ಅರಮನೆಯಲ್ಲಿ ತಾಯಿ ಮತ್ತು ಹಿರಿಯರು

ಭಾಗವತ : ಮದುವೆಯಾದನು ಸಂಪಿಗೆ ಜೊತೆ
ಆದರೂ ಸಂತೃಪ್ತಿ ಕಾಣದೆ
ಹೋದಬಂದಲ್ಲೆಲ್ಲ ಹುಡುಕುತಲಿದ್ದ ಮೊಲ್ಲೆಯನೆ ||
ಅಧಿಕವಾದವು ಹುಚ್ಚು ಕುವರನ
ತಾಯಿ ಮಡಿದಳಧಿಕ ಚಿಂತೆಯ
ಯಾವ ದೇವರು ಯಾವ ದೈವದ ರಕ್ಷೆ ತನಗೆಂದು ||
ಕುಲವ ಪೊರೆವವರಾರು ಬಳಿಕೆ
ನ್ಯಾರು ಗತಿ ಮಹಾರಾಣಿ ಸಂಪಿಗೆ
ದೇವಿಯರ ಮುಖಕಮಲವನು ನೋಡುವುದು ಹ್ಯಾಗೆಂದು ||

ತಾಯಿ : ಏನಿದ್ದದ್ದು ಏನಾಯ್ತು ಹಿರಿಯರೆ? ಮಗನ ರಾಜ್ಯಭಾರ ಮತ್ತು ಸಂಸಾರಗಳನ್ನು ಕಣ್ತುಂಬ ನೋಡುತ್ತಾ ಆಯುಷ್ಯದ ಕೊನೆಯ ದಿನಗಳನ್ನು ಮೊಮ್ಮಕ್ಕಳೊಂದಿಗಿನ ಆಟಪಾಠಗಳಲ್ಲಿ ಕಳೆಯಬೇಕೆಂದ ನನಗೆ ಶಿವನು ಇಂಥಾ ಶಿಕ್ಷೆ ಕೊಡಬಹುದೆ? ಮದುವೆಯಾದ ಮೇಲೆ ಮಗ ಹಡೆದವಳ ಬಿಟ್ಟು ಕೂಡಿದವಳ ಮಾಯೆಗೆ ಒಳಗಾಗುತ್ತಾನೆ ಎಂದು ಹೇಳುತ್ತಾರೆ. ಹಾಗೂ ಆಗಲಿಲ್ಲ. ಗಂಡ ಹೆಂಡತಿ ಕೂಡಿ ನಗಾಡಿದ್ದನ್ನು ನಾನು ಒಂದು ಬಾರಿಯೂ ನೋಡಲಿಲ್ಲ.  ಮದುವೆಯಾದ ಮೊದಲನೆಯ ದಿನದಿಂದಲೇ ಯಾವಾಗೆಂದರೆ ಆವಾಗ ನಾಪತ್ತೆ ಆಗುತ್ತಾನೆ. ಯಾವಾಗೆಂದರೆ ಅವಾಗ ವಾಪಸಾಗುತ್ತಾನೆ. ಕಳೆದುಕೊಂಡದ್ದನ್ನು ಹುಡುಕುವವರ ಹಾಗೆ ಹೋಗುತ್ತಾನೆ. ಸಿಕ್ಕದವರ ಹಾಗೆ ನಿರಾಶೆಯಿಂದ ಮರಳಿ ಬರುತ್ತಾನೆ. ಯಾರ ಜೊತೆಗೂ ಮಾತಿಲ್ಲ, ಕಥೆ ಇಲ್ಲ. ಕುಲ ದೇವರನ್ನು ಕೇಳಿದರೆ ಬಿಕ್ಕಿ ಬಿಕ್ಕಿ ಸುಮ್ಮನಾಯಿತೇ ಹೊರತು ಬಾಯಿ ಬಿಡಲಿಲ್ಲ. ಸದಾ ಅಳುವ ಸೊಸೆಯ ಮುಖ ನೋಡಲಾಗುತ್ತಿಲ್ಲ. ಮಗನ ಮುಖ ಕಾಣುತ್ತಿಲ್ಲ. ನೀವೇ ಹೇಳಿ ಸಮಸ್ತರೆ, ಈಗೇನು ಮಾಡಬೇಕು?

ಹಿರಿಯ ೧ : ರಾಜರು ಕಾಲಕಾಲಕ್ಕೆ ಊಟ ಮಾಡುತ್ತಾರೆಯೇ ತಾಯಿ?

ತಾಯಿ : ಮಾಡಿದರೆ ಮಾಡಿದ, ಇಲ್ಲದಿದ್ದರೆ ಇಲ್ಲ. ನನ್ನ ಕಂಡರೆ ತಪ್ಪಿತಸ್ಥರ ಹಾಗೆ ಮುಖ ತಿರುಗಿಸುತ್ತಾನೆ. ಕುಲದೇವರ ಕೋಪಶಾಪವೋ, ಪಿಶಾಚಿಗಳ ಕಾಟವು ಒಂದೂ ತಿಳಿಯದಾಗಿದೆ.

ಹಿರಿಯ ೨ : ಅವರೆಲ್ಲಿಗೆ ಹೋಗುತ್ತಾರೆ ಎಂಬುದೇನಾದರೂ ಗೊತ್ತೇ ತಾಯಿ?

ತಾಯಿ : ಎಲ್ಲಿಗೋ ಗೊತ್ತಿಲ್ಲ. ಆದರೆ ಕೆಸರಲ್ಲಿ ಉರುಳಾಡಿದ ಹಾಗೆ ಮೈ-ಕೈ ಕೊಳೆ ಮಾಡಿಕೊಂಡು ಬರುತ್ತಾನೆ.

ಹಿರಿಯ ೩ : ಶಾಸ್ತ್ರ ಕೇಳಿದಿರಾ ತಾಯಿ?

ತಾಯಿ : ಮೋಹಿನಿ ಬಾಧೆ ಅನ್ನುತ್ತಾರೆ. ನಿಜ ಇರಬಹುದೋ ಏನೋ. ಯಾಕೆಂದರೆ ಸೀಳಿಕೊಳ್ಳುವ ಮುನ್ನಾದಿನ ಇಂದ್ರ ನಿವಾಸದ ದೀಪದ ಮೊಲ್ಲೆ ರಾತ್ರಿ ಜೀವ ತುಂಬಿ ಕುಣಿದಾಡಿ ಇವನನ್ನೇ ಐಕ್ಯವಾಯಿತೆಂದು ಹೆಳಿದ. ಆಶ್ಚರ್ಯವೆಂದರೆ ಅಂದಿನಿಂದ ಆ ವಿಗ್ರಹವೂ ಮಾಯವಾಗಿದೆ.

ಹಿರಿಯ ೩ : ಮಹಾಲಕ್ಷ್ಮಿಯಂತಿರುವ ಮಹಾರಾಣಿಯವರನ್ನು ರಾಜರು ಒಮ್ಮೆಯಾದರೂ ನೋಡಿದ್ದಾರೆಯೇ ತಾಯಿ? ನೋಡಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ.

ತಾಯಿ : ನೀವು ಅಂದುಕೊಂಡಿದ್ದಕ್ಕಿಂತ ಸಮಸ್ಯೆ ಆಳವಾಗಿದೆ ಹಿರಿಯರೆ….

ಭಾಗವತ : ಒಮ್ಮೆ ದೀಪದ ಮೊಲ್ಲೆಯನು
ಸಂಪಿಗೆ ಕಣ್ಣಲಿ ಕಾಣಲಾರದೆ
ನಾನು ಬಯಸುವ ಹೆಣ್ಣು ನೀ ತೆಗೆ ಅಲ್ಲ ಹೋಗೆಂದ ||

ತಾಯಿ : ಒಂದು ಬಾರಿ ಅದೂ ಒಂದೇ ಬಾರಿ ಸಿರಿಸಂಪಿಗೆಯ ಮುಖವನ್ನ ತದೇಕ ದೃಷ್ಟಿಯಿಂದ ನೋಡತೊಡಗಿದನಂತೆ. ಅವಳು ನಾಚಿ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರೆ ಅವನು ರಭಸದಿಂದ ಬಂದು ಅವಳ ಕೈ  ಕೊಸರಿ ಮುಖವನ್ನ ಅಂಗೈಯಲ್ಲಿ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನೋಡಿದನಂತೆ. ತಕ್ಷಣ ತಿರಸ್ಕಾರದಿಂದ ಮುಖವನ್ನು ನಿವಾರಿಸುತ್ತ ನಿನ್ನ ಕಣ್ಣಲ್ಲಿ ದೀಪದ ಮೊಲ್ಲೆ ಇಲ್ಲ ದೇವಿ ಎಂದು ಹೇಳಿ ಹೊರಟು ಹೋದನಂತೆ. ಸದ್ಯ ಆಕೆಯ ಕಣ್ಣಲ್ಲಿ ದೀಪದ ಮೊಲ್ಲೆ ಕಾಣಲಿಲ್ಲ. ಕಂಡಿದ್ದರೆ ಕಣ್ಣನ್ನೇ ಕಿತ್ತುಬಿಡುತ್ತಿದ್ದನೋ ಏನೋ. ಅವನಿಗೆ ಗೊತ್ತಾಗದ ಹಾಗೆ ಹಿಂದಿನಿಂದ ಹೋಗಿ ಎಲ್ಲಿ ಹೋಗುತ್ತಾನೆ, ಏನು ಮಾಡುತ್ತಾನೆಂದು ತಿಳಿಯಲು ಜವಳಿಯನ್ನು ಕಳಿಸಿದ್ದೆವು ಅಗೋ ಅವನೇ ಬಂದ.

ರಾಜಮಾತೆಗೆ ಜವಳಿ ಅಡ್ಡ ಬೀಳುತ್ತಾನೆ.

ತಾಯಿ : ಬಾ ಮಗನೆ. ಎಷ್ಟು ಜನ ಸೇವಕರನ್ನಟ್ಟಿದರೂ ಕಂಡಿರಲಾರದ ಗುಟ್ಟು ನಿನಗೆ ತಿಳಿದಿರಲು ಸಾಧ್ಯ. ಹೇಳು ರಾಜಕುಮಾರ ಈಗ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಕೇಳುವುದಕ್ಕೆ ಕಾತರಳಾಗಿದ್ದೇನೆ. ವಿವರವಾಗಿ ಹೇಳು ಅವನನ್ನು ಕೊನೆಯತನಕ ಬೆನ್ನಟ್ಟಿ ಹೋಗುವುದು ಸಾಧ್ಯವಾಯಿತೇ?

ಜವಳಿ : ಸಾಧ್ಯವಾಯಿತು ತಾಯಿ. ಆದರೆ ಅಲ್ಲಿ ನಾನು ಕಂಡದ್ದು ಮಾತ್ರ ವಿಪರೀತ.

ತಾಯಿ : ಅದನ್ನೇ ಕೇಳುತ್ತಿದ್ದೇನೆ, ಹೇಳು.

ಭಾಗವತ : ಮೊಲ್ಲೆ ಮೊಲ್ಲೇ ಎಂದು ಹಲುಬುತ
ಬೆಟ್ಟಗುಡ್ಡಗಳಲ್ಲಿ ಅಲೆಯುತ
ನೀರು ಕುಡಿಯಲು ಕೆರೆಗೆ ಬಂದನು ಬಹಳ ಬಾಯಾರಿ!
ಅರರೆ ನೀರಲಿ ನೀರೆ ಯಾರಿವ
ಳಾರು ದೀಪದ ಮೊಲ್ಲೆಯಲ್ಲವೆ?
ದೊರಕಿ ಬಿಟ್ಟಳು ಎನುತ ಬಿಂದಬದ ಮೋಹದಲಿ ಬಿದ್ದ ||

ಜವಳಿ : ತಮ್ಮ ಆಜ್ಞೆಯಂತೆ ನಿನ್ನೆ ರಾತ್ರಿ ಮಹಾರಾಜರ ಹಿಮದಿನಿಂದ ನಾನು ಹೋಗಿದ್ದೆ. ಪ್ರಯಾಣದ ಸಿದ್ಧತೆ ಇಲ್ಲದೆ ಬೀಳ್ಕೊಡುವವರಿಲ್ಲದೆ ಎಲ್ಲಿಗೋ ಹೊರಟಂತಿದ್ದರು ರಾಜರು. ಹೆದರಿ ಹೆದರಿ ಹಿಂದಕ್ಕೆ ನೋಡುತ್ತಾ ದಾರಿ ನೋಡದೆ ಎರವುತ್ತಾ ಮರೆ ಸಿಕ್ಕಲೆಲ್ಲಾ ಅಡಗುತ್ತಾ ಹೊರಟಿದ್ದರು. ಅವರನ್ನ ಆಗ ನೋಡಿದವರು ತಕ್ಷಣ ಹೇಳಬಹುದಿತ್ತು – ಇವನು ಯಾರನ್ನೋ ವಂಚಿಸಿ ಓಡಿಹೋಗುತ್ತಿರುವ ಅಪರಾಧಿ, ಪರಾಗಿ ಆಗುತ್ತಿದ್ದಾನೆ ಅಂತ. ಬಾಯಾರಿ ಅಡವಿಯ ಬಳಿಯ ಸರೋವರಕ್ಕೆ ಹೋದರು. ಬೆಳದಿಂಗಳಿತ್ತು. ಸರೋವರದಲ್ಲಿ ಆಕಾಶ ಮೂಡಿತ್ತು. ಮೋಡ ಮೂಡಿದ್ದವು. ಅವುಗಳಾಚೆಯ ನಿರಾಳವೂ ಮೂಡಿತ್ತು. ಹಿಂದೆ ಕದ್ದು ನಿಂತಿದ್ದ ನನ್ನನ್ನು ಗಮನಿಸದೆ ಸರೋವರದಲ್ಲಿ ಹಣಿಕಿ ಹಾಕಿದರು. ಇವರ ಉಸಿರಿನ ಸ್ಪರ್ಶಕ್ಕೆ ರೇಗಿಕೊಂಡಂತೆ ಸರೋವರದ ನೀರು ನಡುಗಿ ತೆರೆ ಎಬ್ಬಿಸಿತು. ಬಿಂಬಿಸಿದ ಮೋಡಗಳನ್ನು ಮುರಿದು ಮುರಿದು ಮೂಡಿಸಿತು. ವಿಕಾರವಾದ ಚೂರಿಗಳಿಂದ ಎಂಬಂತೆ ಮೂಡಿದ್ದ ಆಳವಾದ ನೀಲಿ ಆಕಾಶವನ್ನು ಕತ್ತಿರಿಸಿ ಕತ್ತಿರಿಸಿ ತೋರಿಸಿತ್ತು. ಆದರೂ ನನ್ನ ಮಿತ್ರನಾದ ಮಹಾರಾಜ ಹಿಂದೆಗೆಯಲಿಲ್ಲ. ನೀರಿನ ಆಟ ಮುಗಿಯುವ ತನಕ ಸುಮ್ಮನಾಗಿ ಆಮೇಲೆ ಮತ್ತೆ ನೀರಿನಲ್ಲಿ ನೋಡಿಕೊಂಡರು. ಹೆಣದ ಹಾಗೆ ತೇಲುತ್ತಾ ಅವರ ಪ್ರತಿಬಿಂಬ ಬಂತು. ನೋಡಿದೊಡನೆ ಅವರ ಮುಖ ಕಳೆಕಳೆಯಾಯಿತು. ಆನಂದದ ಕಣ್ಣೀರು ಬಂದವು. ಉನ್ಮಾದದಲ್ಲಿ ಅವರ ಬಾಯಿಂದ ಮಾತುಗಳೇ ಬರಲಿಲ್ಲ. ಮೌನವಾಗಿ ಆ ಹೆಣದೊಂದಿಗೆ ಮಾತಾಡುತ್ತಿರುವಂತೆ ಸುಮ್ಮನೆ ಕೂತರು.

ತಾಯಿ : ಆಶ್ಚರ್ಯ! ಆಮೇಲೆ?

ಜವಳಿ : ಮೂಡಿದ ಪ್ರತಿಬಿಂಬವನ್ನು ತಮ್ಮ ಬೊಗಸೆಯಲ್ಲಿ ಹಿಡಿದು ನೋಡಿದರು. ಬೆರಳ ಸಂದಿಯಿಂದ ನೀರು ಸೋರಿತು. ಮತ್ತೆ ಹಿಡಿದರು. ಮತ್ತೆ ಸೋರಿತು. ಆಮೇಲೆ ಇಡೀ ಕಾಡು ರೋದಿಸುವ ಹಾಗೆ ಮೊಲ್ಲೆ ಮೊಲ್ಲೇ ಅಂತ ದನಿ ತೆಗೆದು ಆನಂದದಿಂದ ಅತ್ತರು.

ತಾಯಿ : ಮೊಲ್ಲೆ ಎಂದು ಹೇಳಿದನೆ?

ಜವಳಿ : ಹೌದು.

ತಾಯಿ : ಅತ್ತನೆ?

ಜವಳಿ : ಹೌದು ತಾಯಿ.

ತಾಯಿ : ವಿಷಯ ಕೇಳಿ ಕಳವಳವಾಗುತ್ತಿದೆ ಮಗನೆ. ಯಾವುದು ಆಗಬಾರದೆಂದು ಹದಿನಾರು ವರ್ಷಗಳಿಂದ ಎಚ್ಚರವಾಗಿದ್ದೆನೋ ಅದು ನನ್ನ ಕಣ್ಣ ಮರೆಯಲ್ಲಿ ನಡೆದೇ ಹೋಗಿದೆ. ಒಂದೇ ವ್ಯತ್ಯಾಸವೆಂದರೆ, ಪ್ರತಿಬಿಂಬ ನೋಡಿ ಸನ್ಮಾಸಿಯಾಗಬೇಕಿದ್ದವನು ದೀಪಕ ಮೊಲ್ಲೆಯನ್ನು ಸ್ಮರಿಸುತ್ತಿದ್ದಾನೆ.

ಹಿರಿಯ ೧ : ಇದು ಕಂಡು ಕೇಳರಿಯದ ವಿಚಿತ್ರವಾದ ಹುಚ್ಚು ಎನ್ನುವುದರಲ್ಲಿ ಸಂದೇಹವಿಲ್ಲ.

ಹಿರಿಯ ೨ : ನೀರಿನ ಪ್ರತಿಬಿಂಬವನ್ನು ಈ ಪರಿ ಪ್ರೀತಿಸಿದವರುಂಟೆ?

ತಾಯಿ : ಆ ಪ್ರತಿಬಿಂಬಕ್ಕಿಂತ ನನ್ನ ಸೋಸೆ ಸಾವಿರಪಟ್ಟು ಚೆಲುವೆಯಲ್ಲವೆ?

ಹಿರಿಯ ೩ : ಹುಚ್ಚಿನ ಮುಂದೆ ತರ್ಕ ನಿಲ್ಲುವುದಿಲ್ಲ ತಾಯಿ. ಮಹಾರಾಜರು ಏರು ಜವ್ವನಿಗರಾದ್ದರಿಂದ ಸ್ತ್ರೀ ವ್ಯಾಮೋಹ ಅಂಟುವುದು ತಡವಾಗಲಿಕ್ಕಿಲ್ಲ. ಕಾದು ನೋಡುವುದು ಒಳ್ಳೆಯದು ತಾಯಿ.

ಸೇವಕ : ಮಹಾರಾಜರು ಬರುತ್ತಿದ್ದಾರೆ ತಾಯಿ.

ತಾಯಿ : ಬರಲಿ. ಜವಳಿ, ನೀವಿಬ್ಬರೂ ಓರಗೆಯ ಸ್ನೆಹಿತರು. ಮನಸ್ಸು ಬಿಚ್ಚಿ ಮಾತನಾಡಬಹುದು. ಹುಚ್ಚಿಗೆ ಕಾರಣ ತಿಳಿಯುವುದಕ್ಕೆ ಪ್ರಯತ್ನಮಾಡು.

ಜವಳಿ : ಆಗಲಿ ತಾಯಿ.

ಜವಳಿಯನ್ನು ಬಿಟ್ಟು ಎಲ್ಲರೂ ಹೋಗುವರು. ರಾಜನ ಪ್ರವೇಶ. ಜವಳಿಯನ್ನು ನೋಡಿ ಆಗಲೇ ಅವನ ಮನಸ್ಸು ಯೋಚನೆಗೀಡಾಗಿದೆ.

ರಾಜ : ನನಗೆ ಹುಚ್ಚು ಹತ್ತಿದೆ ಅಂತಲ್ಲವಾ ನೀವೆಲ್ಲ ಯೋಚನೆ ಮಾಡೋದು? ಆದರೆ ಖಂಡಿತಾ ಹೇಳುತ್ತೇನೆ :  ಇದು ಹುಚ್ಚಲ್ಲ. ನನ್ನ ಕಷ್ಟ ಏನೆಂದರೆ ನೀವೆಲ್ಲಾ ಮೋಸಗಾರರು ಅನ್ನೋದನ್ನು ಸಾಬೀತು ಮಾಡಲಿಕ್ಕೆ ಆಗುತ್ತಿಲ್ಲ.

ಜವಳಿ : ಮೋಸ? ಏನಪ್ಪ ಮೋಸ ಮಾಡಿದ್ವಿ?

ರಾಜ : ದೀಪದ ಮೊಲ್ಲೆ ಎಲ್ಲೂ ಇಲ್ಲ ಅಂತ ಅಲ್ವೆ ನೀವು ಹೇಳಿದ್ದು?

ಜವಳಿ : ಹೌದು ಸಿಗಲಿಲ್ಲವಲ್ಲ.

ರಾಜ : ಅಂದರೆ ನಾನು ಸುಳ್ಳು ಹೇಳಿದೆ ಅಂತಲ್ಲೋ ಇದರರ್ಥ.

ಜವಳಿ : ಸುಳ್ಳು ಅಂತಲ್ಲ. ತೋರಿಸಲಿಕ್ಕಾಗಲಿಲ್ಲವಲ್ಲ.

ರಾಜ : ಆದರೆ ಅವಳಿದ್ದಾಳೆ. ನಾನು ದಿನಾಲು ಅವಳನ್ನು ಕಂಡುಬರುತ್ತೇನೆ ಗೊತ್ತಾ?

ಜವಳಿ : ಹಾಗಾ? ವಿವರವಾಗಿ ಹೇಳು ಕೇಳೋಣ.

ರಾಜ : ಚೇಷ್ಟೆ ಮಾಡುವುದಿಲ್ಲ ತಾನೆ?

ಜವಳಿ : ಮಿತ್ರನ ಬಗ್ಗೆಯೂ ಈ ಬಗೆಯ ಸಂದೇಹವೇ?

ಭಾಗವತ : ತೇಲಿ ಬಂದಳು ನೀರಿನಲ್ಲಿ
ಈಜಿ ಬಂದಳು ಚೆಲುವೆ ತೆರೆಗಳಲ್ಲಿ
ಗಾಳ ಹಾಕುತ ಇವಳ ಎಳೆದುಕೊಳ್ಳಲಿ ಬಳಿಗೆ
ಮೆಲ್ಲ ಮೆಲ್ಲಗೆ ನಡುಗುವೀಕೆಯ
ಲೀಲೆಯಲಿ ಪರಮಾರ್ಥ ಕಂಡೆನು ||

ರಾಜ : ಹಾಗಿದ್ದರೆ ಕೇಳು : ನಾನಿವೊತ್ತು ಸರೋವರದ ಬಳಿಗೆ ಹೋಗಿದ್ದೆ. ಅದರಲ್ಲಿ ಅವಳಿದ್ದಳು. ತೆರೆತೆರೆಯಲ್ಲಿ ಚಿಳಿಮಿಳಿ ಮೀನಿನಂತೆ ಪುಟ್ಟ ಪುಟ್ಟದಾಗಿ ಕೈಯಾಡಿಸುತ್ತಾ ಈಜಾಡುತ್ತಿದ್ದಳು. ಗಾಳ ಹಾಕಿ ಹಿಡಿಯೋಣ ಅನಿಸಿತು. ಬೇಡ ಕೈಯಲ್ಲಿ ಹಿಡಿಯೋಣಾಂತ ಬೊಗಸೆ ಒಡ್ಡಿದೆ. ಬೊಗಸೆಯಲ್ಲಿದ್ದಾಗ ನನ್ನ ಉಸಿರು ತಾಗಿ ಪ್ರೀತಿಯಿಂದ ನಡುಗಿದಳು ಗೊತ್ತಾ? ಮೊಲ್ಲಗೆ ಬೆರಳಿಂದಗೋರಿ ಮತ್ತೆ ಕೆಳಗಿಳಿದಳು. ಹುಚ್ಚು ಹುಡುಗಿ ಅಂತ ನಾನವಳ ಕೆನ್ನೆ ಚಿವುಟಿದೆ. ಅವಳು ತೆರೆತೆರೆಯಲ್ಲಿ ಗೆರೆಗೆರೆಯಾಗಿ ಹ್ಯಾಗೆ ನಕ್ಕಳು ಅಂತೀಯಾ? ಅವಳನ್ನು ನೋಡಿ ನಾನೂ ನಕ್ಕೆ. ನಾನು ಮಾತಾಡಿದೆ. ಅವಳೂ ಅದೇ ಮಾತಾಡಿದಳು. ನಾನು ಮಾಡಿದ್ದನ್ನೆಲ್ಲಾ ಅವಳು ಮಾಡಿದಳು. ಅಥವಾ ಅವಳು ಮಾಡಿದ್ದನ್ನೆಲ್ಲಾ ನಾನು ಮಾಡಿದೆ. ಅಥವಾ ನಮ್ಮಿಬ್ಬರಲ್ಲಿ ಎಷ್ಟು ಸಾಮರಸ್ಯ ಇತ್ತು ಎಂದರೆ ನಾವಿಬ್ಬರೂ ಎರಡರ್ಧ ಸೇರಿ ಒಂದಾಗಿದ್ದೆವು. ಬರುಬರುತ್ತಾ ನಾವಿಬ್ಬರೂ ಸೇರಿ ಅಖಂಡವಾದ ಸೊನ್ನೆಯಾಗಿ ನಿರಾಕಾರ ಶಿವಲಿಂಗವಾಗಿ ದೇವರಾಗಿದ್ದೆವು. ದೋಷ, ದುಗುಡಗಳ ನೆರಳು ಕೂಡ ಈ ಹೊಸ ದೇವರ ಸುತ್ತ ಸುಳಿಯುತ್ತಿರಲಿಲ್ಲ. ನಾವಿಬ್ಬರೂ ಸೇರಿದ ಈ ಹೊಸ ದೇವರು – ಆಹಾ ಗಾಳಿಯ ಹಾಗಿದ್ದ. ಬೆಳಕಿನ ಹಾಗಿದ್ದ. ಬಾನ ನೀಲಿಯ ಹಾಗಿದ್ದ. ಖಾಲಿ ಸ್ಥಳದಂತಿದ್ದ. ಅಥವಾ ದೈಹಿಕವಾದ ಯಾತರಿಂದಲೂ ಆತನನ್ನು ಮುಟ್ಟುವುದು ಸಾಧ್ಯವಿಲ್ಲವೆನಿಸಿತು. ಆ ದೇವರನ್ನು ಕಂಡ ಮೇಲೆ ಯಾವುದು ಸುಂದರ, ಯಾವುದು ಕುರೂಪ ಅಂತ ಗೊತ್ತಾಯಿತು. ಇದ್ದಕ್ಕಿದ್ದ ಹಾಗೆ ನಾವು ವಾಸಿಸುತ್ತಿರೋ ಈ ಪ್ರಪಂಚದಲ್ಲಿ ಎಲ್ಲಾ ಕಡೆ ಕೊರತೆ ಇದೆ ಅನ್ನಿಸಿತು. ಎಲಾ ದೇವರೆ! ಕೊರತೆ ಇರೋ ಈ ಲೋಕದಲ್ಲಿ ನಾವು ಹ್ಯಾಗೆ ಬದುಕಿದ್ದೇವೆ ಅಂತ ಆಶ್ಚರ್ಯವಾಯಿತು.

ಜವಳಿ : ಮಿತ್ರಾ ಆ ದೇವರಿಗೆ ಎಳೆಮೀಸೆ ಬಂದಿವೆಯೇ?

ರಾಜ : ಹೌದು.

ಜವಳಿ : ಒಳಗಡೆ ಕೆನ್ನೆಯ ಮೇಲೆ ಒಂದು ಕಪ್ಪು ಕಲೆ ಇದೆಯೇ?

ರಾಜ : ಹೌದು. ನಿನಗೆ ಹ್ಯಾಗೆ ಗೊತ್ತಾಯಿತು?

ಜವಳಿ : ಗೊತ್ತಾಗದೆ ಏನು? ನೀನು ನೋಡಿದ್ದು ನಿನ್ನ ಪ್ರತಿಬಿಂಬವನ್ನು.

ರಾಜ : ಛೇ! ನಿಮ್ಮಂಥ ಅಜ್ಞಾನಿಗಳ ಜೊತೆ ವಾದ ಮಾಡುತ್ತೇನಲ್ಲಾ, ನನ್ನ ದಡ್ಡ ತನಕ್ಕೆ ಧಿಕ್ಕಾರ. ಪ್ರತಿಬಿಂಬ ನೋಡೋದು ಅದರೊಂದಿಗೆ ಒಂದಾಗೋದು ಅಂದರೆ ಆತ್ಮಸ್ವರೂಪ ನೋಡಿಕೊಳ್ಳೋದು. ಅಂದರೆ ಇವೆಲ್ಲಾ ನಿಮಗೆ ಅರ್ಥವಾಗೋದಿಲ್ಲ. ನೀವೆಲ್ಲಾ ದೇಹಕ್ಕಂಟಿದವರು. ಅದರಾಚೆಯದನ್ನು  ನೋಡುವುದಕ್ಕೆ ತಿರಸ್ಕರಿಸಿದವರು. ನಿಮಗೆ ಇದೆಲ್ಲಾ ತಿಳಿಯುವುದಿಲ್ಲ.

ಜವಳಿ : ನನ್ನ ಪ್ರಕಾರ ದೇಹ ಅಂದರೆ ಖಾಲಿ ಹೊಟ್ಟೆ; ಆತ್ಮ ಅಂದರೆ ತುಂಬಿದ ಹೊಟ್ಟೆ. ಏನಂತೀ?

ರಾಜ : ಚೇಷ್ಟೆ ಮಾಡುತ್ತೀಯೇನು?

ರಾಜಕುಮಾರ ಜವಳಿ ಚೇಷ್ಟೆ ಮಾಡುತ್ತಿದ್ದಾನೆಂಬ ಅಸಮಾಧಾನದಿಂದ ಸ್ವಲ್ಪ ಹೊತ್ತು ಅವನನ್ನು ನೋಡಿ ತಿರಸ್ಕಾರದಿಂದ ಹೋಗುತ್ತಾನೆ. ಜವಳಿಯೂ ಬೆನ್ನು ಹತ್ತಿ ಹೋಗುತ್ತಾನೆ.