ತುಳುನಾಡಿನ ಜನಪದ ಕಾವ್ಯಗಳ, ಅದರಲ್ಲೂ ದೈವ ಕಥನಗಳ ಸಂಗ್ರಹದ ಇತಿಹಾಸ ೧೮೭೫ರಷ್ಟು ಹಿಂದಕ್ಕೆ ಹೋಗುತ್ತದೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ಪಾದದಲ್ಲಿ ರೆ. ಎ. ಮೇನರ್, ಎ. ಸಿ. ಬರ್ನೆಲ್, ಆರ್.ಸಿ.ಟೆಂಪಲ್, ಡಾ.ಮೊಗ್ಲಿಂಗ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ತುಳು ಜಾನಪದ ಸಂಗ್ರಹ, ಅಧ್ಯಯನಗಳನ್ನು ಕೈಕೊಂಡಿದ್ದರು. ಎ. ಮೇನರ್ ಅವರ ‘ಪಾಡ್ದನೊಳು’ಎಂಬ ಸಂಗ್ರಹದಲ್ಲೂ (೧೮೮೬), ಎ.ಸಿ.ಬರ್ನೆಲ್ ಅವರ The Devil Worship of the Tuluvas (Indian Antiquary 1894 – 97) ಎಂಬ ಸಂಕಲನದಲ್ಲೂ ಹಲವು ದೈವಗಳ ಪಾಡ್ದನಗಳು ಪ್ರಕಟವಾಗಿವೆ. ಆದರೆ ತುಳುನಾಡಿನ ಮುಖ್ಯ ದೈವಕಥೆನಗಳಲ್ಲೊಂದಾದ ‘ಸಿರಿಸಂಧಿ’ ಈ ಸಂಗ್ರಹಗಳಲ್ಲಿ ಕಂಡುಬರುವುದಿಲ್ಲ. ‘ದಕ್ಷಿಣ ಕನ್ನಡದ ಪ್ರಾಚೀನ ಇತಿಹಾಸ’ ಗ್ರಂಥಕರ್ತ ಗಣಪತಿ ರಾವ್ ಐಗಳರು ಸಂಗ್ರಹಿಸಿ ಪ್ರಕಟಿಸಿದ ಪಾಡ್ದನಗಳ ಮಾಲಿಕೆಯಲ್ಲಿ ‘ಸಿರಿಸಂಧಿ’ ಸೇರಿದಂತಿಲ್ಲ. ಡಾ. ಭಾಸ್ಕರ ಆನಂದ ಸಾಲೆತ್ತೆನರ್  Ancient Karnataka Vol.1 – History of Tuluva ಗ್ರಂಥದಲ್ಲಿ ಕೋಟಿ  ಚೆನ್ನಯ ಮೊದಲಾದ ಹಲವು ಪಾಡ್ದನಗಳ ವಿಶ್ಲೇಷಣೆ ಇದ್ದರೂ ‘ಸಿರಿಸಂಧಿಯ’  ಕುರಿತು ಅದೇಕೊ ಪ್ರಸ್ತಾಪವಿಲ್ಲ.

೧೯೫೨ರಲ್ಲಿ ಎನ್. ಎ. ಶೀನಪ್ಪ ಹೆಗ್ಡೆಯವರು ಮೊದಲಾಗಿ ‘ಸತ್ಯನಾಪುರದ ಅಕ್ಕರಸು ಪೂಂಜೆದಿ’ ಎಂಬ ಹೆಸರಲ್ಲಿ ಸಿರಿಯ ಕಥೆಯನ್ನು ಕನ್ನಡದಲ್ಲಿ ಬರೆದರು. ೧೯೫೪ರಲ್ಲಿ ಪ್ರಕಟವಾದ ‘ಪ್ರಾಚೀನ ತುಳುನಾಡು’ ಎಂಬ ಪುಸ್ತಕದಲ್ಲಿ ಇದೇ ಕಥೆ ಕೊಂಚ ವ್ಯತ್ಯಾಸ ದೊಂದಿಗೆ ಪ್ರಕಟವಾಯಿತು. ಸಿರಿ ಕಥಾನಕದ ಕುರಿತು ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಅಧ್ಯಯನ, ಸಂಶೋಧನೆ ನಡೆದಿದ್ದು, ತುಳುನಾಡಿನ ವಿದ್ವಾಂಸರಲ್ಲದೆ, ವಿದೇಶಿಯ ವಿದ್ವಾಂಸ ರಾದ ಪೀಟರ್ ಕ್ಲಾಸ್, ಲೌರಿ ಹಾಂಕೋ ಮೊದಲಾದವರು ಅಧ್ಯಯನದಲ್ಲಿ ಆಸಕ್ತಿಯಿಂದ ಪಾಲುಗೊಂಡು ತುಂಬ ಬೆಲೆಯುಳ್ಳ ಕೊಡುಗೆಗಳನ್ನು ನೀಡಿದ್ದಾರೆ. ತುಳುನಾಡಿನ ವಿದ್ವಾಂಸ ರಾದ ಪ್ರೊ. ಬಿ. ಎ. ವಿವೇಕ ರೈ. ಡಾ. ಪದ್ಮನಾಭ ಉಪಾಧ್ಯಾಯ, ಡಾ. ಸುಶೀಲಾ ಉಪಾಧ್ಯಾಯ, ಪ್ರೊ. ಎ. ವಿ. ನಾವಡ, ಡಾ. ಗಾಯತ್ರಿ ನಾವಡ, ಡಾ. ಕೆ. ಚಿನ್ನಪ್ಪ ಗೌಡ, ಡಾ. ವಾಮನ ನಂದಾವರ, ಡಾ. ಬಿ. ದಾಮೋದರ ರಾವ್, ಅಮೃತ ಸೋಮೇಶ್ವರ ಮೊದಲಾದವರು ಕೆಲವೊಂದು ಅಧ್ಯಯನಾತ್ಮಕ ಬರಹಗಳನ್ನು ಪ್ರಕಟಿಸಿದ್ದಾರೆ.

ತುಳುನಾಡಿನ ಜನಪದ ವಾಙ್ಮಯ ರಾಶಿಯಲ್ಲಿ ‘ಸಿರಿಸಂಧಿ’ ಹಾಗೂ ‘ಬಂಟರ ಸಂಧಿ’ ಎಂದು ಖ್ಯಾತಿಗೊಂಡ ಕೋಟಿ ಚೆನ್ನಯರ ಸಂಧಿ – ಇವೆರಡು ಕಥಾನಕಗಳು ತಮ್ಮ ಸುದೀರ್ಘತೆ, ಕಥಾ ಕುತೂಹಲತೆ, ವಿಷಯ ಸಂಕೀರ್ಣತೆ, ಬಹುಪಾತ್ರಭೂಯಿಷ್ಠತೆ, ದುರಂತ ದಾರುಣತೆಗಳಿಂದ ಜನಮಾನಸದಲ್ಲಿ ಪ್ರತ್ಯೇಕ ಸ್ಥಾನ ಪಡೆದಿವೆ. ಇವುಗಳು ಜನಪದ ಮಹಾಕಾವ್ಯಗಳಾಗಿ ಈಗಾಗಲೇ ಪರಿಗಣಿಸಲ್ಪಟ್ಟಿವೆ. ಈ ಎರಡೂ ಕಥಾನಕಗಳಿಗೆ ಸಾಹಿತ್ಯ ವಲಯದಲ್ಲೂ ರಂಗಭೂಮಿಯ ವಲಯದಲ್ಲೂ ಸಾಕಷ್ಟು ಪ್ರಾಶಸ್ತ್ಯ ಲಭ್ಯವಾಗಿದೆ. ಗದ್ಯಕತೆ, ನಾಟಕ, ರೂಪಕ, ಯಕ್ಷಗಾನ, ಚಲನಚಿತ್ರ ಇತ್ಯಾದಿ ಸೃಜನಶೀಲ ಪ್ರಯೋಗಗಳಿಗೆ ವಸ್ತುಗಳಾಗಿಯೂ, ಸಂಶೋಧನೆ, ವಿಮರ್ಶೆ, ಭಾಷಣ, ವಿಚಾರಗೋಷ್ಠಿಗಳಿಗೆ ಆಕರಸಾಮಗ್ರಿ ಗಳಾಗಿಯೂ ಈ ದೈವಕಥನಗಳು ಒದಗಿ ಬಂದಿವೆ. ಈಚೆಗಿನ ವರ್ಷಗಳಲ್ಲಿ ಜಾನಪದ ಅಧ್ಯಯನ ಕ್ಷೇತ್ರ ಸಾಕಷ್ಟು ವಿಸ್ತಾರಗೊಳ್ಳುತ್ತಿರುವುದರಿಂದ ಈ ಎರಡೂ ಜನಪ್ರಿಯ ಸಂಧಿಗಳ ಬಗೆಗೆ ವಿವಿಧ ಮಟ್ಟದ ಅಧ್ಯಯನ ನಡೆಯುತ್ತ ಬಂದಿದೆ. ಪ್ರೊ. ಲೌರಿ ಹಾಂಕೋ, ಪ್ರೊ. ಬಿ. ಎ. ವಿವೇಕ ರೈ ಹಾಗೂ ಪ್ರೊ. ಚಿನ್ನಪ್ಪ ಗೌಡ ಇವರ ಅಧ್ಯಯನ ಸಾಹಸದ ಫಲವಾಗಿ ‘ಸಿರಿಸಂಧಿಯ’ ಬೃಹತ್ ಪಠ್ಯವು ಇಂಗ್ಲಿಷಿಗೆ ಭಾಷಾಂತರಗೊಂಡು ವ್ಯಾಖ್ಯಾನ ವಿಮರ್ಶೆಗಳೊಂದಿಗೆ ಪ್ರಕಟವಾಗಿ ಸಿರಿಕಥನಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಲಭ್ಯವಾಗಿದೆ.

ನಾಲ್ಕು ತಲೆಮಾರುಗಳ ವಿಶಿಷ್ಟ ಚಿತ್ರಣಗಳನ್ನೊಳಗೊಂಡ ‘ಸಿರಿಸಂಧಿ’, ಸಾಮೂಹಿಕ ದೈವಾದೇಶ (ಸಿರಿದರ್ಶನ) ಮತಾಚರಣೆಯೊಂದಿಗೆ ಸಂಬಂಧವಿರಿಸಿಕೊಂಡಿದೆ. ಇದು ತುಳು ನಾಡಿನ ಸಾವಿರಾರು  ಮಂದಿಯ ನಾಲಗೆಗಳಲ್ಲಿ ನಲಿಯುತ್ತದೆ. ಈ ಹಾಡುಗಾರರಲ್ಲಿ ಮಹಿಳೆ ಯರೇ ಅಧಿಕ.  ಇವರಲ್ಲಿ ಹೆಚ್ಚಿನವರು ಸಿರಿದೈವಗಳ ಭಕ್ತೆಯರಾಗಿದ್ದು (‘ಸಿರಿಸೂಕೆ’ಯವರು) ಸಿರಿ ಮತಾಚರಣೆಯಲ್ಲಿ ಪಾಲುಗೊಳ್ಳುವವರು. ಸಿರಿ ಅಧ್ಯಯನವು ಸಿರಿಕಥಾನಕವನ್ನು ಮಾತ್ರವಲ್ಲ, ಸಿರಿ ಆರಾಧನಾ ಪ್ರಸ್ಥಾನವನ್ನೂ ಸಹಜವಾಗಿ ಒಳಗೊಳ್ಳಬೇಕಾಗುತ್ತದೆ. ಸಿರಿ ಮತಾಚರಣೆಯಲ್ಲಿ ಸಿರಿ ಕಥನವು ಅನೇಕರ ಮೂಲಕ ಅಂಶಿಕ ಹಾಡುಗಾರಿಕೆಯ ರೂಪ ದಲ್ಲೊ, ಸಂವಾದದ ರೂಪದಲ್ಲೊ, ಪ್ರಯೋಗ, ಪ್ರಸರಣಗೊಳ್ಳುವ ವಿಲಕ್ಷಣ ವಿದ್ಯಮಾನ ವನ್ನು ಗಮನಿಸಬಹುದು.

ಬೇರೆ ಯಾವ ದೈವದ ಉಪಾಸನಾ ಸಂದರ್ಭದಲ್ಲೂ ಇಷ್ಟು ದೊಡ್ಡ ಸಂಖ್ಯೆಯ ಸಾಮೂಹಿಕ ದೈವಾದೇಶ, ವೈವಿಧ್ಯಪೂರ್ಣ ಕಥನಪ್ರಸ್ತುತಿ ಇದ್ದಂತಿಲ್ಲ. (ಮಲೆಯಾಳ ಸಂಪ್ರದಾಯದ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂದರ್ಭದಲ್ಲಿ ಸಾಮೂಹಿಕ ಆವೇಶ ಪದ್ಧತಿ ಇದ್ದರೂ ಇಷ್ಟು ಸಂಖ್ಯೆಯಲ್ಲಿ ಆವೇಶಿತರಿರುವುದಿಲ್ಲ.) ಸಿರಿದರ್ಶನಕ್ಕೆ ಒಳಗಾಗುವವರು ಸಾಮಾನ್ಯವಾಗಿ ವೈದಿಕೇತರ ವರ್ಗಕ್ಕೆ ಸೇರಿದ ಅಷ್ಟೊಂದು ಸುಶಿಕ್ಷಿತರಲ್ಲದ, ಬಡ ಸಮಾಜದವರು ಎಂಬುದು ಗಮನೀಯ.

ಸಿರಿ ಮತಾಚರಣೆಯ ವೇಳೆ ಸಿರಿಬಳಗದಿಂದ ಆವೇಶಗೊಳ್ಳುವವರು ಹೆಚ್ಚು ಕಡಿಮೆ ನಿತ್ಯದ ಉಡುಗೆಯಲ್ಲಿ (ಸಾಧಾರಣವಾಗಿ ಬಿಳಿಯ ಉಡುಪಿನಲ್ಲಿ) ಇರುತ್ತಾರೆಯೇ ಹೊರತು ತುಳುನಾಡಿನ ಇತರ ದೈವಗಳಂತೆ ಸಾಂಪ್ರದಾಯಿಕ ವರ್ಣರಂಜಿತ ವೇಷದಲ್ಲಿರುವುದಿಲ್ಲ. ಇಷ್ಟು ಮಾತ್ರವಲ್ಲ ಸಿರಿಬಳಗವನ್ನು ಭೂತಗಳೆಂದು ಕರೆಯುವ ವಾಡಿಕೆಯೂ ಇಲ್ಲ. ಹಾಗಾಗಿ ಸಿರಿ ಆರಾಧನೆಯನ್ನು  ಒಂದು ಬಗೆಯ ಪರಿಷ್ಕೃತ ‘ಕುಲೆ ಆರಾಧನೆ’ (ಶುದ್ದೀಕೃತ ಪ್ರೇತಾತ್ಮಗಳ ಆರಾಧನೆ) ಎಂದರೂ ತಪ್ಪಿಲ್ಲವೆನಿಸುತ್ತದೆ. ಪ್ರೇತಾತ್ಮಪೂಜೆ ಎಂಬುದು ಅನೇಕ ಭೂತಗಳ ವಿಕಾಸಪಥದಲ್ಲಿ ತೋರಿಬರುವ ಒಂದು ವಿಶಿಷ್ಟ ಸಂಗತಿ.

ಆಲಡೆಯೆಂಬ ದೈವಸಂಕೀರ್ಣಗಳಲ್ಲಿ ನಡೆಯುವ ಸಿರಿ ಆರಾಧನೆಯ ವೇಳೆ ಸಿರಿಕಥನ ಎಳೆಎಳೆಯಾಗಿ ರೂಪುಗೊಂಡು ವಿಸ್ತೃತವಾಗುತ್ತಾ ಹೋಗುತ್ತದೆ. ಸಂಧಿಯ ಹಲವು ಸನ್ನಿವೇಶ ಗಳು ಮತಾಚರಣೆಯ ವೇಳೆ ನಾಟಕೀಯವಾಗಿ ಪುನರ್ ಅಭಿನೀತವಾಗುತ್ತವೆ. ಹೀಗಾಗಿ ಇದೊಂದು ಚಲನಶೀಲ ಜೀವಂತ ಜಾನಪದ ಎನ್ನಬಹುದು. ಜಾನಪದ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, ಸಾಂಸ್ಕೃತಿಕ ಮನಃಶಾಸ್ತ್ರ ಇತ್ಯಾದಿ ಅಧ್ಯಯನಶಿಸ್ತುಗಳ ಹಿನ್ನೆಲೆಯಲ್ಲಿ ಇಂಥ ವಿಶಿಷ್ಟ ಮತಾಚರಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಾಹಿತ್ಯದ ವಿಸ್ತೃತ ವಸ್ತುನಿಷ್ಠ ವಿವೇಚನೆ ನಡೆಯಬೇಕಾಗಿದೆ.

(ಸಾಂದರ್ಭಿಕವಾಗಿ ಪಾಡ್ದನದ ಲಿಪೀಕರಣದ ಕುರಿತು ಒಂದು ಮಾತು ಹೇಳಬಹು ದಾದರೆ, ಆಚರಣ ಸಂದರ್ಭದಲ್ಲೊ ಇತರ ಪ್ರೇರಿತ ಸಂದರ್ಭದಲ್ಲೊ ವಕ್ತೃಗಳಿಂದ ದಾಖಲಿಸಿದ ಪಾಡ್ದನಪಠ್ಯವನ್ನು ಲಿಪಿಗಿಳಿಸುವಾಗ ಮೂಲ ಮೌಖಿಕ ಪಾಠ ಸ್ವರೂಪವನ್ನು ಯಥಾರೂಪದಲ್ಲಿ ಉಳಿಸುವ ಉದ್ದೇಶದಿಂದ ನಿರೂಪಣೆಯಲ್ಲಿರಬಹುದಾದ ಗೇಯ ಪೂರಣದ ‘ನಿರರ್ಥಕ’ವೆನಿಸುವ ಶಬ್ದಗಳನ್ನು, ಉದ್ಗಾರಗಳನ್ನೂ, ಆಲಾಪನೆಗಳನ್ನೂ, ಉಚ್ಚಾರ ವೈಚಿತ್ರ್ಯಗಳನ್ನೂ ಲಿಪಿಬದ್ಧ ಪಠ್ಯದಲ್ಲಿ ಕಾಣಿಸುವುದುಂಟು. ಇದರಿಂದಾಗಿ ಹಲವು ‘ಅಪ್ರಸ್ತುತ’ ಅಂಶಗಳಿಂದ ಕಾವ್ಯಪಾಠವು ನಿಬಿಡವಾಗಿ ಓದಲು ತುಂಬ ಕ್ಲೇಶವೆನಿಸುವುದುಂಟು. ಅಲ್ಲದೆ ನಿರೂಪಣೆಯ ಸಹಜಾವಸ್ಥೆಯನ್ನು ಯಥಾವತ್ತಾಗಿ ಅಕ್ಷರಬದ್ಧಗೊಳಿಸುವುದು ದುಸ್ತರ ಕಾರ್ಯವೆಂದೇ ಹೇಳಬೇಕಾಗುತ್ತದೆ. ನಿರೂಪಣ ವೈಖರಿಯನ್ನು ನಿರ್ದಿಷ್ಟವಾಗಿ ಮನವರಿಗೆ ಮಾಡಿಕೊಳ್ಳಲು ಧ್ವನಿಮುದ್ರಿತ ಶ್ರಾವ್ಯಸಾಹಿತ್ಯವೇ ಅಪೇಕ್ಷಣೀಯ.)

ರೋಚಕವಾದ ಕಥಾಭಿತ್ತಿಯಿದ್ದು, ತುಳುನಾಡಿನ ಸಂಸ್ಕೃತಿಯ ಅನೇಕ ಮಗ್ಗಲುಗಳನ್ನು ಮಾರ್ಮಿಕವಾಗಿ ಬಿಂಬಿಸುವ ‘ಸಿರಿಸಂಧಿ’ಯು ಐತಿಹ್ಯಾತ್ಮಕವಾದ ಜನಪದ ಪುರಾಣ ಕಾವ್ಯ ವಾಗಿದೆ. ಪುರಾಣ ಕಾವ್ಯ ಸಹಜವಾದ ಅಲಂಕಾರಿಕ ಶೈಲಿ, ಅಸಾಧಾರಣವಾದ ಜನನ ಮರಣಾದಿ ಘಟನೆಗಳು, ಕಥಾವ್ಯಕ್ತಿಗಳ ಅತಿಮಾನುಷ ಶಕ್ತಿಗಳ ಪ್ರದರ್ಶನ, ಉತ್ಕಟ ಸಂಘರ್ಷ, ಮಂತ್ರ, ಮಾಟ, ಪವಾಡಗಳ ವಿವರಣೆ, ಕಥೆಯ ಒಡಲಲ್ಲಿ ಹೆಣೆದುಕೊಂಡ ದೈವದೇವರುಗಳ ಶಾಪ – ವರಗಳ ಪಾತ್ರ, ಕಥಾಪಾತ್ರಗಳ ಉಜ್ವಲೀಕರಣ ಹಾಗೂ ದೈಕರಣ ಇತ್ಯಾದಿಗಳು ಇಂಥ ಜನಪದ ಕಾವ್ಯಗಳಲ್ಲಿ ಸಾಮಾನ್ಯ.

ಜನಪದ ಕಾವ್ಯವನ್ನು ಪುರಾಣ ಕಾವ್ಯದ ನೆಲೆಯಲ್ಲಿ ವಿಮರ್ಶಿಸುವುದು ಒಂದು ರೀತಿ. ಈ ಸಂದರ್ಭದಲ್ಲಿ ಕಥಾನಕವು ಇತಿಹಾಸ ಕಾಲದಲ್ಲಿ ಯಥಾರ್ಥವಾಗಿಯೂ ನಡೆದುಹೋದು ದೆಂದು ತಿಳಿಯಬೇಕಾಗಿಲ್ಲ. ಕಾವ್ಯಗುಣವನ್ನಷ್ಟೆ ಲಕ್ಷಿಸಿದರೆ ಸಾಕಾಗುತ್ತದೆ. ಅತಿಮಾನುಷ ವಿವರಗಳೂ, ಅತಿಶಯೋಕ್ತಿಗಳೂ, ಪವಾಡ ಇತ್ಯಾದಿಗಳೂ ಪುರಾಣಕಾವ್ಯಗಳಿಗೆ ಸಹಜವಾಗಿ ಒಪ್ಪುತ್ತವೆ.

ಸಿರಿ, ಕೋಟಿಚೆನ್ನಯದಂಥ ಕಥಾನಕಗಳನ್ನು ಇತಿಹಾಸವೆಂಬ ನೆಲೆಯಲ್ಲಿ ವಿವೇಚಿಸು ವುದು ಮತ್ತೊಂದು ರೀತಿ. ಇದು ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ರೂಪಿಸಲ್ಪಡುತ್ತದೆ. ಆಗ ಕಥನದ  ಕಾವ್ಯಾತ್ಮಕ ಉತ್ಪ್ರೇಕ್ಷಿತ ವಿವರಗಳೆಲ್ಲ ಕಳಚಿಕೊಳ್ಳುತ್ತವೆ. ಐತಿಹಾಸಿಕ ವಾಸ್ತವಿಕವೆನ್ನಬಹುದಾದ ಅಂಶಗಳನ್ನು ಸಂಯೋಜಿಸಿ ಕಥನವನ್ನು ನಿರಾಭರಣವಾಗಿ ಪುನಾರಚಿಸ ಬೇಕಾಗುತ್ತದೆ.

ಇಂಥ ಕಥನಗಳ ಕಥಾವ್ಯಕ್ತಿಗಳ ಕುರಿತಾದ ಸಾಮಾನ್ಯ ಜನಪದ ಗ್ರಹಿಕೆ ಸ್ಪಲ್ಪ ವಿಲಕ್ಷಣ ವಾದದ್ದು. ಅವರ ಪಾಲಿಗೆ ಕಥಾವ್ಯಕ್ತಿಗಳು ವಾಸ್ತವಿಕ ವ್ಯಕ್ತಿಗಳೆಂಬುದರಲ್ಲಿ ಅನುಮಾನವಿಲ್ಲ. ಆದರೆ ಕಥೆಯನ್ನು ‘ವಾಸ್ತವಿಕ’ ದೃಷ್ಟಿಯಿಂದ ಪರಿಶೀಲಿಸಲು ಅವರ ಮನಸ್ಸು ಸಾಮಾನ್ಯವಾಗಿ ಒಡಂಬಡುವುದಿಲ್ಲ. ಕಥೆಯೊಂದಿಗೆ ಬೆಸೆದುಕೊಂಡ ಅವಾಸ್ತವ ಸಂಭವಗಳನ್ನು ಅವರು ಸಹಜ ಸತ್ಯವೆಂದೇ ನಂಬಿಬಿಡುತ್ತಾರೆ!

ಜನಪದ ಕಾವ್ಯಗಳು ಈಗಾಗಲೇ ಕೆಲವೊಂದು ಬಗೆಯ ವಿವೇಚನೆಗಳಿಗೆ ಒಡ್ಡಿಕೊಂಡಿವೆ. ಈ ದಿಶೆಯಲ್ಲಿ ಇನ್ನೂ ಭಿನ್ನ ದೃಷ್ಟಿಕೋನಗಳ ಅವಲೋಕನ ಸಾಧ್ಯ. ಇಂಥ ಜನಪದ ಕಾವ್ಯಗಳ ಅಧ್ಯಯನವು ಸ್ಥೂಲವಾಗಿ ಎರಡು ಅಂಶಗಳನ್ನು ಲಕ್ಷಿಸುತ್ತದೆ ಎನ್ನಬಹುದು. ೧. ಕಾವ್ಯ ಶರೀರದ ಸ್ವರೂಪ ವಿವೇಚನೆ ೨. ಕಾವ್ಯದ ಗುಣಮೌಲ್ಯ ಮಾಪನ. ಒಂದನೆಯ ಅಂಶವು ನಿರ್ದಿಷ್ಟ ಜನಪದ ಕಾವ್ಯದ ಗಾತ್ರ, ಅದರ ರಚನಾವಿನ್ಯಾಸ, ಭಾಷಾಸ್ವರೂಪ, ಪಾಠಾಂತರಗಳು, ಅಂತರ್‌ಪಠ್ಯೀಯ ಸಂಬಂಧಗಳು, ಸೂತ್ರಶೈಲಿ, ವರ್ಣನಾದಿಗಳು – ಇವುಗಳನ್ನು ಗಮನಿಸುತ್ತವೆ. ಎರಡನೆಯ ಅಂಶವು ಕಾವ್ಯದ ಆಶಯ, ಪಾತ್ರ ಪರಿಶೀಲನ, ಮೌಲ್ಯಾನುಸಂಧಾನ, ಲೋಕದೃಷ್ಟಿ, ಸಂಸ್ಕೃತಿ ವಿವೇಚನೆ ಇತ್ಯಾದಿಗಳನ್ನು ಲಕ್ಷಿಸುತ್ತದೆ.

‘ಸಿರಿಸಂಧಿ’ಯಂಥ ಬೃಹತ್ ಜನಪದ ಕಾವ್ಯವು ಅಧ್ಯಯನಕ್ಕೆ ಒದಗಿದಾಗ, ಆ ಬಗ್ಗೆ ಹೆಚ್ಚಿನ ಆಸಕ್ತಿ, ಒಂದಿಷ್ಟು ಸಂಭ್ರಮಮಿಶ್ರಿತ ಕುತೂಹಲ, ಪ್ರಶಂಸಾಪರವಾದ ಮನೋ ಧರ್ಮ ಪ್ರಕಟವಾಗುವುದು ಸ್ವಾಭಾವಿಕ. ಎಲ್ಲ ಕಡೆಯ ಎಲ್ಲ ಭಾಷೆಗಳ ವಿಶಿಷ್ಟ ಜನಪದ ಕಾವ್ಯ ಪರಿಚಯ ಸಂದರ್ಭಗಳಲ್ಲೂ ಈ ಬಗೆಯ ಉದಾರವಾದೀ ನಿಲುವು ಪ್ರಕಟವಾದು ದುಂಟು.  ಆದರೆ ಈ ‘ರಿಯಾಯಿತಿ’ಸದಾಕಾಲ ಇರುವಂತಿಲ್ಲ; ಇರಬೇಕಾಗಿಯೂ ಇಲ್ಲ.

‘ಸಿರಿ’ಕಥನದ ಬಗೆಗಿನ ಉದಾರವಾದಿ ರೀತಿಯ ಕೆಲವು ವಿಮರ್ಶೋಕ್ತಿಗಳನ್ನು ಗಮನಿಸ ಬಹುದು.

೧. ಮಾತೃವಂಶೀಯ ಸಂಸ್ಥೆಗೆ ಸಿರಿ ಐತಿಹ್ಯವು ಒಂದು ಶಾಸನದಂತಿದೆ (ಸನ್ನದು – Charter) – (ತುಳುವ ದರ್ಶನ, ಪು. ೯೭).

೨. ಮಾತೃವಂಶೀಯ ಕುಟುಂಬ ಪದ್ಧತಿಯನ್ನು ಅನುಸರಿಸುವ ಜನರು ಸಿರಿಯನ್ನು ನಾರೀಧರ್ಮದ ಪರಮೋಚ್ಚ ಪ್ರತೀಕವೆಂದು ಪರಿಗಣಿಸುತ್ತಾರೆ (ತುಳುವ ದರ್ಶನ, ಪು. ೧೯).

೩. ಸಿರಿಯು ಈ ಪ್ರದೇಶದ ಸದ್ಗುಣ ಮತ್ತು ಪಾತಿವ್ರತ್ಯದ ಸಾರಸಂಕೇತವಾಗಿದ್ದಾಳೆ ( ತುಳುವ ದರ್ಶನ, ಪು. ೨೦).

೪. ಬಂಟ ಸಮಾಜದವರಿಗೆ ಸಿರಿ ಹಾಗೂ ಆಕೆಯ ಪೀಳಿಗೆಯು ಅತ್ಯಂತ ಮಹತ್ವದ ದೈವ ಗಳಾಗಿವೆ. ಆಕೆಯನ್ನು ತಮ್ಮ ಸಮಾಜದ ಮೂಲಸ್ತ್ರೀಯೆಂದು ನಂಬುತ್ತಾರೆ (ತುಳುವ ದರ್ಶನ, ಪು. ೯೬).

೫. ಕರಾವಳಿ ಬುಡಕಟ್ಟು ಸಮುದಾಯದ ನಡುವೆ ಇನ್ನೂ ಜೀವಂತವವಾಗಿರುವ ಮಾತೃ ರೂಪಿ ಸಂಸ್ಕೃತಿಯಲ್ಲಿ ಜೀವದ್ರವ್ಯವಾಗಿಸಿಕೊಂಡ ಕಾವ್ಯ ಇದು – ಮಾತೃರೂಪಿ ಸಂಸ್ಕೃತಿಯ ಪ್ರಧಾನ ಲಕ್ಷಣವಾಗಿರುವ ಹೆಣ್ಣಿನ ಅನನ್ಯತೆಯ ಹುಡುಕಾಟವನ್ನು ಈ ಕಾವ್ಯದುದ್ದಕ್ಕೂ ಗುರುತಿಸಬಹುದು (ಪ್ರೊ. ಎ.ವಿ. ನಾವಡ – ಸಿರಿ ಪಾಡ್ದನ – ಸಂಪಾದಕರ ಮಾತು).

೬. ಇಡೀ ಸಿರಿಪಾಡ್ದನ ಸ್ತ್ರೀ ಚೈತನ್ಯದ ಒಂದು ಸಂಕಥನವಾಗಿ ಕಂಡುಬರುತ್ತದೆ (ಸಿರಿ ಪಾಡ್ದನ, ಪು. ೫೭).

೭. ಈ ಪಾಡ್ದನ ತುಳು ವೈವಾಹಿಕ ವ್ಯವಸ್ಥೆಯಲ್ಲಿ ಹೊಸತೊಂದು ನೆಲಗಟ್ಟಿಗೆ ಮೂಲ ಕೂಡ ಆಗಿದೆ. ಗಣನೀಯ ವ್ಯಾಪ್ತಿಯುಳ್ಳ ಸಿರಿಯ ವಸ್ತುಸಂವಿಧಾನ ಮಹಾಕಾವ್ಯ ಅಥವಾ ದುರಂತಕ್ಕೆ ತಕ್ಕುದಾದ ಗಂಭೀರ ಚಿಂತನೆಗೆ ಅರ್ಹವಾಗಿದೆ (ಡಾ. ಬಿ. ದಾಮೋದರ ರಾವ್, ತುಳು ಪಾಡ್ದನಗಳು ಮಹಾಕಾವ್ಯಗಳಾಗಿ – ‘ಸಿರಿ’,ಪು. ೧೬೬).

೮. ಸಿರಿ ಪಿತೃಪ್ರಧಾನ ಸಂಸ್ಕೃತಿಯ ಚಿಂತನೆಗಳಾದ ಹೆಣ್ಣಿನ ಪಾತಿವ್ರತ್ಯ, ಮಾತೃತ್ವ, ಪುರುಷ ಪ್ರಭುತ್ವಗಳ ಪರಿಕಲ್ಪನೆಯನ್ನುಒಡೆಯುತ್ತಲೇ ಮಾತೃವಂಶೀಯ ಮೌಲ್ಯವನ್ನು ನೆಲೆಗೊಳಸುತ್ತಾಳೆ (ಡಾ. ಗಾಯತ್ರಿ ನಾವಡ, ಸಿರಿ ಪಾಡ್ದನ – ಹೆಣ್ಣಿನ ಅನನ್ಯತೆಯ ಹುಡುಕಾಟ – ‘ಸಿರಿ’, ಪು. ೨೨೫).

‘ಸಿರಿ’ ಕಾವ್ಯಶರೀರದ ಸ್ವರೂಪ ವೈಶಿಷ್ಟ್ಯ ವಿವೇಚನೆಯನ್ನು ಪ್ರಕೃತ ಬದಿಗಿಟ್ಟು ಕಾವ್ಯದ ಗುಣ ಮೌಲ್ಯಮಾಪನ ದೃಷ್ಟಿಯಿಂದ ಮೇಲಿನ ವಿಮರ್ಶೋಕ್ತಿಗಳನ್ನು ಮರುಪರಿಶೀಲನೆ ಮಾಡಬಹುದೆನಿಸುತ್ತದೆ. ಏಕೆಂದರೆ ಈ ಬಗೆಯ ಸಮೀಕ್ಷೆಯಲ್ಲಿ ಕಥಾಪಾತ್ರಗಳಲ್ಲಿ ಮುಖ್ಯ ವಾಗಿ ಕಥಾನಾಯಕಿಯಾದ ಸಿರಿಯ ವರ್ತನೆಯ ಗುಣದೋಷಗಳನ್ನು ಸಂತುಲಿತವಾಗಿ ವಿಶ್ಲೇಷಣೆ ಮಾಡಿದ್ದು ಕಂಡುಬರುವುದಿಲ್ಲ.

ಸಿರಿಯ ವ್ಯಕ್ತಿತ್ವದ ಭವ್ಯತೆಗೆ ಬೆರಗಾದವರಂತೆ ವೈಭಕರಣದ ವರಸೆಯಲ್ಲಿ ಆಕೆಯನ್ನು ಅತಿರಂಜಿತವಾಗಿ ಕೊಂಡಾಡಲಾಗಿದೆ ಎನ್ನಬೇಕಾಗುತ್ತದೆ. ಓದಲು ಇಂಥ ಭಾವನಾತ್ಮಕ ಉದ್ಗಾರಗಳು ಹೃದ್ಯವಾಗಿವೆ. ಆದರೆ ತುಸು ಅವಸರದ ತೀರ್ಮಾನದಂತಿರುವ ಈ ವಿಮರ್ಶೋಕ್ತಿಗಳಿಗೆ ಸಿರಿಸಂಧಿಯಲ್ಲಿ ಅಷ್ಟೊಂದು ಪುಷ್ಟಿ ಸಿಕ್ಕುವುದಿಲ್ಲ ಎಂಬುದು ವಸ್ತುನಿಷ್ಠ ವಿಮರ್ಶೆಯಿಂದ ವ್ಯಕ್ತವಾಗಬಹುದು.

ಮಾತೃವಂಶೀಯ ಕುಟುಂಬದಲ್ಲಿ ಸಿರಿ ಬೆಳೆದವಳು ನಿಜ. ಆಕೆಯ ಜನ್ಮ ನಿಗೂಢವಾಗಿದೆ.  ತಾಯಿ ಹೆತ್ತಮಗಳು ಅವಳಲ್ಲ ಎನ್ನಲಾಗಿದೆ. ಹಾಗಾಗಿ ಮಾತೃವಾತ್ಸಲ್ಯವನ್ನು ಆಕೆ ಸವಿದವಳಲ್ಲ. ಹಾಗೆಯೇ ಒಳ್ಳೆಯ ತಾಯಿಯಾಗಿ ಪುತ್ರವಾತ್ಸಲ್ಯದ ಸುಖವನ್ನೂ ಪಡೆದ ವಳಲ್ಲ. ಊರವರ ನೆರವನ್ನು ಹಾರೈಸದೆ ಅಜ್ಜ ಬಿರ್ಮಾಳ್ವನ ಅಂತ್ಯಸಂಸ್ಕಾರ ಮಾಡಿದವಳು, ಸತ್ಯನಾಪುರದ ಬೀಡಿನ ಹಕ್ಕಿಗಾಗಿ ಹೋರಾಡಿದವಳು. ಇದ್ದಕ್ಕಿದ್ದಂತೆ ತನ್ನ ಪ್ರೀತಿಯ ಅಜ್ಜನ ಸತ್ಯನಾಪುರ ಅರಮನೆಯನ್ನು ತೊರೆದು ಹೋಗಲು ನಿರ್ಧರಿಸಿದ್ದು ಹೆಣ್ಣಾಳಿಕೆಯ ಪದ್ಧತಿಗೆ, ಕೌಟುಂಬಿಕ ಹಕ್ಕಿನ ಹುಡುಗಾಟಕ್ಕೆ ಒಪ್ಪುತ್ತದೆಯೇ? ಪತ್ತೇರಿ ಕೂಟದ ಕಳದಲ್ಲಿ ಶಂಕರಾಳ್ವ ನಿಗೆ ಸಡ್ಡು ಹೊಡೆದು ಸತ್ಯನಾಪುರದ ಹಕ್ಕಿನ ನ್ಯಾಯವನ್ನು ಎತ್ತಿ ಹಿಡಿದ ದಿಟ್ಟತೆಗಾಗಿ ಸಿರಿಯ ಸ್ತ್ರೀಚೈತನ್ಯವನ್ನು ಧಾರಾಳವಾಗಿ ಶ್ಲಾಘಿಸಬಹುದು. ಆದರೆ ಕೆಲವೇ ಗಳಿಗೆಗಳಲ್ಲಿ ಆಕೆ ದಿqsರಾಗಿ ತನ್ನ ನಿರ್ಧಾರವನ್ನು ಬದಲಿಸಿಬಿಡುತ್ತಾಳೆ! ತನ್ನ ಹಾಗೂ ತನ್ನ ಸಂತಾನದ ಗತಿಯನ್ನೂ ಬದಲಿಸಿಬಿಡುತ್ತಾಳೆ! ಕುಮಾರನನ್ನು ಚೆನ್ನಾಗಿ ಸಾಕುತ್ತ ಸತ್ಯನಾಪುರದಲ್ಲಿ ಇರಬೇಕಾಗಿದ್ದವಳು ಆ ಅಮಾಯಕ ಮಗುವಿನ ನೆಲೆಯನ್ನೂ ತಪ್ಪಿಸಿ ತಾನೂ ಪಾಡುಪಡು ವಂಥ ಪಲಾಯನವಾದದ ಅಗತ್ಯವಿತ್ತೆ? ತನ್ನ ಸಂತಾನದ ಕುಡಿಯಾದ ಕುಮಾರನನ್ನಾದರೂ ‘ಸಿರಿ’ ಉಳಿಸಿಕೊಂಡಳೆ? ತನ್ನ ಕಂದನನ್ನೇ ‘ಮಾಯಕ’ ಮಾಡಿದುದರಲ್ಲಿ ಮಾತೃವಾತ್ಸಲ್ಯ ವೆಂದೋ ಮಾತೃವಂಶೀಯತೆಯ ಮೇಲ್ಮೈಯೆಂದೂ ಹೇಳಬಹುದೆ? ‘ಸಿರಿ’ ಮತಾಚರಣೆ ವೇಳೆ ಸಿರಿಗೂ ಕುಮಾರನಿಗೂ ನಡೆಯುವ ತೀವ್ರವಾದ ವಾಗ್ವಾದ ಏನನ್ನು ಸೂಚಿಸುತ್ತದೆ?

ಎರಡನೆಯ ಸಂಬಂಧದ ಮಗುವನ್ನಾದರೂ ಪೋಷಿಸುವ ಭಾಗ್ಯ ‘ಸಿರಿ’ ಪಡೆದುಕೊಂಡು ಬಂದಿಲ್ಲ. ಕಾಡು ಹಾದಿಯ ಹಳ್ಳದ ಬದಿಯಲ್ಲಿ ಹೆರಿಗೆಯಾಗಿ ಕಥಾನಾಯಕಿಯೊಬ್ಬಳು ಸಾಯಬಾರದ ರೀತಿಯಲ್ಲಿ ದಯನೀಯವಾಗಿ ಅಸುನೀಗಬೇಕಾಗಿ ಬಂದ ‘ಸಿರಿ’ಗೆ ಸ್ವಲ್ಪ ಸಮಯವಾದರೂ ತನ್ನ ಮಗುವನ್ನು ಪ್ರೀತಿಯಿಂದ ಸಾಕಿಕೊಳ್ಳುವ ಯೋಗವಿಲ್ಲ! (ಆಕೆಯನ್ನು ಕುಮಾರನೇ ಮಾಯಕ ಮಾಡಿದನೆಂದು ಕೆಲವು ಸಂಧಿಗಳು ಸೂಚಿಸುತ್ತವೆ.) ತಾಯಿ – ಮಕ್ಕಳ ಕರುಳ ಸಂಬಂಧದ ಮಾಧುರ‍್ಯವೇ ಲೋಪವಾಗಿರುವ ಸಿರಿಕಥನದಲ್ಲಿ ಮಾತೃರೂಪಿ ಸಂಸ್ಕೃತಿಯ ಜೀವದ್ರವ್ಯವಿದೆಯೆಂದು ಒಪ್ಪುವುದು ಕಷ್ಟ.

ಇನ್ನು ‘ಸಿರಿ’ಯ ಮಗಳು ಸೊನ್ನೆಯೂ ಅತ್ಯಂತ ದುರ್ದೈವಿ ಎನ್ನಬೇಕಾಗುತ್ತದೆ.  ಸಂತಾನ ಪ್ರಾಪ್ತಿಗಾಗಿ ಬೆರ್ಮೆರ್ ದೈವಕ್ಕೆ ಹೇಳಿಕೊಂಡ ಹರಕೆಯನ್ನು ಸಲ್ಲಿಸಲು ಮರೆತುಬಿಟ್ಟ ಅಪರಾಧಕ್ಕಾಗಿ ಮದುವೆ ನಿಶ್ಚಯವಾದ ಅವಳಿ ಮಕ್ಕಳಾದ ಅಬ್ಬಗೆ ದಾರಗೆಯರನ್ನು ಅನಿರೀಕ್ಷಿತವಾದ ದುರಂತದಲ್ಲಿ ಕಳಕೊಳ್ಳುವ ದಾರುಣ ದುಃಖಕ್ಕೆ ಸೊನ್ನೆ ಒಳಗಾಗುತ್ತಾಳೆ.  ಅಲ್ಲಿಗೆ ಅವಳ ಕುಲದ ಕುಡಿ ಮುರುಟಿಹೋಗುತ್ತದೆ! ಹಸೆಮಣೆಯೇರಲಿದ್ದ ಆ ತರುಣಿಯರು ಚೆನ್ನೆಯಾಟದ ಗುಂಗಿನಲ್ಲಿ ಮೈಮರೆತು ಕ್ಷುಲ್ಲಕ ಕಾರಣಕ್ಕೆ ಜಿದ್ದಿಗೆ ಬಿದ್ದು ಜಗಳವಾಡಿ ಪ್ರಾಣ ಬಿಡುತ್ತಾರೆ. ಕೋಪದಿಂದ ಒಬ್ಬಳು ಮತ್ತೊಬ್ಬಳ ತಲೆಗೆ ಚೆನ್ನೆಮಣೆಯಿಂದ ಬಡಿದಾಗ ಅವಳು ಮಡಿದೇ ಹೋಗುತ್ತಾಳೆ. ಆ ಶವವನ್ನೆತ್ತಿ ಬಾವಿಗೆಸೆದು ಮತ್ತೊಬ್ಬಳೂ ಅದೇ ಬಾವಿಗೆ ಹಾರಿ ಸಾವನ್ನು ಕರೆದುಕೊಳ್ಳುತ್ತಾಳೆ. ಮರಣಾಂತಿಕವಾದ ಇಂಥ ಜಗಳ ‘ಸಿರಿಸಂಧಿ ಬಂಧುತ್ವದ ಗಾಢತೆಯನ್ನು ಸ್ಥಾಪಿಸುತ್ತದೆ’ ಎಂಬ ಹೇಳಿಕೆಗೆ ತೀರಾ ವ್ಯತಿರಿಕ್ತವಾಗಿದೆ!

ಮಾತೃವಂಶೀಯ ಕುಟುಂಬ ಪದ್ಧತಿಯ ಸರಿಯಾದ ಸಂಬಂಧ ಚಿತ್ರಣಗಳೂ ‘ಸಿರಿ’ ಕಥನದಲ್ಲಿ ಸಾಕಷ್ಟಿಲ್ಲ. ಸೋದರ – ಸೋದರಿ ಪ್ರೀತಿಯ, ಹಾಗೆಯೇ ಮಾವ – ಅಳಿಯ, ಮಾವ – ಸೊಸೆಯರ ಬಾಂಧವ್ಯದ ನಿದರ್ಶನಗಳೂ ಇಲ್ಲಿಲ್ಲ (ಸಿರಿ ಬಳಗವೆಲ್ಲ ಬಾಳನ್ನು ಮುಗಿಸಿ ದೈಕರಣಗೊಂಡಾಗ ಬಳಿಕವಷ್ಟು ಸಿರಿದರ್ಶನಗಳ ಮತಾಚರಣೆಯಲ್ಲಿ ಈ ಸಂಬಂಧಗಳನ್ನು ಸ್ಥಾಪಿಸಲಾಗುತ್ತದೆ). ಸಿರಿಬಳಗದ ಕುಲದೈವ ಬೆರ್ಮೆರ್ ಕೊಟ್ಟ ಸಂತಾನವನ್ನು ಕಿತ್ತುಕೊಳ್ಳುವ ಕ್ಷಮಾಗುಣವಿಲ್ಲದ ನಿಷ್ಠುರ ದೇವರಾಗಿ ಕಾಣಿಸುತ್ತಾನೆ. ಹೆಣ್ಣುಜೀವ ಗಳ ಸಂಕಟಗಳ ಕುದಿತ ತುಂಬಿದ, ಮಾತೃವಂಶೀಯ ಕುಟುಂಬ ನಾಶವನ್ನು ಸಾರುತ್ತಾ ದುರಂತದಲ್ಲಿ ಮುಕ್ತಾಯವಾಗುವ ಸಿರಿ ಪಾಡ್ದನದಲ್ಲಿ ‘ಮಾತೃಮೂಲೀಯ ಕುಟುಂಬ ಪದ್ಧತಿ ಯನ್ನು ಸಮರ್ಥಿಸಿ ಸ್ಥಾಪಿಸುತ್ತದೆ’ ಎಂಬ ಅಭಿಪ್ರಾಯಕ್ಕೆ ಸಮರ್ಥನೆಯೇನೂ ದೊರಕು ವಂತಿಲ್ಲ. ಮಾತೃಮೂಲ ಪದ್ಧತಿಗೆ ಅನ್ವಯಿಸಬಹುದಾದ ಕೌಟುಂಬಿಕ ಪ್ರೇಮ, ಸುಖ, ಸಂತೃಪ್ತಿಗಳಿಗೆ ಎರವಾದ ದುರ್ದೈವಿ ಹೆಣ್ಣು ಸಿರಿ.

ಸಿರಿಯ ವೃತ್ತಾಂತದ ಪೂರ್ವಾರ್ಧ ಭಾಗದಲ್ಲಿ ಕೆಲವೆಡೆ ಸಿರಿ ತನ್ನ ಸ್ವಂತಿಕೆಯನ್ನು ದಿಟ್ಟ ನಿಲುಮೆಯನ್ನೂ ಪ್ರಕಟಿಸಿರುವುದು ನಿಜ. ಉದಾ :

೧. ಸೂಳೆ ಸಿದ್ದು ಮುಟ್ಟಿ ಮಡಿಗೆಟ್ಟ ಸೀಮಂತದ ಸೀರೆಯನ್ನು ನಿರಾಕರಿಸುವಲ್ಲಿ

೨. ಪತ್ತೇರಿಕೂಟದ ಕಳದಲ್ಲಿ

೩. ಗಂಡ ಕಾಂತುಪೂಂಜನಿಗೆ ವಿಚ್ಛೇದ ಹೇಳುವ ಸಂದರ್ಭದಲ್ಲಿ – ಇಲ್ಲೆಲ್ಲ ಅವಳು ರೋಷಮೂರ್ತಿಯಾಗಿ ನಿಗಿನಿಗಿ ಉರಿಯುತ್ತಾಳೆ! ವಿನಯ ಔಚಿತ್ಯದ ಎಲ್ಲೆಯನ್ನು ಒಂದಿಷ್ಟು ಮೀರಿದರೂ, ಅವಳ ಕೋಪತಾಪದ ವರ್ತನೆಗೆ ಕಾರಣಗಳಿರುವುದನ್ನು ಮರೆಯುವಂತಿಲ್ಲ. ಆದರೆ ಅವಳ ಕಥನದ ಉತ್ತರಾರ್ಧದಲ್ಲಿ ಸ್ತ್ರೀಶಕ್ತಿ, ಅಧಿಕಾರಗಳನ್ನು ಎತ್ತಿಹಿಡಿಯುವ ಹೋರಾಟವಾಗಲೀ, ಸಿರಿಯ ಸ್ವಂತಿಕೆ, ವರ್ಚಸ್ಸುಗಳ ಪ್ರಕಟಣೆ ಯಾಗಲೀ ಕಂಡುಬರುವುದಿಲ್ಲ.

ಮರುಮದುವೆಯಲ್ಲೂ ‘ಸಿರಿ’ಯ ಪಾತ್ರ ಗೌಣವಾಗಿದೆ. ಪ್ರಣಯ ಸಾಹಸವೂ ಅವಳಲ್ಲಿಲ್ಲ.  ಬೋಳಮಲ್ಲಿಗೆಯ ಅರಸುಗಳ ಕೈಗೊಂಬೆಯಂತೆ ಆಕೆ ವರ್ತಿಸುತ್ತಾಳಷ್ಟೆ. ಈ ಮದುವೆಯಲ್ಲೂ ‘ಸಿರಿ’ ಅಷ್ಟೇನೂ ಸಂಭ್ರಮಿಸಿದಂತೆ ತೋರುವುದಿಲ್ಲ. ಮೊದಲಿನ ಢಾಳಾದ ವ್ಯಕ್ತಿತ್ವ ಅವಳಲ್ಲಿ ಗೋಚರಿಸುವುದಿಲ್ಲ. ಕೊಡ್ಸರಾಳ್ವನ ಮೊದಲ ಹೆಂಡತಿ ಸಾಮು ಆಳ್ವೆದಿಯ ಮಹಿಮೆಯ ಮುಂದೆ ಸಿರಿ ಹತಪ್ರಭಳಾಗಿಬಿಡುತ್ತಾಳೆ! (ಕೊಡ್ಸರಾಳ್ವನಿಗೆ ಮೊದಲ ಹೆಂಡತಿ ಇದ್ದಾಳೆಂಬುದನ್ನು ತಿಳಿದೂ ಅವನ ಸಂಸಾರದೊಳಗೆ ಕಾಲಿಡಲು ಸಿರಿ ಒಪ್ಪಿದ್ದು ಅವಳ ಜಾಣತನವೆನ್ನುವಂತಿಲ್ಲ. ಒಬ್ಬಾಕೆ ಸಂವೇದನಾಶೀಲ ಹೆಣ್ಣಾಗಿ ತನ್ನಂತಯೇ ಹೆಣ್ಣಾದ ಸಾಮು ಆಳ್ವೆದಿಯ ಮನದಳಲು ಅವಳಿಗೆ ತಿಳಿಯದೇ ಹೋದದ್ದು ವಿಚಿತ್ರವಾಗಿದೆ.) ಎರಡನೆಯ ಮದುವೆಯಾಗಿ ಸಿರಿ ಅನುಭವಿಸಿದ ಸುಖ ಅಷ್ಟರಲ್ಲಿಯೇ ಇದೆ ! ಮತ್ತೆ ಹುಟ್ಟಿದ ಮಗುವನ್ನು ಪೋಷಿಸುವ ಭಾಗ್ಯವೂ ಆಕೆಗಿಲ್ಲ!

ಸಿರಿಯು ತಾನು ಒಲ್ಲದ ಗಂಡನಿಗೆ ವಿಚ್ಛೇದನ ಸಾರಿ ಮರುಮದುವೆಯಾದ ವಿಚಾರವನ್ನು ಸ್ತ್ರೀಶೋಷಣೆಯ ವಿರುದ್ಧದ ಪ್ರತಿಭಟನೆಯೆಂದು ಬಣ್ಣಿಸಿ ಸ್ತ್ರೀವಾದದ ಸಮರ್ಥನೆಗಾಗಿ ಆಕೆಯನ್ನು ಮುಂದೊಡ್ಡಲಾಗುತ್ತದೆ. ಆದರೆ ಇದು ಅಂಥ ಘನಕಾರ್ಯವೇನಲ್ಲ! ತುಳುನಾಡಿನ ಹಾಗೂ ಕೇರಳದ ಮಾತೃಮೂಲೀಯ ಸಮಾಜಗಳಲ್ಲಿ ಇಂಥ ವಿಚ್ಛೇದನೆ ಹಾಗೂ ಹೆಣ್ಣಿನ ಮರುಮದುವೆ ಬಲು ಪ್ರಾಚೀನದಿಂದಲೂ ರೂಢಿಯಲ್ಲಿದ್ದ ವಿಚಾರ. ಇದು ಮಾತೃಮೂಲ ಪರಂಪರೆಯ ಒಂದು ಗಮನೀಯ ಅಂಶ. (ಮದುವೆ, ಮರುಮದುವೆ ಗಳಿಂದ ಹೆಣ್ಣಿನ ಬಳಿ (ಗೋತ್ರ) ಬದಲಾಗದೆ ಇರುವುದರಿಂದ ಬೇರೆ ಬೇರೆ ಬಳಿಗಳ ಗಂಡಂದಿರಿಂದ ಹುಟ್ಟಿದ ಮಕ್ಕಳು ತಾಯಿಯ ಬಳಿಯವರೇ ಆಗುತ್ತಾರೆ. ಮಕ್ಕಳ ಕಟ್ಟಿನಲ್ಲಿ ಈ ವ್ಯವಸ್ಥೆಯಿಲ್ಲ.) ‘ಸಿರಿ’ ಹೊಸ ಪರಂಪರೆಯನ್ನು ಹುಟ್ಟುಹಾಕಿದವಳೇನೂ ಅಲ್ಲ. ಗಂಡ ನನ್ನೂ ಅತ್ತೆಯನ್ನೂ ವಾಚಾಮಗೋಚರವಾಗಿ ಜರೆದು ಗಂಡನ ಮನೆ ಹಾಳಾಗಲೆಂದು ಶಪಿಸಿಹೋದ ಮಾತ್ರಕ್ಕೆ ‘ಸಿರಿ’ಯ ಪಾತ್ರಕ್ಕೆ ಉಜ್ಜಲ ಕಳೆಯೇನೂ ಬರುವುದಿಲ್ಲ. ಇಷ್ಟಕ್ಕೂ ಸ್ವತಃ ಅವಳೇ ಧಾವಿಸಿ ಬಂದು ಮಧಾಹ್ನದ ಉರಿಬಿಸಿಲಲ್ಲಿ ಗಂಡನ ಬೀಡಿನ ಅಂಗಳದಲ್ಲಿ ನಿಂತುಕೊಂಡು ವಿಚ್ಛೇದನ ಸಾರಬೇಕಾದ ಅನಿವಾರ್ಯತೆ ಇರಲಿಲ್ಲ. ಯಾರ ಮೂಲಕ ವಾದರೂ ಹೇಳಿ ಕಳುಹಿಸಿದ್ದರೂ ಸಾಕಿತ್ತು. ಆದರೆ ಹಟಗಾರ್ತಿಯಾದ ಸಿರಿಗೆ, ಗಂಡನನ್ನೂ ಅತ್ತೆಯನ್ನೂ ಮನಸಾರೆ ಬೈದು ಭಂಗಿಸಿ ತುಚ್ಛೀಕರಿಸುವ ದೃಶ್ಯವನ್ನು ನಿರ್ಮಿಸುವ ಈ ಅವಕಾಶವನ್ನು ಬಿಟ್ಟು ಕಳೆಯಲು ಮನಸ್ಸಿಲ್ಲ! ತನ್ನ ತವರಿನ ದಾತಾರನೆಂದು ಗಂಡನ ಎದುರಿಗೆ ತನ್ನ ಪುಟ್ಟ ಮಗನನ್ನು ಒಡ್ಡುವುದು ಕ್ರೂರವಾದ ವ್ಯಂಗ್ಯವೇ ಆಗಿದೆ. ಅಂತೂ ಸಿರಿಯ ವಿಚ್ಛೇದನ ಪ್ರಕರಣವನ್ನು ಅಳತೆ ಮೀರಿ ವೈಭಕರಿಸಲಾಗಿದೆ.

ಸತ್ಯನಾಪುರದ ಬೀಡಿನಲ್ಲಿ ಹುಟ್ಟಿದ ಕುಮಾರನಿಗೆ ಸಿರಿಯಿಂದಾಗಿ ಒದಗಿದ ದುರ್ದಶೆ ಕರುಳು ಮೀಟುವಂಥದ್ದು. ದುರ್ದೈವಿ ತಾಯಿಯ ದುರ್ದೈವಿ ಮಗ ಆತ! ಒಂದು ಮಿಳ್ಳೆ ಹಾಲಿಗೂ ತತ್ಸಾರವಾಗಿ ದಾರುವಿನ ಮೂಲಕ ಹಾಲನ್ನು ಬೇಡಿ ಬರಬೇಕಾಗುತ್ತದೆ. ಅಡಿಕೆ ಬಿಸಾಡಿ ಕಂಗಿನ ಮರವನ್ನು ಉಂಟುಮಾಡಬಲ್ಲ, ದೋಣಿಯ ನೆರವಿಲ್ಲದೆ ಹೊಳೆಯನ್ನು ದಾಟಬಲ್ಲ.  ತನ್ನ ಮಹಿಮೆಯಿಂದ ದುರುಳನೊಬ್ಬನ ಚಲನೆಯನ್ನು ಸ್ತಂಭನಗೊಳಿಸಬಲ್ಲ ಸಾಮರ್ಥ್ಯವಂತಳಾದ ಸಿರಿ ತನ್ನ ಕರುಳಕುಡಿಯ ಪೋಷಣೆಯ ಬಗೆಗೆ ವಿಶೇಷ ಕಾಳಜಿ ವಹಿಸದಿರುವುದು ವಿಚಿತ್ರವಾಗಿದೆ.

ಸೂಳೆಸಿದ್ದುವಿನ ಸ್ಪರ್ಶದಿಂದ ಮೈಲಿಗೆಯಾಯಿತೆಂದು ಸಾರ್ವಜನಿಕವಾಗಿ ಸಾರಿ ತಾನು ತಿರಸ್ಕರಿಸಿದ್ದ ಬಯಕೆಯ ಸೀರೆಯನ್ನು ಕುಮಾರನ ತೊಟ್ಟಿಲು ಹೊರಲು ದಾರುವಿನ ತೆಲೆಗೆ ಸಿಂಬಿಯಾಗಿ ಬಳಸಿದುದರ ಔಚಿತ್ಯ ಅರ್ಥವಾಗುವುದಿಲ್ಲ. ತನಗೆ ವರ್ಜ್ಯವಾದ ವಸ್ತು ಮಗುವಿನ ತೊಟ್ಟಿಲಿನ ಸ್ಪರ್ಶಕ್ಕೆ ವರ್ಜ್ಯವಾಗುವುದಿಲ್ಲವೇ?

ಸಿರಿ ಬೋಳಮಲ್ಲಿಗೆಯ ಅರಮನೆಗೆ ಹೋಗುವ ಮುಂಚಿತವಾಗಿ ಕುಮಾರನನ್ನೂ ಸಿರಿಯನ್ನೂ ತನ್ನ ಮಹಿಮೆಯಿಂದ ಮಾಯಕ ಮಾಡಿದ ವಿವರ ‘ಸಿರಿಸಂಧಿ’ಯಲ್ಲಿದೆ. ಪುರಾಣ ಸಹಜವಾದ ‘ಮಹಿಮೆ’ಯನ್ನು ಬದಿಗಿರಿಸಿದರೆ, ಈ ಮಾಯಕ ಕ್ರಿಯೆಗೆ ಬೇರೆಯೇ ಅರ್ಥವನ್ನು ಹುಡುಕಬೇಕಾಗುತ್ತದೆ. ವ್ಯಕ್ತಪ್ರಪಂಚಕ್ಕೆ ಗೊತ್ತಾಗದಂತೆ ಮತ್ತೆಲ್ಲಿಯೋ ಗುಪ್ತವಾಗಿ ಮಗು ವನ್ನು ಸಾಕಿಕೊಳ್ಳುವಂತೆ ದಾರುವಿಗೆ ಸಿರಿ ತಾಕೀತು ಮಾಡಿರಬಹುದೆಂದು ಊಹಿಸಬಹುದು. ಆದರೆ ಕಥೆಯ ಮುಂದಿನ ಭಾಗದಲ್ಲಿ ಅವರೆಲ್ಲೂ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುವುದಿಲ್ಲ. ದೈಕರಣಗೊಂಡ ಮಾಯಗಾರರಾಗಿ ಮುಂದೆ ಕಾಣಿಸಿಕೊಳ್ಳುತ್ತಾರೆ.

ಸತ್ಯನಾಪುರದ ಬೀಡು ಹಾಗೂ ಬಸರೂರು ಬತ್ತಕೇರಿ ಬೀಡು ಎರಡನ್ನೂ ‘ಸಿರಿ’ ತನ್ನ ಶಾಪದಿಂದ ಸುಟ್ಟು ಸೀಕರಿ ಮಾಡಿಬಿಡುತ್ತಾಳೆ. ಮೊದಲಿನದು ತಾನು ಹುಟ್ಟಿ ಬೆಳೆದ ಪ್ರೀತಿಯ ತಾವು. ಎರಡನೆಯದು ತಾನು ಕೆಲವು ದಿನಗಳಾದರೂ ಗಂಡನೊಂದಿಗೆ ಬಾಳಿದ್ದ ಬೀಡು. ಈ ಯಾವ ಭಾವನಾತ್ಮಕ ಸಂಬಂಧವನ್ನೂ ಸ್ವಲ್ಪವೂ ಎಣಿಸದೆ ಬೀಡುಮನೆಗಳನ್ನು ನಾಶ ವೆಸಗುವ ಪ್ರವೃತ್ತಿ ಉಚ್ಚ ಉದಾತ್ತತೆಯನ್ನೇನೂ ಬಿಂಬಿಸುವಂತಿಲ್ಲ. ಗಾಢ ವಿಷಾದ, ವಿಹ್ವಲತೆ, ರೋಷಗಳನ್ನು ಮೈಗೂಡಿಸಿಕೊಂಡು ಸಾಗುತ್ತ ಬೇರೆ ಬೇರೆಯವರಿಗೆ ಸಂದರ್ಭಾನು ಸಾರವಾಗಿ ಶಾಪ – ವರಗಳನ್ನು ನೀಡುವ ಸಿರಿಯ ಮನಸ್ಸು ಸಹಜ ರಾಗ – ದ್ವೇಷಗಳುಳ್ಳ ಸಾಮಾನ್ಯ ಹತಾಶ ಹೆಣ್ಣಿನ ಮನಸ್ಸಿನಂತೆ ಕಾಣಿಸುತ್ತದೆಯೇ ಹೊರತು ಆಕೆ ಈ ಪ್ರದೇಶದ ಸದ್ಗುಣ ಮತ್ತು ಪಾತಿವ್ರತ್ಯದ ಸಾರಸಂಕೇತವಾಗಿ ಕಾಣಿಸುವುದಿಲ್ಲ.

‘ಸಿರಿಸಂದಿ’ಯ ಉತ್ತರಾರ್ಧ ಎಂದರೆ ‘ಸಿರಿ’ಯ ದೇಹಾಂತವಾದ ಬಳಿಕ ಕಥನವು ಸಾಕಷ್ಟು ವ್ಯಕ್ತಿತ್ವ ಪುಷ್ಟಿಯಿಲ್ಲದ ಪಾತ್ರಗಳ ಮೇಳನವಾಗಿದ್ದು ಬಹುಮಟ್ಟಿಗೆ ಪೇಲವವಾಗಿದೆ. ‘ಸಿರಿ’ಯ ವ್ಯಕ್ತಿತ್ವದಷ್ಟು ಸತ್ವ ಸೊನ್ನೆ, ಗಿಂಡೆ, ಅಬ್ಬಗ, ದಾರಗರಲ್ಲಿರುವುದಿಲ್ಲ. ಉಳಿದ ಪುರುಷ ಪಾತ್ರಗಳು ಕೇವಲ ಪೋಷಕ ಪಾತ್ರಗಳಷ್ಟೇ ಆಗಿವೆ. ಯಾವುದೇ ಉನ್ನತ ಜೀವನ ಮೌಲ್ಯಾಂಶ ಗಳು ಇಲ್ಲಿ ಕಂಡುಬರುವುದಿಲ್ಲ.

ತುಳು ಸಮಾಜದವರಿಗೆ ಅದರಲ್ಲೂ ಬಂಟ ಸಮಾಜದವರಿಗೆ ಸಿರಿ ಹಾಗೂ ಆಕೆಯ ಪೀಳಿಗೆಯು ಅತ್ಯಂತ ಮಹತ್ವದ ದೈವಗಳಾಗಿವೆ ಎಂಬುದನ್ನು ಒಪ್ಪುವುದು ಕಷ್ಟ. ತುಳು ಸಮಾಜದ ಹಲವು ಮಂದಿ ಸಿರಿಬಳಗದ ಆವೇಶಕ್ಕೆ ಒಳಗಾಗಿ ಸಿರಿದರ್ಶನ ಉತ್ಸವದಲ್ಲಿ ಭಾಗಿಗಳಾಗುವುದು ನಿಜವಾದರೂ ತುಳುನಾಡಿನ ಇತರ ಪ್ರಧಾನ ದೈವಗಳಾದ ಪಂಜುರ್ಲಿ, ಜುಮಾದಿ, ಲೆಕ್ಕೇಸಿರಿ ಕೊಡಮಣಿತ್ತಾಯಿ, ಮಲರಾಯಿ, ಪಿಲಿಚಾಮುಂಡಿ, ಕೋಡ್ಡಬ್ಬು, ಕಲ್ಕುಡ – ಕಲ್ಲುರ್ಟಿ, ಉಲ್ಲಾಕುಳು, ಉಳ್ಳಾಲ್ತಿ ಮೊದಲಾದವುಗಳ ಬಗೆಗೆ ಸಲ್ಲಿಸುವ ಭಯ ಭಕ್ತಿಗಳನ್ನು ಸಿರಿದೈವಗಳಿಗೆ ಸಲ್ಲಿಸುವುದಿಲ್ಲ.

‘ಸಿರಿ’ಯನ್ನು ಬಂಟ ಸಮಾಜದ ಮೂಲಹೆಣ್ಣೆಂದು ಭಾವಿಸುತ್ತಾರೆಂಬುದು ಬರಿಯ ಉತ್ಪ್ರೇಕ್ಷೆಯ ಮಾತು. ಹಾಗೆ ಭಾವಿಸುವುದಕ್ಕೆ ಯಾವುದೇ ಯುಕ್ತ ಕಾರಣಗಳಿಲ್ಲ. ಇನ್ನು ‘ಸಿರಿಸಂಧಿ’ಯಲ್ಲಿಯೂ, ‘ಸಿರಿ’ ಮತಾಚರಣೆಯಲ್ಲಿಯೂ ಸ್ತ್ರೀಪ್ರಾಧಾನ್ಯ ಎಷ್ಟಿದೆ ಎಂದು ಮರುಪರಿಶೀಲನೆ ಮಾಡಬೇಕಾಗಿದೆ. ‘ಸಿರಿ’ ಒಂದೆರಡು ಕಡೆ ಸ್ತ್ರೀತ್ವದ ವರ್ಚಸ್ಸನ್ನು ತೋರ್ಪಡಿಸಿದ್ದನ್ನು ಬಿಟ್ಟರೆ, ಮುಂದೆ ಆಕೆಯಾಗಲಿ ಅವಳ ಮಗಳಾಗಲೀ, ಮೊಮ್ಮಕ್ಕಳಾಗಲೀ ಸ್ತ್ರೀಪರವಾದ ಹೋರಾಟಕ್ಕಾಗಲಿ, ಹಕ್ಕುಸ್ಥಾಪನೆಗಾಗಲಿ ಮುಂದಾದುದು ಕಂಡುಬರುವುದಿಲ್ಲ.  ಇನ್ನು ‘ಸಿರಿ’ದರ್ಶನದ ಕಳದಲ್ಲಿ ‘ಸಿರಿ’ ಅವೇಶಿತ ಬಳಗವನ್ನು ನಿಯಂತ್ರಿಸುವವನೂ ನಿರ್ದೇಶಿಸುವವನು ಕುಮಾರನೇ ಹೊರತು ಹಿರಿಯ ಸಿರಿಯಲ್ಲ! ಸಿರಿಕಥನದ ಕಥಾಸೂತ್ರವಿರುವುದು ಪುರುಷದೈವವಾದ ಬೆರ್ಮೆರ್ ದೈವದ ಕೈಯಲ್ಲಿ ಹೊರತು ತುಳುನಾಡಿನ ಯಾವುದೇ ಸ್ತ್ರೀದೈವದ ಕೈಯಲ್ಲಿ ಅಲ್ಲ!ಇಡೀ ‘ಸಿರಿಸಂಧಿ’ಯ ಆಶಯ ಬೆರ್ಮೆರ್ ದೈವದ ಮಹಿಮಾನುವರ್ಣನೆಯೇ ಎನ್ನಬಹುದು. ಸತ್ಯನಾಪುರದ ಬಿರ್ಮಾಳ್ವನಿಗೆ ಬೆರ್ಮೆರ್ ದೈವದ ಅನುಗ್ರಹವಾಗುವ ಮೂಲಕ ತೊಡಗುವ ಕಥನ ಅದೇ ಬೆರ್ಮೆರ್ ದೈವದ ಆಗ್ರಹದ ದೆಸೆಯಿಂದ ದುರಂತವನ್ನಪ್ಪುತ್ತದೆ. ಎಂತಲೇ ಸಿರಿಕಥನ ಸ್ತ್ರೀಚೈತನ್ಯದ ಸಂಕಥನವಾಗು ವಂತಿಲ್ಲ.

ಹಲವಾರು ಮಾರ್ಮಿಕ ಸನ್ನಿವೇಶಗಳು ಸಿರಿಕಥೆಯಲ್ಲಿ ಇದ್ದರೂ ಇಡೀ ಕಥನದ ಹರಹಿನಲ್ಲಿ ಒಂದೇ ಮಟ್ಟದ ಸಾವಯವ ಶಿಲ್ಪದ ವಿನ್ಯಾಸ, ಕಾವ್ಯಗುಣ ಸಬಲತೆ ವ್ಯಕ್ತವಾಗು ವುದಿಲ್ಲ.  ಸಂಸ್ಕೃತಿ ನಿರೂಪಣೆಯ ಅಂಶಗಳು ತಕ್ಕಮಟ್ಟಿಗೆ ಇದ್ದರೂ ವಿಸ್ತೃತ ತುಳುನಾಡಿನ ಸಂಸ್ಕೃತಿ ವೈವಿಧ್ಯ ಚಿತ್ರಣಕ್ಕೆ ಕಥಾಬಿತ್ತಿಯಲ್ಲಿ ಅವಕಾಶಗಳು ಕಡಿಮೆಯೆನ್ನಬೇಕು. ಮದುವೆ, ಸೀಮಂತ, ಶಿಶುಜನನ ಸಂಭ್ರಮ, ಮೈನೆರೆದ ಮದುವೆ, ಅಂತ್ಯಕ್ರಿಯೆ, ಉತ್ತರಕ್ರಿಯೆ ಇತ್ಯಾದಿ. ಕೌಟುಂಬಿಕ ಜೀವನಾವರ್ತನ ವಿಧಿಗಳ ವಿವರಗಳೇನೂ ಸಾಕಷ್ಟಿವೆ. ಆದರೆ ಊರ ಹಬ್ಬ, ಹರಿದಿನ, ಊಟಕೂಟ ಉತ್ಸವಾದಿ ಇತರ ಸಾಂಸ್ಕೃತಿಕ ವಿಚಾರಗಳು ಅಷ್ಟಾಗಿಲ್ಲ. ಜನ ಸಮೂಹಗಳೊಳಗೆ ಹೇಳಿಕೊಳ್ಳುವಂಥ ಮೌಲ್ಯಸಂಘರ್ಷವಾಗಲಿ, ಭಿನ್ನ ಸಂಸ್ಕೃತಿಗಳ ಮುಖಾಮುಖಿಯಾಗಲಿ, ಜನಜೀವನವನ್ನು ಅಲುಗಾಡಿಸುವಂಥ ಕಾಳಗವಾಗಲೀ ರ ವೃತ್ತಿಯ ಅಭಿವ್ಯಕ್ತಿಯಾಗಲಿ ಇಲ್ಲಿ ಕಾಣಿಸುವುದಿಲ್ಲ. ಘಟನಾವಳಿಗಳೆಲ್ಲ ಹೆಚ್ಚು ಕಡಿಮೆ ಒಂದು ಸಮಾಜದ ಕಕ್ಷೆಯೊಳಗೇ ನಡೆಯುತ್ತವೆ.

ಸಿರಿ ಜನಪದ ಕಾವ್ಯದಲ್ಲಿ ಮಾತೃಮೂಲೀಯ ಪದ್ಧತಿಯ ಜೀವಾಳವನ್ನಾಗಲಿ, ನಾರಿತ್ವದ ಆದರ್ಶ ಪರಮೋಚ್ಚ ಸ್ಥಿತಿಯನ್ನಾಗಲಿ, ಹೆಣ್ಣಿನ ಅಸಹನೆ ಹುಡುಕಾಟವನ್ನಾಗಲಿ ಶೋಧಿಸುವು ದಕ್ಕಿಂತ ಸಿರಿಕಥನವನ್ನು (ಹಾಗೆಯೇ ಸಿರಿಮತಾಚರಣೆಯನ್ನು) ಮನಃಶಾಸ್ತ್ರೀಯ ದೃಷ್ಟಿಯಿಂದ ಅವಲೋಕಿಸುವುದೇ ಹೆಚ್ಚು ಸಂಗತವೆನಿಸುತ್ತದೆ. ಮನುಷ್ಯ ಸ್ವಭಾವದರ್ಶನ ಇಲ್ಲಿ ವಿಶೇಷ ವಾಗಿ ಲಕ್ಷಿಸತಕ್ಕ ವಿಚಾರವಾಗಿದೆ. ಗಂಡಾಗಲಿ, ಹೆಣ್ಣಾಗಲಿ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ವಿಶಿಷ್ಟವಾಗಿ ವರ್ತಿಸುವುದನ್ನು ಮನಃಶಾಸ್ತ್ರೀಯವಾದ, ಮನುಷ್ಯ ಸ್ವಭಾವ ವಿಶ್ಲೇಷಣೆಯ ದೃಷ್ಟಿಯಿಂದ ವಿವೇಚಿಸಬೇಕಾಗುತ್ತದೆ. ಮನುಷ್ಯ ವ್ಯಕ್ತಿಯ ಸಹಜಸ್ವಭಾವದೊಳಗೆ ಹುದುಗಿ ರುವ ರಾಗ, ದ್ವೇಷ, ಉಕ್ಕುಸೊಕ್ಕು, ಹಮ್ಮು ಬಿಮ್ಮು, ಆಸೆ ಅಸೂಯೆ ಮುಂತಾದ ಪ್ರವೃತ್ತಿಗಳು ವ್ಯಕ್ತಿಯನ್ನು ಹೇಗೆ ಆಟವಾಡಿಸುತ್ತವೆ ಎಂಬುದು ಕುತೂಹಲಕರ ವಿಚಾರ.  ಶಿಷ್ಟ ಅಥವಾ ಜನಪದ ಮಹಾಕಾವ್ಯದ ಮಹಾವ್ಯಕ್ತಿಗಳನ್ನೂ ನಿಜದಲ್ಲಿ ಮಾನವ ಸಹಜ ಭಾವನೆಗಳೇ ಮುನ್ನೆಡೆಸಿವೆ. ಅನೇಕ ಸಂದರ್ಭಗಳಲ್ಲಿ ಮಹಾಕಾವ್ಯಗಳ ಹಲವು ಪಾತ್ರಗಳು ನಮಗೆ ಇಷ್ಟವಾಗುವುದು ಅವರ ಅತಿಮಾನುಷ ವರ್ತನೆಗಳಿಂದಲ್ಲ; ಬದಲಾಗಿ ಅವರು ನಮ್ಮಂತೆಯೇ ವರ್ತಿಸುತ್ತಾರೆ, ಯೋಚಿಸುತ್ತಾರೆ, ಹಿಗ್ಗುತ್ತಾರೆ, ಕುಗ್ಗುತ್ತಾರೆ, ಒಲಿಯುತ್ತಾರೆ, ನಲಿಯುತ್ತಾರೆ, ನಿಟ್ಟುಸಿರಿಡುತ್ತಾರೆ, ಸಿಟ್ಟು ಸೆಡವು ತೋರಿಸುತ್ತಾರೆ, ಛಲ ಸಾಧಿಸಲೆಳಸುತ್ತಾರೆ ಎಂಬುದರಿಂದ.

‘ಸಿರಿ’ ಜನಪದ ಕಾವ್ಯವನ್ನು ಶಿಷ್ಟ ಮಹಾಕಾವ್ಯಗಳೊಂದಿಗೆ ಪೂರ್ಣವಾಗಿ ಹೋಲಿಸ ಬೇಕಾಗಿಲ್ಲ. ಏಕೆಂದರೆ ಶಿಷ್ಟ ಮಹಾಕಾವ್ಯಗಳ ಸ್ವರೂಪ, ಜಾಯಮಾನ, ನಿರೂಪಣೆಯ ವಿಧಾನ, ಪ್ರೌಢಶೈಲಿ, ಬಂಧದ ಬಿಗಿ, ಶಾಸ್ತ್ರ ಸಮನ್ವಿತತೆ, ದರ್ಶನ, ಧಾರ್ಮಿಕ ಮೌಲ್ಯ, ಭೌಗೋಳಿಕ ವ್ಯಾಪ್ತಿ ಇತ್ಯಾದಿಗಳು ಜನಪದ ಮಹಾಕಾವ್ಯಗಳಿಗಿಂತ ಬಹುತೇಕ ಭಿನ್ನವಾಗಿ ರುತ್ತವೆ. ಎರಡೂ ಬಗೆಯ ಕಾವ್ಯಗಳಿಗೆ ಸಾಮಾನ್ಯವಾಗಿ ಅನ್ವಯಿಸುವ ವಿಚಾರಗಳೂ ಇಲ್ಲದಿಲ್ಲ. ಮಾನವ ಸ್ವಭಾವದರ್ಶನ ಮೂಲತಃ ಒಂದೇ ಪಾತಳಿಯದು ಎನ್ನಬೇಕಾಗುತ್ತದೆ.

‘ಸಿರಿ’ಕಥನದ ಪಾತ್ರಗಳನ್ನು, ಮುಖ್ಯತಃ ಸಿರಿಯ ಪಾತ್ರವನ್ನು ಮನಶಾಸ್ತ್ರೀಯ ದೃಷ್ಟಿ ಯಿಂದ ನೋಡುವುದು ಹೆಚ್ಚು ಪ್ರಯೋಜನಕರ. ಆಗ ಆಕೆ ವೈಭಕೃತ ಸ್ಥಾನದಿಂದ ಕೆಳಗಿಳಿದು ನಮ್ಮ ಮನಸ್ಸಿಗೆ ಹತ್ತಿರದವಳಾಗುತ್ತಾಳೆ, ಹೆಚ್ಚು ಅರ್ಥವಾಗುತ್ತಾಳೆ. ಸಿರಿಕಥನದ ಮಾನಯ ಮುಖಗಳು ವೈವಿಧ್ಯಪೂರ್ಣವಾಗಿ ಸುವ್ಯಕ್ತವಾಗುವುದು ‘ಸಿರಿ’ ಮತಾಚರಣೆಯ ಕಳದಲ್ಲಿ. ಸಿರಿಕಥನದ ಪುನರ್‌ನಿರೂಪಣ, ಪುನರಭಿನಯ ಅಲ್ಲಿ ಹಂತ ಹಂತವಾಗಿ ನಡೆಯು ತ್ತಿರುತ್ತದೆ. ಸಿರಿದರ್ಶನದಲ್ಲಿ ದೈವಿಕ ಆವೇಶದ ವಿಚಾರ ಏನಿದ್ದರೂ ಆವೇಶಗೊಳ್ಳುವ ಮಹಿಳೆಯರ ಸುಪ್ತ ಮನಸ್ಸಿನ ಕೆಲವೊಂದು ಅದುಮಿಟ್ಟ ವಿಚಾರಗಳಿಗೆ ಇಲ್ಲಿ ವ್ಯಕ್ತರೂಪ ದೊರಕಿ ಒಂದು ಬಗೆಯ ಮಾನಸಿಕ ತಾಪಶಮನ ಕ್ರಿಯೆ ಜರಗುತ್ತದೆ ಎನ್ನಬಹುದು. ಆದರೆ ಎಲ್ಲ ಸಂದರ್ಭಗಳಲ್ಲೂ ಹೀಗಾಗುತ್ತದೆ ಎನ್ನುವಂತಿಲ್ಲ. ಕೆಲವೊಮ್ಮೆ ಸಮಸ್ಯೆ ಮತ್ತಷ್ಟು ಸಂಕೀರ್ಣಗೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ. ‘ಸಿರಿದರ್ಶನ’ದ ಹಿನ್ನೆಲೆಯಲ್ಲಿ ಸುಪ್ತ ಮನಸ್ಸಿನ ಕಾವು ನೋವುಗಳ ನೂರಾರು ಮುಖಗಳು ಅವಿತುಕೊಂಡಿರುವುದನ್ನು ಮನೋ ವಿಜ್ಞಾನ ಗುರುತಿಸಬಲ್ಲುದು.

(ಸಿರಿ ಮತಾಚರಣೆಯ ವಿವರವು ಬೇರೊಂದು ಲೇಖನಕ್ಕೆ ವಿಷಯವಾಗಬಲ್ಲುದಾದುರಿಂದ ಇಲ್ಲಿ ಈ ವಿಚಾರವನ್ನು ವಿವರಿಸಿಲ್ಲ.)

ಕೆಲವೊಂದು ಮಿತಿಗಳಿದ್ದರೂ ಒಂದು ಪ್ರದೇಶದ ಮುಖ್ಯ ಸಾಂಸ್ಕೃತಿಕ ಪುರಾಣಗಳಲ್ಲಿ ಒಂದು ಎಂಬ ಪ್ರಾಶಸ್ತ್ಯವು ಸಿರಿಸಂಧಿಗೆ ಇದ್ದೇ ಇದೆ. ಅದು ಜಡಪುರಾಣವಾಗಿ ಉಳಿಯದೆ ಚಲನಶೀಲ  ಕಥನವಾಗಿ ಸಿರಿ ಉಪಾಸಕರ ಮೌಖಿಕ ಪರಂಪರೆಯಲ್ಲಿ ಊರ್ಜಿತಗೊಳ್ಳುತ್ತಾ ಇದೆ.

ಸಿರಿಕಥನದ ಕಾವ್ಯಸ್ವರೂಪ, ನಿರೂಪಣೆಯ ರೀತಿ, ಭಾಷೆಯ ಐಸಿರಿ, ಬದುಕಿನ ಚಿತ್ರಣ ಇತ್ಯಾದಿಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಈ ಎಲ್ಲ ಅಂಶಗಳನ್ನು ಸಮಷ್ಟಿಯಾಗಿ ಪರಿಗಣಿಸಿದರೆ, ‘ಸಿರಿ’ ಜನಪದ ಮಹಾಕಾವ್ಯವು ಕನ್ನಡ ಮೊದಲಾದ ಇತರೆ ಭಾಷೆಗಳ ಜನಪದ ಮಹಾಕಾವ್ಯಗಳ ಪಂಕ್ತಿಯಲ್ಲಿ ನಿಲ್ಲುವುದಕ್ಕೆ ಅರ್ಹವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

ಪರಾಮರ್ಶನಸಾಹಿತ್ಯ

೧. ಶೀನಪ್ಪ ಹೆಗ್ಗಡೆ. ೧೯೯೧  ಸಮಗ್ರ ಸಾಹಿತ್ಯ   ಸಂ. ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಪ್ರ. : ಪೊಳಲಿ ಶೀನಪ್ಪ ಹೆಗ್ಡೆ ಜನ್ಮ ಶತಾಬ್ದಿ ಸಮಿತಿ.

೨. ಡಾ. ಬಿ. ಎ. ವಿವೇಕ ರೈ, ೧೯೮೫  ತುಳು ಜನಪದ ಸಾಹಿತ್ಯ ಪ್ರ : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೩. ತುಳುವ ದರ್ಶನ, ೧೯೮೭  ಮೂಲ ಡಾ. ಪೀಟರ್ ಜೆ. ಕ್ಲಾಸ್, ಅನುವಾದಕರು : ಪ್ರೊ. ಎ. ವಿ. ನಾವಡ, ಪ್ರೊ. ಸುಭಾಶ್ಚಂದ್ರ ಪ್ರ : ಪ್ರಾದೇಶಿಕ ವ್ಯಾಸಂಗ, ಕುಂದಾಪುರ

೪. ಡಾ. ಗಾಯತ್ರಿ ನಾವಡ, ೧೯೯೯  ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು  ಪ್ರ. : ರಾ.ಗೋ.ಪೈ. ಸಂಶೋಧನ ಕೇಂದ್ರ, ಉಡುಪಿ.

೫. ಪ್ರೊ. ಎ. ವಿ. ನಾವಡ, ೧೯೯೯  ರಾಮಕ್ಕ ಮುಗ್ತೇರ‍್ತಿ ಕಟ್ಟಿದ ಸಿರಿ ಪಾಡ್ದನ  ಪ್ರ. : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೬. ಡಾ. ಕೆ. ಚಿನ್ನಪ್ಪ ಗೌಡ, ೨೦೦೩  ಸಂಸ್ಕೃತಿ ಸಿರಿ  ಮದಿಪು ಪ್ರಕಾಶನ, ಮಂಗಳ ಗಂಗೋತ್ರಿ.

೭. ಅಮೃತ ಸೋಮೇಶ್ವರ, ೨೦೦೭  ತುಳುವ ಜಾನಪದ, ಕೆಲವು ನೋಟಗಳು  ಪ್ರ.: ಕನ್ನಡ ವಿಶ್ವವಿದ್ಯಾಲಯ, ಹಂಪಿ.