ಶಿಲ್ಪಿಗಳನ್ನೂ ಕಲಾವಿದರನ್ನೂ ಇನ್ನಿಲ್ಲದಂತೆ ಆಕರ್ಷಿಸುವ ದೇವತೆಗಳಲ್ಲಿ ಶಿವ ಮತ್ತು ಆತನ ಪುತ್ರ ಗಣಪತಿ ಮೊದಲಿಗರಾಗುತ್ತಾರೆ. ಗಣಪತಿಯನ್ನು ಕಂಡರೆ ಶಿಲ್ಪಿ ಕಲಾವಿದರಿಗೆ ಅದೆಷ್ಟು ಮೋಹವೋ ಶಿವನನ್ನು ಕಂಡರೂ ಸಹ. ಅಷ್ಟೇ ಮೋಹ ಮತ್ತು ಪ್ರೀತಿ. ಶಿವನ ಅಪರೂಪದ  ರೂಪಗಳೂ, ಆಕರ್ಷಕವಾದ ಭಾವ ಭಂಗಿಗಳೂ ಹಾಗೂ ಸುಂದರ ನಿಲುವುಗಳೇ ಈ ರೀತಿಯ ವ್ಯಾಮೋಹಕ್ಕೆ ಕಾರಣ. ಶಿವನಿಗಿರುವ ಹೆಸರುಗಳಾದರೂ ಎಷ್ಟೊಂದು? ಆತನ ರೂಪಗಳಾದರೂ ಎಷ್ಟೊಂದು? ಶಿವ, ಈಶ್ವರ, ಪರಮೇಶ್ವರ, ಗಂಗಾಧರ, ಗೌರೀವರ, ನಟವರ, ನಟರಾಜ, ಶಂಭು, ನೀಲಲೋಹಿತ, ತ್ರಿಲೋಕೇಶ್ವರ, ತ್ರಿನೇತ್ರ, ಲಲಾಟಾಕ್ಷ, ಅನೀಶ್ವರ, ಕಪಾಲಿ, ಮೃತುಂಜಯ, ವ್ಯೋಮಕೇಶಿ, ಜಗದ್ವ್ಯಾಪಿ, ಅವ್ಯಯ, ಅವ್ಯಕ್ತ, ತಾರಕ, ಲಕುಲೀಶ, ಊರ್ಧ್ವರೇತೇಶ್ವರ. . . ಇತ್ಯಾದಿ ಸಾವಿರದೆಂಟು ಹೆಸರುಗಳು. ಇನ್ನು ಆತನ ಚಿತ್ತಾಕರ್ಷಕ ರೂಪಗಳೋ! ಚಂದ್ರನನ್ನು ಶಿರದಲ್ಲಿ ಧರಿಸಿದ ಚಂದ್ರಶೇಖರನೆಂಬ ಶಾಂತಮೂರ್ತಿ, ಕೈಲಾಸದಲ್ಲಿ ಕುಳಿತ ಧ್ಯಾನಸ್ಥ, ಗಂಗೆಯನ್ನು ಸೆರೆಹಿಡಿಯಲು ಜಟೆಯನ್ನು ಹರಡಿನಿಂತ ಜಟಾಧಾರಿ, ಬ್ರಹ್ಮಕಪಾಲವನ್ನು ಹಿಡಿದ ಕಪಾಲಿ, ಗಂಡು ಹೆಣ್ಣಿನ ಅಂಶವನ್ನು ಹೊಂದಿದ ಅರ್ಧನಾರೀಶ್ವರ, ನಾಟ್ಯಕ್ಕೆ ಅಧಿಪತಿಯಾದ ನಟರಾಜ, ಕಂಕಾಳಮೂರ್ತಿ, ಲಿಂಗೋದ್ಭವ. . . ಎಷ್ಟೊಂದು ಆಕಾರಗಳು. . ಎಷ್ಟೊಂದು ಮನಮೋಹಕ ರೂಪಗಳು? ನಿಲುವುಗಳು, ಭಾವಭಂಗಿಗಳು. .  ಈ ಎಲ್ಲಾ ಅಂಶಗಳೂ ಕವಿಕಲಾವಿದರನ್ನು ಆಕರ್ಷಿಸಲು ಸಾಕಲ್ಲವೆ?

ಹಾಗೆಂದೇ ಶಿವನ ಲೀಲಾವಿನೋದಕ್ಕೆ ಮರುಳಾದ ಕಲಾವಿದರೂ ಶಿಲ್ಪಿಗಳೂ ನೂರಾರು ವರ್ಷಗಳಿಂದ ಶಿವನನ್ನು ರೂಪಿಸಿಕೊಂಡೇ ಬರುತ್ತಿದ್ದಾರೆ. ಅವರ ಕೈನಲ್ಲಿ ಶಿವನು ರೂಪ ತಲೆದ ಮಾಧ್ಯಮಗಳೂ ಹಲವಾರು. ಮರ, ಕಲ್ಲು, ಕಂಚು ಹಿತ್ತಾಳೆ ಕಬ್ಬಿಣ ಮೊದಲಾದ ಲೋಹಗಳು, ಗಾಜು, ಫೈಬರ್. . ಇತ್ಯಾದಿ ಇತ್ಯಾದಿ. ಅವರವರ ಭಾವಕ್ಕೆ ಅವರವರ ಭಕ್ತಿಗೆ ತಕ್ಕಂತೆ ವಿವಿಧ ಮಾಧ್ಯiಗಳಲ್ಲಿ ಅವತರಿಸುತ್ತಿದ್ದ ಶಿವನ ಮೂರ್ತಿಗಳಿಗೆ ಇತೀಚಿನ ದಿನಗಳ ಸೇರ್ಪಡೆ ಎಂದರೆ ಸಿಮೆಂಟ್. ಕಟ್ಟಡ ನಿರ್ಮಾಣದಲ್ಲಿ ಸಿಮೆಂಟ್‌ನ ಉಪಯೋಗ ವ್ಯಾಪಕವಾಗಿ ಬಳಕೆಗೆ ಬಂದು ಸುಮಾರು ಐವತ್ತು ವರ್ಷಕ್ಕೂ ಹೆಚ್ಚೇ ಆಗಿರಬಹುದು. ನಮ್ಮಲ್ಲಿ ಶಿಲಾಮಯ ದೇವಾಲಯಗಳ ನಿರ್ಮಾಣ ರಾಜಮಹಾರಾಜರ ಕಾಲಕ್ಕೆ ನಿಂತು ಹೋಗಿದೆ. ಆ ನಂತರ ಭಕ್ತ ಮಹಾಶಯರ ದೇವಾಲಯ ನಿರ್ಮಾಣದ ಕನಸಿಗೆ ಸಹಕಾರಿಯಾದದ್ದು ಸಿಮೆಂಟ್. ದೇವಾಲಯಗಳ ಗೋಡೆಯನ್ನು ಕಲ್ಲಿನಿಂದಲೇ ಕಟ್ಟಿದರೂ ಸಹಾ ಅದರಲ್ಲಿನ ದೇವತೆಗಳ ವಿಗ್ರಹಗಳನ್ನು ನಿರ್ಮಿಸಲು ಶಿಲ್ಪಿಗಳು ಮೊರೆಹೋದದ್ದು ಸಿಮೆಂಟಿಗೆ. ಅದಕ್ಕೂ ಮೊದಲು ಗಾರೆಯ ಉಪಯೋಗ ಇದ್ದಾಗ ವಿಗ್ರಹಗಳ ನಿರ್ಮಾಣಕ್ಕೆ ಗಾರೆಯನ್ನು ಉಪಯೋಗಿಸುತ್ತಿದ್ದ ಆಧುನಿಕ ಶಿಲ್ಪಿಗಳು ಸಿಮೆಂಟ್‌ನ ಆಗಮನವಾದ ನಂತರ ಅದನ್ನೇ ನೆಚ್ಚಿಕೊಂಡರು. ದೇವಾಲಯದ ಗರ್ಭಗೃಹದಲ್ಲಿನ ಮೂಲ ಮೂರ್ತಿಯನ್ನು ಬಿಟ್ಟು ಉಳಿದಂತೆ ಭಿತ್ತಿಗಳಲ್ಲಿನ ಮತ್ತು ಗೋಪುರದಲ್ಲಿನ ವಿಗ್ರಹಗಳನ್ನು ಸಿಮೆಂಟಿನಲ್ಲೇ ನಿರ್ಮಿಸುವ ಪರಿಪಾಠ ಆರಂಭವಾಯಿತು.

ಶೈವ ದೇವಾಲಯಗಳಲ್ಲಿ ಮುಖ್ಯದ್ವಾರದ ಮೇಲ್ಭಾಗದಲ್ಲೇ ಶಿವನು ಸಂಸಾರಸಮೇತನಾಗಿ ನಿಂತಿರುವ ವಿಗ್ರಹಗಳಿರುತ್ತವಲ್ಲವೆ? ಅಂತಹ ವಿಗ್ರಹಗಳ ನಿರ್ಮಾಣಕ್ಕೆ ಸಿಮೆಂಟೇ ಮೂಲ. ಮೊದಲೆಲ್ಲಾ ಶಿವನ ವಿಗ್ರಹಗಳು ಎರಡು ಮೂರು ಅಡಿಗಳ ಆಕಾರದಲ್ಲೇ ಇರುತ್ತಿದ್ದವು. ಅದಾದ ನಂತರದಲ್ಲಿ ಶಿವನ ವಿಗ್ರಹಗಳ ಆಕಾರ ಬೆಳೆಯತೊಡಗಿತು. ದೇವಾಲಯದ ಮೇಲೆ ಹಲವಾರು ವಿಗ್ರಹಗಳ ಬದಲಾಗಿ ಶಿವನ ಒಂದೇ ಬೃಹತ್ ವಿಗ್ರಹ ನಿರ್ಮಿಸುವ ಪದ್ಧತಿ ಬಂದಿತು. ದೇವಾಲಯದ ಮೇಲೆ ಶಿವನ ಜೊತೆಗೆ ಸಿಮೆಂಟಿನ ಇತರ ದೇವತೆಗಳ ವಿಗ್ರಹಗಳನ್ನೂ ನಿರ್ಮಿಸುತ್ತಾರೆ ಎಂಬುದು ನಿಜವಾದರೂ ಶಿವನ ಸಿಮೆಂಟ್ ವಿಗ್ರಹಕ್ಕೆ ಜನಪ್ರಿಯತೆ ಹೆಚ್ಚತೊಡಗಿತು. ಅದರಿಂದಾಗಿ ಬೇಡಿಕೆಯೂ ಬರತೊಡಗಿತು. ಅದನ್ನೇ ನಿರ್ಮಿಸುವ ತಜ್ಞ ಶಿಲ್ಪಿಗಳೂ ತಯಾರಾದರು. ದೇವಾಲಯದ ಮೇಲಷ್ಟೇ ಅಲ್ಲದೆ ಹಾಗೇ ಸುಮ್ಮನೆ  ಶಿವನ ಮಹಾ ಮಹಾ ಬೃಹತ್ ವಿಗ್ರಹಗಳನ್ನು ನಿರ್ಮಿಸುವ ಪದ್ಧತಿ ಆರಂಭವಾಯಿತು. ಕಳೆದ ಹತ್ತು ಹದಿನೈದು ವರ್ಷಗಳಲ್ಲಂತೂ ಸಿಮೆಂಟ್ ಮಾಧ್ಯಮದಲ್ಲಿ ಅತ್ಯಂತ ಸುಂದರವಾದ ಬೃಹದಾಕಾರದ ವಿಗ್ರಹಗಳ ರೂಪದಲ್ಲಿ ಶಿವ ಪ್ರತ್ಯಕ್ಷನಾಗುತ್ತಿದ್ದಾನೆ. ಒಂದಕ್ಕಿಂತ ಒಂದು ಸುಂದರ ಒಂದಕ್ಕಿಂತ ಮತ್ತೊಂದು ಮಹೋನ್ನತ.

ಬೇರೆ ದೇವತೆಗಳಿಗೆ ಹೋಲಿಸಿದರೆ ಶಿವ ನಿರಾಡಂಬರ ಮೂರ್ತಿ. ಒಂದೇ ಒಂದು ತುಂಡು ಆನೆಯ ಚರ್ಮ ಧರಿಸಿದ ಗಜಚರ್ಮಾಂಬರಧಾರಿ. ಮೈಗೆಲ್ಲ ಬೂದಿ ಬಳಿದುಕೊಂಡ ಬೂದಿಬಡಕ. ಬಹುಶ ಶಿವನು ಈರೀತಿ ನಿರಾಡಂಬರನಾದುದರಿಂದಲೋ ಏನೋ ಆತನ ದೇಹ ಸೌಂದರ್ಯ ಎದ್ದು ಕಾಣುತ್ತದೆ. ವಿಷ್ಣು ಮತ್ತಿತರ ದೇವತೆಗಳನ್ನು ಅಲಂಕಾರಪ್ರಿಯರು ಎನ್ನಲಾಗುತ್ತದೆ. ಆ ಅಲಂಕಾರ ಪ್ರಿಯ ದೇವತೆಗಳಿಗೆ ಹೋಲಿಸಿದರೆ ಶಿವ ತೀರಾ ಸರಳ. ಏನಿದ್ದರೂ ಆತನ ದೇಹ ಸೌಂದರ್ಯಕ್ಕೇ ಮಹತ್ವ. ಎತ್ತರವಾದ ನಿಲುವು, ಬಲಿಷ್ಥವಾದ ಮಾಂಸಖಂಡಗಳು, ಹರವಾದ ಎದೆ, ಬಡನಡು. ಒಟ್ಟಾರೆ ಪ್ರಮಾಣಬದ್ಧ ರೂಪ. ಸುಂದರ ಪುರುಷನೊಬ್ಬನ ನಿಲುವು. ಈ ಎಲ್ಲಾ ಅಂಶಗಳೂ ಸಿಮೆಂಟ್ ಮಾಧ್ಯಮದ ವಿಗ್ರಹಗಳಲ್ಲಿ ಢಾಳಾಗಿ ಕಂಡುಬರುತ್ತದೆ. ಶಿವನ ಯಾವುದೇ ಭಂಗಿಯ ಯಾವುದೇ ರೂಪದ ವಿಗ್ರಹವನ್ನು ತೆಗೆದುಕೊಂಡರೂ ಅಲ್ಲಿ ಆತನ ಸೌಂದರ್ಯಕ್ಕೇ ಪ್ರಾಧಾನ್ಯತೆ.

ಶಿವ ಸರಳ ಎನ್ನಿಸಿದರೂ ದೇವತೆಗಳಲ್ಲೇ ಆತನದು ಸಂಕೀರ್ಣವಾದ ವ್ಯಕ್ತಿತ್ವ. ಹಾಗೇ ವೈರುಧ್ಯಮಯವಾದ ವ್ಯಕ್ತಿತ್ವ ಸಹಾ. ಜಗತ್ಕರ್ತನೂ ಅವನೇ ಲಯಕರ್ತನೂ ಅವನೇ, ಪ್ರೇರಕನೂ ಅವನೇ ವಿನಾಶಕಾರಿಯೂ ಅವನೇ, ನೃತ್ಯರೂಪಿಯೂ ಹೌದು ಉಗ್ರರೂಪಿಯೂ ಹೌದು. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಹೀಗೆ ಪಂಚಭೂತಗಳೂ ಅವನಲ್ಲೇ ಇವೆ. ಬೂದಿಬಳಿದ ದೇಹದವನಾದರೂ ಅವನದು ಅಲೌಕಿಕ ಸೌಂದರ್ಯ, ಋಷಿಮುನಿಗಳ ಪತ್ನಿಯರ ಇಂದ್ರಿಯ ನಿಗ್ರಹವನ್ನೂ ಚಂಚಲಗೊಳಿಸಬಲ್ಲಂತಹ ಸೌಂದರ್ಯ ಅವನದು ಎಂದು ಪುರಾಣಗಳು ವರ್ಣಿಸಿವೆ. ಹಾಗಾಗಿ ಶಿಲ್ಪಗಳಲ್ಲಿ ಅವನ ಲಾಲಿತ್ಯಕ್ಕೇ ಪ್ರಾಧಾನ್ಯ. ಅವನ ಅಂಗಸೌಷ್ಟ್ತವ ನಿರೂಪಿಸುವುದೆಂದರೆ ಶಿಲ್ಪಿಗಳಿಗೆ ಪರಮಾನಂದ. ಈ ಕಾರಣದಿಂದ ಅವುಗಳನ್ನೆಲ್ಲ ರಿಯಲಿಸ್ಟಿಕ್ ಶಿಲ್ಪಗಳೆಂದು ಪರಿಭಾವಿಸಬಹುದೇನೋ? ಹರಿದ್ವಾರ, ದೆಹಲಿ, ಜಬಲ್ಪುರ, ಜಲಂಧರ್, ಹೃಷಿಕೇಶ, ಹಿಮಾಚಲ ಪ್ರದೇಶ, ಮೈಸೂರು, ಬೆಂಗಳೂರು, ಮಂಗಳೂರು, ಅರಕೆರೆ, ವಿಜಾಪುರ ಮತ್ತು ಮುರುಡೇಶ್ವರಗಳಲ್ಲಿರುವ ಶಿವನ ಅತೀ ದೊಡ್ಡ ವಿಗ್ರಹಗಳು ಮನಮೋಹಕವೆನ್ನಿಸುವಷ್ಟು ಸುಂದರವಾಗಿ ರೂಪುಗೊಂಡಿವೆ.

ಶಿವನಿಗೆ ಹಲವಾರು ರುದ್ರಭಯಂಕರ ರೂಪಗಳೂ ಮನಮೋಹಕ ನಿಲುವುಗಳೂ ಇದ್ದರೂ ಸಹಾ ಸಿಮೆಂಟ್ ಮಾಧ್ಯಮದಲ್ಲಿ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವ ಶಿಲ್ಪಿಗಳು ಮನಸೋತಿರುವುದು ಮಾತ್ರ ಆತನ ‘ಧ್ಯಾನ ಮುದ್ರೆ’ಗೆ. ಕೆಲವೆಡೆ , ‘ಗಂಗಾವತರಣ ಪ್ರಸಂಗ’ಕ್ಕೆ. ಹಾಗೆಂದೇ ಶಿವನ ಹೆಚ್ಚಿನ ವಿಗ್ರಹಗಳು ಪದ್ಮಾಸನದಲ್ಲಿ ಕುಳಿತು ಧ್ಯಾನಮಗ್ನನಾದ ಶಿವ ಅಥವಾ ಜತೆ ಹರಡಿಕೊಂಡು ಗಂಗೆಗೆ ಸವಾಲೆಸೆದು ವೀರಾವೇಶದಿಂದ ನಿಂತ ಶಿವನ ಪ್ರತಿರೂಪವೇ ಆಗಿವೆ. ಅಲೆ ಅಲೆಯಾದ ಜಟೆ, ಜಟೆಯಲ್ಲಿ ಶಾಂತತೆಯೆ ಪ್ರತೀಕವಾದ ಚಂದ್ರ, ಜಟೆಯ ತುದಿಯಲ್ಲಿ ಫಲವಂತಿಕೆಯ ಸಂಕೇತವಾದ ಗಂಗೆ, ಹಣೆಯಲ್ಲಿ ಬುದ್ಧಿಶಕ್ತಿಯ ಸಂಕೇತವಾದ ಮೂರನೇ ಕಣ್ಣು,  ಕುತ್ತಿಗೆಯಲ್ಲಿ ಕುಂಡಿಲಿನೀ ಶಕ್ತಿಯ ಸಂಕೇತವಾದ ಸರ್ಪ ಜೊತೆಗೆ ರುದ್ರಾಕ್ಷಿ, ಎರಡು ಅಥವಾ ನಾಲ್ಕು ಕೈಗಳು, ಕೈಗಳಲ್ಲಿ ಸೃಷ್ಟಿ ಶಕ್ತಿಯ ಸಂಕೇತವಾದ ಢಮರುಗ, ದುಷ್ತ ನಿಗ್ರಹಕ್ಕಾಗಿ ತ್ರಿಶೂಲ, ಅಹಂಕಾರದ ದಮನದ ಸಂಕೇತವಾಗಿ ಹುಲಿ ಚರ್ಮ, ಜನಿವಾರ ಮತ್ತು ಕರ್ಣಾಭರಣಗಳು – ಇವೆಲ್ಲ ಈ ಶಿಲ್ಪಗಳಲ್ಲಿ ಕಂಡುಬರುವ ಪ್ರಧಾನ ಲಕ್ಷಣಗಳು. ವಿಶೇಷವೆಂದರೆ ಈ ಎಲ್ಲಾ ವಿಗ್ರಹಗಳೂ ಏಕಾಂಗಿ ಶಿವನ ವಿಗ್ರಹಗಳಾಗಿವೆ. ಆತನ ಸತಿ ಸುತರಿಗೂ ಪರಿವಾರದ ಗಣಗಳಿಗೂ ಅಲ್ಲಿ ಸ್ಥಾನವಿಲ್ಲ!.

ಈ ವಿಗ್ರಹಗಳ ವರ್ಣ ಸಂಯೊಜನೆಯೂ ವಿಶಿಷ್ಟವಾಗಿಯೇ ಇರುತ್ತದೆ. ಶಿವನ ಮೈಗೆ ಬಳಿದ ಬೂದಿಯು ಶಿವನ ನಿಶ್ಕಳಂಕ ಹಾಗೂ ಶುಭ್ರವಾದ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆಂಬ ಭಾವದಲ್ಲಿ ಹೆಚ್ಚಾಗಿ ಬೂದು ಬಣ್ಣವನ್ನು ಉಪಯೋಗಿಸಲಾಗುತ್ತದೆ. ಶಿವನ ಮಹಿಮೆಯೂ ವ್ಯಕ್ತಿತ್ವವೂ ಅಪಾರವಾದುದು ಹಾಗೂ ಆಕಾಶದಂತೆ ಅನಂತವಾದುದು ಎಂಬ ಭಾವನೆಯಲ್ಲಿ ಕೆಲವೆಡೆ ನೀಲವರ್ಣವನ್ನೂ ಉಪಯೊಗಿಸಲಾಗುತ್ತದೆ. ಕೆಲವೆಡೆ ಬಿಳಿ ಮತ್ತೆ ಕೆಲವೆಡೆ ಹಳದಿ ಬಣ್ನವೂ ಕಂಡು ಬರುತ್ತದೆ. ಕೆಲವೆಡೆ ಲೋಹಗಳ ಲೇಪನವೂ ಇರುತ್ತದೆ.

ಇತೀಚೆಗೆ ಸಿಮೆಂಟ್ ಮಾಧ್ಯಮದಲ್ಲಿ ತಯಾರಗುತ್ತಿರುವ ಎಲ್ಲ ವಿಗ್ರಹಗಳೂ ಬೃಹತ್ ಗಾತ್ರದವೇ ಆಗಿರುತ್ತವೆ. ವಿಜಾಪುರದ 75 ಅಡಿ, ಬೆಂಗಳೂರಿನ 65 ಅಡಿ, ಶಿವಮೊಗ್ಗ ಬಳಿಯ ಅರಕೆರೆಯ 40 ಅಡಿ, ಜಬಲ್ಪುರದ 70 ಅಡಿ, ಮುರುಡೇಶ್ವರದ 123 ಅಡಿ ಹೀಗೆ ಎಲ್ಲವೂ ಬೃಹದಾಕಾರದ ಉದಾಹರಣೆಗಳೆ. ಬಹುಮಹಡಿ ಕಟ್ಟಡಗಳಂತೆ ಎತ್ತರವಾದ ಈ ಮಹಾನ್ ವಿಗ್ರಹಗಳನ್ನು ನಿರ್ಮಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ.

ಈ ರೀತಿಯ ವಿಗ್ರಹ ನಿರ್ಮಣದಲ್ಲಿ ಅನುಸರಿಸುವ ವಿಧಾನ ಯಾವುದು? ನಿರ್ಮಾಣದ ಹಂತಗಳಾವುವು? ಎದುರಾಗುವ ಸವಾಲುಗಳು ಯಾವುವು? ಈ ಬಗೆಗೆ ಸಿಮೆಂಟ್ ವಿಗ್ರಹ ನಿರ್ಮಾಣದಲ್ಲಿ ಪರಿಣಿತಿ ಪಡೆದ ಮತ್ತು ವಿಜಾಪುರ, ಜಬಲ್ಪುರ, ಜಲಂಧರ್ ಮೊದಲಾದೆಡೆ ಇರುವ ಶಿವನ ವಿಗ್ರಹಗಳ ರೂವಾರಿಗಳಾದ ಖ್ಯಾತ ಶಿಲ್ಪಿ ಶ್ರೀಧರಮೂರ್ತಿಗಳ ಅನುಭವ ಈ ರೀತಿ ಇದೆ.

“ಮೊದಲಿಗೆ ಶಿವನ ಹಲವಾರು ಭಂಗಿಗಳ ಹಲವು ಮಾದರಿಗಳ ರೇಖಾಚಿತ್ರವನ್ನು ರಚಿಸಬೇಕಾಗುತ್ತದೆ. ವಿಗ್ರಹಗಳ ಪ್ರವರ್ತಕರಿಗೆ ಯಾವ ಮಾದರಿ ಇಷ್ಟವಾಗುತ್ತದೋ ಆ ಮಾದರಿಯನ್ನು ನಿರ್ಮಾಣಕ್ಕೆಂದು ಆಯ್ದುಕೊಳ್ಳಲಾಗುತ್ತದೆ. ನಂತರ ವಿಗ್ರಹ ನಿರ್ಮಾಣದ ಸ್ಥಳವನ್ನು ಪರಿಶೀಲಿಸಬೇಕು. ಸ್ಥಳದ ವಿಶಾಲತೆಯನ್ನು ಅನುಲಕ್ಷಿಸಿ ವಿಗ್ರಹದ ಎತ್ತರವನ್ನು ನಿರ್ಧರಿಸಲಾಗುವುದು. ವಿಗ್ರಹದಿಂದ ವೀಕ್ಷಕರು ನಿಲ್ಲುವವರೆಗಿನ ಅಂತರ ಸಾಕಷ್ಟಿದ್ದರೆ ಮಾತ್ರ ಎತ್ತರದ ವಿಗ್ರಹವನ್ನು ನಿರ್ಮಿಸಲು ಸಾಧ್ಯ. ನಂತರ ಅಡಿಪಾಯದ ಕೆಲಸ ಆರಂಭವಾಗುತ್ತದೆ. ವಿಗ್ರಹ ಪೂರ್ಣಗೊಂಡನಂತರ ಆಗಬಹುದಾದ ತೂಕ, ನೆಲದ ಮಣ್ಣಿನ ಕ್ಷಮತೆ ಪರಿಶೀಲಿಸಿ ಸೂಕ್ತ ಗುಣಮಟ್ಟದ ಅಡಿಪಾಯ ಹಾಕಲಾಗುವುದು. ಈ ಎಲ್ಲಾ ಕೆಲಸಗಳಿಗೆ ಸಿವಿಲ್ ಎಂಜಿನಿಯರುಗಳ ಮೇಲ್ವಿಚಾರಣೆ ಮತ್ತು ಸಲಹೆ ಅತ್ಯಗತ್ಯ. ನೂರಾರು ಅಡಿ ಎತ್ತರದ ವಿಗ್ರಹವನ್ನು ಆಧರಿಸಿ ಹಿಡಿಯಬಲ್ಲಂತಹ ಸ್ಥಂಭ ರಚಿಸಿ ಅದಕ್ಕೆ ಕಬ್ಬಿಣದ ಪೈಪ್ ಮತ್ತು ಸರಳುಗಳನ್ನು ಅಳವಡಿಸಿ ಶಿವನ ಆಕಾರ ಬರುವಂತೆ ಕಬ್ಬಿಣದ ಮೆಶ್ ಅಳವಡಿಸಲಾಗುವುದು. ವಿಗ್ರಹಗಳ ತೂಕ ಕಡಿಮೆ ಮಾಡುವ ಉದ್ದೇಶದಿಂದ ಒಳಭಾಗ ಸಾಧ್ಯವಾದಷ್ತೂ ಟೊಳ್ಳಾಗಿರುವಂತೆ ನೋಡಿಕೊಳ್ಳಲಾಗುವುದು. ನಂತರ ಹೊರಮೈಗೆ ಇಟ್ಟಿಗೆಯೆ ತುಂಡುಗಳು ಮತ್ತು ಸಿಮೆಂಟ್ ತುಂಬಿಸುತ್ತಾ ಬೇಕಾದ ಆಕಾರಕ್ಕೆ ತರಲಾಗುವುದು. ಈ ರೀತಿಯ ಬೃಹದಾಕಾರದ ವಿಗ್ರಹಕ್ಕೆ ತಕ್ಕ ಸೂಕ್ತ ಮುಖಭಾವದ ಮುಖವನ್ನು ತಯಾರಿಸುವುದು ಭಾರೀ ತೊಡಕಿನ ಕೆಲಸ. ಅದಕ್ಕಾಗಿಯೇ ಆದೇ ಆಕಾರದ ಮುಖವನ್ನು ನೆಲದ ಮೇಲೆ ತಯಾರಿಸಿ ಅದರ ಫ಼ೈಬರ್ ಪ್ರತಿಕೃತಿ ತಯಾರಿಸಿ ಅದರ ನೆರವಿನಿಂದ ವಿಗ್ರಹದ ಮುಖವನ್ನು ರಚಿಸಲಾಗುವುದು.

ನಂತರ ವಿಗ್ರಹವನ್ನು ನಯಗೊಳಿಸಿವ ಕೆಲಸ. ಸಿಮೆಂಟ್ ವಿಗ್ರಹಗಳ ಹೊರಮೈಯಲ್ಲಿ ಬಿರುಕು ಬಿಡುವುದು ಸಾಮಾನ್ಯ. ವಾತಾವರಣದ ವೈಪರೀತ್ಯದಿಂದ ಹೊರಮೈ ಬಿರುಕು ಬಿಟ್ಟು ಅಂದಗೆಡುವುದನ್ನು ತಪ್ಪಿಸಲು ಸಿಮೆಂಟಿನ ಜೊತೆಗೆ ಅಮೃತಶಿಲೆಯ ನಯವಾದ ಪುಡಿಯನ್ನು ಬೆರೆಸಿ ಆ ಮಿಶ್ರಣವನ್ನು ವಿಗ್ರಹದ ಹೊರಮೈಗೆ ಲೇಪಿಸಲಾಗುವುದು. ನಂತರ ಬಣ್ಣದ ಲೇಪನ. ಸಾಮಾನ್ಯವಾಗಿ ಕಟ್ಟಡಗಳಿಗೆ ಉಪಯೋಗಿಸುವ ವೆದರ್‌ಪ್ರೂಫ಼್ ಬಣ್ಣವನ್ನೇ ಉಪಯೋಗಿಸಲಾಗುವುದು. ಕೆಲವೆಡೆ ವಿಗ್ರಹ ಪ್ರವರ್ತಕರ ಹಣಕಾಸಿನ ಪರಿಸ್ಥಿತಿ ಅನುಲಕ್ಷಿಸಿ ಬಣ್ಣದ ಬದಲು ಲೋಹಗಳನ್ನು ಕರಗಿಸಿ ಸ್ಪ್ರೇ ಮಾಡಲಾಗುವುದು. ಈ ಕೆಲಸಕ್ಕೆ ಜಿಂಕ್ ಮತ್ತು ತಾಮ್ರದಂತಹ ಮೆದು ಲೋಹಗಳನ್ನು ಉಪಯೋಗಿಸಲಾಗುವುದು. ಬಣ್ಣಕ್ಕಿಂತ ಲೋಹದ ಲೇಪನದಿಂದ ವಿಗ್ರಹಗಳ ಅಂದ ಮತ್ತು ಆಯುಸ್ಸು ಹೆಚ್ಚಾಗುತ್ತದೆ.”

ಹೀಗೆ ಈ ಬೃಹದ್ದೇಹಿಗಳನ್ನು ಶಾಸ್ತ್ರಬದ್ಧವಾಗಿ ಅದೂ ಅಂದಗೆಡದಂತೆ ಅದ್ಭುತವಾಗಿ ನಿರ್ಮಿಸುವುದು ದೊಡ್ಡ ಸವಾಲೇ ಸರಿ. ಅಂತಹ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸುವ ಆ ಶಿಲ್ಪಿಗಳಿಗೆ ಅವರ ತಾಳ್ಮೆಗೆ ಮತ್ತು ಅವರ ಕರಕೌಶಲ್ಯಕ್ಕೆ ನಮೋನ್ನಮಃ. ಜೊತೆಗೆ ಇಂತಹ ಸುಂದರ ವಿಗ್ರಹಗಳನ್ನು ನಮಗೆ ಕೊಡುಗೆಯಾಗಿ ನೀಡಿದ ಪ್ರವರ್ತಕರಿಗೂ ಪ್ರಣಾಮಗಳು.

ಕರ್ನಾಟಕ ಮತ್ತು ಹೊರರಾಜ್ಯಗಳಲಿರುವ ಸಿಮೆಂಟ್ ವಿಗ್ರಹಗಳ ಪ್ರಸ್ತಾಪ ಬಂದಾಗ ಪ್ರಧಾನವಾಗಿ ಕೇಳಿಬರುವ ಹೆಸರೆಂದರೆ ಶಿಲ್ಪಿ ಕಾಶೀನಾಥ್ ಅವರದ್ದು. ಕರ್ನಾಟಕ ಆಂಧ್ರ ದೆಹಲಿ ಹಿಮಾಚಲಪ್ರದೇಶ ಮೊದಲಾದೆಡೆಗಳಲ್ಲಿ ಶಿವ, ಹನುಮಂತ, ಗೀತೋಪದೇಶ ಮೊದಲಾದ ವಿಗ್ರಹಗಳನ್ನು ರಚಿಸಿ ಖ್ಯಾತರಾಗಿದ್ದಾರೆ.