ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ ಎನ್ನುವ ಮಾತಿದೆ. ಇದು ನಿಜ ಕೂಡಾ. ಆದರೆ ಬಹುಮುಖಿ ಸಂಸ್ಕೃತಿಯ ಭಾರತದಲ್ಲಿ ಭಾರತೀಯರಿಗೆ ಅದರಲ್ಲೂ ಕರ್ನಾಟಕ ದವರಿಗೆ ಇರುವ ಸಾಂಸ್ಕೃತಿಕ ಪ್ರಜ್ಞೆ ಅನನ್ಯವಾದುದು. ಅಂತಹ ಮಹತ್ವದ ಸಾಂಸ್ಕೃತಿಕ ಪರಂಪರೆಯನ್ನು ಜನಪದರು ಲಾವಣಿಗಳ ಮೂಲಕ, ಸಂಧಿ ಪಾಡ್ದನಗಳ ಮೂಲಕ ಗೀತೆ ಗಾಯನಗಳ ಮೂಲಕ ಮೌಖಿಕವಾಗಿ ಬೆಳೆಸಿಕೊಂಡು, ಮುಂದುವರಿಸಿಕೊಂಡು ಬಂದಿದ್ದಾರೆ. ಬಾಯಿಂದ ಬಾಯಿಗೆ, ತಾಯಿಯಿಂದ ಮಗಳಿಗೆ, ಗುರುವಿನಿಂದ ಶಿಷ್ಯನಿಗೆ ವರ್ಗಾಯಿಸಲ್ಪಟ್ಟ ಜನಪದ ಸಾಹಿತ್ಯ ನೆನಪಿನ ಮೂಲಕವೇ ಸಾಗಿ ಸಾಂಸ್ಕೃತಿಕವಾಗಿ ಶಕ್ತಿಶಾಲಿಯಾಯಿತು. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಕಾಲ ಘಟ್ಟದಲ್ಲಿ ಮೌಖಿಕ ಸಾಹಿತ್ಯವನ್ನು ದಾಖಲಿಸುವ ಕಾರ್ಯ ನಡೆಯಿತು.

ಕರ್ನಾಟಕದಲ್ಲಿ ೧೯ನೆಯ ಶತಮಾನದಲ್ಲಿ ಜಾನಪದ ಸಂಗ್ರಹ ಆರಂಭವಾದರೂ ಅವು ಗೀತೆ ಮತ್ತು ಗಾದೆಗಳಿಗೆ ಸಂಬಂಧಿಸಿದಂತೆ ಇತ್ತು. ಕನ್ನಡದಲ್ಲಿ ಸಂಗ್ರಹವಾಗಿರುವ ಮಲೆ ಮಹದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ – ಇವೆಲ್ಲಾ ೨೦ನೆಯ ಶತಮಾನದ ಕೊನೆಯ ದಶಕಗಳಲ್ಲಿ ಅಕ್ಷರರೂಪಕ್ಕೆ ಇಳಿದ ಪಠ್ಯಗಳು.

ಕರ್ನಾಟಕದಲ್ಲಿ ಜನಪದ ಅಧ್ಯಯನಕ್ಕೆ ಸ್ಥಿರವಾದ ಬುನಾದಿಯನ್ನು ಹಾಕಿ ಕೊಟ್ಟ ಕೀರ್ತಿ ಮೈಸೂರು ವಿಶ್ವವಿದ್ಯಾನಿಲಯದ, ಕನ್ನಡ ಅಧ್ಯಯನ ಸಂಸ್ಥೆಗೆ ಸಲ್ಲುತ್ತದೆ. ಜಾನಪದಕ್ಕೆ ಸಂಬಂಧಿಸಿದಂತೆ ಇಲ್ಲಿ ವ್ಯಾಪಕ ಕಾರ್ಯಕ್ರಮಗಳು ಆರಂಭವಾದವು.

ತುಳುವಿನ ಸಂದರ್ಭದಲ್ಲಿ ಜನಪದ ಸಂಗ್ರಹಕ್ಕೆ ಮೊದಲು ಇಳಿದವರು ವಿದೇಶಿ ಮಿಷನರಿಗಳು. ಮಂಗಳೂರಿನ ಬಾಷೆಲ್ ಮಿಷನ್ ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ಆಗಮಿಸಿದ ಸಂಸ್ಥೆ. ಇದು ಮೊತ್ತ ಮೊದಲಿಗೆ ತುಳು ಇಂಗ್ಲಿಷ್ ಡಿಕ್ಷನರಿ ಪ್ರಕಟಿಸಿದಾಗ ಅದರಲ್ಲಿ ತುಳು ಗಾದೆಗಳು ಒಗಟುಗಳು ಸೇರ್ಪಡೆಯಾದುವು. ಈ ಸಂಸ್ಥೆಯ Rev. A. Manner ಅವರು ೧೮೮೬ರಲ್ಲಿ ಸಂಗ್ರಹಿಸಿದ ೨೧ ಪಾಡ್ದನಗಳು ತುಳು ಪಾಡ್ದನಗಳ ಪ್ರಥಮ ಪಠ್ಯ. ಮುಂದೆ A. C. Burnell ಸಂಗ್ರಹಿಸಿದ “The Devil worship of the Tuluvas” ಎಂಬ ಗ್ರಂಥ ಅವರ ಮರಣಾನಂತರ ಪ್ರಕಟವಾಯಿತು.

Manner ಅವರ ೨೧ ಪಾಡ್ದನಗಳ ಪಟ್ಟಿಯಲ್ಲಿ ಸಿರಿ ಪಾಡ್ದನ ಸ್ಥಾನ ಪಡೆದಿಲ್ಲ. ಆದರೆ ಅವರು ಸಂಗ್ರಹಿಸಿರುವ ಭೂತಗಳ ಪಟ್ಟಿಯಲ್ಲಿಅಬ್ಬಗ ದಾರಗರ ಹೆಸರು ಇದೆ.  ನಂದೊಳ್ಗೆ ಶೀನಪ್ಪ ಹೆಗ್ಡೆಯವರು ಬರೆದು ಪ್ರಕಟಿಸಿದ ಸಿರಿಯ ಗದ್ಯ ಕಥೆ “ಸತ್ಯನಾಪುರದ ಸಿರಿ ಅಕ್ಕರಸು ಪೂಂಜೆದಿ'(೧೯೫೨) ಸಿರಿ ಪಾಡ್ದನದ ಪ್ರಥಮ ಪಠ್ಯ. ಸಾಮಾನ್ಯವಾಗಿ ತುಳುವರು ಮನೆಗಳಲ್ಲಿ ಮಕ್ಕಳಿಗೆ ಸಿರಿಯ ಕಥೆಯನ್ನು ಗದ್ಯದಲ್ಲಿ ಹೇಳುತ್ತಾರೆ. ನಿರಕ್ಷರಕುಕ್ಷಿಯಾದ ನನ್ನ ಅಜ್ಜಿ ನನಗೂ ಹೇಳಿದ್ದರು. ನನ್ನ ಅಜ್ಜಿ ಹೇಳಿದ ಕಥೆ ಹಾಗೂ ಶೀನಪ್ಪ ಹೆಗ್ಡೆ ಬರೆದ ಕಥೆ ಒಂದೇ. ಆದರೆ ಅಜ್ಜಿ ಸಿರಿಯ ಹುಟ್ಟಿನಿಂದ ಅಬ್ಬಗ ದಾರಗರ ಮರಣದವರೆಗೆ ಮಾತ್ರ ಹೇಳಿದ್ದರು. ಕೆ.ಜಿ.ಶೆಟ್ಟಿ ಕಡಂದಲೆಯವರು ಸಿರಿ ಪಾಡ್ದನ (೧೯೭೩) ಮತ್ತು ಅಬ್ಬಗ ದಾರಗ ಎಂಬ ಕಿರು ಹೊತ್ತಗೆಯನ್ನು ತಂದರು. ೧೯೮೪ರಲ್ಲಿ ಶ್ರೀ ಎಸ್. ವಿ. ರಾವ್ ಅವರು ಸಿರಿ ಪಾಡ್ದನವನ್ನು ಆಧರಿಸಿ ಕನ್ನಡದಲ್ಲಿ ಸಾಮಾಜಿಕ ಕಾದಂಬರಿಯನ್ನು ರಚಿಸಿದರು. ಪ್ರೊ. ಎ. ವಿ. ನಾವಡ (೧೯೯೯) ಅವರು ಗಿಡಿಗೆರೆ ರಾಮಕ್ಕ ಮುಗೇರ‍್ತಿ ಹಾಡಿದ ಪಾಡ್ದನವನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅಮೃತ ಸೋಮೇಶ್ವರರ ತುಳು ಪಾಡ್ದನಗಳ ಸಂಪುಟ (೧೯೭೭) ದಲ್ಲಿ ಸಿರಿ ಪಾಡ್ದನ ಸೇರ್ಪಡೆಯಾಗಿದೆ. ಡಾ. ವಿವೇಕ ರೈ (೧೯೫೫), ಎಂ. ಮುಕುಂದ ಪ್ರಭು, ಡಾ. ಸುಶೀಲಾ ಉಪಾಧ್ಯಾಯ, ಮುಂತಾದವರು ಸಿರಿಪಾಡ್ದನದ ಪಠ್ಯದ ಬಗ್ಗೆ ಕೆಲಸ ಮಾಡಿದ್ದಾರೆ. ಡಾ. ಗಾಯತ್ರಿ ನಾವಡ ಅವರು ಸಿರಿ ಪಾಡ್ದನವನ್ನು ಸ್ತ್ರೀವಾದಿ ದೃಷ್ಟಿ ಯಿಂದ ಅಧ್ಯಯನ ಮಾಡಿ ರಚಿಸಿದ “ಸಿರಿ – ಹೆಣ್ಣಿನ ಅನನ್ಯತೆಯ ಹುಡುಕಾಟ.(೧೯೭೭).

ಜಾನಪದ ಮಹಾಕಾವ್ಯಗಳಲ್ಲಿ ಪಾತಿವ್ರತ್ಯದ ನಿರ್ವಚನ (೧೯೭೭) ಮಹಿಳಾ ಅಧ್ಯಯನದ ದೃಷ್ಟಿಯಿಂದ ಮಹತ್ವ ಪಡೆದಿದೆ. ಪೀಟರ್ ಜೆ. ಕ್ಲಾಸ್ ಅವರು ಮನಶಾಸ್ತ್ರೀಯ ನೆಲೆಯಲ್ಲಿ ಸಿರಿಯ ಪಠ್ಯ ಹಾಗೂ ಆಚರಣೆಯನ್ನು ಅಧ್ಯಯನ ಮಾಡಿದ್ದಾರೆ.

ಸಿರಿಪಾಡ್ದನದಲ್ಲಿ ಸತ್ಯನಾಪುರವನ್ನು ಬೆರ್ಮಾಳುವನೆಂಬ ಸಣ್ಣ ಪಾಳೆಯಗಾರ ಆಳುತ್ತಾನೆ.  ಈ ಪಾಳೆಯಗಾರ ತುಳುನಾಡಿನ ಇತಿಹಾಸದಲ್ಲಿ ದಾಖಲಾಗಿಲ್ಲ. ತುಳುನಾಡನ್ನು ಆಳಿದ, ಇತಿಹಾಸದಲ್ಲಿ ದಾಖಲಾಗಿರುವ ಆಳುಪ ಅರಸರಾಗಲಿ ಆಳುಪರ ರಾಣಿ ಬಲ್ಲಮಾದೇವಿ ಯಾಗಲಿ ಅಥವಾ ಕಿಕ್ಕಾಯಿ ತಾಯಿಯಾಗಲಿ ಸಾಂಸ್ಕೃತಿಕ ಸಂದರ್ಭದಲ್ಲಿ ದಾಖಲಾಗಿಲ್ಲ. ಹಾಗಾದರೆ ಪಾಡ್ದನಗಳು ಹುಟ್ಟುವ ಸಂದರ್ಭ ಯಾವುದು ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ.  ಪಾಡ್ದನ ಹಾಡುವ ಕಲಾವಿದರನ್ನು ಈ ಬಗ್ಗೆ ಪ್ರಶ್ನಿಸಿದರೆ ‘ಪಾಡ್ದನ ಹುಟ್ಟುವುದಿಲ್ಲ ಬಾಯಿಂದ ಬಾಯಿಗೆ ಬೆಳೆಯುತ್ತದೆ’ ಎನ್ನುತ್ತಾರೆ. ಜನಪದ ಗೀತೆಗಳು, ಒಗಟುಗಳು ಹುಟ್ಟುವುದು ಸೃಜನಶೀಲತೆಯಿಂದ. ಆದರೆ ತುಳುನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕನ್ನು ನಿಯಂತ್ರಿಸಬಲ್ಲ ಮತ್ತು ಭೂತಗಳಿಂದ ದೂರ ಇರಬೇಕಾದ ಬ್ರಾಹ್ಮಣ ವರ್ಗ ವನ್ನು ಹತ್ತಿರ ಸೆಳೆದು ಕೊಂಡ ಪಾಡ್ದಾನಗಳು ಹುಟ್ಟಲು ಸೃಜನಶೀಲತೆಯೊಂದೆ ಸಾಕಾಗದು. ಹಾಗಾದರೆ ಪಾಡ್ದನಗಳು ಹುಟ್ಟುವ ಬಗೆ ಹೇಗೆ ಎಂಬುದೇ ಕುತೂಹಲ ಕೆರಳಿಸುವಂತಹುದು.

ಪೀಟರ್ ಜೆ. ಕ್ಲಾಸ್ ಅವರು ತುಳುನಾಡ ಸಿರಿ ಕಥೆ ಕ್ರಿ. ಶ. ಆರಂಭದಲ್ಲಿ ನಡೆದಿರ ಬಹುದಾದ ಕಥೆ ಎನ್ನುತ್ತಾರೆ. ಸಿರಿಯ ಕಥೆಯಲ್ಲಿ ‘ಕಲ್ಲ ಕಲೆಂಬಿ”(ಸುಮಾರು ೭ ಅಡಿ ಉದ್ದ ೩ ಅಡಿ ಎತ್ತರದ ೩  ಅಡಿ ಅಗಲದ ಪೆಟ್ಟಿಗೆಯನ್ನು ಕಲೆಂಬಿ ಎನ್ನುತ್ತಾರೆ)ಯ ಪ್ರಸ್ತಾಪ ಬರುತ್ತದೆ.  ಶಿಲೆಯ ಬೀಸುವ ಕಲ್ಲು, ರುಬ್ಬುವ ಕಲ್ಲು ಇವು ಸಾಮಾನ್ಯ. ನೀರು ತುಂಬುವ ಕಲ್ಲಿನ ತೊಟ್ಟಿ ಶ್ರೀಮಂತರ ಮನೆಯ ವಸ್ತು. ನೀರು ತುಂಬಲು ಶಿಲಾ ದೋಣಿ ಯನ್ನು ಬಳಸುತ್ತಿದ್ದರು.  ಶಿಲೆಯ ಕಲೆಂಬಿಯನ್ನು ಬಳಸುತ್ತಿದ್ದ ಕಾಲವೊಂದು ಇತ್ತು. ಪಾಡ್ದನಗಳ ಪ್ರಕಾರ ಶ್ರೀಮಂತ ಪಾಳೆಯಗಾರರ ಮನೆಯಲ್ಲಿ ಅಮೂಲ್ಯ ವಸ್ತುಗಳನ್ನು ಜೋಪಾನವಾಗಿ ಇಡಲು ಕಲೆಂಬಿಯನ್ನು ಉಪಯೋಗಿಸುತ್ತಿದ್ದರು. ಕಲ್ಲಿನ ಕಲೆಂಬಿಯ ಪರಿಚಯ ಕೆಳವರ್ಗದ ಜನಸಾಮಾನ್ಯನಿಗೂ ಇತ್ತು. ಅಂತಹ ಕಲ್ಲ ಕಲೆಂಬಿ ಸಿರಿ ಪಾಡ್ದನದಲ್ಲಿ ಪ್ರಸ್ತಾಪಿತವಾಗಿದೆ. ಕಲ್ಲ ಕಲೆಂಬಿ ಭೌತಿಕ ಸಂಸ್ಕೃತಿಯಾಗಿ ಪಾಡ್ದನದಲ್ಲಿ ಸೇರ್ಪಡೆಗೊಂಡಿದೆ. ಕಲ್ಲ ಕಲೆಂಬಿಯನ್ನು ಉಪಯೋಗಿಸುತ್ತಿದ್ದುದು ಅತ್ಯಂತ ಪ್ರಾಚೀನ ಕಾಲದಲ್ಲಿ ಎಂಬುದರಲ್ಲಿ ಅನುಮಾನ ಇಲ್ಲ.

ಕ್ರಿ. ಶ. ೮ನೆಯ ಶತಮಾನದ ೨ನೆಯ ಆಳುವರಸನ ಬೆಳ್ಮಣ್ಣು ತಾಮ್ರಶಾಸನ ಇಟ್ಟ “ಕಲ್ಲ ಪೆಟ್ಟಿಗೆ” ಬೆಳ್ಮಣ್ಣು ದುರ್ಗಾಪರಮೇಶ್ವರಿ ದೇವಾಲಯದಲ್ಲಿದೆ. ಸುಮಾರು ೨೦” ಉದ್ದ ೧೮” ಎತ್ತರದ ಚಚ್ಛೌಕದ ಶಿಲಾ ಪೆಟ್ಟಿಗೆಯಲ್ಲಿ ತಾಮ್ರಶಾಸನ ಇತ್ತು. ಸುಮಾರು ಎಂಟನೆಯ ಶತಮಾನದ ಕಾಲಕ್ಕೂ ಸಂರಕ್ಷಣೆಯ ನಿಮಿತ್ತ ಕಲ್ಲಿನ ಪೆಟ್ಟಿಗೆಗಳನ್ನು ಬಳಸಲಾ ಗುತ್ತಿತ್ತು ಎಂಬುದಕ್ಕೆ ಇದು ಜೀವಂತ ಉದಾಹರಣೆ. ಹಾಗಂತ ಸಿರಿಯ ಪಾಡ್ದನ ಕಾಲವನ್ನು ಈ ಶಿಲಾ ಪೆಟ್ಟಿಗೆಗಳು ನಿರ್ಧರಿಸುತ್ತವೆ ಎಂದಲ್ಲ. ಸಿರಿಪಠ್ಯದ ರಚನೆಯ ಕಾಲ ಇನ್ನೂ ಹಿಂದೆ ಹೋಗಲು ಸಾಧ್ಯ ಇದೆ. ಆದರೆ ಕಾಲ ನಿರ್ಣಯ ಮಾಡುವುದು ಕಷ್ಟ.

ಬೋಳ ಗ್ರಾಮದಲ್ಲಿ ದೊರಕಿದ ವಿಜಯನಗರ ಚಕ್ರವರ್ತಿ ರ ಬುಕ್ಕರಾಯನ ಕಾಲದ ಕ್ರಿ. ಶ. ೧೩೫೫ರ ಶಾಸನವೊಂದರಲ್ಲಿ ಬಾರ್ಕೂರು ರಾಜ್ಯಪಾಲ ಗೋಪರಸ ಒಡೆಯನು ಬೋಳದ ದೇಸಿಂಗರಸನಿಗೆ ಬರೆಸಿ ಕೊಟ್ಟ ಶಾಸನ ವಿಷಯದ ವಿವರ ಇದೆ. (ಪಿ. ನರಸಿಂಹ ಮೂರ್ತಿ ಇತಿಹಾಸ ದರ್ಶನ ೧೮/೨೦೦೩) ಈ ಶಾಸನದ ಪ್ರಕಾರ ಕ್ರಿ. ಶ. ೧೩೫೫ರ ಕಾಲದಲ್ಲಿ ದೇಸಿಂಗರಸರು ರಾಜ್ಯ ರಾಜಕೀಯದಲ್ಲಿ ಪ್ರಮುಖರಾಗಿದ್ದರು. ಹಾಗಿದ್ದರೂ ಈ ದೇಸಿಂಗರಸ ಸಿರಿಯ ಕಾಲದ ದೇಸಿಂಗರಸ ಎಂದು ಹೇಳುವುದು ಸರಿಯಲ್ಲ. ತುಳುನಾಡಿನಲ್ಲಿ ಪಟ್ಟ ಆಗುವಾಗ ಪೂರ್ವ ಪರಂಪರೆಯ ಪಟ್ಟದ ಹೆಸರನ್ನು ಮುಂದುವರಿಸಲಾಗುತ್ತದೆ. ಆಳುವ ಪಟ್ಟದಲ್ಲಿ ಯಾರು ಬಂದು ಕುಳಿತು ಪಟ್ಟ ಆಳಿದರೂ ಅವರು ಆಳುಪ / ಆಳುವರೇ ಆಗುತ್ತಾರೆ. ಈ ಸಂಪ್ರದಾಯವನ್ನು “ಜನನಂದ ಪರಪ್ಪು” ಎನ್ನುತ್ತಾರೆ. ಪಟ್ಟದ ಹೆಸರನ್ನು ಹೊಸ ಅರಸನಿಗೆ ನೀಡುವುದನ್ನು ‘ಪರಪ್ಪು ಲೆಪ್ಪುನು’ ಎನ್ನುತ್ತಾರೆ. ಈಗಲೂ ಪಟ್ಟ ಆಗಿ “ಆಳುವ” ‘ಚೌಟ’ ಆಗುವ ಸಂಪ್ರದಾಯ ಮುಂದುವರಿದಿದೆ.

. ಸಿರಿಯು ಭೂತ ಅಲ್ಲವೇ? ಹೌದೇ?

ಭೂತಾರಾಧನೆಯಲ್ಲಿ ಕೋಲ ತಂಬಿಲ, ನೇಮಗಳು ಮುಖ್ಯ. ಈ ಸೇವೆಗಳು ಆಯಾ ದೈವಗಳ ಸ್ಥಾನಮಾನಕ್ಕನುಗುಣವಾಗಿ ನಡೆಯುತ್ತವೆ. ಕೋಟಿ ಚೆನ್ನಯರಿಗೂ ಕೋಲ ತಂಬಿಲ ನೇಮಗಳು ನಡೆಯುತ್ತವೆ. ಕೋಟಿ ಚೆನ್ನಯರನ್ನು ಭೂತ ಎಂದೇ ಆರಾಧಿಸಲಾಗುತ್ತದೆ.  ಸಿರಿಗಳಿಗೆ ಕೋಲ ತಂಬಿಲ, ನೇಮದಂತಹ ಯಾವುದೇ ಸೇವೆ ನಡೆಯುವುದಿಲ್ಲ. ಸಿರಿ ಗಳಿಗೆ ‘ಐಯ್ಯೊಲಿ ಪಯ್ಯೊಲಿ’ ಎನ್ನುತ್ತದೆ ಪಾಡ್ದನ. ಭೂತಾರಾಧನೆಯ ನೆಲೆಯಲ್ಲಿ ಸಿರಿ ಮತ್ತು ಕುಮಾರರು ಬರುವುದಿಲ್ಲ. ಭೂತಗಳು ಪ್ರಸರಣವಾಗುತ್ತವೆ; ಹೊಸ ಹೊಸ ನೆಲೆಯನ್ನು ಹುಡುಕಿ ಹೋಗುತ್ತವೆ. ಕೋಟಿ ಚೆನ್ನಯರೂ ಆಳುವ ವರ್ಗದ ಮನೆಗಳನ್ನು ಹುಡುಕಿ ಹೋದ ಅನೇಕ ಕಥೆಗಳಿವೆ. ಬ್ರಾಹ್ಮಣ ಮಹಿಳೆಯರೂ ಭೂತ ಆಗಿದ್ದಾರೆ. ಅವರಿಗೂ ಕೋಲ ನಡೆಯುತ್ತದೆ. ಆದರೆ ಸಿರಿ ಬಳಗಕ್ಕೆ ಕೋಲ, ನೇಮಗಳು ನಡೆಯುವುದಿಲ್ಲ. ಸಿರಿ ಪ್ರಸರಣವಾಗುವುದಿಲ್ಲ. ಇಪ್ಪತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ಕೆಲವು ಆಲಡೆಗಳು ಒಡೆದು ಎರಡಾದುದು, ೧೯೨೯ರಲ್ಲಿ ನಿಡಿಗಲ್ಲಿನಲ್ಲಿ ಹೊಸ ಆಲಡೆ ಸೃಷ್ಟಿಯಾದುದು ಆಡಳಿತ ವರ್ಗದವರ ಹಿತಾಸಕ್ತಿಗಾಗಿಯೇ. ಭೂತಗಳಂತೆ “ನನ್ನನ್ನು ನಂಬಿದವರಿಗೆ ಇಂಬು ನೀಡುತ್ತೇನೆ’ ಎಂದು ಎಲ್ಲಿಯೂ ಹೇಳುವುದಲ್ಲ.

ಸಿರಿಗೆ ಹರಕೆ ಹಾಕುವ ಸಂಪ್ರದಾಯ ಇಲ್ಲ. ಆಲಡೆಗೆ ಹಾಕುವ ಹರಕೆ ಪುಂಡಿ ಪಣವು ನಾಗಬಿರ್ಮೆರಿಗರ ಕುಡು ತಾರಾಯಿ (ಹುರುಳಿ ಮತ್ತು ತೆಂಗಿನ ಕಾಯಿ) ನಂದಿಗೋಣ (ಕೋಣ)ನಿಗೆ, ಕುಮಾರನಿಗೆ ಹೂವಿನ ಪೂಜೆ.

ಸಿರಿ ಆಲಡೆಗಳಲ್ಲಿ ಅಬ್ಬಗ ದಾಗರು ಬಿರ್ಮೆರ ಎಡ ಬಲಗಳಲ್ಲಿ ನೆಲೆಯಾದವರು. ಈಗಿರುವ ಗುಡಿಗಳಲ್ಲಿ ಉಲ್ಲಾಯನ ಎಡಬಲಗಳಲ್ಲಿ ಅಬ್ಬಗ ದಾಗರು ನೆಲೆಯಾಗಿದ್ದಾರೆ. ಆಬ್ಬಗ ದಾರಗ ಆಲಡೆಗಳಲ್ಲಿ ಶಿವಲಿಂಗ ಸ್ಥಾಪಿತವಾದ ಮೇಲೆ ಅಬ್ಬಗ ದಾರಗರ ಗರ್ಭಗುಡಿ ಯನ್ನೇ ಈಶ್ವರ ಆಕ್ರಮಿಸಿದ್ದಾನೆ. ನಂದಳಿಕೆಯಲ್ಲಿ ಉಲ್ಲಾಯ ಮತ್ತು ಅಬ್ಬಗ ದಾರಗರನ್ನು ಗರ್ಭಗುಡಿಯಲ್ಲಿಯೇ ಪಕ್ಕಕ್ಕೆ ಸರಿಸಿದ್ದಾರೆ. ಕಲ್ಲ ಮುಂಡೇರ್‌ನಲ್ಲಿ ಈಶ್ವರ ಲಿಂಗ ಸ್ಥಾಪನೆ ಯಾದಾಗ ಸಂಘರ್ಷ ಏರ್ಪಟ್ಟು ಈಶ್ವರ ಲಿಂಗವನ್ನೇ ಕಿತ್ತು ನದಿಗೆ ಎಸೆಯಲಾಗಿತ್ತು.  ಕೆಲವು ವರ್ಷಗಳ ನಂತರ ಅಷ್ಟಮಂಗಳ ಪ್ರಶ್ನೆಯ ಸಲಹೆಯಂತೆ ಮರು ಪ್ರತಿಷ್ಠಾಪಿಸಿದರು.  ಅಬ್ಬಗ ದಾರಗ ಉಲ್ಲಾಯರ ಗರ್ಭಗುಡಿ ಮತ್ತು ಪ್ರವೇಶದ್ವಾರದ ಮಧ್ಯೆ ಸರಳ ರೇಖೆಯಲ್ಲಿ ಇದ್ದ ಧ್ವಜ ಸ್ಥಂಭವನ್ನು ಕಿತ್ತು ಈಶ್ವರನ ಗರ್ಭಗುಡಿಯ ಮುಂದೆ ಸ್ಥಾಪಿಸಿದರು. ಇದು ಬ್ರಾಹ್ಮಣೀಕರಣವೋ, ಸಂಸ್ಕೃತಿಕರಣವೋ ಎಂಬ ಚರ್ಚೆ ಇಲ್ಲಿ ಅಪ್ರಸ್ತುತ. ಕಂಗೊಟ್ಟುನಲ್ಲಿ ಅಬ್ಬಗ ದಾರಗರು ಆಗಮೋಕ್ತ ಪೂಜೆ ಪಡೆಯುತ್ತಿದ್ದಾರೆ. ಈ ಗರ್ಭ ಗುಡಿಯ ಹೊರ ಕೋಣೆಯಲ್ಲಿ ರಭದ್ರನ ಶಿಲ್ಪ ಇದೆ.

ಹೀಗೆ ಸಿರಿ ಆಲಡೆಗಳಲ್ಲಿ ಅಬ್ಬಗ ದಾರಗರು ಪ್ರಮುಖರಾಗುತ್ತಾರೆ.

(ಆದರೆ ಆಧುನಿಕ ದಿನಗಳಲ್ಲಿ ಮಾಮೂಲಿ ನಾಗ ಬನಗಳು ಅಷ್ಟ ಮಂಗಳ ಪ್ರಶ್ನೆಯ ಮುಖೇನ ಬ್ರಹ್ಮಸ್ಥಾನ ಆಗುತ್ತಿದೆ. ಅಲ್ಲಿ ಬ್ರಹ್ಮರ ಗುಂಡದ ಹೊರಗೆ ಸಿರಿಗಳ ಶಿಲ್ಪಕ್ಕೆ ಪ್ರತ್ಯೇಕ ಗುಂಡ ಕಟ್ಟುವ ಪ್ರಕ್ರಿಯೆ ಆರಂಭವಾಗಿದೆ).

.  ನಿನ್ನೆ ಅಮೃತ ಸೋಮೇಶ್ವರರು ಮಾತನಾಡುತ್ತಾ ಸಿರಿಯದು ‘ಶುದ್ದೀಕೃತ ಪ್ರೇತ’ ಎಂದರು.  ಪ್ರೇತ ಯಾರ ಮೇಲೂ ಬರುತ್ತದೆ. ಆದರೆ ಸಿರಿ ಹಾಗಲ್ಲ. ಸಿರಿಯನ್ನು ತಮ್ಮ ಅಗತ್ಯಕ್ಕಾಗಿ ಅವಾಹನೆ ಮಾಡಲಾಗುತ್ತದೆ. ಮಾನವ ಶಾಸ್ತ್ರಜ್ಞರ ಪ್ರಕಾರ ಮಹಿಳೆಯರು ತಮ್ಮ ಒತ್ತಡದಿಂದ ಬಿಡುಗಡೆ ಹೊಂದಲು ಸಿರಿಯ ಮೊರೆ ಹೋಗುತ್ತಾರೆ. ಹೀಗಾಗಿ ‘ಸಿರಿ ಪ್ರೇತ’ ಇವರ ಮೇಲೆ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ ಸಿರಿಯ ಕಥೆಯ ಪ್ರಭಾವ ಇವರ ಮೇಲೆ ಪರಿಣಾಮ ಬೀರಿದೆ. ನಾನು ಆಗಲೇ ಹೇಳಿದಂತೆ ಸಿರಿ ಕಥೆಯನ್ನು ಎಲ್ಲ ತುಳುವರ ಮನೆಯಲ್ಲೂ ಹೇಳಲಾಗುತ್ತದೆ. ಹೀಗಾಗಿ ಒತ್ತಡಕ್ಕೆ ಒಳಗಾದವರಿಗೆ ಸಿರಿಯ ನೆನಪು ಮಾನಸಿಕ ಶಕ್ತಿಯಾಗುತ್ತದೆ. ತಮ್ಮ ಕಷ್ಟಗಳಿಂದ ಬಿಡುಗಡೆಗೊಳ್ಳಲು ಸಿರಿಯ ಬೆಂಬಲ ಪಡೆಯುವುದೇ ಅವರಿಗೆ ಉಳಿದಿರುವ ಮಾರ್ಗ.

.  ಸಿರಿ ಕೆಳವರ್ಗದವರ ಮೇಲೆ ಮಾತ್ರ ಯಾಕೆ ಬರುತ್ತಾಳೆ? : ನಿನ್ನೆ ಎತ್ತಿದ ಇನ್ನೊಂದು ಪ್ರಶ್ನೆ ಸಿರಿ ಕೆಳವರ್ಗದವರ ಮೈಮೇಲೆ ಮಾತ್ರ ಯಾಕೆ ಬರುತ್ತಾಳೆ? ಎಂದು. ಸಿರಿ ಎಲ್ಲ ತುಳುವರ ಮೈ ಮೇಲೆ ಬರುತ್ತಾಳೆ. ಒಂದು ಐತಿಹ್ಯದ ಪ್ರಕಾರ ಸಿರಿ ಮೊದಲು ಬಂದುದು ಬ್ರಾಹ್ಮಣ ಹೆಣ್ಣಿನ ಮೈಮೇಲೆ. ಪ್ರತಿಷ್ಠಿತರು ಸಿರಿಯ ಅವಾಹನೆಯನ್ನು ಹೊರಗೆ ತೋರಿಸು ವುದಿಲ್ಲ. ನಮಗೆ ಕಾಣುವಂತೆ ಎಲ್ಲ ಬಡ ಅಬ್ರಾಹ್ಮಣ ವರ್ಗದವರು ಸಿರಿ ದರ್ಶನಕ್ಕೆ ನಿಲ್ಲುತ್ತಾರೆ. ಎಲ್ಲ ಜಾತಿಗಳ ಬಡವರು ಮಾತ್ರ ನಿಲ್ಲುತ್ತಾರೆ. ಎಂಬುದು ಗಮನಿಸಬೇಕಾದ ವಿಷಯ. ನಾನು ಆಗಲೇ ತಿಳಿಸಿದಂತೆ ಯಾರಿಗೆ ಸಿರಿಯ ಅಗತ್ಯ ಇದೆಯೋ ಅವರಿಗೆ ಒಲಿಯು ತ್ತಾಳೆ ಎಂಬುದು ನಂಬಿಕೆ. ಆ ಅಗತ್ಯ ಎಲ್ಲ ವರ್ಗದವರಿಗೂ ಇದ್ದರೂ ಮೇಲ್ವರ್ಗದ ಶ್ರೀಮಂತರಿಗೆ ಪ್ರತಿಷ್ಠೆ ಅಡ್ಡ ಬರುತ್ತದೆ. ಸಿರಿ ದರ್ಶನ ನಿಲ್ಲುವುದು “ಸುಮಾರ್ ಮಗಾ, ಬಡವೆರ್ ಮಾತ್ರ ಸಿರಿಕ್ ಉಂತುನು” ಎಂದು ನನ್ನ ಅಜ್ಜಿ ಹೇಳಿದ್ದರು. ಪ್ರತಿಷ್ಠಿತ ಆಲಡೆ ಮನೆಯೊಂದರ ಕನ್ಯೆಗೆ ಆಲಡೆಯ ಸಂದರ್ಭದಲ್ಲಿ ಮನೆಯಲ್ಲಿ ಸಿರಿ ಆವೇಶ ಆದಾಗ ಅವಳನ್ನು ಕೋಣೆಗೆ ತಳ್ಳಿ ಕೆಳಗೆ ಮಲಗಿಸಿ ಅವಳ ಮೇಲೆ ಪುರುಷರು ಕುಳಿತುದುದನ್ನು ನನ್ನ ಅಜ್ಜಿ ನೋಡಿದ್ದಾರೆ. “ನಮ್ಮ ಒಕ್ಕೆಲಕಲ್ನ (ಬಂಟರ) ಪುರುಷರ ಮುಂದೆ ಯಾವ ಸಿರಿಯೂ ಓಡಿಹೋಗಬೇಕು!” ಎಂದು ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ತಿಳಿಸಿದ್ದರು.

.  ಸಿರಿ ಆಚರಣೆಯಲ್ಲಿ ಬಂಧುತ್ವ ವ್ಯವಸ್ಥೆ : ಸಿರಿಯ ಆಚರಣೆಯ ಬಂಧುತ್ವ ವ್ಯವಸ್ಥೆಯ ಬಗ್ಗೆ ಇಲ್ಲಿ ಚರ್ಚೆ ಎತ್ತಲಾಗಿದೆ. ಸಿರಿ ನಿಂತವರು ಮತ್ತು ಕುಮಾರ – ಇವರ ಬಂಧುತ್ವ ಸಿರಿ ದರ್ಶನದ ಆಚೆಗೂ ಮುಂದುವರಿಯುತ್ತದೆ. ಒಂದು ಗುಂಪಿನವರು ಕುಮಾರ ನಾಗಿ ಅಬ್ಬಗ ದಾರಗರಾಗಿ ನಿಂತಾಗ ನಿಜ ಜೀವನದಲ್ಲೂ ಅವರು ಸೋದರ ಮಾವ ಹಾಗೂ ಸೋದರ ಸೊಸೆಯ ಬಂಧುತ್ವವನ್ನು ನಿಭಾಯಿಸುತ್ತಾರೆ.

. ಅಳಿಯ ಸಂತಾನ ನಿಯಮ ಹಾಗೂ ಸಿರಿಗೆ ಇರುವ ಸತ್ಯನಾಪುರದ ಹಕ್ಕು : ನಿನ್ನೆ ಎತ್ತಿದ ಇನ್ನೊಂದು ಪ್ರಶ್ನೆ ಅಳಿಯ ಸಂತಾನ ನಿಯಮದಂತೆ ಸಿರಿಗೆ ಸತ್ಯನಾಪುರದಲ್ಲಿ ಇರುವ ಹಕ್ಕಿನ ಬಗ್ಗೆ.

ಸಿರಿಯ ಅಜ್ಜ ಬೆರ್ಮು ಆಳುವರ ಕುಟುಂಬದ ಮನೆ ಮಜಲೊಟ್ಟು ಬೀಡು. ಮದುವೆಯಾದ ಮೇಲೆ ಬೆರ್ಮು ಆಳುವ ಹೆಂಡತಿ ಮನೆಯಾದ ಸತ್ಯನಾಪುರಕ್ಕೆ ಬಂದು ನೆಲೆಸುತ್ತಾನೆ. ಮಜಲೊಟ್ಟು ಬೀಡಿನ ಆಸ್ತಿಯನ್ನು ಆಳ್ವಿಕೆಯನ್ನು ಬೆರ್ಮು ಆಳುವ ಶಂಕರಾ ಳುವನಿಗೆ ಅಳಿಯ ಸಂತಾನ ನಿಯಮದಂತೆ ಆಗಲೇ ನೀಡಿದ್ದ ಎಂಬುದಾಗಿ ಪಾಡ್ದನದಲ್ಲಿ ಪ್ರಸ್ತಾಪಿತವಾಗಿದೆ. ಹೀಗಾಗಿ ಸಹಜವಾಗಿ ಸಿರಿಯು ಬೆರ್ಮು ಆಳುವನ ಹೆಂಡತಿಯ ಆಸ್ತಿಯ ಮತ್ತು ಸಂತಾನದ ಉತ್ತರಾಧಿಕಾರಿಯಾಗುತ್ತಾಳೆ. ಸಿರಿಯ ತವರು ಸತ್ಯನಾಪುರ. ರಾಮಕ್ಕ ಮುಗೆರ್ದಿಯ ಪಾಡ್ದನದಲ್ಲಿ ಅರಿಯ ಬನ್ನಾಯ ಸಂತಾನ ಬೆರ್ಮು ಆಳುವನಿಗೆ ನೀಡಿದ ಮಗು ‘ಪುತ್ತರಡಿ ಸಂತಾನ.’ ಬಸ್ರೂರಿನ ಸಂಕರು ಪೂಂಜೆದಿ ಬೆರ್ಮು ಆಳುವನ ಸೋದರಿ ಎಂದೂ ಆಕೆಯ ಮಗ ಕಾಂತನಾಳ್ವ “ಅರಿಯ ಬನ್ನಾಯ ಸಂತಾನ” ಎಂದೂ ಈ ಪಾಡ್ದನದಲ್ಲಿ ಹೇಳಲಾಗಿದೆ. (ಇತರ ಪಾಡ್ದನದಲ್ಲಿ ಕಾಂತನ ಪೂಂಜ ಪುತ್ರ ಬನ್ನಾಯ ಸಂತಾನ ಎಂದಿದೆ) ಮಗನ ಮಾತುಕತೆಯ ಸಂದರ್ಭದಲ್ಲಿ “ಸಿರಿಯನ್ನು ಮದುವೆಯಾಗುವ ಗಂಡು ತನ್ನ ಅನಂತರ ಸತ್ಯನಾಪುರದ ಪಟ್ಟದ ಉಂಗುರ ಧರಿಸಿ ಪಟ್ಟ ಆಳುವ ಬಂಟನಾಗಬೇಕು” ಎನ್ನುತ್ತಾನೆ ಬೆರ್ಮು ಆಳುವ. ಅದಕ್ಕೆ ಕಾಂತು ಪೂಂಜೆದಿ ” ತನ್ನ ಮಗ ಬಸ್ರೂರಿನ ಕಾಂತನಾಳ್ವ ಸತ್ಯನಾ ಪುರದ ಪಟ್ಟದ ಉಂಗುರ ಧರಿಸಿ ಸತ್ಯನಾಪುರದ ಪಟ್ಟ ಆಳುತ್ತಾನೆ” ಎಂದು ಮಾತು ಕೊಟ್ಟ ಮೇಲೆ ಮದುವೆ ಮಾತು ಮುಂದುವರಿಯುತ್ತದೆ. ಹೀಗಾಗಿ ಮಜಲೊಟ್ಟು/ಸೂಡದ (ಇದು ಒಂದೇ ಪ್ರದೇಶ) ಶಂಕರ ಆಳುವನಿಗೆ ಬಸ್ರೂರಿನ ಅಧಿಕಾರ ಪಡೆಯುವ ಹಕ್ಕು ಇರುವುದಿಲ್ಲ. ಕಾಂತು ಪೂಂಜನ ಸಲಹೆಯಂತೆ ಪತ್ತೇರಿ ಕೂಟದವರು ಹಾಗೂ ಶಂಕರಾಳುವ ನಡೆದು ಕೊಳ್ಳುತ್ತಾರೆ.

. ಸಿರಿಯ ಶಾಪ ಮತ್ತು ವರ : ನಿನ್ನೆ ಆಶಯ ಭಾಷಣ ಮಾಡಿದ ಅಮೃತರು ಮಾತ ನಾಡುತ್ತಾ ಪಾಡ್ದನದಲ್ಲಿ ಸಿರಿಯ ಉದಾತ್ತತೆ ಕಾಣುವುದಿಲ್ಲ. ಸತ್ಯದ ಸಿರಿಯಾದರೂ ಆಕೆ ಪತ್ತೇರಿ ಕೂಟದ ಮುಂದೆ ಸಾಮಾನ್ಯ ಹೆಣ್ಣಾಗುತ್ತಾಳೆ, ಹಾಗೂ ಗಂಡನಿಗೆ ಶಾಪ ನೀಡಿ ಹೋಗುತ್ತಾಳೆ ಎಂಬ ವಿಷಯ ಎತ್ತಿದರು.

ತುಳುನಾಡಿನ ಗ್ರಾಮಾಡಳಿತದಲ್ಲಿ ಪತ್ತೇರಿ ಕೂಟಕ್ಕೆ (ಹತ್ತು ಮಂದಿ ಸೇರಿದ ಕೂಟ) ಆಳುವ ಅರಸನನ್ನು ಕಿತ್ತು ಹಾಕುವ ಅಧಿಕಾರ ಇತ್ತು. ಒಂದು ಸೀಮೆಯ ಅಧಿಕಾರ ನಾಲ್ಕು ಗುತ್ತುಗಳಲ್ಲಿ ಇರುತ್ತಿತ್ತು. (ಬೀಡು ಸೀಮೆಯ ಒಳಗಡೆ ಇರುವ ಸಣ್ಣ ಘಟಕ) ಅಳಿಯ ಸಂತಾನ ಕ್ರಮದಂತೆ ಯೋಗ್ಯ ಅರಸನನ್ನು ಆಯ್ದು ಅರಸನ ಪಟ್ಟಾಭಿಷೇಕ ಮಾಡುವವರು ಇವರು. ಹೀಗಾಗಿ ಪತ್ತೇರಿ ಕೂಟದ ಮಾತನ್ನು ಅರಸನೂ ಮೀರುವಂತಿರಲಿಲ್ಲ. (ನೋಡಿ : ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲುಗಳು, ಇಂದಿರಾ ಹೆಗ್ಗಡೆ ೨೦೦೪).

ಸೂಳೆಯಸಂಗ ಮಾಡಿದ ಗಂಡ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಸಿರಿಗೆ ಕಷ್ಟನೀಡಿ ಹಕ್ಕಿನ ಮನೆ ಬಿಡುವಂತೆ ಮಾಡಿದ ಗಂಡನಿಗೆ ಬರ ನೀಡಿ ಸಿರಿ ಶಾಪ ನೀಡುತ್ತಾಳೆ ನಿಜ. ಆದರೆ ಕೊನೆಗೆ ಆಕೆಯ ಶಾಪದಂತೆ ಹೆಗಲ ಮೇಲೆ ‘ಬೆಳ್ಳಿಯ ನೊಗ ನೇಗಿಲು ಹೊತ್ತು’ ಬೇಡುತ್ತಾ ತನ್ನ ಎರಡನೆಯ ಗಂಡ ಕೊಡ್ಸರಾಳುವನ ಮನೆಗೆ ಬಂದ ಕಾಂತನಾಳುವಗೆ ವರನೀಡಿ ಅವನ ಬಸ್ರೂರು ತಾನು ಮದುವೆಯಾಗಿ ಬಂದಾಗ ಇದ್ದಂತೆ ಇರಲಿ ಎನ್ನುತ್ತಾಳೆ.

ಸಿರಿಗೆ ಸೂಳೆಗಾರಿಕೆಯ ಮೇಲೆ ದ್ವೇಷವಿತ್ತೇ ವಿನಃ ಸೂಳೆಯ ಮೇಲಲ್ಲ. ಆಕೆ ದೇಶಾಂತರ ಹೋಗುವಾಗ ಪದಂಗಡಿ ಸೂಳೆಗೂ ವರನೀಡಿ ಸಾಗುತ್ತಾಳೆ. ದಾರಿಯಲ್ಲಿ ವರ ಅಪೇಕ್ಷಿಸಿ ಬಂದ ಎಲ್ಲಾ ಜಾತಿ ವರ್ಗದ ಮಹಿಳೆಯರಿಗೆ ವರನೀಡುತ್ತಾ ಸಾಗುವುದು ಸಿರಿಯ ಮಹಿಳಾ ಪರ ನಿಲುವಿಗೆ ಸಾಕ್ಷಿ. ಅವಳಿಂದ ‘ವರ’ ಅಪೇಕ್ಷಿಸಿ ಪುರುಷರು ಬರುವುದೇ ಇಲ್ಲ ಎಂಬುದು ಆಶ್ಚರ್ಯದ ವಿಷಯ !

. ಸಿರಿ ಪಠ್ಯದ ಹೊರತಾಗಿಯೂ ಅವಳಿ ಸಿರಿಗಳು : ಇನ್ನು ಪಠ್ಯದ ಹೊರತಾಗಿ ಇರುವ ಸಿರಿಗಳ ಬಗ್ಗೆ ವಿದ್ವಾಂಸರ ಗಮನವನ್ನು ನಾನು ಸೆಳೆಯ ಬಯಸುತ್ತೇನೆ. ಸಿರಿ ಪಠ್ಯದ ಹೊರತಾಗಿಯೂ ಅವಳಿ ಸಿರಿಗಳು ಇವೆ. ಎರಡಕ್ಕಿಂತ ಹೆಚ್ಚು ಸಿರಿಗಳೂ ಇವೆ. ಇವು ತುಳುವಿನ ಕಡೈವನ್ನು (ಕಾಲಿರುವ ಮಣ್ಣಿನ ಮಡಕೆ) ಪ್ರತಿನಿಧಿಸುವ ಸಿರಿಗಳು. ಇತ್ತೀಚಿನ ವರ್ಷಗಳಲ್ಲಿ ಕೆಲವೆಡೆ ಇವುಗಳಿಗೂ ಮೂರ್ತಿ ಶಿಲ್ಪ ಮಾಡಿದ್ದಾರೆ. ತುಳುವಿನಲ್ಲಿ ಭತ್ತ, ಅಡಿಕೆ, ತೆಂಗು ಮುಂತಾದುವುಗಳ ಚಿಗುರನ್ನು ತುಳುವರು ಸಿರಿ ಎಂದು ಹೇಳುತ್ತಾರೆ; ಜನಪದ ಆರಾಧನೆಯಲ್ಲಿ ಸಿರಿ ಮುಖ್ಯವಾಗಿ ಬೇಕು.

ಅಪ್ಪನಿಗೆ ಹುಟ್ಟದ, ತಾಯಿಯ ಗರ್ಭದಲ್ಲಿ ಮೂಡದ, ಉದ್ಭವವಾದ ಹೆಣ್ಣು ಮಗು ಸಿರಿ. ಇಡಿಯ ಸಿರಿ ಪಾಡ್ದನದಲ್ಲಿ ಆಕೆ ಅಲೌಕಿಕ ಶಕ್ತಿಯಾಗಿ, ಶಾಪ ಪ್ರತಿಶಾಪ ನೀಡ ಬಲ್ಲ ದೈ ಶಕ್ತಿಯಾಗಿ ಕಾಣುತ್ತಾಳೆ. ಪಾಡ್ದನದ ಜೀವಾಳವೇ ಸಿರಿ. ಕಥಾನಾಯಕಿಯೇ ಆಕೆ. ಆದರೆ ಆರಾಧನೆಯ ಸಂದರ್ಭದಲ್ಲಿ ಆಕೆ ನೇಪಥ್ಯಕ್ಕೆ ಸರಿಯುತ್ತಾಳೆ. ಅಬ್ಬಗ ದಾರಗ ಅವಳಿಗಳೇ ಪ್ರಧಾನ ಶಕ್ತಿಗಳಾಗಿ ಉಲ್ಲಾಯನ (ನಾಗ ಬೆರ್ಮ) ಎಡಬಲಗಳಲ್ಲಿ ಅರ್ಚನೆ ಪಡೆಯುತ್ತಾರೆ.  ಕೆಲವೆಡೆ ಸಿರಿಗಳ ಮರದ ಉರುಗಗಳಿದ್ದರೂ ಅವುಗಳು ಅಬ್ಬಗ ದಾರಗರಷ್ಟು ಮುಖ್ಯವಲ್ಲ.  ಆಚರಣೆಯ ಸಂದರ್ಭದಲ್ಲೂ ಅಷ್ಟೆ. ಸಾಮಾನ್ಯವಾಗಿ ಸೊನ್ನೆ ಗಿಂಡೆ ಅಬ್ಬಗ ದಾರಗರ ಹೆಸರಿನಲ್ಲಿ ಸಿರಿ ದರ್ಶನ ನಡೆಯುತ್ತದೆ. ಕುಮಾರ ತಮೆರಿಯಾಗಿ ನಿಲ್ಲುತ್ತಾನೆ. ಇಂತಹ ಸಿರಿಗಳು ಇರುವಲ್ಲಿ ದೇಯಿ ನಲಿಕೆ ಆಗುತ್ತದೆ. ನಿನ್ನೆ ಶ್ರೀ ಎಸ್. ಎ. ಕೃಷ್ಣಯ್ಯ ಅವರು ಪ್ರಸ್ತಾಪಿಸಿದಂತೆ ದೇಯಿ ನಲಿಕೆ ಇತ್ತೀಚಿನ ದಶಕಗಳಲ್ಲಿ ಆರಂಭವಾದುದಲ್ಲ. ಇತ್ತೀಚಿಗೆ ಅದು ನಿಂತು ಹೋಗ್ತಾ ಇದೆ. ಆದರೂ ಈ ವರ್ಷ ಬೇಲೊಟ್ಟು ಕುಟುಂಬದವರು ದೇಯಿ ನಲಿಕೆಗೆ ಮರುಜೀವ ನೀಡಿದ್ದಾರೆ. ಹರಕೆಯ ದೇಯಿ ನಲಿಕೆಯದು. ಎಲ್ಲ ಕಡೆ ೩೦/೬೦ ವರುಷದ ಹಿಂದೆ ದೇಯಿ ನಲಿಕೆ ನಿಂತು ಹೋಗಿದೆ.

ಅವಳಿ ಸಿರಿಗಳು ಮೂಲತಃ ನಾಗನ ಸಂಕೇತಗಳಾಗಿ ನಾಗ ಕನ್ನಿಕೆಯರಾಗಿ ಆರಾಧನೆ ಗೊಳ್ಳುತ್ತವೆ. ದೇಯಿನಲಿಕೆಯಲ್ಲಿ ಅವಳಿ ಸಿರಿಗಳು ಕೈಯಲ್ಲಿ ಪಿಂಗಾರ ಹಿಡಿದು ನಾಗ ಪಾತ್ರಿಯಂತೆ, ಆಲಡೆಯ ಸಿರಿಗಳಂತೆ ದರ್ಶನ ನಿಲ್ಲುತ್ತಾರೆ. ಆದರೆ ಇಲ್ಲಿ ನಲ್ಕೆಯ ಪುರುಷ ಪಾತ್ರಿಗಳು ಸಿರಿಗಳ ಮಾಧ್ಯಮರಾಗಿ ನಿಲ್ಲುತ್ತಾರೆ. ಬೇಡಿಕೆ ಏನೂ ಇಲ್ಲಿ ಇರುವುದಿಲ್ಲ. ೩, ೫, ೭, ೯ – ಹೀಗೆ ಅನೇಕ ದಿನಗಳ ಕಾಲ ನಡೆಯುವ ದೇಯಿನಲಿಕೆಯಲ್ಲಿ ನಲಿಕೆಯ ‘ಕಲ’ವನ್ನು ತೆರವುಗೊಳಿಸದೆ ನಿರಂತರವಾಗಿ ರಾತ್ರಿ ಹಗಲು ನರ್ತನ ಮಾಡಬೇಕು. ಆದ್ದರಿಂದ ಇಲ್ಲಿ ಎಲ್ಲಾ ದೈವಗಳ ದೇವರುಗಳ, ಗಂಡ ಗಣಗಳ ಪಾತ್ರವನ್ನು ಅಭಿನಯಿಸಲಾಗುತ್ತದೆ. ‘ಗಂಡ ಗಣಗಳಿಗೆ’  ಹೊತ್ತುಕೊಂಡು ಹೋಗುವಷ್ಟು ಆಹಾರ (\ಂಡಿ) ನೀಡಬೇಕು, ರಾತ್ರಿ ಹಗಲು ಅಡುಗೆ ಬೇಯುತ್ತಾ ಯಾವಾಗ ಯಾರು ಊಟಕ್ಕೆ ಕುಳಿತರೂ ಊಟ ನೀಡಬೇಕು. ಲಕ್ಷಾಂತರ ಹಣ ಖರ್ಚಾಗುವುದರ ಜೊತೆಗೆ ಅಪಾರ ಮಾನವ ಶ್ರಮದ ಅಗತ್ಯವೂ ದೇಯಿ ನಲಿಕೆ ಬಯಸುತ್ತದೆ. ತುಳುನಾಡಿನಲ್ಲಿ ಕೆಲಸಗಾರರ ಕೊರತೆಯೂ ಇರುವುದರಿಂದ ದೇಯಿ ನಲಿಕೆ ಆಡಿಸುವುದು ಸಾಹಸವೇ ಸರಿ.

ತುಳುನಾಡಿನ ಎಲ್ಲಾ ದೈವಗಳು ನಾಗನ ಹೆಡೆಯ ಮುಖವಾಡವನ್ನು ಧರಿಸುತ್ತವೆ.  ದೇಯಿನಲಿಕೆಯಲ್ಲಿ ನಾಗಬಿರ್ಮೆರು ನಾಗ ಕನ್ನಿಕೆಯರು ಪ್ರಧಾನರಾಗುವುದು, ಎಲ್ಲಾ ದೈವಗಳ ನಟನೆಯನ್ನು ನಲಿಕೆಯಲ್ಲಿ ಮಾಡುವುದು – ಇವೆಲ್ಲ ಮೂಲತಃ ಎಲ್ಲ ದೈವಗಳೂ ನಾಗ ಮೂಲ ಶಕ್ತಿಗಳಾಗಿರಬೇಕು ಎಂಬುದರತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಕಾಸರ ಗೋಡಿನ ಆದಿ ದ್ರಾವಿಡ ಜನಾಂಗವಾದ ಬೈಲ ಬಾಕುಡರ ನಾಗಬಿರ್ಮೆರ ಮತ್ತು ಇಬ್ಬರು ಉಲ್ಲಾಲ್ತಿಗಳ ಕೋಲ, ಬೈಲಂಗಡಿಯ ಜಾಲಾಟ (ನಾಗಬಿರ್ಮೆರ್ ಕೋಲದಿಂದ ಆರಂಭವಾಗುತ್ತದೆ) – ಇವು ದೇಯಿ ನಲಿಕೆಯನ್ನು ಹೋಲುವ ನರ್ತನ ಸೇವೆಗಳು.

ಹೀಗೆ ಕಡ್ಯವನ್ನು ಪ್ರತಿನಿಧಿಸುವ ಸಿರಿಗಳು, ಕಂಬುಲದಲ್ಲಿಯ ಪಠ್ಯದ ಸಿರಿಗಳ (ಮುಂಡಾಲ ಎಂಬ ಅಸ್ಪೃಶ್ಯ ವರ್ಗ ಮಾತ್ರ) ದರ್ಶನ, ಕಂಬುಲಗಲ್ಲಿ ಕೊರಗರು ಕಡ್ಯದಲ್ಲಿ ಬೇಯಿಸಿದ ಅಡ್ಯೆಯನ್ನು ಕಡ್ಯವನ್ನು ಒಡೆದು (ಕಂದೆಲದಡ್ಯ) ತಿನ್ನುವುದು, ಕಂಬುಲಗಳಲ್ಲಿ ಬಂಟ (ನಾಗಬಿರ್ಮೆರ್) ನಾಗ ಮುಡಿ ಹೊತ್ತು ಕಂಬುಲದಲ್ಲಿ ನರ್ತಿಸುವುದು, ಕಂಬುಲವನ್ನು ಬಿರ್ಮೆರ ಕಂಬುಲ ಎನ್ನುವುದು – ಇವೆಲ್ಲ ಮಾನವ ಶಾಸ್ತ್ರೀಯ ಮತ್ತು ಸಮಾಜಶಾಸ್ತ್ರೀಯ ನೆಲೆಯಲ್ಲಿ ಗಮನಿಸಬೇಕಾದ ವಿಷಯ. ಕಂಬುಲ ಕೂಡಾ ಸಮೂಹ ವ್ಯವಸಾಯದ ಕ್ರಿಯೆ.  ಕಂಬುಲದಲ್ಲಿ ಮತ ಧರ್ಮ ಲೆಕ್ಕಕ್ಕಿಲ್ಲ. ರೈತ ಎಂಬುದು ಮಾತ್ರ ಮುಖ್ಯ. ಪ್ರಸ್ತುತ ಕಂಬುಲದ ವಿವರಣೆಯನ್ನು ಈ ಲೇಖನಕ್ಕೆ ಇರುವ ಮಿತಿಯಿಂದ ನೀಡುವುದು ಅಸಾಧ್ಯ.

ಇಲ್ಲಿ ನಾವು ಎತ್ತುವ ಪ್ರಶ್ನೆ ಎಂದರೆ ಪಠ್ಯದ ಸಿರಿಗಳಿಗೂ ಅದನ್ನೇ ಹೋಲುವ ಕಡ್ಯದ ಸಿರಿಗಳಿಗೂ ಇರುವ ಹೋಲಿಕೆ. ಕಾಡ್ಯರು, ಮುಗೆರ‍್ಲು ಮತ್ತು ಮನ್ಸರ ನಾಗ ಬನಗಳಲ್ಲೂ ಕಡ್ಯದ ಆರಾಧನೆ ಇದೆ. ಈ ಕಡ್ಯಗಳೇ ಸಿರಿಗಳು; ನಾಗ ಕನ್ನಿಕೆಯರು; ಉಲ್ಲಾಲ್ತಿಗಳು.  ಆದ್ದರಿಂದಲೇ ೮ನೆಯ ಶತಮಾನದ ಬೇಳ್ಮಣ್ಣು ಮೊದಲ್ಗೊಂಡು ಅನೇಕ ನಾಗ ಬಿರ್ಮೆರ ಕ್ಷೇತ್ರಗಳು ‘ಉಲ್ಲಾಳ್ತಿ, ದುರ್ಗಾಪರಮೇಶ್ವರಿ’ ದೇವಾಲಯಗಳಾಗಿವೆ. ಈಗಲೂ ಈ ಪ್ರಕ್ರಿಯೆ ಮುಂದುವರಿಯುತ್ತಿದೆ. ಈ ಹಿನ್ನೆಲೆಯಿಂದ ಪಾಡ್ದನಗಳು ಹುಟ್ಟುವ ಸಂದರ್ಭ ಯಾವುದು ಎಂಬ ಪ್ರಶ್ನೆಯನ್ನು ಆರಂಭದಲ್ಲಿಯೇ ನಾನು ಎತ್ತಿರುವುದು. ಸಿರಿ ಪಾಡ್ದನಕ್ಕೆ ಈ ಸಿರಿಗಳು ಪ್ರೇರಣೆ ಒದಗಿಸಿರಬಹುದೆ? ಹುಣ್ಣಿಮೆಯ ರಾತ್ರಿ ಕೈಯಲ್ಲಿ ಪಿಂಗಾರ ಹಿಡಿದು ಆವೇಶಗೊಳ್ಳುವ ಸಿರಿಯ ಪಠ್ಯದ ಕಥಾನಾಯಕಿ ನಾಗ ಬೆರ್ಮರ ಕನ್ಯೆ. ಹುಟ್ಟುವುದು ಹುತ್ತದಲ್ಲಿ ಮಾಯವಾಗುವುದು ಸನ್ನೆ ಗುರಿಯ ಕೆಸರ ನೀರಿನಲ್ಲಿ. ಅವಳ ಮಗ ಕುಮಾರ ಸಿರಿಯ ಗರ್ಭದಲ್ಲಿ ಹುಟ್ಟಿದರೂ ನಾಗ ಸ್ವರೂಪನೇ ಎಂದು ಪಾಡ್ದೆನ ಹೇಳುತ್ತದೆ. ಆತ ಮೈತುಂಬಾ ನಾಗರ ಹಾವುಗಳನ್ನು ಧರಿಸಿ ಹುಟ್ಟುತ್ತಾನೆ. ಆತನ ದರ್ಶನ ಪಾತ್ರಿಗೂ ನಾಗ ದರ್ಶನ ಪಾತ್ರಿಗೂ ಯಾವ ಭಿನ್ನತೆಯೂ ಇಲ್ಲ. ಹೀಗಾಗಿ ಸಿರಿಯ ಪಠ್ಯದ ಸಿರಿಗಳ ಹಾಗೂ ಕಡ್ಯದ ಸಿರಿಗಳ ಆಚರಣೆಗಳಿಗೆ ಇರುವ ಹೋಲಿಕೆಯ ಹಿನ್ನೆಲೆಯಲ್ಲಿ ಅಧ್ಯಯನ ಮುಖ್ಯವಾಗುತ್ತದೆ.

“ದೇವಸ್ಥಾನ – ಅದರೊಳಗಿನ ಮೂರ್ತಿ, ಇವು ನಾಗರಿಕತೆಯೊಡನೆ ಬೆಳೆದು ಬಂದ ಸಂಕೇತಗಳು. ಇವು ಅರ್ವಾಚೀನ. ಆದಿಯಲ್ಲಿ ಮೂಲ; ದೇವತಾ ಸ್ವರೂಪ ನೀರು, ಸರ್ಪ, ವೃಕ್ಷ, ಚಂದ್ರ ಇವೇ. ದೇವಿಯ ಉತ್ಸವಗಳು ಹುಣ್ಣಿಮೆಯೊಡನೆ ಸಂಬಂಧವಾಗಿವೆ. ಈ ಒಂದು ಘಟನೆಯೆ ಸಾಕು ‘ಶಕ್ತಿ’ ದೇವಿ ಮತ್ತು ಚಂದ್ರ. ಇವರೊಳಗಿನ ಅನೋನ್ಯ ತಾದಾತ್ಮ್ಯವನ್ನು ನಿದರ್ಶನಕ್ಕೆ ತರಲು. ದೇವಿ: ಆಪ – ಆಪೋದೇವಿ ಉತ್ – ಸಾಹಸ ಭರಿತಳಾಗಿ ಹೀಗೆ ಕುಣಿಯತೊಡಗುವಳು ಸಾಗರದಲ್ಲಿ, (ಪೂರ್ಣ) ಚಂದ್ರನ ದರ್ಶನ ಮಾತ್ರದಿಂದಲೆ ತಾನೆ! ನೀರು, ಮತ್ತು ಚಂದ್ರ ಇವರಲ್ಲಿ ಅಭೇದ ಕಾಣುವುದಕ್ಕೆ ಒತ್ತಾಯ ಪಡಿಸುವ ಇಂತಹ ಘಟನೆಗಳನ್ನು ಗಮನಿಸುವುದ ಅವಶ್ಯ. (ಶಂಬಾ ಕೃತಿ ಸಂಪುಟ ೪ ಪು. ೨೦೦೩)”