ತೊಟ್ಟಿಲ ಕೂಸನ್ನು ಸಂಪಿಗೆ ತೂಗುತ್ತಿದ್ದಾಳೆ. ಕಾಳಿಂಗನೂ ಇದ್ದಾನೆ.

ಭಾಗವತ : ಸಿರಿಸಂಪಿಗೆಯವಳ ಕಂದನ ನೋಡಿ
ನುಡಿಸಿಬರುವೆನು ಎನುತ ನಾಗನು
ಬೇಲಿ ದಾಟುತ ಬಂದನು.

ಕಾಳಿಂಗ : ಮಾತಾಡೋದಿಲ್ಲವೇ ಸಂಪಿಗೆ?

ಸಂಪಿಗೆ : ಯಾಕೆ ಬಂದೆ? ರಾಜರಿಗೆ ಸಂದೇಹ ಬಂದು ಸರೋವರಕ್ಕೆ ಹೋಗೋದನ್ನು ಬಿಟ್ಟು ಸೇವಕರ ಹಾಗೆ ಕಾವಲು ಕಾಯುತ್ತಿದ್ದಾರೆ. ಗೊತ್ತಾಗೋದಿಲ್ಲವೆ?

ಕಾಳಿಂಗ : ನಿನ್ನೊಂದಿಗೆ ಮಾತಾಡುವುದಿತ್ತು.

ಸಂಪಿಗೆ : ಮಾತಾಡಿಯಾಯ್ತಲ್ಲ.

ಕಾಳಿಂಗ : ಕೂಸಿನ ಮುಖ ನೋಡೋಣ ಅನ್ನಿಸಿತು.

ಸಂಪಿಗೆ : ಇಕೋ ಕೂಸಿನ ಮುಖ, ಇನ್ನು ಹೊರಡು.

ಕಾಳಿಂಗ : ಒಂದೇ ಒಂದು ಗಳಿಗೆ ಮಾತಾಡುವುದಕ್ಕೆ ಅವಕಾಶ ಕೊಡು ಸಂಪಿಗೆ; ಏನಾಗಿದೆ ನೋಡು ನನಗೆ. ಕಣ್ಣ ಕಡೆ ನಿದ್ದೆ ಸುಳಿಯುತ್ತಿಲ್ಲ. ನನ್ನ ರಾಜ್ಯದ ಸೀಮೆ ಎಲ್ಲಿ ಅಂತ ಗೊತ್ತಿಲ್ಲ. ಎಲ್ಲ ಮರೆತು ನನ್ನ ಕಡೆ ಒಂದು ಬಾರಿಯಾದರೂ ನೋಡುತ್ತಾಳೋ ಅಂತ ಕೂತಿರುತ್ತೇನೆ. ನನ್ನನ್ನು ಹೊರತುಪಡಿಸೋದಕ್ಕೆ ದಿನ ದಿನಕ್ಕೆ ನಿನ್ನ ಕೋಟೆಯ ಗೋಡೆ ಎತ್ತರವಾಗುತ್ತಲೇ ಇದೆ.

ಸಂಪಿಗೆ : ನನಗೂ ನನ್ನ ಜವಾಬ್ದಾರಿ ಮತ್ತು ಮರ್ಯಾದೆ ಇವೆ, ಕಾಳಿಂಗಾ. ದಯಮಾಡಿ ಹೊರಡು.

ಕಾಳಿಂಗ : ಜ್ಞಾಪಿಸಿಕೊ ದೇವಿ, ನಿನ್ನ ಜಡೆಯೊಂದಿಗಾಡಿದ ಕರಿ ಹುಡುಗನನ್ನ ಜ್ಞಾಪಿಸಿಕೋ ಒಮ್ಮೆ ಕಾಳಿಂಗನಾಗು ಅಂತಿದ್ದೆ. ಇನ್ನೊಮ್ಮೆ ರಾಜನಾಗು ಅಂತಿದ್ದೆ. ಎರಡನ್ನೂ ಬಳಸಿ ಗರ್ಭದ ವಿದ್ಯುತ್ಪಾತ್ರೆಯನ್ನ ಹೊತ್ತಿಸಿಕೊಂಡೆ. ನವಿರು ಮಾತುಗಳಿಂದ ನನ್ನ ಮನ ಒಲಿಸಿ ದಿವ್ಯ ಗೆದ್ದೆ. ಈಗ ಕೊಳ್ಳಿಯ ಹಾಗೆ ಬಳಸಿ ಬಿಸಾಕ ಬೇಕಂತೀಯಲ್ಲವೆ?

ಸಂಪಿಗೆ : ನಾನೆಂದರೆ ಬರೀ ದೇಹದ ಸರಕು ಅಲ್ಲ ಕಾಳಿಂಗಾ. ಈ ಕೂಸು ನಿನ್ನ ಅಹಂಕಾರಕ್ಕೆ ಹುಟ್ಟಿದ ಸಂತಾನವಾಗಿರಬಹುದು. ಆದರೆ ನನಗಿದು ನೀನು ಮಾಡಿದ ಗಾಯ.

ಕಾಳಿಂಗ : ನಿನ್ನನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಹೆಣ್ಣೆ.

ಸಂಪಿಗೆ : ಈಗ ನಿನ್ನ ಪ್ರಾಣದ ಬಗೆಗಿನ ಕಾಳಜಿಯಿಂದ ಹೇಳುತ್ತೇನೆ – ಬೇಗನೆ ಪಾರಾಗಿ ಹೋಗು.

ಕಾಳಿಂಗ : ಕಡೆಯ ಬಾರಿ ನಿನಗೊಂದು ಮಾತು ಹೇಳಿ ಹೋಗೋಣ ಅಂತ ಬಂದೆ. ಈ ಮಾತು ಹೇಳದಿದ್ದರೆ ನನಗೆ ಸಾಯುವುದಕ್ಕೂ ಸಾಧ್ಯವಾಗುವುದಿಲ್ಲ.

ಸಂಪಿಗೆ : ಏನಿಂಥಾ ಮಾತಾಡುತ್ತೀಯಾ?

ಕಾಳಿಂಗ : ನಿಜ ಸಂಪಿಗೆ. ನನಗೆ ನಿನ್ನ ಬಿಟ್ಟು ಯಾರಿದ್ದಾರೆ? ಈ ಮಾತು ಕೇಳಲೇಬೇಕು.

ಸಂಪಿಗೆ : ಹೆದರಿದ್ದೀಯಾ ಕಾಳಿಂಗ?

ಕಾಳಿಂಗ : ಯಾರಿಗೆ, ರಾಜನಿಗೆ? ಅವನನ್ನು ಕಂಡರೆ ನನಗೆ ಸಿಟ್ಟು ಬರೋದೇ ಇಲ್ಲ. ಯಾಕಂತ ಗೊತ್ತಿಲ್ಲ. ನನ್ನ ಕರುಳಿನ ಕೊನೆಯೊಂದು ಆತನಲ್ಲಿ ಮುಂದುವರಿದಿದೆ ಎಂದು ಅನಿಸುತ್ತದೆ. ಪೂರ್ವಜನ್ಮದಲ್ಲಿ ನಾವಿಬ್ಬರೂ ಅಣ್ಣತಮ್ಮ ಆಗಿದ್ದೇವೋ ಏನೋ.

ಸಂಪಿಗೆ : ಅದೇನೋ ಹೇಳಬೇಕೆಂದೆಯಲ್ಲ. ಹೇಳು ಕೇಳುತ್ತೇನೆ.

ಭಾಗವತ : ಬಲು ಭೀಕರ ನೆರಳು ನನ್ನ
ಕಾಡುತಿರುವುದೇ | ಚೆನ್ನೆ
ಗರುಡನೊಬ್ಬ ಹೊಂಚಿ ನನ್ನ
ಕಾಯುತಿರುವನೇ ||

ಕಾಳಿಂಗ : ಕೇಳು ಸಂಪಿಗೆ. ಇಷ್ಟು ದಿವಸ ನಿನ್ನ ಜೊತೆ ಹ್ಯಾಗಿದ್ದೇನೆ ಅಂತ ಆಶ್ಚರ್ಯವಾಗುತ್ತಿದೆ. ನಿನ್ನ ಆಚೆಗಿನ ಯಾವುದೋ ನೆರಳನ್ನು ನಾನು ಬಯಸುತ್ತಿದ್ದೆ ಅಥವಾ ಅದನ್ನ ನೋಯಿಸಿದ್ದೇನೆ ಅಂತ ಅನ್ನಿಸುತ್ತಿದೆ. ನಿನ್ನನ್ನು ಸೇರಿದಾಗೆಲ್ಲ ನಿನ್ನಾಚೆಗಿನ ಆ ನೆರಳು ಬಂದು ಅಣಕಿಸುತ್ತದೆ. ದೇಹದ ಕ್ಷಣಿಕ ಸುಖದಲ್ಲಿ ಅದನ್ನು ಇಷ್ಟು ದಿನ ಮರೆತಿದ್ದೆ. ಇಬ್ಬರ ಮಧ್ಯೆ ಗಾಳಿ ಕೂಡ ಸುಳಿಯದ ಹಾಗೆ ತಬ್ಬಿಕೊಳ್ಳಬೇಕೆನ್ನುತ್ತೇನೆ. ಆದರೆ ಇಬ್ಬರ ಮಧ್ಯೆ ಅಗಾಧವಾದ ಖಾಲಿ ಅವಕಾಶ ಉಳಿಯುತ್ತದೆ. ಅದರಲ್ಲಿ ಆ ಕರೀ ನೆರಳು ಕಾಣಿಸಿಕೊಂಡು ಕೈ ಮಾಡಿ ಕರೆಯುತ್ತದೆ. ಮೊದಲಾದರೆ ದೇಹ ಕಾಣಿಸುತ್ತಿತ್ತು. ಈಗ ನೆರಳನ್ನು ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ನಮ್ಮಿಬ್ಬರಲ್ಲಿ ಆ ನೆರಳು ನಿಜ ಅನ್ನಿಸುತ್ತದೆ.

ರಾಜ : (ಹೊರಗಿನಿಂದ) ಎಲ್ಲಾ ಬಂದೋಬಸ್ತ್ ಮಾಡಿ. ಕಿಟಕಿ ಕಿಂಡಿಗಳಿದ್ದಲ್ಲೆಲ್ಲ ಒಬ್ಬೊಬ್ಬ ಸೈನಿಕ ಆಯುಧ ಹಿರಿದು ನಿಂತಿರಲಿ. ಶತ್ರು ತನಗೆ ಬೇಕಾದಾಗ ಬೇಕಾದ ಆಕಾರ ಧರಿಸಬಲ್ಲ ಮಾಯಕಾರ ಎನ್ನುವುದು ನೆನಪಿರಲಿ. ದೇವೀ ಬಾಗಿಲು ತೆರೆ.

ಕಾಳಿಂಗ : ಈಗ ನನ್ನ ಮನಸ್ಸು ಹಗುರವಾಯ್ತು. ಹೋಗುತ್ತೇನೆ ದೇವಿ. ಬಾಗಿಲು ತೆಗೆ.

ಸಂಪಿಗೆ : ನಾನು ಜೋಗುಳ ಹಾಡುತ್ತ ನಿಧಾನವಾಗಿ ಬಾಗಿಲು ತೆರೆಯುತ್ತೇನೆ. ನೀನು ಬಚ್ಚಲ ಹರಿಯಿಂದ ಪಾರಾಗಿ ಹೋಗು. ಆ ಕಡೆ ಯಾರು ನಿಂತಿಲ್ಲ.
ಏಳೇಳು ಹೆಡೆಗಳ ನಾಗರಹಾವೇ
ಹೆಡೆಗೊಂದು ರತ್ನದ ಹರಳಿಟ್ಟ ಹಾವೇ
ಮುಡಿದ | ಮಲ್ಲಿಗೆಯ ಜಡೆಯಲ್ಲಿ
ನಿದ್ರಿಸುವ ಹಾವೇ ಜೋ  ಜೋ 
ಜೋ ಜೋ ನಮ್ಮ ನಾಗರ ರಾಯಾ ಜೋ ಜೋ ||