ತುಳುನಾಡಿನ ರಾಜಕೀಯ ಹಾಗೂ ಸಾಮಾಜಿಕ ಬದುಕು ಅಲ್ಲಿನ ಮೌಖಿಕ ಕಥನಗಳಾದ ಪಾಡ್ದನಗಳಲ್ಲಿ ಸಮರ್ಥವಾಗಿ ಪ್ರತಿನಿಧಿತವಾಗಿವೆ. ಪಾಡ್ದನಗಳು ಪ್ರಭುತ್ವದ ಮುಖವಾಣಿಗಳಲ್ಲ. ಅವು ದುಡಿಯುವ ವರ್ಗಗಳ ಮೌಖಿಕ ರಚನೆ. ಹಾಗಾಗಿ ಅವು ಇಂದು ಜನರ ಚರಿತ್ರೆ ನಿರ್ಮಾಣಕ್ಕೆ ನೇರವಾಗಿ ಬಳಕೆಯಾಗುತ್ತಿವೆ. ತುಳುನಾಡಿನ ರಾಜ್ಯ ವ್ಯವಸ್ಥೆ, ಸಾಮಾಜಿಕ ಸಂಬಂಧಗಳು, ಊಳಿಗಮಾನ್ಯತೆ, ಬಂಧುತ್ವ ವ್ಯವಸ್ಥೆ, ಶೋಷಣೆ ಮುಂತಾದ ವಿಚಾರಗಳು ಪಾಡ್ದನಗಳಲ್ಲಿ ತುಂಬಿಕೊಂಡಿವೆ. ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ಸಿರಿ ಪಾಡ್ದನ ಈ ನಿಟ್ಟಿನಲ್ಲಿ ಬಹುಮುಖ್ಯವಾದ ಒಂದು ಮೌಖಿಕ ಆಕರ. ಚರಿತ್ರೆಯಲ್ಲಿ ಸಾಮಾನ್ಯವಾಗಿ ರಾಜ್ಯ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಪುರುಷ ಪ್ರಧಾನ ನೆಲೆ ಮುಖ್ಯ ಭೂಮಿಕೆಯಾಗಿರುತ್ತದೆ. ಚರಿತ್ರೆಯಲ್ಲಿ ರಾಜ್ಯವನ್ನಾಳಿದ ರಾಣಿಯರ ಉಲ್ಲೇಖ ಅಲ್ಲೊಂದು ಇಲ್ಲೊಂದಷ್ಟೆ ಸಿಗುವುದರಿಂದಾಗಿ ರಾಜ್ಯವೆಂದರೆ ರಾಜ ಹಾಗೂ ರಾಜನೆಂದರೆ ಪುರುಷ ಎಂಬಂತಾಗಿ ಇಡಿ ವ್ಯವಸ್ಥೆಯೆ ಪುರುಷ ಪ್ರಧಾನವಾಗಿ ಮಾರ್ಪಟ್ಟಿರುವುದು ಚರಿತ್ರೆ ಪಠ್ಯಗಳಿಂದ ತಿಳಿದುಬರುತ್ತದೆ. ಈ ಅಧ್ಯಯನ ಮಾದರಿ ಬದಲಾದ ಚರಿತ್ರೆ ಅಧ್ಯಯನ ಕ್ರಮದಿಂದಾಗಿ ತನ್ನ ಹಿಂದಿನ ವರ್ಚಸ್ಸನ್ನು ಕಳೆದುಕೊಂಡು ಟೀಕೆಗಳನ್ನು ಎದುರಿಸುತ್ತಿದೆ ಯಾದರೂ ಅದು ಮೂಡಿಸಿದ ಛಾಪು ಇನ್ನೂ ಮರೆಯಾಗಿಲ್ಲ. ಚರಿತ್ರೆಯನ್ನು ಅಲಕ್ಷಿತ ನೆಲೆಯಿಂದ ನೋಡುವ ಕ್ರಮ ಆರಂಭವಾದಾಗಿನಿಂದ ಚರಿತ್ರೆಕಾರರು ಚರಿತ್ರೆಯ ಬಹುಸತ್ಯಗಳ ಕಡೆಗೆ ಮುಖ ಮಾಡಲಾರಂಭಿಸಿದರು. ಇದರ ಪರಿಣಾಮವಾಗಿಯೆ ಪಾಡ್ದನಗಳಂಥ ಮೌಖಿಕ ಆಕರಗಳು ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿರುವುದು.

ಸಿರಿ ಪಾಡ್ದನವು ಚರಿತ್ರೆಯ ಪುರುಷ ಪ್ರಾಧಾನ್ಯತೆಯನ್ನು ನಿರಾಕರಿಸುವ ಒಂದು ಕಥನ. ಇದು ಮಾತೃವಂಶೀಯ ಕುಟುಂಬವೊಂದರ ನಾಲ್ಕು ತಲೆಮಾರುಗಳ ಬದುಕಿನ ವಿವಿಧ ಅವಸ್ಥೆಗಳ ವಿವರಗಳನ್ನೊಳಗೊಂಡ ಸುದೀರ್ಘವಾದ ಜನಪದ ಕಾವ್ಯ. ಸಿರಿಯ ಹುಟ್ಟು, ಮದುವೆ, ಉತ್ತರಾಧಿಕಾರತ್ವ, ವಿಚ್ಛೇದನ, ಮರುಮದುವೆ, ಸಿರಿ ಮಾಯವಾಗುವುದು ಹಾಗೂ ಸಿರಿಯ ಮಗಳಾದ ಸೊನ್ನೆ ಮತ್ತು ಸೊನ್ನೆಯ ಮಕ್ಕಳಾದ ಅಬ್ಬಗ ದಾರಗ ಹೀಗೆ ಪಾಡ್ದನವು ಹಲವಾರು ವಿಚಾರಗಳನ್ನು ಒಳಗೊಂಡಿದ್ದು ಸಂಘರ್ಷ ಹಾಗೂ ಹೊಂದಾಣಿಕೆಗಳ ಮೂಲಕ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಸಿರಿಯ ಅಜ್ಜ ಬೆರ್ಮಾಳ್ವ, ಗಂಡ ಬಸ್ರೂರಿನ ಕಾಂತು ಪೂಂಜ, ಮರುಮದುವೆಯಾದ ಕೊಟ್ರಪಾಡಿಯ ಕೊಡ್ಸರಾಳ್ವ, ಮಗ ಕುಮಾರ, ಮಗಳು ಸೊನ್ನೆ, ಸೊನ್ನೆಯ ಗಂಡ ಗುರುಮೂರ್ಲ ಹಾಗೂ ಮಕ್ಕಳು ಅಬ್ಬಗ – ದಾರಗ ಇವರ ಈ ನಾಲ್ಕು ತಲೆಮಾರುಗಳ ಬದುಕಿನ ಚಿತ್ರಣ ಮೇಲ್ನೊಟಕ್ಕೆ ತುಳುನಾಡಿನ ಕೃಷಿಕ ಸಮಾಜವೊಂದರ ಬದುಕನ್ನು ತೆರೆದಿಡುವಂತೆ ಕಂಡು ಬಂದರೂ, ಅದರೊಳಗಿರುವುದು ಊಳಿಗಮಾನ್ಯ ಸಮಾಜವೊಂದರಲ್ಲಿ ನಡೆಯುವ ಸಾಂಸ್ಕೃತಿಕ ರಾಜಕಾರಣ. ಇದು ಧರ್ಮ, ಅಧಿಕಾರ, ಲಿಂಗ ಮುಂತಾದ ವಿಚಾರಗಳ ಮೂಲಕ ಸಿರಿಯ ಜನನದಿಂದ ಅಬ್ಬಗ ದಾರಗರ ಸಾವಿನ ವರೆಗೂ ಮುಂದುವರಿದಿರುವುದು ಪಾಡ್ದನದಿಂದ ತಿಳಿದುಬರುತ್ತದೆ.

ಸಿರಿ ಪಠ್ಯ ರೂಪುಗೊಂಡಿರುವುದೇ ಸಂಘರ್ಷದ ಹಿನ್ನೆಲೆಯಲ್ಲಿ. ಅದು ರಾಜಕೀಯ, ಸಾಮಾಜಿಕ, ಆರ್ಥಿಕ ಎನ್ನುವ ಬೇರೆ ಬೇರೆ ನೆಲೆಗಳಿಂದ ಕಂಡುಬಂದರೂ ಅದರ ಉದ್ದೇಶ ಒಂದೆ. ಆದರೂ ಸಂಘರ್ಷದ ನೆಲೆಗಳನ್ನು ಬೇರ್ಪಡಿಸಿ ನೋಡಿದಾಗ ಪ್ರತಿಯೊಂದು ನೆಲೆಯೂ ಎಷ್ಟೊಂದು ಮಹತ್ವದ್ದು ಹಾಗೂ ಪರಿಣಾಮಕಾರಿಯಾದದ್ದು ಎನ್ನುವ ಅಂಶ ತಿಳಿದು ಬರುತ್ತದೆ. ಸಿರಿ ಪಠ್ಯವನ್ನು ಸ್ತ್ರೀವಾದದ ಚರ್ಚೆಗೆ ಇಂದು ಹೆಚ್ಚು ಬಳಸಲಾಗುತ್ತಿದೆ. ಸಿರಿಯು ಪುರುಷ ಪ್ರಧಾನ ಸಮಾಜದ ತೀರ್ಮಾನಗಳನ್ನು ದಿಕ್ಕರಿಸುವುದು ಹಾಗೂ ತನಗೆ ಅನ್ಯಾಯವಾದಾಗಲೆಲ್ಲ ಪ್ರತಿಭಟಿಸುವುದು ಸ್ತ್ರೀವಾದದ ಚರ್ಚೆಗೆ ಅವಳನ್ನು ಎಳೆದು ತರುವಂತೆ ಮಾಡಿದೆ. ಇದರಾಚೆಗೂ ಸಿರಿ ಪಠ್ಯವನ್ನು ನೋಡುವ ಸಾಧ್ಯತೆಗಳಿವೆ. ತುಳುನಾಡಿನ ಭೂ ಸಂಬಂಧಗಳು, ವೈವಾಹಿಕ ಸಂಬಂಧಗಳು, ಬಂಧುತ್ವ ವ್ಯವಸ್ಥೆ, ಊಳಿಗ ಮಾನ್ಯತೆ, ರಾಜ್ಯ ವ್ಯವಸ್ಥೆ, ಮುಂತಾದ ಮಹತ್ವದ ಪ್ರಶ್ನೆಗಳನ್ನು ಈ ಪಠ್ಯ ಹುಟ್ಟು ಹಾಕಿದ್ದು, ಅವುಗಳ ಕಡೆಗೂ ಹೆಚ್ಚು ಚರ್ಚೆ ಆಗಬೇಕಾಗಿದೆ. ಇಲ್ಲಿ ನಾವು ಎರಡು ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕಾಗುತ್ತದೆ. ಅವುಗಳೆಂದರೆ ಸಿರಿ ಅವಳ ಸಂದರ್ಭದ ಸಮಾಜಕ್ಕೆ ಮುಖಾಮುಖಿ ಯಾಗಿರುವುದು ಹಾಗೂ ನಾವು ಇಂದು ಸಿರಿಗೆ (ಸಿರಿ ಪಾಡ್ದನಕ್ಕೆ) ಮುಖಾಮುಖಿಯಾಗುತ್ತಿರುವುದು. ಸಿರಿ ಅವಳ ಸಂದರ್ಭದ ಸಮಾಜಕ್ಕೆ ಯಾವ ರೀತಿ ಮುಖಾಮುಖಿಯಾದಳು ಎನ್ನುವುದನ್ನು ಸಿರಿ ಪಾಡ್ದನ ಹಾಡುವ ಹಾಡುಗಾರರು ತಮ್ಮ ಹಾಡಿನ ಮೂಲಕ ತಿಳಿಸಿದರೆ, ನಾವು ಇಂದು ಆ ಹಾಡಿಗೆ ಯಾವ ರೀತಿ ಮುಖಾಮುಖಿಯಾಗುತ್ತಿದ್ದೇವೆ ಎನ್ನುವುದನ್ನು ಸಂಶೋಧಕರ ಸಂಶೋಧನ ದೃಷ್ಟಿಕೋನ ನಿರ್ಧರಿಸುತ್ತದೆ. ಪ್ರಸ್ತುತ ಲೇಖನವು ಸಿರಿ ಪಠ್ಯದ ರಾಜಕೀಯ ಸಂಘರ್ಷದ ನೆಲೆಗಳನ್ನು ಚಾರಿತ್ರಿಕವಾಗಿ ನೋಡಿ ವಿಶ್ಲೇಷಣೆ ನಡೆಸುವ ಉದ್ದೇಶವನ್ನು ಹೊಂದಿದೆ.

ಸಿರಿ ಚರಿತ್ರೆಯ ಯಾವ ಕಾಲಘಟ್ಟದಲ್ಲಿ ಬದುಕಿದ್ದಳು ಎನ್ನುವುದಕ್ಕಿಂತ ಸಿರಿಯ ಬದುಕು ಯಾವ ರೀತಿ ರೂಪುಗೊಂಡಿತ್ತು ಎನ್ನುವುದು ಮುಖ್ಯವಾಗುತ್ತದೆ. ಚರಿತ್ರೆ ವರ್ತಮಾನದ ಕಥನವಾಗಿರುವುದರಿಂದ ಸಿರಿ ತನ್ನ ವರ್ತಮಾನವನ್ನು ಹೇಗೆ ಅನುಭವಿಸಿದಳು ಹಾಗೂ ಅವಳು ಯಾವ ವ್ಯವಸ್ಥೆಯೊಳಗೆ ಬಂದಿಯಾಗಿದ್ದಳು ಎನ್ನುವುದು ಕುತೂಹಲಕರವಾದ ವಿಚಾರವಾಗಿ ಕಂಡುಬರುತ್ತದೆ. ಚರಿತ್ರೆಗೆ ಕಾಲದ ನೆಲೆಯಷ್ಟೆ ಮುಖ್ಯವಾದರೆ ಅದು ಕಾಲದ ಸುಳಿಯೊಳಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿರುತ್ತವೆ. ಚರಿತ್ರೆಯನ್ನು ಮಾನವನ ಕ್ರಿಯೆ ಹಾಗೂ ಅನುಭವಗಳ ನೆಲೆಯಿಂದ ನೋಡುತ್ತಾ ಹೋದರೆ ಅದರೊಳಗೆ ಜೀವಂತಿಕೆಯನ್ನು ಕಾಣಲು ಸಾಧ್ಯ ಹಾಗೂ ಆಯಾ ಸಂದರ್ಭದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತ್ಯಂತರಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ. ಸಿರಿಯ ಬದುಕು ಇವತ್ತಿಗೆ ಮುಖ್ಯವಾಗುವುದು ಈ ದೃಷ್ಟಿಯಿಂದ ನೋಡಿದಾಗ ಮಾತ್ರ. ಸಿರಿಯನ್ನು ಕೃಷಿ ಸಮಾಜದ ಒಬ್ಬ ಮಹಿಳೆಯನ್ನಾಗಿ ನೋಡಿದಾಗ ಚರಿತ್ರೆಯ ಕಾಲಾವಧಿಗಳು ಮುಖ್ಯವೆನಿಸುವುದೇ ಇಲ್ಲ. ಸಮಕಾಲೀನ ಸಂದರ್ಭದ ಮಹಿಳೆಯ ಸ್ಥಿತಿಗತಿಯ ಕುರಿತು ಆಲೋಚನೆ ನಡೆಸುವಾಗ ಸಿರಿ ಜೀವಂತ ಮಹಿಳೆಯಾಗಿ ಕಂಡುಬರುತ್ತಾಳೆಯೇ ವಿನಹ ಚರಿತ್ರೆಯ ಯಾವುದೋ ಕಾಲಾವಧಿಗೆ ಸಂದುಹೋದ ಮಹಿಳೆಯಾಗಿ ಅಲ್ಲ. ಇಲ್ಲಿ ಜೀವಂತಿಕೆಯೆಂದರೆ ಸಿರಿ ಅನುಭವಿಸಿದ ಸಮಸ್ಯೆಗಳು, ಸಮಸ್ಯೆಗಳನ್ನು ಎದುರಿಸಿದ ರೀತಿ ಹಾಗೂ ಅವಳನ್ನು ಸುತ್ತುವರಿದಿದ್ದ ಅಧಿಕಾರದ ನೆಲೆಯ ಶಕ್ತಿಗಳು. ಇವು ಯಾವ ಕಾಲಕ್ಕೂ ಜೀವಂತವಾಗಿ ಇರುವಂಥ ಲಕ್ಷಣಗಳೇ ಆಗಿವೆ. ಹೀಗಾಗಿ ಸಿರಿ ಪಾಡ್ದನದಲ್ಲಿನ ಆಶಯಗಳು ಕಾಲದ ಚೌಕಟ್ಟನ್ನು ಮೀರಿರುವಂತವು ಹಾಗೂ ಎಲ್ಲ ಕಾಲಕ್ಕೂ ನಿಲ್ಲುವಂತವು. ಚರಿತ್ರೆ ಇಂದು ವ್ಯಾಖ್ಯಾನಗೊಳ್ಳುತ್ತಿರುವುದು ಈ ವೈಧಾನಿಕತೆಯ ಮೂಲಕ ಇದು ಅಧ್ಯಯನಕಾರರ ಚಾರಿತ್ರಿಕ ದೃಷ್ಟಿಕೋನ ಅಥವಾ ಗ್ರಹಿಕೆಗೆ ಸಂಬಂಧಪಟ್ಟ ವಿಚಾರ ವಾದರೂ ವಸ್ತುಸ್ಥಿತಿಯನ್ನು ಅರ್ಥೈಸಿಕೊಳ್ಳುವುದಕ್ಕೆ ಅನಿವಾರ್ಯವಾದದ್ದಾಗಿದೆ.

ಚರಿತ್ರೆಕಾರ .ಆರ್.ಜಿ. ಕಾಲಿಂಗ್‌ವುಡ್ ಅವರು ತಮ್ಮ ‘ದಿ ಐಡಿಯಾ ಆಫ್ ಹಿಸ್ಟರಿ’  ಕೃತಿಯಲ್ಲಿ ಚರಿತ್ರೆಯ ಘಟನೆಗಳಲ್ಲಿ ಅಡಕವಾಗಿರುವ ವಿಚಾರಗಳನ್ನು ಚರಿತ್ರೆಕಾರ ಪುನರ್‌ವಿಮರ್ಶೆಗೆ ಒಡ್ಡಬೇಕು ಎಂದಿದ್ದಾರೆ. ಅವರ ಪ್ರಕಾರ ಘಟನೆಗಳನ್ನು ಅರಿಯುವುದು ಹಾಗೂ ಘಟನೆಗಳಲ್ಲಿರುವ ಆಲೋಚನೆಗಳನ್ನು ಪತ್ತೆಹಚ್ಚುವುದು ಚರಿತ್ರೆಕಾರನ ಮುಖ್ಯ ಉದ್ದೇಶಗಳಲ್ಲಿ ಒಂದಾಗಿರಬೇಕು. ಏಕೆಂದರೆ ಮಾನವನ ಪ್ರತಿಯೊಂದು ಘಟನೆಯೂ ಹಲವಾರು ಚಿಂತನೆಗಳಿಂದ ಕೂಡಿರುತ್ತದೆ ಹಾಗೂ ಘಟನೆಗಳ ಹಿಂದೆ ಕ್ರಿಯೆಗಳಿರುತ್ತವೆ. ಏನು ನಡೆಯಿತು ಎನ್ನುವುದು ದೈಹಿಕ ಚಲನೆಗೆ ಸಂಬಂಧಿಸಿದ ಅಥವಾ ಮೇಲ್ನೋಟಕ್ಕೆ ಪ್ರಕಟವಾಗುವ ಅಂಶವಾದರೆ, ಯಾಕೆ ನಡೆಯಿತು ಎನ್ನುವುದು ಘಟನೆಯ ಚಿಂತನೆಯ ಭಾಗವಾಗಿರುತ್ತದೆ. ಸಿರಿಯ ಘಟನೆಯನ್ನು ಉದಾರಹಣೆಯನ್ನಾಗಿ ತೆಗೆದುಕೊಳ್ಳುವುದಾದರೆ ಅದು ಊಳಿಗಮಾನ್ಯ ಸಮಾಜದ ಸಾಮಾನ್ಯ ಲಕ್ಷಣವಾಗಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ಅದೇ ಘಟನೆಯನ್ನು ಪ್ರಸ್ತುತ ಸಂದರ್ಭದ ಸ್ತ್ರೀವಾದಿ ಚಿಂತನೆಯ ಮೂಲಕ ನೋಡಿದಾಗ ಸಿಗುವ ಚಿತ್ರಣವೇ ಬೇರೆ. ಅದೇ ರೀತಿ ಊಳಿಗಮಾನ್ಯತೆ, ಮಾತೃವಂಶೀಯತೆ, ಅಲೌಕಿ ಕತೆ, ಪುರುಷ ಪ್ರಭುತ್ವ ಮುಂತಾದ ವಿಚಾರಗಳ ಮೂಲಕ ಸಿರಿ ಪಾಡ್ದನವನ್ನು ನೋಡಿದಾಗ ಸಿರಿಯ ಸಂದರ್ಭದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘರ್ಷಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಈ ಸಂಘರ್ಷಗಳು ಅಂದಿನ ಸಂದರ್ಭದಲ್ಲಿ ಸಂಘರ್ಷದ ರೂಪದಲ್ಲಿದ್ದವೇ ಅಥವಾ ಇಂದು ಅದನ್ನು ಸಂಘರ್ಷದ ರೂಪದಲ್ಲಿ ನೋಡ ಲಾಗುತ್ತಿದ್ದೆಯೇ ಎನ್ನುವುದು ವೈಚಾರಿಕತೆಗೆ ಸಂಬಂಧಿಸಿದ ಪ್ರಶ್ನೆ.

ಆಧುನಿಕ ಪರಿಕಲ್ಪನೆಗಳ ಮೂಲಕ ಚರಿತ್ರೆಗೆ ಪ್ರವೇಶ ಪಡೆಯುವಾಗ ಈ ಬಗೆಯ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅಧಿಕಾರ ಹಾಗೂ ಸವಲತ್ತುಗಳನ್ನು ಹೊಂದಿದ್ದ ಜನವರ್ಗದ ಯಜಮಾನಿಕೆಯ ವಿರುದ್ಧ ಅಸಮದಾನಗಳು ಚರಿತ್ರೆಯುದ್ಧಕ್ಕೂ ಇದ್ದದ್ದು ನಿಜ. ಆದರೆ ಅದು ಸಾಂಘಿಕ ರೂಪವನ್ನು ಪಡೆದುಕೊಂಡಿರಲಿಲ್ಲ ಹಾಗೂ ಸಮಕಾಲೀನ ಸಂದರ್ಭದ ಹೋರಾಟಗಳ ರೀತಿಯಲ್ಲಿ ತಮ್ಮದೇ ಆದ ಚೌಕಟ್ಟನ್ನು ನಿರ್ಮಿಸಿಕೊಂಡಿರಲಿಲ್ಲ. ಸಿರಿ ಅನ್ಯಾಯದ ವಿರುದ್ಧ ನಡೆಸಿದ ಹೋರಾಟಕ್ಕೆ ಒಂದು ಚೌಕಟ್ಟು ಹಾಗೂ ಸೈದ್ಧಾಂತಿಕತೆ ಲಭ್ಯವಾಗಿರುವುದು ಇಂದು. ಈ ಮೂಲಕ ಇಂಥ ಅನೇಕ ಹೋರಾಟಗಳನ್ನು ಚರಿತ್ರೆಯಲ್ಲಿ ಹುಡುಕುವುದರೊಂದಿಗೆ ಇಂದಿನ ಹೋರಾಟಗಳೇ ಗಟ್ಟಿಗೊಳ್ಳುತ್ತವೆ. ಸಮುದಾಯಗಳು ತಮ್ಮ ತಮ್ಮ ಚರಿತ್ರೆ ರಚಿಸುವ, ಮಠ ಸ್ಥಾಪಿಸುವ ಹಾಗೂ ಗುರುವಿಗಾಗಿ ಹುಡುಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಚರಿತ್ರೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಸಿರಿಯನ್ನು ತುಳುನಾಡಿನ ಬಂಟರ ಮೂಲಸ್ತ್ರಿ ಎಂಬುದಾಗಿ ಕರೆಯಲಾಗಿದೆ. ಇದನ್ನು ಒಪ್ಪುವುದು ಅಥವಾ ಬಿಡುವುದು ಬೇರೆ ಪ್ರಶ್ನೆಯಾದರೂ ಈ ಬಗೆಯ ಪ್ರಯತ್ನಗಳು ಎಲ್ಲ ಸಮುದಾಯಗಳಲ್ಲೂ ನಡೆಯುತ್ತಿದೆ. ಇದರರ್ಥ ಪ್ರತಿಯೊಂದು ಸಮುದಾಯವೂ ತನ್ನದೇ ಆದ ಬಗೆಯಲ್ಲಿ ತನ್ನ ಅಸ್ತಿತ್ವದ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನುವುದೇ ಆಗಿದೆ.

ಇಲ್ಲಿ ಚಿಂತನೆಗಳು ಅಥವಾ ಆಲೋಚನೆಗಳ ಕುರಿತು ಚರ್ಚಿಸುವಾಗ ವಿವಿಧ ನೆಲೆಗಟ್ಟಿ ನಿಂದ ರೂಪುಗೊಂಡ ಚಿಂತನೆಗಳು ಎದುರಾಗುತ್ತವೆ. ಸಿರಿಯ ಸಂದರ್ಭವನ್ನು ಗಮನಿಸುವಾಗ ಮೂರು ಬಗೆಯ ಚಿಂತನೆಗಳು ಪ್ರಧಾನವಾಗಿ ಕಂಡು ಬರುತ್ತವೆ. ಅವುಗಳೆಂದರೆ ಸಿರಿ ತಾನು ಬದುಕಿದ್ದ ಸಾಮಾಜಿಕ ಪರಿಸರದ ಬಗ್ಗೆ ಹೊಂದಿದ್ದ ಚಿಂತನೆ, ಸಿರಿಯನ್ನು ಇಂದಿನ ಅಧ್ಯಯನ ಕಾರರು ತಮ್ಮದೇ ಆದ ಸೈದ್ಧಾಂತಿಕ ದೃಷ್ಟಿಕೋನದ ಮೂಲಕ ನೋಡಿ ರೂಪುಗೊಳಿಸಿದ ಚಿಂತನೆ ಹಾಗೂ ಸಿರಿಯನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸಿ ಐಡೆಂಟಿಟಿ ಪ್ರಶ್ನೆಯ ಮೂಲಕ ಹುಟ್ಟು ಹಾಕಲಾದ ಚಿಂತನೆ. ಈ ಎಲ್ಲ ಚಿಂತನೆಗಳು ಮಾನವ ತನ್ನ ಬದುಕಿಗಾಗಿ ನಡೆಸುವ ಸಂಘರ್ಷ ಹಾಗೂ ಹೊಂದಾಣಿಕೆಗಳ ಮೂಲಕ ಹುಟ್ಟಿಕೊಂಡಿರುವಂತವು. ಇಲ್ಲಿ ನಾವು ಯಾವ ಅಧ್ಯಯನ ವಿಧಾನವನ್ನು ಅನುಸರಿಸುತ್ತಿದ್ದೇವೆ ಹಾಗೂ ಯಾವ ಸೈದ್ಧಾಂತಿಕತೆಯ ಮೂಲಕ ಅಧ್ಯಯನಕ್ಕೆ ಪ್ರವೇಶ ಪಡೆಯುತ್ತಿದ್ದೇವೆ ಎನ್ನುವುದರ ಮೂಲಕ ಚಿಂತನೆಗಳು ರೂಪುಗೊಳ್ಳುತ್ತವೆ. ಚರಿತ್ರೆಯಲ್ಲಿ ಇಂದು ಹೆಚ್ಚು ಚರ್ಚೆಗೆ ಒಳಗಾಗಿರುವ ಸ್ಥಳೀಯ ಚರಿತ್ರೆ ಹಾಗೂ ಮೌಖಿಕ ಚರಿತ್ರೆ ಪರಿಕಲ್ಪನೆಗಳು ಚರಿತ್ರೆಯಲ್ಲಿ ಇಲ್ಲಿಯವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅದೆಷ್ಟೋ ವಿಚಾರಗಳು ಬೆಳಕಿಗೆ ಬರುವಂತೆ ಮಾಡಿವೆ. ಆದರೆ ಹಳೆಯ ಮಾದರಿಗಳನ್ನೇ ಅನುಸರಿಸಿಕೊಂಡು, ಅದೇ ಚೌಕಟ್ಟಿನಲ್ಲಿ ಹೊಸ ವಿಚಾರಗಳನ್ನು ಚರ್ಚಿಸುತ್ತಿರುವುದು ಈ ಅಧ್ಯಯನದ ಮಿತಿಯಾಗಿ ಕಂಡು ಬರುತ್ತದೆ. ಸಿರಿಯಂಥ ಹಲವಾರು ಸ್ಥಳೀಯ ವಿಚಾರಗಳು ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಗೊಳ್ಳುತ್ತಿರುವುದು ಸಂತೋಷದ ಸಂಗತಿ. ಸಿರಿ ಪಾಡ್ದನ ಕೇವಲ ಪಠ್ಯವಾಗಿ ಉಳಿದಿಲ್ಲ, ಅದು ಮಹಾಕಾವ್ಯವಾಗಿ ಬೆಳೆದಿದೆ. ಹೀಗಾಗಿ ಸಿರಿ ಆಚರಣೆಯೂ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಆದರೆ ಸಿರಿ ಪಾಡ್ದನ ತನ್ನ ಮೂಲ ಆಶಯಗಳೊಂದಿಗೆ ಜಾಗತೀಕರಣಗೊಳ್ಳಲಿಲ್ಲ. ಅದು ಅಕಡಮಿಕ್ ನೆಲೆಯಿಂದ ಮಹಾಕಾವ್ಯವಾಗಿ ಬೆಳೆಯುವ ಹಾಗೂ ಜಾಗತೀಕರಣಗೊಳ್ಳುವ ಪ್ರಕ್ರಿಯೆಗೆ ಒಳಗಾಯಿತು. ಸಿರಿ ತುಳುನಾಡಿನಲ್ಲಿ ಹೊಂದಿರುವ ಗೌರವ, ಆಕೆಯ ಬಗೆಗಿನ ನಂಬಿಕೆ ಹಾಗೂ ಆಚರಣೆಗಳು ಸೀಮಿತ ವಲಯದಲ್ಲಷ್ಟೇ ಕಂಡು ಬರುತ್ತದೆ. ಇನ್ನು ತುಳುನಾಡಿನಲ್ಲಿ ಜನಪ್ರಿಯವಾಗಿರುವ ಭೂತಾರಾಧನೆಯ ಮಟ್ಟಕ್ಕೂ ಸಿರಿ ಆರಾಧನೆ ಏರಲಿಲ್ಲ. ಆದರೆ ಸಿರಿಯ ಕುರಿತಾಗಿ ಹುಟ್ಟಿಕೊಂಡಿರುವ ಪಾಡ್ದನ ಇಂದು ಅಕಡಮಿಕ್ ವಲಯಗಳಲ್ಲಿ ಬಹು ಚರ್ಚಿತವಾಗಿ ಜಾಗತಿಕ ಮಟ್ಟಕ್ಕೆ ಏರಿದೆ.

ಸಿರಿಯನ್ನು ಚಾರಿತ್ರಿಕವಾಗಿ ನೋಡಿ ಅವಳ ಸಂದರ್ಭದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಳ್ಳುವಲ್ಲಿ ಮೊದಲೆ ವಿವರಿಸಿದಂತೆ ಸ್ಥಳೀಯ ಹಾಗೂ ಮೌಖಿಕ ಚರಿತ್ರೆ ಸ್ವಲ್ಪಮಟ್ಟಿಗೆ ಯಶಸ್ವಿಯಾದರೂ, ಅದು ಗೊಂದಲಗಳನ್ನು ಹುಟ್ಟುಹಾಕಿದ್ದೇ ಹೆಚ್ಚು. ಏಕೆಂದರೆ ಈ ಎರಡೂ ಅಧ್ಯಯನ ವಿಧಾನಗಳು ಇನ್ನೂ ಸ್ಪಷ್ಟತೆಯ ಕಡೆಗೆ ಮುಖ ಮಾಡಿಲ್ಲ. ಅರಸ ಕೇಂದ್ರಿತ ಚರಿತ್ರೆಯಲ್ಲಿ ಸಿರಿಯಂಥ ವಿಚಾರಗಳು ಪ್ರಸ್ತಾಪಗೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಅರಸ ಕೇಂದ್ರಿತ ಚರಿತ್ರೆ ಅಧಿಕಾರ ಹಾಗೂ ಸವಲತ್ತುಗಳ ನೆಲೆಯಿಂದ ನಿರ್ಮಾಣಗೊಂಡಿರುವಂತದ್ದು. ಅದು ಕೇವಲ ಅರಮನೆ ಕೇಂದ್ರಿತವಾಗಿರುತ್ತದೆಯೇ ಹೊರತು ಜನ ಕೇಂದ್ರಿತವಾಗಿರುವುದಿಲ್ಲ. ಇದಕ್ಕೆ ಬದಲಾಗಿ ಹುಟ್ಟಿಕೊಂಡ ಸ್ಥಳೀಯ ಚರಿತ್ರೆ ಸಿರಿಯಂಥ ಹಲವಾರು ವಿಚಾರಗಳನ್ನು ತನ್ನ ಅಧ್ಯಯನ ವ್ಯಾಪ್ತಿಗೆ ಸೇರಿಸಿಕೊಂಡರೂ ಹಳೆಯ ಅರಸ ಕೇಂದ್ರಿತ ಚರಿತ್ರೆಯ ಚೌಕಟ್ಟಿನಲ್ಲಿಯೇ ಅಧ್ಯಯನ ನಡೆಸಿತು. ಸ್ಥಳೀಯತೆಯಿಂದ ವಿಶ್ವಾತ್ಮಕತೆಯೆಡೆಗೆ ಸಾಗಬೇಕೇ ಹೊರತು ವಿಶ್ವಾತ್ಮಕತೆಯಿಂದ ಸ್ಥಳೀಯತೆಯೆಡೆಗೆ ಬರಬಾರದು. ಆ ರೀತಿ ಬಂದರೆ ವಿಶ್ವಾತ್ಮಕ ಮಾದರಿಗಳೇ ಅಂತಿಮವಾಗುವ ಅಪಾಯವಿರುತ್ತದೆ. ಸ್ಥಳೀಯ ಚರಿತ್ರೆ ಸ್ವತಂತ್ರ ಅಧ್ಯಯನ ವಿಧಾನವಾದ್ದರಿಂದ ಸ್ಥಳೀಯತೆಯ ನೆಲೆಯಿಂದ ಚರಿತ್ರೆಯನ್ನು ಗ್ರಹಿಸಿ ಫಲಿತಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ತುಳುನಾಡಿನ ಚರಿತ್ರೆಯನ್ನು ಬೃಹತ್ ಸಾಮ್ರಾಜ್ಯಗಳ ಚರಿತ್ರೆಯ ಮೂಲಕ ನೋಡಲಾಗುತ್ತಿತ್ತು. ಸ್ಥಳೀಯ ಚರಿತ್ರೆ ಅಧ್ಯಯನ ಜನಪ್ರಿಯವಾದಾಗಿನಿಂದ ತುಳುನಾಡಿನ ಚರಿತ್ರೆಯನ್ನು ಸ್ಥಳೀಯ ನೆಲೆಯಿಂದ ಅಂದರೆ, ಸ್ಥಳೀಯ ಅರಸು ಮನೆತನಗಳ ನೆಲೆಯಿಂದ ಅಧ್ಯಯನ ನಡೆಸುವ ವಿಧಾನ ಆರಂಭಗೊಂಡಿತು. ಇಲ್ಲಿ ಅರಸು ಮನೆತನಗಳು ಎಂದಾಕ್ಷಣ ಮತ್ತೆ ಅದೇ ಹಳೆಯ ವಿಧಾನವನ್ನು ಅನುಸರಿಸಲಾಯಿತು. ಹೀಗಾಗಿ ಅಲ್ಲಿನ ಪಾಡ್ದನಗಳು ಹಾಗೂ ಅವು ಕಟ್ಟುವ ಚರಿತ್ರೆ ಹೆಚ್ಚು ಚರ್ಚೆಗೆ ಒಳಗಾಗಿಲ್ಲ. ಮೌಖಿಕ ಚರಿತ್ರೆಯ ವಿಚಾರ ಬಂದಾಗ ಪಾಡ್ದನಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಭೂತಾರಾಧನೆ ಯನ್ನಂತೂ ವಿಜೃಂಭಣೆಯತ್ತ ಕೊಂಡೊಯ್ಯಲಾಯಿತು. ಭೂತಾರಾಧನೆ ನಿಜವಾಗಲೂ ಸಾರುವ ಸತ್ಯ ಏನು, ಅದು ನಡೆಸುವ ಪ್ರತಿಭಟನೆ ಯಾವ ಸ್ವರೂಪದ್ದು, ಕತ್ತಲ ಲೋಕದಲ್ಲಿ ಭಯವನ್ನು ಹುಟ್ಟಿಸಿ ಜಮೀನುದಾರರನ್ನು ತಲೆಬಾಗಿಸಿ ನಿಲ್ಲುವಂತೆ ಮಾಡುವುದರ ಹಿಂದಿನ ತರ್ಕವೇನು, ಲೌಕಿಕ ಶೋಷಣೆಗೆ ಬಲಿಯಾಗಿ ಅಲೌಕಿಕ ನೆಲೆಯಲ್ಲಿ ಭೂತವಾಗಿ ಸೇಡು ತೀರಿಸಿಕೊಳ್ಳುವ ಹಾಗೂ ಆ ಮೂಲಕ ನ್ಯಾಯ ಪಡೆಯುವ ಅನಿವಾರ್ಯತೆ ಸಮಾಜದಲ್ಲಿ ಯಾಕಾಗಿ ಸೃಷ್ಟಿಯಾಯಿತು, ಭೂತಾರಾಧನೆಯಲ್ಲಿ ಭೂಮಿಯ ಪ್ರಶ್ನೆ ಹಾಗೂ ಕಲಾವಿದರ ಬದುಕಿನ ಪ್ರಶ್ನೆಯಾಕಾಗಿ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ ಎನ್ನುವ ವಿಚಾರಗಳು ಮೌಖಿಕ ಚರಿತ್ರೆ ಚೌಕಟ್ಟಿನೊಳಗೆ ಹೆಚ್ಚು ಚರ್ಚೆಗೆ ಒಳಗಾಗಬೇಕಿತ್ತು. ಹಾಗಾ ದಾಗ ಮಾತ್ರ ಸ್ಥಳೀಯ ವಿಚಾರವೊಂದರ ಚರಿತ್ರೆ ಮೌಖಿಕ ನೆಲೆಯಲ್ಲಿ ವ್ಯಾಖ್ಯಾನಗೊಂಡು ದಾಖಲಾಗಲು ಸಾಧ್ಯ. ಇಲ್ಲದಿದ್ದರೆ ಕೇವಲ ಹೊಗಳಿಕೆಯ ಅಥವಾ ಶ್ರೀಮಂತ ಕಲೆ ಎನ್ನುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಪ್ರಯತ್ನವಷ್ಟೇ ಆಗಲು ಸಾಧ್ಯ. ಸಿರಿಯ ಅಧ್ಯಯನದಲ್ಲೂ ಅಧ್ಯಯನಕಾರರು ಈ ಸೂಕ್ಷ್ಮ ವಿಚಾರಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಸಿರಿ ಒಂದು ಜೀವಂತ ಸಮಾಜದ ನಿರಂತರ ಸೃಜನಶೀಲವಾದ ಪಠ್ಯವಾದ್ದರಿಂದ ಅದನ್ನು ನಮ್ಮ ಇಂದಿನ ಅಧ್ಯಯನ ಮಾದರಿಯಲ್ಲಿ ಇಟ್ಟು ನೋಡುವುದರ ಜೊತೆ ಜೊತೆಗೆ ಪಠ್ಯವನ್ನು ಅದರ ಸಾಂಸ್ಕೃತಿಕ ಸಂದರ್ಭ ಹಾಗೂ ಚೌಕಟ್ಟಿನಲ್ಲೂ ಇಟ್ಟು ನೋಡಬೇಕಾಗುತ್ತದೆ. ಇಲ್ಲದಿದ್ದರೆ ತುಳುನಾಡಿನ ಮೌಖಿಕ ಚರಿತ್ರೆ ರಚನೆಯಲ್ಲೂ ಸಿರಿ ನಿರ್ಲಕ್ಷ್ಯಕ್ಕೆ ಒಳಗಾಗುವ ಹಾಗೂ ಸಿರಿ ಪಠ್ಯದ ಮೂಲ ಆಶಯಗಳು ಅಲಕ್ಷಿತತೆಗೆ ಒಳಗಾ ಗುವ ಪರಿಸ್ಥಿತಿ ಇದೆ. ಹೀಗಾಗಿ ತುಳುನಾಡಿನ ಚರಿತ್ರೆಯನ್ನು ಸ್ಥಳೀಯ ಹಾಗೂ ಮೌಖಿಕ ನೆಲೆಯಿಂದ ಅಧ್ಯಯನ ಮಾಡಿದಾಕ್ಷಣ ಅಲ್ಲಿನ ಎಲ್ಲ ವಿಚಾರಗಳೂ ಬೆಳಕಿಗೆ ಬರುತ್ತವೆ ಎನ್ನುವುದು ಕೇವಲ ಭ್ರಮೆ. ಹೊಸ ಪರಿಕಲ್ಪನೆಗಳು ಹುಟ್ಟಿಕೊಳ್ಳುವಾಗ ಅವು ತಮ್ಮದೇ ಆದ ಗಟ್ಟಿಯಾದ ಸೈದ್ಧಾಂತಿಕ ದೃಷ್ಟಿಕೋನವನ್ನು ಹೊಂದಿರುತ್ತವೆ. ಅಧ್ಯಯನಕಾರರು ಹೊಸ ಪರಿಕಲ್ಪನೆಗಳನ್ನು ತಮ್ಮ ಅಧ್ಯಯನಕ್ಕೆ ಒಳಪಡಿಸುವಾಗ ಅವುಗಳ ಹಿಂದಿರುವ ಸೈದ್ಧಾಂತಿಕತೆಯನ್ನು ಅರ್ಥೈಸಿಕೊಳ್ಳುವಲ್ಲಿ ಎಡವುದು ಸರ್ವೆಸಾಮಾನ್ಯ. ಇದು ಮೇಲೆ ವಿವರಿಸಿದ ಪರಿಕಲ್ಪನಾತ್ಮಕ ಸಮಸ್ಯೆಗಳಿಗೆ ಮೂಲ ಕಾರಣ.

ಸಿರಿಯನ್ನು ಕೃಷಿ ಕುಟುಂಬದ ಒಬ್ಬ ಸಾಮಾನ್ಯ ಮಹಿಳೆ ಎಂಬುದಾಗಿ ತೀರ್ಮಾನಿಸಲು ಸಾಧ್ಯವಾಗುವುದಿಲ್ಲ. ಅಧಿಕಾರ ಹಾಗೂ ಸವಲತ್ತುಗಳಿಂದ ಅವಳು ಸಂಪೂರ್ಣವಾಗಿ ವಂಚಿತಳಾಗಿದ್ದಳು ಎನ್ನುವ ತೀರ್ಮಾನಕ್ಕೆ ಬರುವುದೂ ಕಷ್ಟ. ಏಕೆಂದರೆ ಸಿರಿ ಊಳಿಗಮಾನ್ಯ ಮನೆತನಕ್ಕೆ ಸೇರಿದ ಹೆಣ್ಣು. ಅವಳು ಇದ್ದ ಮನೆ ಸತ್ಯನಾಪುರದ ಅರಮನೆ, ಮದುವೆ ಯಾಗಿದ್ದು ಬಸ್ರೂರಿನ ಗುತ್ತಿನ ಮನೆಗೆ ಹಾಗೂ ಮರುಮದುವೆಯಾಗಿದ್ದು ಕೊಟ್ರಪಾಡಿ ಗುತ್ತಿನ ಮನೆಗೆ. ಒಟ್ಟಾರೆಯಾಗಿ ಸಿರಿ ಗುರುತಿಸಿಕೊಂಡಿರುವುದು ತುಳುನಾಡಿನ ಭೂಮಾಲೀಕ ಬಂಟ ಸಮುದಾಯದೊಂದಿಗೆ. ಹೀಗಾಗಿ ಸಿರಿ ಸಾಮಾನ್ಯ ಪ್ರಜೆಯಾಗಿರಲಿಲ್ಲ, ಅವಳು ಒಂದು ಆಡಳಿತ ನಡೆಸುವ ಊಳಿಗಮಾನ್ಯ ಲಕ್ಷಣವಿದ್ದ ವ್ಯವಸ್ಥೆಯ ಭಾಗವಾಗಿದ್ದಳು ಎಂಬುದಾಗಿ ತೀರ್ಮಾನಿಸಬಹುದಾಗಿದೆ. ಹೆಣ್ಣು ಎನ್ನುವ ವಿಚಾರವನ್ನು ತೆಗೆದುಕೊಂಡಾಗ ಹಾಗೂ ಊಳಿಗಮಾನ್ಯ ವ್ಯವಸ್ಥೆ ಅವಳಿಗೆ ಅಧಿಕಾರ ನೀಡಲು ಹಿಂದೇಟು ಹಾಕಿದ ಪ್ರಸಂಗವನ್ನು ಅವಲೋಕಿಸಿದಾಗ ಸಿರಿ ಸಬಾಲ್ಟರ್ನ್ ವ್ಯಾಪ್ತಿಗೆ ಬರುತ್ತಾಳೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಅವಳು ಗುತ್ತು ಕೇಂದ್ರಿತ ವ್ಯವಸ್ಥೆಯೊಂದರ ಭಾಗ ಎನ್ನುವು ದನ್ನೂ ಮರೆಯುವ ಹಾಗಿಲ್ಲ. ಗುತ್ತು ಕೇಂದ್ರಿತ ವ್ಯವಸ್ಥೆಯಲ್ಲಿ ಹೆಣ್ಣಿಗಿರುವ ಸ್ವಾತಂತ್ರ್ಯ ಹಾಗೂ ಅಲ್ಲಿ ನಡೆಯುವ ಹೆಣ್ಣಿನ ಶೋಷಣೆ ಯಾವ ಸ್ವರೂಪದ್ದು ಎನ್ನುವುದನ್ನು ಸಿರಿ ಪಾಡ್ದನ ವಿವರವಾಗಿ ಚಿತ್ರಿಸುತ್ತಾ ಹೋಗುತ್ತದೆ. ಆ ಮೂಲಕ ಮಧ್ಯಕಾಲೀನ ಸಂದರ್ಭದ ಸಾಮಾಜಿಕ ರಚನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಪುರುಷ ಪ್ರಭುತ್ವವನ್ನು ಮೀರಿ ನಿಲ್ಲುವ ಪ್ರಯತ್ನವನ್ನು ಸಿರಿ ಮಾಡಿದಳಾದರೂ ಅವಳಿಗೆ ಎದುರಾಗುವುದು ಕೇವಲ ದುರಂತ ಗಳು ಮಾತ್ರ. ಸ್ವತಂತ್ರ ಬದುಕನ್ನು ಕಟ್ಟುವ ಸಿರಿಯ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಸಿರಿಗೆ ಅಲೌಕಿಕ ನೆಲೆಯ ಸಾಮರ್ಥ್ಯಗಳು ಪ್ರಾಪ್ತವಾಗಿದ್ದರೂ ಕೊನೆಗೆ ಅವಳು ಸೋಲಲೇಬೇಕಾಗುತ್ತದೆ. ಇಂದಿನ ಸಿರಿ ಆಚರಣೆಗಳಲ್ಲೂ ಕುಮಾರನೇ ಅಂತಿಮವಾಗಿರು ವುದನ್ನೂ ಈ ಹಿನ್ನೆಲೆಯಿಂದಲೇ ನೋಡಬೇಕಾಗುತ್ತದೆ. ಸಿರಿ ತನ್ನ ಮೊದಲ ಪತಿ ಬಸ್ರುರಿನ ಕಾಂತುಪೂಂಜನನ್ನು ತ್ಯಜಿಸಿ, ವಿಚ್ಛೇದನ ನೀಡಿ ತನ್ನ ಸ್ವಾಭಿಮಾನವನ್ನು ಮೆರೆಯುತ್ತಾಳೆ. ಆದರೆ ಮತ್ತೆ ಕೊಟ್ರಪಾಡಿಯ ಕೊಡ್ಸುರಾಳ್ವನನ್ನು ಮರುಮದುವೆಯಾಗಿ ಗಂಡಿನ ಅಧೀನಳಾಗುತ್ತಾಳೆ. ಹಾಗೂ ಬಹುಪತ್ನಿತ್ವಕ್ಕೆ ಒಪ್ಪಿಗೆಯನ್ನು ನೀಡುತ್ತಾಳೆ. ಇಲ್ಲಿ ಸಿರಿ ವ್ಯವಸ್ಥೆಯನ್ನು ಯಾವ ರೀತಿ ಬಳಸಿಕೊಂಡಳು ಹಾಗೂ ವ್ಯವಸ್ಥೆ ಸಿರಿಯನ್ನು ಯಾವ ರೀತಿ ಬಳಸಿಕೊಂಡಿತು ಎನ್ನುವ ಎರಡು ವಿಚಾರಗಳೂ ಅತ್ಯಂತ ಸೂಕ್ಷ್ಮ ವಿಚಾರಗಳಾಗಿರುವುದರಿಂದ ಮೇಲ್ನೋಟದ ಅಧ್ಯಯನ ಯಾವುದೇ ಫಲಿತಗಳನ್ನು ನೀಡದು.

ಊಳಿಗಮಾನ್ಯತೆಯ ವಿರುದ್ಧ ಅಂದಿನ ಸಂದರ್ಭದಲ್ಲಿ ಹೋರಾಟಗಳು ಇದ್ದವೇ ಅಥವಾ ಹೋರಾಟಗಳು ಇದ್ದರೆ ಅವು ಯಾವ ಸ್ವರೂಪದ ಹೋರಾಟಗಳು ಎನ್ನುವ ಪ್ರಶ್ನೆಗೆ ಉತ್ತರಿ ಸುವುದು ಸ್ವಲ್ಪ ಕಷ್ಟ. ಹೋರಾಟಕ್ಕೆ ಸಂಬಂಧಿಸಿದ ಲಿಖಿತ ದಾಖಲೆಗಳು ಅಷ್ಟಾಗಿ ಕಂಡು ಬರುವುದಿಲ್ಲ. ಆದರೆ ಪಾಡ್ದನಗಳಲ್ಲಿ ಪ್ರತಿಭಟನೆಯ ಕುರಿತ ಹಲವಾರು ವಿವರಗಳು ಸಿಗುತ್ತವೆ. ಪ್ರತಿಭಟಿಸಿದವರು ದೈವಗಳಾಗಿ ಪಾಡ್ದನಗಳಲ್ಲಿ ಕಂಡು ಬರುತ್ತಾರೆ. ಉದಾಹರಣೆಗೆ ಸಿರಿ, ಕಲ್ಲುರ್ಟಿ, ಮೈಂದಲೆ, ತನ್ನಿಮಾನಿಗ ಮುಂತಾದ ಸ್ತ್ರೀ ದೈವಗಳ ಪಾಡ್ದನಗಳಲ್ಲಿ ಸಂಘರ್ಷದ ನೆಲೆಗಳನ್ನು ಗುರುತಿಸಬಹುದಾಗಿದೆ. ಲೌಕಿಕ ಬದುಕಿನಲ್ಲಿ ಶೋಷಣೆಯನ್ನು ಅನುಭವಿಸಿ, ಅದಕ್ಕೆ ಬಲಿಯಾದ ವ್ಯಕ್ತಿಗಳು ಸತ್ತ ಮೇಲೆ ದೈವಗಳಾಗಿ ಪ್ರತೀಕಾರ ತೀರಿಸಿ ಕೊಳ್ಳುವುದು ಪಾಡ್ದನಗಳಲ್ಲಿ ಚಿತ್ರಿತವಾಗಿದೆ. ಸಿರಿ ಬದುಕಿನುದ್ದಕ್ಕೂ ನಡೆಸಿದ ಹೋರಾಟ ಅಂದಿನ ಸಂದರ್ಭದಲ್ಲಿ ಮಹತ್ವದ ಬದಲಾವಣೆಯನ್ನು ತರದಿದ್ದರೂ, ಸಿರಿ ದೈವವಾಗಿ ಆರಾಧನೆಗೊಳ್ಳಲು ಆರಂಭಗೊಂಡ ಬಳಿಕ ಅವಳ ಸಾಮರ್ಥ್ಯ ಬೇರೆ ಬೇರೆ ರೀತಿಯಲ್ಲಿ ಪ್ರಕಟಗೊಳ್ಳಲಾರಂಭಿಸಿತು. ಆದರೆ ಅದು ನಂಬಿಕೆ ಹಾಗೂ ಆಚರಣೆಗಳಿಗೆ ಹೆಚ್ಚಾಗಿ ಸಂಬಂಧಿಸಿತ್ತೇ ಹೊರತು ಅಧಿಕಾರ ಹಾಗೂ ಸವಲತ್ತುಗಳಿಗಲ್ಲ. ಏಕೆಂದರೆ ಲೌಕಿಕ ಬದುಕು ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ಶಕ್ತಿಗಳ ನಿಯಂತ್ರಣದಲ್ಲಿ ಹಾಗೂ ನಿರ್ದೇಶನದಲ್ಲಿ ನಡೆಯಬೇಕಾಗಿತ್ತು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿರುವುದರಿಂದಾಗಿ ಹಾಗೂ ಹೋರಾಟಗಳಿಗೆ ಅವಕಾಶವಿರುವುದರಿಂದಾಗಿ ಶೋಷಣೆ ನಡೆಸುವ ಶಕ್ತಿಗಳ ವಿರುದ್ಧ ಧ್ವನಿ ಹುಟ್ಟಿಕೊಂಡಿತು. ಹೀಗೆ ಪ್ರಜಾಪ್ರಭುತ್ವ ಸಂದರ್ಭದಲ್ಲಿ ನಡೆಯುವ ಹೋರಾಟಗಳಿಗೆ ಚರಿತ್ರೆಯುದ್ದಕ್ಕೂ ಸಾತ್ವಿಕವಾಗಿ ಹಾಗೂ ಮೌನವಾಗಿ ನಡೆದ ಹೋರಾಟ ಗಳು ಬಲವನ್ನು ತುಂಬಿದವು. ಹಳೆಯ ಕಟ್ಟುಪಾಡುಗಳನ್ನು ಮೀರುವ ಪ್ರಯತ್ನ ಮಾಡಿದ ಸಿರಿ ಈ ಕಾರಣದಿಂದಾಗಿ ಇಂದಿನ ಮಹಿಳಾ ಚಳವಳಿಯ ಸಂದರ್ಭದಲ್ಲಿ ಪ್ರಮುಖಳಾಗಿ ಕಂಡುಬರುತ್ತಾಳೆ. ಅದೇ ರೀತಿ ಮಾತೃವಂಶೀಯ ಕುಟುಂಬದೊಳಗಿನ ನಾನಾ ಬಗೆಯ ಸಂಘರ್ಷಗಳನ್ನು ಸಿರಿ ಪಠ್ಯ ತೆರೆದಿಡುತ್ತಾ ಹೋಗುತ್ತದೆ. ಇದು ಕುಟುಂಬದ ನೆಲೆಯ ರಾಜಕಾರಣದ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತದೆ.

ಸಿರಿ ಪಠ್ಯದಲ್ಲಿ ಬಹುಚರ್ಚಿತವಾಗುವ ವಿಷಯವೆಂದರೆ ಮಾತೃವಂಶೀಯತೆ. ಇದು ಮೇಲ್ನೋಟಕ್ಕೆ ಮಾತೃಪ್ರಧಾನ ಕುಟುಂಬ ರೂಪುಗೊಳ್ಳುವ ಹಾಗೂ ವ್ಯವಹರಿಸುವ ಒಂದು ವಿಧಾನವಾಗಿ ಕಂಡುಬಂದರೂ, ಅದರೊಳಗೆ ನಿಜವಾಗಲೂ ಅಡಕವಾಗಿರುವುದು ಭೂ ಆಧಾರಿತ ಅಧಿಕಾರದ ಪ್ರಶ್ನೆಗಳು. ಹೀಗಾಗಿ ರಾಜಕೀಯ ಸಂಘರ್ಷದ ನೆಲೆಗಳನ್ನು ಇಲ್ಲಿಂ ದಲೇ ಗುರುತಿಸಿಕೊಂಡು ಹೋಗಬೇಕಾಗುತ್ತದೆ. ಮಾತೃವಂಶೀಯತೆಯನ್ನು ಕೌಟುಂಬಿಕ ವಿವರಗಳಿಗೆ ಅಥವಾ ಜಾತಿಗೆ ಸೀಮಿತಗೊಳಿಸಿ ಹಲವಾರು ಚರ್ಚೆಗಳು ನಡೆದಿವೆ. ಇದರಾಚೆಗೂ ಮಾತೃವಂಶೀಯತೆಯನ್ನು ನೋಡುವ ಪ್ರಯತ್ನಗಳು ಆಗಬೇಕಾಗಿದೆ. ಆಗ ಮಾತ್ರ ಕುಟುಂಬದ ಮೂಲಕ ನಿರ್ವಹಿಸುವ ಆಡಳಿತ, ಆಳ್ವಿಕೆ, ಅಧಿಕಾರ ಹಾಗೂ ಆಸ್ತಿ ಗಳಿಕೆ ಮುಂತಾದ ಕುಟುಂಬ ಮೂಲದ ರಾಜಕೀಯ ಅಥವಾ ರಾಜ್ಯ ವ್ಯವಸ್ಥೆ ಪರಿಚಯವಾಗಲು ಸಾಧ್ಯ. ಮಾತೃವಂಶೀಯತೆಯ ಮೂಲಕ ರೂಪುಗೊಳ್ಳುವ ರಾಜಕೀಯ ವ್ಯವಸ್ಥೆ ಕುಟುಂಬದ ಚೌಕಟ್ಟನ್ನು ಮೀರಿರುವಂತದ್ದು. ಬಂಟರ ಗುತ್ತು ಮನೆಗಳು ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳ ಆಳ್ವಿಕೆಯನ್ನು ನೋಡಿಕೊಳ್ಳುತ್ತಿದ್ದವು. ಬಂಟರು ಭೂಮಾಲೀಕರಾಗಿದ್ದ ಕಾರಣ ಸಹಜವಾಗಿಯೆ ಆಳುವವರ್ಗದೊಂದಿಗೆ ನೇರ ಸಂಬಂಧವನ್ನು ಹೊಂದಿದ್ದರು. ಮಾತೃವಂಶೀ ಯತೆಯ ಮೂಲಕ ಗುರುತಿಸಿಕೊಂಡ ಬಂಟರು ಒಂದು ಪ್ರದೇಶದ ಆಳ್ವಿಕೆಯನ್ನು ನಿರ್ವಹಿಸು ವಾಗ ಅವರು ಕುಟುಂಬದ ಚೌಕಟ್ಟನ್ನು ಮೀರಿ ವಿಕೇಂದ್ರಿಕೃತ ಸರ್ಕಾರ ಮಾದರಿಯ ಚೌಕಟ್ಟಿನೊಳಗೆ ಬರುತ್ತಾರೆ. ಹೀಗೆ ಪ್ರಬಲ ಸಮುದಾಯಗಳು ತಮ್ಮ ಕುಟುಂಬದ ನೆಲೆ ಯನ್ನು ಭದ್ರಪಡಿಸಿಕೊಂಡು ಅನಂತರ ತಮ್ಮ ಅಧಿಕಾರವನ್ನು ಇನ್ನಿತರ ಮೇಲೆ ಚಲಾಯಿಸುವ ಹಂತಕ್ಕೆ ಬೆಳೆದವು. ಇದು ಮಾತೃವಂಶೀಯತೆಯನ್ನು ಆಡಳಿತ ಹಾಗೂ ಅಧಿಕಾರದ ನೆಲೆಯಿಂದ ನೋಡುವ ವಿಧಾನವಾದರೆ, ಪುರುಷಪ್ರಭುತ್ವದ ವಿರೋಧಿ ನೆಲೆಯಿಂದ ನೋಡುವುದು ಮತ್ತೊಂದು ವಿಧಾನ.

ರಾಜಕೀಯ ಸಂಘರ್ಷದ ನೆಲೆಗಳನ್ನು ಸ್ತ್ರೀ ಸಂಘರ್ಷದ ಪ್ರಶ್ನೆಗಳ ಮೂಲಕವೂ ನೋಡಬಹುದಾಗಿದೆ. ಸಿರಿ ಮುಖಾಮುಖಿಯಾಗುವುದು ಪುರುಷ ಪ್ರಧಾನ ವ್ಯವಸ್ಥೆಗೆ. ಪಿತೃಪ್ರಧಾನ ವ್ಯವಸ್ಥೆಯ ಪಾತಿವ್ರತ್ಯ, ಮಾತೃತ್ವ, ಪುರುಷ ಪ್ರಭುತ್ವ ಮುಂತಾದ ಲಕ್ಷಣಗಳನ್ನು ಸಿರಿ ಪಠ್ಯ ಒಡೆಯುತ್ತಾ ಸಾಗುತ್ತದೆ. ಮಾತೃವಂಶೀಯತೆಯ ಪ್ರಮುಖ ಲಕ್ಷಣಗಳೆಂದರೆ ತಾಯಿಯ ಮೂಲಕ ಮನೆತನವನ್ನು ನಿರ್ಧರಿಸುವುದು, ಆಸ್ತಿಯ ಹಕ್ಕನ್ನು ಪಡೆಯುವುದು, ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವುದು ಹಾಗೂ ತನ್ನವರಿಂದ ತೊಂದರೆಗೊಳಗಾದಾಗ ಹೆಣ್ಣು ಯಾವ ರೀತಿ ಎದುರಿಸಬೇಕೆನ್ನುವುದನ್ನು ತೋರಿಸಿಕೊಡುವುದು. ಮಾತೃವಂಶೀಯ ಕುಟುಂಬ ವ್ಯವಸ್ಥೆಯಲ್ಲಿ ಒಂದು ವೇಳೆ ಗಂಡ ತಿರಸ್ಕರಿಸಿದರೂ ಹೆಣ್ಣು ತವರಿನಲ್ಲಿ ಆಶ್ರಯ ಪಡೆಯಬಹುದು. ಗಂಡನಿಗಿಂತ ಹೆಚ್ಚಿನ ಅಧಿಕಾರವನ್ನು ರಕ್ತ ಸಂಬಂಧಿ ಗಳು ಹೊಂದಿರುತ್ತಾರೆ. ಅದರಲ್ಲೂ ಮಗುವಿನ ಮೇಲೆ ತವರು ಮನೆಯವರಿಗೆ (ಮಾವಂದಿರಿಗೆ) ಹೆಚ್ಚಿನ ಅಧಿಕಾರವಿರುತ್ತದೆ. ಇದನ್ನು ಅಳಿಯ ಸಂತಾನ ಅಥವಾ ಅಳಿಯ ಕಟ್ಟು ಎಂಬುದಾಗಿಯೂ ಕರೆಯಲಾಗಿದೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಗಂಡ ತನ್ನ ಹೆಂಡತಿ ಹಾಗೂ ಮಕ್ಕಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುತ್ತಾನೆ. ಆದರೆ ಎರಡೂ ವ್ಯವಸ್ಥೆಗಳಲ್ಲೂ ಹೆಣ್ಣು ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುವುದು ಕುಟುಂಬದ ಸದಸ್ಯರ ಸಂಬಂಧಗಳು ಅನ್ಯೋನ್ಯವಾಗಿದ್ದಾಗ ಮಾತ್ರ. ಇಡಿ ಕುಟುಂಬ ವ್ಯವಸ್ಥೆಯ ತಳಹದಿಯೇ ಕುಟುಂಬದ ಸದಸ್ಯರ ಪರಸ್ಪರ ಗೌರವ, ವಿಶ್ವಾಸ ಹಾಗೂ ನಂಬಿಕೆ. ಇದರಲ್ಲಿ ಬಿರುಕು ಕಾಣಿಸಿಕೊಂಡರೆ ಅದು ಯಾವ ಸ್ವರೂಪದ ವ್ಯವಸ್ಥೆಯಾದರೂ ಅವನತಿಯತ್ತ ಸಾಗಲೇಬೇಕಾಗುತ್ತದೆ. ಸಿರಿ ಪಠ್ಯದಲ್ಲಿ ಈ ಎಲ್ಲ ವಿಚಾರಗಳು ಹಾಸುಹೊಕ್ಕಾಗಿವೆ. ಒಬ್ಬ ಮಹಿಳೆ ಸಮಾಜದಲ್ಲಿ ಅತಂತ್ರ ಸ್ಥಿತಿಯನ್ನು ಎದುರಿಸುವಾಗ ಯಾವ ಬಗೆಯ ಹೋರಾಟವನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಸಿರಿ ಪಾಡ್ದನ ಒಂದು ಮಾದರಿ. ಸಿರಿ ತನ್ನ ಗಂಡನಿಗೆ ವಿಚ್ಛೇದನ (ಬರ) ನೀಡುವುದು, ಕನ್ಯಾಶುಲ್ಕ (ತೆರ)ವನ್ನು ಗಂಡನಿಗೆ ವಾಪಾಸು ಮಾಡುವುದು ಹಾಗೂ ಪಂಚಾಯಿತಿ ಕೂಟದ ನ್ಯಾಯಬಾಹಿರ ತೀರ್ಮಾನವನ್ನು ತಿರಸ್ಕರಿಸುವುದು ಇವೆಲ್ಲಾ ಹೆಣ್ಣು ತನ್ನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವಷ್ಟೇ ಅಲ್ಲದೆ, ಸಾಮಾಜಿಕ ಬದಲಾವಣೆಯತ್ತ ಮುಖ ಮಾಡಿರುವುದನ್ನು ಸೂಚಿಸುತ್ತದೆ. ಸಿರಿ ಬದಲಾವಣೆಯನ್ನು ಬಯಸಿ ಸಮಾಜದ ವಿರುದ್ಧ ಬಂಡಾಯವೆದ್ದರೂ ತನ್ನ ಗಂಡನೇ ಅದಕ್ಕೆ ವಿರುದ್ಧವಾಗಿ ನಿಂತಾಗ ಅಸಹಾಯಕಳಾಗಿ ಮನೆಯನ್ನೇ ತ್ಯಜಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಸಿರಿ ಪಠ್ಯದಲ್ಲಿ ಬಹುಮುಖ್ಯವಾಗಿ ಕಂಡುಬರುವ ವಿಚಾರ ಸತ್ಯನಾಪುರದ ಅರಮನೆಯ ಉತ್ತರಾಧಿಕಾರದ ಪ್ರಶ್ನೆ. ಇದು ರಾಜಕೀಯ ಅಧಿಕಾರ, ಆರ್ಥಿಕ ಸವಲತ್ತು ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಶ್ನೆಯೂ ಆಗಿತ್ತು. ಸತ್ಯನಾಪುರದ ಬೆರ್ಮಾಳ್ವರು ಸತ್ತೊಡನೆ ಅರಮನೆಯ ಪಟ್ಟದ ಕುರಿತು ರಾಜಕೀಯ ಆರಂಭಗೊಳ್ಳುತ್ತದೆ. ಸಿರಿಯ ಗಂಡ ಕಾಂತುಪೂಂಜ ಬೆರ್ಮಾಳ್ವರ ಅಳಿಯ ಶಂಕರ ಆಳ್ವನನ್ನು ಪಟ್ಟಕ್ಕೆ ತರುವ ಸಂಚು ಹೂಡುತ್ತಾನೆ. ಆದರೆ ಸಿರಿ ಇದನ್ನು ವಿರೋಧಿಸಿ ಅಜ್ಜರ (ಬೆರ್ಮಾಳ್ವ) ಮಗಳಾಗಿ ನಾನಿರುವಾಗ ಪಟ್ಟದ ಅಧಿಕಾರ ನನಗಲ್ಲದೆ ಶಂಕರ ಆಳ್ವನಿಗೆ ಬಿಟ್ಟುಕೊಡಲಾರೆ ಎನ್ನುವ ದೃಢ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಇಲ್ಲಿ ಗಂಡ ಕಾಂತುಪೂಂಜ ಸಿರಿಯ ವಿರುದ್ಧ ಸಂಚು ನಡೆಸುವುದಕ್ಕೂ ಕಾರಣಗಳಿವೆ. ಸಿರಿ ಬಸುರಿಯಾಗಿ ಅವಳ ಸೀಮಂತ ನಡೆಯುವ ಸಂದರ್ಭದಲ್ಲಿ ಬಸುರಿಗೆ ಕೊಡಬೇಕಾದ ಬಯಕೆ ಸೀರೆಯನ್ನು ಕಾಂತುಪೂಂಜನ ಸೂಳೆ ಸಿದ್ದು ಉಟ್ಟು ಮಡಿ ಕೆಡಿಸುತ್ತಾಳೆ. ಇದರಿಂದ ಕೆರಳಿದ ಸಿರಿ ಬಯಕೆ ಸೀರೆಯನ್ನು ಉಡಲು ನಿರಾಕರಿಸುತ್ತಾಳೆ. ಈ ಘಟನೆ ಗಂಡ ಹೆಂಡತಿಯ ಮಧ್ಯೆ ವಿರಸಕ್ಕೆ ಕಾರಣವಾಗುತ್ತದೆ. ಹುಟ್ಟಿದ ಮಗುವನ್ನು ನೋಡಲು ಕಾಂತುಪೂಂಜ ಸತ್ಯನಾಪುರಕ್ಕೆ ಬರುವುದಿಲ್ಲ. ಇದೇ ಸಂದರ್ಭದಲ್ಲಿ ಬೆರ್ಮಾಳ್ವರು ಸತ್ತು ಉತ್ತರಾಧಿಕಾರತ್ವದ ಪ್ರಶ್ನೆ ಎದುರಾಗುತ್ತದೆ. ಸಹಜವಾಗಿಯೆ ಕಾಂತುಪೂಂಜ ಸಿರಿಯ ವಿರುದ್ಧ ನಿಲ್ಲುತ್ತಾನೆ. ಬೆರ್ಮಾಳ್ವರ ಶವ ಸಂಸ್ಕಾರಕ್ಕೂ ಬರದೆ ತನ್ನ ವಿರೋಧವನ್ನು ಪ್ರಕಟಿಸುತ್ತಾನೆ. ಆದರೆ ಸ್ವಾಭಿಮಾನಿಯಾದ ಸಿರಿ ಇದನ್ನು ಸವಾಲನ್ನಾಗಿ ಸ್ವೀಕರಿಸಿ ತಾನೇ ಶವ ಸಂಸ್ಕಾರವನ್ನು ಮಾಡುತ್ತಾಳೆ. ಅರಮನೆಯ ಉತ್ತರಾಧಿಕಾರಿಯ ಪ್ರಶ್ನೆ ಕೇವಲ ಕುಟುಂಬದ ಪ್ರಶ್ನೆಯಾಗಿರಲಿಲ್ಲ. ಏಕೆಂದರೆ ಅದು ಆಡಳಿತಕ್ಕೆ ಸಂಬಂಧಿಸಿದ್ದಾಗಿತ್ತು. ಹಾಗಾಗಿ ಊರಿನ ಹಿರಿಯರೆಲ್ಲಾ ಸೇರಿ ಪಂಚಾಯಿತಿ ಕೂಟಕ್ಕೆ ಏರ್ಪಾಡು ನಡೆಯುತ್ತದೆ. ಕಾಂತುಪೂಂಜ ಹಾಗೂ ಶಂಕರ ಆಳ್ವ ಗುತ್ತು ಬರ್ಕೇಗಳವರನ್ನು ತಮ್ಮೆಡೆಗೆ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ. ನ್ಯಾಯ ತೀರ್ಮಾನಕ್ಕಾಗಿ ಸಿರಿಯನ್ನು ಕೂಟದ ಕಟ್ಟೆಗೆ ಕರೆಸುತ್ತಾರೆ. ಒಳಸಂಚನ್ನು ಮೊದಲೆ ಅರಿತಿದ್ದ ಸಿರಿ ಗುತ್ತು ಬರ್ಕೆಗಳವರ ಸಮ್ಮುಖದಲ್ಲಿ ಸತ್ಯನಾಪುರದ ಅರಮನೆಯ ಪಟ್ಟ ತನಗೇ ಸಿಗಬೇಕೆಂದು ತನ್ನ ವಾದವನ್ನು ಮಂಡಿಸುತ್ತಾಳೆ. ಆದರೆ ಊಳಿಗಮಾನ್ಯ ಮನಸ್ಸು ತುಂಬಿದ್ದ ಹಾಗೂ ಪುರುಷ ಪ್ರಭುತ್ವಕ್ಕೆ ಒಳಗಾಗಿದ್ದ ಪಂಚಾಯಿತಿ ಕಟ್ಟೆ ಸಿರಿಯ ವಾದವನ್ನು ತಳ್ಳಿ ಹಾಕಿತು. ಅದು ಕೊಟ್ಟ ತೀರ್ಮಾನವೆಂದರೆ ಇಲ್ಲಿಯವರೆಗೆ ಗಂಡಸರ ಅಧೀನದಲ್ಲಿದ್ದ ಅರಮನೆ ಹಾಗೂ ಗಂಡಸರು ಕೂತು ಆಡಳಿತ ನಡೆಸಿದ ಸಿಂಹಾಸನ ಗಂಡಸರಿಗಲ್ಲದೆ ಯಾವ ಕಾರಣಕ್ಕೂ ಹೆಂಗಸರಿಗೆ ಸೇರಬಾರದು. ಆಡಳಿತ ನಡೆಸುವ ಅಧಿಕಾರ ಹೆಂಗಸರಿಗಿಲ್ಲವೆಂದು ಪಂಚಾಯಿತಿ ಕಟ್ಟೆ ಸರ್ವಾನುಮತದಿಂದ ತೀರ್ಮಾನಿಸಿತು. ಇದು ಸಿರಿಯ ಸಂದರ್ಭದ ನ್ಯಾಯಾಂಗ ವ್ಯವಸ್ಥೆ ಯಾವ ಸ್ವರೂಪದ್ದು ಎನ್ನುವುದನ್ನು ತೋರಿಸಿಕೊಡುತ್ತದೆ.

ಹೆಣ್ಣನ್ನು ಆಳ್ವಿಕೆ ನಡೆಸಲು ಬಿಡೆವು, ಅವಳು ಅಸಮರ್ಥಳು ಎನ್ನುವ ಕೂಟದ ಕಟ್ಟೆಯ ತೀರ್ಮಾನ ಸಿರಿಯನ್ನು ಕೆಲವೊಂದು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಅವುಗಳೆಂದರೆ ಸತ್ಯನಾಪುರವನ್ನು ತೊರೆಯುವುದು, ಗಂಡನಿಗೆ ವಿಚ್ಛೇದನ ನೀಡುವುದು ಹಾಗೂ ಮರುಮದುವೆಯಾಗುವುದು. ಕೂಟದ ಕಟ್ಟೆಯಿಂದ ಅವಮಾನಿತಳಾದ ಸಿರಿ ‘ಸತ್ಯನಾಪುರದ ನೆಲ ಬಂಜರು ಬೀಳಲಿ ಅರಮನೆ ಸುಟ್ಟುಹೋಗಲಿ’ ಎಂದು ಶಪಿಸಿ, ತೊಟ್ಟಿಲ ಮಗು ಕುಮಾರ ಹಾಗೂ ಕೆಲಸದಾಕೆ ದಾರುವಿನೊಂದಿಗೆ ಸತ್ಯನಾಪುರವನ್ನು ತೊರೆದು ಗಂಡನ ಮನೆಯಾದ ಬಸ್ರೂರು ಗುತ್ತಿಗೆ ಬರುತ್ತಾಳೆ. ತನಗೆ ಮೋಸ ಮಾಡಿದ ಗಂಡ ಕಾಂತು ಪೂಂಜನಿಗೆ ವಿಚ್ಛೇದನ ನೀಡಿ ಕನ್ಯಾಶುಲ್ಕವನ್ನು ಮರಳಿಸುತ್ತಾಳೆ. ಹೆಣ್ಣು ತನಗಿಷ್ಟ ವಿಲ್ಲದ ದುಷ್ಟ ಗಂಡನೊಂದಿಗೆ ಕಷ್ಟದ ಬದುಕನ್ನು ಸಾಗಿಸುವುದನ್ನು ಬಿಟ್ಟು ತನಗಿಷ್ಟವಾದ ಗಂಡಿನೊಂದಿಗೆ ಮರು ಮದುವೆಯಾಗಬೇಕು ಎನ್ನುವ ದಿಟ್ಟ ನುಡಿಗಳನ್ನಾಡಿ ಗಂಡನ ಮನೆಯನ್ನು ತೊರೆಯುತ್ತಾಳೆ. ತಾನು ಆಡಿದ ಮಾತಿನಂತೆ ಕೊಟ್ರಪಾಡಿಯ ಕೊಡ್ಸರಾಳ್ವನನ್ನು ಮರುಮದುವೆಯಾಗುತ್ತಾಳೆ. ಕೊಡ್ಸರಾಳ್ವನ ಹೆಂಡತಿ ಸಾಮು ಆಳ್ವೆದಿ ತನ್ನ ಗಂಡ ಮರು ಮದುವೆಯಾಗುವುದನ್ನು ಪ್ರತಿಭಟಿಸಿದಳಾದರೂ ಸಿರಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾಳೆ. ಹೀಗೆ ಸಿರಿ ತನ್ನನ್ನು ಅವಮಾನಿಸಿದ ಹಾಗೂ ಶೋಷಿಸಿದ ಸಮಾಜಕ್ಕೆ ಬೆನ್ನು ತೋರಿಸದೆ ಧೈರ್ಯದಿಂದ ಮುಖ ಮಾಡಿ ನಿಲ್ಲುತ್ತಾಳೆ. ಅಷ್ಟೆ ಅಲ್ಲದೆ ಹೆಣ್ಣಿನ ಶೋಷಣೆಯ ವಿರುದ್ದ ಎಚ್ಚರಿಕೆಯನ್ನು ನೀಡುತ್ತಾಳೆ. ಹೆಣ್ಣು ಹಾಗೂ ಮಣ್ಣನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತ ಗಂಡ ತಾನು ಯಜಮಾನನಾಗಿ ಸ್ಥಾಪಿಸುವ ಯಜಮಾನಿಕೆಯ ಹಿಂದೆ ಅಧಿಕಾರ ಹಾಗೂ ಸವಲತ್ತುಗಳ ಪ್ರಶ್ನೆಯೇ ಪ್ರಮುಖವಾಗಿರುತ್ತದೆ ಎನ್ನುವುದನ್ನು ಸಿರಿ ಪಾಡ್ದನ ಪ್ರತಿಪಾದಿಸುತ್ತದೆ. ಇದನ್ನು ಪ್ರತಿಭಟಿಸುತ್ತಲೇ ಸಿರಿ ಹೆಣ್ಣಿನ ಧ್ವನಿಯನ್ನು ಗಟ್ಟಿಗೊಳಿಸುತ್ತಾ ಸಾಗುತ್ತಾಳೆ.

ಭೂಮಿಯ ಅಧಿಕಾರವನ್ನು ಪಡೆಯುವ ಸಿರಿಯ ಪ್ರಯತ್ನವೇ ಸಿರಿ ಪಠ್ಯದಲ್ಲಿ ಕಂಡುಬರುವ ರಾಜಕೀಯ ಸಂಘರ್ಷ. ಚರಿತ್ರೆಯುದ್ಧಕ್ಕೂ ಭೂಮಿಯ ಮೇಲೆ ಅಧಿಕಾರ ಸ್ಥಾಪಿಸಿರುವ ಗಂಡು ಹೆಣ್ಣನ್ನು ಭೂಮಿತಾಯಿಯನ್ನಾಗಿ ಮಾಡಿ ಹೆಣ್ಣು ಹಾಗೂ ಮಣ್ಣಿನ ರಕ್ಷಣೆ ಗಂಡಿನ ಜವಾಬ್ದಾರಿ ಎನ್ನುವ ಪುರುಷ ಪ್ರಭುತ್ವ ವ್ಯವಸ್ಥೆಯನ್ನು ಹುಟ್ಟುಹಾಕಿದ. ಭೂಮಿಯ ರೀತಿಯಲ್ಲಿಯೇ ಹೆಣ್ಣನ್ನು ಗಂಡಿನ ಅಧಿಕಾರ ವ್ಯಾಪ್ತಿಯೊಳಗೆ ಬರುವ ಆಸ್ತಿಯನ್ನಾಗಿ ನೋಡಲಾಯಿತು. ಹೆಣ್ಣನ್ನು ಫಲವಂತಿಕೆಯ ಸಂಕೇತವಾಗಿಯೂ ನೋಡಲಾ ಯಿತು. ಹೀಗೆ ಗಂಡು ಭೂಮಾಲೀಕನಾದ, ರಾಜನಾದ ಹಾಗೂ ಲೌಕಿಕ ನೆಲೆಯ ಎಲ್ಲಾ ಸವಲತ್ತುಗಳನ್ನು ಅನುಭವಿಸಿದ. ಹೆಣ್ಣಿಗೆ ಅಲೌಕಿಕ ನೆಲೆಯ ಪಟ್ಟ ಕಟ್ಟಲಾಯಿತು. ಹೆಣ್ಣನ್ನು ಭೂಮಿತಾಯಿ, ಮಾತೃದೇವತೆ ಮುಂತಾದ ರೀತಿಯಲ್ಲಿ ದೈವತ್ವಕ್ಕೇರಿಸಲಾಯಿತು. ಹಾಗಾಗಿ ಹೆಣ್ಣು ಗಂಡಿನ ಅಧಿಕಾರ ಗಳಿಸುವ ಪ್ರಕ್ರಿಯೆಯಲ್ಲಿ ಪೂರಕವಾಗಿಯೇ ಕೆಲಸ ನಿರ್ವಹಿಸಬೇಕಾ ಯಿತು. ಹೆಣ್ಣು ವ್ಯವಸ್ಥೆಯ ಭಾಗವಾಗಿ ಗಂಡಿಗೆ ಕೈಜೋಡಿಸಿ ಮರೆಯಲ್ಲಿ ನಿಂತೇ ಪುರುಷ ಪ್ರಭುತ್ವಕ್ಕೆ ಒಪ್ಪಿಗೆ ಸೂಚಿಸುವ ಹಂತಕ್ಕೆ ಇಳಿಯಬೇಕಾಯಿತು. ಚರಿತ್ರೆಯಲ್ಲಿ ಕೆಲವು ರಾಣಿಯರು ಆಳ್ವಿಕೆ ನಡೆಸಿದ ಉಲ್ಲೇಖಗಳು ಕಂಡುಬರುತ್ತವಾದರೂ, ಅದು ಅರಮನೆ ನಿಯಂತ್ರಣದ ಹಾಗೂ ಅರಸು ಮನೆತನದ ಸ್ತ್ರೀಯರಿಗಷ್ಟೆ ಸಂಬಂಧಿಸಿದ ವಿಚಾರವಾಗಿತ್ತು. ಆದರೆ ಗಂಡು ಅಧಿಕಾರ ಅನುಭವಿಸುವುದು ರಾಜನಿಂದ ಸಮಾಜದ ಕೆಳಸ್ತರದಲ್ಲಿರುವ ಗಂಡಿನವರೆಗೂ ಅವರವರ ಅಂತಸ್ತಿಗನುಗುಣವಾಗಿ ನಡೆದೇ ಇತ್ತು. ಸಿರಿಯಂಥ ಅನೇಕ ಮಹಿಳೆಯರು ಅಧಿಕಾರವನ್ನು ಪಡೆಯುವುದಕ್ಕಾಗಿ ಹೋರಾಟ ನಡೆಸಿರಬಹುದು. ಆದರೆ ಚರಿತ್ರೆಯಲ್ಲಿ ಉಲ್ಲೇಖಗಳು ಸಿಗುವುದಿಲ್ಲ. ಚರಿತ್ರೆಯಲ್ಲಿ ರಾಣಿಯರ ಬಗೆಗೆ ಸಿಗುವ ವಿವರಣೆಗಳನ್ನು ಸಾಮಾನ್ಯ ಮಹಿಳೆಯವರೆಗೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಗುರ‍್ಕಾರ್ಥಿ, ಪೆರಿಯಬ್ಬೆ, ಪಟ್ಟದಬ್ಬೆ, ಪಿರಿಯರಸಿ ಮುಂತಾದ ಉಲ್ಲೇಖಗಳು ಹೆಣ್ಣಿನ ಪ್ರಾಧಾನ್ಯತೆಯನ್ನು ತಿಳಿಸುತ್ತವಾದರೂ ಮೇಲೆ ವಿವರಿಸಿದಂತೆ ಅವು ಸೀಮಿತ ವಲಯಗಳಲ್ಲಿ ಅಲ್ಪಅವಧಿಯ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದವು. ಹಾಗಾಗಿ ಹೆಣ್ಣು ರಾಣಿಯಾಗಿ ಗುರುತಿಸಿಕೊಂಡರೂ ರಾಜ್ಯವ್ಯವಸ್ಥೆಯನ್ನು ಹೆಣ್ಣಿಗೆ ಪೂರಕವಾಗುವಂತೆ ಮಾರ್ಪಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಪ್ರಭುತ್ವದ ಚೌಕಟ್ಟು ಗಂಡಿನ ನಿರ್ಮಾಣವಾಗಿತ್ತು. ಹೆಣ್ಣನ್ನು ಅಧೀನಳನ್ನಾಗಿ ಮಾಡುತ್ತಲೇ ಗಂಡು ರಾಜ್ಯ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದ. ಆ ರಾಜ್ಯವನ್ನು ಕಾಪಾಡುವ ದೇವತೆಯಾಗಿ ಹೆಣ್ಣನ್ನು ಅಲೌಕಿಕ ನೆಲೆಯಲ್ಲಿ ನೋಡಿ ಹೆಣ್ಣಿನ ವಿರೋಧವನ್ನೂ ತಪ್ಪಿಸಿಕೊಂಡ. ಇದು ಚರಿತ್ರೆಯಲ್ಲಿ ಕಂಡು ಬರುವ ವಾಸ್ತವವಾದ್ದರಿಂದ ಅದಕ್ಕೊಂದು ಸಾಮಾಜಿಕ ಒಪ್ಪಿಗೆಯೂ ಲಭಿಸಿತು. ಈ ಕಾರಣಕ್ಕಾಗಯೇ ಸಿರಿ ತಾನು ಉತ್ತರಾಧಿಕಾರಿ ಯಾಗಬೇಕೆಂದಾಗ ಕೂಟದ ಕಟ್ಟೆ ಅವಳ ಬೇಡಿಕೆಯನ್ನು ತಿರಸ್ಕರಿಸಿ, ಅಧಿಕಾರ ಯಾವತ್ತೂ ಗಂಡಿನ ಹಕ್ಕು ಎಂಬ ತೀರ್ಮಾನವನ್ನು ನೀಡಿದ್ದು.

ಸಿರಿ ಪಠ್ಯದಲ್ಲಿ ಬರುವ ವಿವರಗಳೆಲ್ಲವೂ ಹೆಚ್ಚಾಗಿ ತುಳುನಾಡಿನ ಭೂಮಾಲೀಕ ಬಂಟ ಸಮುದಾಯಕ್ಕೆ ಸಂಬಂಧಿಸಿದ್ದು. ಭೂಮಾಲೀಕ ಸಮುದಾಯವಾದ್ದರಿಂದ ಸಹಜವಾಗಿಯೇ ಭೂಮಿಗೆ ಸಂಬಂಧಿಸಿದ ಪ್ರಶ್ನೆಗಳು ಅಲ್ಲಿ ಮುಖ್ಯವಾಗಿದ್ದವು. ರಾಜಕೀಯ ಅಧಿಕಾರ ಸಹಜ ವಾಗಿಯೇ ಬಂಟರಿಗೆ ಒಲಿದು ಬಂದಿತ್ತು. ಸಿರಿ ಪಠ್ಯದಲ್ಲಿ ಬರುವ ಎಲ್ಲ ಗುತ್ತು ಮನೆಗಳೂ ಒಂದಷ್ಟು ಪ್ರದೇಶದ ಆಳ್ವಿಕೆಯನ್ನು ನಡೆಸುತ್ತಿದ್ದವು. ಸಿರಿ ತಾನು ಅಧಿಕಾರ ಪಡೆಯಬೇಕೆಂದು ಬಂಡಾಯವೆದ್ದಾಗ ಗುತ್ತು ಮನೆಗಳು ಅದನ್ನು ಮಾನ್ಯ ಮಾಡದೆ ವಿರೋಧಿಸಿದವು. ಹೀಗಾಗಿ ಸಿರಿಯ ನಡವಳಿಗೆ ಗುತ್ತು ಮನೆಯವರಿಗೆ ಇಷ್ಟವಾಗಲಿಲ್ಲ.  ಪಿತೃಪ್ರಧಾನ ವ್ಯವಸ್ಥೆಯನ್ನು ದಿಕ್ಕರಿಸಿ ಮಾತೃಪ್ರಧಾನ ವ್ಯವಸ್ಥೆಗೆ ಕೌಟುಂಬಿಕ ನೆಲೆಯಲ್ಲಿ ಪರಿವರ್ತನೆ ತಂದ ಸಿರಿ ಮತ್ತೊಮ್ಮೆ ವಿರೋಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಮಾತೃವಂಶೀಯತೆಗೆ ಸಿರಿಯೇ ಮೂಲವಲ್ಲದಿದ್ದರೂ ಬಂಟ ಸಮುದಾಯದ ಕುಟುಂಬ ರಾಜಕೀಯ ವಿಚಾರ ಬಂದಾಗ ಸಿರಿಯ ನಿರ್ಧಾರ ಒಂದು ಪ್ರಮುಖ ತಿರುವು. ಅದೇ ರೀತಿ ಮಾತೃವಂಶೀಯತೆಯೂ ಬಂಧುತ್ವ ನೆಲೆಗಿಂತ ಹೆಚ್ಚು ಅಧಿಕಾರದ ನೆಲೆಗೇ ಅಂಟಿಕೊಂಡಿತು. ಸಿರಿಯನ್ನು ಬಂಟರ ಮೂಲಸ್ತ್ರೀ ಎಂಬುದಾಗಿ ಕರೆಯುವುದು ವಾಡಿಕೆ. ಆದರೆ ಬಂಟರು ಸಿರಿಯನ್ನು ತಮ್ಮ ಪ್ರತಿನಿಧಿಯಾಗಿ ಅಥವಾ ಕುಲದೈವವಾಗಿ ಪೂಜಿಸಿಕೊಂಡು ಬರುತ್ತಿರುವುದು ತುಳುನಾಡಿನಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ. ಗುತ್ತು ಮನೆಗಳು ಭೂತಾರಾಧನೆಗೆ ಹೆಚ್ಚಿನ ಮಹತ್ವವನ್ನು ನೀಡಿವೆಯೇ ಹೊರತು ಸಿರಿ ಆರಾಧನೆಗಲ್ಲ. ಎಲ್ಲ ಸಮುದಾಯಗಳೂ ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಮಠ ಹಾಗೂ ಗುರುವಿಗಾಗಿ ಹುಡುಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಸಿರಿಯ ವಿಚಾರ ಬಂದಾಗ ಬಂಟರೇಕೆ ಹಿಂದೇಟು ಹಾಕಿದರು ಎನ್ನುವ ಪ್ರಶ್ನೆಯೂ ಇಲ್ಲಿ ಹುಟ್ಟಿಕೊಳ್ಳುತ್ತದೆ. ಅದೇ ರೀತಿ ಸಿರಿ ಆಚರಣೆಯ ಸಂದರ್ಭದಲ್ಲಿ ಪ್ರತಿಷ್ಠಿತ ಗುತ್ತು ಮನೆಯವರು ಸಿರಿ ಆವೇಶಕ್ಕೆ ಅಥವಾ ಸೂಕೆಗೆ ಒಳಗಾಗದೆ ದೂರವೇ ಉಳಿಯುತ್ತಾರೆ. ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಹಾಗೂ ಕೆಳಜಾತಿಯ ಮಹಿಳೆಯರಿಗೆ ಸಿರಿ ಬರುವುದು ಸಾಮಾನ್ಯ. ಇಲ್ಲಿರುವ ಪ್ರಶ್ನೆಯೆಂದರೆ ಸಿರಿಯ ಸೂಕೆ ಬರದಂತೆ ಗುತ್ತು ಮನೆಯವರು ಎಚ್ಚರಿಕೆ ವಹಿಸುವುದು ಯಾಕೆ ಎನ್ನುವುದು. ಇನ್ನು ಆಚರಣೆಯ ಸಂದರ್ಭದಲ್ಲಿ ಮಹಿಳೆಯರು ಜಾತಿಗನುಗುಣವಾಗಿ ಬೇರೆ ಬೇರೆ ಜಾಗಗಳಲ್ಲಿಯೇ ಸೇರುತ್ತಾರೆ. ಸಿರಿ ಬಂಟ ಜಾತಿಗೆ ಸೇರಿದ್ದರೂ ಅವಳ ಆಚರಣೆ ಸಂದರ್ಭದಲ್ಲಿ ಎಲ್ಲ ಜಾತಿಯವರೂ ಸೇರುತ್ತಾರೆ. ಹೀಗಾಗಿ ಸಿರಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ನೋಡಲು ಸಾಧ್ಯವಾಗುವುದಿಲ್ಲ. ಸಿರಿಯ ಹೋರಾಟದ ಲಾಭವನ್ನು ಬಂಟ ಜನಾಂಗ ಪಡೆದುಕೊಂಡಿದ್ದಂತೂ ನಿಜ. ಮಾತೃವಂಶೀಯತೆಯಿಂದಾಗಿ ಭೂಸಂಬಂಧಗಳಲ್ಲಿ ವ್ಯಾಪಕ ಬದಲಾವಣೆಗಳಾದವು.

ವಿಜಯನಗರೋತ್ತರ ಸಂದರ್ಭದ ತುಳುನಾಡು ಜೈನ ಅರಸುಮನೆತನಗಳ ಆಳ್ವಿಕೆಗೆ ಒಳಪಟ್ಟಾಗ ಗುತ್ತು ಮನೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಅಂಥ ಸಂದರ್ಭಗಳಲ್ಲಿ ಗುತ್ತಿನ ಆಡಳಿತಕ್ಕಾಗಿ ಸಂಘರ್ಷಗಳು ನಡೆಯುತ್ತಿದ್ದವು. ಗುತ್ತು ಕುಟುಂಬದ ನೆಲೆಯಿಂದ ರೂಪುಗೊಂಡ ಆಡಳಿತ ಘಟಕವಾದ್ದರಿಂದ ಮಾತೃವಂಶೀಯತೆಯ ಪ್ರಭಾವ ದಟ್ಟವಾಗಿತ್ತು. ಆದರೆ ಭೂ ಸುಧಾರಣೆ ಜಾರಿಗೆ ಬಂದು ಗುತ್ತು ಮನೆಗಳು ತಮ್ಮ ಹಿಂದಿನ ವರ್ಚಸ್ಸನ್ನು ಕಳೆದುಕೊಂಡಾಗ ಸಹಜವಾಗಿಯೇ ಗುತ್ತಿಗೆ ಸಂಬಂಧಿಸಿದ ಆಚರಣೆಗಳು ಮಂಕಾಗತೊಡಗಿದವು. ಭೂಮಿ ತನ್ನ ಮಹತ್ವವನ್ನು ಕಳೆದುಕೊಂಡು ಬಂಡವಾಳ ಹಾಗೂ ನಗರ ಜೀವನ ಪ್ರಧಾನವಾಗಿ ಕಾಣಿಸತೊಡಗಿದಾಗ ಹಿಂದೆ ಇದ್ದ ಆಚರಣೆ ಹಾಗೂ ನಂಬಿಕೆಗಳು ಸಾಂಕೇತಿಕವಾಗತೊಡಗಿದವು. ಆದರೆ ತುಳುನಾಡಿನಿಂದ ವಲಸೆ ಹೋದ ಜನವರ್ಗ ಉದ್ಯೋಗ, ಉದ್ದಿಮೆಗಳಿಂದ ಶ್ರೀಮಂತರಾಗಿ ಮತ್ತೆ ಹಳೆಯ ದೇವಾಲಯ, ಭೂತಾಲಯಗಳನ್ನು ಜೀರ್ಣೋದ್ಧಾರ ಮಾಡುವ ಕಾರ್ಯಕ್ಕೆ ಇಳಿದಾಗ ತುಳುನಾಡಿನ ದೈವಗಳು ಮತ್ತೊಮ್ಮೆ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಭೂಮಿಯನ್ನು ಕಳೆದುಕೊಂಡರೂ ಭೂತಾರಾಧನೆಯ ಮೂಲಕ ಗುತ್ತು ತನ್ನ ಹಿಂದಿನ ವೈಭವವನ್ನು ಮರುಕಳಿಸುವ ಪ್ರಯತ್ನವನ್ನು ಮಾಡುತ್ತಿರುವುದನ್ನು ಇಂದಿನ ತುಳುನಾಡಿನಲ್ಲಿ ಕಾಣಬಹುದಾಗಿದೆ. ಇವೆಲ್ಲವೂ ಸಾಂಸ್ಕೃತಿಕ ರಾಜಕೀಯದ ಭಾಗವಾಗಿದ್ದು ಅಧಿಕಾರ ಹಾಗೂ ಸವಲತ್ತುಗಳಿಂದ ನಿರ್ದೇಶಿಸಲ್ಪಟ್ಟಿದೆ. ಹೀಗೆ ಬಂಟ ಜನಾಂಗ ಮತ್ತೊಮ್ಮೆ ತನ್ನ ಹಿಂದಿನ ಊಳಿಗಮಾನ್ಯ ಬದುಕನ್ನು ಬಂಡವಾಳದ ಮೂಲಕ ಪುನರ್ ಅಭಿನಯಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಪ್ರಯತ್ನದಲ್ಲಿ ಭೂತಾರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಅದರಲ್ಲೂ ಕುಟುಂಬದ ದೈವಗಳು ಹೆಚ್ಚಿನ ಆರಾಧನೆಗೊಳ್ಳುತ್ತಿವೆ. ಇದು ಬಂಟ ಜನಾಂಗದ ಅಸ್ತಿತ್ವದ ಪ್ರಶ್ನೆಯಾಗಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಭೂತಾರಾಧನೆಯ ಮೂಲಕ ಚದುರಿ ಹೋದ ಕುಟುಂಬಸ್ಥರನ್ನು ಒಂದೆಡೆಗೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಸಿರಿ ಬಂಟರಿಗೆ ಪ್ರಮುಖ ದೈವವಾಗಿ ಕಾಣಬೇಕಾಗಿತ್ತು. ಆದರೆ ತುಳು ನಾಡಿನ ಎಷ್ಟೋ ಬಂಟರಿಗೆ ಸಿರಿಯ ಬಗೆಗೆ ಹೆಚ್ಚಿನ ಮಾಹಿತಿಯೂ ಇಲ್ಲ ಹಾಗೂ ಸಿರಿ ಆಚರಣೆಗಳಲ್ಲಿ ಭಾಗವಹಿಸುವುದೂ ಇಲ್ಲ. ಆದರೂ ಸಿರಿಯನ್ನು ಬಂಟರ ಮೂಲಸ್ತ್ರೀ ಎಂಬುದಾಗಿ ಕರೆಯಲಾಗುತ್ತಿದೆ. ಊಳಿಗಮಾನ್ಯತೆ ಹಾಗೂ ಮಾತೃವಂಶೀಯತೆಯ ವಿಚಾರ ಬಂದಾಗ ಸಿರಿ ತುಳುನಾಡಿನ ಹೆಣ್ಣಾಗಿ ಕಂಡು ಬರುತ್ತಾಳೆಯೇ ಹೊರತು ಯಾವುದೋ ಒಂದು ಜಾತಿಗೆ ಸೇರಿದ ಹೆಣ್ಣಾಗಿ ಅಲ್ಲ. ಸಿರಿ ಪಠ್ಯ ಸಾರುವ ಸಂದೇಶ ಸಾರ್ವತ್ರಿಕವಾದುದು. ರಾಜ್ಯವನ್ನು ಆಳುವ ಹಕ್ಕು, ಅಧಿಕಾರವನ್ನು ಪಡೆಯುವ ಹಕ್ಕು ಹಾಗೂ ಸ್ವತಂತ್ರವಾಗಿ ಜೀವಿಸುವ ಹಕ್ಕು ಹೆಣ್ಣಿಗಿದೆ ಎನ್ನುವುದೇ ಸಿರಿ ಪಠ್ಯದ ಮೂಲ ಆಶಯ. ಹೀಗಾಗಿ ಸಿರಿ ಪಠ್ಯವನ್ನು ವಿಶಾಲಾರ್ಥದಲ್ಲಿ ಅರ್ಥೈಸಿ ಅದರ ಸಂಘರ್ಷದ ನೆಲೆಗಳನ್ನು ವಿಶ್ಲೇಷಿಸಬೇಕಾಗುತ್ತದೆ.

ತುಳುನಾಡಿನಲ್ಲಿ ಸಿರಿಯ ಆರಾಧನೆ ಒಂದು ಧಾರ್ಮಿಕ ಆಚರಣೆಯಾಗಿ ಉಳಿದಿದೆಯೇ ಹೊರತು ಸಾಮಾಜಿಕ ಸಂಬಂಧಗಳ ಪ್ರಶ್ನೆಯಾಗಿ ಉಳಿದಿಲ್ಲ. ಇದು ತುಳುನಾಡಿನ ಎಲ್ಲ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಪ್ರಶ್ನೆಯೂ ಆಗಿದೆ. ಶ್ರೀಮಂತ ವರ್ಗಗಳು ತಮ್ಮ ಅಂತಸ್ತಿಗೆ ಸರಿಹೊಂದುವಂತೆ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದು, ಇದೊಂದು ಸಾಮಾಜಿಕ ಪ್ರತಿಷ್ಠೆ ಹಾಗೂ ಗೌರವದ ಸಂಗತಿಯಾಗಿದೆ. ಆರಾಧನೆಯ ಸಂದರ್ಭದಲ್ಲಿ ನಡೆಯುವ ನ್ಯಾಯ ತೀರ್ಮಾನಗಳು ಧಾರ್ಮಿಕ ಚೌಕಟ್ಟಿನಲ್ಲಿದ್ದು, ಅದರ ಮೂಲಕ ತಮಗೆ ಬೇಕಾದ ನ್ಯಾಯವನ್ನು ಬಲಿಷ್ಠ ಜಾತಿಗಳು ಪಡೆದುಕೊಳ್ಳುತ್ತವೆ. ಇನ್ನುಳಿದಂತೆ ಸಾಮಾಜಿಕ ಅಸಮಾನತೆ ಆರಾಧನೆಯಲ್ಲೂ ಯಥಾಪ್ರಕಾರ ಮುಂದುವರಿಯುತ್ತದೆ. ಆರಾಧನೆಗಳು ಉತ್ಸವದ ರೀತಿಯಲ್ಲಿ ನಡೆಯುವುದರಿಂದಾಗಿ ಅವು ಅದರಲ್ಲಿ ಪಾಲ್ಗೊಳ್ಳುವವರನ್ನು ಅಲೌಕಿಕತೆಗೆ ಕೊಂಡೊಯ್ಯುತ್ತವೆ. ಲೌಕಿಕ ಜಗತ್ತಿನ ಬದುಕಿನ ಪ್ರಶ್ನೆಗಳು ಅಲ್ಲಿ ಚರ್ಚೆಗೊಂಡು ವಾಸ್ತವ ಬದುಕನ್ನು ಅಣಕಿಸುತ್ತಿರುತ್ತೆ. ಹೀಗೆ ಪಾಡ್ದನಗಳ ಆಶಯಗಳು ಅತಿರಂಜಿತವಾಗಿ, ಉತ್ಸವಗಳ ರೂಪದಲ್ಲಿ ಧಾರ್ಮಿಕ ಚೌಕಟ್ಟಿನೊಳಗೆ ಸಿಕ್ಕಿಹಾಕಿಕೊಂಡವು. ಈ ಕಾರಣದಿಂದಾಗಿ ಪಾಡ್ದನಗಳು ಜೀವಂತ ವಸ್ತುವನ್ನು ಒಳಗೊಂಡಿದ್ದರೂ ಅವು ಸಮಾಜಕ್ಕೆ ಮುಖಾಮುಖಿಯಾಗುವಲ್ಲಿ ಸೋಲಬೇಕಾಯಿತು. ಹಾಗೂ ಆರಾಧನೆಗಷ್ಟೆ ಸೀಮಿತಗೊಳ್ಳಬೇಕಾಯಿತು. ವಿದ್ವಾಂಸರ ವಲಯಗಳಲ್ಲಿ ಮೌಖಿಕ ಚರಿತ್ರೆ ಹಾಗೂ ಜಾನಪದ ಅಧ್ಯಯನ ಗಳಲ್ಲಿ ಈ ಮೌಖಿಕ ಕಥನಗಳು ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ. ಇಲ್ಲಿ ಆಯಾ ವಿದ್ವಾಂಸರ ದೃಷ್ಟಿಕೋನಕ್ಕನುಗುಣವಾಗಿ ಇವು ಬಳಕೆಯಾಗುತ್ತಿವೆ. ಚರಿತ್ರೆಕಾರರು ಮೌಖಿಕ ಚರಿತ್ರೆಯ ನೆಲೆಯಲ್ಲಿ ನೋಡಿದರೆ ಜಾನಪದ ವಿದ್ವಾಂಸರು ಮೌಖಿಕ ಕಾವ್ಯಗಳ ನೆಲೆಯಲ್ಲಿ ಹಾಗೂ ಅಲ್ಲಿನ ನಂಬಿಕೆ, ಆಚರಣೆ ಹಾಗೂ ಸಂಪ್ರದಾಯಗಳ ನೆಲೆಯಲ್ಲಿ ನೋಡಿ ಅಧ್ಯಯನ ನಡೆಸಿದ್ದಾರೆ. ಅದೇ ರೀತಿ ಸಿರಿಯಂಥ ಪಾಡ್ದನ ಸ್ತ್ರೀವಾದಿ ಚರ್ಚೆಗೆ ಹೆಚ್ಚಾಗಿ ಬಳಕೆಯಾಗಿದೆ.

ಹೀಗೆ ಸಿರಿ ಪಠ್ಯವು ಮುಖ್ಯವಾಗಿ ಮೂರು ನೆಲೆಗಳಲ್ಲಿ ಚರ್ಚೆಗೊಳಗಾಗಿದೆ. ಅವುಗಳೆಂದರೆ ಪ್ರಾದೇಶಿಕ ನೆಲೆ, ಜಾತಿ / ಸಮುದಾಯದ ನೆಲೆ ಹಾಗೂ ವಿದ್ವಾಂಸರ ಸೈದ್ಧಾಂತಿಕ ನೆಲೆ. ಈ ಮೂರು ನೆಲೆಗಳಲ್ಲಿ ಸಿರಿ ಪಠ್ಯವನ್ನು ನೋಡುವ ಪ್ರಯತ್ನವನ್ನು ಲೇಖನದುದ್ದಕ್ಕೂ ಮಾಡಲಾಗಿದೆ. ಸ್ವತಂತ್ರ ಬದುಕು ಹಾಗೂ ಅಧಿಕಾರಕ್ಕಾಗಿ ಹೋರಾಡಿದ ಸಿರಿ ಇಂದು ಅದೇ ಬಗೆಯ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಜನವರ್ಗಗಳಿಗೆ, ಅದರಲ್ಲೂ ಸಮಾಜದ ಕೆಳಸ್ತರದ ವರ್ಗಗಳಿಗೆ, ಮಾದರಿಯಾಗಿದ್ದಾಳೆ. ಇಲ್ಲಿ ಕೆಳಸ್ತರವೆಂದರೆ ಆರ್ಥಿಕವಾಗಿ ಹಿಂದುಳಿದ, ಅಧಿಕಾರದಿಂದ ವಂಚಿತವಾದ ಹಾಗೂ ರಾಜ್ಯ ಧರ್ಮ ಪುರುಷ ಪ್ರಭುತ್ವಗಳ ಶೋಷಣೆಗೆ ಒಳಗಾದ ಸಮುದಾಯಗಳು ಎಂದರ್ಥ. ಇಲ್ಲಿ ಕಂಡುಬರುವುದು ಸಂಘರ್ಷ ಗಳಾದರೆ, ಶ್ರೀಮಂತ ವರ್ಗಗಳು ಸಿರಿ ಪಠ್ಯವನ್ನು ಬಳಸುವುದರಲ್ಲಿ ಹೊಂದಾಣಿಕೆ ಹಾಗೂ ಒಪ್ಪಂದಗಳು ಕಂಡುಬರುತ್ತವೆ. ಸಿರಿ ಪಠ್ಯವನ್ನು ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸುತ್ತಾ ಹೋದಂತೆಲ್ಲಾ ಅದರೊಳಗಿನ ಸಂಘರ್ಷದ, ಹೊಂದಾಣಿಕೆಯ ಹಾಗೂ ಕುಟುಂಬ ಮೂಲದ ರಾಜ್ಯ ವ್ಯವಸ್ಥೆಯ ವಿಚಾರಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಸಿರಿ ಪಠ್ಯ ನಮ್ಮ ಸಂದರ್ಭಕ್ಕೆ ಮುಖಾಮುಖಿಯಾಗುತ್ತಿರುವುದು ಈ ಹಿನ್ನೆಲೆಯಲ್ಲಿಯೆ. ಸಿರಿ ಪಠ್ಯ ಹುಟ್ಟಿ ಕೊಂಡಿರುವ ಸಾಮಾಜಿಕ ಸಂದರ್ಭ ಹಾಗೂ ನಮ್ಮ ಕಾಲದ ಸಾಮಾಜಿಕ ಸಂದರ್ಭಗಳೆರಡನ್ನು ವಸ್ತುನಿಷ್ಠವಾಗಿ ನೋಡಿ, ಆ ಮೂಲಕ ಪಠ್ಯಕ್ಕೆ ಮುಖಾಮುಖಿಯಾದಾಗ ಮಾತ್ರ ಈ ಪಠ್ಯದ ಬಹುತ್ವದ ನೆಲೆಗಳನ್ನು ಗುರುತಿಸಲು ಸಾಧ್ಯ.

ಪರಾಮರ್ಶನ ಗ್ರಂಥಗಳು

೧. ವಿವೇಕ ರೈ. ಬಿ.ಎ, ತುಳು ಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೮೫

೨. ಪೀಟರ್ ಜೆ. ಕ್ಲಾಸ್ ( ಕನ್ನಡಕ್ಕೆ ನಾವಡ ಎ.ವಿ. ಸುಭಾಶ್ಚಂದ್ರ), ತುಳುವ ದರ್ಶನ, ಪ್ರಾದೇಶಿಕ ವ್ಯಾಸಂಗ, ಕುಂದಾಪುರ ೧೯೮೭.

೩. ಗುರುರಾಜ ಭಟ್ .ಪಿ, ಸ್ಟಡೀಸ್ ಇನ್ ತುಳುವ ಹಿಸ್ಟರಿ ಎಂಡ್ ಕಲ್ಚರ್, ಕಲ್ಯಾಣಪುರ ೧೯೭೫

೪. ಸಾಲೆತೂರ್ ಬಿ.ಎ, ಏನ್‌ಶ್ಯಂಟ್ ಕರ್ನಾಟಕ : ಹಿಸ್ಚರ್ ಆಫ್ ತುಳುವ, ಓರಿಯಂಟ್ ಬುಕ್ ಏಜೆನ್ಸಿ, ಪೂನಾ ೧೯೩೬

೫. ಮೋಹನ್ ಕೃಷ್ಣರೈ .ಕೆ, ತುಳು ಸಂಸ್ಕೃತಿ : ಚತುರ್ಮುಖಿ ಅಧ್ಯಯನ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೯

೬. ಅಮೃತ ಸೋಮೇಶ್ವರ, ತುಳು ಪಾಡ್ದನ ಸಂಪುಟ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೭

೭. ಚಿನ್ನಪ್ಪಗೌಡ .ಕೆ, ಸಂಸ್ಕೃತಿ ಸಿರಿ, ಮದಿಪು ಪ್ರಕಾಶನ, ಕೊಣಾಚೆ ೨೦೦೩

೮. ಗಾಯತ್ರಿ ನಾವಡ, ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ : ಸಿರಿ ಪ್ರಕಾಶನ, ಹೊಸಪೇಟೆ ೧೯೯೯

೯. ಪುರುಷೋತ್ತಮ ಬಿಳಿಮಲೆ, ನಾವಡ ಎ.ವಿ, ರಾಮಚಂದ್ರ ಉಚ್ಚಿಲ (ಸಂ), ಸಿರಿ, ಶ್ರೀ ಅಮೃತ ಸೋಮೇಶ್ವರ ಅಭಿನಂದನ ಸಂಪುಟ, ಉಚ್ಚಿಲ, ೧೯೯೫.

೧೦. ಹರ್ಮನ್ ಕುಲ್ಕೆ (ಸಂ) ದಿ ಸ್ಟೇಟ್ ಇನ್ ಇಂಡಿಯಾ ( ೧೦೦೦ – ೧೭೦೦), ಆಕ್ಸ್‌ಫರ್ಢ್ ಯುನಿವರ್ಸಿಟಿ ಪ್ರೆಸ್, ಡೆಲ್ಲಿ, ೧೯೯೫.

೧೧. ವಾನ್‌ಸಿನಾ ಜೇನ್, ಓರಲ್ ಟ್ರೆಡಿಶನ್ ಆಸ್ ಹಿಸ್ಟರಿ, ದಿ ಯುನಿವರ್ಸಿಟಿ ಆಫ್ ವಿಸ್ಕಾನ್ ಸಿನ್ ಪ್ರೆಸ್, ೧೯೮೭.