ನಾಗಲಿಂಗ ದೇವಸ್ಥಾನದಲ್ಲಿ, ತಾಯಿ, ಸಂಪಿಗೆ, ರಾಜ, ಹಿರಿಯರು

ಭಾಗವತ : ಧರೆಗೆ ದೊಡ್ಡವರೆಲ್ಲ ಬರಲು ಸತ್ಕರಿಸಿ
ಅರಸು ಹೇಳಿದನಿಂತು ಬಾಗಿ |
ಅರಮನೆಯ ನೀತಿಗಳ ಮುರಿದು ಸಂಪಿಗೆ ಗರ್ಭ
ಧರಿಸಿದ್ದು ನ್ಯಾಯವೇ ಹೇಳಿ ||

ರಾಜ : ಧರೆಗೆ ದೊಡ್ಡವರಾದ ತಾವು ದೊಡ್ಡ ಮನಸ್ಸು ಮಾಡಿ ಬಂದದ್ದಕ್ಕೆ ಭಕ್ತಿಯ ನಮಸ್ಕಾರ.

ಹಿರಿಯ ೧ : ತಮ್ಮ ವಿನಯದಿಂದ ಸನ್ಮಾನಿತರಾದೆವು ಪ್ರಭು.

ರಾಜ : ಕಿರಿಯನಾದ ನನಗೆ ಧರ್ಮಸಂದಿಗ್ಧ ಬಂದಿರೋದರಿಂದ ದೈವಸಮಾನರಾದ ತಮ್ಮ ಮಾರ್ಗದರ್ಶನ ಬೇಕಾಗಿ ಕರೆಸಬೇಕಾಯಿತು.

ಹಿರಿಯ ೨ : ಹಿರಿಯರ ಸಾಕ್ಷಿಕದಲ್ಲಿ ಮಹಾರಾಜರು ತೆಗೆದುಕೊಳ್ಳುವ ತೀರ್ಮಾನಕ್ಕೆ ಕುಲದೈವವೂ ಬದ್ಧವಾಗಿರುತ್ತದೆ. ನಮ್ಮ ಅಂತಃಸಾಕ್ಷಿಯಿಂದ ನಿಜ ಮತ್ತು ಉಚಿತವನ್ನೇ ನುಡಿಯುತ್ತೇವೆ. ಅಪ್ಪಣೆಯಾಗಲಿ ಪ್ರಭು.

ರಾಜ : ಗಂಡನ್ನ ಬಿಟ್ಟು ಅಕ್ರಮವಾಗಿ ಇನ್ನೊಬ್ಬನೊಂದಿಗೆ ಸೇರಿ ಗರ್ಭವತಿಯಾದವಳಿಗೆ ಏನು ಶಿಕ್ಷೆಯಾಗಬೇಕೆಂಬ ಬಗ್ಗೆ ಕಡೆಯ ನುಡಿಯಾಗಲಿ.

ಹಿರಿಯ ೧ :  ಓಂ ಪ್ರಥಮದಲ್ಲಿ ಅದು ಅಕ್ರಮ ಗರ್ಭವೆಂದು ಸಾಬೀತಾಗಬೇಕು ಪ್ರಭು.

ರಾಜ : ಸಾಬೀತು ಮಾಡುವುದಕ್ಕೆ ಪ್ರಮಾಣವೇನು?

ಹಿರಿಯ ೨ :  ಗಂಡ -ಹೆಂಡತಿಯರ ಅಂತಃಸಾಕ್ಷಿಯೇ ಪ್ರಮಾಣ.

ರಾಜ : ಅಂತಃಸಾಕ್ಷಿಗೂ ಮೋಸ ಮಾಡುವವರಿದ್ದರೆ….?

ಹಿರಿಯ ೧ : ಎಲ್ಲರ ಸಮಕ್ಷಮದಲ್ಲಿ ನಿರ್ಧರಿಸುವ ದಿವ್ಯವೇ ಅಂತಿಮ ಪ್ರಮಾಣ.

ರಾಜ : ಹಾಗಿದ್ದರೆ ನಿರ್ಧರಿಸಿ. ಇಲ್ಲಿ ಅಕ್ರಮ ಗರ್ಭವತಿಯಾಗಿ ಅಪರಾಧ ಮಾಡಿದವಳು ನಾಡಿನ ಮಹಾರಾಣಿ. ನ್ಯಾಯ ಕೇಳುತ್ತಿರೋನು ನಾಡಿನ ಮಹಾರಾಜ. (ಎಲ್ಲರಿಗೂ ಆಘಾತವಾಗುತ್ತದೆ.)

ಹಿರಿಯ ೧ : ಮಹಾರಾಜ, ತಮ್ಮ ದೇಹಸ್ಥಿತಿ ಸ್ವಸ್ಥವಾಗಿಲ್ಲವೆಂದು ಕೇಳಿದ್ದೇವೆ. ಹಾಗಿದ್ದಲ್ಲಿ ಮನಸ್ಸಿಗೂ ಕಿರಿಕಿರಿ ಇರೋದು ಸಹಜ. ಕುಲಗೌರವದ ಮಾತುಗಳನ್ನು ನಮಗೆಲ್ಲ ಕುಲದೇವದಂತಿರುವ ರಾಜಮಾತೆಯ ಪ್ರತ್ಯಕ್ಷದಲ್ಲಿ ಬಗೆಹರಿಸಿ ಕೊಳ್ಳಬಹುದಲ್ಲ. ಇದು ಸಾಮಾಜಿಕವಲ್ಲದ ಸಮಸ್ಯೆಯೆಂದು ನಮ್ಮ ಭಾವನೆ.

ರಾಜ : ಪ್ರಜೆಗಳಿಗೆ ಅನ್ಯಾಯವಾದಾಗ ನ್ಯಾಯ ಕೊಡುವವನು ರಾಜ. ರಾಜನಿಗೇ ಅನ್ಯಾಯವಾದಾಗ ಸಮಸ್ತರು ನ್ಯಾಯಕೊಡಬೇಕಾದ್ದು ಧರ್ಮ.

ಹಿರಿಯ ೨ :  ರಾಜ ಇಬ್ಬರನ್ನಾಳುತ್ತನೆ. ಭೂಮಿಯನ್ನು ಮತ್ತು ಹೆಂಡತಿಯನ್ನು. ಅದ್ದರಿಂದ ಇಬ್ಬರ ನ್ಯಾಯಾನ್ಯಾಯಗಳ ಅಧಿಕಾರಿಯೂ ಅವನೆ.

ರಾಜ : ನ್ಯಾಯದ ಕಣ್ಣಲ್ಲಿ ಎಲ್ಲರೂ ಸಮಾನರಾದ್ದರಿಂದ, ಸ್ವತಃ ರಾಜನಿಗೇ ನ್ಯಾಯ ಬೇಕಾಗಿರುವುದರಿಂದ ಕೇಳುತ್ತಿದ್ದೇನೆ. ಈಗ ಹಿಂದೆಗೆದರೆ ಅದು ನಿಮ್ಮ ಹಿರಿತನದ ಕೇಡು.

ಹಿರಿಯ ೨ : ತಮ್ಮ ಮೈ ಮತ್ತು ಮನಸ್ಸಿನ ಅಸ್ವಸ್ಥತೆಯನ್ನು ಸಮಸ್ತರ ಮೇಲೆ ಹೇರುವುದು ತಪ್ಪು ಪ್ರಭು. ಈಗಲೂ ಕಾಲ ಮಿಂಚಿಲ್ಲ. ರಾಜಮಾತೆಯವರೊಂದಿಗೆ ತಾವು ಮಾತಾಡಿ ಉಚಿತ ರೀತಿಯಲ್ಲಿ ತೀರ್ಮಾನಿಸಬೇಕೆಂದು ನಮ್ಮ ನಮ್ರ ಪ್ರಾರ್ಥನೆ.

ರಾಜ : ನಮ್ಮ ಮೈಮನಸ್ಸಿನ ಅಸ್ವಸ್ಥತೆಗೆ ಆಧಾರವೇನು?

ತಾಯಿ : ಆಡಬಾರದ ನುಡಿಗಳನ್ನು ಅವಗಡಿಸಿ ನುಡಿಯುತ್ತಿರುವುದೇ ಸಾಲದೇ? ಕುಲದ ಚರಿತ್ರೆಯ ಮೇಲೆ ಮಸಿ ಚೆಲ್ಲುತ್ತಿರುವುದು ಸಾಲದೇ? ಮಹಾರಾಣಿಯ ಮೈಗೂ ಒಡೆಯ, ಮನಸ್ಸಿಗೂ ಒಡೆಯ ನೀನು. ಎರಡನ್ನೂ ಅರಿಯದ ಹೊಣೆಗೇಡಿತನ ಸಾಲದೆ?

ರಾಜ : ಇವೆಲ್ಲಾ ಅನ್ಯಾಯಕ್ಕೆ ಒಳಗಾದವನ ಸಂಕಟದ ಮಾತಗಳೆಂದು ಯಾಕೆ ತಿಳಿಯುತ್ತಿಲ್ಲ ನೀವು?

ಹಿರಿಯ ೧ : ತಾವು ಮಧ್ಯೆ ಬಾಯಿ ಹಾಕಿ ಮಾತನಾಡಿದ್ದು ಸಾರ್ಥಕವಾಯಿತು ತಾಯಿ. ಹಿಂದೊಮ್ಮೆ ಪ್ರಭುಗಳನ್ನು ಸೀಳುವುದಕ್ಕೆ ಸಾಕ್ಷಿಕರಾಗಿ ನಮ್ಮ ಕಣ್ಣು ಮನಸ್ಸಿಗೆ ಬೇಕಾದಷ್ಟು ದೊಡ್ಡ ಗಾಯ ಮಾಡಿಕೊಂಡಾಗಿದೆ. ಈಗ ಈ ಹುಚ್ಚಿಗೆ ಸಾಕ್ಷಿಕರಾಗಿ ನಮ್ಮ ಆತ್ಮಗಳಿಗೆ ಗಾಯ ಮಾಡಿಕೊಳ್ಳಲು ನಮಗಿಷ್ಟವಿಲ್ಲ – ಇಗೋ ಹೊರಟೆವು.

ರಾಜ : ಒಂದು ಹೆಜ್ಜೆ ಮುಂದಿಟ್ಟರೆ ನಿಮಗೆ ಕುಲದೈವದಾಣೆ.

ಹಿರಿಯ ೨ : ಹಿರಿಯರಾದ ತಪ್ಪಿಗೆ ತಾವು ಮಾಡುವ ಪಾಪಗಳಿಗೆಲ್ಲ ನಾವು ಪಾಲುದಾರರಾಗಬೇಕೋ….

ತಾಯಿ : ಸತ್ಯದೇವತೆಗಳನ್ನು ಚಿತ್ತದಲ್ಲಿ ಸ್ಮರಿಸಿ ಹೇಳುತ್ತೇನೆ: ಹಟ್ಟಿಯ ಸಮಸ್ತರಿಗೆ ಸನ್ಮಂಗಳವಾಗಲಿ. ಸತ್ಯವನ್ನು ಕಷ್ಟದಿಂದ ಕಾಪಾಡಬೇಕಿದೆ ಹಿರಿಯರೆ. ಒಂದು ಕ್ಷಣ ಮೈಮರೆತರೂ ಅಂಗೈ ಒಳಗಿನ ಸತ್ಯ ಹಾರಿ ಸಾವಿರ ವರ್ಷಗಳ ಕುಲ ಕುಸಿಯುತ್ತದೆ. ವಿವೇಕವನ್ನು ಅಹಂಕಾರಕ್ಕೆ ಹರಾಜು ಹಾಕುವ ಗಂಡಿಗೆ, ಮೈಮರೆತು ತನ್ನ ಕ್ರಿಯೆಗಳನ್ನು ಮರೆಯುವ ಗಂಡಿಗೆ – ಹೆಣ್ಣಿನ ಸತ್ಯ ಗೋಚರವಾಗುವುದು ಕಷ್ಟ. ಎಲ್ಲರ ಸತ್ಯಗಳು ಅವರವರ ಮೂಗಿನ ನೇರಕ್ಕೇ ಇದ್ದಿದ್ದರೆ ಏನಾಗುತ್ತಿತ್ತೋ? ಸದ್ಯ ಹಾಗಿಲ್ಲವಲ್ಲ. ಪರಾಮರ್ಶಿಸಿ ತೀರ್ಮಾನಿಸುವ ನಿಮ್ಮಂಥ ಹಿರಿಯರಿದ್ದೀರಿ. ಅದೇ ನಮ್ಮ ಪುಣ್ಯ. ಇದು ಹೆಣ್ಣಿಗಾದ ಅವಮಾನವೆಂದು ತಿಳಿದೂ ಹೇಳುತ್ತಿದ್ದೇನೆ. ನನ್ನ ಸೊಸೆಯ ಸತ್ಯ ಸಾಬೀತು ಮಾಡುವುದಕ್ಕೆ ಕುಲದೈವದ ಆಶೀರ್ವಾದವಿದೆ. ದಯಮಾಡಿ ದಿವ್ಯ ಹೇಳಿರಿ. ಆಮೇಲಾದರೂ ಮಗನ ಹುಚ್ಚು ವಾಸಿಯಾದೀತು.

ಹಿರಿಯ ೧ : ರಾಜಮಾತೆಯವರ ಮಾತಿಗೆ ಎರಡಿಲ್ಲವೆಂದು ನಾವು ಹೇಳುತ್ತೇವೆ. ನಮ್ಮ ಮಾತಿಗೆ ಪ್ರತಿ ಇಲ್ಲವೆಂದು ಮಹಾರಾಜ ಹೇಳಲಿ.

ರಾಜ : ಒಪ್ಪಿದೆವು.

ಹಿರಿಯ ೩ : ಹಾಗಾದಲ್ಲಿ ಕೇಳಿ: ನಮ್ಮ ನುಡಿ ಬೇರೆ ಅಲ್ಲ, ದೈವದ ನುಡಿ ಬೇರೆ ಅಲ್ಲ. ದಿವ್ಯ ಏನೆಂದು ಮಹಾರಾಣಿಯವರೇ ನಿರ್ಧರಿಸಲಿ; ಮಹಾರಾಣಿಯವರ ವಿವೇಕದಲ್ಲಿ ನಮಗೆ ನಂಬಿಕೆ ಇದೆ.

ಭಾಗವತ : ನಾಗಲಿಂಗನ ಮೇಲೆ ಲೀಲೆಯಲಿ ಹರವಂಥ
ನಾಗರಾಯನ ಕೊಳ್ಳುವೆನು ಮೈಯಮೇಲೆ
ಪರಿಶುದ್ಧೆಯಾಗಿದ್ದರದು ಹರಿದು ಹೋಗುವುದು
ಅಲ್ಲದಿರೆ ಕಚ್ಚುವುದು ಇದಕೆ ಸಮ್ಮತಿಯೆ ||

ಸಂಪಿಗೆ : ಅಗೋ ನಾಗಲಿಂಗನ ಮೇಲೆ ಹರಿದಾಡೋ ಹಾವಿದೆಯಲ್ಲ. ಅದನ್ನು ನಮ್ಮ ಮೈಮೇಲೆ ಹಾಕಿಕೊಳ್ಳುತ್ತೇನೆ. ನಾನು ಪರಿಶುದ್ಧಳೇ ಆಗಿದ್ದರೆ ಅದು ಕಚ್ಚದೆ ಮೈಮೇಲೆ ಹರಿದು ಸರಿದು ಹೋಗುತ್ತದೆ. ಅದಿಲ್ಲ, ಕಚ್ಚಿ ವಿಷವಾಗುತ್ತದೆ. ಈ ದಿವ್ಯದಲ್ಲಿ ಸತ್ಯಪರೀಕ್ಷೆಯೂ ಇದೆ, ಶಿಕ್ಷೆಯೂ ಇದೆಯಾಗಿ ಒಪ್ಪಿಗೆಯೋ?

ಹಿರಿಯರು : ಒಪ್ಪಿದೆವು.

ತಾಯಿ : ಬಾ ಮಗಳೆ….

ಭಾಗವತ : ಮುಗಿದು ಕೈಗಳ ತಲೆಯಲಿಟ್ಟಳು
ನಾಗಲಿಂಗನ ಮುಂದೆ ಬಂದಳು
ಬಾಗಿ ವಂದಿಸಿ ಲಿಂಗವನು ಬಲಗೊಂಡು ಭಕ್ತಿಯಲಿ ||

ನೀಗಿ ಭಯವನು ಕೈಯ ನೀಡುತ
ನಾಗನೇ ಕಾಪಾಡು ಸತ್ಯವ
ಚಾಂಗು ಭಲೆ ಎಂದೆನುತಕೊಂಡಳು ಹಾವ ಮೈಮೇಲೆ||

ಸಖ್ಯವಿದ್ದಿತೆ ಹಾವಿಗಿವಳಿಗು 
ಸತ್ಯ ತಿಳಿಯಿತೆ ಮೂಕ ಪ್ರಾಣಿಗು
ಮುತ್ತುಗಳ ಮಳೆ ಸುರಿಸಿ ರಾಣಿಯ ಪರವಶವಗೊಳಿಸಿ ||

ಹೆಡೆಯ ತೆರೆದಾಡಿತ್ತು ಮೈಯಲಿ
ಹೆಡೆ ಮಣಿಯ ಬೆಳಕಾಡಿಸುತ್ತಲಿ
ಜಡೆಯ ಜೊತೆ ಹೆಣೆದಾಡಿ ಗರ್ಭದ ತಟ್ಟಿ ನಲಿದಾಡಿ ||

ಹೆಡೆಯ ದೀಪದ ಮುಂದು ಮಾಡುತ
ತೊಡೆಯ ಇಳಿಜಾರಿನಲಿ ಜಾರುತ
ಒಡೆಯ ಶಿವಲಿಂಗವನು ಹುಡುಕುತ ಸಾಗಿ ಹೋಯಿತಲ ||

ಚಿತ್ರವಾದರು ಎಲ್ಲ ಜನರು ವಿ
ಚಿತ್ರ ಸಂಗತಿ ಕಂಡೆವಲ್ಲ
ಚಿತ್ರವಾಯಿತು ಸತ್ಯ ರಾಣಿಯ ದಯದಿ ನಮಗೆಲ್ಲ ||

ಜಯ ಜಯಾ ಮಹಾರಾಣಿ ದೇವಿಗೆ
ಜಯವು ತಾಯಿಯ ಸತ್ಯ ಗರ್ಭಕೆ
ಕುಲಕೆ ಜನ ಜಯವೆಂದು ಬಾಗಿದರೆಲ್ಲ ಸಂಪಿಗೆಗೆ ||

ರಾಜಕುಮಾರ ಅವಸರದಲ್ಲಿ ನಾಗಲಿಂಗನ ಬಳಿಯ ನಾಗನ ಹತ್ತಿರ ಹೋಗುವನು. ಅದಲ್ಲಿ ಈಗ ಇಲ್ಲ. ಹುಡುಕುವನು. ಬೆರಗಾಗಿ ನಿಲ್ಲುವನು.

ತಾಯಿ : ಪವಾಡ ಮೆರೆದು ದೇವತೆಯಾದೆ ಮಗಳೇ.

ಹಿರಿಯ ೨ :  ಭೂಲೋಕದ ಕೀರ್ತಿ ದೇವಲೋಕಕ್ಕೂ ಹಬ್ಬುವಂತೆ ಮಾಡಿದೆ ತಾಯಿ. ನಮ್ಮ ನಾಡು ಧನ್ಯವಾಯಿತು.

ಹಿರಿಯ ೩ :  ಮಹಾರಾಣಿಯವರಿಗೆ ನೂರು ಜಯವಾಗಲಿ. ಮಹಾರಾಣಿಯವರ ಸತ್ಯಕ್ಕೆ ಸಾವಿರ ಜಯವಾಗಲಿ. ಮಹಾರಾಣಿಯವರ ಪಾದ ಮೂಡಿದಲ್ಲಿ ಗುಡಿ ಗುಂಡಾರಗಳೇಳಲಿ.

ಎಲ್ಲರೂ ಕೈಮುಗಿದು ತಾಯಿಯ ಬಳಿಗೆ ಹೋಗಿ ನಮಸ್ಕರಿಸುವರು. ತಾಯಿಯ ಜೊತೆ ಹೊರಟ ಸಂಪಿಗೆಗೆ ಜಯಜಯಕಾರ ಹೇಳುತ್ತ ಎಲ್ಲರೂ ಹೋಗುವರು. ರಾಜ ಮಾತ್ರ ಉಳಿದು ಇದು ಮೋಸ ಮೋಸಎನ್ನುತ್ತಾನೆ.