ಔಷಧಿಗಳ ಲೋಕದಲ್ಲಿ ಆಂಟಿಬಯೋಟಿಕ್‌ಗಳ ಪಾತ್ರ ತುಂಬಾ ದೊಡ್ಡದು. ಒಂದಿಲ್ಲೊಂದು ಆಟಿಬಯೋಟಿಕ್ ಸೇವಿಸದ ಮನುಷ್ಯನನ್ನು ಹುಡುಕುವುದು ಕಷ್ಟ. ಇವು ಮಾನವನ ಎಲ್ಲಾ ಅಂಗಗಳ ಮೇಲೂ ಒಂದಿಲ್ಲೊಂದು ಪರಿಣಾಮ ಉಂಟುಮಾಡುತ್ತಿದೆ. ಹೆಚ್ಚಿನ ಆಂಟಿಬಯೋಟಿಕ್‌ಗಳು ನಿರ್ಧರಿತ ರೋಗಕ್ಕೆಂದೇ ಸೀಮಿತವಾಗಿದ್ದರೂ ಅದರ ಅಡ್ಡಪರಿಣಾಮಗಳನ್ನು ಉಳಿದ ಅಂಗಗಳು ಎದುರಿಸಲೇಬೇಕಾಗುತ್ತದೆ.

ಸಿಪ್ರೊಫ್ಲೋಕ್ಸಾಸಿನ್, ಕ್ವಿನಿಲೋನ್ ಗುಂಪಿನ ಆಂಟಿಬಯೋಟಿಕ್. ಮಾರುಕಟ್ಟೆಯಲ್ಲಿ ಸಿಫ್ರಾನ್ (Cifran), ಸಿಫ್ಲಾಕ್ಸ್ (Ciplox) ಸಿಪ್ರೋಬಿಡ್ (Ciprobid), ಸಿಪ್ರೊಲೆಟ್ (Ciprolet), ಸಿಪ್ರೊಕ್ವಿನ್  (Ciproquin) ಮುಂತಾದ ಹೆಸರಿನಲ್ಲಿ ಇದು ಲಭ್ಯ.

ಕೀಲುಗಳ ತೊಂದರೆಗೆ ೧೨ ವರ್ಷದೊಳಗಿನ ಮಕ್ಕಳಿಗೆ ಇದನ್ನು ಕೊಡಬಾರದು. ಆದರೆ ಎರಡು ವರ್ಷಗಳ ಹಿಂದೆ ನಡೆದ ವೈದ್ಯರ ಹಾಗೂ ಔಷಧಿ ಕಂಪೆನಿಗಳ ಸಮ್ಮೇಳನವೊಂದರಲ್ಲಿ ಈ ಬಗ್ಗೆ ಗಹನ ಚರ್ಚೆ ನಡೆದು ಔಷಧಿ ಕಂಪೆನಿಯವರೇ ಗೆದ್ದರು. ವೈದ್ಯರು ತುರ್ತು ಸಮಯದಲ್ಲಿ ಇದನ್ನು ಮಕ್ಕಳಿಗೆ ನೀಡಬಹುದೆಂಬ ನಿರ್ಣಯ ತೆಗೆದುಕೊಳ್ಳಲಾಯಿತು.

ಯಕೃತ್ತು ಮತ್ತು ಮೂತ್ರಕೋಶಗಳ ತೊಂದರೆಯಿಂದ ನರಳುತ್ತಿರುವವರು ಇದನ್ನು ಸೇವಿಸುವುದು ಸೂಕ್ತವಲ್ಲ. ಪಾರ್ಶ್ವವಾಯುವಿನಿಂದ ಮೂರ್ಛೆ ಬೀಳುವವರು ಇದನ್ನು ಉಪಯೋಗಿಸದಿರುವುದು ಲೇಸು. ಇದು ಎದೆಹಾಲಿನೊಂದಿಗೆ ಸೇರಿ ಮಗುವಿನ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಭ್ರೂಣದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಅಸ್ತಮಾ ಹಾಗೂ ಹೃದಯಸಂಬಂಧಿ ಕಾಯಿಲೆಯಿದ್ದರೆ ಥಿಯೋಫಿಲಿನ್‌ನೊಂದಿಗೆ ಈ ಔಷಧ ಸೇವಿಸಬಾರದು. ಲೈಸಿನ್ ಅಥವಾ ಪೆಪ್ಪೇನ್‌ನೊಂದಿಗಿನ ಸಿಪ್ರೊಹೆಪ್ಪಾಡಿನ್ ಮಾತ್ರೆ ನಿಷೇಧಿತ.

ಆಂಟಿಬಯೋಟಿಕ್‌ಗಳ ಸಂಶೋಧನೆಯಿಂದ ರೋಗಗಳ ಕ್ಷಿಪ್ರ ನಿವಾರಣೆ ಸಾಧ್ಯವಾಗಿದೆ. ಇದು ಅಲೋಪತಿಯನ್ನು ಮುಂಚೂಣಿಯಲ್ಲಿರಿಸಿದೆ. ಆದರೆ ಆಂಟಿಬಯೋಟಿಕ್‌ಗಳೊಂದಿಗೆ ಡಜನ್‌ಗಟ್ಟಲೆ ಮಾತ್ರೆ ಸೇವಿಸಬಾರದು. ಎಲ್ಲ ರೋಗಗಳಿಗೂ ಆಂಟಿಬಯೋಟಿಕ್‌ಗಳೇ ಅಂತಿಮ ಪರಿಹಾರವಲ್ಲ.

ನೈಮೆಸುಲೈಡ್ ಬಳಕೆ ಸೂಕ್ತವಲ್ಲ

ಪ್ರತಿವರ್ಷ ಕನಿಷ್ಠ ೨೦ಕ್ಕೂ ಹೆಚ್ಚು ವಿದೇಶೀ ಔಷಧಿಗಳು ಭಾರತ ಪ್ರವೇಶಿಸುತ್ತಿವೆ. ಬೇರೆ ದೇಶಗಳಲ್ಲಿ ಅವು ಮಾನ್ಯತೆ ಪಡೆದಿವೆ. ಆದ್ದರಿಂದ ಇಲ್ಲೂ ಅದರ ಬಳಕೆ ಸಮ್ಮತ ಎನ್ನುವುದು ಎಲ್ಲರ ನಂಬಿಕೆ. ನಮ್ಮ ದೇಶದಲ್ಲಿ ಆ ಔಷಧಿಯನ್ನು ಪರೀಕ್ಷೆಗೊಳಪಡಿಸಿ, ಪರಿಣಾಮಗಳನ್ನರಿತು ಮಾನ್ಯತೆ ನೀಡಬೇಕೆಂಬ ಅರಿವು ಔಷಧಿ ನಿಯಂತ್ರಕರಿಗಿಲ್ಲ ಎನ್ನಲು ಒಂದು ಉದಾಹರಣೆ ನೈಮೆಸುಲೈಡ್.

ಬೆಲ್ಜಿಯಂನಲ್ಲಿ ಇಸವಿ ೧೯೭೪ರಲ್ಲಿ ಪೇಟೆಂಟ್ ಪಡೆದ ನೈಮೆಸುಲೈಡ್ ಯುರೋಪಿನ ದೇಶಗಳಲ್ಲಿ ಕ್ರಮೇಣ ಹರಡಿತು. ಆಕಸ್ಮಿಕ ಪಿತ್ತ್ತಜನಕಾಂಗದ ವಿಫಲತೆಯ ಕಾರಣದಿಂದ ಪೋರ್ಚುಗಲ್ ಹಾಗೂ ಇಸ್ರೇಲ್‌ಗಳಲ್ಲಿ ಅದನ್ನು ಹಿಂತೆಗೆದುಕೊಳ್ಳಲಾಯಿತು. ಡೈಕ್ಲೋಫೆನಾಕ್, ಆಸ್ಪಿರಿನ್, ಎಟೋಡೊಲಾಕ್‌ಗಳೊಂದಿಗೆ ಇದನ್ನು ಸೇವಿಸಿದರೆ ಸಣ್ಣ ಕರುಳಿನಲ್ಲಿ ವಾಯುವಿಕೋಪವನ್ನುಂಟುಮಾಡುತ್ತದೆ ಎನ್ನುವುದು ತಿಳಿದಿದ್ದರೂ ಭಾರತದಲ್ಲಿ ಇದಕ್ಕೆ ಮಾನ್ಯತೆ ನೀಡಲಾಯಿತು. ಆನಂತರ ಇದು ಅಲ್ಸರ್‌ಗೆ ಕಾರಣವಾಗಬಹುದು ಎನ್ನುವ ಅಂಶವೂ ಬೆಳಕಿಗೆ ಬಂತು. ಈಗ ಇದನ್ನು ಮಕ್ಕಳ ಔಷಧಗಳಲ್ಲೂ ಸೇರಿಸಲಾಗಿದೆ. ಇದು ಭಾರತಕ್ಕೆ ಬಂದು ಕೇವಲ ಐದು ವರ್ಷಗಳಾಗಿವೆ.

ಇತ್ತೀಚಿನ ವರದಿಯೊಂದು ವೈದ್ಯಲೋಕದಲ್ಲಿ ಚರ್ಚೆಗೆ ಕಾರಣವಾಯಿತು. ೨೮ ವಾರ ಕಳೆದ ಗರ್ಭಿಣಿಯೊಬ್ಬಳಿಗೆ ಬೆನ್ನುನೋವಿಗೆ ನೈಮೆಸುಲೈಡ್ ನೀಡಿದರು. ಔಷಧಿಯ ಅಂಶ ಭ್ರೂಣದ ಸುತ್ತಲಿನ ನೀರಿನಲ್ಲಿ ಸೇರಿ ಅಪಾಯಕ್ಕೆ ನಾಂದಿಯಾಯಿತು. ೩೦ ವಾರಗಳ ನಂತರ ಸ್ಕ್ಯಾನ್ ಮಾಡಿದಾಗ ಭ್ರೂಣದ ಸುತ್ತಲಿನ ದ್ರವದ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಭ್ರೂಣದ ಚಲನೆ ಮಂದವಾಗಿತ್ತು. ಇದನ್ನೆಲ್ಲ ಅನಂತರ ಸೂಕ್ತ ಚಿಕಿತ್ಸೆಯಿಂದ ಸರಿಪಡಿಸಲಾಯಿತು.

ಇದರ ಬೇರೆ ಬೇರೆ ಅಡ್ಡಪರಿಣಾಮಗಳಿಂದಾಗಿ ಅಮೆರಿಕಾ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಇದನ್ನು ನಿಷೇಧಿಸುವುದರ ಬಗ್ಗೆ ಕಳೆದ ಒಂದೂವರೆ ವರ್ಷದಿಂದ ಚರ್ಚೆ ನಡೆಯುತ್ತಿದೆ. ಆದಾಗ್ಯೂ ಈ ಔಷಧಿ ತನ್ನ ಮಾರಾಟ ಹೆಚ್ಚಿಸಿಕೊಳ್ಳುತ್ತಲೇ ಇದೆ.

ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.