ಜವಳಿ ಮತ್ತು ಭಾಗವತ

ಜವಳಿ : ಓಹೋಯ್ ಭಾಗವತರೇ-

ಭಾಗವತ : ಏನಯ್ಯಾ?

ಜವಳಿ : ಒಂದು ಕಣ್ಣು ಮುಚ್ಚಿ ನನ್ನ ಕಡೆ ನೋಡಿ.

ಭಾಗವತ : ನೋಡಿದೆ.

ಜವಳಿ : ಎಷ್ಟು ಜನ ಇದ್ದೀವಿ?

ಭಾಗವತ : ಒಬ್ಬನೇ.

ಜವಳಿ : ಸರಿ. ಈಗ ಎರಡೂ ಕಣ್ಣು ತೆರೆದು ನೋಡಿ. ಎಷ್ಟು ಜನ ಇದ್ದೀವಿ ಹೇಳಿ.

ಭಾಗವತ : ಒಬ್ಬನೇ.

ಜವಳಿ : ಏನು ಭಾಗವತರೇ. ನೀವೂ ಚೇಷ್ಟೆ ಮಾಡುತ್ತೀರಲ್ಲಾ. ಒಂದು ಕಣ್ಣಿಗೆ ಒಬ್ಬ ಕಂಡರೆ ಎರಡೂ ಕಣ್ಣಿಗೆ ಇಬ್ಬರು ಕಾಣಿಸಬೇಕಲ್ಲವೊ?

ಭಾಗವತ : ಹೌದಾ? ಹಾಗಾದರೆ ನಿನ್ನ ಕಣ್ಣಿಗೆ ನಾನೆಷ್ಟು ಜನವಾಗಿ ಕಾಣಿಸುತ್ತೇನೆ?

ಜವಳಿ : ಇಬ್ಬರು.

ಭಾಗವತ : ಹ್ಯಾಗೆ?

ಜವಳಿ : ನೀವು ಮತ್ತು ನಾನು. ನೀವು ಮತ್ತು ನಿಮ್ಮ ನೆರಳು. ನಾನು ಮತ್ತು ಅವಳಿ. ಅದಕ್ಕೇ ನನಗೆ ಒಮ್ಮೊಮ್ಮೆ ನಾಲ್ಕು ಕಾಲಿದ್ದ ಹಾಗೆ ಅನ್ನಿಸುತ್ತದೆ ಭಾಗವತರೇ, ನಿಮಗೆ?

ಭಾಗವತ : ನೀನು ಭಾಗ್ಯವಂತನಪ್ಪ. ನಾನು ದುರ್ದೈವಿ. ನನಗೆರಡೇ ಕಾಲು.

ಜವಳಿ : ನೀವೂ ಭಾಗ್ಯವಂತರೇ ಭಾಗವತರೇ. ಯಾಕಂತೀರೋ-ನಿಮ್ಮೆದುರಿಗೆ ಎರಡೂ ದಾರಿ ಇವೆ ಅಂತಿಟ್ಟುಕೊಳ್ಳಿ ಒಂದೊಂದು ದಾರೀಲಿ ಒಂದೊಂದು ಕಾಲಿಟ್ಟು ಕೊಂಡು ಎರಡೂ ದಾರಿ ನಡೀಬಹುದೋ!

ಭಾಗವತ : ಭಲೆ ಭಲೆ ನನಗಿದು ಗೊತ್ತೇ ಇರಲಿಲ್ಲವೆ! ಹಾಗಾದರೆ ನೀನು ನಾಲ್ಕು ದಾರಿಯಲ್ಲಿ ಏಕಕಾಲದಲ್ಲಿ ನಡೆಯುತ್ತಿರುವೆಯೇನಯ್ಯಾ?

ಜವಳಿ : ನಾನು? ಇಲ್ಲ ಭಾಗವತೇ. ಆದರೆ ಏಕಕಾಲಕ್ಕೆ ಒಬ್ಬನೇ ವ್ಯಕ್ತಿ ಎರಡು ದಾರಿಗಳಲ್ಲಿ ನಡೆದದ್ದನ್ನು ಕಣ್ಣಾರೆ ನೋಡಿದ್ದೇನೆ ಭಾಗವತರೇ.

ಭಾಗವತ : ಹೌದಾ? ಯಾರಪ್ಪಾ ಆ ಪುಣ್ಯಾತ್ಮ?

ಜವಳಿ : ನಮ್ಮ ರಾಜ. ಮಹಾರಾಣಿಯ ಜೊತೆಗೆ ಅಂತಃಪುರದಲ್ಲೂ ಇರುತ್ತಾನೆ. ಮೊದಲಿನ ಹಾಗೆ ನೀರಿನಲ್ಲಿ ಪ್ರತಿಬಿಂಬದ ದೇವರನ್ನು ನೋಡಿಕೊಳ್ಳುತ್ತಾ ಕೆರೆಯ ಬಳಿಯೂ ಇರುತ್ತಾನೆ.

ಭಾಗವತ : ಒಳ್ಳೇದಾಯ್ತಲ್ಲ.

ಜವಳಿ : ನನ್ನ ಗತಿ ಹೇಳಿ ಭಾಗವತರೇ. ಒಂದೊಂದು ಸಲ ಗುರುತು ಹಿಡಿಯುತ್ತಾನೆ. ಇನ್ನೊಮ್ಮೆ ಅಪರಿಚಿತರ ಹಾಗೆ ಮುಖ ತಿರುಗಿಸುತ್ತಾನೆ. ಅಂತಃಪುರದಲ್ಲಿ ಸಿಕ್ಕರೆ ತಬ್ಬಿಬ್ಬಾಗಿ ಯಾರು ನೀನು ಅಂತಾನೆ. ಕೆರೆ ಹತ್ತಿರ ಹೋದರೆ ಮಿತ್ರಾ ಅಂತ ತಬ್ಬಕೊಳ್ತಾನೆ. ಅರಮನೆಯಲ್ಲಿ ಗುರುತೆ ಹಿಡಿಯಲಿಲ್ಲವಲ್ಲ ಮಿತ್ರಾ ಎಂದರೆ ಅರಮನೆಗೆ ನಾನು ಹೋಗಲೇ ಇಲ್ಲ ಅನ್ನುತ್ತಾನೆ! ಒಂದು ಕೈ ಮಾಡಿದ್ದು ಇನ್ನೊಂದು ಕೈಗೆ ಗೊತ್ತಾಗಲಿಕ್ಕಿಲ್ಲ ಅನ್ನೋಣ. ಒಂದು ಕಾಲು ನಡೆದ ದಾರಿ ಇನ್ನೊಂದು ಕಾಲಿಗೆ ಗೊತ್ತಾಗೋದಿಲ್ಲ ಅಂದರೆ ಆಶ್ಚರ್ಯ ವಲ್ಲವೇ?

ಭಾಗವತ : ಆಶ್ಚರ್ಯವೇ!

ಜವಳಿ : ಮಹಾರಾಣಿಯವರಾಗಲೇ ಫಲವತಿಯಾಗಲಿದ್ದು, ಇನ್ನೇನು ಯುವರಾಜನ ತಂದೆಯಾಗಲಿದ್ದೀಯಪ್ಪ, ನಿನ್ನ ಬಡಮಿತ್ರನಿಗೊಂದು ರುಚಿಕರವಾದ ಬೇಟೆಯೂಟ ಹಾಕಯ್ಯ ಅಂದರೆ ಕಣ್ಣು ಕಿಸಿದು ಹರಿದು ತಿನ್ನುವವರ ಹಾಗೆ ನನ್ನ ಕಡೆ ನೋಡಿದನೆ!

ಭಾಗವತ : ಎಂಥ ಸಂತೋಷದ ಸುದ್ದಿ ಹೇಳಿದೆಯಪ್ಪ! ಮಹಾರಾಣಿಯವರು ಗರ್ಭವತಿಯಾಗಿದ್ದಾರೋ? ಕೊನೇ ಪಕ್ಷ ಭಾಗವತರು ಅಂತ ನನಗಾದರೂ ಸಿಹಿ ಹಂಚಬಹುದಿತ್ತಲ್ಲ?

ಜವಳಿ : ತಂದಿದ್ದೀನಲ್ಲ ಸ್ವಾಮಿ, ತಗೊಳ್ಳಿ. ಹಾಗೇ ಹೋಗುಬರೋರಿಗೆಲ್ಲಾ ಹಂಚುತ್ತಿರಿ ಅಂತ ರಾಜಮಾತೆ ಹೇಳಿದ್ದಾರೆ. ನಾನು ಪೂಜಾ ಸಾಮಗ್ರಿ ತಗೊಂಡು ಬರುತ್ತೇನೆ.

ಭಾಗವತ : ಪೂಜಾ ಸಾಮಗ್ರಿ ಯಾಕಪ್ಪ?

ಜವಳಿ : ಅಗೋ ನನ್ನ ಹೃದಯಕಮಲವೇ ಅರಳಿ ಈ ಕಡೆ ಬರುತ್ತಿದೆ. ಅವಳನ್ನೇ ಕೇಳಿ.

ಜವಳಿ ಹೋಗುತ್ತಾನೆ. ಕಮಲ ಬರುತ್ತಾಳೆ. ಹಿಂದಿನಿಂದ ಬಂದ ಅವಳಿ ಯಾರಿಗೂ ಗೊತ್ತಾಗದಂತೆ ನಿಲ್ಲುತ್ತಾನೆ.

ಕಮಲ : ಅಯ್ಯಾ ಭಾಗವತರೇ, ಮದುವೆಯಾಗಿ ಸುಮಾರು ದಿನಗಳಾದರೂ ಪತಿದೇವರಲ್ಲಿ ನನ್ನ ಬಗ್ಗೆ ಪ್ರತಿಯುಂಟಾಗಲಿಲ್ಲ. ಪ್ರೀತಿಯಿಲ್ಲದೆ ಮಕ್ಕಳ ಫಲಪುತ್ರ ಸಂತಾನ ಉಂಟೆ? ಮನೆಯ ಕಂಬಗಳಲ್ಲಿ ಒಂದೊಂದು ಕಂಬಕ್ಕೆ ಒಂದೊಂದು ವಾರ ಒರಗಿ ನಿಂತು ಕಾಪಾಡು ದೇವರೇ ಅಂತ ನಿಟ್ಟುಸಿರಿಟ್ಟೆ. ಮೊನ್ನೆಯ ದಿನವಷ್ಟೆ ಕುಲದೇವರ ಕರುಣೆಯಾಯಿತು. ಸ್ವಪ್ನದಲ್ಲಿ ಕಾಣಿಸಿ, ಮಗಳೇ ಊರಾಚೆಯ ಆಲದ ಮರದಡಿಯ ಹುತ್ತದಲ್ಲೊಂದು ಅರಳುಮಲ್ಲಿಗೆ ಬಳ್ಳಿಯಿದೆ. ಪೂಜೆ ಮಾಡಿ, ಹೂ ಹರಿದು ಮಾಲೆಮಾಡಿ ಗಂಡನಿಗೆ ಹಾಕಿದರೆ ಅವನು ಸರ್ಪವಾಗಿ ಪರಿವರ್ತನೆಗೊಂಡು ನಿನ್ನ ಸೇರುತ್ತಾನೆ. ಹಾಗೆ ಸೇರಿದರೆ ಸಂತಾನವುಂಟು; ಇಲ್ಲದಿದ್ದರಿಲ್ಲ ಎಂದು ಅಪ್ಪಣೆ ಕೊಡಿಸಿದರು. ಅದಕ್ಕೇ ಹೊರಟಿದ್ದೇವೆ.

ಭಾಗವತ : ಆಯಿತಮ್ಮ ನಿಮ್ಮ ಇಚ್ಛೆ ಈಡೇರಲಿ.

ಹೊರಡುವಳು. ಅವಳಿ ಎದುರಾಗುವನು.

ಅವಳಿ : ದೇವಿ, ನಿನ್ನಲ್ಲಿ ಒಂದು ವಿನಂತಿ.

ಕಮಲ : ಇನ್ನೂ ಇಲ್ಲೇ ನಿಂತಿದ್ದೀರಲ್ಲಾ. ಬಿಲ್ವಪತ್ರೆ ತಂದಿರಿ ತಾನೆ?

ಅವಳಿ : ನೀನು ಹೇಳಲೇ ಇಲ್ಲವಲ್ಲ.

ಕಮಲ : ಇಗೋ ಪುನಃ ಮೂಲ ಹುಚ್ಚು ಕೆರಳಿತು; ಈಗೇನು ಪತ್ರೆ ತರುತ್ತೀರೋ ಇಲ್ಲವೊ?

ಅವಳಿ : ಇಲ್ಲೆಲ್ಲೂ ಪತ್ರೆ ಮರವೇ ಇಲ್ಲವಲ್ಲ.

ಕಮಲ : ಸ್ವಾಮೀ ನಮ್ಮ ಮನೆಯ ಪೂರ್ವದ ಗವಾಕ್ಷದ ಬಳಿ ಪತ್ರೆ ಮರ ಇಲ್ಲವೆ?

ಅವಳಿ : ನಮ್ಮ ಮನೆಯ ಪೂರ್ವ ಯಾವುದು?

ಹುಡುಕುತ್ತ ಹೋಗುವನು. ಇನ್ನೊಂದು ಬದಿಯಿಂದ ಜವಳಿ ಪತ್ರೆ ತರುತ್ತಾನೆ.

ಕಮಲ : ಈಗೆಲ್ಲಿಂದ ಬಂತು? ಸರಿಸರ. ವಿವರಣೆ ಬೇಡ. ಫಲ ಪುಷ್ಪ ತಗೊಂಬನ್ನಿ.

ಜವಳಿ : ಓಹೋ ಅಗತ್ಯವಾಗಿ.

ಹೋಗುವನು. ಅವಳಿ ಬರುವನು.

ಅವಳಿ : ಇಗೋ ಬಿಲ್ವಿಪತ್ರೆ.

ಕಮಲ : ಅದನ್ನು ತಂದಾಯ್ತಲ್ಲ; ನಾನು ಹೇಳಿದ್ದು ಫಲಪುಷ್ಪ.

ಅವಳಿ : ಇಗೋ ತಂದೆ.

ಹೊರಡುವನು. ಎದುರು ದಿಕ್ಕಿನಿಂದ ಜವಳಿ ಬರುವನು. ಇಬ್ಬರೂ ಎದುರುಬದುರಾದದ್ದನ್ನು ಕಮಲ ನೋಡಿ ದಿಗಿಲುಗೊಳ್ಳುವಳು.

ಇಬ್ಬರೂ : ಅರೆ! ನನ್ನ ಎದುರಿಗೆ ಕನ್ನಡಿ ಇದೆಯಲ್ಲ!

ಇಬ್ಬರೂ ಬಿಂಬ ಪ್ರತಿಬಿಂಬದ ಹಾಗೆ ನಟಿಸುವರು

ಅವಳಿ : ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು?
ಇಲ್ಲವೆ | ಕನ್ನಡಿಯಾಗಿವೆಯೆ ನನ್ನ ಕಣ್ಣು ||

ಜವಳಿ : ನೀ ನೋಡುತ್ತಿರುವೆಯ ನನ್ನ|
ಇಲ್ಲವೆ | ನಾ ನೋಡುತ್ತಿರುವೆನೆ ನಿನ್ನ ||

ಅವಳಿ : ನಾ ನಿನ್ನ ಬಿಂಬವೋ? ನೆರಳೋ?
ಇಲ್ಲವೆ | ನೀ ನನ್ನ ಬಿಂಬವೊ ನೆರಳೊ ||

ಜವಳಿ : ನಾನಿರದೆ ನೀನಿಲ್ಲ ಹೌದೆ?
ಇಲ್ಲವೆ ! ನೀನಿರದೆ ನಾನಿಲ್ಲ ಹೌದೆ ||

ಅವಳಿ : ಇರಬಹುದು ಇಬ್ಬರೂ ಬೇರೆ
ಆದರೂ ! ಒಳಗಿಳಿದ ಮರದ ಬೇರೊಂದೆ ||

ಜವಳಿ : ಇಬ್ಬರ ನಡುವಿದೆ ಗಾಜು
ಒಡೆದರೆ | ನಾವಿಬ್ಬರೊಂದೆ ಎರಡಳಿದು ||

ಅವಳಿ : ಎರಡಳಿದರೊಂದಾಗಬಹುದೆ?
ಇಲ್ಲವೆ ! ಒಂಟಿಯಾಗುವೆವಂತೆ, ಹೌದೆ?

ಜವಳಿ : ಕರಗಿದರೆ ಒಬ್ಬರೊಬ್ಬರಲಿ
ಉಳಿವೆವೆ | ಗಾಜು ಇಲ್ಲವೆ ನೆನಪಿನಲ್ಲಿ?

ಅವಳಿ : ಕೇಳಿರುವ ಮಾತು ಈತನಕ

ಜವಳಿ : ನೀ ಹೇಳು | ಸಂವಾದವೋ ಅಥವಾ ಸ್ವಗತ?

ಇಬ್ಬರೂ : (ಗುರುತಿಸಿ) ನೀನು ನನ್ನ ಅಣ್ಣ ಅಥವಾ ತಮ್ಮನಲ್ಲವೆ?

ಅವಳಿ : ಹ್ಯಾಗಿದ್ದೀ ತಮ್ಮಣ್ಣ?

ಜವಳಿ : ಕಮಲ ನೀನು ತಕ್ಷಣ ಒಳಕ್ಕೆ ಹೋಗು. ನಾನಿವನನ್ನ ಮಾತಾಡಿಸಿ ಬರುತ್ತೇನೆ.

ಭಾಗವತ : ಓಹೊ ನಿಮ್ಮಲ್ಲೊಬ್ಬ ಅವಳಿ ಅಲ್ಲವೇನ್ರಯ್ಯಾ? ನೀನೂ ಇಲ್ಲೇ ಇದ್ದಿಯೇನಯ್ಯಾ ಅವಳಿ? ಏನು ಮಾಡಿಕೊಂಡಿದ್ದೆ?

ಜವಳಿ : ಏನೇನು ಕೆಟ್ಟದ್ದು ಸಾಧ್ಯವೊ ಅದನ್ನ ಮಾಡಿಕೊಂಡಿದ್ದಾನೆ. (ಅವಳಿಗೆ) ಈಗೇನು ಹೊರಟು ಹೋಗುತ್ತಿಯೊ? ಇಲ್ಲಾ ನಿನ್ನ ಕೊಬ್ಬಿನ ರುಚಿ ನೋಡಬೇಕೋ?

ಅವಳಿ : ಈ ಮನೆ ಮತ್ತು ಕಮಲಳ ಮೇಲೆ ನಿನ್ನಷ್ಟೇ ನನಗೂ ಅಧಿಕಾರವಿದೆ.

ಜವಳಿ : ಇವನಿಗೆ ಹೇಳಿ ಭಾಗವತರೇ – ನೀನು ಶಿವಪೂಜೆಯಲ್ಲಿ ಬಿಟ್ಟ ಕರಡಿ ಅಂತ.

ಅವಳಿ : ಹೇಳಿ ಭಾಗವತರೇ – ಇದು ಮೂರ್ಖತನದ ಪರಮಾವಧಿ ಅಂತ.

ಭಾಗವತ : ಆದರೆ ನಿಮ್ಮಲ್ಲಿ ಅವಳಿ ಯಾರು ಜವಳಿ ಯಾರು ಅಂತ ನನ್ನಲ್ಲೇ ಗೊಂದಲ ಶುರುವಾಗಿದೆಯಲ್ಲಪ್ಪ. ಯಾರಿಗಂತ ಹೇಳಲಿ? ಅಮ್ಮಾ ಕಮಲ, ನೀನು ಹೇಳು. ಇವರಿಬ್ಬರಲ್ಲಿ ನಿನಗೆ ತಾಳಿ ಕಟ್ಟಿದ ಗಂಡ ಯಾರು?

ಕಮಲ : ನನಗೂ ಗೊಂದಲವಾಗುತ್ತಿದೆ. ಕಂಡುಹಿಡಿಯೋದಕ್ಕೆ ನೀವೇ ಒಂದು ಉಪಾಯ ಹೇಳಿ ಭಾಗವತರೇ?

ಭಾಗವತ : ಹಾಗಿದ್ದರೆ ಹೀಗೆ ಮಾಡು: ಪ್ರೀತಿಸುವವರ ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ ಅಂತ ಹಿರಿಯರು ಹೇಳಿದ್ದಿದೆ. ಇಬ್ಬರ ಎದೆಗೂ ಕಿವಿ ಹಚ್ಚಿ ನೋಡು. ಯಾರ ಹೃದಯ ಜೋರಾಗಿ ಬಡಿದುಕೊಳ್ಳುತ್ತದೋ ಅವನೇ ನಿನ್ನ ಗಂಡ

ಕಮಲ ಹಾಗೇ ಮಾಡುವಳು.

ಕಮಲ : ಇಬ್ಬರ ಹೃದಯಗಳೂ ನಿಮ್ಮ ಚಂಡೆ ಥರ ಬಡಿದುಕೊಳ್ತಾ ಇವೆ ಭಾಗವತರೇ.

ಜವಳಿ : ಸರಿ ಬಿಡಿ; ಇನ್ನೊಂದು ದ್ವಂದ್ವ ಯುದ್ಧವೇ ನಿರ್ಧರಿಸಲಿ. ಎಲವೆಲ್ಲವೋ ಕದ್ದು ಹೊಕ್ಕು ನನ್ನ ತೋಟದ ಕಬ್ಬು ಮೆಲ್ಲಬಂದ ನರಿಯೇ, ನಿನ್ನ ಬೇಟೆಯಾಡಲು ಸಿದ್ಧನಾಗಿದ್ದೇನೆ. ಇಕೋ ಎದುರಿಸು.

ಅವಳಿ : (ಹೆದರಿ ಹಿಂಜರಿದು) ಪ್ರತಿ ಸಾರಿ ಯುದ್ಧವೇ ನಿರ್ಧರಿಸೋದಾದರೆ ಹ್ಯಾಗೆ?

ಜವಳಿ : (ವಿಜಯಶಾಲಿಯಾಗಿ) ಪ್ರಿಯೆ, ಗೊತ್ತಾಯಿತೆ ನನ್ನ ಶೌರ್ಯ ಧೈರ್ಯಾದಿ ಗುಣಸಂಪನ್ನತೆ? ಅಥವಾ ನಿನಗೂ ಒಂದು ಕೈ ತೋರಿಸಬೇಕೋ?

ಕಮಲ : ಗೊತ್ತಾಯಿತು ಸ್ವಾಮಿ.

ಜವಳಿ : ಹಾಗಿದ್ದರೆ ಪೂಜೆಗೆ ನಡೆ, ಹುತ್ತದ ಕಡೆ.

ಕಮಲ ಮತ್ತು ಜವಳಿ ಹೋಗುವರು.

ಭಾಗವತ : ತಪಸ್ಸು ಮಾಡೋದಕ್ಕೆ ಅಂತ ನೀನು ಹೋಗಿರಲಿಲ್ಲವೇನಯ್ಯ?

ಅವಳಿ : ಹೋಗಿದ್ದೆ. ತಪಸ್ಸೂ ಮಾಡಿದೆ. ದೇವರನ್ನು ನೋಡಿಕೊಂಡು ತಿರುಗಿ ಬಂದೆ

ಭಾಗವತ : ಹೌದೆ? ಹ್ಯಾಗಿದ್ದಾನಪ್ಪಾ ದೇವರು? ಎಲ್ಲ ಕುಶಲವ?

ಅವಳಿ : ದೇವರು ಅಂದರೆ ಮಹಾ ಅಹಂಕಾರದ ಅಗ್ನಿಕುಂಡ ಭಾಗವತರೇ. ಅಣುರೇಣು ತೃಣಕಾಷ್ಠಗಳೇನು, ಸೂರ್ಯಚಂದ್ರಾದಿಗಳೂ ತನ್ನ  ನಿಯಂತ್ರಣದಲ್ಲಿದ್ದಾರೆಂಬ ಅಹಂಕಾರ. ಭಕ್ತಾದಿಗಳು ಭಕ್ತಿಯ ತುಪ್ಪ ಸುರೀತಿರಬೇಕು. ಈ ಅಗ್ನಿಕುಂಡ ಸದಾ ನಿಗಿನಿಗಿ ಉರಿಯುತ್ತಿರಬೇಕು. ಚಕ್ರವರ್ತಿಗಳಿಗೂ ದೇವರಿಗೂ ಆಗಾಗ ಸ್ಪರ್ಧೆ ಏರ್ಪಡುತ್ತಲ್ಲ – ಅದು ಕ್ಷುದ್ರ ಅನ್ನಿಸಿ ವಾಪಸು ಬಂದೆ.

ಭಾಗವತ : ಭಾಗ್ಯವಂತನಪ್ಪ! ದೊಡ್ಡ ಅರಿವು ಪಡೆದುಕೊಂಡು ಬಂದೆ.

ಅವಳಿ : ಭಾಗವತರೇ, ನನಗೊಂದು ಎಮ್ಮೆ ಬೇಕು. ನಿಮ್ಮ ಮೇಳದಲ್ಲಿದೆಯೆ?

ಭಾಗವತ : ಊರಲ್ಲಿ ಬೇಕಾದಷ್ಟಿವೆ. ಎಮ್ಮೆ ಯಾಕಪ್ಪಾ?

ಅವಳಿ : ಒಂದು ಮಡಿಕೆ ಹಾಲು ಬೇಕಾಗಿದೆ.

ಭಾಗವತ : ಹಾಲು ಯಾಕಪ್ಪಾ?

ಅವಳಿ : ಆ ನನ್ನ ತಮ್ಮಣ್ಣನಿಗೆ ಚಳ್ಳಹಣ್ಣು ತಿನ್ನಿಸಿ ಹಾಲು ಕುಡಿಸೋದಕ್ಕೆ.

ಹೋಗುವನು