ಅವಳಿ ಜವಳಿ ಹಾಡುತ್ತಾ ಬರುತ್ತಾರೆ.

ಅವಳಿ ಮತ್ತು ಜವಳಿ : ನಾನು ನೀನೂ ಭಲೆ ಭಲೆ ಜೋಡಿ
ಇಬ್ಬರು ಕೂಡಿ ಆಡಿ ಪಾಡಿ
ಅವಳಿ ಜವಳಿ ಜವಳಿ ಅವಳಿ
ನಕ್ಕೂ ನಗಿಸಿ ಅತ್ತೂ ಆಳಿಸಿ
ನಗದವರನ್ನು ನಗಿಸೋ ಜೋಡಿ
ಅಳದವರನ್ನು ಅಳಿಸೋ ಜೋಡಿ
ಹಾಸ್ಯ ಜೋಡಿ ಹಾಸ್ಯಾಸ್ಪದ ಜೋಡಿ ||

ಅವಳಿ : ಎಂಥಾ ಭಾಗವತರಪ್ಪಾ ಇವರು? ಬಂದಂಥವರನ್ನ ಮಾತನಾಡಿಸೋದಿಲ್ಲವೆ!

ಭಾಗವತ : ಏನಂತ ಮಾತಾಡಿಸಬೇಕು?

ಜವಳಿ : ಭಳಿರೇ ಪರಾಕ್ರಮ ಕಂಠೀರವ-

ಭಾಗವತ : ಆಯ್ತಪ್ಪ ಹಾಗೇ ಹೇಳೋಣ. ಇರುವಂಥಾ ಸ್ಥಳ?

ಅವಳಿ : ಶಿವಾಪುರಕ್ಕೆ ಯಾರಂತ ಕೇಳಿದ್ದೀರಿ?

ಭಾಗವತ : ರಾಜಮಾತೆ ಮಾಯಾವತಿ ದೇವಿ ಅಂತ ಕೇಳಿದ್ದೇವೆ. ಅವರೇ ನೀವ?

ಜವಳಿ : ಅವರ ಆಸ್ಥಾನದ ವಿದೂಷಕರಾದಂಥಾ, ಅಖಿಳಾಂಡ ಬ್ರಹ್ಮಂಡ ಪಿಂಡಾಂಡ – ಇಂಥಾ ಅನೇಕ ಅಂಡಗಳ ಜೀವರಾಶಿಗಳನ್ನು ನಗಿಸುವಂಥಾ, ಇಲ್ಲವೇ ಅಳಿಸುವಂಥಾ-

ಅವಳಿ : ಹಾಸ್ಯ ಚಕ್ರವರ್ತಿ, ಹಾಸ್ಯಾಸ್ಪದ ಸಾರ್ವಭೌಮ, ವಿದೂಷಕ ಜೋಡಿ ಅವಳಿ ಜವಳಿ ಯಾರೆಂದು ಬಲ್ಲಿರಿ?

ಭಾಗವತ : ಗೊತ್ತಿಲ್ಲವಲ್ಲ!

ಅವಳಿ : ಅವರೇ ನಾವು.

ಭಾಗವತ : ಓಹೋ ನೀವೆಯೋ ಅವಳಿ ಜವಳಿ ಅಂದರೆ; ನಿಮ್ಮಲ್ಲಿ ಅಣ್ಣ ಯಾರು, ತಮ್ಮ ಯಾರು?

ಜವಳಿ : ನಾನು ಅಣ್ಣ, ಇವನು ತಮ್ಮ.

ಅವಳಿ : ಅಲ್ಲ ಭಾಗವತರೇ, ನಾನು ಅಣ್ಣ, ಇವನು ತಮ್ಮ.

ಭಾಗವತ : ನಿಮ್ಮಲ್ಲೇ ಏಕಾಭಿಪ್ರಾಯ ಇಲ್ಲವೆ?

ಇಬ್ಬರೂ : ಯಾಕಿಲ್ಲ? ಅದೂ ಇದೆ. ನಾನು ಅಣ್ಣ ಅಥವಾ ತಮ್ಮ ಭಾಗವತರೇ, ನಾವಿಬ್ಬರೂ ಭಾರೀ ಗಳಸ್ಯ ಕಂಠಸ್ಯ.

ಭಾಗವತ : ನಿಮ್ಮಲ್ಲಿ ಗಳಸ್ಯ ಯಾರು, ಕಂಠಸ್ಯ ಯಾರು?

ಇಬ್ಬರೂ : ನಾನು ಗಳಸ್ಯ ಅಥವಾ ಕಂಠಸ್ಯ ಭಾಗವತರೇ.

ಭಾಗವತ : ಒಗಟೊಗಟಾಗಿದೆಯಪ್ಪ!

ಅವಳಿ : ಸ್ವಾಮಿ ಭಾಗವತರೇ, ಒಂದು ಒಗಟು ಹೇಳ್ತೀನಿ, ಒಡೀತೀರಾ?

ಭಾಗವತ : ಅದೇನಪ್ಪಾ?

ಅವಳಿ : ಅದಿದ್ದರೆ ಇದಿಲ್ಲ, ಇದಿದ್ದರೆ ಅದಿಲ್ಲ. ಏನು ಹೇಳಿ?

ಭಾಗವತ : ಗೊತ್ತಾಗಲಿಲ್ಲವಲ್ಲ.

ಜವಳಿ : ಹಾಗಾದರೆ ಸೋತಿರೊ?

ಭಾಗವತ : ಸೋತೆ.

ಅವಳಿ : ಅಂದರೆ ಹೆಣ್ಣಿದೆ ಗಂಡಿಲ್ಲ, ಗಂಡಿದೆ ಹೆಣ್ಣಿಲ್ಲ ಅಂತ.

ಭಾಗವತ : ಅಂದರೆ?

ಅವಳಿ : ನಮ್ಮ ಮಿತ್ರ ರಾಜಕುಮಾರ ಇದ್ದಾನಲ್ಲಾ – ಅವನಿಗೆ ಹೆಣ್ಣಿದೆ, ಮದುವೆ ಮಾಡಿಕೋ ಕುಮಾರ ಅಂದರೆ ಆಗೋದಿಲ್ಲಾ ಅಂತಾನೆ. ನಾವಿದ್ದೀವಲ್ಲ ಗಂಡಸರು, ಮದುವೆ ಬೇಕು ಅಂತೀವಿ. ಹೆಣ್ಣು ಕೊಡೋರಿಲ್ಲ.

ಭಾಗವತ : ಒಂದು ಹೆಣ್ಣಿದೆ, ಮದುವೆ ಮಾಡಿಕೊಳ್ತೀರಾ?

ಇಬ್ಬರೂ : ಓಹೋ!

ಭಾಗವತ : ಒಂದೇ ಹೆಣ್ಣು, ಇಬ್ಬರು ಹ್ಯಾಗಪ್ಪಾ ಮದುವೆ ಆಗ್ತೀರಿ?

ಅವಳಿ : ಹೌದಲ್ಲ! ಅಣ್ಣಾ ಜವಳಿ, ನೀನೇ ಮದುವೆ ಮಾಡಿಕೊ.

ಜವಳಿ : ಸರಿ. ನಾನು ಮದುವೆ ಆದೆ ಅಂತಿಟ್ಟುಕೊಳ್ಳೋಣ. ನೀನೂ ನನ್ನ ಹಾಗೇ ಇರೋದರಿಂದ ನನ್ನ ಹೆಂಡತಿ ನಾನೇ ಅಂತ ನಿನ್ನನ್ನ ಸೇರಿಬಿಟ್ಟರೆ? ಬೇಡ, ಬೇಡ, ನೀನೇ ಮದುವೆ ಆಗು.

ಅವಳಿ : ಏನೆಂದೆ?

ಜವಳಿ : ಅದೇ, ಈಗ ನೀನು ಏನನ್ನ ಕೇಳಿಸಿಕೊಂಡೆಯೋ ಅದನ್ನ.

ಅವಳಿ : ನೀನೇ ಮದುವೆ ಆಗು ಅಂದೆ.

ಜವಳಿ : ನೀನಾಗು ಅಂದೆ.

ಅವಳಿ : (ಕೋಪದಿಂದ) ನನಗೆರಡೂ ಕೋರೆ ಹಲ್ಲು ಇದ್ದಿದ್ದರೆ ನಿನ್ನ ರಕ್ತ ಹೀರುತ್ತಿದ್ದೆ. ನಿನ್ನನ್ನ ಬಿಟ್ಟಿರೋದು ಅವಿಲ್ಲದ್ದರಿಂದ.

ಜವಳಿ : (ಕೋಪದಿಂದ) ನನಗೆರಡು ಕೊಂಬು ಇದ್ದಿದ್ದರೆ ನಿನ್ನ ಹೊಟ್ಟೆಗೆ ಇರಿಯುತ್ತಿದ್ದೆ. ನಿನ್ನನ್ನು ಬಿಟ್ಟಿರೋದು ಅವಿಲ್ಲದ್ದರಿಂದ.

ಇಷ್ಟರಲ್ಲಿ ಪುರಸ್ತ್ರೀ ನರ್ತಿಸುತ್ತ ಬರುತ್ತಾಳೆ. ಇಬ್ಬರೂ ಜಗಳ ಮರೆತು ಮೈಮರೆಯುತ್ತಾರೆ.

ಭಾಗವತ : ಯಾರಮ್ಮಾ ನೀನು?

ಪುರಸ್ತ್ರೀ : ಒಳ್ಳೇ ಭಾಗವತರು. ನನಗೊಂದು ವರ ಬೇಕು, ನೋಡಿ ಅಂತ ನಿಮಗೆ ಹೇಳಿದವಳು ನಾನೇ ಅಲ್ಲವ?

ಭಾಗವತ : ಓಹೋ ಹೌದಲ್ಲವೇ? ನಿನ್ನ ಹೆಸರನ್ನ ಮರೆತಿದ್ದೇನೆ ಅನ್ನೋದು ಈಗ ನೆನಪಾಯ್ತು. ಏನಮ್ಮ ನಿನ್ನ ಹೆಸರು?

ಪುರಸ್ತ್ರೀ : ಪುನಃ ಹೇಳಬೇಕೋ? ಹಾಗಿದ್ದರೆ ಕೇಳೀ: ಕೆಸರು ತೌರು ಮನೆ, ನೀರು ನೆಂಟರ ಮನೆ, ಬೆಳಕಿನ ಗಂಡನ್ನೋಡಿ ದಳ ದಳ ಅರಳುತ್ತದೆ. ಏನು ಹೇಳಿ?

ಜವಳಿ : ನಾನು ಹೇಳಲಾ ಭಾಗವತರೆ?

ಭಾಗವತ : ಹೇಳಪ್ಪಾ.

ಜವಳಿ : ಕೆಸರು ನಿನ್ನ ತೌರುಮನೆ
ಮಳೆಯ ನೀರು ಬೀಗರಮನೆ
ಗಂಡು ಬೆಳಕು ಕಂದೀಲಿಗೆ
ಅರಳುವಾಕೆ ನೀನಲ್ಲವೆ?
ನಿನ್ನ ಹೆಸರು ವಂಡರಗಪ್ಪೆ |
ಅಲ್ಲವೇನೆ ನಿನ್ನ ಹೆಸರು ವಂಡರಗಪ್ಪೆ ||

ಜವಳಿಯನ್ನು ಬಿಟ್ಟು ಉಳಿದವರೆಲ್ಲ ನಗುವರು.

ಅವಳಿ : ದಡ್ಡತನ ತೋರಿಸೋದಕ್ಕೆ ಎಷ್ಟೊಂದು ಉತ್ಸಾಹ ನೋಡಿ. ಅವನ ದಡ್ಡತನವನ್ನು ಕ್ಷಮಿಸಿ ಭಾಗವತರೆ, ನಾನು ಹೇಳಲಾ?

ಭಾಗವತ : ಆಗಲಪ್ಪಾ.

ಅವಳಿ : ಕೆಸರಿನಲ್ಲಿ ಹುಟ್ಟುವಾಕೆ
ನೀರಿನಲ್ಲಿ ತೇಲುವಾಕೆ
ಬೆಳಕಿನಲ್ಲಿ ಅರಳುವಾಕೆ
ಹಸಿರು ಪಾಚಿ ನೀನಲ್ಲವೆ |
ಎಲೆಲೆ ಹೆಣ್ಣೆ | ಪಾಚಿ ನಿನ್ನ ಹೆಸರಲ್ಲವೇ ||

ಅವಳಿಯನ್ನು ಬಿಟ್ಟು ಉಳಿದವರು ನಗುವರು.

ಭಾಗವತ : ಇಷ್ಟೂ ತಿಳಿಯೋದಿಲ್ಲವೇನ್ರಯ್ಯಾ, ಈಕೆಯ ಹೆಸರು ಕಮಲ.

ಅವಳಿ : ನನಗೆ ಗೊತ್ತಿತ್ತು ಭಾಗವತರೇ. ಇವಳು ನಕ್ಕಾಗ ಚೆಂದ ಕಾಣಿಸುತ್ತಾಳೆ ನೋಡಿ, ಅದಕ್ಕೇ ನಗಿಸೋಣ ಅಂತ ಹಾಗೆ ಹೇಳಿದೆ. (ಕಮಲಳ ಮುಂದೆ ಮೊಳ ಕಾಲೂರಿ) ದೇವೀ ಇಷ್ಟನ್ನು ಆಣೆಮಾಡಿ ಹೇಳುತ್ತೇನೆ; ಸತೀವ್ರತನಾಗಿ ಸತಿಸೇವೆ ಮಾಡುತ್ತ ಹೇಳಿದಲ್ಲಿ ಬಿದ್ದುಕೊಂಡಿರುವ ನಿನ್ನ ವಿನಮ್ರ ಗಂಡನಾಗೋದು ನನ್ನ ಬದುಕಿನ ಗುರಿ. ಇದನ್ನು ಈಡೇರಿಸಲಾರೆಯಾ?

ಜವಳಿ : ತ್ಯಾಗದಲ್ಲಿ ನಾನೇನು ಕಮ್ಮಿ? ಅಯ್ಯಾ ಅವಳಿ, ನಿನಗೋಸ್ಕರ ಮದುವೆ ಯಾಗಬಾರದೆಂಬ ನನ್ನ ಛಲವನ್ನೇ ತ್ಯಾಗ ಮಾಡಿ, ನಾನೇ ಇವಳನ್ನು ಮದುವೆ ಆಗ್ತೇನೆ, ಆಯ್ತ? ದೇವೀ, ನನ್ನ ಆಸೆಯನ್ನು ಈಡೇರಿಸಲಾರೆಯಾ?

ಕಮಲಳ ಮುಂದೆ ಇವನೂ ಮೊಳಕಾಲೂರಿ ಕೂರುತ್ತಾನೆ.

ಅವಳಿ : ನಾನು ಏನು ಹೇಳಿದರೂ ಅದನ್ನೇ ಹೇಳ್ತಿಯಲ್ಲಯ್ಯಾ.

ಜವಳಿ : ನಾನೂ ಅದನ್ನೇ ಕೇಳ್ತಿರೋದು.

ಅವಳಿ : ನನಗೆಷ್ಟು ಕೋಪ ಬಂದಿದೆ ಗೊತ್ತಾ?

ಜವಳಿ : ಎಷ್ಟು?

ಅವಳಿ : ತುಂಬ ಅಂದರೆ ವಿಪರೀತ ಅಂದರೆ ಭಯಂಕರ ಅಂದರೆ ಕೋಪದಲ್ಲಿ ಕತಕತ ಕುದೀತಿದ್ದೀನಿ.

ಜವಳಿ : ಕುದೀತಾ ಇದ್ದೀ ತಾನೆ? ಅದರಲ್ಲಿ ನನ್ನ ಬೇಳೆ ಬೇಯಿಸಿಕೊಳ್ತೇನೆ, ಅವಕಾಶ ಮಾಡಿಕೊಡಣ್ಣಾ.

ಅವಳಿ : ಹ್ಯಾಗೆ?

ಜವಳಿ : ನಾನು ಹೇಳಿದ ಹಾಗೆ ಹೇಳಿದರಾಯ್ತು. ಇಲ್ಲಿ ಹೇಳು ನೋಡೋಣ. (ತನ್ನೆದೆ ತಟ್ಟಿಕೊಳ್ಳುತ್ತ) ಕಮಲ ನನ್ನವಳು.

ಅವಳಿ : (ತನ್ನೆದೆ ತಟ್ಟಿಕೊಳ್ಳುತ್ತ) ಕಮಲ ನನ್ನವಳು.

ಜವಳಿ :  (ಅವಳಿಯ ಬೆರಳಿಂದ ತನ್ನನ್ನು ತೋರಿಸುತ್ತ) ಛೇ ನಿನ್ನವಳು ಅನ್ನಪ್ಪಾ.

ಅವಳಿ : (ಜವಳಿಯ ಬೆರಳಿಂದ ತನ್ನನ್ನು ತೋರಿಸುತ್ತ) ಛೇ ನಿನ್ನವಳು ಅನ್ನಪ್ಪಾ.

ಜವಳಿ : ದಯಮಾಡಿ ಆ ಮಾತು ಬಿಟ್ಟು ಇನ್ನೇನಾದರೂ ಬೊಗಳ್ತೀಯಾ?

ಅವಳಿ : ದಯಮಾಡಿ ಇನ್ನೇನಾದರೂ ಬೊಗಳ್ತೀಯಾ?

ಜವಳಿ : ನನಗೆ ಗೊತ್ತಿತ್ತು ಭಾಗವತರೆ, ಇವನು ಅಣ್ಣ ಅಥವಾ ತಮ್ಮನಲ್ಲ; ಇಲಿ ಹೆಗ್ಗಣ ಅಂತ. ಇಬ್ಬರ ಮಧ್ಯೆ ಇದ್ದ ಸಂಬಂಧ ಸೂತ್ರಗಳನ್ನ ಎಷ್ಟು ಸಲೀಸಾಗಿ ಕಚ್ಚಿಬಿಟ್ಟ ನೋಡಿ!

ಅವಳಿ : ನನಗೆ ಗೊತ್ತಿತ್ತು ಭಾಗವತರೆ, ಇವನು ಅಣ್ಣ ಅಥವಾ ತಮ್ಮನಲ್ಲ, ತೋಳ ಅಥವಾ ನರಿ ಅಂತ. ಇಬ್ಬರ ಮಧ್ಯೆ ಇದ್ದ ಕರುಳನ್ನು ಹ್ಯಾಗೆ ತಿಂದುಬಿಟ್ಟು ನೋಡಿ! ಜಗತ್ತಿನ ಅತಿದೊಡ್ಡ ಭ್ರಾತೃದ್ರೋಹವೊಂದನ್ನು ನೋಡಿ ಸಾಯಬೇಕಂತ ಸಂಕಲ್ಪ ಮಾಡಿದ್ದೆ. ಅದನ್ನೀಗ ನೋಡಿಯಾಯ್ತು.  ನಾನೀಗ ಸಾಯ ಬೇಕು. ಬರತ್ತೀನಿ ಭಾಗವತರೇ?

ಭಾಗವತ : ಸತ್ತ ಮೇಲೆ ಹೇಗಪ್ಪ ಬರುತ್ತಿ?

ಜವಳಿ : ನನ್ನ ಕೊಲೆ ಮಾಡೋದಕ್ಕೆ ಹ್ಯಾಗೋ ಬರುತ್ತಾನೆ ಭಾಗವತರೇ. ಅಕ್ಕಪಕ್ಕ ಯಾರಾದರೂ ಚಿಲ್ಲರೆ ದೇವತೆಗಳಿದ್ದರೆ ಬಂದು ಕಾಪಾಡಿಯಪ್ಪಾ.

ಭಾಗವತ : ಏನ್ರಯ್ಯಾ ಇದು? ಕಮಲ ಅಂದರೆ ಲಾಟರಿ ಅಂದುಕೊಂಡಿರಾ? ನಿಮ್ಮಿಬ್ಬರಲ್ಲಿ ತನಗೆ ಯಾರು ಇಷ್ಟ ಅಂತ ಹೇಳಬೇಕಾದವಳು ಅವಳಲ್ಲವೊ? ಕಮಲ, ಈಗ ನಿನ್ನ ಗಂಡನ್ನ ನೀನೇ ಆಯ್ದುಕೊಳ್ಳಮ್ಮಾ.

ಕಮಲ : ಹ್ಯಾಗೆ ಸಾಧ್ಯ ಭಾಗವತರೇ? ಇಬ್ಬರೂ ಒಂದೇ ಥರಾ ಇದ್ದಾರೆ. ಇಬ್ಬರೂ ದ್ವಂದ್ವಯುದ್ಧ ಮಾಡಲಿ. ಗೆದ್ದವನೇ ನನ್ನ ಆಯ್ಕೆ. ಆದೀತೊ?

ಅವಳಿ : ಒಪ್ಪಿದೆ. ಇಕೋ ಯುದ್ಧಕ್ಕೆ ಸಿದ್ಧನಾದೆ. (ಜವಳಿಗೆ) ಎಲವೆಲವೋ ಹೆಂಬೇಡಿ, ಕಂತ್ರಿನಾಯಿ, ಹಂದಿ….

ಜವಳಿ : ನಿನ್ನ ಬಿರುದಾವಳಿಗಳನ್ನ ನನ್ನ ಮುಂದೆ ಬೊಗಳಬೇಡವೊ. ಈಗಲೇ ಯುದ್ಧಕ್ಕೆ ಬಾ. ಇದೊ ಸಹಿಸಿಕೊ.

ಹೋಗಿ ಅವನಿಗೆ ಏಟು ಹಾಕುತ್ತಾನೆ. ಅವಳಿ ಅಳುತ್ತಾನೆ.

ಅವಳಿ : ಅಯ್ಯೊ ಅಯ್ಯೊ…. ಕುಲದೇವರೇ, ಕಾಪಾಡಪ್ಪ. ಈಗ ನೀನೇನಾದರೂ ಇಲ್ಲಿಗೆ ಬಂದರೆ ಒಂದು ವರ ಕೊಡಪ್ಪಾ. ಅದೇನೆಂದರೆ….

ಜವಳಿ : ಕಮಲ ನನ್ನ ಹೆಂಡತಿಯಾಗಲಿ.

ಕಮಲ : ತಥಾಸ್ತು (ಎಂದು ಜವಳಿಯ ಕೈ ಹಿಡಿಯುವಳು)

ಭಾಗವತ : ಆಯ್ತಲ್ಲ; ಸ್ವಯಂ ಕಮಲೂನೇ ಜಗಳ ಬಗೆಹರಿಸಿದಳು. ಇನ್ನು ಇಬ್ಬರೂ ನೆಮ್ಮದಿಯಿಂದ ಇರಬಹುದಲ್ಲಾ.

ಅವಳಿ : ಇನ್ನೆಲ್ಲಿಯ ನೆಮ್ಮದಿ ಭಾಗವತರೇ? ಕಾಡಿನಲ್ಲಿ ತಪಸ್ಸು ಮಾಡಿ ದೇವರಾಗಿ ತಿರುಗಿ ಬಂದು. ಇವರಿಬ್ಬರಿಗೂ ಸಾವಿನ ವರ ನೀಡುತ್ತೇನೆ. ಇಕೋ ಕಾಡಿಗೆ ಹೊರಟೆ.

ಜವಳಿ : ಇರು ಇರು. ನಮ್ಮ ಮದುವೆ ನೋಡಿ ಹೊಟ್ಟೆಕಿಚ್ಚಿನಿಂದ ಸುಟ್ಟುಕೊಳ್ಳುತ್ತ ಹೋಗು. ಭಾಗವತರೇ, ನಮಗೆ ಆಶೀರ್ವಾದ ಮಾಡಿ.

ಜವಳಿ ಮತ್ತು ಕಮಲ ಭಾಗವತನಿಗೆ ನಮಸ್ಕರಿಸುತ್ತಾರೆ. ಭಾಗವತ ಆಶೀರ್ವದಿಸುತ್ತಾನೆ.

ಅವಳಿ : (ದುಃಖಸುತ್ತಾ) ಅಯ್ಯಾ ಭಾಗವತರೇ,ಕೊನೆಯ ಮಾತೊಂದಿದೆಯಲ್ಲ.

ಭಾಗವತ : ಅದೇನಪ್ಪಾ?

ಅವಳಿ : ನಮ್ಮ ಮಿತ್ರ ರಾಜಕುಮಾರನ ಸೇವೆಯನ್ನು ಇಬ್ಬರೂ ಮಾಡಿಕೊಂಡು ಬಂದೆವು. ಈಗ ನಾನು ಕಾಡಿಗೆ ಹೋಗುತ್ತಿದ್ದೇನೆ. ಇವನು ಅದನ್ನ ಹೃತ್ಪೂರ್ವಕ ನಡೆಸಿಕೊಂಡು ಹೋಗುತ್ತಾನೋ ಕೇಳಿ. ಯಾಕೆಂದರೆ ನಾನಿಲ್ಲದಾಗ ರಾಜಕುಮಾರ ‘ಮಿತ್ರಾ ಅವಳಿ’ ಎಂದು ಕಂಗಾಲಾಗಿ ಪರಿಸಪಿಸುವುದನ್ನ ಕಲ್ಪಿಸಿಕೊಂಡರೇ ನನಗೆ ದುಃಖವುಕ್ಕಿ ಬರುತ್ತದೆ.

ಜವಳಿ : ಇವನು ಈಗಲೇ ಊರು ಬಿಡೋದಾದರೆ ಏನೇನೂ ಕೊರತೆಯಾಗದ ಹಾಗೆ ರಾಜಕುಮಾರನ ಸೇವೆ ಮಾಡುತ್ತೇನೆ ಅಂತ ಹೆಳಿ ಭಾಗವತರೇ.

ಅವಳಿ : ಹಾಗಾದರೆ ರಾಜಕುಮಾರ ಮಲಗೋ ಹೊತ್ತಾಯ್ತು. ಕಾವಲಿಗೆ ಹೋಗೆಂದು ಹೇಳಿ ಭಾಗವತರೇ.

ಜವಳಿ : ಆದರೆ ಇವನು ಊರು ಬಿಟ್ಟದ್ದು ಖಾತ್ರಿಯಾಗೋತನಕ ನಾನಿವಳನ್ನ ಖಂಡಿತ ಬಿಟ್ಟಿರಲಾರೆ ಭಾಗವತರೇ.

ಅವಳಿ ಅಳುತ್ತ ಹೊರಡುವನು

ಜವಳಿ : ಹೋಗಯ್ಯಾ ಅಣ್ಣ ಅಥವಾ ತಮ್ಮಾ. ನದಿ ಒಣಗಿದೆ. ಅದರ ಗುಂಟ ಕಣ್ಣೀರು ಸುರಿಸು. ತುಂಬಿ ಹರಿಯುತ್ತೋ ನೋಡೋಣ.