ಯುದ್ಧಭೂಮಿಯಲ್ಲಿ ರಾಜ ಮತ್ತು ಕಾಳಿಂಗ ಎದುರಾಗುವರು

 

ಭಾಗವತ : ನನ್ನ ನಾರಿಯ ಸೇರಿದಾತನೆ
ನನ್ನ ಕುಲವೆಂಜಲಿಸಿದಾತನೆ
ನಿನ್ನ ಕೊಲ್ಲದೆ ಮಾಣೆನೆನ್ನುತ ರಾಜ ಗರ್ಜಿಸಿದ |

ರಾಜ : ಮಾಯಕಾರನಾಗಿ ಬಂದು ನನ್ನ ನಾರಿಯ ಸೇರಿದ ಜಾರ ನೀನಲ್ಲವೊ? ನನ್ನ ಕುಲವೆಂಜಲಿಸಿದ ನಾಯಿ ನೀನಲ್ಲವೋ? ನಿನ್ನಂಥ ಜಾರಚೋರನನ್ನು ಕೊಂದಲ್ಲದೆ ನನ್ನ ಆಯುಧಗಳಿಗೆ ನೆಮ್ಮದಿಯೆಲ್ಲಿ? ಬಂದು ಯುದ್ಧ ಕೊಡು ಅಧಮಾಧಮಾ.

ಭಾಗವತ : ಕಣ್ಣ ಕನ್ನಡಿಯಲ್ಲಿ ಕಂಡಿರುವೆನೇ ನಿನ್ನ
ನನ್ನ ಇನ್ನೊಬ್ಬನಂತಿರುವಿ
ನನಗೆ ನಿನ್ನಲಿ ಕೋಪ ಹುಟ್ಟದಯ್ಯಾ ನೀನು
ಅನುಜನೇ ಅಳಿದ ಜನ್ಮದಿ |

ಕಾಳಿಂಗ : ದೂರವಿರು ರಾಜಕುಮಾರ, ಯುದ್ಧಕ್ಕೆ ಹೆದರಿದವನಲ್ಲ ನಾನು. ಕನ್ನಡಿಯಲ್ಲಿ ಅನೇಕ ಬಾರಿ ನಿನ್ನ ಕಂಡಂತೆ ನೆನಪಾಗುತ್ತಿದೆ. ನಿನನ್ನ ಕಂಡರೆ ನನಗ್ಯಾಕೋ ಕರುಣೆ ಬರುತ್ತಿದೆ. ಕಾಳಗಮಾಡುವ ಮುನ್ನ ಈ ಉಮ್ಮಳ ಯಾಕೆಂದು ಚಿಂತಿಸಲಿಕ್ಕೆ ಸಮಯಕೊಡು ರಾಜಕುಮಾರ.

ಭಾಗವತ : ಹಾವಿನಂತೆಯೆ ಸಿಂಬೆಸುತ್ತುವು
ದಾವ ವೇಷವೊ ಕಾಣೆನಲ್ಲಾ
ನಿನ್ನ ಪಾಲಿನ ಗರುಡ ಬಂದೆನು
ಸಹಿಸಿಕೊ ಎಂದ |

ರಾಜ : ಅನುಕೂಲಕ್ಕೆ ತಕ್ಕಂತೆ ಆಯಾ ರೂಪ ತಾಳಿ ವಂಚನೆ ಮಾಡುವ ನಿನಗೆ ಇನ್ನೂ ಸಮಯಾವಕಾಶ ಕೊಡಬೇಕೋ? ಪ್ರಾಣಭೀತಿಯಿಂದ ಮುದುಡಿ ಸಿಂಬೆಯಾಗುತ್ತಿರುವ ನಿನ್ನ ಯಾವ ಹಂಚಿಕೊಯೂ ಇನ್ನು ಫಲಿಸದಯ್ಯಾ. ಇಗೋ ನಿನ್ನ ಪಾಲಿನ ಗರುಡ ನಿನ್ನ ಮೇಲೆರಗುತ್ತೇನೆ ಧೈರ್ಯವಿದ್ದರೆ ಎದುರಿಸು.

ಕಾಳಿಂಗ : ನನ್ನ ಅಹಂಕಾರ ಕೆಣಕಬೇಡ ರಾಜಕುಮಾರ. ನೀನು ಸುಕುಮಾರ; ಕೊಲೆಗಳನ್ನ ಕಾವ್ಯದಲ್ಲಿ ಮಾತ್ರ ಓದಿದವನು. ಒಂದು ಬಾರಿ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕಾದರೂ ಅವಕಾಶ ಕೊಡು.

ರಾಜ : ಹಾಗೆ ಮಾಡುವುದೂ ನಿನ್ನ ಕೈಯಲ್ಲಿ ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳುವುದೂ ಒಂದೇ. ಈಗೇನು ಯುದ್ಧ ಮಾಡುತ್ತಿಯೋ, ಹೇಡಿಯ ಹಾಗೆ ಸಾಯುತ್ತೀಯೋ? ಇಗೋ ಎದುರಿಸು.

ಭಾಗವತ : ಒಬ್ಬರೊಬ್ಬರ ಕೆಣಕಿ ಕಾದುತ
ಅಬ್ಬರದಿ ಸಾಹಸವ ಮೆರೆಯುತ
ಇಬ್ಬರೂ ಘನಘೋರ ಹೋರಾಡಿದರು ಧುರದೊಳಗೆ ||

ಕಡೆಗೆ ನಾಗನು ಕರುಳು ನೋಯಲು
ಕಡಿಮೆಯಾದನು ಎದುರು ಬಲದಲಿ
ಜಡಿದು ಕೊಂದನು ರಾಜ ಗುಡುಗುತ ಒಡಲ ತುಳಿಯುತಲಿ ||

ದೂರದಾಕಾಶವನು ನೋಡುತ
ಹರಣ ಹಾರಿತು ನಾಗದೇವನ
ತೆರೆದ ಕಣ್ಣಲಿ ರಾಜ ಕಂಡನು ಮರೆಯದದ್ಭುತವ ||

ಕಾಣಕಾಣುತ ಅರರೆ ತನ್ನಯ
ಬೆನ್ನಹುರಿ ಕಗ್ಗಂಟು ಸಡಿಲಿತು
ತಣ್ಣಗಾಯಿತು ಕರುಳು ಎನ್ನುತ ಅರಮನೆಗೆ ಬಂದ ||