ಅವಳಿ ಮತ್ತು ರಾಜ

 

ಭಾಗವತ : ತೆರೆಯ ಬಾಗಿಲು ಜಾರೆಯೇ ತೆರೆ
ಯಾರ ಜೊತೆಯಲಿ ಸರಸವಾಡುವೆ
ದುರಳನಾತನ ತರಿವೆನೆನ್ನುತ ರಾಜ ಗರ್ಜಿಸಿದ ||

ಅವಳಿ : ಬಾಗಿಲು ತೆರೆದರೆ ಒಳಗೆ ಯಾರೂ ಇರಲಿಲ್ಲ. ನಿನ್ನ ಆಜ್ಞೆಯಂತೆ ಮೂಲೆ ಮೂಲೆ ಹಿಡಿದರೂ ಸಿಕ್ಕಲಿಲ್ಲ.

ರಾಜ : ಒಳಗಡೆಯಿಂದ ಒಂದು ಕ್ರಮಿಯೂ ಹೊರಗೆ ಹೋಗಲಿಲ್ಲವೆ?

ಅವಳಿ : ಒಂದು ಸರ್ಪಮಾತ್ರ ಬಚ್ಚಲ ಹರಿಯಿಂದ ಪಾರಾಗಿ ಹೋಯ್ತು. ಮನುಷ್ಯರ ಬೇಟೆಗೆಂದು ಸಿದ್ಧರಾದ ನಾವು ಹಾವನ್ನ ಬೆನ್ನಟ್ಟಿದರೆ ವೈರಿ ಪಾರಾಗಬಹುದೆಂದು ಅದರ ಕಡೆ ಹೋಗಲಿಲ್ಲ.

ರಾಜ : ಹಾವು ಹ್ಯಾಗಿತ್ತು?

ಅವಳಿ : ಉದ್ಯಾನವನಕ್ಕಿಳಿದದ್ದೇ ಎಳೆಎಳೆಯಾಗಿ ನದಿಯಂತೆ ಹರಿಯಿತು. ಮಧ್ಯೆ ಮಧ್ಯೆ ತನ್ನನ್ನು ಯಾರಾದರೂ ನೋಡಿದರೇನು ಗತಿ ಎಂದು ಯೋಚಿಸುವಂತೆ ಸುತ್ತ ಹೆಡೆ ಆಡಿಸಿ ನೋಡಿತು. ಹೆಡೆ ಮಾತ್ರ ಭವ್ಯವಾಗಿತ್ತು.

ರಾಜ : ಉಂಡ ಸುಖದ ನೆನಪು ಅದರ ಕಣ್ಣಲ್ಲಿ ಮಿಂಚುತ್ತಿರಲಿಲ್ಲವೆ?

ಅವಳಿ : ನಮಗದರ ಕಣ್ಣು ಕಾಣಲಿಲ್ಲ ಮಿತ್ರಾ.

ರಾಜ : ಕೊನೇಪಕ್ಷ ಅದು ದೇವಲೋಕದಲ್ಲಿ ಹುಟ್ಟಿದ್ದೆಂದು ನೋಡಿದ ತಕ್ಷಣ ಅನ್ನಿಸಲಿಲ್ಲವೆ?

ಅವಳಿ : ಹೌದು, ಅದರ ನಡೆಯಲ್ಲಿ ಸಾವಿರ ಚಕ್ರವರ್ತಿಗಳ ಠೀವಿಯಿತ್ತು.

ರಾಜ : ಬಿಸಿಲಲ್ಲಿ ಹೊಳೆಯುತ್ತ ನೆಲದ ಮೇಲೆ ನಡೆಯುವ ಧೂಮಕೇತುವಿನಂತೆ ಕಾಣುತ್ತಿದ್ದಿತ್ತಲ್ಲವೇ?

ಅವಳಿ : ಹೌದು. ಪಳಪಳ ಹೊಳೆಯುತ್ತ ಗೋದಿ ಬಣ್ಣದ ಚಲನೆಗೆ ಮಿಂಚಿನ ತಲೆಯಿದ್ದಂತೆ ಅನಿಸುತ್ತಿತ್ತು. ಕಾಡಿನ ಸಾರ್ವಭೌಮನಂತೆ ಹೋಗುತ್ತ ಕತ್ತಲೆಯ ವೈಭವವನ್ನು ನಮಗೆ ಮನದಟ್ಟು ಮಾಡಿಕೊಡುವ ಹಾಗೆ ಕತ್ತಲೆಯನ್ನು ಭರ್ತಿ ತುಂಬಿಕೊಂಡ ಹುತ್ತವೊಂದರಲ್ಲಿ ಮರೆಯಾಯಿತು.

ರಾಜ : ಆ ದಿನ ಮಹಾರಾಣಿ ದಿವ್ಯ ಕೊಡುವಾಗ ಮೈಮೇಲೆ ಹಾಕಿಕೊಂಡ ಹಾವು ಅದೇ ಅಲ್ಲವೇ?

ಅವಳಿ : ಹಾಗಂತ ಹ್ಯಾಗೆ ಹೇಳಲಿ ಮಿತ್ರಾ? ಪ್ರಾಣಿಗಳ ಬಗ್ಗೆ ಖಚಿತ ಜ್ಞಾನ ನನಗಿಲ್ಲ.

ರಾಜ : ಮೂರ್ಖಾ, ನೀನು ಜವಳಿಯ ಗುಪ್ತ ಸುಖಗಳನ್ನು ಪತ್ತೆ ಹಚ್ಚವ ಹಾಗೆ ನಾನು ಆ ಹಾವಿನ ಲವಲವಿಕೆಗಳನ್ನು ಆಯಾಯಾ ಸ್ಥಳದಲ್ಲೆ ಪತ್ತೆಹಚ್ಚಬಲ್ಲೆ. ರಾಜಠೀವಿ ಎಂದಾದರೆ ದಿವ್ಯದ ದಿನ ಬಂದ ಹಾವು ಅದೇ ಎನ್ನುವುದರಲ್ಲಿ ಸಂದೇಹವಿಲ್ಲ. ದಿವ್ಯದ ಹಾವು ಅದೇ ಎಂದಾದರೆ ಅವನೇ ನನ್ನ ವೈರಿ ಎನ್ನುವುದೂ ಖಚಿತ. ಅವನು ಕಾಮರೂಪಿ, ಹೆದರಿ ಹಾವಾಗಿ ಓಡಿದ್ದಾನೆ. ಹೊರಡಿ, ಹುತ್ತ ಹೊಕ್ಕರೆ ಹುತ್ತಕ್ಕೆ, ಕಾಡು ಹೊಕ್ಕರೆ ಕಾಡಿಗೆ ಬೆಂಕಿಯಿಡಿ. ಉಸಿರಾಡೋ ಗಾಳಿಗೆ ವಿಷ ಬೆರಸಿಯಾದರೂ ಅವನನ್ನ ಹಿಡಿದು ಕೊಲ್ಲಲೇ ಬೇಕು.

ಅವಳಿ : ಇಕೋ ಹೊರಟೆ.

ಭಾಗವತ : ಆಹಾ ಬಂದಳು ಸಿರಿಯ ಸಂಪಿಗೆ
ಒಳಗೆ ಪ್ರೇಯಸಿ ಹೊರಗೆ ಅರಸಿಯು
ಹೆಣ್ಣು ವೇಷದ ವಂಚನೆಯು ಹೊರಬಂತು ಬಂದಿತೆಲ |

ಸಂಪಿಗೆ : ಇದೇನು ಮಹಾರಾಜ, ಯುದ್ಧದ ಸಿದ್ಧತೆಯಲ್ಲಿರುವಂತಿದೆ?

ರಾಜ : ನವಿರು ಮಾತುಗಳಿಂದ ನಿಜವನ್ನ ಕವರು ಮಾಡಬೇಡ ದೇವಿ, ಹೇಳು –  ಈಗ ಒಳಗಿನಿಂದ ಒಂದು ಹಾವು ಪಾರಾಗಿ ಹೋಯಿತಲ್ಲವೆ?

ಸಂಪಿಗೆ : ಹೌದು.

ರಾಜ : ದಿವ್ಯದ ದಿನ ನಿನ್ನ ಮೈಯಲ್ಲಿ ಹರಿದಾಡಿದ ಹಾವು ಅದೇ ಅಲ್ಲವೇ?

ಸಂಪಿಗೆ : ಹೌದು.

ರಾಜ : ಹೇಳು ಹಾಗಾದರೆ, ಆ ಹಾವು ನಿನ್ನ ಪ್ರಿಯಕರನಲ್ಲವೆ?

ಸಂಪಿಗೆ : ಹೌದು.

ರಾಜ : ಹಾಗಿದ್ದರೆ ನೀನು ಈತನಕ ಮಾಡಿದ್ದು ಅನೀತಿ?

ಸಂಪಿಗೆ : ಕೊನೆಗೂ ತಮಗೆ ಗೊತ್ತಾಯಿತಲ್ಲ; ಸಂತೋಷ. ತಮಗೆ ಹ್ಯಾಗೆ ಹೇಳಬೇಕೆಂದು ಯೋಚನೆ ಮಾಡುತ್ತಿದ್ದೆ.

ರಾಜ : ಹಿರಿಯರಿಗೆ, ಸಮಸ್ತರಿಗೆ ಮೋಸಮಾಡಿ ಎಲ್ಲರ ನಂಬಿಕೆಗೆ ಹುಣ್ಣು ಮಾಡಿದೆಯಲ್ಲವೆ? ಈ ತನಕ ಗುಡಿಗುಂಡಾರದ ದೈವವಾಗಿದ್ದ ನಿನ್ನ ಹೆಸರು ಈಗ ಇಡೀ ನಾಡಿಗೆ ಬೈಗಳಾಗುತ್ತದೆ, ಗೊತ್ತೆ?

ಸಂಪಿಗೆ : ಅದು ನಿಮ್ಮ ದುರ್ದೈವ. ನನ್ನ ಅನೀತಿ ನೀವು ದೇಹ ಮರೆತು ದೇವರು ಬೇಕೆಂದು ಹಂಬಲಿಸಿದಾಗಲೇ ಸುರುವಾಯ್ತು ಪ್ರಭು. ನೀವು ಹಾಸಿಗೆಯಿಂದ ಸರಿದು ಹೋದಿರಿ. ಮಲಗಿ ಜಂತಿ ಎಣಿಸುತ್ತ ನಿಟ್ಟುಸಿರು ಬಿಡುತ್ತಿದ್ದ ನನಗೆ ನೀವು ಸರಿದು ಹೋದದ್ದು ಗೊತ್ತಾಗಲೇ ಇಲ್ಲ. ನಿಮ್ಮನ್ನು ಹುಡುಕಿದೆ; ಅರಮನೆಯಲ್ಲಿ, ಉದ್ಯಾನವನದಲ್ಲಿ, ನೀವಾಡಿದ ಮಾತಿನಲ್ಲಿ – ಎಲ್ಲಿ ಹುಡುಕಿದರೂ ನೀವು ಸಿಕ್ಕಲಿಲ್ಲ. ಕೊನೆಗೆ ನೀವು ಸರೋವರದಲ್ಲಿ ಬೊಗಸೆಯಲ್ಲಿ ನೀರು ಹಿಡಿದು ದೇವರ ದರ್ಶನ ಮಾಡಿಕೊಳ್ಳುತ್ತಿದ್ದೀರೆಂದು ತಿಳಿಯಿತು. ನಾನೂ ಬೊಗಸೆಯಲ್ಲಿ ನೀರು ಹಿಡಿದೆ. ನನ್ನ ಬೊಗಸೆಯಲ್ಲೂ ಒಬ್ಬ ದೇವರಿದ್ದ. ಆದರೆ ಅವನು ನಿಮ್ಮ ಬೊಗಸೆಯಲ್ಲಿರೋ ದೇವರಾಗಿರಲಿಲ್ಲ. ತಪ್ಪೆ?

ರಾಜ : ಅನೀತಿಗೇನು ಶಿಕ್ಷೆ ಇದೆ ಗೊತ್ತೆ?

ಸಂಪಿಗೆ : ನಾನಾಗಲೇ ಅರ್ಧ ವಿಧವೆ. ಸದಾ ಅರ್ಧ ವಿಧವೆಯಾಗಿರುವ ದುಃಖ ನಿಮಗೆ ತಿಳಿಯದು ಪ್ರಭು! ನೀವು ಸೀಳಿಕೊಂಡಾಗ ನನ್ನನ್ನೂ ಸೀಳಿಬಿಟ್ಟಿರಿ. ನೀವೆದುರಿಗಿದ್ದಾಗ ದೇಹ, ಅವನೊಂದಿಗಿದ್ದಾಗ, ಮಲಗಿದ್ದಾಗ ಮನಸ್ಸು ಹೀಗೆ ಸದಾ ಅರ್ಧ ವಿಧವೆಯಾಗಿರುವ ಸ್ಥಿತಿಯಿದೆಯಲ್ಲಾ – ಅದರಂಥಾ ಹಿಂಸೆ ಇನ್ನೊಂದಿಲ್ಲ. ನನಗೆ ದುಃಖ ಎಂದರೆ ನನ್ನನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಒಂಟಿ ನಾನು. ಒಂಟಿತನಕ್ಕೆ ಹೆದರಿ ಜೊತೆಗಾರನನ್ನು ಹುಡುಕುತ್ತೇನೆ. ಸಿಕ್ಕೋರೆಲ್ಲ ಅರೆಮಾನವರು. ಅರೆಮಾನವರಿಗಾಗಿ ಹುಟ್ಟಿದವಳೇ ನಾನು? ಪೂರ್ಣಲಿಂಗ ಶಿವಲಿಂಗ ದೇವರಿಗಾಗಿ ಹುಟ್ಟಿ ಹುಡುಕಿ ಹೊರಟವಳು. ಆದರೆ ಸಿಕ್ಕದ್ದು ಅಪೂರ್ವಕ್ಕೆ ಅಕ್ರಮವಾಗಿ ಹುಟ್ಟಿದ ಕೂಸು. ಇದು ಹುಟ್ಟಿದ್ದು ವಿಧವೆಗೆ. ಅಕ್ರಮ ಸಂತಾನ ಹೆತ್ತವಳನ್ನು ಕೊಲ್ಲಬೇಕಂತ ಬಂದಿರಲ್ಲವೆ? ಇಗೋ ಸಿದ್ಧಳಾಗಿದ್ದೇನೆ.

ಅವಳಿ : (ಬಂದು) ಮಿತ್ರಾ, ವೈರಿಯ ಸುಳಿವು ಸಿಕ್ಕಿದೆ. ಹುತ್ತದಲ್ಲಿ ಅಡಗಿಕೊಂಡಿದ್ದಾನೆ. ಸೈನಿಕರಾಗಲೇ ಹುತ್ತ ಅಗೆಯುತ್ತಿದ್ದಾರೆ.

ರಾಜ : ದೇವೀ, ನನ್ನ ಆಯುಧಗಳಿಗೆ ಬೇರೆ ಒಳ್ಳೇ ಕೆಲಸ ಇದೆ. ವೈರಿಯ ಶಿರ ತರಿದು ಬಂದು ನಿನ್ನನ್ನು ವಿಚಾರಿಸಿಕೊಳ್ಳುತ್ತೇನೆ. ಯುದ್ಧದಲ್ಲಿ ಸಾಯುತ್ತೇನೆಂದು ಸಂತೋಷ ಪಡಬೇಡ. ಭಾಗಾದಿಗಳಿಲ್ಲವಾಗಿ ನನಗೆ ಸಾವಿಲ್ಲ. (ಇಬ್ಬರೂ ಹೋಗುವರು.)

ಸಂಪಿಗೆ : ನಾನೀಗ ಪೂರ್ತಿ ವಿಧವೆ.