ಚೆಂಗಳಕವ್ವ ಮೂರ್ತಿ

ಶ್ರೀ ಬಸವನಗೌಡ ಭೀಮನಗೌಡ ಪಾಟೀಲ ಇವರ ಪೂರ್ವಜರು ಮೊದಲು ರಟ್ಟಿನಿಂದ ಮೂರ್ತಿ ಮಾಡಿಸಿದ್ದರು. ಕೆಲವು ವರ್ಷಗಳು ಕಳೆದ ನಂತರ ಈ ಗೌಡರು ಕಟ್ಟಿಗೆಯಿಂದ ಮೂರ್ತಿ ಮಾಡಿಸಿದ್ದಾರೆ. ಇದೇ ಊರಿನ ಶ್ರೀ ಶಂಕ್ರಪ್ಪ ಬಡಿಗೇರ ಈ ಮೂರ್ತಿ ತಯಾರಿಸಿದ್ದಾರೆ. ಮನೆಯ ಹಿರಿಯ ಗೌಡಶ್ಯಾನಿ ಶ್ರೀಮತಿ ಯಲ್ಲವ್ವ ಭೀಮನಗೌಡ ಪಾಟೀಲ ನಮ್ಮ ಕಾಲ ಕೀರ್ತಿಲೆ ಬಿದಿರಿನಿಂದ ಎರಡು ಮಂಟಪ ಮಾಡಿಸಿದ್ದೇವೆ. ಆ ಮಂಟಪದಲ್ಲಿ ಚೆಂಗಳಕವ್ವ ಕುಳ್ಳಿರಿಸಿ ಕಾರ್ಯಕ್ರಮ ಮಾಡುತ್ತಾರೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ಓಣಿಯ ಜನರು ಕೂಡಿಕೊಂಡು ಮಾಡಿಕೊಳ್ಳುತ್ತಾರೆ.

ಚೆಂಗಳಕವ್ವನ ಶೃಂಗಾರಕ್ಕೆ ಪಂಚೇರ ಬಂಗಾರ

ಚೆಂಗಳಕವ್ವನ ಶೃಂಗಾರ ಮಾಡುವುದಕ್ಕಾಗಿ ಶ್ರೀ ಬಸವನಗೌಡ ಭೀಮನಗೌಡ ಪಾಟೀಲ ಪೂರ್ವಜರು ಪಂಚೇರಗಟ್ಟಲೇ ಬಂಗಾರ ಚೆಂಗಳಕವ್ವನ ಮೈ ಮ್ಯಾಲೆ ಹಾಕುತ್ತಿದ್ದರು ಎಂದು ಹೇಳುವಾಗ, ಗೌಡಶ್ಯಾನಿಯವರ ಕಣ್ಣಲ್ಲಿ ಆನಂದಬಾಷ್ಪ ಬರುತ್ತಿದ್ದವು. ಆವ್ರು ಅಷ್ಠ ಮಾಡಿದರು, ನಾವು ಇಷ್ಠ ಮಾಡಕೊಂತ ಹೊಂಟೀವು, ದೇವು ಚಂದ ನೆಡಿಸ್ಯಾನ ಎಂದು ಖುಷಿಯಿಂದ ಹೇಳಿದಳು. ಗೌಡಶ್ಯಾನಿ ಪದ್ಧತಿಯಂತೆ ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ ಚೆಂಗಳಕವ್ವನ ಮೂರ್ತಿಯನ್ನು ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತಂದು ಗೌಡರ ಮನೆಯಲ್ಲಿ ಇಡುವರು.

ಚೆಂಗಳಕವ್ವ ಊಟಿ

ಕರೆಕಟ್ಟಂಬಲಿ ದಿವಸ ಇಡಿಯಾಗಿ ಚೆಂಗಳಕವ್ವನ ಆಚರಣೆಯಲ್ಲಿ ಕಾಲ ಕಳೆದ ಈ ಗ್ರಾಮದ ಜನರು ಮರುದಿವಸ ಸಾಯಂಕಾಲ ಊರಿನ ಸಮೀಪವಿರುವ ಕೆರೆಗೆ ಬುತ್ತಿ ಕಟ್ಟಿಕೊಂಡು ಹೋಗಿ ಪೂಜೆ ಸಲ್ಲಿಸಿ ಊರಿನ ಎಲ್ಲರೂ ಕೂಡಿ ಊಟ ಮಾಡಿ ಖುಷಿಪಡುವರು. ಚೆಂಗಳಕವ್ವನ ಆಚರಣೆಗೆ ಹೆಚ್ಚು ಜನ ಹೆಣ್ಣು ಮಕ್ಕಳು ಇರುವುದರಿಂದ ಕೆರೆಯ ಊಟಕ್ಕೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇರುತ್ತಾರೆ. ಇದಕ್ಕೆ ಈ ಊರಲ್ಲಿ ಚೆಂಗಳಕವ್ವ ಊಟ ಎಂದು ಕರೆಯುತ್ತಾರೆ.

ಹುನಗುಂಡಿ ಚೆಂಗಳಕವ್ವ

ಶ್ರೀ ಸಂಗನಗೌಡ, ಬಸವನಗೌಡ, ದೊಡ್ಡಗೌಡರ ಇವರು ಮನೆಯಲ್ಲಿ ಕರಿಕಟ್ಟಂಬಲಿ ದಿವಸ ಚೆಂಗಳಕವ್ವನ ಸ್ಥಾಪನೆ ಮಾಡುವರು. ಬೆಳಗಿನ ಒಂಬತ್ತು ಗಂಟೆಗೆ ಸ್ಥಾಪನೆ ಮಾಡುವರು. ಅಂದು ಪೂರ್ತಿಯಾಗಿ ಊರಿನ ಜನರೆಲ್ಲ ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಂಡು ಬರುವರು. ಸಾಯಂಕಾಲ ಐದು ಗಂಟೆಗೆ ಚೆಂಗಳಕವ್ವನನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡುತ್ತಾ ಹೊಳಿಗೆ ಹೋಗುವರು. ಎಲೆ ಚಟ್ಟಿಕಟ್ಟಲು ಊರಿನ ಹಿರಿಯರು ೨೫೦ ಎಲೆ ಕೊಡುವರು ಹಾಗೂ ಗುಳ್ಳವ್ವನ ಆಚರಣಿಯವರು ಎಲಿ ಪೂಜೆ ಮಾಡಿಸುವರು. ಭಜನೆ, ಡೊಳ್ಳು, ಆರುತಿ, ಬಾಜಾ ಭಜಂತ್ರಿಯವರೊಂದಿಗೆ ಮೆರವಣಿಗೆಯಲ್ಲಿ ಹಳ್ಳಕ್ಕೆ ಹೋಗುವರು. ಅಲ್ಲಿ ಮಣ್ಣಿನ ಬಸವಣ್ಣನ ಮಾಡಿ ಊರಿನಿಂದ ತಂದ ಸಸಿಗಳನ್ನು ಅಲ್ಲಿ ಇಟ್ಟು ಪೂಜೆ ಮಾಡುವರು. ಈ ಆಚರಣೆಯ ಎಲ್ಲ ಖರ್ಚುಗಳನ್ನು ಮನೆಯವರು ವಹಿಸಿಕೊಳ್ಳುವರು. ಹೊಳಿಗೆ ಹೋಗುವ ದಿವಸ ಹೊಳಿಗೆ ನೈವೇದ್ಯ ಮಾಡಿ ಜಂಗಮರಿಗೆ ಪ್ರಸಾದ ಮಾಡಿಸಿ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡುವರು. ಕರಿಕಟ್ಟಂಬಲಿ ಮಂಗಳವಾರ ಮತ್ತು ಶುಕ್ರವಾರ ದಿವಸ ಚೆಂಗಳಕವ್ವನನ್ನು ಹೊಳಿಗೆ ಕಳಿಸುವುದಿಲ್ಲ. ಮರುದಿವಸ ಕಳಿಸುತ್ತಾರೆ. ಊರಿನ ಜನರೆಲ್ಲರೂ ಬಂದು ಉಡಿಯಕ್ಕಿ ಹಾಕುವುದು ನೈವೇದ್ಯ ಮಾಡುವರು. ಎಲ್ಲ ಪೂಜೆಯ ಜವಾಬ್ದಾರಿಯನ್ನು ಶ್ರೀಮತಿ ಶಾಂತಪ್ಪ ಸಂಗನಗೌಡ ದೊಡ್ಡಗೌಡರ ಇವರು ನೆರವೇರಿಸಿಕೊಂಡು ಹೋಗುವರು. ತಲೆಮಾರಿನಿಂದ ನಮ್ಮ ಹಿರ‍್ಯಾರು ಆಚರಿಸಿಕೊಂಡು ಬಂದಾರ ನಾವು ಆಚರಣೆ ಮಾಡಾಕ ಹತ್ತೇವು. ಆದರೆ ನಮ್ಮ ಹಿರ‍್ಯಾರು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ರು, ನಾವು ಕಳೆದ ಇಪ್ಪತ್ತು ವರ್ಷಗಳಿಂದ ಮೆರವಣಿಗೆ ಮಾಡುತ್ತಾ ಹೊಳಿಗೆ ಚೆಂಗಳಕವ್ವನ ಕಳಿಸುತ್ತ ಬಂದೀವು. ದೇವರು ನಮಗೆ ಚಲೋ ಇಟ್ಟಾನ, ಅಂತಾರ ಮನೆಯ ಹಿರಿಯರಾದ ಸಂಗನಗೌಡ್ರು. ಮನೆಯಲ್ಲಿ ಚೆಂಗಳಕವ್ವನ ಮಾಡಾನ ಬ್ಯಾರೇ ಮಾಡ್ಯಾರ. ಉತ್ಸವ ಮುಗಿದ ನಂತರ ಅದೇ ಮಾಡದಲ್ಲಿ ಇಟ್ಟು ಪೂಜೆ ಮಾಡುತ್ತಾ ಹೋಗುತ್ತಿವೆ ಅಂತಾರ ಮನೆಯ ಹಿರಿಯರು. ಪ್ರತಿವರ್ಷ ಐದು ಹೊಸ ಬಳೆಗಳನ್ನು ತಂದು ಚೆಂಗಳಕವ್ವನಿಗೆ ಇಡಿಸುವುದು. ಹಳೆಯ ಬಳೆಗಳನ್ನು ಹುಡುಗರಿಗೆ ಇಟ್ಟುಕೊಳ್ಳಲು ಕೊಡುತ್ತೇವೆ. ಚೆಂಗಳಕವ್ವನ ಹಬ್ಬ ಆಚರಣೆ ಮಾಡುವದರಿಂದ ನಮ್ಗೆ ಚಲೋ ಆಗೈತಿ ಮುಂದು ಹಿಂಗ ನಡೆಸಿಕೊಂಡು ಹೊಕ್ಕಿವಿ ಅಂತಾರು ಸಂಗನಗೌಡ್ರ.

ಹೆಂಡಿ (ಸೆಗಣಿ) ಓಕಳಿ ಮಹತ್ವ

ನೋಡಾ ನೀ ಚಲೋ ತಂಕ ಆಟ ಮಾಡಿದ್ರ ಬೇಸ್ ಇಲ್ಲದಿದ್ರ ಹೆಂಡಿ (ಸೆಗಣಿ) ತುಂಬಕೊಂಡ ಕುಂತರತೀನಿ ಅಂತಿದ್ರು ನಮ್ಮ ಹಿಂದಿನ ಹಿರ‍್ಯಾರು. ಇದರ ಅರ್ಥ ಏನಂದರ ಚೆಂದ ನಾಟಕ ಮಾಡಿದರೆ ನಿನಗೆ ಬಕ್ಷಿಸ್ ಕೊಡತೀವಿ ಇಲ್ಲದಿದ್ದರ ನಿನಗ ಅವಮಾನ ಮಾಡತೇವಿ ಅನ್ನೋದು ಈ ಮಾತಿನ ಅರ್ಥ. ಈ ಆಚರಣೆಯಲ್ಲಿ ಬರುವ ಚೆಂಗಳಕವ್ವ ಹಾಗೂ ಶಿರಿಯಾಳಶೆಟ್ಟಿ ಇಬ್ಬರು ಮಹಾನ್ ಶಿವಭಕ್ತರು. ಭಕ್ತರ ಪರೀಕ್ಷೆಗಾಗಿ ಸಾಕ್ಷಾತ್ ಭಗವಂತನು ಜಂಗಮ ವೇಷದಲ್ಲಿ ಬಂದು, ತಾನು ಪರೀಕ್ಷೆ ಮಾಡಿ ಮಗ ಚಿಲ್ಲಾಳನ್ನು ಕೊಂದು ಆತನ ಮಾಂಸದ ಅಡುಗೆ ಮಾಡಿ ತನಗೆ ಪ್ರಸಾದ ಮಾಡಿಸಲು ಕೇಳುತ್ತಾನೆ. ಭಗವಂತನ ಇಚ್ಛೆಯಂತೆ ಮಗ ಚಿಲ್ಲಾಳನ್ನು ಕೊಂದು ಅಡುಗೆ ಮಾಡಿ ಉಣಬಡಿಸುತ್ತಾರೆ. ಈ ಶಿವಶರಣರ ಭಕ್ತಿಗೆ ಮೆಚ್ಚಿ ಅವರನ್ನು ಕೈಲಾಸಕ್ಕೆ ಕರೆದೊಯ್ಯುತ್ತಾನೆ. ಶಿವನಿಗೆ ತಮ್ಮ ಮಗನನ್ನೇ ಕೊಂದು ಮಾಂಸದಡಿಗೆ ಮಾಡಿದ್ದೇವೆಂಬ ಅಹಂನಲ್ಲಿ ಅವರು ಶಿವಗಣಗಳ ಜೊತೆಗೆ ಗರ್ವದಿಂದ ವರ್ತಿಸುತ್ತಾರೆ. ಶಿವಗಣಂಗಳು ಇವರ ವರ್ತನೆಯನ್ನು ಖಂಡಿಸಿ ಇವರ ಸೊಕ್ಕು ಮುರಿಯಲು ಥೂ! ಇವ್ರ ಮುಖಕ್ಕೆ ಸೆಗಣಿ ಎರಚಿ ಎಲ್ಲರ ನಡುವೆಯೂ ಅವಮಾನಿಸಿ ಬುದ್ಧಿ ಕಲಿಸುವ ಸಲುವಾಗಿ ಚೆಂಗಳಕವ್ವನ ಮುಂದೆ ಇರಿಸಿಕೊಂಡು ಈ ಹೆಂಡಿ ಓಕಳಿ ಆಡುತ್ತಾರೆ ಅನ್ನುತ್ತಾರೆ ಗಿರಿಸಾಗರದ ಹಿರಿಯರು. ಇನ್ನೊಂದೆಡೆಗೆ ದೊರೆಯುವ ಮಾಹಿತಿ ಪ್ರಕಾರ ಭಕ್ತಿಯಲ್ಲಿ ಚೆಂಗಳಕವ್ವ ಹಾಗೂ ನೆಲ್ಲೂರ್ ನಿಂಬೆಕ್ಕ ಇಬ್ಬರು ಸರಿ ಸಮಾನರು ಮತ್ತು ಸಮಕಾಲೀನರು, ಚೆಂಗಳಕವ್ವನ ಹಾಗೆ ತನ್ನ ಮಗನನ್ನು ಅಡುಗೆ ಮಾಡಿ ಜಂಗಮರಿಗೆ ಪ್ರಸಾದ ಮಾಡಿಸಿದವಳು. ಆ ಜಂಗಮರ ಇಚ್ಛೆಯಂತೆ ನೀನು ನಿನ್ನ ಮಗನನ್ನು ಕೂಗಿ ಕರೆ ಎಂದಾಗ ನೆಲ್ಲೂರ್ ನಿಂಬೆಕ್ಕ ದುಃಖದಿಂದ ಸುಮ್ಮನೆ ನಿಲ್ಲುತ್ತಾಳೆ. ಅದೇ ಮಾತನ್ನು ಚೆಂಗಳಕವ್ವನಿಗೆ ಜಂಗಮರು ಹೇಳಿದಾಗ ಕಂದನ ಮೇಲಿನ ವಾತ್ಸಲ್ಯಕ್ಕಾಗಿ “ಚಿಲ್ಲಾಳ” ಎಂದು ಕೂಗಿದಾಗ ಅಲ್ಲಿ ಮಗ ಬಂದು ಜಂಗಮರ ಮುಂದೆ ನಿಲ್ಲುತ್ತಾನೆ. ಇದನ್ನು ಕಂಡು ಸೇರಿದ ಜನರೆಲ್ಲಾ ಥೂ ಇವಳ ಮಾರಿಗೆ ಹೆಂಡಿ (ಸೆಗಣಿ) ಹಾಕಲಿ ಅಂದರಂತೆ. ಆಗ ಪರಮಾತ್ಮನು ನೀನು ಮಾಡಿದ ಕೆಲಸವನ್ನು ಬಾಯಿಯಿಂದ ಆಡಿ ತೋರಿಸಿದ ಕಾರಣ ನಿನಗೆ ಇಹ ಜನ್ಮದಲ್ಲಿ ಮುಕ್ತಿ ಇಲ್ಲ. ಆದಕಾರಣ ನೀನು ಮುಂದಿನ ಜನ್ಮದಲ್ಲಿ ತೊಗಲು ಬಾವಲಿ (ತಿಂದದನ್ನು ಬಾಯಿಂದ ಉಗುಳುವ ಪ್ರಾಣಿ) ಜನ್ಮತಾಳಿ ನನ್ನ ನಾಮಸ್ಮರಣೆ ಮಾಡಿಕೊಂಡು ನನ್ನ ಸನ್ನಿಧಿಗೆ ಬರಬೇಕೆಂದು ಆಜ್ಞೆ ಮಾಡಿದನೆಂದು, ಹೆರಕಲ್ಲದ ಮಲ್ಲಪ್ಪ ನೀರಲಕೇರಿ ಹೇಳಿದರು. ಅದಕ್ಕಾಗಿ ಈ ಜಾತ್ರೆಯಲ್ಲಿ ಹೆಂಡಿ ಅರಲು ಆಟವನ್ನು ಊರಿನ ಎಲ್ಲ ಸ್ತ್ರೀಯರು ಬೇರೆ ಬೇರೆ ಗುಂಪುಗಳಾಗಿ ಆಟವಾಡುತ್ತಾರೆ ಎನ್ನುತ್ತಾರೆ.

ಈ ಆಚರಣೆಯಲ್ಲಿ ಹೆಂಡಿ (ಸೆಗಣಿ) ಓಕಳಿಯ ಕುರಿತು ಊರಿಂದೂರಿಗೆ ಜನರಿಂದ ಜನರಿಗೆ ಬೇರೆ ಬೇರೆ ಅಭಿಪ್ರಾಯ ಅನಿಸಿಕೆಗಳಿವೆ. ಮುಖ್ಯವಾದಂಥ ಉದ್ದೇಶ ಮಾತ್ರ, ಮನುಷ್ಯ ಎಂಥ ಉಚ್ಛಮಟ್ಟದಲ್ಲಿರಲಿ ಅಷ್ಟೇ ಕೆಳಮಟ್ಟದಲ್ಲಿ ಇರಲಿ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳ್ವೆ ಮಾಡಬೇಕು. ನಮ್ಮ ನಡೆ ನುಡಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೆ ನಮಗೂ ಹೆಂಡಿ ಬೀಳುವುದು ಗ್ಯಾರಂಟಿ ಎನ್ನುತ್ತಾರೆ ಯಂಡಿಗೇರಿಯ ಮುರಿಗೆಪ್ಪ ಬೀಳಗಿ. ಒಟ್ಟಾರೆ ಈ ಅಧ್ಯಯನದಿಂದ ನಮಗೆ ತಿಳಿದು ಬರುವ ವಿಷಯವೇನೆಂದರೆ, ಆಡದೆ ಮಾಡುವವನು ರೂಢಿಯೊಳಗುತ್ತಮ ಎಂಬ ಮಾತಿನ ಮರ್ಮವನ್ನು ತಿಳಿದು ಬಾಳಬೇಕಾಗಿರುವುದು ಇಂದಿನ ಜರೂರತೆಯಾಗಿದೆ.

ಸಂತಾನ ದೇವತೆಯಾಗಿ ಚೆಂಗಳಕವ್ವ

ಜನಪದರ ಸಂಸ್ಕೃತಿಯಲ್ಲಿ ಹಲವಾರು ಆಚರಣೆಗಳು, ಹಬ್ಬ – ಹರಿದಿನಗಳು, ಜಾತ್ರೆ – ಉತ್ಸವಗಳು, ಋತುಮಾನಕ್ಕೆ ಅನುಗುಣವಾಗಿ ಬಂದು ಹೋಗುತ್ತವೆ. ಇವೆಲ್ಲವುಗಳು ಅವರಲ್ಲಿ ಜೀವನೋತ್ಸಾಹ ಹಾಗೂ ಬಂಧುತ್ವಗಳನ್ನು ಬೆಸೆಯುವ ಆಚರಣೆಗಳೆಂದರೆ ತಪ್ಪಾಗಲಿಕ್ಕಿಲ್ಲ. ಇಂತಹ ವಿಶೇಷ ಆಚರಣೆಗಳಲ್ಲಿ ನಾಗರ ಪಂಚಮಿಯ ಸಿರಿಯಾಳ ಷಷ್ಠಿ (ವರ್ಷ ತೊಡಕು) ದಿವಸ ಸ್ಥಾಪನೆಗೊಳ್ಳುವ ಚೆಂಗಳಕವ್ವನ ಜಾತ್ರೆ ವಿಶೇಷವಾಗುವುದರ ಜೊತೆಗೆ ಹಲವು ಸಂಶೋಧನೆಗಳಿಗೆ ಎಡೆ ಮಾಡಿಕೊಟ್ಟಿದೆ. ಆದಿ ಕಾಲದಿಂದಲೂ ನಮ್ಮ ಪುರಾತನರು ನೀರು, ಬೆಂಕಿ, ಗಾಳಿ, ಭೂಮಿಗಳನ್ನು ದೇವರೆಂದು ಪೂಜಿಸಿದವರು. ಅದರಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಕಂಡುಕೊಂಡವರು. ನಮ್ಮ ಜನಪದರಿಗೆ ಈ ಚೆಂಗಳಕವ್ವ ಎಲ್ಲ ಇಷ್ಟಾರ್ಥಗಳ ವರದೇವಿಯಾಗುವುದರ ಜೊತೆಗೆ ಸಂತಾನ ಭಾಗ್ಯ ನೀಡುವಂಥ ದೇವತೆಯಾಗಿರುತ್ತಾಳೆ. ಸಂತಾನ ಭಾಗ್ಯ ಇಲ್ಲದ ಹೆಣ್ಣು ಮಕ್ಕಳು ಚೆಂಗಳಕವ್ವ ಜಾತ್ರೆಯ ಎರಡನೆಯ ದಿವಸ ಮಗನಾದ “ಚಿಲ್ಲಾಳ” ನಾಮಕರಣವನ್ನು ಊರಿನ ಎಲ್ಲ ಮಹಿಳೆಯರು ಸೇರಿ ಮಾಡುತ್ತಾರೆ. ಆ ದಿವಸ ಆ ತೊಟ್ಟಿಲ ಕೆಳಗೆ ಕುಳಿತು ಭಯ ಭಕ್ತಿಯಿಂದ ಬೇಡಿಕೊಂಡರೆ ಒಂದು ವರ್ಷ ತುಂಬುವುದರೊಳಗೆ ಸಂತಾನ ಭಾಗ್ಯ ಲಭಿಸುತ್ತದೆ ಎನ್ನುತ್ತಾರೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಹಿರಿಯರು. ಇವರ ನಂಬಿಗೆ ಎಂಬಂತೆ ಸಂತಾನ ಪ್ರಾಪ್ತಿಯಾದ ಉದಾಹರಣೆಗಳು ಇವೆಯೆಂದು ಹೇಳುತ್ತಾರೆ. ನವಲಗುಂದ ಮುಸ್ಲಿಂ ಬಾಂಧವರ ಮಗಳನ್ನು ಬಾಗಲಕೋಟೆ ತಾಲೂಕಿನ ಶಿರೂರಿಗೆ ಮದುವೆ ಮಾಡಿ ಕೊಡಲಾಗಿತ್ತು. ಆ ಹೆಣ್ಣು ಮಗಳು ಗಂಡನ ಮನೆಯಿಂದ ಚೆಂಗಳಕವ್ವ ಜಾತ್ರೆಗೆ ನವಲಗುಂದಕ್ಕೆ ಬಂದು ಪ್ರಾರ್ಥನೆಗೈದುದರ ಫಲವಾಗಿ ಮುಂದಿನ ವರ್ಷ ಜಾತ್ರೆಯು ಬರುವುದರೊಳಗೆ ಅವಳಿಗೆ ಸಂತಾನ ಪ್ರಾಪ್ತವಾಯಿತು ಎಂದು ಆಕೆ ಭಕ್ತಿ ಪೂರ್ವಕವಾಗಿ ಹೇಳುತ್ತಾಳೆ ಅವಳ ತಾಯಿ ಶ್ರೀಮತಿ ಮೈರೂಣಬಿ ಕುಂದಗೊಳ. ಇಷ್ಟಲ್ಲಾ ಇನ್ನೂ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಭಕ್ತಿಯಿಂದ ಬೇಡಿದವರಿಗೆ ಬೇಡಿದ್ ಕೆಲಸ ಆಗ್ತಾವ ಅದಕ್ಕೆ ನಮ್ಮೂರಿನ ಹೆಣ್ಣು ಮಗಳು ನನ್ನ ತಂಗಿ ನವಲಗುಂದದಾಗ ಚೆಂಗಳಕವ್ವನ ಗುಡಿ ಕಟ್ಟಿಸ್ಯಾಳ. ಇಡೀ ದೇಶದ ಮ್ಯಾಗ ಹುಡುಕಿದರು ಎಲ್ಲೂ ಚೆಂಗಳಕವ್ವನ ಗುಡಿ ಇಲ್ಲ ಎಂದು ಅತಿ ವಿನಯದಿಂದ ಹೇಳುತ್ತಾರೆ ನವಲಗುಂದದ ಹಿರಿಯರಾದ ಸೋಮಪ್ಪ ಹಳ್ಳದವರು. ಹೀಗೆ ಬೇರೆ ಬೇರೆ ಊರುಗಳಲ್ಲಿ ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಊರಿನ ಹಿರಿಯರು ಮಹಿಳೆಯರು ತಮಗಾದಂಥ ಒಳ್ಳೆಯ ಫಲಗಳನ್ನು ನಮ್ಮೊಂದಿಗೆ ಹಂಚಿಕೊಂಡರೆ, ಯಂಡಿಗೇರಿಯ ಭೀಮಪ್ಪ ಬಡಿಗೇರ ಹಾಗೂ ತೀರ್ಥಯ್ಯ ಮಠಪತಿ ಇವರು ಈ ಊರಿನಲ್ಲಿ ಚೆಂಗಳಕವ್ವ ಜಾತ್ರೆಯನ್ನು ಬಹಳ ಕಾಲದಿಂದಲೂ ಮಾಡಿಕೊಳ್ಳುತ್ತಾ ಬಂದವರು, ಎಲ್ಲಾದಕ್ಕೂ ಮೊದಲು ನಮ್ಮಲ್ಲಿ ದೇವರ ಮೇಲೆ ನಂಬಿಕೆ ಇರಬೇಕು. ನಂಬಿಕೆಯಿಂದ ಬೇಡಿಕೊಂಡರೆ ಆ ತಾಯಿ ಯಾರನ್ನು ಕೈ ಬಿಡುವುದಿಲ್ಲ. ನಮ್ಮೂರಾಗ ಎಷ್ಟಮಂದಿಗೆ ಒಳ್ಳೆಯದ ಆಗಿಲ್ಲಾ, ಆಕಿನ ಶಕ್ತಿನ ಅಂತಾದು ಎಂದು ಹೇಳುವುದರ ಮೂಲಕ “ಭಕ್ತಿಯೊಂದೆ ಸಾಧನ ಮುಕ್ತಿಗೆ” ಎಂಬ ಮಾತನ್ನು ಎಲ್ಲರೂ ತಿಳಿಯಬೇಕಾದಂಥ ಅವಶ್ಯಕತೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಡುವುದರ ಜೊತೆ ಚೆಂಗಳಕವ್ವನ ಮೇಲೆ ಅವರಿಟ್ಟ ಭಯ, ಭಕ್ತಿಗಳು ಅಚಲವೆಂಬುದು ನಮಗೆ ಅಧ್ಯಯನದಿಂದ ತಿಳಿದು ಬರುತ್ತದೆ.

ಜನಪದರ ಕಥೆ

ಕಾಂಚೀಪುರ ಎಂಬ ದೇಶವನ್ನು ಸಿರಿಯಾಳ ಎಂಬ ಮಹಾರಾಜನು ಆಳುತ್ತಿದ್ದನು. ಪ್ರತಿನಿತ್ಯ ತನ್ನ ಮನೆಗೆ ಬಂದು ಬೇಡುವ ದೀನರಿಗೆ ದಾನವನ್ನು ಕೊಡುತ್ತಿದ್ದನು. ದಾನ ಧರ್ಮಗಳಲ್ಲಿ ಕರ್ಣನನ್ನು ಮೀರಿಸುವಂತವನಾಗಿದ್ದನು. ಇಂತಹ ಮಹಾರಾಜನಿಗೆ ತಕ್ಕಂತೆ ಇವನ ಮಹಾರಾಣಿ (ಚಾಂಗುಣಿ) ಚೆಂಗಳಕವ್ವ ಅಷ್ಟೇ ಭಕ್ತಿವಂತಳಾಗಿದ್ದಳು. ಭೂಲೋಕದಲ್ಲಿ ಅಷ್ಟೇ ಅಲ್ಲಾ ಇಡೀ ದೇವತೆಗಳಲ್ಲಿ ಇಂತಹ ಭಕ್ತಿವಂತರು ಎಲ್ಲೂ ಇಲ್ಲವೆಂದು ಪ್ರಚಾರವಾಗಿತ್ತು. ತ್ರಿಲೋಕ ಸಂಚಾರಿಯಾದ ನಾರದ ಮುನಿಗಳು ಇಡೀ ಬ್ರಹ್ಮಾಂಡವನ್ನೇ ತಿರುಗಿ ದೇವಲೋಕ ಪ್ರವೇಶ ಮಾಡುವ ಸಮಯದಲ್ಲಿ ಶಿವ ಪಾರ್ವತಿಯರು ನಾರದ ಮುನಿಗಳನ್ನು ಕರೆದು ಭೂಲೋಕ ಸಮಾಚಾರ ಕುರಿತು ಕೇಳಿದರು. ಆಗ ನಾರದ ಮುನಿಗಳು ನಾನು ಸಮಸ್ತ ಲೋಕಗಳನ್ನೆಲ್ಲಾ ಸಂಚರಿಸಿ ಭೂಲೋಕಕ್ಕೆ ಬಂದೆ. ಅಲ್ಲಿ ಕಾಂಚಿ ಎಂಬ ರಾಜಧಾನಿಯನ್ನು ಸಿರಿಯಾಳ ಎಂಬ ಅರಸನು ಆಳುತ್ತಾನೆ. ಅವನು ದಯಾಮಯ ಹಾಗೂ ತನ್ನ ಪ್ರಜೆಗಳನ್ನು ಸ್ವತಃ ಮಕ್ಕಳಂತೆ ಕಾಣುತ್ತಾನೆ. ಅವನಂಥ ಸದ್ಗುಣ ಸಂಪನ್ನರು ಹಾಗೂ ನಿನ್ನ ಪರಮ ಭಕ್ತರನ್ನು ನಾನು ಕಂಡೆ. ಅಂಥ ಭಕ್ತರನ್ನು ಉದ್ಧಾರ ಮಾಡುವುದು ನಿಮ್ಮ ಕೆಲಸವಲ್ಲವೇ ಎಂದು ನಾರದ ಮುನಿಗಳು ಪರಮಾತ್ಮನನ್ನು ಕೇಳುತ್ತಾರೆ. ಆಗ ಪರಮಾತ್ಮನು ನಾನು ಭಕ್ತರನ್ನು ಪರೀಕ್ಷಿಸದೇ ಎಂದೂ ಕೃಪೆ ಮಾಡುವುದಿಲ್ಲ ಎಂದು ಹೇಳಿ, ನಿನ್ನ ಹೇಳಿಕೆಯಂತೆ ಇಂದೇ ಭೂಲೋಕಕ್ಕೆ ಸಿರಿಯಾಳನ ಪರೀಕ್ಷೆಗಾಗಿ ಹೋಗುವೆನೆಂದು ವೃದ್ಧ ಸನ್ಯಾಸಿಯಾಗಿ ಕಾಂಚೀಪುರಕ್ಕೆ ಬಂದು, ಅರಮನೆಯ ಮುಂದೆ ನಿಂತು ಭಿಕ್ಷಾಂದೇಹಿ ಎಂದು ಹೇಳಿದನು. ಅತಿಥಿ ಧ್ವನಿ ಕೇಳಿ ಮಹಾರಾಜನು, ಸ್ವಾಮಿ ನಿಮ್ಮ ಇಚ್ಛೆಯನ್ನು ಹೇಳಿರಿ ಎಂದನು. ವೃದ್ಧ ಸನ್ಯಾಸಿ ರಾಜನೇ ನನಗೆ ಭಯಂಕರ ಹಸಿವೆ ಆಗಿದೆ. ಹಲವಾರು ದಿನಗಳಿಂದ ನನಗೆ ಊಟವಿಲ್ಲ ಎಂದು ಹಪಹಪಿಸುವನು. ಇದನ್ನು ಕಂಡು ಮಹಾರಾಜನು ಸ್ವಾಮಿ ತಮ್ಮ ಇಚ್ಛೆಯನ್ನು ಬೇಗ ಹೇಳಿರಿ ಪೂರ್ಣಗೊಳಿಸುವೆನು ಎಂದನು. ಆಗ ವೃದ್ಧ ಸನ್ಯಾಸಿಯು ಸತ್ಯವಾಗಿಯೂ ನ್ನ ಆಸೆಯನ್ನು ಪೂರ್ಣಗೊಳಿಸುವೆಯಾ ಎಂದು ಕೇಳಿದನು. ನೋಡು ಕೊಟ್ಟ ಮಾತು ತಪ್ಪುವುದಿದ್ದರೇ ಮೊದಲೇ ಹೇಳು ಎಂದು ಸನ್ಯಾಸಿಯು ಗುಡುಗಿದನು. ಸ್ವಾಮಿ ತಮ್ಮ ಅಪ್ಪಣೆಯಾಗಲಿ ಎಂದು ಮಹಾರಾಜ ವಿನಮ್ರವಾಗಿ ಕೇಳಿಕೊಂಡನು. ಮಹಾರಾಜ ನ್ನ ಬಯಕೆಯನ್ನು ಪೂರ್ಣ ಮಾಡುವೆಯಾ ಎಂದು ಸನ್ಯಾಸಿ ಕೇಳಿದಾಗ, ವಿನಯದಿಂದ ಬುದ್ಧಿ ತಮ್ಮ ಬಯಕೆಗಳನ್ನು ತೃಪ್ತಿಗೊಳಿಸುವುದಕ್ಕಾಗಿಯೇ ಈ ಜನ್ಮ ನನಗೆ ದೊರಕಿದೆ, ತಾವು ಅಪ್ಪಣೆ ಮಾಡಿರಿ ಎಂದ ಮಹಾರಾಜ. ಆಗ ವೃದ್ಧ ಸನ್ಯಾಸಿ ನನಗೆ ನರ ಮಾಂಸ ತಿನ್ನುವ ಆಸೆಯಾಗಿದೆ ಎನ್ನಲು ಆವಾಗ ಮಹಾರಾಜನು ತಮ್ಮ ಅಪ್ಪಣೆಯಂತೆ ಮಾಡುತ್ತೇನೆಂದೂ ಇನ್ನೂ ಏನಾದರೂ ಬಯಕೆಗಳಿದ್ದರೆ ಹೇಳಿರಿ ಎಂದು ಕೇಳಿಕೊಂಡನು. ಆಗ ಸನ್ಯಾಸಿಯು ಬೇರೆಯವರ ನರ ಮಾಂಸ ಬೇಕಾಗಿಲ್ಲ, ನಿನ್ನ ಕರಳ ಬಳ್ಳಿಯನ್ನು ಕಡಿದು ಪಾಕ ಮಾಡಿ, ನನಗೆ ಊಟ ಮಾಡಿಸಬೇಕೆಂದು ಕೇಳಿಕೊಂಡನು.

ಸಿರಿಯಾಳ ಮಹಾರಾಜ ಸನ್ಯಾಸಿಯ ಮಾತು ಕೇಳಿ ಮೂಖ ಪ್ರೇಕ್ಷಕನಾಗಿ ನಿಂತುಕೊಂಡು, ಇದ್ದೊಬ್ಬ ಮಗನನ್ನು ಹೇಗೆ ಪಾಕ ಮಾಡಿ ಸನ್ಯಾಸಿಗೆ ಊಟ ಮಾಡಿಸುವುದು ಎಂದು ಮನದಲ್ಲಿ ವಿಚಾರಿಸುತ್ತಿರಲು, ಸನ್ಯಾಸಿಯು ರಾಜ ಕೊಟ್ಟ ವಚನಕ್ಕೆ ತಪ್ಪಿದರೆ ಹೂಂ ಶಾಪ ಕೊಟ್ಟು ಹೋಗುವೆನು ಎಂದು ಬೊಬ್ಬಾಟ ಮಾಡುವನು. ಸಿರಿಯಾಳ ಹೆಂಡತಿ ಚಾಂಗುಣಿಗೆ ಎಲ್ಲ ವೃತ್ತಾಂತವನ್ನು ತಿಳಿಸಿದನು. ಆಗ ಶಾಲೆಗೆ ಹೋದ ಬಾಲಕ ಚಿಲ್ಲಾಳನನ್ನು ಕರೆಯಿಸಿ ಅಪ್ಪಿ ಮುದ್ದಾಡಿ ಚಾಂಗುಣಿ ಅನ್ನುತ್ತಾಳೆ, ಸನ್ಯಾಸಿಯು ನಿನ್ನ ಮಾಂಸವನ್ನು ಪಾಕ ಮಾಡಿ ಭೋಜನ ಮಾಡಿಸಲು ಅಪ್ಪಣೆ ಮಾಡಿದ್ದಾನೆ ಕಂದಾ ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುವಳು. ಆಗ ಚಿಲ್ಲಾಳ ಅವ್ವಾ ಇದು ಪರೀಕ್ಷೆಯ ಕಾಲ. ನನ್ನ ಶಿರ ಕಡಿದು ಪಾಕವ ಮಾಡು. ನಾನು ಮತ್ತೆ ಮುಂದಿನ ಜನ್ಮದಲ್ಲಿ ನಿನ್ನ ಗರ್ಭದಲ್ಲಿ ಜನಿಸಿ ಬರುವೆನೆಂದನು. ಚಾಂಗುಣಿ ಧೈರ್ಯದಿಂದ ಕೂಸಿನ ಕುತ್ತಿಗೆಯನ್ನು ಕೊಯ್ದು, ರುಂಡ ಮುಂಡ ಬೇರೆ ಬೇರೆ ಮಾಡಿ ರುಂಡವನ್ನು ತೆಗೆದಿಟ್ಟು ಬರೇ ದೇಹವನ್ನು ಪಾಕ ಮಾಡಿ, ಅತಿಥಿಗೆ ಪದ್ಧತಿಯಂತೆ ಸ್ನಾನ ಪೂಜಾದಿಗಳನ್ನು ಮುಗಿಸಿ ಪ್ರಸಾದ ಬಡಿಸಿದಳು. ಆಗ ಸನ್ಯಾಸಿಯು ಭಯಂಕರ ಸಿಟ್ಟಿಗೆದ್ದು ಇದರಲ್ಲಿ ರುಂಡದ ಮಾಂಸವಿಲ್ಲ ಮಗನ ಮೋಹದಿಂದ ರುಂಡ ತೆಗೆದಿಟ್ಟು ಬರೇ ಮುಂಡದ ಪಾಕ ಮಾಡಿರುವಿರಿ. ಮನಸ್ಸಿಲ್ಲದ ಭಕ್ತಿ ನನಗೆ ಬೇಡ, ನಾನು ಶಾಪ ಕೊಟ್ಟು ಹೋಗುವೆನು ಎಂದು ಸನ್ಯಾಸಿ ಪ್ರಸಾದ ಬಿಟ್ಟು ಮೇಲೆ ಏಳಲು, ಇಬ್ಬರು ಸತಿಪತಿಗಳು ಸನ್ಯಾಸಿಯ ಕಾಲಿಗೆ ಬಿದ್ದು ಬೇಡಿಕೊಳ್ಳಲು, ಆಗ ಸನ್ಯಾಸಿಯು ಆ ಶಿರವನ್ನು ಒಳಕಲ್ಲಿನಲ್ಲಿ ಹಾಕಿ ಒನಕೆಯಿಂದ ಕುಟ್ಟಿ ನೈವೇದ್ಯ ಮಾಡಿರಿ ಎಂದು ಹೇಳಿದಾಗ, ಇಬ್ಬರು ದಂಪತಿಗಳು ಒಪ್ಪಿಕೊಂಡು ಭಕ್ತಿಯಿಂದ ಪಾಕವ ಮಾಡುವರು. ಆಗ ಸನ್ಯಾಸಿಯು ಮೂರು ನೈವೇದ್ಯ ಮಾಡಿರಿ ನನ್ನೊಂದಿಗೆ ನೀವು ಪ್ರಸಾದಕ್ಕೆ ಕುಳಿತುಕೊಳ್ಳಿರಿ ಎಂದು ಇಬ್ಬರು ದಂಪತಿಗಳಿಗೆ ಹೇಳುತ್ತಾನೆ. ಆಗ ಸನ್ಯಾಸಿಯು ಮಕ್ಕಳಿಲ್ಲದವರ ಮನೆಯಲ್ಲಿ ಊಟ ಮಾಡುವುದಿಲ್ಲ. ನಿಮ್ಮ ಮಕ್ಕಳನ್ನು ಕರೆಯಿರಿ ಎಂದು ರಾಜನಿಗೆ ಆಜ್ಞೆ ಮಾಡುತ್ತಾನೆ. ಬುದ್ದಿ ಇದ್ದೊಬ್ಬ ಮಗನನ್ನು ಕೊಯ್ದು ಪಾಕ ಮಾಡಿ ತಮಗೆ ನೈವೇದ್ಯ ಮಾಡಿದ್ದೇವೆ. ಇಲ್ಲದ ಮಕ್ಕಳನ್ನು ಎಲ್ಲಿಂದ ತರಬೇಕು ಎಂದು ಸನ್ಯಾಸಿಯ ಹತ್ತಿರ ವಿನಮ್ರವಾಗಿ ದಂಪತಿಗಳು ಕೇಳಿಕೊಳ್ಳುತ್ತಾರೆ. ದಯಮಾಡಿ ತಾವು ಪ್ರಸಾದ ಸ್ವೀಕರಿಸಿರಿ ಎಂದು ಆ ವೃದ್ಧ ಸನ್ಯಾಸಿ ಹತ್ತಿರ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಆಗ ಸಾಕ್ಷಾತ್ ಶಂಕರ ಪ್ರತ್ಯಕ್ಷನಾಗಿ ಭಕ್ತ ನಿನ್ನ ಸತ್ವ ಪರೀಕ್ಷೆ ಸಾಕು ನಿನಗೆ ಏನು ವರ ಬೇಕು ಕೇಳು ಎಂದಾಗ, ನನ್ನನ್ನು ಪರೀಕ್ಷೆ ಮಾಡಿದಂತೆ ನಿನ್ನ ಭಕ್ತರನ್ನು ಪರೀಕ್ಷೆ ಮಾಡಬೇಡ ಎಂದು ಸಿರಿಯಾಳ ಮಹಾರಾಜನು ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡರೆ, ಚಾಂಗುಣಿ ನನಗೆ ಪುತ್ರ ದೊರೆಯುವಂತೆ ಮಾಡು ಎಂದಾಗ ಪರಮಾತ್ಮನು ಚಾಂಗುಣಿಗೆ “ಚಿಲ್ಲಾಳ” ಎಂದು ಕರೆಯಿರಿ ಎಂದಾಗ ಚಾಂಗುಣ ದೇವಿ ಕರೆಯುವಳು. ಆಗ ಚಿಲ್ಲಾಳ ಅವ್ವಾ ಎಂದು ಬಂದು ತಾಯಿಯನ್ನು ತಬ್ಬಿಕೊಳ್ಳುವನು. ನಿಮ್ಮಂಥ ಭಕ್ತಿವಂತರು ಈ ಭೂಮಿಯ ಮೇಲೆ ಯಾರು ಇಲ್ಲ. ನೀವು ಸುಖದಿಂದ ಬಾಳಿ ಕೈಲಾಸಕ್ಕೆ ಬನ್ನಿರಿ ಎಂದು ಭಗವಂತನು ಮಾಯವಾಗುತ್ತಾನೆ.

ಚೆಂಗಳಕವ್ವನ ಕುಳ್ಳರಿಸಿದಾಗ ಹಾಡುವ ಹಾಡುಗಳು

ಹಾಡು

ಸಣ್ಣಿರಿಬಿ ಭಾವ್ಯಾಗ ಸಣ್ಣ ಬೆಲ್ಲದಕನ್ನಿ
ಅಣ್ಣ ಬಸವಣ್ಣ ಕಸಗೊಂಡ ಜೋ. ಜೋ.
ಅಣ್ಣ ನೀ ಬಸವಣ್ಣ ಕಸಗೊಂಡ ಸುದ್ದಿ ಕೇಳಿ

ಚೆಲುವ ಹುಟ್ಟಾನ ಚನ್ನಬಸವಣ್ಣ ಜೋ. ಜೋ. || ೧ ||
ದೊಡ್ಡಿರಬಿ ಭಾವ್ಯಾಗ ದೊಡ್ಡ ಬೆಲ್ಲದ ಕನ್ನಿ
ಅಣ್ಣ ಬಸವಣ್ಣ ಕಸಗೊಂಡ ಜೋ. ಜೋ.
ಅಣ್ಣ ನೀ ಬಸವಣ್ಣ ಕಸಗೊಂಡ ಸುದ್ದಿ ಕೇಳಿ

ಚೆಲುವ ಹುಟ್ಟಾನ ಚನ್ನಬಸವಣ್ಣ ಜೋ. ಜೋ. || ೨ ||
ಚಿಕ್ಕಿ ಸಿರಿ ಉಟ್ಟವರು ಚಿಲಕದ ಬಟ್ಟ ಇಟ್ಟವರು
ಅವರು ಚಂದ್ರಗಿರಿ ಧರ್ಮರ ಜೋ. ಜೋ.
ಅವರ ನೀ ಚಂದ್ರಗಿರಿ ಧರ್ಮರ ಚಂದ್ರವ್ವ ತಾಯಿ
ನೀವ ಬಾಗಿನಕ ಬರಬೇಕು ಜೋ. ಜೋ. || ೩ ||
ಗಂಜಿ ಸಿರಿ ಉಟ್ಟವರು ಗಂಧದ ಬೊಟ್ಟ ಇಟ್ಟವರು
ಅವರ ಸೀತಿಮನಿ ಧರ್ಮರ ಜೋ. ಜೋ.
ಅವರ ಸೀತಿಮನಿ ಧರ್ಮರ ಸೀತವ್ವತಾಯಿ
ನೀವ ಬಾಗಿನಕ ಬರಬೇಕ ಜೋ. ಜೋ. || ೪ ||

 

ಹಾಡು

ಅರಷಿಣ ವನವ ಅರಿವಿನ ಕವಲಿ ನೀರು ತಿರುವುತ
ಸರಿಸ್ಯಾರ ಬಂದಾರ ಶಿವನ ಬಾಗಿನಕ ಜೋ. ಜೋ.
ಉತ್ತೋತ್ತಿ ವನವ ಉತ್ತೋತ್ತಿ ಕವಲಿನೀರ ತಿರುವುತ
ಮಿತ್ರರ ಬಂದಾರ ಶಿವನ ಬಾಗಿನಕ ಜೋ. ಜೋ.
ನಿಂಬಿಯ ವನವ ನಿಂಬಿಯ ಕವಲಿ ನೀರ ತಿರುತ್ಯ
ರಂಬ್ಯಾರು ಬಂದಾರು ಶಿವನ ಮನಿಯ ಬಾಗಿನಕ ಜೋ. ಜೋ.
ಅಡಕಿಯ ವನವ ಅಡಕೀಯ ಕವಲಿ ನೀರ ತಿರುವುತ
ಕಡಿಕ್ಯಾರ ಬಂದಾರು ಶಿವನ ಮನಿಯ ಬಾಗಿನಕ ಜೋ. ಜೋ.
ಬಾಳಿಯ ವನವ ಬಾಳಿಯ ಕವಲಿ ನೀರ ತಿರುವುತ
ಬಾಲ್ಯಾರು ಬಂದಾರು ಶಿವನ ಮನಿಯ ಬಾಗಿನಕ ಜೋ. ಜೋ.
ತೆಂಗಿನ ವನವ ತೆಂಗಿನ ಕವಲಿ ನೀರ ತಿರುವುತ
ರಂಗ್ಯಾರು ಬಂದಾರು ಶಿವನ ಮನಿಯ ಬಾಗಿನಕ ಜೋ. ಜೋ.

 

ಹಾಡು

ನುಗ್ಗಿಯ ವನದಮ್ಯಾಲೆ ಹಚ್ಚೈತ್ರೀ ಬಳ್ಳಿ
ಹಿಂಗ ಉಕ್ಕಿನ ಉಗುರಿಲೇ ಕೊಯಿಸಾರು ಎಲಿಯ ಜೋ. ಜೋ.
ಉಕ್ಕಿನ ಉಗುರಲೇ ಕೊಯಿಸಾರು ಎಲಿಯ
ಹಿಂಗ ಬಾಳಿ ಸಪ್ಪಿಲೇ ಬಿಗಿದಾರು ಎಲಿಯ ಜೋ. ಜೋ.
ಬಾಳಿ ಸಪ್ಪಿಲೇ ಬಿಗಿದಾರೋ ಎಲಿಯ
ಹಿಂಗ ಎತ್ತಿನ ಮ್ಯಾಲೊಂದು ಹೇರ‍್ಯಾರ ಎಲಿಯ ಜೋ. ಜೋ.
ಎತ್ತಿನ ಮ್ಯಾಲೊಂದು ಹೇರ‍್ಯಾರ ಎಲಿಯ
ಹಿಂಗ ಬೀಳಗಿ ಸಂತ್ಯಾಗ ಇಳಿವ್ಯಾರು ಎಲಿಯ ಜೋ. ಜೋ.
ಬೀಳಗಿ ಸಂತ್ಯಾಗ ಇಳುವ್ಯಾರು ಎಲಿಯ
ಹಿಂಗ ದುಡ್ಡಿಗೆ ನೂರು ಮಾಡಿಕೊಟ್ಟಾರು ಎಲಿಯ ಜೋ. ಜೋ.
ದುಡ್ಡಿಗೆ ನೂರು ಮಾಡಿಕೊಟ್ಟಾರು ಎಲಿಯ
ಹಿಂಗ ಕಂದನ ಬಾಯಾಗ ಚಂದಾಗುವ ಎಲಿಯ ಜೋ. ಜೋ.
ಕಂದನ ಬಾಯಾಗ ಚಂದಾಗುವ ಎಲಿಯ
ಹಿಂಗ ಬಾಲ್ಯಾರ ಬಾಯಾಗ ಸುಳಿದಾಡುವ ಎಲಿಯ ಜೋ. ಜೋ.

 

ಹಾಡು

ಕೊಳಲ ಧನಿಯೇ ಕೋಗಿಲೇ ಧನಿಯೇ
ಕೃಷ್ಣನ ಧನಿಯ ಕೇಳಿ ನಾನು || ಪ ||
ಶ್ರೀಕೃಷ್ಣನ ಕಾಟಕಗಿ ತಾಳಲಾರೇ ಗೋಪಾಲ
ಗೋಪಾಲ ಸರಿಯೇ ಸೋ ಅನ್ನಿ ಸೊಬಾನವೆನ್ನಿರೇ
ಶ್ರೀರಂಗನ ಕೂಡಾ ಸೋ ಅನ್ನಿ ಸೊಬಾನವೆನ್ನಿರೇ || ೧ ||

ಭದ್ರಾವತಿ ವರತಿನಲ್ಲಿ ಹಾಲಮಾರುತ ನಾನೇ ಹೋದೆ.
ದುಸವಲ್ಲಿಗೇಡಿ ಕೃಷ್ಣ ಬಂದು ಹಾಲಸ್ವಾರಿ ಒಡೆದು
ಹೋದಾ ಸೋ ಅನ್ನೀರಿ ಸೊಬಾನವೆನ್ನೀರಿ
ಶ್ರೀರಂಗನ ಕೂಡಾ ಸೋ ಅನ್ನಿ ಸೊಬಾನವೆನ್ನೀರಿ || ೨ ||

ಭದ್ರಾವತಿ ವರತಿನಲ್ಲಿ ಮಜ್ಜಿಗೆ ಮಾರುತ ನಾನೇ ಹೋದೆ
ದುಸವಲ್ಲಿಗೇಡಿ ಕೃಷ್ಣಾ ಬಂದು ಮಜ್ಜಿಗೆ ಗಡಿಗೆ
ಒಡೆದು ಹೋದ ಸೋ ಅನ್ನಿ ಸೊಬಾನವೆನ್ನಿರಿ
ಶ್ರೀರಂಗನ ಕೂಡಾ ಸೋ ಅನ್ನಿ ಸೊಬಾನವೆನ್ನೀರಿ || ೩ ||

ಭದ್ರಾವತಿ ವರತಿನಲ್ಲಿ ಮಸರ ಮಾರುತಾ ನಾ ಹೋದೆ
ದುಸಮನ್ನಗೇಡಿ ಕೃಷ್ಣ ಬಂದು ಮಸರ ಗಡಿಗೆ
ಒಡೆದು ಹೋದ ಸೋ ಅನ್ನಿ ಸೊಬಾನವೆನ್ನಿರಿ
ಶ್ರೀರಂಗನ ಕೂಡಾ ಸೋ ಅನ್ನಿ ಸೊಬಾನವೆನ್ನೀರಿ || ೪ ||

ಭದ್ರಾವತಿ ವರತ್ತಿನಲ್ಲಿ ಬೆಣ್ಣೆ ಮಾರುತ ನಾ ಹೋದೆ
ದುಸಮಲ್ಲಗೇಡಿ ಕೃಪ ಕದ್ದಿಲೇ ಬಂದು ಬೆಣ್ಣೆ ನುಂಗಿ ಹೋದ
ಸೋ ಅನ್ನೀರಿ ಸೊಬಾನವೆನ್ನಿರಿ
ಶ್ರೀರಂಗನ ಕೂಡಾ ಸೋ ಅನ್ನಿ ಸೊಬಾನವೆನ್ನಿರಿ || ೫ ||

 

ಹಾಡು

ಗೆಜ್ಜೆ ಪೈಜಮ ಗೆಜ್ಜೆ
ರುಳಿಯ ಪಂಚೇರ ಹೆಜ್ಜೆ
ನವಿಲ ಕುಣಿದ ನಡುವಿನ ಗೆಜ್ಜೆ ಸೊಬಾನ
ಬಾಯಿ ಬಗತಾನ ಬಾಯಿ
ತುಟ್ಟಿಯ ಹೆಸರಕಾಯಿ
ಮಾತ ಹೇಳ್ಯಾಳ ಮೋಹದ ರಾಣಿ ಸೊಬಾನ
ಬಂಗಾರ ಬಳಿ ಮುಂದ ಬಿಂದೆಲ ಇಟ್ಟರ ಚೆಂದ
ಕಸ್ತೂರಿ ಕಿಸೆವಾಸನ ದುಂದ ಸೊಬಾನ
ಬಂಗಾರ ಬೇತಾಲಿ ಉಂಗುರ ಕೂದಲ
ಕಾಮಿನ ಬಿಲ್ ಮೂಡಿದಂಗ ಸೊಬಾನ

 

ಹಾಡು

ಆರುತಿ ಬೆಳಗುವೆ ಪಾದಕ ಎರಗುವೆ
ಬಂದಂತ ಕಂಟಕ ಬಯಲು ಮಾಡುವ ತಾಯವ್ವಗ
ಎತ್ತುವೆನಾರುತಿಯ || ರಾ ||
ಮೂರ ಹೊತ್ತಿನ ಪೂಜೆ ಮಾಡಿಯ ಮಲ್ಲಿಗೆದಂಡೆ
ರುದ್ರಾಕ್ಷಿ ಜಪಮನಿ ತಪಮಾಡುವ ತಾಯವ್ವಗೆ
ಎತ್ತುವೆನಾರುತಿಯ || ೨ ||

ಉಡಿಯಕ್ಕಿ ಸ್ವಾಮಾನಾ ಬಗಡಿರುವ ನೆಲ್ಲಕ್ಕಿ
ಕಾಯಿ ಕರ್ಪೂರ ತೊಟ್ಟ ವಾಲಿ ತೌಡೊಂದು
ಒಳಗಿಟ್ಟು ಬೆಳಗುವೆನಾರುತಿಯ ಈ ಚೆಂಗಳವ್ವಗ
ದೇಶಕಧಿಕವಾದ ವಾಸುಳ್ಳ ಯಂಡಿಗೇರಿ ಸ್ವಾಮಿ
ಲಿಂಗನಪತಿ ಶರಣಿ ಚಂಗಳವ್ವಗ ಎತ್ತುವೇ ನಾರುತಿಯ

 

ಹಾಡು

ಚಿಕ್ಕಿ ಸೀರೆಯುಟ್ಟು
ಚಿಲಕದ ಬೊಟ್ಟ ಇಟ್ಟು
ಚಿತ್ತಾದೇವಿಗೆ ಬೆಳಕಿಲೇ ಬಿತ್ತಿಸಿ
ಕುಂತಾಳವ್ವ ಮಹಾಲಕ್ಷ್ಮೀ ನಿಜ ಬೆಳಗಿರಾರುತಿಯ
ಹರಹರ ಎನ್ನುತಲೇ ಎತ್ತಿರಾರುತಿಯ || ೧ ||

ಗಂಜಿ ಸೀರಿಯುಟ್ಟು
ಗಂಧದ ಬೊಟ್ಟ ಇಟ್ಟು
ನಂದಾ ದೀವಿಗೆ ಬೆಳಕಿಲೇ
ಚಿಂತಿಸಿ ಕುಂತಾಳವ್ವಾ ಮಹಾಲಕ್ಷ್ಮೀ
ನಿಜ ಬೆಳಗಿರಾರುತಿಯ ಹರಹರ ಎನ್ನುತ್ತಲೆತ್ತಿರಾರುತಿಯ || ೨ ||

ಸಾದಿನಿ ಸೀರೆಯುಟ್ಟು
ಸಾಲದ ಬೊಟ್ಟು ಇಟ್ಟು
ಸಾಲದ ದೇವಿಗೆ ಬೆಳಕಿಲೇ
ಚಿಂತಿಸಿ ಕುಂತಾಳ ಮಹಾಲಕ್ಷ್ಮಿ
ಹರಹರ ಎನ್ನುತಲೆತ್ತಿರಾರುತಿಯ
ನಿಜ ಬೆಳಗಿರಾರುತಿಯ || ೩ ||

ಕಾಲಲ್ಲಿ ಕಾಲುಂಗರ ಕಾಲಸರಪಳಿ
ಮತ್ತು ನಡುವಿನ ಡಾಬ ಗುಂಡಮುಗಳು
ದಾಳೆ ಜಂಗ ಬಾಳೆಮನೆ ಚಂದಾಗಿ ಮಹಾಲಕ್ಷ್ಮಿ ಕೊರಳಲ್ಲಿ
ಮೂಗುತಿ ಮುತ್ತ ಮಾವಾರವಾಲಿ
ಕಾಣಬಾವಲೆ ಮತ್ತು ಮೀನಬಾಲ್ವಿ
ಚಂದಾಗಿ ಮಹಾಲಕ್ಷ್ಮಿ ಹಣೆಯಲ್ಲಿ
ನಿಜ ಬೆಳಗಿರಾರುತಿಯ ಹರಹರ ಎನ್ನುತಲೇ
ಎತ್ತಿರಾರುತಿಯ || ೪ ||