ಭಾಗವತ ಮತ್ತವನ ಮೇಳ

ಭಾಗವತ : ಇಂತು ಕುಮಾರನು ಇಂದ್ರ ನಿವಾಸದಿ
ಚಿಂತೆಯಿಂದ ಮಲಗಿರಲಾಗಿ
ಬಂತೇ ದೀಪದ ಪ್ರತಿಮೆಗೆ ಜೀವವು
ಭ್ರಾಂತಿಯಾಗುತಿದೆ ಜೀವಕ್ಕೆ
ಕಾಂತಾ ಎನ್ನುತ ಸನ್ನೆ ಮಾಡುತೇ
ಕಾಂತಕೆ ಕರೆವುದುದ ಅಚ್ಚರಿಯೇ
ಒರೆಯ ಕತ್ತಿ ತಾ ಹೊರಬಗಡೆ ಬಂದಿತು
ಚುರುಕು ಮುಟ್ಟಿಸಿತು ತೊಡೆಗಳಿಗೆ ||

ಮೇಲಿನ ಹಾಡು ನಡೆಯುತ್ತಿರುವಾಗ ದೀಪ ಹಿಡಿದ ದಹೆಣ್ಣಿನ ಮೂರ್ತಿ ಜೀವಗೊಂಡು ನರ್ತಿಸುತ್ತದೆ. ರಾಜಕುಮಾರನಿಗೆ ಎಚ್ಚರವಾಗಿ ಅದನ್ನು ಹಿಡಿಯಹೋದಾಗ ಅದು ನರ್ತಿಸುತ್ತ ಅವನಲ್ಲಿ ಮಾಯವಾಗುತ್ತದೆ. ರಾಜಕುಮಾರ ವಿಪರೀತ ಉದ್ರೇಕದ ಸ್ಥಿತಿಯಲ್ಲಿದ್ದಾನೆ.

ರಾಜಕುಮಾರ : ಎಲಾ! ಏನೀ ಅದ್ಭುತ! ಯಾವುಳೋ ಶಪಿತ ದೇವತೆ ಇಷ್ಟು ದಿನ ಕಲ್ಲಾಗಿದ್ದವಳು ಈಗ ಶಾಪಮುಕ್ತಳಾಗಿ ಜೀವ ತಳೆದಿರಬಹುದೇ?…. ಅಥವಾ ನನ್ನಲ್ಲಿ ಅನುರಾಗ ಹೊಂದಿದ ಅಪ್ಸರೆಯೊಬ್ಬಳು ಕಲ್ಲಿನಲ್ಲಿ ಹುದುಗಿ ನನಗಾಗಿ ಕಾಯುತ್ತಾ ಈಗ ಕಲ್ಲಿನ ಮುಚ್ಚುಮರೆಯಿಂದ ಅರಳಿ ಹೊರ ಬಂದಿರಬಹುದೇ? ಸುಡುವ ಬೆಳಕನ್ನೇ ಅಂಗೈಯಲ್ಲಿ ಇಟ್ಟುಕೊಂಡು ಕುಣಿದಾಡುತ್ತ ಮಿಂಚಾಗಿ ಸಂಚರಿಸುತ್ತ ನನ್ನ ಮೈಯಲ್ಲಿ ಅಡಗಿದಳಲ್ಲ! ನನ್ನನ್ನು ಹೊರತುಪಡಿಸಿ ಮದುವೆ ಮಾಡಿಕೋ ಎಂಬುದಾಗಿ ಸೂಚಿಸಿರಬಹುದೇ? ಹೌದು. ಬಹುದಿನಗಳಿಂದ ನಾನು ಬಯಸುತ್ತಿದ್ದ ಕಾಮಿನಿ ಇವಳೇ ಇರಬಹುದು. ಹಾಗಿದ್ದರೆ ನನ್ನ ಹೆಣ್ಣು ಸಿಕ್ಕಳು! ಮಿತ್ರಾ ಎದ್ದೇಳು ಸಿಕ್ಕಳು.

ಜವಳಿ : (ಎಚ್ಚತ್ತು) ನಿದ್ದೆ ಕೂಡ ಮಾಡೋದಕ್ಕೆ ಬಿಡೋದಿಲ್ಲವಲ್ಲೋ ಮಾರಾಯಾ.

ರಾಜಕುಮಾರ : ಬೇಗ ಎಚ್ಚರಾಗು.

ಜವಳಿ : ಇನ್ನೂ ಹ್ಯಾಗೆ ಎಚ್ಚರಾಗೋದು.

ರಾಜಕುಮಾರ : ಸಿಕ್ಕಳು!

ಜವಳಿ : ಯಾರು ಸಿಕ್ಕರು? ನಾನು ಇಲ್ಲೇ ಇದ್ದೇನೆ.

ರಾಜಕುಮಾರ : ಛೇ! ನಾನು ಹೇಳೋದು ನಿನಗರ್ಥವಾಗುತ್ತಿಲ್ಲ.

ಜವಳಿ : ಅರ್ಥವಾಗುವ ಹಾಗೆ ಹೇಳು ಮಾರಾಯಾ. ಯಾವಾಕೆ ಸಿಕ್ಕಳು? ಎಲ್ಲಿದ್ದಾಳೆ? ಮಂಚದ ಕೆಳಗೆ ಅಡಗಿಸಿಟ್ಟಿದ್ದೀಯೋ?

ರಾಜಕುಮಾರ : ಚೇಷ್ಟೆ ಮಾಡಬೇಡ ದಯಮಾಡಿ ಕೇಳು….

ಜವಳಿ : ದಯಮಾಡಿ ಹೇಳು.

ರಾಜಕುಮಾರ : ನನ್ನ ಪಾಡಿಗೆ ನಾನು ಘನವಾದ ನಿದ್ದೆಯಲ್ಲಿದ್ದಾಗ ಅಖಂಡವಾದ ಅರಮನೆಯ ಗೋಡೆ ಬಿರಿದಂತಾಯ್ತು. ಒರೆಯ ಖಡ್ಗವನ್ನು ಹಿರಿದು ಯಾರೋ ನನ್ನ ತೊಡೆಗೆ ಚುರುಕು ಮುಟ್ಟಿಸಿದರು. ತಕ್ಷಣ ಎಚ್ಚರವಾಯ್ತು. ಎದ್ದು ಕೂತೆ. ನೋಡಿದರೆ ಮೂಲೆಯಲ್ಲಿ ಬಚ್ಚಿಟ್ಟ ಕನಸುಗಳು ಪ್ರತ್ಯಕ್ಷವಾದ ಹಾಗೆ ಅಕೋ ಆ ಮೂಲೆಯಲ್ಲಿ ದೀಪದ ಮೊಲ್ಲೆ ಇತ್ತಲ್ಲ ಅದಕ್ಕೆ ಜೀವ ತುಂಬಿತು. ಯೌವನದಿಂದ ಕುಸುಮಿಸಿದ ಮುಖವನ್ನು ಅರಳಿಸುತ್ತ ನಸುನಗುತ್ತಿದ್ದಳು. ಅದು…. ಅಲ್ಲ ಅವಳು…. ನೋಡು ನೋಡುತ್ತಿದ್ದಂತೆ ಅಂಗೈಯಲ್ಲಿ ಆರತಿ ಹಿಡಿದು ನನ್ನ ಸುತ್ತು ಕುಣಿಯಲಾರಂಭಿಸಿದಳು. ಕುಣಿಯುತ್ತಾ ನನ್ನ ಅಂಗಾಂಗಗಳ ಮೇಲೆ ತನ್ನ ದೃಷ್ಟಿಗಳ ಸುರಿಸುತ್ತಾ ಮೈತುಂಬಾ ಹರುಷದ ಬಳ್ಳಿ ಹಬ್ಬಿಸುತ್ತಾ ಗಟ್ಟಿಯಾಗಿ- ಉಸಿರುಗಟ್ಟಿ ಒದ್ದಾಡುವಷ್ಟು ಗಟ್ಟಿಯಾಗಿ-ತಬ್ಬಿಕೊಂಡು ನನ್ನಲ್ಲಿ ಐಕ್ಯವಾದಳು!

ಜವಳಿ : ನೀನು ಹೇಳೋದನ್ನು ಕೇಳಿದರೆ ಇದ್ಯಾವುದೋ ಹೆಣ್ಣು ಭೂತದ ಚೇಷ್ಟೆ ಇದ್ದಿರಬೇಕು ಅನ್ನಿಸುತ್ತದೆ. ಮಿತ್ರಾ, ಮಲಗುವಾಗ ನೀನು ತುಂಬಿದ ಚೊಂಬನ್ನು ತಲೆದಿಂಬಿಗೆ ಇಟ್ಟುಕೊಳ್ಳುವುದು ಒಳ್ಳೆಯದು. ಯಾಕಂತಿಯೊ? ಭೂತಗಳು ಹತ್ತಿರ ಸುಳಿಯೋದಿಲ್ಲ.

ರಾಜಕುಮಾರ : ಅದು ಭೂತವಲ್ಲಯ್ಯ. ನಿನಗೆ ಹ್ಯಾಗೆ ಹೇಳೋದು? ಅಗೋ ಆ ಮೂಲೆಯಲ್ಲಿ ದೀಪದ ಮೊಲ್ಲೆ ಇತ್ತಲ್ಲ ನೆನಪಿದೆಯಾ?

ಜವಳಿ : ಹೌದು. ಅದೆಲ್ಲಿಗೆ ಹೋಯ್ತು?

ರಾಜಕುಮಾರ : ಹೇಳಲ್ಲಿಲ್ಲವೇ ಅದಕ್ಕೆ ಜೀವತುಂಬಿ ಕುಣಿಯುತ್ತಾ ನನ್ನಲ್ಲಿ ಐಕ್ಯವಾಯಿತು ಅಂತ. ನನ್ನ ಪುಳಕವಿನ್ನೂ ಹಾಗೆಯೇ ಇದೆ. ಈಗಲೇ ತಾಯಿಯ ಬಳಿಗೆ ಓಡು. ಬೆಳಿಗ್ಗೆ ಸಮಸ್ತರ ಓಲಗ ಕೂಡಿಸುವಂತೆ ಹೇಳು.

ಜವಳಿ : ಬೆಳಗಾದರೂ ಆಗಲಿ ಮಾರಾಯ.

ರಾಜಕುಮಾರ : ಛೇ, ಆಗಿರೋ ಬೆಳಗೂ ನಿನ್ನ ಕಣ್ಣಿಗೆ ಕಾಣಿಸುವುದಿಲ್ಲವಲ್ಲ. ತಾಯಿ ಆತಂಕದಲ್ಲಿದ್ದಾಳೆ. ಬೇಗನೆ ಹೋಗಿ, ರಾಜಕುಮಾರ ಮದುವೆಗೆ ಕೆಲವು ಕರಾರುಗಳ ಮೇರೆಗೆ ಒಪ್ಪಿಕೊಂಡಿದ್ದಾನೆ ಅನ್ನು.

ಜವಳಿ : ಏನು? ಮದುವೆಗೆ ಒಪ್ಪಿಕೊಂಡಾಯ್ತಾ? ಯಾವಳಪ್ಪ ಆ ಚೆಲವೆ?

ರಾಜಕುಮಾರ : ಹೇಳ್ತೀನಿ, ಮೊದಲು ಹೋಗಿ ಹೇಳು.

ಜವಳಿ ಹೋಗುವನು.