ನಾಟಕವನ್ನು ಓದುವರು / ಪ್ರಯೋಗಿಸುವವರು ದೃಶ್ಯ ಮತ್ತು ೮ರ ನಡುವೆ ದೃಶ್ಯವನ್ನು ಬೇಕಿದ್ದರೆ ಸೇರಿಸಿಕೊಳ್ಳಬಹುದು.

ಸಂಪಿಗೆ ಕನ್ನಡಿ ನೋಡಿ ಶೃಂಗಾರವಾಗುತ್ತ

ಸಂಪಿಗೆ : ಮದನಿಕೆ, ಶಯ್ಯಾಗೃಹದ ಕಸವ ಗುಡಿಸಿ ಹೂ ರಂಗೋಲಿ ಬಿಡಿಸಿದೆಯೇನೆ?

ಮದನಿಕೆ : ಬಿಡಿಸಿದ್ದೇನೆ ಮಹಾರಾಣಿ.

ಸಂಪಿಗೆ : ಹಾಸಿಗೆ ತುಂಬ ಮಲ್ಲಿಗೆ ಹೂ ಎರಚಿದ್ದೀಯಾ?

ಮದನಿಕೆ : ಹೌದು ಮಹಾರಾಣಿ.

ಸಂಪಿಗೆ : ಹಾಸಿಗೆಯ ಬಳಿ ಪರಿಮಳ ಇಟ್ಟಿದ್ದೀಯಾ?

ಮದನಿಕೆ : ಇಟ್ಟಿದ್ದೇನೆ. ನೀವೇ ಯೌವನ ತುಂಬಿದ ಪರಿಮಳದ ಭರಣಿಯಾಗಿರುವಾಗ, ಬೇರೆ ಪರಿಮಳ ಬೇಕೆ ಮಹಾರಾಣಿ?

ಸಂಪಿಗೆ : ಬೇರೆ ಸಂದರ್ಭಗಳಲ್ಲಾಗಿದ್ದರೆ ನಿನ್ನ ಮಾತಿಗೆ ಬಹುಮಾನ ಕೊಡುತ್ತಿದ್ದೆ, ಈಗಲ್ಲ. ನನಗೂ ಆತಂಕಗಳಿವೆ, ಮನಸಿನಲ್ಲಿ. ಇರಲಿ, ಈ ಸೀರೆ ನನಗೆ ಚಂದ ಕಾಣುವುದೇನೆ?

ಮದನಿಕೆ : ನಾನೇನು ಹೇಳಲಿ ಮಹಾರಾಣಿ. ನಿಮ್ಮೆದುರಿಗೆ ಕನ್ನಡಿ ಇದೆ.

ಸಂಪಿಗೆ : ಹೌದಲ್ಲವೇ? ಮಹಾರಾಜರೂ ಅಭಿಪ್ರಾಯ ಹೇಳುವುದಿಲ್ಲ. ಎದುರಿಗೆ ಕನ್ನಡಿ ಇದೆಯಲ್ಲವೆ ಅಂತಾರೆ. ಆಯ್ತು, ನೀನು ಹೋಗಿ ಅನ್ನಾಹಾರ ಬೆಂದಿದೆಯೇ ನೋಡು.

ಮದನಿಕೆ : ಆಗಲಿ ಮಹಾರಾಣಿ. (ಹೊರಡುವಳು.)

ಸಂಪಿಗೆ : ಇರು ಇರು, ಈ ಸರ ನನಗೆ ಚಂದ ಕಾಣುವುದೇನೆ? ಸರಿ ಬಿಡು, ಎದುರಿಗೆ ಕನ್ನಡಿ ಇದೆಯಲ್ಲ, ನೀನು ಹೋಗು. (ಮದನಿಕೆ ಹೊರಡುವಳು.) ಇರು ಇರು, ಮಹಾರಾಜರಿಗೆ ಊಟಕ್ಕೆ ಬರಲು ಸರಿ ಆಮಂತ್ರಿಸಿದ್ದೀ ತಾನೆ?

ಮದನಿಕೆ : ಹೇಳಿದ್ದೇನೆ, ಅವರೂ ಸಕಾಲಕ್ಕೆ ಬರಲು ಒಪ್ಪಿದ್ದಾರೆ. ಅಷ್ಟೇ ಅಲ್ಲ, ಖಂಡಿತ ಬರುತ್ತೇನೆ ಅಂತ ಮೂರು ಸಾರಿ ಹೇಳಿದರು. ಈ ಮಾತನ್ನ ನಾನು ನಿಮ್ಮೆದುರು ಆರು ಸಲ ಹೇಳಿದೆ.

ಸಂಪಿಗೆ : ಸಿಟ್ಟಾಗಬೇಡವೆ, ಆತುರದಲ್ಲಿ ಮತ್ತೆ ಕೇಳಿದೆ ಅಷ್ಟೆ. ನೀನು ಹೋಗಿ ಅನ್ನಾಹಾರ ಬೆಂದಿದೆಯೇ ನೋಡು.

ಮದನಿಕೆ ಹೋಗುವಳು.

ಕನ್ನಡಿಯೇ, ನನಗಿರುವ ಒಬ್ಬಳೇ ಸಖಿಯೇ, ಕೇಳು – ಮದುವೆಯಾಗಿ ಇಷ್ಟು ದಿನಗಳಾದರೂ ಮಹಾರಾಜರ ಸ್ವಭಾವ ತಿಳಿಯದಲ್ಲೇ ತಾಯಿ. ಕೋಪವ ಬಿಡು ಎಂದು ದೀನ ಭಾವಗಳಿಂದ ಬೇಡಿಕೊಂಡೆ; ನೀವು ನಕ್ಕಾಡಿದರೆ ನಮಗೆ ಅಕ್ಕರವುಂಟು, ನೀವು ನಗೆಯನು ಬಿಟ್ಟು ನಾನು ಹ್ಯಾಗೆ ಬದುಕಲಿ ಸ್ವಾಮಿ, ಅಂದೆ. ನನ್ನ ಮಾತಿಗೆ ಉಪ್ಪು ಹುಳಿ ಖಾರದ ರುಚಿಯುಂಟು. ನಿನ್ನ ಕಟ್ಟಳೆಗೆ ಒಳಗಾದ ನನ್ನನನ್ನು ಪರಪುರುಷ ಮಾರನ ಆಡಳಿತಕ್ಕೆ ಗುರಿಮಾಡುವುದು ಸರಿಯೇ ಅಂದೆ. ದಮ್ಮಯ್ಯ ಎಂದೆ, ದಯವಾಗು ಸ್ವಾಮಿ ಅಂದೆ. ಏನೆಂದರೂ ಅವರ ಕಲ್ಲಿನಂಥಾ ಮನಸು ಕರಗಲಿಲ್ಲ. ಹೇಳಿದ ಹಿತನುಡಿ ಕೆಳದೆ ಅರಮನೆಯ ತುಂಬ ತನ್ನ ಹುಚ್ಚುಗಳ ಎರಚಾಡಿ ಮುಳ್ಳಿನ ನೋಟಗಳಿಂದ ನನ್ನನ್ನ ಇರಿದು ಕಾಡಿಗೋಡಿದರು.

ದಿನಾ ಬೆಳಿಗ್ಗೆ ನನ್ನ ತಿಳಿಮೊರೆಯನ್ನೇ ನೋಡಿ, ಅದು ಯಾವಾಗ ಕಳೆದೋರಿ ಬಟ್ಟಲು ಬಸಿರು ರೂಹು ಪಡೆದೀತೆಂದು ಕಾಯುತ್ತಿದ್ದ ರಾಜಮಾತೆಗೆ ಈ ವಿಷಯ ತಿಳಿದು ಕಳವಳಪಟ್ಟಳು. ಕೂಡಲೇ ನವತಂತ್ರಿ ನಾರಾಯಣನ ಕರೆಸಿ ಮಂತ್ರಭಾವಿತದಿಂದ ಪತಿವಶೀಕರಣದ ಮೆಚ್ಚು ಮದ್ದು ಮಾಡಿಸಿ, ನನ್ನ ಕೈಗಿತ್ತು ಹೇಳಿದಳು: ಮಗಳೇ, ಮುಟ್ಟಾದ ಮೂರು ದಿನ ಮುಗಿಸಿ, ತಣ್ಣೀರು ಮಿಂದು, ಅಂಗಾಂಗ ಶೃಂಗಾರಗೊಂಡು, ಒಳ್ಳೆ ಗಳಿಗೆ ಒಳ್ಳಯ ಮುಹೂರ್ತವ ನೋಡಿ, ಇದನ್ನ ಅನ್ನಾಹಾರದಲ್ಲಿ ಬೆರಸಿ ಮಹಾರಾಜರಿಗೆ ಬಡಿಸು. ಮಹಾರಾಜನಿಗೆ ಹೆಣ್ಣುಮರುಳುಂಟಾಗಿ ನಿನನ್ನ ವಶನಾಗುತ್ತಾನೆ- ಎಂದು ಪತಿವಶೀಕರಣದ ಮದ್ದು ಕೊಟ್ಟಳು. ಇದ ಕೇಳಿ ಉತ್ತೇಜಿತವಾಯಿತು. ನಮ್ಮ ಹರ್ಷ. ಇದೀಗ ರಾಜಮಾತೆ ಹೇಲಿದ ಮೊದಲ ಭಾಗ್ಯ ಗಳಿಗೆ ಮೂಹೂರ್ತ ಒದಗಿ ಬಂದಿದೆ. ಎಲ್ಲಿ, ಮದನಿಕೆ ಬರಲಿಲ್ಲವಲ್ಲ. ಮದನಿಕೆ, ಅನ್ನಾಹಾರ ಇನ್ನೂ ಬೆಂದಿಲ್ಲವೇನೆ?

ತಂದು ಮುಂದಿಟ್ಟು ಮದನಿಕೆ ಒಳಗೆ ಹೋಗುವಳು.

ಇಗೋ ವಶೀಕರಣದ ಮದ್ದು ಬೆರಸುತ್ತೇನೆ.

ಬೆರಸಿ ಬೆದರುವಳು.

ಅಯ್ಯೋ ಪಾಪವೇ! ಅಕಟಕಟಾ ಕಾರ್ಯವೇ! ಮದನಿಕೆ ಬೇಗ ಬಾ. (ಮದನಿಕೆ ಬರುವಳು.) ಕೂಡಲೇ ರಾಜಮಾತೆಯನ್ನು  ಕರೆದು ತಾ.

ರಾಜಮಾತೆ ಬರುವಳು.

ರಾಜಮಾತೆ :  ಏನು ಕರೆದೆ ಮಗಳೇ? ಅಡಿಯಿಂದ ಮುಡಿತನಕ ಥರಥರ ನಡುಗುತಿರುವೆ, ಯಾಕೆ ಏನಾಯಿತು?

ಸಂಪಿಗೆ : ಇಲ್ಲಿ ನೋಡಿ ತಾಯಿ. ನೀವು ಹೇಳಿದಂತೆ ಅನ್ನಾಹಾರದಲ್ಲಿ ಮೆಚ್ಚುದ ಮದ್ದು ಬೆರೆಸಿದರೆ ಮುತ್ತಿನ ಬಣ್ಣದ ಅನ್ನ, ನೆತ್ತರ ಬಣ್ಣಕೆ ತಿರುಗಿ- ಭಯಾನಕವಾಗಿ ಕಾಣುತ್ತಿದೆ! ಇಗೋ ನೋಡಿ ತಾಯಿ!

ರಾಜಮಾತೆ : ಇದನ್ನ ನೋಡಿ ಎದೆ ತಣ್ಣಗಾಗಿ ಹೆಪ್ಪುಗಟ್ಟಿತು ಮಗಳೇ! ಪುಣ್ಯ ಚೆನ್ನಾಗಿತ್ತು, ಸಕಾಲದಲ್ಲಿ ನೋಡಿದೆ. ಇಲ್ಲದಿದ್ದರೆ ಮಗನಿಗೆ ಮೆಚ್ಚುವುದ್ದು ಮಾಡಹೋಗಿ ಹುಚ್ಚು ಮದ್ದಾಗಿ ಬಿಟ್ಟರೆ ಏನು ಗತಿ? ಬೇಡ ಬೇಡ. ಇದು ಇನ್ನೊಬ್ಬರಿಗೆ ತಿಳಿಯುವುದೂ ಬೇಡ, ಕಾಣುವುದೂ ಬೇಡ, ಇದನ್ನ ಎಲ್ಲಿಯಾದರೂ ನಿನ್ನ ಕೈಯಾರೆ ತಗೊಂಡು ಹೋಗಿ ಹಿತ್ತಲ ಹುತ್ತದಲ್ಲಿ ಎಸೆದು ಬಾ. ಬೇಗ ಹೋಗು, ನಾವು ಮನಸ್ಸುಗಳನ್ನ ಮೈಲಿಗೆ ಮಾಡಿಕೊಳ್ಳುವುದು ಬೇಡ.

ಸಂಪಿಗೆ : ಸರಿ ತಾಯಿ. (ಹೋಗುವಳು.)

ರಾಜಮಾತೆ : ಈ ವಂಶವನ್ನ ಶಿವನೇ ಕಾಪಾಡಿದ!

ತೆರಳುವಳು