ಭಾಗವತ ಮತ್ತವನ ಮೇಳ

ಭಾಗವತ : ಧರೆಯ ಮೇಗಡೆ ಮರೆವ ಶಿವಪುರ
ದರಸು ನಾಗರ ರಾಯ ತೀರಲು
ಅರಸಿ ಮಾಯಾವತಿಯು ಧರಮ್ಮದಿ ರಾಜ್ಯವಾಳಿರಲು ||

ತಾಯಿ ಮಾಯಾವತಿಯ ಪ್ರವೇಶ

ತಾಯಿ : ಅಯ್ಯಾ, ಧರೆಯಲ್ಲಿ ಧರ್ಮದಿಂದ ಮೆರೆಯುವಂತಹ ಶಿವಾಪುರದ ಅರಸನಾದ ನಾಗನಾಯಕನ ಧರ್ಮಪತ್ನಿ ಮಾಯಾವತಿ ಎನಿಸಿಕೊಂಡವಳು ನಾನು. ಬಹುಕಾಲ ಧರ್ಮದಿಂದ ರಾಜ್ಯಭಾರ ಮಾಡಿದ ನನ್ನ ಪತಿದೇವರು ಅಕಾಲದಲ್ಲಿ ಕಾಲಾಧೀನರಾದರು. ಅನಂತರ ಪತಿದೇವರಂತೆ ನಾನು ಕೂಡಾ ಪ್ರಜಾಹಿತ ಪಾಲನೆಯಲ್ಲಿ ಎಳ್ಳಷ್ಟೂ ಕುಂದುಂಟಾಗದಂತೆ ನೋಡಿಕೊಂಡು ಬಂದಿರುವೆನು. ಇನ್ನು ನನ್ನ ಸಾಂಸಾರಿಕ ವಿಷಯಗಳನ್ನು ಸಾರಾಂಶವಾಗಿ ಹೇಳುವುದಾದರೆ ನನ್ನ ಪತಿದೇವರು ಅಗಲಿದಾಗ ಮಗನಾದ ಶಿವನಾಗದೇವನಿಗೆ ಒಂದು ವರ್ಷ ತುಂಬಿದ್ದಿತಷ್ಟೆ. ಪ್ರಜಾಪಲನೆಯ ಜೊತೆಗೆ ಆತನ ಲಾಲನೆ ಪಾಲನೆಯನ್ನು ಸುಗಮವಾಗಿ ನಡೆಸಿಕೊಂಡು ಬಂದ ನಾನು ಮಗನ ಬಾಲಲೀಲೆಗಳನ್ನು  ನೋಡಿ ಸಂತೋಷಪಟ್ಟೆ. ಐದನೆಯ ವರ್ಷದಿಂದ ಗುರುಮುಖೇನ ಸಕಲ ಶಸ್ತ್ರಶಾಸ್ತ್ರ ವಿದ್ಯೆಗಳ ಬೋಧನೆ ಪಡೆದ ನನ್ನ ಕುಮಾರನು ದಿನೇ ದಿನೇ ಶುಕ್ಲ ಪಕ್ಷದ ಚಂದ್ರನಂತೆ ಬೆಳೆದು ಈಗ ಷೋಡಶಪ್ರಾಯಭರಿತನಾಗಿದ್ದಾನೆ. ತನ್ನ ತಂದೆಯ ರಾಜ್ಯ ಸಂಪತ್ತಿಗಲ್ಲದೆ ಶೌರ್ಯ, ಧೈರ್ಯ್ಯದಿ ಸದ್ಗುಣಗಳಿಗೆಊ ಒಡೆಯನಾಗಿದ್ದಾನೆ. ಪರ್ವತದಂತೆ ಬಲಶಾಲಿಯಾದ ಅವನು ರಾಜ್ಯದ ಕಾಡು ನಡಿಗೆ ಸ್ವಾಮಿಯಾಗಲು ತಕ್ಕವನಾಗಿದ್ದಾನೆ. ಅವನಿಗೆ ಪಟ್ಟಾಭಿಷೇಕವ ಮಡಿ ನಾನು ನಿಶ್ಚಿಂತಳಾಗಬೇಕೆಂದಿರುವಲ್ಲಿ ಒಂದು ದಿನ ಎಂಥಾ ಘಟನೆ ನಡೆದು ಹೋಯಿತಯ್ಯಾ!

ಭಾಗವತ : ಕುಲದೇವರವತರಿಸಿ ಕಾರಣಿಕ ಹೇಳಿದರು
ಎಲಗೆ ಉಂಟಿವಗೆರಡು ದೋಷ |
ಸನ್ಯಾಸಿಯಾಗುವನು ಧ್ವನಿ ಭಂಗವಾದಾಗ
ಅನುಜ ಸತ್ತಾಗಿವನು ಸಾವನೆಂದು ||

ತಾಯಿ : ಒಂದು ಹುಣ್ಣಿಮೆಯ ದಿನ ಕುಲದೇವರಿಗೆ ನೀಡುವ ಹಾಲು ಒಡೆದು ಅಪಶಕುನವಾಗೋಣವೆ? ಎಲಾ ಶಿವನೆ! ಹಿಂಗ್ಯಾಕಾಯಿತೆಂದು ಕೈ ಹೊತ್ತು ಚಿಂತಿಸುವಲ್ಲಿ ನಮ್ಮ ಕುಲದೇವರು ಅರಮನೆಯಲ್ಲಿ ಅವತರಿಸಿ ಅಪ್ಪಣೆ ಕೊಡಿಸಿದರು. ಅದೇನೆಂದರೆ:

ಮಗಳೇ ನಿನ್ನ ಮಗನಿಗೆ ಭಾರೀ ಕಂಟಕವುಂಟು;
ಸ್ವರಭಂಗವಾದಾಗ ಸನ್ಯಾಸಯೋಗವಿದೆ,
ತಪ್ಪಿದರೆ ಭಾಗಾದಿ ಕಾರವಾಗಿ  ಮರಣವಿದೆ.

ಈ ಮಾತನ್ನು ಕೇಳಿ ಗಾಬರಿಯಿಮದ ದೈವದ ಪಾದ ಹಿಡಿದುಕೊಂಡು ಸ್ವಾಮಿ ದೈವವೇ, ಈಚಲ ರುಚಿ ನಿನಗೆ, ಪಂಚ ದೀವಟಿಗೆಯ ಸೇವೆ ನಿನಗೆ, ಶಿವದೇವರ ಬಲಭಾಗದಲ್ಲೊಂದು ಗುಡಿಕಟ್ಟಿ ಸತ್ಯದ ಪದಕಾಣಿಕೆ ಕೊಟ್ಟೇನು. ನನ್ನ ಕಂದ ಹಾಲೊಕ್ಕಲು ಚಿನ್ನದೊಕ್ಕಲಾಗಲೆಂದು ಬ್ಯಾಸರಗೊಳ್ಳದೆ ಹರಸು ಸ್ವಾಮಿ, ಎಂದೆ. ಕುಲದೇವರು ಕಿರುನಗೆ ಸೂಸಿ ಮಗನ ಸ್ವರಭಂಗವಾದಾಗ ತಡಮಾಡದೆ ಮದುವೆ ಮಾಡು. ನೀರಲ್ಲಿ ನೆರಳು ನೋಡಿಕೊಳ್ಳದ ಹಾಗೆ ನೋಡಿಕೋ. ಜಾಗ್ರತೆ ಎಂದು ಹೇಳಿ ಮಾಯವಾದರು. ಅವನ ಜೊತೆ ಒಡಹುಟ್ಟಿದವರಿಲ್ಲವಾಗಿ ಮಗನ ಮರಣ ದೂರವಾಯಿತು. ರಾಜಕುಮಾರನು ನೀರಿನಲ್ಲಾಗಲಿ ಕನ್ನಡಿಯಲ್ಲಾಗಲಿ ಪ್ರತಿಬಿಂಬ ಕಂಡಾಗ ಅವನಿಗೆ ಐಹಿಕ ಭೋಗಭಾಗ್ಯಗಳ ಬಗ್ಗೆ ನಿರಾಸಕ್ತಿ ಉಂಟಾಗಿ ಸನ್ಯಾಸದತ್ತ ಮನಸ್ಸು ಒಲಿಯಬಹುದು. ಹಾಗಂತ ನಾನಾದರೂ ಜಾಗರೂಕತೆಯಿಂದ ಮಗನು ತನ್ನ ಪ್ರತಿಬಿಂಬ ದರ್ಶನ ಮಾಡದ ಹಾಗೆ ಬೆಳೆಸಿದ್ದೇನೆ. ಘನ ಚೆಲುವನಾದ ನನ್ನ ಮಗನು ಚಾಲೂಕಾಗಿ ನಿಂತಲ್ಲಿ ನಿಲ್ಲದೆ ಕೂತಲ್ಲಿ ಕೂರದೆ ಈಗಷ್ಟೆ ಹರೆಬಂದ ಹೋರಿಯಂತೆ ಸದಾ ಚಡಪಡಿಸುವುದನ್ನು ನೋಡಿ ಪುರದ ಹೆಣ್ಣುಗಳು ನಿಟ್ಟುಸಿರು ಬಿಡುವುದನ್ನು ನೋಡಿದ್ದೇನೆ. ಈಚೆಗಷ್ಟೇ ಅವನ ಸ್ವರಭಂಗವಾದುದರಿಂದ ಇನ್ನು ತಡಮಾಡುವಂತಿಲ್ಲ. ವಿವಾಹಕಾರ್ಯವ ನೆರವೇರಿಸಿ ಪಟ್ಟಾಭಿಷೇಕವ ಮಾಡಬೇಕೆಂದು ಸಮಸ್ತರ ಒಮ್ಮತ ಪಡೆದುದಾಗಿದೆ. ಆದರೆ ರಾಜಕುಮಾರನು ಸಲಕ್ಕೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾನೆ. ಎಷ್ಟೆಷ್ಟೋ ಕನ್ಯೆಯರನ್ನು ತೋರಿಸಿ ನಿರಾಶೆ ಹೊಂದಲಾಯ್ತು. ಈಗೀಗಂತೂ ಇವನು ಮೆಚ್ಚುವ ಕನ್ಯೆ ಭೂಮಂಡಲದಲ್ಲಿ ಇದ್ದಾಳೆಯೇ ಎಂದು ದಿಗಿಲಾಗಿದೆ. ಅವನು ನೆಪ ಹೇಳಿ ವಿವಾಹವನ್ನು ಮುಂದೂಡಿದಷ್ಟೂ ನನ್ನ ಚಿಂತೆ, ಗಾಬರಿಗಳು ಬೆಳೆಯುತ್ತಿವೆ. ಇರಲಿ, ಈಗ ರಾಜಕುಮರನನ್ನು ಕರೆಸಿ ಮದುವೆಗೆ ಒತ್ತಾಯ ಮಾಡಲೇಬೇಕು. ಅಯ್ಯಾ ಭಾಗವತರೇ….

ಭಾಗವತ : ಅಮ್ಮಾ ….

ತಾಯಿ : ರಾಜಕುಮಾರನನ್ನು ಕೂಡಲೇ ಕರೆಸಿ.

ರಾಜಕುಮಾರ : (ಪ್ರವೇಶಿಸಿ) ಅಮ್ಮಾ, ನಿಮ್ಮ ಅಡಿದಾವರೆಗಳಲ್ಲಿ ವಂದಿಸುತ್ತೇನೆ. ತಟ್ಟನೆ ಬರಬೇಕೆಂದು ಹೇಳಿ ಕಳಿಸಿದಿರಲ್ಲಾ; ಕಾರಣವೇನು ತಾಯಿ?

ತಾಯಿ : ಮಗನೆ –

ಭಾಗವತ : ಜನನಿಯೆಂದಳು ಮಗನೆ ನಿನ್ನಯ
ಧ್ವನಿಯು ಬಿರಿತುದರಿಂದ ಈಗಳೆ
ಮದುವೆಯಗುವುದುಚಿತ ಕೇಳ್ಯೆ |
ನಾರಿಯೋರ್ವಳ ವರಿಸಿ ಧರಣಿಯನಾಳಯ್ಯ
ಮಾತೆಯ ಮುದಗೊಳಿಸಿ ಬಾಳಯ್ಯ ||

ತಾಯಿ : ಕಂದಾ ಅತಿಮುಖ್ಯವಾದ ವಿಚಾರವೊಂದನ್ನು ವಿನಿಮಯ ಮಾಡಲಿಕ್ಕಾಗಿ ನಿನ್ನನ್ನು ಕರೆಸಿದ್ದಾಯ್ತು. ಅಬಲೆಯಾಗಿ ವೃದ್ಧೆಯಾಗುತ್ತಿರುವ ನನಗೆ ಇನ್ನು ರಾಜ್ಯದ ಜವಾಬ್ದಾರಿ ನೀಗುವುದಿಲ್ಲವಾಗಿ ನಿನಗೆ ಸೂಕ್ತ ವಿಧಿಯಲ್ಲಿ ವಿವಾಹ ವಿಧಿಯ ನೆರವೇರಿಸಿ ಪಟ್ಟಾಭಿಷೇಕವ ಗೈದು ಮುಂದಿನ ಜೀವನವನ್ನು ವಿಶ್ರಾಂತವಾಗಿ ಕಳೆಯಬೇಕೆಂದು ನನ್ನ ಆಸೆ. ಅದಕ್ಕೆಂದೇ ವನಪುರಕ್ಕೆ ಪುರದ ಹಿರಿಯ ರನ್ನಟ್ಟಿ, ಅಲ್ಲಿಯ ಪುಷ್ಪರಾಜನ ಪುತ್ರಿ ಸಿರಿಸಂಪಿಗೆಯನ್ನು ನೋಡಿ ಒಪ್ಪಿ ಬಂದದ್ದಾಗಿದೆ. ಈಗ ನಿನ್ನ ಸಮ್ಮತಿ ಸಿಕ್ಕಬೇಕಷ್ಟೆ.

ರಾಜಕುಮಾರ : ತಾಯಿ, ಇಂತಹ ಸಣ್ಣ ವಿಚಾರಕ್ಕೆ ಎಷ್ಟೊಂದು ತಲೆ ಕೆಡಿಸಿಕೊಂಡಿರುವೆ-

ಭಾಗವತ : ಜನನಿ ಬಿಡುಚಿಂತೆ ಆತುರವು ಯಾಕೆ
ಸಣ್ಣವನು ನಾನಿನ್ನು, ಹೆಣ್ಣ ಮೋಹವು ಬೇಕೆ?

ರಾಜಕುಮಾರ : ಆಡಿಕೊಂಡಿರೋ ಮಗನ ಕತ್ತಿಗೊಂದು ಗುಂಡುಕಲ್ಲು ಕಟ್ಟಿದಂತೆ ನನಗೆ ಈಗಲೇ ಯಾಕಮ್ಮಾ ಮದುವೆ? ಹಿರಿಯಳಿದ್ದ ಮೇಲೆ ನನಗೆ ಯಾಕೆ ರಾಜ್ಯದ ಜವಾಬ್ದಾರಿ? ದಯವಿಟ್ಟು ಇಂಥ ನಿಷ್ಠುರ ವಿಚಾರಗಳನ್ನು ಹೆಳಿ ಹೇಳಿ ನನಗೆ ದುಃಖ ಕೊಡಬೇಡ ತಾಯಿ.

ತಾಯಿ : ಬೇಡವೆಂದು ಮತ್ತೆ ಮತ್ತೆ ಹೇಳಿ ನಮ್ಮ ಗಾಬರಿಗಳಿಗೆ ನೀರೆರೆಯಬೇಡ ಮಗನೆ. ಶಾಪಗಳಿಂದ, ನಿಟ್ಟುಸಿರುಗಳಿಂದ ಬೆಂದ ವಂಶ ನಮ್ಮದು. ಕುಲದೇವರ ಅಹಂಕಾರ ಕೊಂಕದ ಹಾಗೆ, ಕೆಟ್ಟ ದೈವಂಗಳ ದೃಷ್ಟಿ ತಾಗದ ಹಾಗೆ ತಪ್ಪಿಸಿ ಜಪ್ಪಿಸಿ ನಿನ್ನ ಬೆಳೆಸಿದ್ದಾಗಿದೆ. ಬೆವರಿಳಿಸಿ ಬೆಳೆಸಿದ ಸಸಿಯನ್ನು ಯಾವುದೋ ಸುಂಟರಗಾಳಿ ಬಂದು ಎತ್ತಿಕೊಂಡು ಹೋದರೆ ವಂಶದ ಗತಿಯೇನು ಕಂದಾ? ಇಷ್ಟು ದಿನ ಮಾಡಿದ ಹಟ ಇನ್ನು ಸಾಕು. ನಿನ್ನ ಮದುವೆಯ ಚಿಂತೆಯಲ್ಲೇ ನಿನ್ನ ತಾಯಿ ನೊಂದು ಬೆಂದು ಸಾಯುವುದು ನಿನಗಿಷ್ಟವಿಲ್ಲ ತಾನೆ?

ರಾಜಕುಮಾರ : ದಯಮಾಡಿ ಅಂತಹ ಮಾತನಾಡಬೇಡ ತಾಯಿ. ನಿನ್ನ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸು. ನೀವಾಯ್ದ ಕನ್ಯೆಯರಲ್ಲಿ ಒಂದಿಲ್ಲೊಂದು ಕೊರತೆ ಇದೆಯಾಗಿ ಮದುವೆ ಬೇಡವೆಂದೆನೇ ಹೊರತು ಅನ್ಯಕಾರಣವಿಲ್ಲ.

ತಾಯಿ : ಕೊರತೆಯಿಲ್ಲದ ಕನ್ಯೆ ಯಾವಳಿದ್ದಾಳೆ ಕುಮಾರ? ಅಂಥ ಕನ್ಯೆ ಬೇಕೇ ಬೇಕೆಂದರೆ ನೀನೇ ನಿನ್ನ ಹೆಂಡತಿಯಾಗಬೇಕಷ್ಟೆ.

ರಾಜಕುಮಾರ : ಕೊರತೆಯಿಲ್ಲದವಳು ಇರಲೇಬೇಕೆಂದು ನನ್ನ ನಂಬಿಕೆ ತಾಯಿ. ನನ್ನ ಸ್ವರಭಂಗವಾದಾಗಿನಿಂದ ಹಾಲಿನಲ್ಲಿರುವ ತುಪ್ಪದ ಹಾಗೆ ಅವಳೆಲ್ಲೋ ಅಡಗಿರುವಂತೆ ತೋರುತ್ತದೆ. ಮರೆಯಿಂದ ಹೊರಬರಲು ಅವಳೂ ಚಡಪಡಿಸುತ್ತಾಳೆ. ಅವಳನ್ನು ತೋರಿಸಲು ಅವಧಿ ಕೊಡಮ್ಮಾ.

ತಾಯಿ : ನೀನು ಮೆಚ್ಚಿದ ಕನ್ಯೆಯ ಹೆಸರು ಹೆಳುವುದಕ್ಕೂ ಅವಧಿ ಬೇಕೆ? ಅಥವಾ ಮದುವೆ ಮುಂದೂಡುವ ಇನ್ನೊಂದು ನೆಪ ಇದಲ್ಲ ತಾನೆ? ಆಯ್ತು. ಅವಧಿ ಕೊಟ್ಟೆ. ಇನ್ನೊಂದು ವಾರದಲ್ಲಿ ಆ ಕನ್ಯೆ ಯಾರೆಂದು ಹೇಳು. ಹೇಳಿದರೆ ಸರಿ, ಇಲ್ಲದಿದ್ದರೆ ಸಿರಿಸಂಪಿಗೆಯನ್ನು ನೀನು ಮದುವೆಯಾಗಬೇಕು. ಆದೀತೋ?

ರಾಜಕುಮಾರ : ಆಗಬಹುದು ತಾಯಿ.