ಕೆಲವು ನನ ಸಂಪಾದನೆಗಳು

) ಬೋಳ ಚಿತ್ತರಂಜನದಾಸ ಶೆಟ್ಟರು ‘ಬಿನ್ನೆದಿ – ತಮ್ಮಲೆ ಅರುವತ್ತಕಟ್ಟ್ ಸಿರಿ ಪಾಡ್ದನ’ (ನೆಂಟಳು – ಮಾವ ಅಳಿಯ ಕಟ್ಟಿನ ಸಿರಿಪಾಡ್ದನ) (೨೦೦೮) ಎಂಬ ‘ನನ ಪಾಡ್ದನ’ ವನ್ನು ಬರೆದರು ಮತ್ತು ಹಾಡಿದರು. (ಪ್ರಕಟಿತ ಪುಸ್ತಕದೊಂದಿಗೆ ಮುದ್ರಿತ ಅಡಕತಟ್ಟೆ ಸೇರಿಕೊಂಡಿದೆ.) ಪಾಡ್ದನದ ಆಕಾರದಲ್ಲಿ ‘ಹೊಸ ಪಾಡ್ದನ ಕಾವ್ಯ’ ರೂಪಿಸುವ ಪ್ರಯತ್ನವಿದು. ಸಿರಿ ಪಾಡ್ದನದ ವಿವಿಧ ಬಗೆಯ ಸಂಪಾದನೆಗಳಿಗೆ, ಈ ಕಾವ್ಯ ಸೃಷ್ಟಿ ಒಂದು ನನ ಸೇರ್ಪಡೆ. ಪಾಡ್ದನ ಕಾವ್ಯದ ಮರುಸೃಷ್ಟಿ ಸಂಭವಿಸುವಾಗ, ಅದರ ಹಿಂದಿರುವ ತಾತ್ವಿಕತೆಗಳನ್ನು ಗಮನಿಸೋಣ.

‘ಸಿರಿ ಪಾಡ್ದನದ ಬೇರುಗಳು ಅಳಿಯಕಟ್ಟು ಸಂಪ್ರದಾಯದಲ್ಲಿವೆ; ಆ ಸಂಪ್ರದಾಯ ಅಳಿಯಬಾರದು. ‘ನಾಗ ಬೆರ್ಮೆರ್’ – ಇವರ ಮಹಾತ್ಮೆಯಿಂದ ಮೂಡಿಕೊಂಡ ‘ಸಿರಿ ದೇವಿಯ ಮಹಾತ್ಮೆ’ ಆರಾಧನೀಯ. ಎಲ್ಲರಂತೆ ನೀರು – ನೆತ್ತರುಗಳಿಂದ ಮೂಡದ ಆಕೆ, ಲೋಕಕ್ಕೆ ಆಗಮಿಸಿದವಳು. ಅಳಿಯ ಕಟ್ಟು ಸಂಪ್ರದಾಯಗಳ ಜೊತೆ ಅವಳ ಬಾಳಿನ ದುಃಖ – ದುರಂತ ಗಳು ಬೆಸೆದಿವೆ – ಅದು ಹಾಡಾಗುವ ಬಯಕೆಯು ಕವಿಗೆ ಅಗಾಧವಾದುದು’. ಈ ಕಾವ್ಯ ನಿರ್ಮಾಣದ ಹಿಂದಿನ ತವಕಗಳನ್ನು ಹೀಗೆ ಸಂಗ್ರಹಿಸಬಹುದು.

ಅಕ್ಷರಮುದ್ರಣ ಮತ್ತು ಧ್ವನಿಮುದ್ರಣ ತಂತ್ರಜ್ಞಾನವನ್ನು ಬೆಸೆಯುವ ಉತ್ಸಾಹ, ಹಾಡುಗಬ್ಬವನ್ನು ಹೊಸಕಾಲದಲ್ಲಿ ಮರುಕಟ್ಟಬೇಕೆಂಬ ಬಯಕೆ, ಬಂಟ ಸಮಾಜದ ಮಹಾತ್ಮಳೋರ್ವಳ ಬಾಳ ಚಿತ್ರಣಾಸಕ್ತಿ, ತುಳುನಾಡಿನ ವಿಶಿಷ್ಟ ಸಂಪ್ರದಾಯಗಳ ಬಗ್ಗೆ ಬೆರಗು ಮತ್ತು ಅವುಗಳನ್ನು ಕಳಕೊಳ್ಳುವ ಆತಂಕ, – ಇವೆಲ್ಲ ಈ ಪಾಡ್ದನಾಕಾರದ ಕಾವ್ಯದ ಹಿಂದಿದೆ. ಪಾಡ್ದನಾಕಾರವನ್ನು ಕಾವ್ಯವು ತನ್ನ ಶಿಲ್ಪರೂಪಕ್ಕೆ ಅಲಂಕರಣವಾಗಿಸುತ್ತದೆ; ಪಾಡ್ದನದ ಸೂಕ್ಷ್ಮ ವಿವರಣ ಮಂಡನೆಯ ಕ್ರಮವು ಅದರ ಗಮನವಲ್ಲ. ಕುಮಾರ – ದಾರು ಮರಣ ಮತ್ತು ಬೋಳದರಸು ‘ತಂಗಿ’ಯಾಗಿ ಸಿರಿಯನ್ನು ಸ್ವೀಕರಿಸುವಲ್ಲಿಗೆ ಈ ಕಾವ್ಯದ ಕಥಾನಕವು ನಿಂತುಬಿಟ್ಟಿದೆ.

‘ಡಿಜಿಟಲ್‌ಯುಗ’ದ ಉತ್ಪನ್ನವಾಗಿ ಈ ‘ಸಂಪಾದನೆ’ಯನ್ನು ಪರಿಗಣಿಸುವುದು ‘ಅಡಕತಟ್ಟೆ’ ಪುಸ್ತಕದ ಜೊತೆಗಿರುವ ಕಾರಣಕ್ಕಾಗಿ ಮಾತ್ರ ಅಲ್ಲ. ತುಳುನಾಡಿನ ಭೌಗೋಳಿಕ, ಸಾಮಾಜಿಕ ವಿನ್ಯಾಸಗಳು ತೀವ್ರ ಪರಿವರ್ತನೆಯ ತಿರುವಿನಲ್ಲಿವೆ. ಗೋಳೀಕರಣದಿಂದ ಇಲ್ಲಿಯ ಆರ್ಥಿಕ ವಿನ್ಯಾಸ ಬದಲಿ – ಸಮುದಾಯಗಳ ವಿನ್ಯಾಸವೂ ಪಲ್ಲಟವಾಗಿವೆ. ಸಂಸ್ಕೃತಿಯ ಹೊಸ ವಿನ್ಯಾಸಗಳನ್ನು ರೂಪಿಸುವ ಮೂಲಕ ಅಧಿಕಾರಕೇಂದ್ರಗಳು ಹೊಸ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಬಂಟ, ಬಿಲ್ಲವ, ಮೊಗರ ಹಾಗೂ ಇನ್ನಿತರ ಹಲವು ತುಳು ಮನೆಮಾತಿನ ಸಮುದಾಯಗಳ ಪುನರ್ವಿನ್ಯಾಸವು ಹೊಸ ಬಗೆಯ ಸಂಸ್ಕೃತಿ ಪರಿಕರ ಗಳನ್ನು ಕಟ್ಟಿಗೊಂಡು ದಾಂಗುಡಿ ಇಡುವ ಕಾಲವಿದು.

) ಮಂಗಳೂರು ವಿ.ವಿ.ಯ ಪದವಿ ತರಗತಿಗಳ ಕನ್ನಡ ಕಾವ್ಯ ಪಠ್ಯಪುಸ್ತಕಗಳಲ್ಲಿ ಎರಡು ಬಾರಿ ಸಿರಿಪಾಡ್ದನದ ಕನ್ನಡಾನುವಾದ ಸೇರ್ಪಡೆಯಾಯಿತು. (೨೦೦೩ – ಕಡಲಸಿರಿ; ೨೦೦೭ – ಇನಿಜೇನು) ಇವು ಸಿರಿ ಪಾಡ್ದನ ಸಂಪಾದನೆಯ ತಾತ್ವಿಕತೆ ಬಗೆಯುವಲ್ಲಿ ಪರಿಗಣಿಸಲೇಬೇಕಾದುದು.

ಇಪ್ಪತ್ತೊಂದನೆಯ ಶತಮಾನ ಮೂಡುತ್ತಿದ್ದಂತೆ ಮಂಗಳೂರು ವಿ.ವಿ. ಕನ್ನಡ ಭಾಷಾ ಪಠ್ಯ ಪುಸ್ತಕಗಳಲ್ಲಿ ಹೊಸತನ ತರಲು ಯತ್ನಿಸಿದಾಗ ಕರಾವಳಿಯ ಮೌಖಿಕ ಪರಂಪರೆಯು ಈ ಕೆಲಸಕ್ಕೆ ಸಹಾಯ ಮಾಡಿತು.

ಕನ್ನಡದ ಅಧ್ಯಯನವೆಂದರೆ ಸಂಸ್ಕೃತಿ ಅಧ್ಯಯನ; ದೇಸಿಗೆ ಅವಕಾಶ ಅಗತ್ಯ ; ಸ್ಥಳೀಯ ಸಂಸ್ಕೃತಿಯ ಸೇರ್ಪಡೆ ; ಜನಪದವು ಲಿಖಿತ ಸಾಹಿತ್ಯದಂತೆಯೇ ಮುಖ್ಯ ; ‘ಪ್ರಗತಿಪರ’ ಅಂಶಗಳನ್ನೊಳಗೊಂಡ ನಿರೂಪಣೆಗಳೆಲ್ಲ ಪಠ್ಯಗಳಾಗಲು ಯೋಗ್ಯ – ಇಂತಹ ಚಿಂತನಾ ನೆಲೆಗಳು ಒಟ್ಟಾಗಿ ಇಲ್ಲಿ ಕೆಲಸಮಾಡಿವೆ.  ಮಂಟೇಸ್ವಾಮಿ, ಮಲೆಯಮಾದೇಶ್ವರ, ಜನಪದ ಮಹಾಭಾರತದಂತಹ ಕನ್ನಡದ ಮೌಖಿಕ ಕಾವ್ಯಗಳ ಭಾಗಗಳು ಭಾಷಾಪಠ್ಯವಾದವು.  ಆದರೆ ‘ಸಿರಿ ಪಾಡ್ದನ’ದ ಭಾಗಗಳು ಅಮೃತರಿಂದ ಕನ್ನಡಕ್ಕೆ ಅನುವಾದಗೊಂಡು ಪಠ್ಯವಾದುವು.  ಮಂಗಳೂರು ವಿ.ವಿ.ಯ ದೊಡ್ಡಭಾಗದ ತರಗತಿಗಳೊಳಗೆ ತುಳು ತೀರಾ ಪರಿಚಿತ ಭಾಷೆ ಯಾದರೂ ಇಲ್ಲಿ ಕನ್ನಡಕ್ಕೆ ಅನುವಾದವೇಕೆ? ಇದು ತಾಂತ್ರಿಕ ಕಾರಣಗಳಿಂದಾದುದೂ ನಿಜ; ರಾಜ್ಯ ಭಾಷೆಯ ಜೊತೆ ‘ತುಳು’ ಮಾಡಲೇಬೇಕಾದ ಹೊಂದಾಣಿಕೆಯಾಗಿಯೂ ನಿಜ.  ‘ಕಡಲ ಸಿರಿ’ ಪುಸ್ತಕಗಳಲ್ಲಿ ಗಂಡ ಮತ್ತು ಗಂಡನ ಮನೆಯ ವಿರುದ್ಧ ಸಿರಿಯ ಪ್ರತಿಭಟನೆಯ ಭಾಗಗಳನ್ನೇ ಆಯ್ಕೆ ಮಾಡುವಲ್ಲಿ ಮಹಿಳಾಪರ ಸಂಕಥನಗಳು ತರಗತಿಯೊಳಗೆ ನಿರ್ವಹಣೆ ಯಾಗುವ ಆಸಕ್ತಿಯಿದೆ.  ಈ ಆಯ್ಕೆಯು ‘ಪ್ರತಿಭಟನೆ’ ಸಿರಿಕಾವ್ಯದ ಮುಖ್ಯ ನೆಲೆಗಳಲ್ಲಿ ಒಂದು – ಎಂಬ ಓದಿನಿಂದ ಹುಟ್ಟಿದೆ. ‘ಇನಿಜೇನು’ ಪಠ್ಯಪುಸ್ತಕದಲ್ಲಿ ಸಿರಿಪಾಡ್ದನದ ದೀರ್ಘ ಭಾಗವಿದೆ. ಮೂಲಪಾಡ್ದನದಲ್ಲಾಗಲೀ, ಅಮೃತರ ಕನ್ನಡ ಅವತರಣಿಕೆಯಲ್ಲಾಗಲೀ ಇಲ್ಲದ ಅಧ್ಯಾಯ ವಿಭಜನೆ, ಬದಿಶೀರ್ಷಿಕೆಗಳು ಇಲ್ಲಿ ಕಾಣಿಸುತ್ತವೆ.  ಇದು ತರಗತಿ, ಪರೀಕ್ಷೆ ಮತ್ತಿತರ ನಿರ್ವಹಣೆಗಾಗಿ ಮಾಡುವ ತಂತ್ರಗಳು.  ಸಿರಿಯ ಹುಟ್ಟಿನಿಂದ ತೊಡಗಿ ಸಿರಿಯು ಮಗು ಹೆತ್ತು ಮಾಯವಾಗುವವರೆಗಿನ ಭಾಗಗಳು ಇಲ್ಲಿ ಆಯ್ಕೆಯಾಗಿವೆ.  ಈ ಬಗೆಯ ಆಯ್ಕೆ ಸಿರಿಯ ವ್ಯಕ್ತಿತ್ವಕ್ಕೆ ಪ್ರತಿಭಟನೆ ಮತ್ತು ದುರಂತ ಛಾಯೆಯನ್ನು ಅಳವಡಿಸುತ್ತಿದೆ.  ತುಳು ಭಾಷೆ, ಪಾಡ್ದನದ ಹಸಿತನ, ಪಾಡ್ದನಾಲಾಪನಾ ಕ್ರಮ, ಸಂದರ್ಭ – ಪ್ರದರ್ಶಕ ಹಿನ್ನಲೆ ಇವು ಯಾವುವೂ ಇಲ್ಲದ ಇವು ವಿದ್ಯಾರ್ಥಿ ಅಧ್ಯಯನಕ್ಕಾಗಿಯೇ ಆದ ಸಂಪಾದನೆಗಳು ಎಂಬುದು ಗಮನಿಸಬೇಕಾದ ಸಂಗತಿ. ಅಧ್ಯಯನಕ್ರಮ, ತರಗತಿ ನಿರ್ವಹಣೆ ಮತ್ತು ಪರೀಕ್ಷಾ ನಿರ್ವಹಣೆಗಳಲ್ಲಿ ಲಿಖಿತ ಸಾಹಿತ್ಯದ ಸ್ವರೂಪವೇ ಇಲ್ಲಿ ಕೆಲಸ ಮಾಡುತ್ತಿರುವುದು ಅತ್ಯಂತ ವಾಸ್ತವ.

) ತುಳು ಜನಪದ ಅಧ್ಯಯನದ ಆರಂಭಿಕರಲ್ಲಿ ಒಬ್ಬರಾದ ಅಮೃತರು, ತಮ್ಮ ಇಳಿವಯಸ್ಸಿನಲ್ಲಿ ಅಧ್ಯಯನದ ಹೊಸ ತೆರೆಗಳನ್ನು ಸರಿಸುತ್ತಿರುವುದು ವಿಸ್ಮಯವಾಗಿದೆ.  ಅದಕ್ಕಾಗಿ ತಮ್ಮದೂ ಸೇರಿದಂತೆ ಇದುವರೆಗಿನ ಅಧ್ಯಯನಗಳನ್ನು ಅವರು ತಣ್ಣಗೆ ‘ಡಿಕನ್ ಸ್ಟ್ರಕ್ಟ್’ (ಒಡೆದು ಮರುಕಟ್ಟುವುದು) ಮಾಡಿಕೊಳ್ಳುತ್ತಾರೆ.

‘ಕರಾವಳಿ ಜಾನಪದ’ (೨೦೦೭, ಸಂ: ಎ. ವಿ. ನಾವಡ) ದಲ್ಲಿ ‘ಸಿರಿ ಕಥಾನಕ ಮನಶಾಸ್ತ್ರೀಯವಾಗಿ’ ಎಂಬುದಾಗಿ ಬರೆಯುವಾಗ ಅವರು ಎತ್ತುವ ಹೊಸ ಒಳನೋಟಗಳು ಹೀಗಿವೆ:

[1]

೧) ಸಿರಿ ಆರಾಧನೆ – ಪಾಡ್ದನ ಸಮಾಜದ ಜಾತಿಪ್ರಧಾನ ವ್ಯವಸ್ಥೆಯ ಜೊತೆ ತಳಕು ಹಾಕಿದೆ.  ಜಾತೀಯತೆಯ ವಿಷದ ಹರಿವು ಸಿರಿ ಆರಾಧನೆಯನ್ನು ಬಿಟ್ಟಿಲ್ಲ.

೨) ಸಿರಿ ಆರಾಧನೆಯನ್ನು ‘ಶುದ್ದೀಕೃತ ಕುಲೆ ಆರಾಧನೆ’ ಯಾಗಿ ತುಳು ಆರಾಧನಾ ಪರಂಪರೆಯಲ್ಲಿ ಹೊಸದಾಗಿ ಕಾಣಬೇಕಿದೆ.

೩) ಸಂಭ್ರಮ ಮಿಶ್ರಿತ ಕುತೂಹಲ, ಪ್ರಶಂಸಾಪರ ಮನೋಧರ್ಮ, ಉದಾರವಾದೀ ವಿಮರ್ಶೋಕ್ತಿಗಳು ಹಲವು ಬಾರಿ ಸಿರಿ ಅಧ್ಯಯನದಲ್ಲಿ ಕೊರತೆಯಾಗಿವೆ. ತಮ್ಮ ಸಿದ್ಧ ತಾತ್ತ್ವಿಕತೆಗೆ ಬದ್ಧವಾಗಿ ಓದಿಕೊಳ್ಳುವ ಕ್ರಮಗಳು ಜ್ಞಾನಶಾಖೆಯಲ್ಲಿ ಸ್ಥಾಪಿತ ಮನೋಧರ್ಮವಾಯಿತೆಂಬ ಎಚ್ಚರವನ್ನು ಅಮೃತರ ಒಳನೋಟಗಳು ತೋರಿಸಿ ಕೊಡುತ್ತವೆ.

೪) ಸಿರಿಪಾಡ್ದನ – ಮಾತೃವಂಶೀಯತೆ; ಸಿರಿಪಾಡ್ದನ – ನಾರಿಧರ್ಮ; ಸಿರಿ ಪಾಡ್ದನ – ಬಂಟ ಸಮಾಜದ ಮೂಲಸ್ತ್ರೀತ್ವ; ಸಿರಿಪಾಡ್ದನ – ಸ್ತ್ರೀ ಚೈತನ್ಯ ; ಸಿರಿಪಾಡ್ದನ – ಸ್ತ್ರೀತ್ವ; ಸಿರಿಪಾಡ್ದನ – ಮಹಾಕಾವ್ಯ ಇಂತಹಾ ಎಲ್ಲ ಸಮೀಕರಣಗಳನ್ನು ಮರುಪರಿಶೀಲಿಸುವ ಅಗತ್ಯವಿದೆ.

೫) ಸಿರಿಯ ವ್ಯಕ್ತಿತ್ವ ಮತ್ತು ಬಾಳಿನ ಘಟನಾವಳಿಗಳನ್ನು ಭವ್ಯತೆ – ವೈಭಕರಣಗಳನ್ನು ಬಿಟ್ಟು ನೋಡಲು ಸಾಧ್ಯವೇ? ಹಾಗೆ ನೋಡದಿದ್ದರೆ ಎಂತಹಾ ಪ್ರಮಾದಗಳಾಗಲು ಸಾಧ್ಯವಿದೆ? ಹೀಗೆ ಚಿಂತಿಸುವ ಅಮೃತರಲ್ಲಿ ಸಿರಿಪಾಡ್ದನ ಪಠ್ಯದ ಮರುಓದಿಗಾಗಿ ಈವರೆಗಿನ ಅಧ್ಯಯನದ ತಾತ್ವಿಕ ಕೇಂದ್ರಗಳನ್ನು ಜರುಗಿಸಿ ತೋರಿಸುವ ನಿರಚನ ಗುಣವಿದೆ.

೬) ಸಿರಿಪಾತ್ರವನ್ನು ಮಾನವ ಸ್ವಭಾವ ದರ್ಶನವಾಗಿ ಕಾಣುವ ಅಮೃತರು ಸಿರಿ ಕಥಾನಕ ಮತ್ತು ಚಾತ್ರೆಯಲ್ಲಿ ಸಾಮಾಜಿಕರ ಸುಪ್ತಮನಸ್ಸಿನ ನೋವು ಮತ್ತು ಕಾಮಗಳ ಸಂಕೀರ್ಣ ಮುಖವಿದೆ ಎನ್ನುತ್ತಾರೆ.

‘ಸಿರಿ ದರ್ಶನದ ಕಳ – ಕೆಲವು ಟಿಪ್ಪಣಿಗಳು’ ಎಂಬ ಅವರ ಇನ್ನೊಂದು ಲೇಖನವು[2] ಸಿರಿಜಾತ್ರೆಯ ವಿವರಗಳನ್ನು ಬಹುಮುಖಿಯಾಗಿ ಚಿತ್ರಿಸುವ ವಿಧಾನವುಳ್ಳದ್ದು. ಹೆಚ್ಚು ತೆರೆದ ಕಣ್ಣಿನಿಂದ ಅಧ್ಯಯನಕಾರನು ಸಾಗಲು ಸಾಧ್ಯವೇ – ಎಂಬ ಈ ಆಸಕ್ತಿಯನ್ನು ಮಾನವ ಜೀವದ ಸಂಕೀರ್ಣತೆಯನ್ನು ಮಾನಯ ಅಂತಃಕರಣದ ನೆಲೆಯಲ್ಲಿ ದಾಖಲಾತಿ ಮಾಡುವ ಕ್ರಮವಾಗಿಯೂ ಕಾಣಬಹುದು. ಈ ಬಗೆಯ ಸಂಪಾದನೆಗೆ ಬೇಕಾಗಿರುವ ತಳಪಾಯ ಸಿದ್ಧಾಂತವು ಮಾನಯ ಅಂತಃಕರಣ ಸೂಕ್ಷ್ಮ ಎಚ್ಚರವುಳ್ಳ ಗ್ರಹಿಕಾಶಕ್ತಿ. ಆದುದರಿಂದ ಅವರು ಚರ್ಚಿಸುವ ಲೈಂಗಿಕ ಸಮಸ್ಯೆ; ಸಿರಿ ನಿಯಂತ್ರಕ ಕುಮಾರರಲ್ಲಿರುವ ‘ದ್ವಿ ವ್ಯಕ್ತಿತ್ವ’ದ ಬಗ್ಗೆ ಕೊಡುವ ಒಳನೋಟಗಳನ್ನು ಯಾವ ಸೈದ್ಧಾಂತಿಕ ಅಧ್ಯಯನಕಾರನಿಗೂ ಕೊಡಲು ಸಾಧ್ಯವಾಗಿಲ್ಲ.

ಅಮೃತರ ಮೆಲುದನಿಯ ಪ್ರಯತ್ನಗಳಿಗೆ ಜರುಗಿಸಲು ಸಾಧ್ಯವಾದುದು – ಖಚಿತ ಸಿದ್ಧಾಂತದ ಹರಿತ ಉಪಕರಣಗಳೊಂದಿಗೆ ಸಿರಿ ಪಾಡ್ದನ ಪಠ್ಯ ಪ್ರವೇಶಿಸಿದವರನ್ನು – ಎಂಬುದನ್ನು ಗಮನಿಸಬೇಕು. ತುಳು ಸಂಸ್ಕೃತಿಯನ್ನು ಪಾಡ್ದನದ ವಿವರಗಳಿಂದ ಪುನರ್‌ರೂಪಿಸುತ್ತಿದ್ದವರು, ಕೊಂಚ ಪೇಲವವಾಗಿ ಕಾಣುವ ಅತ್ಯಂತ ಆರಂಭಿಕ ಅಧ್ಯಯನಗಳು ಅಮೃತರ ನಿರಚನೆಗೆ ಒಳಗಾಗಿಲ್ಲ. ಹಾಗೆಯೇ ಅತ್ಯಂತ ಆಧುನಿಕವಾದ, ಅಂತರ್ಜಾಲದಲ್ಲಿ ಪಯಣಿ ಸುತ್ತಿರುವ ಸಿರಿಯೂ ಅಮೃತರ ಮರು ಓದಿಗೆ ಸಿಗದೆ ತಪ್ಪಿಸಿಕೊಂಡಿದ್ದಾಳೆ.

) ಡಾ. ಸುನೀತಾ ಶೆಟ್ಟಿಯವರು ‘ಸಿರಿ ಪಾಡ್ದನದ ಸಮಸ್ಯೆಲು’ ಎಂಬುದಾಗಿ ಎತ್ತುವ ವಿಶ್ಲೇಷಣೆ ಇಲ್ಲಿ ಸೇರಿಸಿಕೊಳ್ಳಬೇಕಾದ್ದು. ತುಳುಪಾಡ್ದನಗಳ ಬಗ್ಗೆ ‘ತುಳು’ವಿನಲ್ಲೇ ಪುಟ್ಟ ಸೃಜನಶೀಲ ಮರುಓದು ನಡೆಸಿದ ಮಹತ್ವ ಇದಕ್ಕಿದೆ.[3] ಸಿರಿಯ ಬಗೆಗಿನ ಐತಿಹ್ಯ, ಅಲೌಕಿಕತೆ, ಮಹಾತ್ಮೆಗಳನ್ನು ಬದಿಗಿಟ್ಟು; ಹೆಣ್ಣಿನ ಮಾನವ ಸಹಜ ವ್ಯಕ್ತಿತ್ವವನ್ನು ಮುಖ್ಯವಾಗಿಟ್ಟು ನೋಡುವ ಈ ಓದು ಹೆಣ್ಣಿನ ಅಂತಃಕರಣದ ನೆಲೆಯಿಂದ ಹೊರಡು ವಂಥದ್ದು.  ಕುಮಾರನಿಗೆ ಪಾಡ್ದನದಲ್ಲೂ, ಸಿರಿ ಜಾತ್ರೆಯಲ್ಲೂ ಸಿಗುವ ಪ್ರಾಮುಖ್ಯ; ನಿಯಂತ್ರಕ ಪಾತ್ರವು ಮತ್ತೆ ಪುರುಷಾಕಾರವು ಆಳದಲ್ಲಿ ಮೆರೆಯುತ್ತಿರುವುದರ ಸೂಚಕವೆನ್ನು ತ್ತದೆ ಈ ಓದು.  ಸಿರಿಯ ಬಾಳಿನ ಪೂರ್ವಾರ್ಧದ ಸ್ವಾಭಿಮಾನದ ವ್ಯಕ್ತಿತ್ವ, ಉತ್ತರಾರ್ಧದಲ್ಲಿ ಸವತಿಯನ್ನು ಸೋಲಿಸುವ ಅವಳ ಮೆರೆದಾಟವು ಒಂದು ಸಮಸ್ಯೆಯಾಗಿ ಲೇಖನಕ್ಕೆ ಕಂಡಿದೆ. ಆದರೆ ಅಮೃತರು ಕೊಡುವ ‘ಸಿರಿ ಸಂಕೀರ್ಣ ಮಾನವ ಸ್ವಭಾವವನ್ನು ದರ್ಶಿಸುತ್ತಾಳೆ” ಎಂಬ ಸಿರಿಪಾಡ್ದನದ ಓದು ಈ ಕಗ್ಗಂಟನ್ನು ಇದ್ದಕ್ಕಿದ್ದಂತೆ ಬಿಡಿಸಿಕೊಡುತ್ತದೆ.

) ದಿನಾಂಕ ೫.೯.೨೦೦೯ ರಂದು ಸಂಜೆ ೬.೦೦ ಗಂಟೆಗೆ ‘ಗೂಗ್ಲ್ ಇಂಡಿಯಾ’ ಹುಡುಕುತಾಣದಲ್ಲಿ ‘ಸಿರಿ’ ಎಂಬ ಶಬ್ದದ ಮೂಲಕ ಹುಡುಕಿದಾಗ ತೆರೆದುಕೊಂಡ ಕಂಪ್ಯೂಟರ್ ಪುಟಗಳಲ್ಲಿ ಮೊದಲ ಎರಡನ್ನು ಪ್ರಧಾನವಾಗಿಸಿ ಈ ಮುಂದಿನ ವಿವರಣೆ ಇದೆ. ಉಪಲಬ್ಧ ಮೊದಲ ೨೦ ಅಂತರ್ಜಾಲ ತಾಣಗಳು, ಸಿರಿಯ ‘ಲೋಕಪಯಣ’ ದ ಹಿಂದೆ ಇರುವ ಒಳಬಲಗಳನ್ನು, ಸಿರಿಯ ಯಾವ ಬಗೆಯ ಅಧ್ಯಯನವು ಅಂತರ್ಜಾಲದಲ್ಲಿ ಯಜಮಾನಿಕೆ ವಹಿಸಿದೆ ಎಂಬುದನ್ನು ಸೂಚಿಸಿಕೊಡುತ್ತವೆ.

ಏಷ್ಯಾದ ಜಾನಪದ ಅಧ್ಯಯನದ ಭಾಗವಾಗಿ, ‘ಹಿಂದೂ ವಿಸ್‌ಡಂ’ ಎಂಬ ಗ್ರಹಿಕೆಯಾಗಿ, ಬೃಹತ್ ಜನಪದ ಮಹಾಕಾವ್ಯವಾಗಿ, ಅಮೇರಿಕಾದಂತಹ ದೇಶಗಳಿಗೆ ಪ್ರಧಾನ ಆಸಕ್ತಿಯ ವಿಷಯವಾಗಿ ‘ಸಿರಿ’ ಕಾಣಿಸುತ್ತಾಳೆ. ಗೋಪಾಲನಾಯ್ಕರು ನಿರೂಪಿಸಿದ ಪಾಡ್ದನವನ್ನು ಲೌರಿ ಹಾಂಕೋ ಮತ್ತು ಬಳಗ ಪಠ್ಯೀಕರಿಸಿದ ಸಂಗತಿ ಗೂಗ್ಲ್ ಹುಡುಕಾಟದಲ್ಲಿ ಎದ್ದು ಕಾಣುತ್ತಿರುವ ಪ್ರಧಾನ ವಿದ್ಯಮಾನ.[4] ಜನಪದತಜ್ಞರು ಮತ್ತು ಮಾನವಶಾಸ್ತ್ರಜ್ಞರೊಳಗೆ ತಾತ್ವಿಕ ಎದುರಾಳಿತನವಿದ್ದಾಗಲೂ, ಅಂತರ್ಜಾಲ ತಾಣಗಳಲ್ಲಿ ಲೌರಿ ಹಾಂಕೋ ಮತ್ತು ಬಳಗದ ದೃಷ್ಟಿಕೋನಗಳು ಪ್ರಭಾವಶಾಲಿಯಾಗಿ ಕಾಣುತ್ತಿವೆ. ಇಂಗ್ಲಿಷ್ ಮತ್ತು ಫಿನ್ನಿಷ್ ಭಾಷೆಯಲ್ಲಿ ಹೆಚ್ಚು ವಿಷಯ ಹರಿಯುವಿಕೆ ಇದೆ. ಸಿರಿಯ ಅಂತರಾಷ್ಟ್ರೀಯ ಅಧ್ಯಯನದ ಕ್ರಮಗಳಲ್ಲಿ ಯಾವುದು ಪ್ರಧಾನದನಿ – ಯಾಕಾಯಿತು? ಎಂಬುದನ್ನು ಬಗೆದು ನೋಡುವುದು ಅಗತ್ಯವಾದುದು.

) ಸಿರಿಜಾತ್ರೆಯಲ್ಲಿ ಅಮಾನಯ, ಪ್ರಗತಿವಿರೋಧಿ ಅಂಶಗಳಿರುವುದರಿಂದ ಅದನ್ನು ನಿಷೇಧಿಸಬೇಕು ಎಂಬ ನಿಲುವುಗಳು ಕರಾವಳಿಯಲ್ಲಿ ಬಂದಿವೆ. ಸಿರಿ ಆಚರಣೆಯನ್ನು ಹೀಗೆ ‘ಓದಿ’ದ ಮನಸ್ಸುಗಳು – ಮಹಿಳಾ ವಿರೋಧಿ ಮತ್ತು ಕೆಳಜಾತಿ ವಿರೋಧಿ ಅಂಶಗಳು ಸಿರಿ ಆಚರಣೆಯಲ್ಲಿ ಇರುವ ಕಾರಣಕ್ಕೆ ಅವನ್ನು ವಿರೋಧಿಸಿದವು. ದೇವುಹನೆಹಳ್ಳಿ ಇದಕ್ಕೆ ಸಂಬಂಧಿಸಿದ ಪತ್ರಿಕಾವಾಗ್ವಾದಗಳಲ್ಲಿ ಪಾಲ್ಗೊಂಡಿದ್ದರು. ಪುಸ್ತಕರೂಪದಲ್ಲಿ ಲಭ್ಯವಿರುವ ಅವರ ಪತ್ರದ ಭಾಗ ಇದು :

“ಹಿರಿಯಡ್ಕದ ಸಿರಿಜಾತ್ರೆಯನ್ನು ನಿಷೇಧಿಸುವಂತೆ ಉಡುಪಿಯ ಬುದ್ದಿ ಜೀವಿಗಳು ಮತ್ತು ಹಿಂದುಳಿದ ಜಾತಿಗಳ ನೇತಾರರು ಒತ್ತಾಯಿಸಿದ್ದಾರೆ. ಕ್ರೂರ ಜಾತಿ ವ್ಯವಸ್ಥೆ, ಅಭಿವ್ಯಕ್ತಿಗೆ ಅವಕಾಶವಿಲ್ಲದ ಪುರುಷ ಪ್ರಧಾನ ಕೌಟುಂಬಿಕ ಜೀವನ, ಸಂಸಾರಿಕ – ಸಾಮಾಜಿಕ – ಸಾಂಸ್ಕೃತಿಕ ಬಿಕ್ಕಟ್ಟುಗಳು, ದೈಹಿಕ – ಮಾನಸಿಕ ಅಸ್ವಾಸ್ಥ್ಯ ಮೊದಲಾದವುಗಳೇ ಸಿರಿಜಾತ್ರೆ, ಬೆತ್ತಲೆ ಸೇವೆಯಿಂತಹ ಪದ್ಧತಿಗಳ ನೆಲೆಗಟ್ಟು ಎಂಬುದರಲ್ಲಿ ಸಂಶಯವಿಲ್ಲ…….. ……………ಭಾಗವಹಿಸದವರಿಗೆ ಅದು ಕಲೆ, ಸಂಸ್ಕೃತಿ ಎನ್ನಿಸಬಹುದು; ಭಾಗವಹಿಸು ವವರಿಗೆ ಅದು ಹರಕೆ; ನೋಡಿ ನರಳುವವರಿಗೆ ಅದು ನೋವು ತರುವ ಕ್ರೌರ್ಯ ಎನ್ನುವುದು ನಿಜ. ಆದರೆ ಬಲತ್ಕಾರದ ನಿಷೇಧ ಸರಿಯೇ? ಈ ರೀತಿ ದಂಡನಾತ್ಮಕವಾಗಿ, ಬಲಾತ್ಕಾರದಲ್ಲಿ ನಿಷೇಧ ಹೇರಿದರೆ ಮೊದಲು ಸಂಕಟಕ್ಕೆ ಈಡಾಗುವವರು ಆ ಆಚರಣೆಯಿಂದ ಭಾವನಾತ್ಮಕ ಉಪಶಮನವನ್ನು ಪಡೆಯುವ ಮಹಿಳೆಯರು. …………….. ಕಳೆದ ಬಾರಿಯ ಹಿರಿಯಡ್ಕದ ಸಿರಿಜಾತ್ರೆಯಲ್ಲಿ ದುರ‍್ಬೀನು ಹಿಡಿದು ಹುಡುಕಿದರೂ ೩೫ – ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ತ್ರೀಯರಿರಲಿಲ್ಲ…………… ಕಾರಣವೆಂದರೆ ಇತ್ತೀಚೆಗೆ ಹೆಚ್ಚಿರುವ ಶಿಕ್ಷಣ, ಸುಧಾರಿಸುತ್ತಿ ರುವ ಆರ್ಥಿಕ ಭದ್ರತೆ, ಉತ್ತಮ ಆಹಾರ ಸೇವನೆ ಮತ್ತು ಅನೇಕ ಮಿತಿಗಳ ನಡುವೆಯೂ ಹೆಚ್ಚುತ್ತಿರುವ ಆರೋಗ್ಯ ವ್ಯವಸ್ಥೆ ಮತ್ತು ಅರಿವು “[5]

ಅಕಡೆಮಿಕ್ ನೆಲೆಯ ವಿದ್ವಾಂಸರು ಸ್ಪರ್ಶಿಸಲೂ ಹೋಗದ ಸಾಮಾಜಿಕ – ಮಾನಯ ನೆಲೆಯ ಈ ಚರ್ಚೆಯೂ ಸಿರಿಪಾಡ್ದನ ಪಠ್ಯದ ಅಧ್ಯಯನದಲ್ಲಿ ಸೇರಬೇಕಾದ್ದು. ಯಾಕೆಂದರೆ ಸಿರಿಜಾತ್ರೆ – ಪಾಡ್ದನ ಬೇರೆ ಬೇರೆ ಅಲ್ಲ.

) ವಿಶ್ವದ ೨೫ ಪ್ರಮುಖ ಮೌಖಿಕ ಮಹಾಕಾವ್ಯಗಳ ಅಧ್ಯಯನವನ್ನು  ಸಿ. ಯನ್. ರಾಮಚಂದ್ರನ್ ನಡೆಸಿ “ಹೊಸ ಮಡಿಯ ಮೇಲೆ ಚದುರಂಗ” ಗ್ರಂಥ ರಚಿಸಿದರು. ಭಾರತದ ಮೌಖಿಕ ಮಹಾಕಾವ್ಯಗಳಲ್ಲಿ ಒಂದಾಗಿ ‘ಸಿರಿ’ ಇಲ್ಲಿ ಸೇರ್ಪಡೆಯಾದಳು. ಮೌಖಿಕ ಮಹಾಕಾವ್ಯವೆಂಬ ಪ್ರಕಾರವನ್ನು ಅಂUಕರಿಸಿ, ಅವುಗಳ ಲಕ್ಷಣ – ಚಹರೆ – ವಿನ್ಯಾಸ; ಸಮಾಜದ ಜೊತೆ ಅವು ಹಾಸುಹೊಕ್ಕಾದ ಬಗೆಯನ್ನು ಈಗಾಗಲೇ ವಿದ್ವಾಂಸರು ಸ್ಥಿರೀಕರಿಸಿರುವುದನ್ನು ರಾಮಚಂದ್ರನ್ ಸಮೀಕ್ಷಿಸುತ್ತಾರೆ. ಲೌರಿಹಾಂಕೋ ಅವರ ಸಿರಿಯ ಪಠ್ಯೀಕರಣವನ್ನು ಅವರು ಪ್ರಧಾನವಾಗಿ ಪರಿಗಣಿಸುತ್ತಾರೆ.

) ಸಿರಿಪಾಡ್ದನದ ನನ ಸಂಪಾದನೆಗಳು ಸಂಭವಿಸುತ್ತಲೇ ಇವೆ. ಲೌರಿ ಹಾಂಕೋ ಪ್ರಯತ್ನಗಳ ಮುಂದರಿಕೆಯಾಗಿ ಇವು ನಡೆದಿವೆ. ‘ಕರ್ಗಿಶೆಡ್ತಿ ಹಾಡಿರುವ ಸಿರಿಕಾವ್ಯಲೋಕ’ವು  ಡಾ. ಅಶೋಕ ಆಳ್ವರ ಸಂಪಾದನೆಯಲ್ಲಿದೆ.

ಕರ್ಗಿಶೆಡ್ತಿಯವರು ಸ್ವತಃ ಬಂಟ ಸಮಾಜದ ಹೆಂಗಸಾಗಿರುವುದು ಇಲ್ಲಿಯ ವಿಶೇಷತೆ.  ಕುಂಜತ್ತೂರು ರಾಮ ಬಾಕುಡ (ಸಂ:ಅಮೃತ), ಗೋಪಾಲ ನಾಯ್ಕ (ಸಂ.:ಲೌರಿ ಹಾಂಕೋ) ಹಾಗೂ ರಾಮಕ್ಕ ಮುಗ್ತೇರ‍್ತಿ (ಸಂ: ಎ. ವಿ. ನಾವಡ), ಹಿಂದಿನ ಈ ಮೂರು ಸಂದರ್ಭದ ಪಾಡ್ದನಕಾರರು, ಸ್ವತಃ ಸಿರಿಯ ಜಾತಿಗೆ (ಬಂಟ) ಸೇರಿದವರಾಗಿರಲಿಲ್ಲ. ”ಹಾಗೆಯೇ ದರೆಗುಡ್ಡೆ ಶ್ಯಾಮಶೆಟ್ಟಿ(ಬಂಟ ಸಮಾಜದ ಗಂಡಸು), ಉಜಿರೆ ರಾಮಕ್ಕ (ಬಂಟೇತರ ಸಿರಿ ಪಾತ್ರಿಣಿ) ಹಾಡಿದ ಸಿರಿ ಪಾಡ್ದನಗಳು ದಾಖಲೀಕರಣಗೊಂಡಿದ್ದು ‘ಫೊನೆಟಿಕ್ ಟ್ರಾನ್ಸ್‌ಲೇಶನ್’ (ಉಚ್ಛಾರಣೆಗೆ ಬದ್ಧ ಅಂತರಾಷ್ಟ್ರೀಯ ಲಿಪಿ) ಆಗಿದೆ” ಎಂಬ ಮಾಹಿತಿ ನೀಡುತ್ತಾರೆ ಉಡುಪಿ ಪ್ರಾದೇಶಿಕ ಸಂಶೋಧನಾ ಕೇಂದ್ರದ  ಡಾ. ಅಶೋಕ ಆಳ್ವ.[6]

ಹಲವು ಸಿರಿಪಾಡ್ದನಗಳನ್ನು, ಪಾಡ್ದನ ನಿರೂಪಕರ ಹಿನ್ನೆಲೆಗಳ ಆಧರಿಸಿ – ಹೋಲಿಸಿ ನಡೆಸುವ ಅಧ್ಯಯನಕ್ಕೆ ಇಲ್ಲಿ ವಿಪುಲ ಅವಕಾಶವಿದೆ – ಈ ಬಗೆಯ ಅಧ್ಯಯನದ ಅಗತ್ಯವು ಪಾಡ್ದನದ ಏಕಪಠ್ಯ ಮತ್ತು ಏಕಕರ್ತೃತ್ವದ ಮಿತಿಗಳನ್ನು ಗಮನಿಸಿ ಹುಟ್ಟಿದೆ. ಅಂದರೆ ಪಾಡ್ದನದ ಜೀವದನಿ ಇನ್ನೂ ಇನ್ನೂ ಬಹುದನಿಗಳಾಗಿ ಗಂಟಲೊಡೆಯಬಲ್ಲುದಾಗಿದೆ. ಆದರೇ………?

ಮುಕ್ತಾಯ

ಸಿರಿ ಪಾಡ್ದನದ ಅಧ್ಯಯನವು ಬೆಳೆದಂತೆಲ್ಲ ಹೊಸ ಬಗೆಯ ಸಂಪಾದನೆಯ ತಾತ್ವಿಕತೆಗಳು, ಹಳೆಯ ಅಧ್ಯಯನದ ತಾತ್ವಿಕತೆಗಳನ್ನು ನಿರಾಕರಿಸುವುದೋ, ಜರುಗಿಸು ವುದೋ ಕಂಡು ಬರುತ್ತಿದೆ. ಮಾನವ ಶಾಸ್ತ್ರಜ್ಞ ಮತ್ತು ಜನಪದತಜ್ಞರ ತಾತ್ವಿಕ ಢಿಕ್ಕಿ ಅಂತರಾಷ್ಟ್ರೀಯ ಚರ್ಚೆಯಾಗಿದೆ. ಪ್ರತಿಯೊಂದು ಪಠ್ಯ ಸಂಪಾದನೆಯ ತಾತ್ವಿಕ ಮಿತಿಯನ್ನು ಗುರುತಿಸುವಾಗ, ನಾವು ಪಾಡ್ದನದ ಅನನ್ಯತೆಯನ್ನು ಹೊಸ ಬಗೆಯಲ್ಲಿ ವಿವರಿಸುವಂತೆ ಆಗುತ್ತಿದೆ. ಅಧ್ಯಯನದ ಸಂದರ್ಭಗಳಲ್ಲಿ ಪಾಡ್ದನದ ‘ಅರ್ಥ’ವನ್ನು ಖಚಿತ ತಾತ್ತ್ವಿಕ ನೆಲೆಯಲ್ಲಿ ನಿರ್ವಹಿಸಿಕೊಳ್ಳುತ್ತಿದ್ದಂತೆಯೇ, ಅದು ಕೊಂಚ ನುಣುಚಿಯೋ ಜರುಗಿಯೋ ಹೊಸ ಬಗೆಯ ಪ್ರವೇಶಿಕೆಗಳನ್ನು ಬಯಸುವ ಪ್ರಕ್ರಿಯೆಯನ್ನು ಗುರುತಿಸುವುದು ಈ ಪ್ರಬಂಧದ ಬಯಕೆ.  ಹೊರತಾಗಿ ಇಲ್ಲಿ ಈವರೆಗಿನ ಅಧ್ಯಯನಗಳನ್ನು ನಿರಾಕರಿಸಿದೆಯೆಂದು ತಿಳಿದಲ್ಲಿ ಅದು ಹೆಡ್ಡುತನ.

ಪಾಡ್ದನದ ಪಠ್ಯ ಸಂಪಾದನೆಯು ಪೂರ್ಣವಾಗಿಲ್ಲ. ಪಠ್ಯವು ವ್ಯಕ್ತಿ, ಜಾತಿ, ಲಿಂಗ, ಪ್ರದೇಶ, ಸಂದರ್ಭ, ಉದ್ದೇಶ, ಮನೋಧರ್ಮ, ಕೇಳುಗ – ಮೊದಲಾದವುಗಳಿಗನುಗುಣವಾಗಿ ತನ್ನನ್ನು ತಾನು ಅಸಂಖ್ಯರೂಪಗಳಲ್ಲಿ ಪ್ರದರ್ಶಿಸಿಕೊಳ್ಳಬಲ್ಲುದು. ಸಂಪೂರ್ಣ ಮಿತಿರಹಿತ ಪಾಡ್ದನ ಪಠ್ಯದ ಸಂಪಾದನೆಯು ಅಧ್ಯಯನದ ಆದರ್ಶ. ಆದುದರಿಂದ ಪಾಡ್ದನವು ಒಂದು ಜೀವಂತ ಅಭಿವ್ಯಕ್ತಿ!

“ನಾರಾಯಣ – ನಾರಾಯಣ” ಎಂಬ ಸೊಲ್ಲು ಸಿರಿಪಾಡ್ದನದ ಹೆಣಿಗೆಯಲ್ಲಿ ತುಳು ಜನಪದ ಜೀವಿಗಳಿಂದ ಬರುವವರೆಗೆ ಪಾಡ್ದನದ ಪುನರಾವತಾರ ನಡೆಯುತ್ತಿರುತ್ತದೆ. ಆದರೆ ಹೊಸ ತಲೆಮಾರಿನಲ್ಲಿ ಹುಟ್ಟಿದವರಿಗೆ ಪಾಡ್ದನ ಕಟ್ಟುವ ಪ್ರತಿಭೆ ಮಸುಕಾಗಿದೆ; ಸಿರಿಸೂಕೆಗೆ (ಜಾತ್ರೆ) ವರ್ಷದಿಂದ ವರ್ಷಕ್ಕೆ ಸಿಂಗಾರ (ಅಡಿಕೆ ಹೂ) ಹಿಡಿವ ಹೆಂಗಸರ ಸಂಖ್ಯೆ ಇಳಿಯು ತ್ತಿವೆ; ಕರಾವಳಿಯ ಗದ್ದೆಗಳು ಬೇಸಾಯ ನಿಲ್ಲಿಸುತ್ತಿವೆ; ಗದ್ದೆ ಇದ್ದರೂ ದುಡಿಯುವ ತುಳು ಕೃಷಿ ಕಾರ್ಮಿಕರು ಇಲ್ಲ. ಈ ಎಲ್ಲ ಬದಲಾವಣೆಗಳ ಗತಿಯು ಅಂತಿಮವಾಗಿ ಸಿರಿಪಾಡ್ದನ ವನ್ನು ದಾಖಲೀಕೃತ ರೂಪದಲ್ಲಿ ಮಾತ್ರ ಉಳಿಸಬಲ್ಲುದು. ಅಲ್ಲಿಗೆ ಪಾಡ್ದನದ ಹಸಿ ದನಿಯ ಜೀವಂತಿಕೆ ಮುಗಿದಂತೆ. ಬಳಿಕ ಸಿದ್ಧಾಂತಿಗಳು ಮಾತ್ರ ನಿರ್ಜೀವ ದಾಖಲೆಗಳನ್ನು ಎದುರು ಇಟ್ಟುಕೊಂಡು ಶಬ್ದದ ಬಲೆ ಕಟ್ಟುತ್ತಿರುತ್ತಾರೆ.

ಇತರಆಧಾರಗ್ರಂಥಗಳು

೧. ಪಾಡ್ದನೊಳು; ಎ. ಮೇನರ್; ೨೦೦೮; ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

೨. ಕದಿಕೆ; ವಿಶ್ವ ತುಳು ಸಮ್ಮೇಳನ ಸ್ಮರಣ ಸಂಚಿಕೆ; ೧೯೯೪; ಅಖಿಲ ಭಾರತ ತುಳು ಒಕ್ಕೂಟ, ಮಂಗಳೂರು.

೩. The devil worship of Tuluvas; Ed : A.V. Navada, Devis Fernandis; 2008; second impression;  Karnataka Tulu Sahitya Academy, Mangalore.

೪. ಸುಂದರಕಾಂಡ; ಕುಂಬಳೆ ಸುಂದರರಾವ್; ೨೦೦೭; ಚೌಟ ಪ್ರತಿಷ್ಠಾನ ಮೀಯಪದವು.

೫. ಕೂಡುಕಟ್ಟು; ಪುರುಷೋತ್ತಮ ಬಿಳಿಮಲೆ, ೧೯೯೭; ಆನಂದಕಂದ ಗ್ರಂಥಮಾಲೆ ಮಲ್ಲಾಡಿಹಳ್ಳಿ.

೬. Perspectives on Dakshina Kannada and Kodagu; Editorial Committee; 1991; The Registrar, Mangalore University, Mangalagangothri, D.K.

೭. ಪಂಜೆ ಮಂಗೇಶರಾಯರು; ಎಂ. ರಾಮಚಂದ್ರ; ೧೯೯೯; ಪ್ರಸಾರಂಗ, ಮಂಗಳೂರು ವಿ.ವಿ. ದ.ಕ.

೮. ಜಾನಪದ ಸಮಾಲೋಚನ; ಎ.ವಿ. ನಾವಡ; ೧೯೯೩; ಕರ್ನಾಟಕಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

ಅಧ್ಯಯನಕ್ಕೆ ಒಳಪಡಿಸಿದ ಸಿರಿಪಾಡ್ದನ ಪಠ್ಯದ ಬಹುರೂಪಿ ಸಂಪಾದನೆಗಳು (ಸಂಪಾದನೆಯ ಸ್ವರೂಪವನ್ನು ಕಂಸದಲ್ಲಿ ಸೂಚಿಸಲಾಗಿದೆ)

೧. ಕರಾವಳಿ ಜಾನಪದ (ಸಂ. ಎ.ವಿ. ನಾವಡ) ಗ್ರಂಥದಲ್ಲಿ ಅಮೃತ ಸೋಮೇಶ್ವರರ ‘ಓದು’ ; ೨೦೦೭; ಅಖಿಲ ಭಾರತ ೭೪ನೆಯ ಕನ್ನಡ ಸಾಹಿತ್ಯ  ಸಮ್ಮೇಳನ, ಉಡುಪಿ.

೨. ಪೊಳಲಿ ಶೀನಪ್ಪ ಹೆಗ್ಗಡೆ ಸಮಗ್ರ ಸಾಹಿತ್ಯ, ೧೯೯೧; ಪೊಳಲಿ ಶೀನಪ್ಪ ಹೆಗ್ಗಡೆ ಜನ್ಮ ಶತಾಬ್ಧಿ ಸಮಿತಿ, ಉಡುಪಿ.

೩. ತುಳುನಾಡ ಸಿರಿದೇವಿ (ಯಕ್ಷಗಾನ ಪ್ರಸಂಗ); ಸೀತಾನದಿ ಗಣಪಯ್ಯ ಶೆಟ್ಟಿ; ೧೯೭೩; ಮೂರನೆಯ ಮುದ್ರಣ; ಸುಬೋಧ ಸಾಹಿತ್ಯ ಭಂಡಾರ,  ಹಿರಿಯಡಕ.

೪. ಒಂದು ಸೊಲ್ಲು ನೂರು ಸೊರ; ಎ. ವಿ. ನಾವಡ; ೧೯೯೯; ಕರ್ನಾಟಕ ಸಂಘ, ಪುತ್ತೂರು.

೫. ಶ್ರೀ ಕರ್ನಾಟಕ ದೇಶದ ಸಿರಿ ಮಹಾತ್ಮ್ಯ; – ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ಪ್ರಸಂಗ ಮಾಲಿಕೆ; ಸಂ. ಪಿ. ಶ್ರೀನಿವಾಸ ಭಟ್ ಕಟೀಲು;  ೨೦೦೭; ಕನ್ನಡ ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ.

೬. ಒಡ್ಡೋಲಗ; ಸಂ. ಭಾಸ್ಕರ ರೈ ಕುಕ್ಕುವಳ್ಳಿ; ೨೦೦೨; ಬಂಟರ ಯಕ್ಷಗಾನ ಕಲೋತ್ಸವ ಸಮಿತಿ, ಮಹಾನವಮಿ ಕಟ್ಟೆ, ಮಂಗಳೂರು – ೨ (ತುಳು ಯಕ್ಷಗಾನದಲ್ಲಿ ಸಿರಿಯ ರಂಗರೂಪದ ಚರ್ಚೆ)

೭. ತುಳುನಾಡಸಿರಿ – (ತುಳು ಯಕ್ಷಗಾನ ಡಿಯೋ); ೨೦೦೫; ಶ್ರೀದೇವಿ ಎಲೆಕ್ಟ್ರಾನಿಕ್ಸ್, ಬಸವನಗುಡಿ, ಬೆಂಗಳೂರು – ೪.

೮. ತುಳುನಾಡಸಿರಿ (ಕನ್ನಡ ಕಾದಂಬರಿ) ಕೆ. ಜಿ.ಶೆಟ್ಟಿ ಕಡಂದಲೆ; (1973 – ಪ್ರ.ಮು.) 2003 – ದ್ವಿತೀಯ ಮುದ್ರಣ; ನವಶಕ್ತಿ ಪ್ರಕಾಶನ,  ಕಡಂದಲೆ.

೯. ತುಳುನಾಡಸಿರಿ; ೧೯೮೪ ; (ಕಾದಂಬರಿ) ; ಎನ್. ವಿ. ರಾವ್; ೧೯೮೪; ಪ್ರಗತಿ ಪಬ್ಲಿಕೇಷನ್ಸ್, ಬೆಂಗಳೂರು.

೧೦. ಅಕ್ಕೆರಸು ಸಿರಿ (ನೀಳ್ಗತೆ); ಎ. ವಿ. ನಾವಡ; ೧೯೯೮ ತುಳು; ೨೦೦೭ ಕನ್ನಡ; ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.

೧೧. ತುಳುನಾಡ ಸಿರಿ – ತುಳು ಚಲನಚಿತ್ರ; ೧೯೭೬; ನಿರ್ದೇಶನ – ಕೆ.ಎನ್. ಟೈಲರ್; ನಿರ್ಮಾಣ – ದಯಾನಂದ ಗರೋಡಿ.

೧೨. ಪಿಂಗಾರದ ಬಾಲೆಸಿರಿ (ತುಳುನಾಟಕ) ; ಗಂಗಾಧರ ಕಿದಿಯೂರು; ೨೦೦೪; ಮಧುಶ್ರೀ ಪ್ರಕಾಶನ, ಉಡುಪಿ.

೧೩. ಸತ್ಯದ ಸಿರಿ (ತುಳುನಾಟಕ); ಜಗದೀಶ ಶೆಟ್ಟಿ; ಕೆಂಚನಕೆರೆ; ೨೦೦೫; ಬಂಟರ ಸಂಘ, ಮುಂಬಯಿ.

೧೪. ಸತ್ಯನಾಪುರತ್ತ ಸಿರಿ; (ತುಳು ನೃತ್ಯ ರೂಪಕ); ಅಮೃತ ಸೋಮೇಶ್ವರ ( ‘ತುಳುನಾಟ್ಯ ರೂಪಕೊಲು’ ಎಂಬ ರೂಪಕ ಸಂಗ್ರಹ ಗ್ರಂಥದ ಒಂದು  ನೃತ್ಯ ರೂಪಕ);  ೨೦೦೫;  ಪ್ರಕೃತಿ ಪ್ರಕಾಶನ ಕೋಟೆಕಾರು.

೧೫. ಸತ್ಯನಾಪುರೊತ್ತಸಿರಿ;  (ತುಳುನಾಟಕ);  ಅಮೃತ ಸೋಮೇಶ್ವರ, (‘ತುಳುನಾಟಕ ಸಂಪುಟ’ ಗ್ರಂಥದಲ್ಲಿ ಒಂದು ನಾಟಕ); ೨೦೦೫; ಪ್ರಕೃತಿ ಪ್ರಕಾಶನ ಕೋಟೆಕಾರು.

೧೬. ಚೆನ್ನೆಮಣೆ (ತುಳುನಾಟಕ) ; ಮುದ್ದು ಮೂಡುಬೆಳ್ಳೆ ; (‘ಇನೆರೂಪಕೊಲು’ ನಾಟಕ ಸಂಕಲನದಿಂದ); ೧೯೯೧; ತುಳು ಚೇತನ, ಜೆ.ಪಿ.ನಗರ, ಬೆಂಗಳೂರು.

೧೭. ‘ಅವಿಲು’ ಗ್ರಂಥದ ಲೇಖನ – ಸಿರಿಗಳ ಸಂಧಿಯಲ್ಲಿ ಸಮಾಜ; ಅಮೃತ ಸೋಮೇಶ್ವರ;  ೧೯೭೮;  ಕನ್ನಡ ಸಂಘ, ವಿವೇಕಾನಂದ ಕಾಲೇಜು, ಪುತ್ತೂರು.

೧೮. ತುಳುಪಾಡ್ದನ ಸಂಪುಟ;  ಸಂ. ಅಮೃತ ಸೋಮೇಶ್ವರ;  ೧೯೯೭;  ಪ್ರಸಾರಂಗ, ಕನ್ನಡ ವಿವಿ, ಹಂಪಿ.

೧೯. ತುಳು ಜನಪದ ಸಾಹಿತ್ಯ;  ಬಿ.ಎ. ವಿವೇಕರೈ;  ೧೯೮೫;  ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.

೨೦. ತುಳುವ ದರ್ಶನ; ಪೀಟರ್ ಜೆ ಕ್ಲಾಸ್;  ೧೯೮೭;  ಪ್ರಾದೇಶಿಕ ವ್ಯಾಸಂಗ, ಕುಂದಾಪುರ.

೨೧. Form Rta to Dharma; Willie R. de Silva ; 1985 ; Pragati Prakasan Kanara, India.

೨೨. ಭೂತ ಆರಾಧನೆ; (ಸಾಕ್ಷ್ಯ ಚಿತ್ರ) ; ನಿ. ಬಿ. ವಿ. ಕಾಂತ;  ೧೯೮೮;  ಕೇಂದ್ರ ಸಂUತ ನಾಟಕ ಅಕಾಡೆಮಿ.

೨೩. ಸಂಸ್ಕೃತಿ ಸಿರಿ;  ಚಿನ್ನಪ್ಪಗೌಡ; ೨೦೦೩;  ಮದಿಪು ಪ್ರಕಾಶನ ಮಂಗಳ ಗಂಗೋತ್ರಿ.

೨೪. ಆಯಾಮಗಳು ; ಬಿ. ದಾಮೋದರರಾವ್;  ೧೯೯೨;  ಪರಿಸರ ಸಾಹಿತ್ಯ ಪ್ರಕಾಶನ, ಶಿವಮೊಗ್ಗ.

೨೫. ಜನಪದ ಮಹಾಕಾವ್ಯ;  ತೀ ನಂ ಶಂಕರನಾರಾಯಣ;  ೧೯೯೬;  ಕರ್ನಾಟಕ ಸಂಘ, ಪುತ್ತೂರು.

೨೬. ತುಳು ಸಾಹಿತ್ಯ ಚರಿತ್ರೆ (ಲೌರಿ ಹಾಂಕೋ ಲೇಖನ) ; ಪ್ರಸಂ. ವಿವೇಕ ರೈ;  ೨೦೦೭;  ಹಂಪಿ ಕನ್ನಡ ವಿವಿ.

೨೭.ವಿರಚನೆ ; ಗಾಯತ್ರಿ ನಾವಡ;  ೧೯೯೭;  ಎನ್.ಆರ್.ಇ.ಎಂ.ಹೆಚ್. ಪ್ರಕಾಶನ, ಕೋಟೇಶ್ವರ

೨೮. ಕರಾವಳಿ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು;  ಗಾಯತ್ರಿ ನಾವಡ;  ೧೯೯೯;  ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೨೯. Textualizing the Siri Epie; Lauri Hanko ; 1998 ; Folklore fellows communications, Turku – Finland.

೩೦. ಬಿನ್ನೆದಿ – ತಮ್ಮಲೆ ಅರುವತ್ತ ಕಟ್ಟ್ ಸಿರಿ ಪಾಡ್ದನ; ಬೋಳ ಚಿತ್ತರಂಜನ್‌ದಾಸ್ ಶೆಟ್ಟಿ;  ೨೦೦೮;  ನಾಗಶಕ್ತಿ ಪ್ರಕಾಶನ, ಮಂಗಳೂರು (ನನ ಪಾಡ್ದನ)

೩೧. ಕಡಲ ಸಿರಿ ; ಸಂ. ಸತ್ಯನಾರಾಯಣ ಮಲ್ಲಿಪಟ್ಟಣ ಮತ್ತು  ಪಿ. ಎ. ಸುಶೀಲ;  ೨೦೦೩;  ಪ್ರಸಾರಂಗ, ಮಂಗಳೂರು ವಿಶ್ವವಿದ್ಯಾನಿಲಯ (ಸತ್ಯನಾಪುರದ ಸಿರಿ – ಎಂಬ ಪಾಡ್ದನದ ಕನ್ನಡಾನುವಾದ, ಪದವಿ ತರಗತಿ ಪಠ್ಯವಾಗಿ)

೩೨. ಇನಿಜೇನು; ಸಂ. ಹೊಸ್ಕರೆ ಶಿವಸ್ವಾಮಿ ಮತ್ತು ವೈ ವಿ ಶೈಲಜಾ; ೨೦೦೭; ಪ್ರಸಾರಂಗ, ಮಂಗಳೂರು ವಿ.ವಿ. (ಇದರ ಭಾಗ 3 – ಸತ್ಯನಾಪುರದ  ಸಿರಿ – ಕಾವ್ಯ ಪಠ್ಯ – ತುಳು ಪಾಡ್ದನದ ಕನ್ನಡಾನುವಾದ – ತರಗತಿ ಪಠ್ಯವಾಗಿ)

೩೩. ತುಳುವ ಜಾನಪದ ಕೆಲವು ನೋಟಗಳು ; ಅಮೃತ ಸೋಮೇಶ್ವರ ; ೨೦೦೭, ಪ್ರಸಾರಂಗ, ಕನ್ನಡ ವಿ.ವಿ. ಹಂಪಿ.

೩೪. ಕರಜನ; ಡಾ. ಸುನೀತಾ ಎಂ. ಶೆಟ್ಟಿ; ೨೦೦೨; ಅಕ್ಷಯ ಪ್ರಕಾಶನ, ಮುಂಬಯಿ (ತುಳುವಿನಲ್ಲೇ ನಡೆಸಿದ ಸಿರಿಯ ವಿಶಿಷ್ಟ ಓದು)

೩೫. ‘ಗೂಗ್ಲ್ ಇಂಡಿಯಾ’ ಹುಡುಕಾಟವು ಒದಗಿಸುವ `ಸಿರಿ’ ಅಧ್ಯಯನ ತಾಣಗಳ ವಿವಿಧ ಓದುಗಳು (ಅಂತಜಾರ್ಲದ ಸಿರಿ)

೩೬. ಉಡುಪಿಯ ಪ್ರಾದೇಶಿಕ ಸಂಶೋಧನಾ ಕೇಂದ್ರದ `ಶ್ರೀ ಕೃಷ್ಮಯ್ಯರು ಒದಗಿಸಿದ ಪೀಟರ್ ಜೆ. ಕ್ಲಾಸ್ ಅವರ ಎರಡು ಲೇಖನಗಳು : 1) Review : The Siri Epic. 2) The drama Unfolds : Tuluva Myth and Rituals in its western stage. ದೊರೆತಿರುವುದು ಲೇಖನಗಳ ಕಂಪ್ಯೂಟರ್ ಪ್ರತಿಗಳಾಗಿದ್ದು, ಅಧಿಕೃತ ಪುಸ್ತಕ ರೂಪದಲ್ಲಿ ಇವು ಲಭ್ಯವಾಗಿಲ್ಲ. ಹಾಗಾಗಿ ಇವುಗಳ ಸಾಲುಗಳನ್ನು ಅಧಿಕೃತವಾಗಿ ಉಲ್ಲೇಖಿಸಿಲ್ಲ. ಇವುಗಳಲ್ಲಿರುವ ಕೆಲವು ವಿಶ್ಲೇಷಣೆಯ ಅಂಶಗಳನ್ನು ಪ್ರಸ್ತುತ ಪ್ರಬಂಧದಲ್ಲಿ ಹರಿಯಿಸಿಕೊಳ್ಳಲಾಗಿದೆ. ಪೀಟರ್ ಮುಂದಿಡುವ ವಾಗ್ವಾದಗಳು ಪಾಡ್ದನ ಅಧ್ಯಯನದ ಅಂತರಾಷ್ಟ್ರೀಯ ನಿಲುವುಗಳನ್ನು ಪ್ರಶ್ನಿಸಿ ಪುನರ್ರಚಿಸುವ ಕೆಲಸ ಮಾಡುತ್ತವೆ. ಪ್ರಖ್ಯಾತ ಅಧ್ಯಯನ ಕ್ರಮಗಳಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುತ್ತವೆ (ಪುಸ್ತಕ ರೂಪದಲ್ಲಿ ಬರದಿರುವ ಸಿರಿ ಅಧ್ಯಯನ)

೩೭. ಉಡುಪಿಯ ಜಿ. ರಾಜಶೇಖರ್ ಮತ್ತು ಹನೇಹಳ್ಳಿಯ ದೇವು ಮತ್ತಿತರರು ಹಿರಿಯಡ್ಕದ ಸಿರಿಜಾತ್ರೆಯನ್ನು ನಿಷೇಧಿಸುವ ಪರ – ವಿರೋಧದ ಬಗ್ಗೆ ೨೦೦೪ನೇ ಇಸವಿಯಲ್ಲಿ ಮಾಧ್ಯಮಗಳಲ್ಲಿ ಚರ್ಚಿಸಿದರು. ಸಾಮಾಜಿಕ ಕಳಕಳಿಯ ಈ ಚರ್ಚೆ ಯನ್ನು ಸಿರಿ ಆಚರಣೆಗಳ ಬಗೆಗಿನ ಒಂದು ‘ಓದು’ ಎಂಬುದಾಗಿ ಪ್ರಬಂಧ ಗಮನಿಸಿದೆ. (ಸಿರಿ ಜಾತ್ರೆ ಮತ್ತು ಸಾಮಾಜಿಕ ಕಳಕಳಿ ಮುಖಾಮುಖಿ)

೩೮. ಹೊಸಮಡಿಯ ಮೇಲೆ ಚದುರಂಗ ; ಡಾ. ಸಿ. ಯನ್. ರಾಮಚಂದ್ರನ್; ೨೦೦೭; ಸ್ವಪ್ನ ಬುಕ್ ಹೌಸ್, ಬೆಂಗಳೂರು.


[1] ಪುಟ ೧೭೨-೧೮೩; ಉಳಿದುದು ಮೇಲಿನ ೨ ರಂತೆ.

[2] ಪುಟ ೨೪೨; ತುಳುವ ಜಾನಪದ ಕೆಲವು ನೋಟಗಳು; ಡಾ. ಅಮೃತ ಸೋಮೇಶ್ವರ; ೨೦೦೭; ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.

[3] ಪುಟ ೩೧-೩೮; ಕರಜ; ಡಾ. ಸುನೀತಾ ಎಂ. ಶೆಟ್ಟಿ; ೨೦೦೨; ಅಕ್ಷಯ ಪ್ರಕಾಶನ, ಮುಂಬಯಿ.

[4] ಗೂಗ್ಲ್ ಇಂಡಿಯಾ – ಹುಡುಕುತಾಣ ; Siri Epie ಎಂಬ ಹುಡುಕು ಶಬ್ದ; ೫-೯-೦೯ ಸಂಜೆ ೬ ಗಂಟೆಗೆ ತೆರೆದುಕೊಂಡ ಮೊದಲ ಎರಡು ಪುಟಗಳಲ್ಲಿ ೨೦ ಅಂತರ್ಜಾಲ ತಾಣಗಳ ಒಟ್ಟು ಪರಿಗಣನೆ.

[5] ಪುಟ ೫೬-೫೭; ಅಲು – ಅಪೀಲು; ದೇವುಹನೆಹಳ್ಳಿ ; ೨೦೦೯; ಅನಂತ ಪ್ರಕಾಶ ಕಿನ್ನಿಗೋಳಿ.

[6] ದಶಂಬರ – ೨೦೦೮ರಲ್ಲಿ ಮೌಖಿಕವಾಗಿ ನೀಡಿದ್ದು.