ಕೃಷಿ ಬದುಕು ಎನ್ನುವುದು ಆಚರಣೆಗಳ ಗೊಂಚಲು. ವರ್ಷದ ಹನ್ನೆರಡು ತಿಂಗಳೂ ಜೀವಂತವಾಗಿರುವ ಹಬ್ಬ ಹಾಗೂ ಆಚರಣೆಗಳು ಜನಜೀವನದ ಕಾಲಬದ್ಧ ಸಂಭ್ರಮ ಹಾಗೂ ಸಮೃದ್ಧಿಯ ಸಂಕೇತಗಳು. ವಿಶೇಷವಾಗಿ ಮುಂಗಾರು ಹಂಗಾಮಿನ ಜೈಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ ಮಾಸಗಳಂತೂ ಭೂಮಿ ಪೂಜೆಯ ಸಮೃದ್ಧ ಸಂಗತಿಗಳನ್ನು ಗರ್ಭೀಕರಿಸಿ ಕೊಂಡಿರುವಂಥವು. ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭವಾಗುವ ಭೂಮಿ ಪೂಜೆಯ ಪ್ರಕ್ರಿಯೆಗಳು ಭೂಮಿಯ ನಿಸರ್ಗಮುಖಿ ಬೆಳವಣಿಗೆಯೊಂದಿಗೆ ಕರಳುಬಳ್ಳಿಯ ಸಂಬಂಧವನ್ನು ಹೊಂದಿವೆ. ಫಲವಂತಿಕೆ ಮತ್ತು ಫಲಸಮೃದ್ಧಿಯ ಆಶಯಗಳನ್ನು ಪ್ರಧಾನವಾಗಿ ತೆರೆದು ತೋರಿಸುವ ಈ ಆಚರಣೆಗಳು ಮಾನವ ಬದುಕಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ.

ಮಾನವ ತನ್ನ ಆರಾಧನಾ ದೈವಗಳಿಗೆ ತಾನು ಅನುಭವಿಸುವ ಮಧ್ಯ, ಮಾಂಸ, ಮೈಥುನ, ಋತುಚಕ್ರಗಳ ಲೌಕಿಕಾನುಭವಗಳನ್ನು ಹೊಂದಿಸುವುದು ಹೊಸತೇನಲ್ಲ. ಇದು ದೈವಕ್ಕೂ ಹಾಗೂ ಮಾನವ ಸಂಬಂಧಕ್ಕೂ ಇದ್ದ ನಿಷ್ಕಲ್ಮಷ ವಾತಾವರಣದ ರೀತಿಯನ್ನು ತಿಳಿಸಿಕೊಡುತ್ತದೆ. ಭೂಮಿಯನ್ನು ಹೆಣ್ಣಾಗಿ ಭಾವಿಸಿ ತಾಯಿ, ದೇವಿ, ಮಗಳು, ಸೊಸೆ ಎನ್ನುವ ಭಾವನೆಯಿಂದ ಸ್ವೀಕರಿಸುವುದೇ ಇದಕ್ಕೆ ಒಳ್ಳೆ ನಿದರ್ಶನ. ಚೆಂಗಳವ್ವ ಆಚರಣೆಯಲ್ಲಿ ದೇವರು ಮತ್ತು ಮಾನವರ ಈ ಸಾಮಾಜಿಕ ಸಂಬಂಧಗಳನ್ನು ವಿಶೇಷವಾಗಿ ಕಾಣಬಹುದು. ಇಡೀ ಆಚರಣೆಯೇ ಕೌಟುಂಬಿಕ ನೆಲೆಯಿಂದ ಆರಂಭವಾಗಿ ಸಾರ್ವತ್ರೀಕರಣಗೊಳ್ಳುವ ಬಗೆಯೇ ಆಚರಣೆಯ ಜಾತ್ಯಾತೀತ ನಿಲುವುಗಳನ್ನು ಕಟ್ಟಿಕೊಡುತ್ತದೆ.

ಆಚರಣಾತ್ಮಕ ಸಂಗತಿಗಳು

ಚೆಂಗಳವ್ವ ಆಚರಣೆಯು ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಅದೂ ಹೊಳಿ ದಂಡೆಯ ಊರುಗಳಲ್ಲಿ ವಿಶೇಷವಾಗಿ ಕಾಣುತ್ತದೆ. ನಾಗರಪಂಚಮಿಯ ಮರುದಿನ ಅಥವಾ ಎರಡು ಮೂರು ದಿನದ ನಂತರ ಚೆಂಗಳವ್ವ ಆಚರಣೆ ನಡೆಯುತ್ತದೆ. ಆಯಾ ಊರಿನ ಭೌಗೋಳಿಕ ಹಾಗೂ ಸಾಮಾಜಿಕ ಸಂರಚನೆಯ ಮೇಲೆ ಇದರ ದಿನಗಳು ನಿರ್ಧರಿತವಾಗುತ್ತವೆ. ಒಟ್ಟಿನಲ್ಲಿ ನಾಗರಪಂಚಮಿ ಮುಗಿದ ನಾಲ್ಕೈದು ದಿನಗಳ ಅಂತರದಲ್ಲಿ ಈ ಆಚರಣೆ ನಡೆಯುತ್ತದೆ. ನನ್ನ ಊರನ್ನು (ಬೆಣ್ಣೂರು) ಕೇಂದ್ರೀಕರಿಸಿಕೊಂಡು ಹೇಳುವುದಾದರೇ ನಾಗರಪಂಚಮಿಯಾದ ಐದನೇ ದಿನಕ್ಕೆ ಈ ಚೆಂಗಳವ್ವನ ಹಬ್ಬವನ್ನು ಆಚರಿಸುತ್ತಾರೆ.

ಆಚರಣೆಯ ಉದ್ದೇಶ

ಆಯಾ ಊರಿನ ಕುಂಬಾರರ ಮನೆಯೇ ಚೆಂಗಳವ್ವನ ತವರುಮನೆ. ಕಾರಣ ಅವಳ ಹುಟ್ಟು ಅಲ್ಲೇ. ಗುಳ್ಳವ್ವನ ನಂತರ ಬರುವ ಏರಡನೇ ಮಣ್ಣಿನ ಆಚರಣೆ ಇದು. ಚೆಂಗಳವ್ವನ ಕೂಡಿಸುವ ದಿನ, ಮೊದಲು ಊರ ತಳವಾರರು ಅಥವಾ ಬಾರಿಕೇರರು (ಗಂಗಾಮತಸ್ಥರು) ಹೊಳಿಯಿಂದ ಅರಲು ತಂದು ಊರಿನ ಒಂದು ಬಯಲು ಜಾಗದ ಕಟ್ಟೆಯ ಮೇಲೆ ಸಣ್ಣ ಸಣ್ಣ ಮಡಿಗಳನ್ನು ಮಾಡಿ ಅದರಲ್ಲಿ ನವಧಾನ್ಯಗಳನ್ನು ತುಂಬಿ ಪೂಜಿಸಿ ನಂತರ ಮಡಿಗಳನ್ನು ಕೆಡಿಸುತ್ತಾರೆ. ಆಮೇಲೆ ಅದೇ ಅರಲಿನಿಂದ ಚೆಂಗಳಿಕವ್ವ ಮತ್ತು ಬಸವಣ್ಣನನ್ನು ಮಾಡುತ್ತಾರೆ. ಕುಂಬಾರರು ಇಲ್ಲದ ಊರಿನಲ್ಲಿ ಪತ್ತಾರ ಅಥವಾ ಬಡಿಗವೃತ್ತಿಯ ಪಾಂಚಾಳ ಕುಲದವರು ಚೆಂಗಳವ್ವನ ಮೂರ್ತಿ ಮಾಡಿಕೊಡುತ್ತಾರೆ. ಒಂದೊಂದು ಊರಲ್ಲಿ ಅರಲಿನ ಬದಲಾಗಿ ಶಾಶ್ವತವಾಗಿ ಕಟ್ಟಿಗೆ ಮೂರ್ತಿಗಳನ್ನೇ ಇಟ್ಟಿರುತ್ತಾರೆ. ಹಬ್ಬ ಬಂದಾಗ ಅವುಗಳನ್ನು ಜೋಡಿಸಿ ಸಿಂಗರಿಸಿ ಬಳಸಿಕೊಳ್ಳುವುದನ್ನು ಕಾಣುತ್ತೇವೆ. ಹೀಗೆ ಕಟ್ಟಿಗೆ ಅಥವಾ ಅರಲಿನಲ್ಲಿ ರೂಪತಳೆದು ಅಲಂಕೃತಗೊಂಡ ಚೆಂಗಳವ್ವನನ್ನು ಕುಂಬಾರರ ಮನೆಯಿಂದ ಹೊರಡಿಸುತ್ತಾರೆ. ಇದು ತವರು ಮನೆಯಾದ ಕಾರಣ ಮನೆ ಹೆಣ್ಣು ಮಗಳನ್ನು ಕಳುಹಿಸುವಾಗ ಮಾಡುವ ಎಲ್ಲ ರೀತಿಯ ತಯಾರಿಗಳನ್ನು ಹಾಗೂ ನಿಯಮಗಳನ್ನು ಅನುಸರಿಸುತ್ತಾರೆ. ಬಹಳ ಮುಖ್ಯವಾಗಿ ನೂಲಿನ ಹಸಿರು ಸೀರೆ, ಹಸಿರು ಕುಪ್ಪಸ, ಚೆಂಗಳವ್ವನ ವಸ್ತ್ರವಾಗಿರುತ್ತವೆ. ಇದಕ್ಕೆ ಹೊಂದಿಕೆಯಾಗುವಂತೆ ನತ್ತು, ಬಾವಲಿ, ಠಿಕ್ಕೆ, ಡಾಬು, ತಾಲೂಕು ಎಲ್ಲ ರೀತಿಯ ಆಭರಣಗಳನ್ನು ತೊಡಿಸುತ್ತಾರೆ. ಇದನ್ನು ಮನೆಯ ಸೊಸೆ ಅಥವಾ ಹೆಣ್ಣು (ಮಕ್ಕಳ) ಮಗಳು ಯಾರಾದರೂ ಮಾಡಬಹುದು. ಹೀಗೆ ಅಲಂಕಾರಗೊಂಡ ಮೇಲೆ ಊರ ಬಾಂಧವರಾದ ಗೌಡ, ಕುಲಕರ್ಣಿ, ಶಾನುಭೋಗ, ವಾಲೀಕಾರ, ತಳವಾರ ಇವರ ಸಮಕ್ಷಮದಲ್ಲಿ ಅಕ್ಕಿ ಅಥವಾ ಗೋದಿ, ಉತ್ತುತ್ತಿ, ಮಕ್ಕಳ ಅರಿಷಿಣ, ಅಡಿಕೆ ಇಂತಹ ಧಾನ್ಯ ಪದಾರ್ಥಗಳನ್ನು ಹಾಗೂ ಹೂ, ಹಣ್ಣು, ತಾಂಬೂಲಗಳನ್ನಿಟ್ಟು ಉಡಿ ತುಂಬುತ್ತಾರೆ. ಉಡಿ ತುಂಬಿದ ಮೇಲೆ ಬಸವಣ್ಣನ ಸಮೇತ ಗಂಡನ ಮನೆಯಾದ ಗೌಡರ ಮನೆಗೆ ಕರೆದೊಯ್ಯುತ್ತಾರೆ. ಹೀಗೆ ಕರೆದೊಯ್ಯುವ ಮೊದಲು ಬಾಜಾ ಭಜಂತ್ರಿ ಸಮೇತ ಊರಿನಲ್ಲಿ ಮೆರವಣಿಗೆ ಮಾಡುತ್ತಾ ಊರ ಚಾವಡಿಗೆ ಬಂದು ಕೂರಿಸುತ್ತಾರೆ. ಅಷ್ಟೊತ್ತಿಗೆ ಊರ ಜನರೆಲ್ಲಾ ಹೊಸ ಬಟ್ಟೆ ಧರಿಸಿ ಬಂದು ಸೇರಿರುತ್ತಾರೆ. ಚೆಂಗಳವ್ವ ಬಂದು ಚಾವಡಿಗೆ ಕುಳಿತ ಕೂಡಲೇ ಚಾಕರಿಯವರಾದ ತಳವಾರ, ಬಾರಕೇರರು ಮೊದಲೇ ಚಾವಡಿಯ ಆವರಣದ ಮೂಲೆ ಮೂಲೆಯಲ್ಲಿ ಕೂಡಿ ಹಾಕಿದ ಹೆಂಡಿ (ಸಗಣಿ) ಯನ್ನು ತೆಗೆದುಕೊಂಡು ಪರಸ್ಪರ ಎರಚಾಡಲು ಆರಂಭಿಸುತ್ತಾರೆ. ಒಂದೊಂದು ಸಲ ನೆರೆದ ಪ್ರೇಕ್ಷಕರತ್ತಲೂ ಎಸೆದು ಖುಷಿ ಪಡುತ್ತಿರುತ್ತಾರೆ. ಇಡೀ ವಾತಾವರಣವೇ ಮನೋರಂಜಕವಾಗಿರುತ್ತದೆ. ಸುಮಾರು ಹೊತ್ತು ನಡೆಯುವ ಈ ಹೆಂಡಿ ಆಟದಲ್ಲಿ ನಗುವೇ ಬಹುಮುಖ್ಯ ಪಾತ್ರವಹಿಸುತ್ತದೆ. ಇದನ್ನು “ಹೆಂಡಿ ಆಟ”ವೆಂದೇ ಗುರುತಿಸಲಾಗುತ್ತದೆ. ನಂತರ ವಾದ್ಯಗಳ ಸಮೇತ ಹೊಳಿಗೆ ಹೋಗಿ ಸ್ನಾನ ಮಾಡಿ ಬರಲಾಗುತ್ತದೆ. ಆಮೇಲೆ ಚೆಂಗಳವ್ವನನ್ನು ಗೌಡರ ಮನೆಗೆ (ಗಂಡನ ಮನೆಗೆ) ಕರೆತರಲಾಗುತ್ತದೆ. ಇಲ್ಲಿಗೆ ಮೊದಲ ದಿನದ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಹೆಂಡಿಯ ಮರುದಿನ “ಹೋಳಿಗೆ ಮಾಡುವುದು” ಇರುತ್ತದೆ. ಈ ದಿನ ಗಂಡನ ಮನೆಯವರು ಕರಿಗಡಬು, ಹುರಿಯಕ್ಕಿ ಕರ್ಚಿಕಾಯಿ, ರೊಟ್ಟಿ ಮಾಡಿಕೊಂಡು ಊರ ಪರಿವಾರ ಸಮೇತ ಗಂಗಿಸ್ಥಾನಕ್ಕೆ ಹೋಗುತ್ತಾರೆ. ಈ ಹಬ್ಬ ಬರುವುದಕ್ಕಿಂತ ಒಂದುವಾರ ಮೊದಲೇ ಸಣ್ಣ ಸಣ್ಣ ಮುಚ್ಚಳ, ಪಟ್ಟಿ, ಪಾತ್ರೆಗಳಲ್ಲಿ ಕರಿಮಣ್ಣು ತುಂಬಿ ಗೋಧಿ ಹಾಗೂ ಜೋಳಗಳನ್ನು ಬಿತ್ತಿ ಅದನ್ನು ಕತ್ತಲಲ್ಲಿ ಇಟ್ಟು ಮೊಳಕೆಯೊಡೆಸಿರುತ್ತಾರೆ. ಸೂರ್ಯ ಬೆಳಕು ಕಾಣದ ಅವು ಚೆಂಗಳವ್ವನ ಆಟದ ಹೊತ್ತಿಗೆ ಹಳದಿಯಾಗಿ ಗೇಣು ಗೇಣುದ್ದ ಬೆಳೆದು ಸಸಿಗಳಾಗಿರುತ್ತವೆ. ಇವನ್ನು ಸಸಿಗಳೆಂದೇ ಗುರುತಿಸುತ್ತಾರೆ. ಇಡೀ ಊರಿನ ಜನರು ಈ ರೀತಿ ಸಸಿಗಳನ್ನು ಬೆಳೆಸಿ ಬುತ್ತಿ ತಗೊಂಡು ಚೆಂಗಳವ್ವನೊಂದಿಗೆ ಹೊಳಿದಂಡಿಗೆ ಬರುತ್ತಾರೆ.

ಹೊಳಿದಂಡಿಗೆ ಬಂದು ಚೆಂಗಳವ್ವನನ್ನು ಕೂರಿಸಿ ಚೆಂಗಳವ್ವ ಬಸವಣ್ಣ ಮತ್ತು ಹೊಳಿಗಂಗವ್ವಗೆ ಪೂಜೆ ಮಾಡಿ ಸಸಿ ಮುಡಿಸುತ್ತಾರೆ. ನಂತರ ಸಾಮೂಹಿಕ ಭೋಜನ ನಡೆಯುತ್ತದೆ. ಕುಲಭೇದದ ಪರಿವೆಯಿಲ್ಲದ ಈ ಸಹಭೋಜನ ಸಾಂಸ್ಕೃತಿಕ ಹೊಕ್ಕು ಬಳಕೆಗಳ ಉತ್ತಮ ಅಧ್ಯಯನವೇ ಆಗಿದೆ. ನಂತರ ತಿರುಗಿ ವಾದ್ಯ ಸಮೇತ ಎಲ್ಲರೂ ಮನೆಗಳಿಗೆ ಹಿಂದಿರುಗುತ್ತಾರೆ. ಗೌಡರ ಮನೆಗೆ ಬಂದ ಮೇಲೆ ಚೆಂಗಳವ್ವನನ್ನು ಬಿಚ್ಚಿ ಹಾಕಿದ ವಸ್ತ್ರ ಒಡವೆಗಳೆಲ್ಲವನ್ನು ತೆಗೆದು ಒಂದು ಸುರಕ್ಷಿತ ಜಾಗದಲ್ಲಿಟ್ಟು ಬಿಡುತ್ತಾರೆ. ಮತ್ತೆ ಮುಂದಿನ ವರ್ಷವೇ ಇವರಿಬ್ಬರನ್ನು ಹೊರತೆಗೆಯುವುದು. ಈ ನಡುವೆ ಬರುವ ಯಾವುದೇ ಹಬ್ಬ ಹರಿದಿನಗಳಲ್ಲಿ ಯಾವ ರೀತಿ ಪೂಜೆಯೂ ಇವರಿಗೆ ಸಲ್ಲುವುದಿಲ್ಲ.

ಯಂಡಿಗೇರಿ

ಇತಿಹಾಸ ಪ್ರಸಿದ್ಧ ಬಾದಾಮಿ ತಾಲೂಕಿನಲ್ಲಿ ಬರುವ ಯಂಡಿಗೇರಿ ಗ್ರಾಮ ಜಾನಪದ ಕಲೆಗಳ ಹಾಗೂ ಜಾನಪದ ಸಂಪ್ರದಾಯಗಳ ತವರೂರು. ನಿತ್ಯ ನಡೆಯುವ ಶಿವ ಭಜನೆ, ಶ್ರೀಕೃಷ್ಣ ಪಾರಿಜಾತ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮದಂತಹ ಬೈಲಾಟಗಳನ್ನು ಶತಮಾನಗಳಿಂದ ನೋಡುತ್ತ ಮತ್ತು ಅಭಿನಯಿಸುತ್ತ ಬಂದ ಒಂದು ಚಿಕ್ಕ ಹಳ್ಳಿ ಯಂಡಿಗೇರಿ. ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವರಿರುವ ಈ ಗ್ರಾಮದಲ್ಲಿ ಎಲ್ಲ ಧರ್ಮಿಯರು ಒಗ್ಗಟ್ಟಿನಿಂದ ಹಲವಾರು ಜಾನಪದ ಆಚರಣೆಗಳನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದು, ಆ ಕೆಲವೇ ಕೆಲವು ಆಚರಣೆಗಳಲ್ಲಿ ಶಿವಶರಣೆ ಚೆಂಗಳಕವ್ವ ಆಚರಣೆಯು ಒಂದು.

ನಾಗರ ಪಂಚಮಿ ವರ್ಷ ತೊಡಕದ ದಿವಸ ಶಿವಶರಣೆ ಚೆಂಗಳಕವ್ವ ಮೂರ್ತಿಯನ್ನು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಾಪನೆ ಮಾಡುವರು. ಸ್ಥಾಪನೆ ಮಾಡಿದ ದಿವಸ ಶ್ರೀ ಹೊಳಬಸಪ್ಪ ಶೀಲವಂತರ ಮನೆಯಲ್ಲಿ ಪದ್ಧತಿಯ ಪ್ರಕಾರ ಉಡಿಯಕ್ಕಿ ಹಾಕಿಸಿಕೊಂಡು ಹೋಗಿ ಗುಡಿಯಲ್ಲಿ ಚೆಂಗಳಕವ್ವನನ್ನು ಸ್ಥಾಪನೆ ಮಾಡುವರು. ಸ್ಥಾಪನೆ ಮಾಡುವ ದಿವಸ ಊರಿನ ಹೆಣ್ಣುಮಕ್ಕಳು ಎರಡು ಗುಂಪುಗಳಾಗಿ ಅರಲು ಆಡುವರು. ಪ್ರತಿ ದಿವಸ ಬೇರೆ ಬೇರೆ ತರಹದ ಸೀರೆಗಳನ್ನು ತಂದು ಉಡಿಸಿ ಬೊರಮಾಳ, ಗುನಗಡಗಿ, ಮುಂತಾದ ಅಲಂಕಾರದ ವಸ್ತುಗಳನ್ನು ಹಾಕಿ ಶೃಂಗಾರ ಮಾಡುವರು. ಪ್ರತಿದಿನ ರಾತ್ರಿ ಊರಿನ ಹೆಣ್ಣು ಮಕ್ಕಳು ಕೂಡಿಕೊಂಡು ಹಾಡು ಹೇಳುವರು ಮತ್ತು ಆರತಿ ಮಾಡುವರು. ಗ್ರಾಮೀಣ ಭಾಗದ ಸಂತಾನ ದೇವತೆಯಾಗಿ ಪೂಜೆಗೊಳ್ಳುವ ಚೆಂಗಳಕವ್ವ ಭಕ್ತರ ಇಷ್ಟಾರ್ಥಗಳನ್ನು ಪೂರ್ತಿ ಮಾಡುವ ಶಕ್ತಿದೇವತೆಯಾಗಿದ್ದಾಳೆ.

ಊರ ಮಠಪತಿ ಊರ ತುಂಬೆಲ್ಲಾ ತಿರುಗಾಡಿ ಪಟ್ಟಿ ಮಾಡಿ ಹಣ ಸಂಗ್ರಹಣೆ ಮಾಡುವುದರ ಜೊತೆಗೆ ಪ್ರತಿ ದಿವಸ ಮುಂಜಾನೆ ಪೂಜೆ ಹಾಗೂ ಸಾಯಂಕಾಲದ ಪೂಜೆಯನ್ನು ಇವನೇ ನೆರವೇರಿಸುತ್ತಾನೆ. ಊರಿನ ವಾಲೀಕಾರ ಪ್ರತಿದಿನ ರಾತ್ರಿ ಕಾವಲು ಮಾಡುತ್ತಾನೆ. ಊರಿನ ಹಿರಿಯರು ಮಠಪತಿ ಹಾಗೂ ವಾಲೀಕಾರನಿಗೆ ಕೂಡಿದ ಪಟ್ಟಿಯಲ್ಲಿ ಕಾಣಿಕೆ ಕೊಡುವರು. ವರ್ಷ ತೊಡಕದ ಮಳ್ಳಾ ಮರು ದಿವಸ ಚೆಂಗಳಕವ್ವನನ್ನು ಹೊಳಿಗೆ ಕಳಿಸುತ್ತಾರೆ. ಮಹಾಶಿವಶರಣೆ ಚೆಂಗಳಕವ್ವ ಹೊಳಿಗೆ ಹೋಗುವ ದಿವಸ ಶ್ರೀ ಹೊಳಬಸಪ್ಪ ಶೀಲವಂತರ, ಶ್ರೀ ಮಲ್ಲಪ್ಪ ಶಿವಬಸಪ್ಪ ನಡುಮನಿ, ಶ್ರೀ ಹಣಮಂತಗೌಡ ಪಾಟೀಲ ಹಾಗೂ ಶ್ರೀ ವಿರೂಪಾಕ್ಷಯ್ಯ ಹಿರೇಮಠರ ಮನೆಗೆ ಭವ್ಯ ಮೆರವಣಿಗೆಯಲ್ಲಿ ಹೋಗಿ ಉಡಿಯಕ್ಕಿ ಹಾಕಿಸಿಕೊಂಡು ಬರುವುದು ಈ ಊರಿನ ಪದ್ಧತಿ. ಈ ನಾಲ್ಕು ಮನೆಯವರ ಮನೆಗೆ ಹೋಗಿ ಬರುವಲ್ಲಿಗೆ ಸಮಯ ಸಾಯಂಕಾಲ ೫ ಗಂಟೆಯಾಗಿರುತ್ತದೆ. ಊರಿನ ಎಲ್ಲ ಮಹಿಳೆಯರು ಬಾಜಾ ಭಜಂತ್ರಿಯವರೊಂದಿಗೆ ಚೆಂಗಳಕವ್ವನನ್ನು ಊರಿನ ಮುಂದೆ ಇರುವ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪದ್ಧತಿಯ ಪ್ರಕಾರ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ವಿಸರ್ಜನೆ ಕಾರ್ಯ ಮಾಡುವರು.

ಕಟ್ಟಿಗೆಯ ಮೂರ್ತಿ

ಈ ಗ್ರಾಮದಲ್ಲಿ ಕಟ್ಟಿಗೆಯಿಂದ ಮಾಡಿದಂಥ ಮೂರ್ತಿ ಇದ್ದು ಪದ್ಧತಿಯಂತೆ ವಿಸರ್ಜನೆಯ ಕಾರ್ಯಗಳನ್ನು ಮಾಡಿ ಆ ಮೂರ್ತಿಗೆ ಅರಬಿಯನ್ನು ಕಟ್ಟಿಕೊಂಡು ಮರಳಿ ಗುಡಿಯಲ್ಲಿ ತಂದು ಇಡುತ್ತಾರೆ. ಊರಿನ ಮಠಪತಿ ಮತ್ತು ಮುಂದಿನ ವರ್ಷ ತಿಥಿ ಆಧಾರದ ಮೇಲೆ ಚೆಂಗಳಕವ್ವ ಆಚರಣೆ ನೆಡಸುವದು ಈ ಊರಿನ ಪದ್ಧತಿಯಾಗಿದೆ.

ಹೆರಕಲ್

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕೆಲವೇ ಕೆಲವು ದೊಡ್ಡ ಹಳ್ಳಿಗಳಲ್ಲಿ ಹೆರಕಲ್ ಗ್ರಾಮವೂ ಒಂದು. ಅಚ್ಚ ಗ್ರಾಮೀಣ ಸಂಸ್ಕೃತಿಯ ಸೊಗಡಿನಿಂದ ಕೂಡಿದ ಈ ಗ್ರಾಮದಲ್ಲಿ ಜಾನಪದ ಆಚರಣೆಗಳಿಗೇನು ಬರವಿಲ್ಲಾ. ಆದರೆ ಇಂಥ ಆಚರಣೆಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ಈ ಗ್ರಾಮ ಆಲಮಟ್ಟಿ ಹಿನ್ನೀರಿನಿಂದ ಸಂಪೂರ್ಣವಾಗಿ ಮುಳಗಡೆಯಾಗಿದೆ. ಪುನರ್‌ವಸತಿ ಕಲ್ಪಿಸಿದ ಸ್ಥಳದಲ್ಲಿ ಹೋಗಿ ನೆಲಸಿದ ಇಲ್ಲಿಯ ಜನರು ತಮ್ಮ ಹಿಂದಿನ ಎಲ್ಲಾ ಆಚರಣೆಗಳನ್ನು ಚಾಚು ತಪ್ಪದೇ ಆಚರಣೆ ಮಾಡುತ್ತಾ ಹೊರಟಿದ್ದಾರೆ. ಅದಕ್ಕೊಂದು ತಾಜಾ ಉದಾಹರಣೆ “ಶಿವಶರಣೆ ಚೆಂಗಳಕವ್ವ ಆಚರಣೆ”.

ಶ್ರಾವಣ ಶುದ್ಧ ಚತುರ್ಥಿ ದಿವಸ ಮನೆಯಲ್ಲಿ ನಾಗಪ್ಪನಿಗೆ ಹಾಲು ಹೊಯ್ಯುವುದು, ಪಂಚಮಿ ದಿವಸ ಊರಿನ ಆರಾಧ್ಯ ದೇವರಾದ ಮಾರುತಿ ದೇವಸ್ಥಾನದಲ್ಲಿ ಊರಿನ ಜನ ಸಾರ್ವತ್ರಿಕವಾಗಿ ನಾಗಪ್ಪನಿಗೆ ಹಾಲು ಎರೆಯುವುದು. ಶ್ರಾವಣ ಶುದ್ಧ ಷಷ್ಠಿ (ವರ್ಷ ತೊಡಕು) ದಿವಸ ಚೆಂಗಳಕವ್ವನ ಸ್ಥಾಪನೆ ಮಾಡುವುದು.

ಸ್ಥಾಪನೆ ಪದ್ಧತಿ ಮತ್ತು ಆಚರಣೆಗಳು

ಷಷ್ಠಿ ದಿವಸ ಊರಿನ ಓಲೇಕಾರ ಚೆಂಗಳಕವ್ವನ ಸ್ಥಾಪನೆ ಮಾಡುವ ಸ್ಥಳದಲ್ಲಿ ನದಿಯಿಂದ ಅರಲು ತಂದು ಒಗಿಯುವನು. ಸಾಯಂಕಾಲ ಓಣಿಯ ಮತ್ತು ಊರಿನ ಎಲ್ಲ ಹೆಣ್ಣುಮಕ್ಕಳು ಸೇರಿಕೊಂಡು ಚೆಂಗಳಕವ್ವನ ಮೂರ್ತಿ ತಯಾರಿಸುವರು. ಈ ಊರಿನಲ್ಲಿ ಮುಖ ಮಾತ್ರ ಕಟ್ಟಿಗೆಯಿಂದ ಮಾಡಿದ್ದು, ಉಳಿದೆಲ್ಲ ಶರೀರ ರಚನೆಯನ್ನು ಕೆಸರಿನಿಂದ ಮಾಡಿರುತ್ತಾರೆ. ಹೆರಕಲ್ ಗ್ರಾಮದಲ್ಲಿ ಎರಡು ಓಣಿಯಲ್ಲಿ ಎರಡು ದಿವಸ ಚೆಂಗಳಕವ್ವನ ಜಾತ್ರೆಯನ್ನು ಮಾಡುತ್ತಾರೆ. ವರ್ಷ ತೊಡಕು ದಿವಸ ನಾಯಕ ಮಕ್ಕಳ ಓಣಿಯಲ್ಲಿ ಚೆಂಗಳಕವ್ವನ ಸ್ಥಾಪನೆ ಮಾಡಿದರೆ ಇದರ ಎಲ್ಲ ಬಾಬ್ತನ್ನು ಈ ಗ್ರಾಮದ ಮೇಟಿಯವರು ನಡೆಸಿಕೊಂಡು ಹೋಗುವರು. ಮರುದಿವಸ ಲಿಂಗಾಯತರ ಓಣಿಯ ಚೆಂಗಳಕವ್ವ ಸ್ಥಾಪನೆ ಮಾಡುವರು. ಇಲ್ಲಿಯ ಎಲ್ಲ ಬಾಬ್ತುಗಳನ್ನು ಈ ಊರಿನ ಜಾಡಗೌಡರು ನಿರ್ವಹಿಸಿಕೊಂಡು ಹೋಗುತ್ತಾರೆ. ಚೆಂಗಳಕವ್ವನ ಸ್ಥಾಪನೆಯ ದಿವಸ ಮುಂಜಾನೆ ಹೂಗಾರರ ಮನೆಗೆ ಹಾಗೂ ಪತ್ತಾರರ ಮನೆಗೆ ಹೋಗಿ ಅವರಿಗೆ ಬಾಬ್ತು ಕೊಟ್ಟು ಬರುತ್ತಾರೆ. ಸಾಯಂಕಾಲ ಊದಿಸುತ್ತ, ಬಾರಿಸುತ್ತ ಅವರು ಮನೆಗೆ ಹೋಗಿ ಅಲ್ಲಿ ಇದ್ದ ಚೆಂಗಳಕವ್ವನ ಮುಖಗಳನ್ನು ತೆಗೆದುಕೊಂಡು ಬರುತ್ತಾರೆ. ಚೆಂಗಳಕವ್ವನ ಎಲ್ಲ ಕಾರ್ಯಕ್ರಮ ಮುಗಿಯುವವರಗೆ ಊರಿನ ವಾಲೀಕಾರ ಕಾವಲು ಮಾಡುವನು. ಸಾಯಂಕಾಲ ಊರಿನ ಹೆಣ್ಣು ಮಕ್ಕಳು ಕೂಡಿಕೊಂಡು ಚೆಂಗಳಕವ್ವನ ಶೃಂಗಾರ ಮಾಡುವರು.

ಚೆಂಗಳಕವ್ವನ ಶೃಂಗಾರಕ್ಕೆ ಇಡಿಸುವ ಸಾಮಾನುಗಳು

ಗುಣಗಡಗಿ ಬೊರಮಾಳ, ಟಿಕ್ಕಿ, ಗುಂಡು ಇತ್ಯಾದಿ ಬಂಗಾರದ ಸಾಮಾನು ಇಡಿಸುವರು. ಜೊತೆಗೆ ಉತ್ತಮವಾದ ಸೀರೆ ಉಡಿಸಿ ದಂಡೆ ಕಟ್ಟುವರು. ಈ ರೀತಿ ಶೃಂಗಾರ ಮಾಡಿ ಮುಗಿದ ನಂತರ ಊರಿನ ಗೌಡರನ್ನು ಊದಿಸುತ್ತ ಬಾರಿಸುತ್ತ ಅಲ್ಲಿಗೆ ಕರೆತಂದು, ಅವರು ಬಂದು ಶೃಂಗಾರಗೊಂಡ ಚೆಂಗಳಕವ್ವನನ್ನು ನೋಡಿದ ತಕ್ಷಣ ಶೃಂಗಾರಕ್ಕೆಂದು ಹಾಕಿದ ಎಲ್ಲ ಒಡವೆಗಳನ್ನು ತೆಗೆದು, ಕಿಟ್ಟಿನಿಂದ ಮಾಡಿದ ಚೆಂಗಳಕವ್ವನ ಮುಖಗಳನ್ನು ಪತ್ತಾರ ಮನೆಗೆ ಕಳಿಸಿ ಅಕಲಿನಿಂದ ಮಾಡಿದ ಚೆಂಗಳಕವ್ವ ಶರೀರದ ಅರಲನ್ನು ಒಬ್ಬರಿಗೊಬ್ಬರು ಒಗೆದು ಅರಲು ಆಡುವರು.

ಹೊಳಿಗೆ ಮಾಡುವದು ಅಥವಾ ಚೆಂಗಳಕವ್ವ ಊಟ

ಚೆಂಗಳಕವ್ವನ ಸ್ಥಾಪನೆ ಮಾಡಿ ಊರಿನ ಪದ್ಧತಿಯಂತೆ ಎಲ್ಲ ಕೆಲಸಗಳನ್ನು ಮುಗಿಸಿದ ಮರುದಿವಸ ಊರಿನ ಎಲ್ಲ ಜನರು ತಮ್ಮ ತಮ್ಮ ಮನೆಯಿಂದ ವಿವಿಧ ಭೋಜನವನ್ನು ಮಾಡಿಕೊಂಡು ಹೊಳಿಗೆ ಹೋಗಿ ಅಲ್ಲಿ ನೈವೇದ್ಯ ಮಾಡಿ ತಾವೂ ಭೋಜನ ಮಾಡಿ ಇತರೆ ಜಾನಪದ ಕ್ರೀಡೆಗಳನ್ನು ಆಡುವರು. ಇದಕ್ಕೆ ಈ ಊರಲ್ಲಿ ಹೊಳಿಗೆ ಮಾಡುವದು ಅಥವಾ ಚೆಂಗಳಕವ್ವನ ಊಟ ಎನ್ನುವರು. ಈ ರೀತಿಯಾಗಿ ಒಟ್ಟು ಐದು ದಿವಸ ಈ ಗ್ರಾಮದಲ್ಲಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವರು.

ಹೆರಕಲ್ ಚೆಂಗಳಕವ್ವ

ಗಿರಿಸಾಗರ : ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನಲ್ಲಿ ಬರುವ ಅತಿ ದೊಡ್ಡ ಗ್ರಾಮ ಗಿರಿಸಾಗರ. ಈ ಊರಲ್ಲಿ ಚೆಂಗಳಕವ್ವನ ಹಬ್ಬವನ್ನು (ಸಿರಿಯಾಳ ಸಷ್ಠಿ) ಚೆನ್ನಾಗಿ ಆಚರಣೆ ಮಾಡುತ್ತಾರೆ.

ನಾಗರ ಪಂಚಮಿ ಹುತ್ತ ಮುರಿಯುವ ದಿವಸ ಚೆಂಗಳಕವ್ವ ಮೂರ್ತಿಯನ್ನು ಶ್ರೀ ಗುರು ಸಂಗಮೇಶ್ವರ ದೇವಸ್ಥಾನದಲ್ಲಿ ಸ್ಥಾಪನೆ ಮಾಡುತ್ತಾರೆ. ಪಂಚಮಿಗೆ ಸ್ಥಾಪನೆ, ಅಷ್ಠಮಿಗೆ ಹಾಲೋಕಳಿ, ನವಮಿಗೆ ಹೆಂಡಿ ಓಕುಳಿಗಳನ್ನು ಗ್ರಾಮದ ಪದ್ಧತಿಯಂಯೆ ಊರಿನ ಜನರು ಸೇರಿಕೊಂಡು ಆಚರಿಸುತ್ತಾರೆ.

ಹೆಂಡಿ ಓಕಳಿ ವಿಶೇಷ

ಊರಿನ ಎರಡು ಪ್ರತ್ಯೇಕ ಸಮುದಾಯದ ಹೆಣ್ಣು ಮಕ್ಕಳು ಎರಡು ಗುಂಪುಗಳಾಗಿ ಚೆಂಗಳಕವ್ವ ಮೂರ್ತಿ ಸ್ಥಾಪನೆ ಮಾಡಿದ ಶ್ರೀ ಗುರು ಸಂಗಮೇಶ್ವರ ದೇವಸ್ಥಾನದ ಮುಂದೆ ಸಾಯಂಕಾಲ ೬ ಗಂಟೆಗೆ ಹೆಂಡಿ ಓಕಳಿ ಆಡುವರು. ಈ ಎರಡು ತಂಡಗಳಲ್ಲಿ ಗಂಡಸರು ವಿಶೇಷ ವೇಷಭೂಷಣ ಮಾಡಿಕೊಂಡು ಹೆಂಡಿ ಓಕಳಿ ತಂಡದಲ್ಲಿ ಕಾಣಿಸಿಕೊಳ್ಳುವರು. ಸುಮಾರು ಎರಡು ತಾಸುಗಳವರೆಗೆ ನಡೆಯುವ ಹೆಂಡಿ ಓಕಳಿ ನೋಡುಗರಿಗೆ ಮನರಂಜನೆ ನೀಡುತ್ತದೆ. ಪದ್ಧತಿಯಂತೆ ಪ್ರತಿವರ್ಷ ಮಾಡುವ ಕಾರ್ಯಗಳನ್ನು ಆ ಮನೆಯವರೇ ನಡೆಸಿಕೊಂಡು ಹೋಗುವುದು ರೂಢಿಯಲ್ಲಿದೆ. ಹೆಂಡಿ ಓಕಳಿ ಮುಗಿದ ನಂತರ ಸಮೀಪದ ಬಾವಿಗೆ ಹೋಗಿ ಎಲ್ಲರೂ ಸ್ನಾನ ಮಾಡಿಕೊಂಡು ಬರುವರು. ಓಕಳಿ ಆಡಿ ಕೆಳಗೆ ಬಿದ್ದ ಹೆಂಡಿಯನ್ನು ಓಕಳಿ ನೋಡಲು ಬಂದ ಎಲ್ಲ ಜನರು ಸ್ವಲ್ಪ ತೆಗೆದುಕೊಂಡು ಹೋಗಿ ತಮ್ಮ ಮನೆಯ ದೇವರ ಜಗಲಿಯ ಮೇಲಿಟ್ಟು ಪೂಜೆ ಮಾಡುವದು ಈ ಊರ ಪದ್ಧತಿ ಎನ್ನುತ್ತಾರೆ ಈ ಊರಿನ ಹಿರಿಯರಾದ ಶ್ರೀ ಮಲ್ಲಪ್ಪ ಗುನ್ನಿಯವರು. ಬಾವಿಗೆ ಹೋಗಿ ಎಲ್ಲರೂ ಜಳಕ ಮಾಡಿ ಚೆಂಗಳಕವ್ವನ ಮೂರ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ತಂದು ಸ್ಥಾಪನೆ ಮಾಡುವರು.

ನಾಮಕರಣ ಮಾಡುವುದು

ಹೆಂಡಿ ಓಕಳಿ ಮುಗಿದ ನಂತರ ಎಲ್ಲರೂ ಸ್ನಾನ ಮಾಡಿ ರಾತ್ರಿ ೭ ಗಂಟೆಯ ಸುಮಾರಿಗೆ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಊರಿನ ಎಲ್ಲ ಸ್ತ್ರೀಯರು ಸೇರುವರು. ಸೇರಿದ ಎಲ್ಲ ಹೆಣ್ಣು ಮಕ್ಕಳು ಹಾಡುಗಳನ್ನು ಹೇಳುವರು. ಅಂದು ಚೆಂಗಳಕವ್ವನ ಮಗನಿಗೆ ಹೆಸರು ಇಡುವ ಕಾರ್ಯಕ್ರಮ ಅವನೇ “ಚಿಲ್ಲಾಳ”. ಸಂಪ್ರದಾಯದಂತೆ ಭಕ್ತಿಯಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಊರಿನ ಹೆಣ್ಣು ಮಕ್ಕಳು ಭಾಗವಹಿಸುವರು.

ಬಾಬುಗಳು

ಗಿರಿಸಾಗರ ಗ್ರಾಮದ ಚೆಂಗಳಾ ದೇವಿಯ ಉತ್ಸವಕ್ಕೆ ಒಟ್ಟು ನಾಲ್ಕು ಜನರ ಬಾಬುಗಳು ಇದ್ದು, ಈ ಬಾಬದವರು ಬರುವವರೆಗೆ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಬಾಬದ ಮನೆಗಳು ಯಾವುವೆಂದರೆ ದೇಸಾಯಿಯವರ ಬಾಬ, ಕೋರಿ ಶೆಟ್ಟರ ಬಾಬ, ದಿನ್ನಿಮನಿ ಚೌಡಪ್ಪನವರ ಬಾಬ, ತಿರಕಪ್ಪ ದ್ಯಾಮಗೊಳ ಬಾಬ.

ಪೂಜೆ ಪದ್ಧತಿ

ಚೆಂಗಳಕವ್ವ ಸ್ಥಾಪನೆಯಾದ ದಿನದಿಂದ ಹಿಡಿದು ಹೊಳಿಗೆ ಹೋಗುವ ತನಕ ಎಲ್ಲ ಪೂಜೆ ಪುನಸ್ಕಾರಗಳನ್ನು ಗ್ರಾಮದ ಮಠಪತಿ ನೆರವೇರಿಸಿಕೊಂಡು ಹೋಗುವರು. ಪ್ರತಿದಿನ ಸಾಯಂಕಾಲ ಊರಿನ ಹೆಣ್ಣು ಮಕ್ಕಳು ಕೂಡಿಕೊಂಡು ಹಾಡು ಹೇಳುವರು.

ನೈವೇದ್ಯ

ಚೆಂಗಳಕವ್ವ ಪೂಜೆಯ ಎಲ್ಲ ಜವಾಬ್ದಾರಿಯನ್ನು ಊರಿನ ಮಠಪತಿಯವರು ನಿರ್ವಹಿಸಿದರೆ ಊರಿನ ಭಕ್ತಿ ಸಮೂಹ ಅವರ ಅನುಕೂಲಕ್ಕೆ ತಕ್ಕಂತೆ ಕಡಬು, ಹೊಳಿಗೆ, ಹುಗ್ಗಿ ಇತ್ಯಾದಿ ನೈವೇದ್ಯವನ್ನು ತಂದು ಚೆಂಗಳಾ ದೇವಿಗೆ ನೈವೇದ್ಯ ಸಮರ್ಪಣೆ ಮಾಡುವರು.

ಉಡಿ ತುಂಬುವ ಸಾಮಾನು

ಸ್ತ್ರೀ ದೇವತೆಯಾದ ಚೆಂಗಳಕವ್ವಗೆ ಉಡಿ ತುಂಬುವುದು ಪದ್ಧತಿ ಇದೆ. ಆ ಪ್ರಕಾರ ಇಲ್ಲಿ ಎಷ್ಟು ದಿನ ಚೆಂಗಳಕವ್ವನ ಸ್ಥಾಪನೆ ಮಾಡುತ್ತಾರೆ ಅಷ್ಟು ದಿನ ರಾತ್ರಿ ಊರಿನ ಹೆಣ್ಣು ಮಕ್ಕಳು ಅಕ್ಕಿ, ಕೊಬ್ಬರಿ ಬಟ್ಟಲ, ಅಡಿಕೆ, ಎಲೆ, ಉತ್ತುತ್ತಿ ಇತ್ಯಾದಿ ಸಾಮಾನುಗಳನ್ನು ತಂದು ಉಡಿ ತುಂಬಿ ಹಾಡು ಹೇಳಿ ಆರತಿ ಮಾಡಿ ಹೋಗುವುದು ಇಲ್ಲಿಯ ಪದ್ಧತಿಯಾಗಿದೆ.

ಸಂತಾನ ದೇವತೆಯಾಗಿ ಚೆಂಗಳಕವ್ವ

ಜನಪದರ ಬದುಕಿನಲ್ಲಿ ಹಬ್ಬ ಹರಿದಿನಗಳಿಗೆ ಕೊರತೆ ಇಲ್ಲ. ಚೆಂಗಳಕವ್ವ ಉತ್ಸವದಲ್ಲಿ ಚೆಂಗಳಕವ್ವನಿಗೆ ಭಕ್ತಿಯಿಂದ ಬೇಡಿಕೊಂಡ ಮಹನೀಯರಿಗೆ ಹಲವಾರು ಇಷ್ಟಾರ್ಥಗಳು ಸಿದ್ಧಿಯಾಗಿವೆ.

ಮದುವೆಯಾಗಿ ಬಹಳ ದಿನಗಳಿಂದ ಸಂತಾನ ಪ್ರಾಪ್ತಿಯಾಗದ ಹೆಣ್ಣು ಮಕ್ಕಳು ಚೆಂಗಳಕವ್ವನ ಮಗನ ಹೆಸರು ಇಡುವ ದಿವಸ, ಮಠದಲ್ಲಿ ಕಟ್ಟಿದ ತೊಟ್ಟಲ ಕೆಳಗೆ ಕುಳ್ಳಿರಿಸಿ ಭಕ್ತಿಯಿಂದ ಬೇಡಿಕೊಂಡರೇ, ಒಂದು ವರ್ಷ ತುಂಬುವುದರೊಳಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ಇಲ್ಲಿಯ ಜನರ ನಂಬಿಕೆ. ಆ ನಂಬಿಕೆಯ ಪ್ರಕಾರ ಹಲವಾರು ಜನರಿಗೆ ಸಂತಾನವಾದ ಉದಾಹರಣೆಗಳು ಇವೆ ಎಂದು ಊರಿನ ಜನ ಹೇಳುತ್ತಾರೆ.

ವಿಸರ್ಜನೆ

ಗಿರಿಸಾಗರ ಗ್ರಾಮದಲ್ಲಿ ನಾಗರ ಪಂಚಮಿ ಆಧಾರದ ಮೇಲೆ ಚೆಂಗಳಕವ್ವನನ್ನು ಸ್ಥಾಪನೆ ಮಾಡುತ್ತಾರೆ. ರವಿವಾರ ಓಕಳಿ, ಸೋಮವಾರ ಹೆಂಡಿ, ಮಂಗಳವಾರ ಹೊಳಿಗೆ ಕಳಿಸುವುದು. ಚೆಂಗಳಕವ್ವನ ಮಗನ ಹೆಸರು ಇಟ್ಟ ಮರುದಿನ ಸಾಯಂಕಾಲ ನಾಲ್ಕು ಗಂಟೆಗೆ ಊರಿನ ಎಲ್ಲ ಹೆಣ್ಣು ಮಕ್ಕಳು ಸೇರಿಕೊಂಡು ವಿವಿಧ ಭೋಜನಗಳನ್ನು ಮಾಡಿಕೊಂಡು, ಕೃಷ್ಣಾ ತೀರಕ್ಕೆ ಹೋಗಿ ಚೆಂಗಾಳ ದೇವಿಗೆ ನೈವೇದ್ಯ ಮಾಡಿ ಭಕ್ತಿಯಿಂದ ಬೇಡಿಕೊಂಡು, ತಾವು ಊಟ ಮಾಡಿ, ವಿವಿಧ ಜನಪದ ಆಟಗಳನ್ನು ಆಡಿ ತಾವು ಖುಸಿಪಟ್ಟು ಇತರರನ್ನು ಖುಸಿಗೊಳಿಸಿ, ವರ್ಷದ ಪದ್ಧತಿಯಂತೆ ಚೆಂಗಳಕವ್ವನ ಮೂರ್ತಿಯುನ್ನು ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಿ ಸಾಯಂಕಾಲ ಎಲ್ಲರೂ ತಮ್ಮ ಮನೆಗೆ ಮರಳುತ್ತಾರೆ.

ಚೆಂಗಳಕವ್ವನ ಮೂರ್ತಿ

ಈ ಗ್ರಾಮದಲ್ಲಿ ಚೆಂಗಳಕವ್ವನ ಮೂರ್ತಿಯನ್ನು ಈ ಮೊದಲು ಊರಿನ ಕುಂಬಾರರಿಂದ ಅರಲಿನಿಂದ ಮಾಡಿಸುತ್ತಿದ್ದರು. ಅರಲಿನಿಂದ ಮಾಡಿದ ಮೂರ್ತಿಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಹೊಳೆಯಲ್ಲಿ ಬಿಡುತ್ತಿದ್ದರು. ಇತ್ತೀಚಿಗೆ ಕಟ್ಟಿಗೆಯಿಂದ ಮೂರ್ತಿ ಮಾಡಿಸಿದ್ದು, ಈ ಮೂರ್ತಿಯನ್ನು ಗೋಕಾಕದ ಬಡಿಗೇರರು ಮಾಡಿದ್ದಾರೆ ಎನ್ನುತ್ತಾರೆ ಊರಿನ ಪ್ರಮುಖರು. ವಿಸರ್ಜನೆಯ ದಿವಸ ಹೊಳಿಗೆ ಹೋದ ನಂತರ, ಎಲ್ಲ ಪೂಜೆ ಪುನಸ್ಕಾರಗಳನ್ನು ಮುಗಿಸಿದ ನಂತರ, ಮಠಪತಿ ಚೆಂಗಳಕವ್ವ ಮೂರ್ತಿಯನ್ನು ಅರಬಿಯಲ್ಲಿ ಕಟ್ಟಿ ತಂದು ಗುಡಿಯಲ್ಲಿ ಇಡುತ್ತಾನೆ. ಇಲ್ಲಿಗೆ ಚೆಂಗಳಕವ್ವನ ಜಾತ್ರಿ ಮುಗಿಯಿತು ಎನ್ನುತ್ತಾರೆ ಊರಿನ ಹಿರಿಯರಾದ ಶ್ರೀ ಬಾಲಪ್ಪ ಸನ್ನವರ ಮತ್ತು ಶ್ರೀ ರುದ್ರಪ್ಪ ವನರೊಟ್ಟಿ ಇವರು.

ನವಲಗುಂದ

ನವಲಗುಂದ ಧಾರ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದ ಒಂದು ನಗರ. ಈ ಊರಿನಲ್ಲಿ ಒಟ್ಟು ಐದು ಕಡೆ ಚೆಂಗಳಕವ್ವನ ಆಚರಣೆಯನ್ನು ಬಹು ವಿಜೃಂಭಣೆಯಿಂದ ಅವರವರ ಓಣಿಗಳಲ್ಲಿ ಆಚರಿಸುವರು. ಚೆಂಗಳಕವ್ವನ ಜಾತ್ರೆಯನ್ನು ಮಾಡುವ ಓಣಿಯ ಹೆಸರುಗಳು ಕೆಳಗಿನಂತಿದೆ.

೧. ಹಳ್ಳದ ಓಣಿ ಚೆಂಗಳಕವ್ವ

೨. ರಾಮಲಿಂಗನ ಓಣಿ ಚೆಂಗಳಕವ್ವ

೩. ಗೌಡರ ಓಣಿ ಚೆಂಗಳಕವ್ವ

೪. ಗಡ್ಡಿಯಾರ ಓಣಿ ಚೆಂಗಳಕವ್ವ

೫. ಹಳಿಪ್ಯಾಟಿ ಚೆಂಗಳಕವ್ವ (ಮೂಲ ಚೆಂಗಳಕವ್ವ)

ಮೊಟ್ಟ ಮೊದಲು ಊರಿನ ಎಲ್ಲ ಜನರು ಕೂಡಿಕೊಂಡು ಹಳಿಪ್ಯಾಟಿಯಲ್ಲಿ ಚೆಂಗಳಕವ್ವನನ್ನು ಸ್ಥಾಪನೆ ಮಾಡುತ್ತಿದ್ದರು. ಈಗ ಊರು ಬೆಳೆದಂತೆ ಜನರು ತಮ್ಮ ಓಣಿಗೊಂದರಂತೆ ಚೆಂಗಳಕವ್ವನ ಆಚರಣೆ ಮಾಡುತ್ತಾರೆ ಎನ್ನುತ್ತಾರೆ ಹಿರಿಯರಾದ ಸೋಮಣ್ಣ ಕಲ್ಲಪ್ಪ ಹಳ್ಳದವರು.

ಚೆಂಗಳಕವ್ವನ ಸ್ಥಾಪನೆ

ಪ್ರತಿ ಶ್ರಾವಣದಲ್ಲಿ ಬರುವ ಸಣ್ಣ ಸೋಮವಾರ ದಿವಸ ಬೆಳಗಿನ ೧೧ ಗಂಟೆಗೆ ಚೆಂಗಳಕವ್ವ ಮೂರ್ತಿಯನ್ನು ಗುಡಿಯಲ್ಲಿ ಸ್ಥಾಪನೆ ಮಾಡುವರು. ಬೆಳಗಿನಿಂದ ರಾತ್ರಿಯವರೆಗೆ ಹಾಡುವುದು, ಉಡಿ ತುಂಬುವುದು ಇತ್ಯಾದಿ ಕಾರ್ಯಕ್ರಮಗಳನ್ನು ಓಣಿಯ ಎಲ್ಲ ಹೆಣ್ಣು ಮಕ್ಕಳು ನಡೆಸಿಕೊಂಡು ಬರುವರು. ಚೆಂಗಳಕವ್ವನ ಸ್ಥಾಪನೆ ಮಾಡುವ ಸೋಮವಾರ ದಿವಸ ಶ್ರೀ ಬಿ.ಎಂ.ಪಾಟಿಲ ಇವರ ಮನೆಯಿಂದ ಆರತಿಯೊಂದಿಗೆ ಚೆಂಗಳಕವ್ವನ ಗುಡಿಯಲ್ಲಿ ತಂದು ಇಡುವರು. ಊರಿನ ಹಳಬನು ಸಹ ತನ್ನ ಮನೆಯಲ್ಲಿದ್ದ ಹತಾರನ್ನು ತಂದು ಸ್ಥಾಪನೆಯ ದಿವಸ ಗುಡಿಯಲ್ಲಿ ಇಡುವನು.

ಮೊದಲಿಗೆ ಚೆಂಗಳಕವ್ವನನ್ನು ಅವರಾದಿಯವರ ಮನೆಯಲ್ಲಿ ಸ್ಥಾಪನೆ ಮಾಡುತ್ತಿದ್ದು ನಂತರ ಹನುಮಂತದೇವರ ಗುಡಿಯಲ್ಲಿ ಸ್ಥಾಪನೆ ಮಾಡುತ್ತಾ ಬರುತ್ತಿದ್ದಾರೆ. ನಂತರ ಕೆಲವು ದಿವಸ ಓಣಿಯಲ್ಲಿ ಹಂದರಾ ಹಾಕಿ ಚೆಂಗಳಕವ್ವ ಸ್ಥಾಪನೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನವಲಗುಂದದ ಹೆಣ್ಣುಮಗಳು ಶ್ರೀಮತಿ ಶಂಕ್ರೆವ್ವ ಯಲ್ಲಪ್ಪ ಶಾನವಾಡ ಸಾ. ಬಲತವಾಡಿ ಇವರು ಚೆಂಗಳಕವ್ವನ ಗುಡಿಯನ್ನು ಕಟ್ಟಿಸಿದ್ದಾರೆ.

ಶ್ರಾವಣ ಮಾಸದ ಉದ್ದಕ್ಕೂ ಬರುವ ಪ್ರತಿ ಸೋಮವಾರ ದಿವಸ ಈ ಗುಡಿಯಲ್ಲಿ ಚೆಂಗಳಕವ್ವನ ಸ್ಥಾಪನೆ ಮಾಡಿ, ಓಣಿಯ ಎಲ್ಲ ಜನರು ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಚೆಂಗಳಕವ್ವ ಈ ಗ್ರಾಮದಲ್ಲಿ ಭಾವೈಕ್ಯತೆಯ ದೇವತೆ ಎಂದು ಹೇಳಬಹುದು. ನವಲಗುಂದ ಮುಸ್ಲಿಂ ಬಾಂಧವರ ಹೆಣ್ಣು ಮಗಳನ್ನು ಬಾಗಲಕೋಟೆ ತಾಲೂಕಿನ ಶಿರೂರಿಗೆ ಮದುವೆ ಮಾಡಿ ಕೊಡಲಾಗಿತ್ತು. ಬಹಳ ದಿನಗಳಿಂದ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಆ ಹೆಣ್ಣು ಮಗಳು ಬಂದು ಭಕ್ತಿಯಿಂದ ಬೇಡಿಕೊಂಡಾಗ, ಮುಂದಿನ ವರ್ಷ ಬರುವುದರೊಳಗೆ ಸಂತಾನ ಭಾಗ್ಯ ಲಭಿಸಿತು ಎಂದು ಹೇಳುತ್ತಾಳೆ ಅವರ ತಾಯಿ ಶ್ರೀಮತಿ ಮೆರಣಬಿ ಕುಂದಗೋಳ. ಇನ್ನು ಹಲವಾರು ಉದಾಹರಣೆಗಳಿವೆ ಅನ್ನುತ್ತಾರೆ ಓಣಿಯ ಹಿರಿಯರು. ಸೋಮವಾರ ರಾತ್ರಿ ಕಾರ್ಯಕ್ರಮಗಳು ಮುಗಿದ ನಂತರ ಚೆಂಗಳಕವ್ವನ ಮೂರ್ತಿಯನ್ನು ಶ್ರೀ ವೆಂಕಟೇಶ್ವರ ಗುಡಿಯಲ್ಲಿ ತಂದು ಇಡುತ್ತಾರೆ.

ಕೊನೆಯ ಶ್ರಾವಣ ಸೋಮವಾರ ದಿವಸ ಮೆರವಣಿಗೆ ಮಾಡುತ್ತಾ ಕೌಲಪೇಟೆಯ ಶೆಟ್ಟರ ಮನಿಗೆ ಹೋಗಿ ಉಡಿ ತುಂಬಿಸಿಕೊಂಡು ಬನ್ನಿ ಗಿಡಕ ಪೂಜೆ ಮಾಡಿಕೊಂಡು ಬ್ಯಾಳಿಯವರ ಮನೆಯಲ್ಲಿ ಶ್ರಾವಣ ಮಾಸ ಪರ್ಯಂತ ಪೂಜಾ ಕಾರ್ಯಕ್ರಮ ನಡೆಯುವುದು. ಶ್ರಾವಣದ ಕಡೆಯ ಸೋಮವಾರ ಮುಗಿದ ನಂತರ ರಾತ್ರಿ ಚೆಂಗಳಕವ್ವನ ಮೂರ್ತಿಯನ್ನು ದ್ಯಾಮವ್ವನ ಗುಡಿಯಲ್ಲಿ ಪೆಟ್ಟಿಗೆಯಲ್ಲಿ ಹಾಕಿ ಇಡುತ್ತಾರೆ. ನಮ್ಮ ತಾತ ಮುತ್ತಾತರಿಂದ ಈಕೆ ಒಬ್ಬಾಕೆ ಚೆಂಗಳಕವ್ವ ಇನ್ನುವರೆಗೆ ಒಮ್ಮೆಯೂ ಬಣ್ಣ ಮಾಡಿಸಲ್ಲಾ ನೋಡ್ರಿ ಅಂತಾರೆ ಓಣಿಯ ಜನರು. ಓಣಿಯ ಎಲ್ಲ ಜನರು ಕೂಡಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ದೇಣಿಗೆ ಕೂಡಿಸಿ ಎಲ್ಲ ಜಾತ್ರೆಯನ್ನು ನೆರವೇರಿಸುವರು.

ಶ್ರಾವಣ ಮಾಸ ಪರ್ಯಂತ ನಡೆಯುವ ಶಿವಶರಣೆ ಚೆಂಗಳಕವ್ವನ ಪೂಜೆ ಹಾಗೂ ಇನ್ನಿತರ ಕಾರ್ಯಕಲಾಪಗಳನ್ನು ಶ್ರೀಮತಿ ಚೆನಬಸಮ್ಮ ನಂದಿಕೋಲ ಮಠ ಇವರು ನೆರವೇರಿಸಿಕೊಂಡು ಹೋಗುವರು. ಓಣಿಯಲ್ಲಿ ಕೂಡಿದ ಹಣದಿಂದ ಎಲ್ಲರ ಬಾಬು ಮತ್ತಿತರ ಖರ್ಚುಗಳನ್ನು ನೆರವೇರಿಸುವರು. ಸಂಪೂರ್ಣ ಚೆಂಗಳಕವ್ವನ ಆಚರಣೆಯನ್ನು ಓಣಿಯ ಎಲ್ಲ ಹೆಣ್ಣು ಮಕ್ಕಳು ನೆರವೇರಿಸಿಕೊಂಡು ಹೋಗುವರು.

ಕೃಷ್ಣಾಪೂರ (ಕೊಪ್ಪ)

ಕೃಷ್ಣಾಪೂರ (ಕೊಪ್ಪ) ಗ್ರಾಮ ರೋಣ ತಾಲೂಕಿನಲ್ಲಿ ಬರುವ ಒಂದು ಗ್ರಾಮ. ಈ ಗ್ರಾಮದಲ್ಲಿ ಶಿವಶರಣೆ ಚೆಂಗಳಕವ್ವ ಜಾತ್ರೆಯನ್ನು ಬಹು ವಿಜೃಂಭಣೆಯಿಂದ ನೆರವೇರಿಸುವರು. ಕೃಷ್ಣಾಪೂರ ಗ್ರಾಮದಲ್ಲಿ ಚೆಂಗಳಕವ್ವನ ಮೂರ್ತಿ ಸ್ಥಾಪನೆಯನ್ನು ನಾಗರ ಪಂಚಮಿಯ ಕೆರೆಕಟ್ಟಂಬಲಿ ದಿವಸ ಮಾಡುವರು. ಪ್ರತಿ ಸೋಮವಾರ ದಿವಸ ಊರಿನ ಎಲ್ಲ ಜನರು ಸಾಯಂಕಾಲ ಕೂಡಿ ಹಾಡುವುದು, ಭಜನೆ ಹಾಘೂ ಉಡಿ ತುಂಬುವ ಕಾರ್ಯಕ್ರಮವನ್ನು ಮಾಡುವರು. ಇನ್ನುಳಿದ ದಿವಸದಲ್ಲಿ ಎಲ್ಲ ಕಾರ್ಯಗಳನ್ನು ಮನೆಯ ಸ್ತ್ರೀಯರು ನಡೆಸಿಕೊಂಡು ಹೋಗುವರು. ಶ್ರೀ ಹನುಮಂತಪ್ಪ ದೊಡಮನಿ ಇವರ ಮನೆಯಲ್ಲಿ ಸ್ಥಾಪಿಸಿದ ಚೆಂಗಳಕವ್ವ ಎಲ್ಲ ಪೂಜೆ ಪುನಸ್ಕಾರಗಳನ್ನು ಇವರ ಶ್ರೀಮತಿಯಾದ ಪಾರ್ವತೆವ್ವ ಹಣಮಂತಪ್ಪ ದೊಡಮನೆ ನೆರವೇರಿಸಿಕೊಂಡು ಬರುವರು. ಚೆಂಗಳಕವ್ವನ ವಿಸರ್ಜನೆಯ ದಿವಸ ಊರಿನ ಜಂಗಮರನ್ನು ಮನೆಗೆ ಕರೆದು ಪ್ರಸಾದ ಮಾಡಿಸಿ ದಕ್ಷಿಣೆ ಕೊಟ್ಟು ನಮಸ್ಕರಿಸುವರು. ಊರಿನ ಎಲ್ಲ ಜನರು ಕೂಡಿಕೊಂಡು ಶ್ರಾವಣ ಕೊನೆಯ ಸೋಮವಾರ ದಿವಸ ಭವ್ಯ ಮೆರವಣಿಗೆಯೊಂದಿಗೆ ಸಮೀಪದ ಬಾವಿಗೆ ಹೋಗಿ ಪೂಜೆ ಸಲ್ಲಿಸುವರು. ಅಲ್ಲಿಗೆ ಚೆಂಗಳಕವ್ವನ ಕಾರ್ಯಕ್ರಮ ಮುಕ್ತಾಯವಾಗುವುದು.

ಯಾದವಾಡ

ಬೆಳಗಾಂವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿ ಬರುವ ಯಾದವಾಡ ಗ್ರಾಮ ಜಾನಪದ ಕ್ಷೇತ್ರಕ್ಕೆ ತನ್ನದೇ ಆದಂತ ಹೆಸರು ಮಾಡಿದ ಊರು. ಈ ಗ್ರಾಮದಲ್ಲಿ ಹುಟ್ಟಿ ಬೆಳೆದ ಹಲವಾರು ಗಣ್ಯ ಮಾನ್ಯ ಕಲಾವಿದರು, ವಿದ್ವಾಂಸರು ಹೆಸರು ಮಾಡಿ ಈ ಊರಿನ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಿದ್ದಾರೆ. ಇಂಥ ಪ್ರಸಿದ್ಧ ಊರಿನಲ್ಲಿ ಶಿವಶರಣೆ ಚೆಂಗಳಕವ್ವನ ಆಚರಣೆಯನ್ನು ಅರ್ಥಪೂರ್ಣವಾಗಿ ಮಾಡುತ್ತಾರೆ.

ಪಂಚಮಿ ವರ್ಷ ತೊಡಕಿನ ದಿವಸ ಮಧ್ಯಾಹ್ನ ಮೂರು ಗಂಟೆಗೆ ಶ್ರೀ ಮಾರುತೇಶ್ವರ ದೇವಸ್ಥಾನ (ಕಾಮನಕಟ್ಟಿ ಓಣಿ) ದಲ್ಲಿ ಚೆಂಗಳಕವ್ವನ ಮೂರ್ತಿಯನ್ನು ಸ್ಥಾಪನೆ ಮಾಡುವರು. ಊರಿನ ಶ್ರೀ ಬಸವನಗೌಡ ಭೀಮನಗೌಡ ಪಾಟೀಲ ಇವರ ಮನೆಯಿಂದ ಮೆರವಣಿಗೆಯಲ್ಲಿ ತಂದು ಸ್ಥಾಪನೆ ಮಾಡುವರು. ಚೆಂಗಳಕವ್ವನ ಮೂರ್ತಿಯ ಎಲ್ಲ ಶೃಂಗಾರವನ್ನು ಶ್ರೀ ಬಸವನಗೌಡ ಪಾಟೀಲರು ನೆರವೇರಿಸುವರು. ಓಣಿಯ ಜನರೆಲ್ಲಾ ಪಟ್ಟಿ ಕೂಡಿಸಿ ಕುದುರೆ ಸೋಗು ಹಾಕುವರು. ಹಾಗೂ ಹಲವಾರು ಜಾನಪದ ಕ್ರೀಡೆಗಳನ್ನು ಆಡುವರು.

ಪಂಚಮಿ ಹಬ್ಬಕ್ಕೆ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತವರು ಮನೆ ಬರುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆ ಪ್ರಕಾರ ಊರಿನ ಹೆಣ್ಣು ಮಕ್ಕಳು ವರ್ಷ ತೊಡಕದ ದಿವಸ ಚೆಂಗಳಕವ್ವನ ಆಚರಣೆಯನ್ನು ಉತ್ತಮವಾಗಿ ಆಚರಿಸುತ್ತಾರೆ. ಚೆಂಗಳಕವ್ವನ ಸ್ಥಾಪನೆ ಮಾಡಿ ಎಲ್ಲರೂ ಹಾಡು ಹೇಳುವರು ಪೂಜೆ ಮಾಡುವರು. ಓಣಿಯ ಜನರು ನೈವೇದ್ಯ ತಂದು ಅರ್ಪಣೆ ಮಾಡುವರು. ಊರಿನ ಗೌಡರು ಉಡಿ ತುಂಬಿಸಿ ಆರತಿ ಮುಂತಾದ ಬಾಬುಗಳನ್ನು ಗೌಡರು ನೆರವೇರಿಸಿಕೊಂಡು ಹೋಗುತ್ತಾರೆ.