ತಾಯಿ ಮತ್ತು ಹಿರಯರು

ಭಾಗವತ : ಬೆಳಕು ಹರಿದವು ಸೇರಿ ಹಿರಿಯರು
ಸರ್ವದೇವರ ಪಾದ ಪೂಜಿಸಿ
ಸೀಳಿದರು ಸುಕುಮಾರನನು ಹೂಳಿದರು ಹೂವಿನಲಿ |

ತೆರೆದು ನೋಡಲು ಅರರೆ ಏನಿದು
ಉರಿವ ಸೂರ್ಯನ ಥರದ ಹೆಡೆಮಣಿ
ಮೊರದಗಲ ಹೆಡೆಯಿಂದಲೊಪ್ಪುವ ಸರ್ಪ ಮಿಂಚಿರಲು ||

ಸರಿ ಫಡಾ ಎನುತೆಲ್ಲ ಚದರುತ
ಹೊಡೆಯೋ ಬಡಿಯೆಂದೆರಗಿ ಬಂದರು
ಎದುರು ನಿಲ್ಲದೆ ಕಾಡಿನಲಿ ಕಣ್ಮರೆಗೆ ನುಸುಳಿತಲಾ

ಚಿಂತೆಯಲಿ ಮತ್ತೊಂದು ಮಡಕೆಯ
ನೆತ್ತಿ ತೆರೆದರು ಶಿವಗೆ ವಂದಿಸಿ
ಉತ್ತಮೋತ್ತಮ ರಾಜಕುವರನು ನಗುತ ಹೊರಬಂದ ||

ರಾಜಕುಮಾರ : ದೀಪದ ಮೊಲ್ಲೆ ಎಲ್ಲಿ?

ತಾಯಿ : ಏನಿದು ಭ್ರಾಂತಿ ಮಗನೆ? ನಿನ್ನ ಹುಡುಗು ಬುದ್ಧಿಯ ದುಡುಕು ಮಾತು ಕೇಳಿ ಮಾಡಬಾರದ ಕೆಲಸಗಳನ್ನೆಲ್ಲಾ ಮಾಡಿಯಾಯಿತು. ಇದೆಲ್ಲವೂ ವಂಶದ ಪ್ರಾರಬ್ಧವಲ್ಲದೆ ಮತ್ತೇನು? ಕುಲದೇವರ ಆಶೀರ್ವಾದದಿಂದ ನೀನಾದರೂ ಮರುಜನ್ಮ ಪಡೆದು ಬಂದೆಯಲ್ಲ. ಅದೇ ಸಾಕು.

ರಾಜಕುಮಾರ : ಯಾಕೆ? ಇನ್ನೊಂದು ಮಡಕೆಯಿಂದ ದೀಪದ ಮೊಲ್ಲೆ ಬರಲೇ ಇಲ್ಲವೆ?

ಹಿರಿಯ ೧ : ಬಂದದ್ದು ಅಕರಾಳ ವಿಕರಾಳ ಭೂತ !

ಹಿರಿಯ ೨ : ಕೆಟ್ಟ ಹುಳು !

ಹಿರಿಯ ೩ : ಪಿಶಾಚಿ!

ರಾಜಕುಮಾರ : ಮೋಸವಾಯ್ತು….

ತಾಯಿ : ಯಾರಿಗೆ? ನಮಗೆ. ದೈವ ಪರೀಕ್ಷೆ ಮಾಡಿದ್ದಕ್ಕೆ ಸಾವಿರ ಬಲಿಯ ತಪ್ಪು ದಂಡ ಕೊಟ್ಟು, ಬೇರೆ ಮದುವೆಯ ವ್ಯವಸ್ಥೆಯ ಮಾಡೋಣವಾಗಲಿ ಸಮಸ್ತರೆ.