ಅವಳಿ ಒಬ್ಬನೇ ಅಳುತ್ತಿದ್ದಾನೆ.

ಭಾಗವತ : ಅಣ್ಣ ಇಲ್ಲವೆ ತಮ್ಮ ಸತ್ತನು
ಕಾಣೆನಲ್ಲಾ ಬದುಕಿನರ್ಥವ
ಇನ್ನು ನಾನಿರಲಾರೆನೆನ್ನುತ ಅವಳಿ ಅಳುತ್ತಿದ್ದ ||

ಅವಳಿ : (ಅಳುತ್ತಾ) ಅಯ್ಯೋ ನನ್ನ ಅಣ್ಣ ಅಥವಾ ತಮ್ಮ ಸತ್ತು ಹೋದ. ನಾ ಈಗ ಒಂಟಿ ಆದೆನಲ್ಲಪ್ಪೋ. ನನಗೆ ಹತ್ತಿರದವರು ಹೊಂದಿದವರು ಯಾರು ಇಲ್ಲವಲ್ಲೋ ದೇವರೇ.

ರಾಜ : ಯಾರದು ವಿಕಾರವಾಗಿ ಅಳುತ್ತಿರುವುದು?

ಅವಳಿ : ನಾನು ಅವಳಿ.

ರಾಜ : ಯಾಕಯ್ಯಾ ಒಬ್ಬನೇ ಅಳ್ತಾ ಇದ್ದೀಯಾ?

ಅವಳಿ : ಯಾಕಂದ್ರೆ, ನಾನೊಬ್ಬನೇ ಇದ್ದೀನಿ ಅದಕ್ಕೆ.

ರಾಜ : ಜವಳಿ ಎಲ್ಲಿ ಹೋದ?

ಅವಳಿ : ಸತ್ತು ಹೋದ.

ರಾಜ : ಸತ್ತು ಹೋದ ? ಯಾವಾಗ? ಏನಾಗಿತ್ತು.

ಅವಳಿ : ಊರ ಹೊರಗಿನ ಆಲದ ಮರದಡಿ ಒಂದು ಹುತ್ತ ಇದೆಯಲ್ಲ. ಅಲ್ಲಿಗೆ ಲಿಂಗಪೂಜೆ ಮಾಡೋದಕ್ಕೆ ಕಮಲಳ ಜೊತೆ ಹೋಗಿದ್ದ.

ಭಾಗವತ : ದುರಾಸೆಯಿಂದ ಪ್ರೇರಿತನಾಗಿ ಮಡಕೆ ಹಾಲು ತಗೊಂಡು ಇವನೂ ಅಲ್ಲಿಗೇ ಹೋಗಿ ಹೊಂಚಿ ಕೂತಿದ್ದ.

ಅವಳಿ : ಹಾಗಲ್ಲ, ಶಿವಲಿಂಗಕ್ಕೆ ಹಾಲೆರೆಯೋಣ ಅಂತ ಹೋದದ್ದು.

ರಾಜ : ಮುಂದೆ?

ಅವಳಿ : ಪೂಜೆ ಮುಗಿಸಿದ ಮೇಲೆ ಕಮಲು ಲಿಂಗದ ಮೇಲಿನ ಮಲ್ಲಿಗೆ ಮಾಲೆಯನ್ನು ಜವಳಿಯ ಕತ್ತಿಗೆ ಹಾಕಿದಳು. ಮಾಲೆ ಹಾಕ್ಕಿದ್ದೇ ತಡ ಜವಳಿ ಸರ್ಪವಾಗಿ ಮಾರ್ಪಾಡಾದ.

ರಾಜ : ಸುಳ್ಳು ಹೇಳಬೇಡ.

ಅವಳಿ : ಸುಳ್ಳು ಹೇಳುತ್ತಿಲ್ಲ, ಬೇಕಾದರೆ ಭಾಗವತರನ್ನು ಕೇಳಿ.

ಭಾಗವತ : ಜವಳಿ ಸರ್ಪವಾಗಿ ಮಾರ್ಪಾಡಾದ್ದು ನಿಜ; ಹಾಗೆಂದು ಕುಲದೇವರ ಅಪ್ಪಣೆಯಿತ್ತು.

ಅವಳಿ : ಸರ್ಪವಾದವನೇ ಕಮಲಳ ಜೊತೆ ಸರಸವಾಡಲಿಕ್ಕೆ ಸುರು ಮಾಡಿದ. ಮುಂದೆ ಯಾವುದನ್ನು ನಾಚಿಕೆಯಿಂದ ನಾನು ಹೇಳಲಾರೆನೋ ಅದನ್ನೂ ಮಾಡತೊಡಗಿದ. ಬರಬರುತ್ತ ತಗ್ಗಿಗೆ ನುಗ್ಗುವ ಪ್ರವಾಹದಂತೆ ಸುಖದ ವೇಗ ಜಾಸ್ತಿಯಾಗಿ ಇಬ್ಬರೂ ಏದುಸಿರು ಬಿಡತೊಡಗಿದರೂ. ದಣಿದು ಹಸಿದವರಿಗೆ ಒದಗಲೆಂದು ಪಕ್ಕದಲ್ಲಿ ಒಲೆಹೂಡಿ ಮಡಕೆಯ ಹಾಲು ಕುದಿಯಲಿಟ್ಟು ಕುಳಿತೆ. ಹಾಲು ಬಿಸಿಯಾಗಿ ಕುದಿಯತೊಡಗಿತು. ಕುದ್ದು ಹಾಲು ಉಕ್ಕತೊಡಗಿತು. ಉಕ್ಕಿದ ಹಾಲಿನ ವಾಸನೆ ಹುತ್ತದಲ್ಲೆಲ್ಲಾ ವ್ಯಾಪಿಸಿ, ಕಮಲುವಿನ ಒಳಗಿದ್ದ ಸರ್ಪಕ್ಕೆ ತಾಗಿ ಮೆಲ್ಲನೆ ಹೊರಬಂತು. ಹಸಿದುದರಿಂದ ಹೆಡೆಯೆತ್ತಿ ಮಡಕೆಗೇ ಬಾಯಿ ಹಾಕಿತು. ಬಾಯಿ ಸುಟ್ಟು ಒದ್ದಾಡಿ ಒದ್ದಾಡಿ ಸುತ್ತು ಬಿತ್ತು.

ಭಾಗವತ : ಹಸೀ ಸುಳ್ಳು ಪ್ರಭು. ಇವನು ಮಾಡಿದ್ದು ಕೊಲೆ.

ಅವಳಿ : ಇರಬಹುದು, ಆದರೆ ಬೇಖಬರಾಗಿ ಬಿದ್ದ ಕಮಲುವನ್ನು ಅವನು ಕೊಲೆ ಮಾಡಬಹುದೆಂದು ಅನ್ನಿಸಿ ಹಾಗೆ ಮಾಡಿದ್ದು.

ಭಾಗವತ : ಇದೂ ಸುಳ್ಳು. ಅಸೂಯೆ ಮತ್ತು ಕೋಪಗಳಿಂದ ಕುರುಡನಾಗಿದ್ದ ನೀನು ಇದೇ ಸಮಯವೆಂದು ಬಾಯಿ ಸುಟ್ಟು ಒದ್ದಾಡುತ್ತಿದ್ದ ಹಾವನ್ನು ಮಚ್ಚಿನಿಂದ ಕೊಚ್ಚಿ ಹಾಕಿದೆ.

ಅವಳಿ : (ಅಳುತ್ತ) ಅಯ್ಯೋ! ತಮ್ಮಣ್ಣ ಜವಳಿಯನ್ನು ಕೈಯಾರೆ ಕೊಂದೆನಪ್ಪೊ….

ರಾಜ : ಅಳಬೇಡ, ಮುಂದೇನಾಯಿತು ಹೇಳು – ಸಂಪಿಗೆಯೇನು ಮಾಡಿದಳು?

ಅವಳಿ : ಸಂಪಿಗೆಯಲ್ಲ, ಕಮಲು. ಹೊರಗೆ ಹೀಗೆ ಭಾರಿ ಭಾರಿ ಅಘಟಿತಗಳು ಘಟಿಸುತ್ತಿರಬೇಕಾದರೆ ಆಕೆಯಿನ್ನೂ ಸುಖದ ಮತ್ತಿನಲ್ಲಿ ಮೈಮರೆತು ಕಣ್ಣು ಮುಚ್ಚಿದ್ದಳು. ಸರ್ಪದ ತುಂಡುಗಳನ್ನು ಮಡಕೆಯಲ್ಲಿ ತುಂಬಿ ಹೊರಕ್ಕೆಸೆದು ಬಂದೆ. ಚೆಲ್ಲಾಡಿದ ನೆತ್ತರನ್ನ ಸ್ವಚ್ಚಮಾಡಿ ಕಮಲುವನ್ನೆಬ್ಬಸಿ ‘ಮನೆಗೆ ಹೋಗೋಣ ನಡೆ’ಎಂದು ಮಧುರ ನುಡಿದೆ. ನನ್ನನ್ನವಳು ಜವಳಿಯೆಂದೇ ತಿಳಿದು ಮೆಲ್ಲನೆ ನಡೆಯತೊಡಗಿದಳು. ಅಷ್ಟು ದೂರ ಬರುವಷ್ಟರಲ್ಲಿ ಆಯಾಸವೆಂದು ಕೂತಳು. ತುಸು ಹೊತ್ತಿನಲ್ಲೇ ಎದ್ದು ಮತ್ತೆ ನಡೆದಳು. ನೋಡುತ್ತೇನೆ – ಅವಳು ಕೂತು ಎದ್ದಲ್ಲೊಂದು ಮೊಟ್ಟೆ ಹಾಕಿದ್ದಾಳೆ! ಹಾವಿನ ಸಂತಾನವೆಂಬ ಕೋಪದಿಂದ ಮೊಟ್ಟೆಯನ್ನು ಹೊಸಕಿಹಾಕಿದೆ.

ಭಾಗವತ : ಜವಳಿ ಮೇಲಿನ ಅಸೂಯೆಯಿಂದ ನೀನು ಹಾಗೆ ಮಾಡಿದ್ದು.

ಅವಳಿ : ಮಾಡಿದವನಿಗಿಂತ ನೋಡಿದವನಿಗೇ ಚೆನ್ನಾಗಿ ತಿಳಿದಿರುವಂತಿದೆ. ಹಾಗಿದ್ದರೆ ನೀವೇ ಹೇಳಿ.

ರಾಜ : ಹೇಳಿ ಭಾಗವತರೇ.

ಭಾಗವತ : ಹಾಗೆಯೇ ಎರಡನೆಯ ಮೊಟ್ಟೆಯನ್ನೂ ಹೊಸಗಿದ. ಮೂರನೆಯದನ್ನು ಹೊಸಕಿದಾಗ ಮಾತ್ರ ಕಮಲಳಿಗೆ ಗೊತ್ತಾಯಿತು. ಗೊತ್ತಾದದ್ದೆ ತಡ ಅವಳ ಕಣ್ಣಲ್ಲಿಯ ತೃಪ್ತಿ ಮತ್ತು ಸುಖ ಮಾಯವಾಗಿ ಏಳೇಳು ಲೋಕದ ಭಾರೀ ಕೋಪಗಳಿಂದ ಗದಗದ ನಡುಗತೊಡಗಿದಳು. ಮೂಗಿನಲ್ಲಿಯ ಮುತ್ತಿನ ಮೂಗುತಿ ಸಿಡಿದುಬಿತ್ತು. ನಡುಗುತ್ತಿದ್ದ ಮೊಲೆಗಳಿಂದ ಕಣ್ಣೀರಿನಂತೆ ಒಂದೇ ಸಮನೆ ಹಾಲು ಸೋರಿ ಕುಬಸ ಒದ್ದೆಯಾಯಿತು. ವಿಕಾರವಾಗಿ ದನಿ ತೆಗೆದು ಕಿರಿಚಿ “ನನ್ನ ಸಂತಾನ ಸವರಿದೆಯಲ್ಲೋ ಚಂಡಾಲ” ಎಂದು ಹೇಳುತ್ತ ಹಾಲು ಜಿನುಗುತ್ತಿದ್ದ ಎರಡೂ ಮೊಲೆಗಳನ್ನು ಪ್ರಯಾಸದಿಂದ ಕಿತ್ತು ಇವನ ಮೇಲೆಸೆದು ಕಾಡಿನಲ್ಲಿ ಕಣ್ಮರೆಯಾದಳು. ನೋಡಲಾರದೆ ಸೂರ್ಯ ಕೂಡಲೇ ಅಸ್ತಂಗತನಾದ.

ಅವಳಿ : (ಅಳುತ್ತ) ನಾನೀಗ ಒಂಟಿಯಾದೆನಪ್ಪೋ….

ರಾಜ : ಅಳಬೇಡ. ನಿನಗೂ ಅವನನ್ನು ಕೊಲ್ಲಬೇಕಾಗಿತ್ತಲ್ಲವೇ?

ಅವಳಿ : ಹೌದು.

ರಾಜ : ಸತ್ತುಹೋದ. ಒಳ್ಳೆಯದಾಯಿತಲ್ಲ.

ಅವಳಿ : ಅವನು ಇರೋತಕ ಕೊಲ್ಲಬೇಕೆನಿಸಿತ್ತು. ಅವನು ಯಾವಾಗಲೂ ಅಕ್ಕ, ಇಲ್ಲವೇ ಪಕ್ಕ, ಇಲ್ಲವೇ ಹಿಂದೆ ಇಲ್ಲವೇ ಮುಂದೆ, ಇಲ್ಲವೇ ದೂರ ಇಲ್ಲವೇ ಸಮೀಪ ಇರುತ್ತಿದ್ದ. ಈಗ ಅವನಿಲ್ಲವಾದ್ದರಿಂದ ನಾನು ಅರ್ಧ ಆದೆ. ಅದಕ್ಕೇ ನಾನು ಸಾಯಬೇಕಂತ ಅನ್ನಿಸುತ್ತಿದೆ. ನಾನು ಒಂಟಿ.

ರಾಜ : ಅಯ್ಯಾ ಮಹಾರಾಜ.

ಅವಳಿ : ಮಹಾರಾಜ?

ರಾಜ : ಗಾಬರಿಯಾಗಬೇಡ. ನಿನ್ನನ್ನು ನಾನೇ ಅಂದುಕೊಂಡೆ. ನೀನು ಪುಣ್ಯವಂತನಯ್ಯಾ -ಒಂಟಿಯಾಗಿದ್ದೀಯಾ. ನನ್ನ ನೋಡು ಒಂಟಿಯಾಗಿ ಒಬ್ಬನೇ ಕೂತಾಗಲೂ ನನ್ನ ಬದಿಗೆ ಯಾರೋ ನನ್ನಂಥವನೇ ಒಬ್ಬ ಕೂತ ಹಾಗೇ ಅನ್ನಿಸುತ್ತದೆ. ನನ್ನ ದೇಹದಲ್ಲಿ ಅಲೆದಾಡುತ್ತಾ, ನನ್ನ ದನಿಯಲ್ಲಿ ಮಾತಾಡುತ್ತ ನನ್ನನ್ನು ಕದ್ದುಕೊಂಡು ಓಡಾಡುತ್ತಿದ್ದ ಅವನು ಮನುಷ್ಯನಲ್ಲ ಕನ್ನಡಿ ಅಂತಿದ್ದೆ. ಆದರೆ ಕನ್ನಡಿಗಿಂತ ಹೆಚ್ಚು. ಯಾಕೆಂದರೆ ಕನ್ನಡಿ ಮಾತಾಡೋದಿಲ್ಲ. ಅವನು ಮಾತಾಡುತ್ತಾನೆ. ಕನ್ನಡಿ ತಂತಾನೇ ಅಲುಗೋದಿಲ್ಲ. ಅವನು ನನ್ನ ಹಂಗಿಲ್ಲದೆ ಅರಮನೆ ತುಂಬಾ ಅಲೆದಾಡುತ್ತಾನೆ. ಗುಟ್ಟು ಹೇಳಿರುತ್ತೇನೆ. ಯಾರ ಮುಂದೆ ಹೇಳಬೇಡ. ಅವನು ನನ್ನ ಹೆಂಡತಿಯ ಹಾಸಿಗೆಯಲ್ಲೂ ಕದ್ದು ನುಸುಳಿದ್ದಾನೆ. ಇರು, ಕೇಳಿದೆಯಾ, ಅಂತಃಪುರದಿಂದ ನಿನಗವನ ಮಾತು ಕೇಳಿಸಿತಾ?

ಅವಳಿ : ಹೌದು. ಅಂತಃಪುರದಲ್ಲಿ ಯಾರೋ ಗಂಡಸಿನ ಧ್ವನಿ ಕೇಳಿಸುತ್ತಾ ಇದೆ.

ರಾಜ : ಗಲಾಟೆ ಮಾಡಬೇಡ. ಮಹಾರಾಣಿ ತನ್ನ ಕಣ್ಣಿನ ಬೆಳಕಿನಿಂದ ಅವನ ಮುಖ ಒರೆಸುತ್ತ ಅವನ ಪಾಪದ ಕಲೆ ತೊಳೆಯುತ್ತಿದ್ದಾಳೆ- ಅವರಿಬ್ಬರ ಕೊನೇ ಗಳಿಗೆ ಪವಿತ್ರವಾಗಿರಲಿ ಅಂತ. ನಾನೋ ಹಗಲು ರಾತ್ರಿ ಮನಸ್ಸಿನಲ್ಲಿ ಅವರ ಪಾಪ ನೆನೆಯುತ್ತಾ, ಪರಿತಪಿಸುತ್ತ ಅವನ ನೆತ್ತರಿಗಾಗಿ ಹಪಾಪಿಯಾಗಿ ಹಾರೈಸುತ್ತ ಅಲೆದಾಡುತ್ತಿದ್ದೇನೆ.

ಅವಳಿ : ವೈರಿಯ ಸೆರೆ ಹಿಡಿಯಲಿಕ್ಕೆ ಸೇವಕರನ್ನು ಕರೆತರಲೇ?

ರಾಜ : ಹೋಗು, ಆದರೆ ಮೆಲ್ಲಗೆ ಹೋಗಿ ಕರೆದು ತಾ.