ಆತ್ಮೀಯ ಮಿತ್ರರಾದ ಚಂದ್ರಶೇಖರ ಕಂಬಾರರ ಪರಿಣತ ಪ್ರಜ್ಞೆಯ ನಾಟಕವಾದ ‘ಸಿರಿಸಂಪಿಗೆ’ಯ ಎರಡನೆಯ ಮುದ್ರಣಕ್ಕೆ ಹಿನ್ನುಡಿಯನ್ನು ಬರೆಯುವುದು ಒಂದು ಸಂತೋಷದ ಸಂಗತಿಯಾಗಿದೆ. ಕಂಬಾರರ ‘ಸಿರಿಸಂಪಿಗೆ’ಯ ಮತ್ತು ಗಿರೀಶ್ ಕಾರ್ನಾಡರ ‘ನಾಗಮಂಡಲ’ ಈ ಎರಡೂ ನಾಟಕಗಳಿಗೆ ದಿ. ಎ.ಕೆ. ರಾಮಾನುಜನ್‌ರು ಹೇಳಿರುವ ಒಂದು ಜಾನಪದ ಕತೆ ಮೂಲ ಸಾಮಗ್ರಿಯನ್ನು ಒದಗಿಸಿದೆ. ಈ ಕತೆ ಹೀಗಿದೆ:

ಯಾವ ಹೆಣ್ಣನ್ನೂ ಸಂಶಯದಿಂದ ನೋಡುವ ಒಬ್ಬ ರಾಜಕುಮಾರ ತನ್ನ ದೇಹವನ್ನು ಎರಡಾಗಿ ಸೀಳಿಕೊಂಡು, ಒಂದು ಅರ್ಧವನ್ನು ಹೆಣ್ಣಾಗಿಸಿ, ಅವಳನ್ನು ಮದುವೆಯಾಗಿ ಒಂದು ನಿರ್ಜನವಾದ ಕಾಡಿನ ಅರಮನೆಯಲ್ಲಿ ಸೆರೆಯಿಟ್ಟಿರುತ್ತಾನೆ. ಅಲ್ಲಿ ಆಕಸ್ಮಾತ್ತಾಗಿ ಬಂದ ಒಬ್ಬ ಮಾಟಗಾರ ಅವಳನ್ನು ಕಂಡು ಮೋಹಿಸಿ, ರಾಜಕುಮಾರನಿಗೆ ಗೊತ್ತಿಲ್ಲದಂತೆ ಅವಳನ್ನು ಕೂಡುತ್ತಾನೆ. ರಾಜಕುಮಾರನಿಗೆ ಗೊತ್ತಾದಾಗ ಮಾಟಗಾರ ಹಾವಾಗಿ ಬಚ್ಚಲ ಹರಿಯ ಮೂಲಕ ಪಾರಾಗುತ್ತಾನೆ. ಹಾಗೆ ಪಾರಾಗುವಾಗ ಹಾವಿನ ಅರ್ಧ ದೇಹ ರಾಜಕುಮಾರನ ಕತ್ತಿಯಿಂದ ತುಂಡಾಗುತ್ತಿದೆ. ಹಾವಿನ ಪ್ರೇಯಸಿ ಆ ಅರ್ಧವನ್ನೇ ಸುಟ್ಟು ಬೂದಿಯನ್ನು ತಾಯಿತದಲ್ಲಿ ತುಂಬಿ ತೋಳಿಗೆ ಕಟ್ಟಿಕೊಳ್ಳುತ್ತಾಳೆ. ಹೆಣ್ಣಿನ ನೆಲೆ ಗಂಡಿಗೆ ಏನು ಮಾಡಿದರೂ ತಿಳಿಯದು ಎಂಬ ನೀತಿ ಈ ಕತೆಯಿಂದ ಹೊರಡುತ್ತಿದ್ದರೂ ಈ ಕತೆಯಲ್ಲಿಯ ಪ್ರತಿಮೆಗಳು ಬೇರೆ ಅರ್ಥ ಪ್ರಪಂಚವನ್ನು ಕಟ್ಟಿಕೊಳ್ಳುವ ಹವಣಿಕೆಯಲ್ಲಿವೆ. ಈ ಕತೆ ಗಿರೀಶ್ ಕಾರ್ನಾಡ್‌ರ ನಾಟಕದಲ್ಲಿ ಮನುಷ್ಯನ ಕಣ್ಣಿಗೆ, ಬುದ್ದಿಗೆಕಾಣುವ ಸತ್ಯವೆಲ್ಲ ಅಪೂರ್ಣವಾದದ್ದು: ಯಾಕೆಂದರೆ ಮನುಷ್ಯನೇ ಅಪೂರ್ಣನಾಗಿರುವನು. ‘ಹಯದವನ’ ನಾಟಕದ ಸಮಸ್ಯೆ ‘ನಾಗಮಂಡಲ’ದಲ್ಲಿ ಮುಂದುವರಿಯುತ್ತದೆ.

ಕಂಬಾರರ ‘ಸಿರಿಸಂಪಿಗೆ’ ಗ್ರೀಕರ ನಾರ್ಸಿಸಸ್ ಕತೆಯನ್ನು ಮುಂದುವರಿಸಿದಂತೆ ತೋರುತ್ತದೆ. ನಾರ್ಸಿಸಸ್‌ ಮೋಹಿಸಿದ್ದು ತನ್ನನ್ನೋ ಅಥವಾ ತನ್ನ ಪ್ರತಿಬಿಂಬನ್ನೋ ಎಂಬ ಪ್ರಶ್ನೆಗೆ ಉತ್ತರ ಸಂದಿಗ್ಧವಾಗಿದೆ. ನಾರ್ಸಿಸಸ್ ತನ್ನ ಪ್ರತಿಬಿಂಬದೊಡನೆ ಬೇಟವನ್ನು ನಡೆಸುತ್ತ ಕಳೆದುಕೊಂಡ ತನ್ನ ಇನ್ನೊಂದು ಅರ್ಧವನ್ನು ಹುಡುಕುತ್ತಿರುತ್ತಾನೆ. ಆ ಅರ್ಧ ‘ಇಕೋ’ (ಪ್ರತಿಧ್ವನಿ)ದ ರೂಪದಲ್ಲಿ ಬಂದಾಗ ಅವನು ಗುರುತು ಹಿಡಿಯುವುದಿಲ್ಲ. ಒಂದು ಇದ್ದದ್ದು ಎರಡಾಗುವುದು, ಒಂದು ಇದ್ದದ್ದು ಹಲವಾಗುವುದು ಈ ಪ್ರಪಂಚದ ರಹಸ್ಯವಾಗಿದೆ ಎಂದು ಗೊತ್ತಾದಾಗ ಈ ತಿಳಿವಿನಲ್ಲಿಯೇ ಪೂರ್ಣ ಮತ್ತು ಅಪೂರ್ಣಗಳ ಸಮಸ್ಯೆಯೂ ತಲೆದೋರುತ್ತದೆ. ನಮ್ಮ ಖಡ್ಗದ ಅಲುಗಿಗೆ ದಕ್ಕುವುದೆಂದರೆ ಕಡಿದು ಬಿದ್ದ ಹಾವಿನ ಅರ್ಧ ದೇಹ ಮಾತ್ರ.

ನಾಟಕದ ನಾಯಕ ಶಿವನಾಗದೇವನಿಗೆ ಮದುವೆಯಾಗಲು ಮನಸ್ಸಿಲ್ಲ. ತಾಯಿಯ ಒತ್ತಾಯಕ್ಕೆ ಮಣಿದು ಮದುವೆಯಾಗಲು ಸಿದ್ದನಾಗುತ್ತಾನೆ. ತನ್ನ ಮೈಯ ಅರ್ಧವನ್ನು ಸೀಳಿ ಆ ಅರ್ಧ ಹೆಣ್ಣಾಗುತ್ತದೆಂದೂ ಅವಳನ್ನೇ ಮದುವೆಯಾಗುತ್ತೇನೆಂದೂ ಹೇಳುತ್ತಾನೆ. ಆದರೆ ಅವನ ದೇಹದ ಅರ್ಧ ಹೆಣ್ಣಾಗದೆ ಕಾಳಿಂಗಸರ್ಪವಾಗಿ ಕಾಡಿನಲ್ಲಿ ಹೊರಟು ಹೋಗುತ್ತದೆ. ನಿರ್ವಾಹವಿಲ್ಲದೆ ಶಿವನಾಗದೇವ ತಾಯಿ ತಂದ ವಧು ಸಿರಿಸಂಪಿಗೆಯನ್ನು ಮದುವೆಯಾಗುತ್ತಾನೆ. ಆದರೆ ತಾನು ಕನಸಿನಲ್ಲಿ ಕಂಡಿದ್ದ ದೀಪದ ಮೊಲ್ಲೆಗೆ ಹಾತೊರೆಯುತ್ತ ಹೆಂಡತಿಯನ್ನು ತಿರಸ್ಕರಿಸುತ್ತಾನೆ. ಪಾರಾಗಿ ಹೋಗಿದ್ದ ಕಾಳಿಂಗನಿಗೆ ಸಿರಿಸಂಪಿಗೆಯ ಮೇಲೆ ಕಣ್ಣು. ಅವನು ರಾಮಕುಮಾರನಾಗಿ ಬಂದು ಅವಳನ್ನು ಕೂಡುತ್ತಾನೆ. ಸಿರಿಸಂಪಿಗೆಯ ಅಕ್ರಮ ಗರ್ಭವನ್ನು ಶಿವನಾಗದೇವ ಒಪ್ಪುವುದಿಲ್ಲ. ಸಿರಿಸಂಪಿಗೆ ನಾಗದ ದಿವ್ಯಕ್ಕೆ ಒಪ್ಪಿದಾಗ ಕಾಳಿಂಗನೇ ಅಲ್ಲಿ ಬಂದು ಅವಳನ್ನು ಬದುಕಿಸುತ್ತಾನೆ. ಅವಳು ಮಗನನ್ನು ಹಡೆದಾಗ ತನ್ನ ಮಗುವನ್ನು ನೋಡಲೆಂದು ಬಂದವನು ಶಿವನಾಗದೇವನ ಕೈಯಲ್ಲಿ ಸಿಕ್ಕಿಬೀಳುತ್ತಾನೆ. ಇಬ್ಬರಿಗೂ ದ್ವಂದ್ವ ಯುದ್ದ ನಡೆದು ಕಾಳಿಂಗ ಸತ್ತು ಹೋಗುತ್ತಾನೆ. ಅವನು ಸತ್ತು ಹೋದ ಮೇಲೆ ಶಿವನಾಗದೇವ ತನ್ನ ಬೆನ್ನು ಹುರಿಯ ಶಕ್ತಿಯನ್ನು ಕಳೆದುಕೊಂಡು ತಾನೂ ಸಾಯುತ್ತಾನೆ. ಶಿವನಾಗದೇವ ಕಾಳಿಂಗನನ್ನು ಕೊಲ್ಲದೆ ಇರಲಾರ; ಕೊಂದ ಮೇಲೆ ತಾನೂ ಇರಲಾರ. ನಾರ್ಸಿಸಸ್‌ನಿಗೆ  ಪ್ರತಿಬಿಂಬ ಬಿಂಬವಾಗಿ ದೊರೆಯುವುದಿಲ್ಲ. ಅವನಿಗೆ ಸತ್ಯ ದೊರೆಯುವುದು ಸಾವಿನ ಕ್ಷಣದಲ್ಲಿ, ಸಾವು ಬಿಂಬ ಪ್ರತಿಬಿಂಬಗಳನ್ನು ಒಂದಾಗಿಸುವ ಅಥವಾ ಇಲ್ಲವಾಗಿಸುವ ಅದ್ಭುತ ವಿಧಾನವಾಗಿದೆ. ಈ ನಾಟಕದ ವಿದೂಷಕನಾದ ಅವಳಿ ತನ್ನ ತಮ್ಮ ಅಥವಾ ಅಣ್ಣನಾದ ಜವಳಿಯನ್ನು ಹಿಡಿಯಲು ಹೋಗಿ ಒಂದು ಗಿಡವನ್ನು ಏರುತ್ತಾನೆ. ಗಿಡ ನೀರಿನವರೆಗೆ ವಾಲಿಕೊಂಡಿರುವುದರಿಂದ ನೀರಿನಲ್ಲಿಯ ತನ್ನ ಪ್ರತಿಬಿಂಬವನ್ನೇ ಬಿಂಬವೆಂದು ಭ್ರಮಿಸಿ ನೀರಿನಲ್ಲಿ ಧುಮುಕಿ ಸತ್ತು ಹೋಗುತ್ತಾನೆ. ಅವಳಿ ಜವಳಿಯರ ಪ್ರಸಂಗ ನಾಟಕದಲ್ಲಿ ಪ್ರಮುಖ ವಸ್ತುವನ್ನು ಪ್ರತಿಬಿಂಬಿಸುತ್ತ, ಅಣಗಿಸುತ್ತ, ಅದನ್ನು ಅನುವಾದಿಸುತ್ತದೆ. ನಾಟಕದ ಒಂದು ಅರ್ಧ ಇನ್ನೊಂದು ಅರ್ಧವನ್ನು ಪ್ರತಿಬಿಂಬಿಸಿದಂತಾಗಿದೆ. ನಾಟಕದ ಕೊನೆಯಲ್ಲಿ ಈ ಎರಡೂ ಅರ್ಧಗಳು ಒಂದಾಗಲು ಹೋಗಿ ಇಲ್ಲದಂತಾಗುತ್ತವೆ ಅಥವಾ ಇಲ್ಲವಾದಂತಾದಾಗ ಒಂದಾಗುತ್ತವೆ.

ಅವಳಿ ಜವಳಿಯರ ಪ್ರಸಂಗ ಗಂಭೀರವಾದ ಮುಖ್ಯ ವಸ್ತುವನ್ನು-ಶಿವನಾಗದೇವನ ದುರಂತ ಸನ್ನಿವೇಶವನ್ನು – ಅಣಗಿಸುತ್ತದೆ, ಅನುವಾದಿಸುತ್ತದೆ ಎಂಬ ಸಂಗತಿ ನಾಟಕದಲ್ಲಿ ಸ್ಪಷ್ಟವಾಗಿ ಗೊತ್ತಾಗುವಂತಿದೆ. ಅವಳಿ ಜವಳಿಯರ ಜಗಳಾಟ, ಕಮಲಳ ಜೊತೆಗೆ ಅವರ ಪ್ರಣಯ, ಒಬ್ಬ ಅವಳನ್ನು ಮದುವೆಯಾಗಿ ಇನ್ನೊಬ್ಬ ಕಾಡಿಗೆ ಹೋಗುವುದು – ಈ ಸಂಗತಿಗಳೆಲ್ಲ ಪ್ರತಿಬಿಂಬವೂ ಹೌದು, ಅಣಕವೂ ಹೌದು ಒಂದು ದೃಷ್ಟಿಯಿಂದ ಈ ಅನುವಾದ ಪುನರುಕ್ತಿಯೂ ಹೌದು. ಆದರೆ ಈ ಅನುವಾದ ಅಥವಾ ಪುನರುಕ್ತಿಯಲ್ಲಿ ಒಂದು ವಿಶೇಷವಿದೆ. ಮೂಲ ಮತ್ತು ಅನುವಾದದ ನಡುವೆ ಒಂದು ಅದೃಶ್ಯವಾದ ಕನ್ನಡಿಯಿದೆ. ಕನ್ನಡಿಯೊಳಗಿನ ಪ್ರತಿಬಿಂಬ ಬಿಂಬವಲ್ಲ, ಅದರ ಆಭಾಸ ಮಾತ್ರ. ಅಲ್ಲದೆ ಕನ್ನಡಿಯಲ್ಲಿಯ ಉಬ್ಬುತಗ್ಗುಗಳು, ಏರಿಳಿತಗಳು ಪ್ರತಿಬಿಂಬವನ್ನು ವಿಕೃತವಾಗಿ ಮೂಡಿಸುತ್ತವೆ. ಕನ್ನಡಿ ತಿಳುವಳಿಕೆಯ ಒಂದು ಸಾಧನವಾದಾಗ ಅದಕ್ಕೊಂದು ಚೌಕಟ್ಟು ಇರುವುದಿಲ್ಲ. ಆಗ ಕನ್ನಡಿಯ ತುಂಬ ಪ್ರತಿಬಿಂಬ ತುಂಬಿಕೊಂಡು ತಾನೇ ಒಂದು ಸತ್ಯವಾಗುವ ಡೌಲನ್ನು ಮೆರೆಯುತ್ತದೆ. ಆದರೆ ಏನಿದ್ದರೂ ಅದರಲ್ಲಿ ವಿಕೃತಿ ತಪ್ಪುವುದಿಲ್ಲ. ಈ ವಿಕೃತಿ ಎಷ್ಟು ದೂರ ಹೋಗಬಲ್ಲದೆಂದರೆ ಬಿಂಬ ಸಾಯುವುದಕ್ಕಿಂತ ಮೊದಲೇ ಅದು ಸತ್ತುಹೋಗುತ್ತದೆ. ಹಾದರದಿಂದ ಸಂಪಿಗೆಯ ಪಾತಿವ್ರತ್ಯ ಸಿದ್ದವಾಗುತ್ತದೆ; ಸ್ವಕೀಯ ಪರಕೀಯವನ್ನು ತಿಳಿಯಲು ಹಾತೊರೆದಷ್ಟೂ ಪರಕೀಯ ಸ್ವಕೀಯವೇ ಆಗಿರುತ್ತದೆ. ಗಂಡನ ಜೊತೆಗೆ ಮಲಗಿದಾಗ ಗಂಡ ಪರಪುರುಷನಾಗುತ್ತಾನೆ, ಯಾಕೆಂದರೆ ಪರಪುರುಷನೇ ಗಂಡನಾಗಿರುತ್ತಾನೆ. ಇದೆಲ್ಲ ಬಿಂಬಕ್ಕೆ ಪ್ರತಿಬಿಂಬವನ್ನು ತೋರಿಸುವ ಕನ್ನಡಿಯ ಪ್ರಭಾವವಾಗಿದೆ. ಬಿಂಬಕ್ಕೆ ಕಣ್ಣುಗಳಿವೆ; ಪ್ರತಿಬಿಂಬದ ಕಣ್ಣಿನಲ್ಲಿ ನೋಟವಿರುವುದಿಲ್ಲ. ಶಿವನಾಗದೇವನ ದುರಂತವೆಂದರೆ ತಾನು ಬಿಂಬವಾಗಿದ್ದುಕೊಂಡೂ ಅವನು ಕುರುಡಾಗಿದ್ದಾನೆ. ಕಾಳಿಂಗನೇ ತಾನು ಎನ್ನುವುದನ್ನು ಅವನು ನೋಡಲಾರ, ಆದ್ದರಿಂದ ಅವನ ಚೇಷ್ಟೆಗಳಲ್ಲ ಪ್ರತಿಬಿಂಬದ ಚೇಷ್ಟೆಗಳಾಗಿವೆ. ಜಗತ್ತು ಕನ್ನಡಿಯಾದಾಗ ಕನ್ನಡಿ ಕಣ್ಣಿಗೆ ಕಾಣುವುದೇ ಇಲ್ಲ.

ನಾಟಕದ ಪ್ರಾರಂಭದಲ್ಲಿ ಶವನಾಗದೇವನ ತಾಯಿ ಅವನ ಬಗ್ಗೆ ಒಂದು ಸಂಗತಿಯನ್ನು ಹೇಳುತ್ತಾಳೆ. ಕುಲದೇವರು ಅವಳಿಗೊಂದು ಎಚ್ಚರಿಕೆ ಕೊಟ್ಟಿದ್ದಾನೆ. ನೀರಿನಲ್ಲಾಗಲಿ, ಕನ್ನಡಿಯಲ್ಲಾಗಲಿ ಶಿವನಾಗದೇವ ತನ್ನ ಪ್ರತಿಬಿಂಬವನ್ನು ನೋಡಬಾರದು. ನೋಡಿದರೆ ಸನ್ಯಾಸದತ್ತ ಅವನ ಮನಸ್ಸು ಒಲಿಯಬಹುದು. ಈ ಮಾತು ಜೈನ ತೀರ್ಥಂಕರರಿಗೆ ವೈರಾಗ್ಯವನ್ನು ಹುಟ್ಟಿಸುವ ನಿರ್ವೇದದ ಕ್ಷಣವನ್ನು  ನೆನಪಿಗೆ ತರುತ್ತದೆ. ತಾಯಿ ಅವನಿಗೆ ಪ್ರತಿಬಿಂಬವನ್ನು ತೋರಿಸಿಲ್ಲ. ಆದರೆ ಪ್ರತಿಬಿಂಬವೇ ಅವನನ್ನು ಹುಡಕಿಕೊಂಡು ಬರುತ್ತದೆ. ಕುಲದೇವರ ಕಾರಣಿಕದಲ್ಲಿ ಇರುವುದೇನು? ಸ್ವರಂಭವಾದಾಗ ಸನ್ಯಾಸಯೋಗವಿದೆ, ಅನುಜ ಸತ್ತಾಗಿವನು ಸಾವನೆಂದು. ಸ್ವರಭಂಗ ಯೌವನ ಹುಟ್ಟಿಸುವ ವಿಕ್ರತಿಗಳಲ್ಲಿ ಒಂದಾಗಿದೆ. ಯೌವನದಲ್ಲಿಯೇ ಮನುಷ್ಯ ಒಬ್ಬನಿದ್ದವನು ಎರಡಾಗುತ್ತಾನೆ. ಮಾನಸಿಕವಾಗಿ ತಾಯಿಯೊಡನೆ ಸಂಬಂಧದ ಹುರಿ ಇದೇ ಸಂದರ್ಭದಲ್ಲಿ ಕಡಿದುಕೊಳ್ಳುತ್ತದೆ. ಶಿವನಾಗದೇವನಿಗೆ ತಾಯ ಸಂಬಂಧವನ್ನು ಹರಿದುಕೊಳ್ಳುವ ಮನಸ್ಸಿಲ್ಲ. ಅವನು ತನ್ನ ಮೈಯನ್ನು ಸೀಳಿ ಒಂದು ಅರ್ಧದಲ್ಲಿ ತನ್ನನ್ನೂ ಇನ್ನೊಂದರಲ್ಲಿ ಹೆಂಡತಿಯನ್ನೂ ಪಡೆಯಬೇಕೆನ್ನುತ್ತಾನೆ. ಆದರೆ ಪಡೆದುಕೊಂಡದ್ದು ಮಾತ್ರ ತನ್ನ ದೇಹದ ಎರಡು ಅರ್ಧಗಳನ್ನು. ಅದರಲ್ಲಿ ಒಂದು ಕಾಳಿಂಗ ಸರ್ಪವಾಗಿ ಓಡಿ ಹೋಗುತ್ತದೆ. ಕಾಳಿಂಗ ಓಡಿ ಹೋದರೆ ಶಿವನಾಗದೇವ ಸನ್ಯಾಸಿಯಾಗಬೇಕು. ಸರ್ಪ ಮೃತ್ಯುವಿನ ಸಂಕೇತವಿದ್ದಂತೆ ಕಾಮದ ಸಂಕೇತವೂ ಹೌದು. ಶಿವನಾಗದೇವನ ದೇಹ ಮತ್ತು ಮನಸ್ಸುಗಳು ಬೇರೆ ಬೇರೆಯಾದವೆಂದು ನಾಟಕದಲ್ಲಿ ಸೂಚನೆ ದೊರೆಯುತ್ತದೆ. ಆದರೆ ಅದಕ್ಕಿಂತ ಭಿನ್ನವಾದ ಬೇರೊಂದು ಅರ್ಥವೂ ಇರಬಹುದಾಗಿದೆ. ಕಾಡಿನಲ್ಲಿ ಕಾಳಿಂಗನಾಗಿ ಹರಿದಾಡುವವನು ಸಿರಿಸಂಪಿಗೆಯ ಕಣ್ಣಿನಲ್ಲಿ ಶಿವನಾದೇವನಾಗುತ್ತಾನೆ, ಬಿಂಬ ಮತ್ತು ಪ್ರತಿಬಿಂಬಗಳು ಒಂದಾಗುವುದು ಸಿರಿಸಂಪಿಗೆಯ ಕಣ್ಣಿನ ನೋಟದಲ್ಲಿ ಇಲ್ಲವೆ ಸಾವಿನ ಕ್ಷಣದಲ್ಲಿ. ಈ ಆಯ್ಕೆ ದಾರುಣವಾಗಿದೆ. ಶಿವನಾಗದೇವ ಪ್ರಬುದ್ದನಾಗಬೇಕಾದರೆ ಈ ಆಯ್ಕೆಯಲ್ಲಿ ಗೆಲ್ಲಬೇಕು. ನಮ್ಮ ಪುರಾಣದಲ್ಲಿ ಕೂಡ ರತಿಪ್ರೌಢಳಾಗಿ ಕಾಮ ಶಿಶುವಾಗಿದ್ದಾನೆ. ತಾಯಿಗೆ ತನ್ನನ್ನು ಕೊಟ್ಟು ಕಾಳಿಂಗನನ್ನು ಸಿರಿಸಂಪಿಗೆಗೆ ದಾನ ಮಾಡಿದ ಶಿವನಾಗದೇವ ಎಂದೆಂದೂ ಒಂದಾಗದಂತೆ ಇಲ್ಲವಾಗುತ್ತಾನೆ. ಅವನು ಸಿರಿಸಂಪಿಗೆಯನ್ನು ಪ್ರೀತಿಸಿದ್ದರೆ – ಪರಕೀಯವನ್ನು ಸ್ವಕೀಯವಾಗಿಸಿಕೊಂಡಿದ್ದರೆ – ಕಾಳಿಂಗನನ್ನು ತನ್ನಲ್ಲಿಯೇ ಕರಗಿಸಿಕೊಳ್ಳಬಹುದಾಗಿತ್ತು. ಶಿವನಾಗದೇವ ಕಾಳಿಂಗನ ಬೆನ್ನು ಹತ್ತಿ ಅವನನ್ನು ಕೊಂದು ಸಿರಿಸಂಪಿಗೆಯನ್ನು ಕಳೆದುಕೊಳ್ಳುತ್ತಾನೆ.

ಪ್ರತಿಬಿಂಬದ ಅಸ್ತಿತ್ವ ಬಿಂಬವನ್ನು ಅವಲಂಬಿಸಿರುತ್ತದೆ; ಬಿಂಬವೇ ಸತ್ಯ, ಪ್ರತಿಬಿಂಬ ಏನಿದ್ದರೂ ಬಿಂಬದ ಅಭಾಸ ಎನ್ನುವ ನಿರ್ಣಯಕ್ಕೆ ನಾವು ಬಂದು ಮುಟ್ಟಿದ್ದೇವೆ.ಆದರೆ ಪ್ರತಿಬಿಂಬವನ್ನು ಮೂಡಿಸುವ ಕನ್ನಡಿಯ ಬಗ್ಗೆ ನಮ್ಮ ಲಕ್ಷ್ಯ ಹೋಗಿಲ್ಲ. ಈ ಮಾಯದ ಕನ್ನಡಿ ಯಾವುದು? ಈ ಪ್ರಶ್ನೆಗೆ ಉತ್ತರವನ್ನು ಈ ನಾಟಕ ಹುಡುಕುತ್ತದೆ.

ನಾಟಕದ ಎರಡನೆಯ ದೃಶ್ಯದಲ್ಲಿ ಒಬ್ಬ ಪುರಸ್ತ್ರೀ ಭಾಗವತನ್ನು ಭೆಟ್ಟಿಯಾಗಲು ಬರುತ್ತಾಳೆ. ಭಾಗವತ ಅವಳ ಹೆಸರನ್ನು ಮರೆತಿದ್ದಾನೆ ಮತ್ತೆ ಅವಳ ಹೆಸರನ್ನು ಕೇಳುತ್ತಾನೆ. ಅವಳು ತನ್ನ ಹೆಸರನ್ನು ಒಂದು ಒಗಟಿನಲ್ಲಿ ಮುಚ್ಚಿ ಹೇಳುತ್ತಾಳೆ ‘ಕೆಸರು ತೌರುಮನೆ, ನೀರು ನೆಂಟರ ಮನೆ, ಬೆಳಕಿನ ಗಂಡನನ್ನು ನೋಡಿ ದಳದಳ ಅರಳುತ್ತದೆ’ ಇದರರ್ಥ ಏನು ಎಂದು ಕೇಳಿದಾಗ ಅದಕ್ಕೆ ಜವಳಿ ಉತ್ತರ ಕೊಡುತ್ತಾನೆ:

ಕೆಸರು ನಿನ್ನ ತೌರುಮನೆ
ಮಳೆಯ ನೀರು ಬೀಗರ ಮನೆ
ಗಂಡು ಬೆಳಕು ಕಂದೀಲಿಗೆ
ಅರಳುವಾಕೆ ನೀನಲ್ಲವೇ?
ನಿನ್ನ ಹೆಸರು ವಂಡರಗಪ್ಪೆ! ಅಲ್ಲವೇನೇ!

ಉತ್ತರ ಸಯುಕ್ತಿಕವಾಗಿದ್ದರೂ ಅವಳು ಅಲ್ಲವೆನ್ನುತ್ತಾಳೆ. ಆಗ ಅವಳಿ ತನ್ನ ಇನ್ನೊಂದು ಉತ್ತರವನ್ನು ಕೊಡುತ್ತಾಳೆ:

ಕೆಸರಿನಲ್ಲಿ ಹುಟ್ಟುವಾಕೆ
ನೀರಿನಲ್ಲಿ ತೇಲುವಾಕೆ
ಬೆಳಕಿನಲ್ಲೇ ಅರಳುವಾಕೆ
ಹಸಿರು ಪಾಚಿ ನೀನಲ್ಲವೇ! ಎಲೆಲೆ ಹೆಣ್ಣೆ!
ಪಾಚಿ ನಿನ್ನ ಹೆಸರಲ್ಲವೇ

ಈ ಉತ್ತರವೂ ಸರಿಯಲ್ಲ. ಅವಳ ಹೆಸರು ‘ಕಮಲ’ ಎಂದು ಭಾಗವತ ಹೇಳುತ್ತಾನೆ. ಅವರಿಬ್ಬರಿಗಿಂತ ಭಾಗವತ ಜಾಣ, ಕಲಿತವನು.

ಆದರೆ ಇಲ್ಲಿಯ ಸಮಸ್ಯೆ ಎಂದರೆ ಅವಳಿ ಮತ್ತು ಜವಳಿ ಹೇಳಿದ್ದು ಯಾಕೆ ಸರಿಯಲ್ಲ ಎನ್ನುವುದು. ಅವಳ ಹೆಸರು ಕಮಲ ಎಂದೇ ಇರಬಹುದು. ‘ಕಮಲ’ ಎನ್ನುವುದು ಕೇವಲ ಹೆಸರಾಗಿದ್ದರೆ ಕಾಲ ದೇಶಗಳಿಂದ ಪ್ರಭಾವಿತವಾಗದ ಒಂದು ತತ್ವವಾಗುತ್ತದೆ. ಅದರ ಅರ್ಥ ಅದೇ ಆಗಿರುವುದರಿಂದ ಅದನ್ನು ವಿವರಿಸಿ ಹೇಳಲು ಬರುವುದಿಲ್ಲ. ಆದರೆ ‘ಕಮಲ’ ಶಬ್ದವಾದಾಗ ಅದಕ್ಕೊಂದು ಅರ್ಥವಿದೆ. ಅದನ್ನು ಭಾಷೆಯ ಮೂಲಕ ವಿವರಿಸಿ ಹೇಳಬಹುದು. ಪುರಸ್ತ್ರೀ ಅದನ್ನೇ ಮಾಡುತ್ತಾಳೆ. ‘ಕಮಲ’ ಶಬ್ದದ ಅರ್ಥವನ್ನು ಕೊಟ್ಟು ಶಬ್ದವನ್ನು ಊಹಿಸಲು ಹೇಳುತ್ತಾಳೆ. ಅರ್ಥವನ್ನಷ್ಟೇ ಪರಿಭಾವಿಸಿದಾಗ, ಅಥವಾ, ಭಾಷೆಯಲ್ಲಿ ಮೂಡಿದ ಅರ್ಥವನ್ನು ಪರಿಭಾವಿಸಿದಾಗ, ಮೂರು ರೀತಿಯ ಊಹೆಗಳು ಮೂರು ಶಬ್ದಗಳನ್ನು ಹುಡುಕಿ ತೆಗೆಯುತ್ತವೆ. ‘ವಂಡರಗಪ್ಪೆ’, ‘ಪಾಚಿ’ ಮತ್ತು ‘ಕಮಲ’ ಇವು ಮೂರೂ ಸರಿಯಾದ ಉತ್ತರಗಳೇ ಆಗಿವೆ. ಭಾಗವತನ ಊಹೆ ಅವಳಿಂದ ಸ್ವೀಕೃತವಾಗುತ್ತದೆ, ಉಳಿದವರ ಊಹೆಗಳು ತಿರಸ್ಕೃತವಾಗುತ್ತವೆ. ಆದರೂ ಅವರ ಊಹೆ ತಪ್ಪಲ್ಲ. ಅವರ ಊಹೆಗಳು ತಪ್ಪಾಗಿದ್ದರೆ ಭಾಗವತನ ಊಹೆಯೂ ತಪ್ಪಾಗುತ್ತದೆ. ಭಾಗವತನ ಊಹೆ ಸರಿಯಾಗಿರುವುದು ಒಂದು ಆಕಸ್ಮಿಕ ಸತ್ಯವಾಗಿದೆ. ಜಗತ್ತನ್ನು ಆಳುವುದು ಆ ಆಕಸ್ಮಿಕ ಸತ್ಯವೇ.

ಈ ನಾಟಕದಲ್ಲಿಯೂ ಮೂವರು ನಾರ್ಸಿಸಸ್ಸರಿಗೆ – ಶಿವನಾಗದೇವ, ಅವಳಿ ಮತ್ತು ಜವಳಿ – ಮೂರು ಸತ್ಯಗಳು ದೊರಕಿವೆ. ಮೂವರನ್ನೂ ಅವರವರ ಸತ್ಯಗಳು ಕೊಂದುಹಾಕಿವೆ. ಅದಕ್ಕೆ ಕಾರಣ ಕನ್ನಡಿ, ನೀರು ಮತ್ತು ಕಾಳಿಂಗದಂಥ ಸತ್ಯದ ಮಾಧ್ಯಮಗಳು, ಸತ್ಯದ ಭಾಷೆಗಳು. ಭಾಷೆಯ ಕನ್ನಡಿ ಜಗತ್ತನ್ನು ಪ್ರತಿಬಿಂಬಿಸುತ್ತಲೇ ಇರುತ್ತದೆ. ಈಗ ಕಂಡ ಪ್ರತಿಬಿಂಬ ಮುಂದಿನ ಕ್ಷಣಕ್ಕಿಲ್ಲ. ಅಂದರೆ ನಮಗೆ ಸಿಗುವ ಜಗತ್ತುಗಳೆಲ್ಲ ಮೂಲ ಸತ್ಯದ ಪ್ರತಿಬಿಂಬಗಳು ಅಥವಾ ಮೂಲ ವಾಕ್ಯದ ಪುನರುಕ್ತಿಗಳು. ಮೂಲ ಮಾತ್ರ ಕಳೆದುಹೋಗಿದೆ. ಕಂಬಾರರ ಈ ನಾಟಕದ ಪ್ರಕಾರ ಮೂಲವನ್ನು ನುಂಗಿ ನೀರು ಹಿಡಿದವಳು ಹೆಣ್ಣು. ಹೆಣ್ಣಿನ ನೆಲೆ ನೀರಿನ ನೆಲೆಯಂತೆ ಅಗಾಧವಾದದ್ದು. ಬಹುಶಃ ಇದೇ ಈ ನಾಟಕದ ಮೂಲಕತೆಯ – ಎ.ಕೆ. ರಾಮಾನುಜನ್‌ ಹೇಳಿದ ಕತೆಯ – ನೀತಿಪಾಠವಾಗಿದೆ. ಆದರೆ ಕಂಬಾರರ ಈ ನಾಟಕದಲ್ಲಿ ಅದರ ಅರ್ಥ ಬದಲಾಗಿದೆ. ಆಗಲೇಬೇಕು. ಕಂಬಾರರ ಸಿರಿಸಂಪಿಗೆ ತನ್ನ ಗರ್ಭದಲ್ಲಿ ಈ ಸತ್ಯವನ್ನು ಕಾಪಾಡಿಕೊಂಡಿದ್ದಾಳೆ. ಶಿವನಾಗದೇವ ಸಾಯುವ ಮೊದಲು ಅವಳಿಗೆ ಒಂದು ಮಾತು ಹೇಳುತ್ತಾನೆ: ‘ನನ್ನ ಮಗ ಸೀಳಿಕೊಳ್ಳದ ಹಾಗೆ ನೋಡಿಕೋ’. ಮಗ ಸೀಳಿಕೊಳ್ಳದ ಹಾಗೆ ನೋಡಿಕೊಳ್ಳುವುದು ತಾಯಿಯ ಜವಾಬ್ದಾರಿಯಾಗಿದೆ. ಆದರೆ ಮಗ ತಾಯಿಯಿಂದ ಸೀಳಿಕೊಂಡು ಹೋದ ಮೇಲೆ ಅವನನ್ನು ಮತ್ತೆ ಕೂಡಿಸುವವಳು ಅವನ ಹೆಂಡತಿ. ತಾಯಿ ಮತ್ತು ಹೆಂಡತಿಯ ಪರಸ್ಪರ ವಿರುದ್ಧವಾದ ಪಾತ್ರಗಳನ್ನು ನಿರ್ವಹಿಸಿದವಳು ರತಿಯಾದರೆ ಅವಳ ಇನ್ನೊಂದು ರೂಪ ಈ ಜಾನಪದ ರಮಣಿ ಸಿರಿಸಂಪಿಗೆ. ಸಿರಿಸಂಪಿಗೆಯ ವ್ಯಕ್ತಿತ್ವ ಎಂತಹದೆಂಬುದನ್ನು ನಾಟಕ ಹೇಳುವುದಿಲ್ಲ. ಅಥವಾ ಅವಳಿಗೆ ಯಾವುದೇ ಮಾನಸಿಕ ವ್ಯಕ್ತಿತ್ವವೇ ಇಲ್ಲ. ಶಿವನಾಗದೇವನ ತಾಯಿಗೆ ವಂಶದ ಘನತೆಯ ಎಚ್ಚರವಿದೆ, ಅದು ಮುಂದುವರೆಯಬೇಕೆಂಬ ಕಳಕಳಿ ಇದೆ. ಆದರೆ ಸಿರಿಸಂಪಿಗೆ ಕೇವಲ ಹೆಣ್ಣು. ಅವಳೇ ಒಂದು ಕನ್ನಡಿ; ಜಗತ್ತಿನ ಚಟುವಟಿಕೆಯನ್ನು ಲೀಲಾನೃತ್ಯವಾಗಿ ಮಾರ್ಪಡಿಸಿ ಅನುವಾದ ಮಾಡುವ ಮಾಯದ ಕನ್ನಡಿ. ಜಗತ್ತಿನೊಡನೆ ನಮ್ಮನ್ನೆಲ್ಲ ಹೊಂದಿಸುವ, ಅದರಂತೆಯೇ ಬೇರ್ಪಡಿಸುವ, ಬೇರ್ಪಡಿಸಿ ಅದರಾಚೆಗಿರುವ ಸತ್ಯವನ್ನು ತೋರಿಸುವ ಇಮ್ಮೈಯ ಚೌಕಟ್ಟಿಲ್ಲದ ಕನ್ನಡಿ.

ಇಷ್ಟೆಲ್ಲ ಹೇಳಿಯೂ ಎಲ್ಲವನ್ನೂ ಹೇಳಿದಂತಾಗುವುದಿಲ್ಲ. ಕಂಬಾರರು ‘ಋಷ್ಯಶೃಂಗ’, ‘ಜೋಕುಮಾರಸ್ವಾಮಿ’, ‘ಹುಲಿಯ ನೆರಳು’ ಮೊದಲಾದ ಯಶಸ್ವಿಯಾದ ನಾಟಕಗಳನ್ನು ಕೊಟ್ಟಿದ್ದಾರೆ. ಆದರೆ ‘ಸಿರಿಸಂಪಿಗೆ ಅನನ್ಯವಾಗಿದೆ. ಮನುಷ್ಯ  ಜೀವನದ ರಹಸ್ಯತಮವಾದ ಸತ್ಯವನ್ನು ತೆರೆದು ತೋರಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ಈ ದೃಷ್ಟಿಯಿಂದ ಇದು ಕನ್ನಡದಲ್ಲಿಯೇ ಶ್ರೇಷ್ಠವಾದ ನಾಟಕವಾಗಿದೆ.

ಕೀರ್ತಿನಾಥ ಕುರ್ತಕೋಟಿ