ಅರಮನೆ. ರಾಜನಿಗಾಗಿ ಕಾಯುತ್ತಿರುವ ತಾಯಿ

ಭಾಗವತ : ಗೆದ್ದ ವಾರ್ತೆಗೆ ಹಿಗ್ಗಲಾರದ
ಬಿದ್ದ ದುಃಸ್ವಪ್ನಗಳ ನೆನೆಯುತ
ಒದ್ದೆಗಣ್ಣಲಿ ಕಾಯುತ್ತಿದ್ದಳು ತಾಯಿ ಮನೆಯೊಳಗೆ ||

ತಾಯಿ : ರಾಜಕುಮಾರ ಗೆದ್ದ ವಾರ್ತೆ ತಿಳಿದರೂ ಮನಸ್ಸಿಗೆ ಹಳಹಳಿಯಾಗುತ್ತಿದೆ. ಕಣ್ಣು ಮುಚ್ಚಿದ್ದರೆ ದುಃಸ್ವಪ್ನಗಳು, ತೆರೆದರೆ ಅಪಶಕುನಗಳು ಆಳದ ಭಯಗಳನ್ನು ಜಾಗ್ರತಗೊಳಿಸುತ್ತಿವೆ. ಸಿಡಿಲು ಬಡಿದ ಮರದಂತೆ ಅರಮನೆ ಬಿಕೋ ಅನ್ನುತ್ತಿದೆ. ಅಗೋ ರಾಜಕುಮಾರನೇ ಬಂದ.
ರಾಜಕುಮಾರ ಬಂದು ತಾಯಿಗೆ ನಮಸ್ಕರಿಸುವನು.
ಇಂಥ ಸಾವಿರ ಶತ್ರುಗಳನ್ನು ಜಯಿಸಿ ಜಯಶಾಲಿಯಾಗು ಕಂದಾ.

ರಾಜ : ಇದೇನು ಹೇಳಿಕೊಳ್ಳುವಂಥ ಗೆಲುವಲ್ಲ ತಾಯಿ.
ನೋವು ಅನುಭವಿಸುತ್ತ ಕೂರುವನು

ತಾಯಿ : ನಿಜ ಮಗನೇ, ಮಹಾರಾಣಿ ಈ ಪರಿ ಮೋಸ ಮಾಡಬಲ್ಲಳೆಂದು  ನಾನು ತಿಳಿದಿರಲಿಲ್ಲ.

ರಾಜ : ಸಿರಿಸಂಪಿಗೆ ಎಲ್ಲಿ ತಾಯೀ?

ತಾಯಿ : ತನ್ನ ಲಜ್ಜೆಗೆಟ್ಟ ಮುಖವನ್ನು ಮುಚ್ಚಿಕೊಂಡು ಎಲ್ಲೋ ಮೂಲೆಯಲ್ಲಿ ಹುದುಗಿರಬೇಕು. ಇಂಥವರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಮಗನೇ?

ರಾಜ : ಈ ಗಳಿಗೆಯಲ್ಲಿ ಮಹಾರಾಣಿ ನನ್ನ ಬಳಿ ಇರಬೇಕು ಅನ್ನಿಸುತ್ತಿದೆ.

ತಾಯಿ : ಇನ್ನೆಂಥ ಮಹಾರಾಣಿ? ಕುಲವನ್ನು ಎಂಜಲಿಸಿದಾಗಲೇ ಅ ಪದವಿಯನ್ನು ಅವಳು ಕಳೆದುಕೊಂಡಳು. ಇಂಥ ನೆಮ್ಮದಿಯ ಗಳಿಗೆಯಲ್ಲಿ ಅವಳ ಕೆಟ್ಟ ಮುಖದರ್ಶನ ಮಾಡಲೇಬೇಕೆ ಕಂದಾ?

ರಾಜ : ಅವಳೊಂದಿಗೆ ಅಂತರಂಗ ಮಾತಾಡಬೇಕು.

ತಾಯಿ : ನಾನು ನಿನ್ನ ತಾಯಿ ಬಳಿಯಿದ್ದರೆ ಸಾಲದೆ?

ರಾಜ : ನೀನೂ ನನ್ನ ಬಳಿ ಇರು. ಅವಳೂ ಇರಲಿ. ಯಾರಲ್ಲಿ?

ಸೇವಕ : (ಬಂದು) ಏನಪ್ಪಣೆ ಮಹಾಪ್ರಭು?

ಮಹಾರಾಜ : ಮಹಾರಾಣಿಯವರಿಗೆ ಬರಹೇಳು. ಹಾಗೇ ಅವಳಿಯನ್ನೂ ಕರೆ. ಅವನೊಂದಿಗೆ ಒಂದು ಮಾತು ಹಂಚಿಕೊಳ್ಳೋದಿದೆ.

ಸೇವಕ : ಅವಳಿ ಸತ್ತ ಮಹಾಪ್ರಭು.

ಮಹಾರಾಜ : ಅವನೂ ಸತ್ತನೆ? ಯಾವಾಗ? ಹ್ಯಾಗೆ?

ಸೇವಕ : ತಾವು ಯುದ್ಧದಲ್ಲಿ ತೊಡಗಿದ್ದಾಗ ಅವಳಿ “ಅಯ್ಯೋ ಕಳಚಿದ ಮೊಲೆ ಉರುಳುರುಳಿ ನನ್ನ ಕಡೆಗೆ ಬರುತ್ತಿದೆ ಕಾಪಾಡಿ” ಅಂತ ಓಡಿ ಬಂದ. ತಮ್ಮ ಯುದ್ಧದಲ್ಲಿ ಆಸಕ್ತರಾದ ನಾವು ಅವನ ಕಡೆಗೆ ಗಮನ ಕೊಡಲಿಲ್ಲ. ಓಡುತ್ತೋಡುತ್ತ ತಾವು ದಿನಾ ಹೋಗುತ್ತಿದ್ದ ಸರೋವರದ ಕಡೆಗೆ ಹೋದ. ಅಷ್ಟರಲ್ಲಿ ನಾವು ನಿರೀಕ್ಷಿಸಿದಂತೆ ತಾವು ಶತ್ರುವಿನ ವಧೆ ಮಾಡಿದ್ದರಿಂದ ಈ ಆನಂದದ ಸುದ್ದಿಯನ್ನು ಅವನಿಗೆ ತಿಳಿಸೋಣ ಅಂತ ನಾನೂ ಸರೋವರದ ಕಡೆಗೆ ಓಡಿದೆ. ಅವಳಿ ಆಗಲೇ ದಂಡೆಯ ಮೇಲೆ ನೀರಿನ ಕಡೆ ವಾಲಿದ ಮರ ಇದೆಯಲ್ಲಾ ಅದನ್ನು ಹತ್ತಿದ್ದ. ನೀರಿನಲ್ಲಿ ಅವನ ಪ್ರತಿಬಿಂಬ ಮೂಡಿತ್ತು. ಇದ್ದಕ್ಕಿದ್ದಂತೆ ಅವನಿಗೆ ಜವಳಿ ಮತ್ತು ಅವನೊಂದಿಗಿನ ಜಗಳ ನೆನಪಾಗಿ ಕೆಳಗೆ ನೀರಿನಲ್ಲಿ ಮೂಡಿದವನು ಜವಳಿ ಅಂದುಕೊಂಡ. ಭಾರೀ ಕೋಪ ಬಂದು ಕೊಂದೇ ಬಿಡ್ತೀನಿ ಅಂತ ಕೆಳಗೆ ಹಾರಿಯೇಬಿಟ್ಟ. ನಾನು ದಂಡೆಯ ಮೇಲಿದ್ದುಕೊಂಡು ಇದನ್ನೆಲ್ಲ ನೋಡುತ್ತಿದ್ದೆ. ನಾವು ಅವನನ್ನು ಉಳಿಸಲು ನೀರಿಗಿಳಿಯುವಷ್ಟರಲ್ಲಿ ನೀರು ಕುಡಿದು ಮುಳುಗಿದವನು ಏಳಲೇ ಇಲ್ಲ ಮಹಾಪ್ರಭು.

ಮಹಾರಾಜ : (ಉದ್ವೇಗದಿಂದ) ಈ ಕ್ಷಣವೇ ಹೋಗಿ ಮಹಾರಾಣಿಯವರಿಗೆ ಬರಹೇಳು ಬೇಗ.

ಸೇವಕ : ಆಗಲಿ ಮಹಾಪ್ರಭು (ಹೋಗುವನು)

ರಾಜ : ನಮ್ಮ ಮಗ ರಾಜಕುಮಾರ ಹ್ಯಾಗಿದ್ದಾನೆ ತಾಯಿ?

ತಾಯಿ : ಯುದ್ಧಮಾಡಿ ದಣಿದಿದ್ದೀಯೆ. ತುಸು ವಿಶ್ರಾಂತಿ ತಗೋ. ಹೊರಗಾಗಲೇ ಕತ್ತಲಾಗಿದೆ. ಬೆಳಗ್ಗೆದ್ದರೆ ಮನಸ್ಸು ಹಗುರವಾಗುತ್ತದೆ. ನಾಳೆ ಬೇಕಾದರೆ ಸಂಪಿಗೆಯನ್ನು ನೋಡಬಹುದು.

ರಾಜ : ನಾಳೆ ಸೂರ್ಯೋದಯವಾಗುತ್ತದೆ ಅಂತೀಯಾ ತಾಯಿ?

ತಾಯಿ : ಇದೇನು ಪ್ರಶ್ನೆ ಕೇಳುತ್ತೀ ಕಂದಾ ? ನಾಳಿನ ಸೂರ್ಯೋದಯ ಎಂದಿನಂತಿರೋದಿಲ್ಲ. ಸರಿ ತಪ್ಪು ತಂತಮ್ಮ ಸ್ಥಳದಲ್ಲಿರುತ್ತವೆ. ಅನುಮಾನದ ಕತ್ತಲೆ ಕಳೆದು ಹೋಗಿರುತ್ತದೆ. ಬೆಳಕು ಬೀಳದ ಒಂದು ಮೂಲೆಯೂ ಅರಮನೆಯಲ್ಲಿರೋದಿಲ್ಲ ಬಲ್ಲೆಯಾ? ಬೆಳಿಗ್ಗೆ ಎಚ್ಚರವಾದರೆ ಸಾಕು ಹೊಸ ಬದುಕಿನ ಮೊಗ್ಗು ಬಿಚ್ಚಿಕೊಳ್ಳುತ್ತದೆ. ಹಳೆಯ ದುಃಖಗಳೆಲ್ಲ ಮುಗುಳುನಗೆಯಾಗಿ ಅರಳುತ್ತವೆ. ಹೊಸಲೋಕದ ದೊರೆಯಾಗಿ ನೀನು ಆಳುವುದನ್ನು ನಾನೇ ತೋರಿಸುತ್ತೇನೆ.

ರಾಜ : ತಾಯೀ….

ತಾಯಿ : ಮಗನೇ….

ರಾಜ : ನನ್ನಲ್ಲಿ ನಿನಗೆ ನಂಬಿಕೆ ಇದೆಯೇನಮ್ಮಾ?

ತಾಯಿ : ಇನ್ನು ಮೇಲೆ ನಿನ್ನ ಪ್ರತಿಯೊಂದು ಮಾತನ್ನು ನಂಬುತ್ತೇನೆ ಕಂದಾ. ದಿವ್ಯದ ದಿನ ನಿನ್ನ ಮಾತನ್ನು ನಂಬದಿದ್ದುದೇ ಈ ಎಲ್ಲಾ ಅನಾಹುತಗಳಿಗೆ ಕಾರಣವಾಯಿತು. ತಾಯಿಯಾಗಿ ಮಗನ ಮಾತನ್ನು ನಂಬದವಳು ಮಾರಿಯೇ ಸೈ. ಆದರೆ ಸಿರಿಸಂಪಿಗೆ ಈ ಪರಿ ಮೋಸ ಮಾಡಿದ್ದನ್ನು ನಾನೆಂದೂ ಕ್ಷಮಿಸಲಾರೆ.

ರಾಜ : ಈಗ ನಮ್ಮಿಬ್ಬರ ಮಧ್ಯೆ ಯಾವ ಗುಟ್ಟುಗಳು ಇಲ್ಲ. ಒಂದು ಮಾತು ಕೇಳಲೇ ತಾಯಿ?

ತಾಯಿ : ಕೇಳು ಕಂದಾ.

ರಾಜ : ಶಾಂತಳಾಗಿ ಕೇಳು: ನನ್ನಹೊಕ್ಕಳು ತಣ್ಣಗಾಗುತ್ತಿದೆ, ಬೆನ್ನುಹುರಿ ಸಡಿಲವಾಗುತ್ತಿದೆ.

ತಾಯಿ : (ಹೌಹಾರಿ) ಏನು? ಏನು? ಏನಂದೆ ಮಗನೆ? ಯಾರಲ್ಲಿ? ಸೇವಕರೇ ಯಾರಾದರೂ ಬೇಗ ಬನ್ನಿ.

ರಾಜ : ಕೂಗಬೇಡ ತಾಯಿ. ದಯಮಾಡಿ ನನ್ನ ಮಾತನ್ನು ಕೇಳು.

ತಾಯಿ : ನಿನ್ನ ಮುಖ ನೋಡಿ ನನಗೆ ಭಯವಾಗುತ್ತಿದೆ ಮಗನೇ. ಈ ಪಾಪಿಗೆ ಮೊದಲೇ ಗೊತ್ತಾಗಲಿಲ್ಲ. ಯುದ್ಧದ ದಣಿವಿರಬೇಕು ಅಂದುಕೊಂಡೆ. ಅವನು ಘಾತಿಸಿದನೇ?

ರಾಜ : ಕೇಳು ತಾಯಿ, ನನ್ನ ಸಾವು ಕೂಡ ನೀನು ಹೇಳುವ ಸತ್ಯವನ್ನು ಅವಲಂಬಿಸಿದೆ. ಈಗ ನೀನೇ ಗುಟ್ಟಿನಲ್ಲಿರೋ ಸತ್ಯ ಹೇಳಬೇಕು.

ತಾಯಿ : ಅದೇನು ಹೇಳು ಕಂದಾ.

ರಾಜ : ನನಗೆ ಭಾಗಾದಿ ಇಲ್ಲ ಅನ್ನುವುದು ನಿಜವೇ ತಾಯಿ?

ತಾಯಿ : ತಾಯಿಯ ಮಾತಿನಲ್ಲಿ ಸಂದೇಹವೇ? ಇಗೋ ಕುಲದೇವರ ಆಣೆ….

ರಾಜ : ಆನೆ ಪ್ರಮಾಣ ಬೇಡ ತಾಯೀ, ಹಾಗೇ ಹೇಳು.

ತಾಯಿ : ಖಂಡಿತಾ ಇಲ್ಲ ಮಗನೇ.

ರಾಜ : ಭಾಗಾದಿಗಳಿಂದಲ್ಲವೇ ನನಗೆ ಸಾವಿರೋದು?

ತಾಯಿ : ಹೌದು.

ರಾಜ : ಭಾಗಾದಿಗಳಿಲ್ಲವಾದರೆ?

ತಾಯಿ : ಖಂಡಿತ ಸಾವಿಲ್ಲ.

ಭಾಗವತ : ಸೀಳಿಕೊಂಡೆವು
ಇಬ್ಬರಾದೆವು
ತನುವು ಮನಗಳು
ಬೇರೆಯಾದೆವು ||

ರಾಜ : ನಿನ್ನ ಉದರದಲ್ಲಿ ಇನ್ನೊಬ್ಬ ಜನಿಸಿಲ್ಲದಿರಬಹುದು. ಆದರೆ ಜನಿಸಿದ ಒಬ್ಬನೇ ಮಗ ತನ್ನ ತನು ಸೀಳಿಕೊಂಡಾಗ ಜೀವ ತಳೆದ ಆ ಇನ್ನೊಂದು ಭಾಗ – ಅವನು ನನ್ನ ಭಾಗಧಿಯಾಗಲಿಲ್ಲವೇ ತಾಯಿ? ಹೇಳು, ನಾನು ಸೀಳಿಕೊಂಡಾಗ ಹುಟ್ಟಿದ ಆ ಇನ್ನೊಬ್ಬ ಯಾರು? ಕೇಳಿದರೆ ಭೂತ ಪಿಶಾಚಿ ಎಂದಿರಿ. ಅವನು ಆ ನಾಗ ಕಾಳಿಂಗನಲ್ಲವೆ ತಾಯಿ?

ತಾಯಿ : (ಆಘಾತಗೊಂಡು) ಹೌದು, ನಿನಗಿಂತ ಮುನ್ನ ಮಡಕೆಯಿಂದ ಬಂದದ್ದು ಒಂದು ಸರ್ಪ!

ರಾಜ : ಖಚಿತವಾಗಿ ಜ್ಞಾಪಿಸಿಕೋ ತಾಯಿ. ದಿವ್ಯಕ್ಕೆ ಒದಗಿ ಬಂದ ನಾಗ ಅವನೇ ಅಲ್ಲವೆ?

ತಾಯಿ : ಬಹುಶಃ….

ರಾಜ : ಖಂಡಿತವಾಗಿ ಅವನೇ ತಾಯಿ. ಆತ ನನ್ನೊಂದಿಗೆ ಸರಿಯಾಗಿ ಯುದ್ಧ ಮಾಡಲೇ ಇಲ್ಲ. ನಿನ್ನ ಬಗ್ಗೆ ನನಗ್ಯಾಕೋ ಕೋಪವೇ ಬರುತ್ತಿಲ್ಲ ಎಂದ. ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಒಂದು ಬಾರಿ ನೋಡುವ ಅವಕಾಶ ಕೊಡು ಎಂದ. ಅವನ ಮಾತು ತಿರಸ್ಕರಿಸಿ ಯುದ್ಧ ಮಾಡಿದೆ. ಅವನು ಸಮಬಲದಲ್ಲಿ ಹೋರಾಡಲಿಲ್ಲವಾಗಿ ಸುಲಭವಾಗಿ ಕೊಂದೆ. ಕಣ್ಣು ತೆರೆದು ಆಕಾಶ ನೋಡುತ್ತ ಅಸುನೀಗಿದ. ಕುತೂಹಲ ತಾಳದೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ.

ತಾಯಿ : ಏನು ಕಂಡೆ ಮಗನೆ?

ರಾಜ : ಅವನ ಕಣ್ಣಲ್ಲಿ ಪ್ರಸನ್ನವಾದ ನೀಲಿ ಆಕಾಶ ಮೂಡಿತ್ತು. ಆಕಾಶದಲ್ಲಿ ಒಂದು ಹದ್ದು ಹಾವು ಒಂದಾಗಿ ಹಾರತ್ತಿದ್ದ ದೃಶ್ಯ ಕಂಡ. ಅಧೋಲೋಕದಲ್ಲಿ ಕರೀ ಕತ್ತಲೆಗಳ ಗುಟ್ಟನ್ನೆಲ್ಲ ಹಿಡಿದಿಟ್ಟುಕೊಂಡ ಹಾವನ್ನ ಒಂದು ಹದ್ದು ಕಾಲಲ್ಲಿ ಹಿಡಿದಿರಲಿಲ್ಲ – ಕತ್ತಿಗೆ ಮೈಗೆ ಮೈತ್ರಿಯಿಂದ ಸುತ್ತಿಕೊಂಡಿತ್ತು. ಹಾವು ಹದ್ದುಗಳು ಎರಡಳಿದು ಒಂದಾಗಿದ್ದವು. ಶಿವದೇವರ ಕರುಣೆಯ ಕಟಾಕ್ಷ ಸೂರ್ಯನ ಹೊಂಗದಿರ ರೂಪದಲ್ಲಿ ಅದರ ಮೇಲೆ ಬಿದ್ದಿತ್ತು. ನೋಡಿದರೆ ಹಾವು ಆಕಾಶದಲ್ಲಿ ಹೆಡೆತೆರೆದು ಆಡಿದಂತಿತ್ತು ಆ ದೃಶ್ಯ. ಹದ್ದನ್ನು ಇಡಿಯಾಗಿ ಆಕ್ರಮಿಸಿ ಕೊಂಡ ಹಾವು ಮಾತ್ರ ಕಾಣಿಸುತ್ತ ಹೆಡೆತೆರೆದ ಹಾವಿಗೇ ರೆಕ್ಕೆ ಬಂದು ಹಾರಾಡುತ್ತಿರುವಂತೆ ಕಾಣುತ್ತಿತ್ತು. ಹದ್ದು ನಿರಾತಂಕವಾಗಿ ನೆತ್ತಿಯ ಸೂರ್ಯನನ್ನು ಕುಡಿಯುತ್ತ ಆಕಾಶದ ಅನಂತಕ್ಕೆ ಏರುತ್ತಿತ್ತು!

ತಾಯಿ : ಹಾಗಂದರೆ ಏನು ಮಗನೆ?

ರಾಜ : ಇದೆಲ್ಲ ಮಹಾರಾಣಿಗೆ ಅರ್ಥವಾಗುತ್ತಿತ್ತು. ಸಿರಿಸಂಪಿಗೆ ತಪ್ಪು ಮಾಡಿಲ್ಲ ತಾಯಿ. ಸೀಳಿಕೊಂಡಾಗ ನಾವಿಬ್ಬರೂ ದೇಹ ಮನಸ್ಸುಗಳಾಗಿ ಒಡೆದುಕೊಂಡೆವು; ಕಾಳಿಂಗ ನನ್ನ ದೇಹವಾದ, ನಾನವನ ಮನಸ್ಸಾದೆ. ಸಿರಿಸಂಪಿಗೆ ನನ್ನ ದೇಹಕ್ಕೆ ಗರ್ಭವತಿಯಾದಳು.

ತಾಯಿ : (ಆಶ್ಚರ್ಯ ಪಶ್ಚಾತ್ತಾಪಗಳಿಂದ) ನಿಜ ಮಗನೇ, ಅದಕ್ಕೇ ಅವನು ಬೇಕಾದಾಗ ನಿನ್ನ ಆಕಾರ ತಳೆಯಬಲ್ಲವನಾಗಿದ್ದ. ಮಹಾರಾಣಿ ತಪ್ಪು ಮಾಡಲಿಲ್ಲ ಮಗನೇ, ಅಯ್ಯೋ ಪಾಪಿ ಮರೆತೇ ಬಿಡ್ಡಿದ್ದೆನಲ್ಲ ಮಗನೇ. ಈಗ ನಿನ್ನ ಜೀವದ ಬಗ್ಗೆ ನನಗೆ ಭಯವಾಗುತ್ತಿದೆ. ಯಾರಲ್ಲಿ?

ರಾಜ : ನನ್ನನ್ನು ಯಾವಾಗಲೋ ಕೊಂದುಕೊಂಡಿದ್ದೇನೆ ತಾಯಿ! ಅಗೋ ಮಹಾರಾಣಿ ಬಂದಳು. ಬಾ ಸಿರಿಸಂಪಿಗೆ….

ಸಿರಿಸಂಪಿಗೆ ಹತ್ತಿರ ಬರುವಳು.

ತಾಯಿ : ಯಾರು ಬರುತ್ತಿಲ್ಲವೆ? ಸಿರಿಸಂಪಿಗೆ, ನೀನು ರಾಜನ ಪಕ್ಕದಲ್ಲಿರು. ನಾನೇ ಪಂಡಿತರನ್ನು ಕರೆಯುತ್ತೇನೆ.

ಹೋಗುವಳು

ರಾಜ : ಅಪಾರ್ಥದ ಕಿಚ್ಚಿನಲ್ಲಿ ಬೇಯುತ್ತಿದ್ದ ನಿನ್ನನ್ನು ಕೊನೆಗಾದರೂ ತಿಳಿದುಕೊಂಡೆ ಎನ್ನಿಸುತ್ತದೆ.

ಸಂಪಿಗೆ : ತಾವು ಆರೋಗ್ಯವಾಗಿದ್ದೀರಾ ಪ್ರಭು?

ರಾಜ : ಮಹಾರಾಣಿ, ನಮ್ಮ ರಾಜಕುಮಾರ ಹ್ಯಾಗಿದ್ದಾನೆ?

ಸಂಪಿಗೆ : ನೆಮ್ಮದಿಯಿಂದ ಮಲಗಿದ್ದಾನೆ. ತಮ್ಮ ಅರೋಗ್ಯ ಹ್ಯಾಗಿದೆ ಪ್ರಭು?

ರಾಜ : ವಿಷಯ ಗೊತ್ತಾಯಿತೆ?

ಸಂಪಿಗೆ : ಗೊತ್ತು ಪ್ರಭು, ತಾವು ಕಾಳಿಂಗನನ್ನು ಕೊಂದಿರಿ.

ರಾಜ : ಅವನಿಗೆ ನಮ್ಮ ರಾಜಕುಮಾರನಿಂದ ಸಂಸ್ಕಾರ ಮಾಡಿಸಬೇಕು. ನನಗೂ ಕೂಡ.

ಸಂಪಿಗೆ : ಪ್ರಭು!

ರಾಜ : ಇನ್ನೂ ಕೇಳು ನಮ್ಮ ಮಗ ಸೀಳಿಕೊಳ್ಳದ ಹಾಗೆ ನೋಡಿಕೋ.

ಸಾಯುವನು.

ಮಂಗಲಂ.