ಭಾಗವತ : ಬೊಗಸೆಯಲ್ಲಿಯ ನೀರು ಸೋರಲು
ನಗುತ ಮೂಡಿದ ದೇವರೂ ಸಹ
ಸೋರಿ ಹೋಗಲು ನೀರನಾಳಕೆ ರಾಜ ಮರುಳಾದ
ಬರಿಯ ಕೈಯಲಿ ಬರಲು ತನ್ನ ಶರೀರ ಸಡಗರಿಸುತ್ತ ನಿಂತರೆ
ಗುರುತು ಹತ್ತದೆ ಯಾರು ಯಾರೆಲ್ಲ ದುರುಳ ನೀನೆಂದ

ರಾಜ ಕಂಗಾಲಾಗಿ ಬರುತ್ತಾನೆ.

ರಾಜ : ನಾನು ಮುಟ್ಟಿದ್ದೆಲ್ಲ ಮೂರ್ಖತನವಾಗುತ್ತಿದೆ. ಕಂಡದ್ದೆಲ್ಲಾ ಮೋಸವಾಗುತ್ತಿದೆ. ವಿದೂಷಕನೇ ನನ್ನನ್ನು ನೋಡಿ ನಗುವಂತಾಗಿದೆ.

ಸಂಪಿಗೆ : (ಪ್ರವೇಶಿಸಿ) ತಾವು ಖಿನ್ನರಾಗಿರುವಂತೆ ತೋರುತ್ತೀರಿ ಪ್ರಭು.

ರಾಜ : ಹೌದು. ದೇವರನ್ನು ಕಂಡೇ ಕಾಣುತ್ತೇನೆಂತ ಕಣ್ಣಲ್ಲಿ ದೀಪ ಹೊತ್ತಿಸಿಕೊಂಡು ಹೋದವನು ಕಗ್ಗತ್ತಲಲ್ಲಿ ವಾಪಸಾಗಿದ್ದೇನೆ. ದೇವರು ಮಾತ್ರ ಕಣ್ಣೀರು ಸುರಿಸುವಂಥ ನೋವು ಕೊಡುತ್ತಾನೆ ಅಂತಿದ್ದೆ. ಆದರೆ ಇಲ್ಲಿ ನೋಡಿದರೆ ಎಲ್ಲಾ ಶಕ್ತಿಗಳು ಕತ್ತಲೆಯ ಕುಹಕಗಳಿಗೆ ಶಾಮೀಲಾಗಿ ಬೆಳಕು ನನ್ನ ಹತ್ತಿರ ಸುಳಿಯದ ಹಾಗೆ ಮಾಡಿವೆ.

ಸಂಪಿಗೆ : ನೀವು ಪ್ರೀತಿಯನ್ನು ತಿರಸ್ಕರಿಸಿರಬಹುದು. ಆದರೆ ಹಿಂದಿನದನ್ನೆಲ್ಲ ಮರೆತು ಮತ್ತೆ ನಿಮ್ಮನ್ನು ಸ್ವೀಕರಿಸಲಿಕ್ಕೆ ನನ್ನ ತೋಳುಗಳು ತೆರೆದುಕೊಂಡೇ ಇವೆಯಲ್ಲಾ.

ರಾಜ : ನಿನ್ನ ಮುಖ ಎಷ್ಟು ಮುಗ್ಧವಾಗಿದೆ ದೇವಿ! ಒಂದು ಕಣದಷ್ಟೂ ಕೆಸರಿನ ಲೇಪವಿಲ್ಲದ, ಈಗಷ್ಟೇ ಅರಳಿದ ಕಮಲ ನಿನ್ನ ಮುಖ. ನನ್ನ ಮುಖ  ನೋಡು, ನೀರಿನಲ್ಲಿಯ ದೇವರನ್ನು ಪರಿಭಾವಿಸಿ ತಳದ ಕೆಸರೆಲ್ಲ ಮುಖಕ್ಕೆ ರಾಚಿ ರಾಡಿ ರಾಡಿಯಾಗಿದೆ. ದೇಹ ಪರಿಶುದ್ಧವಾದುದು ದೇವಿ. ಆತ್ಮ ಕೊಳಕಾದದ್ದು. ಆತ್ಮಕ್ಕೆ ಪಾಪಗಳು ಕಾಣಿಸುತ್ತವೆ.

ಸಂಪಿಗೆ : ತಮಗೆ ವಿಶ್ರಾಂತಿ ಬೇಕು ಪ್ರಭು. ಸ್ವಲ್ಪ ನಿದ್ರೆ ಮಾಡಿದರೆ ಸುಂದರ ಸ್ವಪ್ನ ಕಂಡು….

ರಾಜ : ನಾನಿನ್ನೂ ಕಣ್ಣು ಮುಚ್ಚಿರಬೇಕಂತ ತಾನೆ ನೀನು ಹೇಳುವುದು? ಭಲೇ! ನಿನಗೆ ಕನಸುಗಳಿವೆ ದೇವಿ. ಸುದೈವಿ ನೀನು. ನಿಜದಲ್ಲಿ ರಾಣಿಯಾಗಿರುತ್ತ, ಕನಸಿನಲ್ಲಿ ಪ್ರೇಯಸಿಯಾಗಿರುತ್ತ ಎರಡೂ ಲೋಕಗಳ ಅಹಂಕಾರಗಳನ್ನು ನಿಭಾಯಿಸಬಲ್ಲೆ. ಆದರೆ, ನಾನು? ದೇವರು ಕೈಕೊಟ್ಟ ದಿನವೇ ನನ್ನ ಕನಸು ಗಳನ್ನೂ ಕಳೆದುಕೊಂಡೆ ದೇವಿ.

ಸಂಪಿಗೆ : ಹಾಗೆಂದರೇನು ಪ್ರಭು?

ರಾಜ : ದೇಹವನ್ನು ತಿರಸ್ಕರಿಸಿ ನಿನ್ನ ಬಳಿ ಬಿಟ್ಟು, ದೇವರನ್ನು ಕಾಣೋದಕ್ಕಾಗಿ ಸರೋವರಕ್ಕೆ ಹೋದೆ. ನೀರಿನಲ್ಲಿ ತೇಲಿ ಬರುತ್ತಿದ್ದದ್ದು ಮೊಲ್ಲೆಯೂ ಅಲ್ಲ, ದೇವರೂ ಅಲ್ಲ, ನನ್ನ ಪ್ರತಿಬಿಂಬ ಕೂಡ ಅಲ್ಲ. ದೇವಿ ಅದು ನನ್ನ ಹೆಣ. ಅದನ್ನೇ ದಿನಾ ತೊಡೆಯ ಮೇಲಿಟ್ಟುಕೊಂಡು ತಿನ್ನುತ್ತಿದ್ದೆ. ತಿಂದಷ್ಟು ಹಸಿವೆಯಾಗುತ್ತಿತ್ತು. ಮತ್ತೆ ಮತ್ತೆ ತಿನ್ನುತ್ತಿದ್ದೆ. ಅದು ಹೆಣವೆಂದು ತಿಳಿಯುವಷ್ಟರಲ್ಲಿ ನನ್ನ ಕಾಲ ಮೀರಿಹೋಗಿತ್ತು. ಪಶ್ಚಾತ್ತಾಪ ಪಟ್ಟು ತಿರುಗಿ ಬಂದು ನೋಡಿದರೆ ನನ್ನ ದೇಹವೇ ನಾಪತ್ತೆ. ಅದರಲ್ಲಿ ಯಾರೋ ಸೇರಿ ಅಪಹರಿಸಿಬಿಟ್ಟಿದ್ದಾರೆ. ನಾನೀಗ ಬರೀ ಗಾಳಿ ದೇವಿ. ನಿನ್ನ ಚರ್ಮಕ್ಕೆ ಸ್ಪರ್ಶ ಕೂಡ ಮಾಡಲಾರದ, ಅಸ್ತಿತ್ವವಿಲ್ಲದೇ ಬರೀ ಮಾತಾಡುವ ಗಾಳಿ. ನಾನು ಪ್ರಕಟವಾಗೋದಕ್ಕೆ ಒಂದು ದೇಹ ಬೇಕು. ಬದುಕಿನ ಬಗೆಗಿನ ನನ್ನ ಹಸಿವು ಹೆಚ್ಚಾಗುತ್ತಿದೆ. ದೇವಿ, ನನಗೊಂದು ದೇಹ ಬೇಕು. ದಯಮಾಡಿ ನನಗೆ ಸಹಾಯ ಮಾಡು.

ಸಂಪಿಗೆ : ನಾನು ನಿಮ್ಮ ಚರಣ ದಾಸಿ ಪ್ರಭು.

ರಾಜ : ಅದೆಲ್ಲ ಬೇಡ. ಪ್ರಾಮಾಣಿಕವಾಗಿ ಸಹಾಯ ಮಾಡಿದರೆ ಸಾಕು. ಸಹಕರಿಸಲಾರೆಯಾ?

ಸಂಪಿಗೆ : ಖಂಡಿತ ಸಹಕರಿಸುತ್ತೇನೆ ಪ್ರಭು.

ರಾಜ : ಮಾತಿಗೆ ತಪ್ಪಬಾರದು.

ಸಂಪಿಗೆ : ಇಲ್ಲ ಪ್ರಭು.

ರಾಜ : ನಿಜವಾಗಿ ?

ಸಂಪಿಗೆ : ನಿಜವಾಗಿ.

ರಾಜ : ನನ್ನಾಣೆಯಾಗಿಯೂ?

ಸಂಪಿಗೆ : ತಮ್ಮಾಣೆಯಾಗಿ.

ರಾಜ : ಹಾಗಿದ್ದರಿಗೋ…. (ಒದರಿ ಕರೆಯುತ್ತ) ಎಲಾ ಯಾರಲ್ಲಿ?

ಸಂಪಿಗೆ : ಎಲ್ಲರೂ ಮರಗಿರೋವಾಗ ಯಾರು ಬರಬೇಕು ಪ್ರಭೂ?

ರಾಜ : ಕರೆಯುತ್ತಿರೋನು ಈ ನಾಡಿನ ಮಹಾರಾಜ. ಎಲಾ ಯಾರಲ್ಲಿ?

ಸಂಪಿಗೆ : ಇದು ಮಧ್ಯರಾತ್ರಿ ಪ್ರಭು.

ರಾಜ : ಆದರೆ ಈ ನಾಡಿನ ಪ್ರಭುವಿಗೆ ಮಹಾ ಸತ್ಯ ಗೋಚರಿಸಿದ ಗಳಿಗೆ ಇದು. ಎಲಾ ಯಾರಲ್ಲಿ?

ಸಂಪಿಗೆ : ಕೇಳಿದವರೇನಂದಾರು? ನಿಲ್ಲಿಸಿ ಪ್ರಭು.

ರಾಜ : ಈ ಸತ್ಯದ ಪಾಲುಗಾರ್ತಿ ನೀನು, ಸುಮ್ಮನಿರು. ಯಾರಲ್ಲಿ?

ತಾಯಿ ಮತ್ತು ಸೇವಕನ ಪ್ರವೇಶ.

ಸೇವಕ : ಏನಪ್ಪಣೆ ಪ್ರಭು?

ತಾಯಿ : ಏನಿದು ರಾಜಕುಮಾರ?

ರಾಜ : ಬಾ ತಾಯೇ. ಸೇವಕಾ ಈಗಿಂದೀಗಲೇ ಡಂಗೂರ ಸಾರು. ಮಧ್ಯರಾತ್ರಿಯೆಂದು ನನಗೆ ಗೊತ್ತಿದೆ. ವಾದ, ಮಾಡಬೇಡ. ಆದರೂ ಸಾರು. ನಾಳೆ ಬೆಳಗ್ಗೆ ಎಲ್ಲ ಪ್ರಜೆಗಳು, ಸಮಸ್ತರು ನಾಗಲಿಂಗ ದೇವಸ್ಥಾನದಲ್ಲಿ ಸೇರಬೇಕು. ಮಹಾರಾಣಿ ಸಂಪಿಗೆದೇವಿಯವರು ದಿವ್ಯ ಕೊಡುತ್ತಾರೆ.

ಸೇವಕ ಹೋಗುವನು.

ಸಂಪಿಗೆ : ದಿವ್ಯ, ಯಾಕೆ?

ರಾಜ : ಅಕ್ರಮವಾಗಿ ಗರ್ಭಿಣಿಯಾದ ನಿಜ ಹೇಳಲಿಕ್ಕೆ.

ತಾಯಿ : ರಾಜಕುಮಾರ, ನಿನ್ನ ಮೈಮೇಲೆ ಪ್ರಜ್ಞೆ ಇದೆಯೋ ಇಲ್ಲವೊ? ಯಾರೆದುರು ಇಂಥ ಮಾತಾಡುತ್ತಿದ್ದೀಯಾ?

ರಾಜ : ಮಹಾರಾಣಿಯ ಸುಳ್ಳು ನಂಬಿದ ತಾಯಿಯ ಎದುರಿಗೆ ಮತ್ತು ಸ್ವಯಂ ಮಹಾರಾಣಿ ಸಂಪಿಗೆ ದೇವಿಯ ಎದುರಿಗೆ.

ತಾಯಿ : ಸಂಪಿಗೆ ಯಾವ ಸುಳ್ಳನ್ನೂ ಹೇಳಿಲ್ಲವಲ್ಲ.

ರಾಜ : ನನ್ನ ಉದ್ಧಟತನವನ್ನು ಕ್ಷಮಿಸು ತಾಯಿ. ಇವಳ ಗರ್ಭದ ಪಿಂಡ ನನ್ನದಲ್ಲ. ಆ ವಿಷ ಯಾರದೆಂಬ ನಿಜ ಹೊರಬರಬೇಕು.

ತಾಯಿ : ಅದು ನಿನ್ನದೇ ಅಂತ ನಾನು ಹೇಳುತ್ತೇನೆ.

ರಾಜ : ಇದು ನಿಜ ಅಲ್ಲ ತಾಯಿ, ಮೋಸ.

ತಾಯಿ : ನಿಜ ನಿನಗೆಷ್ಟು ತಿಳಿದೀತು? ನೀನು ನನ್ನ ಮಗ ಎನ್ನುವದೆಷ್ಟು ನಿಜವೋ ಆ ಗರ್ಭ ನಿನ್ನದೆನ್ನುವುದೂ ಅಷ್ಟೇ ನಿಜ.

ರಾಜ : ಎಷ್ಟೊಂದು ನಿಜಗಳನ್ನು ನಿಭಾಯಿಸ್ತ ಇದ್ದೀ ತಾಯಿ! ನನಗೆ ಒಂದು ಸತ್ಯವೂ ದಕ್ಕಲೊಲ್ಲದು. ಪಿಂಡಕ್ಕೆ ನನ್ನ ಹೆಸರಿರೋದರಿಂದ ಅಂತಿಮ ಪ್ರಮಾಣ ನಾನು ತಾಯೀ.

ತಾಯಿ : ಅರೆ ಹುಚ್ಚಿನಲ್ಲಿರೋ ನಿನಗೆ ಪ್ರಮಾಣವಾಗುವ ಯೋಗ್ಯತೆಯೆಲ್ಲಿದೆ ರಾಜಕುಮಾರ?

ರಾಜ : ಅದಕ್ಕೇ ಹೇಳಿದ್ದು ಹತ್ತು ಸಮಸ್ತರ ಮುಂದೆ ಇದು ತೀರ್ಮಾನವಾಗಲಿ ಎಂದು.

ತಾಯಿ : ಹುಚ್ಚನ್ನು ಎಲ್ಲೆಲ್ಲಿಗೋ ವಿಸ್ತರಿಸುತ್ತಾ ಇದ್ದೀಯಾ. ಖಾಸಗಿ ವಿಷಯವನ್ನು ಸಾರ್ವಜನಿಕಗೊಳಿಸ್ತಾ ಇದ್ದೀಯಾ.

ರಾಜ : ನ್ಯಾಯದ ಮುಂದೆ ಎಲ್ಲರೂ ಸಮಾನರು ತಾಯಿ.

ತಾಯಿ : ಇದು ಹುಚ್ಚಿನ ಉಲ್ಬಣಾವಸ್ಥೆ. (ವೇದನೆಯಿಂದ) ನನ್ನ ರೆಪ್ಪೆಯ ಮೇಲಾಗಲೇ ಬದುಕಿನ ಭಾರ ಹೆಚ್ಚಾಗಿದೆ ಮಗನೇ, ನಾನಿದನ್ನು ತಡೆಯಲಾರೆ.

ರಾಜ : ನನಗೂ ವಯಸ್ಸಾಯ್ತಲ್ಲ ತಾಯೀ. ನಾನು ಯಾವಾಗಲೂ ಎರಡಿದ್ದೆ ಅಂತ ಅನ್ನಿಸುತ್ತಿದೆ. ಒಂದನ್ನು ಅಂದರೆ ಅರ್ಧವನ್ನು ಎಲ್ಲೋ ಮರೆತಿದ್ದೇನೆ. ಅದು ನನ್ನ ಅಣ್ಣ ಆಗಿರಬೇಕು, ಇಲ್ಲವೆ ವೈರಿ ಆಗಿರಬೇಕು. ಅವನಿರುವ ಗುಟ್ಟನ್ನು ನೀನು ನನ್ನಿಂದ ಬಚ್ಚಿಟ್ಟಿದ್ದೀಯೆ; ಇವಳು ತನ್ನ ಗುಟ್ಟನ್ನು ಗರ್ಭದಲ್ಲಿಟ್ಟುಕೊಂಡು ಮೇಲೆ ಸೀರೆ ಸುತ್ತಿಕೊಂಡಿರೋ ಹಾಗೆ ನೀನೂ ಮಾಡಿರಬಹುದು.

ತಾಯಿ : ಕುಮಾರ, ನೀನು ಅಂದುಕೊಂಡಂಥ ಪ್ರಳಯವೇನೂ ಆಗಿಲ್ಲ. ಅನಗತ್ಯ ದ್ವೇಷದಲ್ಲಿ ವಿವೇಕ ಕಳೆದುಕೊಳ್ಳಬೇಡ.

ರಾಜ : ಈಗ ನನ್ನ ದ್ವೇಷ ಕೂಡ ಎರಡಾಗಿದೆ ತಾಯಿ. ಇಡಿಯಾಗಿ ರಾಣಿಯನ್ನು ದ್ವೇಷಿಸಲಾರೆ ನಾನು. ಅವನು- ನಾನಿಲ್ಲದಾಗ ಅಕ್ರಮವಾಗಿ ಬಂದು ಇವಳನ್ನು ಸೇರಿದವನು, ಯಾರಿಗೂ ಗೊತ್ತಿಲ್ಲದ ಹಾಗೆ ನಿಕ್ಷೇಪ ತಂದು ಇವಳ ಗರ್ಭದಲ್ಲಿ ಬಚ್ಚಿಟ್ಟವನು – ಆತನ ಬಗ್ಗೆ ಕೂಡ ನನಗೆ ಇಡೀ ದ್ವೇಷವಿಲ್ಲ ತಾಯಿ, ಮೆಚ್ಚುಗೆ ಅಸೂಯೆ ಕೂಡ ಇದೆ. ಆದರೆ ನನಗವನು ಬೇಕು. ಅದಕ್ಕಾಗಿ ನಾಳೆ ಬೆಳಿಗ್ಗೆ ರಾಣಿಯ ಕಪಟ ಪ್ರಕಟವಾಗಲೇ ಬೇಕು. ರಾಜನಾಗಿ ನನ್ನ ನಿರ್ಧಾರ ಹೇಳಿಯಾಗಿದೆ. ನಾಳೆ ಬೆಳಿಗ್ಗೆ ತಾವೂ ಬರೋಣವಾಗಬೇಕು.

ಸರ್ರನೆ ಹೋಗುವನು.