‘ಸಿರಿ’ ಅಧ್ಯಯನ ಸಂದರ್ಭದಲ್ಲಿ ನಿರ್ಲಕ್ಷಿಸಲ್ಪಟ್ಟ ವಿಚಾರಗಳು’ ಕುರಿತಾಗಿ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಕೊಡಲು ಪ್ರಯತ್ನಿಸಲಾಗಿದೆ. ನಮ್ಮ ನಾಡಿನ ಅನೇಕ ವಿದ್ವಾಂಸರು, ಹೊರ ದೇಶದ ವಿದ್ವಾಂಸರು ‘ಸಿರಿ’ ಆಚರಣೆ ಬಗ್ಗೆ ವಿವಿಧ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿದಾಗ್ಯೂ ಮೌಖಿಕ ಹಿನ್ನೆಲೆಯಲ್ಲಿ ಇತಿಹಾಸ ಸಂರಚನೆಗೆ ಬೇಕಾದ ಆಕರಗಳು ದೊರೆತರೂ ನಿರ್ಲಕ್ಷಿಸಿದ್ದಾರೆ ಎನ್ನುವುದು ನನ್ನ ಅಭಿಮತ. ಇದನ್ನು ಅಧ್ಯಯನದ ಒಂದು ಲೋಪವೆಂದು ನಾನು ಭಾವಿಸಲಾರೆ ಬದಲಾಗಿ ಸಂಶೋಧಕರು ಕ್ಷೇತ್ರಕಾರ್ಯ ಸಂದರ್ಭದಲ್ಲಿ ಇನ್ನಷ್ಟು ಆಳವಾಗಿ ದೊರಕಬಲ್ಲ ಸಂಪನ್ಮೂಲ ವಿಚಾರ ಗಳನ್ನು ಸಂಗ್ರಹಿಸುವಲ್ಲಿ ಪ್ರಯತ್ನಪಟ್ಟಿದ್ದೇ ಆದರೆ ಇನ್ನಷ್ಟೂ ಸತ್ವಭರಿತವಾದ ಆಶಯಗಳು ಸಿರಿ ಅಧ್ಯಯನ ನೆಲೆಯಲ್ಲಿ ಮೂಡಿಬರುತ್ತಿದ್ದವು. ಹೀಗಾಗಿ ಇನ್ನಾದರೂ ‘ಸಿರಿ’ ಸಂಬಂಧವಾಗಿ ಹೆಚ್ಚಿನ ಅಧ್ಯಯನ ಮಾಡುವವರು ಮುತುವರ್ಜಿಯಿಂದ ಉತ್ತಮ ಸಾಹಿತ್ಯ – ಸಂಶೋಧನೆಯ ವಿಚಾರಗಳನ್ನು ನೀಡಲಿ ಎಂಬುದು ನನ್ನ ಅಭಿಮತ.  ಮೊದಲನೆಯದಾಗಿ ಮೌಖಿಕ ಇತಿಹಾಸ ಅಥವಾ ಚರಿತ್ರೆಯನ್ನು ಕಟ್ಟಿಕೊಡಬಲ್ಲ ಆಧಾರವನ್ನು ಅವಗಣನೆ ಮಾಡಲ್ಪಟ್ಟ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ‘ಸಿರಿ’ ಅಧ್ಯಯನದ ಹಿನ್ನೆಲೆಯಲ್ಲಿ ನಿರ್ಲಕ್ಷಿಸಲ್ಪಟ್ಟ ಇನ್ನಷ್ಟೂ ಕೆಲವು ವಿಚಾರಗಳಿಗೆ ಸಂಬಂಧವಾಗಿ ಪೂರಕ ಮಾಹಿತಿ ಅಥವಾ ಟಿಪ್ಪಣಿಗಳನ್ನು ಈ ಲೇಖನದ ಅಂತ್ಯಭಾಗದಲ್ಲಿ ಕೊಡಲಾಗಿದೆ – ಗಮನಿಸಿ.

ಸಾಂಪ್ರದಾಯಿಕ ನೆಲೆಯಲ್ಲಿ ಸಂರಚಿಸುವ ಇತಿಹಾಸ ಹಾಗೂ ಮೌಖಿಕ ದೃಷ್ಠಿಕೋನದ ಇತಿಹಾಸ ಸೃಷ್ಟಿಸುವಲ್ಲಿ ಅನೇಕ ಭಿನ್ನಭಿಪ್ರಾಯಗಳಿವೆ. ಈ ಭಿನ್ನಭಿಪ್ರಾಯದಿಂದಾಗಿ ಇತಿಹಾಸದ ಪೂರ್ಣ ಸತ್ಯ ಬೆಳಕಿಗೆ ಬಾರದೇ ಅನ್ವಯಿಕ ಶಿಸ್ತನ್ನು ಬಳಸಿಕೊಳ್ಳದ ಸಂರಚನಾ ಕಾರರ ನಿಲುವುಗಳೇ ಚರಿತ್ರೆ ಎಂದು ಕರೆಯಿಸಿಕೊಳ್ಳುವುದಾದರೆ ಅದು ಸಂಪೂರ್ಣ ಇತಿಹಾಸ ಎಂದು ಕರೆಯಲಾಗದು. ಇತಿಹಾಸಕಾರರು ಮತ್ತು ಜಾನಪದ ವಿದ್ವಾಂಸರು ಕೂಡಿ ಮಾಹಿತಿ ಗಳನ್ನು ಕೊಡು – ಕೊಳ್ಳುವುದರ ಮೂಲಕ ವಿಚಾರ ವಿಮರ್ಶೆ ಮಾಡಿಕೊಂಡು ಇತಿಹಾಸ ಸಂರಚನೆ ಮಾಡುವಲ್ಲಿ ಪ್ರಯತ್ನ ಪಟ್ಟಿದ್ದೇ ಆದರೆ ಸಂಪೂರ್ಣ ಚರಿತ್ರೆ ಎಂದು ಕರೆಯಿಸಿ ಕೊಳ್ಳುವುದು. ಸಾಂಪ್ರದಾಯಿಕ ಆಕರಗಳನ್ನು ಸಂಗ್ರಹ ಮಾಡಿ ಸಂರಚನೆ ಮಾಡುವ ಇತಿಹಾಸದ ವಿಷಯಗಳಿಗೆಲ್ಲಾ ಮೌಖಿಕ ಇತಿಹಾಸ ಇದ್ದೇ ಇರುತ್ತದೆ ಎನ್ನುವ ಅಭಿಪ್ರಾಯ ನನ್ನದಲ್ಲ. ಸಾಂಪ್ರದಾಯಿಕ ಇತಿಹಾಸಕಾರರಿಗೆ ಮೌಖಿಕ ಇತಿಹಾಸವೂ ಅರ್ಥವಿಲ್ಲದ್ದು ಎಂದು ಕೆಲವರು ಅಭಿಪ್ರಾಯವುಳ್ಳವರಾಗಿರುತ್ತಾರೆ. ಇದು ಆರೋಪವೆಂದು ಯಾರೂ ತಿಳಿಯಬಾರದು.  ಸಂಪೂರ್ಣ ಇತಿಹಾಸ ರಚನೆಗೆ ಆನ್ವಯಿಕ ಶಿಸ್ತಿನ ಚಿಂತನೆಗಳನ್ನು ಕೂಡಿಸಿ ರಚಿಸಬಲ್ಲ ಇತಿಹಾಸ ಇನ್ನಷ್ಟೂ ಗಟ್ಟಿಯಾಗಬಲ್ಲದು. ಇತಿಹಾಸ ರಚನೆಯ ಸಂದರ್ಭದಲ್ಲಿ ಶ್ರೀ ಸಾಮಾನ್ಯರ ಬದುಕನ್ನೂ ಗಮನದಲ್ಲಿರಿಸಿಕೊಂಡು ಆಳುವ ವರ್ಗದವರು ಬಿಟ್ಟು ಹೋದ ಮಾಹಿತಿಗಳನ್ನು ವಿಮರ್ಶೆ ಮಾಡಿ ಚರಿತ್ರೆ / ಇತಿಹಾಸ ಬರೆಯುವುದರ ಅಗತ್ಯವಿದೆ.  ವಿಶೇಷ ವಾಗಿ ಶ್ರೀ ಸಾಮಾನ್ಯನ ಬದುಕಿನ ಏರಿಳಿತಗಳೂ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಅಥವಾ ರಾಜ್ಯ ಕಟ್ಟುವಲ್ಲಿ ಶ್ರಮದ ದುಡಿಮೆಗಳಾಗಿ ಇರುತ್ತವೆ ಎನ್ನುವುದನ್ನು ಅಲ್ಲಗಳೆಯಲಾಗದು. ಇತಿಹಾಸದಲ್ಲಿ ಎಲ್ಲವೂ ರಾಜನ – ಮುಖಂಡನ ಹಿರಿಮೆ – ಗರಿಮೆಯೊಂದಿಗೆ ಲೀನವಾಗು ವುದು. ಹೀಗಾಗಿ ಜನಪದರ ಮೌಖಿಕ ಸಾಹಿತ್ಯದತ್ತ ಇತಿಹಾಸಕಾರರು ಗಮನ ಕೊಡುವುದು ಅವಶ್ಯವಾಗಿದೆ. ಜನಪದ ಸಾಹಿತ್ಯವೆಂದರೆ ಅದು ಕಾಲ ಮತ್ತು ಸಂದರ್ಭಗಳ ದಾಖಲೆ. ಲಿಖಿತ ಇತಿಹಾಸ ಹುಟ್ಟಿಕೊಳ್ಳುವುದು ಮೌಖಿಕ ಇತಿಹಾಸದ ಪರಂಪರೆಯಲ್ಲಿ. ಆದರೂ ಮೌಖಿಕ ಪರಂಪರೆಯಲ್ಲಿ ಚಾರಿತ್ರಿಕ ಹಿನ್ನೆಲೆ ಇಲ್ಲ ಎಂದು ವಾದಿಸುವವರು ಬಹಳಷ್ಟು ಜನ ಇಂದು ಜನಪದವನ್ನೂ ಒಂದು ಶಾಸ್ತ್ರ ಎಂದು ಪರಿಗಣಿಸಿ ಇತಿಹಾಸ ಸಂರಚನೆಗೆ ಚಾಲನೆ ನೀಡುವಲ್ಲಿ ಮುಂದೆ ಬಂದಿದ್ದಾರೆ ಇದೊಂದು ಶುಭಸೂಚಕವಾದ ಮಾರ್ಗ ಎಂದು ಸ್ವೀಕರಿಸುವ ಮನಸ್ಸಿನಿಂದ ಚರಿತ್ರೆ / ಇತಿಹಾಸ ನಿರ್ಮಾಣವಾಗಲಿ – ಈ ನಿಟ್ಟಿನಲ್ಲಿ ನಮ್ಮ ಅಧ್ಯಯನ, ಸಂಶೋಧನೆ ಆನ್ವಯಿಕ ಶಿಸ್ತಿನ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಸಿರಿ : ದ.ಕ. ಜಿಲ್ಲೆಯ ಆಚರಣೆಗಳಲ್ಲಿ ಸಮೂಹವಾಗಿ ಮೈದುಂಬುವ ಅಥವಾ ಆವೇಶಕ್ಕೆ ಒಳಗಾಗುವ ಆಚರಣೆಯಲ್ಲಿ ಸಿರಿ ಆಯನ / ಉತ್ಸವಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇದೆ. ‘ಸಿರಿ’ – ಓರ್ವ ಸ್ತ್ರೀ ಅನ್ಯಾಯದ ವಿರುದ್ಧ ದಿಟ್ಟವಾಗಿ ಹೋರಾಡಿದ ಹೆಣ್ಣು. ಈಕೆ ಹುಟ್ಟು – ಬೆಳವಣಿಗೆ ಸಂಬಂಧಿಯಾಗಿ ಕಥೆಯಾಗಿ, ಕಾವ್ಯವಾಗಿ ಜನರ ಬಾಯ್ದೆರೆಯ ಇತಿಹಾಸ ಇನ್ನೂ ಜೀವಂತವಾಗಿದೆ. ‘ಸಿರಿ’ – ಮಾತೃಮೂಲ್ಯ ಕುಟುಂಬಕ್ಕೆ ಸೇರಿದ ಜೈನ ಯಾ ಭಂಟ ಕುಲದ ಹೆಣ್ಣು. ಈ ಸಂಬಂಧವಾಗಿ ಮಹಾಕಾವ್ಯವನ್ನು ಪ್ರೊ. ಲೌರಿ ಹಾಂಕೋ, ಶ್ರೀಮತಿ ಅನೇಲಿ ಹಾಂಕೊ, (ಫಿನ್‌ಲ್ಯಾಂಡ್) ಡಾ. ಬಿ. ಎ. ವಿವೇಕ ರೈ ಮತ್ತು ಡಾ. ಚಿನ್ನಪ್ಪ ಗೌಡ ಇವರು ಪ್ರಕಟಿಸಿರುವರು.  ಎ. ವಿ. ನಾವಡ ಇವರು ಶ್ರೀಮತಿ ಗಿಡಿಕರೆ ರಾಮಕ್ಕ ಹೇಳಿದ ಸಿರಿ ಕಾವ್ಯವನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ.  ಈ ಕಾವ್ಯದಲ್ಲಿ ಬರುವ ಪಾತ್ರಗಳ ಕುರಿತು ಮತ್ತು ಇತಿಹಾಸ ನೆಲೆಯಲ್ಲಿ ತೌಲನೀಕರಿಸಿ ಅಧ್ಯಯನ ಮಾಡುವ ಒಂದು ಪ್ರಯತ್ನ ನಿರಂತರ ಸಾಗಿದೆ.

ಇತಿಹಾಸ ಮತ್ತು ಮೌಖಿಕ ಇತಿಹಾಸ (ಜಾನಪದ) ಎರಡೂ ಕೂಡಿದರೆ ನಿರ್ಮಾಣ ವಾಗುವ ಇತಿಹಾಸ ಎಷ್ಟೊಂದು ಸದೃಡತೆ ಪಡೆಯಬಲ್ಲದು ಎನ್ನುವುದಕ್ಕೆ ದ.ಕ. ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ನಿಡ್ಗಲ್ (ಸಿರಿ ಆಚರಣೆ ನಡೆಯುವ ಸ್ಥಳ) ಎಂಬಲ್ಲಿ ದೊರೆತ ಒಂದು ಶಾಸನ ಮುಖ್ಯವಾಗಿದೆ. ಈ ಶಾಸನದ ಪ್ರಧಾನ ಆಶಯ ಜೈನ ಅರಸರ ಸಂಬಂಧ ವಾದ ಬಂಗರು ಮತ್ತು ಮೂಲರು ಕದನ ನಡೆಸಬಾರದೆಂಬ ಲಿಖಿತ ಕರಾರು. ಕಾಲ : ಸುಮಾರು ಕ್ರಿ. ಶ. ೧೪೬೦ ರಿಂದ ಕ್ರಿ. ಶ. ೧೪೮೦.

ಶಾಸನದ ಪಾಠ

೧. ಶ್ರೀಮತು ಕಾಮಿರಾಯ ಬಂಗಳು ಪೆನ್ನಂಣ ಮೂಲರೂ ಬರಸಿ
(ಶ್ರೀ ಮತು ಕಾಮಿರಾಯ ಬಂಗರು ಬಿರುಮಣ ಮಾಲರು ಬರಸಿ)

೨. ದ ಶಾಸನದ ಕ್ರಮ ಯಂದರೆ ನೆಡಗಲ್ಲ ಹೊಲೂಕಳೆ
(ದ ಶಾಸನದ ಕ್ರಮಯೆಂತಡೆ ವಕುಗಳ (ಹು)ಲು ಚರ)

೩. ಕೈ ಉಭೆ ಕೆಯ್ಯದ ಶಾಸನದ ಆಡಕಟಿ ಆಡಕ್ಕೆ ಯಿ ಹೊ
(ವೆ ಉಜಿರೆಯದ ಶಾಸನದ (ದಿ?) ಆದಂತೆ ಆದ ಕ ಟುನೋ)

೪. ಲೂ ಗಳ್ಳದಲ್ಲಿ ಕಾಳಗ ಸಲ್ಲದು ಯಿ ಆಡಕವ ಮೀರಿದಾ
(ಊಗಳ (?) ದಲ್ಲಿ ಕಾಳಗ ಸಲ್ಲದು ಈ ಆದ ಕ ಟ್ಟ ಇಕ್ಕಿದ)

೫. ಶ್ರೀಮತ್ತು…………………………………ಸೋಮನಾತ
(ಧರ್ಮಬರಹ (ಮೂಲಿ) ಗಕಳತಾರ ಸೋಮನಾಥ)

೬. ದೇವರಿಗೂ…………………………ಳಿಯ ಶ್ರೀಪಾದಂಗ
(ದೇವರಿಗು ತಪ್ಪಿದ ದೇಶ ಗ)

೭. ಳ ಮಧ್ಯಸ್ತ ಬಂಗರ ಮೂಲರ ಸ್ವಹಸ್ತದ ವೊಪ್ಪ ಶ್ರೀ ಶ್ರೀ
(ಳ ಮಧ್ಯಸ್ತ ಬಂಗರ ಮೂಲರ ಸ್ವಹಸ್ತದ)

ಪದದ ಅರ್ಥ :

೧ನೇ ಸಾಲು : ಕಾಮಿರಾಯ ಬಂಗರು (ಬಂಗರ ರಾಜ), ಪೆನ್ನಂಣ ಮೂಲರೂ = ಮೂಲ (ಜೈನ ವರ್ಗದ ಮೂಲರು) ವಂಶದ ರಾಜ.

೨ನೇ ಸಾಲು : ನೆಡಗಲ್ಲ = ನಿಡ್ಗಲ್ (ಶಾಸನ ದೊರೆತ ಊರಿನ ಹೆಸರು)

೨ನೇ ಸಾಲು : ಹೊಲೂಕಳೆ = ಹೊಳೆ ಹಳ್ಳ

೩ನೇ ಸಾಲು : ಉಭೆ ಕೆಯ್ಯದ = ಇಬ್ಬರೊಳಗೆ, ಆಡಕಟ್ಟಿ = ಅಡ್ಯಣ * (ಗುರಾಣಿ) ಹಿಡಿದು ಹೊಡೆದಾಡುವ ಕ್ರಿಯೆ

೩ – ೪ನೇ ಸಾಲು : ಹೊಲೂ ಗಳ್ಳದಲ್ಲಿ = ಹೊಲ ಹಾಗೂ ಹಳ್ಳದ ಆವರಣದಲ್ಲಿ

೪ನೇ ಸಾಲು : ಕಾಳಗ = ಯುದ್ಧ, ಆಡಕವಾ ಮೀರಿದಾ = ಕರಾರನ್ನು ಉಲ್ಲಂಘಿಸಿದಲ್ಲಿ

೫ನೇ ಸಾಲು : ಅಕ್ಷರಗಳು ಲುಪ್ತವಾಗಿದೆ, ಸೋಮನಾತ = ದೇವರ ಹೆಸರು

೬ನೇ ಸಾಲು : ಅಕ್ಷರಗಳು ಬಹಳಷ್ಟು ಸವೆದು ಹೋಗಿವೆ, ಓದಲು ಸಾಧ್ಯವಾಗಿಲ್ಲ

೭ನೇ ಸಾಲು : ಮಧ್ಯಸ್ತ = ಇಬ್ಬರ ನಡುವೆ, ಬಂಗರ = ಬಂಗರಾಜ ಮತ್ತು ಮೂಲರ = ಜೈನ ವರ್ಗದ ರಾಜ

ಆದರೆ ಕೊನೆಯಲ್ಲಿ ‘ಶ್ರೀ ಪಾದಂಗ’ ಬರಹವಿದೆ. ೭ನೇ ಸಾಲಿನಲ್ಲಿ ‘ಳ’ ಅಕ್ಷರವಿದೆ. ಹೀಗಾಗಿ ಈ ಭಾಗವನ್ನು ‘ಶ್ರೀ ಪಾದಂಗಳ’ ಎಂದು ಗುರುತಿಸಲಾಗಿದೆ. ಬಹುಶಃ ಆ ಭಾಗದಲ್ಲಿ ಗುರುಸ್ಥಾನದಲ್ಲಿನ ಯತಿಗಳ ಸಮ್ಮುಖದಲ್ಲಿ ಈ ಕರಾರು ಲೇಖ – ಶಾಸನ ರಚಿತವಾದಂತಿದೆ (ಡಾ. ಪಿ. ವಿ. ನರಸಿಂಹ ಮೂರ್ತಿ ಇವರ ಅಭಿಪ್ರಾಯ).

ಕೊನೆಯಲ್ಲಿ ‘ಸ್ವ ಹಸ್ತದ ವೊಪ್ಪ ಶ್ರೀ ಶ್ರೀ..’ ಎಂದಿದೆ. ಕರಾರಿನ ಸಹಿಯೊಂದಿಗೆ ಎನ್ನುವ ಅರ್ಥದಲ್ಲಿ ಶಾಸನವನ್ನು ಬರೆಯಲಾಗಿದೆ.

ಶಾಸನದಲ್ಲಿ ತಿಳಿಸಿದಂತೆ ಕಾಮಿರಾಯ ಬಂಗ ಹಾಗೂ ಪೆನ್ನಂಣ ಮೂಲ – (ಕಾಲ ಸುಮಾರು ೧೪೬೦ ಕ್ರಿ.ಶ. ೧೪೮೦) ಇವರುಗಳು ಸೋಮನಾಥನ ಸನ್ನಿಧಿಯಲ್ಲಿ ಮಾಡಿಕೊಂಡ ಒಪ್ಪಂದ ದನ್ವಯ  ಕದನವನ್ನು ಮಾಡಕೂಡದು ಎನ್ನಲಾಗಿದೆ. ಶಾಸನದಲ್ಲಿ ಬಂದಿರುವ ‘ಆಡಕಟ್ಟಿ’ ಪದವು ಮುಖ್ಯವಾಗಿ ಆಡ್ಯಣ ಅಥವಾ ಎತ್ತಿನ ಚರ್ಮದಿಂದ ಮಾಡಿದ ಗುರಾಣಿ ಹಿಡಿದು ಕದನ ಮಾಡುವ ಕ್ರಿಯೆ ಮುಂದುವರೆಯಬಾರದು. ಇಂತಹ ಕರಾರು ಒಪ್ಪಂದ ಸೋಮನಾಥ ದೇವರ ಸಮಕ್ಷಮ ಮಾಡಿದ್ದು ಸಾಕ್ಷಿಯಾಗಿ ಶ್ರೀಪಾದಂಗಳ (ಯತಿಗಳ ಹೆಸರು ತಿಳಿದು ಬಂದಿಲ್ಲ) ಮಧ್ಯಸ್ತಿಕೆಯಲ್ಲಿ ಎರಡೂ ರಾಜರ ಸ್ವಹಸ್ತದ ಒಪ್ಪಿಗೆಯಿಂದ ನಡೆದಿದೆ ಎನ್ನಲಾಗಿದೆ.

ಶಾಸನ ದೊರೆತ ಸ್ಥಳ ನಿಡ್ಗಲ್ ಒಂದು ಸಣ್ಣ ಕುಗ್ರಾಮ. ಬೆಳ್ತಂಗಡಿಯಿಂದ ಸುಮಾರು ೮ಕಿ.ಮಿ. ಅಂತರದಲ್ಲಿದೆ. ತುಳುವಿನಲ್ಲಿ ಈ ಗ್ರಾಮವನ್ನು ನೆಡ್ವೆಲ್ ಎಂದಿರುವರು. ಶಾಸನ ದಲ್ಲಿ ತಿಳಿಸಿದಂತೆ ಸೋಮನಾಥ ದೇವರೆಂದು ತಿಳಿಸಿರುವ ಈ ಸ್ಥಳದ ಸಾನಿಧ್ಯವನ್ನು ಜನರು ‘ಲೋಕನಾಡುದ ಲೋಕನಾಥ’ (ತುಳು) – ಎಂದು ಪೂಜಿಸುವುದನ್ನು ಇಂದಿಗೂ ಗಮನಿಸ ಬಹುದು. ಈ ಸ್ಥಳದ ವೈಶಿಷ್ಟವೇನೆಂದರೆ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹೆಂಗಸರಿಗೆ ಮೈಮೇಲೆ ಆಕರ್ಷಣೆಯಾಗುವ ಆಚರಣೆ ನಡೆಯುವುದು. ಇದನ್ನು ಸಿರಿ ಆಯನ/ ಉತ್ಸವ ಎಂದು ಕರೆಯಲಾಗಿದೆ. ಜನಪದ ಕಾವ್ಯದಲ್ಲಿ ಸಿರಿ ಎನ್ನುವ ಹೆಣ್ಣಿನ ಹೋರಾಟ ಮತ್ತು ಬದುಕಿನ ಚಿತ್ರಣ ಕೊಡುವ ಹಾಡನ್ನು ತುಳುವಿನಲ್ಲಿ ಹಾಡುವ ಹಾಗೂ ಹೆಂಗಸರಿಗೆ ಮೈ ದುಂಬುವ ಸಾಮೂಹಿಕ ದರ್ಶನ ಇಲ್ಲಿ ನಡೆಯುವುದು. ಇದನ್ನು ಸಿರಿ ಮೈ ಮೇಲೆ ಬರುವುದು ಎಂದು ಜನ ಗುರುತಿಸಿ ಈ ಸಂದರ್ಭದಲ್ಲಿ ಆವೇಶಕ್ಕೆ ಒಳಗಾದ ಹೆಂಗಸರು ಕುಮಾರ ಎನ್ನುವ ಮಧ್ಯವರ್ತಿ ಮೂಲಕ ನಂಬಿಕೆಯ ಚಿಕಿತ್ಸೆಗಳು ನಡೆಯುತ್ತವೆ. ಅಲ್ಲದೆ ಸಿರಿಯ ಮೂರನೇ ತಲೆಮಾರಿನ ಅವಳಿಯರು ಅಬ್ಬಗ – ದಾರಗ ಇವರು ಚೆನ್ನೆ ಆಡಿದ ಕುರುಹಾಗಿ ಆಚರಣೆಯ ಹಿನ್ನಲೆಯಲ್ಲಿ ಇದೇ ದೇವಳದ ಆವರಣದಲ್ಲಿರುವ ಚೆನ್ನೆ ಪಾದ ಎಂಬಲ್ಲಿ ಚೆನ್ನೆ ಆಟ ನಡೆಸುತ್ತಾರೆ. ನಿಡ್ಗಲ್ಲು – ಆವರಣದಲ್ಲಿನ ಪರಿವಾರ ದೈವಗಳಾಗಿ ಬ್ರಹ್ಮರಾಕ್ಷಸನ ಕಲ್ಲು, ರಕ್ತೇಶರಿ, ಪಂಜುರ್ಲಿ, ಮೈಸಂದಾಯ, ಮೂರ್ತಿರಾಯ, ಮಹಲಿಂಗೇಶ್ವರ ಲೋಕನಾಥ, ನಾಗ ಬಿರ‍್ಮೆರು, ಇತ್ಯಾದಿ ಪೂಜಿತಗೊಳ್ಳುತ್ತವೆ. ಈ ದೇವಳದ ಧರ್ಮದರ್ಶಿಗಳಾಗಿರುವ ಶ್ರೀ ನರಸಿಂಹಮೂರ್ತಿ ಸೋಮಯಾಜಿ ಇವರು ತಿಳಿಸುವಂತೆ ಸುಮಾರು ೧೯೩೫ರ ದಶಕದಲ್ಲಿ ಮುರಕಲ್ಲಿನ ನಾಲ್ಕು ಗೋಡೆಯ ಗುಡಿಯಾಗಿದ್ದು ಹುಲಿಗಳು ತಮ್ಮ ಆಹಾರವನ್ನು ಸೇವಿಸುವ ತಾಣವಾಗಿತ್ತು. ಲಿಂಗಗಳ ನಡುವೆ ಅನೇಕ ಎಲುಬಿನ ರಾಶಿಗಳಿದ್ದು ೧೯೩೫ರ ಬಳಿಕ ಪ್ರಥಮವಾಗಿ ಸಿರಿಯ ಸಂಬಂಧದ ಆರಾಧನೆ, ದೈವ – ದೇವತೆಗಳ ಪೂಜೆ – ನೇಮಗಳು ನಡೆಸಲಾಯಿತು ಎಂದಿರುವರು. ಶ್ರೀ ಸೋಮಯಾಜಿ ಗಳು ಕೊಡುವ ಮೌಖಿಕ ಆಧಾರದ ಘಟನೆಗಳ ಮೂಲಕ ನಿಡ್ಗಲ್ ದೇವಾಲಯದ ಆಚರಣಾ ಪೂಜಾ – ನೇಮಗಳು ಪ್ರವರ್ಧಮಾನಕ್ಕೆ ಬಂದದ್ದು ೨೦ನೇ ಶತಮಾನದ ಮೊದಲಭಾಗದಲ್ಲಿ. ನಿಡ್ಗಲ್ ಸ್ಥಳದ ಸಿರಿ ಆಚರಣೆ – ದೈವ ನೇಮೋತ್ಸವದ ಪ್ರೇರಣೆಯಿಂದ ಇದೇ ಬೆಳ್ತಂಗಡಿಯ ಮತ್ತೊಂದು ಪ್ರದೇಶವಾದ ಹುರುಂಬಿದೊಟ್ಟು (ದ. ಕ. ಜಿಲ್ಲೆಯ ಬೆಳ್ತಂಗಡಿ) ಎಂಬಲ್ಲಿಯೂ ಸಿರಿ – ಆಯನ ಉತ್ಸವಗಳು ‘ಮಲ್ಲ ಮನೆತನದವರ’ – ಮೂಲಕ (ಮೂಲತಃ ಜೈನ ವರ್ಗದ ಮೂಲರು ಪರಂಪರೆಯ ಮನೆತನದವರು) ೧೯೪೮ರಲ್ಲಿ ಆರಂಭಗೊಂಡದ್ದನ್ನು ಕ್ಷೇತ್ರಕಾರ್ಯ ಮಾಹಿತಿಯಿಂದ ತಿಳಿಯಲಾಗಿದೆ. ಮಲ್ಲ – ಮನೆತನದ ಸದಸ್ಯರುಗಳು ನಿಡ್ಗಲ್ಲು ಪ್ರದೇಶದಲ್ಲಿ ಪೂಜೆ – ನೇಮೋತ್ಸವಗಳಲ್ಲಿ ಭಾಗಿಯಾಗುತ್ತಿದ್ದುದಲ್ಲದೆ ಹುರುಂಬಿದೊಟ್ಟು ಪ್ರದೇಶದಲ್ಲಿದ್ದ ಬದಿಮಾಡದಲ್ಲಿಯೂ ವರ್ಷಕೊಮ್ಮೆ ದೀಪ ಹಚ್ಚಿ ಪೂಜೆ ಸಲ್ಲಿಸುತ್ತಿದ್ದರು. ಇತಿಹಾಸ ರಚನೆಯ ಭಾಗವಾಗಿ ‘ಮಲ್ಲ’ ಮನೆತನದವರು ನಡೆಸಿಕೊಂಡು ಬಂದ ಪರಂಪರೆಯ ಪೂಜೆ ಮತ್ತು ಸಿರಿ ಸಂಬಂಧವಾಗಿ ನಿಡ್ಗಲ್ಲು ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಜೀವನ ಶೈಲಿ ಇತಿಹಾಸ ಸಂರಚನೆಗೆ ಪೂರಕವಾದ ಮಾಹಿತಿಗಳಾಗಿವೆ.

ಇತಿಹಾಸಕಾರರಾದ ಡಾ. ಸೂರ್ಯನಾಥ ಕಾಮತ್ ತಿಳಿಸುವಂತೆ ಜೈನರಲ್ಲಿ ಬರುವ ‘ಮೂಲರು’ ಎನ್ನುವ ಜನವರ್ಗ ಇಂದು ‘ಮಲ್ಲ’ರೆಂದು ತಮ್ಮ ವಾಂಶಿಕ ಹೆಸರಿನೊಂದಿಗೆ ಸೇರಿಸಿಕೊಳ್ಳುವ ವಾಡಿಕೆ ಬಳಕೆಯಲ್ಲಿದೆ ಎಂದಿರುವರು. ಈ ಅಭಿಪ್ರಾಯದಿಂದ ಇತಿಹಾಸ ಸಂರಚನೆಗೆ ಇನ್ನಷ್ಟು ಚಾಲನೆ ಸಿಕ್ಕಿದಂತಾಗಿದೆ. ಜನಪದರ ಕ್ಷೇತ್ರಕಾರ್ಯದ ಮಾಹಿತಿ ಯನ್ವಯ (ಎಸ್.ಎ.ಕೃಷ್ಣಯ್ಯ ೧೯೮೮) ಬೆಳ್ತಂಗಡಿ ವ್ಯಾಪ್ತಿಗೆ ಬರುವ ಅಳದಂಗಡಿಯಲ್ಲಿನ ಕಾಯರ‍್ತಡ್ಕ ಹುರುಂಬಿದೊಟ್ಟು ಭಾಗದಲ್ಲಿನ ಸಿರಿ – ಬದಿಮಾಡದ ಭೂತ ಅಥವಾ ಪರಿವಾರ ದೈವದ ಸಂರಕ್ಷಣೆ ನಡೆಸಿಕೊಂಡು ಬಂದಿರುವವರು ‘ಮಲ್ಲ’ ಕುಟುಂಬದ ದಿ. ರತ್ನರಾಜ ಮಲ್ಲ ಪೂವಣಿ ಹಾಗೂ ಮನೆತನದ ಸದಸ್ಯರುಗಳು. ಈ ಮನೆತನದವರುಗಳು ನೆಡ್ಗಲ್ – ನ ಸಿರಿಯ ಆಚರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದುರಿಂದ ಕಾಯರಡ್ಕ – ಶಿರಲಾಲ್ ಗ್ರಾಮದ (ಅಳದಂಗಡಿ ಭಾಗ) ಹುರಂಬಿದೊಟ್ಟು ಸ್ಥಳದಲ್ಲಿ ೧೯೪೮ರಿಂದ ಸಿರಿಯ ಸಂಬಂಧ ಆಚರಣೆ ನಡೆಸಿಕೊಂಡು ಬಂದರೆಂದು ತಿಳಿಯಲಾಗಿದೆ. ಇದಕ್ಕೂ ಮೊದಲು ಹುರುಂಬಿ ದೊಟ್ಟು ಎಂಬ ಸ್ಥಳದ ಬದಿಮಾಡದಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸುತ್ತಿದ್ದರೆಂಬುದಾಗಿ ಮಲ್ಲ ಕುಟುಂಬದ ಸದಸ್ಯರು ತಿಳಿಸಿರುವರು. ನಿಡ್ಗಲ್ – ನ ಶಾಸನದಲ್ಲಿ ತಿಳಿಸಿರುವ ಮೂಲರ ಸಂಬಂಧವಾಗಿ ಅಳಿದುಳಿದ ವಂಶಸ್ಥರ ಚರಿತ್ರೆ ನಿರ್ಮಾಣ ಮಾಡುವಲ್ಲಿ ಇಂದು ಪ್ರಚಲಿತ ರಾಗಿರುವ ಮಲ್ಲ ಕುಟುಂಬದವರುಗಳ ಸದಸ್ಯರು ಈ ಹಿಂದೆ ಜೈನ ವರ್ಗದ ‘ಮೂಲ’ ವಂಶಸ್ಥರಾಗಿರುವರು ಎಂಬುದನ್ನು ಸಿರಿಯ ಆರಾಧನೆಯ ಹಿನ್ನೆಲೆಯಲ್ಲಿ ಮತ್ತಷ್ಟೂ ಸ್ಪಷ್ಟ ವಾಗಿ ತಿಳಿಯಬಹುದಾಗಿದೆ. ಸಿರಿಯ ಆಚರಣೆಯ ಸಂದರ್ಭವಾಗಿ ಈ ವಂಶಸ್ಥರ ಪಾತ್ರವು ಅತಿಮುಖ್ಯವೆಂದು ತಿಳಿಯಲಾಗಿದೆ. ನಿಡ್ಗಲ್ – ನ ಸಿರಿ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ದಿ. ಕುಮಾರಯ್ಯ ಪೂವಣಿ (ಮಲ್ಲ ಮನೆತನದವರು) ಮೂಲಕವಾಗಿ ಶಿರಲಾಲ್ ಭಾಗದ ಹುರುಂಬದೊಟ್ಟಿನಲ್ಲಿ ಸಿರಿ ಜಾತ್ರೆ/ಉತ್ಸವಗಳನ್ನು ನಡೆಸಲು ಮುಂದಾ ಳತ್ವ ಕೈಗೊಂಡದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ‘ಮಲ್ಲ – ರು’ ಮನೆತನದವರು ಕ್ರಮೇಣ ನಿಡ್ಗಲ್ಲು ಆಚರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ತಮ್ಮ ಗ್ರಾಮೀಣ ಪ್ರದೇಶದಲ್ಲಿ ಪಾಳುಬಿದ್ದಿದ್ದ ದೇವಳವನ್ನು ದುರಸ್ತಿ ಮಾಡಿದಾಗ ಕೆಲವು ಶಿಲ್ಪಗಳು ಗೋಚರಿಸಿದವು. ಇವುಗಳು ಜೈನ ಪ್ರತಿಮೆಯ ಶಿಲ್ಪಗಳಾಗಿವೆ. ಈ ಭಾಗದಲ್ಲಿಯೂ ಸಿರಿ ಆಚರಣೆ – ದೈವ ನೇಮಗಳು ನಡೆಯಲು ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಚರಿತ್ರೆಯ ಪುನರ್ ನಿರ್ಮಾಣ ಸಂಬಂಧವಿರುವ ಪೆನ್ನಂಣ ಮೂಲ – ರ ಹೆಸರು ನಿಡ್ಗಲ್ ಸಿರಿ ಉತ್ಸವ ನಡೆಯುವ ಆವರಣ ದಲ್ಲಿ ದೊರಕಿರುವ ಶಾಸನದ ಲೇಖನ ಮುಖ್ಯವಾದುದಾಗಿದೆ. ಶಾಸನದನ್ವಯ ೧೪೬೦ರ ದಶಕದಲ್ಲಿ ನಿಡ್ಗಲ್ ಪ್ರದೇಶದ ಸ್ಥಳಗಳು ಮೂಲರ ಆಡಳಿತಕ್ಕೆ ಸೇರಿದ್ದವೆಂದು ತಿಳಿಯಬಹು ದಾಗಿದೆ.

ಸಿರಿ ಸಾಕು ತಂದೆ ಬಿರುಮಣ ಮಾಲವ/ಬೆರ್ಮು ಮಾಲವ ಅಥವಾ ಪಾಲವಮೂಲವಂಶದವರಾಗಿರಬಹುದೇ? – ಒಂದು ಜಿಜ್ಞಾಸೆ.

ಸಿರಿ ಕಾವ್ಯದಲ್ಲಿ ಮೊದಲಾಗಿ ಬರುವ ಹೆಸರು ಸಿರಿಯ ಸಾಕು ತಂದೆ ಬಿರ‍್ಮು/ಬೆರ‍್ಮು ಅಥವಾ ಬಿರುಮಣ ಮಾಲ – ರು. ಪ್ರೊ. ಲೌರಿ ಹಾಂಕೋ, ಅನೇಲಿ ಹಾಂಕೋ, ಡಾ. ಬಿ. ಎ. ವಿವೇಕ ರೈ ಮತ್ತು ಡಾ. ಚಿನ್ನಪ್ಪ ಗೌಡ ಇವರು ಸಂಪಾದಿಸಿ ಹೊರ ತಂದ ಕೃತಿಯಲ್ಲಿ ಸಾಕು ತಂದೆಯ ಹೆಸರು ಆರ‍್ಯ ಬನ್ನಾರು ಬಿರ‍್ಮು ಪಾಲವ ಎಂದಿದೆ. ಉಳಿದಂತೆ ಹೆಚ್ಚಾಗಿ ಅಜ್ಜೆರು, ಬಿರ‍್ಮು/ಬಿರುಮಣ ಮಾಲರೆಂದೇ ಗುರುತಿಸುವ ಜನಪದ ಸಾಹಿತ್ಯದ ಉಲ್ಲೇಖಗಳು ಇಂದಿಗೂ ಲಭ್ಯವಿದೆ. ನಿಡ್ಗಲ್‌ನಲ್ಲಿ ಶಾಸನವನ್ನು ಮೊದಲ ಬಾರಿಗೆ ಗುರುತಿಸುವ ಪ್ರಯತ್ನ ವನ್ನು ಎಸ್.ಎ. ಕೃಷ್ಣಯ್ಯ ಇವರು ೧೯೮೮ರಲ್ಲಿ ನಡೆಸಿದರು. ಡಾ. ವಸಂತ ಶೆಟ್ಟಿ ಇವರ ಮೂಲಕ ಓದಿಸಿದಾದ ಶ್ರೀಮತ್ ಕಾಮಿರಾಯ ಬಿರುಮಣ ಮಾಲರು ಎಂದು ಗ್ರಹಿಸ ಲಾಗಿತ್ತು. ಆನಂತರ ಇತಿಹಾಸಕಾರರೊಡನೆ ಚರ್ಚೆ ನಡೆಸಿದಾಗ ಪುನರ್ ಅಧ್ಯಯನ ನಡೆಸೋಣ ಎನ್ನುವ ತೀರ್ಮಾನ ಕೈಗೊಂಡು ಇತಿಹಾಸಕಾರರಾದ ಡಾ. ಪಿ. ಎನ್. ನರಸಿಂಹ ಮೂರ್ತಿ ಇವರ ಸಹಕಾರದಿಂದ ಶಾಸನವನ್ನು ಪುನರ್ ಅಧ್ಯಯನ ನಡೆಸಿದಾಗ ಹಿಂದಿನ ಗ್ರಹಿಕೆ ತಪ್ಪು, ಎಂದು ತಿಳಿಯಲಾಯ್ತು. ಇತ್ತೀಚಿನ ಅಧ್ಯಯನದಲ್ಲಿ ಶಾಸನದ ಮೊದಲ ಸಾಲಿನ ವಕ್ಕಣೆ ಹೀಗಿದೆ : ‘…ಶ್ರೀಮತು ಕಾಮಿರಾಯ ಬಂಗರು ಪೆನ್ನಂಣ ಮೂಲರೂ…’ ಎಂದು. ಜನಪದರ ಸಿರಿಕಾವ್ಯದಲ್ಲಿ ಬರುವ ಹೆಸರು ಮಾಲರು ಅಥವಾ ಪಾಲವ ಬಹುಶಃ ಮೂಲರ ವಂಶದವನಾಗಿರಬೇಕೆಂದು ತಿಳಿಯಲು ಬಹಳಷ್ಟು ಅವಕಾಶಗಳನ್ನು ಈ ಶಾಸನ ಒದಗಿಸುತ್ತದೆ. ಬಿರುಮಣ ಮಾಲರು ಅಥವಾ ಬಿರ‍್ಮು ಪಾಲವ ಲಂಕೆ ಲೋಕನಾಡು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದುದರಿಂದ ‘ಸಿರಿ’ ಎನ್ನುವ ಮಗು ದಕ್ಕಲು ಕಾರಣವಾಗುತ್ತದೆ ಎಂದು ಜನಪದ ಸಿರಿ ಕಾವ್ಯದಿಂದ ತಿಳಿದುಬರುವುದು. ನಿಡ್ಗಲ್ ದೇವಳದ ಆವರಣವನ್ನು ಗಮನಿಸಿದರೆ ಇದೊಂದು ವಿಶಾಲವಾದ ಮೈದಾನವಾಗಿದ್ದು ಕೆಳಭಾಗದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು ದೇವಳದವರೆಗೂ ನದಿ ನೀರು ಬರುತಿದ್ದುದರಿಂದ ದ್ವೀಪ ದಂತೆ ತೋರುತಿದ್ದು ಇದನ್ನು ಲಂಕೆ ಲೋಕನಾಡು ಎಂದು ಕರೆಯಿಸಿಕೊಂಡಿದ್ದು ಕ್ರಮೇಣ ಈ ಹೆಸರು ಜನರ ಬಾಯಿಂದ ತಪ್ಪಿದೆ. ಆದರೆ ಇಂದಿಗೂ ದರ್ಶನದಲ್ಲಿ ಪ್ರಸಾದ ಕೊಡುವಾಗ ತುಳುವಿನಲ್ಲಿ ಹೇಳುವ ವಕ್ಕಣಿಕೆ ಪ್ರಚಲಿತದಲ್ಲಿದೆ. ಉದಾ : ‘..ಈ ಲಂಕೆಲೋಕನಾಡುದ ಮಣ್ಣುಡು… (ಈ ಲಂಕೆ ಲೋಕನಾಡಿನ ಮಣ್ಣಿನಲ್ಲಿ). ಹೀಗಾಗಿ ಈ ಸ್ಥಳವು ಲೋಕನಾಡಾಗಿ ಪೂಜಿಸುವ ಲಿಂಗವನ್ನು ಲೋಕನಾಥ ಎಂದು ಜನ ಆರಾಧಿಸತೊಡಗಿರುವರು.  ಈ ದೇವಾಲಯದ ಗರ್ಭಗುಡಿಯಲ್ಲಿ ಮೂರು ಲಿಂಗಗಳಿದ್ದಂತೆ ಕುರುಹುಗಳಿವೆ. ಬಹುಶಃ ಸುಮಾರು ೧೧  ಅಥವಾ ೧೨ನೇ ಶತಮಾನದಲ್ಲಿ ಅಸ್ಥಿತ್ವಕ್ಕೆ ಬಂದ ದೇವಳವಾಗಿರುವ ಸಾಧ್ಯತೆಯನ್ನು ಶ್ರೀ ಪಿ. ವಿ. ನರಸಿಂಹ ಮೂರ್ತಿ ಇವರು ಅಭಿಪ್ರಾಯಿಸಿರುವರು. ಶಾಸನದಲ್ಲಿ  ಗುರುತಿಸಿದಂತೆ ಈ ದೇವಾಲಯವನ್ನು ಸೋಮನಾಥ ದೇವರೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಮೂಲರ ಮನೆತನದ ಸೋಮಳಾದೇವಿಯ ಹಿಂದಿನ ಒಂದು ತಲೆಮಾರಿನವರ ವಂಶದ ರಾಜರುಗಳು ಈ ನಿಡ್ಗಲ್ ಭಾಗದಲ್ಲಿನ ಪ್ರದೇಶವನ್ನು ಆಡಳಿತ ನಡೆಸಿದ್ದು ಪ್ರಾದೇಶಿಕ ಸ್ಥಳದ ದೈವ – ದೇವರುಗಳ ಆರಾಧನೆ ನಡೆಸಿದವರಾಗಿರುವ ಸಾಧ್ಯತೆಗಳು ಬಹಳಷ್ಟಿದೆ. ಈ ಹಿನ್ನೆಲೆಯಲ್ಲಿ ಸ್ಥಾಪಿತವಾಗಿರುವ ನಾಗ ಶಿಲ್ಪಗಳ (ಜೈನ ಬೆರ್ಮ) ಮತ್ತು ಲಿಂಗಗಳ ಸ್ಥಾಪನೆಯನ್ನು ಗಮನಿಸಿದಾಗ ನಿಡ್ಗಲ್ (ಶಾಸನ ದೊರೆತ ಸ್ಥಳ) ಭಾಗದಲ್ಲಿ ಪೆನ್ನಂಣ ಮೂಲರು – ಮನೆತನದವರು ಸೋಮನಾಥ ದೇವರ ಆರಾಧಕರಾಗಿದ್ದು ಸರ್ವಧರ್ಮ ಸಹಿಷ್ಣುಗಳಾಗಿದ್ದಿರಬೇಕು. ಸೋಮನಾಥ ದೇವಾಲಯದಲ್ಲಿನ ಸಂಬಂಧದಿಂದಾಗಿಯೂ ಕ್ರಿ.ಶ. ೧೫೩೩ರ ದಶಕದಲ್ಲಿ ಅನಂತ ನೋಂಪಿ ವೃತ ನಡೆಸಿದ ಸೋಮಳಾದೇವಿ ಮತ್ತು ಈಕೆಯ ಹೆಸರು/ಪದ ಸೋಮನಾಥ ದೇವರ ಕಾರ್ಯಕಾರಣ ಸಂಬಂಧವಿರುವಂತೆ ಸಮೀಕರಣಗೊಳ್ಳುವುದು ಇತಿಹಾಸ ಸಂರಚನೆಗೆ ಮತ್ತೊಂದು ವಿಶೇಷತೆ ಸೇರಿಸಿದಂತಾಗಿದೆ.

ಮೂಲರ ಇತಿಹಾಸದಲ್ಲಿ ಸೋಮಳಾದೇವಿ (ಕಾಲ ಸುಮಾರು ಕ್ರಿ. ಶ. ೧೫೩೩) ತನ್ನ ಪತಿ ರನರಸಿಂಹ ಲಕ್ಷ್ಮಪ್ಪರಸನ ಜೊತೆಗೂಡಿ ಅನಂತನೋಂಪಿ ವ್ರತ ನಡೆಸುವುದರ ಬಗ್ಗೆ ಜನಜನಿತ ಕಥೆಯ ದೃಷ್ಟಾಂತವನ್ನು ಶ್ರೀ ಗಣಪತಿ ರಾವ್ ಐಗಳು ತಿಳಿಸುತ್ತಾ ನೋಂಪಿ ವ್ರತದಿಂದ ಗಂಡ – ಹೆಂಡಿರ ಮುನಿಸು ಕೊನೆಗೆ ಸಾವಿಗೆ ಕಾರಣವಾಗುತ್ತದೆ ಎನ್ನುವ ಆಶಯ ವನ್ನು ಈಗಾಗಲೇ ತಿಳಿಸಿದ್ದಾರೆ. ಜೈನರ ಪ್ರಕಾರ ಅನಂತ ನೋಂಪಿ ವ್ರತ ನಡೆಸುವುದು ಸರ್ವರೀತಿಯಲ್ಲಿ ಕುಟುಂಬವು ಅಭಿವೃದ್ದಿ ಹೊಂದಲೆಂದು, ಮುಖ್ಯವಾಗಿ ಸಂತಾನ ಅಭಿವೃದ್ದಿ ಯಾಗಲೆಂಬ ಆಶಯ ಈ ವ್ರತದ ಹಿಂದೆ ಸೂಚ್ಯವಾಗಿ ಅಡಗಿದೆ. ಈ ಹಿನ್ನೆಲೆಯಲ್ಲಿ ನಾಗ ಬೆರ್ಮೆರು, ಜೈನ ಬೆರ್ಮೆರು ಪೂಜಾ ಸ್ಥಳಗಳಾದ ನಿಡ್ಗಲ್ ದೇವಳದ ಸಾನಿಧ್ಯವೂ ಅತಿ ಮುಖ್ಯವೆಂದೆನಿಸಿಕೊಳ್ಳುವುದು. ಸಿರಿ ಕಾವ್ಯದಲ್ಲಿಯೂ ಸಿರಿಯ ಸಾಕುತಂದೆ (ಬೆರಮಣ ಮಾಲರು ಅಥವಾ ಬೆರುಮಣ ಪಾಲವ) ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕಾಗಿ ತನಗೆ ತಿಳಿಯದಿದ್ದ ಬರೀ ಹೇಳಿಕೆ – ಕೇಳಿಕೆ ಮೇಲೆ ಪರಿಚಿತವಾಗಿದ್ದ ಲಂಕೆ ಲೋಕನಾಡು (ನಿಡ್ಗಲ್) ಭಾಗದ ದೈವ – ಗುಂಡಗಳ ಜೀರ್ಣೋದ್ಧಾರ ನಡೆಸುವುದರ ಆಶಯವೂ ಜನಪದ ಸಾಹಿತ್ಯದಲ್ಲಿ ಪ್ರಧಾನವಾದುದಾಗಿದೆ. ಶಾಸನದನ್ವಯ ಮೂಲರು ಈ ಭಾಗದ ಜೀರ್ಣೋದ್ಧಾರ ಮಾಡಿದವರುಗಳಲ್ಲಿ ಪ್ರಮುಖರಾಗಿರುವರು ಎಂದು ಭಾವಿಸುವುದಾದರೆ ಸಿರಿಯ ಸಾಕು ತಂದೆ ಬಿರುಮಣ ಮಾಲರು ಅಥವಾ ಬಿರುಮಣ ಪಾಲವ ಈತನೂ ಜೈನವರ್ಗದ ಮೂಲರ ಸಂತತಿಯವನಾಗಿರಬೇಕೆಂಬುದು ತಿಳಿಯಲು ಜನಪದ ಕ್ಷೇತ್ರಕಾರ್ಯದ ಆಧಾರಗಳು ಬಲಪಡಿಸುತ್ತವೆ. ಇಂದಿಗೂ ಅಳದಂಗಡಿಯ ಶಿರಲಾಲ್ ಭಾಗದಲ್ಲಿನ ಸ್ಥಳೀಯ ಜೈನವರ್ಗ ದವರ ಕುಟುಂಬದವರು ಸಿರಿ ಉತ್ಸವದ / ಆಚರಣೆಯ ಮುಂದಾಳತ್ವದಲ್ಲಿ ನಡೆಸಿಕೊಂಡು ಬಂದಿರುವುದನ್ನು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ದಾಖಲೀಕರಣ ನಡೆಸಿಕೊಂಡು ಬಂದಿದೆ. ಮಲ್ಲ ಕುಟುಂಬದ ಹಿನ್ನೆಲೆ ಮತ್ತು ಸಿರಿ ಆಚರಣೆ ನಡೆಸುತ್ತಿರುವ ಸಂಪ್ರದಾಯದ ಬದ್ಧತೆಯನ್ನು ಅವಲೋಕಿಸಿದಾಗ ಮೂಲರ ವಂಶದ ಇತಿಹಾಸ ರಚನೆಗೆ ಮತ್ತು ಸಿರಿ ಸಂಬಂಧವಾದ ಘಟನೆಗಳು ನಡೆದಿರುವುದರ ಬಗ್ಗೆಖಚಿತವಾದ ಕಾಲ ನಿರ್ಣಯ ಮಾಡಲು ದೊರಕಿರುವ ಶಾಸನ ಮತ್ತಷ್ಟೂ ಇತಿಹಾಸ ಸಂರಚನೆಗೆ ಪೂರಕವಾದ ಆಕರವಾಗು ವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ನಿಡ್ಗಲ್ ದೇವಳದ ನಾಗ ಬೆರ್ಮ ಪ್ರತಿಮೆ ಜೈನ ನಾಗ ಬೆರ್ಮೆರು

ಹಿಂದೂ ದೇವಾಲಯಗಳಲ್ಲಿ ಇರುವಂತೆ ಪ್ರತ್ಯೇಕವಾದ ನಾಗನ ಬನಗಳು ಅಥವಾ ನಾಗ ಪ್ರತಿಮೆಗಳು ಮತ್ತು ತತ್ಸಂಬಂಧವಾದ ಆರಾಧನೆಗಳು ನಡೆಯುತ್ತವೆ. ಈ ಶಾಸನ ದೊರೆತ ಅವರಣದಲ್ಲಿನ ನಾಗ ಪ್ರತಿಮೆಗಳಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ನಾಗ ಬೆರ್ಮರು ಅತಿ ಮುಖ್ಯವಾದ ಶಿಲ್ಪವಾಗಿದೆ. ಮೇಲ್ನೋಟಕ್ಕೆ ಇದೊಂದು ನಾಗನ ದೇಹವಿರುವ ಮನುಷ್ಯಾ ಕೃತಿ ಪ್ರತಿಮೆ. ಈ ಬಗೆಯ ಶಿಲ್ಪವನ್ನು ನಾಗ ಬೆರ‍್ಮೆರು ಅಥವಾ ನಾಗ ಬ್ರಹ್ಮ ಎಂದು ಆರಾಧಿಸುವ ಪದ್ಧತಿ ತುಳುನಾಡಿನ ಜನರಲ್ಲಿದೆ. (ಕರಾವಳಿ ಕರ್ನಾಟಕ) ಸಂಸಾರದ ಫಲವತ್ತಿಕೆಗೆ ನಾಗನನ್ನು ಪೂಜಿಸುವುದನ್ನು ಪ್ರಪಂಚದಾದ್ಯಂತ ಕಾಣಬಹುದಾಗಿದೆ. ನಾಗ ಜೀವದ ಸಂಕೇತವಾಗಿದೆ. ಈ ಆವರಣದಲ್ಲಿ ಕಂಡು ಬಂದ ಪ್ರಮುಖ ನಾಗ ಬೆರ‍್ಮೆರು ಎಂದು ಗುರುತಿಸಲ್ಪಟ್ಟ ಶಿಲ್ಪದ ಹಿಂಭಾಗದಲ್ಲಿ ನಾಗಮಂಡಲದ (ನಾಲ್ಕು ಪವಿತ್ರದ) ರೇಖಾ ಚಿತ್ರ ಮಾದರಿಯ ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ. ನೋಡುಗರಿಗೆ ಈ ನಾಗ ಮಂಡಲದ ರೇಖಾಚಿತ್ರ ಕಾಣಸಿಗುವುದಿಲ್ಲ. ಈ ಶಿಲ್ಪವನ್ನು ಗಮನಿಸಿದಲ್ಲಿ ಇದೊಂದು ವೈಶಿಷ್ಟಪೂರ್ಣದ ಶಿಲ್ಪವಾಗಿದೆ.  ಇದನ್ನು ಜೈನ ನಾಗ ಬೆರ‍್ಮ ಎಂದು ಗುರುತಿಸಲಾಗಿದೆ.

ನಿಡ್ಗಲ್ ದೇವಳದ ಚೆನ್ನೆ ಪಾದೆ

ನಿಡ್ಗಲ್ ದೇವಳದ ಆವರಣದಲ್ಲಿನ ಬಲ ಭಾಗದ ಕೊನೆಯಲ್ಲಿ ‘ಚೆನ್ನೆ ಪಾದೆ’ ಎನ್ನುವ ಸ್ಥಳವೊಂದಿದೆ. ‘ಚೆನ್ನೆ ಪಾದೆ’ – ಸ್ಥಳವನ್ನು ಸದ್ಯದ ಆಡಳಿತ ವರ್ಗದವರು ನಾಲ್ಕು ಸಿಮೆಂಟ್ ಕಂಬಗಳನ್ನು ಹಾಕುವುದರ ಮೂಲಕ ತಾತ್ಕಾಲಿಕ ತಡೆ ಬೇಲಿಯನ್ನು ಹಾಕಿರುವರು. ಈ ‘ಚೆನ್ನೆ ಪಾದೆ’ಯ ಮೇಲೆ ಸಿರಿ ಉತ್ಸವ ನಡೆಸುವ ದಿನದಂದು ಆವೇಶದಲ್ಲಿ ಅಬ್ಬಗ – ದಾರಗ ಎನ್ನುವ ಅವಳಿ ಹೆಣ್ಣು ಮಕ್ಕಳು ‘ಚೆನ್ನೆ’ ಆಟವನ್ನು (ಅಳಗುಳಿ ಮನೆ ಆಟ) ಆಡುತ್ತಾರೆ.  ಕುಮಾರ ಎನ್ನುವ ಮಧ್ಯವರ್ತಿ ಈ ಆಟವನ್ನು ಮುನ್ನಡೆಸುವನು. ‘ಚೆನ್ನೆ ಪಾದೆ’ – ಯೆಂದು ಕರೆಯುವ ಈ ಸ್ಥಳದಲ್ಲಿ ಬೇರೆ ಕಡೆಯಿಂದ ತಂದ ಹಾಸುಗಲ್ಲು ಇರಿಸಿದ್ದನ್ನು ಗಮನಿಸ ಬಹುದು. ಈ ಪಾದೆಯ ಕೆಳಭಾಗದಲ್ಲಿ ಒಂದು ಚಿಕ್ಕ ಬಾವಿ ಇದ್ದು ಅದರ ಮುಚ್ಚಳಿಕೆಯಾಗಿ ಈ ಹಾಸುಗಲ್ಲು ಬಳಸಿರುವ ಸಾಧ್ಯತೆ ಇದೆ. ಜನಪದ ಕಾವ್ಯದ ಭಾಗವಾಗಿ ದೊರಕುವ ಸಾಹಿತ್ಯದಲ್ಲಿ ಈ ಅವಳಿ ಸಹೋದರಿಯರು ಚೆನ್ನೆ ಮಣೆಯಿಂದ ಹೊಡೆದಾಟ ಮಾಡಿಕೊಂಡು ಒಬ್ಬಾಕೆ ಸಾವನ್ನು ಅಪ್ಪುತ್ತಾಳೆ. ಮತ್ತೋರ್ವಳು ತನ್ನ ಸಹೋದರಿಯ ಶವವನ್ನು ಬಾವಿಗೆ ಹಾಕಿ ತಾನೂ ಪ್ರಾಣಾರ್ಪಣೆ ಮಾಡಿಕೊಳ್ಳುವ ಪ್ರಸಂಗವು ಜನಪದ ಸಾಹಿತ್ಯದಲ್ಲಿ ಹೇಳಲಾಗಿದೆ. ಅವಳಿ ಸಹೋದರಿಯರ ಚೇತನಗಳ ಆರಾಧನೆ ಅಥವಾ ಅಬ್ಬಗ – ದಾರಗ ಹೆಸರಿನಲ್ಲಿ ಚೆನ್ನೆ ಆಟ ನಡೆಸಿಕೊಡುವ ಪ್ರದರ್ಶನಗಳು ಇಂದು ಆಚರಣೆಯ ಒಂದು ಭಾಗವಾಗಿ ಸಿರಿ – ಆಯನಗಳಲ್ಲಿ ನಡೆಯುತ್ತವೆ. ವಾಸ್ತವವವಾಗಿ ಈ ಘಟನೆ ನಡೆಯುವುದು ಉರ‍್ಕಿತೊಟ್ಟು (ನಂದಳಿಕೆ ಸಮೀಪದ ಕೆದಿಂಜೆ ಗ್ರಾಮ) ಎಂಬಲ್ಲಿ. ಅಲ್ಲಿಂದ ಈ ಸಹೋದರಿಯರ ಶವವನ್ನು ಹಿರಿಯಡ್ಕದ (ಉಡುಪಿ) ಮಲ್ಲಗದ್ದೆಗೆ ತಂದು ಶವ ಸಂಸ್ಕಾರ ಮಾಡುವ ವಿವರಣೆ ಮತ್ತು ಈ ಸಹೋದರಿಯರು ಜೈನ ಕುಲದವರೆಂದು ತಿಳಿಸುವ ಮಾಹಿತಿ ಗಳನ್ನು ಈಗಾಗಲೇ ಜನಪದರ ಮೌಖಿಕ ಸಾಹಿತ್ಯದಲ್ಲಿ ಗುರುತಿಸಲಾಗಿದೆ. (ಎಸ್.ಎ. ಕೃಷ್ಣಯ್ಯ ೧೯೮೮).

ಮೂಲರ ಬಗ್ಗೆ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯ ತುಳು ರಾಜ್ಯಗಳಲ್ಲಿ ಬಂಗರ ರಾಜ್ಯವು ಪ್ರಮುಖವಾಗಿದ್ದನ್ನು ಇತಿಹಾಸದಿಂದ ತಿಳಿಯಬಹುದಾಗಿದೆ. ಬಂಗ ರಾಜರಿಗೆ ಸಮನಾಗಿ ಸ್ಥಾನಮಾನ ಪಡೆಯಲು ಬೈಲಂಗಡಿ ಭಾಗದಲ್ಲಿನ ಜೈನ ವರ್ಗದ ಮೂಲರೂ ಕದನ ಹೂಡಿದುದರ ಬಗ್ಗೆ ಶ್ರೀ ಗಣಪತಿ ರಾವ್ ಐಗಳು ಕೊಡುವ ಚಿತ್ರಣ ಹೀಗಿದೆ. ಬಂಗರಾಜ ಹಾಗೆಯೇ ಇವರಿಗೂ (ಮೂಲರು) ೧೨ ಮಾಗಣೆಗಳ ಅಧಿಕಾರವಿತ್ತು. ಇವರು ಚಾರ್ಮಡಿ, ಮುಂಡಾಜೆ, ಉಜ್ರೆ, ಲ್ಯಾಲ, ಮುಂಡೂರು, ಪಡಂಗಾಡಿ, ಗರಡಾಡಿ, ಸೊಣಂದೂರು, ಮಾಲಾಡಿ, ಕಲ್ಮಡ್ಕ, ತೋಟತಾಡಿ, ನೆರಿಯೆ, ಧರ್ಮಸ್ಥಳ, ಬಿದ್ರೆ, ಪುದುವೆಟ್ಟು, ಪಟ್ರಮೆ, ನಿಡ್ಲೆ, ಕೊಕ್ಕಡ, ಹತ್ತಿಯಡ್ಕ, ಕೌಕ್ರಾಡಿ, ರೆಕ್ಯ, ಶಿರಾಡಿ, ಶಿಬಾಬೆ, ಶಿಶಿಲ, ಬಲ್ಲಾಳನ ಶೀಮೆ, ರಾಯಿ ಬಲ್ಲಾಳನ ಶೀಮೆ ಇವುಗಳನ್ನು ಆಳಿಕೊಂಡಿದ್ದನು. ಸೋಮಳಾದೇವಿ ಕಾಲದಲ್ಲಿ ಇಜ್ಜೆತೊಟ್ಟು, (ಕರಂಜೆ) ಮತ್ತು ರಾಯಿ ಶೀಮೆಗಳು, ಕೈ ತಪ್ಪಿದವು. ಇವರಿಗೆ ಒಟ್ಟು ನಾಲ್ಕು ಅರಮನೆಗಳಿದ್ದವು. ಬೈಲಂಗಡಿಯಲ್ಲಿ ೨ ಅರಮನೆಗಳು, ಮೂರನೆಯದು ಶಿಶಿಲದಲ್ಲಿ ಮತ್ತು ನಾಲ್ಕನೆಯ ಅರಮನೆ ನಿಡ್ಗಲ್ಲಿನಲ್ಲಿತ್ತೆಂದು ತಿಳಿದುಬಂದಿದೆ. ಕಾಲ ಸುಮಾರು ಕ್ರಿ. ಶ. ೧೫೩೩. ಅರಮನೆ ಯಲ್ಲಿ ಇವರ ವಂಶಾವಳಿ ವಿಷಯ ಏನೊಂದು ದಾಖಲೆಗಳು ಇಲ್ಲದ್ದರಿಂದ ಅರಸರ ವಿಷಯ ಹೆಚ್ಚಿಗೆ ಬರೆಯಲೂ ಸಾಧ್ಯವಾಗಿಲ್ಲ ಎಂದು ಗಣಪತಿ ರಾವ್ ಐಗಳು ತಿಳಿಸಿರುವರು. ಈ ಭಾಗದಲ್ಲಿದ್ದು ಸಮಾಧಿಗಳ ಉಲ್ಲೇಖವನ್ನು ತಮ್ಮ ಕೃತಿಯಲ್ಲಿ ನೀಡಿರುವರು. ಐಗಳು ತಿಳಿಸುವಂತೆ ಬೈಲಂಗಡಿಯ ರಾಣಿ ಸೋಮಳಾದೇವಿ (ಶಂಕರಾದೇವಿ) ರನರಸಿಂಹ ಲಕ್ಷ್ಮಪ್ಪರಸ ಬಂಗರಾಜನನ್ನು ಮದುವೆಯಾಗಿ ಗಂಡ – ಹೆಂಡಿರಲ್ಲಿ ಅನಂತನೋಂಪಿ ಸಂಬಂಧ ವಾಗಿ ಜಗಳ ನಡೆದು ಸೋಮಳಾದೇವಿ ಅರಮನೆ ತೊರೆಯುವಳು. ಒಂದು ತಿಂಗಳೊಳಗೆ ಬೈಲಂಗಡಿಯಲ್ಲಿ ಬಸದಿಯೊಂದನ್ನು ನಿರ್ಮಿಸಿ ಅನಂತನೋಂಪಿ ವೃತ ಪೂರೈಸುವಳು. ಇದರಿಂದ ಕುಪಿತನಾದ ಬಂಗರಾಜ ತನ್ನ ಸೈನ್ಯದ ಸಹಾಯದಿಂದ ದಾಳಿ ಮಾಡಲು ಹೊರಟಾಗ ಸೋಮಳಾದೇವಿ ಸೈನಿಕರು ಬಂಗರಾಜನ ತಲೆ ಕಡಿದರು. ಗಂಡನ ಸಾವು ತನ್ನ ಅಹಂಕಾರದಿಂದ ನಡೆಯಿತೆನ್ನುವ ಕಾರಣದಿಂದ ಸೋಮಳಾದೇವಿ ಆತ್ಮಹತ್ಯೆ ಮಾಡಿಕೊಳ್ಳುವಳು. ಮೂಲರು ಏಲಕ್ಕಿ ಬೆಳೆಯ ವ್ಯವಹಾರದಲ್ಲಿ ನಿಪುಣರಾಗಿದ್ದು ಇಕ್ಕೇರಿ ನಗರದವರೊಡನೆ ವ್ಯಾಪಾರ ವಹಿವಾಟು ನಡೆಸಿದ್ದುದರಿಂದ ಇವರನ್ನು ಏಲಕ್ಕಿ ಮೂಲರೆಂದು ನಗರದವರು ಕರೆಯುತ್ತಿ ದ್ದರು. ಇವರಲ್ಲಿನ ಪಟ್ಟದ ಹೆಸರುಗಳು ಮೂರು ತೆರನಾಗಿದ್ದವು. ದೇವಪ್ಪರಸ ಮೂಲ, ಚನ್ನಪ್ಪರಸ ಮೂಲ ಮತ್ತು ಸೋಮಳಾದೇವಿ. (ನೋಡಿ : ಗಣಪತಿ ರಾವ್ ಎಂ. ೧೯೨೩, ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ‘. ಬೈಲಂಗಡಿ ಮೂಲರು, ೨೯ನೇ ಅಧ್ಯಾಯ, ಪ್ರ: ಮಂಗಳೂರು ಶಾರದಾ ಪ್ರೆಸ್).

ಶ್ರೀ ವೈ. ಉಮಾನಾಥ ಶೆಣೈ ಇವರು ‘ಬಂಗಾಡಿಯ ಬಂಗರು’ ಲೇಖನದಲ್ಲಿ ತಿಳಿಸುವಂತೆ (ತುಳು ಕರ್ನಾಟಕ ಅರಸು ಮನೆತನಗಳು : ಪು. ೭೬) ಕಾಮಿರಾಯ ಬಂಗ ಎನ್ನುವ ರಾಜನ ಬಗ್ಗೆ ೧೪೬೧ (ಕೆರವಾಸೆ ಶಾಸನ: ಕಳಸ ಕಾರ್ಕಳ ರಾಜ್ಯದ ೨ನೇ ಪಾಂಡ್ಯಪ್ಪ ಭೈರರಸವೊಡೆಯನ ಒಪ್ಪಂದ, ೧೪೬೯ (ಉಜಿರೆ ಶಾಸನ : ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗ್ರಾಮದ ಎಲ್ಲ ತೆರಿಗೆ ತನ್ನ ಪಾಲಿಗೆ ದೊರಕಬೇಕೆಂದು ಹೊರಡಿಸಿದ ಆಜ್ಞೆ) ಇವು ಪ್ರಮುಖವಾದ ಶಾಸನಗಳು. ಇದನ್ನು ಹೊರತು ಪಡಿಸಿದರೆ ಎಸ್.ಎ.ಕೃಷ್ಣಯ್ಯ ಹಾಗೂ ಡಾ. ಪಿ.ವಿ.ನರಸಿಂಹ ಮೂರ್ತಿ ಇವರುಗಳ ಸಹಕಾರದಿಂದ ಶೋಧಿಸಿದ ನಿಡ್ಗಲ್ ಶಾಸನವೂ ಮುಖ್ಯವಾದುದಾಗಿದೆ. (ಕಾಲ ಸುಮಾರು ಕ್ರಿ. ಶ. ೧೪೬೦ – ೧೪೮೦) ಕಾಮಿರಾಯ ಬಂಗರು ಪೆನ್ನಂಣ ಮೂಲರೊಡನೆ ಮಾಡಿಕೊಂಡ ಕದನ ಒಪ್ಪಂದದ ಕರಾರು ವಿಷಯವನ್ನು ಈ ಶಾಸನ ಶೃತಪಡಿಸುತ್ತದೆ.

ಉಪಸಂಹಾರ

ಸಿರಿ ಆಚರಣೆಯ ಆವರಣದ ನಿಡ್ಗಲ್ – ನಲ್ಲಿ ದೊರಕಿರುವ ಈ ಶಾಸನಕ್ಕೂ ಸಿರಿಯ ಸಂಬಂಧವಾದ ಘಟನೆಗಳಿಗೂ ಶಾಸನದಲ್ಲಿ ಎಲ್ಲಿಯೂ ಸಂಬಂಧಗಳಿದ್ದಂತೆ ತೋರು ವುದಿಲ್ಲ. ಆದರೆ ಮೌಖಿಕ ಆಧಾರದ ಹಿನ್ನೆಲೆಯ ಮಾಹಿತಿಗಳನ್ನು ಮತ್ತು ಸ್ಥಳೀಯ ಆಚರಣೆ ಗಳಿಗೆ ಪೂರಕವಾಗಿ ಪ್ರೋಕೊಡಲ್ಪಟ್ಟ ಮನೆತನಗಳ ಪಾಲ್ಗೊಳ್ಳುವಿಕೆಯನ್ನು ಸಂಶೋಧನಾ ದೃಷ್ಠಿಕೋನದಿಂದ ತಿಳಿಯುವುದಾದರೆ ‘ಸಿರಿ – ಯ’ ಸಾಕು ತಂದೆ ಬಿರ್ಮ/ಬಿರುಮಣ ಮಾಲವ ಅಥವಾ ಪಾಲವ ‘ಮೂಲ’ ವಂಶದವರಾಗಿರುವ ಸಾಧ್ಯತೆಯೇ ಹೆಚ್ಚು.  ಈ ಹಿನ್ನೆಲೆಯಲ್ಲಿ ಸಿರಿ – ಗೆ ಸಂಬಂಧಿಸಿದ ಘಟನೆಗಳು ಸುಮಾರು ೧೫ನೇ ಶತಮಾನದ ಕೊನೆಯ ಕಾಲ ಘಟ್ಟದಲ್ಲಿ ನಡೆದಿರಬೇಕೆಂದು ತಿಳಿಯಲಾಗಿದೆ. ಸ್ಥಳೀಯರು ಲೋಕನಾಥ – ಎಂದು ಗುರುತಿಸಲ್ಪಟ್ಟ (ಶಾಸನದ ಪ್ರಕಾರ ಸೋಮನಾಥ) ಲಿಂಗಗಳ ಪಾಣಿ ಪೀಠ ಮತ್ತು ಶೈಲಿಗಳನ್ನು ಗಮನಿಸಿದಲ್ಲಿ ನಿಡ್ಗಲ್ ಪ್ರದೇಶದಲ್ಲಿ ಸೋಮನಾಥ ದೇವರ ಆರಾಧನೆಯು ಸುಮಾರು ೧೦ ಅಥವಾ ೧೧ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಸಾಧ್ಯತೆ ಇದೆ. ಶಾಸನದಲ್ಲಿ ತಿಳಿಸಲ್ಪಟ್ಟ ‘ಪೆನ್ನಂಣ ಮೂಲರು’ ಪದವನ್ನು ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಇನ್ನಷ್ಟು ವಿಶ್ಲೇಷಣೆಯನ್ನು ಮಾಡಿಕೊಳ್ಳುವ ಔಚಿತ್ಯವಿದೆ.  ಒಟ್ಟಿನಲ್ಲಿ ಆನ್ವಯಿಕ ಶಿಸ್ತಿನ ಅಧ್ಯಯನ ಹಾಗೂ ವಿಶ್ಲೇಷಣೆಯ ಹಿನ್ನೆಲೆಯಲ್ಲಿಯೂ ಈ ಸಂಬಂಧವಾಗಿ ಸಾಕಷ್ಟು ಚರ್ಚೆ ನಡೆಸಿ ಶೋಧನೆಯ ವಿಷಯಗಳನ್ನು ಬೆಳಕಿಗೆ ತರುವ ಪ್ರಯತ್ನ ನಡೆಯಬೇಕಿದೆ.

ಸಿರಿ ಅಧ್ಯಯನದ ಹಿನ್ನೆಲೆಯಲ್ಲಿ ನಿರ್ಲಕ್ಷಿಸಲ್ಪಟ್ಟ ಮಾಹಿತಿಗಳು ಸಂಬಂಧವಾಗಿ ವಿಚಾರ ಸಂಕಿರಣದಲ್ಲಿ ಪ್ರಸ್ತಾಪಿಸಲ್ಪಟ್ಟ ವಿಶೇಷ ಅಂಶಗಳು.

೧.  ತುಳುನಾಡಿನ ಸಿರಿ ಆರಾಧನೆ ಬಗ್ಗೆ ಸಂಶೋಧನೆ ನಡೆಸಿರುವ ವಿದ್ವಾಂಸರೊಬ್ಬರು ಸಿರಿ ಪರಿವಾರದವರಿಗೆ ಮಾಂಸಾಹಾರದ ಎಡೆ ಹಾಕಿ ಪೂಜಿಸುವ ವಿಧಿ ಎಲ್ಲೂ ಇಲ್ಲ ಎಂಬುದರ ಬಗೆಗೆ ತಿಳಿಸಿದ್ದಾರೆ, ಆದರೆ ಉಡುಪಿ ಜಿಲ್ಲೆಯ ಪಾಂಗಾಳ ಆಲಡೆಗಳಲ್ಲಿ ಕುಮಾರ ನಿಗೆ ಹಾಗೂ ಸಿರಿ ಪರಿವಾರದವರಿಗೆ ಮಾಂಸಾಹಾರದ ಎಡೆ ಬಡಿಸಿ ವರ್ಷಂಪ್ರತಿ ಹರಕೆ ಸಲ್ಲಿಸುವ ಆಚರಣೆ  ಇರುವುದರ ಬಗ್ಗೆ ಕುಮಾರ ಮಂಜ ಒಂದು ವಿಶಿಷ್ಟ ಆಚರಣೆ ಲೇಖನದಲ್ಲಿ (ಡಾ. ಅಶೋಕ ಆಳ್ವ ಬನ್ನಂಜೆ ಬಾಬು ಅಮೀನ್ ಅಭಿನಂದನ ಗ್ರಂಥ ‘ಐಸಿರಿ’ ೨೦೦೩) ವಿಧಿವತ್ತಾಗಿ ನಡೆಯುವ ಆಚರಣೆಗಳ ಬಗ್ಗೆ ಮಾಹಿತಿ ಇದ್ದು ಈ ಸಂಬಂಧವಾಗಿ ಸಿರಿ ಆರಾಧನೆ ಅಧ್ಯಯನ ಸಂಬಂಧವಾಗಿ ಉನ್ನತ ಅಧ್ಯಯನ ನಡೆಸುವವರು ಇನ್ನಾದರು ಗಮನ ಹರಿಸಲಿ ಎಂಬುದು ನನ್ನ ಅಭಿಪ್ರಾಯ.

೨.  ತುಳುನಾಡಿನ ಸಿರಿ ಆರಾಧನೆಗೆ ಸಂಬಂಧಿಸಿದಂತೆ ಅದರ ಮಹಾಕಾವ್ಯದಿಂದ ತಿಳಿಯುವಂತೆ ಸಿರಿಯ ಮಗನಾದ ಕುಮಾರನನ್ನು ಸಿರಿಯು ಬೋಳದ ಕಾಡಿನಲ್ಲಿ ಮಾಯಕ ಮಾಡಿದ ನಂತರ ಆತನು ಬೊಳ್ಯಟ್ಟು – ವಿಗೆ ಬಂದು ಬೆಳಿಯ ಬೊಗರೆ ಮರದಲ್ಲಿ ಕಂಚಿನ ಹುಂಜವಾಗಿ ಕೂಗಿ ಆ ಪ್ರದೇಶದ ಜನರಿಗೆ ತನ್ನ ಕಾರಣೀಕವನ್ನು ಪ್ರದರ್ಶಿಸಿ, ಅಲ್ಲಿಯೇ ಗುಡಿ ಗುಂಡಾರಗಳನ್ನು ಕಟ್ಟಿಸಿಕೊಂಡು ಆರಾಧನೆಗೆ ಒಳಪಟ್ಟ ವಿಚಾರ ತಿಳಿಯುತ್ತದೆ. ಆ ಬಳಿಕ ಕಥೆ ಮುಂದುವರಿದು ಅಬ್ಬಗ – ದಾರಗರ ದುರಂತಮಯ ಸಾವಿನೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಆದರೆ ಮಾಚಾರು ಗೋಪಾಲನಾಯಕ ಹಾಡಿರುವ (ಸಿರಿ ಎಪಿಕ್ ಸಂಗ್ ಬಯ್ ಗೋಪಾಲ ನಾಯಕ್) ಪುಸ್ತಕದಲ್ಲಿ ಕುಮಾರನು ಅಲ್ಲಿಂದ ಹೊರಟು (ಬೊಳ್ಯಟ್ಟುವಿನಿಂದ) ಕಂಡೇವು ಆಲಡೆಗೆ ಬಂದು ಪಾವಂಜೆಯಲ್ಲಿ ನೆಲೆಯೂರಿ ಅಲ್ಲಿ ಒಂದು ದಿನದ ಮತ್ತ್ಯ ಭೇಟೆಯನ್ನು ನಡೆಸುವ (ಪಾವಂಜೆ ಹೊಳೆಯಲ್ಲಿ) ಪ್ರಸ್ತಾವ ಇದೆ. ಅಲ್ಲದೇ ಇಲ್ಲಿ ಸೊನ್ನೆಗೆ ಹೆಚ್ಚಿನ ಪ್ರಾಶ್ಯಸ್ತ್ಯವನ್ನು ಕೊಡಲಾಗಿದೆ. ಅಲ್ಲದೆ ಪಾವಂಜೆ ಹೊಳೆಯಲ್ಲಿ ಇಂದಿಗೂ ವೃಷಭ ಸಂಕ್ರಮಣದಂದು ಒಂದು ದಿನ ಊರವರೆಲ್ಲರೂ ಸೇರಿ ಮೀನು ಹಿಡಿಯುವ ಮೀನಬೋಂಟೆ ನಡೆಯುತ್ತದೆ. ಮಾತ್ರವಲ್ಲದೆ ಇಲ್ಲಿ ಹಿಡಿದ ಮೀನುಗಳನ್ನು ಸರ್ವರಿಗೆ ಸಮಪಾಲು ಸಮಬಾಳು ಆಶಯದ ಹಿನ್ನೆಲೆಯಲ್ಲಿ ಹಂಚಿಕೊಂಡು ದೈವಗಳ ಪ್ರಸಾದವೆಂದು ಜನ ಸ್ವೀಕರಿಸುತ್ತಾರೆ. ಈ ಬಗೆಗೆ ಇಂದಿಗೂ ಸಿರಿಯ ಕಥಾನಕದ ಮುಂದುವರಿದ ಭಾಗವೆಂದೇ ತಿಳಿಯಲಾಗಿದೆ. ಈ ಬಗೆಗೆ ಡಾ. ಅಶೋಕ ಆಳ್ವ ಲೇಖನವೊಂದನ್ನು ಬರೆದಿರುತ್ತಾರೆ.(ಅಪ್ರಕಟಿತ). ಹೆಚ್ಚಿನ ಅಧ್ಯಯನ ನಡೆಸುವವರು ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಸಂಪನ್ಮೂಲ ಭಂಡಾರದಲ್ಲಿರುವ ವ್ಹೀಡೀಯೋ ಮುದ್ರಿಕೆಗಳನ್ನು ಗಮನಿಸಬಹುದಾಗಿದೆ.

೩.  ಸಿರಿಯ ನಂತರದ ಧಾರ್ಮಿಕ ಆರಾಧನೆಯ ಮುಂದುವರಿಕೆ ನಂದಿಗೋಣ ಅಥವಾ ಮಹೇಶ್ವರಕುಮಾರ ( ಅಮೃತ ಸೋಮೇಶ್ವರ ಇವರ ‘ಬಾಮಕುಮಾರ ಸಂಧಿ’ – ಗಮನಿಸಿ) ಈ ಮೂಲಕ ನಡೆದಿದೆ ಎನ್ನುವುದು ಡಾ. ಅಶೋಕ ಆಳ್ವ ಇವರ ಅಭಿಪ್ರಾಯ. ಮೈಸಂದಾಯನ ಹುಟ್ಟಿನ ಬಗ್ಗೆ ಮತ್ತು ಬಾಮಕುಮಾರ ಸಂಧಿಯ ಕಥೆ ಆಶಯ ದೃಷ್ಠಿಯಿಂದ ಒಂದೇ ರೀತಿಯದ್ದಾಗಿದೆ. ಬಾಮಕುಮಾರ ಸಂಧಿಯಲ್ಲಿ ಆನೆಯ ತಲೆ ಕಡಿದು ಗಣಪತಿಯ ದೇಹಕ್ಕೆ ಇರಿಸುವ ಆಶಯವಿದ್ದರೆ, ಮೈಸಂದಾಯ ಸಂಧಿಯಲ್ಲಿಕೋಣನ ತಲೆಯನ್ನು ಕಡಿದು ಅಬ್ಬಗನ ಮಗನಾದ ಕುಮಾರನ ದೇಹಕ್ಕೆ ಇರಿಸಿ ಜೀವಕಳೆ ಕೊಡುವ ಆಶಯವಿದೆ. ಈ ಬಗ್ಗೆ ಎಲ್ಲಿಯೂ ತೌಲನಿಕವಾದ ಅಧ್ಯಯನ ನಡೆಯದೇ ಇರುವುದು ಸೋಜಿಗದ ವಿಷಯ ವಾಗಿದೆ. (ಹೆಚ್ಚಿನ ಮಾಹಿತಿಗಾಗಿ ನೋಡಿ : ತುಳುನಾಡಿನ ಪ್ರಾಣಿ ಜಾನಪದ, ಡಾ. ಅಶೋಕ ಆಳ್ವ. ಪಿ.ಹೆಚ್.ಡಿ. ಪ್ರಬಂಧ, ೧೯೯೪).

೪.  “ದೇವಿ ನಲಿಕೆ” ಆರಾಧನೆಯಲ್ಲಿ ಸಿರಿ ಮೈದುಂಬುವ ಅಣಕು ಪ್ರದರ್ಶನ

ಸಿರಿ ಆರಾಧನೆ ಅಥವಾ ಹೆಂಗಸರುಗಳಲ್ಲಿ ಮೈದುಂಬುವ ಆವೇಶವನ್ನು ಸಹಜವಾಗಿ ಜಾತ್ರೆ ಹಾಗೂ ಆಯನಗಳಲ್ಲಿ ಕಾಣಬಹುದು. ಸಹಜವಾಗಿ ಸಿರಿಯ ಆವೇಶವನ್ನು ಒಳಗೊಳ್ಳುವ ಪ್ರಕ್ರಿಯೆ ಒಂದೆಡೆ ನಡೆದರೆ ಇನ್ನೊಂದೆಡೆ ಪಾಣಾರ ವರ್ಗದ ಹೆಂಗಸರು ಮತ್ತು ಕುಮಾರನನ್ನು (ಪಾಣಾರ ವರ್ಗದವರು) ಮುಂದಿಟ್ಟುಕೊಂಡ ಸಿರಿಯ ಆವೇಶವನ್ನು ಒಂದು ಅಣಕು ಪ್ರದರ್ಶನವಾಗಿ “ದೇವಿ ನಲಿಕೆ” ಆಚರಣೆಯಲ್ಲಿ ನಡೆಸುವರು. “ದೇವಿ ನಲಿಕೆ” ಆಚರಣೆಯನ್ನು ನಡೆಸುವವರು ಮುಖ್ಯವಾಗಿ ಪಾಣಾರ ಜನವರ್ಗದವರು. ಸಿರಿಯ ದರ್ಶನಕ್ಕೆ ಒಳಗಾಗುವಂತೆ ಹಗಲು ವೇಳೆ ಅಣಕು ಪ್ರದರ್ಶನವಾಗಿ ಸಿರಿದರ್ಶನದ ವರ್ತನೆ ಯನ್ನು ಅಭಿವ್ಯಕ್ತಿಸುವ ವಿಶಿಷ್ಟವಾದ ಧಾರ್ಮಿಕ ಆರಾಧನೆ ಕರಾವಳಿ ಕರ್ನಾಟಕದಲ್ಲಿ ಪ್ರಚಲಿತದಲ್ಲಿದೆ ಎಂಬುದು ಒಂದು ಅತ್ಯಂತ ಮಹತ್ವಪೂರ್ಣವಾದ ವಿಷಯ. ಆರಾಧನೆಗೆ ತದ್ವಿರುದ್ಧವಾಗಿ ಸಿರಿ ದೈವಗಳ ದರ್ಶನ ಒಂದು ಅಣುಕು ಪ್ರದರ್ಶನವನ್ನು ಪಾಣಾರ ಜನವರ್ಗದವರು ನಡೆಸಿಕೊಡುವ “ದೇವಿ ನಲಿಕೆ” ಅಥವಾ “ಗಂಡುಗಣಗಳ ಕೋಲ” – ದಂತಹ ಆರಾಧನೆಗಳಲ್ಲಿ ಕಾಣಬಹುದಾಗಿದೆ. ಮುಖ್ಯವಾಗಿ ಹಗಲು ವೇಳೆಯಲ್ಲಿ ಸಿರಿಗಳ ದರ್ಶನ, ಬಲಿ ಉತ್ಸವ, ಭೂತಾರಾಧನೆಯ ಅಣಿಯನ್ನು ಬೆನ್ನಿಗೆ ಕಟ್ಟಿಕೊಳ್ಳುವ ಬದಲಾಗಿ ಎದೆಗೆ ಕಟ್ಟಿಕೊಂಡು ಆವೇಶ ಬಂದವರಂತೆ ನಟನೆ ಮಾಡುವುದು ಈ ಎಲ್ಲ ಕ್ರಿಯೆಗಳನ್ನು ಐದು ವರ್ಷಗಳಿಗೊಮ್ಮೆ ಅಥವಾ ಇಪ್ಪತ್ತು ವರ್ಷಗಳಿಗೊಮ್ಮೆ ಅಪರೂಪವಾಗಿ ನಡೆಯುವ ಈ “ದೇವಿ ನಲಿಕೆ” ಆರಾಧನಾ ಪದ್ಧತಿಯಲ್ಲಿ ಕಾಣಬಹುದಾಗಿದೆ.

೫. ಸಿರಿ ಆರಾಧನೆ ಸಂಪೂರ್ಣವಾಗಿ ಒಂದು ಆಪರಕರ್ಮಕ್ರಿಯೆಯ ಆರಾಧನೆ ಎನ್ನಬಹುದೇ? ಈ ಒಂದು ನಿರ್ಧಾರವನ್ನು ಹೇಳುವ ಉದ್ದೇಶವೇನೆಂದರೆ ಸಿರಿ ಆಚರಣೆಯ ಅಂತ್ಯಭಾಗದಲ್ಲಿ ‘ಪಜ್ಜಿಮಡೇಲ್ ಗುಂಡ” (ಹಸಿರು ತೆಂಗಿನಸೋಗೆಯಿಂದ ಕೃತಕವಾಗಿ ನಿರ್ಮಾಣ ಮಾಡಿದ ಶಂಕಾಕೃತಿಯ ಗೋಪುರ) ಅಥವಾ ‘ಅಜ್ಜೆರ ಸುಡಾಲಕಂಡ’ (ಹಿರಿಯರನ್ನು ಹೂಳಿಟ್ಟ ಬಳಿಕ ಸಂರಚಿಸುವ ಹಸಿರು ತೆಂಗಿನಸೋಗೆಯಿಂದ ನಿರ್ಮಾಣಮಾಡಲ್ಪಟ್ಟ ಸ್ಥಳ: ಎಣ್ಣೆಯ ದೀಪ ಹಚ್ಚಿಟ್ಟಿರುತ್ತಾರೆ) – ಇಂತಹ ಸಾನಿಧ್ಯವನ್ನು ನಿರ್ಮಾಣ ಮಾಡಿಕೊಳ್ಳುವ ಪರಿಕಲ್ಪನೆ ಇಂದಿಗೂ ಸಿರಿ ಆರಾಧನೆಯ ಅಂತ್ಯಭಾಗದಲ್ಲಿ ಕಾಣಬಹುದಾಗಿದೆ. ಕೊನೆಯದಾಗಿ ಮೈದುಂಬಿದ ಸಿರಿಯ ಹೆಣ್ಣುಮಕ್ಕಳು ಹಾಗೂ ಕುಮಾರ ಎಲ್ಲರೂ ಸಿರಿಯನ್ನು ಬಿಟ್ಟುಕೊಡುವಾಗ ಈ ಗೋಪುರದ ಸುತ್ತ ಅಪ್ರದಕ್ಷಣಾಕಾರವಾಗಿ ಸುತ್ತುಬಂದು ಗಳಿಸಿದ ಒಂದು ವಿಶೇಷ ಶಕ್ತಿಯನ್ನು ಪ್ರಕೃತಿಗೆ ಬಿಟ್ಟುಕೊಡುವ ಪರಿಕಲ್ಪನೆ ಆ ಆರಾಧನೆಯಲ್ಲಿ ಇದೆ.  ಆ ಬಳಿಕ ದೇವಸ್ಥಾನದ ಹೊರಭಾಗದಲ್ಲಿ ಸಿದ್ಧಪಡಿಸಿದ ಮುಂಜಾನೆಯ ಗಂಜಿ ಊಟ ಕೊಡಲಾಗುತ್ತದೆ. ಇಂತಹ ಗಂಜಿ ಊಟವನ್ನು ಮಾಡಿಕೊಂಡು ಹೋಗುವ ಕ್ರಮವನ್ನು ‘ಸಾವುದ ಗಂಜಿ’ (ಅಪರಕರ್ಮ ಕ್ರಿಯಾ ಭಾಗದ ಮೊದಲ ವಿಧಿ) ಎಂದು ಕರೆಯಲಾಗುತ್ತಿತ್ತು.  ಪ್ರಸ್ತುತ ಇಂತಹ ಆಚರಣೆ ಸಾಂಕೇತಿಕವಾಗಿ ಇದೆ ಎಂಬುದನ್ನು ಅಲ್ಲಗಳೆಯಲಾಗದು.

೬.  ‘ಸಿರಿ’ ಪದ ಸಂಬಂಧವಾಗಿ ಅನೇಕ ಚರ್ಚೆಗಳು ನಡೆದಿವೆ. ಅಧ್ಯಯನ ನಡೆಸಿದ ವಿದ್ವಾಂಸರುಗಳ ಅಭಿಪ್ರಾಯದಂತೆ ‘ಸಿರಿ’ ಅಂದರೆ ಸಂಪತ್ತು, ಲಕ್ಷ್ಮಿ, ಎಳೆಯ ಹಿಂಗಾರ, ಫಲವತ್ತಿಕೆಯ ಸಂಕೇತ ಇತ್ಯಾದಿ ಅರ್ಥ ವಿಶೇಷಣಗಳನ್ನು ತಿಳಿಸಲಾಗಿದೆ. “ಸಿರಿ” – ಆರಾಧನೆಯಲ್ಲಿ ಮೈದುಂಬಿಕೊಳ್ಳುವ ಹೆಂಗೆಳೆಯರು ಹಾಗೂ ಕುಮಾರ ಪಾತ್ರಿ ಹಿಡಿಯುವ ಅಡಿಕೆ ಹಿಂಗಾರವನ್ನು ಕಾರ್ಯಾತ್ಮಕ ಗುಣಗಳಿಂದ ಬಳಸಿದಾಗ “ಸಿರಿ” ಅಥವಾ “ಸಿರಿ ದರ್ಶನ” – ಎಂಬುದಾಗಿ ಗುರುತಿಸಲಾಗುತ್ತದೆ. ೧೯೮೬ರ ಸಂದರ್ಭದಲ್ಲಿ ನಂದೊಳಿಗೆಯ (ಉಡುಪಿ ಜಿಲ್ಲೆ) ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆದ ಸಿರಿ ಆಯನವನ್ನು ನೋಡುವಾಗ ಕೊನೆಯ ವಿಧಿಯಲ್ಲಿ ಹಿಂಗಾರವನ್ನು ಬಿಟ್ಟುಕೊಡುವಂತಹ ಸಂದರ್ಭವಿದೆ. ಇಂತಹ ಸಂದರ್ಭದಲ್ಲಿ ಮೀಸಲಿಟ್ಟ ಬಾಕ್ಯಾರು ಗದ್ದೆಯಿಂದ (ಹಿರಿಯರನ್ನು ಹೂಳಿಡಲು ಕಾದಿಟ್ಟ ಸ್ಥಳ) ಭತ್ತದ ಸಸಿಯನ್ನು ಕಿತ್ತು ತಂದು ಹಿಂಗಾರದೊಂದಿಗೆ ಜೋಡಿಸಿ ದರ್ಶನಕ್ಕೆ ಒಳಗಾಗಿ ಆವೇಶದಿಂದ ಮುಕ್ತರಾಗುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ‘ಸಿರಿ’ ಎಂದರೆ ಭತ್ತದ ಸಸಿ. (ತುಳುವಿನ ನೇಜಿ) ಎಂಬ ಅರ್ಥವೂ ಆಯನದಲ್ಲಿ ಪ್ರಾಧಾನ್ಯತೆಯನ್ನು ಪಡೆದಿದೆ.  ಇಂತಹ ಸನ್ನಿವೇಶವನ್ನು ನಂದೊಳಿಗೆಯಲ್ಲಿ ಇಂದಿಗೂ ಕಾಣಬಹುದು. ಈ ಸಂಬಂಧವಾಗಿ ತೌಲನಿಕ ಅಧ್ಯಯನ ನಡೆಯುವುದು ಮತ್ತು ಸಾಂಸ್ಕೃತಿಕ ಹಿರಿಮೆ – ಗರಿಮೆಯನ್ನು ಅರ್ಥಮಾಡಿಕೊಳ್ಳುವ ಔಚಿತ್ಯ ಬಹಳಷ್ಟಿದೆ.

ಈ ಮೇಲೆ ಸೂಚಿಸಿರುವ ಆರೂ ಅಂಶಗಳೂ ಸಿರಿ ಆರಾಧನೆಗೆ ಸಂಬಂಧಿಸಿದಂತೆ ಆತ್ಮೀಯವಾದ ಸಂಬಂಧವಿದ್ದರೂ ಇದು ಮಹಾಕಾವ್ಯದ ಕೊಂಡಿಯಿಂದ ಅಥವಾ ಪ್ರಾದೇಶಿಕ ಭಿನ್ನತೆಯಿಂದ ಸಂಬಂಧಗಳು ಕಳಚಿಕೊಂಡು ಪ್ರತ್ಯೇಕ ಬಿಡಿ ಸಂಧಿಯಾಗಿ, ಅಥವಾ ಆರಾಧನೆಯ ವಿಧಿಯಾಗಿ ಉಳಿದುಕೊಂಡಿರುವುದು ಮೇಲ್‌ನೋಟಕ್ಕೆ ಕಾಣಿಸಿಕೊಳ್ಳು ತ್ತದೆ. ಈ ಬಗೆಗೆ ಹೆಚ್ಚಿನ ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹಣೆ ಹಾಗೂ ಸಂಶೋಧನೆಯ ಅಗತ್ಯ ಇದೆ.

ಶಾಸನ ಸಂಬಂಧವಾಗಿ ಟಿಪ್ಪಣಿಗಳು

 • ನಿಡ್ಗಲ್ಲು ಶಾಸನವನ್ನು ಮೊದಲು ಮೇ ತಿಂಗಳ ೧೯೮೮ ರಲ್ಲಿ ಗುರುತಿಸಿ ಬೆಳಕಿಗೆ ತರುವಲ್ಲಿ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಶೋಧಕರು ಎಸ್. ಎ. ಕೃಷ್ಣಯ್ಯ, ಡಾ. ವೆಂಕಟೇಶ್ ಜೋಯಿಸ (ಕೆಳದಿ) ಡಾ. ಪೀಟರ್ ಜೆ. ಕ್ಲಾಸ್ (ಹೇವರ್ಡ್ ವಿಶ್ವವಿದ್ಯಾನಿಲಯ) ಇವರುಗಳ ಸಹಕಾರದಿಂದ ಓದುವ ಪ್ರಯತ್ನ ಮಾಡಲಾಯಿತು. ಆ ಬಳಿಕ ಡಾ. ವಸಂತ ಶೆಟ್ಟಿ ಇವರ ನೆರವಿನಿಂದ ಶಾಸನದ ಪಠ್ಯವನ್ನು ೨ – ಜುಲೈ – ೧೯೮೮ – ರಲ್ಲಿ ಪರಿಶೀಲಿಸಲಾಯಿತು.
 • ಪಿ. ಎನ್. ನರಸಿಂಹ ಮೂರ್ತಿ ಇವರ ಸಹಕಾರ ಪಡೆದು ದಿನಾಂಕ ೬ – ೫ – ೨೦೦೦ರಂದು ಮತ್ತೊಮ್ಮೆ ನಿಡ್ಗಲ್ಲು ಸ್ಥಳಕ್ಕೆ ಭೇಟಿ ನೀಡಿ ಶಾಸನದ ಅಚ್ಚನ್ನು ತೆಗೆದು ಲೇಖನವನ್ನು ಓದಲು ವಿನಂತಿಸಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಇತಿಹಾಸಕಾರರಾದ ಪಿ. ಎನ್. ನರಸಿಂಹ ಮೂರ್ತಿ ಶಾಸನದ ಅಚ್ಚನ್ನು ತೆಗೆದು ಶಾಸನದ ಪಠ್ಯವನ್ನು ಓದುವುದರ ಮೂಲಕ ಸಹಕರಿಸಿದ್ದಾರೆ.
 • ಇತಿಹಾಸಕಾರರಾದ ಪಿ. ಎನ್. ನರಸಿಂಹಮೂರ್ತಿ ಇವರಿಗೆ ಹಾಗೂ ದೇವಳದ ಧರ್ಮದರ್ಶಿಗಳಾದ ಶ್ರೀ ನರಸಿಂಹ ಮೂರ್ತಿ ಸೋಮಯಾಜಿ ಹಾಗೂ ಅರ್ಚಕರಾದ ಶ್ರೀ ನಾರಾಯಣ ಭಟ್ಟ ಇವರಿಗೂ ಲೇಖಕನ ಅನಂತ ಕೃತಜ್ಞತೆಗಳು ಸಲ್ಲುತ್ತವೆ.

ಪರಾಮರ್ಶನ ಗ್ರಂಥಗಳು

 • ಅಮೃತ ಸೋಮೇಶ್ವರ ೧೯೯೭ ‘ತುಳು ಪಾಡ್ದನ ಸಂಪುಟ’ ಪ್ರ : ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ
 • ಗಾಯತ್ರಿ ನಾವಡ ೧೯೯೯ ‘ಸಿರಿಕಥೆ’ ಪ್ರ : ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ
 • ಚಿನ್ನಪ್ಪ ಗೌಡ ಕೆ. ೧೯೮೩ ‘ಭೂತಾರಾಧನೆ ಕೆಲವು ಅಧ್ಯಯನಗಳು’ ಪ್ರ : ತುಳುವ ಪ್ರಕಾಶನ, ಮಂಗಳೂರು.
 • ವಿವೇಕ ರೈ ೧೯೮೫ ‘ತುಳು ಜನಪದ ಸಾಹಿತ್ಯ’ ಪ್ರ : ಕನ್ನಡ ಸಾಹಿತ್ಯ ಪರಿಷತ್ – ಬೆಂಗಳೂರು – 18
 • Claus, Peter J. 1975, “The Siri Myth and Ritual : A Mass Possession Ritual of South Indian.” Ethnology 14, 1:47 – 58.
 • Claus, Peter J. 1989. “Behind the Text : Performance and Ideology in a Tulu Oral Tradition”. Indian Oral Epics edited by Peter J. Claus, S. Blackburn, S. Wadley and J. Flueckiger, Berkeley : University of California Press. Pp. 55 – 74.
 • Claus, Peter J. 1991. ” Tulu Paddanas : Text and Performance.” In Perspectives on Dakshina Kannada and Kodagu, edited by the Editorial Committee, Mangalore University Decennial Volume. Mangalagangotri (Karnataka, India) : Mangalore University. Pp. 1 – 10.
 • Lauri Honko in collaboration with Chinnappa Gowda, Anneli Honko and Viveka Rai.  The Siri Epic as performed by Gopala Naika. Folklore Fellows’ Communications No. 264 – 266. Helsinki : Suomalainen Tiedeakatemia (Academia Scientiarum Fennica), 1998.
 • Lauri Honko, Textualising the Siri Epic. Folklore Fellows’ Communications No. 264. Helsinki : Suomalainen Tiedeakatemia (Academia Scientiarum Fennica), 1998.
 • Lord, Albert, 1960. The Singer of Tales. Cambridge, USA : Harvard University Press.
 • Smith J.D.1987. “Formulaic Language in the Epics of India.” In Bo Almqvist, S.amas Cath in and P draig H.alaj, eds., The Heroic Process : Form, Function and Fantasy in Folk Epic. Dublin : The Glendle Press.
 • Notes – 1 : SIRI EPIC as performed by Sri Gopala Naik (Edited by Lauri Honko, Anneli Honko, Vivek Rai and Chinnappa Gowda) Release by Dr. Veerendra Heggade of Dharmasthala. The Finnish – Indian tema Prof Lauri Honko and Mrs Anneli Honko from the University of turku and Prof B. A. Vivek Rai and Dr. Chinnappa Gowda from Mangalore University documented the 15,683 line performance of the SIRI EPIC by Gopala Naik, one of the many talented singers of oral epics of Tulunadu. This work consist new concept of ‘mental text’ and ‘multiform’ are introduced for the analysis of oral compositions. Seminar on oral epics also condected with collobaration of Regional Resources Centre for Folk Performing Arts, Udupi).