ಕಾಳಿಂಗನ ಪ್ರವೇಶ 

ಭಾಗವತ : ಎಲ್ಲಿ ಹೋದನು ಎಂದು ಕೇಳಬ್ಯಾಡಿರಿ ನಾಗ
ಮನದಾಳದಲ್ಲಿ ಮನೆ ಮಾಡಿರುವನೇ
ಎತ್ತ ಹೋದನು ಎಂದು ಹುಡುಕಬ್ಯಾಡಿರಿ ನಿಮ್ಮ
ಚಿತ್ತವೆಂಬೋ ಹುತ್ತದಲ್ಲಿರುವನೇ.

ಭಾಗವತ : ಭಳೀರೇ ಸರ್ಪ ಕುಲೋದ್ಧಾರಕ.

ಕಾಳಿಂಗ : ಪಾತಾಳಲೋಕಕ್ಕೆ ಯಾರಂತ ಕೇಳಿದ್ದೀರಿ?

ಭಾಗವತ : ಕಾಳಿಂಗಸ್ವಾಮಿ ಎಂದು ಬಲ್ಲೆವು.

ಕಾಳಿಂಗ : ನಾವೇ ಸರಿ.

ಭಾಗವತ : ಥಟ್ಟನೆ ಬಂದಂಥ ಕಾರಣ?

ಕಾಳಿಂಗ : ಓಹೋಯ್, ಅಷ್ಟ ದಿಕ್ಕುಗಳನ್ನು, ಹದಿನಾಲ್ಕು ಲೋಕಗಳನ್ನು ಸಂಚರಿಸುತ್ತಾ ಮಹಾಪರಾಕ್ರಮ ಎನಿಸಿಕೊಂಡಿರುವ ನಾವು ದಿನನಿತ್ಯದಂತೆ ನಮ್ಮ ಕರ್ತವ್ಯಗಳನ್ನು ಮುಗಿಸಿ ಪಾತಾಳಲೋಕದ ನಮ್ಮ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವಲ್ಲಿಗೆ ಮ್ಯಾಲೆ ಭೂಲೋಕದಲ್ಲಿರುವಂಥಾ ಹೆಣ್ಣೊಂದು ನಮ್ಮನ್ನ ದನಿ ಮಾಡಿ ಕರೆದಂತಾಯಿತಲ್ಲಾ! ಇದೇನಪ್ಪ ಬ್ರಹ್ಮಚಾರಿಯ ಅರಮನೆಯಲ್ಲಿ ಹೆಣ್ಣಿನ ಧ್ವನಿ ಕೇಳಿಸಿತಲ್ಲ ಅಂತ ನೋಡಿದರೆ ಅವಳು ಕೊಳ್ಳೆ ಹೊಡೆಯಲೋ ಎಂಬಂತೆ ನಮ್ಮ ಲೋಕಕ್ಕೇ ಇಳಿದು ಬಂದು ಪ್ರತ್ಯಕ್ಷವಾದಳು. ನಾವು ನಮಗೇ ಗೊತ್ತಾಗದಂತೆ ಆಕೆಯ ಮುಂದೆ ಮೊಣಕಾಲೂರಿ ಕುಳಿತಿದ್ದೆವು. ಇದು ಕನಸೋ ನನಸೋ! ಹೀಗೂ ಒಮ್ಮೊಮ್ಮೆ ಆಗಬಹುದೆಂದರೆ ಹಾಗೂ ಅಲ್ಲ. ಅದೇ ಕನಸು ದಿನಾಲೂ ಕಾಣಿಸುತ್ತದೆ. ಯಾವಳೋ ಪರನಾರಿ; ನಮಗ್ಯಾಕೆ ಆ ಗೊಡವೆ ಅಂದರೆ ಹಾಗೂ ಅಲ್ಲ. ಆಕೆ ನಮ್ಮ ಹಕ್ಕಿನ ಮಡದಿಯಾಗಿ ಬಹು ದಿನಗಳ ಪರಿಚಯದವಳಾಗಿ ತೋರುತ್ತಾಳೆ. ಅವಳ ಕಂಡಾಗಿನಿಂದ ನಮ್ಮಲ್ಲಿ ಮದನ ಬಯಕೆಗಳು ಉದಯವಾಗುತ್ತಿವೆ. ಇರಲಿ, ಆಕೆ ಎಲ್ಲಿದ್ದಾಳೆಂದು ಶೋಧನೆ ಮಾಡುತ್ತಾ ಹೋಗುತ್ತೇನೆ.

ಸಿರಿಸಂಪಿಗೆ ಕಾಣಿಸಿಕೊಳ್ಳುತ್ತಾಳೆ.

ಭಾಗವತ : ಓಹೋ ಇವಳೇನೆ ಚೆಲುವೆ ಸುಂದರಿ
ಕನಸಿನಲಿ
ಪ್ರತ್ಯಕ್ಷವಾದವಳು ಇವಳೇನೆ
ಇವಳ ಸೇರದ ನನ್ನ ಬಾಳು ವ್ಯರ್ಥವೆ
ನನ್ನ
ಪ್ರಾಣ ಹೋದರೂ ಸರಿಯೆ ಬಿಡಲಾರೆ.

ಕಾಳಿಂಗ : ಓಹೋಯ್. ನನ್ನ ಮನಸ್ಸು ಸೆಳೆದ ಹುಡುಗಿ ಎಲ್ಲಿರಬಹುದೆಂದು ಹುಡುಕುತ್ತಾ ಹುಡುಕುತ್ತಾ ಭೂ ಪ್ರದೇಶಗಳನ್ನೆಲ್ಲಾ ನಾನು ಸುತ್ತುತ್ತಿದ್ದರೆ ಅವಳು ಇಲ್ಲಿಯೇ ಶಿವಾಪುರದ ಇಂದ್ರನಿವಾಸದ ಹಿತ್ತಿಲಲ್ಲೇ ಇದ್ದಾಳೆ. ಅದೋ, ಅಲ್ಲಿ ಕಾಣಿಸುತ್ತಿದ್ದಾಳಲ್ಲಾ ಅವಳಲ್ಲವೇ ನನ್ನ ಮನಸ್ಸನ್ನು ಕದ್ದವಳು? ಅಷ್ಟು ದೂರದಿಂದಲೂ ಹರಗಿದ ಹೊಲದಂತೆ ನಾರುತ್ತಿರುವ ಅವಳ ಮೈ ವಾಸನೆಯಿಂದ ಪುಳಕಿತನಾಗಿದ್ದೇನೆ. ಆಹಾ ಕೊಂಚದವಳಲ್ಲ ಇವಳು. ಸೀಮೆಯಲ್ಲೇ ಸುಂದರಿ! ಇರಲಿ. ಅವಳ ಸಮೀಪ ಹೋಗಿ ಕಾಣಿಸಿಕೊಳ್ಳುತ್ತೇನೆ.

ಭಾಗವತ : ಏರಿ ಬರುವವನಾರು ಮೈಮ್ಯಾ
ಲೇರಿ ಬರುವವನಾರು ಈತನ
ಗುರುತು ಇಲ್ಲದೆ ದಾಖಲಾದನು ನಮ್ಮ ಮನದೊಳಗೆ ||
ಹೋದ ಹೋದೆಡೆ ಉದಯವಾಗುತ
ನಿಂತ ಈತನ ರೂಪ ನೋಡುವ
ಮದನ ತಾಪಗಳುದಿಸಿ ನಮ್ಮನು ಘಾಸಿ ಮಾಡುತಿವೆ ||

ಸಂಪಿಗೆ : ಯಾರು ಈತ? ಪಂಚಭೂತಗಳೇ ಕೂಡಿ ಒಂದಾಗಿ ಆಕಾರಗೊಂಡಂತೆ ಹುತ್ತದ ಕಡೆಯಿಂದ ನಡೆದು ಬಂದನಲ್ಲಾ. ಸುಮಾರು ಸಮಯದಿಂದ ನನ್ನ ಬೆನ್ನಟ್ಟಿ ಬರುತ್ತಿದ್ದಾನೆ. ಹೋದ ಹೋದಲ್ಲೆಲ್ಲಾ ನನ್ನನ್ನೇ ಹಸಿದ ಕಣ್ಣುಗಳಿಂದ ನೋಡುತ್ತಿದ್ದಾನೆ. ಇವನು ಕಾಲಿಟ್ಟಲ್ಲೆಲ್ಲಾ ಚಕಮಕಿಬೆಂಕಿ ಹರಿದಾಡುವಂತೆ ಕಾಣುತ್ತಿದೆಯಲ್ಲ! ನನಗೆ ಗೊತ್ತಿಲ್ಲದ ಹಾಗೆ ನನ್ನ ಮನಸ್ಸಿನಲ್ಲಿ ದಾಖಲಾಗಿರುವ ಇವನ ರೂಪ ನೋಡುತ್ತಿದ್ದಂತೆ ನಮ್ಮ ತಾಪಗಳು ಮ್ಯಾಲೇರಿ ಬರುತ್ತಿವೆ. ಈತನಕ ನಮಗೆ ಗೊತ್ತಿಲ್ಲದ ಕೊರತೆಗಳು ಈಗ ಬಾಯಿ ತೆರೆದು ನಿಂತಿವೆ. ಯಾರೀತ?

ಭಾಗವತ : ಭಾಗ್ಯ ಸಿಕ್ಕವರಂತೆ ಹಿಗ್ಗಿದನು ಕಾಳಿಂಗ
ಉಬ್ಬಿದನು ಕರಣಗಳ ಕೊಬ್ಬಿನಲ್ಲಿ
ಯಾರಿವಳು ಕನ್ನೆಯೋ ಮಡದಿಯೋ ಈಕೆಯನು
ಸೇರಿ ಸುಖಗಳ ಸೂರೆಗೊಳ್ಳಬೇಕೆಂದ.

ಕಾಳಿಂಗ : ಆಹಾ, ನನ್ನ ಆಸಕ್ತ ಇಂದ್ರಿಯಗಳಿಗೆ ಹಬ್ಬವಾಗಿರುವ ಇವಳ ದೇಹ ಕೈಮಾಡಿ ಕರೆಯುವಂತಿದೆಯಲ್ಲಾ! ಘನ ನಿತಂಬ ಘನಘನ ಸ್ತನ! ಸಣ್ಣ ನಡು, ಸುಖ ಮಾಡು! ಬೇಟೆಯಲ್ಲಿ ತರಬೇತಿಗೊಂಡ ನೋಟಗಳು. ಕನ್ಯೆಯಾಗಿರಲಿ, ಮಡದಿಯಾಗಿರಲಿ, ಇವಳಿಗಾಗಿ ನನ್ನ ಹರಣ ಹಾರಿದರೂ ಸರಿ. ಇವಳನ್ನು ಸೇರದ ನನ್ನ ಜೀವನ ವ್ಯರ್ಥ.

ಭಾಗವತ : ಕ್ಷುದ್ರ ಆಸೆಗೆ ಮನವ ತೆರಬಾರದೀತನಿಗೆ
ಬುದ್ಧಿಹೇಳುವುದು ಬಲು ಉಚಿತವೆಂದು
ಓಡಿ ಬಂದವನನ್ನು ತಡೆದಾಗ ನೋಡಿದರೆ
ಗಾಡಿಕಾರನ ಮೋಡಿಗೊಳಗಾದಳು.

ಸಂಪಿಗೆ : ಬಿರುಗಾಳಿಗೆ ಸಿಕ್ಕು ತಲೆಕೆಳಗಾದ ದೋಣಿಯ ಹಾಗಾಗಿದ್ದೇನೆ. ಹದಿಹರೆಯದ ನನ್ನ ಎದೆಯ ಕದಗಳನ್ನು ಯಾರೋ ತೆಗೆದು ಮಲಗಿರುವ ಆಸೆಗಳನ್ನೆಲ್ಲ ತಿವಿದು ಎಬ್ಬಿರುವಂತಿದೆಯಲ್ಲ. ಛೇ, ಇಂಥಾ ಕ್ಷುದ್ರ ಆಸೆಗಳಿಗೆ ನನ್ನ ವಿವೇಕವನ್ನು ಬಲಿಕೊಡಬಾರದು. ಪರನಾರಿಯನ್ನು ಬಯಸಿ ಬರುತ್ತಿರುವ ಅವನನ್ನು ಮಾತಾಡಿಸಿ ಛೀಮಾರಿ ಹಾಕಿ ಕಳಿಸುತ್ತೇನೆ.

ಅವಳು ಮುಂದಾಗಿ ಅಡಗಿದಾಗ ಕಾಳಿಂಗನೂ ಅಲ್ಲಿಗೆ ಓಡಿ ಬರುತ್ತಾನೆ. ಸಂಪಿಗೆ ಬಾಗಿಲು ಹಾಕಿ, ನಿಲ್ಲುತ್ತಾಳೆ.

ಸಂಪಿಗೆ : ಯಾರಿಲ್ಲದ ಸಮಯ ಸಾಧಿಸಿ ಹೋದ ಹೋದಲ್ಲಿ ನನ್ನ ಬೆನ್ನಟ್ಟಿ ಬರುವಾತ ಯಾರು ನೀನು? ನಾಡಿನ ಮಹಾರಾಣಿಯನ್ನು ಕೆಣಕುವ ಧೈರ್ಯ ಮಾಡುವವನು ನೀನ್ಯಾವನೋ ದೊಡ್ಡ ಪುಂಡನೇ ಇರಬೇಕು.

ಕಾಳಿಂಗ : ಆಹಾ ನಿನ್ನ ಸೊಲ್ಲು ಬೆಲ್ಲದಂತಿದೆ ಚೆಲುವೆ. ನಿನ್ನ ಕೋಪದ ನುಡಿಗಳು ಕೂಡ ಆನಂದ ವಾಕ್ಯಗಳಾಗಿ ಕೇಳಿಸುತ್ತಿವೆ. ನಿನ್ನ ಬಾಯಿಂದ ಬಂದ ಮಾತುಗಳನ್ನು ಅವು ಹುಟ್ಟುತ್ತಿರೋ ಸ್ಥಳದಲ್ಲೇ ಹಿಡಿದು ಮುದ್ದಿಸೋಣ ಅನ್ನಿಸುತ್ತಿದೆ.

ಸಂಪಿಗೆ : ಕೇಳಿದ ಪ್ರಶ್ನೆಗೆ ಉತ್ತರ ಕೊಡು. ಭಂಡಾಟ ಮಾಡಿದರೆ ಅರಸನಿಗೆ ಹೇಳಿ ಕೋಳ ಹಾಕಿಸಿ ಬೀದಿಯಲ್ಲಿ ಎಳೆದೊಯ್ಯುವ ಹಾಗೆ ಮಾಡೇನು.

ಕಾಳಿಂಗ : ನಿನ್ನ ಉದ್ದವಾದ ಕೂದಲಿನಿಂದ ನನ್ನ ಹೃದಯ ಮನಸ್ಸುಗಳನ್ನು ಆಗಲೇ ಕಟ್ಟಿ ಹಾಕಿರುವೆ ಹೆಣ್ಣೆ. ಇನ್ನು ನಿನ್ನ ನಳಿದೋಳುಗಳಿಂದ ಈ ದೇಹಕ್ಕೆ ಕೋಳ ಹಾಕುವುದೊಂದೇ ಬಾಕಿ. ಅದಕ್ಕಾಗಿ ಸಿದ್ಧನಾಗೇ ಇದ್ದೇನೆ.

ಸಂಪಿಗೆ : ಯೌವನದ ಪಿತ್ಥ ನೆತ್ತಿಗೇರಿದ ನಿನಗೆ ನಾಗರಿಕ ಮಾತುಗಳು ತಿಳಿಯುವಂತೆ ಕಾಣುವುದಿಲ್ಲ. ತಾಳು, ತಾಯೇ…. (ಎಂದು ಕರೆಯುವಳು)

ಕಾಳಿಂಗ : ಒಳ್ಳೇ ಅಭಿನೇತ್ರಿ ನೀನು. ನಾನು ಬಂದೊಡನೆ ಬಾಗಿಲಿಕ್ಕಿದವಳು ಈಗ ರಕ್ಷಣೆಗೆ ಯಾರನ್ನೋ ಕೂಗಿದಂತೆ ಅಭಿನಯಿಸುತ್ತೀಯೆ. ನಿನ್ನ ಜಾತಿಯ ಹೆಣ್ಣಿಗೆ ಬಲಾತ್ಕಾರ ಬಲು ಇಷ್ಟವೆಂದು ಬಲ್ಲೆ. ಇಕೋ-

ತಾಯಿ : (ಹೊರಗಿನಿಂದ) ಸಿರಿಸಂಪಿಗೆ….

ಸಂಪಿಗೆ : ರಾಜಮಾತೆ  ಬಂದಳು. ಜೀವದಾಸೆ ಇದ್ದರೆ ಅಡಗಿಕೋ.

ಕಾಳಿಂಗ : ಧಿಮಾಕಿನ ಮಾತಾಡಬೇಡವೆ. ನನ್ನ ರಕ್ಷಣೆ ನಾನು ಮಾಡಿಕೊಳ್ಳಬಲ್ಲೆ. ಧೈರ್ಯ ಇದ್ದರೆ ಬಾಗಿಲು ತೆರೆ.

ಸಂಪಿಗೆ : ನನ್ನ ಶೀಲ ನನ್ನ ಕೈಯಲ್ಲಿರುವಾಗ ಯಾರ ಹೆದರಿಕೆ ಏನು? ಇಕೋ ಬಾಗಿಲು ತೆಗೆಯುತ್ತೇನೆ. ರಕ್ಷಿಸಿಕೋ.

ಬಾಗಿಲು ತೆರೆಯುವಳು. ತಾಯಿ ಬರವಳು. ಕಾಳಿಂಗ ತಕ್ಷಣ ರೂಪು ಬದಲಿಸಿ ರಾಜನಾಗುವನು.

ತಾಯಿ : ಆಶ್ಚರ್ಯ, ಗಂಡ-ಹೆಂಡತಿ ಕೂಡಿ ನಲಿದಾಡುವುದನ್ನು ನೊಡುವುದಕ್ಕಾಗಿ ಹಗಲಿರುಳು ತಪಸ್ಸು ಮಾಡುತ್ತಿದ್ದ ನನ್ನ ಕಣ್ಣಿಗೆ ಏನು ಕಾಣುತ್ತಿದೆ ಮಗನೆ! ಆನಂದಗಳು ಬತ್ತಿ ಹೋದ ನನ್ನ ಕಣ್ಣುಗಳಿಗೆ ಹೊಸ ಆನಂದದ ಮಳೆಯನ್ನೇ ಸುರಿಸಿಬಿಟ್ಟೆ. ಇರು, ಇರು, ಈಗಲೇ ಕುಲದೈವಕ್ಕೆ ಎಂಟು ಕಾಲಿನ ಪ್ರಾಣಿಯ ಬಲಿ ಕೋಡುತ್ತೇನೆ. ಮಗನೇ, ಸಿರಿಸಂಪಿಗೆ ತುಂಬಾ ಕೋಮಲೆ. ನಿನ್ನ ಒರಟು  ತನದಿಂದ ಅವಳು ಇನ್ನೊಮ್ಮೆ ಕಿರುಚುವ ಹಾಗೆ ಮಾಡಬೇಡ ತಿಳಿಯಿತೆ?

ಕಾಳಿಂಗ : (ಸಂಪಿಗೆಯ ಭುಜದ ಮೇಲೆ ಕೈಯಿಡುತ್ತಾನೆ. ಅವಳು ದೂರ ಸರಿಯುತ್ತಾಳೆ)  ಪಳಗಿಸುತ್ತೆನೆ ಚಿಂತೆ ಬಿಡು ತಾಯೆ. ಸಂಪಿಗೆ ನಿನ್ನ ಕೂಗಿದ್ದು ಚೇಷ್ಟೆಗಾಗಿ ಅಷ್ಟೆ. ಅಲ್ಲವೇ ದೇವಿ?

ಸಂಪಿಗೆ : ಹೌದು. ಅಲ್ಲಲ್ಲ. ನಿಜವಾಗಿ ಕೂಗಿದ್ದು. (ಸ್ವಗತ) ಸ್ವರ್ಶ ಮಾತ್ರದಿಂದಲೇ ಇಷ್ಟೊಂದು ಹರ್ಷ ಉಕ್ಕಿಸುವನಲ್ಲ. ನನ್ನನ್ನು ಲೂಟಿ ಮಾಡಬಂದ ಮಾಟಗಾರ ಯಾರು ಈತ?

ತಾಯಿ : ಕುಮಾರ, ನಿನ್ನ ಒರಟುತನ ಸಾಕುಮಾಡು. ಸಿರಿಸಂಪಿಗೆ ಆಗಲೇ ಹೂಬಿಡುವ ಬಳ್ಳಿಯ ಹಾಗೆ ನಡುಗುತ್ತಿದ್ದಾಳೆ.

ಕಾಳಿಂಗ : ಎಂಟು ಕಾಲಿನ ಪ್ರಾಣಿ ಯಾವುದು ತಾಯಿ?

ತಾಯಿ : ಬಸುರಿಯಾದ ಪ್ರಾಣಿ ಎಂದರ್ಥ. ಬಲಿ ಯಾಕೆಂದರೆ ನಮ್ಮ ಸಿರಿಸಂಪಿಗೆ ಬೇಗ ಮೊಮ್ಮಗನ ಕೊಡಲಿ ಎಂದು. ಅವಳ ಬಟ್ಟಲುಗಣ್ಣಲ್ಲಿ ಆಗಲೇ ನಾಳೆಯ ಕನಸು ಹೊಂಬಣ್ಣ ಚೆಲ್ಲಿ ಹೊಳೆಯುತ್ತಿದೆ. ಹೀಗೇ ನಿಂತರೆ ಸೊಸೆ ಮುದ್ದಿಗೆ ನನ್ನ ಹಾಳು ದೃಷ್ಟಿ ತಾಗೀತು. ಬಾಗಿಲಿಕ್ಕಿಕೊಳ್ಳಿ. (ಹೋಗುವಳು)

ಸಂಪಿಗೆ : ನನಗೆ ಹುಚ್ಚು ಹತ್ತುವ ಮುನ್ನ ದಯಮಾಡಿ ನೀನು ಯಾರೆಂದಾದರೂ ಹೇಳು. ಆಗ ಭುಸುಗುಡುವ ಹಾವಿನಂತಿದ್ದೆ. ಈಗ ರಾಜನಂತಾಗಿರುವೆ. ನಿನಗೆ ಅಸ್ತಿತ್ವಗಳೆಷ್ಟು?

ಕಾಳಿಂಗ : ನಿನಗೆಷ್ಟು ಬೇಕೋ ಅಷ್ಟು. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಹೆಣ್ಣೆ. ನಾನು ನಿನ್ನ ರಾಜನಂತಿದ್ದೇನೆಯೇ?

ಸಂಪಿಗೆ : ನಿಜ, ನೋಡೋದಕ್ಕೆ ರಾಜ ಸ್ವಲ್ಪ ಹೆಣ್ಣಿಗ.

ಕಾಳಿಂಗ : ಸ್ವಲ್ಪ ಏಕೆ, ಹೆಚ್ಚಿಗೇನೆ.

ಸಂಪಿಗೆ : ಹೌದು. ತನ್ನೊಳಗಿನ ಹೆಣ್ಣನ್ನು ಹುಡುಕುವುದಕ್ಕಾಗಿಯೇ ಅಲ್ಲವೇ, ಆತ ತನ್ನನ್ನು ತಾನು ಸೀಳಿಕೊಂಡದ್ದು?

ಕಾಳಿಂಗ : ಹಾಗಿದ್ದರೆ ಈಗ ಹೇಳು. ನಾನು ನಿನಗೆ ಅಪರಿಚಿತನೇ? ನೀನು ಪಲ್ಲಂಗದ ಮೇಲೆ ಹಸಿ ಕೊರಡಿನಂತೆ ಬಿದ್ದ ಗಂಡನೊಂದಿಗೆ ಇದ್ದಾಗ ಕೆಳಗೆ ಚಿತ್ತದ ಪಾತಾಳದಲ್ಲಿ ನಿನ್ನ ಮುಂದೊಬ್ಬ ರಾಜ ಮೊಳಕಾಲೂರಿ ಪ್ರೇಮ ಭಿಕ್ಷೆ ಬೇಡುತ್ತಿದ್ದನಲ್ಲವೇ?

ಸಂಪಿಗೆ : ಹೌದು.

ಕಾಳಿಂಗ : ಅವನೇ ನಾನು. ನಿನ್ನ ರಾಜನ ಅರಮನೆಯ ಆಳದಲ್ಲಿರುವ ಪಾತಾಳ ಲೋಕದ ಸಾರ್ವಭೌಮ ಕಾಳಿಂಗ ರಾಜ. ಗುರ್ತು ಸಿಕ್ಕಿತೇ?

ಸಂಪಿಗೆ : ಹೌದು. ಇಲ್ಲಿಲ್ಲ. ನೀನು ಯಾರೆಂದು ಗೊತ್ತಿಲ್ಲ.

ಕಾಳಿಂಗ : ಆದರೆ ನೀನು ನನಗೆ ಗೊತ್ತು. ನಿನಗೆ ಬಿದ್ದ ಕನಸುಗಳನ್ನ ಕೂಡ ಹೇಳಬಲ್ಲೆ ನಾನು. ಇಂದಿನಿಂದ ನಿನಗೆ ಬೀಳಬೇಕಾದ ಕನಸುಗಳನ್ನು ಹೇಳಿಕೊಡೋನೂ ನಾನೇ. ಎಲ್ಲಿ ಈಗ ಕನಸು ಕಾಣು ನೋಡೋಣ. ಕಾಡಿದೆ, ಕಾಡಿನಲ್ಲಿ ಹೂವಿದೆ, ಚಿಗುರಿದೆ, ಹಣ್ಣು ಬಿಡುವ ಮರಗಳಿವೆ….

ಸಂಪಿಗೆ : ಹೌದು ಕಾಡಿದೆ. ಕಾಡಿನಲ್ಲಿ ಹೂವಿದೆ, ಚಿಗುರಿದೆ, ಹಣ್ಣು ಬಿಡುವ ಮರಗಳಿವೆ….

ಕಾಳಿಂಗ : ಹೊಂಬಿಸಿಲಲ್ಲಿ ಚಿನ್ನದ ದನದಿ ಹರಿಯುತ್ತಿದೆ….

ಸಂಪಿಗೆ : ನದಿ ಹರಿಯುತ್ತಿದೆ.

ಕಾಳಿಂಗ : ನೀರಿಗಂತ ನೀನು ಬಂದಿದ್ದೀಯಾ.

ಸಂಪಿಗೆ : ಹೌದು ನೀರಿಗಂತ ನಾನು ಬಂದಿದ್ದೇನೆ. ಇಲ್ಲಿ ನೆಲದಲ್ಲೊಂದು ಬಿಲದಂಥ ಬಾಗಿಲಿದೆಯಲ್ಲ!

ಕಾಳಿಂಗ : ಒಳಕ್ಕಿಳಿ.

ಸಂಪಿಗೆ : ಆಹಾ ಈ ಲೋಕ ಎಷ್ಟು ಚೆಂದಾಗಿದೆ. ಪಾತಾಳದಲ್ಲಿ ಎಷ್ಟೊಂದು ಹೊನ್ನಿನ ಕೊಪ್ಪರಿಗೆಗಳು! ಮೂಲೆ ಮೂಲೆಯ ಮುಚ್ಚುಮರೆಯಲ್ಲಿ ಹೆಸರಿಲ್ಲದ ಸುಖಗಳೆಷ್ಟೋ ಮಲಗಿವೆ. ಅಯ್ಯೋ, ಏಳು ಹೆಡೆಯ ಸರ್ಪ ಗುಟ್ಟಿಗೇ ಗುರಿ ಹಿಡಿದು ಹೆಡೆ ಎತ್ತ ದೀಪದ ಕಂಬದ ಹಾಗೆ ನಿಂತಿದೆಯಲ್ಲ, ಏನು ಮಾಡಲಿ?

ಕಾಳಿಂಗ : (ನಿಜರೂಪದಲ್ಲಿ ಬಂದು) ಹೆದರಬೇಡ ಹೆಣ್ಣೆ ನಾನಿದ್ದೇನೆ.

ತಬ್ಬಿಕೊಳ್ಳುವನು.