ಹಾಡು ೮ – ಡೊಳ್ಳಿನ ಪದ

ಭಕ್ತಿಯ ಸಾರ ಕೇಳ್ರಿ ಬಲ್ಲವರಾ
ಚಾಂಗುನಿ ಅಂತವರ ಇಲ್ಲ ಯಾರ‍್ಯಾರು|
ಕೇಳಿದರ ನಿಮ್ಮ ಕಣ್ಣಾಗ ನೀರು| ಭಕ್ತಿ ನೋಡುದಕೆ
ಬಂದನಾ ಭಗವಂತ| ಸಾಕ್ಷಾತ್ ಶಂಕರಾ || ೧ ||

ಊಟಕ ಮಾಡರೆಂದು ಹೇಳಿದ ಶ್ರೀಹರಾ|
ಬಾಯಿ ಸವಳನಂದು ಆಗೈತಿ ಭಯಂಕರಾ|
ನಿನ್ನ ಮಗನ ಕೊಯಿರಿ ಎಂದ ನಿಷ್ಠುರಾ|
ಅವಸರ ಅಡಗಿ ಮಾಡಿ ನೀಡಿ ತಾಯಿ ಹಸ್ತೀನ್ರಿ ಭಯಂಕರಾ || ೨ ||

ಚಾಂಗುನಿ ದೇವಿಗೆ ಇರುದೊಂದು ಪುತ್ರಾ|
ಶೋಕ ಮಾಡುತಾಳ ಬಂದು ಕಣ್ಣಿರಾ|
ಹೆಂತಾ ಹೊತ್ತಾ ತಂದಿದಿ ಈಶ್ವರಾ|
ಹೊಟ್ಟೀಲೇ ಹುಟ್ಟಿದ ಮಗನ ಹೆಂಗ ಕೊಲ್ಲಲೆಂದ
ಮರಗತಾಳ ಮರಾಮರಾ || ೩ ||

ಚಾಂಗುನಿ ಪುತ್ರಾ ಚಿಲ್ಲಾಳ ಹೆಸರಾ|
ಅವನ ರೂಪ ಇತ್ತ ಚೆಲುವ ಚಂದಿರಾ|
ಕೋದ ಅಡಗಿ ಮಾಡಂದ ಅವಸರಾ|
ಶಾಲಿಗಿ ಹೋದ ಮಗನ ಕರಸಿಕೊಳ್ಳುವುದು ಬಂದಿತ ಅನಿವಾರ || ೪ ||

ಶಾಲಿಗೆ ಹೋದ ಮಗ ಬಂದ ಸುಕುಮಾರಾ
ಕುತಗಿ ಕೊಯ್ಯ ಎಂದ ಹೇಳಿದ ಶ್ರೀಹರಾ
ಚಾಂಗುನಿ ದೇವಿಯ ಜೀವಕ ಬಂತಗೋರಾ
ಮನಪಾಕದಡಗಿ ಮಾಡಿ ನೀಡತಾಯಿ
ಅಂತಾನ ಮಹಾದೇವರಾ || ೫ ||

ಕೈಕಾಲ ಕಟ್ಟಿ ಶಿರಾ ಕೊಯಿದಾಳ ಅವಸರಾ
ಕಾರಂಜಿ ಪುಟದಂಗ ಜೀಗದೀತ ನೆತ್ತರಾ
ಮಾಂಸ ಕೊಯ್ದ ಮಾಡ್ಯಾಳ ಚುರಚೊರಾ
ಪಂಚ ಪಕವಾನದಡಗಿ ಆದಿತು ತಯಾರ ಎಡೆಮಾಡಿ ಇಟ್ಟಾರ || ೬ ||

ಊಟ ಮಾಡರೆಂದು ಕರಿದಾಳ ತೀವ್ರಾ|
ತಲಿಕುಟ್ಟಿ ಚಟ್ನಿ ಮಾಡ್ಯಾಳ ಮಧುರಾ|
ಯಾರಿಗೆ ತಿಳಿದಿಲ್ಲಾ ಶಿವನ ತಂತ್ರಾ|
ಆಸನ ಮ್ಯಾಲಿ ಕುಂಡರಿಸಿ ಊಟಕೆ ನೀಡಿದಾಳ
ಉನ್ನುದಿಲ್ಲಾ ಅಂತಾರ ಶ್ರೀಹರಾ || ೭ ||
ಒಬ್ಬನ ಎಂದೆಂದು ಉನ್ನುದಿಲ್ಲಾ ಅಂತಾರಾ
ಜೋಡಿ ಪಂತಿಲೇ ಬೇಕು ಇನ್ನೋಬ್ಬರಾ
ಇರುದೊಂದು ಮಗ ಇದ್ದ ಸುಕುಮಾರಾ
ನಿನ್ನ ಸಲುವಾಗಿ ಅಡಗಿ ಮಾಡಿಟ್ಟುನ್ನುವಗೋಸ್ಕರಾ || ೮ ||

ಹೊರಗ ಹೋಗಿ ಕರಿ ಎಂದು ಹೇಳಿದ ಶಂಕರಾ|
ಆಸನ ಮ್ಯಾಲೆ ಕುಂತ ಹಾಕಿದ ಜೈಕಾರ|
ಚಿಲ್ಲಾಳಂತ ವದರತಾಳ ಜೋರಾ|
ಸಾಲಿಗೆ ಹೋದ ಮಗ ಓಡಿ ಬಂದಾನೋ ಹೆಂತಾ ವಿಚಿತ್ರ || ೯ ||

ಊಟಕ ಕರಕೊಂಡ ಕುಳಿತಾನ ಶ್ರೀಹರಾ|
ಮೌಂಸ ಮಲ್ಲಿಗೆ ಹೊವ ಆದಿತಪೂರಾ|
ಚಾಂಗುನಿದೇವಿ ಮಾಡಿ ಶಿವನ ಸ್ತೋತ್ರ|
ಸ್ವರ್ಗಕ ಹೋದ ಕತಿಯ ಮುಂದ ಹೇಳತಿವಿ ಕೇಳರಿ ಬಲ್ಲವರಾ || ೧೦ ||

ಚಾಂಗುನಿ ಒಂದಿನಾ ಸ್ವರ್ಗಕೆ ಹೊಂಟಾಗ|
ಹಾದ್ಯಾಗ ಶಿವಧೂತರು ಅಲ್ಲಿ ತರಿಬ್ಯಾರು|
ಬಿಡು ದೇವ ಅಂತಾಳ ನನ್ನ ಪದರಾ|
ನನ್ನ ಮಗನಕೊಂದ ಅಡಗಿ ಮಾಡಿನಿ ಶಂಕರನಿಗೋಸ್ಕರ || ೧೧ ||

ನನ್ನ ಮಗ ಎಂದಗೋಸ್ಕರಾ
ರುದ್ರಪಠನ ಕೆಟ್ಟ ಅಂತಾರಾ
ನರಕಕ ಹೋಗಂದ ಶ್ರೀಹರಾ
ಹೆಂತಿಂತವರಿಗೆ ಹಿಂತಾ ಹೊತ್ತು ಬಂದಿತು ಯಾರೇನು –
ಮಾಡುವರಾ || ೧೨ ||

ಮಾಂಸ ಉನಿಸಿದೆನೆಂದು ಅಂದಾಳು ನಿಷ್ಠುರಾ
ಶಾಪ ಕೊಟ್ಟಾನೇ ಸಾಕ್ಷಾತ್ ಶಂಕರಾ|
ತೊಗಲಬಾವಲಿ ಚಾಂಗುನಿ ಅವತಾರ|
ಉಂಡಬಾಯಿಲೆ ಕಾರಿಸಿಕೊಂಡಾನೋ|
ಹೇಳಿದವ ರಾಮಚಂದ್ರ || ೧೩ ||

 

ಹಾಡು

ಸಣ್ಣ ಸ್ವಾಮಾರದಿನ ಮನಿಯ ಸಾರಸತಿದ್ದೆ
ಭಿಕ್ಷೆ ಭಿಕ್ಷೆ ಅಂತ ಬಂದಾರ || ಪ ||
ಬ್ಯಾಳಿಯ ನೀಡತಿ ಸ್ವಾಮಿ ಬೆಲ್ಲವ್ವ ನೀಡಲೋ
ಮತ್ತೇನ ನೀಡಲೇ ಅಣ್ಣಯ್ಯಸ್ವಾಮೀ| ಸೋ ನಿಂಗವಾ|
ಬ್ಯಾಳಿಯ ನಾನೊಲ್ಲೆ ಬೆಲ್ಲವ ನಾನೊಲ್ಲೇ
ಇರೊ ಒಬ್ಬ ಮಗನ್ನ ಬಿನ್ನಾಯ ಮಾಡೋ ಚಂಗಳದೇವಿ
ಸೋಲಿಂಗವಾ ಸೋ.

ಇರೋ ಒಬ್ಬ ಮಗ ಶಾಲಿಗೆ ಹೋಗ್ಯಾನ ಇನ್ನೇಲ್ಲಿ ತರಲೋ
ಹುಚ್ಚ ಜಂಗಮರಾ ಸೋವಯ್ಯಾ ಲಿಂಗವಾ ಸೋ
ಬಡ ಬಡ ಹೋಗವ್ವ ಶಾಲೆಗೆ ಕಳುವಹರು
ಮಾಸ್ತರ ಮನೆಗೆ ಸೋವಯ್ಯಾ ಲಿಂಗವಾ ಸೋ
ಎಡಗೈಯಲ್ಲಿ ಲೇಖ್ಖನಿಕಿ ಬಲಗೈಲಿ ಪಾಟಿಗಂಟು
ತಾಯಿ ಮುಂದ ಮುಂದ ಬಂದಾನೋ ಚಿಲ್ಲಾಳ ಸೋಲಿಂಗವಾ ಸೋ.

ಎಡಗೈ ಹಿಂದಕಮಾಡಿ ಬಲಗೈಯಿ ಮುಂದಕ ಮಾಡಿ
ಕುಂಬಳಕಾಯಿ ಮಾಡಿ ಕಡಿದಾಳೋ ಮಗವಿನ್ನ ಸೋ ಲಿಂಗವಾ ಸೋ.
ಅಡಗಿಯಾಗಿದೆ ಗುರುವೆ ನೀರು ಕಾಯ್ದಿದೆ ಗುರುವೇ
ಊಟ ಮಾಡಿ ಹೋಗ್ರೀ ಉಚ್ಚ ಜಂಗಮರೇ ಸೋ ಲಿಂಗವಾ ಸೋ
ನಿನ್ನ ಪುತ್ರಣ್ಣ ಕರಿಯೇ ಚಂಗಳಾದೇವಿ
ಇರೋ ಒಬ್ಬ ಮಗನ್ನಾ ಬಿನ್ನಾಯ ಮಾಡಿರಿ
ಇನ್ನೆಲ್ಲಿ ತರಲಿ ಉಚ್ಚಜಂಗಮರೇ ಸೋ ಲಿಂಗವಾ ಸೋ
ಆಚಿ ಮೂಲಿ ಬೀಡು ಈಚಿ ಮೂಲಿ ಬೀಡು
ನಡುಮನಿಯಲ್ಲಿ ನಿಂತ ಕರಿಯವ್ವಾ ಮಗುವಿನ್ನ ಸೋ ಲಿಂಗವಾ ಸೋ
ಗಿಲ್ಲಾಂತ ಬಂದಾಮ ಎಣ್ಣಕುಮಾರ ಸೋ ಲಿಂಗವಾ ಸೋ

 

ಹಾಡು ೧೦

ಸಣ್ಣ ಸ್ವಾಮಾರಲಿನಾ ಮನೆಯ ಸಾರಸತಿದ್ದೆ
ಭೀಕ್ಷೆ ಭೀಕ್ಷೆಯಂತ ಬಂದಾರ ಉಚ್ಚಜಂಗಮರ
ಸುವಯ್ಯ ಲಿಂಗವ ಸುವಯ್ಯಾ || ೧ ||

ಬ್ಯಾಳಿ ನೀಡಲಿಸ್ವಾಮಿ ಬೆಲ್ಲ ನೀಡಲಿಸ್ವಾಮೀ
ಮತ್ತೇನು ನೀಡಲಿ ಉಚ್ಚಜಂಗಮರ
ಸುವಯ್ಯಾ ಲಿಂಗನ ಸುವಯ್ಯಾ || ೨ ||

ಬ್ಯಾಳಿನೊ ನಾನೊಲ್ಲೆ ಬೆಲ್ಲವ ನಾನೊಲ್ಲೆ
ಇದ್ದ ಪುತ್ರನ ಕೊಯ್ದು ಬಿನ್ನಾಯಿ ಮಾಡಂದ
ಸುವಯ್ಯಾ ಲಿಂಗದ ಸುವಯ್ಯಾ || ೩ ||

ಪುತ್ರನ ಕೊಯ್ಯ ಬಿನ್ನಾಯ ಮಾಡ ಚಂಗಳಾ
ಇರು ಒಬ್ಬ ಮಗಾ ಶಾಲಿಗೆ ಹೋಗ್ಯಾನ ಜಾನ
ಇನ್ನೇಲಿ ತರಲಿ ಉಚ್ಚ ಜಂಗಮರ
ಸುವಯ್ಯಾ ಲಿಂಗವ ಸುವಯ್ಯಾ || ೪ ||

ಬಡಬಡ ಹೋಗವ್ವ ಶಾಲಿಗೆ ನಿಂದರವ್ವ
ಶಾಲಿಮಾಸ್ತರ ಕಳವಯ್ಯಾ ಮಗನ
ಸುವಯ್ಯಾ ಲಿಂಗವ್ವ ಸುವಯ್ಯಾ || ೫ ||

ಎಡಗೈಯಾಗ ಪಾಟಿಗಂಟು ಬಲಗೈಯಾಗ ಲೆಖ್ಖನಕಿ
ತಾಯಿ ಮುಂದ ಮುಂದ ಬಂದಾನ ಚಿಲ್ಲಾಳ
ಸುವಯ್ಯಾ ಲಿಂಗದ ಸುವಯ್ಯಾ || ೬ ||

ಕುಂಬಳಕಾಯಿ ಕೊಯ್ದಳಾ ಹೋಳಿ
ಸುವಯ್ಯಾ ಲಿಂಗದ ಸುವಯ್ಯಾ || ೭ ||

ಹಿರಿಕಾಯಿ ಮಾಡಿ ಹೇರಿಚಾಳ ಮಗನ
ಸುವಯ್ಯಾ ಲಿಂಗದ ಸುವಯ್ಯಾ || ೮ ||
ಅಡಗಿ ಆಗೆದ ಗುರುವೆ
ನೀರ ಕಾಯದವಾ ಗುರುವೆ
ಊಟ ಮಾಡಿರಿ ಉಚ್ಚ ಜಂಗಮರ
ಸುವಯ್ಯಾ ಲಿಂಗದ ಸುವಯ್ಯಾ || ೯ ||

ನಿನ್ನ ಪುತ್ರನ ಕರಿಯ ಚಂಗಳಾದೇವಿ
ಸುವಯ್ಯಾ ಲಿಂಗದ ಸುವಯ್ಯಾ || ೧೦ ||

ಇರೋ ಒಬ್ಬ ಮಗನ ಬಿನ್ನಾಯಿ ಮಾಡಿನಿ
ಇನ್ನೇಲಿ ತರಲಿ ಉಚ್ಚಜಂಗಮಾರ
ಸುವಯ್ಯಾ ಲಿಂಗದ ಸುವಯ್ಯಾ || ೧೧ ||

ಆಚಿ ಮೂಲಿ ಬಿಡು ಇತಿ ಮೂಲಿ ಬೀಡು
ನಡು ಮನ್ಯಾಗ ನಿಂತ ಕರಿಯವ್ವ ಚಂಗುಳಿ
ಸುವಯ್ಯಾ ಲಿಂಗದ ಸುವಯ್ಯಾ || ೧೨ ||

ಗಿಲ್ಲಂತ ಬಂದ ನನ್ನ ಕುವರ
ಸುವಯ್ಯಾ ಲಿಂಗದ ಸುವಯ್ಯಾ

 

ಹಾಡು ೧೧

ಸತ್ಯ ಚಂಗಳಕವ್ವನ ಭಜನೆ ನಿತ್ಯನಾವು ಮಾಡೋನವ್ವ
ಸತ್ಯ ಚಂಗಳಕವ್ವನ ಕೂಡ ಸಾಹಿಹೊದಿನವ್ವ | ಓಂ ಶಿವಾಯ
ಆರು ಮೂರು ಒಟ್ಟಿ ಬಳ್ಳಗೆ ಹಾಕಿನವ್ವ ನಾನು
ಬಳ್ಳಿ ಗಾಕಿನವ್ವ ಆರು ಮೂರು ಒಬ್ಬಿ ಬಳ್ಳಿ ನುಂಗಿತವ್ವ | ಓಂ ಶಿವಾಯ
ಆರು ಮೂರು ಒಬ್ಬಿ ಬಳ್ಳಿ ನುಂಗಿತವ್ವಾ
ಆರು ಚಕ್ರದಗೊಳಾ ಮ್ಯಾಲಿಕೆ ಏರಿಂದನವ್ವ | ಓಂ ಶಿವಾಯ
ಆರು ಚಕ್ರದಗೊಳಾ ಮಾಲಿಕ ಏರಿದನವ್ವ ಇವಾ
ಆರು ಚಕ್ರದಾಗಿನ ಬೋದಾ ತಿಳಿದನವ್ವ ನಾನು
ಬೋದಾ ತಿಳಿದ ಮ್ಯಾಲೆ ಬಾದನಿಲ್ಲವ್ವಾ | ಓಂ ಶಿವಾಯ
ಬೋದಾ ತಿಳಿದ ಮ್ಯಾಲೆ ಬಾದನಿಲ್ಲವ್ವಾ ಇರು ಬಾದನಿಲ್ಲವ್ವ
ರಾಯ ರಾಯರ ಕೂಡಿ ನ್ಯಾಯ ನ್ಯಾಯ ಹೇಳರವ್ವಾ | ಓಂ ಶಿವಾಯ
ರಾಯ ರಾಯರ ಕೂಡಿ ನ್ಯಾಯವ ಹೇಳಿಯಾರವ್ವ ಇವರು
ನ್ಯಾಯದಗಾರನ್ನ ಮಾಯನಾದನವ್ವ | ಓಂ ಶಿವಾಯ
ನ್ಯಾಯದಗಾರನ್ನ ಮಾಯನಾಗಾನವ್ವ ಇವಾ ಮಾಯಾನಾಗೆನವ್ವ
ಧರೆಯೋಳು ಚಂಗಳವ್ವ ಪಾದಕ ಹೊಂದಿದನವ್ವ | ಓಂ ಶಿವಾಯ
ಧರೆಯೋಳು ಚಂಗಳಕವ್ವನ ಪಾದಕ ಹೊಂದಿದರವ್ವ
ಪಾದಕ ಹೊಂದಿದ ಮ್ಯಾಲೆ ಪಾವನನಾದೆನವ್ವ | ಓಂ ಶಿವಾಯ

 

ಹಾಡು ೧೨

ಸಿರಿ ಪ್ರಬಲದನ್ನ ಕೊರದ ಕೊಬ್ಬರಿ ಗಿಟಕ
ಮತಿಕುಲದ ಮಾವಿನ ಹಣ್ಣ ಕಾಶಿ ಪ್ರಬಲದನ್ನ
ಸೀರೆಯ ಉಡಿಸುವೆನು ಈ ಚೆಂಗಳವ್ವಗ || ೧ ||

ಕುಬಸ ಪ್ರಬಲದನ್ನ ಕೊರದ ಕೊಬ್ಬರ ಗಿಟಕ
ಮತಿ ಕುಲದ ಮಾವಿನ ಹಣ್ಣ ಕಾಶಿ ಪ್ರಬಲದನ್ನ
ಗಂಧವ ಹಚ್ಚುವೆನು ಈ ಚೆಂಗಳವ್ವಗ || ೨ ||

ಗಂಧ ಪ್ರಬಲದನ್ನ ಕೊರೆದ ಕೊಬ್ಬರಿ ಗಿಟಕ
ಮತಿಕುಲದ ಮಾವಿನ ಹಣ್ಣ ಕಾಶಿ ಪ್ರಬಲದನ್ನ
ಗಂಧವ ಹಚ್ಚುವೆನು ಈ ಚೆಂಗಳವ್ವಗ || ೩ ||

ಅರಿಷಿಣ ಪ್ರಬಲದನ್ನ ಕೊರೆದ ಕೊಬ್ಬರಿ ಗಿಟಕ
ಮತಿಕುಲದ ಮಾವಿನ ಹಣ್ಣ ಕಾಶಿ ಪ್ರಬಲದನ್ನ
ಅರಿಷಿಣ ಹೆಚ್ಚುವೆನು ಈ ಚೆಂಗಳವ್ವಗ || ೪ ||

ಕುಂಕುಮ ಪ್ರಬಲದನ್ನ ಕೊರೆದ ಕೊಬ್ಬರಿ ಗಿಟಕ
ಮತಿಕುಲದ ಮಾವಿನ ಹಣ್ಣ ಕಾಶಿ ಪ್ರಬಲದನ್ನ
ಕುಂಕುಮ ಹಚ್ಚುವೆನು ಈ ಚೆಂಗಳಕವ್ವಗ || ೫ ||

ಬಾಳಿ ಪ್ರಬಲದನ್ನ ಕೊರೆದ ಕೊಬ್ಬರಿ ಗಿಟಕ
ಮತಿಕುಲದ ಮಾವಿನ ಹಣ್ಣ ಕಾಶಿ ಪ್ರಬಲದನ್ನ
ಉಡಿಯನು ತುಂಬುವೇನ ಈ ಚೆಂಗಳವ್ವಗ || ೬ ||

ದಂಡೆ ಪ್ರಬಲದನ್ನ ಕೊರೆದ ಕೊಬ್ಬರಿ ಗಿಟಕ
ಮತಿಪುರದ ಮಾವಿನ ಹಣ್ಣ ಕಾಶಿ ಪ್ರಬಲದನ್ನ
ದಂಡೆಯ ಕಟ್ಟುವೇನು ಈ ಚೆಂಗಳವ್ವಗ || ೭ ||

 

ಹಾಡು ೧೩

ವಿಭೂತಿ ಹಚ್ಚಿದರ ಈರಾನ ಸುರ‍್ಯಾಗ
ಈರನಾಳವರ ಮಡದೆ
ಈರನಾಳವರ ಮಡದಿಗೇ ಚೆಂಗಳಕವ್ವಗ
ವಿಭೂತಿ ಹಚ್ಚ್ಯಾರ ಶುಭದಿಂದ ಸೋ
ಕುಂಕುಮ ಹಚ್ಚಿರಿ ನನ್ನ ಕುಶಲದಾಗ ಚೆಂಗಳೆಗೆ
ಕುಷಿಯನಾಳವ ಮಡದಿಗೆ ಸೋ
ಕುಷಿಯನಾಳವರ ಮಡದಿಗೆ ಸೋ
ಕುಷಿಯ ನೀನಾಳವರ ಮಡದಿ ನೀ ಚೆಂಗಳವ್ವಗ
ಕುಂಕುಮ ಹಚ್ಚೆದ ಶುಭದಿಂದ ಸೋ || ೧ ||

ಗಂಧ ಹಚ್ಚಿರಿ ನನ್ನ ಮಂದ ಗನ್ನಾಕಿಗೆ
ಗಾಲನಾಳವರ ಮಡದಿಗೆ
ಗಾಲನಾಳನೀ ಆಳವರ ಮಡದಿನೀ ಚೆಂಗಳವ್ವಗ
ಗಂಧ ಹಚ್ಚಿರೀ ಶುಭದಿಂದ ಸೋ || ೨ ||

ಅರಿಷಿನ ಹಚ್ಚಿರಿ ನನ್ನ ಸರಸ ಗನ್ನಾಕಿಗೆ
ಸರಸನಾಳವರ ಮಡದಿಗೆ
ಸರಸನೀನಾಳವರ ಮಡದಿಗೆ ಚೆಂಗಳಕವ್ವಗ
ಅರಿಷಿನ ಹಚ್ಚಿರಿ ಶುಭದಿಂದ ಸೋ || ೩ ||

ದಂಡಿ ಕಟ್ಟರಿ ನನ್ನ ದುಂಡ ಮಾರ‍್ಯಾಕಿಗೆ
ದಂಡಿನಾಳವರ ಮಡದಿಗೆ
ದಂಡನೀನಾಳವರ ಮಡದಿಗೆ ಚೆಂಗಳವ್ವಗೆ
ದಂಡಿ ಕಟ್ಟಿಲಿ ಶುಭದಿಂದ ಸೋ || ೪ ||

ಉಡಿಯ ತುಂಬಿರಿ ನನ್ನ ಒಡಲಗನ್ನಾಕಿಗೆ
ಒಡೆಯೆನಾಳವರ ಮಡದಿಗೆ
ಒಡೆಯ ನೀನಾಳವರ ಮಡದಿಗೆ ಚೆಂಗಳವ್ವಗ
ಉಡಿಯ ತುಂಬಿರಿ ಶುಭದಿಂದ ಸೋ || ೫ ||