ಜಾವ (ಅರ್ಧದಿನ) ಭಯಂಕರವಾದ ರೀತಿಯಲ್ಲಿ ಉಪಸರ್ಗ (ತಪಸ್ಸಿಗೆ ವಿಘ್ನ)ವನ್ನು ಮಾಡಿತು. ಆಗ ಸಿರಿದಿಣ್ಣ ಋಷಿಗಳು – ಇದು ದೇವೋಪಸರ್ಗ ಎಂದು ತಿಳಿದರು. (ನಾನು ಎಲ್ಲ ಜೀವಗಳನ್ನೂ ಕ್ಷಮಿಸುತ್ತೇನೆ. ಎಲ್ಲ ಜೀವಗಳೂ ನನ್ನನ್ನು ಕ್ಷಮಿಸಲಿ. ಎಲ್ಲ ಪ್ರಾಣಿಗಳಲ್ಲಿಯೂ ನನಗೆ ಮೈತ್ರಿಯಿದೆ. ನನಗೆ ಎಲ್ಲಿಯೂ ದ್ವೇಷವಿಲ್ಲ.)(ನನ್ನನ್ನು ಕತ್ತರಿಸಲು ಸಾಧ್ಯವಿಲ್ಲ. ನಾನು ಕೊನೆಯಿಲ್ಲದ ಸುಖವುಳ್ಳವನು. ತಿಳಿದವನು, ಅನಾದಿ, ಕರ್ಮಲೇಪವಿಲ್ಲದವನು. ಎಲ್ಲ ದುಃಖಗಳಿಗೂ ಆಶ್ರಯವಾಗಿರುವ ಶರೀರವನ್ನು ತೊರೆಯುತ್ತೇನೆ – ಇದು ನಿಶ್ಚಯ) ಈ ರೀತಿ ಸುಖದುಃಖ ಸಮಭಾವವನ್ನು ಭಾವಿಸಿ, ಶುಕ್ಲಧ್ಯಾನವನ್ನು ಮಾಡಿ ಎಂಟು ಕರ್ಮಗಳನ್ನು ನಾಶಮಾಡಿ, ಮೋಕ್ಷವನ್ನೆಯ್ದಿದರು. ರತ್ನತ್ರಯವನ್ನು ಆರಾಧನೆ ಮಾಡುವ ಬೇರೆ ಭವ್ಯರು ಕೂಡ, ಸಿರಿದಿಣ್ಣ ಋಷಿಗಳನ್ನು ಮನಸ್ಸಿನಲ್ಲಿ ಭಾವಿಸಿ ದೇವ – ಮಾನವ – ತಿರ್ಯಕ್ಕು – ಅಚೇತನ ಎಂಬ ನಾಲ್ಕು ಬಗೆಯವರಿಂದ ಒದಗುವ ಉಪಸರ್ಗಗಳನ್ನೂ ಹಸಿವು – ಬಾಯಾರಿಕೆ ಮೊದಲಾಗಿ ಉಳ್ಳ ಇಪ್ಪತ್ತೆರಡು ಪರೀಷಹಗಳನ್ನು ಸಹಿಸಿಕೊಂಡು, ರೋಗಗಳಿಂದ ಉಂಟಾಗುವ ನೋವನ್ನೂ ಸಹಿಸಿ, ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯಲಿ !