇವರನ್ನು ಪಂಚಾಚಾರ್ಯರಲ್ಲಿ ಮೊದಲಿಗರೆಂದು ಹೇಳಲಾಗಿದೆ. ಪಂಚಾಚಾರ್ಯರಲ್ಲಿ ಇನ್ನುಳಿದ ನಾಲ್ವರು, ಪಂಡಿತಾರಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯ ಮತ್ತು ವಿಶ್ವಾರಾಧ್ಯರು. ಇವರಲ್ಲಿ ಮೊದಲಿಗರಾದ ರೇವಣಸಿದ್ಧರು ಕರ್ನಾಟಕ- ಮಹಾರಾಷ್ಟ್ರ- ಆಂಧ್ರ ಹಾಗೂ ತಮಿಳು ದೇಶಗಳಲ್ಲಿ ಮಾತ್ರವಲ್ಲದೆ, ಉತ್ತರದ ವಾರಣಾಸಿ ಮೊದಲ್ಗೊಂಡು ಭಾರತದ ಇನ್ನಿತರ ರಾಜ್ಯಗಳಲ್ಲಿಯೂ ಸಂಚಾರಮಾಡಿದಂತೆ ತಿಳಿದುಬರುತ್ತದೆ. ಅವರು ತಮ್ಮ ಸಂಚಾರ ಕಾಲದಲ್ಲಿ ವಿವಿಧ ರಾಜರುಗಳಿಂದ ಭಕ್ತಿ-ಗೌರವ ಪೂಜಾದಿಗಳಿಗೆ ಪಾತ್ರರಾದರೆಂದು ಉಲ್ಲೇಖಿತವಾದವರಲ್ಲಿ, ರಾಜೇಂದ್ರಚೋಳ ಅಥವಾ ಕುಲೋತ್ತುಂಗ ಚೋಳ (ಕ್ರಿ.ಶ. ೧೦೭೦-೧೧೮೧), ಬನವಾಸಿ (ಜಯಂತಿ)ಯ ವಿಕ್ರಮಾದಿತ್ಯ (ಕ್ರಿ.ಶ.೧೧೪೦). ಮಂಗಳವೇಡೆಯ ಬಿಜ್ಜಳ (ಕ್ರಿ.ಶ. ೧೧೪೦)- ಇವರ ಪ್ರಸ್ತಾಪಗಳು ಹರಿಹರನ ‘ರೇವಣಸಿದ್ಧೇಶ್ವರನ ರಗಳೆ’ಯಲ್ಲ್ಲಿಯೂ, ಹಾವಿನ ಹಾಳ ಕಲ್ಲಯ್ಯ, ಮೆರೆಮಿಂಡಯ್ಯ, ಬಾಲ ಬೊಮ್ಮಯ್ಯ ಇವರ ವಚನಗಳಲ್ಲಿ, ಬಸವಾದಿ ಸಮಕಾಲೀನ ವಚನಕಾರರ ಜತೆಗೆ ರೇವಣಸಿದ್ಧರನ್ನು ಗೌರವದಿಂದ ಸ್ಮರಿಸಿರುವುದರಿಂದಲೂ, ರೇವಣಸಿದ್ಧರು ಕ್ರಿ.ಶ. ೧೦೮೦ ರಿಂದ ೧೧೬೦ರವರೆಗಿನ ಅವಧಿಯಲ್ಲಿ ‘ಬಸವ ಅಲ್ಲಮರಿಗಿಂತ ಸ್ವಲ್ಪ ಹಿಂದೆ ಮತ್ತು ಬಸವ ಅಲ್ಲಮರ ಹಿರಿಯ ಸಮಕಾಲೀನರಾಗಿ’[2] ಇದ್ದಿರಬಹುದು. ಹನ್ನೊಂದನೆಯ ಶತಮಾನದ ಕೊನೆಯ ಭಾಗದಿಂದ, ಹನ್ನೆರಡನೆಯ ಶತಮಾನದ ಉತ್ತರಾರ್ಧದವರೆಗೆ, ಮಹಾಪ್ರಭಾವಶಾಲಿಯಾಗಿ ಕಾಣಿಸಿಕೊಂಡ ಈ ವ್ಯಕ್ತಿ, ಸೊನ್ನಲಿಗೆಗೆ ಬಂದು ಸಿದ್ಧರಾಮನಂಥ ಶಿವಯೋಗಿಯೊಬ್ಬನ ಜನನವನ್ನು ಕುರಿತು ಭವಿಷ್ಯ ನುಡಿದುದು ಚಾರಿತ್ರಿಕವಾಗಿಯೂ ಗಮನಾರ್ಹವಾದ ಸಂಗತಿಯಾಗಿದೆ.

ರೇವಣಸಿದ್ಧರು ಲಾಕುಳ ಶೈವ ಅಥವಾ ಲಕುಲೀಶ ಪಾಶುಪತವೆಂಬ ಧರ್ಮಕ್ಕೆ ಸೇರಿದವರಾಗಿದ್ದರು. ರೇವಣಸಿದ್ಧರು ಸರ್ವವೇದಾರ್ಥರೂಪವಾದ ವೇದಾಗಮ ಸಮ್ಮತವಾದ ಶೈವಸಿದ್ಧಾಂತವನ್ನು ಬೋಧಿಸಿದರೆಂದು ‘ಸಿದ್ಧಾಂತ ಶಿಖಾಮಣಿ’ ಹೇಳುತ್ತದೆ. ಈ ಶೈವಧರ್ಮದ ಒಂದು ಶಾಖೆ ಲಕುಲೀಶ ಪಾಶುಪತ; ಮತ್ತೊಂದು ಶಾಖೆ ಕಾಳಾಮುಖ. ವಾಸ್ತವವಾಗಿ, ಲಕುಲೀಶ ಪಾಶುಪತರಿಗೂ, ಕಾಳಾಮುಖರಿಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಕರ್ನಾಟಕದಲ್ಲಿ ವೀರಶೈವ ಧರ್ಮದ ಉದಯಕ್ಕೆ ಮೊದಲು ಜೈನಧರ್ಮವೊಂದನ್ನು ಹೊರತು ಪಡಿಸಿದರೆ, ಈ ಶೈವಸಿದ್ಧಾಂತವೇ ಅತ್ಯಂತ ಪ್ರಬಲವಾಗಿದ್ದದ್ದು. ರೇವಣಸಿದ್ಧರು ಬಾಳಿ-ಬದುಕಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮವು ಬನವಾಸಿ, ಬಳ್ಳಿಗಾವೆ, ಐಹೊಳೆ, ಕದಿರಿ, ಡಂಬಳ ಮೊದಲಾದ ಪ್ರದೇಶಗಳಲ್ಲಿ ಇದ್ದರೂ, ಅದು ಕೇವಲ ಅಲ್ಪಸಂಖ್ಯಾತರ ಧರ್ಮವಾಗುತ್ತ ಇಳಿಗಾಲವನ್ನು ತಲುಪಿತ್ತು. ಬಹು ಹಿಂದಿನಿಂದ ಕರ್ನಾಟಕದಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸಿಕೊಂಡ ಜೈನ ಧರ್ಮವು, ತನ್ನ ಏಕಸ್ವಾಮ್ಯವನ್ನು ಕಳೆದುಕೊಂಡು ಕ್ಷೀಣದೆಸೆಗೆ ಇಳಿದಿತ್ತು. ಇನ್ನು, ಕಾಪಾಲಿಕ ಮೊದಲಾದ ಹಲವು ತಾಂತ್ರಿಕ ಪಂಥಗಳಿದ್ದರೂ, ಅವು ವಾಮಾಚಾರ ಪ್ರಧಾನವಾದ ಆಚರಣೆಗಳಿಂದ, ಬಹು ಸಂಖ್ಯಾತರಿಂದ ‘ದೂರ’ವೇ ಉಳಿದು ಸಮಾಜದ ಒಂದು ಭಾಗವಾಗುವ ಅವಕಾಶಗಳನ್ನು ಪಡೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಲಾಕುಳ ಶೈವವೇ ಅಂದಿನ ಪರಿಸರದಲ್ಲಿ ಪ್ರಮುಖ ಧರ್ಮವಾಗಿತ್ತು. ಈ ಶೈವಧರ್ಮ ಬ್ರಾಹ್ಮಣ್ಯ ಪ್ರಧಾನ ಹಿಂದೂ ಧರ್ಮದ ಚೌಕಟ್ಟಿನ ಸಾಮಾಜಿಕ ಸಾಂಸ್ಕೃತಿಕ ಪರಂಪರೆಗಳನ್ನು ಒಪ್ಪಿಕೊಂಡಿತ್ತು. ಈ ಧರ್ಮದ ಗುರುಗಳಲ್ಲಿ ಅನೇಕರು ಶ್ರೇಷ್ಠ ವಿದ್ವಾಂಸರೂ, ಅತ್ಯಂತ ಸಾತ್ವಿಕರೂ, ತಪೋಧನರೂ, ರಾಜಪೂಜಿತರೂ ಆಗಿದ್ದರೆಂದು ತಿಳಿದುಬರುತ್ತದೆ. ಇವರಿಂದಾಗಿ ಅಂದಿನ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯ ದೇವಾಲಯಗಳು ನಿರ್ಮಾಣಗೊಂಡವು. ಈ ಲಾಕುಳ ಶೈವರಾದ ಕಾಳಾಮುಖ ಗುರುಗಳು ದೇವಾಲಯಗಳಲ್ಲಿಯೇ ಇದ್ದುಕೊಂಡು, ಅದನ್ನು ಮಠವಾಗಿ, ವಿದ್ಯಾಕೇಂದ್ರವಾಗಿ ರೂಪಿಸುತ್ತ, ಸಂಸ್ಕೃತ ಭಾಷೆಯೊಳಗಿನ ತಿಳಿವನ್ನು ಸಂರಕ್ಷಿಸಿಕೊಂಡು ಬರುತ್ತ ಅತ್ಯಂತ ಪ್ರಭಾವಶಾಲಿಗಳಾಗಿದ್ದರು.[3] ಶ್ರೀಶೈಲವು ಈ ಲಾಕುಳ ಕಾಳಾಮುಖರ ಒಂದು ಪ್ರಮುಖ ಕ್ಷೇತ್ರವಾಗಿತ್ತು. ವೇದಾಗಮಗಳ ಪ್ರಾಮಾಣ್ಯವನ್ನು ಒಪ್ಪಿಕೊಂಡ ಈ ಶೈವಧರ್ಮವು ಕ್ರಮೇಣ ಅಭಿನವೀಕರಣಕ್ಕೆ ಒಳಗಾಗಿ, ಮುಂದೆ ಬಸವಾದಿಗಳಿಂದ ಪರಿಷ್ಕೃತಗೊಂಡ ‘ವೀರಶೈವ’ದ ಪೂರ್ವ ರೂಪವೇ ಆಗಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕರ್ನಾಟಕದ ಪ್ರಮುಖ ಧರ್ಮವಾದ ವೀರಶೈವವು ಯಾವುದೇ ಶಾಸನಗಳಲ್ಲಿಯೂ ಉಲ್ಲೇಖಗೊಳ್ಳದೆ, ಅದರ ಬದಲು ಲಕುಲೀಶ ಪಾಶುಪತದ ಉಲ್ಲೇಖವೆ ವಿಪುಲ ಸಂಖ್ಯೆಯ ಶಾಸನಗಳಲ್ಲಿ ಉಕ್ತವಾಗಿರುವುದನ್ನು ನೋಡಿದರೆ, ಲಕುಲೀಶ ಪಾಶುಪತದ ಪರಿಷ್ಕೃತರೂಪವೇ ‘ವೀರಶೈವ’ವೆಂದು ಹೇಳಬಹುದಾಗಿದೆ.[4] ಬಸವಣ್ಣನವರಿಗಿಂತ ಕೆಲವು ಕಾಲ ಹಿಂದೆ ಇದ್ದ ಜೇಡರ ದಾಸಿಮಯ್ಯ, ಏಕಾಂತದ ರಾಮಯ್ಯ, ಆದಯ್ಯ ಇವರು ಮಾತ್ರವಲ್ಲದೆ, ರೇವಣಸಿದ್ಧರೂ ಲಕುಲೀಶ ಪಾಶುಪತಕ್ಕೆ ಸೇರಿದವರೇ. ಕೆಲವು ಶಾಸನಗಳಲ್ಲಿ ವರ್ಣಿತವಾಗಿರುವ ರೇವಣಸಿದ್ಧರ ಲಕ್ಷಣಗಳು ಅವರು ಲಾಕುಳ ಶೈವರೆಂಬುದನ್ನು ಖಚಿತಪಡಿಸುತ್ತವೆ. ಹರಿಹರನು ತನ್ನ ‘ರೇವಣ ಸಿದ್ಧೇಶ್ವರನ ರಗಳೆ’ಯಲ್ಲಿ ರೇವಣರನ್ನು- ‘ಕಂಥೆಯ ಕಮನೀಯರೂಪಂ, ವಜ್ರಕುಂಡಲದ ವಜ್ರಧರಂ ಲಾಕುಳದ ಲೋಕೈಕ ಬಂಧು, ಮೆಟ್ಟಿದ ಹಾವುಗೆಯ ಕಟ್ಟಧಿಕಂ, ಕೋವಣದ ಭಾವುಕಂ, ಭಾವಜರಿಪುವೆನಿಪ ಸಿದ್ಧ ಕುಲ ಚಕ್ರವರ್ತಿ’[5] ಎಂದು ವರ್ಣಿಸುತ್ತಾನೆ. ‘ಸಿದ್ಧಾಂತ ಶಿಖಾಮಣಿ’ಯು, ‘ಸರ್ವಾಂಗ ಭಸ್ಮಲೇಪಿತನೂ, ರುದ್ರಾಕ್ಷಿಯ ಮಾಲೆಯನ್ನು ಧರಿಸಿದವನೂ, ಜಟಾಮಕುಟ ಉಳ್ಳವನೂ, ತ್ರಿಪುಂಡ್ರ ಭಸ್ಮಧಾರಿಯೂ, ಕಂಥಾ, ಯೋಗದಂಡ, ಭಸ್ಮಕಮಂಡಲು ಹಿಡಿದವನೂ, ಯಮದಮಾದಿ ಯೋಗ ತಂತ್ರಗಳನ್ನು ಬಲ್ಲವನೂ, ಸಿದ್ಧ ಸಂತಾನ ನಾಯಕನೂ’[6] ಆಗಿದ್ದನೆಂದು ರೇವಣಸಿದ್ಧರನ್ನು ವರ್ಣಿಸುತ್ತದೆ. ಈ ಎರಡು ಚಿತ್ರಗಳೂ ಲಾಕುಳ ಶೈವಯೋಗಿಯೊಬ್ಬನ ಯಥಾವತ್ ಚಿತ್ರಗಳಾಗಿವೆ.

ರೇವಣಸಿದ್ಧರು ಕೇವಲ ‘ಸಿದ್ಧ’ರೂ ಪವಾಡಪುರುಷರೂ ಆಗಿದ್ದುದಷ್ಟೆ ಅಲ್ಲ. ಅವರು ಲೋಕಾನುಕಂಪೆಯುಳ್ಳ ಪರಮ ಮಾನವತಾವಾದಿಯೂ ಆಗಿದ್ದರೆನ್ನುವುದಕ್ಕೆ ಅವರು ಶ್ರೀಸಾಮಾನ್ಯರಿಗಾಗಿ ಕೈಕೊಂಡ ಕೆಲವು ಲೋಕೋಪಯೋಗಿ ಕಾರ್ಯಗಳೇ ಸಾಕ್ಷಿಯಾಗಿವೆ. ಹರಿಹರನ ಮಾತಿನಲ್ಲೆ ಹೇಳುವುದಾದರೆ:

‘ತಟಾಕಂಗಳಂ ಕಟ್ಟಿಸುತ್ತುಂ, ಶಿವನಿಳಯಗಳನೆತ್ತಿಸುತ್ತುಂ, ಆರವೆಗಳನಿಕ್ಕಿಸುತ್ತುಂ, ಶಿವಪುರಂಗಳ ಮಾಡಿಸುತ್ತುಂ, ಕಂಡ ಕಂಡ ಬಡವರ್ಗೆ ಸಂಪದಗಳನೀವುತುಂ..’ ಮಂಗಳವಾಡಕ್ಕೆ ಬಂದು ‘ಸಕಲ ಪ್ರಾಣಿಗಳ್ಗೆ ಹಿತಕರಮಪ್ಪ’ ತಟಾಕವಂ ನಿರ್ಮಿಸಲ್ವೇಳ್ದು’ (ತಾವೇ) ‘ಭೂಮಿಯಂ ನೋಡಿಸಿ ಧರ‍್ಮವಂ ಬಿತ್ತುವಂತೆ ಗುದ್ದಲಿಯ ಪಿಡಿದಗೆಯ ತೊಡಗಲ್’[7]

ಈ ವರ್ಣನೆಗಳು ಅವರು ಸಾಮಾಜಿಕ ಶ್ರೇಯಸ್ಸಿನ ಕಾರ‍್ಯಗಳಲ್ಲಿ ಎಂಥ ಅನುಕಂಪೆಯಿಂದ ತೊಡಗಿಕೊಂಡಿದ್ದರೆಂಬುದನ್ನು ಸೂಚಿಸುತ್ತವೆ. ಆದರೆ ದುರ್ದೈವದ ಸಂಗತಿಯೆಂದರೆ, ರೇವಣಸಿದ್ಧರನ್ನು ಕುರಿತ ಮಹಿಮಾ ವಿಶೇಷಗಳೂ, ಪವಾಡಗಳೂ ಜನಮನದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡು, ಅವರ ನಿಜವಾದ ಮಾನವೀಯವೂ, ಮಹತ್ವವೂ ಆದ ವ್ಯಕ್ತಿತ್ವ ಜನದ ನಿರ್ಲಕ್ಷಕ್ಕೆ ಗುರಿಯಾಗಿರುವುದು.

ಇಂಥ ರೇವಣರು ಸಿದ್ಧರಾಮನ ಜನನದ ಬಗ್ಗೆ ಮೊದಲು ಉದ್ ಘೋಷಿಸಿದ್ದಲ್ಲದೆ, ಅವನೊಬ್ಬ ಅಪ್ರತಿಮ ಶಿವಯೋಗಿಯಾಗಿ ಈ ಸೊನ್ನಲಿಗೆಯನ್ನು ಪುಣ್ಯಕ್ಷೇತ್ರವನ್ನಾಗಿ ಪರಿವರ್ತಿಸುತ್ತಾನೆಂದು ಭವಿಷ್ಯವಾಣಿಯನ್ನು ನುಡಿದಿದ್ದರು. ಅಷ್ಟೆ ಅಲ್ಲ, ಮುಂದೆ ಸಿದ್ಧರಾಮನು ಸೊನ್ನಲಿಗೆಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಾಗ, ರೇವಣಸಿದ್ಧರೇ ತಮ್ಮ ಶಿಷ್ಯನಾದ ರುದ್ರಮುನಿದೇವರನ್ನು ಕರೆದು, ಹಾವಿನಹಾಳ ಕಲ್ಲಯ್ಯನು ಸೊನ್ನಲಿಗೆಗೆ ಹೋಗಿ ಸಿದ್ಧರಾಮನ ಜತೆಗೆ ನಿಲ್ಲಬೇಕೆಂದು ಆದೇಶಿಸಲು ಸೂಚಿಸುತ್ತಾರೆ.[8] ಹೀಗೆ ರೇವಣಸಿದ್ಧರ ಕಾರುಣ್ಯ ಪ್ರಭಾವವು ಸಿದ್ಧರಾಮನ ಬದುಕನ್ನು ಅವರಿಸಿಕೊಂಡಿದೆ.

ರೇವಣಸಿದ್ಧರು ಯಾವ ಲಾಕುಳ ಶೈವ ಪಂಥಕ್ಕೆ ಸೇರಿದ್ದರೋ ಸಿದ್ಧರಾಮನೂ ಅದೇ ಲಾಕುಳ ಶೈವಧರ್ಮಕ್ಕೆ ಸೇರಿದವನಾಗಿದ್ದನು. ಧೂಳಿಮಾಕಾಳಾದಿ ಕಿರುಕುಳ ದೈವಗಳಿಗೆ ನಡೆದುಕೊಳ್ಳುತ್ತಿದ್ದ ಒಕ್ಕಲಿಗರ ಕುಲದಲ್ಲಿ ಹುಟ್ಟಿದ ಸಿದ್ಧರಾಮನು, ರೇವಣಸಿದ್ಧರ ಕೃಪಾನುಗ್ರಹದಿಂದ, ಎಳೆಯಂದಿನಲ್ಲಿಯೇ ಮನೆಯನ್ನು ತೊರೆದು ನೇರವಾಗಿ ಹೋದದ್ದು, ಅಂದು ಲಾಕುಳ ಶೈವರ ಪ್ರಮುಖ ಕೇಂದ್ರವಾದ ಶ್ರೀಶೈಲಕ್ಕೆ. ಅಲ್ಲಿ ಅವನಿಗೆ ಸಾಕ್ಷಾತ್ ಪಾರ್ವತಿಯೆ ‘ಸರ್ವಸಿದ್ಧಿಗೆ ತವರ್ಮನೆಯೆನಿಪ ಲಾಕುಳ’ ವನ್ನು ಕೊಟ್ಟಳೆಂದು ರಾಘವಾಂಕನು ತನ್ನ ಸಿದ್ಧರಾಮ ಚಾರಿತ್ರದಲ್ಲಿ (೨-೭೨) ವರ್ಣಿಸಿರುವುದನ್ನು ನೋಡಿದರೆ ಆತ ಶ್ರೀಶೈಲದಲ್ಲಿ ಲಾಕುಳ ಶೈವದೀಕ್ಷೆಯನ್ನು ಪಡೆದುಕೊಂಡನೆಂಬುದು ಸೂಚಿತವಾಗುತ್ತದೆ. ಅನಂತರ ಸಿದ್ಧರಾಮನು ಸೊನ್ನಲಿಗೆಯಲ್ಲಿ ಕೆರೆ-ಬಾವಿ ದೇವಾಲಯ- ಅರವಟ್ಟಿಗೆ ಮೊದಲಾದವುಗಳ ಮೂಲಕ ಕೈಕೊಂಡ ‘ಭೂತಾನುಕಂಪೆ’ಯ ಕಾರ್ಯಗಳು, ಹರಿಹರನು ತನ್ನ ರೇವಣಸಿದ್ಧೇಶ್ವರನ ರಗಳೆಯಲ್ಲಿ, ಪ್ರಸ್ತಾಪಿಸಿರುವ ರೇವಣರ ಲೋಕೋಪಯೋಗಿ ಕಾರ್ಯಗಳ ಮುಂದುವರಿಕೆಗಳೇ ಆಗಿವೆ. ಈ ವಿವರಗಳ ಹಿನ್ನೆಲೆಯಿಂದ ಹೇಳಬಹುದಾದ ಮಾತೆಂದರೆ ಸಿದ್ಧರಾಮನು ರೇವಣಸಿದ್ಧರ ಸಂಪ್ರದಾಯಕ್ಕೆ ಸೇರಿದವನು.

ಸಿದ್ಧರಾಮನ ಬದುಕಿನ ಮೊದಲ ಹಂತದಲ್ಲಿ ಅವನ ಜೀವನಕ್ಕೆ ಒಂದು ತಿರುವನ್ನು ತಂದವರು ಮಲ್ಲಯ್ಯನವರು. ಮನೆಯೊಳಗೆ ಜಡನಂತೆ, ಮೂಕನಂತೆ, ಮರುಳನಂತೆ ನಡೆದುಕೊಳ್ಳುತ್ತಿದ್ದ ಸಿದ್ಧರಾಮನನ್ನು ಅವನ ತಂದೆ ಕರುಗಾಯಲು ಕಳುಹಿಸುತ್ತಿದ್ದ ಸಂದರ್ಭದಲ್ಲಿ ಕಾಣಿಸಿಕೊಂಡವರು ಮಲ್ಲಯ್ಯನವರು. ಸಿದ್ಧರಾಮನು ಕರುಕಾಯಲು ದೂರದ ಕಾಡುಗಳಿಗೆ ಹೋದಾಗ, ಆತ ತನಗೆ ಅನಾಯಾಸವಾಗಿ ದೊರೆತ ಏಕಾಂತದಲ್ಲಿ, ಹೂವು ಪತ್ರೆಗಳನ್ನು ಕೊಯ್ದು ಮರದ ಕೆಳಗೆ ಶಿವಪೂಜೆಯಲ್ಲಿ ಮಗ್ನವಾಗುತ್ತ, ಮೆಲ್ಲಮೆಲ್ಲನೆ ತನ್ನ ಜೀವನೋದ್ದೇಶವನ್ನು ಅರ್ಥಮಾಡಿಕೊಳ್ಳುತ್ತಿದ್ದನೆಂದು ಕಾಣುತ್ತದೆ. ಎಂದಿನಂತೆ ಕರುಗಾಯುವ ನೆಪದಲ್ಲಿ ‘ಲಿಂಗಾರ್ಚನಾಸುಖ’ದಲ್ಲಿದ್ದ ಸಿದ್ಧರಾಮನ ‘ಬಾಲ್ಯದ ಮರೆಯ ಪರಬ್ರಹ್ಮ’ವು ‘ಹಾಲಮರೆಯ ತುಪ್ಪದಂತೆ, ಮಾತಿನ ಮರೆಯ ಸತ್ಯದಂತೆ’ ‘ಒಡಲ ಮರೆಯ ಆತ್ಮದಂತೆ’, ‘ಮರನ ಮರೆಯ ಅಗ್ನಿಯಂತೆ’, ‘ಪುಷ್ಪದ ಮರೆಯ ಫಲದಂತೆ’ ಸುಪ್ತವಾಗಿದ್ದು ತನ್ನ ಅರಳುವಿಕೆಗೆ ನಿಮಿತ್ತವೊಂದನ್ನು ಕಾಯುತ್ತಿತ್ತು ಎಂದು ರಾಘವಾಂಕನು (ಸಿದ್ಧರಾ ಚಾ. ೨.೨೦)  ಮನೋಜ್ಞವಾಗಿ ಸೂಚಿಸುತ್ತಾನೆ. ಲೋಕದ ಬಗ್ಗೆ ನಿರ್ಲಕ್ಷ್ಯ, ಜನಸಂಗದೂರವಾದ ಏಕಾಂತತೆಯ ಅಪೇಕ್ಷೆ ಮತ್ತು ಆ ಏಕಾಂತದಲ್ಲಿ ಸಾಧಿಸಿಕೊಳ್ಳುವ ಆತ್ಮಾನುಸಂಧಾನ – ಇವು ಅಧ್ಯಾತ್ಮ ಸಾಧಕರ ಲಕ್ಷಣಗಳು. ಈ ಲಕ್ಷಣ ಸಮನ್ವಿತನಾದ ಸಿದ್ಧರಾಮನ ಬಳಿಗೆ ಒಂದು ದಿನ ಬರುತ್ತಾರೆ ಜಂಗಮ ಮೂರ್ತಿಯಾದ ಮಲ್ಲಯ್ಯನವರು. ಅವರನ್ನು ಕಂಡೊಡನೆಯೆ ‘ಕಣ್ಣರಿಯದಿರ್ದೊಡಂ ಕರುಳರಿ’ಯುವಂತೆ, ಅವನ ಅಂತರಂಗ ‘ಕುಣಿದು, ಕುಕಿಲಿರಿದಾಡಿ, ಹಾಡಿ’ ಅವರ ಪಾದದಡಿ ಹೊರಳಾಡಿ ‘ಘನಮೇಘವಂ ಕಂಡ ನವಿಲಂತೆ’ ಪುಳಕಗೊಂಡಿ (ಸಿದ್ಧರಾ ಚಾ. ೨-೨೫) ತಂತೆ. ಅಂದರೆ ಸಿದ್ಧರಾಮನ ಮನಸ್ಸು ತನ್ನ ಗುರುವನ್ನು ಗುರುತಿಸಿತು. ಸಾಮಾನ್ಯವಾಗಿ ಧಾರ್ಮಿಕ ಮಹಾವ್ಯಕ್ತಿಗಳ ಜೀವನದಲ್ಲಿ ಅವರಿಗೆ ಒದಗುವ ಗುರುಕೃಪೆ ಸ್ಥೂಲವಾಗಿ ಎರಡು ತೆರನಾಗಿರುತ್ತದೆಂದು ಹೇಳಬಹುದು. ಒಂದು, ಸಾಧಕನೇ ಗುರುವಿಗಾಗಿ ಹಂಬಲಿಸಿ ಅವನನ್ನು ಹುಡುಕಿಕೊಂಡು ಹೋಗಿ ಕಾಣುವುದು; ಎರಡು, ಗುರುವೇ ತನ್ನ ಶಿಷ್ಯನನ್ನು ಆರಿಸಿಕೊಂಡು ಬಂದು ಕೃಪೆ ಮಾಡುವುದು. ಸಿದ್ಧರಾಮನ ವಿಚಾರದಲ್ಲಿ ಗುರುವಾದ ಮಲ್ಲಯ್ಯನವರೇ ಆತನನ್ನು ಹುಡುಕಿಕೊಂಡು ಬಂದರೆನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಸಿದ್ಧರಾಮ ಚಾರಿತ್ರದಲ್ಲಿ ಈ ಮಲ್ಲಯ್ಯ ಸಿದ್ಧರಾಮನನ್ನು ‘ಹಂಜಕ್ಕಿ’ಯನ್ನು ಬೇಡಿ ಮನೆಗೆ ಕಳುಹಿಸಿ ಅನಂತರ ತಾವು ಆತನನ್ನು ಪರೀಕ್ಷಿಸಲು ಅಂತರ್ಧಾನವಾದಂತೆಯೂ, ಆಮೇಲೆ ಮನೆಯಿಂದ ಸೊಗಸಾದ ಬುತ್ತಿಯನ್ನು ಕಟ್ಟಿಸಿಕೊಂಡು ಬಂದ ಸಿದ್ಧರಾಮ ಮಲ್ಲಯ್ಯನವರನ್ನು ಕಾಣದೆ ಅವರಿಗಾಗಿ ಹಲುಬಿ ಹಂಬಲಿಸಿ, ಊರೂರುಗಳನ್ನೂ, ಪರ್ವತಾರಣ್ಯಗಳನ್ನೂ, ಗಿರಿಗಹ್ವರಗಳನ್ನೂ ಅರಸಿ, ತೊಳಲಿ ಬಳಲಿ ಕೊನೆಗೆ ಶ್ರೀಶೈಲದ ರುದ್ರಗಮ್ಮರಿಯಲ್ಲಿ ಧುಮುಕಿ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ನಿಶ್ಚಯಿಸಿದಾಗ, ಆ ಮಲ್ಲಯ್ಯನ ರೂಪದಲ್ಲಿ ಬಂದಿದ್ದ ಸಾಕ್ಷಾತ್ ಶಿವನೇ ಸಿದ್ಧರಾಮನಿಗೆ ದರ್ಶನವಿತ್ತು ಅನುಗ್ರಹಿಸಿದನೆಂದೂ ವರ್ಣಿತವಾಗಿದೆ. ಈ ಭಾಗದಲ್ಲಿ ನಿಜವಾದ ಆಧ್ಯಾತ್ಮ ಸಾಧಕನೊಬ್ಬನ ಅಂತರಂಗದ ದಿವ್ಯಾಭೀಪ್ಸೆಯ ಹಂಬಲಗಳೂ, ತನ್ನ ಆರಾಧ್ಯ ದೈವವನ್ನು ತಾನು ಕಂಡಲ್ಲದೆ  ಬದುಕಲಾರೆನೆಂದು ದೇಹತ್ಯಾಗಕ್ಕೆ ಸಿದ್ಧವಾದ ನಿಜವಾದ ಭಕ್ತನ ಕಾಳಜಿಗಳೂ ಬಹು ಸೊಗಸಾಗಿ ಸೂಚಿತವಾಗಿವೆ. ಮತ್ತು ಈ ಸಂದರ್ಭದ  ಸಿದ್ಧರಾಮನ ನಡವಳಿಕೆಗಳು ಜಗತ್ತಿನ ನಿಜವಾದ ಸಾಧಕರ ನಡವಳಿಕೆಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ. ರಾಘವಾಂಕನ  ಪ್ರಕಾರ ಸಿದ್ಧರಾಮನಿಗೆ ಸೊನ್ನಲಿಗೆಯ ಬಳಿ ಕಾಣಿಸಿಕೊಂಡ, ಹಾಗೂ ಆನಂತರ ಶ್ರೀಶೈಲದ ರುದ್ರಗಮ್ಮರಿಗೆ ಹಾರಿ ದೇಹತ್ಯಾಗಮಾಡಲು ನಿರ್ಧರಿಸಿದ ಸಂದರ್ಭದಲ್ಲಿ ಪ್ರತ್ಯಕ್ಷವಾದ ‘ಮಲ್ಲಯ್ಯ’ ಸಾಕ್ಷಾತ್ ಶಿವನೇ; ಹಾಗೆಯೆ ಸಿದ್ಧರಾಮನಿಗೆ ಪಂಚಾಕ್ಷರೀ ಮಂತ್ರವನ್ನುಪದೇಶಿಸಿ. ಸಿದ್ಧರಾಮನೆಂಬ ಅವನ ಮೊದಲ ಹೆಸರನ್ನೆ ದೀಕ್ಷಾನಾಮವನ್ನಾಗಿ ಕೊಟ್ಟು, ಸರ್ವಸಿದ್ಧಿಗೆ ತವರುಮನೆಯಾದ ಲಾಕುಳವನ್ನು ಅನುಗ್ರಹಿಸಿ, ಅವನು ಮುಂದೆ ಸೊನ್ನಲಿಗೆಯಲ್ಲಿ ಮಾಡಬೇಕಾದ ಕರ್ತವ್ಯಗಳೇನೆಂಬುದನ್ನು ನಿರ್ದೇಶಿಸಿದವನೂ ‘ಜಟಾಜೂಟದಲ್ಲಿ ಚಂದ್ರನನ್ನು ಧರಿಸಿದವನೂ, ನಿಟಿಲ ನಯನನೂ, ಉರಗಾಭರಣನೂ, ಪಂಚಮುಖನೂ, ನೀಲಕಂಠನೂ ಗಜಚರ್ಮಾಂಬರ ಧಾರಿಯೂ, ಮೈಯಲ್ಲಿ ಪಾರ್ವತಿಯನ್ನು ಸಮಾವೇಶಗೊಳಿಸಿಕೊಂಡವನೂ’ ಆದ ಸಾಕ್ಷಾತ್ ಶಿವನೇ-ಎಂಬುದು ರಾಘವಾಂಕನ ನಿರೂಪಣೆ. ಇದು ಪುರಾಣವು ಹಿಡಿಯುವ ದಾರಿ. ಆದರೆ ನಮಗೆ ತೋರುವ ಮಟ್ಟಿಗೆ ಸಿದ್ಧರಾಮನಿಗೆ ಮೊದಲು ಕಾಣಿಸಿಕೊಂಡು, ಅನಂತರ ಮರೆಯಾಗಿ ಆತನ ಮನಸ್ಸಿನ ನಿಶ್ಚಲತೆಯನ್ನೂ, ಆಧ್ಯಾತ್ಮಿಕ ಕಾಳಜಿಗಳನ್ನೂ ಪರೀಕ್ಷಿಸಿ, ಅನಂತರ ಆತನನ್ನು ಶ್ರೀಶೈಲದಲ್ಲಿ ತಮ್ಮ ಸನ್ನಿಧಿಯಲ್ಲಿ ಕೆಲವು ಕಾಲ ಇರಿಸಿಕೊಂಡವರು, ಶ್ರೀಶೈಲದ ಮಠದೊಳಗೆ ಇದ್ದ ಮಲ್ಲಯ್ಯ ಎಂಬ ಹೆಸರಿನ ಒಬ್ಬ ಗುರುವೆ ಇರಬಹುದು. ಸೊನ್ನಲಿಗೆಯ ಬಳಿ ಅವರು ಮೊದಲು ಕಾಣಿಸಿಕೊಂಡಾಗ, ಸಿದ್ಧರಾಮನು ಅವರ ಪರಿಚಯವನ್ನು ಕೇಳಿದಾಗ, ‘ಪತಿತಪಾವನ ಪರ್ವತಾಶ್ರಮದಲ್ಲಿಪ್ಪೆನು, ಮಲ್ಲಿನಾಥನೆಂದೆನ್ನ ನಾಮಂ’ ಎನ್ನುತ್ತಾರೆ ಅವರು. ಅಂದರೆ ಪತಿತರನ್ನು ಪಾವನ ಮಾಡುವ ಪರ್ವತವಾದ ಶ್ರೀಶೈಲದ ಆಶ್ರಮದಲ್ಲಿದ್ದೇನೆ; ನನ್ನ ಹೆಸರು ಮಲ್ಲಯ್ಯ -ಎಂದು ವಿವರಿಸುತ್ತಾರೆ. ಸಿದ್ಧರಾಮನು ಆಶ್ರಯ ಪಡೆದದ್ದು ಮಲ್ಲಯ್ಯನವರ ಈ ಆಶ್ರಮ ಅಥವಾ ಮಠದಲ್ಲಿ. ಆ ಕಾಲಕ್ಕೆ ಶ್ರೀಶೈಲ ಲಕುಲೀಶ ಪಾಶುಪತ ಶೈವರ ಒಂದು ಪ್ರಮುಖ ಕೇಂದ್ರವೂ ಆದದ್ದರಿಂದ, ಸಿದ್ಧರಾಮನು ಲಾಕುಳಶೈವ ದೀಕ್ಷೆಯನ್ನು ಅವರಿಂದ ಪಡೆದಿರಬಹುದು. ಬಸವಣ್ಣನವರಿಗೆ ಕೂಡಲಸಂಗಮ ಹೇಗೋ, ಸಿದ್ಧರಾಮನಿಗೆ ಶ್ರೀಶೈಲ ಹಾಗೆ. ಸ್ವಾರಸ್ಯದ ಸಂಗತಿ ಎಂದರೆ ಕಪ್ಪಡಿ ಸಂಗಮದಲ್ಲಿ ಬಸವಣ್ಣನವರಿಗೆ  ಆಶ್ರಯವಿತ್ತ ಅಲ್ಲಿನ ಸ್ಥಾನಪತಿಗಳಾದ ಈಶಾನಗುರುಗಳೂ ‘ಬಹುಶಃ ಲಕುಲೀಶ- ಪಾಶುಪತ ಸಂಪ್ರದಾಯದ ಸನ್ಯಾಸಿಗಳು’.[9] ಹನ್ನೆರಡನೆಯ ಶತಮಾನದ ಬಹು ಮುಖ್ಯ ಧಾರ್ಮಿಕ ನಾಯಕರಾದ ಬಸವ, ಸಿದ್ಧರಾಮ ಇವರಿಬ್ಬರ ಸಾಧಕ ಜೀವನದ ನೆಲೆ ಲಕುಲೀಶ- ಪಾಶುಪತ ಗುರುಗಳ ಸನ್ನಿಧಿಯೇ ಆಗಿರುವುದು ವಿಶೇಷದ ಸಂಗತಿಯಾಗಿದೆ. ಬಸವಣ್ಣನವರು ಕಪ್ಪಡಿ ಸಂಗಮದಲ್ಲಿಯೆ (ಯಾರಿಂದಲೊ ದೀಕ್ಷೆ ಪಡೆದು) ವೀರಶೈವರಾದರೆ, ಸಿದ್ಧರಾಮ ಶ್ರೀಶೈಲದಲ್ಲಿ ಬಹುಶಃ ಮಲ್ಲಯ್ಯನವರಿಂದ ಲಕುಲೀಶ ಪಾಶುಪತದ ದೀಕ್ಷೆಯನ್ನು ಪಡೆದು ‘ಸಿದ್ಧಶೈವ’ ನಾಗಿರಬಹುದು. ಆತ ಮಲ್ಲಯ್ಯನವರಿಂದ ನಿರ್ದೇಶಿತನಾಗಿ ಸೊನ್ನಲಿಗೆಗೆ ಬರುವವರೆಗೂ ಶ್ರೀಶೈಲದಲ್ಲಿಯೆ ಹಲವು ವರ್ಷಗಳನ್ನು ಕಳೆದಿರಬಹುದು. ಆ ಸಂದರ್ಭದಲ್ಲಿ ಅವನು ಶ್ರೀಶೈಲ ಪರ್ವತ ಪರಿಸರದಲ್ಲಿದ್ದಿರಬಹುದಾದ ವಿವಿಧ ಪಂಥಗಳ ಸಾಧಕರನ್ನೂ, ಸಿದ್ಧರನ್ನೂ ತೀರಾ ಹತ್ತಿರದಿಂದ ಕಂಡು, ತನ್ನ ಮುಂದಿನ ದಾರಿಯನ್ನೂ, ಗುರಿಯನ್ನೂ ಕುರಿತು ತಕ್ಕಷ್ಟು ವಿವೇಚನೆಗೆ ತೊಡಗಿದ್ದಿರಬಹುದು.

-೨-

ಸಿದ್ಧರಾಮನ ಬದುಕಿನ ಎರಡನೆಯ ಹಂತ ಮುಖ್ಯವಾಗಿ ಅವನು ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿ, ಯೋಗ ರಮಣೀಯ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿ ಅದಕ್ಕೊಂದು ಪ್ರತಿಷ್ಠೆಯನ್ನೂ, ಜನಪ್ರಿಯತೆಯನ್ನೂ ತಂದುಕೊಟ್ಟ ಅವನ ಕರ್ಮಕೌಶಲವನ್ನು ಕುರಿತದ್ದಾಗಿದೆ. ಈ ಭಾಗವಂತೂ, ಅವನ ಬಿಡುವಿಲ್ಲದ ದುಡಿಮೆಯ ನಿರ್ಮಿತಿಗಳಿಂದ, ವಿವಿಧ ಧಾರ್ಮಿಕ ವಿಧಿಗಳಿಂದ, ಅವನು ನಡೆಯಿಸಿದನೆನ್ನಲಾದ ಅನೇಕ ಪವಾಡಗಳಿಂದ ಮತ್ತು ಅವನು ಲೋಕಾನುಕಂಪೆಯಿಂದ ಕೈಕೊಂಡ ಅನೇಕ ಸಾರ್ವಜನಿಕ ಕಾರ್ಯಗಳಿಂದ ಕಿಕ್ಕಿರಿದಿದೆ. ಈ ಎಲ್ಲವುಗಳ ಮೂಲಕ ಅಭಿವ್ಯಕ್ತವಾಗುವ ಸಿದ್ಧರಾಮನ ವ್ಯಕ್ತಿತ್ವದ ಘನತೆಯನ್ನು ನಾವು ಗುರುತಿಸಬಹುದಾಗಿದೆ. ತನಗೆ ದೊರೆತ ಸಾಮಗ್ರಿಗಳಿಂದ ಸಿದ್ಧರಾಮನ ಜೀವನವನ್ನು ಮೊದಲು ಹಾಗೂ ಸಾಕಷ್ಟು ಸಮಗ್ರವಾಗಿ ಚಿತ್ರಿಸಿದ ರಾಘವಾಂಕನು, ತನ್ನ ‘ಸಿದ್ಧರಾಮ ಚಾರಿತ್ರ’ದಲ್ಲಿ, ಸಿದ್ಧರಾಮನ ಜೀವನದ ಆದರ್ಶವನ್ನು ಹಾಗೂ ಅವನ ನಿಲುವನ್ನು ‘ಸಾಕಾರ ನಿಷ್ಠೆ, ಭೂತಂಗಳೊಳಗನುಕಂಪೆ’ ಎಂಬ ಸೂತ್ರವೊಂದರ ಮೂಲಕ ಸೂಚಿಸಿದ್ದಾನೆ. ಇಲ್ಲಿ ‘ಸಾಕಾರ ನಿಷ್ಠೆ’ ಅಂದರೆ, ಸಿದ್ಧರಾಮನು ತಾನು ಯಾವ ದೈವದ ಶರಣನಾಗಿದ್ದನೋ ಮತ್ತು ಯಾವ ದೈವದ ನಿರ್ದೇಶನದಂತೆ ನಡೆದುಕೊಂಡನೋ, ಆ ಪರಾತ್ಪರನಾದ ಶಿವನೆಂಬ ದೈವವು ಭಕ್ತಜನ ಪ್ರಿಯವಾದ ಯಾವ ಆಕಾರವನ್ನು ತಾಳಿ ಪೂಜೆಗೊಳ್ಳುವುದೋ, ಆ ‘ಸಾಕಾರ’ದಲ್ಲಿ ಇರಿಸಿದ ನಿಷ್ಠೆ. ಆದಕಾರಣವೇ ಅವನು ಸೊನ್ನಲಿಗೆಯಲ್ಲಿ ಮೊದಲು ಮಾಡಿದ ಕೆಲಸವೆಂದರೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗದ ಪ್ರತಿಷ್ಠೆ, ಹಾಗೂ ದೇವಾಲಯ ನಿರ್ಮಾಣ. ಈ ದೇವಾಲಯ ನಿರ್ಮಾಣಕ್ಕೆ ಅಗತ್ಯವಾದ ಒಂದು ಕ್ರೋಶದಷ್ಟು ಭೂಮಿಯನ್ನು ಶಿವ ಪ್ರೇರಣೆಯಿಂದ ಆ ಊರಿನ ನನ್ನಪ್ಪನರಸಿ ಚಾಮಲದೇವಿಯು ನೀಡಿದಳೆಂದು ರಾಘವಾಂಕನು ಸೂಚಿಸುತ್ತಾನೆ. ಸಿದ್ಧರಾಮ ಚಾರಿತ್ರದಲ್ಲಿ ಚಾಮಲದೇವಿಯ ಪ್ರಸ್ತಾಪ ಎರಡು ಕಡೆ ಕಾಣಿಸಿಕೊಳ್ಳುತ್ತದೆ. ರೇವಣಸಿದ್ಧರು, ಸಿದ್ಧರಾಮನ ಜನನ ಪೂರ್ವದಲ್ಲಿ ಸೊನ್ನಲಿಗೆಗೆ ಬಂದು, ಸಿದ್ಧರಾಮನ ತಾಯಿಯಾಗಲಿರುವ ಸುಗ್ಗವ್ವೆಗೆ ಗೌರವ ಸಲ್ಲಿಸಿ, ಮುಂದೆ ಆಕೆಯ ಬಸಿರಿನಲ್ಲಿ ಅಪ್ರತಿಮ ಶಿವಯೋಗಯುತನಾದ ಮಗನೊಬ್ಬನು ಜನಿಸುವನೆಂದು ಭವಿಷ್ಯ ನುಡಿದಾಗ ಅಲ್ಲಿ ಚಾಮಲದೇವಿಯೂ ಸಾಕ್ಷಿಯಂತೆ ಇದ್ದಳು (ಸಿದ್ಧರಾ ಚಾ ೧-೪೩) ಎಂದೂ, ಸಿದ್ಧರಾಮನು ಮುಂದೆ ಮಲ್ಲಿಕಾರ್ಜುನ ದೇವಾಲಯವನ್ನು ನಿರ್ಮಿಸಲು ಯೋಚಿಸುತ್ತಿರುವಾಗ, ಕನಸಿನಲ್ಲಿ ದೊರೆತ ಶಿವ ಪ್ರೇರಣೆಯಂತೆ ಚಾಮಲದೇವಿ ಒಂದು ಕ್ರೋಶದಷ್ಟು ಭೂಮಿಯನ್ನು ಸಿದ್ಧರಾಮನಿಗೆ ಧಾರಾಪೂರ್ವಕವಾಗಿ ಕೊಟ್ಟಳೆಂದೂ (ಸಿದ್ಧರಾ ಚಾ-೩-೩೮ ರಿಂದ ೪೦) ಪ್ರಸ್ತಾಪಿಸಲಾಗಿದೆ. ಹರಿಹರನ ‘ರೇವಣಸಿದ್ಧೇಶ್ವರನ ರಗಳೆ’ಯಲ್ಲಿಯೂ ಚಾಮಲದೇವಿಯ (ಸ್ಥಲ ೫ ಪಂ ೭೩- ೮೦) ಪ್ರಸ್ತಾಪವಿದೆ. ‘ಭೈರವೇಶ್ವರ ಕಾವ್ಯ’ (ಕ್ರಿಶ.ಸು ೧೫೨೫)ದಲ್ಲಿ (೪-೧೫) ಮತ್ತು ‘ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ’ (ಕ್ರಿ.ಶ. ೧೬೭೨)ದಲ್ಲಿ (೩೪೪ ಪು. ೧೪೯) ಚಾಮಲದೇವಿ ಸಿದ್ಧರಾಮನಿಗೆ ದೇವಾಲಯ ನಿರ್ಮಾಣಕ್ಕಾಗಿ ಭೂಮಿಯನ್ನು ಕೊಡುವ ವಿಷಯವು ಪ್ರಸ್ತಾಪಿತವಾಗಿದೆ. ಈಕೆ ಸೊಲ್ಲಾಪುರದ ರಾಜನಾದ ಅನಂತಪಾಲನ ರಾಣಿ ಎಂದು ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರರತ್ನಾಕರದಲ್ಲಿ ಹೇಳಲಾಗಿದೆ. ಆದರೆ ನನ್ನಪ್ಪ ಮತ್ತು ಚಾಮಲದೇವಿಯವರ ವಿಷಯ ಕರ್ನಾಟಕದ ಯಾವ ಶಾಸನಗಳಲ್ಲಿಯೂ ಕಂಡುಬರುವುದಿಲ್ಲವೆಂದೂ, ಬಹುಶಃ ಈ ನನ್ನಪ್ಪ ಸೊನ್ನಲಿಗೆಯ ಪುರಪ್ರಭು (ಗಾವುಂಡ) ವಾಗಿರಬಹುದೆಂದೂ ಚಾಮಲ ದೇವಿ ಈತನ ‘ಅರಸಿ’- ಅಥವಾ ಪತ್ನಿಯಾಗಿರಬಹುದೆಂದೂ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.[10] ಅಂತೂ ದೈವಪ್ರೇರಣೆಯಿಂದ ದೊರೆತ ಈ ನೆಲದಲ್ಲಿ, ಸಿದ್ಧರಾಮನು ದೇವಾಲಯವನ್ನು ನಿರ್ಮಿಸಿ, ಮಲ್ಲಿಕಾರ್ಜುನ ಲಿಂಗವನ್ನೂ, ಅನಂತರ ಅದೇ ಪರಿಸರದಲ್ಲಿ ಹದಿನಾರು ಲಿಂಗಗಳನ್ನೂ ಪ್ರತಿಷ್ಠಾಪಿಸಿದನು. ಈ ಲಿಂಗವೇ, ಮಲ್ಲಿಕಾರ್ಜುನನ ಸಾಕಾರ. ಈ ಸಾಕಾರದಲ್ಲಿ ಜನದ ನಿಷ್ಠೆಯನ್ನು ನೆಲೆಗೊಳಿಸಲೆಂದೇ ಸಿದ್ಧರಾಮನು ದೇವಸ್ಥಾನಕ್ಕೆ ಸಂಬಂಧಿಸಿದ ನಿತ್ಯ ಪೂಜಾವಿಧಿಗಳನ್ನೂ, ಉತ್ಸವಗಳನ್ನೂ, ನಿತ್ಯನೇಮಗಳನ್ನೂ, ಹೋಮಗಳನ್ನೂ ವ್ಯವಸ್ಥೆಗೊಳಿಸುತ್ತಾನೆ. ‘ಸಿದ್ಧ’ನಾದ ಸಿದ್ಧರಾಮನಿಗೆ ಸಾಕಾರ ನಿಷ್ಠೆಯು ಅಷ್ಟೇನೂ ಅಗತ್ಯವಿಲ್ಲದಿದ್ದರೂ, ಲೋಕದ ಜನರಿಗಾಗಿ ತಾನೂ ಅವುಗಳಲ್ಲಿ ಪಾಲುಗೊಳ್ಳುವುದು ಅನಿವಾರ‍್ಯವಾದಂತೆ ತೋರುತ್ತದೆ. ‘ದೇವಾಲಯ ನಿರ್ಮಾಣ, ಲಿಂಗ ಪ್ರತಿಷ್ಠೆ, ಕ್ಷೇತ್ರ ಪರಿಕಲ್ಪನೆ, ಲಿಂಗಾಭಿಷೇಕ, ಯೋಗ ಮಜ್ಜನ, ತುಪ್ಪದಭಿಷೇಕ, ನೈವೇದ್ಯ ಸಮರ್ಪಣೆ, ದಾನವಿನಿಯೋಗ, ಉತ್ಸವ, ಹೋಮ ಇವು ಸಿದ್ಧನ ಸಾಕಾರ ನಿಷ್ಠೆಯ ಫಲಗಳು.’[11] ಒಂದು  ದೇವಸ್ಥಾನ ಎಂದರೆ, ಈ ಬಗೆಯ ವಿಧಿ (Ritual) ಗಳೂ, ಉತ್ಸವಗಳೂ ಇಲ್ಲದೆ ಹೋದರೆ ಬಹುಸಂಖ್ಯಾತ ಜನಸಾಮಾನ್ಯರಲ್ಲಿ ಭಕ್ತಿ-ಶ್ರದ್ಧೆ- ಉತ್ಸಾಹಗಳು ಹುಟ್ಟಲಾರವು. ಇದರ ಜತೆಗೆ ಬಂದು ಹೋಗುವ ಜನಕ್ಕೆ ಅನ್ನಸತ್ರಗಳೂ, ಅರವಟ್ಟಿಗೆಗಳೂ, ಸಾಮೂಹಿಕ ವಿವಾಹಗಳೂ, ಗೋದಾನ, ಭೂದಾನ, ಅನ್ನದಾನ, ಕನ್ಯಾದಾನಾದಿ ಧಾರ್ಮಿಕ ಕಾರ‍್ಯಗಳೂ ಇಂಥದೊಂದು ಸಂಸ್ಥೆಗೆ ಅನಿವಾರ‍್ಯವೆಂದು, ಸಿದ್ಧರಾಮನು ಆ ಎಲ್ಲವನ್ನೂ ಏರ್ಪಡಿಸಿದನು. ರಾಘವಾಂಕನು ಸಿದ್ಧರಾಮನ ಈ ‘ಭಕ್ತಜನ’ ಪ್ರಿಯವಾದ ಕಾರ‍್ಯಗಳನ್ನು ತನ್ನ ಕೃತಿಯಲ್ಲಿ ಅತ್ಯುತ್ಸಾಹದಿಂದ ವರ್ಣಿಸುತ್ತಾನೆ. ಸೊನ್ನಲಿಗೆ ಎರಡನೆಯ ಶ್ರೀಶೈಲವೆಂದು ಹೆಸರಾಗಿ, ಪ್ರತಿದಿನವೂ ಬಗೆಬಗೆಯ ನೇಮ-ಹೋಮ- ಉತ್ಸವಾದಿಗಳ ಭರಾಟೆಯಿಂದ ಗಿಜಿಗುಟ್ಟುತ್ತದೆ. ಸಿದ್ಧರಾಮನ ಈ ಕ್ಷೇತ್ರ ಸಂಭ್ರಮ, ಅಲ್ಲಮ ಪ್ರಭು ಬಂದು, ಭಕ್ತಿಯ ಹೆಸರಿನಲ್ಲಿ ನಡೆಯುವ ಅರ್ಥಹೀನವಾದ ಈ ನೇಮ-ಆಚಾರಗಳನ್ನೂ, ಸಿದ್ಧರಾಮನಂಥ ಯೋಗಿಯೇ ಹೀಗೆ ಈ ಭಕ್ತಿಯ ಹೆಸರಿನ ಜನ ಜಂಗುಳಿಯಲ್ಲಿ  ತನ್ನನ್ನು ತಾನೆ ಕಳೆದುಕೊಳ್ಳುತ್ತಿರುವ ಪರಿಯನ್ನೂ ಕುರಿತು ಎಚ್ಚರಿಸುವವರೆಗೂ ಮುಂದುವರಿಯುತ್ತದೆ. ಸ್ವಾರಸ್ಯದ ಸಂಗತಿ ಎಂದರೆ ಸಿದ್ಧರಾಮನು ಸೊನ್ನಲಿಗೆಯ ನೆಲದಲ್ಲಿ ಹೀಗೆ ದೇವಾಲಯ ಸಂಸ್ಕೃತಿಯನ್ನು ವೈಭವಯುತವಾಗಿ ಕಟ್ಟಿ ಬೆಳೆಯಿಸುತ್ತಿದ್ದ ಅವನ ಸಮಕಾಲೀನತೆಯಲ್ಲಿಯೆ, ಅತ್ತ ಹೆಚ್ಚೇನೂ ದೂರವಲ್ಲದ ಕಲ್ಯಾಣದಲ್ಲಿ, ಬಸವಣ್ಣನವರ ನೇತೃತ್ವದಲ್ಲಿ ದೇವಾಲಯವನ್ನೆ ಅದರ ಪುರೋಹಿತಷಾಹಿಯೊಂದಿಗೆ ತಿರಸ್ಕರಿಸುವುದರ ಮೂಲಕ ಇಷ್ಟಲಿಂಗ ನಿಷ್ಠೆಯ ವೀರಶೈವ ಶರಣ ಚಳವಳಿಯೊಂದು ಕ್ರಿಯಾಶೀಲವಾಗಿತ್ತು. ಬೇರೊಂದು ಮಾತಿನಲ್ಲಿ ಹೇಳುವುದಾದರೆ, ಕಲ್ಯಾಣದ ವೀರಶೈವಕ್ಕೆ ಕಡಿಮೆಯಿಲ್ಲದ ರೀತಿಯಲ್ಲಿ ಸೊನ್ನಲಿಗೆಯಲ್ಲಿ ಸಿದ್ಧರಾಮನು ಸ್ಥಾವರಲಿಂಗ  ನಿಷ್ಠೆಯ ಶೈವವನ್ನು ಅಥವಾ ರೇವಣರ ಪರಂಪರೆಯನ್ನು ಬೆಳೆಯಿಸಿದನು. ರಾಘವಾಂಕನೇ ‘ಸಿದ್ಧರಾಮನಾಥಂ ಶೈವ ಸಾಮ್ರಾಜ್ಯಸುಖ’ (ಸಿದ್ಧರಾ.ಚಾ. ೭-೩೫) ದಲ್ಲಿದ್ದನೆಂದು ವರ್ಣಿಸುತ್ತಾನೆ. ಈ ಶೈವವು ಬಹುಶಃ ರೇವಣಸಿದ್ಧ ಸಂಪ್ರದಾಯದ ಲಾಕುಳ ಶೈವವೇ ಆಗಿರಬಹುದು. ಈ ‘ಶೈವ ಸಾಮ್ರಾಜ್ಯ’ದ ಕೇಂದ್ರವೆ ಕಪಿಲಸಿದ್ಧ ಮಲ್ಲಿಕಾರ್ಜುನನ ದೇವಾಲಯ. ಸಿದ್ಧರಾಮನ ಕಾಲದಲ್ಲಿ ಮಾತ್ರವಲ್ಲ. ಅನಂತರ ಕೆಲವು ಕಾಲವೂ ‘ಕಪಿಲ ಸಿದ್ಧಮಲ್ಲಿಕಾರ್ಜುನ ದೇವಾಲಯ ಸಿದ್ಧಿಪ್ರಸಿದ್ಧಿಯ ದೃಷ್ಟಿಯಿಂದ ನಿಸ್ಸಂದೇಹವಾಗಿಯೂ ಪ್ರಾಚೀನ ಕರ್ನಾಟಕದ ಬಹುಮುಖ್ಯವಾದ ದೇವಾಲಯವಾಗಿರಬೇಕು. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ದೊರೆಯುವ ಇಪ್ಪತ್ತೆರಡು ಶಾಸನಗಳು ಕಪಿಲಸಿದ್ಧ ಮಲ್ಲಿಕಾರ್ಜುನನಿಗೆ ಕೊಟ್ಟ ದಾನ ದಾಖಲೆಗಳೆಂಬುದನ್ನು ನೆನೆದರೆ ಈ ದೇವತೆ ಆ ಕಾಲದಲ್ಲಿ ಗಳಿಸಿದ್ದ ರಾಜ್ಯಮಟ್ಟದ ಪ್ರಭಾವ ಮನದಟ್ಟಾಗುತ್ತದೆ.’[12]

ಸಿದ್ಧರಾಮನು ಜನಮನದಲ್ಲಿ ‘ಸಾಕಾರ ನಿಷ್ಠೆ’ಯ ಭಕ್ತಿ- ಶ್ರದ್ಧೆಗಳನ್ನು ಬಿತ್ತಿ ಬೆಳೆಯಲು, ಕಪಿಲಸಿದ್ಧಮಲ್ಲಿಕಾರ್ಜುನನ ದೇವಾಲಯದ ಜತೆಗೆ, ಮತ್ತೆ ಹದಿನಾರು ದೇವಾಲಯಗಳನ್ನೂ, ಭವ್ಯವಾದ ಯೋಗಮಜ್ಜನ ಚೌಕಗಳನ್ನೂ, ಗೋಶಾಲೆಯನ್ನೂ ಈ ಕ್ಷೇತ್ರಕ್ಕೆ ಬಂದು ಹೋಗುವ ಜನರಿಗಾಗಿ ಅನ್ನಸತ್ರಗಳನ್ನೂ ಅರವಟ್ಟಿಗೆಗಳನ್ನೂ ಕಟ್ಟಿಸಿದ್ದು, ಅವನಿಗೆ ಸಮಸ್ತ ಜನದ ಯೋಗಕ್ಷೇಮದಲ್ಲಿ ಇದ್ದ ‘ಭೂತಾನುಕಂಪೆ’ಯನ್ನು ಸೂಚಿಸುತ್ತದೆ. ಇದಕ್ಕಿಂತಲೂ ಮಿಗಿಲಾಗಿ ಸಿದ್ಧರಾಮನ ನೆನಪನ್ನು ಇಂದಿಗೂ ಉಳಿಸಿರುವುದು ಅವನು ಅಂದು ಕಟ್ಟಿಸಿದ ವಿಸ್ತಾರವಾದ ಕೆರೆ. ಮನುಷ್ಯರಿಗೆ ಮಾತ್ರವಲ್ಲ ಸಮಸ್ತ ಪಶುಪಕ್ಷಿ ಕ್ರಿಮಿ- ಕೀಟಾದಿಗಳ ಬಾಯಾರಿಕೆಯನ್ನು ನೀಗಿಸಲು ಅವನು ನಿರ್ಮಿಸಿದ ಕೆರೆ, ಅಂದಿನ ಸಾಮಾಜಿಕ ಅಗತ್ಯಗಳಲ್ಲಿ ಬಹು ಮುಖ್ಯವಾದುದಾಗಿದೆ. ಈ ಸಂದರ್ಭವನ್ನು ಕವಿ ರಾಘವಾಂಕನು ಅತ್ಯಂತ ಉತ್ಸಾಹದಿಂದ ವರ್ಣಿಸುತ್ತಾನೆ. ಸಿದ್ಧರಾಮನು ತನ್ನ ‘ನಾಲ್ಕು ಸಾವಿರ ಸಮರ್ಥ ಗುಡ್ಡ’ (ಶಿಷ್ಯ)ರ ಜತೆಗೆ, ‘ಜೀವರೆಲ್ಲರ ದುರಿತ ಕರಿಗೆ ಅಂಕುಶಗೊಂಬ ಮಾವಟಿಗನಂತೆ’ ತಾನೂ ಗುದ್ದಲಿಯನ್ನು ಹಿಡಿದು, ದಿನವಿಡೀ ಹಲವು ದಿನ ಬಿರುಬಿಸಿಲಲ್ಲಿ ಆಗೆದನಂತೆ; ಅವನ ಶಿಷ್ಯರು, ‘ತಾವೂ ಈ ಬಿರುಬಿಸಿಲಿನಲ್ಲಿ ನಮ್ಮ ಜತೆಗೆ ಆಗೆದು ಆಯಾಸ ಗೊಳ್ಳುವುದೇಕೆ, ತಾವು ಮಠಕ್ಕೆ ದಯಮಾಡಿಸಿ’ ಎಂದು ಕೇಳಿಕೊಂಡರೂ ಸಿದ್ಧರಾಮನು ‘ಶಿವಯೋಗಿಯ  ಶರೀರಂ ವೃಥಾ ಸವೆಯಲಾಗದು, ಅನುಗೊಂಬನಿತು ಕಾಯಕಂ ನಡೆಯುತಿರಬೇಕು’ (ಸಿದ್ಧರಾ ಚ. ೪-೨೩) ಎನ್ನುತ್ತಾನೆ. ಈ ಮಾತು ಸಿದ್ಧರಾಮನ ಬದುಕಿನ ಬಹು ಮುಖ್ಯವಾದ ನಿಲುವನ್ನೂ, ಅವನಿಗೆ ಇದ್ದ ಶಿಷ್ಯವಾತ್ಸಲ್ಯವನ್ನೂ ಸುಚಿಸುತ್ತದೆ. ಸಿದ್ಧರಾಮ ಆ ಕ್ಷೇತ್ರದ ಗುರು; ಯೋಗಿ. ಹಾಗೆಂದು ಆತ ತಾನು ಯಾವ ಕೆಲಸವನ್ನೂ ಮಾಡದೆ, ಭಕ್ತರ ಪೂಜೆ-ಗೌರವ- ಸ್ತುತಿ- ಕಾಣಿಕೆಗಳನ್ನು ಸ್ವೀಕರಿಸುತ್ತ, ಅವರನ್ನು ಅಶೀರ್ವಾದ ಮಾಡುವುದರಿಂದ ಮಾತ್ರ ತೃಪ್ತವಾಗುವ ‘ಗುರುಪಟ್ಟ’ವನ್ನು ಇಷ್ಟಪಟ್ಟವನಲ್ಲ. ಒಬ್ಬ ಸಾಕ್ಷಾತ್ ಶಿವಯೋಗಿಯೇ ಆಗಿದ್ದರೂ, ಆತನ ಶರೀರ ವ್ಯರ್ಥವಾಗಿ ಸವೆಯಬಾರದು; ಅವನಿಂದಲೂ ಸಾಧ್ಯವಾದಷ್ಟು ಕಾಯಕ ನಡೆಯುತ್ತಿರಬೇಕು ಎಂದು ಆತ ತನ್ನ ಶಿಷ್ಯರಿಗೆ ಹೇಳಿದ ಮಾತು ಅವನ ವ್ಯಕ್ತಿತ್ವದ ಘನತೆಯನ್ನು ಪ್ರಕಟಿಸುತ್ತದೆ.

ಸಿದ್ಧರಾಮನ ಈ ಕಾಯಕಯೋಗದ ಕ್ಷೇತ್ರ ನಿರ್ಮಾಣ ಕಾರ್ಯದಲ್ಲಿ, ‘ನಾಲ್ಕು ಸಾವಿರ ಸಮರ್ಥಗುಡ್ಡರು’ ಇದ್ದರೆಂದು ರಾಘವಾಂಕನು ಹೇಳುತ್ತಾನೆ. ವಾಸ್ತವವಾಗಿ ಇಷ್ಟು ಸಂಖ್ಯೆಯವರಿದ್ದರೋ ಇಲ್ಲವೋ. ಸೊನ್ನಲಿಗೆಯ ಶ್ರೀ ಕ್ಷೇತ್ರದ ನಿರ್ವಹಣೆಗೆ ಸಾಕಷ್ಟು ಸಂಖ್ಯೆಯ ಶಿಷ್ಯರು ಸಿದ್ಧರಾಮನಿಗೆ ಇದ್ದಿರಬಹುದು. ಆದರೆ ಅವರಲ್ಲಿ, ಮುಖ್ಯವಾಗಿ ನಾಲ್ವರನ್ನು ಮಾತ್ರ, ಹೆಸರು ಹೇಳಿ ಗುರುತಿಸಲು, ದೊರೆತ ಆಧಾರಗಳಿಂದ, ಸಾಧ್ಯವಾಗಿದೆ. ಒಬ್ಬ ಬೊಮ್ಮಯ್ಯ, ಮತ್ತೊಬ್ಬ ಹಾವಿನಹಾಳ ಕಲ್ಲಯ್ಯ, ಇನ್ನೊಬ್ಬರು ಕೇದಾರ ಗುರು. ಇವರಲ್ಲದೆ ಬಿಲ್ಲೇಶ ಬೊಮ್ಮಯ್ಯನೆಂಬ ಮತ್ತೊಬ್ಬ. ಇವರುಗಳಲ್ಲಿ ಬೊಮ್ಮಯ್ಯ ಸಿದ್ಧರಾಮನ ಅಣ್ಣ. ಮುದ್ದಗೌಡ- ಸುಗ್ಗವ್ವೆಯರಿಗೆ ಐದಾರು ಮಕ್ಕಳಿದ್ದರೆಂದೂ ಅವರಲ್ಲಿ ಮೊದಲಿಗ ಬೊಮ್ಮಯ್ಯ ಎಂದೂ ರಾಘವಾಂಕ ಪ್ರಸ್ತಾಪಿಸುತ್ತಾನೆ. ಈತನನ್ನು ‘ಅಣ್ಣ ಬೊಮ್ಮಯ್ಯ’ ಎಂದೇ ನಿರ್ದೇಶಿಸಲಾಗಿದೆ.  ಸಿದ್ಧರಾಮನು ಶ್ರೀಶೈಲದಿಂದ ಹಿಂದಿರುಗಿ ಬಂದು, ಮನೆಯನ್ನು ತೊರೆದು ಊರ ಹೊರಗೆ ಮಠವನ್ನು ಕಟ್ಟಿ ನೆಲೆ ನಿಂತಾಗ, ಬೊಮ್ಮಯ್ಯನೂ ಮನೆಯನ್ನು ತೊರೆದು ಬಂದು ಅವನ ಜತೆಗೆ ಸೇರಿ ಸಿದ್ಧರಾಮನಿಂದ ದೀಕ್ಷೆಯನ್ನು ಪಡೆದು ಅವನ ಶಿಷ್ಯನಾಗುತ್ತಾನೆ. ಚಾಮಲದೇವಿ ದಾನವಾಗಿ ಕೊಟ್ಟ ನೆಲದಲ್ಲಿ ದೇವಸ್ಥಾನಾದಿಗಳನ್ನು ಕಟ್ಟಿಸಬೇಕೆಂಬ ಯೋಚನೆಯನ್ನು ಮುಂದಿಟ್ಟಾಗ, ಅಣ್ಣ ಬೊಮ್ಮಯ್ಯನು ಅದಕ್ಕೆ ಅಪಾರವಾದ ಹಣ ಬೇಕು, ಅದಕ್ಕೇನು ಮಾಡುವುದೆಂಬ ಚಿಂತೆಯಲ್ಲಿರುವಾಗ, ‘ಶಿವದೇವಾಲಯವನ್ನು ಮಾಡಬೇಕಾದರೆ ಮೊದಲು ನೆಲವನ್ನು ಶೋಧಿಸಬೇಕು. ಅದ್ದರಿಂದ ಈ ನೆಲವನ್ನು ಆಗೆಯಿರಿ’ ಎಂದು ಸಿದ್ಧರಾಮನು ಹೇಳಿದಾಗ, ಅಣ್ಣ ಬೊಮ್ಮಯ್ಯನು ಉದಾಸೀನದಿಂದ ನೆಲಕ್ಕೆ ಗುದ್ದಲಿಯನ್ನು ಹಾಕಿ ಮೀಟಿದಾಗ, ಒಂದು ಹೊಸ ಹೊನ್ನ ಕೊಪ್ಪರಿಗೆಯೇ ಗೋಚರವಾಗುತ್ತದೆ. ಈ ಅಣ್ಣ ಬೊಮ್ಮಯ್ಯ

ಸಿದ್ಧರಾಮನ ಬದುಕಿನ ಉದ್ದಕ್ಕೂ ಜತೆಯಾಗಿ ನಿಂತವನು. ಸಿದ್ಧರಾಮನು ಸಮಾಧಿಸ್ಥನಾದ ಮೇಲೂ ಬಹುಶಃ ಕೆಲವು ಕಾಲ ಬದುಕಿದ್ದನೆಂದು ತೋರುತ್ತದೆ. ಈತನು ವಚನಗಳನ್ನು ಬರೆದಿರುವನೋ ಹೇಗೊ ತಿಳಿಯದು. ಆದರೆ ವಚನಕಾರನಾದ ಬಾಲಬೊಮ್ಮಣ್ಣ ಎಂಬಾತನ ಹೆಸರು ಗಣ ಸಹಸ್ರನಾಮದಲ್ಲಿದೆ. ಈತನು ಬರೆದ ಹನ್ನೊಂದು ವಚನಗಳು ಉಪಲಬ್ಧವಾಗಿವೆ. ‘ವೀರಶೂರ ರಾಮೇಶ್ವರ ಲಿಂಗ’ ಎನ್ನುವುದು ಈತನ ವಚನಗಳ ಅಂಕಿತ. ಭೈರವೇಶ್ವರ ಕಾವ್ಯ ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರಗಳಲ್ಲಿ ಬಾಲ ಬೊಮ್ಮಣ್ಣನು ಸಿದ್ಧರಾಮನ ಶಿಷ್ಯನೆಂದೂ, ಸಿದ್ಧರಾಮನು ಸೊಲ್ಲಾಪುರದಲ್ಲಿ ಗುಡಿಗಳನ್ನು ಕಟ್ಟಿಸಿ ಲಿಂಗಪೂಜೆಯನ್ನು ನೆರವೇರಿಸುತ್ತಿದ್ದ ಸಂದರ್ಭದಲ್ಲಿ, ತಾನೂ ಲಿಂಗ ಪ್ರತಿಷ್ಠೆ ಮಾಡಲು ತನ್ನಲ್ಲಿ ಎಳ್ಳಷ್ಟೂ ಹಣವಿಲ್ಲವೆಂದು ಕೊರಗುತ್ತಿರುವಾಗ ಸಿದ್ಧರಾಮಯ್ಯನು ಬೊಮ್ಮಣ್ಣನನ್ನು ಹತ್ತಿರ ಕರೆದು ಕೈಗೆ ಹಾರೆ ಗುದ್ದಲಿ ಕೊಟ್ಟು ಅಂಗಳದಲ್ಲಿ ಅಗೆಯಲು ಹೇಳಿದನೆಂದೂ, ಹೀಗೆ ಬೊಮ್ಮಣ್ಣನು ನೆಲವನ್ನು ಆಗೆಯುತ್ತಿದ್ದಾಗ ಕೊಪ್ಪರಿಗೆ ಬಂಗಾರ ಲಭಿಸಿತೆಂದೂ ನಿರೂಪಿತವಾಗಿದೆ.[13] ರಾಘವಾಂಕನ ಸಿದ್ಧರಾಮ ಚರಿತೆಯಲ್ಲಿ ಬರುವ ಬೊಮ್ಮಯ್ಯನೂ ಮತ್ತು ವಚನಕಾರ ಬಾಲಬೊಮ್ಮಣ್ಣನೂ ಒಬ್ಬರೇ ಇರಬಹುದೇನೋ ಎಂದು ಅವರಿಬ್ಬರಿಗೂ ಸಂಬಂಧಿಸಿದ ಘಟನೆಯೊಂದರ ಸಾದೃಶ್ಯದಿಂದ ಅನ್ನಿಸುತ್ತದೆ. ಆದರೆ ಈ ಸಾದೃಶ್ಯ ಕೂಡಾ ಅಲ್ಪಸ್ವಲ್ಪ ವ್ಯತ್ಯಾಸದಿಂದ ಕೂಡಿದೆ. ಈ ಬಾಲ ಬೊಮ್ಮಣ್ಣನೂ, ಸಿದ್ಧರಾಮನ ಅಣ್ಣನಾದ ಬೊಮ್ಮಯ್ಯನೂ ಬೇರೆ ಬೇರೆಯೆ ಎಂದು ತೋರುತ್ತದೆ. ಯಾಕೆಂದರೆ ಬಾಲ ಬೊಮ್ಮಣ್ಣನ ವಚನಗಳಲ್ಲಿ ಒಂದು ಬಾರಿಯಾದರೂ ಸಿದ್ಧರಾಮನ ಪ್ರಸ್ತಾಪವಿಲ್ಲ; ಆದರೆ ‘ಗುರುವಾಗಿ ಬಂದರಯ್ಯಾ ರೇವಣಸಿದ್ಧೇಶ್ವರ ದೇವರು’ ಎಂದು ಅವನ ಒಂದು ವಚನದಲ್ಲಿ (ವ ೨೩೭) ರೇವಣಸಿದ್ಧರ ಪ್ರಸ್ತಾಪವಿದ್ದು ಈತನೂ ಅವರ ಶಿಷ್ಯನಾಗಿರಬಹುದೇನೋ ಎಂಬ ಸಂಗತಿ ತುಂಬ ಕುತೂಹಲಕಾರಿಯಾಗಿದೆ. ಸಿದ್ಧರಾಮನ ಶಿಷ್ಯರಲ್ಲಿ ಮತ್ತೊಬ್ಬ ಹಾವಿನಹಾಳ ಕಲ್ಲಯ್ಯ. ಈತನನ್ನು ಕುರಿತು ಹರಿಹರನು ಒಂದು ರಗಳೆಯನ್ನೆ ಬರೆದಿದ್ದಾನೆ. ಅಪ್ರತಿಮ ಶಿವಭಕ್ತನಾದ ಈತ, ತನ್ನ ತಂದೆಯ ವೃತ್ತಿಯನ್ನು ಕೈಕೊಳ್ಳಲು ಒಪ್ಪದೆ, ತನಗಾಗಿ ಏರ್ಪಟ್ಟ ಮದುವೆಯನ್ನೂ ತಿರಸ್ಕರಿಸಿ, ರೇವಣಸಿದ್ಧರ ಆದೇಶದ ಮೇರೆಗೆ, ಅವರ ಶಿಷ್ಯನಾದ ರುದ್ರಮುನಿದೇವರ ಸೂಚನೆಯ ಪ್ರಕಾರ ಸೊನ್ನಲಿಗೆಗೆ ಬಂದು ಸಿದ್ಧರಾಮನನ್ನು ಗುರು ಎಂದು ಒಪ್ಪಿಕೊಂಡು ಶ್ರೀ ಕ್ಷೇತ್ರದ ಸೇವೆಗೆ ನಿಂತವನು. ಸಿದ್ಧರಾಮನ ವಚನಗಳಲ್ಲಿಯೂ ಇವನ ನೆನಕೆ ಇದೆ; ಈತ ನೂರಕ್ಕೂ ಹೆಚ್ಚು ಸಂಖ್ಯೆಯ ವಚನಗಳನ್ನು  ಬರೆದಿದ್ದಾನೆ. ಅವುಗಳಲ್ಲಿ ಪ್ರಾಸಂಗಿಕವಾಗಿ, ರೇವಣಸಿದ್ಧರ ಮತ್ತು ಸಿದ್ಧರಾಮನ ಹೆಸರುಗಳು ಕಾಣಿಸಿಕೊಂಡಿವೆ. ಈತನ ವಚನಗಳ ಅಂಕಿತ ‘ಮಹಾಲಿಂಗ ಕಲ್ಲೇಶ್ವರಾ’. ಈತ ಸೊನ್ನಲಿಗೆಯಲ್ಲಿರುವಾಗ ಒಂದು ದಿನ ತುಂಬ ಚೆಲುವೆಯೊಬ್ಬಳು ‘ಪುರಾತನರ ಪೊಸಗೀತ’ವನ್ನು ಸುಮಧುರವಾಗಿ ಹಾಡುತ್ತಿದ್ದುದನ್ನು ಕಂಡು, ಮೋಹಗೊಂಡು ಅವಳನ್ನು ಮದುವೆ ಮಾಡಿಕೊಳ್ಳಲು ಅಪೇಕ್ಷಿಸಿದಾಗ ಸಿದ್ಧರಾಮನು ನಸುನಕ್ಕು, ಮೆಚ್ಚಿ ಸಮ್ಮತಿಸುತ್ತಾನೆ. ಅವರಿಬ್ಬರೂ ಸಮಸುಖದಲ್ಲಿ ಬಾಳುವೆ ನಡೆಸಿದಾಗ, ಹಾವಿನಹಾಳ ಕಲ್ಲಯ್ಯನಿಗೆ ಒಬ್ಬ ಮಗಳು ಜನಿಸುತ್ತಾಳೆ. ಈ ಸಂಗತಿಯನ್ನು ಹರಿಹರ ತನ್ನ ‘ಹಾವಿನಹಾಳ ಕಲ್ಲಯ್ಯನ ರಗಳೆ’ಯಲ್ಲಿ ಪ್ರಸ್ತಾಪಿಸುತ್ತಾನೆ. ಸಿದ್ಧರಾಮನ ಶಿಷ್ಯರಲ್ಲಿ, ಮತ್ತೊಬ್ಬ ಬಿಲ್ಲೇಶ ಬೊಮ್ಮಯ್ಯ. ಸಿದ್ಧರಾಮನ ಶಿಷ್ಯರಲ್ಲಿ ಇಂಥವರೂ ಇದ್ದರೆ ಎಂದು, ತನ್ನ ವರ್ತನೆಯಿಂದ ಎದ್ದು ಕಾಣುವ ಶಿಷ್ಯರಲ್ಲಿ ಇವನೂ ಒಬ್ಬ. ಸೊನ್ನಲಿಗೆಗೆ ಸಮೀಪದ ಯಾವುದೋ ಊರಿನಲ್ಲಿದ್ದ ಈತ, ಬಡತನದ ಕಾರಣದಿಂದ, ತನ್ನ ದಾಯಾದಿಗಳ ಸಂಪತ್ತನ್ನು ಕದ್ದು, ಅವರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ತನ್ನ ಬಾಹುಬಲದಿಂದ ತಪ್ಪಿಸಿಕೊಂಡು ಸೊನ್ನಲಿಗೆಗೆ ಓಡಿ ಬಂದು, ಸಿದ್ಧರಾಮನ ಕಾರುಣ್ಯವನ್ನು ಕೋರಿ, ಅವನ  ಶಿಷ್ಯರಿಗೆ ಸಲ್ಲುವ ವೇಷದಿಂದ, ಸಿದ್ಧರಾಮನ ಸಾವಿರಾರು ಶಿಷ್ಯರಲ್ಲಿ ಒಬ್ಬನಾಗಿ ಸೇರಿಕೊಳ್ಳುತ್ತಾನೆ. ಆತ ಮೂಲತಃ ಧೂರ್ತನಾದರೂ, ಮಾತಿನಲ್ಲಿ ನಯ, ವೇಷದಲ್ಲಿ ಸಾಧುವಾಗಿ ತೋರಿದವನು. ಆದರೆ ಅವನ ದುರದೃಷ್ಟಕ್ಕೆ, ಒಂದು ದಿನ ಅವನ ದಾಯಾದಿಗಳು ಸೊನ್ನಲಿಗೆಗೆ ಬಂದಾಗ, ಈತನನ್ನು ಗುರುತು ಹಿಡಿದು, ‘ನೀನು ನಮ್ಮಿಂದ ಕದ್ದುಕೊಂಡುಬಂದ ವಸ್ತುವನ್ನು ಕೊಡು’ ಎಂದು ಏಕಾಂತದಲ್ಲಿ ಅವನನ್ನು ಕೇಳುತ್ತಾರೆ. ಆದರೆ ಆತ ‘ನಾನು ನನ್ನ ವಸ್ತುವನ್ನು ತಂದೆನೇ ಹೊರತು, ನಿಮ್ಮದನ್ನೇನೂ ಕದ್ದು ತಂದಿಲ್ಲವಲ್ಲ; ನನ್ನಂಥ ಸದಾಚಾರಿಯಾದ ಮತ್ತು ಸಿದ್ಧರಾಮನ ಶಿಷ್ಯರಲ್ಲಿ ಶ್ರೇಷ್ಠನಾದ ನನ್ನ ಮೇಲೆ ಅವಿಚಾರದಿಂದ ಕಳ್ಳತನದ ಆಪಾದನೆಯನ್ನು ಹೊರಿಸುತ್ತಿರಾ’ ಎಂದು ಅವರ ಮೇಲೇ ಹರಿಹಾಯುತ್ತಾನೆ. ಅಷ್ಟೇ ಅಲ್ಲ, ‘ಇಲ್ಲದ ಅನ್ಯಾಯವನ್ನು ನನ್ನ ಮೇಲೆ ಆರೋಪಿಸಿದ ನಿಮ್ಮನ್ನು ಕೊಂದೇ ಬಿಡುತ್ತೇನೆ; ಇಲ್ಲವೇ ನಾನು ನನ್ನನ್ನೇ ಕೊಂದುಕೊಳ್ಳುತ್ತೇನೆ’ ಎಂದು ಅಲ್ಲಿ ನಿಲ್ಲಿಸಿದ ಕಲ್ಲಿಗೆ ತಲೆ ಚಚ್ಚಿಕೊಳ್ಳುವವನಂತೆ ನಟಿಸುತ್ತಾನೆ. ಹಣವನ್ನು ಕಳೆದುಕೊಂಡು, ಹತಾಶರಾದ ಆ ಬಡಪಾಯಿಗಳು ಸತ್ಯಸಂಧನಂತೆ ನಟಿಸುವ ಬಿಲ್ಲೇಶಬೊಮ್ಮಯ್ಯನ ಈ ಅಬ್ಬರವನ್ನು ಕಂಡು ಕಂಗಾಲಾಗಿ ‘ಇಷ್ಟೊಂದು ಕೋಪವೇತಕ್ಕೆ ಬೊಮ್ಮಯ್ಯ, ನೀನು ಕೃಪೆಮಾಡಿ ಎಷ್ಟನ್ನು ಕೊಡುತ್ತಿಯೋ ಅಷ್ಟೇ ನಮಗೆ ಸಾಕು.’ ಅನ್ನುತ್ತಾರೆ. ಆಗ ಬೊಮ್ಮಯ್ಯನು ‘ನಾನು ನಿಮ್ಮಿಂದ ತೆಗೆದುಕೊಂಡಿದ್ದರೆ ತಾನೆ ಕೊಡುವುದು’ ಎಂದಾಗ. ಆ ದಾಯಾದಿಗಳು ‘ಹೋಗಲಿ, ದಾನ ಎಂದು ತಿಳಿದು ಕೊಡು, ಎಂದು ಅಂಗಲಾಚುತ್ತಾರೆ. ಆದರೆ ಆತ ‘ಹಾಗೆ ಕೊಡಲು ಬರುವುದಿಲ್ಲ, ಇಲ್ಲಿರುವ ಹಣವೆಲ್ಲ ಮಲ್ಲಿಕಾರ್ಜುನನ ಧರ್ಮದ ಬೊಕ್ಕಸದ್ದು’ ಎಂದು ದಬಾಯಿಸುತ್ತಾನೆ. ಹೀಗೆ ಮಾತಿಗೆ ಮಾತು ಬೆಳೆದು, ಅವರು ಇವನನ್ನು ಯಾಕಾದರೂ ಕೇಳಿದೆವೋ ಅಂದುಕೊಂಡು, ತಮ್ಮ ಪಾಡಿಗೆ ತಾವು ತೆಪ್ಪಗೆ ಊರಿಗೆ  ಹೋಗೋಣ ಎಂದು ನಿರ್ಧರಿಸಿದಾಗ, ಬಿಲ್ಲೇಶ ಬೊಮ್ಮಯ್ಯನು ‘ಭಕ್ತನಾದ ನನ್ನ ಮೇಲೆ ಈ ಕ್ಷೇತ್ರದಲ್ಲಿ ಇಷ್ಟೆಲ್ಲಾ ಆರೋಪಗಳನ್ನು ಹೊರಿಸಿ, ಅದು ಹೇಗೆ ಹೋಗುತ್ತೀರೋ, ನೋಡುತ್ತೇನೆ; ನೀವು ಹೋದಿರಾದರೆ ಭಕ್ತರಾಣೆ ’ ಎಂದು ಅವರನ್ನು ತಡೆಯುತ್ತಾನೆ. ಈ ಎಲ್ಲ ಅವಾಂತರಗಳಿಂದ ಕಂಗಾಲಾದ ಆ ಅಸಹಾಯಕ ದಾಯಾದಿಗಳು ಬೇರೆ ದಾರಿ ಕಾಣದೆ, ನಡೆದ ಸಂಗತಿಯನ್ನು ಸಿದ್ಧರಾಮನ ಗಮನಕ್ಕೆ ತರುತ್ತಾರೆ. ಸಿದ್ಧರಾಮನು ವಿಚಾರಣೆ ನಡೆಸಿ, ಬಿಲ್ಲೇಶ ಬೊಮ್ಮಯ್ಯನ ವಂಚನೆ ಹಾಗೂ ಹಠಮಾರಿತನವನ್ನು ಕಂಡು, ‘ಈ ಮೂರ್ಖನನ್ನು ನಾವು ತಿದ್ದಲು ಸಾಧ್ಯವಿಲ್ಲ. ಇವನನ್ನು ನೀವು ಯಾವ ಧರ್ಮಾಧಿಕರಣಕ್ಕಾದರೂ ಕರೆದುಕೊಂಡು ಹೋಗಿರಿ. ಗುರುವಿನ ಆಜ್ಞೆಯನ್ನು ಮೀರಿದ ಈತನನ್ನು ನಾವು ಮತ್ತೆ ನೋಡಲು ಇಷ್ಟಪಡುವುದಿಲ್ಲ’ ಎಂದು ಆತನನ್ನು ಆ ಕ್ಷೇತ್ರದಿಂದ ನೂಕಿಸುತ್ತಾನೆ. ಈ ಅವಮಾನದಿಂದ ತತ್ತರಿಸಿ, ಒಂದು ಶಿವಾಲಯವನ್ನು ಪ್ರವೇಶಿಸಿ ಹರಿತವಾದ ಕತ್ತಿಯೊಂದನ್ನು ಗೋಡೆಗೆ ಸಿಕ್ಕಿಸಿ ತಾನು ಅದಕ್ಕೆದುರಾಗಿ ನುಗ್ಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅನಂತರ ಸಿದ್ಧರಾಮನು ಆ ದಾಯಾದಿಗಳಿಗೆ, ಬೊಮ್ಮಯ್ಯನಿಂದ ಸಲ್ಲಬೇಕಾಗಿದ್ದ ಹಣವನ್ನು ಕೊಡಿಸಿ ಸಮಾಧಾನಮಾಡಿ ಕಳುಹಿಸಿಕೊಡುತ್ತಾನೆ. ಈ ವಿವರವಾದ ಬಿಲ್ಲೇಶ ಬೊಮ್ಮಯ್ಯನ ಪ್ರಸಂಗವನ್ನು ರಾಘವಾಂಕ ತನ್ನ ಸಿದ್ಧರಾಮ ಚಾರಿತ್ರದಲ್ಲಿ  ಅತ್ಯಂತ ನಾಟಕೀಯವಾಗಿ ಚಿತ್ರಿಸಿದ್ದಾನೆ. ಬಿಲ್ಲೇಶ ಬೊಮ್ಮಯ್ಯನ ಈ ವ್ಯಕ್ತಿಚಿತ್ರ ಕನ್ನಡ ಸಾಹಿತ್ಯದಲ್ಲಿಯೆ ಮರೆಯಲಾಗದಂಥದ್ದು. ಒಂದು ವ್ಯವಸ್ಥೆ ಅಂದ ಮೇಲೆ ಅಲ್ಲಿ ಎಂತೆಂಥವರೋ ಬಂದು ಸೇರಿಕೊಳ್ಳುವುದು ತೀರಾ ಸಹಜವೆಂಬುದನ್ನು ಚಿತ್ರಿಸುತ್ತಲೆ, ರಾಘವಾಂಕನು ಸಿದ್ಧರಾಮನ ನ್ಯಾಯಪಕ್ಷಪಾತಿಯಾದ ನಿಷ್ಠುರ ಸ್ವಭಾವವನ್ನೂ, ಅದೇ ಕಾಲಕ್ಕೆ ನೊಂದವರ ಬಗ್ಗೆ ಅವನಿಗಿದ್ದ, ಕರುಣೆಯನ್ನೂ ಏಕಕಾಲಕ್ಕೆ ಈ ಪ್ರಸಂಗದ ಮೂಲಕ ಪರಿಚಯ ಮಾಡಿಕೊಟ್ಟಿದ್ದಾನೆ.

ಸಿದ್ಧರಾಮನ ಈ ಮೂವರು ಶಿಷ್ಯರನ್ನು ಕುರಿತ ಸಂದರ್ಭಗಳು, ಕೇವಲ ವಿಷಯ ನಿರೂಪಣೆಗಾಗಿ ಬಂದಿಲ್ಲ ರಾಘವಾಂಕನಲ್ಲಿ. ಒಬ್ಬೊಬ್ಬರ ಪ್ರಸಂಗದಲ್ಲಿಯೂ ಸಿದ್ಧರಾಮನ ವ್ಯಕ್ತಿತ್ವದ ಕೆಲವಂಶಗಳು ಅನಾವರಣಗೊಂಡಿವೆ. ಚಾಮಲದೇವಿಯಿಂದ ದತ್ತವಾದ ಭೂಮಿಯ ಮೇಲೆ ದೇವಾಲಯಾದಿಗಳ ನಿರ್ಮಾಣಕ್ಕೆ ಅಪಾರವಾದ ಹಣ ಬೇಕಾಗಿರುವಾಗ, ಅದನ್ನು ಹೇಗೆ ಹೊಂದಿಸುವುದು ಎಂಬ ಚಿಂತೆಯಲ್ಲಿ ಅಣ್ಣ ಬೊಮ್ಮಯ್ಯನ ಮನಸ್ಸು ಹೊಯ್ದಾಡುವಾಗ, ಸಿದ್ಧರಾಮನು ಅದಾವ ಯೋಚನೆಯೂ ಇಲ್ಲದೆ, ‘ದೇವಾಲಯ ನಿರ್ಮಾಣ ಮಾಡಬೇಕಾದರೆ, ಮೊದಲು ನೆಲವನ್ನು ಶೋಧಿಸಬೇಕು, ಅಗೆಯಿರಿ’- ಎಂದು ಬೊಮ್ಮಯ್ಯನಿಗೆ ಹೇಳಿದಾಗ, ಬೊಮ್ಮಯ್ಯನ ಗುದ್ದಲಿಯ ಅಗೆತಕ್ಕೆ ನೆಲದಲ್ಲಿ ಹೂತಿಟ್ಟಿದ್ದ ಬಂಗಾರದ ನಾಣ್ಯಗಳ ಕೊಪ್ಪರಿಗೆಯೊಂದು ಗೋಚರವಾಗುತ್ತದೆ. ಆಗ ದಿಗ್‌ಭ್ರಮೆಗೊಂಡ ತನ್ನ ಅಣ್ಣ ಬೊಮ್ಮಯ್ಯನಿಗೆ ಸಿದ್ಧರಾಮನು ಹೇಳುತ್ತಾನೆ: “ಶ್ರೀನಾರಿಯಂ ಧರೆಗೆ ಕೊಡುವ ಮಹಿಮಂ ತನಗೆ ತಾನಧಮನೇ” (ಸಿದ್ಧರಾ ಚಾ ೩-೪೨-೪೩) ಎಂದು. ‘ಸಾಕ್ಷಾತ್ ಲಕ್ಷ್ಮಿಯನ್ನೆ ಈ ಭೂಮಿಗೆ ಕೊಡುವ ಆ ಮಹಾಮಹಿಮನಾದ ಮ್ಲಲಿಕಾರ್ಜುನನು ತನ್ನನ್ನು ಕುರಿತು ಕಟ್ಟಿಲಿರುವ ದೇವಾಲಯಕ್ಕೆ ಧನವನ್ನು ಕರುಣಿಸಲಾರದಷ್ಟು ಚಿಕ್ಕವನೇ’ -ಎಂಬುದು ಈ ಮಾತಿನ ತಾತ್ಪರ್ಯ. ಮೇಲು ನೋಟಕ್ಕೆ ಪವಾಡವೆಂಬಂತೆ ತೋರುವ ಈ ಸಂದರ್ಭದಲ್ಲಿ, ಸಿದ್ಧರಾಮನ ಅಂತರಂಗದ ಅಚಲವಾದ ದೈವೀಶ್ರದ್ಧೆ ಇಲ್ಲಿ ಪ್ರಕಟವಾಗಿದೆ. ಅಷ್ಟೆ ಅಲ್ಲ, ‘ನಾನು ಮಾಡುತ್ತೇನೆ. ತಾನು ಮಾಡುತ್ತೇನೆ’ ಎಂಬ ಅಹಂಕಾರದ ತಳಮಳಗಳಾಚೆ, ಎಲ್ಲವನ್ನೂ ನಿಯಂತ್ರಿಸುವ ಹಾಗೂ ರೂಪಿಸುವ ಶಕ್ತಿಯೊಂದಿದೆ ಎಂಬ ನಂಬಿಕೆಯೆ ಬಹುಮುಖ್ಯವಾದದ್ದು, ಅನ್ನುವುದು ಸಿದ್ಧರಾಮನ ಕರ್ಮಯೋಗದ ಹಿಂದಿರುವ ಮೂಲ ಶಕ್ತಿಯಾಗಿದೆ- ಎಂಬ ಸಂಗತಿ ಇಲ್ಲಿ ಸೂಚಿತವಾಗಿದೆ. ಹಾಗೆಯೇ ಹಾವಿನಹಾಳ ಕಲ್ಲಯ್ಯನು, ಅಪ್ರತಿಮ ಶಿವಭಕ್ತನಾಗಿದ್ದೂ, ಆತ ತನಗಾಗಿ ಗೊತ್ತುಮಾಡಲಾದ ಮದುವೆಯನ್ನು ತಿರಸ್ಕರಿಸಿ, ಪರಮವೈರಾಗ್ಯಪರನಾಗಿ ಸಿದ್ಧರಾಮನ ಆಪ್ತವರ್ಗದಲ್ಲಿದ್ದೂ, ಆತ ಒಂದು ದಿನ ಚೆಲುವೆಯಾದ ಶಿವಭಕ್ತೆಯೊಬ್ಬಳನ್ನು ಕಂಡು ಮೋಹಗೊಂಡಾಗ, ಸಿದ್ಧರಾಮನು ನಸುನಕ್ಕು, ಅವರ ಮದುವೆಗೆ ಸಮ್ಮತಿಸಿದನೆಂದು ಹರಿಹರನು, ತನ್ನ ‘ಹಾವಿನ ಹಾಳ ಕಲ್ಲಯ್ಯನ ರಗಳೆ’ಯಲ್ಲಿ ಚಿತ್ರಿಸಿರುವುದು ಸಿದ್ಧರಾಮನ ಸ್ವಭಾವದ ಇನ್ನೊಂದು ಮುಖದ ಪರಿಚಯ ಮಾಡಿಕೊಡುತ್ತದೆ. ತಾನು ಶಿವಯೋಗಿಯೂ, ಬ್ರಹ್ಮಚಾರಿಯೂ ಆದ ಮಾತ್ರಕ್ಕೆ ಉಳಿದವರೆಲ್ಲರೂ ತನ್ನಂತೆಯೆ ಇರಬೇಕೆಂದು ಅಂದುಕೊಂಡವನಲ್ಲ ಸಿದ್ಧರಾಮ. ಭಕ್ತಿ ಎನ್ನುವುದು ಮೂಲತಃ ಸಂಸಾರ ಜೀವನವನ್ನು ವಿರೋಧಿಸುವಂಥದಲ್ಲ; ಅಪ್ರತಿಮ ಶಿವಭಕ್ತನೂ ಸಂಸಾರಿಯಾಗುವುದು ತಪ್ಪೇನಲ್ಲ. ಒಬ್ಬ ವ್ಯಕ್ತಿ ಏಕಕಾಲಕ್ಕೆ ಸಂಸಾರಿಯೂ, ಶಿವಭಕ್ತನೂ ಆಗಿ ಬದುಕುವುದು ಅಪೇಕ್ಷಣೀಯವಾದದ್ದೆ. ಆದಕಾರಣವೆ ಹಾವಿನಹಾಳ ಕಲ್ಲಯ್ಯನ ವಿವಾಹಾಪೇಕ್ಷೆಯನ್ನು ಕೀಳ್ಗಳೆದು ನೋಡದೆ, ಸಿದ್ಧರಾಮನು ನಸುನಕ್ಕು ಅವರ ಮದುವೆಗೆ ಸಮ್ಮತಿಸುತ್ತಾನೆ. ಬಿಲ್ಲೇಶ ಬೊಮ್ಮಯ್ಯನ ಪ್ರಸಂಗದಲ್ಲಂತೂ, ವ್ಯಕ್ತಿಯೊಬ್ಬನ ಧೂರ್ತತೆಯನ್ನೂ, ವಂಚನೆಯನ್ನೂ, ಅವನೂ ತನ್ನ ಶಿಷ್ಯನೆಂಬ ಕಾರಣಕ್ಕೆ ಯಾವುದೇ ರಿಯಾಯಿತಿಗಳ ಮೂಲಕ ಒಪ್ಪದೆ, ಆತನನ್ನು ಶ್ರೀ ಕ್ಷೇತ್ರದಿಂದಲೆ ಉಚ್ಛಾಟಿಸುವ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳುವ ನಿಷ್ಪಕ್ಷಪಾತ ನ್ಯಾಯದೃಷ್ಟಿ ಸಿದ್ಧರಾಮನದಾಗಿತ್ತೆಂಬುದು ವ್ಯಕ್ತವಾಗುತ್ತದೆ. ಅಷ್ಟೇ ಅಲ್ಲ, ಆತ್ಮಹತ್ಯೆಯ ಕಾರಣದಿಂದ ನರಕಕ್ಕೆ ಬಿದ್ದುಹೋದ ಬಿಲ್ಲೇಶ ಬೊಮ್ಮಯ್ಯನ ಆತ್ಮವನ್ನು ಮುಂದೆ ಸಿದ್ಧರಾಮನೇ ಕಾರುಣ್ಯದಿಂದ ಉದ್ಧಾರ ಮಾಡಿದನೆಂಬ ಸಂಗತಿಯನ್ನೂ ರಾಘವಾಂಕನು (ಸಿದ್ಧರಾ ಚಾ. ೮-೩೨ ರಿಂದ ೩೮) ಪ್ರಸ್ತಾಪಿಸಿ ಪತಿತರಾದವರ ವಿಚಾರದಲ್ಲೂ ಸಿದ್ಧರಾಮನ ಮನಸ್ಸು ಹೇಗೆ ಕಾರುಣ್ಯದಿಂದ ವರ್ತಿಸುತ್ತಿತ್ತೆಂಬುದನ್ನು ಸೂಚಿಸುತ್ತಾನೆ. ಸಿದ್ಧರಾಮನ ಶಿಷ್ಯರಲ್ಲಿ ಮತ್ತೊಬ್ಬನಾದ ‘ಕೇದಾರ ಗುರು’ ವಿನ ಉಲ್ಲೇಖ ಸಿದ್ಧರಾಮ ಚಾರಿತ್ರದಲ್ಲಿ (ಸಿದ್ಧರಾ ಚಾ. ೭-೨೫, ೯-೫೪) ಎರಡುಕಡೆ ಬರುತ್ತದೆ. ‘ಕೇದಾರ ಗುರು’ ಪಂಚಾಚಾರ್ಯರಲ್ಲಿ ಮೊದಲಿಗರಾದ ರೇವಣಸಿದ್ಧ ಪರಂಪರೆಯ ಒಬ್ಬ ‘ಗುರು’ವಾಗಿದ್ದಿರಬಹುದು. ‘ಕೇದಾರ’ ಪಂಚಾಚಾರ್ಯರ ಪ್ರಸಿದ್ಧವಾದ ಪೀಠಗಳಲ್ಲಿ ಒಂದು ಎಂಬುದನ್ನು ಈ ಸಂದರ್ಭದಲ್ಲಿ ನೆನೆಯಬಹುದು. ‘ಕೇದಾರ ಗುರುವಿಗೆ, ಮತ್ತು ಅಣ್ಣ ಬೊಮ್ಮಯ್ಯನಿಗೆ ಸಿದ್ಧರಾಮನು, ತನ್ನ ನಂತರ ಈ ಕ್ಷೇತ್ರದ ಜವಾಬ್ದಾರಿಯನ್ನು ನೋಡಿಕೊಳ್ಳಲು’ ನೇಮವಿತ್ತನೆಂದು ರಾಘವಾಂಕನಲ್ಲಿ (ಸಿದ್ಧರಾ ಚಾ: ೯-೫೪) ಸೂಚಿತವಾಗಿದೆ. ಅಂದರೆ ಕೇದಾರ ಗುರು ಸಿದ್ಧರಾಮನು ಗೊಪೆಯನ್ನು ಪ್ರವೇಶಿಸಿ ಮಹಾಸಮಾಧಿಸ್ಥನಾದ ಮೇಲೆ ಆ ಕ್ಷೇತ್ರದ ಗುರುವಾಗಿ ಮುಂದುವರಿದಿರಬಹುದೆಂದು ಊಹಿಸಬಹುದು. ಕೇದಾರ ಗುರುವಿಗೆ ಸಿದ್ಧರಾಮನು ಉಪದೇಶಿಸಿದಂತಿರುವ ಕೆಲವು ವಚನಗಳೂ ದೊರೆಯುತ್ತವೆ. ಆದರೆ ವಿವಿಧ ವೀರಶೈವ ಕಾವ್ಯ- ಪುರಾಣಗಳಲ್ಲಿ ದೊರೆಯುವ ಮಾಹಿತಿಯ ಮೇರೆಗೆ, ಕೇದಾರ ಗುರುವು ಪಂಚಾಚಾರ್ಯರಲ್ಲಿ ಒಬ್ಬರೂ, ಶ್ರೀಶೈಲದ ಸಿಂಹಾಸನ ಸ್ಥಾಪಕರೂ ಆದ ಪಂಡಿತಾರಾಧ್ಯ ಅಥವಾ ಮಲ್ಲಿಕಾರ್ಜುನ ಪಂಡಿತಾರಾಧ್ಯರ ‘ಮಗ’ (ಶಿಷ್ಯ) ನೆಂದೂ, ಮಲ್ಲಿಕಾರ್ಜುನ ಪಂಡಿತಾರಾಧ್ಯರ ಅನಂತರ ಕೇದಾರ ಗುರುವು ಶ್ರೀಶೈಲ ಸಿಂಹಾಸನವನ್ನೇರಿದನೆಂದೂ ತಿಳಿದುಬರುತ್ತದೆ. (ನೋಡಿ: ಶಿವ ಶರಣ ಕಥಾ ರತ್ನಕೋಶ: ತ.ಸು. ಶಾಮರಾಯ, ಪು ೯೫; ೨೩೩, ೨೩೫). ಈ ಸಂಗತಿಗಳನ್ನು ಗಮನಿಸಿದರೆ, ಕೇದಾರಗುರು ಸಿದ್ಧರಾಮನ ಆದೇಶದ  ಪ್ರಕಾರ ಎಷ್ಟು ಕಾಲ ಸೊನ್ನಲಿಗೆಯ ಶ್ರೀ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದನೋ, ಯಾವಾಗ ಅವನು ಶ್ರೀಶೈಲಕ್ಕೆ ಹಿಂದಿರುಗಿ, ಮಲ್ಲಿಕಾರ್ಜುನ ಪಂಡಿತಾರಾಧ್ಯರ ನಂತರ ಆ ಪೀಠದ ಗುರುವಾದನೋ ಹೇಳಲು ಬಾರದು.[14]

ಬಹುಸಂಖ್ಯೆಯ ಶಿಷ್ಯ ಸಂಪತ್ತ್ತಿನಿಂದ, ಸೊನ್ನಲಿಗೆಯನ್ನು ಒಂದು ಸುಪ್ರಸಿದ್ಧ ಹಾಗೂ ಪ್ರತಿಷ್ಠಿತ ಶೈವಕ್ಷೇತ್ರವನ್ನಾಗಿ ಬೆಳೆಯಿಸಿದ ಸಿದ್ಧರಾಮನು ಅನೇಕ ಮಹಿಮಾವಿಶೇಷಗಳನ್ನೂ, ಸಾಮರ್ಥ್ಯಗಳನ್ನೂ ಪ್ರಕಟಿಸಿದನೆಂದು, ಹರಿಹರ ರಾಘವಾಂಕರಿಂದ ಮೊದಲುಗೊಂಡು, ಅವನನ್ನು ಕುರಿತು ಬರೆದ ಕವಿಗಳೆಲ್ಲರೂ ಚಿತ್ರಿಸಿದ್ದಾರೆ. ರಾಘವಾಂಕನು, ಸಿದ್ಧರಾಮನಿಗೆ, ಒಂದು ಶತಮಾನಕ್ಕೂ ಕಡಿಮೆಯ ಕಾಲಾವಧಿಯಲ್ಲಿ ನಿಂತು ಆತನನ್ನು ಕುರಿತು ಕಾವ್ಯವನ್ನು ಬರೆಯುವ ಹೊತ್ತಿಗೆ, ಸಿದ್ಧರಾಮನು ಜನದ ಮನಸ್ಸಿನಲ್ಲಿ ಆಗಲೇ ‘ಪುರಾಣಪುರುಷ’ ನಾಗಿದ್ದಿರಬಹುದು. ಸಿದ್ಧರಾಮನನ್ನು ಕುರಿತ ಅನೇಕ ಕತೆಗಳು ಪ್ರಚಲಿತವಾಗಿದ್ದಿರಬಹುದು. ಹಾಗೆಯೇ ತನ್ನ ಸೋದರ ಮಾವನಾದ ಹರಿಹರನು ಬರೆದ ಕೆಲವು ರಗಳೆಗಳಲ್ಲಿ (ಲಿಂಗಾರ್ಚನೆಯ ರಗಳೆ, ರೇವಣಸಿದ್ಧೇಶ್ವರನ ರಗಳೆ; ಪ್ರಭುದೇವರ ರಗಳೆ; ಅಮುಗಿದೇವಯ್ಯನ ರಗಳೆ, ಹಾವಿನ ಹಾಳ ಕಲ್ಲಯ್ಯನ ರಗಳೆ) ಚಿತ್ರಿತವಾಗಿರುವ ಸಿದ್ಧರಾಮನಿಗೆ ಸಂಬಂಧಿಸಿದ ಸಂಗತಿಗಳನ್ನೂ ರಾಘವಾಂಕನು ಗಮನಿಸಿರಬಹುದು.[15] ಸಿದ್ಧರಾಮನ ವಚನಗಳ ಪರಿಚಯದಿಂದ ಅವನ ಬದುಕಿನ ಕೆಲವು ಸಂದರ್ಭಗಳನ್ನು ಚಿತ್ರಿಸಲು ರಾಘವಾಂಕನಿಗೆ ಸಹಾಯವಾಗಿರಬಹುದು. ಈ ಎಲ್ಲ ಸಾಮಗ್ರಿಗಳಿಂದ ರಾಘವಾಂಕ ಬರೆದದ್ದು ಸಿದ್ಧರಾಮನ ಜೀವನ ಚರಿತ್ರೆಯನ್ನಲ್ಲ; ಅವನ ಚಾರಿತ್ರವನ್ನು. ಆ ಚಾರಿತ್ರ ಅದನ್ನು ಕಟ್ಟಿದ ಕವಿಯ ಆ ಶತಮಾನದ ಗ್ರಹಿಕೆಯ ಕಾರಣದಿಂದ ‘ಸಿದ್ಧರಾಮ ಪುರಾಣ’ವಾಯಿತು. ಈ ಪುರಾಣದ ಕಣ್ಣಿಗೆ ಸಿದ್ಧರಾಮ ಸಾಕ್ಷಾತ್ ಶಿವನ ಅವತಾರವೇ ಆದನು; ಆ ಅವತಾರದ ಕಾರಣ, ಪ್ರಯೋಜನ, ಉದ್ದೇಶ ಎಲ್ಲವೂ ‘ಪೌರಾಣಿಕ ಮಾರ್ಗ’ವನ್ನೇ ಅನುಸರಿಸಿ ನಿರೂಪಿತವಾಗಿ, ಅನೇಕ ದಂತಕತೆಗಳೂ, ಪವಾಡಗಳೂ, ಅಘಟಿತಘಟನೆಗಳೂ ಹೇರಳವಾಗಿ ಬೆಳೆದವು. ಇವುಗಳಲ್ಲಿ ಕೆಲವನ್ನು  ಸೂಚಿಸುವುದಾದರೆ: ಚಾಮಲದೇವಿ ದಾನಮಾಡಿದ ಭೂಮಿಯಲ್ಲಿ ದೇವಾಲಯ ನಿರ್ಮಾಣಮಾಡಲು ಅಷ್ಟೊಂದು ಹಣವನ್ನೆಲ್ಲಿ ತರುವುದೆಂದು ಚಿಂತಾಕ್ರಾಂತನಾದ ಅಣ್ಣ ಬೊಮ್ಮಯ್ಯನಿಗೆ, ನೆಲವನ್ನು ಶೋಧಿಸಲು ಸಿದ್ಧರಾಮ ಸೂಚಿಸಿದಾಗ ಅಲ್ಲಿ ಬಂಗಾರದ ಕೊಪ್ಪರಿಗೆಯೇ ಸಿಕ್ಕುವುದು; ಕೆರೆಯ ನಡುವಣ ತೆವರಿನ ಮೇಲೆ ಸಿದ್ಧರಾಮನು ಧ್ಯಾನಕ್ಕೆ ಕುಳಿತಿದ್ದಾಗ ಅದೆಲ್ಲಿಂದಲೊ ಜಿಂಕೆಯೊಂದು ಬಂದು ಕೊಂಬಿನಿಂದ ಅವನ ಮೈಯನ್ನು ಉಜ್ಜಿದಾಗ, ಸಿದ್ಧರಾಮನು ಕಣ್ಣುತೆರೆದು ನೋಡಲು ಆ ಜಿಂಕೆ ತನ್ನ ಮೃಗರೂಪದ ಶಾಪದಿಂದ ವಿಮೋಚನೆಗೊಂಡು ಗಂಧರ್ವನಾಗಿ ನಿಲ್ಲುವುದು; ಮೀನಿನ ಹೊಲಸುನಾತದ ಕುಮುದಶೇಖರನೆಂಬಾತನು ಸೊನ್ನಲಿಗೆಯ ದಿವ್ಯತೀರ್ಥದಲ್ಲಿ ಮಿಂದು ತನ್ನ ದುರ್ವಾಸನೆಯನ್ನು ಕಳೆದುಕೊಳ್ಳುವುದು; ಶಿವನು ಸ್ಮರನನ್ನು ಸುಟ್ಟದ್ದು ಸುಳ್ಳೆಂದು ಸ್ಮರಕಳಾತಾಪಸನಾದ ನೀಲಪಟನೆಂಬುವನು ಕೈಲಾಸದಲ್ಲಿ ವಾದಿಸುತ್ತಿದ್ದಾಗ, ಶಿವನು ‘ಸಿದ್ಧರಾಮನನ್ನು ನೀನು ಗೆದ್ದರೆ ನನ್ನನ್ನು ಗೆದ್ದಹಾಗೆ’ ಎಂದು ಹೇಳಲು, ಆ ನೀಲಪಟನು ಮೋಹದ ಹೆಣ್ಣೊಂದನ್ನು ಮುಂದಿಟ್ಟುಕೊಂಡು ಯೋಗದಲ್ಲಿ ಕೂತ ಸಿದ್ಧರಾಮನ ತಪಸ್ಸನ್ನು ಭಂಗಮಾಡಲು ಪ್ರಯತ್ನಿಸಿ ಸೋತದ್ದು; ರಥಕ್ಕೆ ಹೂಡಿದ ಎತ್ತುಗಳು, ಶಿವನ ಸ್ವಯಂಭುಲಿಂಗವನ್ನು ಹೇರಿದ ಬಂಡಿಯನ್ನೆಳೆಯಲಾರದೆ ಸತ್ತು ಹೋದಾಗ, ಸಿದ್ಧರಾಮನು ಅವುಗಳನ್ನು ಬದುಕಿಸಿದ್ದು; ಕುಟಿಲ ವಿದ್ಯಾಸಾಗರನೆಂಬ ಬಿರುದಿನ ಸಿದ್ಧನೊಬ್ಬ ಸಿದ್ಧರಾಮನ ನಿತ್ಯ ಹೋಮಗಳನ್ನು ಕೆಡಿಸಲು ಯತ್ನಿಸಿದಾಗ, ಸಿದ್ಧರಾಮನು ಅವನನ್ನು ತನ್ನ ಹಣೆಗಣ್ಣಿನಿಂದ ದಹಿಸಿದ್ದು; ಈ ಭೂಮಿಯ ಮೇಲೆ ಎಷ್ಟು ದಿವ್ಯಕ್ಷೇತ್ರಗಳುಂಟೋ, ಅವುಗಳಿಗಿಂತಲೂ ಈ ಕಿರಿಯ ಸೊನ್ನಲಿಗೆ ಘನವಾದುದೆಂಬುದನ್ನು ಪ್ರಮಾಣೀಕರಿಸಿ ತೋರಿಸಲು ತನ್ನ ಅಂಗೈಯಲ್ಲಿ ಕೆಂಪಗೆ ಕಾಯಿಸಿದ ಪಂಚಲೋಹದ ಗುಂಡನ್ನು ಹಿಡಿದದ್ದು; ಮಳೆಗಾಲದಲ್ಲಿ ಮೇಲೆರಗಿದ ಸಿಡಿಲನ್ನು ಹಿಡಿದು ತನ್ನ ಖಡ್ಗದ ಮೊನೆಯಲ್ಲಿ ಸಿಕ್ಕಿಸಿದ್ದು; ನರಕದಲ್ಲಿ ಬಿದ್ದ ಬಿಲ್ಲೇಶ ಬೊಮ್ಮಯ್ಯನನ್ನು, ಅವನ ಸಹನರಕವಾಸಿಗಳ ಸಹಿತ ತನ್ನ ಲಾಕುಳದಿಂದ ಮೇಲಕ್ಕೆ ಎತ್ತಿದ್ದು -ಇತ್ಯಾದಿ ಇನ್ನೂ ಅನೇಕ ಪವಾಡಗಳೂ ಉಲ್ಲೇಖಿತವಾಗಿವೆ. ಈ ಎಲ್ಲ ಪವಾಡಗಳೂ ಸಿದ್ಧರಾಮನ ಬದುಕಿನಲ್ಲಿ ನಡೆದಿರಬಹುದಾದ ಕೆಲವು ಘಟನೆಗಳಿಗೆ, ಅವನ ಅಚಲವಾದ ಶ್ರದ್ಧೆಗೆ, ಅವನ ಲೋಕಕಾರುಣ್ಯಕ್ಕೆ ಮತ್ತು ಅವನ ಮಹಿಮಾ ವಿಶೇಷಗಳಿಗೆ ಕೊಟ್ಟ ಸಾಂಕೇತಿಕ ರೂಪಗಳಾಗಿವೆ ಎಂದು ಭಾವಿಸಬೇಕೇ ಹೊರತು, ರಾಘವಾಂಕನಲ್ಲಿ ನಿರೂಪಿತವಾಗಿರುವ ಹಾಗೆಯೇ ಅವು ನಡೆದ ಸಂಗತಿಗಳೆಂದು ತಿಳಿಯಬಾರದು. ಈ ಮಾತನ್ನು ಕೊಂಚ ವಿವರಿಸುವುದಾದರೆ: ಅಣ್ಣ ಬೊಮ್ಮಯ್ಯ ಸಿದ್ಧರಾಮನ ಸೂಚನೆಯ ಮೇರೆಗೆ, ದೇಗುಲ ನಿರ್ಮಾಣಕ್ಕೆ ಮುನ್ನ ಗುದ್ದಲಿಯಿಂದ ನೆಲವನ್ನು ಹಸುನುಮಾಡುವಾಗ, ಚಿನ್ನದ ಕೊಪ್ಪರಿಗೆಯೇ ಕಾಣಿಸಿಕೊಂಡಿತೆಂಬುದು, ಮೇಲು ನೋಟಕ್ಕೆ ಒಂದು ಪವಾಡದಂತೆ ತೋರಬಹುದು. ಆದರೆ ವಾಸ್ತವವಾಗಿ ಅಂದಿನ ರಾಜರು ಅಥವಾ ಶ್ರೀಮಂತರು ತಮ್ಮ ಅಪಾರವಾದ ಧನವನ್ನು ಹೀಗೆ ನೆಲದಲ್ಲಿ ಬಯ್ತಿಡುತ್ತಿದ್ದರೆಂಬುದೂ, ಅದು ಅನೇಕ ವರ್ಷಗಳ ನಂತರ ಮತ್ತಾರಿಗೋ ಹೀಗೆ ನೆಲವನ್ನಗೆಯುವ ಸಂದರ್ಭದಲ್ಲಿ ಪ್ರಾಪ್ತವಾಗುತ್ತಿದ್ದದ್ದೂ ವಾಸ್ತವವಾದ ಸಂಗತಿಗಳಾಗಿವೆ. ಆದರೆ ಆ ನಿಧಿ ದೊರೆತ ಇಂಥ ವಾಸ್ತವ ಸಂದರ್ಭವನ್ನು, ಸಿದ್ಧರಾಮನು ವ್ಯಾಖ್ಯಾನಿಸುವ ಕ್ರಮ ಅವನ ಅಚಲವಾದ ದೈವಶ್ರದ್ಧೆಗೆ ಒಂದು ಸಂಕೇತವಾಗಿದೆ. ಸ್ಮರಕಳಾತಾಪನಾದ ನೀಲಪಟನು, ಮೋಹಕವಾದ ಹೆಣ್ಣೊಂದನ್ನು ತಂದು ಸಿದ್ಧರಾಮನನ್ನು ಪ್ರಲೋಭನೆಗೊಳಿಸಿದ ಸಂದರ್ಭ, ಬಹುಶಃ ಸಿದ್ಧರಾಮನ ಬದುಕಿನಲ್ಲಿ ನಡೆದಿರಬಹುದಾದ ಘಟನೆಯೊಂದರ ಕಥಾರೂಪವಾಗಿದೆ ಎನ್ನಬಹುದು; ಹೀಗೆಯೇ ಇನ್ನಿತರ ಪವಾಡ ಸದೃಶ ಘಟನೆಗಳು ಸಿದ್ಧರಾಮನ ವ್ಯಕ್ತಿತ್ವದ ಹಲವು ಮುಖಗಳನ್ನು ನಿರೂಪಿಸುವ ಸಾಂಕೇತಿಕ ವಿಧಾನಗಳಾಗಿವೆ. ಇಷ್ಟಾಗಿಯೂ ಈ ಎಲ್ಲ ಪವಾಡಗಳನ್ನೂ ಮೀರಿ ಸಿದ್ಧರಾಮನ ಆಧ್ಯಾತ್ಮಿಕ ನಿಲುವುಗಳೂ, ಅವನ ಲೋಕ ಕಾರುಣ್ಯ ಮೂಲವಾದ ಸಾರ್ವಜನಿಕ ಕಾರ‍್ಯಗಳೂ, ಜನದಲ್ಲಿ ಭಕ್ತಿ ಶ್ರದ್ಧೆಗಳನ್ನು ವೃದ್ಧಿಪಡಿಸುವ ಅವನ ಸಾಕಾರನಿಷ್ಠೆಯ ಕ್ಷೇತ್ರ ವಿಸ್ತರಣೆಯ ಚಟುವಟಿಕೆಗಳೂ, ಆತನ ವ್ಯಕ್ತಿತ್ವದ ಮಹತ್ತನ್ನು ಪ್ರಕಟಿಸುತ್ತವೆ. ಈ ಬಗೆಯ ಪಾರಮಾರ್ಥಿಕ ನಿಲುವಿಲ್ಲದೆ, ಕೇವಲ ಯಂತ್ರ ಮಂತ್ರಗಳಲ್ಲಿಯೂ, ಧಾತುವಾದದಲ್ಲಿಯೂ ನಿಪುಣರಾಗಿ, ತಮ್ಮ ಅದ್ಭುತವಾದ ಪವಾಡ ಹಾಗೂ ಸಾಮರ್ಥ್ಯಗಳಿಂದ ಜನರನ್ನು ಬೆರಗುಗೊಳಿಸುತ್ತ ತಮ್ಮ ಬದುಕನ್ನು ವ್ಯರ್ಥಮಾಡಿಕೊಂಡ ಸಿದ್ಧರ ಒಂದು ಪರಂಪರೆಯೇ ಇದೆ ಎಂಬುದನ್ನು ಸಿದ್ಧರಾಮನು ಬಲ್ಲವನಾಗಿದ್ದನು. ಇಂಥ ಅನೇಕ ‘ಸಿದ್ಧ’ರನ್ನು ಶ್ರೀಶೈಲದಲ್ಲಿ ಮತ್ತು ತನ್ನ ಸಮಕಾಲೀನ ಪರಿಸರದಲ್ಲಿ ಸಿದ್ಧರಾಮನು ಕಂಡಿದ್ದಿರಬಹುದು; ಅವರೊಂದಿಗೆ ಮುಖಾಮುಖಿಯಾಗಿರಬಹುದು. ರಾಘವಾಂಕನು ತನ್ನ ಕೃತಿಯಲ್ಲಿ ಸಿದ್ಧರಾಮನನ್ನು ‘ಸಿದ್ಧೇಂದ್ರ’ ‘ಸಿದ್ಧೇಶ್ವರ’ ‘ಸಿದ್ಧವರೇಣ್ಯ’ ‘ಸಿದ್ಧಕುಲತಿಲಕ’ ‘ಸಿದ್ಧಕುಲ ಚಕ್ರೇಶ’ ಇತ್ಯಾದಿ ವಿಶೇಷಣಗಳನ್ನು ಬಳಸಿ ನಿರ್ದೇಶಿಸಿರುವುದನ್ನು ನೋಡಿದರೆ, ಪ್ರಚಲಿತವಾದ ಸಿದ್ಧಪರಂಪರೆಯಿಂದ, ಸಿದ್ಧರಾಮನ ವ್ಯಕ್ತಿತ್ವವು ಭಿನ್ನವೂ ಶ್ರೇಷ್ಠವೂ ಆಗಿತ್ತ್ತೆಂಬುದು ಸೂಚಿತವಾಗಿದೆ.

ಸಿದ್ಧರಾಮನ ಬದುಕಿನ ಮೂರನೆಯ ಹಂತವೆಂದರೆ, ಅಲ್ಲಮ ಪ್ರಭುವಿನೊಂದಿಗೆ ಅವನಿಗೊದಗಿದ ಮುಖಾಮುಖಿ, ಮತ್ತು ಅವನ ಬದುಕಿನಲ್ಲಿ ಸಂಭವಿಸಿದ ಒಂದು ಹೊಸ ತಿರುವು. ಇಲ್ಲಿ ಮುಖ್ಯವಾಗಿ ಮೂರು ಘಟನೆಗಳಿವೆ. ಒಂದು, ಅಲ್ಲಮ ಪ್ರಭು ಒಂದು ದಿನ  ಸೊನ್ನಲಿಗೆಗೆ ಒಂದು ಕೆರೆಯ ಕೆಲಸದಲ್ಲಿದ್ದ ಸಿದ್ಧರಾಮನನ್ನು ಕಂಡು ಮಾತನಾಡಿದ್ದು; ಎರಡು, ಸಿದ್ಧರಾಮನು ತಾನು ಅದುವರೆಗೂ ಕೈಕೊಂಡ ಕ್ಷೇತ್ರಕಾರ‍್ಯ, ಸಾಕಾರ ನಿಷ್ಠೆಯ ಆಚರಣೆಗಳು ಇತ್ಯಾದಿಗಳ ನಿರರ್ಥಕತೆಯನ್ನು ಅರ್ಥಮಾಡಿಕೊಂಡದ್ದು; ಮೂರು, ಅಲ್ಲಮಪ್ರಭುವಿನ ಜತೆಗೆ ಕಲ್ಯಾಣಕ್ಕೆ ಹೋಗಿ, ಅಲ್ಲಿನ ಶರಣಗೋಷ್ಠಿಯಲ್ಲಿದ್ದು, ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ವೀರಶೈವನಾದದ್ದು. ಈ ಮೂರು ಘಟನೆಗಳಲ್ಲಿ ಕೊನೆಯದಾದ, ಸಿದ್ಧರಾಮನು ಚನ್ನಬಸವಣ್ಣನಿಂದ ವೀರಶೈವ ದೀಕ್ಷೆಯನ್ನು  ಕೈಕೊಂಡನೆ ಅಥವಾ ಇಲ್ಲವೆ ಎನ್ನುವುದು ಬಹು ಕಾಲ ವಿವಾದದ ವಿಷಯವಾಗಿ ವಿದ್ಯಾಂಸರಲ್ಲಿ ಒಂದು ಬಗೆಯ ಅಭಿಪ್ರಾಯಗಳ ತಿಕ್ಕಾಟವನ್ನೆ ಉಂಟುಮಾಡಿದ ಸಂಗತಿಯಾಗಿತ್ತು. ಯಾಕೆಂದರೆ, “ಶಾಸನಗಳು ಹಾಗೂ ಹರಿಹರ, ರಾಘವಾಂಕ, ಪಾಲ್ಕುರಿಕೆ ಸೋಮನಾಥ, ಭೀಮಕವಿಗಳ ಕಾವ್ಯಗಳಲ್ಲಿ ಸಿದ್ಧರಾಮನು ಕಲ್ಯಾಣದವರೆಗೆ ಆಗಮಿಸಿ ಶಿವಶರಣರ ಗೋಷ್ಠಿಯಲ್ಲಿ ಭಾಗವಹಿಸಿ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡ ವೃತ್ತಾಂತ ಬರುವುದಿಲ್ಲ. ಆ ವಿವರ ಹದಿನೈದನೆಯ ಶತಮಾನದ ನಂತರ ರಚಿತವಾದ ಪ್ರಭುಲಿಂಗಲೀಲೆ, ಲಿಂಗಲೀಲಾ ವಿಲಾಸ ಚಾರಿತ್ರ, ಶೂನ್ಯ ಸಂಪಾದನೆ, ಚನ್ನಬಸವಪುರಾಣಾದಿ ಗ್ರಂಥಗಳಲ್ಲಿ ದೊರೆಯುತ್ತದೆ. ಹದಿನೈದನೆಯ ಶತಮಾನಕ್ಕಿಂತ ಪೂರ್ವದ ವೀರಶೈವ ಸಾಹಿತ್ಯದಲ್ಲಿ ಸಿದ್ಧರಾಮನ ಕಲ್ಯಾಣಾಗಮನ ಹಾಗೂ ಇಷ್ಟಲಿಂಗ ದೀಕ್ಷೆಗಳ ಪ್ರಸ್ತಾಪ ಬಾರದಿರುವುದನ್ನು ಗಮನಿಸಿ ಆ ಸಂಗತಿಗಳ ಐತಿಹಾಸಿಕತೆಯ ಬಗ್ಗೆ ಸಂದೇಹಪಡಲಾಗಿದ್ದಿತು. ಸಿದ್ಧರಾಮನು ಶೈವನಾಗಿರಬಾರದೇಕೆ ಎಂಬ ವಾದವನ್ನು ಹೂಡಲಾಗಿದ್ದಿತು.”[16] ಈ ಕುರಿತ ಸಮಸ್ಯೆಯ ಕಡೆಗೆ ಮೊದಲು ಗಮನವನ್ನು ಸೆಳೆದು ಅನಂತರದ ಚರ್ಚೆಗೆ ದಾರಿಮಾಡಿದವರು, ಪ್ರೊ.ಡಿ.ಎಲ್. ನರಸಿಂಹಾಚಾರ್ಯರು. ಅವರು ಪ್ರೊ. ಟಿ.ಎಸ್. ವೆಂಕಣ್ಣಯ್ಯನವರೊಡನೆ ರಾಘವಾಂಕನ ಸಿದ್ಧರಾಮಚಾರಿತ್ರವನ್ನು ಮೊಟ್ಟಮೊದಲಿಗೆ ಅಧಿಕೃತವಾಗಿ ಸಂಪಾದಿಸಿ ಪ್ರಕಟಿಸಿದಾಗ (೧೯೪೧) ಅದಕ್ಕೆ ಅವರು ಬರೆದ ವಿದ್ವತ್‌ಪೂರ್ಣವಾದ ಪೀಠಿಕೆಯಲ್ಲಿ ಸಿದ್ಧರಾಮ ಚಾರಿತ್ರದಲ್ಲಿ ದೊರೆಯುವ ಆಧಾರಗಳ ಮೇಲೆ “ಸಿದ್ಧರಾಮ ಚಾರಿತ್ರದ ಸಿದ್ಧರಾಮನು ವೀರಶೈವನೆಂಬುದಕ್ಕಿಂತ ಶೈವನೆಂದು ಹೇಳುವುದು ಹೆಚ್ಚು ಸಂಗತವಾಗಿದೆ”[17] ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಸಿದ್ಧರಾಮನಿಗೆ ವೀರಶೈವಲಿಂಗ ದೀಕ್ಷೆಯಾಯಿತೆಂದು ಹೇಳುವ ವಿಚಾರ, “ಸೇರಿಕೊಂಡದ್ದು ಚಾಮರಸನ ಕಾಲದಿಂದೀಚೆಗೆ”[18], ಅದೂ ಶೂನ್ಯ ಸಂಪಾದನೆಗಳ ಪರಿಷ್ಕರಣಗಳು ಮೇಲಿಂದಮೇಲೆ ಆದ ಸಂದರ್ಭದಲ್ಲಿ ಎನ್ನುತ್ತಾರೆ. ನಾಲ್ಕೂ ಶೂನ್ಯ ಸಂಪಾದನೆಗಳನ್ನು ಅನುಕ್ರಮವಾಗಿ ಗಮನಿಸಿದರೆ, ಸಿದ್ಧರಾಮನಿಗೆ ವೀರಶೈವ ದೀಕ್ಷೆಯಾಯಿತೆಂಬ ವಿಚಾರ ಮೊದಲು ಕಾಣಿಸಿಕೊಳ್ಳುವುದು ಎರಡನೆಯ ಶೂನ್ಯ ಸಂಪಾದನೆಯಲ್ಲಿ (ಕೆಂಚವೀರಣ್ಣೊಡೆಯ: ಕ್ರಿ.ಶ.ಸು ೧೪೯೫) ಮತ್ತು ಮುಂದಿನವರಲ್ಲಿ (ಗುಮ್ಮಳಾಪುರದ ಸಿದ್ಧಲಿಂಗ ದೇವರು ಕ್ರಿ.ಶ. ಸು ೧೫೧೦; ಗೂಳೂರು ಸಿದ್ಧವೀರಣ್ಣೊಡೆಯರು- ಕ್ರಿ.ಶ.೧೫೦೦: ಹಲಗೆಯದೇವರು ಕ್ರಿ.ಶ.ಸು. ೧೫೨೦). ಮೊದಲನೆಯ ‘ಶೂನ್ಯ ಸಂಪಾದನೆಯಲ್ಲಿ ಸಿದ್ಧರಾಮಯ್ಯ ದೇವರ ದೀಕ್ಷಾಕ್ರಮವಿಲ್ಲದಿರುವುದರಿಂದ ಅದನ್ನು ಸೇರಿಸಿ ತಾವು ಶೂನ್ಯ ಸಂಪಾದನೆಯನ್ನು ರಚಿಸುವುದಾಗಿ ಇನ್ನುಳಿದ ಮೂವರು ಹೇಳಿದ್ದಾರೆ’[19]. ಈ ಹಿನ್ನೆಲೆಯಿಂದ ನೋಡಿದಾಗ, ಡಿ.ಎಲ್. ನರಸಿಂಹಾಚಾರ‍್ಯರು ಅಭಿಪ್ರಾಯ ಪಡುವಂತೆ ರಾಘವಾಂಕನ ‘ಸಿದ್ಧರಾಮಚಾರಿತ್ರದ ಸಿದ್ಧರಾಮನು ವೀರಶೈವನೆಂಬುದಕ್ಕಿಂತ ಶೈವನೆಂದು ಹೇಳುವುದು ಹೆಚ್ಚು ಸಂಗತವಾಗಿದೆ’[20] ಎಂಬ ಅಭಿಪ್ರಾಯ ಸಾಧುವಾಗಿಯೇ ಇದೆ. ಆದರೆ ಮುಂದೆ ತಕರಾರು ಎದ್ದುದು ಅವನಿಗೆ ಚನ್ನಬಸವಣ್ಣನವರಿಂದ ವೀರಶೈವ ದೀಕ್ಷೆ ಆಯಿತೆ ಅಥವಾ ಇಲ್ಲವೆ ಎಂಬ ವಿಚಾರವನ್ನು ಕುರಿತು. ಆ ಬಗ್ಗೆ ಬಹು ಕಾಲ ನಡೆದ ಚರ್ಚೆ ಪ್ರತಿ ಚರ್ಚೆಗಳನ್ನು ಇಲ್ಲಿ ಮತ್ತೆ ಪ್ರಸ್ತಾಪಿಸಿ ‘ಕೊಟ್ಟಣವ ಕುಟ್ಟು’ವುದರಿಂದ ಯಾವ ಪ್ರಯೋಜನವೂ ಇಲ್ಲ. ಸಿದ್ಧರಾಮನನ್ನು ಕುರಿತು ಉಪಲಬ್ಧವಾಗಿರುವುದು ಕೇವಲ ರಾಘವಾಂಕನ ಸಿದ್ಧರಾಮ ಚಾರಿತ್ರವೊಂದೇ ಅಲ್ಲ. ಅನಂತರದ ಕಾವ್ಯಗಳು, ಸಿದ್ಧರಾಮನೇ ಬರೆದಿರುವ ವಚನಗಳು, ತ್ರಿವಿಧಿಗಳು ಮತ್ತು ಶೂನ್ಯ ಸಂಪಾದನೆಗಳು ಈ ಎಲ್ಲವನ್ನೂ ಇರಿಸಿಕೊಂಡು ನೋಡಿದರೆ, ಮೊದಲು ಶೈವನಾಗಿದ್ದ ಸಿದ್ಧರಾಮನು, ಅನಂತರ ‘ವೀರಶೈವ’ನಾಗಿ ಹನ್ನೆರಡನೆಯ ಶತಮಾನದ ಬಸವಾದಿ ಶರಣರಲ್ಲಿ ಒಬ್ಬನಾಗಿ, ವೀರಶೈವ ಧರ್ಮದಿಂದ ಅಂಗೀಕೃತನಾಗಿರುವ ಸಂಗತಿ ಸ್ವಯಂ ಸ್ಪಷ್ಟವಾಗಿದೆ. ಹಾಗಾದರೆ ಹದಿನೈದನೆಯ ಶತಮಾನಕ್ಕೆ ಹಿಂದಿನ ಕವಿಕೃತಿಗಳಲ್ಲಿ, ಅದರಲ್ಲಿಯೂ ಸಿದ್ಧರಾಮನ ಬದುಕನ್ನು ಕುರಿತು ಮೊಟ್ಟ ಮೊದಲ ಹಾಗೂ ಬಹುಮಟ್ಟಿಗೆ ಅಧಿಕೃತವೆನ್ನಲಾದ ರಾಘವಾಂಕನ ಸಿದ್ಧರಾಮ ಚಾರಿತ್ರದಲ್ಲಿ, ಕಲ್ಯಾಣದ ಶರಣಗೋಷ್ಠಿಯಿಂದ ಕದಳಿಯ ದಾರಿಯನ್ನು ಹಿಡಿದ ಅಲ್ಲಮನು ಸೊನ್ನಲಿಗೆಯಲ್ಲಿ ಸಿದ್ಧರಾಮನನ್ನು ಭೆಟ್ಟಿಯಾಗಿ, ಆವರಿಬ್ಬರ ಮಾತುಕತೆಯ ನಂತರ ಸಿದ್ಧರಾಮನು ಸೊನ್ನಲಿಗೆಯಲ್ಲಿ ಸಮಾಧಿಸ್ಥನಾಗಿ, ತನ್ನ ಕಾರ‍್ಯಗಳಿಗೆ ಮಂಗಳ ಹಾಡಲು ಮನಸ್ಸು ಮಾಡಿದನೆಂದು ಚಿತ್ರಿಸುವುದರ ಮೂಲಕ, ಕಲ್ಯಾಣದ ಶರಣ ಗೋಷ್ಠಿಗೆ ಅವನು ಹೋಗಲೆ ಇಲ್ಲವೆಂಬಂತೆ ಯಾಕೆ ಕವಿ ಚಿತ್ರಿಸಿದ್ದಾನೆ? ಹರಿಹರನ ‘ಪ್ರಭುದೇವರ ರಗಳೆ’ಯಲ್ಲಿಯೂ ಎರಡು ಮೂರು ಪಂಕ್ತಿಗಳಲ್ಲಿ ಪ್ರಾಸಂಗಿಕವಾಗಿ ಇದೇ ಸಂಗತಿ ನಿರೂಪಿತವಾಗಿದೆ. ಹಾಗಾದರೆ ಸಿದ್ಧರಾಮನು ಕಲ್ಯಾಣದ ಬಸವಾದಿ ಶರಣರ ಸಂಪರ್ಕದಲ್ಲಿ ಕೆಲವು ಕಾಲವಾದರೂ ಇದ್ದಿರಬಹುದೆಂಬ ವಿಷಯ ರಾಘವಾಂಕನಿಗೆ ಗೊತ್ತೇ ಇರಲಿಲ್ಲವೆ? ಒಂದು ವೇಳೆ ರಾಘವಾಂಕನ ಚಿತ್ರಣದಂತೆ ಸಿದ್ಧರಾಮನಿಗೆ ಕಲ್ಯಾಣದ ಬಸವಾದಿ ಶರಣರ ಸಂಪರ್ಕವೇ ಇರಲಿಲ್ಲವೆಂದು ಭಾವಿಸುವುದಾದರೆ, ಸಿದ್ಧರಾಮನೇ ರಚಿಸಿರುವ ಬಹುಸಂಖ್ಯೆಯ ವಚನ ಹಾಗೂ ತ್ರಿವಿಧಿಗಳಲ್ಲಿ ಕಾಣುವ ನಿಲುವುಗಳಾಗಲೀ, ಅಂದಿನ ಸಮಕಾಲೀನ ಪ್ರಮುಖ ವಚನಕಾರರು ತಮ್ಮ ವಚನಗಳಲ್ಲಿ ಸಿದ್ಧರಾಮನ ವಿಚಾರದಲ್ಲಿ ತೋರಿರುವ ಗೌರವ ಪೂರ್ವಕವಾದ ಪ್ರತಿಕ್ರಿಯೆಗಳಾಗಲೀ,[21] ಈ ಒಂದು ವಿಚಾರದಲ್ಲಿ ಸುಳ್ಳು ಹೇಳುತ್ತವೆ ಎಂದು ತಿಳಿಯಬೇಕಾಗುತ್ತದೆ. ಇನ್ನೂ ಒಂದು ಊಹೆಯೆಂದರೆ: ಹರಿಹರನ ‘ಬಸವರಾಜದೇವರ ರಗಳೆ’ಯಂತೆಯೆ, ರಾಘವಾಂಕನ ‘ಸಿದ್ಧರಾಮ ಚಾರಿತ್ರ’ವೂ ಒಂದು ಅಪೂರ್ಣವಾದ, ಅಥವಾ ತದನಂತರ ಕಾರಣಾಂತರಗಳಿಂದ ಅಪೂರ್ಣಗೊಳಿಸಲ್ಪಟ್ಟ ಕೃತಿಯಿರಬಹುದೆ-ಅನ್ನುವುದು; ಅಥವಾ ಹದಿನೈದನೆಯ ಶತಮಾನದ ಅನಂತರ ಸಿದ್ಧರಾಮನನ್ನು ಕುರಿತು ಬರೆದ ಕೃತಿಕಾರರಿಗೆ, ಹಿಂದಿನವರಿಗಿಂತ ಬೇರೆಯಾದ ಅದೆಷ್ಟೋ ಚರಿತ್ರಾಂಶಗಳೂ, ಅನುಪಲಬ್ಧವಾದ ವಚನಗಳೂ, ಮತ್ತಿತರ ಆಕರ ಸಾಮಗ್ರಿಗಳು ದೊರೆತದ್ದರಿಂದ ಅವರು ಸಿದ್ಧರಾಮನ ಬದುಕಿನ ಉತ್ತರಾರ್ಧದ ಚಿತ್ರವನ್ನು ಕಟ್ಟಿಕೊಡಲು ಸಾಧ್ಯವಾಗಿದೆಯೇ- ಅನ್ನುವುದು. ಈ ಹಿನ್ನೆಲೆಯಿಂದ ಹೇಳಬಹುದಾದ ಮಾತೆಂದರೆ “ಹದಿಮೂರನೆಯ ಶತಮಾನದ ಸಾಹಿತ್ಯದಲ್ಲಿ ಸಿದ್ಧರಾಮನ, ಶೈವ ಮಾರ್ಗ ಪ್ರಭಾವಕ್ಕೊಳಗಾದ ಪೂರ್ವ ಚರಿತ್ರೆಯನ್ನು ಮಾತ್ರ ಕಂಡರೆ, ಹದಿನೈದನೆಯ ಶತಮಾನದ ಸಾಹಿತ್ಯದಲ್ಲಿ ಆತನು ಇಷ್ಟಲಿಂಗ ದೀಕ್ಷೆಯನ್ನು ಪಡೆದು ವೀರಶೈವ ಮಾರ್ಗಾವಲಂಬಿಯಾದ ಉತ್ತರ ಚರಿತ್ರೆಯನ್ನು ಕಾಣುತ್ತೇವೆ.”[22]


[1] ‘ಸಿದ್ಧರಾಮ ಶಿವಯೋಗಿ ಕ್ರಿ.ಶ.ಸು ೧೧೩೦ರ ಹೊತ್ತಿಗೆ ಜನಿಸಿ, ಸು. ೧೧೮೦ರ ಹೊತ್ತಿಗೆ ಲಿಂಗೈಕ್ಯನಾಗಿರಬೇಕು ಎಂದು ಸದ್ಯದ ಮಟ್ಟಿಗೆ ನಿರ್ಣಯಿಸಬಹುದಾಗಿದೆ ಎನ್ನುತ್ತಾರೆ ಡಾ.ಎಂ.ಬಿ. ಕೊಟ್ರಶೆಟ್ಟಿಯವರು’ (ಸಿದ್ಧರಾಮ ಶಿವಯೋಗಿ ಪು. ೬೭ ೧೯೭೫)

[2] ಎಂ. ಚಿದಾನಂದ ಮೂರ್ತಿ: ಪಂಚಾಚಾರ್ಯರ ಬಗೆಗಿನ ವಿವಾದಕ್ಕೆ ಅಂತಿಮ ತೆರೆ (ಸಾಧನೆ ಜುಲೈ-ಡಿಸೆಂಬರ್ ೧೯೮೯) ಪು. ೯೨

[3] ಎಂ. ಚಿದಾನಂದ ಮೂರ್ತಿ: ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಪು. ೧೨೯, ೧೩೪, ೧೩೮.

[4] ಎಂ.ಎಂ. ಕಲಬುರ್ಗಿ: ಮಾರ್ಗ. ಸಂಪುಟ ೧ (ಅಭಿನವ ಪಾಶುಪತ ಮತ್ತು ವೀರಶೈವ). ಪು

[5] ಹರಿಹರ: ರೇವಣಸಿದ್ಧೇಶ್ವರನ ರಗಳೆ. (ಸಂ. ಡಾ.ಎಂ.ಎಸ್ ಸುಂಕಾಪುರ). ಸ್ಥಲ-೨, ಪಂ ೬-೯

[6] ಕಪಟರಾಳ ಕೃಷ್ಣರಾವ್: ಕರ್ನಾಟಕ ಸಂಸ್ಕೃತಿಯ ಸಂಶೋಧನೆ (ರೇವಣಸಿದ್ಧನ ಉತ್ಪತ್ತಿಯ ಕಲ್ಪನೆಯ ವಿಕಾಸ: ಹರಿಹರನು ನಿರೂಪಿಸಿದ ರೇವಣ ಸಿದ್ಧೇಶ್ವರನ ಸಮಕಾಲೀನರು) ಪು. ೨೫

[7] ಹರಿಹರ: ರೇವಣಸಿದ್ಧೇಶ್ವರನ ರಗಳೆ (ಸಂ. ಎಂ. ಎಸ್. ಸುಂಕಾಪುರ) ಸ್ಥಲ ೪ ಪು. ೧೭೦

[8] ಹರಿಹರ: ಹಾವಿನಹಾಳಕಲ್ಲಯ್ಯನ ರಗಳೆ (ಸಂ.ಎಂ.ಎಸ್ ಸುಂಕಾಪುರ) ಸ್ಥಲ ೧. ಪಂ ೨೦೮-೨೧೧ ಪು. ೪೫೨.

[9] ಎಂ. ಚಿದಾನಂದ ಮೂರ್ತಿ: ಬಸವಣ್ಣನವರು ಪು ೪೯

[10] ಡಾ.ಎಂ. ಎಂ ಕಲಬುರ್ಗಿಯವರು ನನಗೆ ಬರೆದ ತಾ ೯-೨-೧೯೯೬ರ ಪತ್ರದಲ್ಲಿ.

[11] ರಾಘವಾಂಕ: ಸಿದ್ಧರಾಮಚಾರಿತ್ರ, ಸಂ. (ಸಂ.ಟಿ.ಎಸ್. ವೆಂಕಣ್ಣಯ್ಯ ಮತ್ತು ಡಿ.ಎಲ್. ನರಸಿಂಹಾಚಾರ್) ಪೀಠಿಕೆ xiviii.

[12] ಎಂ.ಎ. ಕಲಬುರ್ಗಿ: ಮಾರ್ಗ ಸಂ ೧ (ಸೊಲ್ಲಾಪುರದ ಕಪಿಲಸಿದ್ಧ ಮಲ್ಲಿಕಾರ್ಜುನ ದೇವಾಲಯ) ಪು ೩೩೪

[13] ಸಂಕೀರ್ಣ ವಚನಗಳ ಸಂಪುಟ-೩: ಸಂ. ಬಿ.ಆರ್. ಹಿರೇಮಠ, ಪ್ರಸ್ತಾವನೆ ಪು. xxiii

[14] ಬಸವಣ್ಣನವರ ಸಮಕಾಲೀನರಾದ ಹಾವಿನಹಾಳ ಕಲ್ಲಯ್ಯ, ಮೆರೆಮಿಂಡಯ್ಯ ಇವರು ತಮ್ಮ ವಚನಗಳಲ್ಲಿ, ಪಂಚಾಚಾರ್ಯರಲ್ಲಿ ನಾಲ್ವರಾದ ರೇವಣಸಿದ್ಧ, ಪಂಡಿತಾರಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯರನ್ನು ಇತರ ಶರಣರ ಜತೆಗೆ ಸ್ಮರಿಸಿರುವುದರಿಂದ, ಬಸವ, ಅಲ್ಲಮ, ಚನ್ನಬಸವ, ಸಿದ್ಧರಾಮರಂತೆ, ಈ ನಾಲ್ವರು ಆಚಾರ್ಯರೂ ಅದೇ ಶತಮಾನದ ಸಮಕಾಲೀನರಾಗುತ್ತಾರೆ. ಅಷ್ಟೇ ಅಲ್ಲ ‘ಮಲ್ಲಿಕಾರ್ಜುನ ಪಂಡಿತರು ಬಸವಣ್ಣನವರ ಸಮಕಾಲೀನರೆಂದೂ, ಅವರು ಕ್ರಿ.ಶ. ೧೧೮೫ರಲ್ಲಿ ನಿಧನರಾದರೆಂಬುದೂ ಈಗ ಬಹುತೇಕ ಒಪ್ಪಿಗೆಯಾದ ಸಂಗತಿ ಎಂದೂ ಡಾ.ಎಂ. ಚಿದಾನಂದ ಮೂರ್ತಿಯವರು ಅಭಿಪ್ರಾಯಪಡುತ್ತಾರೆ. (ನೋಡಿ ಸಾಧನೆ. ೧೮. ೩-೪-೧೯೮೯ ಪು ೯೩ ಮತ್ತು ಪು ೧೦೨) ಈ ಹಿನ್ನೆಲೆಯಿಂದ ಒಂದು ಊಹೆಯನ್ನು ಮಂಡಿಸಬಹುದು. ಅದೇನೆಂದರೆ: ಸಿದ್ಧರಾಮನು ತನ್ನ ಎಳೆಯಂದಿನಲ್ಲಿ ಮಲ್ಲಯ್ಯನಿಂದ ಆಕರ್ಷಿತನಾಗಿ, ಶ್ರೀಶೈಲಕ್ಕೆ ಹೋಗಿ ಅಲ್ಲಿ ಶೈವದೀಕ್ಷೆಯನ್ನೂ ತನ್ನ ಬದುಕಿನ ನಿರ್ದೇಶನವನ್ನೂ ಪಡೆದನೆಂದೂ ರಾಘವಾಂಕ ಹೇಳುತ್ತಾನೆ. ಈ ‘ಮಲ್ಲಯ್ಯ’ ಸಾಕ್ಷಾತ್ ಶಿವನೇ ಎಂದು ರಾಘವಾಂಕನು ಪೌರಾಣಿಕ ವಿಧಾನದಲ್ಲಿ ಚಿತ್ರಿಸಿದರೂ, ಈ ಮಲ್ಲಯ್ಯ ಶ್ರೀಶೈಲದ ಮಠ (ಆಶ್ರಮ)ದಲ್ಲಿದ್ದ ಒಬ್ಬ ಗುರು ಅಥವಾ ಜಂಗಮರೇ ಆಗಿರಬಹುದೆಂಬುದು ನಮ್ಮ ತರ್ಕ. ಈ ಮಲ್ಲಯ್ಯ, ಶ್ರೀಶೈಲ ಸಿಂಹಾಸನದ ‘ಮಲ್ಲಿಕಾರ್ಜುನ ಪಂಡಿತಾರಾಧ್ಯ’ರೇ ಯಾಕಾಗಿರಬಾರದು? ‘ಮಲ್ಲಿಕಾರ್ಜುನ ಪಂಡಿತಾರಾಧ್ಯ’ರನ್ನು ಜನ ಮಲ್ಲಯ್ಯ ಎಂದು ಕರೆದಿರುವುದು ಅಸಂಭವವೇನಲ್ಲ.

[15] ಇತರ ಶಿವಶರಣರನ್ನು ಕುರಿತು ಹೇಗೋ ಹಾಗೆಯೆ ಸಿದ್ಧರಾಮನನ್ನೂ ಕುರಿತು ಹರಿಹರನು ಒಂದು ರಗಳೆಯನ್ನು ಬರೆದಿರುವ ಸಾಧ್ಯತೆಯಿದೆ. ಆದರೆ ಆ ರಗಳೆ ಲಭ್ಯವಾಗಿಲ್ಲ.

[16] ಬಿ.ಬಿ ಹೆಂಡಿ: ಸಿದ್ಧರಾಮನನ್ನು ಕುರಿತ ಸಾಹಿತ್ಯ ಮತ್ತು ಆತನ ಮೂರ್ತಿ ಚಿತ್ರ (ಸಿದ್ಧರಾಮ ಸಾಹಿತ್ಯ ಸಮೀಕ್ಷೆ) ಪು ೭೨, ೭೩

[17] ರಾಘವಾಂಕ: ಸಿದ್ಧರಾಮ ಚಾರಿತ್ರ, ಪೀಠಿಕೆ iii (ಡಿ.ಎಲ್. ನರಸಿಂಹಾಚಾರ್)

[18] ರಾಘಾವಾಂಕ: ಸಿದ್ಧರಾಮ ಚಾರಿತ್ರ ಪೀಠಿಕೆ iii (ಡಿ.ಎಲ್. ನರಸಿಂಹಾಚಾರ್)

[19] ಗುಮ್ಮಳಾಪುರದ ಸಿದ್ಧಲಿಂಗದೇವರು: ಶೂನ್ಯಸಂಪಾದನೆ (ಸಂ. ಆರ್.ಸಿ ಹಿರೇಮಠ) ಪ್ರಸ್ತಾವನೆ. ಪು ೯

[20] ರಾಘವಾಂಕ: ಸಿದ್ಧರಾಮ ಚಾರಿತ್ರದ ಪೀಠಿಕೆ iii (ಸಂ.ಡಿ.ಎಲ್. ನರಸಿಂಹಾಚಾರ್)

[21] ಬಸವಣ್ಣ, ಅಲ್ಲಮ, ಚನ್ನಬಸವಣ್ಣ, ಅಕ್ಕಮಹಾದೇವಿ, ಆದಯ್ಯ, ಮರುಳಶಂಕರದೇವ ಇತ್ಯಾದಿ ಶರಣರು ತಮ್ಮ ವಚನಗಳಲ್ಲಿ ಮುಕ್ತಕಂಠರಾಗಿ ಸಿದ್ಧರಾಮನನ್ನು ಸ್ತುತಿಸಿದ್ದಾರೆ.

[22] ಬಿ.ಬಿ. ಹೆಂಡಿ: ಸಿದ್ಧರಾಮನನ್ನು ಕುರಿತು ರಚಿತವಾದ ಸಾಹಿತ್ಯ ಮತ್ತು ಆತನ ಮೂರ್ತಿ ಚಿತ್ರ (ಸಿದ್ಧರಾಮ ಸಾಹಿತ್ಯ ಸಮೀಕ್ಷೆ) ಪು ೮೫