“ಎಲ್ಲಿಗ್ಯಾನ ಹೋಗಿ ಸಂಗೀತ ಕಲ್ತು ಬಾ” ಎಂಬುದು ತಂದೆಯ ಒತ್ತಾಸೆ. ಮಗನಿಗೇನೊ ಸಂಗೀತ ಕಲಿಯುವಾಸೆ. ಆದರೆ, ಎಲ್ಲಿಗೆ ಹೋಗಿ ಸಂಗೀತ ಕಲಿಯುವುದು ಎಂದು ಮಗನಿಗೂ ಗೊತ್ತಿಲ್ಲ. ಎಲ್ಲಿಗೆ ಕಳಿಸಬೇಕೆಂದು ತಂದೆಗೂ ಗೊತ್ತಿಲ್ಲ. ಒಂದು ದಿನ ಮನೆಯ ಮುಂದೆ ಚಪ್ಪರ ಹಾಕುತ್ತಿದ್ದರು. ಮಗ ತನ್ನ ಗಳೆಯರೊಡನೆ ಚಪ್ಪರ ಹಾಕುವಲ್ಲಿ ಆಟವಾಡುತ್ತಿದ್ದ. ತಂದೆ ಮಗನತ್ತ ಒಂದು ಕಲ್ಲು ಎಸೆ. ಮಗ ಪಕ್ಕಕ್ಕೆ ಸರಿದು ತಪ್ಪಿಸಿಕೊಂಡ, ತಂದೆಯ ವರ್ತನೆಯ ಬಗ್ಗೆ ಮಾತ್ರ ದಿಗಿಲು. “ನಿಮ್ಮಪ್ಪನ ಮ್ಯಾಲೆ ಸಿಟ್ಟಾಗಬೇಡ. ನೀ ದೊಡ್ಡ ಸಂಗೀತಗಾರ ನಾಗಬೇಕಂತ ಅವನ ಇಚ್ಛಾ. ಮನೀ ಬಿಟ್ಟ ಎಲ್ಲ ಗ್ಯಾನ ಹೋಗಿ ಸಂಗೀತ ಕಲ್ತು ಬಾ” ಎಂದು ತಾಯಿ ಸಾಂತ್ವನ ಹೇಳಿದಳು. ಆ ಬಾಲಕನ ಮುಂದೆ ಪ್ರಸಿದ್ಧ ಸಂಗೀತಗಾರನಾಗಲಿದ್ದ ಸಿದ್ಧರಾಮ ಜಂಬಲದಿನ್ನಿ.

ಸಿದ್ಧರಾಮ ಹುಟ್ಟಿದ್ದು ಸಪ್ಟೆಂಬರ್ ೨೦, ೧೯೧೮ ರಂದು ಜಂಬಲದಿನ್ನಿ ಗ್ರಾಮದಲ್ಲಿ. ಜಂಬಲದಿನ್ನಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕ ಹಳ್ಳಿ. ತಂದೆ ಚನ್ನಬಸವಪ್ಪ. ತಾಯಿ ಅವ್ವಮ್ಮ, ಹೂಗಾರ ಮನೆತನ. ಕಲಾವಿದರ ಮನೆತನ. ಚನ್ನಬಸವಪ್ಪ ಮದ್ದಳೆ ಬಾರಿಸಿದರೆ ಊರಿಗೆಲ್ಲ ಕೇಳಬೇಕು. ಆ ಮನೆತನ ಮದ್ದಳೆಯಲ್ಲದೆ ಪಿಟೀಲು, ಡೋಲು ಬಾರಿಸುವುದಕ್ಕೂ ಸೈ. ಬಯಲಾಟದ ನಾಯಕತನಕ್ಕೂ ಸೈ. ಚನ್ನಬಸವಪ್ಪನ ಅಣ್ಣನೂ ಮದ್ದಳೆ ನುಡಿಸುವುದರಲ್ಲಿ ಎತ್ತಿದ ಕೈ.

ತಂದೆ ಚನ್ನಬಸವ್ಪನಿಗೆ ಮಗನ ಮೇಲೆ ಸಿಟ್ಟು, ಕಾರಣವೆಂದರೆ, ಹಳ್ಳಿ ಹೊಸೂರಿನ ಶಹನಾಯಿವಾದಕ ಕೊರವರ ಮಲ್ಲಪ್ಪನ ಮಗ ನರಸಣ್ಣ ಆದವಾನಿಗೆ ಹೋಗಿ ಪೇಟೆ ಕಲಿತು ಬಂದಿದ್ದ. ಜಂಬಲ ದಿನ್ನಿಯಲ್ಲಿ ನಾಟಕ ಆಡುವಾಗಲೆಲ್ಲ ನರಸಣ್ಣನೇ ಪೇಟಿ ಬಾರಿಸುತ್ತಿದ್ದ. “ಆ ಕೊರವರ ಹುಡುಗನ್ನ ನೋಡು, ಎಷ್ಟು ಶಾಣ್ಯಾ ಆಗ್ಯಾನ, ನಿನಗೇನಾಗೇದ ಧಾಡಿ. ಎಲ್ಲಿಗ್ಯಾನ ಹೋಗಿ ಸಂಗೀತ ಕಲ್ತು ಬರಬಾರದ್ದ” ಎಂದು ತಂದೆಯ ಪಲ್ಲವಿ.

ಸಿದ್ಧರಾಮನ ಪಕ್ಕದ ಮನೆಯ ಅಮರಣ್ಣ ಯಾದರಿಗಿಯಲ್ಲಿ ಒಂದು ಚಿಕ್ಕ ಉದ್ಯೋಗ ಮಾಡಿಕೊಂಡಿದ್ದ. ಸಿದ್ಧರಾಮ ಅವನೊಂದಿಗೆ ಯಾದಗಿರಿಗೆ ಹೊರಟ. ದಾರಿಯಲ್ಲಿ ಕಲ್ಲೂರು ಅಡಿವೆಪ್ಪತಾತನ ದರ್ಶನ. ಸಿದ್ಧರಾಮ ನಿಜಗುಣರ ತ್ರಿಪದಿಯೊಂದನ್ನು ಹಾಡಿದ. ಪ್ರಸನ್ನರಾದ ತಾತ: “ಈ ಹುಡುಗ ಮುಂದೆ ದೊಡ್ಡ ಸಂಗೀತಗಾರನಾಗುವ” ಎಂದು ಹರಸಿದರು.

ಯಾದಗಿರಿಯಲ್ಲಿ ಅಮರಣ್ಣನ ಮನೆಯಲ್ಲಿಯೆ ಸಿದ್ಧರಾಮನ ವಾಸ್ತವ್ಯ. ಉರ್ದೂ ಶಾಲೆಯ ಮೂರನೆಯ ಇಯತ್ತೆಗೆ ಭರ್ತಿ. ಅಮರಣ್ಣನ ಮನೆಯ ಪಕ್ಕದಲ್ಲಿ ನಿಜಗುಣೆಪ್ಪ ಎಂಬ ನಾಟಕ ಮಾಸ್ತರರಿದ್ದರು. ಸಿದ್ಧರಾಮನಿಗೆ ಸಂಗೀತ ಕಲಿಸಲು ಅಮರಣ್ಣ ನಿಜಗುಣೆಪ್ಪ ಅವರಿಗೆ ಅರಿಕೆ ಮಾಡಿಕೊಂಡ. ನಿಜಗುಣೆಪ್ಪ ಒಂದು ಹಾಡು ಹೇಳು ಅಂದರು. ಹಾಡು ಕೇಳಿ ಕಲಿಸಲೊಪ್ಪಿದರು. ಸಿದ್ಧರಾಮ ಅವರಲ್ಲಿ ಎರಡು ವರ್ಷ ಸಂಗೀತ ಕಲಿತ. ಎರಡು ವರ್ಷಗಳಾದ ಬಳಿಕ ನಿಜಗುಣೆಪ್ಪ ಅಂದರು: “ನನಗೆ ಗೊತ್ತಿದ್ದನ್ನೆಲ್ಲ ಕಲಿಸಿರುವೆ. ಕಲಿಸುವುದು ಇನ್ನೇನೂ ಇಲ್ಲ,”

ಮುಂದೇನು? ಎನ್ನುವ ಪ್ರಶ್ನೆ ಧುತ್ತೆಂದಿತು. ಲಿಂಗೈಕ್ಯ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು ಯಾದಗಿರಿಯ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಕಾಲೇಜಿನಲ್ಲಿ ಒಂದು ದಿನ ವಿರೂಪಾಕ್ಷ ಶಾಸ್ತ್ರಿಗಳ ಕೀರ್ತನ ಕಾರ್ಯಕ್ರಮವಿತ್ತು. ನಿಜಗುಣೆಪ್ಪ ಸಿದ್ಧರಾಮನನ್ನು ಕರೆದುಕೊಂಡು ಹೋಗಿ ಚಂದ್ರಶೇಖರ ಶಾಸ್ತ್ರಿಗಳಿಗೆ ಅರಿಕೆ ಮಾಡಿಕೊಂಡು ಹಾಡು ಹೇಳಿಸಿದರು. ಬಾಲಗಂಧರ್ವರು ಪ್ರಖ್ಯಾತಗೊಳಿಸಿದ್ದ ಆನಂದ ಭೈರವಿ ರಾಗದಲ್ಲಿರುವ ಮರಾಠಿ ನಾಟ್ಯಗೀತೆ “ದೇಹಾತಾ ಶರಣಾಗತಾ” ಮತ್ತು ಭೀಮಪಲಾಸ ರಾಗದಲ್ಲಿ “ಸ್ವಕುಲ ತಾರಕಸುತಾ” ನಾಟ್ಯಗೀತೆಯನ್ನು ಸಿದ್ಧರಾಮ ಹಾಡಿದ. ಮೆಚ್ಚುಗೆಯ ಕರತಾಡನ. ಈ ಹುಡುಗನನ್ನು ಪಂಚಾಕ್ಷರಿ ಗವಾಯಿಗಳಲ್ಲಿಗೆ ಕಳಿಸಿದರೆ ಉತ್ತಮ ಸಂಗೀತಗಾರನಾಗುವನೆಂದು ಚಂದ್ರಶೇಖರಶಾಸ್ತ್ರಿಗಳು ಹೊಗಳಿ ಮಾತಾಡಿದರು. ಅಲ್ಲಿ ನೆರೆದಿದ್ದ ಜನರು ಹದಿನಾಲ್ಕು ರೂಪಾಯಿ ಸಂಗ್ರಹಿಸಿ ಕೊಟ್ಟೇಬಿಟ್ಟರು.

ಆ ಹದಿನಾಲ್ಕು ರೂಪಾಯಿಗಳೇ ಸಿದ್ಧರಾಮನ ಆಸ್ತಿ, ಅದನ್ನಿಟ್ಟಕೊಂಡು ಸಿದ್ಧರಾಮನು ಪಂಚಾಕ್ಷರಿ ಗವಾಯಿಗಳನ್ನು ಕಾಣಲು ಶಿವಯೋಗಮಂದಿರಕ್ಕೆ ಹೋದ. ಅವರಲ್ಲಿರಲಿಲ್ಲ. ಗವಾಯಿಗಳದು ಸಂಚಾರಿ ಶಾಲೆ. ಬಳ್ಳಾರಿ ಜಿಲ್ಲೆಯ ರಾಮಸಾಗರದಲ್ಲಿ ಬೀಡು ಬಿಟ್ಟಿದ್ದರು. ಪಂಚಾಕ್ಷರಿ ಗವಾಯಿಗಳು ಅವನನ್ನು ಶಿಷ್ಯನಾಗಿ ತಮ್ಮ ಪರಿವಾರಕ್ಕೆ ಸೇರಿಸಿಕೊಂಡರು. ಅದು ೧೯೩೨, ಸಿದ್ಧರಾಮನ ಭಾಗ್ಯದ ಬಾಗಿಲು ತೆರೆಯಿತು.

ಸಂಚೃಇ ಸಂಗೀತ ಶಾಲೆಯಲ್ಲದೆ ಗುಳೇದಗುಡ್ಡದ ಹತ್ತಿರವಿರುವ ಕೋಟೆಕಲ್ಲಿನಲ್ಲಿ ಒಂದು ವಸತಿ ಸಂಗೀತ ಶಾಲೆಯೂ ಇತ್ತು. ಗದಿಗೆಪ್ಪ ಗವಾಯಿಗಳು ಅಲ್ಲಿ ಶಿಕ್ಷಕರು. ಹಾಡುಗಾರಿಕೆಯ ಜೊತೆಗೆ ತಬಲಾ ಮತ್ತು ಹಾರ್ಮೋನಿಯಂ ವಾದನದಲ್ಲೂ ನಿಪುಣರು. ಪಂಚಾಕ್ಷರಿ ಗವಾಯಿಗಳು ಸಿದ್ಧರಾಮನನ್ನು ಕೋಟೆಕಲ್‌ ಶಾಲೆಗೆ ಸೇರಿಸಿದರು. ಸಿದ್ಧರಾಮ ಹಾಡುಗಾರಿಕೆಯಲ್ಲದೆ ತಬಲಾ,ಹಾರ್ಮೋನಿಯಂ ನುಡಿಸುವುದನ್ನು ಕಲಿತ. ಮರುವರ್ಷ ಪಂಚಾಕ್ಷರಿ ಗವಾಯಿಗಳು ಕೋಟೆಕಲ್ಲಿಗೆ ಬಂದಾಗ “ಗದಿಗೆಪ್ಪನವರೇ, ಈ ಹುಡುಗನ್ನು ನಮ್ಮ ಸಂಚಾರಿ ಶಾಲೆಗೆ ಕರೆದುಕೊಂಡು ಹೋಗುವೆ” ಎಂದರು. ವಿಜಾಪುರ, ಧಾರವಾಡ, ದಾವಣಗೆರೆ ಮುಂತಾದೆಡೆ ಸಂಚರಿಸುತ್ತ ಐದಾರು ವರ್ಷಗಳಲ್ಲಿ ನುರಿತ ಹಾಡುಗಾರನಾದ.

ಪಂಚಾಕ್ಷರಿ ಗವಾಯಿಗಳಿಗೆ ಪ್ರಿಯರಾದ ಇಬ್ಬರು ಶಿಷ್ಯರೆಂದರೆ ಬಸವರಾಜ ರಾಜಗುರು ಮತ್ತು ಸಿದ್ಧರಾಮ ಜಂಬಲದಿನ್ನಿ. ಗವಾಯಿಗಳು ಶಿಷ್ಯರಿಗೆ ಒಂದೊಂದು ರಾಗವನ್ನು ಹದಿನೈದುದಿನ ಕಲಿಸುತ್ತಿದ್ದರು. ಒಮ್ಮೊಮ್ಮೆ ಶಿಷ್ಯರೆದುರು ಪಂಚಾಕ್ಷರಿ ಗವಾಯಿಗಳು “ಇವನ ಸಂಗೀತನೇ ಬ್ಯಾರೆ ಆದ ನೋಡು” ಎಂದು ಮೆಚ್ಚುಗೆ ಸೂಸುತ್ತಿದ್ದರು. ಅಲ್ಲದೆ, ಇತರ ಶಿಷ್ಯರಿಗೆ ಪಾಠ ಹೇಳಿಕೊಡಲೂ ಸಿದ್ಧರಾಮನನ್ನು ಹಚ್ಚಿದರು. ೧೯೩೬ರಲ್ಲಿ ರೋಣ ತಾಲೂಕಿನ ಮಲ್ಲಾಪುರದಲ್ಲಿ ಸಂಗೀತ ಶಾಲೆಯ ಕ್ಯಾಂಪ್‌. ಅಲ್ಲಿ ಬಂದು ಸೇರಿದವರು ಚಂದ್ರಶೇಖರ್ ಪುರಾಣಿಕ ಮಠ. ೧೯೩೭ರಲ್ಲಿ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ೧೯೩೮ರಲ್ಲಿ ವೀರೇಶ್ವರ ಹಿರೇಮಠ ಶಾಲೆ ಸೇರಿದರು. ಇವರಿಗೆಲ್ಲ ಸಿದ್ಧರಾಮ ಜಂಬಲದಿನ್ನಿ ಮೇಲ್ಫಾಠಕರಾಗಿದ್ದರು. ೧೯೩೮ರಲ್ಲಿ ಸಂಚಾರಿ ಸಂಗೀತ ಶಾಲೆ ಗದಗಿಗೆ ಬಂದು ನೆಲೆನಿಂತಿತು. ಶಾಲೆಯಲ್ಲಿ ಆಗ ಮೃತ್ಯಂಜಯ ಪುರಾಣಿಕಮಠ, ಬಸವರಾಜ ರಾಜಗುರು, ಸಿದ್ಧರಾಮ ಜಂಬಲದಿನ್ನಿ, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಮೊದಲಾದ ೫೦-೬೦ ವಿದ್ಯಾರ್ಥಿಗಳಿದ್ದರು.

ಸಿದ್ಧರಾಮ ಜಂಬಲದಿನ್ನಿ ಸುಮಾರು ಒಂದು ವರ್ಷ ಗೊಬ್ಬೂರ ಶರಣಯ್ಯನವರ ನಾಟಕ ಕಂಪನಿಯಲ್ಲಿ ಗಾಯಕ ನಟರಾಗಿ ಸೇವೆ ಸಲ್ಲಿಸಿದರು. “ಹೇಮರೆಡ್ಡಿ ಮಲ್ಲಮ್ಮ” ನಾಟಕದಲ್ಲಿ ಮಲ್ಲಿಕಾರ್ಜುನನ ಪಾತ್ರ. ಸಮಯ ಸಿಕ್ಕಾಗಲೆಲ್ಲ ಪಂಚಾಕ್ಷರಿ ಗವಾಯಿಗಳಲ್ಲಿಗೆ ಬಂದು ಸಂಗೀತಾಭ್ಯಾಸ ಮುಂದುವರಿಸುತ್ತಿದ್ದರು. ಶ್ರಾವಣ ಮಾಸದಲ್ಲಿ ಪುರಾಣ ಹಚ್ಚಿದಾಗ ಪಂಚಾಕ್ಷರಿ ಗವಾಯಿಗಳು ಪುರಾಣ ಓದಲು ಸಿದ್ಧರಾಮ ಜಂಬಲದಿನ್ನಿ ಅವರನ್ನು ಕರೆಸಿಕೊಳ್ಳುತ್ತಿದ್ದರು. ಪುರಾಣಮಧ್ಯೆ ನಿಜಗುಣ ಶಿವಯೋಗಿಗಳ ಪದಗಳನ್ನು ಹಾಡುತ್ತಿದ್ದರು.

೧೯೪೩-೪೪ ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಿದ್ಧರಾಮ ಜಂಬಲದಿನ್ನಿ ಅವರ ಅನೇಕ ಕಚೇರಿಗಳು ಜರುಗಿದವು. ರಾಯಚೂರಿನಿಂದ ಗುಲಬರ್ಗಾಕ್ಕೆ ಹೋದರು. ಬಸವರಾಜ ರಾಜಗುರು ಮತ್ತು ಸಿದ್ಧರಾಮ ಜಂಬಲದಿನ್ನಿ ಅವರಿಗೆ ಉದ್ಗೀರಿನ ಜನ ಆಮಂತ್ರಣವಿತ್ತರು. ಅಲ್ಲಿ ಈರ್ವರ ಕಚೇರಿಗಳು ವಿಜೃಂಭಣೆಯಿಂಧ ನಡೆದವು. ಹೈದರಾಬಾದ ಕರ್ನಾಟಕ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಸಿದ್ಧರಾಮ ಜಂಬಲದಿನ್ನಿ ಅವರ ಗಾಯನ. ಅವರನ್ನು ‘ಸಂಗೀತ ಸುಧಾಕರ’ ಬಿರುದನ್ನಿತ್ತು ಗೌರವಿಸಲಾಯಿತು.

೧೯೪೪ನೆಯ ಇಸ್ವಿಯಲ್ಲಿ ಪಂಚಾಕ್ಷರಿ ಗವಾಯಿಗಳ ಆರೋಗ್ಯ ಬಿಗಡಾಯಿಸಿತು. ವಿದ್ಯಾರ್ಥಿಗಳಿಗೆ ಕಲಿಸಲು ಸಿದ್ಧಣ್ಣನನ್ನು ಕರೆಸಿರೆಂದು ಪದೇಪದೇ ಹೇಳುತ್ತಲೆ ಇದ್ದರು. ಜೂನ್‌ ೧೧, ೧೯೪೪ ರಂದು ಲಿಂಗೈಕ್ಯರಾದರು. ಗುರುಗಳ ಆಣತಿಯಂತೆ ಸಿದ್ಧರಾಮ ಜಂಬಲದಿನ್ನಿ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ೧೯೪೪ ಜುಲೈ ತಿಂಗಳಿಂದ ೧೯೪೬ರ ವರೆಗೆ ಸಂಗೀತ ಶಿಕ್ಷಣ ನೀಡಿದರು. ಇವರ ಕೈಯಲ್ಲಿ ತಯಾರಾದ ಕೆಲವು ಶಿಷ್ಯರೆಂದರೆ ಸಿದ್ಧರಾಮಯ್ಯ ಕೊರವಾರ, ಪ್ರಭಯ್ಯ ಸಾಲಿಮಠ, ಸೋಮಶೇಖರ ಹಾಗರಗಿ, ನಾಗಪ್ಪ ಹಳ್ಳಿಕೇರಿ ಮುಂತಾದವರು.

೧೯೪೯ರಲ್ಲಿ ಸಿದ್ಧರಾಮ ಜಂಬಲದಿನ್ನಿ ಕುಟುಂಬ ಸಮೇತ ಗದಗಿಗೆ ಬಂದು ನೆಲೆಸಿದರು. ಸಂಗೀತವೊಂದೇ ಜೀವನೋಪಾಯ. ೧೯೫೦ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರ ಆರಂಭಗೊಂಡು ರೇಡಿಯೋ ಕಾರ್ಯಕ್ರಮಗಳು ಸಿಗತೊಡಗಿದವು. ಆಗಾಗ ಗದಗಿಗೆ ಬರುತ್ತಿದ್ದ ಆತ್ಮೀಯ ಸಾಹಿತಿ ಶಾಂತರಸರಿಗೆ ಪಂಚಾಕ್ಷರಿ ಗವಾಯಿಗಳನ್ನು ಕುರಿತು ಪದ್ಯ ಬರೆದುಕೊಡಲು ಕೇಳಿಕೊಂಡರು.

ಸೋಲರಿಯದ ನಗುಮೊಗದ ಚೆಲುವ
ವೀರವ್ರತಿ ಪಂಚಾಕ್ಷರ ದೇವ

ಎಂಬ ಪದ್ಯ ಶಾಂತರಸರ ಲೇಖನಿಯಿಂದ ಹೊರಹೊಮ್ಮಿತು. ಅದೇ ವರ್ಷ ಪಂಚಾಕ್ಷರಿ ಗವಾಯಿಗಳ ಪುಣ್ಯತಿಥಿಯಂದು ಸಿದ್ಧರಾಮ ಜಂಬಲದಿನ್ನಿ ಅದನ್ನು ಹಾಡಿದರು. “ಬಾ ಮತ್ತೆ ಮರಳಿ” ಎಂದು ಹಾಡುವಾಗ ಅವರ ಕಂಠ ಗದ್ಗದಿತವಾಯಿತು. ಎರಡು ಮೂರು ಸಾವರಿ ಶ್ರೋತೃಗಳ ಕಣ್ಣಂಚಿನಲ್ಲಿ ನೀರು ತುಳುಕಿತು. ಅಂದಿನಿಂದ ತಮ್ಮೆಲ್ಲ ಕಚೇರಿಗಳಲ್ಲೂ ಆ ಕವನ ಹಾಡಿಯೇ ತೀರುತ್ತಿದ್ದರು.

ಕರ್ನಾಟಕ ಏಕೀಕರಣದ ನೇತಾರ ದೊಡ್ಡಮೇಟಿ ಅಂದಾನೆಪ್ಪ ತಮ್ಮೂರು ಜಕ್ಕಲಿಯಲ್ಲಿ ಜನವರಿ ೧೧, ೧೯೫೩ರಲ್ಲಿ ಸಭೆ ಕರೆದಿದ್ದರು. ಸಾಹಿತಿಗಳು, ಚಿಂತಕರು, ಕಲಾವಿದರು ಸೇರಿದ್ದರು. ಗದಗಿನ ಶ್ರೀ ಸಿ.ಎಸ್‌. ಪಾಟೀಲರು ಬಿಡಿಸಿದ ಶ್ರೀ ಭುವನೇಶ್ವರಿಯ ಸಪ್ತವರ್ಣ ತೈಲಚಿತ್ರ. ಅದಕ್ಕೆ ಹಿನ್ನೆಲೆಯಾಗಿ ದೊಡ್ಡಮೇಟಿ ಅಂದಾನೆಪ್ಪ ರಚಿಸಿದ ಮಹಿಮ್ನ ಸ್ತ್ರೋತ್ರ.

 

ತಾಯಿ ಭುವನೇಶಾವರಿ ಕನ್ನಡ ಮಹಾಶಕ್ತಿ
ರಾಜರಾಜರ ಮುಕುಟದಲ್ಲಿದೆ ನಿನ್ನ ಪಾದಮುದ್ರೆ
ನಿನ್ನ ಕೃಪೆಯನೇ ಹೊತ್ತು ಹರಿಯುವಳು ತುಂಗಭದ್ರೆ
ಸರ್ವವಿಧದಿ ಕುಸಿದಮಕ್ಕಾಳನೆತ್ತು ಸರ್ವೇಶ್ವರಿಯೇ
ಜಂಬಲದಿನ್ನಿ ಅವರ ಕಂಠಶ್ರೀಯಿಂದ ಈ ಹಾಡು ಅಲೆಅಲೆಯಾಗಿ

 

ತೇಲಿ ಇಡಿಯವಾತಾವರಣವನ್ನು ಪ್ರಸನ್ನಗೊಳಿಸಿತು. ಕೇಳುಗರ ಹೃದಯದಲ್ಲಿ ಭುವನೇಶ್ವರಿಯ ಚಿತ್ರ ಮೂಡಿನಿಂತಿತು. ಆತ್ಮೀಯರಾದ ಸಾಹಿತಿ ಶಾಂತರಸರು ಬಸವಣ್ಣ ಕಪ್ಪಡಿ ಸಂಗಮವನ್ನು ಬಿಟ್ಟುಹೋಗುವಾಗ ಸಂಗಮನಾಥ ನೀಡುವ ಧೈರ್ಯ, ವಿಶ್ವಾಸಗಳಿಂದ ಕೂಡಿದ “ಬಂದಲ್ಲಿ ಬಂದಪೇಂ ಹೋದಲ್ಲಿ ಹೋದೆಪೇಂ” ಎಂಬ ಹರಿಹರನ “ಬಸವರಾಜದೇವರ ರಗಳೆ”ಯ ೮-೧೦ ಸಾಲುಗಳನ್ನು ಓದಿತೋರಿಸಿದರು. ಸಿದ್ಧರಾಮ ಜಂಬಲದಿನ್ನಿ ಅವರು ಅದಕ್ಕೆ ಕೂಡಲೆ ಧಾಟಿ ಸಂಯೋಜಿಸಿ ಕೆಲವೇ ದಿನಗಳಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದಿಂದ ಹಾಡಿದರು.

ಹಾಗೆಯೇ, ವಚನಗಳನ್ನು ಹಾಡುವ ಮುನ್ನ ಅವುಗಳ ಅರ್ಥಗಳ ಬಗೆಗೆ ಶಾಂತರಸರೊಂದಿಗೆ ಚರ್ಚಿಸುತ್ತಿದ್ದರು. ಅವುಗಳ ಭಾವಕ್ಕೆ ತಕ್ಕಂತೆ ರಾಗ ಸಂಯೋಜಿಸುತ್ತಿದ್ದರು. ಒಮ್ಮೆ ೩-೪ ತಾಸು ‘‘ಪ್ರಭುಲಿಂಗಲೀಲೆ” ಕುರಿತೇ ಮಾತು ಸಾಗಿದವು. ಆರಂಭದ ಮಂಗಳಾಚರಣ ಪದ್ಯಗಳನ್ನು ಹಾಡಿದರೆ ಚೆನ್ನಗಿರುತ್ತದೆ ಎಂದು ಶಾಂತರಸ ಹೇಳಿದರು. ಜಂಬಲದಿನ್ನಿ ಅವುಗಳನ್ನು ಬರೆಯಿಸಿಟ್ಟುಕೊಂಡರು. ಅವನ್ನು ಮೊದಲು ಹಾಡಿದ್ದು ಡಾ. ಹಿರೇಮಲ್ಲೂರು ಈಶ್ವರನ್‌ ಅವರ ತಂಗಯ ಮದುವೆಯಲ್ಲಿ. ಎರಡು ತಿಂಗಳ ಬಳಿಕ ರಾಯಚೂರಿಗೆ ಬಂದಾಗ ಹಾಡಿ ತೋರಿಸಿದರು. ಶಾಂತರಸರು ಕುಣಿದಾಡಿ ಬಿಟ್ಟರು.ಆ ಪದ್ಯಗಳು ಎಷ್ಟು ಜನಪ್ರಿಯವಾದವೆಂದರೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಅವುಗಳಿಗಾಗಿ ಬೇಡಿಕೆ ಇರುತ್ತಿತ್ತು. ಅನೇಕ ನಾಟಕ ಕಂಪನಿಯವರು ನಾಟಕ ಪ್ರಾರಂಭಕ್ಕೆ ಮುಂಚೆ ಆ ಶರಣಾರ್ಥಿ ಪದ್ಯಗಳನ್ನು ಧ್ವನಿವರ್ಧಕದಲ್ಲಿ ಹಾಕುತ್ತಿದ್ದರು.

೧೯೫೪ರಲ್ಲಿ ಎಚ್‌.ಎಂ.ವ್ಹಿ. ಕಂಪನಿ ಸಿದ್ಧರಾಮ ಜಂಬಲದಿನ್ನಿ ಅವರ ಒಂದು ಧ್ವನಿಮುದ್ರಿಕೆಯನ್ನು ಹೊರತಂದಿತು. ಅವರು ಹಾಡಿದ ಧ್ವನಿಮುದ್ರಿಕೆ ಅದೊಂದೇ. ಅದನ್ನು ಬಿಟ್ಟರೆ ಗುರು ಮಲ್ಲಿಕಾರ್ಜುನ ಮನಸೂರ ಅವರೊಂದಿಗೆ ಹಾಡಿದ ಮೃತ್ಯಂಜಯ ಸುಪ್ರಭಾತ ಅಷ್ಟೆ. ಪ್ರಸ್ತುತ ಧ್ವನಿಮುದ್ರಿಕೆಯಲ್ಲಿ ‘ಅಳಿಸಂಕುಳವೇ ಮಾಮರವೇ’ ವಚನ, ‘ಬಾ ಬಸವರಾಜ’ ಮತ್ತು ‘ನುಡಿಯು ಕನ್ನಡ, ನಮ್ಮ ನಡೆಯು ಕನ್ನಡ’ ಎಂಬೆರಡು ಎಚ್‌.ಟಿ. ಮಹಾಂತೇಶ ಶಾಸ್ತ್ರಿಗಳ ಗೀತೆಗಳು, ವಾಲಿ ಗಂಗಪ್ಪನವರ ‘ಸಿರಿಯ ತೆರೆಯು ಹರಿಯಲಿ’ ಪದ್ಯ, ನಿಜಗುಣ ಶಿವಯೋಗಿಗಳ ‘ನೋಡಲಾಗದೇ ದೇವ’, ಶಿಶುನಾಳ ಶರೀಫರ ‘ಬಿದ್ದಿಯ ಬೇ ಮುದುಕಿ’ ಹಾಡುಗಳಿವೆ. ಆ ಧ್ವನಿಮುದ್ರಿಕೆ ಬಹುಬೇಗ ಜನಪ್ರಿಯವಾಯಿತು.

ಅಂದಿನ ನಾಟಕಗಳೆಲ್ಲ ಸಂಗೀತ ನಾಟಕಗಳೆ, ಕೂತರೆ ಹಾಡು, ನಿಂತರೆ ಹಾಡು, ಪ್ರೀತಿ ಬಂದರೆ ಹಾಡು, ಸಿಟ್ಟು ಬಂದರೆ ಹಾಡು, ಯುದ್ಧ ಮಾಡುವಾಗಲೂ ಹಾಡು, ಹಾಡೇ ಹಾಡು. ಒಂದೊಂದು ನಾಟಕದಲ್ಲೂ ೪೦, ೫೦, ೬೦ ಹಾಡುಗಳು. ಮೊದಮೊದಲು ಜನರು ಸಂಗೀತ ಕೇಳಲೆಂದೇ ನಾಟಕಗಳಿಗೆ ಬರುತ್ತಿದ್ದರು. ಬರಬರುತ್ತ ನಾಟ್ಯಸಂಗೀತ ಕಳಪೆಯಾಗಿ ಪ್ರೇಕ್ಷಕರು ಬೇಸರಗೊಂಡರು. ಇಂಥ ಸೂಕ್ಷ್ಮ ಸನ್ನಿವೇಶದಲ್ಲಿ ಸಿದ್ದರಾಮ ಜಂಬಲದಿನ್ನಿ ಸಂಗೀತ ನಿರ್ದೇಶಕರಾಗಿ ರಂಗಭೂಮಿಗೆ ಕಾಲಿರಿಸಿದರು. ಅದುವರೆಗೆ ಮರಾಠಿ ರಂಗಗೀತೆಗಳ ಮಟ್ಟುಗಳಿಗೆ ಕನ್ನಡ ಶಬ್ದಗಳ ಜೋಡಣೆಯಾಗುತ್ತಿತ್ತು. ಸಿದ್ಧರಾಮ ಜಂಬಲದಿನ್ನಿ ಸ್ವತಂತ್ರವಾಗಿ ಕನ್ನಡದಲ್ಲಿ ರಚನೆಗೊಂಡ ಗೀತೆಗಳಿಗೆ ಸಂಗೀತ ಸಂಯೋಜಿಸಲಾರಂಭಿಸಿದರು.

ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ ಆಡುತ್ತಿದ್ದ, ಎಚ್‌.ಟಿ. ಮಾಹಾಂತೇಶ ಶಾಸ್ತ್ರಿ ವಿರಚಿತ ‘ವಧು-ವರ’ ನಾಟಕಕ್ಕೆ ಸಿದ್ಧರಾಮ ಜಂಬಲದಿನ್ನಿ ಸಂಗೀತ ಸಂಯೋಜಿಸಿದರು. ಪ್ರತಿಯೊಂದು ಸನ್ನಿವೇಶದ ಭಾವಕ್ಕೆ ತಕ್ಕಂತೆ ರಾಗಮಟ್ಟುಗಳನ್ನು ಸಂಯೋಜಿಸಿದರು. ಪಾತ್ರಧಾರಿಗಳ ಕಂಠತ್ರಾಣಕ್ಕನುಗುಣವಾಗಿ ಗಮಕ, ಆಲಾಪ, ತಾನಗಳನ್ನು ಅಳವಡಿಸಿದರು. ಸಿದ್ಧರಾಮ ಜಂಬಲದಿನ್ನಿ ಶಾಸ್ತ್ರೀಯ ಸಂಗೀತಮಟ್ಟುಗಳಲ್ಲಿ ಪ್ರೇಕ್ಷಕರ ಅಭಿರುಚಿಯನ್ನು ಪುನರ್ ಸ್ಥಾಪಿಸಲು ಶಕ್ತರಾದುದೆಂತು? ಶಾಸ್ತ್ರೀಯ ಸಂಗೀತದ ಬಿಗುವು, ಲಘು ಸಂಗೀತದ ಲಾಲಿತ್ಯ ಮತ್ತು ಸಿನೆಮಾ ಸಂಗೀತದ ಆಕರ್ಷಣೇಯನ್ನು ಎರಕ ಹೊಯ್ದು ಸಾಮಾನ್ಯ ಜನಮನವನ್ನೂ ಸೆಳೆದರು. ಏಣಗಿ ಬಾಳಪ್ಪ ಹೊಸ ಬಗೆಯ ‘ಗೋರಾ ಕುಂಬಾರ’ ನಾಟಕವನ್ನು ರಂಗಕ್ಕೇರಿಸಿದರು. ನಾಟಕ ಒಂದೂವರೆ ತಾಸಿನದಿತ್ತು . ಸಿದ್ಧರಾಮ ಜಂಬಲದಿನ್ನಿ ತಮ್ಮ ಸಂಗೀತ ನಿರ್ದೇಶನದಿಂದ ಅದನ್ನು ಮೂರು ತಾಸಿನ ಪೂರ್ಣಾವಧಿ ನಾಟಕವನ್ನಾಗಿ ಮಾಡಿದರು. ನಲವಡಿ ಶ್ರೀಕಂಠ ಶಾಸ್ತ್ರಿಗಳು ರಚಿಸಿದ ಮಧುರ ಗೀತೆಗಳಿಗೆ ಜಂಬಲದಿನ್ನಿ ಸ್ವರಜೀವ ತುಂಬಿದರು. ರಂಗಸಂಗೀತಕ್ಕೆ ಸಿದ್ಧರಾಮ ಜಂಬಲದಿನ್ನಿ ಅವರ ಕೊಡುಗೆ ವಿಶಿಷ್ಟವಾದುದು. ಅದನ್ನು ಮನಗಂಡ ಬೇರೆ ಬೇರೆ ನಾಟಕ ಕಂಪನಿಗಳು ಸಂಗೀತ ನಿರ್ದೇಶನ ಮಾಡಲು ಅವರನ್ನು ಆಹ್ವಾನಿಸಿದರು. ದೊಡ್ಡವಾಡದ ಸಮಾಜ ವಿಕಾಸ ನಾಟ್ಯಸಂಘ, ಗದಗಿನ ವೀರೇಶ್ವರ ನಾಟಕ ಕಂಪನಿ ಮತ್ತು ಫ.ಶಿ. ಭಾಂಡಗೆ ನಾಟಕ ಕಂಪನಿಗಳಿಗೆ ಸಿದ್ಧರಾಮ ಜಂಬಲದಿನ್ನಿ ಸಮಗೀತ ಸಂಯೋಜಿಸಿದರು.

೧೯೫೫ರಲ್ಲಿ ಸಿದ್ಧರಾಮ ಜಂಬಲದಿನ್ನಿ ಅವರ ಸಂಗೀತಯಾತ್ರೆ ಇನ್ನೊಂದು ಮಹತ್ವದ ತಿರುವನ್ನು ಪಡೆಯಿತು. ಅವರು ಮಲ್ಲಿಕಾರ್ಜುನ ಮನಸೂರರ ಗಾಯನಕ್ಕೆ ಮಾರುಹೋಗಿದ್ದರು. ವಿಧ್ಯುಕ್ತವಾಗಿ ಗಂಡಾ ಕಟ್ಟಿ ಶಿಷ್ಯರಾದರು. ಅಷ್ಟೊತ್ತಿಗಾಗಲೆ ಜಂಬಲದಿನ್ನಿ ಪ್ರಸಿದ್ಧ ಗಾಯಕರಾಗಿದ್ದರು. ಪಂಚಾಕ್ಷರಿ ಗವಾಯಿಗಳಲ್ಲಿ ಕಲಿತ ಗ್ವಾಲಿಯರ ಘರಾಣೆಯ ಗಾಯಕಿಯನ್ನು ಜೈಪುರ ಗಾಯಕಿಗೆ ಹೊಂದಿಸಿಕೊಳ್ಳಬೇಕಿತ್ತು. ಕುಶಾಗ್ರಮತಿಗಳಾದ ಜಂಬಲದಿನ್ನಿ ಅದನ್ನು ಸುಲಭವಾಗಿ ಮಾಡಿದರು. ೧೫ ವರ್ಷ ದಿನಾಲು ಏಳೆಂಟು ತಾಸು ಅಭ್ಯಾಸ. ಗುರುಗಳ ಪ್ರಮಾಣಬದ್ಧ ಶ್ರುತಿ ಮತ್ತು ಪ್ರತಿಯೊಂದು ಸ್ವರದ ಗುಣವನ್ನು ಸಿದ್ಧರಾಮ ಜಂಬಲದಿನ್ನಿ ಕರಗತಕ ಮಾಡಿಕೊಂಡರು.

ಆಗ ಮನಸೂರರಲ್ಲಿ ಜಂಬಲದಿನ್ನಿ ಅವರ ಜೊತೆಗೆ ಅಜ್ಜಣ್ಣ ಪಾಟೀಲ, ಬಿ.ಸಿ. ಪಾಟೀಲ, ಭಿರಡಿಕರ ಕಲಿಯುತ್ತಿದ್ದರು. ಮಲ್ಲಿಕಾರ್ಜುನ ಮನಸೂರ ಲಹರಿ ಬರುತ್ತಲೆ “ಹಂ, ತಗೊಳ್ಳಿರಿ ತಂಬೂರಿ” ಎಂದವರೆ ಹಾಡಲು ತೊಡಗುತ್ತಿದ್ದರು. ನಡುನಡುವೆ ಸಿದ್ಧರಾಮ ಜಂಬಲದಿನ್ನಿ ಅವರಿಗೆ ಹಾಡಲು ಹೇಳುತ್ತಿದ್ದರು. ಗುರು ಶಿಷ್ಯರಿಬ್ಬರೂ ಷಡ್ಜ ಹಚ್ಚಿದಾಗ ಇಬ್ಬರ ಸ್ವರಗಳೂ ಏಕಜೀವವಾಗುತ್ತಿದ್ದವು. ಮನಸೂರರು ಸ್ಥಾಯಿ ಮತ್ತು ಅಂತರಾಗಳನ್ನು ತಾಲದಲ್ಲಿ ಬಂದಿಶ್‌ ಮಾಡಿ ಹಾಡಿ ತೋರಿಸುತ್ತಿದ್ದರು. ಆ ಮೇಲೆ ಒಂದೊಂದೇ ಆಲಾಪಿನ ಸಂಗತಿಗಳನ್ನೆತ್ತಿಕೊಂಡು ರಾಗದ ಬಢತ್‌ ಮಾಡುತ್ತಿದ್ದರು. ಜಂಬಲದಿನ್ನಿ ಗುರುಗಳಂತೆಯೆ ಹಾಡತೊಡಗುತ್ತಿದ್ದರು. ಗುರುಗಳಿಗೆ ಹಿಗ್ಗು. ಅಲ್ಲಿಂದ ಮುಂದಕ್ಕೆ ಉಪಜ ಅಂಗ, ಬೋಲ್‌ತಾನ್‌, ತಾನ, ಫಿರತ್‌ಗಳ ಸುರಿಮಳೆ. ತಾಲೀಮು ಮುಗಿಸಿ ವಾಕಿಂಗ್‌ಗೆ ಹೋದಾಗ ಸಿದ್ಧರಾಮ ಜಂಬಲದಿನ್ನಿ ಅಜ್ಜಣ್ಣ ಪಾಟೀಲರಿಗೆ ಅವುಗಳನ್ನು ತದ್ರೂಪ ಹಾಡಿತೋರಿಸುತ್ತಿದ್ದರು. ಮಲ್ಲಿಕಾರ್ಜುನ ಮನಸೂರರು ಸಿದ್ಧರಾಮ ಜಂಬಲದಿನ್ನಿ ಅವರಿಗೆ ತಾವು ಹಾಡುತ್ತಿದ್ದ ಎಲ್ಲ ಪ್ರಮುಖ ರಾಗಗಳನ್ನು ಕಲಿಸಿದರು. ೧೯೬೫, ಶ್ರಾವಣ ಮಾಸದ ಕೊನೆಯ ಸೋಮವಾರ ಧಾರವಾಡದ ಮುರುಘಾ ಮಠದಲ್ಲಿ ಮಲ್ಲಿಕಾರ್ಜುನ ಮನಸೂರರ ಗಾಯನ. ತಂಬೂರಿ ಸಾಥಿಗೆ ಸಿದ್ಧರಾಮ ಜಂಬಲದಿನ್ನಿ. ಮನಸೂರರ ತಬಿಯತ್ತು ಚೆನ್ನಾಗಿತ್ತು. ಒಂದೆರಡು ರಾಗಗಳನ್ನು ಹಾಡಿದ ನಂತರ ನಟಬಿಹಾಗ ರಾಗದಲ್ಲಿ ‘ಧನ ಧನ ಮಂಗಲ ಗಾವೊ’ ಚೀಜ ಎತ್ತಿಕೊಂಡರು. ಮೂರನೆಯ ಆವರ್ತದಲ್ಲಿ ಒಂದು ತಾಣ ಪಲ್ಲವಿಯನ್ನೆತ್ತಿಕೊಂಡು ತಾರಸಪ್ತಕದ ಗಾಂಧಾರ-ಮಧ್ಯಮಗಳೆತ್ತರಕ್ಕೇರಿ ಗಕ್ಕನೆ ನಿಲ್ಲಿಸಿ ಶಿಷ್ಯನತ್ತ ನೋಡಿದರು. ಶಿಷ್ಯ ಸಿದ್ಧರಾಮ ಜಂಬಲದಿನ್ನಿ ಅದಕ್ಕೆ ಸಿದ್ಧವಾಗಿಯೆ ಇದ್ದರು. ಗುರುಗಳು ನಿಲ್ಲಿಸಿದ ತಾರಗಾಂಧಾರ ಮಧ್ಯಮ ಸ್ವರಗಳನ್ನೆತ್ತಿಕೊಂಡು ಫಿರತ್‌ನೊಂದಿಗೆ ನಾಲ್ಕನೆಯ ಆವರ್ತದಲ್ಲಿ ಕರಾರುವಾಕ್ಕಾಗಿ ಸಮ್‌ಗೆ ಬಂದಾಗ ಸಭೆ ‘ವಾಹವಾ, ವಾಹವಾ’ ಎಂದುದ್ಗರಿಸಿತು.

ಸಿದ್ಧರಾಮ ಜಂಬಲದಿನ್ನಿ ಗುರು ಮಲ್ಲಿಕಾರ್ಜುನ ಮನ್ಸೂರರೊಂದಿಗೆ ಭಾರತಾದ್ಯಂತ ಕಾರ್ಯಕ್ರಮಗಳಲ್ಲಿ ಸಹಗಾಯಕರಾಗಿ ಭಾಗವಹಿಸಿದ್ದರು. ೧೯೭೦ರ ದಶಕದಲ್ಲಿ ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಗುರುಶಿಷ್ಯ ಪರಂಪರೆಯ ಗಾಯನ. ಮೊದಲ ೨೦ ನಿಮಿಷ ಶಿಷ್ಯ ಹಾಡಬೇಕು. ತದನಂತರ ಗುರು ಮುಂದುವರಿಸಬೇಕು. ಸಿದ್ಧರಾಮ ಜಂಬಲದಿನ್ನಿ ಜೈತ ಕಲ್ಯಾಣ ರಾಗ ಹಾಡಿದರು. ಗುರುಗಳು ಅದನ್ನು ಮುಂದುವರಿಸಿದರು. ಇಬ್ಬರ ಗಾಯಕಿ ಮತ್ತು ಧ್ವನಿಯಲ್ಲಿ ಎಷ್ಟೊಂದು ಸಾಮ್ಯವಿತ್ತೆಂದರೆ ಮೊದಲು ಯಾರು, ನಂತರ ಯಾರು ಹಾಡಿದರೆಂಬುದೆ ತಿಳಿಯದಂತಿತ್ತು. ಎಚ್.ಎಂ.ವ್ಹಿ.ಕಂಪನಿಗಾಗಿ ಇಬ್ಬರೂ ಸೇರಿ ಮೃತ್ಯುಂಜಯ ಸುಪ್ರಭಾತ  (ಪಂಡಿತ ವೈ. ನಾಗೇಶ ಶಾಸ್ತ್ರಿಗಳ ರಚನೆ) ಹಾಡಿದಾಗಲೂ ಅಷ್ಟೆ.

೧೯೮೬ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಂಗೀತ ಸಮ್ಮೇಳನ. ರವೀಂದ್ರ ಕಲಾಕ್ಷೇತ್ರದಲ್ಲಿ ಸಿದ್ಧರಾಮ ಜಂಬಲದಿನ್ನಿ ಅವರ ಗಾಯನ. ಅನ್ನಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಮುಂಬಯಿಯ ಸಂಗೀತಜ್ಞ ರಮೇಶ ನಾಡಕರ್ಣಿ ಗಾಯನ ಕೇಳೋಣವೆಂದು ಬಂದರು. ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆಯೆ “ಅರೆ, ಇದು ತೀರಾ ಒಳ್ಳೆಯದಾಯಿತಲ್ಲ! ಮಲ್ಲಿಕಾರ್ಜುನ ಮನ್ಸೂರರ ಗಾಯನ ಕೇಳಲು ಸಿಕ್ಕಿತು” ಎಂದು ಸಂತಸಪಟ್ಟರು. ಒಳಗೆ ಹೋಗಿ ನೋಡಿದರೆ ಹಾಡುತ್ತಿದ್ದವರು ಸಿದ್ಧರಾಮ ಜಂಬಲದಿನ್ನಿ. ರಮೇಶ ನಾಡಕರ್ಣಿ ಅವರಿಗೆ ಆದ ಆಶ್ಚರ್ಯ ಅಷ್ಟಿಷ್ಟಲ್ಲ, ಗಾಯನ ಮುಗಿದ ಮೇಲೆ ಸಿದ್ಧರಾಮ ಜಂಬಲದಿನ್ನಿ ಅವರನ್ನು ಕಂಡು “ಮನಸೂರರ ಗಾಯಕಿಯನ್ನು ಹೂಬೇ ಹೂ ಹಾಡುವ ನೀವು ನಿಜಕ್ಕೂ ಗುರುವಿಗೆ ತಕ್ಕ ಶಿಷ್ಯ” ಎಂದು ಕೊಂಡಾಡಿದರು.

ಬಡತನ ಸಿದ್ಧರಾಮ ಜಂಬಲದಿನ್ನಿ ಅವರ ಬೆನ್ನು ಬಿಡಲಿಲ್ಲ. ಎಂಥ ಕಷ್ಟವಿದ್ದರೂ ಅವರು ದೇಹಿ ಎಂದು ಕೈ ಚಾಚಿದವರಲ್ಲ.ಗುಲಬರ್ಗಾದ ಶರಣ ಬಸವೇಶ್ವರ ಕಾಲೇಜಿನಲ್ಲಿ ೧೯೭೦ರಲ್ಲಿ ಸಂಗೀತ ವಿಭಾಗ ತೆರೆದರು. ಅಧ್ಯಾಪಕರನ್ನಾಗಿ ಯಾರನ್ನು ನೇಮಿಸುವುದು ಎಂಬ ವಿಚಾರ ತಲೆಯೆತ್ತಿದಾಗ ಹೊಳೆದುದು ಸಿದ್ಧರಾಮ ಜಂಬಲದಿನ್ನಿ ಅವರು. ಸಿದ್ಧರಾಮ ಜಂಬಲದಿನ್ನಿ ೧೯೭೦ ರಿಂದ ೧೯೮೩ರವರೆಗೆ ಸಂಗೀತ ಅಧ್ಯಾಪಕರಾಗಿ ಆ ವಿಭಾಗವನ್ನು ಕಟ್ಟಿ ಬೆಳೆಸಿದವರು, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದರು. ಅವರ ಜೀವನ ಆರ್ಥಿಕ ನೆಮ್ಮದಿ ಕಂಡ ಕಾಲವದು.

ಹಿಂದುಸ್ತಾನಿ ಸಂಗೀತದಲ್ಲಿ ವಚನಗಾಯನ ಒಂದು ದೊಡ್ಡ ಪರಂಪರೆಯಾಗಿ ಬೆಳೆದಿದೆ. ಅದಕ್ಕೆ ಅಸ್ತಿವಾರ ಹಾಕಿದವರು ಪಂಚಾಕ್ಷರಿ ಗವಾಯಿಗಳು. ವಚನಗಳನ್ನು ಮೊಟ್ಟಮೊದಲಿಗೆ ಶಾಸ್ತ್ರೀಯ ಸಂಗೀತದಲ್ಲಿ ಸಂಯೋಜಿಸಿದವರು ಅವರು. ಸಂಯೋಜಿಸಿದ ಪ್ರಥಮ ವಚನ ‘ನಾದಪ್ರಿಯ ಶಿವನೆಂಬರು”. ರಾಗ ಪೂರಿಯಾ ಧನಶ್ರೀ. ೧೯೩೨ ರಲ್ಲಿ ಸೊಲ್ಲಾಪುರದ ಶರಣೆ ರುದ್ರಮ್ಮನವರ ಆಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯ ಬಳಗದೊಂದಿಗೆ ಪ್ರಪ್ರಥಮ ಸಾರ್ವಜನಿಕ ವಚನಗಾಯನ ಕಾರ್ಯಕ್ರಮ ನೀಡಿದರು. ಅಲ್ಲಿಂದ ಮುಂದಕ್ಕೆ ಅವರ ಶಿಷ್ಯನಾದ ಬಸವರಾಜ ರಾಜಗುರು ಮತ್ತು ಮಲ್ಲಿಕಾರ್ಜುನ ಮನಸೂರ ವಚನಗಾಯನ ಪರಂಪರೆಯನ್ನು ಬೆಳೆಸಿ ಭದ್ರಗೊಳಿಸಿದರು. ಇವತ್ತು ತನ್ನ ಕಚೇರಿಯಲ್ಲಿ ಒಂದೆರಡು ವಚನ ಹಾಡದ ಕರ್ನಾಟಕದ ಹಿಂದುಸ್ತಾನಿ ಗಾಯಕನಿಲ್ಲ

ವಚನಗಾಯನಕ್ಕೆ ಸಿದ್ಧರಾಮ ಜಂಬಲದಿನ್ನಿ ಅವರ ಕೊಡುಗೆ ಮಹತ್ತರವಾದುದು. ವಚನಗಳನ್ನು ಹಾಡಿದರೆ ಅವರೇ ಹಾಡಬೇಕು ಎನ್ನುವ ಮಟ್ಟಿಗೆ ಅವರದು ವಿಶಿಷ್ಟ ಶೈಲಿ. ಪಂಚಾಕ್ಷರಿ ಗವಾಯಿಗಳು ಮತ್ತು ಮಲ್ಲಿಕಾರ್ಜುನ ಮನ್ಸೂರರ ಗರಡಿಗಳಲ್ಲಿ ತಯಾರಾದವರಲ್ಲವೆ! ವಚನಗಳ ಅರ್ಥವನ್ನು ಗ್ರಹಿಸಿ, ಅವುಗಳ ಭಾವಕ್ಕೆ ತಕ್ಕಂಥ ರಾಗಗಳಲ್ಲಿ ಸಂಯೋಜಿಸಿ, ಸ್ಷಷ್ಟೋಚ್ಚಾರಕ್ಕೆ ಕುಂದು ಬಾರದಂತೆ ಸಿದ್ಧರಾಮ ಜಂಬಲದಿನ್ನಿ ಹಾಡುತ್ತಿದ್ದ ವಚನಗಳಿಗೆ ಲೆಕ್ಕವಿಲ್ಲ. ‘ನೋವುಂಡವನು ವಚನಗಳನ್ನು ಸರಿಯಾಗಿ ಹಾಡಬಲ್ಲ’ ಎನ್ನುತ್ತಿದ್ದರು. ವಚನಗಾಯನದಿಂದ ಅವರ ವ್ಯಕ್ತಿತ್ವ ಹೊಸ ರೂಪ ತಳೆಯಿತು. ಆತ್ಮತೃಪ್ತಿಗಾಗಿಯೆ ಹಾಡುತ್ತಿರುವರೇನೊ ಎಂಬಂತೆ ವಚನಗಳನ್ನು ತನ್ಮಯರಾಗಿ ಹಾಡುತ್ತಿದ್ದರು. “ನನ್ನ ಕಷ್ಟದ ಜೀವನಕ್ಕೆ ವಚನಗಳು ಸಂಜೀವಿನಿಯಾದವು” ಎನ್ನುತ್ತಿದ್ದರು.

ವಿಜಾಪುರ ಬಳಿ ಒಂದು ಹಳ್ಳಿ. ಅಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ. ಉದ್ಘಾಟನೆಗೆ ಆಹ್ವಾನಿತರಾದವರು ಮಲ್ಲಿಕಾರ್ಜುನ ಮನಸೂರ. ಜೊತೆಗೆ ಸಿದ್ಧರಾಮ ಜಂಬಲದಿನ್ನಿ.ದಿವಂಗತರುಗಳಾದ ಪ್ರೊ. ಡಿ.ಎಸ್‌, ಕರ್ಕಿ ಮತ್ತು ಪ್ರೊ. ವ್ಹಿ.ಕೆ. ಗೋಕಾಕ ಮುಖ್ಯ ಅತಿಥಿಗಳು. ಮನಸೂರರು “ನೋಡ್ರಿ, ನಾನು ಶಾಸ್ತ್ರೀಯ ಗಾಯಕ, ವಚನ ಹಾಡಬೇಕಾದರೆ ಗಂಟಲು ಕಾಯಬೇಕು, ಮೊದಲು ಒಂದು ರಾಗ ಹಾಡುವೆ” ಎಂದು ಬಿಹಾಗಡಾ ರಾಗ ಹಾಡಿದರು. ಆ ಮೇಲೆ ‘ಕಳಬೇಡ, ಕೊಲಬೇಡ” ವಚನ ಎತ್ತಿಕೊಂಡರು. ಅದನ್ನು ಮುಗಿಸುತ್ತಲೆ ಏನನ್ನಿಸಿತೊ ಏನೊ “ನನಗಿಂತ ನನ್ನ ಶಿಷ್ಯ ಸಿದ್ಧಣ್ಣ ವಚನಗಳನ್ನು ಚೆನ್ನಾಗಿ ಹಾಡತಾನ ಬಾ ಸಿದ್ಧಣ್ಣ, ಹಾಡು ಬಾ” ಎಂದು ಕರೆದರು.

ಸಿದ್ಧರಾಮ ಜಂಬಲದಿನ್ನಿ ಒಂದಾದ ಮೇಲೊಂದರಂತೆ ಬಸವಣ್ಣ, ಅಕ್ಕಮಹಾದೇವಿ, ಅಜಗಣ್ಣ, ದೇವರ ದಾಸಿಮಯ್ಯ, ಚೆನ್ನಬಸವಣ್ಣ, ಅಲ್ಲಮಪ್ರಭು ಮೊದಲಾದವರ ವಚನಗಳನ್ನು ಸುರಿಸಿದರು. ರಾತ್ರಿ ೧೦ ಗಂಟೆಯಿಂದ ಬೆಳಗಿನವರೆಗೂ ಹಾಡಿದರು. ಶ್ರೋತೃಗಳು ಮಂತ್ರಮುಗ್ಧ. ಕೊನೆಗೆ ಗುರು-ಶಿಷ್ಯರಿಬ್ಬರೂ ಜೊತೆಗೂಡಿ ಭೈರವಿ ರಾಗದಲ್ಲಿ ಹರಿಹರ ಕವಿಯ “ಪಂಪಾನಗರಿ ನಿವಾಸ ಜೈ” ಹಾಡಿ ಮುಕ್ತಾಯಗೊಳಿಸಿದರು.

ಕಾರಿನಲ್ಲಿ ಹಿಂತಿರುಗುವಾಗ ಮಲ್ಲಿಕಾರ್ಜುನ ಮನಸೂರ “ಎನೋ ಸಿದ್ಧಣ್ಣ, ಇಷ್ಟೆಲ್ಲ ವಚನಗಳನ್ನು ಯಾವಾಗ ಕೂಡಿಸಿದ (ರಾಗಗಳಲ್ಲಿ ಸಂಯೋಜಿಸಿದ)?” ಎಂದು ಕೌತುಕ ವ್ಯಕ್ತ ಮಾಡಿದರು. ಸಿದ್ಧರಾಮ ಜಂಬಲದಿನ್ನಿ ಕಾರಿನಲ್ಲಿಯೆ ಗುರುಗಳ ಪಾದ ಮುಟ್ಟಿ ನಮಸ್ಕರಿಸಿ ಮೌನವಾಗಿ ಕುಳಿತರು.

ಬಳ್ಳಾರಿಯ ಪಂಡಿತ ವೈ. ನಾಗೇಶ ಶಾಸ್ತ್ರಿಗಳು ಮೃತ್ಯಂಜಯ ಸುಪ್ರಭಾತ ರಚಿಸಿದರು. ಅದನ್ನು ಮೃತ್ಯಂಜಯ ಅಪ್ಪಗಳಿಗೆ ಕಳಿಸಿಕೊಟ್ಟರು. ಅಪ್ಪಗಳು ಅದನ್ನು ಮಲ್ಲಿಕಾರ್ಜುನ ಮನಸೂರರಿಗೆ ಕಳಿಸಿಕೊಟ್ಟರು. ಮನಸೂರ ಅದನ್ನು ಸಿದ್ಧರಾಮ ಜಂಬಲದಿನ್ನಿ ಅವರಿಗೆ ಕಳಿಸಿಕೊಟ್ಟರು. ಆಗ ಅವರು ಗದಗಿನಲ್ಲಿ ಇದ್ದರು. ತಕ್ಷಣ ಧಾರವಾಡಕ್ಕೆ ಹೊರಟರು. ರೈಲುಗಾಡಿಯಲ್ಲಿ ಪಯಣಿಸುತ್ತಿರುವಾಗಲೆ ಅದಕ್ಕೆ ಧಾಟಿ ಸಂಯೋಜಿಸಿದರು. ಗುರುಗಳ ಮುಂದೆ ಹಾಡಿ ತೋರಿಸಿದರು. ಮಲ್ಲಿಕಾರ್ಜುನ ಮನ್ಸೂರ “ಸಿದ್ಧಣ್ಣ, ಭಾಳ ಚಂದಾಗೇತಿ, ನಡಿ, ನಾಳೆ ಮುಂಬೈಗೆ ಹೋಗೋಣ” ಎಂದರು. ಆ ಗಾನಮುದ್ರಿಕೆಯನ್ನು ಎಚ್‌.ಎಂ.ವ್ಹಿ. ಕಂಪನಿ ಹೊರತಂದಿತು. ಗುರು ಶಿಷ್ಯರಿಬ್ಬರೂ ಜೊತೆಗೂಡಿ ಹಾಡಿದರು. ಗುರುಗಳ ಧ್ವನಿ ಯಾವುದು, ಶಿಷ್ಯನ ಧ್ವನಿ ಯಾವುದು ಎಂದು ಗೊತ್ತಾಗದ ಸಾಮರಸ್ಯ. ಅದೊಂದು ಅಜರಾಮರ ಸುಪ್ರಭಾತ. ಆ ಧ್ವನಿಮುದ್ರಿಕೆಯ ಮತ್ತೊಂದು ಬದಿಗೆ ಸಿದ್ಧರಾಮ ಜಂಬಲದಿನ್ನಿ ಒಬ್ಬರೇ ಚಾಮರಸನ “ಪ್ರಭುಲಿಂಗಲೀಲೆ”ಯ ಆರಂಭಿಕ ಮಂಗಳಾಚರಣ ಪದ್ಯಗಳನ್ನು ಕಂದ ಶೈಲಿಯಲ್ಲಿ ವಾದ್ಯಗಳ ಸಹಾಯವಿಲ್ಲದೆ ಬಲು ಸುಶ್ರಾವ್ಯವಗಿ, ಆಪ್ಯಾಯಮಾನವಾಗಿ ಹಾಡಿದ್ದಾರೆ.

ವಚನ, ರಗಳೆ, ಭಾವಗೀತೆ, ಸುಪ್ರಭಾತ, ದಾಸರ ಪದಗಳು ಸಿದ್ಧರಾಮ ಜಂಬಲದಿನ್ನಿ ಅವರ ಕಂಠದಿಂದ ಹೊರಹೊಮ್ಮಿದ್ದು ಲೆಕ್ಕವಿಲ್ಲದಷ್ಟು ಮಧುರಚೆನ್ನರ “ನಿಲ್ಲು ನಿಲ್ಲೆಲೆ ನವಿಲೆ”ಯ ಹಲವಾರು ಪದ್ಯಗಳನ್ನು ಹಾಡುತ್ತಿದ್ದರು. ಚೆನ್ನವೀರ ಕಣವಿ ಅವರ ‘ನೀಲಾಂಬಿಕೆ’ ಕವನ ಹಾಡಿದರೆ ನೀಲಾಂಬಿಕೆಯ ತ್ಯಾಗಮೂರ್ತಿ ಕಣ್ಣೆದುರು ನಿಲ್ಲಬೇಕು. ಸಿದ್ಧರಾಮ ಜಂಬಲದಿನ್ನಿ ಹಾಡಿದ ಇವೆಲ್ಲವನ್ನು ಧ್ವನಿಮುದ್ರಿಸಿ ಹೊರತಂದಿದ್ದರೆ ಅದೊಂದು ದೊಡ್ಡ ನಿಧಿಯಾಗುತ್ತಿತ್ತು.

ಸಿದ್ಧರಾಮ ಜಂಬಲದಿನ್ನಿ ಅವರಿಗೆ ೧೯೮೦ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗಮಕ ಕಲಾನಿಧಿ ಪ್ರಶಸ್ತಿ, ೧೯೮೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೮೫ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ ಬಂದಿವೆ. ರಾಯಚೂರಿನಲ್ಲಿ ನಿರ್ಮಿತವಾಗಿರುವ ಕಲಾಮಂದಿರಕ್ಕೆ “ಸಿದ್ಧರಾಮ ಜಂಬಲದಿನ್ನಿ ಕಲಾಮಂದಿರ” ಎಂದು ಹೆಸರಿಟ್ಟು ಗೌರವಿಸಲಾಗಿದೆ.

ಸಿದ್ಧರಾಮ ಜಂಬಲದಿನ್ನಿ ಅವರ ಶಿಷ್ಯವರ್ಗದಲ್ಲಿ ಚಂದ್ರಶೇಖರ ಪುರಾಣಿಕಮಠ, ವೀರೇಶ್ವರ ಹಿರೇಮಠ, ನರಸಿಂಹಲು ವಡವಾಟಿ, ಜಯಲಕ್ಷ್ಮಿ ಶಾಸ್ತ್ರಿ, ಶಾಂತಾ ಚಲ್ಲಾ, ಎಂ. ಚಂದ್ರಶೇಖರ, ಸೋಮಶೇಖರ ಹಾಗರಗಿ, ಮೀರಾ ಗೋಳಿಕೇರಿ, ಸೀತಾ ಮುಲ್ಕಿ ಮೊದಲಾದವರಿದ್ದಾರೆ.

೧೯೮೭ ಅಕ್ಟೋಬರ್ ತಿಂಗಳು. ಅಡಿವೆಪ್ಪ ತಾತನವರ ಪುಣ್ಯತಿಥಿ. ಸಿದ್ಧರಾಮ ಜಂಬಲದಿನ್ನಿ ಮನದಣಿಯೆ ಹಾಡಿದರು. “ಇನ್ನೆಷ್ಟು ದಿನಾರೆಪಾ ನಾವು ಹಾ ಡೋದು, ಇಲ್ಲಿಗೆ ಮುಗೀತು ಅನಿಸ್ತದ” ಎಂದು ಹಾಡಿನ ಮಧ್ಯೆ ಮತ್ತೆ ಮತ್ತೆ ಹೇಳಿದರು. ಅದವರ ಕೊನೆಯ ಕಾರ್ಯಕ್ರಮವಾಯಿತು. ಅವರ ಸಂಗೀತಯಾತ್ರೆ ಆರಂಭಗೊಂಡುದು ಅಡಿವೆಪ್ಪ ತಾತನವರ ಆಶೀರ್ವಾದದಿಂದ,ಅಂತ್ಯಗೊಂಡುದು ಅವರಿಗೆ ಸಂಗೀತಾಂಜಲಿ ಅರ್ಪಣೆಯೊಂದಿಗೆ, ಸಮ್‌ನಿಂದ ಸಮ್‌ಗೆ ಬಂದಂತಾಯಿತು.

ಸಿದ್ಧರಾಮ ಜಂಬಲದಿನ್ನಿ ಡಿಸೆಂಬರ ೩೧,೧೯೮೮ ರಂದು ಗಂಧರ್ವ ಲೋಕ ಸೇರಿದರು.