ಅಖಿಲ ಭಾರತ ಖ್ಯಾತಿಯ ಕರ್ನಾಟಕದ ಹಿಂದುಸ್ಥಾನಿ ಸಂಗೀತಗಾರರಲ್ಲಿ ಪಂ. ಸಿದ್ಧರಾಮ ಜಂಬಲ ದಿನ್ನಿ ಒಬ್ಬರು. ಎರಡು ಘರಾಣೆಯ ಗಾಯಕಿ ಶೈಲಿಯನ್ನು ತಮ್ಮ ಕಂಚಿನ ಕಂಠದಲ್ಲಿ ಎರಕ ಹೊಯ್ದು ಅದಕ್ಕೆ ತಮ್ಮ ಸ್ವಂತಿಕೆಯನ್ನು ಲೇಪಿಸಿದವರು. ಖಯಾಲ ಹಾಡುಗಾರಿಕೆಯಷ್ಟೇ ವಚನ ಗಾಯನಕ್ಕೆ ಎತ್ತರದ ನಿಲುವು ತಂದುಕೊಟ್ಟವರು. ಬದುಕಿನ ನೋವನ್ನುಂಡು ಸಂಗೀತದ ಆನಂದವನ್ನು ಶ್ರೋತೃಗಳಿಗೆ ಹಂಚಿದವರು. ಸಂಗೀತ ಲೋಕದಲ್ಲಿ ಶಾಶ್ವತವಾಗಿ ನಿಂತವರು.

ಅವರು ಜನಿಸಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ‘ಜಂಬಲ ದಿನ್ನಿ’ ಎಂಬ ಗ್ರಾಮದಲ್ಲಿ: ೧೯೧೮ರ ಸೆಪ್ಟೆಂಬರ ೨೦ ರಂದು. ಲಿಂಗೈಕ್ಯರಾದದ್ದು ಗದುಗಿನಲ್ಲಿ ೧೯೮೮ರ ಡಿಸೆಂಬರ ೩೧ ರಂದು. ಎಪ್ಪತ್ತು ವರ್ಷ ತುಂಬು ಜೀವನ ಬಾಳಿ ಬದುಕಿದವರು. ಅವರದು ಸಂಗೀತ ಪರಂಪರೆಯ ಮನೆತನ. ತಂದೆ ಚನ್ನಬಸವಪ್ಪ ಮದ್ದಳೆ ನುಡಿಸುವುದರಲ್ಲಿ ಎತ್ತಿದ ಕೈ. ಪಿಟೀಲು, ಡೋಲು ನುಡಿಸುವುದರಲ್ಲಿ ನಿಷ್ಣಾತ. ತಾಯಿ ಅವ್ವಮ್ಮ ಸಂಗೀತದ ಭಕ್ತೆ. ಇಂತಹ ವಾತಾವರಣದಲ್ಲಿ ಹುಟ್ಟಿ ಬೆಳೆದ ಅವರಿಗೆ ಸಂಗೀತ ವಿದ್ಯೆ ಎಳವೆಯಿಂದಲೇ ಒಲಿಯಿತು. ಅವರಿಗೆ ಸಂಗೀತದ ಶ್ರೀಕಾರ ಹಾಕಿದವರು ನೀಲಕಂಠಪ್ಪನವರು. ಬಾಲ್ಯದಲ್ಲಿ ಕಲ್ಲೂರು ಅಡಿವೆಪ್ಪ ತಾತನವರ ಆಶೀರ್ವಾದ. ಪಂ. ಪಂಚಾಕ್ಷರಿ ಗವಾಯಿಗಳಲ್ಲಿ ಹತ್ತು ವರ್ಷ (೧೯೩೦-೧೯೪೦) ಗ್ವಾಲಿಯರ್ ಘರಾಣೆಯ ಅಭ್ಯಾಸ. ಅಭ್ಯಾಸದ ನಂತರ ತಾವು ಕಲಿತ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಅಧ್ಯಾಪಕರಾಗಿ (೧೯೪೪-೧೯೪೮) ಸೇವೆ. ೧೯೪೬ರಲ್ಲಿ ಕುಟುಂಬ ಸಮೇತ ಗದುಗಿನಲ್ಲಿ ವಾಸ. ೧೯೫೫ರಲ್ಲಿ ಪಂ. ಮಲ್ಲಿಕಾರ್ಜುನ ಮನಸೂರ ಅವರ ಶಿಷ್ಯತ್ವ ವಹಿಸಿ ೧೦ ವರ್ಷಗಳ ಕಾಲ (೧೯೫೫-೧೯೬೫) ಜೈಪುರ ಘರಾಣೆಯ ತಾಲೀಮು. ಎರಡು ಘರಾಣೆಯ ಗಾಯಕಿ ಶೈಲಿಯನ್ನು ಶುದ್ಧವಾಗಿ ಕಾಯ್ದುಕೊಂಡು ಅದಕ್ಕೆ ತಮ್ಮ ಸ್ವಂತಿಕೆಯನ್ನು ಲೇಪಿಸಿದ ಶ್ರದ್ಧಾವಂತ ಗಾಯಕ. ೧೯೫೦ ರಿಂದ ಧಾರವಾಡ ಆಕಾಶವಾಣಿ ಮೂಲಕ ಗಾಯನ ಪ್ರಸಾರ.

ಮೊದಲೇ ಕೋಮಲ ಕಂಠ, ಇಬ್ಬರು ಮಹಾನ್‌ ಗಾಯಕರ ಆಶೀರ್ವಾದ, ನಿರಂತರ ರಿಯಾಜ್‌ – ಇವುಗಳ ಫಲವಾಗಿ ಪಂ. ಸಿದ್ಧರಾಮ ಜಂಬಲ ದಿನ್ನಿ ನಾದಲೋಕದಲ್ಲಿ ಅಪಾರ ಹೆಸರು ಗಳಿಸಿದರು. ಆರಂಭದ ದಿನಗಳಲ್ಲಿ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ, ವೀರೇವರ ಪುಣ್ಯಾಶ್ರಮದ ನಾಟ್ಯ ಸಂಘ, ಫ. ಶಿ. ಭಾಂಡಗೆ ನಾಟ್ಯ ಸಂಘ- ಮುಂತಾದ ನಾಟಕ ಕಂಪನಿಗಳಲ್ಲಿ ಸಂಗೀತ ನಿರ್ದೇಶಕರಾಗಿ, ನಟ-ಗಾಯಕರಾಗಿ ಕಾರ್ಯನಿರ್ವಹಿಸಿ, ಗುರು ಪಂ. ಮಲ್ಲಿಕಾರ್ಜುನ ಮನಸೂರ ಅವರ ಜೊತೆಗೆ ಸಹಗಾಯಕರಾಗಿ ಭಾರತದ ತುಂಬೆಲ್ಲ ಸಂಗೀತ ಯಾತ್ರೆ. ಗುಲ್ಬರ್ಗಾದ ಶ್ರೀ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ೧೮ ವರ್ಷಗಳ ಕಾಲ (೧೯೭೦-೧೯೮೩) ಕಾರ್ಯ ಮಾಡಿ ಕೊನೆಗೆ ೧೯೧೮ರಲ್ಲಿ ಗಂಟಲು ಕ್ಯಾನ್ಸರಿನಿಂದ ಲಿಂಗೈಕ್ಯರಾದರು.

ಪಂ.ಸಿದ್ಧರಾಮ ಜಂಬಲ ದಿನ್ನಿ ಅವರು ಹಾಡುವ ವಚನ ಕೇಳಿಯೇ ಆನಂದಿಸಬೇಕು. ‘ವಚನಗಳನ್ನು ಹಾಡಿದರೆ ಜಂಬಲ ದಿನ್ನಿಯವರಂತೆ ಹಾಡಬೇಕು’ ಎನ್ನುವಷ್ಟರ ಮಟ್ಟಿಗೆ ಅವರು ಖ್ಯಾತರು. ಅವರು ಹಾಡಿದ ಅನೇಕ ವಚನ, ಸ್ವರ ವಚನ ಸುಪ್ರಭಾತಗಳನ್ನು HMV ಕಂಪನಿ ಧ್ವನಿಮುದ್ರಿಸಿದೆ. ಅವರು ಹಾಡಿದ ವಚನಗಳಿಗೆ ಲೆಕ್ಕವಿಲ್ಲ. ಒಂದೊಂದು ಕಾರ್ಯಕ್ರಮದಲ್ಲಿ ರಾತ್ರಿ ಪೂರ್ತಿ ವಚನಗಾಯನ ಮಾಡಿದ್ದುಂಟು. ಆದರೆ ದುರ್ದೈವದ ಸಂಗತಿಯೆಂದರೆ ಅವರು ಹಾಡಿದ ವಚನ ಕ್ಯಾಸೆಟ್‌ ಕೇವಲ ಒಂದು. ಅವರು ಹಾಡಿದ ಪ್ರಭು ಲಿಂಗಲೀಲೆಯ ಶರಣಾರ್ಥ ಕಂದಕಾವ್ಯ ತುಂಬ ಜನಪ್ರಿಯ.

ಅವರಿಗೆ ಪ್ರಶಸ್ತಿ – ಪುರಸ್ಕಾರ ಎಷ್ಟು ಸಿಗಬೇಕಾಗಿತ್ತೋ ಅಷ್ಟು ಸಿಗಲಿಲ್ಲವೆಂಬುದು ಅವರನ್ನು ಬಲ್ಲ ಅನೇಕರ ಅಭಿಪ್ರಾಯ. ಅವರಿಗೆ ದೊರೆತ ಪ್ರಶಸ್ತಿಗಳಲ್ಲಿ ಹೈದ್ರಾಬಾದ ಕರ್ನಾಟಕ ವೀರಶೈವ ಮಹಾಸಭೆಯ ಸಂಗೀತ ಸುಧಾಕರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಗಮಕ ಕಲಾನಿಧಿ’ ಪ್ರಶಸ್ತಿ (೧೯೮೦), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾತಿಲಕ’ (೧೯೮೫) ಮುಂತಾದವುಗಳು ಉಲ್ಲೇಖನೀಯ. ಕರ್ನಾಟಕ ಸರ್ಕಾರ ರಾಯಚೂರಿನಲ್ಲಿ ನಿರ್ಮಿಸಿರುವ ಜಿಲ್ಲಾ ರಂಗಮಂದಿರಕ್ಕೆ “ಪಂ. ಸಿದ್ಧರಾಮ ಜಂಬಲ ದಿನ್ನಿ ರಂಗ ಮಂದಿರ” ಎಂಬ ಹೆಸರಿಟ್ಟು ಗದುಗಿನ ಜಗದ್ಗುರು ತೋಂಟದಾರ್ಯ ಮಠ “ಸಂಗೀತ ಸುಧಾಕರ ಸಿದ್ಧರಾಮ ಜಂಬಲ ದಿನ್ನಿ” (ಲೇ: ಡಾ. ಶಾಂತರಸ), ಗುಲ್ಬರ್ಗಾ ವಿಶ್ವವಿದ್ಯಾಲಯ “ಪಂ. ಸಿದ್ಧರಾಮ ಜಂಬಲ ದಿನ್ನಿ (ಲೇ: ಡಾ. ಸೀಮಾಪಾಟೀಲ) ಪುಸ್ತಕ ಪ್ರಕಟಿಸಿವೆ. ಭಾಲ್ಕಿಯ ಸಂಸ್ಥಾನ ಹಿರೇಮಠ ಜಂಬಲ ದಿನ್ನಿಯವರ ಹೆಸರಿನಲ್ಲಿ ಪ್ರತಿವರ್ಷ ನಾಡಿನ ಒಬ್ಬ ಶ್ರೇಷ್ಠ ವಚನಗಾಯಕರಿಗೆ “ಪಂ. ಸಿದ್ಧರಾಮ ಜಂಬಲ ದಿನ್ನಿ ವಚನ ಸಂಗೀತ ಪ್ರಶಸ್ತಿ” ನೀಡುತ್ತಿದೆ. ಜಂಬಲ ದಿನ್ನಿಯವರ ಶಿಷ್ಯ ಅಂತರರಾಷ್ಟ್ರೀಯ ಖ್ಯಾತಿಯ ಕ್ಲಾರಿನೇಟ್‌ ವಾದಕ ಡಾ. ನರಸಿಂಹಲು ವಡವಾಟಿಯವರು ರಾಯಚೂರಿನಲ್ಲಿ ‘ಪಂ. ಸಿದ್ಧರಾಮ ಜಂಬಲ ದಿನ್ನಿ ಸ್ಮಾರಕ ಸ್ವರ ಸಂಗಮ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಪ್ರತಿವರ್ಷ ಜಂಬಲ ದಿನ್ನಿಯವರ ಹೆಸರಿನಲ್ಲಿ ರಾಯಚೂರಿನಲ್ಲಿ ಸಂಗೀತೋತ್ಸವ ನಡೆಸುತ್ತಾರೆ. ಜಂಬಲ ದಿನ್ನಿಯವರ ಶಿಷ್ಯರಲ್ಲಿ ಪಂ. ನರಸಿಂಹಲು ವಡವಾಟಿ, ಜಯಲಕ್ಷ್ಮಿಶಾಸ್ತ್ರಿ, ಶಾಂತಾ ಚಲ್ಲಾ, ಎಂ. ಚಂದ್ರಶೇಖರ, ಸೋಮಶೇಖರ ಹಾಗರಗಿ, ಮೀರಾ ಗೋಳಿಕೇರಿ, ಸೀತಾಮುಲ್ಕಿ ಮುಂತಾದವರು ಉಲ್ಲೇಖನಿಯರಾಗಿದ್ದಾರೆ.