ಕಮಲ ಮತ್ತು ಜವಳಿ ತಮ್ಮ ಮನೆಯಲ್ಲಿ

ಕಮಲ : ಸ್ವಾವೀ ಮದುವೆಯಾದಾಗಿನಿಂದ ಒಂಥರಾ ಇದ್ದೀರಲ್ಲ, ಯಾಕೆ?

ಜವಳಿ : ಮದುವೆ? ಯಾರ ಮದುವೆ? ನನ್ನದೋ ಮಹಾರಾಜನದೋ? ಅಥವಾ ಅವಳೀದೋ?

ಕಮಲ : ನಮ್ಮ ಮದುವೆ, ಅಂದರೆ ನನ್ನ ಮತ್ತು ನಿಮ್ಮ ಮದುವೆ.

ಜವಳಿ : ಓಹೋ ಹೌದಲ್ಲವೆ! ಪ್ರಿಯೆ. ನಿನ್ನೆ ಕನಸಿನಲ್ಲಿ ನಾನು ನಿನ್ನನ್ನು ಒಂದು ಹಕ್ಕಿಗೆ ಹೋಲಿಸುತ್ತಿದ್ದೆ. ಆದರೆ ಆ ಹೋಲಿಕೆ ಸರಿಬರಲಿಲ್ಲ. ಯಾಕೆಂದರೆ ಅವಳಿ ಆಗಲೇ ತನ್ನ ಕನಸಿನಲ್ಲಿ ನಿನ್ನನ್ನ ಹಕ್ಕಿಗೆ ಹೋಲಿಸಿ ಒಂದು ಪದ್ಯ ಬರೆದಿದ್ದ. ದಯಮಾಡಿ ನೀನು ಅವನನ್ನು ಜಾಸ್ತಿ ಜ್ಞಾಪಿಸಿಕೊಳ್ಳಬೇಡ. ಯಾಕೆಂದರೆ ಕನಸಿನಲ್ಲಿ ಬರುತ್ತಾನೆ.

ಕಮಲ : ಸ್ವಾಮೀ ನೀವ್ಯಾಕೆ ನಿಮ್ಮ ಅಣ್ಣನನ್ನ-

ಜವಳಿ : (ಅಸಹನೆಯಿಂದ) ಅಣ್ಣ ಅಲ್ಲ ತಮ್ಮ.

ಕಮಲ : ಸ್ವಾಮೀ ನೀವ್ಯಾಕೆ ನಿಮ್ಮ ತಮ್ಮನನ್ನ-

ಜವಳಿ : ತಮ್ಮ ಅಲ್ಲ ಅಣ್ಣ.

ಕಮಲ : ಅವಳಿ ನಿಮಗೇನಾಗಬೇಕು?

ಜವಳಿ : ಅಣ್ಣ ಅಥವಾ ತಮ್ಮ.

ಕಮಲ : ಸರಿ, ನಿಮ್ಮಣ್ಣ ಅಥವಾ ತಮ್ಮ ಇಲ್ಲಿಲ್ಲ. ಅದ್ಯಾಕೆ ನೀವು ಅವನನ್ನ ಅಷ್ಟೊಂದು ದ್ವೇಷಿಸುತ್ತೀರಿ?

ಜವಳಿ : ನಾನು ಅವಳಿಯನ್ನು ದ್ವೇಷಿಸುತ್ತೇನೆಯೆ? ಸಾಧ್ಯವಿಲ್ಲವಲ್ಲಾ! ನಿಜ ಹೇಳಬೇಕೆಂದರೆ ಒಂದು ಕಣ್ಣಲ್ಲಿ ನಿನ್ನನ್ನ, ಇನ್ನೊಂದರಲ್ಲಿ ಅವನನ್ನಿಟ್ಟುಕೊಂಡು ಇಬ್ಬರನ್ನೂ ಸಮಾನವಾಗಿ ನೋಡ್ತೀನಿ, ಗೊತ್ತ? ಅಣ್ಣ ಅಥವಾ ತಮ್ಮ, ಅಕ್ಕ ಅಥವಾ ಪಕ್ಕ ಇಲ್ಲದ್ದರಿಂದ ನನಗೆಷ್ಟು ಭಯವಾಗುತ್ತಿದೆ ಅಂದರೆ ಈಗ ಏನು ಹೇಳಬೇಕಂತ ತೋಚೋದೇ ಇಲ್ಲ.

ಕಮಲ : ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ. (ಹಾಗೇ ಮಾಡುತ್ತಾನೆ) ಈಗ ಹೇಳೋದಕ್ಕೇನೂ ತೋಚುತ್ತಿಲ್ಲವೆ?

ಜವಳಿ : ತೋಚುತ್ತಿದೆ. ಆದರೆ ಒಂದು ಕಣ್ಣಲ್ಲಿ ನಾನು. ಇನ್ನೊಂದರಲ್ಲಿ ಆಣ್ಣ ಅಥವಾ ತಮ್ಮ ಮೂಡಿದ್ದಾನೆ.

ಕಮಲ : (ಒಂದು ಕಣ್ಣು ಮುಚ್ಚಿಕೊಂಡು) ಈಗ ನೋಡಿ. ಯಾರು ಮೂಡಿದ್ದಾರೆ?

ಜವಳಿ : ಅವಳಿ ಮೂಡಿದ್ದಾನೆ.

ಕಮಲ : (ಮುಚ್ಚಿದ್ದ ಕಣ್ಣು ತೆರೆದು ಇನ್ನೊಂದನ್ನು ಮುಚ್ಚಿ) ಈಗ?

ಜವಳಿ : ಇದರಲ್ಲೂ ಅವನೇ!

ಕಮಲ : ಏನು ಮಾಡ್ತಿದಾನೆ?

ಜವಳಿ : ನಿನ್ನ ಎದೆ ನೋಡಿ ಉಸಿರು ಹಾಕ್ತಿದನೆ.

ಕಮಲ : ನಿಮಗೆ ಅವಳಿ ಭೂತವಾಗಿ ಕಾಡಿಸ್ತಿದಾನೆ.

ಜವಳಿ : ಭೂತವಲ್ಲ, ತೋಳ; ಹಸಿದ ತೋಳ.

ಕಮಲ : ಹಾಗಿದ್ದರೆ ನಾನು ಹುಲಿ ಅಂತ ತಿಳಿದಕೊಳ್ಳಿ. ತೋಳ ಓಡಿಹೋಗುತ್ತದೆ.

ಜವಳಿ : ಅಯ್ಯಯ್ಯೋ ಬೇಡ ಬೇಡ. ನೀನು ಕಮಲವಾಗೇ ಇರು. ಹುಲಿ ಕಂಡರೆ ನನಗಿನ್ನೂ ಭಯ.

ಕಮಲ : ಹೀಗೆ ಎದ್ದರೆ ಕೂತರೆ ಅವಳಿ ಅನ್ನೋರು ಅವನನ್ಯಾಕೆ ಸುಮ್ಮನೆ ಬಿಟ್ಟಿರಿ?

ಜವಳಿ : ಅವನನ್ನು ಮುಗಿಸೋಣ ಅಂತಲೇ ಇದ್ದೆ. ಏನು ಮಾಡೋದು. ಹಾಳಾದೋನು ನನ್ನ ಹಾಗೇ ಇದ್ದಾನೆ ನೋಡು, ನನಗಾದರೂ ಗೌರವ ಕೊಡೋಣ ಅಂತ ಸುಮ್ಮನೆ ಬಿಟ್ಟೆ.

ಕಮಲ : ಇದ್ಯಾಕೊ ವಿಪರೀತಕ್ಕಿಟ್ಟುಕೊಂಡಿತಲ್ಲಾ! ಭಾಗವತರೇ –

ಭಾಗವತ : ಏನಮ್ಮ?

ಕಮಲ : ನೀವೇ ನಿಂತು ಮದುವೆ ಮಾಡಿದಿರಿ. ಪ್ರೀತಿ ಮಾಡೋಣ ಅಂದರೆ ತನ್ನಣ್ಣ ಅಥವಾ ತಮ್ಮನನ್ನ ಜ್ಞಾಪಿಸಿಕೊಂಡು ಒಂದೇ ಸಮ ಕೊರಗ್ತಿದ್ದಾರೆ.

ಭಾಗವತ : ಏನಯ್ಯಾ ಜವಳಿ, ಸಜ್ಜನ ಅಂತ ಮದುವೆ ಮಾಡಿದರೆ ಹೀಗೆಲ್ಲ ಮಾಡಬಹುದ? ನೀನು ಹೀಗೆ ಮಾಡುತ್ತಾ ಹೋದರೆ ನಾನು ನಿನ್ನ ಬಗೆಗಿನ ಅಭಿಪ್ರಾಯ ಬದಲಿಸಬೇಕಾಗುತ್ತದೆ, ಅಷ್ಟೆ.

ಜವಳಿ : ಏನು ಮಾಡಲಿ ಭಾಗವತರೇ, ಪ್ರೀತಿ ಮಾಡೋಣ ಅಂತ ಕಮಲಳನ್ನು ನೋಡೋದೇ ತಡ ಇವಳ ಎರಡೂ ಕಣ್ಣಲ್ಲಿ ನನ್ನಣ್ಣ ಅಥವಾ ತಮ್ಮನೇ ಮೂಡಿಬರತ್ತಾನೆ! ದೀಪ ಕಳೆದು ಕಣ್ಣುಮುಚ್ಚಿ ಪ್ರೀತಿ ಮಾಡೋಣ ಅಂದರೆ ಕಣ್ಣಲ್ಲಿ ಅಡಗಿದ್ದವನು ಯಾವಾಗ ಎದ್ದು ಬರುತ್ತಾನೋ ಅಂತ ಗಾಬರಿ ಆಗುತ್ತದೆ. ಅದಕ್ಕೇ ನನಗೀಗ ಪ್ರೀತಿ ಅಂದರೆ ಕಣ್ಣುರಿ ಭಾಗವತರೇ.

ಭಾಗವತ : ಹಾಗಂತ ಕಮಲಳ ಜೀವನ ಹಾಳಾಗಬಾರದಲ್ಲ. ಇವತ್ತು ಸೋಮವಾರ. ಇಬ್ಬರೂ ಹೋಗಿ ಕುಲದೇವರನ್ನಾದರೂ ಕೇಳಿಕೊಂಡು ಬನ್ನಿ.

ಜವಳಿ : ಇವತ್ತು ಬೇಡ. ರಾಜಮಾತೆಯವರು ನನಗೊಂದು ತುರ್ತಿನ ಕೆಲಸ ಹೇಳಿದ್ದಾರೆ.

ಭಾಗವತ : ಅದೇನಪ್ಪ?

ಜವಳಿ : ನನ್ನ ಮಿತ್ರ ಮಹಾರಾಜ ಯಾವಾಗೆಂದರೆ ಆವಾಗ ಕದ್ದು ಹೊರಗಡೆ ಹೋಗೋ ವಿಚಾರ ನಿಮಗೆ ಗೊತ್ತಲ್ಲ?

ಭಾಗವತ : ಕೇಳಿ ಬಲ್ಲೆವು.

ಜವಳಿ : ಮಹಾರಾಜ ಕದ್ದು ಹೊರಗಡೆ ಹೋಗುವಾಗ ಹಿಂದಿನಿಂದ ಹೋಗಿ, ಎಲ್ಲಿಗೆ ಹೋಗ್ತಾರೆ, ಏನು ಮಾಡ್ತಾರೆ – ಎಲ್ಲ ಪತ್ತೆ ಮಾಡಿಕೊಂಡು ಬಾ ಅಂತ ರಾಜಮಾತೆ ನನಗೆ ಹೇಳಿದ್ದಾರೆ. ನಾನಲ್ಲಿಗೆ ಹೋಗಿ ಬಂದ ಮೇಲೆ ಇನ್ನೊಂದು ದಿನ ಕುಲದೇವರನ್ನು ಕೇಳೋಣ. ಅಲ್ಲೀ ತನಕ ನೀವಿಬ್ಬರೂ ದಯಮಾಡಿ ನನ್ನ ಬಗೆಗೆ ಸದಭಿಪ್ರಾಯ ಇಟ್ಟುಕೊಂಡಿರಬೇಕಂತ ಪ್ರಾರ್ಥನೆ.

ಭಾಗವತ : ಸರಿಯಪ್ಪ.

ಜವಳಿ ಹೋಗುವನು. ಕಮಲ ಇನ್ನೊಂದು ಕಡೆ ಹೋಗುವಳು.