ಸಿದ್ಧರಾಮನ ಬದುಕನ್ನು ವಿಶೇಷವಾಗಿ ಪ್ರಭಾವಿಸಿ ಮಾರ್ಗದರ್ಶನ ಮಾಡಿದ ವ್ಯಕ್ತಿಗಳು ಮುಖ್ಯವಾಗಿ ಮೂವರು ಎಂದು ಹೇಳಬಹುದು. ಒಬ್ಬರು ರೇವಣಸಿದ್ಧರು; ಮತ್ತೊಬ್ಬರು ಶ್ರೀಶೈಲದ ಮಲ್ಲಯ್ಯನವರು; ಇನ್ನೊಬ್ಬರು ಅಲ್ಲಮ ಪ್ರಭುಗಳು. ಇವರಲ್ಲಿ ರೇವಣಸಿದ್ಧರ ಪ್ರಭಾವ ಮತ್ತು ಮಾರ್ಗದರ್ಶನ ಪರೋಕ್ಷವಾದದ್ದು. ಸೊನ್ನಲಿಗೆಯಲ್ಲಿ ಸಿದ್ಧರಾಮನೆಂಬ ಅಪ್ರತಿಮ ಶಿವಯೋಗಿಯೊಬ್ಬ ಉದಯಿಸುವನೆಂದು ಭವಿಷ್ಯ ನುಡಿದ ರೇವಣರು ಮುಂದೆ ಎಂದಾದರೂ ಸೊನ್ನಲಿಗೆಯಲ್ಲಾಗಲಿ ಬೇರೆಡೆಯಲ್ಲಾಗಲಿ ಸಿದ್ಧರಾಮನನ್ನು ಭೆಟ್ಟಿಯಾದ ಸಂದರ್ಭಗಳು ಎಲ್ಲೂ ದಾಖಲಾದಂತೆ ಕಂಡುಬರುವುದಿಲ್ಲ. ಆದರೆ ಹಾವಿನಹಾಳ ಕಲ್ಲಯ್ಯನಂಥ ಮಹಾಶಿವಭಕ್ತನನ್ನು ಸಿದ್ಧರಾಮನ ನೆರವಿಗಾಗಿ, ಸೊನ್ನಲಿಗೆಗೆ ಅವರು ಕಳುಹಿಸಿದ್ದು, ತಮ್ಮ ಶಿಷ್ಯನಾದ ರುದ್ರಮುನಿದೇವರ ಮೂಲಕ. ಈ ವಿಷಯವನ್ನು ಹರಿಹರ ತನ್ನ ‘ಹಾವಿನಹಾಳ ಕಲ್ಲಯ್ಯನ ರಗಳೆ’ಯಲ್ಲಿ ಪ್ರಸ್ತಾಪಿಸಿದ್ದಾನೆ. ಇನ್ನು ಮಲ್ಲಯ್ಯನವರು ಸಿದ್ಧರಾಮನ ಜೀವನವನ್ನು ನೇರವಾಗಿ ರೂಪಿಸಿದವರು. ಈಗಾಗಲೇ ಪ್ರಸ್ತಾಪಿಸಿರುವಂತೆ, ಶ್ರೀಶೈಲದ ಲಾಕುಳ-ಶೈವ ಮಠದಲ್ಲಿ ಇವರು ಗುರುಗಳಾಗಿದ್ದಿರಬಹುದು. ಸಿದ್ಧರಾಮನೊಳಗಿದ್ದ ಆಧ್ಯಾತ್ಮಿಕ ಜಾಗೃತಿಯನ್ನು ಗುರುತಿಸಿ, ಅವನನ್ನು ಶ್ರೀಶೈಲಕ್ಕೆ ಬರಮಾಡಿಕೊಂಡು, ಅವನಿಗೆ ದೀಕ್ಷೆಯಿತ್ತು, ಕೆಲವು ಕಾಲ ಅವನನ್ನು ತಮ್ಮ ಬಳಿ ಇರಿಸಿಕೊಂಡು, ಅವನ ಮುಂದಿನ ಬದುಕಿಗೆ ಅಗತ್ಯವಾದ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿ, ಲೋಕ ಸೇವೆಗೆ ತಕ್ಕ ‘ಅಧಿಕಾರಿ’ಯನ್ನಾಗಿ ಅವನನ್ನು ರೂಪಿಸಿ ಸೊನ್ನಲಿಗೆಯ ಕಾರ್ಯಕ್ಷೇತ್ರಕ್ಕೆ ಕಳುಹಿಸಿದವರು ಮಲ್ಲಯ್ಯನವರು. ಅಲ್ಲಿಂದ ಬಂದ ಸಿದ್ಧರಾಮನು, ಗುರುವಿನಿಂದ ನಿರ್ದೇಶಿತವಾದ ಕಾರ‍್ಯಗಳನ್ನು ಮಾಡುತ್ತ, ಆ ಕಾರ್ಯಗಳ ಜತೆಗೇ ಅಥವಾ ಆ ಕಾರ್ಯಗಳ ಮೂಲಕವಾಗಿಯೇ ಆಧ್ಯಾತ್ಮಿಕವಾಗಿ ಮುಂದುವರಿಯುತ್ತ, ‘ಶಿವಯೋಗಿ’ ಎಂದು ಸಾಕಷ್ಟು ಹೆಸರು ಗಳಿಸಿದನು. ಈ ಎಲ್ಲ ಕಾರ್ಯಗಳ ಉತ್ಕರ್ಷದ ಹಂತದಲ್ಲಿಯೆ ಮಹಾನುಭಾವಿಯಾದ ಅಲ್ಲಮ ಪ್ರಭು ಸೊನ್ನಲಿಗೆಗೆ ಬರುತ್ತಾರೆ. ಅವರು ಸೊನ್ನಲಿಗೆಗೆ ಬಂದದ್ದು ಯಾಕೆ ಎಂದು ಪ್ರಶ್ನೆಯನ್ನೆತ್ತಿ, ಅದಕ್ಕೊಂದು ಪ್ರಾಯೋಜನಿಕವಾದ ಕಾರಣವನ್ನೂ ಉದ್ದೇಶವನ್ನೂ  ಪ್ರಸ್ತಾಪಿಸುವುದು ಅಸಂಗತವೆಂದೇ ತೋರುತ್ತದೆ. ಯಾಕೆಂದರೆ ಆಧ್ಯಾತ್ಮಿಕ ಹಾಗೂ ಅನುಭಾವಿಕ ಜಗತ್ತಿನ ವ್ಯಕ್ತಿಗಳ ನಡವಳಿಕೆಗಳಲ್ಲಿ ತರ್ಕಾತೀತವಾದ ಉದ್ದೇಶಗಳಿರುತ್ತವೆ. ‘ಶಾಂತರಾದ ಮಹಾಂತರು ವಸಂತದ ಹಾಗೆ ಲೋಕ ಹಿತಕ್ಕಾಗಿ ಸಂಚಾರ ಮಾಡುತ್ತಾರೆ’ ಎಂದ, ಆಚಾರ್ಯ ಶಂಕರರ ಮಾತನ್ನು ಇಲ್ಲಿ ನೆನೆಯಬಹುದು. ಈ ಮಹಾಂತರಾದ ಸಂತರು, ವಸಂತದ ಹಾಗೆ, ಹೊಸ ಹುಟ್ಟನ್ನೂ ಹೊಸ ಎಚ್ಚರವನ್ನೂ ತಮ್ಮ ಪರಿಸರದದಲ್ಲಿ ತರಲು ಸಂಚರಿಸುತ್ತಾರೆ. ಅದರಲ್ಲಿಯೂ ಆ ಯುಗದ ಮಹಾ ಅನುಭಾವಿಯಾದ ಅಲ್ಲಮನ ಬದುಕನ್ನು ನೋಡಿದರಂತೂ ಆತ ಅನೇಕ ಸಾಧಕರ ಅಂತರಂಗದಲ್ಲಿ ಹೇಗೆ ಆಧ್ಯಾತ್ಮಿಕ ಜಾಗ್ರತಿಯನ್ನು ಉಂಟು ಮಾಡಿದನು, ತನ್ನ ಅನುಭಾವಿಕ ಸತ್ವದಿಂದ ಹೇಗೆ ಅವರನ್ನು ಗುರುತಿಸಿದನು, ತಿದ್ದಿದನು, ಮಾರ್ಗದರ್ಶನ ಮಾಡಿದನು ಎಂಬುದನ್ನು ನಾವು ಮನಗಾಣಬಹುದು. ಇಂಥ ಅಲ್ಲಮ, ತನ್ನಂತೆಯೆ ಯೋಗಿಯಾಗಿದ್ದ ಮತ್ತು ಸೊನ್ನಲಿಗೆಯಂಥ ಪರಿಸರವನ್ನು ಒಂದು ಭಕ್ತಿಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿ, ಹೆಸರುವಾಸಿಯಾಗಿದ್ದ ಸಿದ್ಧರಾಮನನ್ನು ಭೆಟ್ಟಿಯಾದದ್ದು ತೀರಾ ಸಹಜವಾದ ಸಂಗತಿಯಾಗಿದೆ.

ಆ ಕಾಲದ ಒಬ್ಬ ಮಹಾ ಅನುಭಾವಿ ಮತ್ತು ಒಬ್ಬ ಶಿವಯೋಗಿ ಇವರಿಬ್ಬರ ಮುಖಾಮುಖಿ, ವಾಸ್ತವವಾಗಿ ಒಂದು ಅಪೂರ್ವವಾದ ಘಟನೆಯಾಗಿದೆ. ಆದರೆ ಈ ಮುಖಾಮುಖಿಯನ್ನು ರಾಘವಾಂಕ ಕೇವಲ ಏಳು ಷಟ್ಪದಿಗಳಷ್ಟು ಪರಿಮಿತಿಯಲ್ಲಿ, ಸ್ವಲ್ಪ ಅವಸರದಿಂದಲೇ ಚಿತ್ರಿಸಿದ್ದರೆ, ಅಲ್ಲಮ ಪ್ರಭುವನ್ನೆ ಕೇಂದ್ರ ವ್ಯಕ್ತಿಯನ್ನಾಗಿ ಮಾಡಿಕೊಂಡು ‘ಪ್ರಭುಲಿಂಗಲೀಲೆ’ಯನ್ನು ಬರೆದ ಚಾಮರಸನು, ಒಂದು ಇಡೀ ಅಧ್ಯಾಯದಷ್ಟು (ಎಪ್ಪತ್ತು ಷಟ್ಟದಿ) ವಿಸ್ತಾರವಾಗಿ ಪವಾಡಮಯವಾಗಿ, ರಂಜಕವಾಗಿ ಚಿತ್ರಿಸಿದ್ದಾನೆ. ಮುಂದಿನ ‘ಶೂನ್ಯ  ಸಂಪಾದನೆ’ಯಲ್ಲಿ ಈ ಸಂದರ್ಭವನ್ನು ಅತ್ಯಂತ ನಾಟ್ಯಮಯವೂ. ಪವಾಡಮಯವೂ ಆದ ರೀತಿಯಲ್ಲಿ ವಿಸ್ತರಿಸಲಾಗಿದೆ. ಇವುಗಳಲ್ಲಿ, ಅತಿ ಸಂಕ್ಷೇಪವೆನ್ನಿಸುವ ಅತೃಪ್ತಿಯನ್ನು ಉಂಟುಮಾಡಿದರೂ, ಚಾಮರಸ ಮತ್ತು ಪ್ರಭುಲಿಂಗಲೀಲೆಯ ನಿರ್ವಹಣೆಗಿಂತ, ರಾಘವಾಂಕನು ಈ ಪ್ರಸಂಗವನ್ನು ನಿರ್ವಹಿಸಿರುವ ಕ್ರಮವೆ ಹೆಚ್ಚು ಸಮರ್ಪಕವೆಂಬಂತೆ ನಮಗೆ ತೋರುತ್ತದೆ. ರಾಘವಾಂಕನ ಪ್ರಕಾರ: ಒಂದು ದಿನ ಸಿದ್ಧರಾಮನು ತನ್ನ ಶಿಷ್ಯರ ಜತೆ ಸೊನ್ನಲಿಗೆಯಲ್ಲಿ ಕೆರೆಯ ಕೆಲಸದಲ್ಲಿರುವಾಗ, ಅಲ್ಲಮನು ಅದನ್ನು ನೋಡಿ ಸಿದ್ಧರಾಮನ ಶಿಷ್ಯರನ್ನು ಉದ್ದೇಶಿಸಿ ‘ಕರೆಯೋ ಒಡ್ಡರೆರೆಯನಂ’ ಅನ್ನುತ್ತಾನೆ. ಆ ಮಾತನ್ನು ಕೇಳಿ ಸಿದ್ಧರಾಮನು, ‘ಜಗಜ್ಜನದ ಅಂತರ‍್ಯಾಮಿ’ಯಾದ ಅಲ್ಲಮನು ತನ್ನ ಗುರುತನ್ನು ಹಿಡಿದರೂ, ಅಥವಾ ತಾನೇನೆಂಬುದನ್ನು ಯೋಗದೃಷ್ಟಿಯಿಂದ ಬಲ್ಲವನಾದರೂ, ಹೀಗೆ ಜರಿಯುವುದನ್ನು ಕಂಡು, ತನ್ನ ‘ಮಕುಟದ ಮರೆಯ ಲಿಂಗ’ವನ್ನು ತೆರೆದು ತೋರಿದಾಗ, ಅದು ತನ್ನ ಅಪೂರ್ವ ತೇಜಸ್ಸಿನಿಂದ ರಾರಾಜಿಸುವುದನ್ನೂ ಮತ್ತು ಅದೇ ನಿರುಪಾಧಿಕವಾದ ಜ್ಯೋತಿರ್ಲಿಂಗವೆ ಸಿದ್ಧರಾಮನ ಬಾಹ್ಯ ಕ್ರಿಯೆಗಳಲ್ಲಿಯೂ ಅಭಿವ್ಯಕ್ತವಾಗಿರುವುದನ್ನೂ ಅಲ್ಲಮ ಗುರುತಿಸಿದನು. ಆದರೂ ಲೋಹದ ಸಂಗದಿಂದ ಕಿಚ್ಚೂ ಕೂಡಾ ಸುತ್ತಿಗೆಯ ಬಡಿತಕ್ಕೆ ಒಳಗಾಗುವಂತೆ, ಆ ಬಗೆಯಾದ ಬಹಿರಂಗದ ಲೋಕೋಪಯೋಗಿ ಕಾರ‍್ಯಗಳಲ್ಲಿ ತೊಡಗಿಕೊಂಡು, ಆತ್ಮವೂ ಗಾಸಿಗೊಳಗಾಗುವುದರಿಂದ ಇದರಿಂದ ನೀನು ವಿಮುಖನಾಗುವುದು ಒಳ್ಳೆಯದು ಎಂದು ಸೂಚಿಸುತ್ತಾನೆ. ಅದಕ್ಕೆ ಸಿದ್ಧರಾಮ ತಾನು ಈ ಜಡಪ್ರಪಂಚದ ವ್ಯವಹಾರಗಳಲ್ಲಿ ತೊಡಗಿಕೊಂಡರೂ, ತನ್ನ ಚೇತನ ಒಂದು ರೀತಿಯಲ್ಲಿ ಅಲಿಪ್ತವಾದ ಸ್ಥಿತಿಯಲ್ಲಿಯೆ ಇದೆ, -ನೀರ ನಡುವಣ ತಾವರೆಯಂತೆ ಎಂದು ಹೇಳುತ್ತ, ‘ಸಾಕಾರನಿಷ್ಠೆ ಭೂತಂಗಳೊಳಗನುಕಂಪೆ’ ಇದೇ ತನ್ನ ಜೀವನದ ಸೂತ್ರವೆಂಬುದನ್ನು ಸ್ಪಷ್ಟಪಡಿಸುತ್ತಾನೆ. ಆ ಮಾತಿಗೆ ಅಲ್ಲಮನು ಒಡಂಬಟ್ಟು ‘ಇನ್ನು ಈ ಕಾಲದಲ್ಲಿ ಮಾನವರ ನಡುವೆ ಇರುವುದು ಬೇಡ; ಹಾಗೆಯೆ ನಾನು ಈ ಲೋಕದಲ್ಲಿ ಇದ್ದೂ ಇಲ್ಲದ ಹಾಗೆ ಇರಬಲ್ಲೆನೆಂಬ ಭ್ರಮೆಯನ್ನು ಬಿಡು’ ಎಂದು ಹೇಳಿ, ಪ್ರಭುವು ಕದಳಿಯ ಮಾರ್ಗವನ್ನು ಹಿಡಿದು ಹೋಗುತ್ತಾನೆ. (ಸಿದ್ಧರಾ.ಚಾ. ೯-೩೮ ರಿಂದ ೪೫).

ರಾಘವಾಂಕನು ನಿರ್ವಹಿಸಿರುವ ಈ ಪ್ರಸಂಗದ ಸೂಕ್ಷ್ಮಗಳೂ, ಒಳನೋಟಗಳೂ ಹಾಗೂ ಗಾಂಭೀರ‍್ಯಗಳೆಲ್ಲವೂ, ಮುಂದೆ ಇದೇ ಪ್ರಸಂಗವನ್ನು ನಿರ್ವಹಿಸಿದ ಚಾಮರಸನಲ್ಲಿ ಹಾಗೂ ಶೂನ್ಯ ಸಂಪಾದನೆಯಲ್ಲಿ ಗಾಳಿಪಾಲಾಗಿವೆ. ಚಾಮರಸನಲ್ಲಿ ಅಲ್ಲಮನು ಸಿದ್ಧರಾಮನ ಸೊನ್ನಲಿಗೆಗೆ ಬಂದಾಗ, ಅನೇಕ ದೇವಾಲಯಗಳನ್ನು ಕಟ್ಟಿಸುವುದರ ಮೂಲಕ, ಕ್ಷೇತ್ರದ ಕಾರ‍್ಯಗಳ ಈ ತೊಡಕಿನಿಂದ, ಸಿದ್ಧರಾಮನು, ಚಿಕ್ಕ ಸಂಸಾರದಿಂದ ತಪ್ಪಿಸಿಕೊಂಡು ಈ ದೊಡ್ಡ ಸಂಸಾರವನ್ನು ಸುತ್ತಿಕೊಂಡು ಖ್ಯಾತಿ ಪೂಜಾಲಾಭದ ಇಚ್ಛೆಗೆ ಈತ ವಶವಾದನೆ, ಅಂದುಕೊಳ್ಳುತ್ತ, ಕಲ್ಲಮೇಲೆ ಕಲ್ಲನ್ನಿರಿಸಿ, ಕಲ್ಲಿಗೊಂದು ಶಿಖರವನ್ನು ಮಾಡಿ ಅದನ್ನು ದೇಗುಲವೆಂದುಕೊಳ್ಳುವವರು ವಡ್ಡರಲ್ಲದೆ ಬೇರೆ ಅಲ್ಲ ಎಂದು, ಸಿದ್ಧರಾಮನ ಶಿಷ್ಯರ ಎದುರು, ಅವರ ಗುರುವನ್ನು ಮೂದಲಿಸುತ್ತಾನೆ. ಆ ಮಾತಿಗೆ, ಗುರುನಿಂದೆಯನ್ನು ಕೇಳಲಾರದೆ ಕೆರಳಿದ ಶಿಷ್ಯರು, ಅಲ್ಲಮನನ್ನು ಹಿಡಿಯಲೆತ್ನಿಸುತ್ತಾರೆ; ಆತ ತೆಕ್ಕೆಗೆ ಸಿಕ್ಕುವುದಿಲ್ಲ; ಕಲ್ಲುಗಳಿಂದ ಆತನನ್ನು ಹೊಡೆಯುತ್ತಾರೆ. ಆದರೆ ಆ ಕಲ್ಲುಗಳೊಂದೂ ಅಲ್ಲಮನಿಗೆ ತಗುಲದೆ, ಆತ ತನ್ನ ಕಡೆ ಬೀರಿದ ಆ ಕಲ್ಲುಗಳ ರಾಶಿಯ ಮೇಲೆಯೆ ನಿಂತು ನಗುತ್ತಾನೆ. ಈ ಜಗ್ಗಾಟದ ನಡುವೆ, ತನ್ನನ್ನು ವಡ್ಡನೆಂದು ಬಯ್ದುದರಿಂದ ಹೀಗಾಯಿತೆಂಬುದನ್ನು ತಿಳಿದು ಸಿದ್ಧರಾಮನೂ ಕೆರಳಿ, ‘ಆರು ನಮ್ಮನು ಜರಿದವನು ಜಂಭಾರಿಯೋ, ದನುಜಾರಿಯೋ, ಕಾಮಾರಿಯೋ, ಅವನ ನಾಲಗೆಯ ಬೇರು ಸಹಿತವೆ ಕೀಳುವೆನು ಎನುತ ಗಜರಿ ಘರ್ಜಿಸು’ತ್ತಾನೆ (ಪ್ರಲಿಂ.ಲೀ ೧೩-೫ರಿಂದ ೨೩), ಆಗ  ಅಲ್ಲಮನು ಯೋಗಿಯಾದ ನಿನಗೇ ಇಷ್ಟೊಂದು ಕೋಪಾಟೋಪವೇತಕ್ಕೆ ಎಂದಾಗ, ಸಿದ್ಧರಾಮನು ಆತನಾರೆಂದರಿಯದೆ ತನ್ನ ಹಣೆಗಣ್ಣನ್ನು ತೆರೆದು ಕಿಚ್ಚನ್ನು ಕೆದರುತ್ತಾನೆ. ಆಗ ಅಲ್ಲಮ ಆ ಹಣೆಗಣ್ಣಿನ ಬೆಂಕಿಯನ್ನು ಕೃಪೆಯಿಂದ ಅಡಗಿಸುತ್ತಾನೆ. ತನ್ನ ಅವಿವೇಕಕ್ಕೆ ತಾನೇ ನಾಚಿಕೊಂಡ ಸಿದ್ಧರಾಮನು, ಪ್ರಭುವಿಗೆ ಶರಣಾಗುತ್ತಾನೆ. ಅನಂತರ ಅಲ್ಲಮನು ಸಿದ್ಧರಾಮನಿಗೆ ‘ಜೀವ ಪರಮರನು ಒಂದು ಮಾಡುವ ಶಕ್ತಿ-ಭಕ್ತಿಗಳ ಹೊಂದಿಕೆಯನ್ನು ಉಪದೇಶಿಸಿ’ (ಪ್ರಲಿಂ.ಲೀ. ೧೩-೨೩ ರಿಂದ ೭೧), ಸಿದ್ಧರಾಮನನ್ನು ಕೂಡಿಕೊಂಡು ಬಸವರಾಜನನ್ನು ನೋಡಲು ಕಲ್ಯಾಣದ ಕಡೆಗೆ ಹೊರಡುತ್ತಾನೆ. (ಪ್ರಲಿಂ.ಲೀ. ೧೪-೩). ಪ್ರಭುಲಿಂಗಲೀಲೆಯ ಈ ನಿರೂಪಣೆಯನ್ನು ಅನುಸರಿಸಿ ‘ಶೂನ್ಯಸಂಪಾದನೆ’ ಈ ಪ್ರಸಂಗವನ್ನು ಇನ್ನಷ್ಟು ನಾಟ್ಯಮಯವನ್ನಾಗಿ ವಿಸ್ತರಿಸಿದೆ: ಇಲ್ಲಿಯೂ ಸಿದ್ಧರಾಮನನ್ನು ಕುರಿತು ಅಲ್ಲಮನು ಆಡಿದ ಮಾತಿಗೆ ಕೆರಳಿ ಸಿದ್ಧರಾಮನ ಶಿಷ್ಯರು, ಆತನನ್ನು ಕಲ್ಲುಗಳಿಂದ ಹೊಡೆಯುತ್ತಾರೆ. ಆದರೆ ಅಲ್ಲಮನನ್ನು ತಾಗಿ ಉಂಟುಮಾಡಿದ ಘಾಯಗಳೆಲ್ಲವೂ ಮರಳಿ ಆ ಶಿಷ್ಯರಿಗೇ ಬಂದು ತಾಗುತ್ತವೆ. ಸಿದ್ಧರಾಮನ ಹಣೆಗಣ್ಣಿನ ಮಹಾಜ್ವಾಲೆ ಅಲ್ಲಮನನ್ನು ಸುಡಲು ಬಂದಾಗ, ಆತ ಅದನ್ನು ತನ್ನ ಅಂಗಾಲಿನಲ್ಲಿ ಉಪಶಮಿಸಿ, ಮತ್ತೆ ಅದನ್ನು ಸಿದ್ಧರಾಮನ ಕಡೆಗೇ ನಿರ್ದೇಶಿಸಿದಾಗ, ಸಿದ್ಧರಾಮನು ವಿವೇಕದಿಂದ ತಿಳಿದು ನೋಡಿ, ಈತನೇ ಸಾಕ್ಷಾತ್ ಶಿವನೆಂದರಿತು ಅಲ್ಲಮನ ಪಾದಕ್ಕೆ ಬಿದ್ದು ಶರಣಾಗುತ್ತಾನೆ. ಅಲ್ಲಿಂದ ಅಲ್ಲಮನನ್ನು ತನ್ನ ಮಠಕ್ಕೆ ಕರೆದುಕೊಂಡು ಹೋಗಿ, ಪೂಜಿಸುತ್ತಾನೆ. ಅಲ್ಲಿ ಸಿದ್ಧರಾಮಯ್ಯನಿಗೆ ಪ್ರಭುದೇವರು ಸರ್ವಶೂನ್ಯ ಸಮಾಧಿಯ ನಿಲುವನ್ನು ನಿರೂಪಿಸುತ್ತಾರೆ. ಆದರೆ ‘ಸಿದ್ಧರಾಮಯ್ಯದೇವರು ಇಷ್ಟಲಿಂಗವಿಡಿದು ನಿಜಲಿಂಗೈಕ್ಯವ ಕಾಂಬ ಪರಿ ಹೇಗೆಂದು ಬೆಸಗೊಳ್ಳಲು’ ಅಲ್ಲಮ ‘ಇಷ್ಟಲಿಂಗ ಪ್ರಾಣಲಿಂಗವೆಂಬ ಭೇದವನಾರು ಬಲ್ಲರು ಹೇಳಾ, ಇಂತು ಷಡುಸ್ಥಲವ ಸಾಧಿಸಿ ಒಂದುಮಾಡಿಕೊಂಡಿಪ್ಪ ಕರಸ್ಥಲದ ಅನುವ ಗುಹೇಶ್ವರನ ಶರಣ ಸಂಗನ ಬಸವಣ್ಣ ಬಲ್ಲ, ಬೆಸಗೊಂಬ ಬಾರಾ ಸಿದ್ಧರಾಮಯ್ಯಾ’ (ಶೂನ್ಯಸಂಪಾದನೆ: ಸಂ. ಡಾ. ಆರ್.ಸಿ. ಹಿರೇಮಠ (೧೯೭೧ ಪು ೪೯-೯೦) ಎಂದು, ಅಲ್ಲಮನು ಸಿದ್ಧರಾಮನನ್ನು ಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಚನ್ನಬಸವಣ್ಣನವರಿಂದ ಅವನಿಗೆ ಇಷ್ಟಲಿಂಗ ದೀಕ್ಷೆಯನ್ನು ಕೊಡಿಸುತ್ತಾನೆ.

ಅಲ್ಲಮ ಸಿದ್ಧರಾಮರ ಮುಖಾಮುಖಿಯನ್ನು ಚಿತ್ರಿಸಿರುವ ಈ ಮೂರು ಕೃತಿಗಳ ಸಂದರ್ಭವನ್ನು ಗಮನಿಸಿದರೆ, ಚಾಮರಸ ಮತ್ತು ಪ್ರಭುಲಿಂಗ ಲೀಲೆಗಳೆರಡರಲ್ಲಿಯೂ ಈ ಸಂದರ್ಭ ತೀರಾ ರೂಕ್ಷವಾಗಿಯೂ, ಕೇವಲ ಜನಪ್ರಿಯವಾದ ಪವಾಡ ಸದೃಶ ಘಟನೆಗಳಿಂದ ರಂಜಕವಾಗಿಯೂ, ಮತ್ತು ಅಲ್ಲಮಪ್ರಭುವನ್ನು ವೈಭವೀಕರಿಸುವ ಏಕೈಕ ಉದ್ದೇಶದಿಂದಲೂ, ಕೂಡಿರುವಂತೆ ಭಾಸವಾಗುತ್ತದೆ. ಈ ಚಿತ್ರಣಗಳನ್ನು ನೋಡಿದರೆ, ಸಿದ್ಧರಾಮನಂಥ ಯೋಗಿ ತನ್ನ ಸಮಕಾಲೀನತೆಯ ಮತ್ತೊಬ್ಬ ಯೋಗಿಯನ್ನು ಗುರುತಿಸಲಾರದಷ್ಟು ಅಪ್ರಬುದ್ಧನೂ, ತನ್ನನ್ನು ವಡ್ಡರಾಮನೆಂದು ಕರೆದವರ ಮೇಲೆ ಕ್ರೋಧಾವಿಷ್ಟನಾಗುತ್ತ, ತನ್ನ ಹಣೆಗಣ್ಣಿನ ಬೆಂಕಿಯನ್ನು ಬಿಡುವ, ಕ್ಷುದ್ರಗಾರುಡ ವಿದ್ಯೆಗಳನ್ನು ಕೈವಶ ಮಾಡಿಕೊಂಡ ಅಪಕ್ವ, ಕುಟಿಲ ಸಿದ್ಧನೂ ಆಗಿದ್ದನೆ- ಎಂದು ಆಶ್ಚರ್ಯವಾಗುತ್ತದೆ.  ಈ ಹಿನ್ನೆಲೆಯಲ್ಲಿ ರಾಘವಾಂಕನ ಚಿತ್ರಣದ ಅಂತರಾರ್ಥಗಳೂ, ಗಾಂಭೀರ್ಯವೂ ತುಂಬ ಪ್ರಶಂಸನೀಯವಾಗಿವೆ. ರಾಘವಾಂಕನ ನಿರೂಪಣೆಯಲ್ಲಿ- ಅದು ತೀರಾ ಸಂಕ್ಷೇಪವಾಗಿ ಚಿತ್ರಿತವಾಗಿದ್ದರೂ ಅಲ್ಲಮ ಸಿದ್ಧರಾಮರಿಬ್ಬರೂ ಪರಸ್ಪರ ಗುರುತಿಸಿಕೊಳ್ಳುತ್ತಾರೆ. ಅಲ್ಲಮ ‘ಕರೆಯೋ ಒಡ್ಡರೆರೆಯನಂ’ ಎಂದಾಗ, ಸಿದ್ಧರಾಮನು, ‘ಜಗಜ್ಜನದ ಅಂತರ‍್ಯಾಮಿಯಾದ ಅಲ್ಲಮನು ತನ್ನ ನಿಲುವೇನೆಂಬುದನ್ನು ಗುರುತುಹಿಡಿದರೂ, ಇವರು ಹೀಗೆ ತನ್ನನ್ನು ಜರಿಯಲು ಬೇರೆಯ ಕಾರಣವಿರಬಹುದೆಂದು ತರ್ಕಿಸಿ ಒಂದಿಷ್ಟೂ ಬೇಸರಪಡದೆ ನಸುನಗುತ್ತ ತನ್ನ ಉತ್ತಮಾಂಗದ ‘ಮಕುಟದ ಮರೆಯಲಿಂಗ’ವನ್ನು ತೋರಿಸುತ್ತಾನೆ. ಆಗ ಅಲ್ಲಮನಿಗೆ ‘ಶೈತ್ಯ ಪ್ರಜ್ವಲಿತ ಕಾಂತಿಯಿಂದೆಸೆವ ನಿರುಪಾಧಿಕ ಲಿಂಗ’ವೂ, ಅದು ಸಿದ್ಧರಾಮನ ‘ಬಾಹ್ಯಕ್ರಿಯೆ’ಗಳಲ್ಲಿ ಬಳಕೆಯಾಗುತ್ತಿರುವ ಕ್ರಮವೂ ಗೋಚರವಾಗುತ್ತದೆ. (ಸಿದ್ಧರಾ.ಚಾ: ೯-೪೦). ರಾಘವಾಂಕನ ಈ ವರ್ಣನೆಯನ್ನು ಸಾಮಾನ್ಯ ದೌರ್ಬಲ್ಯದಿಂದ, ಪವಾಡಗಳ ಪರವಾಗಿ ವ್ಯಾಖ್ಯಾನಿಸಬಾರದು; ಅಥವಾ ವಾಚ್ಯವಾಗಿ ಸಿದ್ಧರಾಮನ ತಲೆಯೊಳಗಿನ ಜಟೆಯೊಳಗೊಂದು ಜ್ಯೋತಿರ್ಮಯವಾದ ಲಿಂಗವಿತ್ತೆಂದು, ಪ್ರತಿಭಾದರಿದ್ರವಾಗಿ ವ್ಯಾಖ್ಯಾನಿಸಲೂ ಬಾರದು. ಇಲ್ಲಿರುವುದು ಒಂದು ಯೌಗಿಕಾನುಭವದ ಪ್ರತಿಮಾರೂಪ. ಅಂದರೆ ಮಹಾನುಭಾವಿಯಾದ ಅಲ್ಲಮನು, ಮತ್ತೊಬ್ಬ ಯೋಗಿಯಾದ ಸಿದ್ಧರಾಮನಲ್ಲಿ ಅನುಭೂತವಾದ ಈಶ್ವರೀ ಭಾವವನ್ನೂ ಮತ್ತು ಆದು ಆತನ ದೈನಂದಿನ ಲೋಕ ಜೀವನದಲ್ಲೂ ಅಭಿವ್ಯಕ್ತವಾಗುತ್ತ ಕಾರ್ಯೋನ್ಮುಖವಾಗಿರುವ ಕ್ರಮವನ್ನೂ ಗುರುತಿಸಿದನು ಎಂಬುದು ಈ ವರ್ಣನೆಯ ಅರ್ಥ. ಈ ಮುಖಾಮುಖಿಯ ಸಂದರ್ಭದಲ್ಲಿ ಸಿದ್ಧರಾಮನು ತನ್ನ ಜೀವನೋದ್ದೇಶವನ್ನು, ಹಾಗೂ ನಿಲುವನ್ನು ಸ್ಪಷ್ಟಪಡಿಸಿದಾಗ, ಅದನ್ನು ಗ್ರಹಿಸಿದ ಅಲ್ಲಮನು ಸಿದ್ಧರಾಮನಿಗೆ ‘ಇನ್ನು  ನೀನು ಈ ಬಗೆಯ ಕಾರ‍್ಯಗಳಲ್ಲಿ ತೊಡಗುವುದು ಸಾಕು’ ಎಂದು ಹೇಳುತ್ತಾನೆ. ಈ ಮಾತನ್ನು ಅಲ್ಲಮನು ಸಿದ್ಧರಾಮನಿಗೆ ಹೇಳಲು ಕಾರಣವೇನೆಂಬುದನ್ನು ನಾವು ವಿಚಾರಮಾಡಬೇಕು.

ಅಲ್ಲಮನು ಸೊನ್ನಲಿಗೆಗೆ ಬರುವ ವೇಳೆಗೆ ಸಿದ್ಧರಾಮನ ವಿವಿಧ ಕ್ಷೇತ್ರ ಕಾರ‍್ಯಗಳು, ಸಾಕಷ್ಟು ವ್ಯಾಪಕವಾಗಿ ನೆಲೆಗೊಂಡಿದ್ದವು. ಅವನು ಕಟ್ಟಿಸಿದ ದೇವಾಲಯಗಳಲ್ಲಿ ಬಹುಬಗೆಯ ನಿತ್ಯ ನೇಮಗಳೂ, ಹೋಮಗಳೂ, ಅಭಿಷೇಕಗಳು, ಉತ್ಸವಗಳೂ ಭರಾಟೆಯಿಂದ ನಡೆಯುತ್ತಿದ್ದವು. ಅವನು ನಿರ್ಮಿಸಿದ ಸತ್ರಗಳಲ್ಲಿ ನಿತ್ಯವೂ ಅನ್ನಸಂತರ್ಪಣೆ ನಡೆಯುತ್ತಿತ್ತು. ದಾನ ಧರ್ಮಗಳು- ಗೋದಾನ, ಭೂದಾನ, ವಸ್ತ್ರದಾನಾದಿಗಳು ನಿರಾತಂಕವಾಗಿ ಸಾಗಿದ್ದವು; ಸಾಮೂಹಿಕ ಮದುವೆಗಳೂ ಏರ್ಪಾಟಾಗಿದ್ದವು. ಅತ್ತ ಸಿದ್ಧರಾಮನೆ ತನ್ನ ಶಿಷ್ಯರ ಜತೆ ನಿಂತು ನಿರ್ಮಾಣಮಾಡಿದ ಕೆರೆ ತುಂಬಿತುಳುಕುತಿತ್ತು. ಬಾವಿಗಳೂ ಅರವಟ್ಟಿಗೆಗಳೂ ಇದಕ್ಕೆ ಪೂರಕವಾಗಿ ನಿರ್ಮಾಣಗೊಂಡಿದ್ದವು. ಇಷ್ಟಿದ್ದರೆ ಸಾಕಲ್ಲ ಜನರನ್ನು ಸೆಳೆಯಲು. ಹೀಗಾಗಿ ಸೊನ್ನಲಿಗೆ ಒಂದು ಪವಿತ್ರ ಕ್ಷೇತ್ರವಾಗಿ, ನಿತ್ಯನಿಬಿಡ ಜನಸಂದಣಿಯಿಂದ ಗಿಜಿಗುಟ್ಟುವ ಸ್ಥಳವಾಯಿತೆಂಬುದು ಸಹಜವಾದ ಸಂಗತಿಯಾಗಿದೆ. ಈ ಕ್ಷೇತ್ರದ ಗುರು ಸಿದ್ಧರಾಮನನ್ನು ಕಾಣುವ, ಅವನಿಂದ ಆಶೀರ್ವಾದ ಪಡೆಯುವ, ಭಕ್ತ ಸಮೂಹಕ್ಕೇನೂ ಕೊರತೆಯಿರಲಿಲ್ಲ. ಬರಬರುತ್ತ ಈ ಜನಗಳ ಕಾಟ ಎಷ್ಟಾಯಿತೆಂದರೆ ‘ಎಲ್ಲಾದರೂ ಹಾವು ಕಚ್ಚಿದವರನ್ನು ಹೊತ್ತು ತಂದು, ಮಠದ ಬಾಗಿಲಲ್ಲಿ ನಿಂತು ಔಷಧ- ಮಂತ್ರಗಳಿಗಾಗಿ ಬೇಡುವ, ನಾನಾ ಬಗೆಯ ರೋಗ- ರುಜಿನಗಳಿಂದ ಸತ್ತವರನ್ನು ತಂದು ಬದುಕಿಸು ಎಂದು ಮಹಮನೆಯ ಬಾಗಿಲಲ್ಲಿ ಜಮಾಯಿಸುವ, ಅನೇಕ ಸಂಕಷ್ಟಗಳಿಗೆ ಸಿಕ್ಕಿ ಅದನ್ನು ಪರಿಹರಿಸು ಎಂದು ಆರ್ತರಾಗಿ ಒರಲುವ’ (ಸಿದ್ಧರಾ ಚಾ: ೯-೩೭)- ಜನಸಂದಣಿ ಮಿಗಿಲಾಗಿತ್ತು. ಇಂಥ ಸಂದರ್ಭದಲ್ಲಿ ಅಲ್ಲಮನು ಬಂದದ್ದು ಸೊನ್ನಲಿಗೆಗೆ. ಬಂದವನು ನೋಡುತ್ತಾನೆ, ಸೊನ್ನಲಿಗೆ ಭಕ್ತಿಯ ಹುಚ್ಚಿನಿಂದ ತುಳುಕುವ ಒಂದು ಜಾತ್ರೆಯ ಗೊಂದಲದಂತಿದೆ. ದಿನವೂ ನಡೆಯುವ ಕ್ಷೀರಾಭಿಷೇಕ, ಸೊಲಿಗೆ ಸೊಲಿಗೆಗಳ ತುಪ್ಪದಭಿಷೇಕ, ಅರ್ಥವಿಲ್ಲದ ನಿತ್ಯನೇಮಗಳೂ, ಹೋಮಹವನಗಳೂ, ದಿನವೂ ಬೆಳಿಗ್ಗೆ ಸಂಜೆ ಪೂಜೆಯ ಸಂದರ್ಭದಲ್ಲಿ ಮೊಳಗುವ ವಿವಿಧ ವಾದ್ಯಗಳ ಅಬ್ಬರಗಳೂ, ಅರವಟ್ಟಿಗೆ, ಅನ್ನಸತ್ರ, ದಾನ-ಧರ್ಮಾದಿ ಕಾರ್ಯಗಳೂ ಇವುಗಳೆಲ್ಲವನ್ನೂ ಮತ್ತು ಇವುಗಳೆಲ್ಲವನ್ನೂ ಸುತ್ತಿಕೊಂಡು ಅವುಗಳಲ್ಲಿಯೇ ಕಳೆದು ಹೋಗುತ್ತಿರುವಂತೆ ತೋರಿದ ಯೋಗಿಯಾದ ಸಿದ್ಧರಾಮನ ‘ಅವಸ್ಥೆ’ಯನ್ನೂ ನೋಡಿ ಅಲ್ಲಮನಿಗೆ ಆಶ್ಚರ್ಯವೂ, ಮೆಚ್ಚಿಗೆಯೂ, ಕನಿಕರವೂ ಏಕಕಾಲಕ್ಕೆ ಉಂಟಾಗಿರಬೇಕು. ಸಿದ್ಧರಾಮನೊಬ್ಬ ಯೋಗಿಯೆಂಬುದೇನೋ ನಿಜ. ಆತನು ಈ ಕ್ಷೇತ್ರದ ಮೂಲಕ, ವಿವಿಧ ಆಚರಣೆಗಳ ಮೂಲಕ ಜನರಲ್ಲಿ ಉಂಟುಮಾಡುತ್ತಿರುವ ಸಾಕಾರ ನಿಷ್ಠೆಯೂ, ಅವನ ಲೋಕಾನುಕಂಪೆಯ ಕಾರ‍್ಯವಿಸ್ತಾರಗಳೂ ಮೌಲಿಕವಾದುವೆಂಬುದೂ ನಿಜವೆ. ಆದರೆ ನಿಜವಾದ ಅಧ್ಯಾತ್ಮದ ಹಾದಿಯಲ್ಲಿ ಮುಂದೆ ಹೋಗಬೇಕಾದ ವ್ಯಕ್ತಿ ಇವುಗಳ ಮಿತಿಯನ್ನು ಅರಿತಿರಬೇಕಾಗುತ್ತದೆ. ತಾನು ಎಷ್ಟೇ ನಿಷ್ಕಾಮದಿಂದ ಕರ್ಮದಲ್ಲಿ ತೊಡಗುತ್ತೇನೆ ಅಂದುಕೊಂಡರೂ, ಅದು ಹೇಗೋ ಆಯಾ ಕರ್ಮಗಳ ತೊಡಗುವಿಕೆಯಿಂದ ಅರಿವುಗೊಡದಂತೆ ಹುಟ್ಟಿಕೊಳ್ಳುವ ಅಹಂಕಾರಗಳೂ, ಕೀರ್ತಿಕಾಮನೆಗಳೂ ವ್ಯಕ್ತಿತ್ವವನ್ನು ವರಿಸಿಕೊಳ್ಳುತ್ತವೆ. ಈ ಸಂಗತಿಯನ್ನು ಸಿದ್ಧರಾಮನಿಗೆ ಅರಿವು ಮಾಡಿಕೊಟ್ಟು, ನೀನು ‘ಇದ್ದೂ ಇಲ್ಲದ ಹಾಗೆ ಇರುವೆನೆಂಬ ಭ್ರಮೆಯನ್ನು ಬಿಟ್ಟು’ ನಿಜವಾದ ಶಿವಯೋಗದ ನಿಲುವಿಗೆ ಏರಬೇಕೆಂದು, ಮಾರ್ಗದರ್ಶನ  ಮಾಡುವುದೆ ಅಲ್ಲಮನ ಬರವಿನ ಮುಖ್ಯ ಉದ್ದೇಶವಾಗಿತ್ತು.

ಅಲ್ಲಮ ಸಿದ್ಧರಾಮರ ಈ ಮುಖಾಮುಖಿಯ ನಂತರ, ಪ್ರಭುದೇವನು ಕದಳಿಯ ಮಾರ್ಗವನ್ನು ಹಿಡಿಯಲಾಗಿ ಸಿದ್ಧರಾಮನು ತಾನು ಬಂದ ಕಾರ್ಯ ಮುಗಿಯಿತೆಂದು ಗೊಪೆಯನ್ನು ಪ್ರವೇಶಿಸಿದಂತೆ ರಾಘವಾಂಕನು ನಿರೂಪಿಸಿದರೆ, ಅಲ್ಲಮನು ಸಿದ್ಧರಾಮನಿಗೆ ಜೀವ-ಶಿವರನ್ನು ಒಂದು ಗೂಡಿಸುವ ಶಕ್ತಿ-ಭಕ್ತಿಗಳ ಸಾಮರಸ್ಯವನ್ನು ಉಪದೇಶಿಸಿ ಅವನನ್ನು, ಕಲ್ಯಾಣಕ್ಕೆ ಕರೆದುಕೊಂಡು ಹೋಗಿ ಬಸವಣ್ಣನವರಿಗೆ ಪರಿಚಯ ಮಾಡಿಕೊಡುತ್ತಾನೆ- ಎಂದು ಚಾಮರಸನು ಈ ಸಂದರ್ಭವನ್ನು ಸೊನ್ನಲಿಗೆಯಿಂದ, ಕಲ್ಯಾಣದ ಅನುಭವ ಮಂಟಪದವರೆಗೆ ವಿಸ್ತರಿಸಿದ್ದಾನೆ; ಅನಂತರ ಶೂನ್ಯ ಸಂಪಾದನಕಾರರು ಹೀಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮನು ಶರಣರ ಸಂಗದಲ್ಲಿ ನಿಂತು ಚನ್ನಬಸವಣ್ಣನವರಿಂದ ವೀರಶೈವ ಧರ್ಮದ ಇಷ್ಟಲಿಂಗ ದೀಕ್ಷೆ ಪಡೆದಂತೆ ವರ್ಣಿಸಿದ್ದಾರೆ. ಈ ಕಥೆಯ ಹಂತಗಳೇನೇ ಇರಲಿ, ಸಿದ್ಧರಾಮನು ಸೊನ್ನಲಿಗೆಯಲ್ಲಿ ಅಲ್ಲಮಪ್ರಭುವನ್ನು ಭೆಟ್ಟಿಯಾದ ನಂತರ ಆತ ಕಲ್ಯಾಣಕ್ಕೆ ಬಂದು ಬಸವಾದಿ ಶರಣರ ಜತೆಗೆ ಕೆಲವು ಕಾಲವಾದರೂ ಇದ್ದಿರಬೇಕೆಂಬುದು ಸತ್ಯಕ್ಕೆ ಸಮೀಪವಾದ ಸಂಗತಿಯಾಗಿದೆ.

ಸಿದ್ಧರಾಮನಿದ್ದ ಸೊನ್ನಲಿಗೆ ಅಂದಿನ ಕಲ್ಯಾಣದ ಶರಣ ಧರ್ಮ ಮತ್ತು ಅದರ ಸಂಪರ್ಕ ಹಾಗೂ ಪ್ರಭಾವಗಳಿಂದ ಹೊರತಾಗಿರಲಾರದು. ಅಂದಿನ ಭಾರತದ ವಿವಿಧ ಪ್ರದೇಶಗಳಿಂದ ಬಸವಾದಿ ಶರಣರ ಹೆಸರನ್ನು ಕೇಳಿ ಕಲ್ಯಾಣಕ್ಕೆ ಬಂದವರ ಸಂಖ್ಯೆ ಕಡಮೆಯೇನೂ ಇರಲಿಲ್ಲ; ಹಾಗೆಯೇ ಬಸವಾದಿ ಶರಣರ ವಚನಗಳನ್ನೂ, ತತ್ವಗಳನ್ನೂ ಊರೂರು ಕೇರಿಗಳ ಮೇಲೆ ಹಾಡುತ್ತ ಹೇಳುತ್ತ ಸಂಚಾರ ಮಾಡುತ್ತಿದ್ದ ಜಂಗಮರ ಉಲ್ಲೇಖಗಳು ದಾಖಲಾಗಿರುವುದನ್ನು ನೋಡಿದರೆ, ಶರಣರ ತಾತ್ವಿಕ ನಿಲುವುಗಳೂ ವಚನಗಳೂ ಹಾಗೂ ಶರಣರನ್ನು ಕುರಿತ ಸಂಗತಿಗಳೂ ಸಿದ್ಧರಾಮನಿಗೆ  ಪರಿಚಯವಾಗಿದ್ದಿರಬೇಕು. ಮತ್ತು ತನ್ನ ಸಮಕಾಲೀನರಾದ ಮತ್ತು ಸೊನ್ನಲಿಗೆಗೆ ಅಷ್ಟೇನೂ ದೂರವಲ್ಲದ ಕಲ್ಯಾಣದಲ್ಲಿದ್ದ ಈ ಶರಣರನ್ನು ಕಾಣುವ ಹಾಗೂ ಅವರೊಂದಿಗೆ ಸಂಭಾಷಿಸುವ ಅಪೇಕ್ಷೆ ಸಿದ್ಧರಾಮನಲ್ಲಿ ಮೊಳೆತಿರಬೇಕು. ಈ ಶರಣ ಸಮೂಹದ ಕೇಂದ್ರವೇ ಆದ ಅಲ್ಲಮಪ್ರಭು ಬಂದು ಸಿದ್ಧರಾಮನನ್ನು ಭೆಟ್ಟಿಯಾಗಿ, ಅವನ ಸಾಧನೆಯನ್ನು ಸಮೀಕ್ಷಿಸಿ, ಅವನ ಇತಿ-ಮಿತಿಯನ್ನೂ ಹಾಗೂ ಯೋಗದಲ್ಲಿ ಅವನು ಹಿಡಿಯಬೇಕಾದ ದಿಕ್ಕನ್ನು ಸೂಚಿಸಿದ ಮೇಲೆ, ಸಿದ್ಧರಾಮನು ಪ್ರಭುವಿನ ಜತೆಗೆ  ಹೊರಟು ಕಲ್ಯಾಣಕ್ಕೆ ಬಂದು ಬಸವಾದಿ ಶರಣರನ್ನು ಕಣ್ಣಾರೆ ಕಂಡು, ಅಲ್ಲಿನ ಶರಣಗೋಷ್ಠಿಯಲ್ಲಿ ಭಾಗವಹಿಸಿರಬೇಕು.

ಸಿದ್ಧರಾಮನು ಕಲ್ಯಾಣಕ್ಕೆ ಬಂದನಂತರ ಅವನ ಬದುಕಿನಲ್ಲಿ ಸಂಭವಿಸಿದ ಘಟನಾ ಪರಂಪರೆಗಳನ್ನು, ನಾವು ಮೊದಲಿಗೆ ಕಾಣಲು ಸಾಧ್ಯವಾಗುವುದು ‘ಶೂನ್ಯ ಸಂಪಾದನೆ’ಯೆಂಬ ಅದ್ಭುತವಾದ ಕೃತಿಯಲ್ಲಿ. ಅದುವರೆಗೂ ಬಿಡಿಬಿಡಿಯಾಗಿ, ಚದುರಿದ ಮುತ್ತಿನಂತೆ ಹರಡಿಹೋಗಿದ್ದ ಶಿವಶರಣರ ವಚನಗಳನ್ನು ‘ಉತ್ತರ ಪ್ರತ್ಯುತ್ತರ ಸಂಬಂಧವಾಗಿ’ ಸೇರಿಸಿ, ಅಲ್ಲಮಪ್ರಭುಗಳು ಕಲ್ಯಾಣದ ಅಸಂಖ್ಯಾತ ಶರಣಗಣಂಗಳೊಂದಿಗೆ ನಡೆಯಿಸಿದ ‘ಮಹಾನುಭಾವ ಪ್ರಸಂಗ’ವನ್ನು, ಅತ್ಯಂತ ನಾಟ್ಯಮಯವಾಗಿ ಪುನಾರಚಿಸಿಕೊಟ್ಟಿರುವ ಅಪೂರ್ವ ಕೃತಿ ‘ಶೂನ್ಯಸಂಪಾದನೆ’. ಹದಿನೈದು-ಹದಿನಾರನೆಯ ಶತಮಾನದಲ್ಲಿ (ಕ್ರಿ.ಶ. ಸು ೧೪೨ಂರಿಂದ ಕ್ರಿ.ಶ.ಸು ೧೫೨೦ರ ಕಾಲಮಾನದಲ್ಲಿ) ವಿವಿಧ ಕೃತಿಕಾರರಿಂದ ಹಲವು ಪರಿಷ್ಕರಣಗಳಿಗೆ ಒಳಗಾಗಿರುವ ಈ ಕೃತಿಯಲ್ಲಿ ಕಲ್ಯಾಣದ ಅನುಭವ ಮಂಟಪದಲ್ಲಿ, ಅಲ್ಲಮನ ಅಧ್ಯಕ್ಷತೆಯಲ್ಲಿ ಅಂದು ನಡೆದ ಶಿವಾನುಭವ ಸಂವಾದಗಳ ಸ್ವರೂಪವನ್ನೂ ಆ ಸಂದರ್ಭದಲ್ಲಿ ವ್ಯಕ್ತವಾಗುವ ಶರಣರೊಬ್ಬೊಬ್ಬರ ನಿಲುವುಗಳನ್ನೂ, ಮಹತ್ತನ್ನೂ ಗುರುತಿಸಬಹುದಾಗಿದೆ.

ಸಿದ್ಧರಾಮನು ಕಲ್ಯಾಣದ ಶರಣಗೋಷ್ಠಿಗೆ ಬಂದ ನಂತರ ಅವನಿಗೆ ಚನ್ನಬಸವಣ್ಣನವರಿಂದ ವೀರಶೈವ ಇಷ್ಟಲಿಂಗ ದೀಕ್ಷೆಯಾಯಿತೆಂಬುದು, ಈ ಸಂದರ್ಭದ ಒಂದು ಮುಖ್ಯ ಘಟನೆಯಾಗಿದೆ. ಈ ಘಟನೆ, ಸಿದ್ಧರಾಮನ ಸ್ಟಇಚ್ಛೆಯಿಂದ ನಡೆಯಿತೆ, ಅಥವಾ ಅವನ ಮನಸ್ಸು ಅದಕ್ಕೆ ಸಿದ್ಧವಾಗಿತ್ತೆ, ಅಥವಾ ಅನುಭವ ಮಂಟಪದ ಶರಣರ ಸಂಗದ ಪ್ರಭಾವ ಇಲ್ಲವೆ ಒತ್ತಾಯದಿಂದ ನಡೆದುದೆ-ಎನ್ನುವ ಪ್ರಶ್ನೆಗಳು ಇಲ್ಲಿ ಸಹಜವಾಗಿಯೆ ಏಳುತ್ತವೆ. ಶೂನ್ಯ ಸಂಪಾದನೆಯ ನಿರೂಪಣೆಯ ಮೇರೆಗೆ ಸಿದ್ಧರಾಮನ ಮನಸ್ಸು ಆತ ಕಲ್ಯಾಣಕ್ಕೆ ಬರುವ ಮುನ್ನ, ಸೊನ್ನಲಿಗೆಯಲ್ಲಿ ಅವನಿಗೆ ಅಲ್ಲಮಪ್ರಭುವಿನೊಂದಿಗೆ ನಡೆದ ಮುಖಾಮುಖಿಯಲ್ಲಿ ಸಾಕಷ್ಟು ವೈಚಾರಿಕ ಚಿಕಿತ್ಸೆಗೆ ಒಳಗಾಗಿ, ತಾನು ಈವರೆಗೂ ಕೈ ಕೊಂಡ ಕಾರ್ಯಗಳೂ ಮತ್ತು ತಾನು ಹಿಡಿದಿರುವ ದಾರಿಯೂ, ನಿಜವಾದ ಆಧ್ಯಾತ್ಮದೆಡೆಗೆ ಒಯ್ಯಲಾರವು ಎಂಬುದನ್ನು ಅರ್ಥಮಾಡಿಕೊಂಡಿತ್ತು. ಅಲ್ಲಮನು ಸಿದ್ಧರಾಮನನ್ನು ಕಲ್ಯಾಣದ ಮಹಮನೆಗೆ ಕರೆದುಕೊಂಡು ಬಂದಾಗ, ಅಲ್ಲಿನ ಶರಣರು ಸಿದ್ಧರಾಮನನ್ನು ಅತ್ಯಂತ ಗೌರವದಿಂದ ಸ್ವಾಗತಿಸಿದರೂ, ‘ಅಂಗದ ಮೇಲೆ ಲಿಂಗ ಸಂಬಂಧವಿಲ್ಲದ’ ಸಿದ್ಧರಾಮನನ್ನು ಷಟ್‌ಸ್ಥಲ ಮಾರ್ಗಕ್ಕೆ ಸಂಬಂಧಿಸಿಕೊಳ್ಳುವುದು ಹೇಗೆ ಎಂದು ತಮ್ಮತಮ್ಮಲ್ಲೇ ವಿಚಾರ ಮಾಡಿದಂತೆ ತೋರುತ್ತದೆ. ಆದರೆ ಒಂದರ್ಥದಲ್ಲಿ ‘ಅತೀತವಾದಿ’ (Trancendentalist) ಯಾದ ಅಲ್ಲಮನಿಗೆ ಇದು ದೊಡ್ಡ ಸಮಸ್ಯೆಯಂತೆ ತೋರುವುದಿಲ್ಲ. ಬದುಕಿನುದ್ದಕ್ಕೂ ಸಾಕಾರನಿಷ್ಠೆಯ ಮೂಲಕ ಶಿವಯೋಗದಲ್ಲಿ ಸಾಕಷ್ಟು ಮುಂದುವರಿದಿದ್ದ ಸಿದ್ಧರಾಮನಿಗೆ, ಹಠಾತ್ತನೆ ಇಷ್ಟಲಿಂಗ ದೀಕ್ಷೆಯ ಮೂಲಕ ಅವನ ಸಾಧನಾ ಪಥವನ್ನು ಬದಲಾಯಿಸಿ ‘ಭಾವನಷ್ಟ’ವನ್ನುಂಟುಮಾಡುವುದು ಅಪೇಕ್ಷಣೀಯವಲ್ಲವೆಂದೋ, ಅಥವಾ ಇಷ್ಟಲಿಂಗ ದೀಕ್ಷೆಯಂಥ ಮೊದಲ ಹೆಜ್ಜೆ ಅವನಿಗೆ ಅನಗತ್ಯವೆಂದೋ ಅಲ್ಲಮನ ತಿಳಿವಳಿಕೆಯಾಗಿತ್ತೆಂದು ತೋರುತ್ತದೆ. ಆದ ಕಾರಣವೇ ಸಿದ್ಧರಾಮನನ್ನು ಇಷ್ಟಲಿಂಗ ದೀಕ್ಷೆಯ ಮೂಲಕ ವೀರಶೈವ ಧರ್ಮಕ್ಕೆ ಕರೆದುಕೊಳ್ಳುವ ಸೂಚನೆ ಚನ್ನಬಸವಣ್ಣನವರಿಂದ ಬಂದಾಗ, ಅಲ್ಲಮಪ್ರಭು ‘ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೆ? ಸಮುದ್ರವ ದಾಟುವಂಗೆ ಹರಿಗೋಲ ಹಂಗೇಕೆ, ಸೀಮೆಯ ಮೀರಿದ ನಿಸ್ಸೀಮಂಗೆ ಸೀಮೆಯ ಹಂಗೇಕೆ. ಗುಹೇಶ್ವರಲಿಂಗದಲ್ಲಿ ಸಿದ್ಧರಾಮಂಗೆ ಲಿಂಗವೆಂದೇನು ಹೇಳಾ ಚನ್ನಬಸವಣ್ಣಾ’ (ಶೂನ್ಯ ಸಂಪಾದನೆ: ಗುಮ್ಮಳಾಪುರದ ಸಿದ್ಧಲಿಂಗದೇವರು. ಸಂ.ಡಾ.ಆರ್. ಸಿ.ಹೀರೇಮಠ: ವ ೩೯೭ ಪು ೧೭೭) ಎಂದು ಹೇಳುತ್ತಾನೆ. ಅದಕ್ಕೆ ಚೆನ್ನಬಸವನು ‘ಆಕಾಶದಲಾಡುವ ಪಟಕ್ಕಾದರೂ ಮೂಲ ಸೂತ್ರವಿರಬೇಕು’ ಆದಕಾರಣ ಸಿದ್ಧರಾಮನು ಯೋಗ ಮಾರ್ಗದಲ್ಲಿ ಎಷ್ಟೇ ಏರಿದ್ದರೂ ‘ಅಂಗಕ್ಕೆ ಲಿಂಗ ಸಂಗವಿಲ್ಲದೆ ನಿಸ್ಸಂಗವಾಗಬಾರದು’ (ಅಲ್ಲೇ ವ ೩೯೮)- ಎಂದು ಉತ್ತರ ಕೊಡುತ್ತಾನೆ. ಅಷ್ಟೇ ಅಲ್ಲ, ‘ವೇದಾಂತ ಜ್ಞಾನವನ್ನು ನಂಬಿ, ಅಷ್ಟಾಂಗಮಾರ್ಗಾವಲಂಬಿಯಾದ ಸಿದ್ಧರಾಮನಿಗೆ, ಅಂಗದ ಮೇಲೆ ಲಿಂಗ ಸಂಯೋಗವಾಗದೆ ಆತನಿಗೆ ಶಿವತತ್ವವು ಘಟಿಸುವುದಿಲ್ಲವೆಂದೂ, ಆದಕಾರಣ ಆತನಿಗೆ ಇಷ್ಟಲಿಂಗ ದೀಕ್ಷೆಯಾಗುವುದು ಆಗತ್ಯವೆಂದೂ’ ‘ಬಸವರಾಜದೇವರು ಮೊದಲಾದ ಏಳನೂರೆಪ್ಪತ್ತು ಅಮರಗಣಂಗಳು ಆ ಸಿದ್ಧರಾಮಯ್ಯನ ಅಷ್ಟಾಂಗಯೋಗಂಗಳ ಜರಿದು ಖಂಡಿಸಿ ನಿರಸನಂ ಮಾಡಿ ಪ್ರಭುದೇವರೊಡನೆ ಬಿನ್ನೆ ಸುತ್ತಿರಲು’ (ಶೂ.ಸಂ. ಅಲ್ಲೇ ೪೪೦ ಪು ೧೯೨) ಅಲ್ಲಮಪ್ರಭು ಅವರ ಅಭಿಪ್ರಾಯನ್ನು ಮನ್ನಿಸಬೇಕಾಗಿ ಬಂದು, ಅವರ ಸೂಚನೆಯ ಮೇರೆಗೆ, ಚನ್ನಬಸವಣ್ಣನವರಿಂದ ಸಿದ್ಧರಾಮನಿಗೆ ಇಷ್ಟಲಿಂಗ ದೀಕ್ಷೆ ನೆರವೇರುತ್ತದೆ. ಈ ಇಷ್ಟಲಿಂಗ ದೀಕ್ಷೆಯ ಮೂಲಕ ಸಿದ್ಧರಾಮನ ಶೈವಸಂಪ್ರದಾಯವು, ವೀರಶೈವದಲ್ಲಿ ತನ್ನನ್ನು ಕರಗಿಸಿಕೊಂಡಂತಾಯಿತು.[1]

ಈ ಎಲ್ಲ ಹಿನ್ನೆಲೆಯಿಂದ ಹೇಳಬಹುದಾದ ಮಾತೆಂದರೆ: ಅಲ್ಲಮ ಪ್ರಭುವಿನೊಂದಿಗಿನ ಮುಖಾಮುಖಿಯಿಂದ, ತನ್ನ ಕಾರ‍್ಯವಿಧಾನ ಹಾಗೂ ತನ್ನ ಧರ್ಮಮಾರ್ಗದ ಇತಿ-ಮಿತಿಗಳ ಅರಿವನ್ನು ಪಡೆದ ಸಿದ್ಧರಾಮನು, ಕಲ್ಯಾಣಕ್ಕೆ ಬಂದ ನಂತರ, ಕಲ್ಯಾಣದಲ್ಲಿ ಬಸವಣ್ಣನವರ ವ್ಯಕ್ತಿಕೇಂದ್ರದಲ್ಲಿ ಸಂಭವಿಸುತ್ತಿದ್ದ ಶರಣಧರ್ಮದ ಸಾಮಾಜಿಕ-ಧಾರ್ಮಿಕ ಸ್ವರೂಪದ ಉತ್ಕ್ರಾಂತಿಯನ್ನೂ, ಅದು ತಂದುಕೊಟ್ಟ ವರ್ಣ-ವರ್ಗ-ಲಿಂಗ ಭೇದಗಳಿಲ್ಲದ ಸಮಾನತೆಯ ನೆಲೆಯಲ್ಲಿ ಸಾಮಾನ್ಯ ವ್ಯಕ್ತಿ ಪಡೆದುಕೊಂಡ ಆತ್ಮಗೌರವ, ವೈಚಾರಿಕತೆ ಮತ್ತು ಪ್ರತಿಭಟನೆಯ ಕೆಚ್ಚುಗಳನ್ನೂ ಹಾಗೂ ಅಂದಿನ ಶರಣ ಸಮೂಹದ ಒಬ್ಬೊಬ್ಬ ವ್ಯಕ್ತಿಯ ಅನುಭಾವಿಕ ಎತ್ತರಗಳನ್ನೂ ಗಮನಿಸುತ್ತ, ತನ್ನ ಈವರೆಗಿನ ಜೀವನ ಹಾಗೂ ಸಾಧನೆಗಳನ್ನು ತೌಲನಿಕವಾಗಿ ವಿಮರ್ಶಿಸುತ್ತ ಒಂದು ಬಗೆಯ ಸಂಘರ್ಷಗಳಿಗೆ ಒಳಗಾದಂತೆ ತೋರುತ್ತದೆ. ಈ ಸಂಘರ್ಷದ ಕೆಲವು ಹೊಳಹುಗಳನ್ನು ಅವನ ಕೆಲವು ವಚನಗಳಲ್ಲಿ ಹಾಗೂ ತ್ರಿವಿಧಿಗಳಲ್ಲಿ ಗುರುತಿಸಬಹುದು. ಹೀಗಾಗಿ ಅವನ ಮನಸ್ಸು ಈ ಹೊಸ ಪ್ರವಾಹದೊಂದಿಗೆ ಸಂಗಮಿಸಲು ಕಾತರವಾಗಿತ್ತು ಎಂದರೂ ತಪ್ಪಲ್ಲ. ಜತೆಗೆ, ಅಪ್ರತಿಮ ಶಿವಯೋಗಿ ಎಂದು ಹೆಸರಾಗಿ, ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿ ರೂಪಿಸಿ, ಮಠವನ್ನು ಕಟ್ಟಿ, ಅಸಂಖ್ಯ ಶಿಷ್ಯರನ್ನು ಸಂಪಾದಿಸಿ, ಅಂದಿನ ಸೊನ್ನಲಿಗೆಯ ಸಾಮಾಜಿಕ ಪರಿಸರದಲ್ಲಿ ಅತ್ಯಂತ ಪ್ರಭಾವಶಾಲಿಯಾದ ಈ ವ್ಯಕ್ತಿಯನ್ನು ಕಲ್ಯಾಣ ಕ್ರಾಂತಿಯಲ್ಲಿ ತೊಡಗಿಸಿಕೊಳ್ಳುವುದರಿಂದ, ಶರಣ ಧರ್ಮದ ಚಳುವಳಿಗೆ ಹೊಸ ಆಯಾಮವೊಂದು ಪ್ರಾಪ್ತವಾಗಬಹುದೆಂಬ ಸದುದ್ದೇಶವೂ, ಬಸವಾದಿಗಳು ಸಿದ್ಧರಾಮನಿಗೆ ಲಿಂಗದೀಕ್ಷೆಯಾಗಬೇಕೆಂದು ಅಲ್ಲಮನನ್ನು ಆಗ್ರಹಿಸಲು ಕಾರಣವಾದಂತೆ ತೋರುತ್ತದೆ. ಹಾಗೆ ನೋಡಿದರೆ ಸಿದ್ಧರಾಮನು ಇಷ್ಟಲಿಂಗದೀಕ್ಷೆಯ ಮೂಲಕ ‘ವೀರಶೈವ’ದೊಳಕ್ಕೆ ಬಂದದ್ದು ಅಂತಹ ದೊಡ್ಡ ಮತಾಂತರ ಕಾರ್ಯವೇನೂ ಅಲ್ಲ; ಅದು, ಸ್ಥಾವರ ಲಿಂಗಾರ್ಚನೆಯ ಶೈವ ಸಂಪ್ರದಾಯ ಇಷ್ಟಲಿಂಗಾರ್ಚನೆಯ ನೂತನ ಶೈವ ಶರಣಧರ್ಮ ಪರಂಪರೆಯೊಳಗೆ ವಿಲೀನವಾದ ಒಂದು ಕ್ರಮವಷ್ಟೇ. ಹಾಗಾಗುವುದು ಅಂದಿನ ಯುಗಧರ್ಮದ ಆವಶ್ಯಕತೆಯೂ ಆಗಿತ್ತು. ಹೀಗೆ ಬಸವಪೂರ್ವದ ವಿವಿಧ ಧರ್ಮಗಳವರನ್ನೂ ಹಾಗೂ ಧಾರ್ಮಿಕ ಪಂಥಗಳನ್ನೂ ತನ್ನೊಳಗೆ ವಿಲೀನಗೊಳಿಸಿಕೊಳ್ಳುವುದರ ಮೂಲಕವೇ ಪುನರ್ಭವವನ್ನು ಪಡೆದದ್ದು ಶರಣಧರ್ಮದ ಲಕ್ಷಣವಾಗಿದೆ.

ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ಕಲ್ಯಾಣದ ಮಹಾಮನೆಯ ಅನುಭವ ಮಂಟಪದ ‘ಮಹಾನುಭಾವ ಪ್ರಸಂಗ’ಗಳಲ್ಲಿ ಪಾಲುಗೊಳ್ಳುತ್ತ ಬಸವಾದಿ ಮಹಾಶರಣರ ಸಂಗಸುಖದಲ್ಲಿ ಆನಂದದಿಂದ ಇದ್ದ ಸಿದ್ಧರಾಮನು, ಸೊನ್ನಲಿಗೆಯನ್ನು ಮರೆತು ಅಲ್ಲಿಯೇ ನಿಂತಿರಲಾರ. ಆದರೆ ಕಲ್ಯಾಣದ ಶರಣರ ಸಂಗದಲ್ಲಿ ಅವನು ಎಷ್ಟು ಕಾಲ ಇದ್ದ; ಅವನು ಅಲ್ಲಿಂದ ಸೊನ್ನಲಿಗೆಗೆ ಯಾವಾಗ ಹಿಂದಕ್ಕೆ ಬಂದ ಎನ್ನುವ ವಿವರಗಳನ್ನು ಖಚಿತವಾಗಿ ಗುರುತಿಸುವುದು ಕಷ್ಟವಾಗಿದೆ. ಹರಳಯ್ಯ ಮಧುವಯ್ಯಗಳ ಮಕ್ಕಳ ಮದುವೆಯಂಥ ಸಂದರ್ಭದಿಂದ, ಬಿಜ್ಜಳ ಮತ್ತು ಸಂಪ್ರದಾಯ ಶರಣರು ಕೆರಳಿ, ಬಸವಾದಿ ಶರಣರ ವಿರುದ್ಧ ಒಂದು ದೊಡ್ಡ ಸಂಘರ್ಷವೇ ಪ್ರಾರಂಭವಾಗಿ, ಅಂದಿನ ಕಲ್ಯಾಣದಲ್ಲಿ ಯಾವ ಒಂದು ರಾಜಕೀಯ ವಿಪ್ಲವವು ಸಂಭವಿಸಿ ಬಿಜ್ಜಳನ ಕೊಲೆಯಲ್ಲಿ ಪರ‍್ಯವಸಾನವಾಯಿತೋ ಆಗ, ಅನುಭವ ಮಂಟಪದ ಶರಣರು ಕಲ್ಯಾಣವನ್ನು ತೊರೆದು ತಮ್ಮ ತಮ್ಮ ಬಿಡುಗಡೆಯ ದಾರಿಗಳನ್ನು ಹಿಡಿದರೆಂಬುದು ಒಂದು ಚಾರಿತ್ರಿಕವಾದ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಸಿದ್ಧರಾಮನು ಇನ್ನೂ ಕಲ್ಯಾಣದಲ್ಲಿ ಇದ್ದನೆ ಅಥವಾ ಆ ಮೊದಲೇ ಸೊನ್ನಲಿಗೆಗೆ ಹಿಂದಿರುಗಿದನೆ ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ಶೂನ್ಯ ಸಂಪಾದನೆಯಲ್ಲಿಯೆ ಮೊದಲ ಉತ್ತರ ದೊರೆಯುತ್ತದೆ. ಬಿಜ್ಜಳನ ಕೊಲೆಗೆ ಕಾರಣವಾದ ಮಹಾವಿಪ್ಲವಕ್ಕೆ ಮುನ್ನವೇ, ಅಕ್ಕಮಹಾದೇವಿ ಹಾಗೂ ಸಿದ್ಧರಾಮ ಇವರಿಬ್ಬರೂ ಅಲ್ಲಮಪ್ರಭುವಿನ ನಿರ್ದೇಶನದ ಮೇರೆಗೆ ತಮ್ಮ ತಮ್ಮ  ಗಮ್ಯಸ್ಥಾನಗಳಾದ ಶ್ರೀಶೈಲ, ಸೊನ್ನಲಿಗೆಗಳಿಗೆ ಹೋದರೆಂಬ ಸಂಗತಿ ‘ಶೂನ್ಯ ಸಂಪಾದನೆ’ಗಳಲ್ಲಿ ಸ್ಪಷ್ಟವಾಗಿದೆ: ‘ಇಂತು ಪ್ರಭುದೇವರು ಬಸವಣ್ಣ ಚನ್ನಬಸವಣ್ಣ ಮಡಿವಾಳ ಮಾಚಿ ತಂದೆಗಳಿಗೆ ಮಹಾಜ್ಞಾನಮಂ ಬೋಧಿಸಿ, ಸಕಲ ಪುರಾತನರ ಕೃತಾರ್ಥಂ ಮಾಡಿ, ಮಹಾದೇವಿಯಕ್ಕಂಗೆ ನಿಜ ಶಿವತತ್ವಮಂ ನಿರ್ವಹಿಸಿ ತೋರಿಕೊಟ್ಟು ಪರ್ವತಕ್ಕೆ ಕಳುಹಿ, ಸಿದ್ಧರಾಮಯ್ಯ ದೇವರಿಗೆ ನಿಜಸಮಾಧಿಯ ನಿರ್ಣಯಮಂ ತಿಳುಹಿ ಸೊನ್ನಲಿಗೆಯಪುರಕ್ಕೆ ಕಳುಹಿ…’ (ಗೂಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಪ್ರಭುದೇವರ ಶೂನ್ಯ ಸಂಪಾದನೆ ಪುಟ ೩೫೨. ಪ್ರೊ.ಸಂ.ಶಿ. ಭೂಸನೂರುಮಠ ೧೯೫೮) ಅಲ್ಲಮನೂ ಪರ್ಯಟನಕ್ಕೆ ಹೋದನೆಂದು ಹೇಳಲಾಗಿದೆ. ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣದಲ್ಲಿ (ಕ್ರಿ.ಶ. ೧೫೮೫), ಸಿದ್ಧರಾಮನಿಗೆ ಚನ್ನಬಸವನು ಲಿಂಗದೀಕ್ಷೆಯನ್ನು ಮಾಡಿದ ನಂತರ, ಚೆನ್ನಬಸವನು ಮುಂದಾಗುವ ಘಟನೆಗಳನ್ನು ‘ಕಾಲಜ್ಞಾನ’ದಿಂದ ತಿಳಿಯ ಹೇಳಿ ‘ನೀನು ಸುಪ್ರಸಿದ್ಧವಾದ ಸೊನ್ನಲಾಪುರಕ್ಕೆ ಹೋಗಿ ನಿಜಸಮಾಧಿಯಲ್ಲಿರಬೇಕು (೬೨-೫) ಎಂದು ಆದೇಶಿಸಿದನೆಂದು ನಿರೂಪಿತವಾಗಿದೆ. ಸಿದ್ಧರಾಮನನ್ನು ಕುರಿತು ಎಲ್ಲರಿಗಿಂತ ಮೊದಲೆ ಬರೆದ ರಾಘವಾಂಕನು’ (ಕ್ರಿ.ಶ. ಸು. ೧೨೨೫-೧೩೦೦) ತನ್ನ ‘ಸಿದ್ಧರಾಮಚಾರಿತ್ರ’ದಲ್ಲಿ ಸಿದ್ಧರಾಮನು ಕಲ್ಯಾಣಕ್ಕೆ ಹೋದ ವಿಷಯವನ್ನು ಪ್ರಸ್ತಾಪಿಸದೆ ಹೋದರೂ, ಅತ್ತ ಕಲ್ಯಾಣದ ಮಹಾವಿಪ್ಲವವಾಗಿ ಬಿಜ್ಜಳನ ಕೊಲೆಯಾದ ಹೊತ್ತಿನಲ್ಲಿ, ಸಿದ್ಧರಾಮನು ಸೊನ್ನಲಿಗೆಯಲ್ಲಿದ್ದನೆಂಬ ಸಂಗತಿಯನ್ನು ದಾಖಲಿಸುತ್ತಾನೆ.[2] ಈ ಕೆಲವು ಸೂಚನೆಗಳ ಆಧಾರದ ಮೇಲೆ ಹೇಳುವುದಾದರೆ, ಸಿದ್ಧರಾಮನು, ತನಗೆ ಲಿಂಗ ದೀಕ್ಷೆಯಾದ ನಂತರ  ಕೆಲವುಕಾಲ ಮಾತ್ರ ಕಲ್ಯಾಣದಲ್ಲಿದ್ದು, ಅಲ್ಲಿ ಹೆಚ್ಚುಕಾಲ ಇರಲೊಪ್ಪದೆ ಸೊನ್ನಲಿಗೆಗೆ ಹಿಂದಿರುಗಿರಲೇಬೇಕು. ಯಾಕೆಂದರೆ. ಕಲ್ಯಾಣ ಅವನ ಬದುಕಿಗೊಂದು ಅಧ್ಯಾತ್ಮಿಕ ತಿರುವನ್ನು ಕೊಟ್ಟ ಸ್ಥಳವೇ ಹೊರತು, ಅವನ ವ್ಯಕ್ತಿತ್ವವನ್ನು ಕಟ್ಟಿ ಬೆಳೆಯಿಸಿದ ಸ್ಥಳವೇನಲ್ಲ. ಎಷ್ಟಾದರೂ ಸೊನ್ನಲಿಗೆ ಅವನ ಕರ್ಮಭೂಮಿ. ಯಾವುದನ್ನು ವೀರಶೈವ ಧರ್ಮವು ಒಂದು ಮಹತ್ತರವಾದ ಮೌಲ್ಯವೆಂದು ಎತ್ತಿ ಹಿಡಿಯಿತೋ, ಆ ‘ಕಾಯಕ’ ಎಂಬ ಮೌಲ್ಯವನ್ನು, ಆ ಧರ್ಮದ ಸಂಪರ್ಕಕ್ಕೆ ಬರುವ ಎಷ್ಟೋ ಮೊದಲು, ಅದನ್ನು ಅವನು ಅನುಷ್ಠಾನಕ್ಕೆ ತಂದ ಪ್ರಯೋಗ ಕ್ಷೇತ್ರ ಸೊನ್ನಲಿಗೆ. ಆದ ಕಾರಣವೇ ಆತ ಕಲ್ಯಾಣದಲ್ಲಿ ಹೆಚ್ಚು ಕಾಲ ನಿಲ್ಲದೆ ಸೊನ್ನಲಿಗೆಗೆ ಹಿಂದಿರುಗಿರಬೇಕು. ಆತ ಸೊನ್ನಲಿಗೆಗೆ ಬಂದ ನಂತರ, ಆತನಿಗೆ ಸಾಕಾರ ನಿಷ್ಠೆಯ ಕೇಂದ್ರವಾದ ದೇವಾಲಯಗಳ ಬಗ್ಗೆ, ಮತ್ತು ಅದಕ್ಕೆ ಸಂಬಂಧಿಸಿದ ವ್ರತ-ನೇಮ- ಹೋಮಾದಿ ಆಚರಣೆಗಳ ಬಗ್ಗೆ ಒಂದು ಬಗೆಯ ಅನಾಸಕ್ತಿ ಬೆಳೆದಿರಬೇಕು. ಇಷ್ಟಲಿಂಗಧಾರಿಯಾಗಿ ವೀರಶೈವನಾದ ಮೇಲೆ, ಹಿಂದಿನಂತೆ ಸ್ಥಾವರಲಿಂಗಾರ್ಚನೆಯ ವಿಧಿ ವಿಧಾನಗಳಲ್ಲಿ ಪಾಲುಗೊಳ್ಳುವುದು ವೈಚಾರಿಕವಾಗಿಯೂ ಅಸಂಗತವೆಂದು ಆತನಿಗೆ ಅನ್ನಿಸಿರಬೇಕು. ಆದುದರಿಂದಲೆ ಆತ ತನ್ನ ಆರಾಧ್ಯದೈವವಾದ ಕಪಿಲಸಿದ್ಧ ಮಲ್ಲಿಕಾರ್ಜುನನಿಗೆ ‘ಇನ್ನು ನೀನು ಕರೆಸಿಕೊಂಬವನಾಗು ಮತ್ತೋರ್ವನ ನಿನ್ನ ಪೂಜೆಗೆ’ (ವ.೯೫೪) ಎಂದು ಬಿನ್ನವಿಸಿಕೊಳ್ಳುತ್ತಾನೆ. ಆದರೆ ಕಾಯಕ ರೂಪವಾದ ಸಾರ್ವಜನಿಕ ಸೇವಾಕಾರ್ಯಗಳಿಗೆ ಅವನೆಂದೂ ವಿರಾಮ ಹಾಕಿರಲಾರ. ಅವನು ತಾನೇ ಕಟ್ಟಿಸಿದ ಕೆರೆಯ ನಡುವಣ ಯೋಗಿನಾಥ ದೇವಾಲಯಕ್ಕೆ ಹೊಂದಿಕೊಂಡಂತೆ, ಅವನ ಸೂಚನೆಯ ಮೇರೆಗೆ ನಿರ್ಮಿತಿಯಾದ ಗೊಪೆಯನ್ನು ಪ್ರವೇಶಿಸಿ ಮಹಾ ಸಮಾಧಿಯಲ್ಲಿ ಮಗ್ನವಾಗುವವರೆಗೂ ಅವನ ಕಾಯಕ ಅವಿಚ್ಛಿನ್ನವಾಗಿ ಮುಂದುವರಿದಿರಬಹುದು.

-೪-

ಹನ್ನೆರಡನೆಯ ಶತಮಾನದ ಈ ಶಿವಶರಣರನ್ನು ಕುರಿತು ರಚಿತವಾದ ಕಾವ್ಯ ಪುರಾಣಗಳಿಗಿಂತ, ಆಯಾ ಶರಣರೇ ತಮ್ಮ ಜೀವಿತಕಾಲದಲ್ಲಿ ಬರೆದಿರುವ ವಚನಗಳೇ ಅವರವರ ಬದುಕನ್ನು ಅರ್ಥ ಮಾಡಿಕೊಳ್ಳಲು ನಮಗೆ ದೊರೆಯುವ ಮೊದಲ ಅಧಿಕೃತವಾದ, ವಿಶ್ವಸನೀಯವಾದ  ಹಾಗೂ ಚಾರಿತ್ರಿಕವಾದ ಆಧಾರಗಳಾಗಿವೆ. ಹಾಗೆಂದರೆ ಈ ಶರಣರನ್ನು ಕುರಿತ ಕಾವ್ಯ ಪುರಾಣಗಳಿಂದ ಏನೇನೂ ಪ್ರಯೋಜನವಿಲ್ಲವೆಂದು ಈ ಮಾತಿನ ಅರ್ಥವಲ್ಲ. ವಾಸ್ತವವಾಗಿ, ಈ ಕಾವ್ಯ ಪುರಾಣ ನಿರ್ಮಿತಿಗಳು, ಆಯಾ ಶರಣರನ್ನು ಕುರಿತು, ಎಷ್ಟೋ ಕಾಲದ ಅನಂತರ ರಚಿತವಾಗಿರುವುದರಿಂದ, ಅವರು ನಿಜವಾಗಿ ಬದುಕಿದ ಕಾಲದಿಂದ, ಕೃತಿ ರಚನೆಯಾಗುವ ಕಾಲದವರೆಗೂ, ಆವರನ್ನು ಕುರಿತ ಐತಿಹ್ಯಗಳೂ, ದಂತಕತೆಗಳೂ, ಅವರ ಮಹಿಮಾ ವಿಶೇಷವನ್ನು ಕುರಿತ ಉತ್ಪ್ರೇಕ್ಷೆಗಳೂ ಜನಮನದಲ್ಲಿ ಪ್ರಚಲಿತವಾಗಿ, ಕೃತಿ ರಚನೆಗೆ ತೊಡಗುವ ಕವಿಯ ಕಲ್ಪನೆಗೆ ಸಾಮಗ್ರಿಗಳಾಗಿ ಒದಗಿ ಬರುತ್ತವೆ. ಹೀಗಾಗಿ ಒಂದು ಕಾಲಮಾನದ ಚರಿತ್ರೆಯಲ್ಲಿ ಬದುಕಿದ ವ್ಯಕ್ತಿ, ಅವನು ಮಹಾವ್ಯಕ್ತಿಯಾದ ಕಾರಣದಿಂದ, ಅವನನ್ನು ಕುರಿತು, ಜನಸಮಷ್ಟಿಯ ಕಲ್ಪನೆ- ಮಾಹಿತಿಗಳನ್ನೂ ಹಾಗೂ ತನ್ನ ಕಲ್ಪನೆಯನ್ನೂ ಹೊಂದಿಸಿಕೊಂಡು ಕೃತಿರಚನೆ ಮಾಡುವ ಕವಿಯ ಕಾವ್ಯದಲ್ಲಿ, ದೇವಾಂಶ ಸಂಭೂತನೂ, ಪವಾಡ ಪುರುಷನೂ, ಆದ ‘ಪುರಾಣ ಪುರುಷ’ನಾಗಿ ಮಾರ್ಪಡುತ್ತಾನೆ. ಇದು ಬಸವಾದಿ ಶರಣರನ್ನು ಕುರಿತು ಕನ್ನಡದಲ್ಲಿ ರಚಿತವಾದ ಕಾವ್ಯ-ಪುರಾಣಗಳ ಸ್ವರೂಪ. ಆದರೂ ಈ ಕೃತಿಗಳ ಸಾಂಕೇತಿಕ ವಿಧಾನಗಳ ನಿರೂಪಣೆಯ ಅಂತರಾಳವನ್ನು ಪ್ರವೇಶಿಸುವ ಸಹೃದಯನ ವೈಚಾರಿಕತೆಗೆ, ಕಥಾನಾಯಕನ ಬದುಕಿಗೆ ಸಂಬಂಧಿಸಿದ ಎಷ್ಟೋ ಅಮೂಲ್ಯವಾದ ಮಾಹಿತಿಗಳೂ, ಚಾರಿತ್ರಿಕ ಸಂಗತಿಗಳೂ, ಮತ್ತು ಅವನ ವಚನಗಳಲ್ಲಿ ಎಷ್ಟೋ ವೇಳೆ ಲಭ್ಯವಲ್ಲದ ವಿಚಾರಗಳೂ, ಮತ್ತು ವಚನಗಳಿಗೆ ಪೂರಕವಾದ ವಿಷಯಗಳೂ- ಗೋಚರವಾಗುತ್ತವೆ. ಹೀಗಾಗಿ ಈ ಶರಣರ ವ್ಯಕ್ತಿತ್ವದ ಸಮಗ್ರತೆಯ ಪರಿಚಯವಾಗಬೇಕಾದರೆ ನಾವು, ಆ ವ್ಯಕ್ತಿಯಿಂದ ನಿರ್ಮಿತಿಯಾದ ವಚನಗಳ ಜತೆಗೆ, ಅವನನ್ನು ಕುರಿತು ಕಾಲದಿಂದ ಕಾಲಕ್ಕೆ ರಚಿತವಾಗಿರುವ ಕಾವ್ಯ- ಪುರಾಣಗಳನ್ನೂ ಅವಲಂಬಿಸಬೇಕಾಗುತ್ತದೆ.

ಶಿವಯೋಗಿ ಸಿದ್ಧರಾಮನನ್ನು ಕುರಿತು ಹದಿಮೂರನೆಯ ಶತಮಾನದಲ್ಲಿ ರಾಘವಾಂಕನು ಬರೆದ ‘ಸಿದ್ಧರಾಮಚಾರಿತ್ರ’ವೆ ಮೊದಲ ಬಾರಿಗೆ ಸಾಧ್ಯವಾದಷ್ಟು ಸಮಗ್ರವಾಗಿ ಸಿದ್ಧರಾಮನ ಬದುಕನ್ನು  ಚಿತ್ರಿಸುವ ಕೃತಿ. ಆನಂತರ ಸುಮಾರು ಮೂವತ್ತರಷ್ಟು ಕೃತಿಗಳಲ್ಲಿ ಸಿದ್ಧರಾಮನನ್ನು ಕುರಿತ ಪ್ರಸ್ತಾಪ ಪ್ರಾಸಂಗಿಕವಾಗಿ ಹಾಗೂ ಆಂಶಿಕವಾಗಿ ಬರುತ್ತದೆ. ಈ ಎಲ್ಲ ಕಾವ್ಯ ಪುರಾಣಗಳು ಮುಖ್ಯವಾಗಿ ಸಿದ್ಧರಾಮನನ್ನು ಒಬ್ಬ ಅವತಾರ ಪುರುಷನಂತೆಯೂ, ಅಪ್ರತಿಮ ಶಿವಯೋಗಿಯಂತೆಯೂ, ಪವಾಡಾದಿ ಸಾಮರ್ಥ್ಯಗಳನ್ನು ಮೆರೆದ ‘ಸಿದ್ಧ’ ನಂತೆಯೂ ಮತ್ತು ಸೊನ್ನಲಿಗೆಯನ್ನು ಶ್ರೀಶೈಲಕ್ಕೆ ಸಮನಾದ ಯೋಗಕ್ಷೇತ್ರವನ್ನಾಗಿ ರೂಪಿಸುತ್ತ ತನ್ನ ಲೋಕಾನು ಕಂಪೆಯಿಂದ ಕೆರೆ-ಬಾವಿ-ದೇವಾಲಯಾದಿಗಳನ್ನು ನಿರ್ಮಿಸುತ್ತ ಕಾಯಕದಲ್ಲಿ ನಿರತನಾದ ಮಹಾಶರಣನಂತೆಯೂ ಚಿತ್ರಿಸುತ್ತವೆ. ಆದರೆ ಆತನೂ ಒಬ್ಬ ನಮ್ಮ ನಿಮ್ಮಂತೆ ಈ ನೆಲಕ್ಕೆ ಸೇರಿದವನೆಂಬುದನ್ನೂ, ಆತನಿಗೂ ತನ್ನದೇ ಆದ ಅರೆಕೊರೆಗಳೂ ಸಂಘರ್ಷಗಳೂ ಇದ್ದುವೆಂಬುದನ್ನೂ, ಆತ ಮೂಲತಃ ತನ್ನ ಸಾಧನೆಗಳಿಂದ ಮೇಲೇರಿದ ಒಬ್ಬ ಮನುಷ್ಯನಾಗಿದ್ದನೆಂಬುದನ್ನೂ ಈ ಕಾವ್ಯ ಪುರಾಣಗಳು ಅಷ್ಟಾಗಿ ಲೆಕ್ಕಕ್ಕೇ ತೆಗೆದುಕೊಳ್ಳುವಂತೆ ತೋರುವುದಿಲ್ಲ. ಆದಕಾರಣ ಸಿದ್ಧರಾಮನ ವ್ಯಕ್ತಿಜೀವನದ ಅಂತರಂಗ ಬಹಿರಂಗಗಳನ್ನು ಅರಿತುಕೊಳ್ಳಬೇಕಾದರೆ ನಾವು ಆತನ ವಚನಗಳನ್ನೆ ಅವಲಂಬಿಸಬೇಕಾಗುತ್ತದೆ.

ಸಿದ್ಧರಾಮನು ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬ. ಅವನು ಬರೆದ ವಚನಗಳ ಸಂಖ್ಯೆ ಅರುವತ್ತೆಂಟುಸಾವಿರ ಎಂದು ಆತನದೇ ಆದ ಒಂದು ವಚನದಲ್ಲಿ (ವ.೯೦೯) ಉಲ್ಲೇಖವಿದ್ದರೂ, ಈ ಸಂಖ್ಯೆ ಕೇವಲ ಉತ್ಪೇಕ್ಷೆ ಎನ್ನುವುದರಲ್ಲಿ ಸಂದೇಹವಿಲ್ಲ. ಇತ್ತೀಚಿನ ಕೆಲವು ‘ಸಂಪಾದನೆ’ಗಳನ್ನು ನೋಡಿದರೆ ಸಿದ್ಧರಾಮನ ವಚನಗಳ ಸಂಖ್ಯೆ ಒಂದುಸಾವಿರದ ಐನೂರಕ್ಕೂ ಮಿಗಿಲಾಗಿವೆ.[3] ಆತ ವಚನಗಳನ್ನಷ್ಟೆ ಅಲ್ಲದೆ ಬಸವಸ್ರೋತ್ರ ತ್ರಿವಿಧಿ, ಮಿಶ್ರ ಸ್ತೋತ್ರ ತ್ರಿವಿಧಿ, ಅಷ್ಟಾವರಣ ತ್ರಿವಿಧಿ, ಮಂತ್ರಗೋಪ್ಯ, ಕಾಲಜ್ಞಾನ ವಚನ ಮೊದಲಾದವನ್ನು ಬರೆದಿದ್ದಾನೆ.

ಸಿದ್ಧರಾಮನ ಕಾರ‍್ಯಕ್ಷೇತ್ರ ಸೊನ್ನಲಿಗೆ. ಅಂದಿನ ವಚನಕಾರರೆಲ್ಲರೂ ಬಂದು ಸೇರುತ್ತಿದ್ದದ್ದು ಕಲ್ಯಾಣದಲ್ಲಿ. ವಚನ ಚಳುವಳಿಯ ಕೇಂದ್ರವೇ ಅದು. ಸಿದ್ಧರಾಮನು ಕಲ್ಯಾಣಕ್ಕೆ ಹೋಗಿ ಶರಣರ ಸಂಗದಲ್ಲಿದ್ದದ್ದು ಬಹುಶಃ ಕೊನೆ ಕೊನೆಗೆ; ಅದೂ ಸ್ವಲ್ಪಕಾಲ. ಹೀಗಿರುವಾಗ ಸಿದ್ಧರಾಮನು ಸೊನ್ನಲಿಗೆಯಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿದ್ದ ಸಮಯದಲ್ಲಿಯೇ ಅವನು ವಚನಗಳನ್ನು ಬರೆಯುತ್ತಿದ್ದನೆ? ಅಥವಾ ಅವನು ಕಲ್ಯಾಣಕ್ಕೆ ಹೋಗಿ ವೀರಶೈವ ದೀಕ್ಷೆಯನ್ನು ಪಡೆದು ಬಂದ ಬಳಿಕ ವಿಶೇಷವಾಗಿ ವಚನಗಳನ್ನು ಬರೆದನೆ ಎಂಬ ಪ್ರಶ್ನೆಗಳು ಎದ್ದಿವೆ. ಅವನ ಬಹುಸಂಖ್ಯೆಯ ವಚನಗಳು, ಅವನ ಬದುಕಿನ ಹಲವು ಹಂತಗಳನ್ನೂ ಅಲ್ಲಲ್ಲಿನ ನೆಲೆಯನ್ನೂ ಒಟ್ಟಾರೆಯಾಗಿ ಸೂಚಿಸುತ್ತವೆಯಾದರೂ, ಆತ ಕಲ್ಯಾಣಕ್ಕೆ ಹೋಗಿ ಲಿಂಗದೀಕ್ಷೆಯನ್ನು ಪಡೆಯುವ ಮುನ್ನಿನ ವಚನಗಳನ್ನು ಪ್ರತ್ಯೇಕವಾಗಿ ಗುರುತಿಸಲು, ಡಾ.ಆರ್.ಸಿ ಹಿರೇಮಠರಂಥ ವಿದ್ವಾಂಸರು ಪ್ರಯತ್ನಪಟ್ಟಿದ್ದಾರೆ. ನಮಗೆ ತೋರುವ ಮಟ್ಟಿಗೆ, ಸಿದ್ಧರಾಮನು ಬಹುಕಾಲ ‘ಶೈವ’ನಾಗಿ ಸೊನ್ನಲಿಗೆಯಲ್ಲಿ ಮಲ್ಲಿಕಾರ್ಜುನನ ಭಕ್ತನಾಗಿದ್ದ ಕಾಲದಲ್ಲಿಯೆ, ಅವನು ಅಷ್ಟೇನೂ ದೂರವಲ್ಲದ ಕಲ್ಯಾಣದಲ್ಲಿದ್ದ ಬಸವಾದಿ ಶರಣರ ಹೆಸರುಗಳನ್ನು ಕೇಳಿರಬೇಕು; ಅವರ ತಾತ್ವಿಕವಾದ ಹಾಗೂ ಸಾಮಾಜಿಕವಾದ ನಿಲುವುಗಳಿಗೆ ಮಾರುಹೋಗಿರಬೇಕು; ಅವರ ವಚನಗಳನ್ನು ಅವರಿವರ ಮೂಲಕ ಕೇಳಿರಬೇಕು. ಹೀಗೆ ಕಲ್ಯಾಣ ಕ್ರಾಂತಿಯ ತರಂಗಗಳೂ ಸೊನ್ನಲಿಗೆಯವರೆಗೂ ವ್ಯಾಪಿಸಿಕೊಂಡಾಗ, ಸಿದ್ಧರಾಮನೂ ತನ್ನ ಅಂತರಂಗದ ಅಂದಂದಿನ ಅನುಭವಗಳನ್ನು ಅಭಿವ್ಯಕ್ತಪಡಿಸಬಲ್ಲ ವಚನ ಮಾಧ್ಯಮವನ್ನು ತಾನೂ ಇಷ್ಟಪಟ್ಟು ವಚನ ರಚನೆಗೆ ತೊಡಗಿರಬೇಕು. ಸ್ವತಃ ಸಾಧಕನೂ, ದಿನಬೆಳಗಾದರೆ ಸಾಮಾನ್ಯ ಜನದ ಸಂಪರ್ಕದಲ್ಲಿ ತನ್ನ ಕಾಯಕದಲ್ಲಿ ತೊಡಗಿದವನೂ ಆದ ಸಿದ್ಧರಾಮನು, ರೇವಣಸಿದ್ಧ ಪರಂಪರೆಯ ಸಂಸ್ಕೃತ ಪಾಂಡಿತ್ಯದಿಂದ ಭಿನ್ನವಾದ, ಮತ್ತು ಕನ್ನಡದ ಆಡುನುಡಿಗಳಲ್ಲಿಯೇ ಗಹನವಾದ ಆಧ್ಯಾತ್ಮಿಕ ಅನುಭವಗಳನ್ನು ತತ್ವಗಳನ್ನು ಗ್ರಹಿಸಿ ಅಭಿವ್ಯಕ್ತಿಸಬಲ್ಲ ಈ ಉಕ್ತಿಕ್ರಮವನ್ನು ಇಷ್ಟಪಟ್ಟದ್ದು ಮತ್ತು ಅದನ್ನು ಕರಗತ ಮಾಡಿಕೊಂಡದ್ದು ಆಶ್ಚರ್ಯವೇನಲ್ಲ. ಆದ್ದರಿಂದಲೇ ಅವನ ವಚನಗಳಲ್ಲಿ ಅವನ ಸಾಧಕ ಜೀವನದ ಚರಿತ್ರೆಯನ್ನೂ ಅವನ ಯೌಗಿಕ ಅನುಭವಗಳನ್ನೂ ನಾವು ಗುರುತಿಸಬಹುದು. ಮತ್ತು ಅವನು ಕಲ್ಯಾಣಕ್ಕೆ ಹೋಗಿ, ಚನ್ನಬಸವನಿಂದ ವೀರಶೈವ ದೀಕ್ಷೆಯನ್ನು ಪಡೆದು ಶರಣರ ‘ಮಹಾನುಭಾವ ಪ್ರಸಂಗ’ಗಳಲ್ಲಿ ಪಾಲುಗೊಂಡ ಮೇಲೆ, ಅವನ ವಚನ ರಚನೆಗಳಿಗೆ ಒಂದು ಉತ್ಕರ್ಷವೂ, ಮತ್ತು ಭಿನ್ನವಾದ ತಾತ್ವಿಕ ನಿಲುವುಗಳೂ ಪ್ರಾಪ್ತವಾಗಿರಬಹುದೆಂದು ಊಹಿಸಬಹುದು.

ವಚನಗಳನ್ನಲ್ಲದೆ ತ್ರಿವಿಧಿಗಳನ್ನು ಸಿದ್ಧರಾಮನು ಬರೆದಿದ್ದಾನೆ ಎನ್ನುವುದು ಒಂದು ವಿಶೇಷವಾಗಿದೆ. ಅವನು ಬರೆದ ಮೂರು ತ್ರಿವಿಧಿಗಳ ಪದ್ಯಗಳ ಒಟ್ಟು ಸಂಖ್ಯೆ ೩೭೦. ಬಸವಸ್ತೋತ್ರ ತ್ರಿವಿಧಿಯಲ್ಲಿ ೧೨೬ ಪದ್ಯಗಳೂ, ಮಿಶ್ರಸ್ತೋತ್ರ ತ್ರಿವಿಧಿಯಲ್ಲಿ ೧೦೯ ಪದ್ಯಗಳೂ, ಅಷ್ಟಾವರಣ ತ್ರಿವಿಧಿಯಲ್ಲಿ ೧೪೪ ಪದ್ಯಗಳೂ ಇವೆ. ಇವಲ್ಲದೆ ಪ್ರಭುದೇವರ ಗೋಪ್ಯ ಮತ್ತು ಮತ್ತು ಪದಮಂತ್ರ ಎಂಬ ಇನ್ನೆರಡು ಕೃತಿಗಳೂ ಸಿದ್ಧರಾಮನವೆಂದು ಹೇಳಲಾಗಿದೆ. ಈ ಮೂರು ತ್ರಿವಿಧಿಗಳು ನಾಲ್ಕು ಸಾಲಿನ ಬಂಧದ ಪದ್ಯಗಳಾಗಿವೆ. ಪ್ರತಿಯೊಂದರ ತುದಿಗೂ ಯೋಗಿನಾಥ ಎಂಬ ಅಂಕಿತವಿದೆ. ಇವುಗಳನ್ನು ಸಂಪಾದಿಸಿ ಪ್ರಕಟಿಸಿದ ಚನ್ನಪ್ಪ ಉತ್ತಂಗಿಯವರು, ಇವುಗಳು ‘ಒಂದು ತೆರದ ತ್ರಿಪದಿಗಳಿರಬೇಕೆಂದು ಭಾವಿಸಿ ಮೂಲದಲ್ಲಿರುವ ಪ್ರಕಾರ”೧೯ ತ್ರಿವಿಧಿ ಎಂದೇ ಕರೆದಿದ್ದಾರೆ.[4] ಬಸವಸ್ತೋತ್ರದ ತ್ರಿವಿಧಿ ಮುಖ್ಯವಾಗಿ ಬಸವಣ್ಣನವರನ್ನು ಕುರಿತ ತುಂಬ ಸೊಗಸಾದ ಸ್ತೋತ್ರ ಮಾಲಿಕೆಯಾಗಿದೆ. ಬಸವಣ್ಣನವರಿಂದ ತನ್ನ ಬದುಕಿಗೆ ಒದಗಿದ ಭಾಗ್ಯವನ್ನು ಕುರಿತು ಅತ್ಯಂತ ಪ್ರೀತಿ-ಗೌರವಗಳಿಂದ ಸಲ್ಲಿಸಿದ ಭಕ್ತಿಯ ಕಾಣಿಕೆಯಂತಿದೆ. ಮಿಶ್ರಸ್ತೋತ್ರದ ತ್ರಿವಿಧಿಯಲ್ಲಿ, ಬಸವಣ್ಣನವರ ಜತೆಗೆ, ಚನ್ನಬಸವಣ್ಣ, ಅಲ್ಲಮ ಪ್ರಭು, ನೀಲಾಂಬಿಕೆ, ಸೊಡ್ಡಳ ಬಾಚರಸ, ಬಹುರೂಪಿ ಚೌಡಯ್ಯ ಮೊದಲಾದ ಕಲ್ಯಾಣದ ಶರಣರನ್ನು ಕುರಿತ ಸ್ತುತಿಯಿದೆ. ಅಷ್ಟಾವರಣ ತ್ರಿವಿಧಿಯಲ್ಲಿ ತನ್ನ ಗುರು ‘ಯೋಗಿನಾಥ’ ನಿಂದ ತನಗಾದ ಅನುಭಾವಿಕ ಅರಿವಿನ ಸ್ವರೂಪವನ್ನು ಕುರಿತ ನಿರೂಪಣೆಯಿದೆ. ಮುಖ್ಯವಾಗಿ ಈ ತ್ರಿವಿಧಿಗಳು ತನಗೆ ಕಲ್ಯಾಣದ ಶರಣರ ಸಂಗದಲ್ಲಿ ಆಧ್ಯಾತ್ಮಿಕವಾಗಿ ದೊರೆತ ಹೊಸ ಎಚ್ಚರವನ್ನೂ, ಆ ಎಚ್ಚರಕ್ಕೆ ಕಾರಣರಾದ ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ ಮತ್ತಿತರ ಶರಣರನ್ನೂ ಕುರಿತ ಭಕ್ತಿಪೂರ್ವಕವಾದ ಸ್ಮರಣೆ ಹಾಗೂ ಗೌರವಗಳನ್ನು ಅಭಿವ್ಯಕ್ತಪಡಿಸುತ್ತವೆ. ಮತ್ತು ಸಿದ್ಧರಾಮನಿಗೆ ಕಲ್ಯಾಣದಲ್ಲಿ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯಾಯಿತೆಂಬ ಸಂಗತಿಯನ್ನು ಇವು ಖಚಿತಪಡಿಸುತ್ತವೆ. ಇನ್ನೂ ಒಂದು ಮುಖ್ಯವಾದ ವಿಷಯವೆಂದರೆ ಇವು ಕನ್ನಡದಲ್ಲಿ ರೂಪುಗೊಂಡ ಸ್ತೋತ್ರ ಸಾಹಿತ್ಯದ ಉತ್ಕೃಷ್ಟ ಮಾದರಿಗಳೂ ಆಗಿವೆ. ಸಿದ್ಧರಾಮನ ‘ಅನುಭಾವ’ವನ್ನು ಕುರಿತ ಎರಡು ಮಂತ್ರಗೋಪ್ಯಗಳು ಮುಖ್ಯವಾಗಿ ತಾತ್ವಿಕವಾದವುಗಳು. ಅಲ್ಲಿ ಬರುವ ತ್ರಿವಿಧಿಗಳಿಗೆ (ಅಲ್ಲಿ ಪದ ಎಂದು ಕರೆಯಲಾಗಿದೆ) ಸ್ತೋತ್ರ ರೂಪದ ತ್ರಿವಿಧಿಗಳಲ್ಲಿರುವಂಥ ಕಾವ್ಯದ ಸ್ಪರ್ಶವಿಲ್ಲ.

ಸಿದ್ಧರಾಮನ ವಚನಗಳ ಅಂಕಿತ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಅನ್ನುವುದು. ಈ ಅಂಕಿತವು ‘ಕಪಿಲಸಿದ್ಧ ಮಲ್ಲಯ್ಯ’ ‘ಕಪಿಲಸಿದ್ಧ ಮಲ್ಲಿನಾಥಾ’ ‘ಕಪಿಲಸಿದ್ಧ ಮಲ್ಲೇಶ್ವರಯ್ಯ’ ‘ಕಪಿಲಸಿದ್ಧ ಮಲ್ಲಿಕಾರ್ಜುನ ದೇವಾ’ ಎಂದೂ ಕಾಣಿಸಿಕೊಂಡಿದೆ. ಇವೆಲ್ಲವೂ ಮುಖ್ಯವಾಗಿ ಸೊನ್ನಲಿಗೆಯಲ್ಲಿ ಸ್ಥಾಪಿತವಾದ ‘ಕಪಿಲಸಿದ್ಧ ಮಲ್ಲಿಕಾರ್ಜುನ’ನೆಂಬ ಆತನ ಇಷ್ಟದೈವವನ್ನು ಸೂಚಿಸುತ್ತವೆ. ಅಂದಿನ ವಚನಕಾರರ ಅಭಿವ್ಯಕ್ತಿಗಳು ಬಹುಮಟ್ಟಿಗೆ ಅವರವರ ಇಷ್ಟದೈವದ ಅಂಕಿತವನ್ನೊಳ- ಗೊಂಡವಾಗಿವೆ ಎನ್ನುವುದು ಪರಿಚಿತವಾದ ಸಂಗತಿಯಾಗಿದೆ. ಸಿದ್ಧರಾಮನ ವಚನಗಳಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನನ ಅಂಕಿತದ ವಿವಿಧ ಸಂಬೋಧನೆಗಳ ಜತೆಗೆ ‘ಯೋಗಿನಾಥಾ’ ಎಂಬ ಅಂಕಿತವೂ ಕ್ವಚಿತ್ತಾಗಿ ಕಾಣಿಸಿಕೊಳ್ಳುತ್ತದೆ. ವಾಸ್ತವವಾಗಿ ಯೋಗಿನಾಥ ಅನ್ನುವುದು ಆತನ ಮೂರೂ ತ್ರಿವಿಧಿಗಳಲ್ಲಿ ನಿಯತವಾಗಿ ಕಾಣಿಸಿಕೊಳ್ಳುವ ಅಂಕಿತವಾಗಿದೆ.

ಸಿದ್ಧರಾಮನ ಅಂಕಿತವಾದ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವು ಸೊನ್ನಲಿಗೆಯ ಆತನ ಇಷ್ಟದೈವವನ್ನು ಸೂಚಿಸುತ್ತದಾದರೂ, ಈ ಅಂಕಿತದಲ್ಲಿರುವ ‘ಕಪಿಲ’ ಎಂಬುದರ ಅರ್ಥವೇನು ಅನ್ನುವುದೊಂದು ಪ್ರಶ್ನೆಯಾಗಿದೆ. ಈ ಅಂಕಿತದಲ್ಲಿರುವ ‘ಸಿದ್ಧ’ ಅನ್ನುವುದಾಗಲಿ, ‘ಮಲ್ಲಿಕಾರ್ಜುನ’ ಅನ್ನುವುದಾಗಲಿ- ತೊಡಕಾಗೇನೂ ಇಲ್ಲ. ಯಾಕೆಂದರೆ ಅವೆರಡೂ ಸೇರಿ ಯೋಗಿಯಾದ ಮಲ್ಲಿಕಾರ್ಜುನನನ್ನು (ಶ್ರೀಶೈಲದ ಅಧಿದೇವತೆಯಾದ ಶಿವನನ್ನು) ಸೂಚಿಸುತ್ತವೆ. ಆದರೆ ‘ಕಪಿಲ’ ಎಂಬ ಪದಕ್ಕೆ ಸಾಂಖ್ಯದರ್ಶನವನ್ನು ನಿರೂಪಿಸಿದ ಒಬ್ಬ ಋಷಿ ಎಂದೂ, ‘ಕಪಿಲ’ ಎಂಬುದು ಶಿವ ಎಂಬ ಪದಕ್ಕೆ ಸಂವಾದಿಯಾದ ಪದ ಎಂದೂ ಕೋಶಗಳು ಹೇಳುತ್ತವೆ.[5] ಈ ಅರ್ಥಗಳಿಂದ ಸಿದ್ಧರಾಮನ ಅಂಕಿತದಲ್ಲಿರುವ ‘ಕಪಿಲ’ ಪದದ ಅರ್ಥವಂತಿಕೆಗೆ ಅಷ್ಟೇನೂ ಸಹಾಯವಾಗುವುದಿಲ್ಲ. ಗುಬ್ಬಿಯ ಶಾಸನವೊಂದು (ಕ್ರಿ.ಶ. ೧೮೯೬) ‘ಶ್ರೀಶೈಲಮಲ್ಲಿಕಾರ್ಜುನನು ತಾಳಿದ ಮಲ್ಲೇಶ್ವರ, ಕಪಿಲಸಿದ್ಧ ಮತ್ತು ಅಮರಗೊಂಡಾಧೀಶ್ವರ ಎಂಬ ಅವತಾರಗಳನ್ನು ಕ್ರಮವಾಗಿ ವಿವರಿಸುತ್ತ, ಕಪಿಲಸಿದ್ಧ ಮಲ್ಲಿಕಾರ್ಜುನನಾದ ಸಮಯದಲ್ಲಿ ಆತನು ರಾಮನಿಂದ ಪೂಜೆಗೊಂಡನು ಎಂದು ತಿಳಿಸುತ್ತದೆ. ಈ ರಾಮನು ಶಿವಯೋಗಿ ಸಿದ್ಧರಾಮನಾಗಿರಬಹುದು’[6] ಎಂದು ಡಾ. ಎಂ. ಎಂ. ಕಲಬುರ್ಗಿಯವರು ಹೇಳುತ್ತಾರೆ. ಈ ಶಾಸನದ ಪ್ರಕಾರ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಅನ್ನುವುದು, ಶ್ರೀಶೈಲದ ಮಲ್ಲಿಕಾರ್ಜುನನ ಅವತಾರಗಳಲ್ಲಿ ಒಂದು ಎಂದಂತಾಯಿತು, ಅಷ್ಟೇ. ಹಾಗೆ ನೋಡಿದರೆ ಸೊನ್ನಲಿಗೆಯಲ್ಲಿ ಸಿದ್ಧರಾಮನು ಸ್ಥಾಪಿಸಿದ ‘ಕಪಿಲಸಿದ್ಧ ಮಲ್ಲಿಕಾರ್ಜುನ’ನು ಆ ಶ್ರೀಶೈಲದ ಮಲ್ಲಿಕಾರ್ಜುನನ ಬೇರೊಂದು ‘ಅವತಾರ’ವಲ್ಲದೆ ಮತ್ತಿನ್ನೇನು!

ಅವನ ವಚನಗಳಲ್ಲಿ ಕ್ವಚಿತ್ತಾಗಿ ಕಾಣಿಸಿಕೊಳ್ಳುವ ‘ಯೋಗಿನಾಥ’ ಎಂಬ ಅಂಕಿತವು ಅವನ ತ್ರಿವಿಧಿಗಳ ಅಂಕಿತವೂ ಆಗಿದೆ. ‘ಯೋಗಿನಾಥ’ ಅನ್ನುವುದು ಅವನೇ ತನ್ನ ಕೊನೆಯ ದಿನಗಳಲ್ಲಿ ಕೆರೆಯ ನಡುವೆ ಸ್ಥಾಪಿಸಿದ ಯೋಗಿನಾಥ ದೇವಾಲಯದ, ಯೋಗಿಗಳ ನಾಥನಾದ ಶಿವನನ್ನು ಸೂಚಿಸುತ್ತದೆಯೋ ಅಥವಾ ಯೋಗಿಯೆಂದೂ ಸಿದ್ಧನೆಂದೂ ಹೆಸರಾದ ಸಿದ್ಧರಾಮನನ್ನೆ ಸೂಚಿಸುತ್ತದೆಯೋ ಅಥವಾ ಅವನ ಗುರುವಾದ ಚನ್ನಬಸವಣ್ಣನವರನ್ನು ಸೂಚಿಸುತ್ತದೆಯೋ ಎಂಬ ಚರ್ಚೆಗೂ ಅವಕಾಶವಾಗಿದೆ.[7] ಹಾಗೆಯೇ ವಚನಗಳಲ್ಲಿ ಒಂದು ಅಂಕಿತ, ತ್ರಿವಿಧಿಗಳಿಗೆ ಇನ್ನೊಂದು ಅಂಕಿತ ಬಳಕೆಯಾಗಿರುವ ಕ್ರಮವನ್ನು ಶಂಕಿಸಿ ಈ ತ್ರಿವಿಧಿಗಳನ್ನು ಸಿದ್ಧರಾಮನ ಅನಂತರ ಯಾರೋ ಬರೆದು ಅವನ  ಹೆಸರಿನಲ್ಲಿ ಪ್ರಚುರ ಪಡಿಸಿರಬಹುದು ಎಂಬ ಸಂದೇಹಗಳೂ ಮೊದಮೊದಲಲ್ಲಿ ವಿದ್ವಾಂಸರನ್ನು ಕಾಡಿದ್ದವು. ಸರ್ವಜ್ಞನು ತನ್ನ ತ್ರಿಪದಿಗಳಲ್ಲಿ, ತನ್ನ ‘ಸರ್ವಜ್ಞ’ ಎಂಬ ಅಂಕಿತವನ್ನೇ ಬಳಸಿರುವಂತೆ, ಸಿದ್ಧರಾಮನು ತನ್ನನ್ನೆ ಯೋಗಿನಾಥನೆಂಬ ಅಂಕಿತದ ಮೂಲಕ ಪ್ರತಿಯೊಂದು ತ್ರಿವಿಧಿಯ ತುದಿಗೂ ಕಾಣಿಸಿಕೊಂಡಿರುವುದು ಹೆಚ್ಚು ಸಂಭವನೀಯವೆಂದು ತೋರುತ್ತದೆ. ‘ಯೋಗಿನಾಥ’ನೆಂಬ ಅಂಕಿತವು ಸಿದ್ಧರಾಮನಿಗೂ, ‘ಕಪಿಲ ಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವು ಅವನು ಪೂಜಿಸುತ್ತಿದ್ದ ದೇವರಿಗೂ ಪ್ರಯೋಗ- ವಾಗಿರುವಂತೆ ಕರತಲಾಮಲಕವಾಗುತ್ತವೆ.’[8]

ವಚನಗಳು ಒಂದು ಭಾಷೆಯ ಸಂದರ್ಭದಲ್ಲಿ ಸಂಭವಿಸಿದವುಗಳಾದರೂ ಅವು ಕೇವಲ ವಾಗ್‌ರಚನೆಗಳು ಮಾತ್ರವಲ್ಲ. ಯಾಕೆಂದರೆ ಅವು ಕೃತಿರಚನೆಯ ಉದ್ದೇಶದಿಂದ ಕೂತ ಕವಿಯ ಅಥವಾ ಸಾಹಿತಿಯ ಅಭಿವ್ಯಕ್ತಿಗಳಲ್ಲ; ಅಥವಾ ಯಾವುದೇ ಶಾಸ್ತ್ರವಿಚಾರಗಳ ನಿರೂಪಣೆಗೆ ತೊಡಗಿದ ವಿದ್ವಾಂಸನ ಅಭಿವ್ಯಕ್ತಿಯೂ ಅಲ್ಲ. ಅವು ಹುಟ್ಟಿಕೊಂಡದ್ದು ಒಟ್ಟಾರೆಯಾಗಿ ಪುಸ್ತಕ ವಿದ್ಯೆಯನ್ನೆ ನಿರಾಕರಿಸಿದ ಆಧ್ಯಾತ್ಮಸಾಧಕರು ಅಂದಂದಿನ ಅಂತರಂಗ ಬಹಿರಂಗ ಜಗತ್ತ್ತಿನೊಂದಿಗೆ ನಡೆಯಿಸಿದ ಅನುಸಂಧಾನಗಳ ಪರಿಣಾಮವಾಗಿ. ಆದ್ದರಿಂದಲೆ ಸಿದ್ಧರಾಮನು ವಚನದ ಸ್ವರೂಪವನ್ನು ಕುರಿತು ‘ವಚನಾನುಭವ ವಾಗ್‌ರಚನೆಯಲ್ಲ ಮನವೆ, ವಚನಾನುಭವ ವಾಗ್‌ರಚನೆಯಲ್ಲ’ (೧೨೭೬) ಅನ್ನುತ್ತಾನೆ. ಯಾಕೆಂದರೆ ವಚನಗಳಲ್ಲಿ ಅನುಭೂತವಾಗುವ ಆ ವಿಶೇಷಾನುಭವವು ಕೇವಲ ‘ವಾಗ್ರಚನೆ’ಗೆ ನಿಲುಕುವಂಥದಲ್ಲ; ಆದು ಅದರಾಚೆಯದು. ಮತ್ತು ಇಂಥ ವಾಗ್ರಚನೆಗೆ ಸಿಲುಕದ ಅಂತರನುಭವವನ್ನು ಹಿಡಿದಿಡಲು ವಾಕ್‌ರೂಪದ ಭಾಷೆಯನ್ನೆ ಅವಲಂಬಿಸುವುದು ಅನಿವಾರ್ಯವಾದರೂ, ಅದರ ಮುಖ್ಯ ಉದ್ದೇಶ ತಮ್ಮೊಳಗನ್ನು ಶೋಧಿಸಿಕೊಳ್ಳುತ್ತ ‘ಅಂತರಂಗದ ರತ್ನ’ವಾದ ಅನುಭಾವದೊಂದಿಗೆ ತಮ್ಮನ್ನು ಸಾಂಗತ್ಯಗೊಳಿಸಿಕೊಳ್ಳುವುದೇ ಆಗಿದೆ. ಈ ಅಂತರಂಗ ಶೋಧನಕ್ರಿಯೆಯ ಪರಿಣಾಮವಾದ ವಚನಗಳಲ್ಲಿ ನಾವು ಸಾಧಕನ ಬದುಕಿನ ಹೆಜ್ಜೆಗಳನ್ನು ಗುರುತಿಸಬಹುದು. ಈ ದೃಷ್ಟಿಯಿಂದ ಸಿದ್ಧರಾಮನ ಬಹುಸಂಖ್ಯೆಯ ವಚನಗಳನ್ನಿರಿಸಿಕೊಂಡು ನೋಡಿದರೆ, ನಮ್ಮ ನಿಮ್ಮಂತೆ ಒಬ್ಬ ಮನುಷ್ಯನಾದ ಸಿದ್ಧರಾಮನು ಈ ಜಗತ್ತಿನ ಜಂಜಡಗಳಲ್ಲಿ ತೇಕಾಡುತ್ತಾ ಅವೆಲ್ಲವನ್ನೂ ಮೀರುತ್ತ ಒಬ್ಬ ಆಧ್ಯಾತ್ಮಿಕ ಸಾಧಕನಾಗಿ ಅನುಭಾವದ ಹಾದಿಯಲ್ಲಿ ಹೇಗೆ ನಡೆದು ಮಹಾಯೋಗಿಯಾದನೆಂಬ ಚಿತ್ರವೊಂದು ಸ್ಫುಟವಾಗಿ ಬಿಚ್ಚಿಕೊಳ್ಳುತ್ತದೆ:

ಸಿದ್ಧರಾಮನು ತನ್ನ ಎಳೆಯಂದಿನ, ಸಾಧಕಾವಸ್ಥೆಯ ಪೂರ್ವರಂಗವನ್ನು, ನೆನಪು ಮಾಡಿಕೊಂಡು ದಾಖಲಿಸಿದಂತಿರುವ ಕೆಲವು ವಚನಗಳು ಹೀಗಿವೆ:

ದೇವನಿಂತಹನೆಂದು ನಂಬಲಾಗದಯ್ಯ
ಬಾ ಎಂದು ಹೇಳಿ ಬಯಲಾದ ದೇವನೊಳ್ಳಿದನೆ?’          (೮೮೯)

*     *     *
ಹರಿದು ಹತ್ತುವೆನವನ, ಹತ್ತಿ ಮನವಮುಟ್ಟಿ ಹಿಡಿವೆನವನ
ಮಹಾ ಪ್ರಚಂಡ ಮನದಿಂದ ಕಪಿಲಸಿದ್ಧ ಮಲ್ಲಿಕಾರ್ಜುನನ ಹಿಡಿವೆನು       (೮೧೭)

*     *     *
ಗಿರಿಗಹ್ವರದೊಳಗರಸಿ ತೊಳಲಿಬಳಲಿದೆನವ್ವಾ
ನೋಡಿ ನೋಡಿ ಕಣ್ಣುನಟ್ಟು ಆಲಿ ಬಿದ್ದುದವ್ವಾ    (೩೭೫)

*     *     *
ನಟ್ಟಡವಿಯೊಳಗೆ ಇರುಳು ಹಗಲೆನ್ನದೆ
‘ಆಪ್ಪಾ ಅಯ್ಯಾ’ ಎಂದು ನಾನರಸುತ್ತ ಹೋದಡೆ
‘ನಾನಿದ್ದೇನೆ ಬಾ ಮಗನೆ’ ಎಂದು ಕರೆದು, ಕಂಬನಿದೊಡೆದು
ತನ್ನ ನಿಜವ ತೋರಿದ ಗುರು…         (೫೦೦)

ಈ ನಾಲ್ಕು ವಚನಗಳು ಸಿದ್ಧರಾಮನ ಬದುಕಿನ ಮೊದಲ ಹಂತದ ಹಲವು ಘಟನೆಗಳನ್ನು ಸೂಚಿಸುತ್ತವೆ. ಮೊದಲನೆಯದು, ಶ್ರೀಶೈಲದ ಮಲ್ಲಯ್ಯನು ನವಣೆಯ ಹೊಲದ ಬಳಿ ಕಾಣಿಸಿಕೊಂಡು ‘ಹಂಜಕ್ಕಿ’ಯನ್ನು ಬೇಡಿ ಅದನ್ನು ತಾ ಎಂದು ಮುಗ್ಧರಾಮನನ್ನು ಮನೆಗೆ ಕಳುಹಿಸಿ, ಅನಂತರ ಅವನು ಮನೆಯಿಂದ ಹಿಂದಿರುಗಿ ಬರುವುದರೊಳಗೆ ಕಾಣೆಯಾದಾಗ ಸಿದ್ಧರಾಮನ ಪ್ರತಿಕ್ರಿಯೆಯನ್ನು ಹಿಡಿದಿರಿಸಿದೆ. ಎರಡನೆಯ ಉಲ್ಲೇಖ, ಹೀಗೆ ಕಾಣೆಯಾದ ಮಲ್ಲಯ್ಯನನ್ನು ತಾನು ಏನಾದರೂ ಕಂಡೇ ಕಾಣುತ್ತೇನೆ ಎನ್ನುವ ದೃಢನಿರ್ಧಾರದ ಉದ್ಗಾರಗಳನ್ನೂ, ಮೂರು ನಾಲ್ಕನೆಯ ಉಲ್ಲೇಖಗಳು, ಸಿದ್ಧರಾಮನು ಮಲ್ಲಯ್ಯನಿಗಾಗಿ ಶ್ರೀಶೈಲದ ಪರ್ವತಾರಣ್ಯಗಳಲ್ಲಿ ಹುಡುಕಿಕೊಂಡು ಅಲೆದ ಸಂದರ್ಭದ ಮನಃಸ್ಥಿತಿಯನ್ನೂ, ಅನಂತರ ಅವನಿಗೊದಗಿದ ವಾತ್ಸಲ್ಯಪೂರ್ಣವಾದ ಮಲ್ಲಯ್ಯನ ಕಾರುಣ್ಯವನ್ನೂ ಸೂಚಿಸುತ್ತವೆ. ಈ ಕೆಲವು ವಚನಗಳ ಪ್ರೇರಣೆಯಿಂದ ರಾಘವಾಂಕ ತನ್ನ ಸಿದ್ಧರಾಮಚಾರಿತ್ರದಲ್ಲಿ ಭಕ್ತಿರಸದ ಉತ್ಕಟತೆಯನ್ನು ಅಪೂರ್ವವಾಗಿ ಚಿತ್ರಿಸಿದ್ದಾನೆ.

ಸಿದ್ಧರಾಮನ ಬದುಕಿನ ಎರಡನೆಯ ಹಂತ, ಅವನು ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನನ ದೇವಾಲಯವನ್ನು ಸ್ಥಾಪಿಸಿ, ಕೆರೆ-ಬಾವಿ-ಸತ್ರ- ಯೋಗಮಜ್ಜನಸಾಲೆ, ಅರವಟ್ಟಿಗೆ ಇತ್ಯಾದಿ ಲೋಕೋಪಕಾರಕವಾದ ಕಾರ‍್ಯಗಳಲ್ಲಿ ಮಗ್ನವಾಗುತ್ತ, ಮಲ್ಲಿಕಾರ್ಜುನನ ಆರಾಧನೆ- ಆರ್ಚನೆ – ಸೇವೆ – ಅಭಿಷೇಕ, ನೇಮ – ಹೋಮಾದಿಗಳಲ್ಲಿ, ತೊಡಗುತ್ತ ‘ಶೈವಸಾಮ್ರಾಜ್ಯ’ವನ್ನು ಬೆಳೆಯಿಸಿದ ಪರಿಯನ್ನು ಕುರಿತದ್ದು. ಸಿದ್ಧರಾಮನನ್ನು ಕುರಿತ ಕಾವ್ಯ ಪುರಾಣಗಳು ಅವನ ಮಹಿಮಾ ವಿಶೇಷಗಳನ್ನೂ, ಅವನ ಜನೋಪಯೋಗಿ ಕಾಯಕವನ್ನೂ ಅವನು ಸ್ಥಾಪಿಸಿದ  ದೇವಾಲಯಾದಿಗಳಲ್ಲಿ ನಡೆಯುತ್ತಿದ್ದ ಆರ್ಚನೆ ಆರಾಧನೆ- ಉತ್ಸವಾದಿ ಸಂಭ್ರಮಗಳನ್ನೂ ವರ್ಣಿಸಿದರೆ, ಸಿದ್ಧರಾಮನ ಅನೇಕ ವಚನಗಳು ಮುಖ್ಯವಾಗಿ ಅವನ ಅಂತರಂಗದ ಸಾಧಕ ಜೀವನದ ಸಂಘರ್ಷಗಳನ್ನೂ ಅವನ ಯೌಗಿಕವಾದ  ಅನುಭವಗಳನ್ನೂ ಚಿತ್ರಿಸುತ್ತವೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ನಿದರ್ಶನಕ್ಕೆ ಈ ಕೆಲವು ವಚನಗಳ ತುಣುಕುಗಳನ್ನು ನೋಡಬಹುದು:

ಅಯ್ಯಾ ಕಾಮ ಕಾಡಿತ್ತು ಕ್ರೋಧ ಕೊಂದಿತ್ತು
ನಾನು ಸಂಸಾರವೆಂಬ ತೆಪ್ಪದೊಳಗಿರ್ದು
ಭವವೆಂಬ ಸಮುದ್ರದೊಳಗೆ ಮುಳುಗುತಿದ್ದೇನಯ್ಯಾ     (೫೫೧)

ಸಂಸಾರವೆಂಬ ರಾಹುವಿನ ಅಣಲೊಳಗೆ ಇದ್ದಹೆನಯ್ಯ
ಆವಾಗ ನುಂಗಿತೆಂದರಿಯೆ, ಆವಾಗ ಉಗುಳಿತೆಂದರಿಯೆ
ಆದರ ಬಾಯಿಂದೆನ್ನ ತೆಗೆದು ಕಾಯಯ್ಯಾ       (೭೬೨)

ಅಯ್ಯಾ ನಾನೊಂದ ಬೇಡುವೆ ನಿಮ್ಮಲ್ಲಿ
ಎನಗೊಂದು ಲೇಸ ಮಾಡಯ್ಯ
ನಾರಿಯರುರದ ಗಾಳಿ ಸೋಂಕದಂತೆ ಎನ್ನುವ
ಮಂತ್ರಿಸಿ ರಕ್ಷಿಸಯ್ಯ     (೫೭)

ಸಂಸಾರವೆಂಬ ಅರಣ್ಯದೊಳಗೆ,
ಕಾಮನೆಂಬ ಬೇಟೆಗಾರನ ಬಾರಿಗೊಪ್ಪಿಸದಿರು   (೯೧)

ಎಸೆವಡೆದ ಮೃಗದಂತೆ ಎನ್ನಮನ ಶಂಭುವೆ     (೨೭೨)

ಕಾಮವಿಕಾರಕ್ಕೆ ಕಳವಳಿಸಿ ಮನವು
ಹೇಮದಿಚ್ಛೆಗೆ ಹಚ್ಚಿ ಹೆಚ್ಚಿ
ಕಾಮಾರಿ, ನಿಮ್ಮುವ ನೆನೆಯಲೀಯದೀ ಮನವು  (೩೩೨)

ಈ  ಕೆಲವು ಉಕ್ತಿಗಳು ಒಬ್ಬ ಅಧ್ಯಾತ್ಮ ಸಾಧಕನಾಗಿ ಸಿದ್ಧರಾಮನು ಪಟ್ಟಪಾಡುಗಳನ್ನು ಚಿತ್ರಿಸುತ್ತವೆ. ಅಷ್ಟೇ ಅಲ್ಲ, ಸಿದ್ಧರಾಮನ ಹದಿನೈದಕ್ಕೂ ಹೆಚ್ಚು ಸಂಖ್ಯೆಯ ‘ಸತಿಪತಿಭಾವ’ದ ವಚನಗಳು,[9] ಕಪಿಲ ಸಿದ್ಧಮಲ್ಲಿನಾಥನಿಗಾಗಿ ಭಕ್ತ ಹೃದಯದ ವಿರಹದ ಕೊರಗುಗಳನ್ನೂ, ಹಂಬಲಗಳನ್ನೂ ಬಹು ಸೊಗಸಾಗಿ ಪರಿಚಯಮಾಡಿಕೊಡುತ್ತವೆ. ಅದರ ಜೊತೆಗೆ ಸಿದ್ಧರಾಮನ ಯೌಗಿಕ ಅನುಭವಗಳನ್ನು ನಿರೂಪಿಸುವ ಇಪ್ಪತ್ತಕ್ಕೂ ಹೆಚ್ಚು ಸಂಖ್ಯೆಯ ವಚನಗಳಿವೆ[10] ಈ ವಚನಗಳ ಭಾಷೆ-ಪರಿಭಾಷೆಗಳನ್ನು ಅರ್ಥಮಾಡಿಕೊಂಡು ಸಿದ್ಧರಾಮನ ಯೋಗದ ಲಕ್ಷಣವನ್ನು ವ್ಯಾಖ್ಯಾನಿಸುವ ಕೆಲಸ ಇನ್ನೂ ಆಗಬೇಕಾಗಿದೆ.

“ಯೋಗದ ದೃಷ್ಟಿಯಿಂದ ಶೈವ ಹಾಗೂ ವೀರಶೈವ ದರ್ಶನಗಳಲ್ಲಿ ವ್ಯತ್ಯಾಸ ಸೂಚಿಸುವ ಪ್ರಮುಖ ಅಂಶವೆಂದರೆ ಇಷ್ಟಲಿಂಗ. ಶೈವರು ದೇವಾಲಯಗಳಲ್ಲಿ ಸ್ಥಾವರಲಿಂಗೋಪಾಸನೆ ಮಾಡಿದರೆ, ವೀರಶೈವರು ಕರಸ್ಥಲದ ಇಷ್ಟಲಿಂಗವನ್ನು ಪೂಜಿಸುವರು. ಆದರೆ ಈ ಕರಸ್ಥಲದ ಇಷ್ಟಲಿಂಗವಾಗಲಿ, ದೇವಸ್ಥಾನದ ಸ್ಥಾವರಲಿಂಗವಾಗಲಿ, ಒಂದೇ ನಿಃಕಲ ನಿರಾಕಾರ ಪರಬ್ರಹ್ಮದ, ಸಕಲ, ಸಾಕಾರರೂಪಗಳು, ಸ್ಥಾವರಲಿಂಗವನ್ನು ನೋಡುತ್ತ ಅದರಲ್ಲಿಯೆ ಚಿತ್ತವೃತ್ತಿಯನ್ನು ನೆಲೆಗೊಳಿಸಿ ಧ್ಯಾನದ ಪರಮ ಸೀಮೆಯನೈದಿ ಶೈವರು ಸಮಾಧಿಯನ್ನು ಸಾಧಿಸುವರು. ವೀರಶೈವರು ಕರಸ್ಥಲದ ಇಷ್ಟಲಿಂಗದಲ್ಲಿ ಅರೆವಿರಿದ ತಾವರೆಯಂತಹ ನಿರ್ನಿಮೇಷ ದೃಷ್ಟಿಯನ್ನು ನಟ್ಟು ಆಯತದಿಂದ ಸ್ವಾಯತಕ್ಕೆ, ಅಲ್ಲಿಂದ ಸನ್ನಿಹಿತಕ್ಕೆ ಸಾಗಿ ನಿರ್ವಯಲಿನ ಸ್ಥಿತಿಯನ್ನು ಹೊಂದುತ್ತಾರೆ. ಆದುದರಿಂದ ಶಿವಯೋಗದ ದೃಷ್ಟಿಯಲ್ಲಿ ವೀರಶೈವರಿಗಾಗಲಿ, ಶೈವರಿಗಾಗಲಿ, ದೃಷ್ಟಿಯೋಗ ಅಥವಾ ರಾಜಯೋಗವೇ ಪ್ರಮುಖ ಭೂಮಿಕೆಯಾಗಿದೆಯೆಂಬ ಮಾತು ಸ್ಪಷ್ಟವಾಗಿ ವೇದ್ಯವಾಗುತ್ತದೆ.”[11] ಶೈವ ಸಂಪ್ರದಾಯಕ್ಕೆ ಸೇರಿದ ಸಿದ್ಧರಾಮನು ಬಹುಕಾಲ ಸ್ಥಾವರಲಿಂಗಾರ್ಚಕನಾಗಿದ್ದವನು. ಆತ ಸ್ಥಾವರಲಿಂಗವಾದ ಮಲ್ಲಿಕಾರ್ಜುನನ ಮೇಲೆ ದೃಷ್ಟಿಯನ್ನಿರಿಸಿ ತನ್ನ ಚಿತ್ತವೃತ್ತಿಗಳನ್ನು ಲಯಗೊಳಿಸಿ ಶಿವಯೋಗವನ್ನು ಸಾಧಿಸಿದವನು. ಆಗಮಿಕ ಕರ್ಮಯೋಗದ ಪ್ರಭಾವದಿಂದ ಆತ ಕೈಕೊಂಡ  ಗುಡಿಗೋಪುರ, ಕೆರೆ ಅರವಟ್ಟಿಗೆಗಳ ನಿರ್ಮಾಣವೂ, ದೇವಸ್ಥಾನಕೇಂದ್ರಿತವಾದ ವಿವಿಧ ವ್ರತನೇಮಾದಿ ಉಪಾಸನೆಗಳೂ, ದಾನ ಧರ್ಮಾದಿಗಳೂ ಅವನ ಸಾಕಾರ ನಿಷ್ಠೆಯ ವಿಸ್ತರಣೆಗಳಾಗಿವೆ. ಹಾಗೆಯೆ “ಅಷ್ಟಾಂಗಯೋಗ, ಪಂಚಯೋಗ, ಚತುರ್ಯೋಗ, ಏಕಮುದ್ರೆ, ತ್ರಿಮುದ್ರೆ, ಬಹುಮುದ್ರೆಗಳ ಅನುಭವಜ್ಞಾನ ಆತನಿಗಿದ್ದಂತೆ ತೋರುತ್ತದೆ.”[12] (ನೋಡಿ ವ. ೧೦೪೩ ಕ.ವಿ.ವಿ.) ಅವನದೊಂದು ವಚನದಲ್ಲಿ ‘ಯೋಗದ ಹೊಲಬ ನಾನೆತ್ತಬಲ್ಲೆನಯ್ಯಾ’ ಎನ್ನುವ ವಿನಯದಿಂದಲೆ, ‘ಯೋಗವೆಂದರೆ ಶಿವ-ಶಕ್ತಿ ಸಂಪುಟವಾಗಿಪ್ಪುದಲ್ಲದೆ, ಶಿವಶಕ್ತಿವಿಯೋಗವಪ್ಪ ಯೋಗವಿಲ್ಲವಯ್ಯಾ’ (ವ. ೧೦೪೪ ಕ.ವಿ.ವಿ.) ಎನ್ನುತ್ತಾನೆ. ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ- ಎಂಬ ಷಟ್‌ಚಕ್ರಗಳ ಮೂಲಕ ಯೋಗಸಾಧನೆ ಮಾಡುವ ಕ್ರಮವನ್ನು ಹಾಗೂ ಯೋಗದ ಸ್ವರೂಪವನ್ನೂ (ವ. ೧೦೪೭. ಕ.ವಿ.ವಿ) ವಿವರಿಸುತ್ತಾನೆ. ಸ್ಥಾವರಲಿಂಗವನ್ನು ಕೇಂದ್ರದಲ್ಲಿರಿಸಿ ಕೊಂಡು, ವೇದಾಂತಜ್ಞಾನಮೂಲವಾದ ಅಷ್ಟಾಂಗಯೋಗಮಾರ್ಗದ ಧ್ಯಾನ-ಧಾರಣ- ಸಮಾಧಿಯಲ್ಲಿರುತ್ತ ಕರ್ಮದಲ್ಲಿ ತೊಡಗಿದ ಸಿದ್ಧರಾಮನ ಬದುಕಿನ ಕ್ರಮದಲ್ಲಿ ಹಾಗೂ ಯೋಗಮಾರ್ಗದಲ್ಲಿ ಒಂದು ಪ್ರಮುಖ ತಿರುವು ಉಂಟಾದದ್ದು, ಮಹಾ ಅನುಭಾವಿಯಾದ ಅಲ್ಲಮನ ಸಂಪರ್ಕ ಮತ್ತು ಮಾರ್ಗದರ್ಶನ ಒದಗಿದಾಗ. ಈ ಸಂದರ್ಭವು ಸಿದ್ಧರಾಮನ ಅನೇಕ ವಚನಗಳಲ್ಲಿ ದಾಖಲಾಗಿದೆ.

ಸಿದ್ಧರಾಮನಿಗೆ ಅಲ್ಲಮನೊಂದಿಗೆ ಒದಗಿದ ಮುಖಾಮುಖಿ ಮತ್ತು ಅನಂತರ ಅವನನ್ನು ಕಲ್ಯಾಣಕ್ಕೆ ಕರೆದುಕೊಂಡುಹೋಗಿ ಚನ್ನಬಸವಣ್ಣನವರಿಂದ ಲಿಂಗದೀಕ್ಷೆಯನ್ನು ಅಲ್ಲಮನು ಕೊಡಿಸಿದನೆಂಬ ಸಂಗತಿಯೂ ಮತ್ತು ಈ ಘಟನೆಯ ನಂತರ ಸಿದ್ಧರಾಮನಲ್ಲಾದ ಪರಿವರ್ತನೆಯ ಪ್ರತಿಕ್ರಿಯೆಗಳೂ ಈಗಾಗಲೆ ಪ್ರಸ್ತಾಪಿಸಿರುವಂತೆ ಹದಿನೈದನೆಯ ಶತಮಾನದ ನಂತರದ ಕೃತಿಗಳಲ್ಲಿ ಅತ್ಯುತ್ಸಾಹದಿಂದ ನಿರೂಪಿತವಾಗಿವೆ. ಈ ಸಂದರ್ಭಕ್ಕೆ ಸಂಬಂಧಿಸಿದ ಎಷ್ಟೋ ವಚನಗಳು ಮುಖ್ಯವಾಗಿ ಶೂನ್ಯಸಂಪಾದನಕಾರರಿಂದ ರಚಿತವಾಗಿ, ಇತ್ತೀಚಿಗಿನ ಗ್ರಂಥ ಸಂಪಾದನಕಾರರಿಂದ, ಅವೂ ಸಿದ್ಧರಾಮ ಕೃತವೆಂದೇ ಅಂಗೀಕರಿಸಲ್ಪಟ್ಟಂತೆ ತೋರುತ್ತದೆ. ಆದರೆ ಈಗ ಸಮಗ್ರವಾಗಿ ದೊರೆಯುವ ಸಿದ್ಧರಾಮನ ವಚನಗಳಲ್ಲಿ, ಮೂಲದಲ್ಲಿ ಸಿದ್ಧರಾಮನಿಂದ ರಚಿತವಾದುವೆಷ್ಟು ಅನಂತರ ಪ್ರಕ್ಷೇಪಗೊಂಡವುಗಳೆಷ್ಟು ಎನ್ನುವುದನ್ನು ಗುರುತಿಸುವುದು ದುಸ್ತರವಾಗಿದೆ.

ಬಸವಣ್ಣನವರದು ಪ್ರಧಾನತಃ ಭಕ್ತಿ ಮಾರ್ಗವಾದರೆ, ಅಲ್ಲಮನದು ಜ್ಞಾನಮಾರ್ಗ, ಸಿದ್ಧರಾಮನದು ಕರ್ಮಮಾರ್ಗ. ಸಿದ್ಧರಾಮನಿಗೆ ಆತನ ಗುರುಪರಂಪರೆಯಿಂದ ನಿರ್ದೇಶನ ಒದಗಿದ್ದು, ಕರ್ಮಮಾರ್ಗದ ಮೂಲಕವೆ ಶಿವಯೋಗವನ್ನು ಸಾಧಿಸಬೇಕೆಂದು. ಆದಕಾರಣವೆ-

‘ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತೂ
ಕರ್ಮಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ ಇನ್ನೆಂತೊ’      (೧೦೪೬)

ಎಂಬ ಯೋಚನೆ ಆತನದು. ಆದರೆ ‘ಗುಡಿಗೋಪುರ ಕೆರೆಯಾರವೆ’ಗಳನ್ನು ನಿರ್ಮಿಸುವ ಕರ್ಮಯೋಗದ ಭರದಲ್ಲಿ, ಅದು ಶಿವಯೋಗಕ್ಕೆ ಒಂದು ಸಾಧನವಾದೀತೇ ಹೊರತು, ಅದು ನಿಜವಾದ ಸಿದ್ಧಿಯಾಗುವುದಿಲ್ಲ ಅನ್ನುವುದನ್ನು ಬಹುಶಃ ಸಿದ್ಧರಾಮನು ಮರೆತಿದ್ದನು. ‘ಆಕಾರವಿಲ್ಲದ ಮೂರ್ತಿಯ ಆಕಾರಕ್ಕೆ ತಂದು’ ಪೂಜಿಸುತ್ತಿದ್ದ ಸಿದ್ಧರಾಮನಿಗೆ, ‘ಆಕಾರದ ಮೂರ್ತಿಯ ನಿರಾಕಾರಕ್ಕೆ ತಂದು ಪೂಜಿಸಲರಿಯೆ’ (ವ. ೧೦೭೪) ಎನ್ನುವ ಕೊರಗು ಆವರಿಸಿಕೊಂಡಿದ್ದಕ್ಕೆ ಕಾರಣ, ಆತನ ಸಾಕಾರನಿಷ್ಠೆ ಮತ್ತು ಅದರ ವಿಸ್ತರಣೆಗಳಾದ ಕೆರೆ-ಬಾವಿ- ಅರವಟ್ಟಿಗೆಗಳ ಹಾಗೂ ಇನ್ನಿತರ ಆಗಮೋಕ್ತ ಆಚರಣೆಗಳ ತೊಡಕಿನಲ್ಲಿ ಆತ ಸಿಕ್ಕಿಕೊಂಡದ್ದೆ ಆಗಿದೆ. ಅಲ್ಲಮಪ್ರಭು ಸೊನ್ನಲಿಗೆಗೆ ಮೊದಲು ಬಂದಾಗ ಆತ ವಿಮರ್ಶಿಸಿದ್ದು ಸಿದ್ಧರಾಮನ ಈ ಕಾರ್ಯಗಳನ್ನೆ. ‘ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ, ಕೆರೆಯ ಕಟ್ಟಿಸಿದಡೆ, ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ, ಶಿವನ ನಿಜವು ಸಾಧ್ಯವಾಗದು’ (ವ.೭೮೬) ಎಂಬ ಮಾತನ್ನು ಹೇಳುತ್ತಲೆ, ‘ಕೆರೆ-ಬಾವಿ ದೇಗುಲಂಗಳೆಲ್ಲವೂ ಹಿಂದಿನ ಅಡಿವಜ್ಜೆಗೆ ಒಳಗು’ (ವ. ೪೪೪), ಅಷ್ಟೇ ಹೊರತು ಅವು ಶಿವಯೋಗಿಯಾದವನು ಕ್ರಮಿಸಬೇಕಾದ ಮುಂದಿನ ಹೆಜ್ಜೆಗಳಲ್ಲ- ಎನ್ನುವುದನ್ನು ತಿಳಿಸಿಕೊಡುತ್ತಾನೆ. ಹಾಗೆಯೆ ನಿಜವಾದ ಕೆರೆಯನ್ನು ಕಟ್ಟಬೇಕಾದದ್ದು ಅಂತರಂಗದಲ್ಲಿ; ಹಾಗೆಯ ದೇಹವನ್ನೆ ದೇವಾಲಯವನ್ನಾಗಿ ಮಾಡಿಕೊಳ್ಳುವುದು ಮುಖ್ಯ ಅನ್ನುತ್ತಾನೆ. ಹೀಗೆ ಸಿದ್ಧರಾಮನು ತಾನು ಯಾವುದನ್ನು ಅತ್ಯಂತ ಪ್ರಧಾನವೆಂದು ಭಾವಿಸಿಕೊಂಡು, ತನ್ನನ್ನು ತೊಡಗಿಸಿಕೊಂಡಿದ್ದನೋ, ಆದರ ನೆಲೆಗಟ್ಟನ್ನೇ ಅಲ್ಲಮಪ್ರಭು ಅಲ್ಲಾಡಿಸಿಬಿಡುತ್ತಾನೆ. ಈ ಸಂದರ್ಭದಲ್ಲಿ ಸಿದ್ಧರಾಮನ ಅಂತರಂಗದಲ್ಲಿ ಆದ ತಲ್ಲಣಗಳನ್ನೂ ಆತ ತಾನು ಯಾವ ಶ್ರದ್ಧೆಯಿಂದ ಇದುವರೆಗೂ ಈ ಕಾರ್ಯಗಳಲ್ಲಿ ತೊಡಗಿಕೊಂಡನೆಂಬುದನ್ನೂ ಒಂದೆರಡು ವಚನಗಳು ತುಂಬ ಆರ್ತತೆಯಿಂದ ದಾಖಲಿಸುತ್ತವೆ:

ಸಕಲ ಲಿಂಗವ ಹಿಡಿದು ಆಗಲದೆ ನಡೆ ಎಂದಿರಾಗಿ
ನಡೆವುತ್ತಿದ್ದೆನು
ಲಿಂಗಪ್ರತಿಷ್ಠೆಯ ಮಾಡೆಂದು ಎನಗೆ  ನಿರೂಪಿಸುತಿರ್ದ ಕಾರಣ
ಮಾಡುತ್ತಿರ್ದೆನಲ್ಲದೆ ಎನಗೆ ಬೇರೆ ಸ್ವತಂತ್ರವುಂಟೆ?
ಹಿಂದೆ ನೀವು ಕೊಟ್ಟ ನಿರೂಪ ನಿಮಗೆ ಹುಸಿಯಾದಡೆ
ಇನ್ನುಮುಂದೆ ಸಯವಪ್ಪಂತೆ ನಡೆಸಾ ಕಪಿಲಸಿದ್ಧ ಮಲ್ಲಿಕಾರ್ಜುನಾ        (೧೦೪೫)

‘ಅಣುವಿನೊಳಗೆ ಅಣುವಾಗಿಪ್ಪಿರಿ ಎಲೆ ದೇವಾ ನೀವು
ಮನದೊಳಗೆ ಘನವಾಗಿಪ್ಪಿರಿ ಎಲೆ ದೇವಾ
ಜಗದೊಳಗೆಲ್ಲಿಯೂ ನೀವಿಲ್ಲದೆಡೆಯುಂಟೆ?
ಎಂಬತ್ತು ಲಕ್ಷ ಶಿವಾಲಯಂಗಳ ಮಾಡಿ
ನೀವು ಒಮ್ಮನದೊಳಗಿಪ್ಪುದ ಕಂಡು ನಾನು ಮಾಡಿದೆನಲ್ಲದೆ
ಕಪಿಲಸಿದ್ಧ ಮಲ್ಲಯ್ಯ
ಎನಗೆ ಬೇರೆ ಸ್ವತಂತ್ರವಿಲ್ಲವೆಂದರಿವೆನು’            (೧೦೪೪)

ಈ ಎರಡು ವಚನಗಳೂ, ಸಿದ್ಧರಾಮನು ತಾನು ಸೊನ್ನಲಿಗೆಯಲ್ಲಿ ಯಾಕೆ ದೇವಸ್ಥಾನ ಲಿಂಗ ಪ್ರತಿಷ್ಠೆ ಮಾಡಿದೆನೆಂಬುದನ್ನು ಶ್ರದ್ಧೆ, ಸಮರ್ಪಣ ಭಾವ, ವಿನಯ ಹಾಗೂ ಮುಂದಿನ ಮಾರ್ಗದರ್ಶನದ ಕೃಪಾಯಾಚನೆಯ ಮೂಲಕ ನೀವೇದಿಸಿಕೊಳ್ಳುವ ಸ್ವರೂಪದ್ದಾಗಿವೆ. ಈ ನಿವೇದನೆಯಲ್ಲಿ ತಾನು ಇದುವರೆಗೂ ಮಾಡಿದ್ದೆ ಸರಿ ಎಂಬ ಸಮರ್ಥನೆಯಿಲ್ಲ; ಬದಲಿಗೆ ಮಲ್ಲಿಕಾರ್ಜುನನ ಸಂಕಲ್ಪದ ಒಂದು ಮಾಧ್ಯಮವಾಗಿ ತಾನು ನಡೆದುಕೊಳ್ಳುತಿದ್ದೇನೆ ಎನ್ನುವ ನಿಲುವಿದೆ. ಅಷ್ಟೇ ಅಲ್ಲ. ಈ ದೇವಾಲಯಾದಿಗಳಿಂದ ತನಗೇನೋ ಪ್ರಯೋಜನವಿದೆ ಎಂದಾಗಲಿ, ಅಥವಾ ಅವು ಕೇವಲ ಅನುಪಯುಕ್ತ ಎಂದಾಗಲಿ ಅವನಿಗೆ ತೋರುವುದಿಲ್ಲ. ಅಲ್ಲಮನಂತೆ ದೇವಾಲಯ ಎಂಬುದು ಕಲ್ಲ ಮೇಲೊಂದು ಕಲ್ಲನ್ನು ಹೇರುವ ಕ್ರಿಯೆ ಎಂದು ಅವನು ಭಾವಿಸಲಾರ. ಅಲ್ಲಮನಾದರೋ ನಿರಂಜನ ಮೂರ್ತಿ. ಅವನ ನಿಲುವೇ ಬೇರೆ. ಅವನು ಎಲ್ಲವನ್ನೂ ಮೀರಿದ ನೆಲೆಯಲ್ಲಿ ಸಂಚರಿಸಬಲ್ಲವನು. ಆದರೆ ತಾನು ಹಾಗೆ ಇರಲು ಬರುವುದಿಲ್ಲ. ಅಥವಾ ಹಾಗೆ ಇರಬೇಕೆಂದು ನಿರ್ದೇಶಿತನಾದವನೂ ಅಲ್ಲ; ಜನದ ಕಷ್ಟ ಸುಖಗಳ ನಡುವೆ ಬದುಕುತ್ತಾ, ಅವರಿಗಾಗಿ ಮರುಗಿ ಅವರ ಬದುಕನ್ನು ಒಂದಿಷ್ಟಾದರೂ ಸುಖಮಯವನ್ನಾಗಿ ಮಾಡುತ್ತ ಆ ಮೂಲಕ ಅವರಲ್ಲಿ ಶ್ರದ್ಧೆ- ಭಕ್ತಿಗಳನ್ನುದ್ದೀಪಿಸುತ್ತ, ತಾನು ಶಿವಯೋಗವನ್ನು ಸಾಧಿಸಬೇಕೆಂಬ ಉದ್ದೇಶ ಉಳ್ಳವನು. ಆದ ಕಾರಣವೆ ಅವನು,

‘ಕಟೆದ ಕಲ್ಲು ಲಿಂಗವೆನಿಸಿತ್ತು, ಕಟೆಯದ ಕಲ್ಲು ಕಲ್ಲೆನಿಸಿತ್ತು
ಪೂಜಿಸಿದ ಮಾನವ ಭಕ್ತನೆನಿಸಿದನು, ಪೂಜಿಸದ ಮಾನವ
ಮಾನವನೆನಿಸಿದನು.
ಕಲ್ಲಾದೊಡೇನು ಪೂಜೆಗೆ ಫಲವಾಯಿತ್ತು’            (ವ ೧೧೫೮)

ಎಂದು ಜನಪರವಾಗಿ ತರ್ಕಿಸುತ್ತಾನೆ. ಆದರೆ ಮೇಲೆ ನೋಡಲು ಅಲ್ಲಮನ ಮಾತುಗಳು ಸಿದ್ಧರಾಮನ ಕಾರ‍್ಯಗಳನ್ನು ಖಂಡಿಸುವಂತೆ ತೋರಿದರೂ, ಒಳಗೆ ಇಂತಹ ಶಿವಯೋಗಿ ಕರ್ಮಮಾರ್ಗದ ದಾರಿಯನ್ನು ಹಿಡಿದು, ವೃಥಾ ಈ ಬಗೆಯ ಲೌಕಿಕ ಕಾರ್ಯಗಳಲ್ಲಿ ಕಳೆದು ಹೋಗಬಾರದೆಂಬ ಅನುಕಂಪೆಯೆ ಪ್ರಧಾನವಾಗಿದೆ. ಆದಕಾರಣ ಅಲ್ಲಮನು ಈ ಕರ್ಮಯೋಗದ ಮಿತಿಯನ್ನೂ, ಈಗಾಗಲೆ ಯೋಗಿಯಾದ ಸಿದ್ಧರಾಮನು ಮುಂದೆ ಇನ್ನೂ ಕ್ರಮಿಸಬೇಕಾದ ಆಧ್ಯಾತ್ಮಿಕ ಪಥವನ್ನೂ ಕುರಿತು ಮನವರಿಕೆ ಮಾಡಿಕೊಡುತ್ತಾನೆ. ಸಿದ್ಧರಾಮನು ಅದನ್ನರಿತುಕೊಂಡು ‘ನೀರಕ್ಷೀರದ ಸಂದುಗಳ ಹಂಸೆ ಬಿಚ್ಚಬಲ್ಲುದು ನೋಡಯ್ಯ’ (೧೦೫೫) ಅನ್ನುತ್ತ, ಅಲ್ಲಮನ ಮಾರ್ಗದರ್ಶನವನ್ನು ನಿರೀಕ್ಷಿಸುತ್ತ, ಅವನ ಸೂಚನೆಯ ಮೇರೆಗೆ ಕಲ್ಯಾಣಕ್ಕೆ ಬಂದು ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು, ತಾನು ಅದುವರೆಗೂ ಅನುಸರಿಸಿದ ಅಷ್ಟಾಂಗ ಮಾರ್ಗದ ಯೋಗದಿಂದ ಷಟ್‌ಸ್ಥಲ ಮಾರ್ಗದ ಶಿವಯೋಗಕ್ಕೆ ಬರುತ್ತಾನೆ.

ಸಿದ್ಧರಾಮನ ಲಿಂಗದೀಕ್ಷೆಗೆ ಹಿನ್ನೆಲೆಯಾದ ಮತ್ತು ಅನಂತರದ ಸಂದರ್ಭವನ್ನು ದಾಖಲಿಸುವ ಸಿದ್ಧರಾಮನ ವಚನಗಳೂ ಸಾಕಷ್ಟಿವೆ. ಆತ ಈ ಲಿಂಗದೀಕ್ಷೆಗೆ ಮನಸ್ಸು ಮಾಡುವ ಮೊದಲು ಸಾಕಷ್ಟು ಡೋಲಾಯಮಾನ ಸ್ಥಿತಿಯಲ್ಲಿ ಇದ್ದಿರಬೇಕು. ಇಲ್ಲದಿದ್ದರೆ-

‘ಎಲ್ಲ ಪ್ರಮಥರೂ ಲಿಂಗವ ಧರಿಸುತ್ತಿರಲು
ನಾನೇನು ಒಲ್ಲೆನೆಂಬುವುದು ಕರ್ಮದ ಬಲೆಯೊ,
ಮಾಯದ ಬಲೆಯೋ’    (ವ ೯೫೪)

ಎಂಬಂಥ ಉದ್ಗಾರ ಹೊರಡುತ್ತಿರಲಿಲ್ಲ. ಅನುಭವಮಂಟಪದ ಶರಣರ ನಿಲುವನ್ನು ಕಂಡು-

‘ಅರಿಯಬಾರದ ಘನವನರಿದು ಸಾಧಿಸಿ ಗೆದ್ದ
ಘನಮಹಿಮಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ?
ಅವರಿಪ್ಪರು ಲಿಂಗ ಪ್ರಭೆಯೊಳಗೆ,
ನಾನಿಪ್ಪೆನು ಅಹಂಕಾರ ಪಂಜರದೊಳಗೆ’            (೧೦೭)

ಎಂದು ತನ್ನನ್ನು ತಾನೇ ವಿಮರ್ಶಿಸಿಕೊಂಡು-

‘ಎಂದಿಪ್ಪೆನಯ್ಯಾ ನಿಮ್ಮ ಗಣಂಗಳ ಸಮೂಹದಲ್ಲಿ’ (೯೪೪)

‘ಎಂದಿಪ್ಪೆನಯ್ಯಾ ದೀಕ್ಷಾತ್ರಯದಲ್ಲಿ ಸಂಪನ್ನನಾಗಿ’           (೯೪೫)’

ಎಂದು ಹಂಬಲಿಸುತ್ತ, ಅಲ್ಲಮನ ಸೂಚನೆಯ ಮೇರೆಗೆ ಚನ್ನಬಸವಣ್ಣನವರು ಸಿದ್ಧರಾಮನಿಗೆ ಲಿಂಗದೀಕ್ಷೆಯನ್ನು ಮಾಡಿದನಂತರ-

‘ಹೆಸರಿಸಬಾರದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು
ಕರತಲಾಮಲಕ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ’
ಶ್ರೀ ಗುರು ಚೆನ್ನಬಸವಣ್ಣ
(೯೬೬)

ನವರನ್ನು ಕುರಿತು, ‘ಶುದ್ಧವನರಿದೆ ಚನ್ನಬಸವಣ್ಣಾ ನಿಮ್ಮಿಂದೆ’ (೯೬೯) ಎಂದು ತನ್ನ ಕೃತಜ್ಞತೆಯನ್ನು ಅರ್ಪಿಸುತ್ತಾನೆ. ‘ಅಯ್ಯಾ ನಿಮ್ಮ ಮಹಾನುಭಾವರಿಂದ ಮಹಾವಸ್ತುವಿನ ಪ್ರಮಾಣವನರಿದೆ’ (೭೦) ಎಂದು ಪ್ರಭುದೇವ, ಚನ್ನಬಸವ, ಬಸವಣ್ಣ ಮೊದಲಾದವರನ್ನು ಸ್ತುತಿಸುತ್ತಾನೆ. ಈ ಧಾಟಿಯ ಇನ್ನೂ ಹಲವು ವಚನಗಳಿವೆ.

ಸಿದ್ಧರಾಮನು ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದನಂತರ ಆತನಿಗೆ, ತಾನು ನಡೆದುಬಂದ ದಾರಿಯ ಹಲವು ವಿಷಯಗಳನ್ನು ಕುರಿತು ಒಂದು ರೀತಿಯ ಪಶ್ಚಾತ್ತಾಪವೂ ವಿಷಾದವೂ ಉಂಟಾಯಿತೆಂಬುದನ್ನು ಸೂಚಿಸುವ ಒಂದೆರಡು ವಚನಗಳಿವೆ. ತಾನು ಅಷ್ಟೊಂದು ಉತ್ಸಾಹದಿಂದ ಕೈಕೊಂಡ ರಚನಾ ಕಾರ‍್ಯಗಳನ್ನು ಕುರಿತು-

‘ಹಿಂದೆ ಬಯಸಿದೆ ಕಾಳುತನದಲ್ಲಿ
ಎನ್ನ ಮಂದಮತಿಯ ನೋಡದಿರಯ್ಯಾ
ಕೆರೆ-ಬಾವಿ-ಹೂದೋಟ ಚಾಕ ಛತ್ರಂಗಳ ಮಾಡಿ
ಜೀವಂಗಳ ಮೇಲೆ ಕೃಪೆಯುಂಟೆಂದು-ಎನ್ನ ದಾನಿಯೆಂಬರು
ಆನು ದಾನಿಯಲ್ಲವಯ್ಯಾ-ನೀ ಹೇಳಿದಂತೆ ಮಾಡಿದೆನು’  (೯೪೮)

‘ಕರೆಯನುಗುಳಿಯಗುಳಿ ಗುಡ್ಡರು ತಮ್ಮೆಲುವ ಸಣ್ಣಿಸಿಕೊಂಡರಲ್ಲದೆ
ತಮ್ಮ ಮನದ ಮರವೆಯನಗಿದಗಿದು ಸಣ್ಣಿಸಲಿಲ್ಲ
ಕಲ್ಲು ಮಣ್ಣುಗಳ ಹೊತ್ತುಕೊಂಡು ಗೋಣು ನೋಯಿಸಿಕೊಂಡರಲ್ಲದೆ
ಜ್ಞಾನವ ಹೊತ್ತುಕೊಂಡು ಮನವೋಲಯಿಸಿಕೊಳ್ಳಲಿಲ್ಲ ನೋಡಾ
ಹೂದೋಟವ ಮಾಡಿ ಬಳಲಿದರಲ್ಲದೆ, ಕಪಿಲಸಿದ್ಧ

ಮಲ್ಲಿಕಾರ್ಜುನನ ಪೂಜಿಸಿ ಬಳಲಲಿಲ್ಲ ನೋಡಾ…’           (೬೦೪ ಕ. ವಿ.ವಿ)

ಈ ಎರಡು ವಚನಗಳು, ತಾನು ಹಿಂದೆ ಕೈಕೊಂಡ ಕಾರ‍್ಯಗಳ ಪರಿಮಿತಿಗಳನ್ನು, ತನ್ನ ಬದುಕಿನ ಬೇರೊಂದು ಏರುವೆಯಲ್ಲಿ ನಿಂತು ಪರಿಶೀಲಿಸುವ ಮನೋಧರ್ಮವನ್ನು ಸೂಚಿಸುತ್ತವೆ.[13] ಈ ಮನೋಧರ್ಮದ ಪರಿಣಾಮವಾಗಿ ಆತನಿಗೆ ತಾನೇ ಉತ್ಸಾಹದಿಂದ ಪ್ರತಿಷ್ಠಾಪಿಸಿದ ಮಲ್ಲಿಕಾರ್ಜುನ ದೇವಾಲಯದ ಬಗೆಗೂ ಒಂದು ರೀತಿಯ ನಿರಾಸಕ್ತಿ ಬೆಳೆದಂತೆ ತೋರುತ್ತದೆ. ಈ ಕಾರಣದಿಂದಲೇ ಬಹುಶಃ ಅವನು ‘ಎಲೆ ಕಪಿಲಸಿದ್ಧ ಮಲ್ಲಿನಾಥಯ್ಯಾ, ನೀ ಕರೆಸಿಕೊಂಬುವನಾಗು ಮತ್ತೊಬ್ಬನ ನಿನ್ನ ಪೂಜೆಗೆ’ (೯೫೪) ಎಂದು ತನ್ನ ಅದುವರೆಗಿನ ಇಷ್ಟದೈವಕ್ಕೆ ಬಿನ್ನವಿಸಿಕೊಂಡಂತೆ ತೋರುತ್ತದೆ. ಅಷ್ಟೆ ಅಲ್ಲ, ದೇವಸ್ಥಾನಕ್ಕೆ ಸಂಬಂಧಿಸಿದ ನಿತ್ಯ ಹೋಮಾದಿಗಳೂ ಈಗ ಆತನಿಗೆ ಅರ್ಥಹೀನವೆನ್ನಿಸಿರಬೇಕು. ಈ ಮನಃಸ್ಥಿತಿಯಲ್ಲಿ-

“ಮುನ್ನಮಾಡಿದ್ದೇ ಮಾಡಿದೆ
ಹೋಮವನ್ನಿನ್ನು ಮಾಡಿದಡೆ ತಲೆದಂಡ
ಕಪಿಲಸಿದ್ಧ ಮಲ್ಲಿಕಾರ್ಜುನಾ”     (೧೧೪)

ಎಂದು ಪ್ರತಿಜ್ಞೆ ಮಾಡುತ್ತಾನೆ. ಈ ಎಲ್ಲ ನಿರೂಪಣೆಗಳಿಂದ, ಸಿದ್ಧರಾಮನ ವಚನಗಳು ಆತನ ‘ಆತ್ಮಕಥೆ’ಯ ಯಥಾವತ್ತಾದ ಚಿತ್ರಣಗಳೂ ಆಗಿವೆ ಎನ್ನುವ ಸಂಗತಿ ನಿಷ್ಟನ್ನವಾಗುತ್ತದೆ.

ಸಿದ್ಧರಾಮನನ್ನು ಕುರಿತ ಮೊಟ್ಟಮೊದಲ ಕೃತಿಯಾದ ‘ಸಿದ್ಧರಾಮ ಚಾರಿತ್ರ’ದಲ್ಲಿ, ಸಿದ್ಧರಾಮನ ಮೂರ್ತಿಚಿತ್ರಣದ ಸಂದರ್ಭದಲ್ಲಿ ರಾಘವಾಂಕನು ತನಗೆ ಉಪಲಬ್ಧವಾದ ವಚನಗಳ ಸಹಾಯವನ್ನು ಪಡೆದುಕೊಂಡಿದ್ದಾನೆ ಎಂಬುದಕ್ಕೆ ಅಲ್ಲಲ್ಲಿ ಸೂಚನೆಗಳು ದೊರೆಯುತ್ತವೆ. ಅಷ್ಟೆ ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಸಿದ್ಧರಾಮನು ವಚನಗಳನ್ನು ಹಾಡಿದನೆಂಬ ಉಲ್ಲೇಖವಿದೆ. ವಚನಗಳನ್ನು ಹಾಡುತ್ತಿದ್ದರೆಂಬ ಸಂಗತಿ ಹೊಸದೇನಲ್ಲ. ‘ಆಗಳಾಗಳಿನ ಸಂಗತಿಗೆ’ ಬಸವಣ್ಣನವರು ತಮ್ಮ ಇಷ್ಟ ದೈವವಾದ ಸಂಗಮನಾಥನಿಗೆ ‘ಹೊಸ ಹೊಸ ಗೀತೆಗಳನ್ನು’ ಕೇಳಿಸುತ್ತಿದ್ದರೆಂದು ಹರಿಹರನು ತನ್ನ ‘ಬಸವರಾಜ ದೇವರ ರಗಳೆ’ಯಲ್ಲಿ ಹೇಳುತ್ತಾನೆ. ಅಂದರೆ ಈ ಶರಣರು ತಮ್ಮ ಸಾಧಕ ಜೀವನದ ಅಂದಂದಿನ ಸಂದರ್ಭಗಳಲ್ಲಿ ತಮಗೊದಗಿದ ಅನುಭವಗಳಿಗೆ ಅಂದಂದೆ ರೂಪವನ್ನು ಕೊಡುತ್ತಿದ್ದರು ಎಂಬುದು ಈ ಮಾತಿನ ಅರ್ಥ. ಹಾಗೆ ಆ ಅನುಭವಗಳು ‘ರೂಪ’ವನ್ನು ತಾಳುತ್ತಿದ್ದದ್ದು ‘ಗೀತ’ಗಳಾಗಿ ಅಥವಾ ವಚನಗಳಾಗಿ, ಆದ ಕಾರಣ ‘ವಚನ’ ಮತ್ತು ‘ಗೀತೆ’ ಎಂಬೆರಡೂ ಅಂದಿನ ಸಂದರ್ಭದಲ್ಲಿ ಸಂವಾದಿ ಪದಗಳೆಂದೆ ನಾವು ಗ್ರಹಿಸಬೇಕಾಗಿದೆ. ರಾಘವಾಂಕನ ಸಿದ್ಧರಾಮಚಾರಿತ್ರದಲ್ಲೂ ಆಗಳಾಗಳಿನ ಸಂಗತಿಗೆ ಸಿದ್ಧರಾಮನು ವಚನವನ್ನು ಅಥವಾ ‘ಗೀತ’ವನ್ನು ಹಾಡಿದಂತೆ ಕಾಣಿಸಲಾಗಿದೆ. ಇಂಥ ಏಳೆಂಟು ವಚನಗಳ ಸಂದರ್ಭವನ್ನು ನಾವು ಗುರುತಿಸಲು ಸಾಧ್ಯವಾಗಿದೆ. ಆದರೆ ಅವುಗಳಿಗೆ ಮೂಲವಾದ ಕೆಲವು ವಚನಗಳು ಇನ್ನೂ ಉಪಲಬ್ಧವಾಗಿಲ್ಲ. ಸಿದ್ಧರಾಮ ಚಾರಿತ್ರದ ಮೂರನೆ ಸಂಧಿಯ ೩೬ನೆ ಪದ್ಯ ಹೀಗಿದೆ:

‘ಗತಿಗೆಟ್ಟು ಬೇರಿನ್ನು ದೈವವೆಂದೆನ್ನದಿರಿ
ಧೃತಿಗೆಟ್ಟು ಬೇರಿನ್ನು ದೈವವೆಂದೆನ್ನದಿರಿ
ಅತನುಹರ ಮಲ್ಲಿಕಾರ್ಜುನನೀತನೆಂದು
ಹಾಡಿದನೊಂದು ಗುರುವಚನವ’

ಇದು ಸಿದ್ಧರಾಮನು ‘ವಚನ’ವೊಂದನ್ನು ಹಾಡಿದ ಅಥವಾ ವಚನವೊಂದು ಆತನ ಬಾಯಿಂದ ಹೊಮ್ಮಿದ ಸಂದರ್ಭವನ್ನು ಸೂಚಿಸುತ್ತದೆ. ಸಂದರ್ಭ ಇದು: ಶ್ರೀಶೈಲದಿಂದ ಹಿಂದಕ್ಕೆ ಬಂದ ಸಿದ್ಧರಾಮನು ಮನೆಯಲ್ಲೆ ಮಲ್ಲಿಕಾರ್ಜುನ ಲಿಂಗವನ್ನು ಪೂಜಿಸುತ್ತಾ ಇರುವಾಗ, ಅವನ ತಂದೆ-ತಾಯಂದಿರು, ತಮ್ಮ ಮನೆದೈವವಾದ ‘ಧೂಳಿಮಾಕಾಳ’ನನ್ನು ಆರಾಧಿಸುವುದನ್ನು ಕಂಡು, ಕೋಪಗೊಂಡು ಆ ಕಾರಣದಿಂದ ಮನೆಯನ್ನು ಬಿಟ್ಟು ಹೊರಬಂದು ಊರ ಹೊರಗೆ ಮಠವನ್ನು ಕಟ್ಟಿಕೊಂಡು ನೆಲಸುತ್ತಾನೆ. ಆ ಸಂದರ್ಭದಲ್ಲಿ ಮೂಡಿದ ವಚನ ಇದು. ಈ ವಚನ ಇನ್ನೂ ಉಪಲಬ್ಧವಾಗಿಲ್ಲದ ಕಾರಣದಿಂದ ಯಾವುದೇ ಸಂಪಾದಿತ ಕೃತಿಗಳಲ್ಲಿ ಇದು ಕಾಣುವುದಿಲ್ಲ. ಹಾಗೆಯೇ ಆದಿಲಿಂಗವನ್ನು ಬಂಡಿಯಮೇಲೆ ಹೇರಿಕೊಂಡು ಸೊನ್ನಲಿಗೆಯಲ್ಲಿ ಸ್ಥಾಪಿಸಲೆಂದು ಬರುವಾಗ, ಆ ಗಾಡಿಯನ್ನು ಎಳೆಯುವ ಎತ್ತುಗಳು ಬಳಲಿ ಸತ್ತುಹೋದಾಗ, ಸಿದ್ಧರಾಮನು ಎತ್ತುಗಳ ‘ಜೀವದ ಹೋಹ ಬಹಗೀತಮಂ ಬಿನ್ನಹಂ ಮಾಡಿ ನಡೆತಂದನು’ (೬-೨೮) ಎಂಬ ಉಲ್ಲೇಖವಿದೆ. ಈ ಒಂದು ಪವಾಡಮಯವಾದ ಸಂದರ್ಭದಲ್ಲಿ ಉಕ್ತವಾಗಿದ್ದಿರಬಹುದಾದ ‘ವಚನ’ ಇನ್ನೂ ಉಪಲಬ್ಧವಾಗಿಲ್ಲ. ಅಲ್ಲಮನೊಂದಿಗೆ ಮುಖಾಮುಖಿಯಾದಾಗ, ಸಿದ್ಧರಾಮನು ತನ್ನ ನಿಲುವನ್ನು ಸ್ಪಷ್ಟಪಡಿಸುತ್ತ-

…ಗಾಳಿಯಂ
ಹುಡಿ ಹಿಡಿವುದೇ, ರಸನೆ ಹೆಡಸಹುದೆ, ಆಲಿಯಂಜನ
ಮನೊಳಕೊಂಡಿರ್ಪುದೆ?
ಪೊಡವಿಯೊಳು ಶಿವಯೋಗಿ ಸುಳಿದಡಂ ನೀರನಡು
ವಿಡಿದ ಕಂಜದ ತೆರದಿ ಭಕ್ತಿಯುಕ್ತನು; ಅಲ್ಲ,
ಮೃಡ ಮೂರ್ತಿಗಗ್ರನೆಂದೆನುತ ಹಾಡಿದನು
ಗುರುವಚನವನಲ್ಲಮ ಮೆಚ್ಚಲು (೯-೪೨)

ಅಲ್ಲಮನೂ ಮೆಚ್ಚುವಂತೆ ಸಿದ್ಧರಾಮನು ಹೇಳಿದ ಈ ಸೊಗಸಾದ ‘ವಚನ’ ಕೂಡಾ ಉಪಲಬ್ಧವಾಗಿರುವಂತೆ ತೋರುವುದಿಲ್ಲ. ಇದೇ ರೀತಿ, ಕೆರೆಯ ಹತ್ತಿರ ಒಂದು ದಿನ ಸಿದ್ಧರಾಮನು ಧ್ಯಾನಸ್ಥನಾಗಿರುವಾಗ, ಜಿಂಕೆಯೊಂದು ಬಂದು ಅವನ ಮೈಯನ್ನು ತುರಿಸಲು -ಆತ ಧ್ಯಾನದಿಂದೆಚ್ಚೆತ್ತು-

‘ಪರಮ ಸುಖದಿಂ ನಿವಾತ ನಿಶ್ಚಿಂತನಾ
ಗಿರುತಿಪ್ಪೆನೋ ಹೇಳು ಹೇಳು ಅಯ್ಯಯ್ಯ ನೀ
ಗುರುವೇ ಶಿವನೇ ಎನ್ನಮರೆದು ನಿಮ್ಮಂ ಕೂಡಿ
ಪರಿಣಿಸಿಯೆಂದಿಪ್ಪೆನೋ…
ಹೇಳೈ ತಂದೆ ಕಪಿಲಸಿದ್ಧಮಲ್ಲಯ್ಯ ಎಂದು ಹಾಡಿದನು
ನೋಳ್ಪಾಗಲಂದು’        (೪-೨೮,೨೯)

ಎಂಬ ಭಕ್ತಿನಿರ್ಭರವಾದ ಈ ‘ಗೀತ’ ಅಥವಾ ವಚನವೂ ಉಪಲಬ್ಧವಿಲ್ಲ.

ಸಿದ್ಧರಾಮನು ಹಾಡಿದನೆಂದು ರಾಘವಾಂಕನು ಉಲ್ಲೇಖಿಸುವ ‘ವಚನ’ ಸಂದರ್ಭಗಳಿಗೂ ಈಗ ಉಪಲಬ್ದವಾಗಿರುವ ವಚನಗಳಿಗೂ ಇರುವ ಸಾಮ್ಯವು ಗಮನಿಸತಕ್ಕದ್ದಾಗಿದೆ:

ಸಿದ್ಧರಾಮಚಾರಿತ್ರದಲ್ಲಿ ಸಿದ್ಧರಾಮನು ಕಾಮನ ಪ್ರಲೋಭನೆಗೆ ಒಳಗಾಗಿ ಅದನ್ನು ಆತ ಗೆದ್ದ ಸಂದರ್ಭವೊಂದು ವರ್ಣಿತವಾಗಿದೆ. ಆ ಸಂದರ್ಭದಲ್ಲಿ-

‘ಹಿರಿದೆನಿಪ ಘೋರ ಸಂಸಾರದಾರಣ್ಯದೊಳು
ಹರವರಿಯ ಕಾಮನೆಂದೆಂಬ ಬೇಟೆಯ ಬೇಡ
ನುರುವಣೆಯನನ್ಯಾಯ ಮಾಣಿಸೈ ಎಂಬ ಗೀತವ ಹಾಡಿ’ (೪-೭೫)

ಸಿದ್ಧರಾಮನು ಸುಖವಾಗಿದ್ದನಂತೆ. ಈ ಪದ್ಯದಲ್ಲಿ ಬರುವ ‘ಸಂಸಾರ’ ವೆಂಬ ಅರಣ್ಯದ ಪ್ರತೀಕ, ಹಾಗೂ ಕಾಮನೆಂಬ ಬೇಟೆಗಾರನ ಪ್ರತೀಕ ಇವುಗಳು

‘ಸಂಸಾರವೆಂಬ ಅರಣ್ಯದೊಳಗೆ
ಕಾಮನೆಂಬ ಬೇಟೆಗಾರ ಬಾರಿಗೊಪ್ಪಿಸದಿರು’      (೯೧)

‘ಎಸೆವಡೆದ ಮೃಗದಂತೆ ಎನ್ನ ಮನ ಶಂಭುವೆ’    (೨೭೨)

ಎಂಬ ವಚನಗಳ ಮೂಲದ್ರವ್ಯದಿಂದ ಮೂಡಿದವುಗಳಾಗಿವೆ. ಸಿದ್ಧರಾಮನ-

ಕಂಡೆನಯ್ಯಾ ನೀನೊಡ್ಡಿದೊಡ್ಡಣೆಯ
ಕಿರಿಕಿರಿದಾಗಿ ತರಿದಡೆ ಹಿರಿಹಿರಿದಾಗಿ ನೆನೆವೆನು
ಕಾಯವ ಬೇಡಿದಡೀವೆನು
ಪ್ರಾಣ ನಿಮ್ಮದಾಗಿ, ಉಳಿದ ಹಂಗು ನಮಗಿಲ್ಲ;

ಕಪಿಲಸಿದ್ಧ ಮಲ್ಲಿನಾಥಯ್ಯಾ      (೩೦೪)
ಎಂಬ ವಚನ, ರಾಘವಾಂಕನ ಸಿದ್ಧರಾಮ ಚಾರಿತ್ರದಲ್ಲಿ-
‘ಅಯ್ಯ ಕೇಳಯ್ಯ ನೀನೊಡ್ಡಿದೊಡ್ಡಿನ ಸಮಂ

ಮೆಯ್ಯ ನಿರಿದಿರಿದು ಕಿರಿಕಿರಿದಾಗಿ ಕಡಿದಡಂ
ಅಯ್ಯ ಎಂದಳುಕೆ, ಹಿರಿಹಿರಿದಾಗಿ ನೆನೆವೆ ಕೇಳಯ್ಯ, ಅಯ್ಯಯೆನುತ
ಕಯ್ಯ ಲಾಕುಳವನಂದಲುಗುತ್ತ ಹಾಡುತ್ತ
ಲೊಯ್ಯನೀಕಾಯವಳಿಗೆ ಜೀವ ನಿಮಗೆಂದು
ಸಯ್ಯಮಿ ವ್ರತನಿರತ ಶ್ರೀ ಸಿದ್ಧರಾಮನಾಥ ಹಾಡಿದಂ ಗೀತವ’ (೬-೬)

ಎಂದು ರೂಪಾಂತರಗೊಂಡಿದೆ. ಅಷ್ಟೇ ಅಲ್ಲ ಸಿದ್ಧರಾಮನ ಎಷ್ಟೋ ವಚನಗಳು ರಾಘವಾಂಕನಲ್ಲಿ ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ಅಲ್ಲಲ್ಲಿ ಕಾಣಿಸಿಕೊಳ್ಳುವುದಲ್ಲದೆ, ರಾಘವಾಂಕನ ಕಾವ್ಯದ ಕೆಲವು ಸಂದರ್ಭಗಳಿಗೆ ಪ್ರೇರಕವೂ ಆಗಿವೆ.[14]

ಮೊದ ಮೊದಲು ಸೊನ್ನಲಿಗೆಯಲ್ಲಿದ್ದುಕೊಂಡು, ‘ದೇವಾಲಯ ಸಂಸ್ಕೃತಿ’ಯನ್ನು ಕಟ್ಟಿ ಬೆಳೆಯಿಸುತ್ತ ಸಾಕಾರನಿಷ್ಠೆಯನ್ನು ಅನೇಕ ಜನೋಪಯೋಗಿ ಕಾರ‍್ಯಗಳ ಮೂಲಕ ವಿಸ್ತರಿಸುತ್ತ, ತನ್ನ ಶೈವಮಾರ್ಗದಲ್ಲಿ ತಾನು ತೊಡಗಿದ್ದ ಸಿದ್ಧರಾಮನು, ಅಂದಿನ ಶರಣ ಚಳುವಳಿಯ ಸಂಪರ್ಕ ಹಾಗೂ ಪ್ರಭಾವಗಳಿಂದಾಗಿ, ವಚನ ನಿರ್ಮಿತಿಯಲ್ಲಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಂಡರೂ, ಅವನ ಒಟ್ಟು ನಿಲುವು ಎಲ್ಲ ವಚನಕಾರರ ಸಾಮೂಹಿಕ ನಿಲುವುಗಳಿಂದ ಅಷ್ಟೇನೂ ಬೇರೆಯಾದಂತೆ ತೋರುವುದಿಲ್ಲ. ಅನುಭಾವಿಗಳಾದ ವಚನಕಾರರು ಜಗತ್ತಿನ ಎಲ್ಲ ಸಾಧಕರಂತೆ ‘ಪುಸ್ತಕ ವಿದ್ಯೆ’ಯ ಬಗ್ಗೆ ತಿರಸ್ಕಾರವನ್ನು ದಾಖಲು ಮಾಡಿದವರು. ಈ ಪುಸ್ತಕ ವಿದ್ಯೆ ಎಂಬುದು ವೇದ ಶಾಸ್ತ್ರಕಾವ್ಯ ಪುರಾಣ ಆಗಮಾದಿಗಳಿಂದ ಲಭಿಸುವ ತಿಳಿವಳಿಕೆಯ ರೂಪವಾಗಿದೆ. ಸಿದ್ಧರಾಮನು ತನ್ನ ವಚನಗಳಲ್ಲಿ ಈ ಪುಸ್ತಕ ವಿದ್ಯೆಯ ನಿರರ್ಥಕತೆಯನ್ನು ಪ್ರತಿಪಾದಿಸುತ್ತ ‘ವಿದ್ಯೆ ಎಂದೊಡೆ ಭಾರತ ರಾಮಾಯಣವಲ್ಲ’ (೧೩೧೦) ಎನ್ನುತ್ತಾನೆ ಒಂದು ವಚನದಲ್ಲಿ. ಇದು ರಾಮಾಯಣ ಮಹಾಭಾರತಾದಿಗಳನ್ನು ಓದುವುದೇ ವಿದ್ಯೆ, ಅಥವಾ ವಿದ್ಯಾವಂತನೆನ್ನಿಸಿಕೊಳ್ಳಬೇಕಾದರೆ ಈ ಮಹಾಕಾವ್ಯಗಳ ಅಧ್ಯಯನ ಅಗತ್ಯ ಎಂಬ ರೂಢ ಮೂಲವಾದ ತಿಳಿವಳಿಕೆಯನ್ನೆ ವಿರೋಧಿಸುತ್ತದೆ. ಇನ್ನು ಪಾಂಡಿತ್ಯಗಳಿಕೆಯ ಶಾಸ್ತ್ರಗಳೂ ಅಷ್ಟೆ-

ವ್ಯಾಕರಣವನೋದಿದಲ್ಲಿ ಶಬ್ದಶುದ್ಧಿಯಲ್ಲದೆ
ಮನಶುದ್ಧವಾಗಿ ಜ್ಞಾನ ಶುದ್ಧಿಯಾಗದು   (೧೬೦೧)

ವ್ಯಾಕರಣದಂತೆಯೇ ವೇದಾಧ್ಯಯನವು ನಿಷ್ರಯೋಜಕ. ಯಾಕೆಂದರೆ

‘ವೇದವೇದಾಂತವನೋದಿದಡೇನು
ಮನಸ್ಸೂತಕವಳಿಯದನ್ನಕ್ಕ?’    (೮೯೯)

ಈ ಕಲಿಕೆಗಳೆಲ್ಲ ವಾಕ್‌ಶುದ್ಧಿ ಹಾಗೂ ವಾಕ್‌ಸಿದ್ಧಿಗೆ ಕಾರಣವಾದಾವೇ ಹೊರತು ಮನಸ್ಸಿನ ಶುದ್ಧಿಗೆ ನೆರವಾಗಲಾರವು. ಈ ಬಗೆಯ ವಾಕ್‌ಸಿದ್ಧಿಗೆ ಹಂಬಲಿಸುವವರೇ ಹೆಚ್ಚು ಈ ಲೋಕದಲ್ಲಿ-

‘ವಾಕ್ಸಿದ್ಧಿಯುಳ್ಳವರು ಕೋಟಾನು ಕೋಟಿ
ಮನೋರಥ ಸಿದ್ಧಿಯುಳ್ಳವರು ಕೋಟಾನು ಕೋಟಿ
ಭಾವಸಿದ್ಧಿಯುಳ್ಳವರು ಕೋಟಾನುಕೋಟಿ
ನಿಮ್ಮ ಸಿದ್ಧಿಯುಳ್ಳವರು ಇಲ್ಲ ಕಂಡಯ್ಯಾ
ಕಪಿಲಸಿದ್ಧ ಮಲ್ಲಿಕಾರ್ಜುನಾ’       (೧೦೮೩)

ಎನ್ನುವುದು ನಿಜವಾದ ಮಾತು. ವಾಕ್ಸಿದ್ಧಿಯ ಪಾಂಡಿತ್ಯದ ಜಗತ್ತು ಕೇವಲ ಪುಸ್ತಕದೋದಿನ ಪ್ರಪಂಚ. ಅದು ನಿಜವಾದ ದೈವೀ ಅನುಭವದೆಡೆಗೆ ನಮ್ಮನ್ನು ಕರೆದುಕೊಂಡು ಹೋಗಲಾರದು. ಈ ಕುರಿತು ಸಿದ್ಧಾರಾಮನ ವಚನವೊಂದು ಅತ್ಯಂತ ಗಮನಾರ್ಹವಾಗಿದೆ-

‘ವಚಿಸಿ ವಚಿಸಿ ಅನುಭವಿಯಾಗದವ ಪಿಶಾಚಿಯಯ್ಯಾ
ವಚಿಸಿ ಅನುಭವಿಯಾದವ ಪಂಡಿತನಯ್ಯಾ
ವಿದ್ಯೆ ಎಂಬುದು ಅಭ್ಯಾಸಿಕನ ಕೈವಶ
ಅವಿದ್ಯೆ ಎಂಬುದು ಸರ್ವರಲ್ಲಿ ವಶ
ವಿದ್ಯಾ ವಿದ್ಯೆಯನರಿದು ಜಗದ್‌ವೇದ್ಯನಾಗಬಲ್ಲಡೆ
ಮಹಾಪಂಡಿತ ನೋಡಾ ಕಪಿಲಸಿದ್ಧ ಮಲ್ಲಿಕಾರ್ಜುನಾ’      (೧೨೯೫)

ಈ ವಚನದಲ್ಲಿ ಸಿದ್ಧರಾಮನು, ಸಾಮಾನ್ಯ ಪಾಂಡಿತ್ಯದ, ಹಾಗೂ ವಿದ್ಯಾವಿದ್ಯೆಯನ್ನರಿತು ಅದನ್ನೂ ದಾಟಿ ಹೋಗುವ ‘ಮಹಾ’ ಪಾಂಡಿತ್ಯದ ವ್ಯತ್ಯಾಸಗಳನ್ನು ಬಹುಸೊಗಸಾಗಿ ನಿರೂಪಿಸಿದ್ದಾನೆ. ವಿದ್ಯೆ ಅನ್ನುವುದು ‘ಅಭ್ಯಾಸಿಕ’ನ- ಅಂದರೆ ಶ್ರದ್ಧೆ ಶ್ರಮಗಳಿಂದ ಅಭ್ಯಾಸಮಾಡುವವನಿಗೆ ವಶವಾಗತಕ್ಕದ್ದು, ಆದರೆ ಅವಿದ್ಯೆ ಅಥವಾ ಅಜ್ಞಾನ ಸಾರ್ವತ್ರಿಕವಾದದ್ದು. ಹೀಗಿರುವಾಗ ಯಾರು ಕೇವಲ ಪುಸ್ತಕಗಳಷ್ಟನ್ನೇ ಓದುತ್ತಾನೋ ಹಾಗೂ ಹಾಗೆ ಓದಿದ್ದನ್ನೆ ಓದಿ, ತನ್ನ ಅನುಭವಕ್ಕೆ ತಂದುಕೊಳ್ಳಲಾರದವನಾಗುತ್ತಾನೋ ಅವನು, ಮತ್ತು ನಿಜವಾದ ಭಗವದ್‌ರಹಸ್ಯವನ್ನು ಅರಿಯಲಾರದೆ ಹೋಗುತ್ತಾನೋ ಅವನು, ಕೇವಲ (ಪುಸ್ತಕ) ಪಿಶಾಚಿಯಾಗುತ್ತಾನೆ. ಆದರೆ ಈ ವಿದ್ಯಾ ಅವಿದ್ಯೆಗಳನ್ನು ಅರಿತು ‘ನಿಜವಾದ ವಿದ್ಯೆ’ ಅಥವಾ ‘ಪರಾವಿದ್ಯೆ’ಯನ್ನು ಅರಿತವನಾದರೆ, ಆತ ‘ಮಹಾಪಂಡಿತ’ ಅಥವಾ ಅನುಭಾವವನ್ನು ಬಲ್ಲವನಾಗುತ್ತಾನೆ. ಈ ಅನುಭಾವವನ್ನು ಅರಿತುಕೊಳ್ಳುವುದಾಗಲಿ, ಅದನ್ನು ಮಾತಿನಲ್ಲಿ ಅಭಿವ್ಯಕ್ತಿಸುವುದಾಗಲಿ, ನಮಗೆ ಪರಿಚಿತವಾಗಿರುವ ವಾಗ್‌ರಚನೆ ಅಥವಾ ವಾಕ್ ಸಿದ್ಧಿಗಳ ಮೂಲಕ ಸಾಧ್ಯವಿಲ್ಲ. ಯಾಕೆಂದರೆ ಮಹಾಶರಣರ ‘ವಚನ’ಗಳಲ್ಲಿ ಮಾತ್ರ ವ್ಯಕ್ತವಾಗಬಲ್ಲ ಆ ಅನುಭವ ಪುಸ್ತಕ ವಿದ್ಯೆಯಿಂದಾಗಲಿ ಅಥವಾ ಅದರ ಪರಿಕರಗಳಿಗಾಗಲಿ ನಿಲುಕುವಂಥದಲ್ಲ. ಅದ್ದರಿಂದ ತಿಳಿದುಕೊಳ್ಳಬೇಕು: ‘ವಚನಾನುಭವ ವಾಗ್ರಚನೆಯಲ್ಲ ಮನವೆ ವಚನಾನುಭವ ವಾಗ್ರಚನೆಯಲ್ಲ’ (೧೨೭೬)

ಸಿದ್ಧರಾಮನ ಸಮಕಾಲೀನ ವಚನಕಾರರು ವೇದಶಾಸ್ತ್ರ ಪುರಾಣಾಗಮಗಳ ಅರ್ಥಹೀನತೆಯನ್ನು ಪ್ರತಿಪಾದಿಸಿದಂತೆ, ಅವು ಎತ್ತಿ ಹಿಡಿದ ಚಾತುರ್ವರ್ಣ ವ್ಯವಸ್ಥೆಯನ್ನು ಅತ್ಯಂತ ತೀವ್ರವಾಗಿ ವಿರೋಧಿಸುತ್ತಾರೆ. ಸಿದ್ಧರಾಮನು ಮೂಲತಃ ವೇದ- ಆಗಮಾದಿಗಳ ಪ್ರಾಮಾಣ್ಯವನ್ನು ಒಪ್ಪಿದ ಶೈವಸಂಪ್ರದಾಯಕ್ಕೆ ಸೇರಿದವನಾಗಿ, ಸೊನ್ನಲಿಗೆಯ ಕ್ಷೇತ್ರದಲ್ಲಿ ಅರ್ಚನೆ-ಹೋಮ-ಹವನಾದಿಗಳನ್ನು ಕೈಕೊಂಡವನು. ಅನಂತರ ಅವನು ಅಲ್ಲಮಪ್ರಭುವಿನ ಮಾರ್ಗದರ್ಶನದಿಂದಾಗಿ, ಶರಣ ಧರ್ಮದ ಕಕ್ಷೆಯೊಳಗೆ ಬಂದವನು. ಹೀಗೆ ಅವನು ಶರಣ ಧರ್ಮವನ್ನು ಒಪ್ಪಿಕೊಂಡನಂತರ ವೇದ-ಶಾಸ್ತ್ರ-ಪುರಾಣಾಗಮಗಳನ್ನು ಕುರಿತು ‘ವೇದ ವೇದಾಂತವನೋದಿ ಫಲವೇನು’ (೮೯೯) ‘ವೇದಂಗಳು ದೈವವಲ್ಲ, ಶಾಸ್ತ್ರಂಗಳು ದೈವವಲ್ಲ, ಆಗಮಂಗಳು ದೈವವಲ್ಲ’ (೭೨೮)- ಎಂದು ವೇದಶಾಸ್ತ್ರಾಗಮಗಳ ಪ್ರಾಮಾಣ್ಯವನ್ನು ನಿರಾಕರಿಸುವ ಧ್ವನಿಗಳು ಕಾಣಿಸಿಕೊಂಡಂತೆ ತೋರುತ್ತವೆ. ಇನ್ನು ವರ್ಣವ್ಯವಸ್ಥೆಯ ಬಗ್ಗೆ ಸಿದ್ಧರಾಮನ ಒಂದು ವಚನ ಗಮನಿಸಬೇಕಾದ್ದಾಗಿದೆ-

‘ಬ್ರಾಹ್ಮಣನ ಉತ್ಪತ್ತಿ ಸದ್ಯೋಜಾತ ಮುಖದಿಂದಾಯಿತ್ತು
ಕ್ಷತ್ರಿಯನ ಉತ್ಪತ್ತಿ ವಾಮದೇವ ಮುಖದಿಂದಾಯಿತ್ತು
ವೈಶ್ಯನ ಉತ್ಪತ್ತಿ ಆಘೋರ ಮುಖದಿಂದಾಯಿತ್ತು
ಶೂದ್ರನ ಉತ್ಪತ್ತಿ ತತ್ಪುರುಷ ಮುಖದಿಂದಾಯಿತ್ತು
ಲಿಂಗಾಂಗಿಯ ಉತ್ಪತ್ತಿ ಈಶಾನ್ಯ ಮುಖದಿಂದಾಯಿತ್ತು
ಪ್ರಮಥರ ಉತ್ಪತ್ತಿ ನಿರಂಜನ ಪ್ರಣವದ ಘೋಷವುಳ್ಳ
ಕಪಿಲಸಿದ್ಧ ಮಲ್ಲಿಕಾರ್ಜುನನ ಗೋಪ್ಯ ಮುಖದಿಂದಾಯಿತ್ತು
ನೋಡಾ ಕಲ್ಲಯ್ಯಾ     (೧೪೧೮)

ಈ ವ್ಯಾಖ್ಯಾನ ‘ಪುರುಷ ಸೂಕ್ತ’ ಪ್ರಣೀತವಾದ ವರ್ಣವ್ಯವಸ್ಥೆಯನ್ನು ಬೇರೊಂದು ರೀತಿಯಲ್ಲಿ ಮಂಡಿಸುತ್ತದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರಾದಿಗಳು, ಪರಮ ಪುರುಷನ, ತಲೆ, ತೋಳು, ಹೊಟ್ಟೆ, ಪಾದ ಈ ಬಗೆಯ, ಮೇಲಿನಿಂದ ಕೆಳಗಿನ ಅನುಕ್ರಮದಲ್ಲಿ ಜನಿಸಿದರೆಂಬ ‘ಪ್ರತೀಕ’ವನ್ನು ನಿರಾಕರಿಸಿ, ಈ ವರ್ಣಗಳು ಸಾಕ್ಷಾತ್ ಶಿವನ ಸಮಾನಾಂತರವಾದ ಪಂಚಮುಖಗಳಿಂದ ಹುಟ್ಟಿದುವೆಂಬಂತೆ ಹೇಳುವುದರ ಮೂಲಕ, ಆ ಎಲ್ಲವೂ ಸಮಾನವಾದವುಗಳೇ ಎಂದು ಮಂಡಿಸುವ ಕ್ರಮ ವಿಶೇಷ ರೀತಿಯದಾಗಿದೆ. ಆದರೆ ಇದಕ್ಕಿಂತ ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರಾದವರೆಲ್ಲರನೂ ಒಂದೇ ಎಂಬೆ’ ಎಂದ ಬಸವಣ್ಣನವರ ವ್ಯಾಖ್ಯಾನ ಹೆಚ್ಚು ಅರ್ಥಪೂರ್ಣವಾದುದಾಗಿದೆ. ಆದರೆ ಸಿದ್ಧರಾಮನು ವೀರಶೈವನು ಯಾರು ಎಂಬುದನ್ನು ವಿವರಿಸುತ್ತ ‘ಚತುರ್ವರ್ಣಾತೀತನೆ ವೀರಶೈವ ನೋಡಾ’ (೧೩೮೩) ಎಂದು ಹೇಳಿದ ಉಕ್ತಿ, ಚಾತುರ್ವಣವನ್ನು ಮೀರಿ ‘ಶರಣ’ ನಾಗುವುದರ ಮಹತ್ವವನ್ನು ಎತ್ತಿಹಿಡಿಯುತ್ತದೆ. ಆದರೂ ಉಳಿದ ವಚನಕಾರರಿಗೆ ಹೋಲಿಸಿದರೆ ವರ್ಣ ವ್ಯವಸ್ಥೆ ಹಾಗೂ ಜಾತಿಪದ್ಧತಿಯನ್ನು ವಿರೋಧಿಸುವ ವಚನಗಳು ಸಿದ್ಧರಾಮನಲ್ಲಿ ಕಡಮೆಯೆಂದೇ ಹೇಳಬೇಕು.

ಶರಣ ಧರ್ಮವು ಮಹಿಳೆಗೆ ಬಹುಕಾಲದಿಂದ ನಿರಾಕರಿಸಲಾಗಿದ್ದ ಸಾಮಾಜಿಕ  ಹಾಗೂ ಆಧ್ಯಾತ್ಮಿಕ ಸಮಾನತೆಯನ್ನು ತಂದುಕೊಟ್ಟು, ಅವಳಿಗೆ ಧೈರ್ಯವನ್ನೂ, ಆತ್ಮಗೌರವವನ್ನೂ ಅಭಿವ್ಯಕ್ತಿಯ ಅವಕಾಶಗಳನ್ನೂ ಕಲ್ಪಿಸಿ ಕೊಟ್ಟಿದ್ದು ಮಹತ್ವದ ಸಂಗತಿಯಾಗಿದೆ. ವಚನ ಚಳುವಳಿಯ ಶರಣರೆಲ್ಲರೂ ಹೆಣ್ಣಿನ ವಿಚಾರದಲ್ಲಿ ತಾಳಿದ ನಿಲುವು ವಿಶೇಷವಾದದ್ದಾಗಿದೆ. ಪರಂಪರಾಗತವಾಗಿ ಹೆಣ್ಣನ್ನು ಮಾಯೆ ಎಂದೋ ಅಧ್ಯಾತ್ಮ ಸಾಧನೆಗೆ ಆತಂಕವೆಂದೋ ಭಾವಿಸುತ್ತಿದ್ದ ಸಂದರ್ಭದಲ್ಲಿ, ಹೆಣ್ಣು ಮಾಯೆ ಅಲ್ಲ, ‘ಮನದ ಮುಂದಣ ಆಸೆಯೆ ಮಾಯೆ ಕಾಣಾ, ಎಂದದ್ದೂ, ಹೆಣ್ಣು ಗಂಡಿಗೆ ಕೌಟುಂಬಿಕ ಹಾಗೂ ಸಾಮಾಜಿಕ ಸಂಗಾತಿ ಮಾತ್ರವಲ್ಲ, ಆಧ್ಯಾತ್ಮಿಕ ಸಂಗಾತಿಯೂ ಹೌದು ಎಂಬಂತೆ ಹೆಣ್ಣನ್ನು ನಡೆಯಿಸಿಕೊಂಡದ್ದು ತುಂಬ ಗಮನಾರ್ಹವಾದ ಸಂಗತಿಗಳಾಗಿವೆ. ಸಿದ್ಧರಾಮನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ-

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ, ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ,

ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ.      (೪೬೮)
ಎಂದು, ಹೆಣ್ಣನ್ನು ಸಾಕ್ಷಾತ್ ದೈವೀಸ್ವರೂಪವೇ ಎಂಬುದಾಗಿ ವರ್ಣಿಸುತ್ತಾನೆ.

ಸ್ವರ್ಗ- ನರಕಗಳ ಕಲ್ಪನೆ ಬಹು ಕಾಲದಿಂದಲೂ ಜನದ ನಂಬಿಕೆಯ ಒಂದು ಭಾಗವಾಗಿ ಅವರ ನಡವಳಿಕೆಗಳನ್ನು ನಿಯಂತ್ರಿಸುವ ‘ಉಪಾಯ’ ದಂತೆ ವರ್ತಿಸಿದೆ. ಈ ‘ಉಪಾಯ’ ಮೂಲಭೂತವಾಗಿ ಪುರೋಹಿತಷಾಹೀ ಮನಸ್ಸು ರೂಪಿಸಿದ್ದು. ಮನುಷ್ಯ ಈ ಲೋಕದಲ್ಲಿ ಮಾಡುವ ಒಳ್ಳೆಯ ಹಾಗೂ ಕೆಟ್ಟ ಕಾರ್ಯಗಳಿನುಗುಣವಾಗಿ, ಆತ ಮರಣಾನಂತರ ಸ್ವರ್ಗಕ್ಕೋ ಅಥವಾ ನರಕಕ್ಕೋ ಹೋಗುತ್ತಾನೆ ಎಂಬುದನ್ನು- ಎಲ್ಲ ದೇಶಗಳ ಶಾಸ್ತ್ರಗಳೂ, ಪುರಾಣಗಳೂ, ಕತೆಗಳೂ ಬಹು ವರ್ಣಮಯವಾಗಿ ಚಿತ್ರಿಸುತ್ತಾ ಒಂದು ಬಗೆಯ ‘ನೀತಿ ಸಂಹಿತೆ’ಯಂತೆ ವರ್ತಿಸಿವೆ.  ಇದರಿಂದ, ಸ್ವರ್ಗದ ಅಪೇಕ್ಷೆಗಾಗಿ ಜನ ತಾವು ಅನೇಕ ಕಲ್ಯಾಣಕಾರಕವಾದ ಕಾರ್ಯಗಳಲ್ಲಿ ತೊಡಗಿದ್ದಾರೆ, ಅಥವಾ ತೊಡಗುತ್ತಾರೆ ಅನ್ನುವುದು ನಿಜವಾದರೂ, ಇದರ ಲಾಭವನ್ನು ಬಹು ಚೆನ್ನಾಗಿ ಪಡೆದುಕೊಂಡವರು ಪುರೋಹಿತರೇ. ಅಷ್ಟೇ ಅಲ್ಲ ಈ ನಂಬಿಕೆಯನ್ನೆ ಬಂಡವಾಳವನ್ನಾಗಿ ಮಾಡಿಕೊಂಡು, ಜನವನ್ನು ಸುಲಿಗೆ ಮಾಡುತ್ತಾ ಜನರನ್ನು ಸದಾ ಇಂತಹ ಅವೈಚಾರಿಕವಾದ ನೆಲೆಗಳಲ್ಲೆ ನಿಲ್ಲಿಸುತ್ತ, ಸ್ವರ್ಗ ನರಕಗಳ ಹಂಗಿಲ್ಲದೆ ಮನುಷ್ಯ ತಾನು ಮನುಷ್ಯರಿಗಾಗಿ ಸ್ಪಂದಿಸುವುದನ್ನೂ ಹಾಗೂ ಬದುಕುವುದನ್ನೂ ಕಲಿಯದಂಥ ಒಂದು ಪರಿಸ್ಥಿತಿ ಇದರಿಂದ ನಿರ್ಮಾಣವಾಗುವ ಅಪಾಯವಿದೆ. ಆದ ಕಾರಣವೇ ವಚನಕಾರರಲ್ಲಿ ಅನೇಕರು ಸ್ವರ್ಗ- ನರಕಗಳ ಕಲ್ಪನೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಕುರಿತು ಸಿದ್ಧರಾಮನು-

ಸ್ವರ್ಗವೆಂದರೆ ಸುಖಕ್ಕೆ ನಾಮ
ನರಕವೆಂದರೆ ದುಃಖಕ್ಕೆ ನಾಮ
ಸುಖವಿಯೋಗವಾದಲ್ಲಿ ದುಃಖವೆನಿಸಿತ್ತು
ದುಃಖ ವಿಯೋಗವಾದಲ್ಲಿ ಸುಖವೆನಿಸಿತ್ತು        (೧೬೫೨)

ಎಂದು, ಸ್ವರ್ಗ-ನರಕಗಳ ಕಲ್ಪನೆಯನ್ನು ಅತ್ಯಂತ ವೈಚಾರಿಕವಾಗಿ ವ್ಯಾಖ್ಯಾನಿಸುತ್ತಾನೆ. ಮನುಷ್ಯ ಈ ದುಃಖಮಯವಾದ ಜಗತ್ತಿನಲ್ಲಿ, ಇಲ್ಲಿ ದೊರೆಯದ ಸಮಸ್ತ ಸುಖಗಳ ಒಂದು ನೆಲೆಯನ್ನು ತಾನೇ ಕಲ್ಪಿಸಿಕೊಂಡು ‘ಸ್ವರ್ಗ’ದ ಕಲ್ಪನೆಯನ್ನು ಕಟ್ಟಿಕೊಂಡಿದ್ದಾನೆ; ಹಾಗೆಯೇ ಅದಕ್ಕೆ ವಿರುದ್ಧವಾಗಿ ‘ನರಕ’ದ ಕಲ್ಪನೆಯನ್ನೂ ಕಟ್ಟಿಕೊಂಡಿದ್ದಾನೆ. ಈ ದೃಷ್ಟಿಯಿಂದ ಸ್ವರ್ಗವೂ ಇಲ್ಲ, ನರಕವೂ ಇಲ್ಲ.

ವಚನಕಾರರು ಭಕ್ತಿಯ ನೆಲೆಯಲ್ಲಿ ‘ಶರಣಸತಿ ಲಿಂಗಪತಿ’ ಭಾವದಲ್ಲಿ ತಮ್ಮ ಅಂತರಂಗವನ್ನು ಭಗವಂತನಿಗೆ ನಿವೇದಿಸಿಕೊಳ್ಳುವ ನಿಲುವೊಂದನ್ನು ಪ್ರಕಟಿಸಿದ್ದಾರೆ. ‘ಮಧುರಭಾವ’ ಎಂದು ವೈಷ್ಣವ ಪರಂಪರೆಯಲ್ಲಿ  ಹೇಳಲಾಗಿರುವ ಈ ಭಕ್ತಿಯ ವಿಧಾನವು ಅನೇಕ ಪ್ರಮುಖ ವಚನಕಾರರಲ್ಲಿ ‘ಶರಣಸತಿ-ಲಿಂಗಪತಿ’ ಎಂಬ ನಿಲುವಿನಲ್ಲಿ ಕಾಣಿಸಿಕೊಂಡಿದೆ. ಆದರೆ ಇದನ್ನೆ ತಮ್ಮ ಚಿತ್ತಸ್ಥಿತಿಯ ಮುಖ್ಯನೆಲೆಯನ್ನಾಗಿ ಮಾಡಿಕೊಂಡ ಗಜೇಶಮಸಣಯ್ಯ, ಉರಿಲಿಂಗದೇವ ಮೊದಲಾದ ‘ಪುರುಷ’ ವಚನಕಾರರೂ ಇದ್ದಾರೆ. ಅಕ್ಕಮಹಾದೇವಿಯಲ್ಲಿ- ಅವಳು ಹೆಣ್ಣಾದುದರಿಂದ- ಈ ಭಾವದ ಉತ್ಕಟತೆ ಸಹಜವಾಗಿಯೆ ಮಡುಗಟ್ಟಿದೆ. ಸ್ವಾರಸ್ಯದ ಸಂಗತಿ ಎಂದರೆ ಸಿದ್ಧರಾಮನಲ್ಲಿಯೂ ‘ಸತಿಪತಿಭಾವ’ದ ಅಭಿವ್ಯಕ್ತಿ ಸುಮಾರು ಹದಿನೈದರಷ್ಟು ಸಂಖ್ಯೆಯ ವಚನಗಳಲ್ಲಿ ಕಾಣಿಸಿಕೊಂಡಿದೆ. ನಿದರ್ಶನಕ್ಕೆ-

‘ಮುಂದಲೆವಿಡಿದು ಮೋಹಿಸುವ ಗಂಡನ ಕಾಣದೆ

ಬಾಯ್ಬಿಡುತ್ತಿದ್ದೇನೆ ಗುರುವೆ
ಈ ಮಂದಮತಿಯ ಮುಂಡವ ಕೊಂಡೊಯ್ದು
ಸಂದೇಹವಿಲ್ಲದೆ ಎನ್ನ ಗಂಡನ ಎನಗೆ ತೋರಿದಡೆ
ನೀನೆನ್ನ ತಂದೆ ಎಂಬೆನಯ್ಯಾ ಕಪಿಲಸಿದ್ಧ ಮಲ್ಲಿಕಾರ್ಜುನಾ       (೬೬೮)

ಬಾರದೆ ಗಂಡು, ಬಡವಾದೆ

ಉಣ್ಣದೆ ಗಂಡ, ಉಪಾವಾಸವಿದ್ದೆ
ನನ್ನ ಕಣ್ಣ ನೀರು ನಿನ್ನ ತಾಗಲೋ
ಕಪಿಲಸಿದ್ಧ ಮಲ್ಲಿನಾಥಾ  (೬೦೧)

ನೆನಹಿನ ನಲ್ಲನು ಮನೆಗೆ ಬಂದಡೆ ಮನದಲ್ಲಿ ಗುಡಿಗಟ್ಟುವೆನವ್ವಾ
ತೋರಣ ತೋರಣ ಮಾಮರ ಮಾಮರ ತೋರಣಗಟ್ಟುವೆನವ್ವಾ
ಕಾಮಸಂಗವಳಿದು ನಿಷ್ಕಾಮಸಂಗಕ್ಕೆಳಸುವೆನವ್ವಾ
ಕಪಿಲಸಿದ್ಧ ಮಲ್ಲಿಕಾರ್ಜುನನ ಕೂಡುವೆನವ್ವಾ     (೫೫೦)

ಈ ಕೆಲವು ವಚನಗಳಲ್ಲಿನ ಭಕ್ತಿಯ ಉತ್ಕಟತೆ, ಆರ್ತತೆ, ಅವುಗಳ ರಾಚನಿಕ ಕ್ರಮ, ಅವು ನಿರ್ಮಿಸಿರುವ ಪ್ರತೀಕಗಳೊಳಗಣ ಕಾವ್ಯಾತ್ಮಕತೆ, ಇವು ಯೋಗಿ-ಕವಿಯಾದ ಸಿದ್ಧರಾಮನ ವಚನಗಳ ಲಕ್ಷಣವನ್ನು ಒಟ್ಟಾರೆಯಾಗಿ ಪ್ರತಿನಿಧಿಸುತ್ತವೆ.

ಈ ಎಲ್ಲ ಸಂಗತಿಗಳಿಂದ ನಿಷ್ಟನ್ನವಾಗುವುದೇನೆಂದರೆ: ಪುಸ್ತಕವಿದ್ಯೆಯ ಬಗ್ಗೆ ತಿರಸ್ಕಾರ: ಪರಂಪರಾಗತವಾದ ವೇದ-ಶಾಸ್ತ್ರ- ಆಗಮಗಳ ಪ್ರಾಮಾಣ್ಯದ ನಿರಾಕರಣೆ; ವರ್ಗಭೇದ, ಲಿಂಗಭೇದ, ವೃತ್ತಿ ಭೇದಗಳನ್ನು ಪರಿಗಣಿಸದ, ಎಲ್ಲರ ಶ್ರೇಯಸ್ಸನ್ನು ಒಳಗೊಳ್ಳುವ ಸಾಮಾಜಿಕ ಕಾಳಜಿಗಳು; ಮಹಿಳೆಯರ ಬಗ್ಗೆ ಗೌರವ; ಚಾತುರ್ವರ್ಣ ವ್ಯವಸ್ಥೆಯ ಬಗ್ಗೆ ಅಸಮಾಧಾನ; ಎಲ್ಲಕ್ಕಿಂತ ಮಿಗಿಲಾಗಿ ಶರಣನಾಗಿರುವಿಕೆಯ ಶ್ರೇಷ್ಠವಾದದ್ದೆಂಬ ತಿಳಿವಳಿಕೆ; ಶರಣರಸಂಗದಿಂದ ಷಟ್‌ಸ್ಥಲ ಮಾರ್ಗಾನುವರ್ತಿಯಾಗಿ ‘ಅನುಭಾವ’ ಮಾರ್ಗದಲ್ಲಿ ಮುನ್ನಡೆಯುವ ಹಂಬಲ; ಅಂತರಂಗ ಬಹಿರಂಗಗಳನ್ನು ವಿಮರ್ಶೆಗೆ ಒಡ್ಡಿಕೊಳ್ಳುವ ಧೈರ್ಯ ಮತ್ತು ಪ್ರಾಮಾಣಿಕತೆ -ಈ ಎಲ್ಲ ಲಕ್ಷಣಗಳೂ ಸಿದ್ಧರಾಮನ ವಚನಗಳಲ್ಲಿ ಅಭಿವ್ಯಕ್ತಗೊಂಡಿವೆ. ಆದರೆ ಅವನು ಎಲ್ಲಿಯೂ ಸುಧಾರಕನ ಏರುದನಿಯಲ್ಲಿ ಮಾತನಾಡುವುದಿಲ್ಲ; ಸಾಮಾಜಿಕ ಅಸಾಂಗತ್ಯಗಳನ್ನು ಕಟುವಾಗಿ ವಿಡಂಬಿಸುವುದಿಲ್ಲ; ಅಥವಾ ಮಾರ್ಗದರ್ಶಕನೆಂಬ ಗತ್ತಿನಿಂದಲೂ ನುಡಿಯುವುದಿಲ್ಲ. ಅದರ ಬದಲು ಒಂದು ಪರಿಣತ ಮನಸ್ಸಿನ ಮತ್ತು ಲೋಕದ ಬಗ್ಗೆ ಅಪಾರ ಅನುಕಂಪ ತುಂಬಿದ ದನಿಯೊಂದು ಅವನ ವಚನಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಾರಣವೇನೆಂದರೆ, ಅವನು ಬಸವಾದಿಗಳಂತೆ, ‘ಬದ್ಧ’ವಾದ ಸಾಮಾಜಿಕ- ಧಾರ್ಮಿಕ ಆಂದೋಲನದ ತುರ್ತು ಹಾಗೂ ಸಂಘರ್ಷಗಳೊಳಗೆ ಬದುಕಿದವನಲ್ಲ. ಅವನ ಬದುಕಿನ ಬಹುಭಾಗ, ದೇವಸ್ಥಾನ ಕೇಂದ್ರಿತವಾದ ಕ್ಷೇತ್ರಕಾರ‍್ಯಗಳ ನಡುವೆ; ಭಕ್ತಿಯಿಂದ, ಆರ್ತತೆಯಿಂದ ಬರುವ ಬಹುಸಂಖ್ಯೆಯ ಜನದ ನಡುವೆ; ಅವರ ಹಸಿವು ಬಾಯಾರಿಕೆಗಳನ್ನು ನೀಗಿಸುವ ಕೆರೆ-ಬಾವಿ- ಅರವಟ್ಟಿಗೆಗಳ ನಿರ್ಮಾಣಕಾರ‍್ಯದ ನಡುವೆ; ದೈನಂದಿನ ಅರ್ಚನೆ – ಆರಾಧನೆ- ಹೋಮ- ವ್ರತ, ಧ್ಯಾನಾದಿಗಳ ನಡುವೆ ಕ್ರಿಯಾಶೀಲವಾಗಿತ್ತು. ಬಹು ಜನದೊಂದಿಗೆ ವ್ಯವಹರಿಸಿಯೂ, ಅನೇಕ ಬಗೆಯ ಲೌಕಿಕ ಕಾರ‍್ಯಗಳಲ್ಲಿ ತೊಡಗಿಕೊಂಡರೂ, ತನ್ನ ಮನಸ್ಸಿನ ಪ್ರಸನ್ನತೆಯನ್ನು ಒಂದೇ ಹದದಲ್ಲಿ ಉಳಿಸಿಕೊಂಡವನು. ಇದೇ ಯೋಗಿಯಾದವನ ಲಕ್ಷಣ. ಅವನೇ ತನ್ನದೊಂದು ವಚನದಲ್ಲಿ ಹೇಳಿಕೊಳ್ಳುವಂತೆ ‘ಆರೇನೆಂದಡೂ ಓರಂತಿಪ್ಪದೇ ಸಮತೆ’ (ವ ೧೬೬). ‘ಸಮತ್ವಂ ಯೋಗ ಉಚ್ಯತೇ’ ಎನ್ನುತ್ತದೆ ಭಗವದ್ಗೀತೆ. ಸಿದ್ಧರಾಮ ಆ ಬಗೆಯ ಸಮತ್ವವನ್ನು ಸಾಧಿಸಿದವನು. ಈ ಸಮತ್ವವೇ ಅವನ ಲೋಕಾನುಕಂಪೆಯ ಮೂಲ ದ್ರವ್ಯವಾಗಿದೆ. ಸಿದ್ಧರಾಮನನ್ನು ಕುರಿತು ಹೆಮ್ಮೆ ಉತ್ಸಾಹಗಳಿಂದ ಕಾವ್ಯವನ್ನು ಬರೆದ ರಾಘವಾಂಕನು, ಸಿದ್ಧರಾಮನ ವ್ಯಕ್ತಿತ್ವದ ಈ ಲಕ್ಷಣವನ್ನು ಬಹು ಸೊಗಸಾಗಿ ಹಲವು ಸಂದರ್ಭಗಳ ಮೂಲಕ ನಿರೂಪಿಸುತ್ತಾನೆ: ಸಿದ್ಧರಾಮನು ಕೆರೆಯನ್ನು ಕಟ್ಟಿಸುವಾಗ ‘ಪಶುಪಕ್ಷಿ ಕ್ರಿಮಿಕೀಟಕಾವಳಿಗಳರತು ನೀರ್ಗುಡಿಯೆ ಭವವಳಿವಂತೆ ಕಟ್ಟುವೆ ಕೆರೆಯ’ (ಸಿರಾಚ ೪.೧೭) ನೆಂದು ಸಂಕಲ್ಪಿಸಿದನಂತೆ. ಆದಿಲಿಂಗವನ್ನು ತರುವ ಬಂಡಿಯ ಎತ್ತುಗಳು, ಗಾಡಿ ಹೊಡೆಯುವವರ ಕಿರುಕುಳದಿಂದ ಸತ್ತು ಹೋಗಲು, ಸಿದ್ಧರಾಮನು ಅವುಗಳನ್ನು ಬದುಕಿಸಿದನು (೬-೨೮). ಬಿಲ್ಲೇಶ ಬೊಮ್ಮಯ್ಯನು ಆತ್ಮಹತ್ಯೆ ಮಾಡಿಕೊಂಡು ನರಕಕ್ಕೆ ಬಿದ್ದು ಹೋದಾಗ, ಸಿದ್ಧರಾಮನು ಕರುಣೆಯಿಂದ ಅವನನ್ನು ಅಲ್ಲಿಂದ ಮೇಲಕ್ಕೆ ಎತ್ತಿದನು (೮-೪೬). ತನ್ನ ಮಹಾಮನೆಯಲ್ಲಿ ಇದ್ದ ಬೆಕ್ಕೊಂದು ಅಕಸ್ಮಾತ್ತಾಗಿ ಬೆಂಕಿಗೆ ಸಿಕ್ಕು ಸತ್ತಾಗ, ತಾಯಿಯನ್ನು ಕರೆದೊರಲುವ ಬೆಕ್ಕಿನ ಮರಿಯ ಅಳಲನ್ನು ನೋಡಲಾರದೆ ಸಿದ್ಧರಾಮನು ಆ ತಾಯಿ ಬೆಕ್ಕನ್ನು ಬದುಕಿಸಿದನು (೯-೨೧)- ಈ ಕೆಲವು ಪ್ರಸಂಗಗಳು ಮೇಲೆ ನೋಡಲು ಅಸಂಭವನೀಯವಾದ ‘ಕಂತೆಪುರಾಣ’ಗಳಂತೆ ಕಾಣುತ್ತವೆಯೆಂಬುದು ನಿಜವಾದರೂ, ಅವುಗಳು ಸಿದ್ಧರಾಮನ ‘ಲೋಕಾನುಕಂಪೆ’ಯನ್ನೂ, ಹೃದಯದ ಮಾರ್ದವತೆಯನ್ನೂ ಅಭಿವ್ಯಕ್ತಿಸುವ ಸಂಕೇತಗಳಾಗಿವೆ ಎಂಬುದನ್ನು ಮರೆಯಬಾರದು. ಈ ಬಗೆಯ ಅನುಕಂಪೆ-ಉದಾರತೆಯಿಂದಾಗಿಯೆ ಸಿದ್ಧರಾಮನು, ತನ್ನ ವಚನಗಳಲ್ಲಿ ‘ದೇವಸ್ಥಾನ ನಿರಾಕರಣೆ’ಯಂಥ ಬಹುಮುಖ್ಯವಾದ ಧೋರಣೆಯನ್ನು ಇನ್ನಿತರ ವಚನಕಾರರಂತೆ ಕಟ್ಟುನಿಟ್ಟಾಗಿ ಪ್ರತಿಪಾದಿಸಿದಂತೆ ತೋರುವುದಿಲ್ಲ. ಹಾಗೆ ನೋಡಿದರೆ, ದೇವಸ್ಥಾನದ ಕಲ್ಪನೆಯನ್ನು ಬಹಿರಂಗದ ದೇವಾಲಯದಿಂದ ಮನುಷ್ಯನ ಶರೀರಕ್ಕೆ ಸ್ಥಳಾಂತರಮಾಡಿ ಆ ಮೂಲಕ ಸೂಕ್ಷ್ಮವಾಗಿ ಪುರೋಹಿತಷಾಹಿಯನ್ನು, ಮತ್ತು ಪ್ರತ್ಯಕ್ಷವಾಗಿ ರಾಜಷಾಹಿಯನ್ನು ತಿರಸ್ಕರಿಸುತ್ತಾ ದೇಹವನ್ನೆ ದೇವಾಲಯವನ್ನಾಗಿ ಮಾಡುವ ಈ ನಿಲುವು, ವಚನ ಚಳುವಳಿಯ ಬಹುಮುಖ್ಯವಾದ ಸಂಗತಿಯಾಗಿದೆ. ಎಳೆಯಂದಿನಿಂದಲೂ ‘ದೇವಾಲಯದ’ ಜತೆಗೇ ಬೆಳೆದ ಮತ್ತು ಅದರ ವಿಸ್ತರಣ ರೂಪದ ಕ್ಷೇತ್ರ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಸಿದ್ಧರಾಮನು, ಈ ದೇವಾಲಯಗಳು ಜನಮೂಹದ ಬದುಕಿನಲ್ಲಿ ವಹಿಸುತ್ತಿದ್ದ ಹಾಗೂ ವಹಿಸುವ ಪಾತ್ರದ ವ್ಯಾಪ್ತಿಯೇನೆಂಬುದನ್ನು ಬಲ್ಲ ಸಿದ್ಧರಾಮನು, ಕಲ್ಯಾಣದ ಶರಣರ ಸಂಪರ್ಕ ಹಾಗೂ ಪ್ರಭಾವಗಳಿಗೆ ಒಳಗಾಗಿ, ವಚನಗಳ ಮೂಲಕ ತನ್ನ ಪ್ರತಿಕ್ರಿಯೆಯನ್ನು ದಾಖಲು ಮಾಡುವಲ್ಲಿ, ‘ದೇವಾಲಯ ನಿರಾಕರಣೆ’ಯ ನಿಲುವನ್ನು ತಾನೂ ಪ್ರಕಟಿಸುವಲ್ಲಿ ಅಂತಹ ಉತ್ಸಾಹವನ್ನೇನೂ ತೋರಿಸುವುದಿಲ್ಲ. ಹಾಗೆಂದರೆ ಯಾವ ಕಾರಣಕ್ಕೆ ಬಸವ-ಅಲ್ಲಮಾದಿಗಳು ಬಹಿರಂಗದ ದೇವಾಲಯಗಳನ್ನು ನಿರಾಕರಿಸಿದರೋ ಆ ಕಾರಣಗಳನ್ನು ಸಿದ್ಧರಾಮನು ತಿಳಿದವನಾಗಿರಲಿಲ್ಲವೆಂಬುದು ಈ ಮಾತಿನ ಅರ್ಥವಲ್ಲ. ಅಂದಿನ ಶರಣರ ತಾತ್ವಿಕ ನಿಲುವುಗಳೊಂದಿಗೆ ಅವನಿಗೆ ಸಹಮತವಿದ್ದರೂ, ‘ದೇವಸ್ಥಾನ’ದ ಬಗ್ಗೆ ಅವನಿಗೆ, ಬೇರೆಯೇ ಆದ ಚಿಂತನೆಗಳಿದ್ದವೆಂದು ತೋರುತ್ತದೆ. ಅವನು ದೇವಸ್ಥಾನವನ್ನು ‘ಕಲ್ಲಿನಲ್ಲಿ ವಲ್ಲಭವಿದ್ದಾನೆಂದು’ (ವ ೧೬೫೮) ಸುಮ್ಮನೆ ತಿಳಿದು ಮೂಢನಂಬಿಕೆಯಿಂದ ರೂಪುಗೊಂಡ ರಚನೆ ಎಂದು ತಿಳಿಯುವುದಿಲ್ಲ. ‘ಕಲ್ಲಿನಲ್ಲುಂಟು, ಮಣ್ಣಿನಲಿಲ್ಲವೆಂದೆಂಬಡೆ, ಅಂತರ್ಯಾಮಿ ಪರಿಪೂರ್ಣತ್ವ ಭಂಗವಹುದಯ್ಯಾ’ (ವ ೧೬೫೮). ದೇವರು ದೇವಾಲಯದ ಕಲ್ಲಿನಲ್ಲಿ (ಮಾತ್ರ) ಇದ್ದಾನೆ ಬೇರೆಯ ಕಡೆ ಇಲ್ಲ ಎಂದರೆ, ದೇವರ ಸರ್ವಾಂತರ್ಯಾಮಿತ್ವಕ್ಕೆ ಭಂಗಬರುತ್ತದೆ. ಅಂದರೆ ದೇವರು ಸರ್ವಾಂತರ್ಯಾಮಿ ಅನ್ನುವುದಾದರೆ, ಅವನು ದೇವಾಲಯದಲ್ಲೂ ಇದ್ದಾನೆ ಅನ್ನುವುದೂ ತರ್ಕ ಸಮ್ಮತವಾದದ್ದೆ. ಇಷ್ಟರ ಮೇಲೆ, ದೇವಸ್ಥಾನ ಕಲ್ಲಿನ ಮೇಲೆ ಕಲ್ಲನ್ನು ಹೇರಿ, ಒಳಗೊಂಡು ಕಲ್ಲನ್ನು ಪೂಜಿಸುವ ಸ್ಥಳವಲ್ಲ. ಯಾಕೆಂದರೆ-

ಕಟೆದ ಕಲ್ಲು ಲಿಂಗವೆನಿಸಿತ್ತು, ಕಟೆಯದ ಕಲ್ಲು ಕಲ್ಲೆನಿಸಿತ್ತು
ಪೂಜಿಸಿದ ಮಾನವ ಭಕ್ತನೆನಿಸಿದನು, ಪೂಜಿಸದ ಮಾನವ
ಮಾನವನೆನಿಸಿದನು
ಕಲ್ಲಾದೊಡೇನು? ಪೂಜೆಗೆ ಫಲವಾಯಿತ್ತು.      (೧೧೫೮)

ಬಹುಶಃ ಇದು ಸಿದ್ಧರಾಮನ ನಿಲುವು. ದೇವಸ್ಥಾನವೂ ಕೂಡ ‘ಪೂಜೆಗೆ ಫಲ’ವೀಯುವ ಸ್ಥಳ ತಾನೆ? ಆ ಫಲ ಬೇರಾವುದೂ ಅಲ್ಲ, ಈ ಜಗತ್ತಿನ ಕಷ್ಟ ಕೋಟಲೆಗೆ ಸಿಕ್ಕಿದ ಜನ ದೇವಸ್ಥಾನಗಳಿಗೆ ಬಂದು ತಾವು ಸಲ್ಲಿಸುವ ಪೂಜೆಪ್ರಾರ್ಥನೆ ಅರ್ಚನೆ ಇತ್ಯಾದಿಗಳಿಂದ ಒಂದು ಬಗೆಯ ಮನಸ್ಸಮಾಧಾನವನ್ನು ಪಡೆಯುತ್ತಾರಲ್ಲ ಅದು; ತಮ್ಮನ್ನು ಕಷ್ಟಸಂಕಟಗಳಿಂದ ಪಾರುಮಾಡುವ ದೈವವೊಂದಿದೆ ಎಂಬ ಶ್ರದ್ಧೆಯನ್ನು ವೃದ್ಧಿಗೊಳಿಸಿಕೊಳ್ಳುತ್ತಾರಲ್ಲ, ಅದು. ಆದರೆ ‘ಇಷ್ಟಲಿಂಗನಿಷ್ಠೆ’ಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ, ಶರಣರು ಬಹಿರಂಗದ ದೇವಾಲಯವನ್ನು ನಿರಾಕರಿಸಿ ‘ದೇಹದೊಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯವೇಕಯ್ಯಾ’ (ವ. ೨೧೩) ಎಂಬ ನಿಲುವನ್ನು ಪ್ರತಿಪಾದಿಸಿದ್ದು ಖಂಡಿತವಾಗಿಯೂ ಕ್ರಾಂತಿಕಾರಕವಾದ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ಹೆಜ್ಜೆಯನ್ನು ಎಲ್ಲರೂ ಇಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಸಿದ್ಧರಾಮನು ಬಹುಶಃ ಚನ್ನಾಗಿ ಬಲ್ಲವನಾಗಿದ್ದನೆಂದು ತೋರುತ್ತದೆ.[15]

ಸಿದ್ಧರಾಮನು ಕಲ್ಯಾಣದಿಂದ ಹಿಂದಕ್ಕೆ ಬಂದ ಮೇಲೆ ಆತನಿಗೆ ಮೊದಲಿನಂತೆ ಸ್ಥಾವರಲಿಂಗ ಕೇಂದ್ರವಾದ ದೇವಸ್ಥಾನದ ಬಗ್ಗೆ ಮತ್ತು ಅದುವರೆಗೂ ಆಗಮೋಕ್ತವಾಗಿ ನಡೆಯುತ್ತಿದ್ದ ವ್ರತ-ನೇಮ-ಹೋಮಾದಿಗಳ ಬಗ್ಗೆ ಸಹಜವಾಗಿಯೇ ಅನಾಸಕ್ತಿ ಬೆಳೆದಿರ- ಬಹುದೆಂಬುದು ಆತನ ವಚನಗಳಲ್ಲಿ ಸೂಚಿತವಾಗಿದೆ. ಅವನ ಸಾಧನೆಯೇನಿದ್ದರೂ ಷಟ್‌ಸ್ಥಲ ಮಾರ್ಗದ ಶಿವಯೋಗದಲ್ಲಿಯೇ ಮುಂದುವರಿದುದನ್ನೂ, ಆ ಯೌಗಿಕಾನುಭವಗಳನ್ನೂ, ಅವನ ವಚನಗಳು ದಾಖಲಿಸುತ್ತವೆ. ತನ್ನದೊಂದು ವಚನದಲ್ಲಿ-

‘ಅಯ್ಯಾ, ದೃಷ್ಟನಷ್ಟ ಗುರುಕಾರುಣ್ಯದಲ್ಲಿ
ಇಷ್ಟಲಿಂಗವ ಸಂಬಂಧಿಸಿಕೊಟ್ಟ ಬಳಿಕ
ಮರಳಿ ಯೋಗವುಂಟೆ?
ಸರ್ವಯೋಗಕ್ಕೆ ಶಿವಯೋಗವೆ ಮಹಾಯೋಗ
ವೆಂದರಿದ ಬಳಿಕ?’        (ವ ೫೩)

ಎಂದು ತಾನು ಹಿಂದೆ ಕೈಕೊಂಡ ಅಷ್ಟಾಂಗ ಯೋಗಮಾರ್ಗದ ‘ಸರ್ವಯೋಗ’ಕ್ಕಿಂತ. ‘ಶಿವಯೋಗವೆ ಮಹಾಯೋಗ’ ವೆಂಬುದನ್ನು ಅರಿತ ಪರಿಯನ್ನು ಸೂಚಿಸುತ್ತಾನೆ. ಅಷ್ಟೆ ಅಲ್ಲ, ಸಾಕಾರನಿಷ್ಠೆಯನ್ನು ತನ್ನ ಬದುಕಿನ ವ್ರತವೆಂಬಂತೆ ಕೈಕೊಂಡ ಸಿದ್ಧರಾಮನ ಮನಸ್ಸು ಮೊದ ಮೊದಲು ‘ಆಕಾರವಿಲ್ಲದ ಮೂರ್ತಿಯ ಆಕಾರಕ್ಕೆ ತಂದು’ ಪೂಜಿಸಲು ಸಾಧ್ಯವಾದ ತನಗೆ ‘ಆಕಾರದ’ ಮೂರ್ತಿಯ ನಿರಾಕಾರಕ್ಕೆ ತಂದು ಪೂಜಿಸಲರಿಯದ’ (ವ ೧೦೭೪) ಒಂದು ಸಂದಿಗ್ಧದಲ್ಲಿ ಸಿಲುಕಿದರೂ ಕ್ರಮ ಕ್ರಮೇಣ ಸಾಕಾರಕ್ಕೂ ನಿರಾಕಾರಕ್ಕೂ ಮೂಲಭೂತವಾದ ಅಂತಹ ವ್ಯತ್ಯಾಸವೇನೂ ಇಲ್ಲವೆಂಬುದನ್ನು ಅರಿತುಕೊಳ್ಳುವ ನೆಲೆಗೆ ಬರುತ್ತದೆ. ವಾಸ್ತವವಾಗಿ ‘ಮೂರ್ತಿ ಎಂಬುದು ನೀನು ನೆನೆದೊಡಾದುದು ಕಂಡಯ್ಯ, ಆ ಮೂರ್ತಿ ಎಂಬುದು ನಿನ್ನ ಸ್ವಭಾವವು ಕಂಡಯ್ಯ’ (೯೩೨) ಎನ್ನುವುದೇ ನಿಜವಾದ ಮಾತು. ಭಗವಂತನಾದವನು ಭಕ್ತನ ಸ್ವಭಾವಕ್ಕೆ ಅನುಸಾರವಾಗಿ, ಅವನು ಇಷ್ಟಪಟ್ಟ ‘ಆಕಾರ’ವನ್ನು ತಾಳುತ್ತಾನೆ. ಆದಕಾರಣವೇ ‘ಒಬ್ಬ ಮೂರ್ತಿ ಹಲವು ರೂಪಾಗಿ ಪೂಜಿಸಿಕೊಂಡ ನೋಡಾ ಮನವೆ’ (೧೫೧೬) ಎಂದು ಸಿದ್ಧರಾಮನು ಯೋಚಿಸುವುದು ಸರಿಯಾಗಿಯೆ ಇದೆ. ಈ ನೆಲೆಯಲ್ಲಿ ಭಗವತ್ ಸ್ವರೂಪದ ‘ಆಕಾರ’ ‘ನಿರಾಕಾರ’ಗಳನ್ನು ಕುರಿತ ಚಿಂತನೆ ಗಮನಿಸತಕ್ಕದ್ದಾಗಿದೆ. ಈ ಕುರಿತು-

ತರುಗಳ ಮುರಿದು ಗಗನಕ್ಕೀಡಾಡುವ
ಅನಿಲ ರೂಪೋ ನಿರೂಪೋ ಬಲ್ಲಡೆ ನೀವು ಹೇಳಿರೊ?     (೪೬೨೧)

ಎಂದು ಪ್ರಶ್ನಿಸುತ್ತಾನೆ,
ಸಕ್ಕರೆಯು ಆಕಾರ, ರುಚಿಯು ನಿರಾಕಾರ
ಲಿಂಗವಾಕಾರ ಜಂಗಮ ನಿರಾಕಾರ
ಬೆಣ್ಣೆ ಆಕಾರ, ಘೃತ ನಿರಾಕಾರ
ಆಕಾರವ ಬಿಟ್ಟು ನಿರಾಕಾರವಿಲ್ಲ, ನಿರಾಕಾರವ ಬಿಟ್ಟು ಆಕಾರವಿಲ್ಲ  (ವ ೭೬೮)

ಆಕಾರ ನಿರಾಕಾರಗಳೆರಡೂ ಒಂದನ್ನು ಬಿಟ್ಟು ಮತ್ತೊಂದಿಲ್ಲ, ಯಾಕೆಂದರೆ

ಸಕ್ಕರೆಯ ಬಿಟ್ಟು ರುಚಿಯ ತೆಗೆಯಬಹುದೆ?
ಬೆಣ್ಣೆಯ ಬಿಟ್ಟು ಘೃತವ ತೆಗೆಯಬಹುದೆ  (೭೬೧)

ಇವು ಅತ್ಯಂತ ಸೂಕ್ಷ್ಮವಾದ ಆಧ್ಯಾತ್ಮಿಕ ಅನುಭವಕ್ಕೆ ಮಾತ್ರ ಕಾಣುವ ಸತ್ಯಗಳು. ನಿಜವಾದ ಯೋಗಿಯ ಮನಸ್ಸು ಆಕಾರದಿಂದ  ನಿರಾಕಾರಕ್ಕೆ, ನಿರಾಕಾರದಿಂದ ಆಕಾರಕ್ಕೆ ಲೀಲಾಜಾಲವಾಗಿ ವಿಹರಿಸಬಲ್ಲದು. ಆದರೆ-

ನಿರಾಕಾರವೆ ಮೂರ್ತಿಯಾಗಿ
ಮೂರ್ತಿಯೆ ನಿರಾಕಾರವಾಗಿ
ಇಂತಿವೆಲ್ಲವನತಿಗಳೆದು ಬಯಲಾಗಿಪ್ಪೆಯಯ್ಯ   (೬೦೭)

ಎಂಬ ಅನುಭೂತಿಯಲ್ಲಿ ನಿಲ್ಲುವುದೆ ಶಿವಯೊಗದ ಶಿಖರಾವಸ್ಥೆ. ಆ ಸ್ಥಿತಿಯಲ್ಲಿ

ಅಯ್ಯಾ ನಿಮ್ಮ ಕಂಡು ಕಂಗಳು ನೋಡಲಮ್ಮದೆ
ಬೆಚ್ಚಿ ಬೆದರಿದುವಯ್ಯ
ನೀನು ಶತಕೋಟಿ ಸೂರ್ಯಪ್ರಕಾಶಕ್ಕತೀತನು
ನಿನ್ನ ಕಂಡ ಬಳಿಕ ಇನ್ನು ಕರ್ಮವುಂಟೆ
ಕಪಿಲಸಿದ್ಧ ಮಲ್ಲಿಕಾರ್ಜುನಾ      (೬೬)

ಈ ಅನುಭೂತಿ ಏಕ ಕಾಲಕ್ಕೆ ‘ಬಯಲೂ’ ಹೌದು ‘ಬೆಳಗೂ’ ಹೌದು. ಈ ಬಗೆಯ ‘ಬಯಲು- ಬೆಳಗಿನ’ ನಿಲುವಿಗೇರಿದ ಸಿದ್ಧರಾಮನು ಕನ್ನಡನಾಡು ಕಂಡ ಅಪರೂಪದ ಶಿವಯೋಗಿ- ಯಾಗಿದ್ದಾನೆ.

ಶಿವಯೋಗಿ ಸಿದ್ಧರಾಮ (೧೯೯೭)

* * *


[1] ‘ಶೂನ್ಯ ಸಂಪಾದನೆ’ಯಲ್ಲಿ ಸಿದ್ಧರಾಮನ ‘ಇಷ್ಟಲಿಂಗ ದೀಕ್ಷೆಯ’ ಪ್ರಸಂಗವು ಕಾಣಿಸಿಕೊಳ್ಳುವುದಕ್ಕಿಂತ ಹಿಂದೆಯೆ, ಕಲ್ಮಠದ ಪ್ರಭುದೇವರು ವಿರಚಿಸಿದ ‘ಲಿಂಗಲೀಲಾವಿಲಾಸ ಚಾರಿತ್ರ’ವೆಂಬ ‘ವಚನಸಂಕಲನ- ವ್ಯಾಖ್ಯಾನ’ ರೂಪದ (ಕ್ರಿ.ಶ.ಸು. ೧೪೩೦) ಕೃತಿಯಲ್ಲಿ ‘ಆನು ಚನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು, ಶಿವಯೋಗದಲ್ಲಿ ನಿತ್ಯನಾಗಿ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿಯಾಗಿ ಐಕ್ಯವೆಂಬ ಷಡುಸ್ಥಲಕ್ಕೆ ಅಧಿಕಾರಿಯಾದೆ. ನಿನ್ನವರ ಸಲಿಗೆಗೆ ಸಂದೆ. ಚನ್ನಬಸವಣ್ಣನ ಕೃಪೆಯೆನ್ನನಿಂತು ಮಾಡಿತ್ತು ಕಾಣಾ ಶ್ರೀ ಗುರುವೇ ಕಪಿಲಸಿದ್ಧಮಲ್ಲಿಕಾರ್ಜುನಾ’ ಎಂಬ ಸಿದ್ಧರಾಮನ ವಚನವು ಉಲ್ಲೇಖಿತವಾಗಿರುವುದಲ್ಲದೆ, ಇದೇ ವಿಷಯಕ್ಕೆ ಸಂಬಂಧಿಸಿದ ಇನ್ನೂ ಹಲವು ವಚನಗಳು ಉಕ್ತವಾಗಿವೆಯೆನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಹಾಗೆಯೆ ಈ ಲಿಂಗದೀಕ್ಷೆಯ ಪ್ರಸಂಗ ಸಿದ್ಧರಾಮನೇ ರಚಿಸಿದನೆನ್ನಲಾದ ಆತನ ತ್ರಿವಿಧಿಗಳಲ್ಲಿಯೂ ಉಕ್ತವಾಗಿದೆ.

[2] ಸಿದ್ಧರಾಮನು ಎಂದಿನಂತೆ ಕೆರೆಯ ಕೆಲಸದಲ್ಲಿರುವಾಗ, ಒಂದುದಿನ, ಬಿಜ್ಜಳನ ತಮ್ಮನಾದ ಕರ್ಣದೇವನು, ಸಿಂಹಾಸನ- ಆಳು ಕುದುರೆ ಮತ್ತಿತರ ಮುತ್ತುರತ್ನಾದಿ ಕಾಣಿಕೆಗಳಸಹಿತ ಮಂತ್ರಿಗಳನ್ನು ಕಳುಹಿಸಿ, ಗುರುಸಿದ್ಧರಾಮನು ಬಂದು ತೀರಿಹೋದ ಬಿಜ್ಜಳನ ಸ್ಥಾನದಲ್ಲಿ ತನಗೆ ಪಟ್ಟವನ್ನು ಕಟ್ಟುವ ಕೃಪೆಮಾಡಬೇಕೆಂದು ಹೇಳಿಕಳುಹಿಸುತ್ತಾನೆ. ಆದರೆ ಸಿದ್ಧರಾಮನು ಕರ್ಣದೇವನ ಕೋರಿಕೆಯನ್ನು ನಿರಾಕರಿಸುತ್ತಾನೆ. ಇದು ಈ ಸಂದರ್ಭದ ಸಾರಾಂಶ: (ಸಿದ್ಧರಾಮಚಾರಿತ್ರ. ೯-೧ ರಿಂದ ೧೬)

[3] ಡಾ.ಆರ್.ಸಿ ಹಿರೇಮಠ- ಅವರ  ಸಂಪಾದನೆಯ ‘ಸಿದ್ಧರಾಮೇಶ್ವರ ವಚನಗಳು, (೧೯೬೮ ಕ.ವಿ.ವಿ)’ ಸಂಪುಟದಲ್ಲಿ ೧೩೭೮ ವಚನಗಳಿವೆ. ಡಾ. ಎಸ್. ವಿದ್ಯಾಶಂಕರ ಅವರ ಸಂಪಾದನೆಯ ‘ಸಿದ್ಧರಾಮೇಶ್ವರ ವಚನ ಸಂಪುಟ. (೧೯೭೮, ಕನ್ನಡ ಮತ್ತು ಸಂಸ್ಕೃತಿ ನಿದೇಶನಾಲಯ)ದಲ್ಲಿ ೧೬೭೯ ವಚನಗಳಿವೆ.’

[4] ಚನ್ನಪ್ಪ ಉತ್ತಂಗಿ : ಸಿದ್ಧರಾಮ ಸಾಹಿತ್ಯ ಪ್ರಸ್ತಾವನೆ, ಪು ೧೦.

[5] ಈ ‘ತ್ರಿವಿಧಿ’ಗಳನ್ನು ‘ತ್ರಿಪದಿ’ಯ ಬೇರೊಂದು ರೂಪವೆಂದು ಕರೆಯಬಹುದೆ, ಅಥವಾ ಇವುಗಳಿಗೆ ಬೇರೆ ಮೂಲವೇನಾದರೂ ಇರಬಹುದೆ ಎನ್ನುವ ಬಗ್ಗೆ ಚನ್ನಪ್ಪ ಉತ್ತಂಗಿಯವರು ಸಂಪಾದಿಸಿರುವ ‘ಸಿದ್ಧರಾಮ ಸಾಹಿತ್ಯ’ದ ಪ್ರಸ್ತಾವನೆಯಲ್ಲಿ (ಪು ೮ ರಿಂದ ೧೦) ಚರ್ಚೆಯಿದೆ.

[6] Puranic Encyclopaedia: Ed Vettam Mani p 388.

[7] ಎಂ.ಎಂ. ಕಲಬುರ್ಗಿ: ಶಾಸನಗಳಲ್ಲಿ ಶಿವಶರಣರು ಪು. ೮೧.

[8] ಚನ್ನಪ್ಪ ಉತ್ತಂಗಿ: ಸಿದ್ಧರಾಮ ಸಾಹಿತ್ಯ (ಸಂ) ೭೪-೮೨.

[9] ಚನ್ನಪ್ಪ ಉತ್ತಂಗಿ ಸಿದ್ಧರಾಮ ಸಾಹಿತ್ಯ ಪು. ೭೯.

[10] ವಚನ ಸಂಖ್ಯೆ ೬೩೫ ರಿಂದ ೬೪೯ (ಕ.ವಿ.ವಿ)

[11] ವಚನ ಸಂಖ್ಯೆ, ೧೦೩೮; ೧೦೪೦ ರಿಂದ ೧೦೫೩; ೧೦೬೪ ರಿಂದ ೧೦೭೨; ಮತ್ತು ೧೧೦೩. ಸಿದ್ಧರಾಮೇಶ್ವರ ವಚನಗಳು: ಡಾ. ಆರ್.ಸಿ. ಹಿರೇಮಠ (ಕ.ವಿ.ವಿ)

[12] ಎಂ.ಬಿ. ಕೊಟ್ರಶೆಟ್ಟಿ: ಸಿದ್ಧರಾಮ ಶಿವಯೋಗಿ ಪು. ೨೩೧.

[13] ಡಾ. ನಿಜಲಿಂಗಮ್ಮ: ಸಿದ್ಧರಾಮ ಹಾಗೂ ವೀರಶೈವ ಶಿವಯೋಗ (ಸಿದ್ಧರಾಮ ಸಾಹಿತ್ಯ ಸಮೀಕ್ಷೆ) ಪು. ೧೨೨.

[14] ಸಿದ್ಧರಾಮನ ತ್ರಿವಿಧಿಗಳಲ್ಲಿ ಒಂದೆಡೆ- ಈ ಉಕ್ತಿಯಿದೆ:
ಹಸುಳೆಯಾಗಿಯು ನಾನು ಕೆರೆಬಾವಿ ದೇವಾಲಯವಿರ-
ಚಿಸಿ ಭವಕೆ ಬಂಧು ಫಲವನುಂಡು
ನರಕಕ್ಕೆ ಬೀಳುವ ಕರುಣ ಕರದಿಂದೆತ್ತಿ
ಹೊರೆಯೊಳಿರಿಸಿದೆ ಬಸವ ಯೋಗಿನಾಥಾ
(ಬಸವ ಸ್ತೋತ್ರದ ತ್ರಿವಿಧಿ ೨೨)
(ಸಿದ್ಧರಾಮ ಸಾಹಿತ್ಯ ಸಂಗ್ರಹ, ಪು. ೫)

[15] ವಚನಕಾರರ ಈ ದೇವಾಲಯ ನಿರಾಕರಣೆಯ ನಿಲುವು, ಬಸವಾದಿಗಳ ನಂತರದ ಕೇವಲ ಅರ್ಧಶತಮಾನದ ಅವಧಿಯೊಳಗೇ ತನ್ನ ಪ್ರಾಧಾನ್ಯವನ್ನು ಕಳೆದುಕೊಂಡು ಮತ್ತೆ ದೇವಾಲಯ ಸಂಸ್ಕೃತಿಯೆ ಮುನ್ನೆಲೆಗೆ ಬಂದು ನೆಲೆನಿಂತ ಪರಿಯನ್ನು ಹರಿಹರ ರಾಘವಾಂಕರ ಕೃತಿಗಳು ದಾಖಲಿಸುತ್ತವೆ. ಹರಿಹರ ರಾಘವಾಂಕರ ಕೃತಿಯ ನಾಯಕರೆಲ್ಲರೂ ದೇವಾಲಯದ ಸ್ಥಾವರಲಿಂಗದ ನಿಷ್ಠೆಯನ್ನೆ ಪ್ರಕಟಿಸುತ್ತಾರೆ.