ಸಿನಿಮಾ ಬಗ್ಗೆ ಮಾತನಾಡುವಾಗ ಅದು ಅತ್ಯಂತ ಪ್ರಭಾವಶಾಲೀ ಜನಪ್ರಿಯ ಸಮೂಹಮಾಧ್ಯಮ; ಆದ್ದರಿಂದ ಅದನ್ನು ಎಚ್ಚರಿಕೆಯಿಂದ ಬಳಸಬೇಕು ಎಂಬ ಅಭಿಪ್ರಾಯ ಸರ್ವೇಸಾಧಾರಣವಾಗಿ ಕೇಳಿಬರುತ್ತದೆ. ಒಂದುಕಡೆ ಸಿನಿಮಾ ಎನ್ನುವುದೇ ಒಂದು ವಿಶಿಷ್ಟಭಾಷೆ; ಅದಕ್ಕೆ ತನ್ನದೇ ಆದ ವ್ಯಾಕರಣವೊಂದಿದೆ; ಅದರಲ್ಲಿ ಮೂರ್ತಗೊಳ್ಳುವ ಕೃತಿಗಳಿಗೆ ಸಮಗ್ರವಾದ, ಸಂಕೀರ್ಣವಾದ ಮೀಮಾಂಸೆಯೂ ಇದೆ ಎಂದು ಅರಿಯದ ಪ್ರೇಕ್ಷಕರಿದ್ದಾರೆ. ಮತ್ತೊಂದೆಡೆ ಈ ಅಂಶಗಳನ್ನು ಗೌಣವಾಗಿಸಿ, ಸಿನಿಮಾವನ್ನು ಗ್ರಾಹಕರ ಅಪೇಕ್ಷೆಗನುಗುಣವಾಗಿ ತಯಾರಿಸಿದ ಔದ್ಯಮಿಕ ಸರಕೆಂದು ನಂಬುವ ಬಂಡವಾಳಗಾರರು, ತಯಾರಕರು, ತಂತ್ರಜ್ಞರು, ವಿತರಕರು, ಮತ್ತು ಪ್ರದರ್ಶಕರು ಇದ್ದಾರೆ. ಸಿನಿಮಾವನ್ನು ತಮ್ಮ ವೃತ್ತಿಯಾಗಿಸಿಕೊಂಡಿರುವ ನಿರ್ದೇಶಕರು ಮತ್ತು ಕಲಾವಿದರೆನಿಸಿಕೊಂಡ ಜನ ಈ ಎರಡು ಧ್ರುವಗಳ ಮಧ್ಯದ ಕೊಂಡಿಯಂತಿದ್ದಾರೆ. ಈ ಇಡೀ ವ್ಯವಸ್ಥೆಯನ್ನು ಆಳುವವರ್ಗವು, ಸರ್ಕಾರದ ಮುಖೇನ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ, ಮುನ್ನೊತ್ತುವ, ರಾಜಕೀಯ- ನೈತಿಕತೆ ಮತ್ತು ಸಾಮಾಜಿಕ ನ್ಯಾಯಗಳನ್ನು ಆಧರಿಸಿದ ನಿಯಂತ್ರಣಕ್ಕೆ ಒಳಪಡಿಸುತ್ತದೆ. ಸಿನಿಮಾ ಕುರಿತು ಮಾತನಾಡುವಾಗ ಇದೆಲ್ಲವನ್ನೂ ಪರಿಗಣಿಸಬೇಕು.

ಬಿಂಬಸರಣಿ ತೆರೆಯ ಮೇಲೆ ಮೂಡಿಸುವ ಮಾಯಾಲೋಕ

ಸಿನಿಮಾಕ್ಕೆ ಉಳಿದೆಲ್ಲ ಕಲಾಮಾಧ್ಯಮಗಳಿಗೆ ಇರುವುದಕ್ಕಿಂತ ಭಿನ್ನವಾದ ಶಕ್ತಿ, ಸೌಲಭ್ಯಗಳಿವೆ. ವ್ಯಕ್ತಿಮಟ್ಟದಲ್ಲಿನ ಹಗಲುಗನಸುಗಳು ಸಿನಿಮಾದಲ್ಲಿ ಸಮುದಾಯದ ಕನಸುಗಳಾಗಿ ಬಿಂಬಿತವಾಗುತ್ತವೆ. ಎಚ್ಚರದಿಂದ ಆಯ್ದುಜೋಡಿಸಿದ ಸ್ಥಿರ ಛಾಯಾಚಿತ್ರಗಳು ಮನುಷ್ಯನ ಮೆದುಳಿನ ಸ್ಮರಣನಿರಂತರತೆಯಿಂದಾಗಿ ಚಲಿಸುವ ಚಿತ್ರಗಳಾಗಿ ಸಿನಿಮಾದ ಬಿಂಬಸರಣಿ ಏರ್ಪಡುತ್ತದೆ. ಉತ್ಪ್ರೇಕ್ಷೆ, ಭವ್ಯತೆ, ನಾಟಕೀಕರಣ, ಶಬ್ದ, ಬಣ್ಣ, ಸಂಗೀತ-ನೃತ್ಯ-ಸಾಹಿತ್ಯಗಳ ಸಂಮಿಳಿತ ಮತ್ತು ಬಿಡಿ ಆಯಾಮಗಳ ಸಂಕೀರ್ಣಭಾಷೆಯಲ್ಲಿ ತೆರೆಯಮೇಲೆ ಮೈದಾಳುವ ಸಿನಿಮಾದ ಮಾಂತ್ರಿಕಲೋಕಕ್ಕೆ ಸರಿಸಾಟಿಯೇ ಇಲ್ಲ. ತನ್ನ ಕಾಲ-ದೇಶಗಳನ್ನು ಬೇಕಾದಂತೆ ಜೋಡಿಸಿಕೊಳ್ಳುವ, ಹಿಗ್ಗಿಸುವ, ಕುಗ್ಗಿಸುವ, ಮೀರುವ ಸೌಲಭ್ಯ ಸಿನಿಮಾಕ್ಕಿರುವಷ್ಟು ಬೇರಾವ ಕಲಾಪ್ರಕಾರಗಳಿಗೂ ಇಲ್ಲ. ಎಂಥವರನ್ನೂ ಶಿಶುಸಹಜ ಕಲ್ಪನಾಪ್ರಪಂಚಕ್ಕೆ ಕೊಂಡೊಯ್ದು, ಬೇಕಾದಂತೆ ನಿಯಂತ್ರಿಸಬಲ್ಲ ಶಕ್ತಿ ಸಿನಿಮಾಕ್ಕೆ ಇರುವುದು ಅದರ ವಿಶೇಷತೆ. ಅಷ್ಟೇ ಅಲ್ಲ, ಎಂಥ ಗಹನ ತಾತ್ವಿಕ ಚಿಂತನೆ-ಅನ್ವೇಷಣೆಯನ್ನು ಬೇಕಾದರೂ ಮೂರ್ತೀಕರಿಸಬಲ್ಲ ಶಕ್ತಿ ಸಿನಿಮಾ-ಭಾಷೆಗಿದೆ. ಸೂಕ್ಷ್ಮಜ್ಞರಾದ ಕಲಾಕಾರರಿಗೆ ಸೂಕ್ಷ್ಮಜ್ಞರಾದ ಸಹೃದಯರನ್ನು ತಲುಪಲು ಹೇಳಿ ಮಾಡಿಸಿದ ನಯಗಾರಿಕೆಯ ಸಂವಹನ ಮತ್ತು ಕಲಾಮಾಧ್ಯಮ, ಹಗಲುಗನಸಿನ ಅತ್ಯಾಕರ್ಷಣೆಯ ಸರಕು ಸಿನಿಮಾ.

ಮನರಂಜನೆಯ ವ್ಯಾಪಾರಿಗಳ ಕೈಗೆ ಸಿಕ್ಕ ಸಿನಿಮಾ ಅಷ್ಟೇ ಒರಟು. ಹಾಡು, ಕುಣಿತ, ಶೃಂಗಾರ, ಹೊಡೆದಾಟ, ಅತ್ಯಾಚಾರಗಳ ವೈಭವೀಕೃತ ಮಿಶ್ರಣ. ಮನರಂಜನೆ ಮಾತ್ರ ಸಾಕೆನ್ನುವ ಪ್ರೇಕ್ಷಕನ ಕನಿಷ್ಠ ಅಗತ್ಯಗಳನ್ನು ವ್ಯಾಕರಣ-ಮೀಮಾಂಸೆಗಳ ಪರಿಣತಿಯ ಯಾವ ಪೂರ್ವಾಗತ್ಯಗಳೂ ಇಲ್ಲದೆ ಪೂರೈಸಬಲ್ಲ ಸುಲಭ ಸರಕು ವ್ಯಾಪಾರೀ ಸಿನಿಮಾ.

ಆದ್ದರಿಂದಲೇ ಸಿನಿಮಾ ಬಗ್ಗೆ ಸಗಟು ರೀತಿಯಲ್ಲಿ ಮಾತನಾಡುವುದು ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತದೆ. ಅಕ್ಷರ ಮಾಧ್ಯಮದಲ್ಲಿ ದಾಖಲಾದ ಎಲ್ಲ ಬಗೆಯ ಲೇಖನಸಾಮಗ್ರಿಯನ್ನೂ ಒಟ್ಟಾರೆ ಸಾಹಿತ್ಯವೆಂದು ಕರೆಯುವಂತೆ, ತೆರೆಯಮೇಲೆ ಬಿಂಬಿತವಾಗಬಹುದಾದ ಎಲ್ಲವನ್ನೂ ಸಾರಾಸಗಟಾಗಿ ಸಿನಿಮಾ ಎಂದು ಕರೆಯುವುದು ಜನರಲ್ಲಿ ವಾಡಿಕೆಯಾಗಿದೆ. ಆದರೆ ಕಥೆಯನ್ನಾಧರಿಸಿದ, ಘಟನಾಪ್ರಧಾನ ನಿರೂಪಣೆಯ ಚಲನಚಿತ್ರಗಳನ್ನು ಮಾತ್ರ ಸಿನಿಮಾ ಎಂದು ಗುರುತಿಸುವ ನಿರ್ದಿಷ್ಟತೆಯು ವರ್ತಮಾನದ ಮನರಂಜನೆಯ ವ್ಯವಹಾರದಲ್ಲಿ ಚಾಲ್ತಿಯಲ್ಲಿದೆ. ಹೀಗಾಗಿ ಕಥಾಚಿತ್ರಗಳಿಗೆ ಚಿತ್ರಮಂದಿರಗಳು ಇರುವಂತೆ ಅಧಿಕೃತವಾದ ಪ್ರದರ್ಶನ ಸೌಲಭ್ಯಗಳು ಕಿರುಚಿತ್ರ, ಡಾಕ್ಯುಮೆಂಟರಿ, ವಿಡಿಯೋಚಿತ್ರ ಮುಂತಾದ ಸಿನಿಮಾಪ್ರಕಾರಗಳಿಗೆ ಇಲ್ಲ.

ಸಿನಿಮಾ ನೋಡಲು ದೃಷ್ಟಿಬಲ ಸಾಕೆ

ಅಕ್ಷರಸಾಹಿತ್ಯದಲ್ಲಿ ಮಾಹಿತಿಸಾಹಿತ್ಯ, ಮನರಂಜನಾಸಾಹಿತ್ಯ ಮತ್ತು ಕಲಾತ್ಮಕಸಾಹಿತ್ಯ ಇರುವಂತೆ ಸಿನಿಮಾದಲ್ಲೂ ಬಗೆಬಗೆಯ ಸಿನಿಮಾ ಇದೆ.  ಅಕ್ಷರಸ್ಥರಾದ ಎಲ್ಲರಿಗೂ ಭಾಷೆಯ ವ್ಯಾಕರಣ-ಮೀಮಾಂಸೆ, ಅವುಗಳ ಸೂಕ್ಷ್ಮತೆಗಳು ಸಾಹಿತ್ಯಿಕವಾಗಿ ಗೊತ್ತಿರಬೇಕೆಂದೇನೂ ಇಲ್ಲ. ಅವಿಲ್ಲದೆಯೂ ಅವರ ಭಾವನಾತ್ಮಕ ಅಗತ್ಯಗಳನ್ನು ಪೂರೈಸಬಲ್ಲಂಥ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ಶಕ್ತಿ, ಓದುಗನಿಗೆ ಇದ್ದೇ ಇರುತ್ತದೆ. ಅವನ/ಅವಳ ಲೋಕಾನುಭವ ಮತ್ತು ಭಾಷೆಯಲ್ಲೇ ಅಂತರ್ಗತವಾಗಿರುವ ಅನೇಕ ಅಂಶಗಳಿಂದಾಗಿ ಅದು ಪ್ರಾಪ್ತವಾಗುತ್ತದೆ. ಆದರೆ ಕಲಾತ್ಮಕ ಕೃತಿಗಳ ಸೂಕ್ಷ್ಮತೆಗಳು ಮತ್ತು ಕೃತಿಯ ಒಟ್ಟು ಅನುಭವವು ಅದರ ಎಲ್ಲ ಆಯಾಮಗಳೊಂದಿಗೆ ಅಕ್ಷರಸ್ಥರನ್ನು ತಲುಪಲು ವ್ಯಾಕರಣ ಮತ್ತು ಮೀಮಾಂಸೆಯ ಜ್ಞಾನ ಅತ್ಯಗತ್ಯ. ಹಾಗೆಯೇ ಸಿನಿಮಾ ನೋಡುವ ಎಲ್ಲರಿಗೂ ಸಿನಿಮಾಭಾಷೆಯ ವ್ಯಾಕರಣ-ಮೀಮಾಂಸೆಗಳು ಗೊತ್ತಿರಬೇಕಾದ್ದಿಲ್ಲ. ಎಷ್ಟೋಸಲ ಸಿನಿಮಾ ಮಾಡುವವರಿಗೂ ಅವು ತಿಳಿದಿರುವುದಿಲ್ಲ. ಅಥವ ಅವುಗಳ ಸೂಕ್ಷ್ಮತೆಗಳು ಅವರಿಗೆ ದಕ್ಕಿರುವುದಿಲ್ಲ. ಗೊತ್ತಿದ್ದರೂ, ಸೃಜನಾತ್ಮಕತೆಯ ಕೊರತೆ ಮತ್ತು ವ್ಯಾವಹಾರಿಕ ಇಕ್ಕಟ್ಟುಗಳಿಂದ ಅಂಥವರು ಮಾಡುವ ಸಿನಿಮಾ ಬಾಧಿತವಾಗಿರುತ್ತದೆ. ಅವಿಲ್ಲದೆಯೂ, ಪ್ರೇಕ್ಷಕನ ಲೋಕಾನುಭವ ಮತ್ತು ಮೌಲ್ಯದೃಷ್ಟಿಗಳು ಮನರಂಜನೆಯಂಥ ಕನಿಷ್ಠ, ಸೀಮಿತ ಉದ್ದೇಶಗಳಿಗಾಗಿ ಮಾಡುವ ಸಿನಿಮಾಗಳನ್ನು ಸ್ವೀಕರಿಸಲು ಅಥವ ತಿರಸ್ಕರಿಸಲು ಸಾಕಾಗುತ್ತವೆ. ಆದ್ದರಿಂದಲೇ, ಸಿನಿಮಾದ ಬಗ್ಗೆ ಸಗಟುರೀತಿಯಲ್ಲಿ ಮಾತನಾಡುವುದಾಗಲೀ, ಪ್ರೇಕ್ಷಕನ ಅಭಿರುಚಿಯನ್ನು ಸಾರಾಸಗಟಾಗಿ ಒಪ್ಪುವುದಾಗಲೀ, ತಿರಸ್ಕರಿಸುವುದಾಗಲೀ ಸರಿಯಾದ ಕ್ರಮವಲ್ಲ.

ಎಲ್ಲ ಬಗೆಯ ಸಿನಿಮಾ ಎಲ್ಲರಿಗೂ ಅಲ್ಲ.

ಕಲಾತ್ಮಕ ಅನ್ವೇಷಣೆ-ಅಭಿವ್ಯಕ್ತಿಯಾಗಿ ರೂಪುಗೊಳ್ಳುವ ಸಿನಿಮಾ, ಅದರ ವ್ಯಾಕರಣ-ಮೀಮಾಂಸೆಯ ಕನಿಷ್ಠ ಜ್ಞಾನವಾದರೂ ನೋಡುಗರಲ್ಲಿ ಇಲ್ಲದೆ, ಅದು ಅವರಿಗೆ ದಕ್ಕುವುದಿಲ್ಲ. ಅದಿಲ್ಲದೆಯೇ ಸಿನಿಮಾ ಎಲ್ಲರಿಗೂ ಅರ್ಥವಾಗುವಂತೆ ಇರಬೇಕೆಂದು ಆಗ್ರಹಿಸುವ ಜನರು  ಮೇಲುನೋಟಕ್ಕೆ ಸಾಮಾನ್ಯಪ್ರೇಕ್ಷಕರ ಹಿತಚಿಂತಕರಂತೆ ತೋರುತ್ತಾರೆ. ಸಿನಿಮಾಭಾಷೆಯ ಪರಿಚಯವಿಲ್ಲದ ಅವರ ಗ್ರಹಿಕೆಯಲ್ಲಿ ಜನಸಾಮಾನ್ಯರು ಎಂದರೆ ಸಂವೇದನಾಶೀಲತೆಗೆ ಹೊರತಾದವರು, ಅನನುಭವಿಗಳು ಅಥವ ದಡ್ಡರು. ಆದರೆ ವಾಸ್ತವವಾಗಿ ಜನಸಾಮಾನ್ಯರು ಹಾಗಿರಬೇಕು ಎಂದೇನಿಲ್ಲ. ಅಸಾಧಾರಣ ಗ್ರಹಿಕೆ, ಒಳನೋಟಗಳನ್ನು ಹೊಂದಿದ್ದೂ, ಅವರಿಗೆ ಸಿನಿಮಾದ ವ್ಯಾಕರಣ-ಮೀಮಾಂಸೆಯ ಪರಿಚಯ ಇಲ್ಲದ್ದರಿಂದ ಅವರು ಪ್ರತಿಕ್ರಿಯಿಸುವ ರೀತಿ ಭಿನ್ನವಾಗಿರಬಹುದು ಅಷ್ಟೆ. ಹೀಗೆ ಜನಸಾಮಾನ್ಯರ ಅಭಿರುಚಿಯ ಬಗ್ಗೆ ಕೃಪಾಪೋಷಣೆಯ ತಪ್ಪುಧೋರಣೆಯನ್ನು ಹೊಂದಿದ್ದು, ಅವರ ಪರವಾಗಿ ವಾದಿಸುವವರು ಒಂದೆಡೆ ಇದ್ದರೆ, ಸಿನಿಮಾದ ಹೆಸರಿನಲ್ಲಿ ಪ್ರದರ್ಶನಗೊಳ್ಳುವ ಎಲ್ಲವೂ ಕಲಾತ್ಮಕ ಸೃಷ್ಟಿಯಾಗಿರಬೇಕೆಂದು ಆಗ್ರಹಿಸುವ, ಹಾಗಿಲ್ಲದ ಸಿನಿಮಾಗಳನ್ನು ನೋಡಿದಾಗ ಸಿನಿಮಾದ ಅಧೋಗತಿಯ ಬಗ್ಗೆ ದುಃಖಿಸುವ ಸಿನಿಮಾ-ಪರಿಣಿತರು ಮತ್ತೊಂದೆಡೆ ಇದ್ದಾರೆ. ಸಾರ್ವಜನಿಕ ವೇದಿಕೆಗಳಲ್ಲಿ ಪ್ರಕಟಗೊಳ್ಳುವ ಗೊಂದಲಮಯ ವಿರೋಧ, ಅಭಿಪ್ರಾಯ-ಸಮರ ಈ ಎರಡೂ ಬಗೆಯ ಜನರ ನಡುವೆ ನಡೆಯುತ್ತದೆ. ಸಿನಿಮಾದ ಬಗೆಗಿನ ತಪ್ಪುಗ್ರಹಿಕೆ, ಕುರುಡು-ಅಪೇಕ್ಷೆ ಮತ್ತು ಭಿನ್ನಸಂವೇದನಾಶೀಲತೆಯ ಕಂದಕದಿಂದಾಗಿ ಮೂಡುವ ಭಿನ್ನಾಭಿಪ್ರಾಯ ಚರ್ಚಾಕೂಟಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಬಗೆಹರಿಯುವಂಥದಲ್ಲ.  ಕಲೆಯ ಇತರ ಪ್ರಕಾರಗಳ ವಿಷಯದಲ್ಲೂ ಇದು ನಿಜವೇ. ಸಾಮಾನ್ಯಜನರಿಗೂ ಅರ್ಥವಾಗುವಂಥ ಕಥೆ, ಕಾದಂಬರಿ, ಕಾವ್ಯವನ್ನು ಸಾಹಿತಿಗಳು ಬರೆಯಬೇಕೆಂದು ಆಗ್ರಹಿಸುವವರು ಹೊಂದಿರುವ ಧೋರಣೆಯೂ ಇಂಥದೆ. ಆದರೆ ಕಥೆ, ಕಾದಂಬರಿ, ಕಾವ್ಯ-ನಾಟಕಗಳಿಗೆ ‘ಸಾಹಿತ್ಯವೆಲ್ಲರಿಗಲ್ಲ’ ಎಂಬ ಕಲಾವಿಶೇಷತೆಯ ಸೋಗಾದರೂ ಇದೆ. ಅದರಿಂದ ಈ ಕಂದಕವು ಕೆಲವು ಸಲವಾದರೂ ಸಹೃದಯರ ಗಮನಕ್ಕೆ ಬರುತ್ತದೆ. ಬಿಂಬ-ಭಾಷೆಯ ಸಿನಿಮಾ ಜನಪ್ರಿಯ ಮಾಧ್ಯಮವೆಂಬ ಏಕಮುಖ ಪ್ರಚಾರದಿಂದಾಗಿ, ಎಲ್ಲ ಬಗೆಯ ಸಿನಿಮಾಗಳೂ ‘ಎಲ್ಲರಿಗೂ ಅಲ’ ಎಂಬ ಅಪ್ರಿಯಸತ್ಯವು ಗೋಚರಿಸುವುದಿಲ್ಲವಾದ್ದರಿಂದ ಅಷ್ಟು ಸುಲಭವಾಗಿ ಈ ಕಂದಕವನ್ನು ಎಲ್ಲಾ ಸಂದರ್ಭಗಳಲ್ಲೂ ಗುರುತಿಸಲಾಗುವುದಿಲ್ಲ. ತುಂಬಿಕೊಳ್ಳುವುದಂತೂ ಇದ್ದಿದ್ದೂ ಕಷ್ಟ.

ವ್ಯಾಪಾರೀ ಸಿನಿಮಾ ಏನಿದ್ದರೂ  ಉಪಭೋಗಕ್ಕೆ

ಮನರಂಜನೆಯ ಉದ್ಯಮಪತಿಗಳು ತಯಾರಿಸುವ ಸಿನಿಮಾಗಳು, ಹೋಟಲುಗಳಲ್ಲಿ ತಯಾರಿಸುವ ತಿಂಡಿ-ತೀರ್ಥಗಳಂತೆ ಒಟ್ಟಿಗೆ ವಿವಿಧಬಗೆಯ ಉದ್ಯೋಗ ಹಾಗೂ ಜೀವನಶೈಲಿಗಳ ಜನರ ಉಪಭೋಗಕ್ಕೆಂದೇ ತಯಾರಾಗುತ್ತವೆ. ಹಾಡು-ಕುಣಿತ-ಕಾಮ-ಕ್ರೌರ‍್ಯ-ಅಪರಾಧ-ಭಕ್ತಿ-ನೀತಿಭೋದೆ- ಒಟ್ಟಿನಲ್ಲಿ, ಜನಸಮುದಾಯದ ಯಾಂತ್ರಿಕಜೀವನದ ಏಕತಾನತೆಯನ್ನು ಮರೆಸುವ, ಅವರನ್ನು ಸದ್ಯದ ಬರಡುತನದಿಂದ ತತ್ಕಾಲಕ್ಕೆ ಪಾರುಮಾಡುವ, ಅವರ ಕನಸುಗಾರಿಕೆಗೆ ಸರಿಹೊಂದುವ, ನ್ಯಾಯ-ನೆಮ್ಮದಿಗಳ ಅಪೇಕ್ಷೆಗಳನ್ನು ಭ್ರಾಮಕನೆಲೆಗಳಲ್ಲಿ ಪೂರೈಸುವಂಥ ಮಸಾಲೆಯ ವಿವಿಧ ಪಾಕಗಳ ಸರಕು ಈ ಚಿತ್ರಗಳು. ಹೋಟೆಲ್ ತಿನಿಸುಗಳನ್ನು ರುಚಿಕಟ್ಟಾಗಿಸಲು ಖಾದ್ಯತೈಲ, ಈರುಳ್ಳಿ, ಆಲೂಗೆಡ್ಡೆಗಳನ್ನು ಧಾರಾಳವಾಗಿ ಬಳಸಿದಂತೆ ಕಾಮ-ಪ್ರೇಮ-ಅಪರಾಧ-ಕ್ರೌರ‍್ಯಗಳನ್ನು ಈ ಬಗೆಯ ಚಿತ್ರಗಳಲ್ಲಿ ಸಂದರ್ಭ ಸೃಷ್ಟಿಸಿಕೊಂಡು ಇತಿಮಿತಿಯಿಲ್ಲದೆ ಬಳಸುತ್ತಾರೆ. ಇವನ್ನು ಜನಪ್ರಿಯ-ಸಿನಿಮಾ, ಮಸಾಲೆ-ಸಿನಿಮಾ, ಮುಖ್ಯವಾಹಿನಿಯ ಸಿನಿಮಾ, ವ್ಯಾಪಾರೀ-ಸಿನಿಮಾ ಎಂದೆಲ್ಲಾ ಕರೆಯುತ್ತಾರೆ. ಸೆನ್ಸಾರ್ ಮಂಡಲಿಯು ವರ್ಗೀಕರಿಸಿ, ಸಾರ್ವಜನಿಕಪ್ರದರ್ಶನಕ್ಕೆ ಯೋಗ್ಯ ಅಥವ ಅಯೋಗ್ಯ, ಎಂದೆಲ್ಲಾ ದೃಢೀಕರಿಸುವ ಚಿತ್ರಗಳಲ್ಲಿ ಬಹುತೇಕವಾಗಿ ಇಂಥವೇ ಇರುತ್ತವೆ. ಚಲನಚಿತ್ರವಾಣಿಜ್ಯಮಂಡಳಿ ಇರುವುದೂ ಇಂಥಚಿತ್ರಗಳ ತಯಾರಕರ ಹಿತವನ್ನು ಕಾಯಲೆಂದೇ.  ಶುಕ್ರವಾರದ ಸಿನಿಮಾ ಪುರವಣಿಗಳಲ್ಲಿ ನಟ-ನಟಿಯರ ಚಿತ್ರಗಳೊಂದಿಗೆ ಪತ್ರಕರ್ತರಿಂದ ಮೆಚ್ಚುಗೆ-ಟೀಕೆಗೊಳಗಾಗುವ ಚಿತ್ರಗಳೂ ಇಂಥವೆ.  ಇವು ಹೆಚ್ಚುಕಡೆ, ಹೆಚ್ಚುಕಾಲ ಪ್ರದರ್ಶನಗೊಂಡರೆ, ಅಂದರೆ ಹೆಚ್ಚು ಜನ ನೋಡಿ ಹೆಚ್ಚು ಹಣ ಬಂದರೆ ಉತ್ತಮಚಿತ್ರಗಳೆಂದು ಕರೆಸಿಕೊಳ್ಳುತ್ತವೆ. ಕಡಿಮೆ ಹಣ ತಂದರೆ ಕಳಪೆಚಿತ್ರಗಳೆಂದು ಭರ್ತ್ಸನೆಗೊಳಗಾಗುತ್ತವೆ.  ಮಾರುಕಟ್ಟೆಯಲ್ಲಿ ಅತಿಹೆಚ್ಚು ಬಿಕರಿಗೊಳ್ಳುವ ತಿಂಡಿ, ಪೇಯ, ಸೋಪು, ಪೇಸ್ಟು ಮುಂತಾದ ದಿನಬಳಕೆಯ ಸರಕುಗಳ ಗುಣಮಟ್ಟವನ್ನು ಅವುಗಳ ಮನಮೋಹಕಬಣ್ಣ, ಸುವಾಸನೆ, ಆಕರ್ಷಕ ಕವಚ, ಮನವೊಲಿಕೆಯ ಪ್ರಚಾರಗಳು  ನಿರ್ಧರಿಸುವಂತೆ ವ್ಯಾಪಾರೀ ಸಿನಿಮಾದ ಸಫಲತೆ ಮತ್ತು ಉತ್ತಮಿಕೆಗಳನ್ನು, ಅವುಗಳಲ್ಲಿನ ಮಸಾಲೆಯ ಪಾಕ ಮತ್ತು ಅವು ತರುವ ಹಣದ ಮೊತ್ತ ನಿರ್ಧರಿಸುತ್ತವೆ. ಇವನ್ನು ಅನುಭವಿಸಲು ಇಚ್ಛಿಸುವವರಿಗೆ ಹಣ ಮತ್ತು ಉತ್ತಮ ದೃಷ್ಟಿಬಲಗಳಿದ್ದರೆ ಸಾಕು.

ಬೌದ್ಧಿಕತಾತ್ವಿಕ ಅನ್ವೇಷಣೆ ಗುರಿಯಾಗಿಸಿಕೊಂಡದ್ದು ಕಲಾತ್ಮಕ ಸಿನಿಮಾ

ಸಿನಿಮಾವನ್ನು ಕಲಾತ್ಮಕ ಅಭಿವ್ಯಕ್ತಿಯಾಗಿ ಸ್ವೀಕರಿಸುವ ಜನರು ತಾವು ತಯಾರಿಸುವ ಚಿತ್ರಗಳಲ್ಲಿ ಜನರಂಜನೆಯನ್ನು ಕನಿಷ್ಠತಮ ಗುಣವನ್ನಾಗಿಸಿ, ಯೋಚನೆ-ಚಿಂತನೆ-ಸಂವಾದ ಮುಂತಾದ ಬೌದ್ಧಿಕ-ತಾತ್ವಿಕ ಅನ್ವೇಷಣೆಯನ್ನು ಗರಿಷ್ಠತಮ ಉದ್ದೇಶವನ್ನಾಗಿಸಿ, ಸಿನಿಮಾವನ್ನು ಒಂದು ಕಲಾಕೃತಿಯನ್ನಾಗಿ ನಿರ್ಮಿಸುತ್ತಾರೆ. ಸಿನಿಮಾದ ವ್ಯಾಕರಣ-ಮೀಮಾಂಸೆ, ಕಲಾತ್ಮಕ ಅನ್ವೇಷಣಾ-ವಿಧಾನಗಳ ಪರಿಚಯವೇ ಇಲ್ಲದೆ, ಇವನ್ನು ಆಸ್ವಾದಿಸುವುದು ಅತ್ಯಂತ ಕಷ್ಟ. ಒಳ್ಳೆಯ ಚಿತ್ರವೋ ಅಥವ ಕೆಟ್ಟಚಿತ್ರವೋ ಎಂದು ನಿರ್ಧರಿಸುವುದು ಅಸಾಧ್ಯ.  ಎಷ್ಟೋ ವೇಳೆ, ಸೆನ್ಸಾರ್ ಮಂಡಳಿಯ ಸದಸ್ಯರ ಸಂವೇದನಾಮಟ್ಟವನ್ನೂ ಮೀರುವ ಇಂಥ ಚಿತ್ರಗಳು ಅನಗತ್ಯ ವಿವಾದಕ್ಕೆ ಸಿಕ್ಕಿ, ಮಡಿವಂತರ ಕೋಪವನ್ನು ತಪ್ಪುಕಾರಣಗಳಿಗಾಗಿ ಎದುರಿಸಬೇಕಾಗುತ್ತದೆ. ಉತ್ತಮಚಿತ್ರವೆಂದು ಬಲವಂತವಾಗಿ ಸಾರ್ವಜನಿಕರ ಮುಂದಿಟ್ಟಾಗ, ಅವರ ಆಕ್ರೋಶ-ಅವಹೇಳನೆಗೆ ಗುರಿಯಾಗಬೇಕಾಗುತ್ತದೆ. ಸೂಕ್ತ ವೇದಿಕೆಗಳಲ್ಲಿ ಪರಿಣತರ ಮುಂದೆ ಪ್ರದರ್ಶನಗೊಂಡು ಉತ್ತಮಚಿತ್ರವೆಂದು ಪ್ರಶಸ್ತಿಗಳಿಸಿದರೆ, ದೇಶಕ್ಕೆ ಕೀರ್ತಿಯನ್ನೂ, ಪರಿಣತರಲ್ಲದ ಜನರ ತಿರಸ್ಕಾರ-ಅಭಿಮಾನಗಳನ್ನೂ ಗಳಿಸುತ್ತವೆ. ಇಂಥ ಚಿತ್ರಗಳನ್ನು ಗಂಭೀರ-ಚಿತ್ರಗಳೆಂದು, ಕಲಾತ್ಮಕ-ಚಿತ್ರಗಳೆಂದು, ಹೊಸ ಅಲೆಯ ಚಿತ್ರಗಳೆಂದು ಗುರುತಿಸಲಾಗುತ್ತದೆ. ಚಲನಚಿತ್ರ ಸಹೃದಯರು ಚಿತ್ರಸಮಾಜಗಳಲ್ಲಿ ಆಸ್ವಾದಿಸಿ-ಅನುಭವಿಸಿ-ಚರ್ಚಿಸಲು ಪ್ರಜ್ಞಾಪೂರ್ವಕವಾಗಿ ಆರಿಸಿಕೊಳ್ಳುವ ಚಿತ್ರಗಳು ಈ ಬಗೆಯವು.

ವ್ಯಾಪಾರೀ-ಸಿನಿಮಾ ಹಣ ಗಳಿಸುವ ಉದ್ದೇಶವನ್ನೇ ಪ್ರಧಾನವಾಗಿರಿಸಿಕೊಂಡು ತಯಾರಾಗುವುದರಿಂದ ಅವುಗಳಲ್ಲಿ ಸೌಂದರ್ಯಪ್ರಜ್ಞೆ-ಕಲಾತ್ಮಕತೆಗಳ ಅಂಶಗಳು ಇಲ್ಲವೇ ಇಲ್ಲವೆಂದು ಸಾಧಿಸದೆ, ಅವುಗಳ ಪಾತ್ರ ಕೇವಲ ಗೌಣವೆಂದು ಒಪ್ಪಿಕೊಂಡರೆ ಗೊಂದಲವಾಗುವುದಿಲ್ಲ. ವ್ಯಾಪಾರೀ-ಸಿನಿಮಾಗಳಲ್ಲಿನ ಸಡಿಲಬಂಧ, ಅಬ್ಬರದ ಸಂಗೀತ, ಒರಟುಸೌಂದರ್ಯ, ಉತ್ಪ್ರೇಕ್ಷಿತ ಭಾವನೆಗಳು, ಹುಸಿ-ಬೌದ್ಧಿಕತೆ, ಘೋಷಣೆ/ನೀತಿಬೋಧೆ ಮತ್ತು ಕಲ್ಪಿತ ಸಮಸ್ಯೆಗಳಿಗೆ ಕಂಡುಕೊಳ್ಳುವ ಭ್ರಾಮಕ ಪರಿಹಾರಗಳು, ಎಲ್ಲ ಸಂದರ್ಭಗಳಲ್ಲೂ ಉದ್ದೇಶಪೂರ್ವಕವಾಗಿರದೆ, ನಿರ್ಮಾಪಕ-ನಿರ್ದೇಶಕರ ಮಿತಿಗಳೂ ಆಗಿರಬಹುದು. ಆದರೆ ಇದರ ಅರಿವಿದ್ದೂ, ಇಂಥ ಚಿತ್ರಗಳನ್ನು ಜನಸಾಮಾನ್ಯರ ಅಪೇಕ್ಷೆಯ ಹೆಸರಿನಲ್ಲಿ ಸಮರ್ಥಿಸುವವರು, ಕೊಂಡಾಡುವವರು ಆರ್ಥಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಹಾಗೆ ಮಾಡುತ್ತಾರೆ. ಅಥವ ಅವರು ಸಿನಿಮಾಭಾಷೆಯ ಮಟ್ಟಿಗೆ ನಿರಕ್ಷರಿಗಳಾಗಿರುತ್ತಾರೆ.

ಸೇತುವೆ ಸಿನಿಮಾ ಗಂಭೀರ ಸಿನಿಮಾಗೆ ಪರ್ಯಾಯವೆ?

ಚಿಂತನಶೀಲರು ಮಾಡುವ ಚಿತ್ರಗಳ ಬೌದ್ಧಿಕತೆ-ಕಲಾತ್ಮಕತೆಗಳನ್ನು, ವ್ಯಾಪಾರಿಗಳು ಮಾಡುವ ಚಿತ್ರಗಳಲ್ಲಿನ ರಂಜಕತೆ-ಜನಪ್ರಿಯತೆಯ ಅಂಶಗಳನ್ನು ಬೆಸೆದು ಸಿನಿಮಾ ತಯಾರಿಸುವ ಪ್ರಯತ್ನಗಳು ಆಗೀಗ ನಡೆಯುತ್ತಿರುತ್ತವೆ. ಇವು ಸಫಲವಾದಾಗಲೂ ಗಂಭೀರಸಿನಿಮಾಕ್ಕೆ ಪರ್ಯಾಯವೇನಲ್ಲ. ಏಕೆಂದರೆ, ಇವುಗಳ ಸಾಫಲ್ಯವು ಕೊನೆಗೂ, ಜನಪ್ರಿಯತೆಯನ್ನೋ/ಹಣದ ಅಳತೆಗೋಲನ್ನೋ ಆಶ್ರಯಿಸಿರಬಹುದು. ಅಥವ ನಿರ್ದಿಷ್ಟ ರಾಜಕೀಯ ತಾತ್ವಿಕತೆಯ ಬಗ್ಗೆ ಸಿನಿಮಾಭಾಷೆಯ ಅಕ್ಷರಿ-ನಿರಕ್ಷರಿಗಳಲ್ಲಿ ಸಂವೇದನೆಯನ್ನು ಹುಟ್ಟಿಸುವ ಉದ್ದೇಶಕ್ಕಾಗಿ, ತನಗೆ ತಾನೇ ಕೆಲವು ರಿಯಾಯಿತಿಗಳನ್ನು ಕೊಟ್ಟುಕೊಂಡಿರಬಹುದು. ಇದರಲ್ಲಿ ಆಕ್ಷೇಪಾರ್ಹವಾದುದು ಹಣ ಅಥವ ರಾಜಕೀಯ ತಾತ್ವಿಕತೆ ಖಂಡಿತ ಅಲ್ಲ. ಅದು ಎಡ/ಬಲ/ಪರಿಷ್ಕರಣವಾದೀ ಅಥವಾ ವ್ಯವಸ್ಥೆಯನ್ನು ಸಮರ್ಥಿಸುವ ರಾಜಕೀಯ ತಾತ್ವಿಕತೆಯೇ ಆಗಿದ್ದಾಗಲೂ ಅಲ್ಲಸಿನಿಮಾ ತನ್ನದೇ ಭಾಷೆಯಲ್ಲಿ ಒಂದು ಕಲಾಕೃತಿಯಾಗಿ ಮೈದಾಳಲು ರಿಯಾಯಿತಿಗಳು ಅಡ್ಡಿಬರುತ್ತವೆ ಮತ್ತು ಅಷ್ಟರಮಟ್ಟಿಗೆ ಚಿತ್ರಸಹೃದಯರ ಜೊತೆಗಿನ ಕಲಾಕಾರನ ಸಂಬಂಧ ಕಲುಷಿತಗೊಳ್ಳುತ್ತದೆ ಎಂಬುದು. ಈ ಕೊರತೆಯನ್ನು  ಮನ್ನಿಸಿ ನೋಡಿದರೆ ಇಂಥ ಸಿನಿಮಾ, ಗಂಭೀರ-ಸಿನಿಮಾದ ಚಿತ್ರಸಹೃದಯರು ಮತ್ತು ವ್ಯಾಪಾರೀ-ಸಿನಿಮಾದ ಪ್ರೇಕ್ಷಕರ ನಡುವೆ ಸೇತುವೆಯಂತೆ ಕೆಲಸಮಾಡುವುದನ್ನು ಗುರುತಿಸಬಹುದು. ಈ ಸೇತುವೆ-ಸಿನಿಮಾ ತತ್ವಪ್ರಚಾರಕರಿಗೆ ಅನುಕೂಲಕರವಾಗಿರುವಂತೆ, ಚಲನಚಿತ್ರ ಸಹೃದಯತೆಯ ಪ್ರಾಥಮಿಕ ಶಿಕ್ಷಣದಲ್ಲಿ ಸಹಾಯಕವಾಗಬಹುದಾದ ಪ್ರಕಾರ. ಸಿನಿಮಾಭಾಷೆಯ ನಿರಕ್ಷರತೆಯ ಜೊತೆಗೆ, ನಿರ್ದಿಷ್ಟ ರಾಜಕೀಯ ತಾತ್ವಿಕತೆಯ ಮೋಹಕ್ಕಾಗಿ ಅಥವ ದ್ವೇಷಕ್ಕಾಗಿ ಸೇತುವೆ-ಸಿನಿಮಾವನ್ನು ಉತ್ತಮ ಅಥವ ಅಧಮವೆನ್ನುವ ನಿಲುವು, ಸಿನಿಮಾ ಕುರಿತಾದ ಚರ್ಚೆಗಳಲ್ಲಿ ಗೊಂದಲವನ್ನು ಉಂಟುಮಾಡುವ ಮತ್ತೊಂದು ಪ್ರಮುಖ ಅಂಶ.

ಸಿನಿಮಾದಲ್ಲಿ ವಾಸ್ತವಿಕತೆಯ ಪ್ರಶ್ನೆ

ಸಿನಿಮಾ ಕಟ್ಟಿಕೊಡುವ ಅನುಭವವನ್ನು ಚರ್ಚಿಸುವಾಗ, ಇದು ವಾಸ್ತವಕ್ಕೆ ಎಷ್ಟು ಹತ್ತಿರ/ಎಷ್ಟು ದೂರ, ವಾಸ್ತವ ಪ್ರಪಂಚದ ಕಾಲ-ದೇಶ-ಜೀವನಶೈಲಿ-ರೀತಿ-ರಿವಾಜುಗಳಿಗೆ, ಒಟ್ಟಿನಲ್ಲಿ ಪ್ರೇಕ್ಷಕರ ಸಾಮಾನ್ಯಜ್ಞಾನಕ್ಕೆ ನಿಲುಕುವ ವಾಸ್ತವಸತ್ಯವನ್ನು ಪ್ರತಿನಿಧಿಸುತ್ತದೆಯೆ? ಬಿಂಬಿಸುತ್ತಿದೆಯೆ? ಎಂಬ ಪ್ರಶ್ನೆಗಳನ್ನು ಚಿತ್ರಸಹೃದಯರು ಬಹಳಷ್ಟು ಸಲ, ಮುಗ್ಧವಾಗಿ, ಪ್ರಾಮಾಣಿಕವಾಗಿ ಕೇಳುತ್ತಾರೆ. ಇವು ಸಾಹಿತ್ಯಕ ಮತ್ತು ಕಲಾಸಹೃದಯತೆಯ ಚರ್ಚೆಗಳಲ್ಲಿ ಕಲಾವಾಸ್ತವವನ್ನು ಅರಿಯುವ, ಒಪ್ಪಿಕೊಳ್ಳುವ ಸಾಧ್ಯತೆ ಮತ್ತು ಸಂಭಾವ್ಯತೆಯ ಪ್ರಶ್ನೆಗಳಾಗಿ ಮನ್ನಣೆಯನ್ನು ಪಡೆದಿವೆ. ಜಾನಪದಕಥೆ-ಕಾವ್ಯ-ಪುರಾಣಗಳಲ್ಲಿ, ಅವುಗಳ ರಾಜಕುಮಾರಿಯ ನಾಲ್ಕುಮಾರು ಉದ್ದದ ತಲೆಗೂದಲು, ಮಂತ್ರವಾದಿಯ ಸಂದರ್ಭ-ಸನ್ನಿವೇಶಗಳೇ ಈ ಪ್ರಶ್ನೆಗಳನ್ನು ಬಗೆಹರಿಸಿಬಿಡುತ್ತವೆ. ಆಕಾಶದಲ್ಲಿ ಹಾರುವ ರಾಜಕುಮಾರನ ಮರದ ಕುದುರೆ,  ಮಾಂತ್ರಿಕಶಕ್ತಿಗಳ ವಿಷಯದಲ್ಲಿ ವಾಸ್ತವಿಕತೆಯ ಪ್ರಶ್ನೆಗಳು ಏಳುವುದೇ ಇಲ್ಲ. ಆದರೆ ಕಲೆಯನ್ನು ಜೀವನದ ಪ್ರತಿಬಿಂಬ ಎಂದು ಮಾತ್ರ ನೋಡುವವರಿಗೆಲ್ಲ, ಹಾಗೆ ನೋಡಿದಾಗಲೆಲ್ಲ, ವಾಸ್ತವಿಕ ಜೀವನದೊಂದಿಗೆ ತಾಳೆಯಾಗದ ಕಲಾಪ್ರಪಂಚದ ಕಲ್ಪಿತ-ವಾಸ್ತವಿಕತೆಯ ಕುರಿತಾದ ಪ್ರಶ್ನೆಗಳು  ಮತ್ತೆಮತ್ತೆ ಏಳುತ್ತವೆ.

ಚಿತ್ರದಲ್ಲಿನ ಕುದುರೆಯಂತೆ, ಕಲಾವಾಸ್ತವವು ಇಂದ್ರಿಯಗ್ರಾಹ್ಯ ವಾಸ್ತವಸತ್ಯದ ಮತ್ತೊಂದು ಆಯಾಮ; ಕಲೆಗೆ ಅನುಭವವನ್ನು ನಿರ್ಮಿಸುವ ತನ್ನದೇ ಆದ ಪ್ರತಿಮಾವಿಧಾನ ಎಂಬ ವಿಶೇಷತೆ ಇದೆ ಎಂಬ ಅಂಶಗಳನ್ನು ಕಲಾಮೀಮಾಂಸೆಯನ್ನು ಬಲ್ಲವರಿಗೆ ಮಾತ್ರ ನೆನಪಿಸಬಹುದು. ಉಳಿದವರಿಗೆ ಕಲೆ ಎಂಬುವುದು, ಒಂದು ಸುಂದರ ಸುಳ್ಳಿನ ಕಂತೆ. ನಾಟಕ-ಸಿನೆಮಾಗಳಲ್ಲಿ ವಾಸ್ತವಿಕತೆಯನ್ನು ಹುಡುಕುವವರ ಕಷ್ಟವೂ ಈ ಬಗೆಯದೆ. ಅವರ ಪರಿಕಲ್ಪನೆಯ ವಾಸ್ತವಸತ್ಯದ ದೃಷ್ಟಿಯಿಂದ ನೋಡಿದರೆ ರಂಗಸ್ಥಳವೆನ್ನುವುದೇ ಅವಾಸ್ತವ. ಎಲ್ಲವನ್ನೂ ಸುಟ್ಟು ಬೂದಿಮಾಡುವ ಸಿನಿಮಾದ ಬೆಂಕಿ ರಜತಪರದೆಯನ್ನೆ ಸುಡುವುದಿಲ್ಲವಲ್ಲಾ ಎಂಬ ಪ್ರಾಥಮಿಕ ಸಂಗತಿಯನ್ನೆ ಮರೆಯುವ ವಾಸ್ತವಿಕ-ಸತ್ಯಪ್ರಜ್ಞೆಯ ಪ್ರೇಕ್ಷಕರು ಮಾತ್ರ ಸಿನಿಮಾದಲ್ಲಿನ ಅವಾಸ್ತವಿಕತೆಯನ್ನು ಕುರಿತು ಆಕ್ಷೇಪಿಸಬಹುದು. ಸಿನಿಮಾದ ಸಂದರ್ಭಸನ್ನಿವೇಶಗಳಿಗೆ ಹೊಂದುವಂತೆ ಸೃಷ್ಟಿಯಾಗುವ ಕಲಾವಾಸ್ತವವು, ಇಂದ್ರಿಯಗ್ರಾಹ್ಯ ಪ್ರಪಂಚದಿಂದ ಪಡೆಯುವ ವಾಸ್ತವಕ್ಕೆ ಹೊಂದಬೇಕಿಲ್ಲ. ಉಳಿದಂತೆ ಅಪಾರ ತಿಳುವಳಿಕೆ ಪಡೆದಿರುವ, ಅವರವರ ಕ್ಷೇತ್ರದಲ್ಲಿ ಪರಿಣತಿ ಪಡೆದ ಜನರೂ ಸಹ ಸಿನಿಮಾ ವಿಷಯಕ್ಕೆ ಬಂದಾಗ ಮಾತ್ರ, ಸಿನಿಮಾದಲ್ಲಿ ಸೃಷ್ಟಿಯಾಗುವ ಸಂದರ್ಭ-ಸನ್ನಿವೇಶಗಳ ಅಂಶವನ್ನು ಮರೆತು, ವಾಸ್ತವಿಕತೆಯ ಪ್ರಶ್ನೆಯನ್ನು ಎತ್ತುತ್ತಾರೆ. ಪ್ರಾಪಂಚಿಕ ವಾಸ್ತವಕ್ಕೂ, ಕಲಾವಾಸ್ತವಕ್ಕೂ ಇರುವ ಅಂತರವನ್ನು ಕಲಾಕಾರರು ತಮ್ಮ ಉದ್ದೇಶಿತ ಕೃತಿಯಲ್ಲಿ ಸಹೃದಯರ ಸಮ್ಮತಿಯೊಂದಿಗೆ ಕೃತಿಯ ಒಳಗೇ ನಿರ್ಮಿಸಿಕೊಂಡಾಗ ಇದು ಸಮಸ್ಯೆಯಾಗುವುದಿಲ್ಲ. ಉತ್ಪ್ರೇಕ್ಷಿತ/ವೈಭವೀಕೃತ ಅನುಭವ, ವ್ಯಕ್ತಿ, ಸನ್ನಿವೇಶ, ಭಾವನೆ ಮತ್ತು ವಿಚಾರಗಳು ಉದ್ದೇಶಿತ ಸಾಂದರ್ಭಿಕ ಸಾಧ್ಯತೆ-ಸಂಭಾವ್ಯತೆಗಳ ಎಲ್ಲೆಗಳನ್ನು ಮೀರಿದಾಗಲೆಲ್ಲಾ ಸಹೃದಯರ ಅಸಮ್ಮತಿಯನ್ನು ಎದುರಿಸ ಬೇಕಾಗುತ್ತದೆ.

ತನ್ನದೇ ಆದ ಕಾಲ ದೇಶ ಹೊಂದಿರುವುದು ಸಿನಿಮಾದ ಸಂರಚನೆ

ಸಿನಿಮಾ ತನ್ನದೇ ಆದ ರೀತಿಯಲ್ಲಿ ಅನುಭವ, ಘಟನೆಗಳನ್ನು, ಕಾಲ-ದೇಶಗಳನ್ನು  ನಿರ್ಮಿಸಿಕೊಳ್ಳುತ್ತದೆ ಎಂಬ ಅಂಶವೂ ಸಿನಿಮಾ ವ್ಯಾಕರಣ-ಮೀಮಾಂಸೆಗಳ ಪರಿಚಯವಿಲ್ಲದ ಜನರಿಗೆ ತಿಳಿದಿರುವುದಿಲ್ಲ. ನಾಟಕದಲ್ಲಿ ನಿರ್ದಿಷ್ಟ ಕಾಲಘಟ್ಟದಲ್ಲಿ, ನಿರ್ದಿಷ್ಟ ದೇಶದಲ್ಲಿ ನಡೆದ ಘಟನೆ-ವಿದ್ಯಮಾನಗಳು, ವರ್ತಮಾನದಲ್ಲಿ, ಎದುರಿನ ರಂಗಸ್ಥಲದಲ್ಲಿ ಸೃಷ್ಟಿಯಾಗಿ ಜರುಗುವಂತೆ, ಸಿನಿಮಾದಲ್ಲಿಯೂ ಕಾಲ-ದೇಶಗಳು ಹಿಗ್ಗಿ, ಅಥವ ಕುಗ್ಗಿ ವರ್ತಮಾನದ ಚೌಕಟ್ಟಿನೊಳಕ್ಕೆ ಬರುತ್ತವೆ. ವಿವಿಧ ವ್ಯಕ್ತಿಗಳ ಭಾವನೆ-ವಿಚಾರ-ಧೋರಣೆಗಳು ಒಬ್ಬೊಬ್ಬ ವ್ಯಕ್ತಿಯ ಅನುಭವದ  ಪರಿಪಾಕವಾಗಿ, ಕಲಾಕಾರನ ಸೃಜನಶೀಲತೆಯಲ್ಲಿ ಪಾತ್ರಗಳಾಗಿ ಮೈದಾಳುವಂತೆ, ವಿಶ್ವದ ವಿವಿಧ ಭೂಪ್ರದೇಶಗಳು ಕೂಡಿಕೊಂಡು ಸಿನಿಮಾದ ವಿಶಿಷ್ಟ ಭೂಪ್ರದೇಶಗಳಾಗಿ ಚಿತ್ರಿತವಾಗುತ್ತವೆ. ನಾಯಕ-ನಾಯಕಿಯರು ಒಮ್ಮೆ ಕಾಶ್ಮೀರದ ಕಣಿವೆಗಳಲ್ಲಿ, ಮರುಕ್ಷಣದಲ್ಲಿ ಮೈಸೂರಿನ ಬೃಂದಾವನದಲ್ಲಿ ಹಾಡಿ-ಕುಣಿಯವುದು ಅವಾಸ್ತವ ಎನ್ನುವವರಿಗೆ ಸಿನಿಮಾದ ಸಂ-ರಚನೆಯ ಅರಿವಿರುವುದಿಲ್ಲ. ನಾಟಕಗಳಲ್ಲಿ ಇಡೀ ವಿಶ್ವವನ್ನೇ ಅಡಕಗೊಳಿಸಿ, ರಂಗಸ್ಥಳದೊಳಕ್ಕೆ ನುಗ್ಗಿಸುವುದನ್ನು ಅರ್ಥಮಾಡಿಕೊಳ್ಳುವವರಿಗೆ ಸಿನಿಮಾದಲ್ಲಿ ಸೃಷ್ಟಿಯಾಗುವ ಅನುಭವ, ಘಟನೆಗಳು, ಕಾಲ-ದೇಶಗಳು ಅಸಂಗತವೆನಿಸಬೇಕಿಲ್ಲ. ರಂಗಸ್ಥಳದಲ್ಲಿ ಏರ್ಪಡುವ ಅನುಭವ, ಹಗಲು-ರಾತ್ರಿಗಳು ಬಹಳಮಟ್ಟಿಗೆ ಸೂಚಿತಾನುಭವದ ಮೂಲಕ ನಿಜವೆನ್ನಿಸುವಂತೆ ಇರುತ್ತವೆ. ಸಿನಿಮಾದ ಹಗಲುರಾತ್ರಿಗಳೂ ಹೀಗೆಯೆ ಇರಬಹುದು. ಪ್ರೇಕ್ಷಕನಿಗೆ ಬೆಳಕಿನ ವಿನ್ಯಾಸದ ಮೂಲಕ ಹಗಲು-ರಾತ್ರಿಯ ಅನುಭವವಾಗುವುದು ಮುಖ್ಯವೇ ಹೊರತು  ಹಗಲು-ರಾತ್ರಿಗಳನ್ನೇ ಕಾದು ಚಿತ್ರಿಸಿದ ವಾಸ್ತವವಲ್ಲ. ಸಿನಿಮಾಭಾಷೆಯ ಸೂಕ್ಷ್ಮಗಳನ್ನು  ಬಲ್ಲ ಕಲಾಕಾರರು, ಕಲಾನುಭವವನ್ನು ಮಾತು-ಧ್ವನಿ-ಶಬ್ದ-ಸಂಗೀತ- ಸೂಚನೆ-ಸಂಕೇತಗಳ ಮೂಲಕ ಏರ್ಪಡಿಸಿಕೊಂಡರೆ ಒರಟು ಸಂವೇದನೆಯ, ಅಥವ ವ್ಯಾಪಾರೀ ಉದ್ದೇಶದ ಸಿನಿಮಾ ತಯಾರಕರು, ಕೆಲವು ಸಲ ರಂಗನಿರ್ದೇಶಕರೂ ಸಹ, ಪ್ರೇಕ್ಷಕರನ್ನು ಆಕರ್ಷಿಸಲು ವಾಸ್ತವತೆಯ ಹೆಸರಿನಲ್ಲಿ, ಘನಪ್ರಪಂಚವನ್ನು ರಂಗ-ಪರದೆಯಮೇಲೆ ಸೃಷ್ಟಿಸಲು ಹೆಣಗುತ್ತಾರೆ. ನಾಟಕಪ್ರದರ್ಶನಗಳ, ಸಿನಿಮಾದ ತಯಾರಿಕೆಯ ವೆಚ್ಚ ಹೆಚ್ಚಾಗಲು, ಪ್ರೇಕ್ಷಕನಿಗೆ ನಾಟಕ-ಸಿನಿಮಾಗಳು ದುಬಾರಿಯಾಗಲು ಇದೂ ಒಂದು ಮುಖ್ಯ ಕಾರಣ.

ಸಹೃದಯ ಸಂವಾದದಲ್ಲೇ ಅರಳುವುದು ಅರ್ಥ, ವ್ಯಾಖ್ಯಾನ

ಒಂದು ಸಿನಿಮಾದ ಅನುಭವದಲ್ಲಿನ ಅರ್ಥ-ಧೋರಣೆ ಮತ್ತು ಅವುಗಳ ಜೀವನವ್ಯಾಖ್ಯಾನಗಳನ್ನು  ನಿರ್ಧರಿಸುವಾಗ, ಆ ಸಿನಿಮಾ ಮಾಡಿದವರ  ಮನಸ್ಸಿನಲ್ಲಿ ಅದೆಲ್ಲ-ಅಷ್ಟೆಲ್ಲಾ ಇತ್ತು ಎಂದು ಹೇಗೆ ತೀರ್ಮಾನಿಸುತ್ತೀರಿ? ಎಂಬ ಪ್ರಶ್ನೆ ಸಿನಿಮಾದ ಚರ್ಚೆಗಳಲ್ಲಿ ಮಾತ್ರವಲ್ಲ, ಸಾಹಿತ್ಯಕ ಚರ್ಚೆಗಳಲ್ಲೂ ತೀರಾ ಸಾಮಾನ್ಯ. ಉತ್ತಮ ಸಾಹಿತ್ಯದಂತೆ, ಉತ್ತಮ ಚಲನಚಿತ್ರವೂ ಸಹ ಚಿಂತನೆ, ಧೋರಣೆ, ಜೀವನಾನುಭವ ಮತ್ತು ಸತ್ಯದ ಪರಿಕಲ್ಪನೆಗಳ ಸಿದ್ಧಮಾದರಿಗಳನ್ನು ಇಟ್ಟುಕೊಳ್ಳದೆ, ತನ್ನ ತೀರ್ಮಾನಗಳನ್ನು ಹೇರದೆ, ಸಹೃದಯರನ್ನು ಸಂವಾದಕ್ಕೆ ಕರೆಯುತ್ತದೆ. ಆದರೆ ಕಲಾಕೃತಿಗಳನ್ನು ಸೃಷ್ಟಿಸುವವರಾಗಲಿ, ಅವನ್ನು ಆಸ್ವಾದಿಸುವ ಸಹೃದಯರಾಗಲಿ ಶೂನ್ಯದ ನೆಲೆಯಿಂದ ಹೊರಡುವುದಿಲ್ಲ. ತಾವು ಬದುಕುವ ಕಾಲಘಟ್ಟದ ಸಾಮಾಜಿಕ-ಆರ್ಥಿಕ-ರಾಜಕೀಯವನ್ನು ಬಿಂಬಿಸುವ ಪ್ರಜ್ಞಾಪಾತಳಿಯಲ್ಲಿ, ತಮ್ಮದೇ ಆದ ತಾತ್ವಿಕ ಆಯ್ಕೆಗಳನ್ನು ಮಾಡಿಕೊಂಡವರಾಗಿರುತ್ತಾರೆ. ಕಲಾಕಾರರು ಕೃತಿಯ ಮೂಲಕ ತಮ್ಮ ಧ್ಯೇಯ-ಧೋರಣೆ-ಆಯ್ಕೆಗಳ ಮಿತಿಗೊಳಪಟ್ಟ ಎಲ್ಲ ಪರಿಕರ-ಅನುಭವವನ್ನು ಸಹೃದಯರ ಅವಗಾಹನೆಗೆ ಒಪ್ಪಿಸುತ್ತಾರೆ. ಸಹೃದಯರೂ ಸಹ ತಮಗೊಪ್ಪಿಸಿದ ಕೃತಿಯ ಮೂಲಕವೇ ತಮ್ಮ ಧ್ಯೇಯ-ಧೋರಣೆ-ಆಯ್ಕೆಗಳ ಮಿತಿಗೊಳಪಟ್ಟ ಎಲ್ಲ ಪರಿಕರ-ಅನುಭವದ ನೆಲೆಗಟ್ಟಿನಲ್ಲಿ ಕಲಾಕಾರನ ಅನುಭವವನ್ನು ವ್ಯಾಖ್ಯಾನಿಸಿಕೊಳ್ಳುತ್ತಾರೆ. ಇದರಲ್ಲಿ ಪರಸ್ಪರರ ಸಹಮತಕ್ಕೆ ಎಷ್ಟುಬೆಲೆಯೋ, ವಿರೋಧಕ್ಕೂ ಅಷ್ಟೇ, ಕೆಲವುಸಲ ಅದಕ್ಕಿಂತಲೂ ಹೆಚ್ಚುಬೆಲೆ. ಹೀಗೆ ಸಿನಿಮಾ ನೋಡುವ ಕ್ರಿಯೆಯು, ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಅರ್ಥಗಳನ್ನು ಚಲನಚಿತ್ರದ ನೆಲೆಯಲ್ಲಿ ಅನ್ವೇಷಿಸಿ ಪಡೆದುಕೊಳ್ಳುವ ಸಾಮೂಹಿಕ ಅಧ್ಯಯನ. ಇದರಲ್ಲಿ ಸಹೃದಯನ ಅರಿವು ಹಿಗ್ಗಿದಂತೆ, ಚಲನಚಿತ್ರದ ಅರ್ಥವೂ ವಿಸ್ತರಿಸುವ ಅವಕಾಶವಿದೆ. ಹೀಗಾಗಿ ಪ್ರೇಕ್ಷಕರು ಒಟ್ಟಿಗೆ ಕೂತು ನೋಡುವ ಸಿನಿಮಾ, ಮೇಲುನೋಟಕ್ಕೆ ಒಂದೇ ಆಗಿದ್ದರೂ ಅದರ ಮೂಲಕ ಪ್ರತಿಯೊಬ್ಬ ಪ್ರೇಕ್ಷಕನೂ ತನ್ನ ಅರಿವು-ಅನುಭವದ ನೆಲೆಗಳಲ್ಲಿ, ಉಳಿದ ಪ್ರೇಕ್ಷಕರ ಸಹಮತ-ಭಿನ್ನಾಭಿಪ್ರಾಯಗಳೊಂದಿಗೆ ಅರ್ಥೈಸಿಕೊಳ್ಳುವ ಸಿನಿಮಾಗಳು ಏಕಕಾಲಕ್ಕೆ ಅನೇಕವಾಗಿರುತ್ತವೆ. ಅವುಗಳಲ್ಲಿ ಕಲಾಕಾರನದ್ದೆಂದು ಗುರುತಿಸುವ ಸಿನಿಮಾ ಸಹ ಸೇರಿರುತ್ತದೆ. ಹೀಗೆ ಒಂದು ಸಿನಿಮಾ ಏಕಕಾಲಕ್ಕೆ ಎಷ್ಟುಬಗೆಯ ವ್ಯಾಖ್ಯಾನಗಳನ್ನು ಉಕ್ಕಿಸಿ, ಸಂವಾದವನ್ನು ತಾಳಿಕೊಳ್ಳಬಲ್ಲದು ಎಂಬುದರಮೇಲೆ ಅದರ ಸೃಜನಗುಣ-ಅರ್ಥವಂತಿಕೆ-ಸೂಕ್ಷ್ಮಜ್ಞತೆ-ಕಲಾವಂತಿಕೆಗಳು ನಿಂತಿರುತ್ತವೆ. ವಿಶ್ವದ ಸಾರ್ವಕಾಲಿಕ ಗಂಭೀರಚಿತ್ರಗಳೆಂದು ಪರಿಗಣಿತವಾಗಿರುವ ವೈವಿಧ್ಯಮಯ ಸಿನಿಮಾಗಳು ಈ ಬಗೆಯವು. ಇವು ಪೂರ್ವತಯಾರಿಯಿಲ್ಲದೆ ನೋಡುವ ಪ್ರೇಕ್ಷಕರಿಗೆ ಬೋರು ಹೊಡೆಸಬಹುದು. ಒಂದೇ ಓದಿಗೆ ದಕ್ಕದ ಸಾಹಿತ್ಯಕೃತಿಯಂತೆ ಕ್ಲಿಷ್ಟವಾಗಿರಬಹುದು. ಪ್ರತಿಬಾರಿ ನೋಡುವಾಗಲೂ, ಅನುಭವದ ವಿವಿಧ ಪದರುಗಳ ಹೊಸ ಮಗ್ಗಲುಗಳನ್ನು ತೆರೆಯಬಹುದು. ಕಾಲ-ದೇಶಗಳ ಹಂಗನ್ನು ಮೀರಿ ನಿತ್ಯ ನೂತನವೆನಿಸಬಹುದು.

ವ್ಯಾಪಾರೀಚಿತ್ರಗಳು ಸಾಮಾನ್ಯವಾಗಿ ಏಕಪದರದ ಮಿತಿಯನ್ನುಹೊಂದಿರುತ್ತವೆ. ಅವುಗಳ ಅಧ್ಯಯನದಿಂದ ಸಾಮಾಜಿಕ-ತಾತ್ವಿಕ ಧೋರಣೆಗಳನ್ನು ಖಂಡಿತ ಗ್ರಹಿಸಬಹುದು. ಆದರೆ ಅವು ಸಹೃದಯರ ಅರಿವನ್ನು ಹಿಗ್ಗಿಸುವ ಅನುಭವವಾಗದೆ, ಅವರ ಮಾಹಿತಿಯನ್ನು ಮಾತ್ರ ವಿಸ್ತರಿಸುವುದಾದರೆ ಸಿನಿಮಾ, ಬೇರಾವುದೇ ಸಾಮಗ್ರಿಯಂತೆ ಕೇವಲ ಸಮಾಜಶಾಸ್ತ್ರದ ಅಧ್ಯಯನದ ವಸ್ತುವಾಗುತ್ತದೆ. ಸಿನಿಮಾದ ಸಮಾಜಶಾಸ್ತ್ರೀಯ ಅಧ್ಯಯನವನ್ನೇ ಚಲನಚಿತ್ರ ಸಹೃದಯತೆ ಎಂದು ಭ್ರಮಿಸುವುದೂ, ಅನೇಕ ವೇಳೆ ಸಿನಿಮಾ ಕುರಿತಾದ ಚರ್ಚೆಯಲ್ಲಿ ಏಳುವ ಅನೇಕ ಗೊಂದಲಗಳಗೆ ಕಾರಣ.

ಸಾಹಿತ್ಯಕೃತಿ ಮತ್ತು ಅದನ್ನು ಆಧರಿಸಿದ ಸಿನಿಮಾ ಎರಡು ಸ್ವತಂತ್ರ ಕೃತಿಗಳು

ಯಾವುದೇ ನಾಟಕವು ರಂಗಕೃತಿಯಾಗಿ, ಅದಕ್ಕೆ ಆಧಾರವಾಗಿರಬಹುದಾದ ಸಾಹಿತ್ಯಕೃತಿಯಿಂದ ಹೇಗೆ ಸ್ವತಂತ್ರವೋ, ಹಾಗೆಯೇ ಸಿನಿಮಾ ಸಹ ಅದಕ್ಕೆ ಆಧಾರವಾದ ಕಥೆ, ಕಾದಂಬರಿ, ನಾಟಕಗಳಿಂದ ಬೇರೆಯಾದ ಸ್ವತಂತ್ರಕೃತಿ. ಬಹಳಸಲ ಇಂಥ ಚಲನಚಿತ್ರಗಳ ಚರ್ಚೆ, ಸಿನಿಮಾದ ಚರ್ಚೆಯಾಗದೆ ಅವು ಆಧರಿಸಿದ ಸಾಹಿತ್ಯಕೃತಿಗಳ ಚರ್ಚೆಯಾಗಿಬಿಡುತ್ತದೆ. ಸಿನಿಮಾ ಮೂಲ ಸಾಮಗ್ರಿಗಿಂತ ಎಷ್ಟು ಭಿನ್ನ ಎಂದು ಪರಿಶೀಲಿಸುವುದಕ್ಕೂ, ಸಾಹಿತ್ಯಕೃತಿಯನ್ನು ಮೂಲಕೃತಿಯೆಂದು ಪರಿಗಣಿಸಿ ಸಿನಿಮಾ ಕೇವಲ ಅದರ ಚಿತ್ರಆವೃತ್ತಿಯಾಗಿ ಅದಕ್ಕೆ ಎಷ್ಟು ನಿಷ್ಠವಾಗಿದೆ ಅಥವ ಇಲ್ಲ ಎಂದು ತೀರ್ಮಾನಿಸುವುದಕ್ಕೂ, ತುಂಬ ವ್ಯತ್ಯಾಸವಿದೆ. ಒಂದೇ ನಾಟಕವನ್ನು ಮೂಲಸಾಮಗ್ರಿಯಾಗಿ ಬಳಸಿಕೊಂಡು ಅನೇಕರು ವಿಭಿನ್ನ ಧೋರಣೆಯ ಸ್ವತಂತ್ರ ರಂಗಕೃತಿಗಳನ್ನು ನಿರ್ಮಿಸುವುದು ಸಾಧ್ಯ ಎಂಬುದನ್ನು ಅನೇಕ ರಂಗಚಿಂತಕರು ಗಮನಿಸುವುದೇ ಇಲ್ಲ. ಒಂದೇ ಮೂಲಸಾಮಗ್ರಿಯನ್ನು ಹೊಂದಿದ ಎರಡು ವಿಭಿನ್ನ ಸಾಹಿತ್ಯಕೃತಿಗಳು ತಮ್ಮಷ್ಟಕ್ಕೆ ಸ್ವತಂತ್ರಕೃತಿಗಳು. ಯಾವುದೇ ನಿರ್ದಿಷ್ಟ ಪೂರ್ವಕೃತಿಯ ಅವತರಣಿಕೆಗಳಲ್ಲ. ಉದಾಹರಣೆಗೆ, ರಾಮನ ಕಥೆಯನ್ನು ಆಧರಿಸಿ ರಚಿಸಿದ ಎಲ್ಲ ಕೃತಿಗಳೂ ಸ್ವತಂತ್ರವೆ. ಅವು ರಾಮನ ಹೆಸರನ್ನು ಬಳಸಿಕೊಂಡಮಾತ್ರಕ್ಕೆ, ವಾಲ್ಮೀಕಿ ರಾಮಾಯಣಕ್ಕೆ ನಿಷ್ಠವಾದ ಅಥವ ಅಪಚಾರವೆಸಗುವ ಅವತರಣಿಕೆಗಳಾಗಬೇಕಿಲ್ಲ. ಉಳಿದವು ಈಚಿನ ಅವತರಣಿಕೆಗಳಾದರೆ, ಅವುಗಳಂತೆ, ವಾಲ್ಮೀಕಿ ರಾಮಾಯಣವೂ ಯಾವುದೋ ಕಾಲಘಟ್ಟದ ಅವತರಣಿಕೆಯೇ. ಸಿನಿಮಾ ಇನ್ನಿತರ ಅಂಶಗಳೊಂದಿಗೆ ಶಾಬ್ದಿಕಭಾಷೆಯನ್ನೂ ಒಳಗೊಳ್ಳುವುದರಿಂದ, ಅದು ಸಾಹಿತ್ಯಕೃತಿಯನ್ನು ಆಧರಿಸಿದ ಉಪಕಲಾಕೃತಿಯೆಂಬ ಗೊಂದಲವನ್ನು ಅನೇಕರಲ್ಲಿ ಹುಟ್ಟಿಸುತ್ತದೆ. ಸಿನಿಮಾ ತನ್ನಷ್ಟಕ್ಕೆ ಪರಿಪೂರ್ಣವಾದ, ಸ್ವತಂತ್ರವಾದ ಕಲಾಕೃತಿ. ಅದರಲ್ಲಿ ಕಥೆ ಒಂದು ಅಂಶವೇ ಹೊರತು, ಅದೇ ಸಿನಿಮಾ ಅಲ್ಲ. ಸಾಹಿತ್ಯಕೃತಿಗಳನ್ನು ಆಧರಿಸಿ ಸಿನಿಮಾ ಮಾಡುವುದು ಹೇಗೆ ಸಾಧ್ಯವೋ, ಹಾಗೆಯೇ ಚಲನಚಿತ್ರಗಳನ್ನು ಆಧರಿಸಿ ಸಾಹಿತ್ಯಕೃತಿ-ರಂಗಕೃತಿಗಳನ್ನು ನಿರ್ಮಿಸುವುದೂ ಸಾಧ್ಯ. ರಂಗನಿರ್ದೇಶಕ ಪ್ರಸನ್ನ ಅವರು ರಚಿಸಿರುವ ನಾಟಕಕೃತಿಗಳು ಇದಕ್ಕೆ ಒಳ್ಳೆಯ ಉದಾಹರಣೆಗಳು.

ಬಹು ಆಯಾಮದಲ್ಲಿ ಸೆಳೆಯುವುದೇ ಕಲಾಮಾಧ್ಯಮದ ಅನನ್ಯತೆ

ಸಿನಿಮಾವನ್ನು ಪುಸ್ತಕದಂತೆ ಓದಬಹುದು, ಸಂಗೀತದಂತೆ ಕೇಳಬಹುದು, ಛಾಯಾಚಿತ್ರಗಳಂತೆ ನೋಡಬಹುದು, ನಾಟಕದಂತೆ ವೀಕ್ಷಿಸಬಹುದು, ನೃತ್ಯದಂತೆ ಆನಂದಿಸಬಹುದು, ಸಾಹಿತ್ಯದಂತೆ ವಿಮರ್ಶಿಸಬಹುದು, ಚಿಂತನೆಯಂತೆ ತಾತ್ವೀಕರಿಸಬಹುದು, ರಾಜಕೀಯ ನಿಲುವುಗಳನ್ನು ಗುರುತಿಸಿ ಪಕ್ಷವಹಿಸಬಹುದು. ಇವೆಲ್ಲವನ್ನೂ ಒಟ್ಟಿಗೆ ಸಾಧಿಸುವ ಸಿನಿಮಾ ಪೂರ್ಣ ಅರ್ಥದಲ್ಲಿ ಸಿನಿಮಾ. ಉಳಿದವು ಹರಕುಮುರುಕು ಸಿನಿಮಾ. ಸಿನಿಮಾಕ್ಕೆ ತನ್ನದೇ ಆದ ಸಂಕೀರ್ಣ ಪ್ರತಿಮಾವಿಧಾನದಲ್ಲಿ, ಅನುಭವವನ್ನು ಸೃಷ್ಟಿಸುವ ವಿಶಿಷ್ಟ ಸೌಲಭ್ಯಗಳಿವೆ. ನಟರೇ ಇಲ್ಲದೆ ನಾಟಕವಿಲ್ಲ. ಆದರೆ ನಟರಿಲ್ಲದ ಸಿನಿಮಾ ಸಾಧ್ಯ. ಸಾಹಿತ್ಯದಲ್ಲಿ ಸಾಧ್ಯವಿರುವಂತೆ, ಸಿನಿಮಾದಲ್ಲಿ ಕೇವಲ ಅಮಾನುಷ-ನಿರ್ಜೀವ ಪರಿಕರಗಳನ್ನು ಪಾತ್ರಗಳನ್ನಾಗಿ ಬಿಂಬಿಸಬಹುದು. ಕಾವ್ಯದಲ್ಲಿ ಎರಡು ಪದಗಳ ನಡುವಿನ ಮೌನವನ್ನು ವಿವಿಧ ವಿನ್ಯಾಸಗಳಲ್ಲಿ ಬಳಸುವ ಹಾಗೆ, ಕತ್ತಲೆ ಮತ್ತು ನಿಶ್ಶಬ್ದಗಳನ್ನು ಸಿನಿಮಾಭಾಷೆಯ ಶಕ್ತಿಯುತ ಭಾಗವಾಗಿ ಬಳಸಬಹುದು. ದೃಶ್ಯರೂಪದಲ್ಲಿ ಮಂಡಿತವಾಗುವ ವಿಚಾರಗಳ ಸಂವಾದದಲ್ಲಿ, ಉಳಿದ ಪ್ರಕಾರಗಳಿಗಿಂತ ನಾಟಕಕ್ಕೆ ಹೆಚ್ಚು ಹತ್ತಿರವಿರುವಂತೆ ಕಾಣುವ ಸಿನಿಮಾ, ಭಾವಸೂಕ್ಷ್ಮತೆಯಲ್ಲಿ ಮಾತ್ರ, ಕಾವ್ಯಕ್ಕೇ ಹೆಚ್ಚು ಹತ್ತಿರವಿದೆ. ನೃತ್ಯದ ಲಯಗಾರಿಕೆ-ಮೋಹಕತೆಯನ್ನು ಚಿತ್ರಕಲೆಯ ದೃಶ್ಯ-ಶ್ರೀಮಂತಿಕೆಯೊಂದಿಗೆ ಬೆಸೆಯುವ ಸಿನಿಮಾವನ್ನು ಇಡಿಯಾಗಿ ಆಸ್ವಾದಿಸಲು ಈ ಎಲ್ಲ ಕಲಾಪ್ರಕಾರಗಳ ಕನಿಷ್ಠ ಪರಿಚಯವಾದರೂ ಇರಬೇಕಾಗುತ್ತದೆ. ಸಿನಿಮಾ ಮಾಡುವುದು ಹೇಗೆ ಒಂದು ಸಂಕೀರ್ಣಕ್ರಿಯೆಯೋ, ಸಿನಿಮಾ ನೋಡುವುದೂ ಸಹ ಹಾಗೆಯೆ. ಸೂಕ್ಷ್ಮಜ್ಞರು ಮಾಡುವ ಸಿನಿಮಾ, ನೋಡುವವರ ಸೂಕ್ಷ್ಮಸಂವೇದನೆಯ ಸಾಮರ್ಥ್ಯದಮೇಲೆ ನಂಬಿಕೆಯಿರಿಸಿ ಮಾಡಿದ ಕಲಾಕೃತಿಗಳಾದ್ದರಿಂದ, ವಿವರಣಾತ್ಮಕವಾಗಿರುವುದಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರಿಗೆ ಅರ್ಥಮಾಡಿಸಬೇಕೆಂದು ಹಟ ಮಾಡುವುದಿಲ್ಲ. ಗಂಭೀರ ಸಾಹಿತ್ಯದಂತೆ-ಸಂಗೀತದಂತೆ, ರಂಜಕತೆ ಮತ್ತು ಚಿಂತನೆಯ ಎಳೆಗಳ ನಿರೂಪಣಾ-ನೆಯ್ಗೆಯಲ್ಲಿ, ಚಿತ್ರಿಕೆಯಿಂದ ಚಿತ್ರಿಕೆಗೆ ಸಾವಧಾನವಾಗಿ ಬೆಳೆಯುತ್ತಾಹೋಗುತ್ತದೆ. ಸೃಷ್ಟಿ ಮತ್ತು ಬದುಕಿನ ಅರ್ಥ-ಉದ್ದೇಶ-ದುಃಖ-ಕೆಡುಕುಗಳ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಘಟನಾವಳಿ ಮತ್ತು ಪಾತ್ರಗಳ ಸಂಬಂಧಜಾಲದೊಳಗೇ ಎತ್ತುತ್ತವೆ. ತನ್ನ ಕಾಣ್ಕೆಯೇ ಅಂತಿಮವಲ್ಲವೆಂಬ ವಿನಯದ ಎಚ್ಚರದೊಂದಿಗೆ ಪ್ರೇಕ್ಷಕರೊಂದಿಗೆ ಸಂವಾದಕ್ಕಿಳಿಯುತ್ತವೆ. ಸಿನಿಮಾವೀಕ್ಷಣೆ ಒಂದು ಗಂಭೀರ-ಸಾರ್ಥಕಕ್ರಿಯೆಯೆಂಬ ಭಾವನೆಯನ್ನು ಸಹೃದಯರಲ್ಲಿ ಮೂಡಿಸುತ್ತವೆ. ಇಂಥವು ಕೇವಲ ಕಥಾಚಿತ್ರಗಳೇ ಆಗಿರಬೇಕೆಂದಿಲ್ಲ. ಎಪಿಕ್ ಶೈಲಿಯ ಮೂರುಗಂಟೆಯ ಅವಧಿಯ ಸುದೀರ್ಘ ಚಿತ್ರಗಳು, ಕೆಲವೇ ಸಾಲುಗಳ ಗಟ್ಟಿಕಾವ್ಯದಂತಿರುವ ಕೆಲವೇ ನಿಮಿಷಗಳ ಅವಧಿಯ ಕಿರುಚಿತ್ರಗಳು ಈ ಬಗೆಯವು. ಕಲಾಶ್ರದ್ಧೆ, ಬಹುಶ್ರುತತೆ, ಸಿನಿಮಾವ್ಯಾಕರಣ-ಮೀಮಾಂಸೆಗಳ ಪೂರ್ವತಯಾರಿಯಿಲ್ಲದೆ, ಇವನ್ನು ತಯಾರಿಸುವುದಾಗಲೀ, ಆಸ್ವಾದಿಸುವುದಾಗಲೀ ಕಷ್ಟ.

ತಾಂತ್ರಿಕಸ್ವರೂಪದ ಪರಿಣತಿ ಸಿನಿಮಾ ಸಹೃದಯತೆಗೆ ಕಟ್ಟಿಟ್ಟ ಬುತ್ತಿ ಏನಲ್ಲ!

ಸಿನಿಮಾ ತಯಾರಿಕೆಯ ತಾಂತ್ರಿಕಸ್ವರೂಪದ ಪರಿಣತಿ, ಅದರ ಸೂಕ್ಷ್ಮತೆಗಳ ಪರಿಚಯವು ಸಿನಿಮಾಸಹೃದಯತೆಗೆ ಖಂಡಿತವಾಗಿಯೂ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತದೆ. ಆದರೆ, ಸಿನಿಮಾ-ತಾಂತ್ರಿಕತೆಯಲ್ಲಿ ಪರಿಣಿತರಾದ ಮಾತ್ರಕ್ಕೆ, ಸಿನಿಮಾ-ಸಹೃದಯತೆ ಪ್ರಾಪ್ತವಾಗುವುದಿಲ್ಲ. ಚಿತ್ರಕಲೆ-ಸಾಹಿತ್ಯವನ್ನು ಮುದ್ರಿಸುವ, ಪ್ರಕಾಶಿಸುವ ಮತ್ತು ಮಾರುವ ಜನರಿಗೆ ಸಾಹಿತಿ-ಕಲಾವಿದರಿಗೆ ತಿಳಿಯದ ತಾಂತ್ರಿಕ ಅಂಶಗಳ ಬಗೆಗೆ ಪರಿಣತಿ ಇರುತ್ತದೆ. ಆದರೆ ಅವರು ಸಾಹಿತ್ಯ-ಕಲಾಮೀಮಾಂಸೆಯಲ್ಲಿ ಪರಿಣತರಾಗಿರಬೇಕೆಂಬ ಕಡ್ಡಾಯವೇನೂ ಇಲ್ಲ. ಪರಿಣತರಾಗಿದ್ದರೆ ಒಳ್ಳೆಯದೆ. ಹಾಗಿಲ್ಲದವರು, ಸಾಹಿತ್ಯದ ಓದನ್ನು ನಿರ್ದೇಶಿಸಿದರೆ, ನಿಯಂತ್ರಿಸಿದರೆ ಏನಾಗುತ್ತದೆ? ಉಳಿದ ಕಲಾಪ್ರಕಾರಗಳಿಗಿಂತ ಸಿನಿಮಾದ ವಿಷಯದಲ್ಲಿ ಇದು ಹೆಚ್ಚು ನಿಜ. ಸಿನಿಮಾ-ಸಹೃದಯತೆಯಬಗ್ಗೆ, ಸಿನಿಮಾದ ಅರ್ಥ-ಸೂಕ್ಷ್ಮಗಳ ಬಗ್ಗೆ ಏನೂ ಅರಿಯದ ಸಿನಿಮಾತಂತ್ರಜ್ಞರು

ಅಧಿಕಾರಯುತವಾಗಿ ಕೊಡುವ ತೀರ್ಮಾನಗಳು, ಅನೇಕ ವೇಳೆ ಸಿನಿಮಾ-ಸಹೃದಯರ ದಾರಿ ತಪ್ಪಿಸುವಂಥವು. ಇಂಥವರಿಂದಾಗಿಯೇ, ಕಳಪೆ ಸಾಹಿತ್ಯವು ವೈಭವಯುತವಾಗಿ ದೃಶ್ಯೀಕರಣಗೊಂಡು, ಸಿನಿಮಾದ ಹೆಸರಿನಲ್ಲಿ ವಿಜೃಂಭಿಸುತ್ತವೆ. ಇಂಥ ಸಿನಿಮಾ ತಯಾರಿಕೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಕಪ್ಪು-ಹಣ ಕೈ ಬದಲಾಗುವ ಸಾಧನವಾಗಿ, ಭಾರೀ ಬೆಲೆಯ ಚಿತ್ರಕಲಾಕೃತಿಗಳನ್ನು ಬಳಸಿಕೊಂಡಂತೆ, ಕಲಾ-ಉದ್ದೇಶಗಳಿಗೆ ಹೊರತಾದ ದುಬಾರಿ ವೆಚ್ಚದ ಸಿನಿಮಾ, ಅನೈತಿಕ ಆರ್ಥಿಕ ಚಟುವಟಿಕೆಗಳ ಮಾಧ್ಯಮವಾಗುತ್ತದೆ. ಹೊರನೋಟಕ್ಕೆ ಭಾರಿ ಬಂಡವಾಳ-ತಾಂತ್ರಿಕ ಕೌಶಲಗಳೇ ಸಿನಿಮಾ ಪ್ರತಿಭೆಯೆಂಬ ಭ್ರಮೆ ನಿರ್ಮಾಣವಾಗುತ್ತದೆ.

ಹೀಗೆ ಬೇರೆಬೇರೆ ಕಾರಣಗಳಿಗಾಗಿ, ಸಾಮಾನ್ಯ ಜನರಿಗಾಗಿ ಎಂದು ಹೇಳಿಕೊಂಡು, ಬಂಡವಾಳಿಗರು ಬಹುಸಂಖ್ಯೆಯಲ್ಲಿ ತಯಾರಿಸುವ ವ್ಯಾಪಾರೀ-ಸಿನಿಮಾದ ಭರಾಟೆಯಲ್ಲಿ, ಸೃಜನಶೀಲರು-ಚಿಂತನಶೀಲರು ಶ್ರಮವಹಿಸಿ ನಿರ್ಮಿಸುವ,  ವಿರಳಸಂಖ್ಯೆಯ ಗಂಭೀರ-ಚಿತ್ರಗಳು ಬಹುಜನರ ಮುಖವನ್ನೇ ಕಾಣುವ ಅವಕಾಶವಿಲ್ಲದೆ ಮೂಲೆ ಸೇರುತ್ತವೆ. ಚಿತ್ರೋತ್ಸವಗಳಲ್ಲಿ ಕೆಲವರಿಗೆ ಮಾತ್ರ ತೋರಿಸಿ, ಡಬ್ಬದಲ್ಲಿಡಬಹುದಾದ ಗೊಡ್ಡುಚಿತ್ರಗಳೆಂಬ ಅಪಖ್ಯಾತಿಯನ್ನು ಪಡೆಯುತ್ತವೆ. ಸಿನಿಮಾ ತಾರೆಯರ ಅಂದ-ಚಂದ, ಆಯ್ಕೆ-ಅಭಿರುಚಿ, ಸಾಹಸ-ಸಂಬಂಧಗಳ ಗೋಜಲುಗಳು, ಸಿನಿಮಾದ ಹೆಸರಿನಲ್ಲಿ, ಸಿನಿಮಾಕ್ಕೆಂದೇ ಮೀಸಲಾದ ಪುರವಣಿಗಳಲ್ಲಿ ರೋಚಕವಾಗಿ ಚರ್ಚಿತವಾಗುತ್ತವೆ.

ಚಿತ್ರಸಹೃದಯತೆಯನ್ನು ಅರಿಯದ, ಕಲಾಮೀಮಾಂಸೆಯ ಪರಿಚಯವಿಲ್ಲದ ಪ್ರೇಕ್ಷಕರು, ಸಿನಿಮಾ ಎಂದರೆ ಏನು? ಯಾವುದು ಸಿನಿಮಾ; ಯಾವುದು ಅಲ್ಲ? ಎಂಬ ನಿರಂತರ ಪ್ರಶ್ನೆಗಳನ್ನು ಎದುರಿಸುತ್ತಾ ಗೊಂದಲದಲ್ಲಿ ಬೀಳುತ್ತಾರೆ. ಅಥವ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬಹುಸಂಖ್ಯೆಯ ಜನಪ್ರಿಯ ಅಥವ ಗಲ್ಲಾಪೆಟ್ಟಿಗೆಯ ದಾಖಲೆಗಳನ್ನು ಮುರಿದ ಸಿನಿಮಾಗಳಿಗೆ ತಂತ್ರಜ್ಞರಾಗಿ ಕೆಲಸಮಾಡಿದ್ದಾರೆಂಬ, ಅದೂ ಅಲ್ಲದಿದ್ದರೆ ಹಿರಿಯ ಸಿನಿಪತ್ರಕರ್ತನೆಂಬ ಹೆಗ್ಗಳಿಕೆ ಇದ್ದವರು ಒಂದು ಚಿತ್ರವನ್ನು ಹೊಗಳಿದರೆ ಅಥವ ತೆಗಳಿದರೆ ಅವರ ಅನುಭವದ ಮುಂದೆ ತಮ್ಮದೇನು ಎಂದು ಜನ ತೆಪ್ಪಗಾಗುತ್ತಾರೆ.

ಚಲನಚಿತ್ರ ಸಹೃದಯತೆಗೆ ಆಧಾರ ರೂಪದ  ಮಾದರಿಗಳಿವೆಯೆ?

ಶಾಬ್ದಿಕಭಾಷೆಯಲ್ಲಿ ರೂಪತಾಳಿದ ಬರಹಗಳೆಲ್ಲವೂ ಹೇಗೆ ಕಲಾಕೃತಿಗಳಲ್ಲವೋ, ಅಥವ ಕಲಾಕೃತಿಗಳಾಗಿ ಸೃಷ್ಟಿಗೊಂಡ ಸಾಹಿತ್ಯಕೃತಿಗಳೆಲ್ಲವೂ ಉತ್ತಮವೆನಿಸಿಕೊಳ್ಳುವುದು ಹೇಗೆ ಸಾಧ್ಯವಿಲ್ಲವೋ, ಅಂತೆಯೇ ಬಿಂಬಭಾಷೆಯಲ್ಲಿ ಮೈದಾಳಿದ ಚಿತ್ರಗಳೆಲ್ಲವೂ ಸಿನಿಮಾ ಎನಿಸಲು, ಅಥವ ಉತ್ತಮ ಬಿಂಬಕೃತಿಗಳೆಂದು ಮಾನ್ಯತೆ ಪಡೆಯುವುದು ಅಸಾಧ್ಯ. ಆದರೆ ಸಾಹಿತ್ಯಾಭ್ಯಾಸಿಗಳಿಗೆ ಗಂಭೀರ-ಸಾಹಿತ್ಯದ ವಿಭಿನ್ನ ಮಾದರಿಗಳು ಅಧ್ಯಯನದ ಪರಿಕರಗಳಾಗುವಂತೆ, ಗಂಭೀರ-ಸಿನಿಮಾದ ವಿಭಿನ್ನಮಾದರಿಗಳು ಸಿನಿಮಾಭ್ಯಾಸಿಗಳಿಗೆ ಅಧ್ಯಯನದ ಪರಿಕರಗಳಾಗುತ್ತವೆ. ಸಾಹಿತ್ಯದ ಕಮ್ಮಟಗಳಲ್ಲಿ, ವಾಲ್ಮೀಕಿ, ವ್ಯಾಸ, ಬೇಂದ್ರೆ, ಕುವೆಂಪು, ಅಡಿಗ, ಅಥವ ಹೋಮರ್, ಡಾಂಟೆ, ಶೇಕ್ಸ್‌ಪಿಯರ್ ಮುಂತಾದವರ ಆಯ್ದ ಕೃತಿಗಳಿಂದ ಪ್ರಾರಂಭಿಸಿ, ವರ್ತಮಾನದ ಚಿಂತನಶೀಲ-ಸೃಜನಶೀಲರ ಆಯ್ದ ಕೃತಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳುವಂತೆ, ಸಿನಿಮಾ ಕುರಿತ ಅಧ್ಯಯನ ಕಮ್ಮಟಗಳಲ್ಲಿ, ಸಹೃದಯ ತರಬೇತಿ ಕಾರ್ಯಾಗಾರಗಳಲ್ಲಿ, ಐಶನ್‌ಸ್ಟೀನ್, ವಿಟ್ಟೋರಿಯ ಡಿಸಿಕಾ, ಬರ್ಗ್‌ಮನ್, ಕುರಸಾವ, ಸತ್ಯಜಿತ್ ರಾಯ್ ಮೊದಲಾದವರ ಆಯ್ದ ಚಿತ್ರಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳುತ್ತಾರೆ. ಅದರಿಂದ ರೂಪಿತವಾದ ಸಂವೇದನೆ, ಅಭಿರುಚಿ, ವ್ಯಾಕರಣ, ಮೀಮಾಂಸೆ ಮತ್ತು ಬಿಂಬಭಾಷೆಯನ್ನು ಬಳಸುವ ವಿವಿಧ ಸಾಧ್ಯತೆಗಳನ್ನು ಎದುರಿಗಿರಿಸಿಕೊಂಡು ಅಥವ ಅವುಗಳ ಪರಿಪಾಕದಿಂದ ಹುಟ್ಟುವ ಎಲ್ಲವನ್ನೂ ಹಿನ್ನೆಲೆಯಾಗಿಸಿ ಸಮಕಾಲೀನ ಚಿಂತನಶೀಲರು, ಸೃಜನಶೀಲರು ಬಿಂಬಭಾಷೆಯಲ್ಲಿ ನಿರ್ಮಿಸುವ ಚಿತ್ರಗಳನ್ನು ಅಧ್ಯಯನ ಮಾಡಿ ಆಸ್ವಾದಿಸುವುದು ರೂಢಿಗೆ ಬಂದಿದೆ.

ಸಾವಯವವಾಗಿ ಬೆಸೆದುಕೊಂಡಿರುವ ಸಾಮಾಜಿಕತೆ ಮತ್ತು ಸೆನ್ಸಾರ್ಷಿಪ್

ಸಮಾಜದಲ್ಲಿನ ಉತ್ಪಾದನಾ-ಸಂಬಂಧಗಳು ಬದಲಾದಂತೆ, ರಾಜಕೀಯ ವ್ಯವಸ್ಥೆ ಮತ್ತು ಜೀವನಶೈಲಿಗಳೂ ಬದಲಾಗುತ್ತಾ, ಸಾಂಸ್ಕೃತಿಕಮೌಲ್ಯಗಳ ಪಲ್ಲಟವಾಗಿ, ಸೌಂದರ್ಯಮೀಮಾಂಸೆ ಮತ್ತು ಸಾಮಾಜಿಕನ್ಯಾಯಗಳ ಪರಿಕಲ್ಪನೆಗಳು ಅವುಗಳಿಗನುಗುಣವಾಗಿ, ಮರು ವ್ಯಾಖ್ಯಾನಕ್ಕೊಳಪಡುತ್ತವೆ. ಬದಲಾವಣೆ ನಿರಂತರವಾಗಿದ್ದರೂ, ನಿರ್ದಿಷ್ಟ ಘಟ್ಟಗಳಲ್ಲಿ ಮಾತ್ರ ಅದು ಬಲವತ್ತರವಾಗಿ ಪ್ರಕಟಗೊಂಡು, ಹಿಂದಿನ ಮೌಲ್ಯಗಳೊಂದಿಗೆ ಸಂಘರ್ಷವೇರ್ಪಡುತ್ತದೆ. ಆದರೆ ಜೀವನಕ್ಕೆ ಆಧಾರವಾದ ಮೂಲಭೂತ ಪರಿಕರಗಳ ಉತ್ಪಾದನೆ-ನಿಯಂತ್ರಣ-ಹಂಚಿಕೆ ಮಾನವೀಯವಾಗಿರುವವರೆಗೆ ಸಂಘರ್ಷವು ವಿಷಮತೆಯನ್ನು ಹುಟ್ಟಿಸುವುದಿಲ್ಲ. ಸಾಹಿತ್ಯ, ಸಿನಿಮಾ ಮುಂತಾದ ಸೃಜನಶೀಲ ಚಿಂತನಕಲಾಮಾಧ್ಯಮಗಳಲ್ಲಿ, ಮಾನವೀಯತೆಯನ್ನು ಆಧರಿಸಿದ ಭಿನ್ನಮತವು, ಅಮಾನವೀಯ ವ್ಯವಸ್ಥೆಯ ವಿರುದ್ಧ ವ್ಯಕ್ತವಾಗುತ್ತಲೇ ಇರುತ್ತದೆ. ವ್ಯವಸ್ಥೆಯಲ್ಲಿ ಮಾನವೀಯತೆಯ ಅಂಶ ಕಡಿಮೆಯಾಗುತ್ತಾ ಹೋದ ಹಾಗೆ, ಅದರ ದಮನಕಾರೀ ಗುಣವು ಹೆಚ್ಚುತ್ತಾ ಹೋಗುತ್ತದೆ. ಆಗ ಕಲಾಮಾಧ್ಯಮಗಳಲ್ಲಿ ವ್ಯಕ್ತವಾಗುವ ಭಿನ್ನಮತವು, ಆಳುವವರಿಗೆ ಅಸಹನೀಯವಾಗುತ್ತದೆ. ಇದನ್ನು ನಿಯಂತ್ರಿಸಲು ಸೆನ್ಸಾರ್‌ಷಿಪ್ ಎಂಬ ವ್ಯವಸ್ಥೆ ಇದೆ. ಇದನ್ನು ಮುಖ್ಯವಾಗಿ ಪ್ರಬಲ ದೃಶ್ಯಮಾಧ್ಯಮಗಳಾದ ನಾಟಕ ಮತ್ತು ಸಿನಿಮಾಗಳ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳನ್ನು ನಿಯಂತ್ರಿಸಲು ಆಳುವಜನ ಬಳಸುತ್ತಾರೆ. ಜನಸಮುದಾಯದ ಜೀವನಮಟ್ಟ ಹದಗೆಟ್ಟಿದ್ದಾಗ, ಸಮಾಜದ ನೈತಿಕತೆ ಕುಸಿದಿದ್ದಾಗ, ಸರ್ಕಾರಗಳ ನ್ಯಾಯವಿತರಣಾ ವ್ಯವಸ್ಥೆಗಳು ಜನರಿಗೆ ನ್ಯಾಯವೊದಗಿಸಲು ವಿಫಲವಾದಾಗ, ಭ್ರಾಮಕರೀತಿಯ ನ್ಯಾಯಪರಿಪಾಲನಾವಿಧಾನಗಳನ್ನು ಜನ ಮೊರೆಹೋಗುತ್ತಾರೆ.

ಕ್ರೌರ್ಯ, ಹಿಂಸೆ ಮತ್ತು ಅಶ್ಲೀಲತೆಇಂದಿನದೋ, ಹಿಂದಿನದೋ?

ಅಂಥ ಮನಃಸ್ಥಿತಿಯಲ್ಲಿ, ಅವರು ಪರ್ಯಾಯ ಅಧಿಕಾರಕೇಂದ್ರಗಳ ಕನಸು   ಕಾಣುತ್ತಾರೆ.  ಸತ್ಯನಿಷ್ಠ-ನ್ಯಾಯಪರ-ಬಡವರಬಂಧುವಾದ ಸರ್ವಶಕ್ತ ನಾಯಕನ ಬರುವಿಕೆಗಾಗಿ ಹಂಬಲಿಸುತ್ತಾರೆ. ಆಗ ಸಾಹಿತ್ಯ, ನಾಟಕ, ಸಿನಿಮಾಗಳಲ್ಲಿ ಸೂಪರ್‌ಹೀರೋಗಳು ಕಾಣಿಸಿಕೊಳ್ಳುತ್ತಾರೆ. ಜನಸಮುದಾಯದ ಆಶಯಗಳ ಬಿಂಬ-ಮುಖವಾಣಿಯಾಗಿ, ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಹೋರಾಡುವ, ಸತ್ಯನಿಷ್ಠ-ಸರ್ವಶಕ್ತ-ಸ್ಫುರದ್ರೂಪಿ ವೀರಾಗ್ರಣಿಗಳ ಪ್ರಪಂಚ, ಅಥವ ಸೌಂದರ್ಯದ ಹೆಸರಿನಲ್ಲಿ ಮೈಮರೆಸುವ ತ್ರಿಲೋಕಸುಂದರಿಯರ ಪ್ರೇಮಲೋಕಗಳು ಸಾಹಿತ್ಯ-ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅವರ ಹೊರರೂಪ-ವೇಷಭೂಷಣಗಳು ಆಯಾ ಕಾಲಘಟ್ಟದ ತಂತ್ರಜ್ಞಾನವನ್ನು ಆಧರಿಸಿ ಭಿನ್ನವಾಗಿರುತ್ತವೆ. ಉದಾಹರಣೆಗೆ, ವೀರಾಗ್ರಣಿಗಳು ಕಿರೀಟ ಧರಿಸಿ, ಕತ್ತಿ-ಗುರಾಣಿ ಹಿಡಿದು, ಅನ್ಯಾಯದ ವಿರುದ್ಧ ಪೌರಾಣಿಕ ಹಿಂಸೆಯನ್ನು ಬಳಸಿ, ತನ್ನ ಜನರಿಗೆ ನ್ಯಾಯ ಒದಗಿಸಬಹುದು. ಅಥವ ಪ್ಯಾಂಟು-ಷರಟು ಧರಿಸಿ, ಸ್ಟೆನ್‌ಗನ್ ಹಿಡಿದು/ಬಾಂಬೆಸೆದು, ಕ್ರಾಂತಿ ಮಾಡಬಹುದು. ತ್ರಿಲೋಕಸುಂದರಿಯರು ಪೌರಾಣಿಕ ಶೈಲಿಯಲ್ಲಿ, ಅರೆಬೆತ್ತಲಾಗಿ, ತಮ್ಮ ಸೌಂದರ್ಯದಿಂದ, ಒಳಿತು-ಕೆಡಕುಗಳನ್ನು ಪ್ರತಿನಿಧಿಸುವವರ ಮಧ್ಯೆ ಸಂಘರ್ಷವೇರ್ಪಡಿಸಬಹುದು. ಅಥವ ಆಧುನಿಕಶೈಲಿಯ ಸೌಂದರ್ಯದ ಉತ್ಪ್ರೇಕ್ಷಿತ ಮಾದರಿಗಳಾಗಿ ಕನಸುಗಳನ್ನು ಹೆಣೆಯಬಹುದು. ವೀರಾಗ್ರಣಿಗಳು ತಮ್ಮ ಎದುರಾಳಿಗಳನ್ನು ತ್ರಿಶೂಲದಿಂದ ತಿವಿದು ಸಾಯಿಸಲಿ/ ಬಂಡೆಯೆತ್ತಿ ಕುಕ್ಕಿ, ತಲೆಜಜ್ಜಿ ಕೊಲ್ಲಲಿ/ ಅಥವ ಬಾಂಬುಸಿಡಿಸಿ ಶತ್ರುವನ್ನು ನಾಶ ಮಾಡಲಿ/ ಮಚ್ಚು-ಲಾಂಗುಗಳಿಂದ ಹಲ್ಲೆಮಾಡಲಿ – ಅದು ಹಿಂಸೆಯೇ. ಅದರ ಅತಿರಂಜಿತ, ಆರಾಧನಾ ರೀತಿಯ ಬಳಕೆಯೂ ಸಹ  ವೈಭವೀಕರಣವೇ. ಆದರೆ ಪೌರಾಣಿಕ ಹಿಂಸೆಗೂ, ವರ್ತಮಾನದ ಜನರ ಭ್ರಾಮಕ-ನ್ಯಾಯದ ಅಪೇಕ್ಷೆಗೂ ಇರುವ ಚಾರಿತ್ರಿಕ ಮತ್ತು ಮಾನಸಿಕ ದೂರ ದೊಡ್ಡದು. ವರ್ತಮಾನದ ಹಿಂಸಾಪರಿಕರಗಳನ್ನು ವರ್ತಮಾನದ ಪಾತ್ರಗಳು ಬಳಸಿದಾಗ, ಈ ಅಂತರ ಅತ್ಯಂತ ಕಿರಿದಾಗಿರುತ್ತದೆ. ಆದ್ದರಿಂದ ಅದು ವರ್ತಮಾನದ ಸಂದರ್ಭದಲ್ಲಿ ಹಿಂಸೆಯೆನಿಸುತ್ತದೆ. ಅದಕ್ಕಿಂತ ಭಯಾನಕವಾದ ಪೌರಾಣಿಕ ಹಿಂಸೆ, ಹಿಂಸೆ ಎನಿಸುವುದೇ ಇಲ್ಲ. ಹಾಗೆಯೇ, ಪೌರಾಣಿಕ ಬೆತ್ತಲೆ ಸಹ ಅಶ್ಲೀಲವೆನಿಸುವುದಿಲ್ಲ. ಆಧುನಿಕ ಶೈಲಿಯ ಅಂಗಾಂಗಪ್ರದರ್ಶನ ಮಾತ್ರ ವರ್ತಮಾನದಲ್ಲಿ ಅಶ್ಲೀಲವೆನಿಸುತ್ತದೆ. ಈ ಸಂದಿಗ್ಧವನ್ನು ವ್ಯಾಪಾರೀ-ಸಿನಿಮಾ ತನ್ನ ಅನುಕೂಲಕ್ಕಾಗಿ ಹೇರಳವಾಗಿ ಬಳಸಿಕೊಳ್ಳುತ್ತದೆ. ದಮನಿತ ಜನರ ಭ್ರಾಮಕ ಪರ್ಯಾಯ-ಪರಿಹಾರಗಳ ಕನಸು-ಆಶಯಗಳನ್ನು, ಉದ್ಯಮದ ನೆಲೆಯಲ್ಲಿ ನಗದೀಕರಿಸಿಕೊಳ್ಳುತ್ತವೆ. ಆಳುವವರ ನ್ಯಾಯವನ್ನು ಭ್ರಾಮಕ ನೆಲೆಗಳಲ್ಲಿ ಪ್ರಶ್ನಿಸುವ-ವಿರೋಧಿಸುವ-ಧಿಕ್ಕರಿಸುವ ಕಲಾಮಾಧ್ಯಮಗಳ ಬಗ್ಗೆ, ಮುಖ್ಯವಾಗಿ ಸಿನಿಮಾದ ಬಗ್ಗೆ ಸರ್ಕಾರಗಳಿಗೆ ಆತಂಕವಿಲ್ಲ. ಸಿನಿಮಾದ ವೀರಾಗ್ರಣಿಗಳು ಕಲ್ಪಿತ ವ್ಯವಸ್ಥೆಯ ವಿರುದ್ಧ ಹೋರಾಡಿ ಗೆದ್ದರೆ ಇನ್ನೂ ಒಳ್ಳೆಯದೆ. ಏಕೆಂದರೆ ಭ್ರಾಮಕ ನೆಲೆಗಳಲ್ಲಿ ಮಾಡುವ ವ್ಯವಸ್ಥೆಯ ವಿರೋಧ ಮತ್ತು ಅದರ ಪರ್ಯಾಯಗಳು ಕ್ಷೇಮಕರವಾದವುಗಳು. ಇವು ಜನರ ಮಾನಸಿಕ ದಂಗೆಗೆ ಕಲ್ಪಿತ ಅಭಿವ್ಯಕ್ತಿಯನ್ನು ಒದಗಿಸಿ, ನೊಂದ ಜನರ ಅತೃಪ್ತಿಯನ್ನು ತತ್ಕಾಲಕ್ಕೆ ಶಮನಗೊಳಿಸುವ ಉಪಾಯಗಳು. ಇವು ಸದಾಕಾಲವೂ ಸಫಲವಾಗದೆ ಹೋಗಬಹುದು. ನಿರೀಕ್ಷಿತ ಫಲ ಕೊಡದಿರಬಹುದು. ಆದರೆ ಒಂದು ಹಂತದವರೆಗೆ, ಸಿನಿಮಾ ಜನರ ಭಿನ್ನಮತವನ್ನು ಮರೆಸಿ, ಕಲ್ಪಿತ ಬಿಡುಗಡೆಯ ಭ್ರಮಾಲೋಕಕ್ಕೊಯ್ದು, ಅವರನ್ನು ಸಾಂತ್ವನಗೊಳಿಸುತ್ತದೆ. ಇದು ಸಿನಿಮಾದ ರಾಜಕೀಯ.

ವ್ಯಾಪಾರೀ-ಸಿನಿಮಾ ಮತ್ತು ಆಳುವವರ ನ್ಯಾಯ-ನೀತಿಗಳ ಪರವಾಗಿರುವಂಥ ಚಿಂತನಶೀಲ-ಸೃಜನಶೀಲರು ನಿರ್ಮಿಸುವ ಚಿತ್ರಗಳು ಕೆಲವುಸಲ ಕ್ರಾಂತಿಕಾರಕವೆನಿಸುವ ಭಾವನೆಗಳನ್ನು ಜನರಲ್ಲಿ ಉತ್ತೇಜಿಸಬಹುದು. ಆದರೆ ಅವುಗಳ ಜನಪ್ರಿಯತೆಯನ್ನು ಯಶಸ್ಸನ್ನು, ಹಣದ ಅಳತೆಗೋಲಿನಿಂದಲೇ ನಿರ್ಧರಿಸುವುದಾದರೆ, ಅಂಥವು ಖಂಡಿತವಾಗಿಯೂ, ಜನರ ಭಿನ್ನಮತದ ವಿರುದ್ಧ ಕೆಲಸ ಮಾಡುವ ಹುಸಿಕ್ರಾಂತಿಯನ್ನು ಹುಟ್ಟುಹಾಕುತ್ತಿರುತ್ತವೆ. ಪ್ರತಿಗಾಮೀ ಧೋರಣೆಗಳನ್ನು ಪ್ರತಿಪಾದಿಸುವ ಚಿತ್ರಗಳಿಗಿಂತ ಹೆಚ್ಚು ಜನವಿರೋಧಿಗಳಾಗಿರುತ್ತವೆ. ಒಟ್ಟಿನಲ್ಲಿ ಇವನ್ನು ಜನರ ಭಿನ್ನಮತದ ವಿರುದ್ಧ ಮೈದಾಳುವ ಸಿನಿಮಾಗಳೆಂದು ಅರ್ಥಮಾಡಿಕೊಳ್ಳಬಹುದು. ಇವಕ್ಕೆ ಪರ್ಯಾಯವಾದ ಸಿನಿಮಾ, ಸೆನ್ಸಾರ್‌ಷಿಪ್ಪಿನ ನಿರ್ಬಂಧಗಳಿಗೊಳಪಟ್ಟೇ, ಜನರ ಭಿನ್ನಮತವನ್ನು ಬಿಂಬಿಸಬೇಕಾಗುತ್ತದೆ.

ಪ್ರಜ್ಞಾವಸ್ಥೆಯಲ್ಲಿ ವ್ಯಕ್ತಿ ನೈತಿಕವಾಗಿ ಆಲೋಚಿಸಲು ಇಷ್ಟಪಡದ, ಅದುಮಿಟ್ಟ ಎಷ್ಟೋ ಕಾಮನೆ-ಭಯಗಳು ಅವನು ನಿದ್ದೆಮಾಡುವಾಗ, ಸ್ವಪ್ನಗಳಾಗಿ ಕಾಣಿಸಿಕೊಳ್ಳುತ್ತವೆ. ಇವು ತೀವ್ರವಾದರೆ, ಅದನ್ನು ತಡೆದು, ನಿದ್ದೆಗೆ ಭಂಗಬಾರದಂತೆ ಕನಸಿನ ನಾಟಕವನ್ನು ಕಟ್ಟುವ ಸೆನ್ಸಾರ್‌ನ ಏರ್ಪಾಟು, ವ್ಯಕ್ತಿಯ ಮನಸ್ಸಿನಲ್ಲೆ ಇದೆ. ನಿದ್ದೆಯಲ್ಲೂ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡುವುದು, ಇದರ ಕೆಲಸ. ಆದರೆ ಭಯ, ತಾಕಲಾಟಗಳ ಅಸ್ವಾಸ್ಥ್ಯತೆ   ತೀವ್ರವಾಗುತ್ತಾ ಹೋದಂತೆ, ಅವು ವೇಷ ಬದಲಿಸಿಕೊಂಡು, ಸೆನ್ಸಾರ್ ಅನ್ನು ದಾಟಿ, ಕನಸಿನ ನಾಟಕದಲ್ಲಿ ಕಾಣಿಸಿಕೊಳ್ಳುತ್ತವೆ. ದುಃಸ್ವಪ್ನಗಳಾಗಿ ನಿದ್ದೆಗೆಡಿಸುತ್ತವೆ. ವ್ಯಕ್ತಿಯ ಜ್ವರದ ತಾಪದ ಮಂಪರುಸ್ಥಿತಿಯಲ್ಲಿ ಸೆನ್ಸಾರ್ ದುರ್ಬಲವಾಗಿರುವುದರಿಂದ, ಆಗ ದುಃಸ್ವಪ್ನಗಳು ಜಾಸ್ತಿ. ಆಳುವವರ ನೈತಿಕತೆಗನುಸಾರವಾಗಿ ಸಂಘಟಿತವಾದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲೆಂದೇ ಸರ್ಕಾರಗಳು ನೇಮಿಸುವ ಸೆನ್ಸಾರ್‌ಷಿಪ್, ನಾಗರಿಕನ ಮನಸ್ಸಿನಲ್ಲಿನ ಸೆನ್ಸಾರ್‌ನ ಸಾಮಾಜಿಕ ರೂಪ.

ಅಸ್ವಸ್ಥರಿಗೆ ದುಃಸ್ವಪ್ನ ಕಾಣಬಾರದೆಂದು ತಾಕೀತು ಮಾಡಿದಂತೆ…          

ವ್ಯಕ್ತಿ-ಸಮಾಜಗಳ ನೈತಿಕತೆಗಳ ವಿರೋಧ-ತಾಕಲಾಟ ಹೆಚ್ಚಿದಷ್ಟೂ, ವ್ಯಕ್ತಿಯ ಪಾಲಿಗೆ ದುಃಸ್ವಪ್ನಗಳು ಹೆಚ್ಚಾಗುತ್ತವೆ. ಆಗ ತನ್ನ ನೈತಿಕತೆಯಲ್ಲೆ ಸೂಕ್ತ ಮಾರ್ಪಾಡು ಮಾಡಿಕೊಳ್ಳದಿದ್ದರೆ, ವ್ಯಕ್ತಿ ಹುಚ್ಚನಾಗಬಹುದು. ಹಾಗೆಯೇ, ಸಮುದಾಯದ ಆಶಯಗಳಿಗೆ ಕುರುಡಾಗಿ, ದಮನಕಾರಿ ನೀತಿಯನ್ನು ಅನುಸರಿಸುವ ರಾಜಕೀಯ ವ್ಯವಸ್ಥೆಯಿಂದ, ಇಡೀ ಸಮಾಜವೇ ಅಸ್ವಸ್ಥವಾಗಬಹುದು. ಆಳುವವರ ನೈತಿಕತೆಯನ್ನಾಧರಿಸಿದ ನ್ಯಾಯ-ನೀತಿಗಳಿಗೆ ಜನರ ವಿರೋಧ ಹೆಚ್ಚುತ್ತಾ ಹೋದಂತೆ, ಅವು ಭ್ರಾಮಕವಾದ ಅಥವ ಕನಸಿನ ರೀತಿಯ ಪರಿಹಾರಗಳಾಗಿ ಸಾಹಿತ್ಯ, ನಾಟಕ, ಸಿನಿಮಾಗಳಲ್ಲಿ ಅಭಿವ್ಯಕ್ತಿ ಪಡೆಯುತ್ತವೆ. ಸರ್ಕಾರಗಳು ಅದನ್ನು ಅರ್ಥಮಾಡಿಕೊಂಡು, ತಮ್ಮ ನೀತಿಗಳಲ್ಲಿ ಅಗತ್ಯ ಬದಲಾವಣೆ ತರದೆ, ಸೆನ್ಸಾರ್‌ಷಿಪ್ಪಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಕ್ರಮವು, ಅಸ್ವಸ್ಥರಿಗೆ ದುಃಸ್ವಪ್ನಗಳನ್ನು ಕಾಣಬಾರದೆಂದು ತಾಕೀತು ಮಾಡಿದಂತೆ. ಸಮಾಜದ ಸ್ವಾಸ್ಥ್ಯ ಉತ್ತಮಗೊಳ್ಳುವ ಬದಲು ಮತ್ತಷ್ಟು ಕೆಡುತ್ತದೆ. ಸಾಮಾಜಿಕ ವಿಷಮತೆ ತೀವ್ರವಾಗುತ್ತಾ ಹೋಗುತ್ತದೆ. ಇದನ್ನು ಅರಿಯದವರು, ಸರ್ಕಾರಗಳನ್ನು ಟೀಕಿಸುವ, ಅಧಿಕಾರ-ಕೇಂದ್ರಗಳನ್ನು ವಿರೋಧಿಸುವ ಸಾಹಿತ್ಯ, ನಾಟಕ, ಸಿನಿಮಾಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸುವ ಬದಲು, ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಅಂಥ ಕಲಾಕೃತಿಗಳನ್ನೇ ನಿಷೇಧಿಸಬೇಕೆಂದು ಆಗ್ರಹಿಸುತ್ತಾರೆ.

ವಿರಳ ಪ್ರೇಕ್ಷಕರ ಒತ್ತಾಸೆಯ ವಿಲಕ್ಷಣ ಸಿನಿಮಾ

ಲಾಭಕ್ಕಿಂತ ಚಿಂತನಶೀಲತೆಗೆ-ಸೃಜನಶೀಲತೆಗೆ ಒತ್ತುಕೊಡುವ ಗಂಭೀರ-ಸಿನಿಮಾ ಹಣಮಾಡಬಾರದೆಂದೇನೂ ಇಲ್ಲ. ಆದರೆ ಅದು ಅಪವಾದವೇ ಹೊರತು ನಿಯಮವಲ್ಲ. ವ್ಯಕ್ತಿಗತ ಚಿಂತನೆ-ತಾತ್ವಿಕತೆ-ಭಿನ್ನಮತಗಳು ಸಮುದಾಯಪರ ಚಿಂತನೆ-ತಾತ್ವಿಕತೆ-ಭಿನ್ನಮತಗಳಾಗಿ, ಸಿನಿಮಾದ ಮೂಲಕ ನೇರವಾಗಿ ಬಿಂಬಿತವಾಗಲು ಸಾಂಸ್ಕೃತಿಕ ಅಥವಾ ರಾಜಕೀಯ ತೊಡಕುಗಳಿದ್ದಾಗ, ವಿರಳ ಪ್ರೇಕ್ಷಕರನ್ನು ಪಡೆದ ವಿಲಕ್ಷಣ ಸಿನಿಮಾ ತಯಾರಾಗುತ್ತವೆ. ಈ ಬಗೆಯ ಕಲಾಕೃತಿಗಳು ಸಾಹಿತ್ಯದಲ್ಲೂ ಸಿಗುತ್ತವೆ. ಚಿತ್ರಕಲೆಯಲ್ಲಂತೂ ಹೇರಳವಾಗಿ ದೊರೆಯುತ್ತವೆ. ವ್ಯಕ್ತಿವಿಶಿಷ್ಟತೆ, ವ್ಯಕ್ತಿಪಾರಮ್ಯ, ಅಮೂರ್ತತೆ, ಸುಪ್ತಪ್ರಜ್ಞೆಯ ಪ್ರತಿಮಾವಿಧಾನದ ಆಯ್ಕೆ, ಚಿಂತನೆಯ ಕ್ಲಿಷ್ಟತೆ, ಸಮಕಾಲೀನ ಸಂವೇದನೆಗೆ ದಕ್ಕದಷ್ಟು ಮುಂದೆ ಹೋಗಿರಬಹುದಾದ ದರ್ಶನ, ಕನಸು, ಆಲೋಚನೆಗಳು, ಬಿಂಬಭಾಷೆಯಲ್ಲಿ, ಕಿರುಚಿತ್ರ ಮತ್ತು ಡಾಕ್ಯುಮೆಂಟರಿ ಚಿತ್ರಗಳ ರೂಪದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯುತ್ತವೆ. ಇಂಥವು  ಬಿಂಬಸೌಂದರ್ಯಮೀಮಾಂಸೆಯ ತಿಳುವಳಿಕೆ ಮಾತ್ರವಲ್ಲದೆ, ಬಹುಶಿಸ್ತೀಯ ಅಧ್ಯಯನ, ಅಪಾರ ವ್ಯವಧಾನ ಮತ್ತು ಅನ್ವೇಷಣಾದೃಷ್ಟಿಯನ್ನು ಚಿತ್ರಸಹೃದಯರಿಂದ ನಿರೀಕ್ಷಿಸುತ್ತವೆ.

ಸುಪ್ತವಾಗಿ ಬಿಂಬಿತವಾಗುವ ರಾಜಕೀಯ ಧೋರಣೆ

ಬಿಂಬಕಲಾವಿದರೂ ಸಾಮಾಜಿಕ ಜೀವಿಗಳೇ ಆಗಿರುವುದರಿಂದ, ಅವರಿಗೂ ಉಳಿದವರಿಗಿರುವಂತೆ, ಒಂದಲ್ಲ ಒಂದು ರಾಜಕೀಯ ಧೋರಣೆ, ಜೀವನದರ್ಶನ ಇರುವುದು ಅನಿವಾರ್ಯ. ಸಿನಿಮಾದಂಥ ಸೂಕ್ಷ್ಮಭಾಷೆಯಲ್ಲಿ ಕೃತಿರಚನೆ ಮಾಡುವ ಕಲಾವಿದರು, ಪ್ರಜ್ಞಾಪೂರ್ವಕವಾಗಿ ಅಥವ ಸುಪ್ತವಾಗಿ ತಮ್ಮ ರಾಜಕೀಯ ಆಯ್ಕೆಯನ್ನು ಸಿನಿಮಾದಲ್ಲಿ ಬಿಂಬಿಸಬಹುದು. ಹಾಗೆಯೇ ಚಲನಚಿತ್ರ ಸಹೃದಯರಿಗೂ, ಒಂದಲ್ಲ ಒಂದು ರಾಜಕೀಯ ಧೋರಣೆ ಇದ್ದೇ ಇರುತ್ತದೆ. ಹೀಗಾಗಿ ಮಾನವೀಯತೆ, ವೈಜ್ಞಾನಿಕದೃಷ್ಟಿ ಮತ್ತು ಕಲಾತ್ಮಕತೆಗಳನ್ನು ಬೆಸೆದ ಅತ್ಯುನ್ನತ ಸಾಹಿತ್ಯದಂತೆ, ಅಥವ ಯಾವುದೇ ಗಂಭೀರ ಕಲಾಕೃತಿಯಂತೆ, ಸಿನಿಮಾದಲ್ಲೂ ವ್ಯವಸ್ಥೆಯ ಬಗ್ಗೆ ಕಲಾಕಾರನ ವಿಮರ್ಶಾತ್ಮಕ ಧೋರಣೆ ಬಿಂಬಿತವಾಗುವುದು ಅನಿವಾರ್ಯ. ಆದ್ದರಿಂದ ಎಲ್ಲ ಗಂಭೀರ ಚಿತ್ರಗಳೂ, ಕಲಾಕಾರರ ರಾಜಕೀಯದೃಷ್ಟಿಯನ್ನು, ಅನೇಕ ಸಲ ಪರ್ಯಾಯದ ಆಯ್ಕೆಯನ್ನು, ಎಗ್ಗಿಲ್ಲದೆ, ಸಿನಿಮಾದ ಒಳಗಿನಿಂದಲೇ ಚಿತ್ರಸಹೃದಯರ ಮುಂದಿಡುತ್ತವೆ. ಅಂಥ ಚಿತ್ರಗಳ ಅನುಭವದ ಚರ್ಚೆ ಅನಿವಾರ್ಯವಾಗಿ ಧ್ರುವೀಕರಣ ಗೊಂಡು, ಎಡಪಂಥೀಯ-ಬಲಪಂಥೀಯ, ಪ್ರಗತಿಪರ- ಪ್ರತಿಗಾಮಿ, ಜನಪರ-ಜನವಿರೋಧಿ, ಕ್ರಾಂತಿಕಾರಕ-ಸುಧಾರಣವಾದಿ ಮುಂತಾದ ವಿವಿಧ ತಾತ್ವಿಕ ಮತ್ತು ರಾಜಕೀಯ ನಿಲುವುಗಳ ನೆಲೆಯಲ್ಲಿ ಏರ್ಪಡಬಹುದು. ಹೇಗೇ ಆದರೂ, ನಿರ್ಲಿಪ್ತ-ಸಿನಿಮಾ ಅಥವ ನಿಷ್ಪಕ್ಷಪಾತಿ-ಸಿನಿಮಾ ಎಂಬುದಿಲ್ಲ. ಎಲ್ಲ ಕಲಾಕೃತಿಗಳೂ ಕಲಾಕಾರರಂತೆ ಪಕ್ಷಪಾತಿಗಳೆ. ಆದ್ದರಿಂದ ಸಿನಿಮಾ ಚರ್ಚೆಯಲ್ಲಿ ರಾಜಕೀಯ ಧೋರಣೆಗಳನ್ನು ತರಬಾರದು ಎಂಬ ನಿರೀಕ್ಷೆ ಸಾಧುವಲ್ಲ.

ಮೂಲತ: ಬಂಡವಾಳಶಾಹಿದೃಷ್ಟಿಯ ಮಾನವೀಯತೆ, ವೈಜ್ಞಾನಿಕದೃಷ್ಟಿ ಮತ್ತು ಕಲಾತ್ಮಕತೆಗಳ ಪ್ರಾಮಾಣಿಕ ನಿರ್ವಚನವು, ನಿರ್ದಿಷ್ಟವಾಗಿ ಆಳುವವರ್ಗದ ಹಿತಾಸಕ್ತಿಯನ್ನು ಕಾಯುವಂತಿದ್ದು, ಸಮುದಾಯ ಮತ್ತು ದುಡಿಮೆಗಾರರ ಹಿತಾಸಕ್ತಿಗೆ ವಿರೋಧವಾಗಿರುತ್ತದೆ. ಈ ವ್ಯತ್ಯಾಸವನ್ನು ಮನ್ನಿಸದೆ ಸಿನಿಮಾದ ರಾಜಕೀಯ ನಿಲುವನ್ನು ಅರ್ಥಮಾಡಿಕೊಳ್ಳವುದು ಸಾಧ್ಯವಿಲ್ಲ.

ಸಿನಿಮಾ ತನ್ನ ನಿಲುವನ್ನು ಚಿತ್ರಸಹೃದಯರಮೇಲೆ ಹೇರುವುದಿಲ್ಲ ಎಂದರೆ, ಕಲಾಕಾರರಿಗೆ ತಮ್ಮದೇ ಆದ ರಾಜಕೀಯ ನಿಲುವೇ ಇಲ್ಲ ಎಂದರ್ಥವಲ್ಲ. ಅವರು ಎಷ್ಟೇ ಜಾಣತನದಿಂದ ಸಿನಿಮಾದ ಶಿಲ್ಪದಲ್ಲಿ ಮರೆಮಾಚಿದ್ದರೂ, ಬಿಂಬಕೃತಿ, ಉಳಿದ ಯಾವುದೇ ಕಲಾಕೃತಿಯಂತೆ ಅದನ್ನು ನಗ್ನವಾಗಿಸುತ್ತದೆ. ಚಿತ್ರಸಹೃದಯರು ಯಾವುದೇ ರಾಜಕೀಯ ನಿಲುವಿಗೆ ಬಾರದಂತೆ ಸಿನಿಮಾವನ್ನು ನಿರ್ವಹಿಸುವುದೂ ವ್ಯವಸ್ಥೆಯಪರವಾದ ರಾಜಕೀಯವೇ. ಮನುಷ್ಯಸಂಬಂಧಗಳನ್ನು ಸಾಮಾಜಿಕ-ರಾಜಕೀಯ ಸಂದರ್ಭಗಳಲ್ಲಿಟ್ಟು ನೋಡದೆ, ನಿರ್ವಾತದ ತಾತ್ವಿಕಪ್ರಶ್ನೆಯಾಗಿ ಅರ್ಥಮಾಡಿಕೊಳ್ಳಲು ಪ್ರೇರೇಪಿಸುವ-ಒತ್ತಾಯಿಸುವ ಸಿನಿಮಾ ಸಹ ವ್ಯವಸ್ಥೆಯೊಂದಿಗಿನ ಭಿನ್ನಮತವನ್ನು ಮರೆಮಾಚಿಸುವ ರಾಜಕೀಯವನ್ನು ಒಳಗೊಂಡಿರುತ್ತದೆ. ಸಿನಿಮಾ ಸಹ ಒಂದು ವಿಶಿಷ್ಟ ಚಿಂತನಾಕ್ರಮ ಮತ್ತು ಸಹೃದಯರೊಂದಿಗೆ ಸಂವಾದ ಏರ್ಪಡಿಸುವ ಪ್ರಬಲ ಸಾಧನ. ಆದರೆ ಇಂಥ ಸಿನಿಮಾಗಳು ಚಿತ್ರಸಹೃದಯರ ಚಿಂತನಾಶಕ್ತಿ, ಸಂವಾದ ಶಕ್ತಿಯನ್ನೇ ಬುಡಮೇಲುಮಾಡಲು ಪ್ರಯತ್ನಿಸುತ್ತವೆ. ಸಿನಿಮಾಕ್ಕೆ ಅಗಾಧಶಕ್ತಿ ಇದೆ ಎನ್ನುವುದು ಅನೇಕ ಅರ್ಥದಲ್ಲಿ ನಿಜ.

ಪರಸ್ಪರ ಅವಲಂಬನೆಯ ಚಿತ್ರೋದ್ಯಮ ಪಿರಮಿಡ್ 

ಸಿನಿಮಾ, ತಯಾರಿಕೆ ಮತ್ತು ಆಸ್ವಾದನೆಯ ನೆಲೆಯಲ್ಲಿ, ಚಿಂತನೆ-ರಂಜನೆ-ಟೀಕೆ-ವಿಮರ್ಶೆ ಮತ್ತು ಪ್ರತಿಭಟನೆಗಳನ್ನು ಬಿಂಬಭಾಷೆಯಲ್ಲಿ ರೂಪುಗೊಳಿಸುವ ಸಾಮುದಾಯಿಕ ಸೃಜನಕ್ರಿಯೆ. ಒಂದು ಕೊನೆಯಲ್ಲಿ ನಿರ್ದೇಶಕ-ಕಲಾವಿದರಿದ್ದರೆ ಮತ್ತೊಂದು ಕೊನೆಯಲ್ಲಿ ಸಹೃದಯ-ಪ್ರೇಕ್ಷಕರು ಇದ್ದಾರೆ. ಇವರ ನಡುವೆ ಉದ್ಯಮಶೀಲರು, ತಂತ್ರಜ್ಞರು ಇದ್ದಾರೆ. ದಿನದಿನವೂ ಹೊಸದಾಗಿ ಆವಿಷ್ಕಾರಗೊಳ್ಳುವ ತಂತ್ರಜ್ಞಾನ ಇದೆ.  ಹೀಗೆ ಸಿನಿಮಾ ಒಟ್ಟಿಗೆ, ಸೃಜನಶೀಲತೆ-ತಾಂತ್ರಿಕತೆ-ಬಂಡವಾಳ ಮತ್ತು ಸಹೃದಯತೆ-ಉಪಭೋಗಗಳ ಉತ್ಪನ್ನ ಮತ್ತು ನೆಲೆ.  ಇವೆಲ್ಲವುಗಳ ಪರಸ್ಪರ ಅವಲಂಬನೆಯ ಮೇಲೆ ಅಸ್ತಿತ್ವ ಪಡೆಯಬೇಕಾದ ಸಂಕೀರ್ಣ ತಯಾರಿಕೆ. ಏಕಕಾಲಕ್ಕೆ ಸರಕು ಮತ್ತು ಕಲಾಕೃತಿ. ಇದು ಸಿನಿಮಾಕ್ಕೆ ಇರುವ ಶಕ್ತಿ ಮತ್ತು ನಿರ್ಬಂಧ. ಉಳಿದ ಯಾವುದೇ ಕಲಾಪ್ರಕಾರಕ್ಕೂ, ಕಲಾಭಿವ್ಯಕ್ತಿಗೂ ಇಲ್ಲದ ಗುಣ ಮತ್ತು ದೋಷ. ಕತೆ, ಕವನ, ಕಾದಂಬರಿ ಮತ್ತು ನಾಟಕಗಳನ್ನು ಬರೆಯುವವರು ಪೆನ್ನು ಮತ್ತು ಕಾಗದ ತಯಾರಿಸುವ ಉದ್ದಿಮೆಗಾರರ ಮೇಲೆ ಅವಲಂಬಿತರಾಗಿರಬೇಕಿಲ್ಲ. ಅವುಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಿ, ಮಾರುವಾಗ ಮಾತ್ರ ನೇರವಾಗಿ ವ್ಯಾಪಾರಿಗಳ ಹಿಡಿತಕ್ಕೆ ಒಳಪಡುತ್ತಾರೆ. ಸಂಗೀತಗಾರರು ಮತ್ತು ಚಿತ್ರಕಾರರು ಬಂಡವಾಳಿಗರ ಆಶ್ರಯ ಪಡೆಯದೆ ಕೇವಲ ತಮ್ಮ ಸೃಜನಶೀಲತೆಯ ಬಲದಿಂದ ಜೀವಿಸುವುದು ಕಷ್ಟ. ಆ ಮಟ್ಟಿಗೆ ಅವರು ಅಸ್ವತಂತ್ರರೆ. ಆದರೆ ಇದರಿಂದ ಅವರ ಕಲೆಯ ಅಭಿವ್ಯಕ್ತಿಯೇ ಬಂದಾಗುವುದಿಲ್ಲ. ಆದರೆ ಸಿನಿಮಾ, ತಯಾರಿಕೆ ಮತ್ತು ವಿತರಣೆಯ ಎಲ್ಲ ಹಂತಗಳಲ್ಲೂ ಬಂಡವಾಳಿಗರ ಮೇಲೆ ಅವಲಂಬಿತವಾಗಿರುವ ಅಭಿವ್ಯಕ್ತಿ ಮಾಧ್ಯಮ. ಸಾಮುದಾಯಿಕ ಕ್ರಿಯೆಯಾಗಿ, ಕನಸುಗಾರಿಕೆಯ ಅಭಿವ್ಯಕ್ತಿಯಾಗಿ, ಆಧುನಿಕ ಜಾನಪದವೇ ಆಗಿದ್ದರೂ, ಉದ್ಯಮಿಗಳ ನೇರಹಿಡಿತದಲ್ಲೇ ನೆಲೆ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇರುವ ಆಧುನಿಕ ಸರಕು. ಆದ್ದರಿಂದ, ಸಿನಿಮಾ ತಯಾರಿಕೆ ಎಲ್ಲರಿಗೂ ದಕ್ಕುವಂಥದ್ದಲ್ಲ. ಸಿನಿಮಾದ ಈ ಇಕ್ಕಟ್ಟು ಎಷ್ಟೋ ಸೂಕ್ಷ್ಮಜ್ಞ-ಚಿಂತನಶೀಲ-ಪ್ರತಿಭಾವಂತ ಸೃಜನಶೀಲರು ಸಿನಿಮಾ ಮಾಡಲು ಹಿಂಜರಿಯುವಂತೆ ಮಾಡಿದೆ. ಇದರಿಂದ ಬಂಡವಾಳದ ಬಲವುಳ್ಳ, ಅಸೂಕ್ಷ್ಮ-ಮಂದಪ್ರತಿಭೆಯ ಜನರೇ, ಸಿನಿಮಾ ತಯಾರಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಜೃಂಭಿಸುತ್ತಾರೆ. ಅಥವ ಬಂಡವಾಳಿಗರ ಹಿತಾಸಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಲ್ಲ, ಸೀಮಿತ ಸೃಜನಶೀಲಶಕ್ತಿಯ ಕಲಾಕಾರರು ಮಾತ್ರ ಸಿನಿಮಾದಲ್ಲಿ ಮೇಲುಗೈ ಪಡೆಯುವಂತೆ ಆಗಿದೆ. ಒರಟು ಸಿನಿಮಾ ತಯಾರಕರ ನಡುವೆ, ಸೀಮಿತಪ್ರತಿಭೆಯ ಕಲಾಕಾರರೇ ಸರ್ವಶ್ರೇಷ್ಠರೆಂಬ ಅತಿರಂಜಿತ, ಉತ್ಪ್ರೇಕ್ಷಿತ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಎರಡು ದಶಕಗಳ ಹಿಂದಿನ ಕಳಪೆ ಚಿತ್ರಗಳು ವರ್ತಮಾನದ ಸರಕು ಸಿನಿಮಾಗಳ ಗುಂಪಿನಲ್ಲಿ ಕಲಾತ್ಮಕ ಸೃಷ್ಟಿಯೆಂದು ತೋರುವ ಹಾಗೆ, ಇಂದಿನ ಕಳಪೆ ಚಿತ್ರಗಳೇ ಒಂದೆರಡು ದಶಕಗಳು ಕಳೆದ ಮೇಲೆ, ಪ್ರತಿಭಾನ್ವಿತ ಚಿತ್ರಗಳೆಂದು ಮನ್ನಣೆ ಪಡೆಯುತ್ತವೆ. ದೇಶೀಯವಾಗಿ ಮತ್ತು ಜಾಗತಿಕವಾಗಿ ಕಂಡುಬರುವ ಸಿನಿಮಾಜಗತ್ತಿನ ಸಾಮಾನ್ಯ ವಿದ್ಯಮಾನ ಇದು.

ಸಾಹಿತ್ಯದ ದೃಶ್ಯೀಕರಿಸಿದ ಘಟನಾವಳಿಯೇ ಅದರ ಸಿನಿಮಾ ರೂಪವಲ್ಲ

ಸಿನಿಮಾಸಹೃದಯತೆ ಮತ್ತು ಮೌಲ್ಯನಿಷ್ಕರ್ಷೆಯಲ್ಲಿ ಗೊಂದಲವನ್ನುಂಟುಮಾಡುವ ಮತ್ತೊಂದು ಅಂಶವಿದೆ. ಉಳಿದ ಕಲಾಪ್ರಕಾರಗಳಲ್ಲಿ ಪರಿಣತರಾದ ಕಲಾಕಾರರು, ಸಿನಿಮಾಭಾಷೆಯಲ್ಲಿ ಪರಿಣತರಾಗದೆಯೂ ತಮ್ಮ ಕಥೆ, ಕಾದಂಬರಿ, ನಾಟಕಗಳನ್ನು ದೃಶ್ಯೀಕರಿಸಿ ಸಿನಿಮಾದ ಹೆಸರಿನಲ್ಲಿ ಜನರ ಮುಂದೆ ಇಡುವುದು ಆ ಅಂಶ. ಆಗೆಲ್ಲಾ ಚಿತ್ರಸಹೃದಯರು, ದೃಶ್ಯೀಕರಿಸಿದ ಸಾಹಿತ್ಯವನ್ನೇ, “ಸಿನಿಮಾ” ಎಂದು ಚರ್ಚಿಸುವ ಸಂದರ್ಭ ನಿರ್ಮಾಣವಾಗುತ್ತದೆ. ಸಿನಿಮಾಭಾಷೆಯನ್ನು ಅರಿಯದ ಅಥವ ಬಳಸಲಾಗದ ಕಲಾಕಾರ ಸಾಹಿತ್ಯದ ಬಲದಿಂದ ಚಿತ್ರಸಹೃದಯತೆಯನ್ನು ನಿರ್ದೇಶಿಸುವಂತಾಗುತ್ತದೆ. ಸಿನಿಮಾಭಾಷೆಯಲ್ಲಿ ಪಳಗದ ಇತರರು ಕನ್ನಡದ  ಸಾಹಿತ್ಯದಿಗ್ಗಜರ, ಅಥವ ಸ್ವತಹ  ಕನ್ನಡದ ಸಾಹಿತ್ಯದಿಗ್ಗಜರೇ ಅವರ ಕೃತಿಗಳನ್ನು ದೃಶ್ಯೀಕರಿಸಿರುವ ಚಲನಚಿತ್ರಗಳ ಉದಾಹರಣೆ ಸಾಕಷ್ಟಿವೆ. ಕಾರಂತ, ಕಾರ್ನಾಡ, ಅನಂತಮೂರ್ತಿ, ಲಂಕೇಶ, ಮುಂತಾದ ಕನ್ನಡ ಸಾಹಿತ್ಯದ ಖ್ಯಾತನಾಮರ ಕೃತಿಗಳನ್ನು ಆಧರಿಸಿ ಮಾಡಿದ ಚಿತ್ರಗಳನ್ನು ಸಿನಿಮಾಭಾಷೆಯಲ್ಲಿ ನಿರ್ಮಿಸಿದ ಕಲಾಕೃತಿಗಳೆಂದು ಒಪ್ಪಿಕೊಳ್ಳುವುದು ಕಷ್ಟ. ಬಿಂಬಭಾಷೆಗೆ ವಿಶಿಷ್ಟವೂ, ಅನನ್ಯವೂ ಆಗಿರುವ ಚಿತ್ರಪ್ರತಿಮೆ, ಚಿತ್ರನುಡಿಗಟ್ಟು, ಚಿತ್ರಸಂಕೇತಗಳನ್ನು ಬಳಸದೆ ಮಾಡಿದ ಸಾಹಿತ್ಯದ ದೃಶ್ಯೀಕರಣವೇ ಸಿನಿಮಾ ಅಲ್ಲ ಎಂಬುದನ್ನು ಮನಗಾಣಿಸುವುದು ಮತ್ತೂ ಕಷ್ಟ.

ಸಿನಿಮಾ, ಕಲ್ಪಿತ ವಾಸ್ತವ ಮತ್ತು ಟೀವಿ

ಸದ್ಯದ ಸಾಮ್ರಾಜ್ಯಶಾಹೀ ರಾಜಕೀಯ ಮತ್ತು ಜಾಗತೀಕರಣದ ಆರ್ಥಿಕತೆಯಲ್ಲಿ, ಕಲ್ಪಿತವಾಸ್ತವವು ಬದುಕಿನ ವಾಸ್ತವವನ್ನು ಬಿಂಬಿಸುವ ಬದಲು ತಾನೇ ಅದರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಕೇಂದ್ರೀಕರಣ, ದೂರ-ಸಂವೇದಿ-ನಿಯಂತ್ರಣ ಮತ್ತು ವ್ಯಾಪಾರೀಕರಣಗಳು, ತಮ್ಮ ಸಮರ್ಥನೆ-ಪೋಷಣೆಗಳಿಗೆ ಕಲ್ಪಿತವಾಸ್ತವದ ಸಲಕರಣೆಗಳನ್ನು, ಅದರ ವಿವಿಧ ರೂಪಗಳಲ್ಲಿ ಬಳಸಿಕೊಳ್ಳುತ್ತಿವೆ. ಪರಿಸರಸ್ನೇಹಿ ವ್ಯವಸಾಯದ ಬದಲು ಔದ್ಯಮಿಕ ಆಹಾರ ಉತ್ಪಾದನೆ, ನೈಸರ್ಗಿಕಮೂಲದ ನೀರಿನ ಬದಲು ಸಂಸ್ಕರಿಸಿದ ನೀರಿನ ವಿವಿಧ ರೂಪಗಳು, ತಾವೇ ಸ್ವತ: ಭಾಗವಹಿಸಿ, ಆನಂದಿಸಬೇಕಾದ ಕ್ರೀಡೆ-ದೈಹಿಕಶ್ರಮದ ಚಟುವಟಿಕೆಗಳ ಬದಲು ದೃಶ್ಯೀಕರಿಸಿದ ಕ್ರೀಡೋತ್ಸವಗಳು, ಪರಸ್ಪರ ಭೇಟಿಯ ಮೂಲಕ ಏರ್ಪಡಿಸಿಕೊಳ್ಳಬೇಕಾದ ಸಂಬಂಧಜಾಲದ ಬದಲು ದೂರಸಂಪರ್ಕ ಸಾಧನಗಳ ಮೇಲೆ ಅವಲಂಬಿತವಾದ ಸ್ನೇಹ-ಬಂಧುತ್ವಗಳು, ನಿಜ ಜೀವನದ ಸಮಸ್ಯೆಗಳ ಚರ್ಚೆ-ಪರಿಹಾರಗಳ ಭೌತಿಕ-ರಾಜಕೀಯ ಅನ್ವೇಷಣೆಯ ಬದಲು ಕಲ್ಪಿತ ಸಮಸ್ಯೆಗಳ ಚರ್ಚೆ-ಪರಿಹಾರಗಳ ಬೌಧ್ಧಿಕ-ಭಾವನಾತ್ಮಕ ಮತ್ತು ತಾತ್ವಿಕ ಅನ್ವೇಷಣೆಗಳು, ಸಮುದಾಯದ ಜೀವನವನ್ನು ಆಕ್ರಮಿಸಿವೆ. ಸಿನಿಮಾ ಸಹ ತನ್ನ ರೂಢಿಗತ ರೂಪವನ್ನು ಬದಲಿಸಿ, ಕಿರುತೆರೆಯ ಭಾಷೆಯಾಗಿ ರೂಪುಗೊಂಡಿದೆ. ಸಿನಿಮಾದ ವಿಸ್ತರಣೆಯಾಗಿದ್ದ ಟೀವಿ ಮಾಧ್ಯಮವು, ಬಂಡವಾಳದ ವಿಸ್ತಾರದಿಂದ ಸಂಕುಚಿತಗೊಂಡಿರುವ ಈ ವಿಶ್ವದಲ್ಲಿ, ಸಿನಿಮಾವನ್ನೇ ತನ್ನ ಹೊಟ್ಟೆಯೊಳಕ್ಕೆ ಸೇರಿಸಿಕೊಂಡಿದೆ. ಸಿನಿಮಾದ ಬದಲು ಟೀವಿ ಎನ್ನುವಂತಾಗಿದೆ. ಈ ಮೂಲಕ, ಜನಸಮುದಾಯವನ್ನು ಜಾಗತಿಕ ವರ್ತುಲಗಳೊಳಕ್ಕೆ ಸೆಳೆಯುತ್ತಿರುವ ಕಿರುತೆರೆಯ ಚಿತ್ರ-ಧಾರಾವಾಹಿಗಳು ಚಿತ್ರಸಹೃದಯತೆಯಲ್ಲಿನ ನವಿರುಗಳನ್ನು ಕ್ರಮೇಣ ಅಳಿಸಿಹಾಕುತ್ತಿವೆ.  ಇದರಿಂದ ಸಾಹಿತ್ಯಕವಾಗಿ ಕಳಪೆಯೆಂದು ಮೂಲೆಗುಂಪಾಗಿದ್ದ ಸಾಹಿತ್ಯ, ದೃಶ್ಯೀಕರಣದ ಮೂಲಕ ಕಿರುತೆರೆಯಲ್ಲಿ ಅಧಿಕೃತತೆಯನ್ನು ಪಡೆದುಕೊಳ್ಳುವ ವಿಪರ್ಯಾಸ ಬಂದಿದೆ. ಸಿನಿಮಾಭಾಷೆಗೂ, ಸಾಹಿತ್ಯಭಾಷೆಗೂ ಇರುವ ಮೂಲಭೂತ ವ್ಯತ್ಯಾಸ ಮತ್ತಷ್ಟು ಮಸುಕುಗೊಂಡಿದೆ.

ಶಾಸನಗಳು, ಹಾಸುಗಲ್ಲುಗಳು, ತಾಳೆಗರಿ, ತಾಮ್ರಪತ್ರ, ಕಾಗದದ ಮೇಲೆ ರೂಪ ಪಡೆಯುತ್ತಿದ್ದ ಸಾಹಿತ್ಯಕೃತಿಗಳು, ಈಗ ವಿದ್ಯುನ್ಮಾನ ಸಾಧನಗಳ ಮಾಧ್ಯಮದಲ್ಲಿ ಪ್ರಸರಣವಾಗುತ್ತಿರುವಂತೆ, ಸೆಲ್ಯುಲಾಯಿಡ್ ಮಾಧ್ಯಮದಲ್ಲಿ ರೂಪಪಡೆಯುತ್ತಿದ್ದ ಸಿನಿಮಾ ಪ್ಲಾಸ್ಟಿಕ್-ಪಟ್ಟಿ-ಸುರುಳಿ, ಪ್ರೊಜೆಕ್ಟರುಗಳನ್ನು ತೊರೆದು, ಸಿಡಿ, ಮತ್ತಿತರ ವಿದ್ಯುನ್ಮಾನ ಸಾಧನಗಳ ಮಾಧ್ಯಮಗಳಲ್ಲಿ ಜನರನ್ನು ತಲುಪುತ್ತಿದೆ. ಅಂತರ್ಜಾಲ ಮತ್ತು ಸೆಲ್‌ಫೋನ್‌ಗಳಲ್ಲಿ ಸಿನಿಮಾ ನೋಡುವ ಸೌಲಭ್ಯವು, (ಗ್ರಾಹಕಪ್ರವೃತ್ತಿಯನ್ನು ಪ್ರಚೋದಿಸುವ) ನಗ್ನ ಉದ್ದೇಶಗಳ ಔದ್ಯಮಿಕ ಮಾರುಕಟ್ಟೆಯಾಗಿದೆ. ಜಾಹಿರಾತು ಸಾಹಿತ್ಯವನ್ನು ಕರಪತ್ರದಲ್ಲಿ ಮುದ್ರಿಸುವುದು ಹಾಗೂ ಜಾಹಿರಾತು ಫಲಕಗಳಲ್ಲಿ ಬಿಂಬಿಸುವುದು – ಎರಡೂ ಪರಿಣಾಮದಲ್ಲಿ ಒಂದೇ ಅಲ್ಲ. ಸಿನಿಮಾವನ್ನು ೩೫ ಮಿ.ಮಿ. ಅಥವ ೧೬ ಮಿ.ಮಿ. ಆಕೃತಿಯ ವಿಸ್ತಾರದ ಪರದೆಯ ಮೇಲೆ ನೋಡುವ ಅನುಭವಕ್ಕೂ, ಕಿರುಪರದೆಗಳ ಮೇಲೆ ನೋಡುವ ಅನುಭವಕ್ಕೂ ಅಗಾಧ ವ್ಯತ್ಯಾಸವಿದೆ. ಮನುಷ್ಯನ ಸಂಕೀರ್ಣ ಅನುಭವವನ್ನು, ಅತ್ಯುನ್ನತ ಆಲೋಚನೆ-ಚಿಂತನೆಗಳನ್ನು ಮೂರ್ತೀಕರಿಸಬಲ್ಲ ಶಕ್ತಿ ಇರುವ ಸಿನಿಮಾಭಾಷೆಯ ಸೌಂದರ್ಯದ ಸಾಧ್ಯತೆಗಳನ್ನು ಬಿಂಬಿಸಲು ವಿಸ್ತಾರ ಪರದೆಯೇ ಬೇಕು. ದಿನದಿನವೂ ಆವಿಷ್ಕಾರಗೊಳ್ಳುತ್ತಿರುವ ನವನವೀನ ತಾಂತ್ರಿಕ ಸೌಲಭ್ಯಗಳು, ಸಿನಿಮಾದ ಸಾಧ್ಯತೆಗಳನ್ನು ವಿಸ್ತರಿಸುವ ಬದಲು ಜೀವನದ ಇತರ ಕ್ಷೇತ್ರಗಳಲ್ಲಾಗಿರುವಂತೆ, ಯಾಂತ್ರಿಕತೆಯ ದಾಸ್ಯಕ್ಕೆ ಒಪ್ಪಿಸುತ್ತಿರುವಂತೆ ಅನ್ನಿಸುತ್ತದೆ. ಉಳಿದ ಕಡೆಗಳಲ್ಲಿ ಹೇಗೋ ಹಾಗೆಯೇ ಯಂತ್ರಗಳ ಮೇಲುಗೈ, ತಾಂತ್ರಿಕತೆಯ ವಿಸ್ತಾರ, ವ್ಯಾಪಾರೀಕರಣದ ಆಕ್ರಮಣಗಳಿಂದ ಜೀವನವನ್ನು ಪಾರುಮಾಡಬೇಕಾಗಿರುವಂತೆ, ಆಧುನಿಕ-ಜಾನಪದವೆಂಬ ಹೆಗ್ಗಳಿಕೆಯನ್ನೂ ಪಡೆದಿರುವ ಸಿನಿಮಾವನ್ನು ಪಾರುಮಾಡಬೇಕಾದ ಅಗತ್ಯವಿದೆ. ಚಲನಚಿತ್ರಸಹೃದಯತೆ ಇತರ ಎಲ್ಲಾ ಬಗೆಯ ಸಹೃದಯತೆಗೆ ಸಂವಾದಿಯಾದ ಕಲಾಕಸುಬು. ಚಲನಚಿತ್ರ ಸಮಾಜಗಳು ಚಿತ್ರಸಹೃದಯರ ಅನುಭವಮಂಟಪಗಳಿದ್ದಂತೆ. ವ್ಯವಸಾಯದಂತೆ, ಕೈಗಾರಿಕೆಯಂತೆ, ರಂಗಭೂಮಿಯಂತೆ, ಚಲನ ಚಿತ್ರತಯಾರಿಕೆ-ವೀಕ್ಷಣೆಗಳೂ ಸಾಮುದಾಯಿಕವಾದವುಗಳು. ಆದ್ದರಿಂದ, ಸಂವೇದನಾಶೀಲ ಸಂಘಟಕರು ಮತ್ತು ಕಾರ್ಯಕರ್ತರು ನಿರ್ವಹಿಸಿ, ನಡೆಸುವ ಚಿತ್ರಸಮಾಜಗಳು ಜನಹಿತವಾದ, ಜನಪರವಾದ ಸಂಘಟನೆಗಳಾಗಿರುವುದು ಸಾಧ್ಯ.

ಪತ್ರಿಕೆಗಳ ಸಗಟು ವಿಮರ್ಶೆ

ಚಲನಚಿತ್ರಸಹೃದಯತೆಯನ್ನು ಬೆಳೆಸುವಲ್ಲಿ ಪತ್ರಿಕೆಗಳ ಪಾತ್ರವು, ಚಿತ್ರಸಮಾಜಗಳ ಪಾತ್ರದಷ್ಟೇ ದೊಡ್ಡದು. ಆದರೆ ಮೊದಲೇ ಹೇಳಿದಂತೆ, ಸಿನಿಮಾಪತ್ರಿಕೆಗಳು ಮತ್ತು ಜನಪ್ರಿಯ ಪತ್ರಿಕೆಗಳು ಪ್ರಕಟಿಸುವ ಸಿನಿಮಾಪುರವಣಿಗಳಲ್ಲಿ ಸಿನಿಮಾ ಭಾಷೆಯ ವ್ಯಾಕರಣ-ಮೀಮಾಂಸೆಗಳ ಪರಿಚಯವಿಲ್ಲದ ಜನರು ಮಾಡುವ ಒರಟು ಚಲನಚಿತ್ರಗಳನ್ನೇ ಸಿನಿಮಾ ಎಂಬ ಸಗಟು ಶೀರ್ಷಿಕೆಯಡಿಯಲ್ಲಿ ಪರಿಚಯಿಸುವ ಪರಿಪಾಠ ಬೆಳೆದು ಬಂದಿದೆ. ಇವುಗಳ ಸಾಂದರ್ಭಿಕ ಸಮೀಕ್ಷೆ-ಚರ್ಚೆಗೆ ನಿಯತವಾದ ಸ್ಥಳಾವಕಾಶವಿದೆಯೇ ಹೊರತು, ಚಿಂತನಶೀಲ ಬಿಂಬಕಲಾಕಾರರು ನಿರ್ಮಿಸುವ ಸಿನಿಮಾಗಳ ಸಮೀಕ್ಷೆ-ಚರ್ಚೆಗೆ ಅವಕಾಶವಿಲ್ಲ. ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಸಾಹಿತ್ಯಿಕ ಪುರವಣಿಗಳಲ್ಲಿ ಗಂಭೀರಸಾಹಿತ್ಯದ ಸಮೀಕ್ಷೆಗೆ ಪುಟಾವಕಾಶವನ್ನು ಒದಗಿಸುವಂತೆ, ಗಂಭೀರ-ಸಿನಿಮಾ ಸಮೀಕ್ಷೆಗೆ ಸ್ಥಳ ಕಾಯ್ದಿಡುವ ಪರಿಪಾಠ ಇನ್ನೂ ಬೆಳೆದುಬಂದಿಲ್ಲ. ಸಾಹಿತ್ಯಕ ಹಿನ್ನೆಲೆಯಿಂದ ಬಂದ ಪತ್ರಕರ್ತರು ಬರೆಯುವ ವರದಿಗಳ ಗುಣಾತ್ಮಕತೆ ಉಳಿದವುಗಳಿಗಿಂತ ಭಿನ್ನವಾಗಿರುವಂತೆ, ಸಿನಿಮಾದ ವ್ಯಾಕರಣ-ಕಲಾಮೀಮಾಂಸೆಯ ಪರಿಚಯವಿರುವ  ಸಿನಿಮಾ ಪತ್ರಕರ್ತರು ಸಿನಿಮಾ ಸಮೀಕ್ಷೆ ಮಾಡಿದರೆ, ಪುರವಣಿಯ ಪುಟಗಳಲ್ಲಿ ಸಿನಿಮಾ ನಟ-ನಟಿಯರ ಅಂಗಾಂಗಗಳ ಚಿತ್ರಗಳು ಚಿಕ್ಕದಾಗಿ, ಸೃಜನಶೀಲ-ಚಿಂತನಶೀಲ ಸಿನಿಮಾಗಳ ಪರಿಚಯವೂ ಓದುಗರಿಗೆ ಸಿಗುವುದು ಸಾಧ್ಯ. ಆದರೆ ಪತ್ರಕರ್ತಕೇಂದ್ರಿತವಾಗಿ ಉದ್ಯಮಶೀಲರು ನಡೆಸುತ್ತಿದ್ದ ಪತ್ರಿಕೆಗಳು, ಉಳಿದೆಲ್ಲೆಡೆ ಆಗಿರುವಂತೆ, ನೇರವಾಗಿ ವ್ಯಾಪಾರಿಗಳ ಕೈಗೆ ಸಿಲುಕಿ ಕೇವಲ ವ್ಯಾಪಾರೋದ್ಯಮವೇ ಆಗಿರುವದರಿಂದ, ಸದ್ಯದ ಸ್ಥಿತಿಯಲ್ಲಿ ಇದು ಸಂಭಾವ್ಯ ವಲ್ಲ. ಚಿತ್ರಸಮಾಜಗಳು ತಾವೇ ಪತ್ರಿಕೆ, ನಿಯತಕಾಲಿಕೆ ಅಥವ ವಾರ್ತಾಪತ್ರಗಳನ್ನು ಹೊರತರುವಷ್ಟು ಆರ್ಥಿಕ ಚೈತನ್ಯ ಪಡೆದಿಲ್ಲ.  ಆದರೂ ಸದ್ಯಕ್ಕೆ ಸಿನಿಮಾವನ್ನು ಗಂಭೀರ ನೆಲೆಗಳಲ್ಲಿ ಅಸ್ವಾದಿಸಿ ಅನುಭವಿಸಲು ಉಳಿದಿರುವ ದಾರಿ, ಈಗಾಗಲೇ ಮಾಡುತ್ತಿರುವಂತೆ ಚಲನಚಿತ್ರ ಸಹೃದಯರೇ ಸಿನಿಮಾವೀಕ್ಷಣೆಯ ನಂತರ ವಿಸ್ತೃತ ಚರ್ಚೆ-ಸಂವಾದಗಳನ್ನು ಏರ್ಪಡಿಸಿಕೊಂಡು, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು.

ಸಾಮಾಜಿಕ ಬದಲಾವಣೆ ಖಂಡಿತ ಸಾಧ್ಯ

ಸಿನಿಮಾ ಉಳಿದ ಕಲಾಪ್ರಕಾರಗಳಂತೆ ಒಂದು ನಿರ್ದಿಷ್ಟ ಕಾಲಘಟ್ಟದ ಜನಜೀವನವನ್ನು ಪ್ರತಿಫಲಿಸಬಹುದು. ಸಾಮಾನ್ಯ ಜನಜೀವನದ ಕನಸು, ಆಲೋಚನೆ, ವಿಮರ್ಶೆ, ಆಶಯಗಳನ್ನು ಬಿಂಬಿಸಬಹುದು. ಸಾಮಾಜಿಕ ಬದಲಾವಣೆಯ ನಿರೀಕ್ಷೆ, ಪ್ರತಿರೋಧಗಳನ್ನು ಕುರಿತಾದ ಪರ-ವಿರೋಧದ ನಿಲುವುಗಳನ್ನು ದಾಖಲಿಸಬಹುದು. ಕಲಾಕಾರರು, ಚಿಂತನಶೀಲರು ಮಾಡುವ ಸಿನಿಮಾಗಳು ಇವೆಲ್ಲವನ್ನು ಪ್ರಜ್ಞಾಪೂರ್ವಕವಾಗಿ ಒಳಗೊಂಡಿರಬಹುದು. ವ್ಯಾಪಾರೀಚಿತ್ರಗಳಲ್ಲಿ, ಗೊತ್ತಿಲ್ಲದಂತೆ ಸೇರಿಕೊಂಡಿರಬಹುದು. ಆದರೆ ಸಿನಿಮಾ ನೇರವಾಗಿ ಸಮಾಜವನ್ನೇ ಬದಲಾಯಿಸುವುದಿಲ್ಲ. ಇತರ ಕಲಾಪ್ರಕಾರಗಳ ವಿಷಯದಲ್ಲೂ ಇದು ನಿಜ. ಏಕೆಂದರೆ ಸಾಮಾಜಿಕ ಬದಲಾವಣೆಯ ಶಕ್ತಿ-ಸಾಧನಗಳು, ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವಿನ ಉತ್ಪಾದನಾ ಸಂಬಂಧಗಳು, ಸಂಪತ್ತಿನ ಹಂಚಿಕೆ ಮತ್ತು ಸಾಂಸ್ಕೃತಿಕ ಯಜಮಾನಿಕೆಗಳಿಂದ ನಿರ್ಧರಿತವಾಗಿರುತ್ತವೆ. ಇವನ್ನು ಬದಲು ಮಾಡಿದ ಹೊರತು ಸಮಾಜ ಬದಲಾಗುವುದಿಲ್ಲ. ಭಾವನೆ, ಚಿಂತನೆ, ಕಲೆಗಾರಿಕೆಗಳಲ್ಲಿ ಮೂಡುವ ಬದಲಾವಣೆಯ ಆಶಯವೇ ಸಾಮಾಜಿಕ ಬದಲಾವಣೆಯಲ್ಲ. ಆದರೆ, ಕಲಾತ್ಮಕವಾಗಿ ಪ್ರಕಟಗೊಳ್ಳುವ ಎಲ್ಲ ಆಶಯ, ಕನಸು, ಆಲೋಚನೆ, ಚಿಂತನೆಗಳು ಸಹೃದಯರನ್ನು ಗಾಢವಾಗಿ ಪ್ರಭಾವಿತಗೊಳಿಸುವಷ್ಟು ಗಟ್ಟಿಯಾಗಿರುತ್ತವೆ. ಸಿನಿಮಾಕ್ಕಿರುವ ಈ ಶಕ್ತಿ ಉಳಿದ ಕಲಾಪ್ರಕಾರಗಳಿಗಿರುವುದಕ್ಕಿಂತ ಹೆಚ್ಚು.

ಕಲೆಗೆ ಮರೆಸುವ ಮತ್ತು ತೆರೆಸುವ ಎರಡೂ ಶಕ್ತಿಗಳಿವೆ. ಸಿನಿಮಾದಲ್ಲಿ ಕನಸುಗಾರಿಕೆಯ ಅಂಶ ಹೆಚ್ಚಿರುವುದರಿಂದಲೋ ಎನೋ, ಅದು ಜನಸಾಮಾನ್ಯರ ಗಮನವನ್ನು ಬೇಗ ಸೆಳೆಯುತ್ತದೆ. ಬದುಕಿನ ಜಂಜಾಟಗಳನ್ನು ಮರೆಸಲು ಸಹಾಯಮಾಡುತ್ತದೆ. ಆದ್ದರಿಂದಲೇ, ಚಿಂತನೆ-ವಿಮರ್ಶೆಗಳ ಕಲಾಕೃತಿಯಾಗಿ ಜನರ ಅರಿವನ್ನು ಹೆಚ್ಚಿಸುವ ಸಾಧನವಾಗದೆ, ಭಾವನೆ-ಆಶಯಗಳನ್ನು ಬಳಸಿ, ಸಾಕಾರಗೊಳ್ಳುವ ಹಗಲುಗನಸಿನ ಸಾಧನವಾಗಿ ಹೆಚ್ಚು ಬಳಕೆಯಾಗುತ್ತಿದೆ. ಹರಿಕಥೆ, ಪುರಾಣಶ್ರವಣ, ಬಯಲಾಟಗಳಂತೆ ನೊಂದವರು ಮತ್ತು ಹತಾಶರ ಅಫೀಮು ಆಗಿ, ಧಾರ್ಮಿಕ ಆಚರಣೆ, ಜಾನಪದ ಮೇಳ ಮತ್ತು ಸಾಂಸ್ಕೃತಿಕ ಉತ್ಸವಗಳ ಭಾಗವಾಗಿ ಜನರ ಪ್ರಜ್ಞೆಯನ್ನು ಮರೆಸುವ ಪ್ರಬಲಸಾಧನವಾಗಿದೆ.