ಸಂಕ್ರಮಣದ ಸಮಯದಲ್ಲಿ ಸೊನ್ನಲಿಗೆಯ ಸಡಗರವನ್ನು ನೋಡಬೇಕು. ಆಗ ಶಿವಯೋಗೀಶ್ವರ ಸಿದ್ದರಾಮೇಶ್ವರರ ಜಾತ್ರೆ ಜರುಗತ್ತದೆ. ನೂರು ಸಾವಿರಕ್ಕೂ ಮಿಕ್ಕಿ ಜನರು ಸೇರುತ್ತಾರೆ. ಎಂಟು ನೂರು ವರ್ಷಗಳಿಂದಲೂ ನಡೆದುಬಂದಿರುವ ಈ ಜಾತ್ರೆಯ ಬಗ್ಗೆ ಜನರ ಉತ್ಸಾಹ ಕುಗ್ಗಿಲ್ಲ; ಹಿಗ್ಗುತ್ತಲೇ ನಡೆದಿದೆ. ಸಿದ್ಧರಾಮನ ಸತ್ಕೀರ್ತಿಯೂ ಮಸುಳಿಸಿಲ್ಲ, ಪಸರಿಸುತ್ತಲೇ ನಡೆದಿದೆ.

ಈಗಲೇ ಗುಟ್ಟು ರಟ್ಟಾಗಲಿ

ಸಿದ್ಧರಾಮ ಹುಟ್ಟಿದ ಮೇಲೆ ಅವನ ಹಿರಿಮೆಯನ್ನು ಗುರುತಿಸಿದುದು ಹಿರಿದಲ್ಲ. ಅವನು ಹುಟ್ಟುವ ಮೊದಲೇ ಅವನ ಗರಿಮೆಯನ್ನು ಗುರುತಿಸಿದರೊಬ್ಬ ಮಹಾಗುರು. ಅವರೇ ರೇವಣಸಿದ್ಧೇಶ್ವರರು. ಗುರುತಿಸಿದ ಸ್ಥಳ ಅರಮನೆಯಲ್ಲ, ಗುರುಮನೆಯಲ್ಲ-ಗೌಡನ ಮನೆ. ಇಂದು ನಗರವಗಿ ಹಿಂದೆ ಸಣ್ಣ ಹಳ್ಳಿಯಾಗಿದ್ದ ಸೊನ್ನಲಾಪುರದ ಮುದ್ದುಗೌಡನ ಮನೆ, ಸತಿ ಸುಗ್ಗಲೆಯ ಮನೆ. ಮುದ್ದುಗೌಡ ಸುಗ್ಗಲೆಯರಾಗ ಹರೆಯದ ಗಂಡಹೆಂಡಿರೂ ಅಲ್ಲ-ಸಂತಾನದ ಚಿಂತೆಯಲ್ಲಿಯೇ ಕೊರಗಿ ಸೊರಗಿ ಮುಪ್ಪನ್ನು ಅಪ್ಪಿದ್ದ, ಸಂತಾನದ ಆಸೆಯನ್ನೇ ತೊರೆದುಬಿಟ್ಟಿದ್ದ ವೃದ್ಧ ದಂಪತಿಗಳು. ಆ ವಯಸ್ಸಿನಲ್ಲಿ ಅವರಿಗೆ ಜಗವನ್ನು ಬೆಳಗುವ ಮಗನೊಬ್ಬ ಹುಟ್ಟುವನೆಂದು ಅವರಿವರು ಹೇಳಿದ್ದರೆ ನಗಬೇಕು ಕೈ ತಟ್ಟಿ ಜನರು. ಆದರೆ ಹೇಳಿದವರು ಅವರಿವರಲ್ಲ – ಶ್ರೀಗುರು ರೇವಣಸಿದ್ದೇಶ್ವರರು.

ಹೇಳಿದ ಬಗೆಯೂ ಬೆರಗುಗೊಳಿಸುವಂತಹದು. ಸೊನ್ನಲಿಗೆಯ ಸೀಮೆಗೆ ಶಿಷ್ಯಪರಿವಾರದೊಡನೆ ಬಂದರವರು ಒಂದು ದಿನ. ಸೊನ್ನಲಿಗೆಯನ್ನು ಕಾಣುತ್ತಲೇ ಪಲ್ಲಕ್ಕಿಯಿಂದ ಇಳಿದರು; ಅಡಿಗಳಲ್ಲಿದ್ದ ಅವುಗೆಗಳನ್ನು ಬಿಟ್ಟು ಸೊನ್ನಲಾಪುರಕ್ಕೆ ಮಣಿದರು; ಬರಿಗಾಲಿನಿಂದಲೇ ಮುಂದೆ ನಡೆದರು. ನೆರೆದ ಜನರಿಗೆ, ಹಿಂಬಾಲಿಸಿದ ಶಿಷ್ಯರಿಗೆ ಸೋಜಿಗ. ಯಾರೋ ಕೇಳಿಯೇ ಬಿಟ್ಟರು: “ಗುರುವರ, ಇಲ್ಲೆಲ್ಲಿಯೂ ಲಿಂಗವಿದ್ದಂತಿಲ್ಲ, ತೀರ್ಥವಿಲ್ಲ, ಕ್ಷೇತ್ರವಿಲ್ಲ. ತಾವೀ ತಾಣಕ್ಕೆ ಮಣಿದು, ಅವುಗೆಗಳನ್ನುಳಿದು ಪಾದಚಾರಿಗಳಾಗಿ ಈ ಊರನ್ನು ಪ್ರವೇಶಿಸುತ್ತಿರುವುದರ ಗುಟ್ಟಾವುದು?”

ಗುರು ರೇವಣರು ನಿಶ್ಚಯದ ಸ್ವರದಲ್ಲಿಯೇ ಉತ್ತರಿಸಿದರು: “ಈಗಲೇ ಗುಟ್ಟು ರಾಟ್ಟಾಗಿಬಿಡಲಿ. ಬಹು ಬೇಗನೆ ಈ ಸಣ್ಣ ಹಳ್ಳಿ ಸೊನ್ನಲಿಗೆ ಲಿಂಗದ ಬೀಡಾಗಿ, ಪುಣ್ಯದ ಪುಂಜವಾಗಿ, ಮುಕ್ತಿಕ್ಷೇತ್ರವಾಗಿ, ಧರ್ಮದ ದಾನಿಯಾಗಿ ಧರೆಯಲ್ಲಿ ಮೆರೆಯುವುದು. ಇದಕ್ಕೆ ಕಾರಣನಾಗುವ ಕಾರಣಿಕ ಪುರುಷನೊಬ್ಬನು ಇಲ್ಲಿ ಉದಿಸುವನು.”

“ಈ ಊರ ರಾಣಿ ಚಾಮಲದೇವಿಯರ ಉದರದಲ್ಲಿ ಉದಿಸುವನೆ ಗುರುದೇವ?”

“ಇಲ್ಲ, ಗೌಡಿತಿ ಸುಗ್ಗಲದೇವಿಯ ಪುಣ್ಯಗರ್ಭದಲ್ಲಿ ಉದಿಸುವನು.”

ಎಲ್ಲರೂ ಮೂಕವಿಸ್ಮಿತರಾದರು. ಮರುಮಾತಾಡದೆ ಗುರುಗಳನ್ನು ಹಿಂಬಾಲಿಸಿದರು.

ನಿನ್ನಪುಣ್ಯ

ಎರಗಿದವರನ್ನು ಹರಸುತ್ತ ಗುರು ರೇವಣರು ಮುದ್ದುಗೌಡನ ಮನೆಬಾಗಿಲಿಗೆ ಬಂದರು. ಮುದ್ದುಗೌಡ ಸುಗ್ಗಲೆಯರಿಗೆ ಸಾಸಿವೆಯ ಮೇಲೆ ಸಾಗರನ್ನಿರಿಸಿ ದಂತಾಯಿತು. ಗುರುಗಳಿಗೆ ಮಣಿದರು, ಕುಣಿದರು, ಗುರುಗಳೂ ಸುಗ್ಗಲೆಯ ಪುಣ್ಯೋದರಕ್ಕೆ ಮಣಿದರು. ಬೆಕ್ಕಸಬೆರಗಾದ ಸತಿಪತಿಗಳಿಗೆ ಆಶೀರ್ವದಿಸುತ್ತ ನುಡಿದರು: “ಮಾತಾಯಿ, ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವನ್ನಾಗಿ ಮಾಡಲು, ಇದರ ಕೀರ್ತಿಯನ್ನು ದಶದಿಕ್ಕುಗಳಿಗೆ ಹರಡಲು ಹುಟ್ಟಲಿರುವ ಕಾರಣಿಕ ಶಿವಯೋಗಿ ನಿನ್ನ ಪಾನಗರ್ಭದಿಂದ ಉದಿಸಲಿರುವುದು ನಿನ್ನ ಪುಣ್ಯ. ಆದುದರಿಂದ ನಿನ್ನ ಪವಿತ್ರವಾದ ಉದರಕ್ಕೆ ಮಣಿದೆವು! ಈ ಮುಪ್ಪಿನ ವಯಸ್ಸಿನಲ್ಲಿ ಮಗನಾಗುವನೇ ಎಂದು ಸಂಶಯಪಡಬೇಡ. ಸಮತೆ, ಸತ್ವ,  ತೃಪ್ತಿ, ದಯೆ, ಭಕ್ತಿ, ಜ್ಞಾನ, ವೈರಾಗ್ಯಾದಿ ಸರ್ವ ಸದ್ಗುಣಗಳೇ ರೂಪಾದ, ಸುಖ-ದುಃಖ, ಶೀತ-ಉಷ್ಣ, ಹಗೆ-ಕೆಳೆ, ಹಸಿವು-ತಣಿವು, ಹರುಷ-ವಿಷಾದ ಹೀಗೆ ಒಂದಕ್ಕೊಂದು ವಿರೋಧವಾದ ಅನುಭವಗಳನ್ನು ಮೀರಿರುವ ಮಹಾತ್ಮನೊಬ್ಬನು ನಿನಗೆ ಮಗನಾಗಿ, ನಿನ್ನ ಮನೆಯನ್ನಷ್ಟೆ ಅಲ್ಲ, ಮಹಿಯನ್ನೂ ಬೆಳಗುವನು.”

ಹುಸಿ ಬೀಳಲಿಲ್ಲ ಶ್ರೀಗುರು ರೇವಣರ ಹೇಳಿಕೆ. ಹಸುವಿನ ಹಾಲಿಗಿಂತಲೂ, ಬೆಳ್ಳಿಗಿಂತಲೂ ಬೆಳ್ಳಗಿದ್ದ ಹುಣ್ಣಿಮೆಯ ಬೆಳದಿಂಗಳು ಹರಡಿದ್ದಾಗ ತಂದೆತಾಯಿಗಳಿಗೆ, ಊರವರಿಗೆ ಹರುಷದ ಹಾಲ್ಗಡಲಾಗಿ ಹುಟ್ಟಿದ ಕಾರಣಿಕ ಕುಮಾರ ಸುಗ್ಗಲೆಯ ಹೊಟ್ಟೆಯಿಂದ. ರೇವಣಸಿದ್ದೇಶ್ವರರು ಹುಟ್ಟುವ ಮಗನಿಗೆ ’ಸಿದ್ಧರಾಮ’ ಎಂಬ ಹೆಸರಿಡಲು ಹೇಳಿಹೋಗಿದ್ದರೂ ಕುಲದೇವರಾಗಿದ್ದ ಧೂಳಿಮಹಾಕಾಳನ ಹೆಸರನ್ನೇ ಇಟ್ಟರು ತಂದೆತಾಯಿಗಳು. ಕುರುಡು ನಂಬಿಕೆ ಗೆದ್ದರೂ ಅದರ ಗೆಲವು ಗಟ್ಟಿಯಾಗಿ ನಿಲ್ಲಲಿಲ್ಲ. ’ಧೂಳಿಮಹಾಕಾಳ’ ಎಂದು ಕರೆದರೆ ಕೇಳಿಯೂ ಕೇಳಿಸದಂತೆ ಮೌನವಾಗಿರುತ್ತಿದ್ದಿತು ಆ ಕೂಸು; ’ಸಿದ್ದರಾಮಾ’ ಎಂದು ಕರೆದರೆ ಮಾತ್ರ ಹೊಳೆಯುವ ಕಣ್ಣುಗಳನ್ನು ಅರಳಿಸಿ ನೋಡುತ್ತಿದ್ದಿತು. ಯಾರು ಏನೆಂದೇ ಕರೆಯಲಿ, ’ಸಿದ್ಧರಾಮ’ ಎಂಬ ಹೆಸರೇ ಸ್ಥಿರವಾಯಿತು.

ಎಲ್ಲರಂಥವನಲ್ಲ ಕಂದ!

ಕೊನೆಗೂ ತನಯನೊಬ್ಬನನ್ನು ಪಡೆದೆವು. ಅದೂ ಮುಪ್ಪಿನ ಕಾಲದಲ್ಲಿ ಪಡೆದೆವು-ಎಂಬ ತಂದೆತಾಯಿಗಳ ಆನಂದ ಬಹಳ ದಇನ ಉಳಿಯಲಿಲ್ಲ. ಹುಟ್ಟಿದ ಕೂಸು ಎವೆಯಿಕ್ಕದೆ, ಕೈಕಾಲು ಅಲುಗಿಸದೆ, ಹಸಿದು ಹಾಲು ಕುಡಿಯದೆ, ಆಕಳಿಸದೆ, ಅಳದೆ, ನಗದೆ ಮಲಗಿದುದನ್ನು ಕಂಡಾಗಲೇ ಹೌಹಾರಿದ್ದ ಸುಗ್ಗಲೆ ದಿನಗಳೆದಂತೆ ಮಂಕುಮರಿಯಂತಿದ್ದ ತನ್ನ ಕಂದನನ್ನು ನೊಡಿ ಕಳವಳಿಸಿದಳು, ತಳಮಳಿಸಿದಳು: ’ಇದೆಂಥ ಮೊದ್ದು ಮಗುವನ್ನು ಕೊಟ್ಟೆ ತಂದೆ! ಇಂಥ ಮಗುವನ್ನು ನೋಡಿ ನೋಟಿ ಚಡಪಡಿಸುವುದಕ್ಕಿಂತಲು ಮಗುವಿಲ್ಲದ ದುಃಖವನ್ನು ಸಹಿಸಿಕೊಳ್ಳುವುದೇ ಸುಲಭವಾಗಿದ್ದಿತಲ್ಲ! ಬೈಗಾಗುತ್ತದೆ ಬೆಳಗಾಗುತ್ತದೆ; ಆದರೆ ಈ ಮಗು ತಂದೆತಾಯಿಗಳ ಗುರುತು ಕೂಡ ಹಿಡಿಯದೆ ಬೊಂಬೆಯಂತೆ ಬೆಳೆಯುತ್ತಿದ್ದೆಯಲ್ಲ! ಮಾತು ಕಲಿಯುವುದಿರಲಿ, ನಮ್ಮ ಪ್ರೀತಿಯನ್ನೂ ತಿಳಿಯದವನಾಗಿರುವನಲ್ಲ!’

ಉರಿಯುವ ಗಾಯಕ್ಕೆ ಬರೆ ಎಳೆದಂತೆ ಉರವರ ಅಣಕ ಬೇರೆ. ಹುಚ್ಚನೆಂದು ಕೆಲವರು, ಮೂಕನೆಂದು ಕೆಲವರು, ಮಂಕು ಎಂದು ಕೆಲವರು ಕರೆದಾಗ ತಾಯಿಯ ಕರುಳಲ್ಲಿ ಕಾದೆಣ್ಣೆಯನ್ನು ಹುಯ್ದಂತಾಗುತ್ತಿತ್ತು! ಮೂರು ವರ್ಷಗಳು  ಕಳೆದುವು, ಐದು ವರ್ಷಗಳು ಕಳೆದುವು- ಮಾತಿಲ್ಲ, ಕತೆಯಿಲ್ಲ, ಬೇಕಿಲ್ಲ, ಬೇಡವಿಲ್ಲ. ಮೌನಕ್ಕೆ ಮೈಗೂಡಿದಂತಿದ್ದ ಆ ಮಗ.

ಲಿಂಗಪೂಜೆ

ಮನೆಯಲ್ಲುಳಿಸಿ ನೆರೆಹೊರೆಯವರ ಕೊಂಕು ನುಡಿಗಳನ್ನು ಕೇಳುವುದಕ್ಕಿಂತ ಹೊಲಕ್ಕಾದರೂ ಕರೆದೊಯ್ದರೆ ನೆರೆಹೊಲಗಳ ಬಾಲಕರೊಡನೆ ಕೆಳೆ ಬೆಳೆಸಿ ಎಲ್ಲರಂತೆ ಆದಾನೆಂದು ಬಗೆದು ಹೊಲಕ್ಕೆ ಮುದ್ದುಗೌಡ ಕರೆದೊಯ್ದ ಸಿದ್ದರಾಮನನ್ನು ಅಲ್ಲ, ಮುಗ್ಧರಾಮನನ್ನು. ನೆರೆಹೊರೆಯ ಬಾಲಕರು ಸೇರಿದರು. ಆಟಕ್ಕೆ ಕರೆದರು, ಓಟಕ್ಕೆ ಕರೆದರು-ಸಿದ್ದರಾಮನನ್ನು. ಅವನು ಪಿಟ್ಟೆನ್ನಲಿಲ್ಲ. ಅವನನ್ನು ನಗಿಸಲು ಯತ್ನಿಸಿದರು, ವಿಫಲರಾದರು; ಅಳಿಸಲು ಪ್ರಯತ್ನಿಸಿದರು. ಅದರಲ್ಲಿಯೂ ಸೋತರು! ಸಾಕಾಗಿ ಅವನನ್ನು ಅಲ್ಲಿಯೇ ಬಿಟ್ಟು ತಂತಮ್ಮ ಆಟಗಳಲ್ಲಿ ಮಗ್ನರಾದರು. ಇದನ್ನೆಲ್ಲ ನಿಂತು ನೋಡುತ್ತಿದ್ದ ಮುದ್ದುಗೌಡನಿಗೆ ಹೊಟ್ಟೆಯಲ್ಲಿ ಕಸಿವಿಸಿಯಾಯಿತು. ಅದರ ಒತ್ತಡವನ್ನು ತಾಳಲಾಗದೆ ಅವನೂ ಅಲ್ಲಿಂದ ಹೊರಟುಹೋದ. ಸಿದ್ದರಾಮನೊಬ್ಬನೇ ಉಳಿದ ಒಬ್ಬನೇ ಉಳಿದುದಕ್ಕಾಗಿ ಹಿಗ್ಗಿದ.

ಏನು ತಿಳಿಯಿತೋ, ಅಲ್ಲಿಂದ ಹೊರಟ. ಅತ್ತಿತ್ತ ಸುತ್ತಿ ನವಣೆಯ ಹೊಲದ ಮಧ್ಯಕ್ಕೆ ಬಂದಾಗ ಅಲ್ಲೊಂದು ಶಿವಲಿಂಗವನ್ನು ಕಂಡ; ಹತ್ತಿರದಲ್ಲಿಯೇ ಹಳ್ಳದ ನೀರು ಹರಿಯುತ್ತಿರುವುದನ್ನು ನೋಡಿದ. ಎಂದಿಲ್ಲದ ಆನಂದ ಉಕ್ಕಿಬಂದಿತು ಅವನಲ್ಲಿ. ಬೊಗಸೆ ನೀರಿನಿಂದ ಅಭಿಷೇಕ ಮಾಡಿದ ಲಿಂಗಕ್ಕೆ; ಕಾಡುಹೂಗಳನ್ನು ಧರಿಸಿದ ಅದಕ್ಕೆ. ತಂದ ಬುತ್ತಿಯನ್ನು ನೈವೇದ್ಯ ಮಾಡಿ ಮಣಿದ ಲಿಂಗಕ್ಕೆ. ಕುಣಿದ, ಲಿಂಗದ ಸುತ್ತಲೂ. ಆಮೇಲೆ ಲಿಂಗದ ಮುಂದೆ ಕುಳಿತುಬಿಟ್ಟ-ಮುಗಿದ ಕೈ, ನಟ್ಟ ನೋಟವಾಗಿ. ಹೊತ್ತು ಹೋದುದೇ ತಿಳಿಯಲಿಲ್ಲ- ಬಾಲಕನಿಗೆ!

ನವಣೆಯ ತೆನೆಗಳಿಗೆ ಬಂಗಾರದ ನೀರು ಕುಡಿಸುತ್ತ ಸಂಜೆ ಬಂದಿತು. ಇನ್ನೇನು ಸೂರ್ಯಾಸ್ತವಾಗಬೇಕು. ಮನೆಗೆ ಮರಳುವ ಹೊತ್ತಾಯಿತೆಂದು ಉಳಿದ ಬಾಲಕರೆಲ್ಲ ಲಗುಬಗೆಯಿಂದ ಬಂದು ನೋಡಿದರು. ಧೂಳಿ ಮಹಾಕಾಳ ತನ್ನ ಸ್ಥಳದಲ್ಲಿರಲಿಲ್ಲ. ಹೌಹಾರಿದರವರು, ಹುಡಕಿದರು ಹತ್ತೂ ಕಡೆಗೆ. ಕೊನೆಗೆ ಶಿವಲಿಂಗದೆದುರು ಶಿಲೆಯ ಮೂರ್ತಿಯಂತೆ ಕುಳಿತಿದ್ದ ಚಿಕ್ಕಗೌಡನನ್ನು ಕಂಡರು. ಕರೆದರು, ಕೂಗಿದರು, ಕಿರುಚಿದರು. ಫಲ ದೊರೆಯಲಿಲ್ಲ. ಕೊನೆಗೆ ಅವನ ಭುಜ ಹಿಡಿದು ಅಲ್ಲಾಡಿಸಿ ಕೇಳಿದರು, “ನಮ್ಮೊಡನೆ ಬರುವಿರೋ, ಊರಿಗೆ ಹೋಗಿ ದೊಡ್ಡಗೌಡರನ್ನೇ ಕಳಿಸಬೇಕೋ, ಹೇಳಿ ಚಿಕ್ಕಗೌಡರೆ!”

ಸಮಾಧಿಯಿಂದ ಎಚ್ಚೆತ್ತಂತೆ ಎಚ್ಚೆತ್ತ ಸಿದ್ಧರಾಮ. ತಂದಿದ್ದ ಬುತ್ತಿ ನೈವೇದ್ಯವಾಗಿದ್ದಿತಷ್ಟೆ? ಅದನ್ನು ಅವರೆಲ್ಲರಿಗೂ ಹಂಚಿದ. ಅವರಿಗೂ ಹಸಿವೆಯಾಗಿದ್ದಿತು. ತಿಂದು ಬಾಯಿ ಚಪ್ಪರಿಸಿದರವರು. ಅದನ್ನು ನೋಡಿ ಆನಂದಿಸಿದ ಸಿದ್ಧರಾಮ. ಮೊದಲ ಸಲ ಅವನ ಪ್ರಫುಲ್ಲ ವದನವನ್ನು ನೋಡಿ ನಲಿದರು ಉಳಿದ ಬಾಲಕರು. ಕೇಕೆ ಹಾಕುತ್ತ ಮನೆಗೆ ಮರಳಿದರು.

ಮೆಲ್ಲಗೆ ದನ ಕಾಯುವ ಕೆಲಸಕ್ಕೆ ನಿಯಮಿಸಿದ ಸಿದ್ಧರಾಮನನ್ನು ಮುದ್ದುಗೌಡ. ವೈದ್ಯ ಹೇಳಿದುದೂ ಹಾಲು ಅನ್ನ ರೋಗಿ ಬಯಸಿದುದೂ ಹಾಲು ಅನ್ನ ಎಂಬಂತಾಯಿತು. ನಿತ್ಯವೂ ತಾಯಿ ತರತರದ ಬುತ್ತಿ ಕಟ್ಟಿಕೊಡುವಳು; ಯಾಂತ್ರಿಕವಾಗಿ ಅದನ್ನು ಕೊಂಡು ದನ ಕಾಯಲು ಹೊರಡುವನು ಸಿದ್ಧರಾಮ. ಅಲ್ಲಿ ಯಥಪ್ರಕಾರ ಶಿವಲಿಂಗಪೂಜೆ, ಧ್ಯಾನ, ಗೆಳೆಯರಿಗೆ ಬುತ್ತಿ ಹಂಚುವುದು, ಗೋಧೂಳಿ ಸಮಯಕ್ಕೆ ಎಲ್ಲರೊಡನೆ ದನಗಳನ್ನು ಹೊಡೆದುಕೊಂಡು ಮನೆಗೆ ಮರಳುವುದು.

ಶಿವಲಿಂಗದೇದುರು ಕುಳಿತಿದ್ದ ಚಿಕ್ಕಗೌಡನನ್ನು ಕಂಡರು

ಹೀಗೆಯೇ ದಿನ ಮಾಸಗಳು ಉರುಳುತ್ತವೆ, ಋತು ಬಂದು ಋತು ತೆರಳುತ್ತದೆ. ಸಿದ್ಧರಾಮನ ಸಾಧನೆ ಸದ್ದಿಲ್ಲದೆ, ಗದ್ದಲವಿಲ್ಲದೆ ಸಾಗುತ್ತದೆ. ತಂದೆತಾಯಿಗಳ ಕಂಗಳಲ್ಲಿ, ಊರವರ ಕಂಗಳಲ್ಲಿ, ಸಂಗಡಿಗರ ಕಂಗಳಲ್ಲಿ ಅವನಿನ್ನೂ ಧೂಳಿಮಹಾಕಾಳ, ಆದರೆ ನಿಜಸ್ಥಿತಿಯಲ್ಲಿ ಅವನು ಬಾಲ್ಯದ ಮರೆಯ ಬ್ರಹ್ಮ. ಅವನಿಗಿರಲಿಲ್ಲ-ಲೋಕದಂತೆ ನಡೆವ ಬಂಧ. ಎಲ್ಲರಂತಿರಲಿಲ್ಲ ಆ ಕಂದ-ಎಲ್ಲರಂತೆ ಬೆಳೆಯಲೂ ಇಲ್ಲ ಆ ಕಂದ!

ಮಲ್ಲಯ್ಯ ಬಂದ

ಒಂದು ಸಂಜೆ. ಎಂದಿನಂತಿರಲಿಲ್ಲ ಆ ಸಂಜೆ. ಆ ಸಂಜೆಯ ರಂಜಿಸುವ ಹೊಂಬಿಸಿಲಿನಲ್ಲಿ ತಂದೆ ಬಿತ್ತಿ ಬೆಳೆಸಿದ್ದ ನವಣೆಯ ಹೊಲ ನಯನಮೋಹಕವಾಗಿ ತೋರಿತು ಸಿದ್ದರಾಮನಿಗೆ. ಮೇಲೆ ನೋಡೆ ಹಕ್ಕಿಗಳ ಸಾಲು. ಕಳೆಗೆ ತೆನೆಗಳ ಸಾಲು-ಹೊಂದೆನೆಗಳ ಸಾಲು. ಅದೊಂದು ಪರವಶತೆ ಆವರಿಸಿತು ಅವನನ್ನು. ಆಗ ಆಗಮಿಸಿದರು ಒಬ್ಬ ಜಂಗಮ ಮೂರ್ತಿಗಳು. ತೇಜಸ್ವಿ ಮುಖಮುದ್ರೆ, ಹೊಳೆಹೊಳೆವ ಕಣ್ಣುಗಳು, ಹಣೆಯ ಮೇಲೆ ಒಪ್ಪುವ ವಿಭೂತಿ, ಕೊರಳಲ್ಲಿ ರುದ್ರಾಕ್ಷಿಮಾಲೆ, ಕೈಯಲ್ಲಿ ತಂಬೂರಿ, ಕಾಲಲ್ಲಿ ಆವುಗೆ, ಮೈ ತುಂಬ ಕಾಷಾಯ ವಸನ. “ಸಿದ್ದರಾಮಾ!” ಎಂದು ಕೂಗಿದರು. ಮೊದಲೇ ಅವರ ಮೂರ್ತಿಸ್ವರುಪಕ್ಕೆ ಮಾರುಹೋಗಿದ್ದ ಸಿದ್ದರಾಮ ತನ್ನ ಹೆಸರುಗೊಂಡು ಕರೆದುದನ್ನು ಕೇಳಿದಾಗಂತೂ ಕರಗಿಹೋದ. ಓಡಿ ಹೊಗಿ ಅವರ ಅಡಿಗಳಿಗೆ ಎರಗಿದ. ಹಿಡಿದೆತ್ತಿ ಹರಸಿದರು ಆ ಜಂಗಮಪುಂಗವರು. ಅವರ ಅಮೃತ ಹಸ್ತಗಳ ಪಾವನ ಸ್ಪರ್ಶದಿಂದ ಸಿದ್ಧರಾಮನ ಶರೀರವೆಲ್ಲ ಪುಲಕಿತವಾಯಿತು. “ಏಳು ಮಗು!” ಎಂಬ ಮಾತು ಅವನ ಮನದಲ್ಲಿ ಮಿಂಚಿನ ಸಂಚಾರ ಮಾಡಿಸಿತು.

ಸಿದ್ಧರಾಮ ತನ್ನ ಕಂಬಳಿ ಹಾಸಿದ. ಅವರನ್ನು ಅದರ ಮೇಲೆ ಕುಳ್ಳಿರಿಸಿ ನವಣೆಯ ತೆನೆಗಳನ್ನು ತಂದು ಹೊಸೆದು ರಸರಸವಾದ ಬೆಲಸಿಯನ್ನು ಸೇವಿಸಲಿತ್ತ. ಪ್ರೀತಿಯಿಂದಲೇ ಸವಿದರು ಅವನ್ನು ಜಂಗಮಮೂರ್ತಿಗಳು. ಆದರೆ ಬರಿ ಬೆಳಸಿಯಿಂದ ಅವರ ಹಸಿವೆ ಹಿಂಗಿದಂತೆ ತೋರಲಿಲ್ಲ. “ಮನೆಗೆ ಹೋಗಿ ಮಜ್ಜಿಗೆ ಅಂಬಲಿ ತರುವೆಯಾ?” ಎಂದು ಕೇಳಿದರು. ಸಿದ್ಧರಾಮ ಸಂತಸದಿಂದಲೇ ನುಡಿದ- “ಓ ತರುತ್ತೇನೆ.” ಆದರೆ ತಾನು ತಿರುಗಿ ಬರುವವರೆಗೆ ಅವರಲ್ಲಿ ಇರುವರೋ ಇಲ್ಲವೋ ಎಂಬ ಸಂಶಯ ಸುಳಿದು ಅಳುಕುತ್ತ ಕೇಳಿದ.

“ತಮ್ಮ ಹೆಸರೇನು?”

“ಮಲ್ಲಯ್ಯ.”

“ತಾವಿರುವುದೆಲ್ಲ?”

“ಶ್ರೀಶೈಲದಲ್ಲಿ.’”

’ಶ್ರೀಶೈಲ’ ಎಂಬ ಶಬ್ದ ಕೇಳುತ್ತಲೇ ಮುಗ್ಧನಾದ ಸಿದ್ಧರಾಮ. ಆ ಹೆಸರಿನಲ್ಲಿಯೇ ಯಾವುದೋ ಮೋಡಿ ಇರುವುಂತೆನಿಸಿತು ಅವನಿಗೆ. ಕೇಳಿದ:

“ನಾನೂ ಅಲ್ಲಿಗೆ ಬರಲೆ?”

“ಅಗತ್ಯವಾಗಿ. ಆದರೆ ಮೊದಲು ಅಂಬಲಿ ಮಜ್ಜಿಗೆ ತರುವುದಿಲ್ಲವೆ?”

“ತರುತ್ತೇನೆ; ಆದರೆ ನಾನು ಬರುವವರೆಗೆ ನೀವು ಇಲ್ಲಿಯೇ ಇರುವಿರಷ್ಟೆ?”

“ಇದರಲ್ಲಿ ಸಂಶಯವೆ ನಿನಗೆ?”

ಆದರೂ ಅನುಮಾನಿಸುತ್ತಲೇ, ಹೊರಳಿ ಹೊರಳಿ ನೋಡುತ್ತಲೇ ಹೋದ ಸಿದ್ಧರಾಮ.

ಸುಗ್ಗವ್ವೆಗೆ ಹಿಡಿಸಲಾರದಷ್ಟು ಹಿಗ್ಗು-ಒಮ್ಮೆಯಾದರೂ ತನ್ನ ಮಗ ತಾನಾಗಿಯೇ ಅಂಬಲಿ ಮಜ್ಜಿಗೆ ಬೇಡಿದುದನ್ನು ನೋಡಿ. ತನ್ನ ಕಿವಿಗಳನ್ನು ತಾನೇ ನಂಬದಾದಳು. ಸಿದ್ಧರಾಮನಿಗೆ ಅವಸರವೋ ಅವಸರ. “ಬೇಗ ಕೊಡಮ್ಮ, ಈಗಲೇ ಕೊಡಮ್ಮ!” ಎಂದು ಒತ್ತಾಯ ಮಾಡಿದ. ತಾಯಿಗೆ ಇದಕ್ಕಿಂತ ಆನಂದದ ಕೆಲಸ ಇನ್ನಾವುದಿದ್ದೀತು? ಅವಳೂ ಅವಸರವಸರವಾಗಿ ನಕ್ಷತ್ರದಂತಹ ಅನ್ನಮಾಡಿ, ಬೆಳದಿಂಗಳಿನಂತಹ ಮೊಸರು ಕಲಿಸಿ ಬುತ್ತಿ ಮಾಡಿ, “ಕಂದ ಕೋ” ಎಂದು ಕೈಗಿತ್ತಳು. ಕೊಂಡವನೇ ಬಿಟ್ಟಬಾಣದಂತೆ ಓಡಿದ ಸಿದ್ಧರಾಮ. ನೋಡನೋಡುವಷ್ಟರಲ್ಲಿ ತಂದೆಯ ನವಣೆಯ ಹೊಲವನ್ನು ತಲುಪಿದ. ಮಲ್ಲಯ್ಯನು ಕುಳಿತಿದ್ದ ಸ್ಥಳಕ್ಕೆ ಧಾವಿಸಿದ. ಅಲ್ಲಿ ಹಾಸಿದ್ದ ಕಂಬಳಿಯೊಂದನ್ನೆ ಕಂಡು ಅಧೀರನಾದ. ಅಲ್ಲಿಲ್ಲ ಮಲ್ಲಯ್ಯ! ಸುತ್ತೆಲ್ಲ ಸುತ್ತಿ ಸುಳಿದು ನೋಡಿದ. ಇಲ್ಲ, ಮಲ್ಲಯ್ಯ ಅಲ್ಲೆಲ್ಲಿಯೂ ಇಲ್ಲ! ಅವನ ಎದೆಯ ಆಳದಿಂದ ಅಳಲಿನ ಉದ್ಗಾರವಾಗಿ ಒಂದೇ ಒಂದು ಶಬ್ದ ಹೊರಬಿದ್ದಿತು “ಮಲ್ಲಯ್ಯ!”

‘’ಎಲ್ಲಿರುವೆ ಮಲ್ಲಯ್ಯ?

ಆಗ ತಾನೆ ಹಬ್ಬುತ್ತಲಿದ್ದ ಇರುಳ ಮಬ್ಬಿನಲ್ಲಿ ’ಮಲ್ಲಯ್ಯ’ ಎಂಬ ಕರುಳಿನ ಕೂಗು ಕೂಗಳತೆಯನ್ನೂ ಮೀರಿ ಸಾಗಿಹೋಯಿತು. ಆದರೆ ಅದಕ್ಕೆ ಯಾರು ಉತ್ತರ ಕೊಡಬೇಕು? ಮರಗಳ ಮರ್ಮರ ಸ್ವರ, ಬೆಳಗಳ ಸರಸರ ಸದ್ದು, ಗಾಳಿಯ ಸುಯ್ ದನಿಗಳನ್ನುಳಿದು ನರನ ಸ್ವರ ಎಲ್ಲಿಯೂ ಕೇಳಿಸಲಿಲ್ಲ. ಆದರೂ ಎದೆಗೆಡಲಿಲ್ಲ ಅವನು. ಮಲ್ಲಯ್ಯನನ್ನು ಹುಡುಕಲೇಬೇಕೆಂಬ ಅವನ ಛಲ ಇನ್ನುಷ್ಟು ಬಲವಾಯಿತು ಆ ಕರಾಳ ಕತ್ತಲೆಯಲ್ಲಿ. “ಮಲ್ಲಯ್ಯ”, ಎಂದು ಕೂಗುತ್ತಾ, ಕಣ್ಣರಿಯದಿದ್ದರೂ ಕರುಳು ಕರೆದತ್ತ ಹೊರಟೇಬಿಟ್ಟ ಆ ದಿಟ್ಟ.

ಇತ್ತ ಅಡವಿಯಲ್ಲಿ ಸಿದ್ಧರಾಮನ “ಮಲ್ಲಯ್ಯ ಮಲ್ಲಯ್ಯ” ಎಂಬ ಕರೆ, ಮೊರೆ; ಅತ್ತ ಊರಲ್ಲಿ, ತದನಂತರ ಹೊಲದಲ್ಲಿ ಅವನ ತಂದೆ ತಾಯಿಗಳ “ಸಿದ್ದರಾಮಾ, ಸಿದ್ದರಾಮಾ” ಎಂಬ ಕೂಗು. ಅಂದು ಗಾಳಿಯ ಅಲೆಗಳೆಲ್ಲ ’ಮಲ್ಲಯ್ಯ’ ’ಸಿದ್ದರಾಮ’ ಎಂಬ ಸೊಲ್ಲುಗಳನ್ನು ಪ್ರತಿಧ್ವನಿಸಿದುವು. ಸಿದ್ಧರಾಮನ ಕೈಗೆ ಮಲ್ಲಯ್ಯ ಸಿಕ್ಕಲಿಲ್ಲ ಅವನ ತಂದೆತಾಯಿಗಳ ಕೈಗೆ ಸಿದ್ಧರಾಮ ಸಿಕ್ಕಲಿಲ್ಲ.

ಮಲ್ಲಯ್ಯನ ಶ್ರೀಶೈಲಕ್ಕೆ

ಎಷ್ಟು ಹೊತ್ತು ನಡೆದನೋ ಸಿದ್ಧರಾಮ, ಎಷ್ಟು ದೂರನಡೆದನೋ ಸಿದ್ಧರಾಮ! ಕೊನೆಗೊಮ್ಮೆ ಕಾಡಿನ ಕರ್ಕಶ ಸ್ವರಗಳಿಗೆ ಪ್ರತಿಯಾಗಿ ಮಾನವರ ಸಂತಸ ಕೊಡುವ ಸ್ವರವನ್ನು ಕೇಳಿದವನು:

“ಉಘೇ, ಉಘೇ, ಉಘೇ! ಪರ್ವತ ಮಲ್ಲಯ್ಯಾ ಉಘೇ, ಉಘೇ, ಉಘೇ.”

ಒಬ್ಬಿಬ್ಬರ ಸ್ವರವಲ್ಲ ಅದು-ಅನೇಕರ ಸಾಮೂಹಿಕ ಸ್ವರ. ಸಿದ್ಧರಾಮನಿಗೆ ಸುತ್ತಲು ಕವಿದ ಕತ್ತಲೆಯಲ್ಲಿ ಝಗ್ಗನೆ ಬೆಳಕು ಬಿದ್ದಂತೆನಿಸಿತು. ಮಾನವರ ಸ್ವರ, ಅದೂ ಪರ್ವತ ಮಲ್ಲಯ್ಯನನ್ನು ಕುರಿತ ಸ್ವರ! ಹೊಸ ಚೈತನ್ಯ ನರ್ತಿಸಿತು- ಅವನ ನರನರಗಳಲ್ಲಿ! ಧ್ವನಿಯ ದಿಕ್ಕಿಗೇ ನಡೆದ; ಮಲ್ಲಯ್ಯನ ಭಕ್ತರು ’ಉಘೇ, ಉಘೇ’ ಎಂದು ಉದ್ಘೋಷಿಸುತ್ತ ನಡೆದಿದ್ದರು. ಸಿದ್ಧರಾಮ ಸೇರಿಕೊಂಡ ಅವರನ್ನು; ಆತುರತೆಯಿಂದ, ಕಾತರತೆಯಿಂದ ಕೇಳಿದ:

“ನೀವು ಶ್ರೀಗಿರಿಗೆ ಹೊರಟಿರುವಿರಾ?”

“ಹೌದು.”

“ಮಲ್ಲಯ್ಯನ ಶ್ರೀಗಿರಿಗೆ?”

“ಹೌದು, ಮಲ್ಲಯ್ಯನ ಶ್ರೀಗಿರಿಗೇ ಹೊರಟಿದ್ದೇವೆ.”

“ನಾನೂ ನಿಮ್ಮ ಸಂಗಡ ಬರಲೆ?”

“ನಿನಗೆ ತಂದೆತಾಯಿಗಳಿಲ್ಲವೇನಪ್ಪ?”

“ಮಲ್ಲಯ್ಯನೇ ತಂದೆ, ತಾಯಿ, ಬಂಧು, ಬಳಗ ನನಗೆ!”

ಏಳೆಂಟು ವರ್ಷಗಳ ಎಳೆಯ ಬಾಲಕನ ಈ ಅಳವಿಗೆ ನಿಲುಕದ ಭಕ್ತಿಯನ್ನು ನೋಡಿ ಬೆರಗಾದರು ಆ ಭಕ್ತರು. ಸಿದ್ಧರಾಮನನ್ನು ಪರಿಷೆಯಲ್ಲಿ ಸೇರಿಸಿಕೊಳ್ಳಲು ಸಮ್ಮತಿಸಿದರು. ಮುಂದುವರಿಯಿತು ಪರಿಷೆ.

ಹಲವು ಹಗಲುಗಳು, ಇರುಗಳುಗಳು ಕಳೆದುವು. ಪರಿಷೆಯವರೊಡನೆ ಸಿದ್ಧರಾಮ ನಡೆದೇ ನಡೆದ. ನಡೆದಷ್ಟೂ ಶ್ರೀಶೈಲವನ್ನು ಶ್ರೀಶೈಲದ ಮಲ್ಲಯ್ಯನನ್ನು ಕಾಣುವ ಅವನ ತವಕ ಹೆಚ್ಚುತ್ತಲೇ ಹೋಯಿತು. “ಯಾವಾಗ, ಓ ಇನ್ನೂ ಯಾವಾಗ ಮಲ್ಲಯ್ಯನನ್ನು ಕಾಣುವುದು? ನನ್ನನ್ನು ತೊರೆದು ಇದಾಗಲೇ ಇಷ್ಟು ದೂರ ಹೋಗಿಬಿಟ್ಟನೇ ಆ ಮಲ್ಲಯ್ಯ? ಇರುವೆನೆಂದು ಹೇಳಿ ತೊರೆದು ಹೋಗುವುದು ಸರಿಯೆ? ಅವನು ಸಿಕ್ಕಲಿ, ನಾನೇನು ತಪ್ಪು ಮಾಡಿದೆನೆಂದು ನೀನೆನ್ನ ಬಿಟ್ಟುಬಂದೆ ಎಂದು ಕೇಳಿಯೇ ಬಿಡುವೆ!”

ಒಂದು ಸಂಜೆ ಮುಂದೆ ಮಲೆಯ ಸಾಲು ಕಾಣಿಸಿತು ಸಿದ್ಧರಾಮನಿಗೆ. ಸಂಜೆಯ ಹೊಂಬಿಸಿಲಿನಲ್ಲಿ ಬಹಳ ಸುಂದರವಾಗಿ ಕಾಣಿಸಿತು ಆ ಗಿರಿರಾಜ ಅವನಿಗೆ. ಅವನ ಕುತೂಹಲ ಕೆರಳಿತು. ಕೇಳಿಯೇ ಬಿಟ್ಟ.

“ಇದಾವ ಪರ್ವತ?”

“ಇದೇ ಮಲ್ಲಯ್ಯನ ಪರ್ವತ, ಇದೇ ಶ್ರೀಶೈಲ!”

’ಶ್ರೀಶೈಲ’, ಮಲ್ಲಯ್ಯ ಎಂಬುವ ಶಬ್ದಗಳು ಕಿವಿಗೆ ಬೀಳುತ್ತಲೇ ರೋಮಾಂಚಿತನಾದ ಸಿದ್ಧರಾಮ. ಕಣ್ಣರಳಿಸಿ ನೋಡಿದ ಆ ಮಲೆಯ ಮಾಲೆಯನ್ನು ಕೈಮುಗಿದ ಆ ಪರ್ವತ ಶ್ರೇಣಿಗೆ. ಅಲ್ಲಿಗೆ ಅವನ ಆಯಾಸವೆಲ್ಲ ಮಾಯವಾಯಿತು. ಉತ್ಸಾಹ ಉಕ್ಕಿ ಬಂದಿತು. ಸ್ವಲ್ಪ ಹೊತ್ತಿನಲ್ಲಿ ಶಿಖರವೊಂದು ಕಾಣಿಸಿತು. ಪರಿಷೆಯ ಭಕ್ತರೆಲ್ಲ ಕೈಮುಗಿದರು ಅದಕ್ಕೆ. ಮತ್ತೆ ಸಿದ್ಧರಾಮನ ಕುತೂಹಲ ಕೆರಳಿತು. ಕೇಳಿದ:

“ಇದಾವ ಶಿಖರ?”

“ಇದು ಮಲ್ಲಯ್ಯನ ಗುಡಿಯ ಗೋಪುರ.”

“ನನ್ನ ಮಲ್ಲಯ್ಯ ಇಂಥ ದೊಡ್ಡ ಗುಡಿಯಲ್ಲಿರುವನೆ?”

“ಸಾಮಾನ್ಯನಲ್ಲ ನಿನ್ನ ಮಲ್ಲಯ್ಯ ತಮ್ಮಾ. ಆತನು ಎಲ್ಲರ ಸ್ವಾಮಿ, ಪೊಡವಿಗೆ ಒಡೆಯ.”

ತಾನೊಲಿದ ಮಲ್ಲಯ್ಯ ಅಸಾಮಾನ್ಯನೆಂಬುದು ತಿಳಿದು ಸಿದ್ಧರಾಮನಿಗೆ ಅವನನ್ನು ನೋಡುವ ತವಕ ಇನ್ನೂ ತೀವ್ರವಾಯಿತು. ಸರಸರನೆ ಮೆಟ್ಟಲುಗಳನ್ನು ಏರಿದ; ಮಲೆಯ ತಲೆಯನ್ನು ಮುಟ್ಟಿದ; ಗಿರಿ ಮಲ್ಲಿಕಾರ್ಜುನನ ಗುಡಿಯನ್ನು ತಲುಪಿದ.

 

’ನೀನೇ ನನ್ನ ತಂದೆತಾಯಿ, ಬಂಧುಬಳಗ

’ಕೊನೆಗೂ ಮೋಸವಾಯಿತು!’

ಗುಡಿಯ ಒಳಗೂ ಹೊರಗೂ ಅಲೆದ ಸಿದ್ಧರಾಮ ಮಲ್ಲಯ್ಯನನ್ನು ಕಾಣಲು. ಅವನ ಮಲ್ಲಯ್ಯ ಅಲ್ಲಿರಲಿಲ್ಲ. ಪರಿಷೆಯಲ್ಲಿ ಬಂದಿದ್ದ ಜನರು ಗರ್ಭಗುಡಿಯತ್ತ ಹೊರಟರು. ಸಿದ್ಧರಾಮ ಅವರನ್ನು ಹಿಂಬಾಲಿಸಿದ. “ಮಲ್ಲಯ್ಯನೆಲ್ಲಿ? ಮಲ್ಲಯ್ಯನೆಲ್ಲಿ?” ಎಂಬ ಅವನ  ಪಲ್ಲವಿ ಸಾಗಿಯೇ ಇದ್ದಿತು. ಒಬ್ಬ ವೃದ್ಧ ಭಕ್ತ ಈ ಶುದ್ಧ ಹೃದಯದ ಬಾಲಕನ ಭಕ್ತಿಗೆ ಬೆರಗಾಗಿ, ಮಲ್ಲಿಕಾರ್ಜುನ ಲಿಂಗದ ಮುಂದೆಯೇ ತಂದು ನಿಲ್ಲಿಸಿದ ಸಿದ್ದರಾಮನನ್ನು. “ಈತನೇ ಮಲ್ಲಯ್ಯ,ಎಲ್ಲರ ತಂದೆ, ಎಲ್ಲಲೋಕಗಳ ಸ್ವಾಮಿ, ನಮಸ್ಕರಿಸು. ಏನು ಬೇಕೋ ಅದನ್ನು ಬೇಡಿಕೋ” ಎಂದು ತಿಳಿಸಿಹೇಳಿದ. ಸಿದ್ಧರಾಮ ಶಿವಲಿಂಗವನ್ನು ನೋಡಿದ. ನೋಡಿ ಬಾಡಿದ. “ಈತನು ಮಲ್ಲಯ್ಯನೆ? ಛೀ, ನಾನು ನವಣೆಯ ಹೊಲದಲ್ಲಿ ಕಂಡ ತೇಜೋಮೂರ್ತಿ ಮಲ್ಲಯ್ಯನೆಲ್ಲಿ? ಈ ಮಾತಾಡದ ಶಿಲಾಮೂರ್ತಿಯೆಲ್ಲಿ? ಈ ಮಾತಾಡದ, ಮೈದಡವಿ ಪ್ರೀತಿ ಮಾಡದ ಮೂರ್ತಿಯನ್ನು ನೋಡಲು ನಾನಿಷ್ಟು ದೂರ ಕಲ್ಲುಮುಳ್ಳು ತುಳಿಯುತ್ತ ನಡೆದುಬಂದೆನೆ? ಕೊನೆಗೂ ಮೋಸವಾಯಿತು! ಇವರ ದಾರಿ ಇವರಿಗೆ, ನನ್ನ ದಾರಿ ನನಗೆ!”

ಸಿದ್ದರಾಮ ಒಮ್ಮೆಗೆ ಹೊರಟುಬಿಟ್ಟ ಯಾತ್ರಿಕರೆಲ್ಲ ನಿಬ್ಬೆರಗಾಗಿ ನೋಡುತ್ತಲಿರಲು ಕಾಡಿನಲ್ಲಿ ಕಾಣದಾಗಿಬಿಟ್ಟ ಮತ್ತೆ ’ಮಲ್ಲಯ್ಯ, ಮಲ್ಲಯ್ಯ’ ಎಂಬ ಅವನ ಸೊಲ್ಲು ಗಾಳಿಯಲ್ಲಿ ಸುತ್ತಿ, ತರುಲತೆಗಳನ್ನು ತಾಕಿ, ದರಿಕಂದರಗಳಲ್ಲಿ ಪ್ರತಿಧ್ವನಿಸಿತು. ಇಷ್ಟಾದರೂ ಎಲ್ಲಿಯೂ ಮಲ್ಲಯ್ಯನ ಸುಳಿವಿಲ್ಲ!

ಸಿದ್ದರಾಮನ ಉದ್ವೇಗ ಹೆಜ್ಜೆ ಹೆಜ್ಜೆಗೆ ಹೆಚ್ಚುತ್ತಲೇ ಇದ್ದಿತು. ಎಲ್ಲಿಗೆ ಹೊರಟಿರುವೆನೆಂಬ ಅರಿವೂ ಅವನಿಗಿರಲಿಲ್ಲ, ಪರಿವೆಯೂ ಅವನಿಗಿರಲಿಲ್ಲ. ಎಲ್ಲಿಯೋ ಗಕ್ಕನೆ ನಿಂತು ನೋಡಿದಾಗ ಕೆಳಗೆ ಭೈರವನ ತೆರೆದ ಬಾಯಿಯಂತಹ ಕಮ್ಮರಿಯೊಂದು ಕಾಣಿಸಿತು. ಸತ್ವಪರೀಕ್ಷೆಗೆ ಸ್ಥಳವಿದೇ ಎಂದು ತೀರ್ಮಾನಿಸಿದ ಸಿದ್ದರಾಮ. ತೀರ್ಮಾಣಿಸುವುದೇ ತಡ, ಕಣ್ಮುಚ್ಚಿ ಕಮ್ಮರಿಯೊಳಕ್ಕೆ ಹಾರಿಬಿಟ್ಟ ಸಿದ್ಧರಾಮ, “ಮಲ್ಲಯ್ಯ, ಮಲ್ಲಯ್ಯ” ಎಂದು ಜಪಿಸುತ್ತ, “ಅಯ್ಯೋ!” ಎಂದು ಹುಯ್ಯಲಿಡುವರಾರೂ ಇರಲಿಲ್ಲ ಅಲ್ಲಿ. ನೆಲ, ಗಾಳಿ, ಬೆಳಕು, ನೀರು, ಬಯಲುಗಳೇ ಗೋಳಾಡಿದುದು!

’ನಿನ್ನ ಜೊತೆಗೆ ಬರುತ್ತೇನೆ’

ಸಿದ್ಧರಾಮ ಕಣ್ದೆರೆದಾಗ ತಾನು ಮಲ್ಲಯ್ಯನ ತೊಡೆಗಳ ಮೇಲೆ ಮಲಗಿರುವುದನ್ನು ಕಂಡ! ಪ್ರೀತಿಯಿಂದ ಅವನ ಮೈ ಸವರುತ್ತಲಿದ್ದಿತು ಮಲ್ಲಯ್ಯನ ಅಮೃತಹಸ್ತ! ಸಿದ್ಧರಾಮ ತನ್ನ ಕಣ್ಣುಗಳನ್ನು ನಂಬುವುದೇ ನಂಬದಿಹುದೇ ಎಂಬ ದಂದುಗದಲ್ಲಿ ಸಿಲುಕಿದಂತಿದ್ದಿತು. ಮಲ್ಲಯ್ಯನದನ್ನು ನೋಡಿ ನಕ್ಕ. ಆತನ ನಗೆಯ ಬೆಳಗಿನಲ್ಲಿ ಸಿದ್ಧರಾಮನ ಸಂಶಯದ ಛಾಯೆ ಮಾಯವಾಯಿತು. “ಕೊನೆಗೊಮ್ಮೆ ಕಂಡೆಯಾ” ಎಂದು ಅವಚಿಕೊಂಡ ಮಲ್ಲಯ್ಯನನ್ನು. ಮುಂದೆ ಮಾತುಗಳೇ ಹೊರಡಲಿಲ್ಲ.

ಎಷ್ಟು ಹೊತ್ತು ಹಾಗೆಯೇ ವಾತ್ಸಲ್ಯದ ವಿಮಲ ಸರಸಿಯಲ್ಲಿ ಈಸುತ್ತಲಿದ್ದನೋ ಸಿದ್ಧರಾಮ! ಮೌನವನ್ನು ಮುರಿದು ಮಲ್ಲಯ್ಯನೆಂದ: “ಏಳು ಮಗು!”

ಮತ್ತೆ ಆ ಸ್ವರ, ಆ ಕರೆ “ಏಳು ಮಗು!” ಮತ್ತೆ ರೋಮಾಂಚಿತನಾದ ಸಿದ್ಧರಾಮ. ಆದರೆ ಅವನ ಉಲ್ಲಾಸ ಕರಗಿ ನಿರಾಶೆಯಾಗುವಂತೆ ನುಡಿದ ಮಲ್ಲಯ್ಯ: “ಇನ್ನು ನೀನು ನಿನ್ನ ಮನೆಗೆ ಮರಳಬೇಕು ಮಗು!”

ರೇಗಿ ಉತ್ತರವಿತ್ತ ಸಿದ್ಧರಾಮ: “ಮತ್ತೆ ನಿನ್ನ ಗತ್ತು ತೋರದಿರು! ನಿನ್ನನ್ನುಳಿದು ಇನ್ನೆಲ್ಲಿಗೂ ಹೋಗೆ ನಾನು. ಹೋದ ಸಲ ತಪ್ಪಿಸಿಕೊಂಡಂತೆ ಈ ಸಲ ತಪ್ಪಿಸಿಕೊಳ್ಳಲಾರೆ ನೀನು!”

“ಹಾಗೆನ್ನದಿರು ಸಿದ್ಧರಾಮಾ, ನಿನ್ನ ತಂದೆತಾಯಿಗಳು ಮರಮರನೆ ಮರುಗುತ್ತಲಿದ್ದಾರೆ. ನೀನು ಹೋಗಿ ಅವರ ದುಃಖವನ್ನು ದೂರ ಮಾಡಬೇಕು!”

“ಮತ್ತೆಮತ್ತೆ ಆ ತಂದೆತಾಯಿಗಳ ಹೆಸರೆತ್ತಿ ಕೊಸರಿಕೊಳ್ಳಲು ಹವಣಿಸದಿರು. ನೀನೇ ನನ್ನ ತಂದೆ,ತಾಯಿ ಬಂಧು ಬಳಗವೆಂದು ನಂಬಿ ಬಂದಿರುವ ನನ್ನನ್ನು ಕರೆದುಕೋ ನಿನ್ನ ಬಳಿಗೆ!”

“ನಿನ್ನ ನಿಷ್ಠೆಯನ್ನು ಮೆಚ್ಚಿದೆ ಮಗು; ಆದರೆ ಈ ಕಾಡಿನಲ್ಲಿ ನನ್ನೊಡನೆ ಕಲ್ಲು ಮರದಂತೆ ಬಾಳಲು ನೀನು ಹುಟ್ಟಿಲ್ಲ. ನಿನ್ನಿಂದ ಜನರ ಕಲ್ಯಾಣವಾಗಬೇಕಾಗಿದೆ; ಈ ಶ್ರೀಶೈಲಕ್ಕೆ ಬರಲಾಗದ ಭಕ್ತರಿಗಾಗಿ ಸೊನ್ನಲಾಪುರವನ್ನೇ ನೀನು ಅಭಿನವ ಶ್ರೀಶೈಲವನ್ನಾಗಿ ಮಾರ್ಪಡಿಸಬೇಕಾಗಿದೆ. ಹೋಗು, ಸೊನ್ನಲಾಪುರಕ್ಕೆ ಹೋಗು; ಅಲ್ಲಿ ಜನಕಲ್ಯಾಣ ಕಾರ್ಯಗಳನ್ನು ಪ್ರಾರಂಭಿಸು; ಅದನ್ನು ಎರಡನೆಯ ಶ್ರೀಶೈಲವನ್ನಾಗಿ ಕಟ್ಟು!”

“ನೀನಿಲ್ಲದೆ ಸೊನ್ನಲಾಪುರ ಶ್ರೀಶೈಲವಾಗಬಲ್ಲುದೆ? ನೀನು ಬಂದರೆ ನಾನು ಹೋಗುವೆ.”

“ಬರುವೆ. ಆದರೆ ಈ ರೂಪದಲ್ಲಿ ಅಲ್ಲ.”

“ಯಾವ ರೂಪದಲ್ಲಿ ಬರುವಿ?” ಬಿರುಗಾಳಿ ಬೀಸಲು, ಮಂದಾರ ಮರದಡಿಯಲ್ಲಿ ಲಿಂಗವಾಗಿ ತೋರುವೆನು.”

“ನಿಜವಾಗಿ ಲಿಂಗರೂಪದಲ್ಲಿ ಬರುವಿಯಾ? ಬರದಿದ್ದರೆ?”

“ನಿಜವಾಗಿ ಬರುವೆ ಮಗು. ಸಂಶಯಪಡಬೇಡ. ತಡ ಮಾಡಬೇಡ; ನಡೆ ನಿನ್ನ ಕಾರ್ಯಕ್ಷೇತ್ರಕ್ಕೆ!”

ಸಾಧಕರ ಆಶ್ರಮ

ಸಿದ್ಧರಾಮನು ಮಲ್ಲಯ್ಯನಿಗೆ ಮಣಿದು ಮರಳಿದ ಸೊನ್ನಲಿಗೆಗೆ. ಸಿದ್ಧರಾಮ ಮನೆಗೆ ಮರಳಿದಾಗ ಸುಗ್ಗಲೆಗೆ ಹೋದ ಜೀವ ಹಿಂದಿರುಗಿದಂತಾಯಿತು; ಮುದ್ದುಗೌಡನಿಗೆ ಕಳೆದ ನವನಿಧಿ ಕೈಸೇರಿದಂತಾಯಿತು. ಆದರೆ ಅವನ ಕಾವಿಯ ಬಟ್ಟೆ, ಅವನ ತೇಜಸ್ಸು ತುಳುಕುವ ಮುಖಮುದ್ರೆ, ಅವನ ಧ್ಯಾನಮಯ ದಿನಚರಿ, ಅವನ ಪೂಜೆಯ ಪರಿಗಳನ್ನು ಕಂಡ ಅವರಿಗೆ ಅವನು ಸನ್ಯಾಸಿಯಾಗುವನೆಂಬ ಭಯ ಹುಟ್ಟಿತು. ಅವನ ಮದುವೆ ಮಾಡಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದುವು. ಸಿದ್ಧರಾಮ ಮನೆಬಿಟ್ಟ ಶ್ರೀಮಲ್ಲಿಕಾರ್ಜುನನೇ ತಂದೆ, ತಾಯಿ, ಗುರು, ಗುರಿಯೆಂದು ನಂಬಿದ್ದ ಅವನು ತಂದೆತಾಯಿಗಳನ್ನು ತೊರೆದುದು ಸ್ವಾಭಾವಿಕವೇ. ತಂದೆತಾಯಿಗಳು ಗೋಳೀಟ್ಟರು. ಅದೇ ಊರಲ್ಲಿ ಆಶ್ರಮವಾಸಿಯಾಗಿ ಇರುವೆನೆಂದು ಸಮಾಧಾನ ಹೇಳಿ, ಹೊರಬಿದ್ದ ಸಿದ್ಧರಾಮ. ದೊಡ್ಡಪ್ಪನ ಮಗ ಬೊಮ್ಮಯ್ಯ ಹಿಂಬಾಲಿಸಿದ.

ಸಕಲ ಜೀವಾತ್ಮರ ಸೇವೆ

ಸಿದ್ದರಾಮನ ಆಶ್ರಮ ಸಾಧಕರ ಆಶ್ರಮವಾಯಿತು. ಅದರ ಕೀರ್ತಿ ಕಸ್ತೂರಿಯ ಕಂಪಿನಂತೆ ಸುತ್ತ ಹರಡತೊಡಗಿತು. ರಾಣಿ ಚಾಮಲದೇವಿ ಕನಸು ಕಂಡಳು. ಕನಸಿನಲ್ಲಿ ಸಿದ್ಧರಾಮನ ಸರ್ವೋದ್ಧಾರ ಕಾರ್ಯಕ್ಕೆ ಭೂಮಿಯನ್ನು ನೀಡಲು ಪ್ರೇರಣೆ ದೊರೆಯಿತು. ಸಿದ್ಧರಾಮನ ಆಶ್ರಮಕ್ಕೆಹೋಗಿ ಭೂದಾನವಿತ್ತಳಾಕೆ. ಆಶ್ವಾಸನವಿತ್ತಂತೆ ಮಂದಾರ ಮರದ ಕೆಳಗೆ ಶಿವಲಿಂಗವಾಗಿ ಮೂಡಿದ್ದ ಮಲ್ಲಯ್ಯ. ಅವನಿಗಾಗಿ ಶಿವಾಲಯವೊಂದನ್ನು ಕಟ್ಟುವ ಸದಿಚ್ಛೆ ಉದಿಸಿತು ಸಿದ್ದರಾಮನಲ್ಲಿ. ಬೊಮ್ಮಯ್ಯನಿಗೆ ಆ ಇಚ್ಛೆಯನ್ನು ತಿಳಿಸಲು, ಗಾಬರಿಗೊಂಡ ಬೊಮ್ಮಯ್ಯ. ಬರಿಗೈಯಿಂದ ಭವ್ಯ ದೇವಾಲಯವನ್ನು ಕಟ್ಟುವುದು ಹೇಗೆ?” ಎಂದು ಶಂಕಿಸಿದ. ಶಿವನ ಕಾರ್ಯಕ್ಕೆ ಶಿವನೇ ನೆರವಾಗುವನು ಎಂದು ಸಿದ್ಧರಾಮ ನಿರ್ಧಾರದಿಂದ ನುಡಿದ. ತಾನೇ ಗುದ್ದಲ್ಲಿ ಎತ್ತಿ ಮುಂದಾದ. ಅವನ ಎರಡು ಕೈಗಳಿಗೆ ಸಾವಿರ ಕೈಗಳು ಕೂಡಿದುವು. ಅಗೆತದಲ್ಲಿ ಹೊನ್ನಿನ ಕೊಪ್ಪರಿಗೆಯೂ ಕೈಸೇರಿತು. ನೋಡುವವರು ನೋಡುತ್ತಲೇ ನಿಂತರು; ಮಾಡುವವರು ಮಲ್ಲಯ್ಯನ ಗುಡಿಯನ್ನು ಕಟ್ಟಿ ನಿಲ್ಲಿಸಿದರು! ಭಕ್ತ ಜನಕ್ಕೆ ಭಾಗ್ಯದ ಬಾಗಿಲು ತೆರೆದಂತಾಯಿತು. ಸಾವಿರಸಾವಿರ ಸಂಖ್ಯೆಯಲ್ಲಿ ಭಕ್ತರು ಬರತೊಡಗಿದರು ಮಲ್ಲಿಕಾರ್ಜುನನ ದರ್ಶನಕ್ಕೆ. ಸುಗ್ಗವ್ವೆ ಮುದ್ದುಗೌಡರೂ ಬಂದು ದರ್ಶನ ಹೊಂದಿ ಧನ್ಯರಾಗಿ ಹೋದರು.

ದೇವಾಲಯವನ್ನು ಕಟ್ಟಿ, ಕೈಕಟ್ಟಿ ಕುಳಿತುಕೋಳಲಿಲ್ಲ ಸಿದ್ದರಾಮ.ಅವನ ಧ್ಯೇಯಕ್‌ಎ ಎರಡು ಮುಖಗಳು: ಮೊದಲನೆಯ ಮುಖ ಮಲ್ಲಿಕಾರ್ಜುನನ ಸಾಕಾರ ರೂಪದಲ್ಲಿ ನಿಷ್ಠೆ: ಎರಡನೆಯದು ಸರ್ವ ಜೀವಿಗಳಲ್ಲಿ ಅನುಕಂಪ. ಆದುದರಿಂದ ಮಲ್ಲಿಕಾರ್ಜುನನ ಪೂಜೆಗೆ ಜೊತೆಯ ಸಕಲ ಜೀವಾತ್ಮರ ಸೇವೆಯನ್ನೂ ಕೈಗೊಂಡನವನು. ಒಂದೇ ಸಲಕ್ಕೆ ಒಂದು ಸಾವಿರ ಬಡಜನರ ಮದುವೆ ಮಾಡಿಸಿದನು. ಬಿಲ್ಲೇಶಬೊಮ್ಮಯ್ಯನೆಂಬುವನು ತನ್ನ ದಾಯಾದಿಗಳ ಒಡವೆಗಳನ್ನು ಅಪಹರಿಸಿ ಸನ್ಯಾಸಿಯ ಸೋಗು ಹಾಕಿ, ಸಿದ್ಧರಾಮನ ಸನ್ನಿಧಿಯನ್ನು ಸೇರಿ, ದಾಯಾದಿಗಳು ಅಲ್ಲಿಗೇ ಅರಸಿಕೊಂಡು ಬರಲು ಅಲ್ಲಿಂದ ಕಣ್ಮರೆಯಾಗಲು, ಅವನ ದಾಯಾದಿಗಳಿಗೆ ಆ ಒಡವೆಗಳ ಬೆಲೆಯನ್ನು ತಾನು ಕೊಟ್ಟು, ತನ್ನ ಅಸೀಮವಾದ ಕರುಣಾಮಮತೆಯನ್ನು ಮೆರೆದನು. ಆಶ್ರಮದ ಹಸುಗಳಿಗೆ ತಾನೇ ಮೇವು ಹಾಕಿ ಸಾಕಿ, ಬೆಂಕಿಯಲ್ಲಿ ಸುಟ್ಟುಕೊಂಡು ಸತ್ತ ತಾಯಿಗಾಗಿ ಬೆಕ್ಕಿನ ಮರಿಗಳು ಗೋಳಿಡುತ್ತಿದ್ದುದನ್ನು ಕಂಡು ಕರುಳು ಕರಗಿ, ಆ ಸುಟ್ಟು ಸತ್ತ ತಾಯಿಗಾಗಿ ಬೆಕ್ಕಿನ ಮರಿಗಳು ಗೋಳಿಡುತ್ತಿದ್ದುದನ್ನು ಕಂಡು ಕರುಳು ಕರಗಿ, ಆ ಸುಟ್ಟು ಸತ್ತ ಬೆಕ್ಕಿಗೆ ಜೀವದಾನ ಮಾಡಿ ಸರ್ವಜೀವಿಗಳಲ್ಲಿ ತನ್ನ ದಯೆಯನ್ನು ತೋರಿದನು. ಬೊಮ್ಮಿ ಸೆಟ್ಟಿಯ ಸತಿ ಕಾಳವ್ವೆ ಪತಿಯಂತೆಯೇ ಭಕ್ತಳಾಗಿದ್ದು ಮನೆಯಲ್ಲಿ ಗಣಾರಾಧನೆ ಮಾಡಿದ ದಿನವೇ ಅವಳಿಗೆ ನಾಗರಹಾವು ಕಚ್ಚಲು ತೀರ್ಥವನ್ನು ಕಳಿಸಿ ವಿಷ ಇಳಿಸಿ ತನ್ನ ಭಕ್ತವಾತ್ಸಲ್ಯವನ್ನು ಬೀರಿದನು. ಕ್ಷುದ್ರ ಸಿದ್ಧರಿಗೆ ಗುರುವಾಗಿದ್ದ ವಿದ್ಯಾಸಮುದ್ರನು ಸಿದ್ಧರಾಮನನ್ನು ಸೋಲಿಸಲು ಬಂದು ತಾನೇ ಸೋಲಲು ಅವನನ್ನು ಕ್ಷಮಿಸಿ ಸನ್ಮಾರ್ಗ ತೋರಿಸಿ ತನ್ನ ಕಮಾಶೀಲತೆಯನು ಬೆಳಗಿದನು. ಹೀಗೆ ಬಳಿಗೆ ಬಂದವರನ್ನು ಭಕ್ತರನ್ನಾಗಿ ಮುಕ್ತಾತ್ಮರನ್ನಾಗಿ ಮಾಡುತ್ತ ಅವರ ತನುಮನಗಳ ಜಾಡ್ಯವನ್ನು ಕಳೆಯುತ್ತ, ಅವರ ದುಃಖಗಳನ್ನು ಪರಿಹರಿಸುತ್ತ, ಕ್ಲೇಶ-ಕಷ್ಟ-ಕಂಟಕಗಳನ್ನು ದೂರೀಕರಿಸುತ್ತ,ಅವರನ್ನು ದಿವ್ಯತೆಯ ದಾರಿಯ ದಾರಿಕಾರರನ್ನಾಗಿ ಮಾಡುತ್ತ ನಡೆದ ಸಿದ್ದರಾಮ.

ಒಮ್ಮೆ, ಮಡಿದ ಮಗನಿಗಾಗಿ ಗೋಗರೆಯುತ್ತ ತಾಯಿಯೊಬ್ಬಳು ಸಿದ್ಧರಾಮನ ಸನ್ನಿಧಿಗೆ ಅಳುತ್ತ ಬಂದಳು. ಅವಳ ಗಂಡ ತೀರಿಹೋದ ಒಂದು ವಾರದೊಳಗಾಗಿಯೇ ಇದ್ದೊಬ್ಬ ಮಗನೂ ಮಡಿದು ಹೋಗಿದ್ದ; ಅವಳಿಗೆ ಆಗ ಯಾರ ಅಶ್ರಯವೂ ಉಳಿದಿರಲಿಲ್ಲ. ಮರದ ಆಸರೆ ತಪ್ಪಿ ಬಿರುಗಾಳಿಗೆ ಸಿಕ್ಕಿದ್ದ ಬಳ್ಳಿಯಂತೆ ಆಗಿದ್ದಿತು ಅವಳ ಪಾಡು! ಸುಟ್ಟು ಸತ್ತ ಬೆಕ್ಕಿಗೆ ಪ್ರಾಣದಾನ ಮಾಡಿದಂತೆ ತನ್ನ ಮಗನಿಗೂ ಜೀವದಾನ ಮಾಡಬೇಕೆಂದು ಮೊರೆಹೊಕ್ಕಳು ಸಿದ್ಧನಲ್ಲಿ. ಸಿದ್ಧರಾಮನು ಆತಾಯಿಯನ್ನು ಸಂತೈಸಿದ ರೀತಿ ಅವನ ವ್ಯಕ್ತಿತ್ವದ ಎತ್ತರ, ಆತ್ಮದ ಬಿತ್ತರಗಳನ್ನು ಚಿತ್ರಿಸುತ್ತದೆ: “ತಾಯೆ. ಮಡಿದ ಗಂಡನಿಗಾಗಿ, ಮಗನಿಗಾಗಿ ನೀನು ಶೋಕಿಸುತ್ತಿರುವೆ ಏಕೆ! ಇನ್ನೂ ನಿನ್ನ ಮನದ ಮುಂದಣ ಆಸೆ ತೀರಿಲ್ಲ. ಅದು ತೀರುವಂತಹದೂ ಅಲ್ಲ. ಎಂದು ತೀರಬೇಕು ಅದು? ಇನ್ನೂ ಸಾವಿರ ವರ್ಷಗಳ ಆಯುಷ್ಯವನ್ನು ಕೊಟ್ಟರೂ ತೀರುವುದೇ ಅದು? ಒಮ್ಮಿಲ್ಲೊಮ್ಮೆ ಮನದ ಮುಂದಣ ಆಸೆ ಮುಗಿಯಲೇಬೇಕು ನೂರು ವರ್ಷಕ್ಕಾಗಲಿ, ಮೂರು ವರ್ಷಕ್ಕಾಗಲಿ ಮುಗಿಯಲೇಬೇಕು. ಅದು ಬೇಗ ಮುಗಿದಾಗ ಬಳಲಲೇಕೆ?” ಆ ತಾಯಿ ಅಳುತ್ತ ಬಂದವಳು ನೆಮ್ಮದಿ ತಾಳಿ ಧೈರ್ಯವಾಗಿ ಬಾಳಲು ನಿರ್ಧರಿಸಿದಳು. ಸಿದ್ಧರಾಮನ ಸರ್ವಜೀವ ದಯಾಪರತೆಗೆ ಮತ್ತೊಂದು ಮುಖ ಮೂಡಿತು. ಜನರಿಗೇ ಜಲ ಸೌಕರ್ಯ ಕಡಮೆಯಿದ್ದ ಅಲ್ಲಿ ಪಶು, ಪಕ್ಷಿ, ಕ್ರಿಮಿ ಕೀಟಾದಿ ಸಕಲ ಜೀವ ರಾಶಿಗಳ ಬಾಯಾರಿಕೆಯನ್ನೂ ಕಳೆವ ಕೆರೆಯೊಂದನ್ನು ಕಟ್ಟಿಸಲು ಮನಸ್ಸು ಮಾಡಿದ ಸಿದ್ಧರಾಮ. ಮತ್ತೆ ಗುದ್ದಲಿಯನ್ನು ಎತ್ತಿತು ಅವನ ಶ್ರೀಭುಜ. ಮತ್ತೆ ಸಾವಿರಾರು ಭುಜಗಳು ಹಾರೆಗುದ್ದಲಿಗಳನ್ನು ಹಿಡಿದು ಕೂಡಿ ದುಡಿಯಲು, ಕೂಡಿ ಪಡೆಯಲು ಸನ್ನದ್ಧವಾದುವು. ಸಾಮೂಹಿಕ ಶ್ರಮಯಜ್ಞ ಪ್ರಾರಂಭವಾಯಿತು. ಕೆರೆಯ ಕಾರ್ಯಭರದಿಂದ ಸಾಗಿತು.  ಊರ ಹೆಂಗಳೆಯರು ಕುಟ್ಟುತ್ತಾ ಬೀಸುತ್ತ ಹಾಡಿದರು.

“ಹಾದಿ ಹಾದಿಗೆ ಗುಡಿಯ ಬೀದಿ ಕೆರೆಯ
ಸಾಧಿಸಿದ ಕಟ್ಟಿ ಸಿದ್ಧರಾಮ ಸೊನ್ನಲಿಗೆ
ಸಾಧು ಸಿದ್ಧನಿಗೆ ಮನೆಯಾಯ್ತು!”
ಸೊನ್ನಲಿಗೆ ಸಾಧು ಸಿದ್ಧನಿಗಷ್ಟೇ ಮನೆಯಾಗಲಿಲ್ಲ.

ಶ್ರೀಶೈಲ ಮಲ್ಲಿಕಾರ್ಜುನನಿಗೂ ಮನೆಯಾಯಿತು, ಮಹಾಮನೆಯಾಯಿತು. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ ಅನುಕೂಲತೆಯಿಲ್ಲದ ಅಸಂಖ್ಯ ಶ್ರೀಸಾಮಾನ್ಯರಿಗಾಗಿ ಸೊನ್ನಲಿಗೆ ಅಭಿನವ ಶ್ರೀಶೈಲವಾಯಿತು.

’ಇತ್ತ ಕಡೆಗೂ ಲಕ್ಷ್ಯ ಕೊಡು’

ಹಮ್ಮು ಯಾರನ್ನೂ ಬಿಡುವುದಿಲ್ಲವೆಂದು ತೋರುತ್ತದೆ. ಎಂತೆಂಥ ಸಿದ್ಧಪುರುಷರನ್ನೂ ಅದು ಒಮ್ಮೆಯಾದರೂ ಆವರಿಸುತ್ತದೆ. ಮಲ್ಲಿಕಾರ್ಜುನನಿತ್ತ ಉರಿಗಣ್ಣು, ಕೈಗೊಂಡ ದೇವಾಲಯ ನಿರ್ಮಾಣ ಮತ್ತು ಕೆರೆ ಕಟ್ಟಿಸುವ ಕಾರ್ಯಗಳಲ್ಲಿ ದೊರೆತ ಯಶಸ್ಸು, ಪವಾಡಗಳನ್ನು ಮೆರೆದ ಹಿರಿಮೆ, ದಿನವೂ ಸಾವಿರಾರು ಜನರು ಬಂದು ಮಾಡುತ್ತಲಿದ್ದ ಸ್ತುತಿ, ನಿತ್ಯವೂ ನೂರಾರು ಹಳ್ಳಿಗಳಿಗೆ ಹರಡುತ್ತಲಿದ್ದ ಕೀರ್ತಿ-ಇವೆಲ್ಲ ಕರ್ಮಯೋಗಿ ಸಿದ್ಧರಾಮನಿಗೂ ಸಲ್ಲದ ಹಮ್ಮನ್ನು ಹುಟ್ಟಿಸಿರಬೇಕು.

ಸಾಧಕರೆಲ್ಲಿಯೇ ಇರಲಿ, ಅವರನ್ನು ಕಂಡು, ಅವರವರ ಅರಕೆಗಳನ್ನು ತೆರೆದು ತೋರಿಸಿ, ತಿದ್ದಿ ಸದ್ಭುದ್ಧಿಯನ್ನು ನೀಡಲೆಂದೇ ಹೊರಟಿದ್ದ ಅಲ್ಲಮಪ್ರಭು ಎಂಬ ಮಹಾಮಹಿಮ. ಸಿದ್ಧರಾಮನನ್ನು ತಿದ್ದುವುದು ಅಗತ್ಯವೆಂದು ತೋರಿತವನಿಗೆ. ಸೊನ್ನಲಿಗೆಗೆ ಹೋದ; “ಒಡ್ಡ ರಾಮಯ್ಯನೆಲ್ಲಿ?” ಎಂದು ಕೇಳಿದ. ಅವರು ರೇಗಿದರು. ಅವನನ್ನು ಹಿಡಿದು ಹೊಡೆಯಲೆಳಸಿದರು. ಆದರೆ ಬಯಲಿಗನೆನಿಸಿದ್ದ ಅಲ್ಲಮಪ್ರಭು ಅವರ ಕೈಗೆ ಸಿಕ್ಕಲಿಲ್ಲ. ಅವರಿಗೆ ಆಶ್ಚರ್ಯವಾಯಿತು. ಒಡೆಯನನ್ನು ಕರೆದರು. ಸಿದ್ಧರಾಮನು ಬಂದು ನಡೆದುದನ್ನು ಕೇಳಿ ಸಿಡಿದೆದ್ದ. ಉರಿಗಣ್ಣನ್ನು ತೆರೆದನಂತೆ. ಅದರಿಂದ ಹೊರಟ ಅಗ್ನಿ ಅಲ್ಲಮನ ಅಂಗುಷ್ಠವನ್ನು ಸೇರಿ ಶಾಂತವಾಯಿತಂತೆ.

ಸಿದ್ದರಾಮ ಬೆರಗಾದ. ಅದುವರೆಗೆ ಪರಾಭವವೆಂಬುದನ್ನು ಅವನು ಕಂಡಿರಲಿಲ್ಲ. ಅಂದು ಅದೆಂತಹ ಸೋಲನ್ನು ಅನುಭವಿಸಿದನವನು! ಎದುರಿಗಿರುವವನು ಅಸಾಮಾನ್ಯನೆಂಬುದು ಅವನಿಗೆ ಖಚಿತವಾಯಿತು. ಮಣಿದು ಮನ್ನಿಸುವುದೆ ಬಿನ್ನವಿಸಿಕೊಂಡ. ಅಲ್ಲಮ ನಗುತ್ತ ನುಡಿದ: “ಸಿದ್ದರಾಮಯ್ಯ, ನೀನು ಮನೆ ಬಿಟ್ಟು ಮಠ ಕಟ್ಟಿಕೊಂಡರೂ ಸಂಸಾರ ನಿನ್ನ ಬೆನ್ನು ಬಿಡಲಿಲ್ಲ; ಚಿಕ್ಕ ಸಂಸಾರವನ್ನು ಬಿಟ್ಟು ಈ ದೊಡ್ಡ ಸಂಸಾರವನ್ನು ಕಟ್ಟಿಕೊಂಡು ಅದರಲ್ಲಿಯೇ ಸಿಲುಕಿ ತೊಳಲುತ್ತಿರುವೆ. ಇದು ಸರಿಯಲ್ಲವೆಂದು ತೋರಲು ಬಂದೆ ನಾನು. ನನ್ನನ್ನು ಅಲ್ಲಮನೆಂದು ಕರೆಯುತ್ತಾರೆ.”

ಸಿದ್ದರಾಮ ಪೇಚಿನಲ್ಲಿ ಸಿಕ್ಕ. ತಾನು ಮಾಡುತ್ತಲಿದ್ದ ಪುಣ್ಯಕಾರ್ಯಗಳೂ ಕೇವಲ ಕರ್ಮ ಮಾತ್ರವೆ? ಜನ ಸೇವೆಯೂ ಸಂಸಾರವೆ? ದಾರಿ ಯಾವುದು ಹಾಗಾದರೆ? ತನ್ನ ಸಂದೇಹವನ್ನು ಅಲ್ಲಮನಿಗೆ ಅರುಹಿದ. ಅಲ್ಲಮ ಉತ್ತರವಿತ್ತ: “ನೀನು ಮಾಡುತ್ತಲಿರುವ ಲೋಕೋಪಕಾರಕ ಕಾರ್ಯಗಳು ತಪ್ಪೇನಲ್ಲ; ಆದರೆ ಅವುಗಳಲ್ಲಿಯೇ ಪೂರ್ಣಮಗ್ನನಾಗಿ ಅವುಗಳಿಗಿಂತಲೂ ಮೇಲಾದ ಅಂತರಂಗದ ಪ್ರಪಂಚವನ್ನು ಅಲಕ್ಷಿಸುವುದು ತಪ್ಪು. ಹೊರಗೆ ಕಲ್ಲು ಮಣ್ಣುಗಳಿಂದ ಕೆರೆ ಕಟ್ಟುವುದು ಎಷ್ಟು ಅಗತ್ಯವಾದುದೋ, ಅಷ್ಟೇ ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಕಟ್ಟಿ ಆಚಾರವೆಂಬ ಸೋಪಾನ ರಚಿಸಿ ಪರಮಾನಂದ ಜಲವ ತುಂಬುವುದೂ ಅಗತ್ಯವಾದುದು. ಅಂತೆಯೇ, ಹೊರಗೆ ಕಲ್ಲು ಗಾರೆಗಳಿಂದ ದೇವಾಲಯ ಕಟ್ಟುವುದಕ್ಕಿಂತಲೂ ದೇಹವೆಂಬ ದೇವಾಲಯವನ್ನೇ ಜೀವವೆಂಬ ದೇವನಿಗಾಗಿ ಸರಿಪಡಿಸಿ ಸಿಂಗರಿಸುವುದು ಹೆಚ್ಚು ಮಹತ್ವದ್ದು. ಇನ್ನು ಇತ್ತ ಕಡೆಗೂ ನೀನು ಲಕ್ಷ್ಯವೀಯಬೇಕೆಂಬುದನ್ನು ನಿನಗೆ ತಿಳಿಸಲೆಂದೇ ಬಂದೆ.”

ಕರ್ಮಯೋಗದಿಂದ ಶಿವಯೋಗಕ್ಕೆ

ಸಿದ್ಧರಾಮನಿಗೆ ಹೊಸ ಪ್ರಪಂಚವೊಂದು ತನ್ನ ಕಣ್ಣ ಮುಂದೆ ಕಂಗೊಳಿಸಿದ ಅನುಭವವಾಯಿತು. ಆ ಪ್ರಪಂಚದ ಪೂರ್ಣ ಪರಿಚಯ ಮಾಡಿಕೊಡಲು ಅಲ್ಲಮಪ್ರಭುವನ್ನು ಪ್ರಾರ್ಥಿಸಿಕೊಂಡ. ಅದಕ್ಕೆ ಪ್ರಭುದೇವ ಕಲ್ಯಾಣದ ಬಸವಣ್ಣನಿಂದಲೇ ಪರಿಚಯ ಮಾಡಿಕೊಳ್ಳುವುದೆಂದು ಸಲಹೆಯಿತ್ತ. ಇಬ್ಬರೂ ಸೊನ್ನಲಿಗೆಯಿಂದ ಕಲ್ಯಾಣಕ್ಕೆ ಹೊರಟರು.

ಬಸವಣ್ಣನ ಮಹಾಮನೆಯ ಅಂಗಳಕ್ಕೆ ಆಗಮಿಸಿದಾಗ ಸಿದ್ಧರಾಮ ಉದ್ಗರಿಸಿದ: “ನಿಮ್ಮ ಸಂಗನ ಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದರೆ ಮರ್ತ್ಯಲೋಕವೆಲ್ಲವು ಭಕ್ತಿ ಸಾಮ್ರಾಜ್ಯವಾಯಿತು! ಕಪಿಲ ಸಿದ್ಧ ಮಲ್ಲಿನಾಥಾ, ನಿಮ್ಮ ಶರಣಸಂಗನ ಬಸವಣ್ಣನ ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು!”

 

ಸಿದ್ದರಾಮ ಮತ್ತು ಅಲ್ಲಮಪ್ರಭು ಬಸವಣ್ಣನವರ ಬಳಿಗೆ ಬಂದರು.)

ಬಸವಣ್ಣ, ಚೆನ್ನಬಸವಣ್ಣನವರಿಗೆ, ಉಳಿದೆಲ್ಲ ಶಿವಶರಣರಿಗೆ ಪ್ರಭುದೇವರ ಮತ್ತು ಸಿದ್ದರಾಮಯ್ಯನ ಆಗಮನದಿಂದ ಮಾತಿನಲ್ಲಿ ಹೇಳಲಾಗದಷ್ಟು ಆನಂದವಾಯಿತು. ಅವರೊಡನೆ ಕೆಲವು ದಿನಗಳನ್ನು ಕಳೆಯುವಷ್ಟರಲ್ಲಿಯೇ ಸಿದ್ದರಾಮನ ಸಂದೇಹಗಳು ಒಂದೊಂದಾಗಿ ಮಾಯವಾಗಿದ್ದುವು. ಅನುಭವ ಮಂಟಪದ ಅರಿವಿನ, ಅನುಭವದ ಅಮೃತವನ್ನು ಉತ್ಪಾದಿಸುವ ಉದ್ಯಮದಲ್ಲಿ ಆತನೂ ಪಾಲ್ಗೊಂಡ. ಸುದೀರ್ಘ ಚರ್ಚೆಯಾದ ಮೇಲೆ ಇಷ್ಟ ಲಿಂಗೋಪಾಸನೆ ಅಗತ್ಯವಾದುದೆಂದು ಅವನಿಗೆ ಮನವರಿಕೆಯಾಯಿತು. ಚೆನ್ನಬಸವಣ್ಣ ಅವನಿಗೆ ಗುರುವಾಗಿ ಇಷ್ಟಲಿಂಗವನ್ನು ಅನುಗ್ರಹಿಸಿದ. ಸಿದ್ದರಾಮಯ್ಯ, ಕರ್ಮಯೋಗದಿಂದ ಶಿವಯೋಗಕ್ಕೆ ತಲುಪಿ ಶಿವಯೋಗದ ತುತ್ತತುದಿಯನ್ನೇರಿದ; ಶಿವಯೋಗ ಸಾರ್ವಭೌಮನಾದ.

ಶಿವಯೋಗದಿಂದ ವಚನಯಾಗಕ್ಕೆ

ಶಿವಯೋಗ ಸಾಧನೆಯೊಡನೆ ಹಿಂದೆ ಹೊರಗಿನ ಕೆರೆಯನ್ನು ಕಟ್ಟಿದುದಕ್ಕೆ ಪೂರಕವಾಗಿ ಒಳಗಿನ ಕೆರೆಯನ್ನೂ ಕಟ್ಟಿದ ಸಿದ್ದರಾಮ. ತನುವೆಂಬ ಏರಿಗೆ ಮನವೆಂಬ ಕಟ್ಟೆ ಸಿದ್ದವಾಯಿತು; ಆಚಾರವೆಂಬ ಸೋಪಾನವೂ ಸಿದ್ಧವಾಯಿತು; ಅದರಲ್ಲಿ ಪರಮಾನಂದ ಜಲವೂ ತುಂಬಿ ನಿಂತಿತು. ಎಂಥ ಪರಮಾನಂದ ಜಲವದು? ಹಿಂದೆ, ಕೆರೆ ಬಾವಿ ಹೂದೋಟ ಚೌಕ ಛತ್ರಂಗಳ ಮಾಡಿದಾಗ ಉಂಟಾಗಿದ್ದ ಲೋಕಾನುಭವ, ಈಗ ಶಿವಮೋಗ ಸಾಧನೆಯಿಂದ ದೊರೆತಿದ್ದ ಶಿವಾನುಭವ-ಎರಡೂ ಸೇರಿ ಹುಟ್ಟಿದ್ದ ಪರಮಾನಂದ ಜಲವದು. ಹಿಂದೆ ಕಟ್ಟಿದ್ದ ಹೊರಗಿನ ಕೆರೆಯ ನೀರನ್ನು ಕುಡಿದು ಕ್ರಿಮಿಕೀಟಾದಿ ಸರ್ವಜೀವಿಗಳೂ ಬಾಯಾರಿಕೆಯನ್ನು ಕಳೆದು ಕೊಳ್ಳುತ್ತಿರುವಂತೆ ಈ ಒಳಗಿನ ಕೆರೆಯ ಪರಮಾನಂದದ ನೀರನ್ನು ಕುಡಿದು ಜೀವಾತ್ಮರು ತಮ್ಮ ಅಂತರಂಗದ ಬಾಯಾರಿಕೆಯನ್ನು ಕಳೆದುಕೊಳ್ಳುವಂತಾಗಬೇಕೆಂಬ ಸದಿಚ್ಛೆ ಉದಿಸಿರಬೇಕು ಸಿದ್ಧರಾಮನಿಗೆ. ಅನುಭವ ಮಂಟಪದ ಕಮ್ಮಟದಲ್ಲಿ ನಿತ್ಯ ವಚನ ನಾಣ್ಯಗಳು ಸಿದ್ಧವಾಗಿ ಹೊರಬೀಳುತ್ತಲಿದ್ದಾಗ ಸಿದ್ದರಾಮನೂ ಸಹಸ್ರಾವಧಿ ವಚನಗಳನ್ನು ಉಸುರಿದ. ಆದರೆ ವಚನವು ರಚನೆಯಲ್ಲ, ಅದು ಮಾತಿಗೆ ಮೀರಿದುದನ್ನು ಮಾತಿನಲ್ಲಿ ಅಡಗಿಸುವ ದಿವ್ಯ ಕಲೆಯೆಂಬುದನ್ನವನು ಅರಿತಿದ್ದ.

ವಾಕ್ಯ ಮಾಣಿಕ್ಯಗಳು

ಅವನ ಜೀವನದ ಘಟನೆಗಳಲ್ಲಿ ಒಡಮೂಡಿರುವ್ ಅವನ ವ್ಯಕ್ತಿತ್ವಕ್ಕಿಂತ ನೂರ್ಮಡಿ ಉಜ್ವಲವಾದ ವ್ಯಕ್ತಿತ್ವ ಅವನ ವಚನಗಳಲ್ಲಿ ಪಡಿಮೂಡಿದೆ-ಇಲ್ಲಿ ನೋಡಿ:

’ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ ಮತ್ತಾರ ಹಿತಕ್ಕಲ್ಲ ನೋಡಯ್ಯ;
ನೋಡಿದರು ನೋಡಿದರು ತಮ್ಮ ಹಿತಕ್ಕಲ್ಲದೆ

ಮತ್ತಾರ ಹಿತಕ್ಕಲ್ಲ ನೋಡಯ್ಯ,
ತನ್ನ ಬಿಟ್ಟನ್ಯಹಿತವ ನೋಡಿದರೆ ಕೂಡಿಕೊಂಬ ಕಪಿಲಸಿದ್ಧ ಮಲ್ಲಯ್ಯನವರ,

’ಒಬ್ಬರ ಮನವ ನೋಯಿಸಿ, ಒಬ್ಬರ ಮನೆಯ ಘಾತವ ಮಾಡಿ,
ಗಂಗೆಯ ಮುಳುಗಿದರೇನಾಗುವುದಯ್ಯಾ?

ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು-ಕಲಂಕ ಬಿಡದಾಯಿತ್ತಯ್ಯ!
ಅದು ಕಾರಣ, ಮನವ ನೋಯಿಸದವನೆ, ಒಬ್ಬರ ಘಾತವ ಮಾಡದವನೆ ಪರಮಪಾವನ!’

ಆರೇನೆಂದರೂ ಓರಂತಿಪ್ಪುದೇ ಸಮತೆ; ಆರು ಜರೆದರೂ ಅವರೆನ್ನ ಮನದ
ಕಾಳಿಕೆಯ ಕಳೆದರೆಂಬುದೇ ಸಮತೆ; ಆರು ಸ್ತೋತ್ರ ಮಾಡಿದರೂ ಅವರೆನ್ನ ಜನ್ಮದ
ಹಗೆಗಳೆಂಬುದೇ ಸಮತೆ;…..ಮನವಚನ ಕಾಯದಲ್ಲಿ

ಅಹಿತವಿಲ್ಲದೆ ಕಪಿಲಸಿದ್ದ ಮಲ್ಲಿಕಾರ್ಜುನಯ್ಯ

ನಿಮ್ಮವರ ನೀವೆಂಬುದೇ ಸಮತೆ’.

ಇಂಥ ರತ್ನದಂಥ ವಚನಗಳಿರಲಿ,ಅವುಗಳಲಿ ಮಿನುಗುವ ವಾಕ್ಯ ಮಾಣಿಕ್ಯಗಳನ್ನು ನೆನಪಿಟ್ಟರೂ ಸಾಕು ಜೀವನ ಪಾವನವಾಗುತ್ತದೆ.

“ಯೋಗಿಗೆ ಕೋಪವೇ ಮಾಯೆ, ರೋಗಿಗೆ
ಅಪಥ್ಯವೇ ಮಾಯೆ, ಜ್ಞಾನಿಗೆ ಮಿಥ್ಯವೇ ಮಾಯೆ.
ಅರಿದೆನೆಂಬುವಂಗೆ ನಾನು ನೀನು ಎಂಬುದೇ ಮಾಯೆ”

“ನಿಮ್ಮವರ ನೋವೆ ಎನ್ನ ನೋವು ನೋಡಾ”

“ಶುಭಕ್ಕೆ ವಿಘ್ನವಲ್ಲದೆ ಅಶುಭಕ್ಕೆ ವಿಘ್ನವೆ?”

“ಸುಗಂಧದೆಣ್ಣೆಯ ನೀರಡಿಕೆಗೆ ಕುಡಿಯಬಹುದೆ?
ಬಂಗಾರದ ಸಲಾಕೆ ಎದೆಯಲ್ಲಿ ಒತ್ತಬಹುದೆ”

“ಮನಸ್ಸಿನ ಕಲ್ಮಷವಳಿದುದೆ ಮಹಾಸ್ನಾನ”

ಅವನ ಎಲ್ಲ ವಚನಗಳ ಸಾರಸರ್ವಸ್ವವನ್ನು ಅವನೇ ಒಂದೆಡೆಗೆ ಹೀಗೆ ಹಿಡಿದಿಟ್ಟಿದ್ದಾನೆ:

“ಅರುವತ್ತೆಂಟು ಸಹಸ್ರ ವಚನಗಳ ಹಾಡಿ ಹಾಡಿ
ಸೋತಿತೆನ್ನ ಮನ ನೋಡಯ್ಯಾ!

ಹಾಡುವುದೊಂದೆ ವಚನ,ನೋಡುವುದೊಂದೆ ವಚನ:
ವಿಷಯ ಬಿಟ್ಟು ನಿರ್ವಿಷಯವಾಗುವುದೊಂದೇ ವಚನ!”

ಒಟ್ಟಿನಲ್ಲಿ ಅತಿಶ್ರೇಷ್ಠ ವಚನಕಾರರಲ್ಲಿ ಒಬ್ಬ ಸಿದ್ಧರಾಮ. ವಚನಗಳಲ್ಲದೆ ಬಸವಸ್ತೋತ್ರ, ತ್ರಿವಧಿ ಮಿಶ್ರಸ್ತೋತ್ರ, ತ್ರಿವಿಧ, ಅಷ್ಟಾವರಣ ಸ್ತೋತ್ರ ತ್ರಿವಿಧಿಗಳನ್ನೂ ಅವನು ರಚಿಸಿದ್ದಾನೆ.ಅಧ್ಯಾತ್ಮಲೋಕದಲ್ಲಿ ಅಮರನಾಗಿರುವಂತೆ ಸಾಹಿತ್ಯ ಪ್ರಪಂಚದಲ್ಲಿಯೂ ಅಜರನಾಗಿದ್ದಾನೆ.

ಮತ್ತೆ ಸೊನ್ನಲಿಗೆಗೆಲಿಂಗ ಸಮಾಧಿಗೆ

ಸೊನ್ನಲಿಗೆಯ ಸೆಳೆತ, ಕೇದಾರ ಗುರು-ಬೊಮ್ಮಯ್ಯ ಹಾವಿನಹಾಳ ಕಲ್ಲಯ್ಯ ಮೊದಲಾದ ಶಿಷ್ಯರ ಭಕ್ತಿಯ ಎಳೆತ ಬಲವಾಗಿರಬೇಕು. ಬಸವಾದಿ ಪ್ರಥಮರು ಬಿಡುವ ಮೊದಲೇ ಕಲ್ಯಾಣವನ್ನು ಬಿಟ್ಟು ಸೊನ್ನಲಿಗೆಗೆ ಹಿಂದಿರುಗಿರುವಂತಿದೆ ಸಿದ್ದರಾಮ; ಅಲ್ಲಿ ಮತ್ತೆ ಮಾನವೋದ್ಧರಣ ಕಾರ್ಯಗಳನ್ನು ಮುಂದುವರಿಸಿದಂತಿದೆ. ಬಿಜ್ಜಳನ ತಮ್ಮ ಕರ್ಣದೇವ ತನಗೆ ಪಟ್ಟಗಟ್ಟಲು ಸಿದ್ದರಾಮೇಶ್ವರರೇ ಬರಬೇಕೆಂದು ಕೋರಿ ಮೊದಲು ಪರಿವಾರದವರನ್ನೂ, ಅನಂತರ ಸೊಡ್ಡಳ ಬಾಚರಸರನ್ನೂ ಕಳಿಸಿದನಂತೆ; ಶಿವಯೋಗೀಶ್ವರ ಸಿದ್ಧರಾಮೇರ್ಶವರರು ಹೋಗಲಿಲ್ಲವಂತೆ. ಶೂನ್ಯಸಿಂಹಾಸನಕ್ಕೆ ಅವರು ಮೂರನೆಯ ಜಗದ್ಗುರುಗಳಾದರಂತೆ.

ಅಂತೂ ಕೊನೆಯವರೆಗೂ ಮಹಿಮಾಶಾಲಿಯಾಗಿಯೇ ಬಾಳಿದ ಆ ಮಹಾ ಶಿವಯೋಗಿ ಲಿಂಗಸಮಾಧಿ ಯನ್ನುಪ್ರವೇಶಿಸುವ ಮೊದಲೂ ಮಹಿಮೆಯನ್ನು ಮೆರೆದ. ಶಿಷ್ಯರೆಲ್ಲರನ್ನೂ ಕರೆದ. ತಾನು ಸಮಾಧಿಸ್ಥನಾಗುವ ವಿಷಯವನ್ನು ಒರೆದ. ಶಿಷ್ಯರು ಶೋಕವಿಹ್ವಲರಾಗಲು ಅವರನ್ನು ಸಂತೈಸಿದ-ನೆನೆದವರ ಮನದಲ್ಲಿರುವ ತಾನು ಸದೇಹವಾಗಿದ್ದರೇನು, ಸಮಾಧಿಯಲ್ಲಿದ್ದರೇನು-ಎಲ್ಲಾ ಒಂದೇ ಎಂದು ತಿಳಿಸಿಹೇಳಿದ. ಅವನಿಗಾಗಿ ಸಮಾಧಿ ಸಿದ್ದವಾಯಿತು. ಸಮಾಧಿಯನ್ನು ಸಿದ್ದರಾಮ ಪ್ರವೇಶಿಸುವ ದಿನ ನಿಶ್ಚಯವಾಯಿತು. ಅವನ ಕೊನೆಯ ದರ್ಶನ ಪಡೆಯಲು ಕರ್ನಾಟಕದ ಒಳಗಿನಿಂದಲೂ ಹೊರಗಿನಿಂದಲೂ ಲೆಕ್ಕವಿಲ್ಲದಷ್ಟು ಭಕ್ತರು ಬಂದರು. ಅವರೆಲ್ಲರಿಗೆ ಶುಭವನ್ನು ಕೋರಿದ ಸಿದ್ದರಾಮ, ಶರಣ ಧರ್ಮದ ಸಾರವನ್ನು ಬೀರದಿ; ಅವರ ಜಯಕಾರ ಧ್ವನಿ ಬಾನಿಗೇರುತ್ತಿರಲು ಲಿಂಗಸಮಾಧಿಯನ್ನು ಸೇರಿದ!

ಇಂದಿಗೂ ಅಸಂಖ್ಯಾತರಿಂದ ಅವನಿಗೆ ಪೂಜೆ ಪ್ರಾರ್ಥನೆ ಸಲ್ಲುತ್ತಿವೆ-ನಿತ್ಯವೂ ಅವನ ಗುಡಿಯಲ್ಲಿ. ಅದಕ್ಕಿಂತ ಹೆಚ್ಚಾಗಿ ಕನ್ನಡನಾಡಿನ ಲಕ್ಷಲಕ್ಷ ಮನೆಗಳಲ್ಲಿ ಅವನ ವಚನಗಳನ್ನು ಓದುವ, ಅವನ ಸ್ತೋತ್ರಗಳನ್ನು ಪಠಿಸುವ, ಅವನ ಚರಿತ್ರೆಯನ್ನು ವಾಸಿಸುವ, ಅವನ ಕೀರ್ತಿಯನ್ನು ಕೇಳುವ ಅಗಣಿತ ಆಸ್ತಿಕರಿಂದ ಅವನಿಗೆ ಶರಣಧರ್ಮದ ದಿವ್ಯಜ್ಯೋತಿ ಮಾತ್ರವಲ್ಲ, ಕನ್ನಡ ಕುಲದೀಪಕರಲ್ಲಿ, ಭಾರತದ ಮಹಾವಿಭೂತಿಗಳಲ್ಲಿ ಒಬ್ಬ.