ಸಿರಿದಿಣ್ಣ ಭಟ್ಟಾರರ ಕಥೆಯಂ ಪೇೞ್ವೆಂ :

ಗಾಹೆ || ಸೀದೇಣ ಪುವ್ವವೇರಿಯ ದೇವೇಣ ವಿಗುವ್ವಿದೇಣ ಘೋರೇಣ
ಸಂಸಿತ್ತೋ ಸಿರಿದಿಣ್ಣೋ ಪಡಿವಣ್ಣೋ ಉತ್ತಮಂ ಅಟ್ಠಂ ||

*ಸೀದೇಣ – ಅಯ್ಕಿಲಿಂದಂ, ಪುವ್ವವೇರಿಯ ದೇವೇಣ – ಮುನ್ನಿನ ಭವದ ಪಗೆವನಪ್ಪ ದೇವನಿಂದಂ, ವಿಗುವ್ವಿದೇಣ – ವಿಗುರ್ವಿಸೆಪಟ್ಟುದಱಂದಂ, ಘೋರೇಣ – ಆದಮಾನುಂ ಕಡಿದಪ್ಪುದಱಂದಂ, ಸಂಸಿತ್ತೋ – ತಿಳಿಯಪಟ್ಟೊನಾಗಿ, ಸಿರಿದಿಣ್ಣೋ – ಸಿರಿದಿಣ್ಣನೆಂಬ ಭಟಾರಕಂ, ಪಡಿವಣ್ಣೋ – ಪೊರ್ದಿದೊಂ, ಉತ್ತಮ ಅಟ್ಠಂ – ಮಿಕ್ಕ ದರ್ಶನ ಜ್ಞಾನಚಾರಿತ್ರಾರಾಧನೆಯಂ*

ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲದನಾಳ್ವೊನಗಮ ಸಮ್ಯಗ್ದೃಷ್ಟಿಶ್ರಾವಕಂ ಸಿಂಹರಥನೆಂಬೊನರಸಂ ಮತ್ತಿತ್ತ ಮಗಧೆಯೆಂಬುದು ನಾಡಲ್ಲಿ ಸಾಕೇತವೆಂಬುದದನಾಳ್ವೊಂ ಶ್ರಾವಕಂ ಸುಮಂತನೆಂಬೊನರಸಂ ಮತ್ತಿತ್ತ ಮಂಗಳಾವತಿಯೆಂಬುದು ನಾಡಲ್ಲಿ ಇಳಾಪಟ್ಟಣಮೆಂಬುದು ಪೊೞಲದನಾಳ್ವೊನಗಮ ಸಮ್ಯಗ್ ದೃಷ್ಟಿ ಶ್ರಾವಕಂ ಜಿತಶತ್ರುವೆಂಬೊನರಸನಾತನರಸಿ ಇಳಾ ಮಹಾದೇವಿಯೆಂಬೊಳಾ ಅರಸನ ದಾದಿ ವಿನಯಮತಿಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಕಾಲಂ ಸಲೆ ಘಾಲ್ಗುನ ನಂದೀಶ್ವರಂ ಬಂದೊಡೆ ಮೂವರುಂ ಮಂಡಲಿಕರುಂ ತಂತಮ್ಮ ಪೊೞಲ್ಗಳೊಳೆಂಟು ದಿವಸಮರ್ಹದ್ಭಟ್ಟಾರಕರ್ಗೆ ಮಹಾಮಹಿಮೆಗಳಂ ಮಾಡಲ್ ತೊಡಗಿದರಿತ್ತ ಜಿತಶತ್ರುವುಂ ತನ್ನ

ಸಿರಿದಿಣ್ಣ ಭಟಾರರ ಕಥೆಯನ್ನು ಹೇಳುವೆನು – (ಸಿರಿದಿಣ್ಣನೆಂಬ ಋಷಿಯು ಹಿಂದಿನ ಜನ್ಮದ ಶತ್ರುವಾದ ವ್ಯಂತರದೇವನಿಂದ ಮಾಯೆಯ ಸೃಷ್ಟಿಯಾದ ಕಠಿನವಾದ ಶೀತದಿಂದ ಕೂಡಿದ ಗಾಳಿ ಮಳೆಗಳಿಂದ ಸೇಚಿಸಲ್ಪಟ್ಟವನಾದರೂ ಶ್ರೇಷ್ಠವಾದ ದರ್ಶನ ಜ್ಞಾನಚಾರಿತ್ರಗಳ ಆರಾಧನೆಯನ್ನು ಮಾಡಿ ಮೋಕ್ಷ ಹೊಂದಿದನು.) ಅದು ಹೇಗೆಂದರೆ : – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ಅಂಗ ಎಂಬ ನಾಡಿದೆ. ಅಲ್ಲಿ ಚಂಪಾನಗರವೆಂಬ ಪಟ್ಟಣವನ್ನು ಸಮ್ಯಕ್ ದೃಷ್ಟಿಯನ್ನು ಪಡೆದ ಜೈನಗೃಹಸ್ಥನಾದ ಸಿಂಹರಥನೆಂಬ ರಾಜನು ಆಳುತ್ತಿದ್ದನು. ಇನ್ನೊಂದೆಡೆ ಮಗಧೆಯೆಂಬ ನಾಡಿನಲ್ಲಿ ಸಾಕೇತವೆಂಬ ಪಟ್ಟಣವಿದೆ. ಅದನ್ನು ಶ್ರಾವಕನಾದ ಸುಮಂತನೆಂಬ ರಾಜನು ಆಳುತ್ತಿದ್ದನು. ಇತ್ತ ಇನ್ನೊಂದೆಡೆ ಮಂಗಳಾವತಿ ಎಂಬ ನಾಡಿನಲ್ಲಿ ಇಳಾ ಎಂಬ ಪಟ್ಟಣವಿದೆ. ಅದನ್ನು ಸಮ್ಯಗ್ ದೃಷ್ಟಿಯನ್ನು ಸಂಪಾದಿಸಿರತಕ್ಕ ಶ್ರಾವಕನಾದ ಜಿತಶತ್ರು ಎಂಬ ರಾಜನು ಆಳುತ್ತಿದ್ದನು. ಜಿತಶತ್ರುವಿನ ಹೆಂಡತಿ ಇಳಾ ಮಹಾದೇವಿ ಎಂಬವಳು. ಆ ಅರಸನಿಗೆ ವಿನಯಮತಿ ಎಂಬ ಒಬ್ಬಳು ದಾದಿ ಇದ್ದಳು. ಅಂತು ಅವರೆಲ್ಲರೂ ತಮ್ಮ ಇಷ್ಟ ವಿಷಯದ ಸುಖಗಳನ್ನು ಅನುಭವಿಸುತ್ತ ಇದ್ದರು. ಹೀಗೆಯೇ ಕಾಲ ಕಳೆಯಿತು. ಒಮ್ಮೆ ಫಾಲ್ಗುಣ ಮಾಸದ ನಂದೀಶ್ವರ ಹಬ್ಬ ಬಂತು. ಆಗ ಮೂವರು ಮಾಂಡಲಿಕ ರಾಜರೂ ತಮ್ಮ ತಮ್ಮ ಪಟ್ಟಣಗಳಲ್ಲಿ ಎಂಟು ದಿವಸವೂ ಜೈನ ತೀರ್ಥಂಕರರಿಗೆ ಮಹತ್ತಾದ ಉತ್ಸವಗಳನ್ನು ಮಾಡತೊಡಗಿದರು. ಇತ್ತ ಜಿತಶತ್ರುವೂ ತನ್ನ ಪಟ್ಟಣದಲ್ಲಿ

ಪೊೞಲೊಳೆಂಟು ದಿವಸಂ ಜಿನಮಹಾಮಹಿಮೆಯಂ ಮಾಡಲ್ ತೊಡಗಿದನಾತನ ದಾದಿ ವಿನಯಮತಿಯೆಂಬೊಳ್ ಗುಜ್ಜಿ ವಿರಳದಂತೆ ಆದಮಾನುಂ ವಿರೂಪೆ ಪೇಸೆಪಡುವಳ್ ನೋಡಿದ ಜನಕ್ಕೆ ಭಯಮಂ ಪಡೆವೊಳ್ ನಾಣಿಸೆಪಡುವೊಳಂತಪ್ಪಾಕೆ ಅರಸನೊಡೆನೆ ಜಿನಮಹಾಮಹಿಮೆಯಂ ನೋಡಲ್ ಪೋಪಾಗಳರಸನೆಂದೊನಬ್ಬಾ ನೀಮುಂ ಮಹಿಮೆಗೆ ಬರಲ್ವೇಡ ನಿಮ್ಮಂ ಕಂಡು ಮಹಿಮೆಗೆ ವಂದ ನೆರವಿಯಂಜುಗುಂ ಪೇಸುಗುಮಮಂಗಳಮೆಂಗುಮದಱಂ ನೀಮುಂ ಮನೆಯೊಳಿರಿಮೆಂದಿರಿಸಿ ತಾನುಂ ಸಹಸ್ರಕೂಟಮೆಂಬ ಚೈತ್ಯಾಲಯಕ್ಕೆ ಮಹಾಮಹಿಮೆಯಂ ಮಾಡಲ್ ಪೋದನ್ ಇತ್ತ ದಾದಿಯುಂ ಮಗನ ಮಾಡುವ ಮಹಾಮಹಿಮೆಯಂ ನೋಡಲ್ ಪೆತ್ತೆನಿಲ್ಲೆಂದುಬ್ಬೆಗಂ ಬಟ್ಟು ತನ್ನಂ ತಾಂ ಪೞದು ನಂದೀಶ್ವರದೆಂಟು ದಿವಸಮಭಿಷೇಕಮುಮರ್ಚನೆಯುಮಷ್ಟೋಪ ವಾಸಮುಮಂ ಮಾಡಿ ದೇವರಂ ಬಂದಿಸುತ್ತಂ ಪೂಜಿಸುತ್ತಿರ್ದಳಿತ್ತರಸನುಮೆಂಟು ದಿವಸಂ ಮಹಾಮಹಿಮೆಯಭಿಷೇಕ ಮುಮಂ ಮಾಡಿ ಸವೆಯಿಸಿದ ಬೞಕ್ಕ ದಾದಿಗೆ ಬೞಯಟ್ಟಿವರಿಸಿ ಇಂತೆಂದನಬ್ಬಾ ನೀಮಿಂತೇಕೆ ಕರಂ ಬಡಪಟ್ಟಿರ್ದ್ದಿರೆಂದೊಡೆ ದಾದಿಯಿಂತೆಂದಳ್ ಮಗನೆ ಎಂಟು ದಿವಸಸಮುಪವಾಸಂ ಗೆಯ್ದು ಮನೆಯೊಳ್ ದೇವರ್ಗ್ಗಭಿಷೇಕಮುಂ ಪೂಜೆಯುಮಂ ಮಾಡಿಸುತ್ತಿರ್ದೆನೆಂದೊಡೆ ಅದಂ ಕೇಳ್ದಾದಮಾನುಮರಸನೊಸೆದು ಬಡವಾದುದುಮಂ ಕಂಡು ಕರುಣಿಸಿ ಅಬ್ಬಾ ನಿಮಗೊಸೆದೆಂ ವರಮಂ ಬೇಡಿಕೊಳ್ಳಿಮೆಂದೊಡಾಕೆಯಿಂತೆಂದಳ್ ಮಗನೆ ನೀನೆನಗೊಸೆದೆಯಪ್ಪೊಡೆನಗೆಂದು ಮತ್ತಮೆಂಟುದಿವಸಂ ದೇವರ್ಗ್ಗೆ ಮಹಾಮಹಿಮೆಯಂ ಮಾಡೆಂದು ಪೇೞ್ದೊಡಂತೆಗೆಯ್ವೆನೆಂದರಸಂ

ಎಂಟು ದಿವಸವೂ ಜಿನ ಮಹೋತ್ಸವಗಳನ್ನು ಮಾಡಲು ಉಪಕ್ರಮಿಸಿದನು. ಅವನ ದಾದಿಯಾದ ವಿನಯಮತಿಯೆಂಬವಳು, ಕುಬ್ಜೆಯೂ ವಿರಳವಾದ ಹಲ್ಲುಗಳುಳ್ಳವಳೂ ಅತಿಶಯವಾಗಿ ಕೆಟ್ಟರೂಪಿನವಳೂ ಆಗಿ ಇತರರಿಂದ ಹೇಸಲ್ಪಡುವವಳಾಗಿದ್ದಳು. ನೋಡಿದ ಜನರಿಗೆ ಹೆದರಿಕೆಯುಂಟುಮಾಡುವವಳಾಗಿದ್ದಳು, ನಾಚಿಕೆಯುಂಟು ಮಾಡುವವಳಾಗಿದ್ದಳು. ಅಂತಹ ಆಕೆ ಅರಸನೊಡನೆ ಜಿನೇಂದ್ರನ ಮಹೋತ್ಸವವನ್ನು ನೋಡಲು ಹೋಗುತ್ತಿರುವಾಗ ಅರಸನು ಅವಳೊಡನೆ ಹೀಗೆಂದನು – “ಅಮ್ಮಾ ನೀವು ಉತ್ಸವಕ್ಕೆ ಬರುವುದು ಬೇಡ. ಉತ್ಸವಕ್ಕೆ ಬಂದ ಜನಸಂದಣಿ ನಿಮ್ಮನ್ನು ಕಂಡು ಹೆದರೀತು, ಹೇಸಿಗೆ ಪಟ್ಟೀತು, ಅಶುಭವೆಂದು ಹೇಳೀತು. ಆದುದರಿಂದ ನೀವು ಮನೆಯೊಳಗೆ ಇದ್ದು ಬಿಡಿ.“ ಹೀಗೆ ಹೇಳಿ ಅವಳನ್ನು ಮನೆಯಲ್ಲೇ ನಿಲ್ಲಿಸಿ ರಾಜನು ಮಹಾಉತ್ಸವವನ್ನು ನೆರವೇರಿಸುವುದಕ್ಕಾಗಿ ಸಹಸ್ರಕೂಟವೆಂಬ ಚೈತ್ಯಾಲಯಕ್ಕೆ (ಜಿನಾಲಯಕ್ಕೆ) ತೆರಳಿದನು. ಇತ್ತದಾದಿಯು ತನ್ನ ಮಗನು ಮಾಡುವ ಮಹೋತ್ಸವವನ್ನು ನೋಡಲಾರದೆ ಹೋದೆನೆಂದು ತನ್ನನ್ನು ತಾನೇ ನಿಂದಿಸಿದಳು. ನಂದೀಶ್ವರ ಹಬ್ಬದ ಎಂಟು ದಿವಸವೂ ಅಭಿಷೇಕ, ಅರ್ಚನೆ, ಎಂಟು ದಿನಗಳ ಉಪವಾಸ – ಇವನ್ನೆಲ್ಲ ಮಾಡಿ, ದೇವರಿಗೆ ವಂದನೆ ಸಲ್ಲಿಸುತ, ಪೂಜಿಸುತ್ತ ಇದ್ದಳು. ಇತ್ತ ರಾಜನು ಎಂಟು ದಿವಸವೂ ಮಹಾಉತ್ಸವದ ಅಭಿಷೇಕವನ್ನು ಮಾಡಿ ಮುಗಿಸಿದ ಮೇಲೆ ದಾದಿಗೆ ಹೇಳಿ ಕಳುಹಿಸಿ, ಆಕೆಯನ್ನು ಬರಮಾಡಿ ಹೀಗೆಂದನು – “ನೀವು ಹೀಗೆ ಏಕೆ ಬಹಳ ಬಡವಾಗಿದ್ದೀರಿ?“ ಆಗ ಅದಕ್ಕೆ ದಾದಿಯು ರಾಜನೊಡನೆ – “ಮಗನೇ, ನಾನು ಎಂಟು ದಿವಸ ಉಪವಾಸ ಮಾಡಿ, ಮನೆಯಲ್ಲಿಯೇ ದೇವರಿಗೆ ಅಭಿಷೇಕವನ್ನೂ ಪೂಜೆಯನ್ನೂ ಮಾಡಿಸುತ್ತ ಇದ್ದೆನು“ ಎಂದಳು. ರಾಜನು ಅದನ್ನು

ದಾದಿಕಾರಣಮಾಗಿ ಮತ್ತಮೆಂಟು ದಿವಸಂ ಮಹಾಮಹಿಮೆಯಂ ಮಾಡಲ್ ತೊಡಂಗಿದೊಡೆನ್ನ ಮಹಾಮಹಿಮೆಯೊಳೆಂತುಣ್ಬೆನೆಂದು ಪಾರಿಸದೆ ಮತ್ತಮಷ್ಟೋಪ ವಾಸಂಗೆಯ್ದು ಪಾರಣೆಯ ದಿವಸದಿಂದಾಕೆಯ ಶ್ರಮಮುಂ ಸೇದೆಯುಮಂ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ವಸಿಯಿಸಿರ್ಪ ಶ್ರೀಯಾದೇವತೆ ಕಂಡಱದು ತನ್ನ ಪರಿವಾರ ಸಹಿತಂ ವಿಮಾನಂಗಳನೇಱ ಮಹಾವಿಭೂತಿಯಿಂ ಬಂದು ಸ್ವರ್ಣಪೀಠದೊಳ್ ದಾದಿಯನಿರಿಸಿ ಸುಗಂಧೋದಕಗಳಿಂ ತೀವದ ಸುವರ್ಣಕಲಶಗಳಿಂದಮಭಿಷೇಕಂಗೆಯ್ದು ನಮೇರು ಮಂದಾರ ಸಂತಾನಕ ಪಾರಿಯಾತ್ರಕಮೆಂಬ ಪೂಗಳಂ ಸುರಿದು ಕಮ್ಮಿತಪ್ಪ ತಂಬೆಲರ್ ವೀಸಿ ದೇವದುಂದುಭಿಗಳಂ ಬಾಜಿಸಿ ಶ್ರೀಯಾದೇವತೆ ತನ್ನಾವಾಸಕ್ಕೆ ವೋದಳ್ ಇತ್ತ ದಾದಿಯುಂ ಶ್ರೀಯಾದೇವತೆಯ ವಿಭೂತಿಯಂ ಕಂಡು ನಿದಾನಂಗೆಯ್ದು ಕೆಲವು ದಿವಸದಿಂ ಕಾಲಂಗೆಯ್ದೀ ಜಂಬೂದ್ವೀಪದ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ಶ್ರೀಯಾದೇವತೆಯಾಗಿ ಪುಟ್ಟಿ ಇಳಾಪಟ್ಟಣಕ್ಕೆ ಬಂದಾ ಪೊೞಲ ಜನಂಗಳ್ಗೆಲ್ಲಮಿರುಳ್ ಕನಸಿನೊಳಾಂ ಶ್ರೀಯಾದೇವತೆಯೆಂ ನಿಮ್ಮ ಪೊೞಲ್ಗೆವಂದೆನೆನಗೆ ಶ್ರೀ ವಿಹಾರಮಂ ಮಾಡಿ ಎನ್ನ ಪ್ರತಿಮೆಯನಿಟ್ಟು

ಕೇಳಿ ಅತಿಶಯವಾಗಿ ಪ್ರೀತಿ ತಾಳಿದನು. ಆಕೆ ಬಡಕಲಾದುದನ್ನು ಕಂಡು ಕರುಣೆಗೊಂಡು – “ಅಮ್ಮಾ ನಾನು ನಿಮಗೆ ಪ್ರೀತಿಗೊಂಡೆನು ( ಮೆಚ್ಚಿದೆನು). ಇಷ್ಟಾರ್ಥವನ್ನು ಬೇಡಿಕೊಳ್ಳಿ“ ಎಂದನು. ಆಗ ಆಕೆ ರಾಜನೊಡನೆ – “ಮಗನೆ, ನೀನು ನನಗೆ ಮೆಚ್ಚಿದೆಯಾದರೆ, ನನಗಾಗಿಯೇ ಇನ್ನು ಎಂಟು ದಿವಸ ದೇವರಿಗೆ ಮಹೋತ್ಸವವನ್ನು ಮಾಡು“ ಎಂದು ಹೇಳಿದಳು. “ ಹಾಗೆಯೇ ಮಾಡುವೆನು“ ಎಂದು ರಾಜನು ಹೇಳಿ ಆ ದಾದಿಯ ಕಾರಣದಿಂದಲೇ ಮತ್ತೆ ಎಂಟು ದಿವಸ ಮಹೋತ್ಸವವನ್ನು ಆಚರಿಸಲು ತೊಡಗಿದನು. ವಿನಯಮತಿ ದಾದಿಯು ನನ್ನ ಪರವಾಗಿರುವ ಮಹೋತ್ಸವದಲ್ಲಿ ನಾನು ಹೇಗೆ ಊಟ ಮಾಡುವೆನು? ಎಂದು ಉಪವಾಸಾಂತ್ಯದ ಪಾರಣೆಯನ್ನು ಆಚರಿಸಲಿಲ್ಲ; ಮತ್ತೂ ಎಂಟು ದಿವಸ ಉಪವಾಸ ಮಾಡಿದಳು. ಪಾರಣೆಯ ದಿವಸ ಅವಳ ಶ್ರಮವನ್ನೂ ಆಯಾಸವನ್ನೂ ಹಿಮಾಲಯ ಪರ್ವತದ ಪದ್ಮ ಎಂಬ ಕೊಳದಲ್ಲಿ ವಾಸಿಸತಕ್ಕ ಶ್ರೀಯಾದೇವತೆ ಕಂಡು, ತಿಳಿದುಕೊಂಡಳು. ಆಕೆ ತನ್ನ ಪರಿವಾರದವರನ್ನು ಕೂಡಿಕೊಂಡು ವಿಮಾನಗಳನ್ನು ಹತ್ತಿ ಬಹಳ ವೈಭವದಿಂದ ಬಂದು ದಾದಿಯನ್ನು ಚಿನ್ನದ ಆಸನದಲ್ಲಿ ಕುಳ್ಳರಿಸಿ ಸುವಾಸನೆಯುಳ್ಳ ನೀರಿನಿಂದ ತುಂಬಿದ ಚಿನ್ನದ ಕಲಶಗಳಿಂದ ಅಭಿಷೇಕ ಮಾಡಿ ಸುರಪುನ್ನಾಗ, ಮಂದಾರ, ಸಂತಾನಕ, ಪಾರಿಯಾತ್ರಕ ಎಂಬ ದಿವ್ಯ ಪುಷ್ಪಗಳನ್ನು ಮಳೆಗರೆದಳು. ಪರಿಮಳಯುಕ್ತವಾದ ತಂಗಾಳಿಯನ್ನು ಬೀಸಿದಳು. ದೇವಲೋಕದ ಭೇರಿಗಳನ್ನು ಬಾಜಿಸಿ (ಬಜಾವಣೆ ಮಾಡಿ) ಶ್ರೀಯಾದೇವತೆ ತನ್ನ ವಾಸಸ್ಥಾನಕ್ಕೆ ತೆರಳಿದಳು. ಇತ್ತ ದಾದಿ (ವಿನಯಮತಿ) ಶ್ರೀಯಾದೇವತೆಯ ವೈಭವವನ್ನು ಕಂಡು ನಿಶ್ಚಯವನ್ನು ಮಾಡಿ ಕೆಲವು ದಿವಸಗಳಲ್ಲಿ ಕಾಲವಾದಳು. ಆಕೆ ಈ ಜಂಬೂದ್ವೀಪದ ಹಿಮಾಲಯ ಪರ್ವತದ ಪದ್ಮೆ ಎಂಬ ಕೊಳದಲ್ಲಿ ಶ್ರೀಯಾದೇವತೆಯಾಗಿ ಹುಟ್ಟಿ, ಇಳಾ ಪಟ್ಟಣಕ್ಕೆ ಬಂದು ಆ ಪಟ್ಟಣದ ಜನರಿಗೆಲ್ಲ ರಾತ್ರಿಯಲ್ಲಿ ಕನಸಿನಲ್ಲಿ ಕಾಣಿಸಿಕೊಂಡು ಹೀಗೆಂದಳು – “ನಾನು ಶ್ರೀಯಾದೇವತೆಯಾಗಿರುವೆನು ನಿಮ್ಮ ಪಟ್ಟಣಕ್ಕೆ ಬಂದಿರುವೆನು. ನನಗೆ ಶ್ರೀವಿಹಾರ ಎಂಬ ದೇವಾಲಯವನ್ನು ಮಾಡಿ, ನನ್ನ ಪ್ರತಿಮೆಯನ್ನು ಇಟ್ಟುಕೊಂಡು ಪೂಜಿಸುತ್ತ ಸೇವೆ ಮಾಡುತ್ತ

ಪೂಜಿಸುತ್ತುಮೋಲಗಿಸುತ್ತುಮಿರಿಮಾನುಂ ನಿಮಗೆ ಬೇಡಿದ ವರವನೀವೆನೆಂದು ಕನಸಿನೊಳ್ ತೋಱಡೊಡೆ ಪೊೞಲ ಜನಮೆಲ್ಲಂ ನೆರೆದು ಶ್ರೀವಿಹಾರಮಂ ಮಾಡಿ ಶ್ರೀಮಾದೇವತೆಯ ಪ್ರತಿಮೆಯಂ ಸ್ಥಾಪಿಸಿ ಮಹಿಮೆಯಂ ಮಾಡುತ್ತಂ ಪೂಜಿಸುತ್ತಮೋಲಗಿಸುತ್ತ ಮಿರ್ಪುದುಂ ಕಂಡಿಳಾಮಹಾದೇವಿ ಅಪುತ್ರಿಕೆ ಮಕ್ಕಳಂ ಬೇಡಿ ಪನ್ನೆರಡು ವರುಷಂ ಬರೆಗಂ ನಿಚ್ಚಲುಂ ಶ್ರೀವಿಹಾರಕ್ಕೆ ವೋಗಿ ಶ್ರೀಯಾದೇವತೆಯನರ್ಚಿಸುತ್ತಂ ಪೂಜಿಸುತ್ತಂ ಮಹಾಮಹಿಮೆಯಂ ಮಾಡುತ್ತಂ ಆಡುತ್ತಂ ಪಾಡುತ್ತಮೋಲಗಿಸುತ್ತಮಿರೆಯದಂ ಕಂಡಱದು ಶ್ರೀಯಾದೇವತೆ ಪೂರ್ವವಿದೇಹಕ್ಕೆ ಪೋಗಿ ಸ್ವಯಂಪ್ರಭರೆಂಬ ತೀರ್ಥಂಕರ ಪರಮದೇವರಂ ಕಂಡೆಱಗಿ ಪೊಡೆಮಟ್ಟಿಂತೆಂದು ಬೆಸಗೊಂಡಳ್ ಭಟಾರಾ ಎನ್ನ ಪೊೞಲೊಳಿರ್ಪ ಇಳಾಮಹಾದೇವಿಗೆ ಮಕ್ಕಳೇನಕ್ಕುಮೊ ಎಂದು ಬೆಸಗೊಂಡೊಡೆ ಭಟಾರರಿಂತೆಂದರ್ ಸ್ವರ್ಗದಿಂದೆ ಬೞಬಂದಿಲ್ಲಿ ಓರ್ವ ದೇವಂ ಇಳಾಮಹಾದೇವಿಗೆ ಮಗನಾಗಿ ಪುಟ್ಟಿಗುಮೆಂದೊಡದಂ ಕೇಳ್ದು ಭಟ್ಟಾರರ್ಗ್ಗೆಱಗಿ ಪೊಡೆವಟ್ಟು ಇಳಾಪಟ್ಟಣಕ್ಕೆ ಪೋಗಿ ಇಳಾಮಹಾದೇವಿಗೆ ಕನಸಿನೊಳಿಂತೆಂದು ಪೇೞ್ದಳಿಳಾಮಹಾದೇವಿ ನಿನಗೆನ್ನ ಪ್ರಸಾದದೆ ಸೌಧರ್ಮಕಲ್ಪದೊಳ್ ಮೇಘಮಾಲಮೆಂಬ ವಿಮಾನದಿಂ ಬೞ ವರ್ಧಮಾನನೆಂಬ ದೇವಂ ಬಂದು ನಿನಗೆ ಮಗನಾಗಿ ಪುಟ್ಟುಗುಮೆಂದು ಶ್ರೀಯಾದೇವತೆ ಪೇೞ್ದೊಡಿಳಾ ಮಹಾದೇವಿಯಾದಮಾನುಂ ಸಂತಸಂಬಟ್ಟಿರ್ದು ಕೆಲವು ದಿವಸದಿಂ

ನೀವಿರಬೇಕು. ನಾನು ನಿಮಗೆ ಬೇಡಿದ ಇಷ್ಟಾರ್ಥವನ್ನು ಕೊಡುವೆನು ” ಈ ರೀತಿಯಾಗಿ ಅವಳು ಕನಸಿನಲ್ಲಿ ಕಾಣಿಸಿದಳು. ಇದರಿಂದ ಪಟ್ಟಣದ ಜನರೆಲ್ಲರೂ ಒಟ್ಟಾಗಿ ಶ್ರೀವಿಹಾರವೆಂಬ ದೇವಾಲಯವನ್ನು ನಿರ್ಮಿಸಿದರು. ಅಲ್ಲಿ ಶ್ರೀಯಾದೇವತೆಯ ಪ್ರತಿಮೆಯನ್ನು ಪ್ರತಿಷ್ಠೆಮಾಡಿ, ಉತ್ಸವವನ್ನು ಮಾಡುತ್ತ ಪೂಜಿಸುತ್ತ ಸೇವೆಗಳನ್ನು ಜರುಗಿಸುತ್ತ ಇದ್ದರು. ಮಕ್ಕಳಿಲ್ಲದವಳಾದ ಇಳಾ ಮಹಾದೇವಿ ಇದನ್ನು ಕಂಡು ತನಗೆ ಮಕ್ಕಳಾಗಲಿ ಎಂದು ಪ್ರಾರ್ಥಿಸುತ್ತ, ಹನ್ನೆರಡು ವರ್ಷಗಳವರೆಗೆ ನಿತ್ಯವೂ ಶ್ರೀವಿಹಾರಕ್ಕೆ ಹೋಗಿ ಶ್ರೀಯಾದೇವತೆಯನ್ನು ಅರ್ಚನೆ ಮಾಡುತ್ತ ಪೂಜಿಸುತ್ತ ದೊಡ್ಡ ಉತ್ಸವವನ್ನು ಮಾಡುತ್ತ ಆಡುತ್ತ ಹಾಡುತ್ತ ಸೇವೆಸಲ್ಲಿಸುತ್ತಿದ್ದಳು. ಶ್ರೀಯಾದೇವತೆ ಅದನ್ನು ನೋಡಿ ತಿಳಿದು ಪೂರ್ವವಿದೇಹ ರಾಜ್ಯಕ್ಕೆ ಹೋಗಿ ಸ್ವಯಂಪ್ರಭರೆಂಬ ತೀರ್ಥಂಕರ ದೇವರನ್ನು ಕಂಡು ವಂದಿಸಿ ಸಾಷ್ಟಾಂಗ ಪ್ರಣಾಮ ಮಾಡಿ ಹೀಗೆ ಕೇಳಿದಳು – “ಪೂಜ್ಯರೇ, ನನ್ನ ಪಟ್ಟಣದಲ್ಲಿರುವ ಇಳಾ ಮಹಾದೇವಿಗೆ ಮಕ್ಕಳಾಗುವರೇ ಏನು? ” ಹೀಗೆ ಕೇಳಿದಾಗ ಋಷಿಗಳು – “ಒಬ್ಬ ದೇವನು ಸ್ವರ್ಗದಿಂದ ಜಾರಿ ಬಂದು ಇಲ್ಲಿ ಇಳಾಮಹಾದೇವಿಗೆ ಮಗನಾಗಿ ಜನಿಸುವನು” ಎಂದು ಹೇಳಿದರು. ಅದನ್ನು ಕೇಳಿ ಋಷಿಗಳಿಗೆ ನಮಿಸಿ ಅಡ್ಡಬಿದ್ದು ಶ್ರೀಯಾದೇವತೆ ಇಳಾ ಪಟ್ಟಣಕ್ಕೆ ಹೋದಳು. ಇಳಾಮಹಾದೇವಿಗೆ ಕನಸಿನಲ್ಲಿ ಕಾಣಿಸಿ ಹೀಗೆಂದಳು – “ ಎಲೈ ಇಳಾ ಮಹಾದೇವಿ, ನನ್ನ ಅನುಗ್ರಹದಿಂದ ವರ್ಧಮಾನನೆಂಬ ದೇವನು ಸೌಧರ್ಮ ಎಂಬ ಸ್ವರ್ಗದಲ್ಲಿ ಮೇಘಮಾಲ ಎಂಬ ವಿಮಾನದಿಂದಿಳಿದು ಬಂದು ನಿನಗೆ ಮಗನಾಗಿ ಜನಿಸುವನು ” – ಹೀಗೆಂದು ಶ್ರೀಯಾದೇವತೆ ಹೇಳಿದಾಗ ಇಳಾಮಹಾದೇವಿ ಅತಿಶಯವಾದ ಸಂತೋಷವನ್ನು ತಾಳಿದಳು. ಹೀಗೆಯೇ ಇದ್ದು ಕೆಲವು ದಿನಗಳನಂತರ ಅವಳಿಗೆ ಗರ್ಭವುಂಟಾಯಿತು. ಒಂಬತ್ತು ತಿಂಗಳು ತುಂಬಿ

ಗರ್ಭಮಾಗಿ ನವಮಾಸಂ ನೆಱೆದು ಮಗನಂ ಪೆತ್ತೊಡೆ ಶ್ರೀಯಾದೇವತೆ ಮಗನಂ ಕೊಟ್ಟಳೆಂದು ಕೂಸಿಂಗೆ ತಾಯುಂ ತಂದೆಯುಂ ನಂಟರುಮೆಲ್ಲಂ ನೆರೆದು ಸಿರಿದಿಣ್ಣನೆಂದು ಪೆಸರನಿಟ್ಟರ್ ಆತನುಂ ಶುಕ್ಲಪಕ್ಷದ ಚಂದ್ರನಂತೆ ಕ್ರಮಕ್ರಮದಿಂ ಬಳೆದು ನವಯೌವನನುಂ ಸರ್ವಕಳಾ ಕುಶಳನುಮಾಗಿರ್ಪನ್ನೆಗಮಿತ್ತ ಸಾಕೇತ ಪುರಾಪತಿಯಪ್ಪ ಸುಮಂತನೆಂಬರಸನ ಮಗಳ್ ಸುಮತಿಯೆಂಬೊಳಾಕೆಯ ಸ್ವಯಂವರಕ್ಕರಸುಮಕ್ಕಳೆಲ್ಲಂ ನೆರೆದಿರ್ದಲ್ಲಿಗೆ ಸಿರಿದಿಣ್ಣಂಗಂ ಬೞಯಟ್ಟಿ ಬರಿಸಿದೊಡೆ ಸ್ವಯಂಭರದೊಳ್ ಸುಮತಿಯೆಲ್ಲರಂ ನೋಡಿಯಾರುಮಂ ಮೆಚ್ಚದೆ ಸಿರಿದಿಣ್ಣಂಗೆ ಮಾಲೆಸೂಡಿದೊಡೆ ಮದುವೆಯಾಗಿ ಕೆಲವು ದಿವಸಮಲ್ಲಿರ್ದು ಮಾವನವರಂ ಬೆಸಗೊಂಡಿಳಾ ಪಟ್ಟಣಕ್ಕೆ ವೋಪೆಮೆಂದೊಡಾತಂ ತನ್ನ ಮಗಳಪ್ಪ ಸುಮತಿಗೆ ಬೞವೞಗೊಟ್ಟು ಮಗಳೊಡನೆ ವಾಚಾಳನಪ್ಪ ಗಿಳಿಯುಮನಟ್ಟಿದೊಡವರ್ಗಳುಂ ಕತಿಪಯ ದಿವಸಂಗಳಿಂದಿಳಾಪಟ್ಟಣಕ್ಕೆ ಪೋಗಿ ಸುಖದಿಂದಿರೆ ಮತ್ತೊಂದು ದಿವಸಂ ಗಿಳಿಯಂ ಸಾಕ್ಷಿಮಾಡಿ ಇರ್ವರುಂ ಚದುರಂಗಮಾಡುತ್ತಿರೆ ಅರಸಿಯರಸನಂ ಗೆಲ್ದೊಡೆ ಗಿಳಿ ನೆಲದೊಳೆರಡು ಬರೆಯಂ ಬರೆಗುಮರಸನರಸಿಯಂ ಗೆಲ್ದೊಡೆ ಒಂದು ಬರೆಯಂ ಬರೆಗುಮಿಂತು ಪಿರಿದುಂ ಬೇಗಮಾಡಿ ಅರಸನರಸಿಯಂ ಗೆಲ್ದೊಡೆರಡು ಬರೆಯಂ ತೆಗೆದುಕನರಸಂ ಕಂಡು ಕಡುಮುಳಿದದಱ ಗೋಣಂ ಮುಱದೊಡಾ ಗಿಳಿಯುಂ ಸತ್ತಾ ಪೋೞಲ ಬಹಿರುದ್ಯಾನವನದೊಳ್ ವ್ಯಂತರದೇವನಾಗಿ ಪುಟ್ಟುತಿಂತಿರ್ವರುಂ ಪಲಕಾಲಮಿಷ್ಟವಿಷಯ

ಗಂಡುಮಗುವನ್ನು ಹೆತ್ತಳು. ಶ್ರೀಯಾದೇವತೆ ಮಗನನ್ನು ಕೊಟ್ಟಳೆಂದು ಆ ಮಗುವಿಗೆ ತಾಯಿ, ತಂದೆ, ನಂಟರು ಎಲ್ಲರೂ ಸೇರಿಕೊಂಡು ಸಿರಿದಿಣ್ಣ ಎಂದು ಹೆಸರಿಟ್ಟರು. ಸಿರಿದಿಣ್ಣನು ಶುಕ್ಲಪಕ್ಷದ ಚಂದ್ರನ ಹಾಗೆ ಅನುಕ್ರಮವಾಗಿ ಬೆಳೆದು ಹೊಸ ಜವ್ವನಿಗನೂ ಎಲ್ಲಾ ಕಲೆಗಳಲ್ಲಿ ಪರಿಣತನೂ ಆಗಿದ್ದನು. ಹೀಗಿರಲು ಇತ್ತ ಸಾಕೇತವೆಂಬ ಪಟ್ಟಣದ ಒಡೆಯನಾದ ಸುಮಂತನೆಂಬ ರಾಜನಿಗೆ ಸುಮತಿ ಎಂಬ ಮಗಳಿದ್ದಳು. ಆಕೆಯ ಸ್ವಯಂವರಕ್ಕೆ ರಾಜಕುಮಾರರೆಲ್ಲ ಬಂದು ಸೇರಿದ್ದರು. ಅಲ್ಲಿಗೆ ಸಿರಿದಿಣ್ಣನನ್ನೂ ಕರೆಕಳುಹಿಸಿ ಬರಮಾಡಿದ್ದರು. ಸ್ವಯಂವರದಲ್ಲಿ ಸುಮತಿ ಎಲ್ಲರನ್ನೂ ನೋಡಿ ಯಾರೊಬ್ಬರನ್ನೂ ಮೆಚ್ಚದೆ ಸಿರಿದಿಣ್ಣನಿಗೆ ವರಣಮಾಲಿಕೆಯನ್ನು ತೊಡಿಸಿದಳು. ಸಿರಿದಿಣ್ಣನು ಅವಳನ್ನು ವರಿಸಿ ಕೆಲವು ದಿನ ಅಲ್ಲೆ ಇದ್ದು, ಮಾವನವರನ್ನು ಕೇಳಿ, ತಾನು ಇಳಾಪಟ್ಟಣಕ್ಕೆ ಹೋಗುವೆನು – ಎಂದನು. ಸುಮಂತನು ತನ್ನ ಮಗಳಾದ ಸುಮತಿಗೆ ಬಳುವಳಿಕೊಟ್ಟು, ಮಗಳೊಡನೆ ಒಳ್ಳೆ ಮಾತುಗಾರಿಕೆ ಬಲ್ಲ ಒಂದು ಗಿಳಿಯನ್ನೂ ಕಳುಹಿಸಿದನು. ಅವರು ಕೆಲವು ದಿವಸಗಳಲ್ಲಿ ಇಳಾಪಟ್ಟಣಕ್ಕೆ ಹೋಗಿ ಅಲ್ಲಿ ಸುಖವಾಗಿದ್ದರು. ಹೀಗಿರುತ್ತ ಆ ಮೇಲೆ ಒಂದು ದಿನ ಇಬ್ಬರೂ ಗಿಳಿಯನ್ನು ಸಾಕ್ಷಿಯಾಗಿ ಮಾಡಿಕೊಂಡು ಚದುರಂಗವನ್ನು ಆಡುತ್ತಿದ್ದರು. ಆಗ ರಾಣಿಯು ರಾಜನನ್ನು ಗೆದ್ದರೆ, ಗಿಳಿ ನೆಲದಲ್ಲಿ ಎರಡು ಗೆರೆಯನ್ನು ಎಳೆಯುತ್ತಿತ್ತು. ರಾಜನು ರಾಣಿಯನ್ನು ಗೆದ್ದರೆ, ಒಂದೇ ಗೆರೆಯನ್ನು ಬರೆಯುತ್ತಿತ್ತು. ಹೀಗೆ ಬಹಳ ಹೊತ್ತಿನವರೆಗೆ ಆಡಿ ರಾಜನು ರಾಣಿಯನ್ನು ಗೆದ್ದಾಗ ಗಿಳಿ ಎರಡು ಗೆರೆಯನ್ನು ಬರೆದುಬಿಟ್ಟಿದ್ದಿತು. ಇದನ್ನು ಸಿರಿದಿಣ್ಣರಾಜನು ಕಂಡು ಅತ್ಯಂತ ಕೋಪಾವಿಷ್ಟನಾಗಿ ಅದರ ಕತ್ತನ್ನು ಮುರಿದನು. ಆ ಗಿಳಿ ಸತ್ತು ಆ ಪಟ್ಟಣದ ಹೊರಗಿನ ಉದ್ಯಾನದಲ್ಲಿ ವ್ಯಂತರ ದೇವನಾಗಿ ಹುಟ್ಟಿತು. ಹೀಗೆ ಇಬ್ಬರೂ ಹಲವು ಕಾಲ ತಮ್ಮ ಇಷ್ಟ ವಿಷಯದ

ಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಂ ಸಪ್ತತಳಪ್ರಾಸಾದದ ಮೇಗಿರ್ವರುಂ ದಿಶಾವಳೋಕನಂ ಗೆಯ್ಯುತ್ತಿರ್ಪನ್ನೆಗಂ ಸಹಸ್ರಕೂಟಾಕಾರಮಪ್ಪುದೊಂದು ಮುಗಿಲಂ ಕಂಡಿಂತುಟೊಂದು ಚೈತ್ಯಾಲಯಮಂ ಮಾಡಿಸುವೆನೆಂದು ಪಲಗೆಯೊಳ್ ರೇಖೆಗೊಂಡು ಮತ್ತೆ ನೋೞ್ಪನ್ನೆಗಂ ಕರಗಿದುದಂ ಕಂಡದುವೆ ನಿರ್ವೇಗಕ್ಕೆ ಕಾರಣಮಾಗಿ ತಾಯುಂ ತಂದೆಯುಂ ನಂಟರುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ವರಧರ್ಮ ಭಟ್ಟಾರರ ಪಕ್ಕದೆ ತಪಂಬಟ್ಟು ಪನ್ನೆರಡು ವರುಷಂಬರೆಗಂ ಗುರುಗಳನಗಲದಿರ್ದು ದ್ವಾದಶಾಂಗ ಚರ್ತುದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಬೞಕ್ಕೆ ಗುರುಗಳಂ ಬೆಸಗೊಂಡವರನುಮತದಿಂದೇಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಮಾಘಮಾಸದಂದಿಳಾಪಟ್ಟಣಕ್ಕೆ ವಂದಾ ಪೊೞಲ ಬಹಿರುದ್ಯಾನವನದೊಳಿರ್ದು ರಾತ್ರಿ ಪ್ರತಿಮಾಯೋಗದೊಳ್ ನಿಂದರ್ ಅನ್ನೆಗಂ ಮುನ್ನವರ ಕೈಯೊಳ್ ಸತ್ತ ಗಿಳಿ ವ್ಯಂತರದೇವನಾಗಿ ಅಲ್ಲಿ ಪುಟ್ಟಿರ್ದುದು ಕಂಡೇನುಂ ಕಾರಣಮಿಲ್ಲೆನ್ನಂ ಕೊಂದನೆಂದು ಮುಳಿದಾದಮಾನುಂ ಘೋರಮಪ್ಪ ವಾತಮುಂ ಶೀತಮುಮಂ ವಿಗುರ್ವಿಸಿ ನೀರ್ಗಳಂ ಮೇಗೆ ಸುರಿದು ಬೀಸುತ್ತಮಿಂತು ನಾಲ್ಕು ಜಾವಮುಂ ಘೋರಾಕಾರಮಾಗಿಯುಪಸರ್ಗಮಂ ಮಾಡೆ ಭಟಾರರುಂ ದೇವೋಪಸರ್ಗಮೆಂಬುದನಱದು

ಕಾಮಸುಖಗಳನ್ನು ಅನುಭವಿಸುತ್ತ ಇದ್ದರು. ಆಮೇಲೆ ಒಂದು ದಿವಸ ಅವರಿಬ್ಬರೂ ಏಳು ಉಪ್ಪರಿಗೆಗಳುಳ್ಳ ಕಟ್ಟಡದ ಮೇಲೆ ಇದ್ದು ದಿಕ್ಕುಗಳನ್ನು ನೋಡುತ್ತಿರುವಾಗ ಸಾವಿರ ಶಿಖರದ ಆಕಾರವುಳ್ಳ ಒಂದು ಮೋಡವನ್ನು ಕಂಡು, ಸಿರಿದಿಣ್ಣನು “ ಈ ರೀತಿಯಿರುವ ಒಂದು ಜಿನಾಲಯವನ್ನು ಮಾಡಿಸುವೆನು” ಎಂದು ಹೇಳಿಕೊಂಡು, ಚಿತ್ರದ ಹಲಗೆಯ ಮೇಲೆ ರೇಖಾಚಿತ್ರವನ್ನು ಬರೆದು, ಮತ್ತೆ ನೋಡುವ ಹೊತ್ತಿಗೆ ಅದು ಕರಗಿಹೋದುದನ್ನು ಕಂಡನು. ಅದುವೇ ಅವನಿಗೆ ವೈರಾಗ್ಯಕ್ಕೆ ಕಾರಣವಾಯಿತು. ತಾಯಿ, ತಂದೆ, ನಂಟರನ್ನು ಅಗಲಿ, ಮಾಯಾಶಲ್ಯ, ಮಿಥ್ಯಾಶಲ್ಯ, ನಿದಾನಶಲ್ಯ, ಎಂಬ ಮೂರುಬಗೆಯ ಶಲ್ಯಗಳನ್ನು ಬಿಟ್ಟು, ಬಾಹ್ಯ ಪರಿಗ್ರಹಗಳನ್ನೂ (ಭೂಮಿ, ಮನೆ, ಧನ, ಧಾನ್ಯ, ದ್ವಿಪದ, ಚತುಷ್ಪದಗಳು, ವಾಹನ, ಶಯ್ಯೆ, ಆಸನ, ಕ್ಷುದ್ರಲೋಹಪಾತ್ರೆ, ಮಡಕೆ – ಎಂಬ ಹತ್ತು) ಮಿಥ್ಯಾತ್ವ, ಕಾಮಾಭಿಲಾಷೆ, ದ್ವೇಷ, ಅಪಹಾಸ್ಯ ಮುಂತಾದ ಅಂತರಂಗ ಪರಿಗ್ರಹಗಳನ್ನೂ ತೊರೆದು ವರಧರ್ಮ ಋಷಿಗಳ ಬಳಿ ತಪಸ್ಸನ್ನು ಸ್ವೀಕರಿಸಿದನು. ಹನ್ನೆರಡು ವರ್ಷಗಳವರೆಗೂ ಗುರುಗಳೊಡನಿದ್ದು ಹನ್ನೆರಡು ಅಂಗಗಳಿಂದಲೂ ಹದಿನಾಲ್ಕು ಪೂರ್ವಗಳಿಂದಲೂ ಕೂಡಿದ ಶಾಸ್ತ್ರಗಳನ್ನೆಲ್ಲ ಕಲಿತು, ಆಮೇಲೆ ಗುರುಗಳನ್ನು ಕೇಳಿ ಒಪ್ಪಿಗೆ ಪಡೆದು ಸಿರಿದಿಣ್ಣ ಋಷಿಗಳು ಒಬ್ಬರೇ ಸಂಚರಿಸುತ್ತ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚರಿಸುತ್ತ ಮಾಘಮಾಸದಲ್ಲಿ ಇಳಾಪಟ್ಟಣಕ್ಕೆ ಬಂದರು. ಬಂದು, ಆ ಪಟ್ಟಣದ ಬಾಹ್ಯೋದ್ಯಾನದಲ್ಲಿದ್ದು ರಾತ್ರಿಯಲ್ಲಿ ಪ್ರತಿಮಾಯೋಗದಲ್ಲಿ ನಿಂತರು. ಅಷ್ಟರಲ್ಲಿ ಪೂರ್ವಜನ್ಮದಲ್ಲಿ ಅವರು ಕೊಂದ ಗಿಳಿ ವ್ಯಂತರದೇವತೆಯಾಗಿ ಅಲ್ಲಿ ಹುಟ್ಟಿದ್ದುದು ಅವರನ್ನು ಕಂಡಿತು. “ಏನು ಕಾರಣವಿಲ್ಲದೆ ನನ್ನನ್ನು ಕೊಂದಿದ್ದಾನೆ” ಎಂದು ಕೋಪಗೊಂಡು ಬಹಳ ಭಯಂಕರವಾದ ಗಾಳಿಯನ್ನೂ ಶೈತ್ಯವನ್ನೂ ಮಾಯೆಯಿಂದ ಸೃಷ್ಟಿಸಿತು. ಧಾರಾಕಾರವಾಗಿ ಮೇಲಿನಿಂದ ಮಳೆಯನ್ನು ಸುರಿಸುತ್ತ, ಗಾಳಿಬೀಸುತ್ತ ಹೀಗೆ ನಾಲ್ಕು

ಗಾಹೆ || ಖಮ್ಮಾಮಿ ಸವ್ವಜೀವಾಣಂ ಸವ್ವೇಜೀವಾ ಖಮಂತು ಮೇ
ಮೆತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣ ಚಿ

ಶ್ಲೋಕ || ಅಚ್ಛೇದ್ಯೋ – ನಂತ ಸೌಖ್ಯೋ – ಹಂ ವೇತ್ತಾ – ಪೊರ್ವೋ ನಿರಂಜನಃ
ಸರ್ವದುಃಖಾಕರಂ ದೇಹಂ ತ್ಯಜಾಮೇತತ್ ಪರಿಸುಟಂ ||

ಎಂದಿಂತು ಸಮತ್ವೀಭಾವನೆಯಂ ಭಾವಿಸಿ ಶುಕ್ಲಧ್ಯಾನಮಂ ಜಾನಿಸಿ ಎಂಟು ಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆವೋದರ್ ಮತ್ತಂ ಪೆಱರುಂ ರತ್ನತ್ರಯಂಗಳನಾರಾಸುವ ಭವ್ಯರ್ಕಳ್ ಸಿರಿದಿಣ್ಣ ಭಟ್ಟಾರರಂ ಮನದೊಳ್ ಬಗೆದು ದೇವೋಪಸರ್ಗ ಮನುಷ್ಯೋಸರ್ಗ ತಿರಿಕೋಪಸರ್ಗಮಚೇತನೋಪ ಸರ್ಗಮೆಂದಿತುಂ ಚತುರ್ವಿಧಮಪ್ಪುಪಸರ್ಗಮುಮಂ ಪಸಿವು ನೀರೞ್ಕೆ ಮೊದಲಾಗೊಡೆಯವಿರ್ಪತ್ತೆರಡು ಪರೀಷಹಂಗಳಂ ಸೈರಿಸಿ ವ್ಯಾಗಳಿಂದಪ್ಪ ವೇದನೆಯಂ ಸೈರಿಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ