ಅರಮನೆ, ತಾಯಿ, ರಾಜಕುಮಾರ ಮತ್ತು ಹಿರಿಯರು

ಭಾಗವತ : ಸಡಗರದಲಿ ಸುದ್ದಿ ಕೇಳಿ ತಾಯಿ ಎದ್ದಳು
ಕುಲದೈವವ ಬಲಗೊಂಡು ಶರಣು ಎಂದಳು
ಒಡನೆಯೆ ಒಡ್ಡೋಲಗದಲಿ ಸೇರಿ ಎಲ್ಲರೂ
ರಾಹು ಕಳೆದ ಚಂದ್ರನಂತೆ ಮಗನು ಬಂದನು ||

ತಾಯಿ : ಕೆಟ್ಟ ಕನಸುಗಳಿಂದ ಜರ್ಝರಿತವಾದ ನಮ್ಮ ತನುಮನಗಳಿಗೆ ಮಗನು ಮದುವೆಗೆ ಒಪ್ಪಿಕೊಂಡಿರುವನೆಂಬ ಸುದ್ದಿ ಕೇಳಿ ಏಳೇಳು ಲೋಕದ ಭಾರಿ ಆನಂದಗಳಾದುವು. ಆನಂದದ ಭರದಲ್ಲಿ ಪುರದ ಹಿರಿಯರನ್ನು ಎಲ್ಲಿದ್ದರಲ್ಲಿಂದ ಅರಮನೆಗೆ ಕರೆತಾ ಎಂದು ನಿರೂಪ ಕಳಿಸಿದ್ದಕ್ಕೆ ಅವರು ನಮ್ಮ ಮಾತಿಗೆ ಪ್ರತಿ ಇಲ್ಲದೆ ಬಂದು ತಂತಂಮ್ಮ ಸ್ಥಾನಗಳಿಗೆ ಸನ್ಮಾನಗೊಂಡಿದ್ದಾರೆ. ಸನ್ಮಾನ್ಯ ಸಮಸ್ತರೆ, ಮಗನು ಮದುವೆಗೆ ಒಪ್ಪಿಕೊಂಡಿದ್ದಾಗಿದೆ. ಅವನಿಗೆ ಕರಾರುಗಳಿವೆಯಂತೆ. ಇನ್ನು ಹೆಂಗಸರಾದ ನಮಗೆ ಈ ವಿಷಯದಲ್ಲಿ ತಿಳಿಯುವಂಥಾದ್ದೇನಿದೆ? ದೇವರಿಗೆ ಸಮ ನೀವಿದ್ದೀರಿ. ವ್ಯವಹಾರವನ್ನು ನೀವೇ ಬರೆಹರಿಸಿ ಮಾರಾಯರೆ.

ಹಿರಿಯ ೧ : ಹಿತಕರವಾದ ಸುದ್ದಿ ಕೇಳಿ ಸರ್ವರಿಗೆ ಸುಖವಾಯ್ತು ತಾಯಿ. ಹೇಳು ರಾಜಕುಮಾರ, ನಿನ್ನ ಅಭಿಪ್ರಾಯ ಸರ್ವರಿಗೆ ತಿಳಿಯಲಿ.

ರಾಜಕುಮಾರ : ಹಿರಿಯರು ಬೇರೆ ಅಲ್ಲ, ದೈವ ಬೇರೆ ಅಲ್ಲ. ನಾನು ಮದುವೆ ಆಗಬೇಕೆಂಬುದು ನಿಮ್ಮ ಇಚ್ಛೆ ಅಲ್ಲವೆ? ನಿಮ್ಮ ಇಚ್ಛೆಗೆ ನನ್ನ ಒಪ್ಪಿಗೆ ಇದೆ. ಇನ್ನುಳಿದಂತೆ ನನ್ನ ಇಚ್ಛೆಗೆ ನಿಮ್ಮ ಒಪ್ಪಿಗೆ ಬೇಕು.

ಹಿರಿಯ ೨ : ನಮ್ಮ ಒಪ್ಪಿಗೆಯೂ ಇದೆ.

ರಾಜಕುಮಾರ : ರಾಣಿಯಾಗಿ ಬರುವವಳು ನಾನು ಹೇಳಿದ ಕನ್ಯೆಗೂಸಾಗಿರಬೇಕು.

ಹಿರಿಯ ೧ : ಒಪ್ಪಿದೆವು.

ರಾಜಕುಮಾರ : ಅವಳು ಯಾವ ರೂಪದಲ್ಲಿದ್ದರೂ ಅವಳನ್ನು ತಂದೊಪ್ಪಿಸಬೇಕು.

ಹಿರಿಯ ೨ : ಒಪ್ಪಿದೆವು. ನೀನು ಬಯಸುವ ಕನ್ಯೆಗೂಸು ಎಲ್ಲಿದ್ದರೂ ಹ್ಯಾಗಿದ್ದರೂ ತಂದೊಪ್ಪಿಸುವ ಭಾರ ನಮ್ಮದು.

ರಾಜಕುಮಾರ : ಕುಲದೇವರ ಆಣೆ ಪ್ರಮಾಣ ಮಾಡಿ. ತಂದೊಪ್ಪಿಸುವಿರಾ?

ಹಿರಿಯ ೩ : ಹೌದು ಹೌದು. ಕುಲದೇವರ ಅಡಿಗಳ ಸಾಕ್ಷಿಯಾಗಿ ತಂದು ಒಪ್ಪಿಸುತ್ತೇವೆ.

ರಾಜಕುಮಾರ : ಆಣೆ ಪ್ರಮಾಣ ಮಾಡಿದ್ದೀರಿ. ನಿಮ್ಮ ನುಡಿ ಬೇರೆ ಅಲ್ಲ, ದೈವದ ಕಾರಣಿಕ ಬೇರೆ ಅಲ್ಲ. ಬಾಲಕನ ಮಾತೆಂದು ಅಲಕ್ಷ್ಯಮಾಡದೆ ಲಕ್ಷ್ಯಗೊಟ್ಟು ಕೇಳಿರಿ.

ಭಾಗವತ : ಸೀಳಬೇಕು ಸರಿಯರ್ಧಾ ನನ್ನ ದೇಹವನ್ನೆ
ಕೂಡಿಡುವುದು ಎರಡರ್ಧವ ಎರಡು ಮಡಿಕೆಯೊಳಗೆ
ಮಡಿಕೆಗಳನು ಹೂಳಬೇಕು ಪುಷ್ಪರಾಶಿಯಲ್ಲಿ
ಅಕ್ಷಿಸಾಕ್ಷಿಯಲ್ಲಿ ತೆರೆಯಬೇಕು ಹುಣ್ಣಿಮೆಯಲಿ
ಪತ್ನಿಸಹಿತ ಬರುವೆ ಧರೆಯ ಹಿರಿಯರೆಲ್ಲ ಹರಸಲಿ ||

ರಾಜಕುಮಾರ : ಹೇಳುತ್ತೇನೆ ಕೇಳಿ. ಇದೋ ಕಾಣುತ್ತಿರುವ ಈ ಖಡ್ಗದಿಂದ ಕುಲದೈವ ಸಾಕ್ಷಿಯಾಗಿ ನನ್ನನ್ನು ಅರ್ಧರ್ಧ ಹೋಳಾಗುವಂತೆ ಸೀಳಬೇಕು.

ತಾಯಿ : ಶಿವ ಶಿವಾ! ಅಮಂಗಲ ನುಡಿಯಬೇಡ ಮಗನೆ.

ರಾಜಕುಮಾರ : ಅಷ್ಟಕ್ಕೇ ಮುಗಿಯಲಿಲ್ಲ. ತುಂಡು ಮಾಡಿದ ಒಂದೊಂದು ಹೋಳನ್ನು ಒಂದೊಂದು ಮಡಕೆಯಲ್ಲಿ ತುಂಬಿಡಬೇಕು. ಎರಡೂ ಮಡಕೆಗಳನ್ನು ಹೂವಿನಲ್ಲಿ ಹೂಳಬೇಕು. ಬರವ ಹುಣ್ಣಿಮೆಯ ದಿನ ಎರಡೂ ಮಡಕೆಗಳನ್ನು ತೆರೆದು ನೋಡಿದರೆ ಒಂದರಿಂದ ಅಪ್ರತಿಮ ಸುಂದರನಾದ ರಾಜಕುಮಾರ, ಅಂದರೆ ನಾನು ಹೊರಬರುತ್ತೇನೆ. ಇನ್ನೊಂದರಿಂದ ಇಂದ್ರನಿವಾಸದಲ್ಲಿದ್ದ ದೀಪದ ಮೊಲ್ಲೆ ಎಂಬ ಪ್ರತಿಮೆಯಂಥ ಚೆಲುವೆ ಕೈಯಲ್ಲಿ ದೀಪವ ಹಿಡಿದು ಕೊಂಡು ಹೊರಬರುತ್ತಾಳೆ. ಅನಂತರ ನಮ್ಮಿಬ್ಬರಿಗೆ ಮದುವೆ ಮಾಡಿ. ಹೀಗಾದರೆ ಮದುವೆಯುಂಟು, ಇಲ್ಲದಿದ್ದರೆ ಇಲ್ಲ.

ಹಿರಿಯ ೧ : ನಾವೆಷ್ಟೋ ಆಶ್ಚರ್ಯಗಳನ್ನು ಕಂಡಿದ್ದೇವೆ, ಜೀರ್ಣಿಸಿಕೊಂಡಿದ್ದೇವೆ. ಆದರೆ ಇಂಥ ಅಘಟಿತವನ್ನು ಮಾತ್ರ ನಾವು ಕಂಡರಿಯೆವು ರಾಜಕುಮಾರ.

ರಾಜಕುಮಾರ : ಕುಲದೈವ ಸಾಕ್ಷಿಯಾಗಿ ಆಣೆ ಪ್ರಮಾಣ ಮಾಡಿದ್ದೀರಿ, ನೆನಪಿರಲಿ.

ತಾಯಿ : ಇದು ಹುಚ್ಚು ಕ್ರಮ ಮಗನೆ. ನಿನ್ನಲ್ಲಿ ಯಾವುದೋ ಭೂತ ಸೇರಿ ಈ ರೀತಿ ಆಡಿಸುತ್ತಿದೆ.

ರಾಜಕುಮಾರ : ನನ್ನಲ್ಲಿ ಸೇರಿರೋದು ಭೂತವಲ್ಲ ತಾಯಿ, ದೀಪದ ಮೊಲ್ಲೆ ಎಂಬ ಚೆಲುವೆ. ನನ್ನೊಳಕ್ಕೆ ಐಕ್ಯವಾದವಳನ್ನು ಹೊರಕ್ಕೆ ತೆಗೆವ ಕ್ರಮ ಇದು.

ತಾಯಿ : ಮನುಷ್ಯನನ್ನು ಸೀಳಿದ ಮೇಲೆ ಮತ್ತೆ ಬದುಕುವುದುಂಟೆ? ಸತ್ತ ದೇಹದಿಂದ ಇನ್ನೊಂದು ಹೆಣ್ಣು ಉತ್ಪತ್ತಿಯಾಗುವುದುಂಟೆ?

ರಾಜಕುಮಾರ : ಉಂಟು ತಾಯಿ, ನೀನು ಧೈರ್ಯವಹಿಸಿದರೆ, ನನ್ನ ನಂಬಿದರೆ ಪ್ರತ್ಯಕ್ಷ ತೋರಿಸಬಲ್ಲೆ.

ತಾಯಿ : ಹುಡುಗು ಬುದ್ದಿಯೊಂದಿಗೆ ಆಟ ಆಡಲಿಕ್ಕುಂಟೆ? ಹಟ್ಟಿಯ ಹಿರಿಯರು ಸಾಮಾನ್ಯರಲ್ಲ. ಒಬ್ಬೊಬ್ಬರೂ ಸಾವಿರ ಗಾದೆ ಬಲ್ಲವರು. ಅವರ ಅನುಭವ ಹೇಳಿದ ಹಾಗೆ ಕೇಳು.

ರಾಜಕುಮಾರ : ಒಪ್ಪಿದ ಮಾತಿನಂತೆ ಆಚರಸುವ ಹಿರಿಯರು ದೈವ, ದೇವರ ಸಮ. ಅದಿಲ್ಲ ನರಮನುಜ ಪ್ರಾಣಿ ತಿರ್ಯಕ್‌ಜಂತು ಸಮ. ಇದನ್ನೊಪ್ಪುವ ತಾಯಿ ಆದಿಮಾಯೆಗೆ ಸಮ. ಇಲ್ಲ ಮಾರಿಗೆ ಸಮ. ನಾನು ಹೇಳುವ ಹಾಗಿದ್ದರೆ ಮದುವೆಯುಂಟು. ಇಲ್ಲದಿದ್ದರೆ ಇಗೋ ಸನ್ಯಾಸಿಯಾಗಿ ಹೊರಟೆ. (ರಭಸದಿಂದ ಹೋಗುವನು)

ಭಾಗವತ : ಶಾಪವು ನಿಜವಾದುದೇ | ನಮ್ಮೀ ಕುಲದ
ಪಾಪವು ತುಂಬಿಬಂತೆ |
ತಪವು ಹಾಳಾಗಿ ಹೋಯ್ತೆ | ವಂಶಕ್ಕೆ
ತಾಪವು ಸಮನಿಸಿತೆ ||

ತಾಯಿ : ದೈವದ ಶಿಕ್ಷೆಗಳು ಇಷ್ಟು ವೇಗವಾಗಿ ನನ್ನ ಮೇಲೆ ಎರಗುತ್ತವೆಂದು ನಾನು ಎಣಿಸಿರಲಿಲ್ಲ ಶಿವನೆ. ಮಗನ ಮಾತು ಕೇಳಿ ಮಲಗಿದ್ದ ಭೀತಿಗಳು ಎಚ್ಚರವಾಗಿ ಕಾಡುತ್ತಿವೆ. ಸಮಸ್ತರೇ, ವಂಶವನ್ನು ಆದ್ಯಂತ ಬಲ್ಲವರು ನೀವು. ಅದನ್ನು ಕಾಪಾಡುವ ಹೊಣೆ ನಿಮ್ಮದು.

ಹಿರಿಯ ೧ : ಹಿಂದೆ ಈ ವಂಶದ ಒಬ್ಬಿಬ್ಬರು ರಾಜರು ಈ ರೀತಿ ತಮ್ಮನ್ನು ಸೀಳಿಕೊಂಡ ಕಥೆಗಳನ್ನು ಪುರಾಣೇತಿಹಾಸಗಳಿಂದ ತಿಳಿದಿದ್ದೆವು. ಆದರೀಗ ಅವು ನಮ್ಮ ಜೀವಮಾನದಲ್ಲೇ ನಿಜವಾಗುವ ಸಂದರ್ಭ ಒದಗಿ ಬಂತಲ್ಲ! ಸಮಾಧಾನ ಮಾಡಿಕೊಳ್ಳಿ ತಾಯಿ. ಈಗ ಧೈರ್ಯ ತಗೋಬೇಕಾದವರೂ ಹೇಳಬೇಕಾದವರೂ ನೀವು. ನಾವು ಸಮಸ್ತರು ರಾಜಕುಮಾರ ಮನಸ್ಸನ್ನರಿಯದೆ ದೈವದ ಸಾಕ್ಷಿಯಾಗಿ ಅವನು ಹೇಳಿದಂತೆ ಮಾಡಲು ಒಪ್ಪಿಕೊಂಡಾಗಿದೆ. ಅಥವಾ ದೈವವೇ ನಮಗೆ ಗೊತ್ತಿಲ್ಲದೆ ನಮ್ಮಿಂದ ಈ ಮಾತುಗಳನ್ನು ಆಡಿಸಿಯಾಗಿದೆ. ಹ್ಯಾಗೂ ರಾಜಕುಮಾರನಿಗೆ ಭಾಗದಿಗಳಿಲ್ಲವಾಗಿ ಮರಣ ಭೀತಿ ಇಲ್ಲ. ಮಗ ಕೈ ತಪ್ಪಿ ಸನ್ಯಾಸಿ ಆಗುವ ಬದಲು ಕುಲದೈವದ ಸತ್ಯ ಪರೀಕ್ಷಿಸಬಹುದಲ್ಲಾ ತಾಯಿ….

ತಾಯಿ : ಸಮಸ್ತರೇ, ನಿಮ್ಮ ಅಂಗೈಯಲ್ಲಿ ಈ ವಂಶದ ಕುಡಿಯನ್ನಿಟ್ಟಿದ್ದೇನೆ. ಅದೇನು ಮಾಡುತ್ತೀರೋ ಮಾಡಿ.