) ಸಿರಿಯ ಮರುವಿವಾಹದಲ್ಲಿಗೆ ತುಂಡರಿಸಿ ಸುಖಾಂತ್ಯವನ್ನು ಕೊಟ್ಟುದಕ್ಕೆ ಮಾದರಿಯಾಗಿ ವೃತ್ತಿಪರ ಕಲಾವಿದರು ರೂಪಿಸಿದ ವಿಡಿಯೋ ಯಕ್ಷಗಾನ ಸಿಡಿ ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ.

[1] ಈ ಯಕ್ಷಗಾನ ವಿಡಿಯೋ ಪ್ರದರ್ಶನವು ತನಗಾಗಿ ಸಂಪಾದಿಸಿಕೊಂಡಿರುವ ಸಿರಿ ಪಾಡ್ದನ ಪಠ್ಯವು – ನಾಟಕ, ಸಿನಿಮಾ, ಕಾದಂಬರಿ ಮಾಧ್ಯಮಗಳ ಮೂಲಕ ಜನಪ್ರಿಯವಾಗಿ ರೂಪುಗೊಂಡ; ಹೆಣ್ಣು ವ್ಯಕ್ತಿತ್ವವೊಂದರ ಸಾಂಸಾರಿಕ ಬಿಕ್ಕಟ್ಟು, ಭಾವುಕತೆ, ಮಾತೃವಾತ್ಸಲ್ಯ, ವಿಷಾದಭರಿತ ಆಕ್ರೋಶಗಳನ್ನು ಪ್ರಧಾನವಾಗಿಸಿದೆ. ಮಗ ಕುಮಾರನನ್ನು ಗಾಢವಾಗಿ ತಬ್ಬಿದ ಮಮತಾಮಯಿ ಮಾತೆಯಾಗಿ ವಿ.ಸಿ.ಡಿ ಯ ರಕ್ಷಾಪುಟದಲ್ಲಿ ಸಿರಿಯು ಮುದ್ರಿತವಾಗಿದ್ದಾಳೆ. ಸಿರಿಯ ಕಥಾನಕವು ಜಮೀನ್ದಾರೀ ಕುಟುಂಬ ಸಂಘರ್ಷ ವಾಗಿ ಇಲ್ಲಿ ಲೌಕಿಕಗೊಂಡಿದೆ. ಮುಂದೆ ಬಂದ ಕಾಲ್ಪನಿಕ – ಲೌಕಿಕ ಕತೆಗಳುಳ್ಳ ತುಳು ಯಕ್ಷಗಾನ ಪ್ರಸಂಗಗಳ ಆಂತರಿಕ ಸತ್ವಕ್ಕೂ, ಪಾಡ್ದನದಿಂದ ಆರಿಸಿದ ಸಿರಿಯ ಕಥಾನಕದ ಈ ನಿರೂಪಣೆಗೂ ಯಕ್ಷಗಾನೀಯವಾದ ದೊಡ್ಡ ವ್ಯತ್ಯಾಸ ಕಾಣದೇ ಹೋಗುತ್ತದೆ.

) ಸಿರಿಯ ಪಾಡ್ದನವನ್ನು ಕಾದಂಬರಿಗಾಗಿ ಎರಡು ಬಾರಿ ಸಂಪಾದಿಸಲಾಗಿದೆ.

೧೯೭೩ರಲ್ಲಿ ಶ್ರೀ ಕೆ. ಜೆ. ಶೆಟ್ಟಿ, ಕಡಂದಲೆ ಇವರು ರಚಿಸಿದ ‘ತುಳುನಾಡ ಸಿರಿ’ ಕಾದಂಬರಿಯು ಮುಂದೆ ಅದೇ ಹೆಸರಿನ ಚಲನಚಿತ್ರಕ್ಕೆ ಬುನಾದಿಯಾಯಿತು. ೧೯೭೮ ರಲ್ಲಿ ಇದೇ ಲೇಖಕರು ಸಿರಿ ಪಾಡ್ದನದ ಉತ್ತರಾರ್ಧಕ್ಕೆ ಪ್ರಾಮುಖ್ಯವಿತ್ತು ‘ಅಬ್ಬಗದಾರಗ’ ಕಾದಂಬರಿಯನ್ನು ರಚಿಸಿದರು. ಪಾಡ್ದನವನ್ನು ಇರಿಸಿಕೊಂಡು ಅದರ ಬುನಾದಿಯ ಮೇಲೆ ಕಾದಂಬರಿಯನ್ನು ಕಟ್ಟುವ ಇವರ ಕ್ರಮಕ್ಕೂ ೧೯೮೪ರಲ್ಲಿ ಎನ್.ವಿ. ರಾವ್ ಅವರು ರಚಿಸಿದ ‘ತುಳುನಾಡ ಸಿರಿ’ ಕಾದಂಬರಿಯು ಪಾಡ್ದನವನ್ನು ತನ್ನೊಳಗೆ ಕೂರಿಸಿಕೊಳ್ಳುವ ವಿಧಾನಕ್ಕೂ ವ್ಯತ್ಯಾಸಗಳಿವೆ. ಪಾಡ್ದನ ‘ಓದಿಕೊಂಡ’ ನಿಲುವುಗಳ ವ್ಯತ್ಯಾಸ ಕಾದಂಬರಿಗಳೆರಡರ ಭಿನ್ನತೆಗೆ ಕಾರಣ.

ಬೆಂಗಳೂರಿನಿಂದ ಮಂಗಳೂರಿಗೆ ಬಂದ ನಿರೂಪಕನಿಗೆ ಸ್ಥಳೀಯ ಸಂಸ್ಕೃತಿಯ ಸೊಗಡನ್ನು ಕಾಣಿಸುವುದಕ್ಕಾಗಿ ಬಾಬು ಪೂಜಾರಿ ಎಂಬ ಪಾತ್ರದ ಕೈಯಲ್ಲಿ ಸಿರಿಪಾಡ್ದನವನ್ನು ಎನ್. ವಿ. ರಾವ್ ಅವರ ಕಾದಂಬರಿ ಹಾಡಿಸುತ್ತದೆ. ಸಿರಿಯ ಜೀವನ ಕಥಾನಕವನ್ನು ತೆರೆಸುವುದಕ್ಕೆ ಕಾದಂಬರಿಯ ತಂತ್ರವಿದು. ಪೊಳಲಿ ಶೀನಪ್ಪ ಹೆಗ್ಡೆ, ಕೆ. ಜೆ. ಶೆಟ್ಟಿ ಕಡಂದಲೆ ಮತ್ತು ಎನ್. ವಿ. ರಾವ್ ಅವರ ಮೂರು ಗದ್ಯ ಸಂಕಥನಗಳನ್ನು ಅನುಕ್ರಮವಾಗಿ ಇರಿಸಿದರೆ, ಸಿರಿಯ ತುಳು ಪಾಡ್ದನವು ಕನ್ನಡದ ಗದ್ಯದಲ್ಲಿ ಆಧುನಿಕ ಕಾದಂಬರಿಯಾಗಿ ಅವತರಿಸುವ ಕಡೆಗಿನ ಪಯಣದ ಮೂರು ಮಜಲುಗಳೇ ಸಿಕ್ಕಿ ಬಿಡುತ್ತವೆ. ಸಮಕಾಲೀನ ಕಾದಂಬರಿಗಳ ನಿರೂಪಣಾ ತಂತ್ರವನ್ನು ಗಾಢವಾಗಿ ತಬ್ಬಿಕೊಳ್ಳುವಷ್ಟರ ಮಟ್ಟಕ್ಕೆ ಬಂದ ಎನ್. ವಿ. ರಾವ್ ಪಾಡ್ದನದ ಒಳರಚನೆಯಿಂದ ಬಹುದೂರ ಸಾಗಿಬಿಡುತ್ತಾರೆ. ನಗರದ ಯುವಕನಿಗೆ ತುಳು ನಾಡಿನ ಸಂಸ್ಕೃತಿಯನ್ನು ದರ್ಶಿಸುವಂತೆ ಸಿರಿಯನ್ನು ಕಾಣಿಸುವ ಕಾದಂಬರಿಯ ಕ್ರಮದಲ್ಲಿ – ಆಧುನಿಕ ನಗರ ಜೀವನಕ್ಕೆ ತುಳುನಾಡಿನ ಪಾರಂಪರಿಕ ಜೀವನವು ದೂರದ್ದು, ಹಳೆಯ ನೆನಪುಗಳನ್ನೆಬ್ಬಿಸುವ ಅಲಂಕರಣ ಪ್ರಾಯದ್ದು ಎಂಬ ‘ನಂಬುಗೆ’ ಇದೆ. ಎನ್. ವಿ. ರಾಯರು ಅಖಿಲ ಕರ್ನಾಟಕದ ಓದುಗ ಸಮುದಾಯಕ್ಕೆ ತಮ್ಮ ಕೃತಿಯ ಮೂಲಕ ತುಳು ಜನಪದ ಸಂಪತ್ತನ್ನು ಪ್ರದರ್ಶಿಸಲು ಹೊರಡುತ್ತಾರೆ. ಈ ಉದ್ದೇಶಕ್ಕಾಗಿ ‘ಬಾಬು ಪೂಜಾರಿ’ ಯಂತಹ ಪಾತ್ರಗಳು ತುಂಬ ದುಡಿಯುತ್ತವೆ. ಬಾಬು ಪೂಜಾರಿಯೇ ಸ್ವತಃ ಪಾಡ್ದನವೆಂದರೆ ಏನು ಎತ್ತ ಎಂಬುದನ್ನು ವಿವರಿಸಬೇಕಾಗುತ್ತದೆ.

ತುಳುವಿನ ‘ಸಿರಿ’ಯನ್ನು ಆದಷ್ಟು ಮೂಲಕ್ಕೆ ಬದ್ಧವಾಗಿ ಕನ್ನಡದಲ್ಲಿ ತರುವ ಉದ್ದೇಶವು ತನ್ನದೆಂದು ಕೆ. ಜೆ. ಶೆಟ್ಟಿಯವರು ತಮ್ಮ ಕಾದಂಬರಿಯ ಮೊದಲ ಮುದ್ರಣದ ಮುನ್ನುಡಿ (೧೯೭೩)ಯಲ್ಲಿ ಹೇಳಿಕೊಂಡಿದ್ದಾರೆ. ಎರಡನೆಯ ಮುದ್ರಣದ ಕಾಲಕ್ಕೆ (೨೦೦೩) ಸಿರಿಯನ್ನು ಮಹಿಳಾ ಪರ ದನಿಯಾಗಿ ಕಂಡ ತಮ್ಮ ತಾತ್ವಿಕತೆಯ ಬಗ್ಗೆ ಅವರ ದೀರ್ಘ ನುಡಿ ಇದೆ. ವಿವಿಧ ಬಗೆಯ ಅಧ್ಯಯನ ಕ್ರಮಗಳು ಹೊಸತಾಗಿ ಬಂದ ಹಾಗೆ ಕಾದಂಬರಿಕಾರ ಸಿರಿಯನ್ನು ಹೊಸ ಲಾಂಛನಗಳಾಗಿ ಮುನ್ನುಡಿಗಳಲ್ಲಿ ಗುರುತಿಸತೊಡಗಿದ್ದಾರೆ.

ಎನ್. ವಿ. ರಾವ್ ಅವರ ಕಾದಂಬರಿಯು ಸಿರಿ ಕಥಾನಕವನ್ನು ಪಡೆಯುವಲ್ಲಿ ಸೀತಾನದಿ ಗಣಪಯ್ಯ ಶೆಟ್ಟರ ಯಕ್ಷಗಾನ ಪ್ರಸಂಗದ ಜೊತೆ ಹೆಣಿಗೆ ಹಾಕುವುದು ಕುತೂಹಲಕರ ಸಂಗತಿ.  ಬ್ರಹ್ಮನಿಂದ ಸಪ್ತ ಮಾತೃಕೆಯರಿಗೆ ಸಿಗುವ ಶಾಪ, ಅಂತ್ಯದಲ್ಲಿ ಗಣಪಯ್ಯಶೆಟ್ಟರ ಪ್ರಸಂಗ ಪದ್ಯವನ್ನೇ ಗದ್ಯವಾಗಿಸಿ ಸಿರಿ ಮಾತಾಡುವುದು ಇಲ್ಲಿ ಕಾಣುತ್ತದೆ. ಬ್ರಾಹ್ಮಣೀಯ ಪುರಾಣ ಭಾಗಗಳನ್ನು ಕಾದಂಬರಿಯಲ್ಲಿ ಸುಬ್ಬರಾಯ ಎಂಬ ಬ್ರಾಹ್ಮಣ ಪಾತ್ರವು ಹೇಳಿದರೆ, ತುಳು ಜನಪದೀಯ ಭಾಗಗಳನ್ನು ಬಾಬು ಪೂಜಾರಿ ನಿರೂಪಿಸುವಂತೆ ಕಾದಂಬರಿಯು ವಿಭಜಿಸಿಕೊಂಡಿರುವುದು ಸ್ವತಃ ಸಂಸ್ಕೃತಿ – ಸಮಾಜಗಳ ವಿಭಜನೆಯೇ ಆಗಿದೆ. ಕಡಂದಲೆ ಯವರ ಕೃತಿ ವಿಸ್ಮೃತಿಯಿಂದ ಸ್ಮೃತಿಗೆ ಸಿರಿಯನ್ನು ತರಹೊರಡುವ ಉಮೇದಿನದ್ದಾರಿಂದ ಈ ಬಗೆಯ ಮಾರ್ಪಾಡುಗಳ ಬಗ್ಗೆ ಯೋಚಿಸುವುದಿಲ್ಲ. ಎರಡೂ ಕಾದಂಬರಿಗಳ ಸಿರಿ ಕಥಾನಕವು ಅಬ್ಬಗ – ದಾರಗೆಯರ ದುರಂತದವರೆಗೆ ಹಬ್ಬಿದೆ.

ಇಲ್ಲಿಯೇ ಸೇರಿಸಬಹುದಾದುದು ಎ. ವಿ. ನಾವಡರ ‘ಅಕ್ಕೆರಸು ಸಿರಿ’ ಎಂಬ ಪುಟ್ಟ ಪುಸ್ತಕ.  ಸಿರಿಯ ಮಾಯಕಕ್ಕೆ ಇಲ್ಲಿಯ ಕಥಿಸುವಿಕೆ ನಿಲ್ಲುತ್ತದೆ. ಸರಳವಾದ ತುಳು ಮತ್ತು ಕನ್ನಡ ಗದ್ಯದಲ್ಲಿ ಈ ಕೃತಿ ಕಾಣಿಸುವುದಕ್ಕೆ ಕಾರಣ ಅದರ ಗುರಿ ಎಳೆಯ ಓದುಗರು.  ಇಪ್ಪತ್ತನೆಯ ಶತಮಾನದ ಅಂಚಿನಲ್ಲಿ ಹುಟ್ಟಿಕೊಂಡ ತುಳುಸಾಹಿತ್ಯ ಅಕಾಡೆಮಿಯು ನವ ಸಾಕ್ಷರರಲ್ಲೂ, ಮಕ್ಕಳಲ್ಲೂ ಓದುವ ಅಭಿರುಚಿ ಬೆಳೆಸಲು ಪುಸ್ತಕಗಳನ್ನು ಪ್ರಕಟಿಸಲು ಮುಂದಾಯಿತು. ಆಗ ಬರಹಗಾರರು ತುಳು ಅಕಾಡೆಮಿಗೆ ‘ಸರಿಹೊಂದುವಂತೆ’ ತುಳು ಜಾನಪದದೊಳಗೆ ‘ವಸ್ತು’ಗಳನ್ನು ಹುಡುಕತೊಡಗಿದರು. ಹೀಗೆ ಎ. ವಿ. ನಾವಡರಿಗೆ ಸಿಕ್ಕವಳು ಇಲ್ಲಿಯ ವಿಶೇಷ ‘ಸಿರಿ’!

() ಕೆ. ಜೆ. ಶೆಟ್ಟಿಯವರ ತುಳು ಕಾದಂಬರಿಯು ‘ತುಳುನಾಡ ಸಿರಿ’ ಚಲನಚಿತ್ರದ ಹಿನ್ನಲೆಯಲ್ಲಿ ಇತ್ತು. ೧೯೭೩ರಲ್ಲಿ ಬಿಡುಗಡೆಯಾದ ‘ಕೋಟಿ ಚೆನ್ನಯ’ ಮತ್ತು ೧೯೭೬ ರಲ್ಲಿ ಬಿಡುಗಡೆಯಾದ ‘ತುಳುನಾಡ ಸಿರಿ’ – ಇವೆರಡು ಪಾಡ್ದನ ಪಠ್ಯಗಳ ಹಿನ್ನಲೆಯ ಮೊದಲ ತುಳು ಚಲನಚಿತ್ರಗಳು. ಸಿರಿಯಾಗಿ ಅಭಿನಯಿಸಿದ ಅಭಿನೇತ್ರಿ  ಸರೋಜಿನಿ ಶೆಟ್ಟಿಯವರು ಮೌಖಿಕವಾಗಿ ನೆನಪಿಸಿಕೊಂಡಂತೆ ಚಲನಚಿತ್ರವು ಸಿರಿಯ ಮರುಮದುವೆಯ ಸುಖಾಂತ್ಯದಲ್ಲಿ ಮುಕ್ತಾಯಗೊಂಡಿದೆ. ಸಿನೆಮಾದ ಸ್ವರೂಪವನ್ನು ಸೂಕ್ಷ್ಮವಾಗಿ ಮನನ ಮಾಡೋಣ – ಸಿರಿ ಬಳಗದ ಒಟ್ಟೂ ಬೃಹತ್ ಪಾಡ್ದನ ಪಠ್ಯವನ್ನು ಹ್ರಸ್ವಗೊಳಿಸಿ – ಆ ಕಾಲದ ಸಿನಿಮಾ ಚಿತ್ರಕಥೆಗಳ ಜಾಯಮಾನದ ದಾರಿಗೆ ಒಗ್ಗುವಂತೆ ಇಲ್ಲಿ ಚಿತ್ರವನ್ನು ಹೆಣೆಯಲಾಗಿದೆ.  ತಾಂತ್ರಿಕ ಕೌಶಲ್ಯ, ಸಂಗೀತ, ಹಿನ್ನಲೆ ಹಾಡುಗಳನ್ನು ಮದರಾಸು ಕೇಂದ್ರಿತವಾಗಿದ್ದ ಆ ಕಾಲದ ಕನ್ನಡ ಚಿತ್ರದ ಮಾದರಿಗಳಿಂದ; ಹಾಗೆಯೇ ವೇಷಭೂಷಣ – ಅಭಿನಯ ಮಾದರಿ ಗಳನ್ನು ಪ್ರಚಲಿತವಾಗಿದ್ದ ತುಳುರಂಗಭೂಮಿಯಿಂದ ಪಡೆದು ಕಟ್ಟಿದ ಸಿನಿಮಾ ಇದು. ಇಂದು ಬಾನುಲಿ ಬಿತ್ತರಿಸುತ್ತಿರುವ ‘ತುಳುನಾಡ ಸಿರಿ’ಯ ಚಿತ್ರಗೀತೆಗಳಲ್ಲಿ ಭಾಷೆಯು ತುಳು ಮಣ್ಣಿನದ್ದು – ರಾಗ ವಿನ್ಯಾಸ, ಸಂಗೀತ ವಿನ್ಯಾಸ ಮತ್ತು ಭಾವ ವಿನ್ಯಾಸ ದಕ್ಷಿಣ ಭಾರತದ ಚಿತ್ರರಂಗದ್ದೆಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹೀಗೆ ಸಿರಿ ಪಾಡ್ದನ ಪಠ್ಯ ಸಂಪಾದನೆಯ ದಾರಿಗಳು ಹೊಸ ಸಂಕಥನಗಳಾಗಿ ಬಹುದೂರಕ್ಕೆ ಸಂಕೀರ್ಣ ಅಂತರ್‌ಪಠ್ಯ ಹೆಣೆದಿವೆ.

) ‘ಪಿಂಗಾರದ ಬಾಲೆ ಸಿರಿ'(ನಾಟಕಕಾರ – ಗಂಗಾಧರ ಕಿದಿಯೂರು) ನಾಟಕದಲ್ಲಿ ಸೂತ್ರಧಾರ ಮತ್ತು ಜನರ ಗುಂಪನ್ನು ನಿರೂಪಣೆಗಾಗಿ ಬಳಸಿಕೊಂಡು, ಸಿರಿ ಬದುಕಿನ ಒಂದು ಭಾಗವನ್ನು ಪಾಡ್ದನದೊಳಗಿನಿಂದ ಎತ್ತಿಕೊಂಡು ಮಂಡಿಸಿದ್ದು ಕಾಣುತ್ತದೆ. ಪಾಡ್ದನದ ಕಥನವು ಪುಟ್ಟ ಪುಟ್ಟ ದೃಶ್ಯಗಳಾಗಿ ವಿಭಜಿತವಾಗಿದೆ. ಆಧುನಿಕ ಕನ್ನಡ ರಂಗಭೂಮಿಯ ನಾಟಕ ಮಂಡನಾ ಕ್ರಮಗಳಿಂದ ಪ್ರಭಾವಿತವಾಗಿ ತುಳು ನಾಟಕ ರಚಿಸಲು ಹೊರಟವರು, ತುಳು ಜಾನಪದದತ್ತ ಹೊರಳಿ ಸಿರಿಯನ್ನು ಆರಿಸಿಕೊಂಡ ಉದಾಹರಣೆ ಇದು.

ಇಪ್ಪತ್ತನೆಯ ಶತಮಾನದುದ್ದಕ್ಕೆ ತುಳುವರ ವಲಸೆಯು ಮುಂಬಯಿ ಕಡೆಗೆ ಆದುದರಿಂದ ಅಲ್ಲಿ ತುಳುವರು ತುಳುರಂಗಭೂಮಿಯನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿದರು. ಮುಂಬೈಯ ತುಳು ರಂಗಭೂಮಿಯ ಎರಡನೆ ತಲೆಮಾರಿನ ಉತ್ಪನ್ನಗಳು ಮರಾಠಿ – ಹಿಂದಿ ನಾಟಕಗಳಿಂದ ಪ್ರಭಾವಿತವಾದುವು. ರಂಗಭೂಮಿಯ ಈ ಎರಡನೆಯ/ ಮೂರನೆಯ ತಲೆಮಾರು ತಮ್ಮ ಬೇರುಗಳನ್ನು ಹುಡುಕುತ್ತಾ, ತುಳುನಾಡಿನ “ಪರಿಶುದ್ಧ” ರೂಪವೊಂದನ್ನು ತಮ್ಮ ಅಭಿವ್ಯಕ್ತಿ ಗಳ ಮೂಲಕ ಕಟ್ಟಲು ಯತ್ನಿಸಿದರು. ಮಾದರಿಯಾಗಿ ಗಮನಿಸಿ – ಜಗದೀಶ್ ಶೆಟ್ಟಿ, ಕೆಂಚನಕರೆ ಇವರ ‘ಸತ್ಯದ ಸಿರಿ’ ನಾಟಕವು ರಂಗದ ತನ್ನ ಪ್ರಾರ್ಥನೆಯನ್ನು ಆದಿದೈವ ನಾಗನಿಗೆ ಸಲ್ಲಿಸುತ್ತದೆ. ‘ನಾಗ ಬೆರಮೆರ್’ಇಲ್ಲಿ ಆರಾಧನೆಯಾಗುತ್ತಾರೆ. ವೈಭವದ ಗುತ್ತಿನ ಮನೆಯ ರಂಗಾಲಂಕರಣ, ಪ್ರಾಚೀನ ಆಢ್ಯ ಬಂಟರ ಮನೆಗಳ ವೈಭವ ಇವೆಲ್ಲವನ್ನು ತುಳುವಿನ ಶಕ್ತಿಶಾಲಿ ಪ್ರಧಾನ ಸಂಸ್ಕೃತಿ ಎಂಬುದಾಗಿ ನಾಟಕ ಗ್ರಹಿಸುತ್ತದೆ. ಸಿರಿಯು ಕಾಯ ಬಿಡುವವರೆಗೆ ಸಾಗುವ ನಾಟಕ ‘ಅಬ್ಬಗ – ದಾರಗೆ’ ಪ್ರಸಂಗವನ್ನು ಆಯ್ದುಕೊಳ್ಳುವುದಿಲ್ಲ.

ತುಳು ಜಾನಪದ ಅಧ್ಯಯನದ ಭೀಷ್ಮ ಅಮೃತ ಸೋಮೇಶ್ವರ ತಮ್ಮ ಸೃಜನಶೀಲ ರಚನೆಗಳಿಗಾಗಿ ಸಿರಿ ಪಾಡ್ದನ ಪಠ್ಯವನ್ನು ಎರಡು ಸಂದರ್ಭಗಳಲ್ಲಿ ವಿಶಿಷ್ಟವಾಗಿ ರೂಪಿಸಿ ಕೊಳ್ಳುತ್ತಾರೆ. ತುಳುಭಾಷೆಯ ನೃತ್ಯರೂಪಕವಾಗಿ ‘ಸತ್ಯನಾಪುರತ್ತ ಸಿರಿ’ (ಪ್ರಕಟ : ೨೦೦೫) ಯನ್ನು ಕಟ್ಟುವಾಗ, ರಾಗ – ತಾಳ ಬದ್ಧ ಶಾಸ್ತ್ರೀಯ ನೃತ್ಯ ರೂಪಕ ಸ್ವರೂಪಕ್ಕೆ ಸಿರಿಯ ಕಥಾನಕವನ್ನು ಒಗ್ಗಿಸಿಕೊಳ್ಳಲಾಗಿದೆ. ‘ಸೋಬಾನೆ’ ತರದ ಜೋಗುಳದ ಸನ್ನಿವೇಶಗಳನ್ನೆಲ್ಲಾ ಅಳವಡಿಸಿಕೊಳ್ಳುವ ಇಲ್ಲಿ ಲೇಖಕರು ನಾಟ್ಯದೃಶ್ಯಗಳ ಜೋಡಣೆಯ ದಾರಿ ಹಿಡಿಯುತ್ತಾರೆ. ನಾಟ್ಯಗೀತೆಗಳಾಗಿ ಪಾಡ್ದನ ಮಾರ್ಪಾಡಾಗುತ್ತದೆ. ಪಾಡ್ದನದ ಬನಿಯನ್ನು ಅಲ್ಲಲ್ಲಿ ಉಳಿಸಿ ಕೊಳ್ಳಲಾಗಿದೆ. ಭರತನಾಟ್ಯದ ‘ರಂಗ ಸಂಗೀತ ವ್ಯಾಕರಣಕ್ಕೆ’ ಪಾಡ್ದನವು ಒಗ್ಗಿಕೊಳ್ಳುತ್ತದೆ.

ಇದೇ ಅಮೃತರು ರಂಗನಾಟಕವಾಗಿ ಸಿರಿ ಪಾಡ್ದನವನ್ನು ‘ಸಂಪಾದಿಸಿ’ ಕೊಳ್ಳುವ ಕ್ರಮ ಭಿನ್ನವಾದುದು. ಈ ಭಿನ್ನತೆಗೆ ಕಾರಣ ಇಲ್ಲಿ ಕೆಲಸ ಮಾಡುವ ಅವರ ರಂಗಪ್ರಜ್ಞೆ. “ಅವಿವೇಕಿ ಪತಿಯ ಎದುರು ಧೈರ್ಯ – ಸ್ವಾಭಿಮಾನದ ಆಕಾರ ತಾಳಿದ ಸಿರಿಯ ಕ್ರಾಂತಿಕಾರಕ ಕ್ರಿಯೆ” – ನಾಟಕಕ್ಕೆ ಮುಖ್ಯವೆನಿಸುವುದು ಇದರೊಳಗಿನ ನಾಟಕೀಯ ಗುಣಕ್ಕೆ. ಸಿರಿ ಪಾಡ್ದನವನ್ನು ಯಕ್ಷಗಾನ, ನಾಟಕಗಳ ಸಂದರ್ಭದಲ್ಲಿ ಸಂಪಾದಿಸುವಾಗ ಬೀಳುವ ಪ್ರಧಾನ ಒತ್ತು ಸಿರಿಯ ಪ್ರತಿಭಟನೆಗಾಗಿ ಇರುತ್ತದೆ – ಯಾಕೆಂದರೆ ಈ ಸಂಘರ್ಷವು ತರುವ ನಾಟಕೀಯ ಗುಣವೇ ಪ್ರಧಾನ ರಂಗಾಕರ್ಷಣೆಯಾಗಿ ಬಿಡುತ್ತದೆ. “ಆರಂಭ – ಸಂಘರ್ಷ – ಅಂತ್ಯ”ವೆಂಬ ಪ್ರಸಿದ್ಧ ತ್ರಿಕೋನ ಬದ್ಧ ಕಲಾಮೀಮಾಂಸೆಯೇ ಗೆದ್ದು, ಪಾಡ್ದನದೊಳಗಡೆಯಿಂದ ಸಿದ್ದಿಸಬಹುದಾಗಿದ್ದ ಅನನ್ಯ ಕಲಾಮಿಮಾಂಸೆಯು ತಪ್ಪಿಹೋಗುತ್ತದೆ. ಮೇಲಿನ ಎರಡೂ ಸಂದರ್ಭಗಳಲ್ಲಿ ಸಿರಿಸಂಧಿಗಳಿಂದ ಆರಿಸಲಾದ ತುಣುಕೊಂದು ಮಾತ್ರ ನಿರ್ವಹಣೆಯಾಗಿದೆ.  ಅದು ಪ್ರಾಯೋಗಿಕ ಅನಿವಾರ್ಯತೆ. ‘ಚೆನ್ನೆಮಣೆ’ (೧೯೯೧) ನಾಟಕ ಕೂಡಾ ಅಬ್ಬಗ – ದಾರಗೆಯರ ಬದುಕನ್ನು ದುರಂತವಾಗಿ ಕಂಡು ‘ದುರಂತ ನಾಟಕ’ವೊಂದನ್ನು ಆಗಿಸುವ ಬಯಕೆಯಿಂದ ಹೊರಟದ್ದು. ಇದರ ರಚಯಿತ ಶ್ರೀ ಮುದ್ದು ಮೂಡುಬೆಳ್ಳೆ. ಹೀಗೆ ಸಮಕಾಲೀನ ಪ್ರಕಾರ ಗಳಲ್ಲಿ ತುಳುವಿನ ಮೌಖಿಕ ಕಾವ್ಯ ಪರಂಪರೆಯನ್ನು ಓದಿಕೊಳ್ಳುವ ಕ್ರಮವು ಪುನರಾವರ್ತನೆ ಯಾಗುತ್ತಾ ಹೋಗಿದೆ. ಅಜ್ಜಿ – ಪುಳ್ಳಿ ಮಾತುಕತೆಯನ್ನು ನಾಟಕ ನಿರೂಪಣೆಗಾಗಿ ಬಳಸುವ ಕ್ರಮ ಇಲ್ಲಿ ಕಾಣಿಸಿದೆ.

ನಾಟಕ, ಯಕ್ಷಗಾನ, ಸಿನೆಮಾ – ಈ ಎಲ್ಲಾ ವಿವಿಧ ‘ಅವತಾರ’ಗಳಲ್ಲಿ ಆದುದು ಏನು? ಪಾಡ್ದನದ ನುಣುಚುವಿಕೆ ಇಲ್ಲಿ ಹೇಗಾಯಿತು? ಪಾಡ್ದನದ ಜೀವಸೆಲೆಗಳಾದ ಸ್ವರೂಪ, ಲಯಗಳು ಇಲ್ಲಿ ಹಿನ್ನೆಲೆಗೆ ಸರಿದು, ಆಯಾ ಪ್ರಕಾರಗಳ ಮೂಲ ಗುಣವೇ ಢಾಳಾಯಿತು. ಪಾಡ್ದನವು ತನ್ನೊಳಗಿನ ಚೈತನ್ಯದಿಂದ ಈ ಕಲಾಪ್ರಕಾರಗಳಿಗೆ ಹೊಸ ಕಲಾಮೀಮಾಂಸೆ ಒದಗಿಸುವ ಮಟ್ಟಿಗೆ ಇಲ್ಲಿಯ ಕಸಿ ಪಾಕವು ಬಲವಾಗಿದ್ದುದು ಕಾಣದು. ಪಾಡ್ದನವನ್ನು ಹಿಂಜಿ – ಹಿಂಡಿ ತೆಗೆದ ಕಥಾನಕವೇ ವಿವಿಧ ತುಂಡುಗಳಾಗಿ ಬಳಕೆಯಾದುವು. ಹೀಗೆ ವಿಭಜನೆ ಸಂಭವಿಸುವುದು ಕೇವಲ ಅನುಕೂಲಕ್ಕಾಗಿ ಮಾತ್ರವಲ್ಲ; ಸಿರಿಗಳ ಬಾಳುಗಳನ್ನು ಹಾದು ಹೋಗುವ ನಾಲ್ಕು ತಲೆಮಾರುಗಳ ದೀರ್ಘ ಕಥನದೊಳಗಡೆ ಅಲ್ಲಲ್ಲಿ ಕೆಲವು ಭದ್ರ ತಾಣ ಗಳನ್ನು ಕಂಡುಕೊಂಡು; ಪ್ರಧಾನ ಧಾರೆಯ ನಾಟಕ – ಸಿನೆಮಾ ಪ್ರಕಾರಗಳಲ್ಲಿ ಈಗಾಗಲೇ ಸಾಧಿತ ಕ್ರಮದ ವಿನ್ಯಾಸವನ್ನು, ಅಂತ್ಯವನ್ನು ತರುವುದು ಇಲ್ಲಿಯ ಲೇಖಕರಿಗೆ ಸಾಧ್ಯವಾಗಿದೆ. ಸಿರಿಯ ಬಾಳ ದುರಂತ, ಪ್ರತಿಭಟನೆ, ಸಿರಿ – ಕಾಂತುಪೂಂಜ ವ್ಯಕ್ತಿತ್ವಗಳಲ್ಲಿ ಸಿಗುವ ವೈರುಧ್ಯಗಳು ಇವುಗಳನ್ನು ಕೊಂಚ ಬಲಶಾಲಿಯಾಗಿಸಿದರೆ ಕೃತಿಗಳೊಳಗೆ ತೀವ್ರತೆಯನ್ನು ತರಲು ಸುಲಭ ವೆನಿಸುತ್ತದೆ. ಈ ಎಲ್ಲಾ ಸಂಪಾದನೆಗಳ ಸಂದರ್ಭದಲ್ಲಿ ಯಕ್ಷಗಾನ, ರಂಗಭೂಮಿ, ಚಲನ ಚಿತ್ರಕ್ಕೆ ಸಂಬಂಧಿಸಿದ ಅಂತರಂಗದ ವ್ಯಾಕರಣಗಳು ಸಿರಿಪಾಡ್ದನದಿಂದ ಪಲ್ಲಟವಾಗುವುದಿಲ್ಲ, ಬದಲಾಗಿ ಪಾಡ್ದನದ ಕಥಾನಕವು ಈ ವ್ಯಾಕರಣಗಳಿಗೆ ಒಗ್ಗುವಂತೆ ತನ್ನ ರೆಕ್ಕೆ – ಪುಕ್ಕಗಳನ್ನು ಕತ್ತರಿಸಿಕೊಳ್ಳುತ್ತದೆ.

ತುಳು ಸಂಸ್ಕೃತಿ ಎಂಬ ಅಧ್ಯಯನ ಸಾಮಗ್ರಿ

)  ಅಮೃತ ಸೋಮೇಶ್ವರರು ಮತ್ತು ಡಾ. ವೆಂಕಟರಾಜ ಪುಣಿಚಿತ್ತಾಯರು ತುಳು ಬದುಕು – ಬರಹಗಳ ಕಡೆಗೆ ಆಸಕ್ತಿ ವಹಿಸಿದಾಗ ಅವರಿಗೆ ಅದು ನಾಳೆ ನಾಡಿನ ಅಕಡೆಮಿಕ್ ಅಧ್ಯಯನವಾದೀತೆಂಬ ಕನಸು ಇದ್ದಂತೆ ಕಾಣುವುದಿಲ್ಲ. ಅಲ್ಲಿ ಇದ್ದುದು ಸಂಸ್ಕೃತಿಯ ಬಗೆಗಿನ ಪ್ರೀತಿ ಮಾತ್ರ. ಅರುವತ್ತರ ದಶಕದಿಂದಲೇ ಅಮೃತರು ತನ್ನ ಪ್ರೀತಿಯ ಚಟುವಟಿಕೆ ಯಾಗಿ ಪಾಡ್ದನಗಳನ್ನು ಲಿಪೀಕರಣಗೊಳಿಸಿ ಸಂಗ್ರಹಿಸತೊಡಗಿದರು. ಅವುಗಳ ವಿಶ್ಲೇಷಣೆ ಯಲ್ಲಿ, ಅವುಗಳಿಂದ ‘ತುಳು ಸಂಸ್ಕೃತಿ’ ಎಂಬ ಒಂದು ಪರಿಕಲ್ಪನೆಯನ್ನು ಕಟ್ಟುವಲ್ಲಿ ಗಂಭೀರ ವಾಗಿ ತೊಡಗಿಸಿಕೊಂಡರು. ಪೊಳಲಿ ಶೀನಪ್ಪ ಹೆಗ್ಡೆಯವರ ಸಂದರ್ಭಕ್ಕೂ, ಅಮೃತರ ಸಂದರ್ಭಕ್ಕೂ ಇರುವ ವ್ಯತ್ಯಾಸಗಳನ್ನು ಕಾಲಘಟ್ಟ, ಸಮಕಾಲೀನ ಒತ್ತಡ ಮತ್ತು ಅದರಿಂದ ರೂಪುಗೊಂಡ ಅಧ್ಯಯನಕಾರನ ವ್ಯಕ್ತಿತ್ವಗಳ ಭಿನ್ನತೆಗಳಲ್ಲಿ ಗುರುತಿಸಬೇಕಾಗುತ್ತದೆ.

ಅಮೃತರ ಕಾಲದಲ್ಲಿ ದೇಶವು ಸ್ವತಂತ್ರಗೊಂಡು, ಭಾಷಾವಾರು ಪ್ರಾಂತ್ಯಗಳು ರೂಪುಗೊಂಡು ‘ತುಳುನಾಡು’ ಎಂಬ ಭಾಷಾ ಸಾಂಸ್ಕೃತಿಕ ಪ್ರದೇಶವು ಕೇರಳ – ಕರ್ನಾಟಕ ಗಳಲ್ಲಿ ಒಡೆದುಹೋಗಿದೆ. ಕೇರಳಾಂತರ್ಗತ ತುಳುನಾಡಿನಲ್ಲಿ ಪುಣಿಚಿತ್ತಾಯರು ಹೆಚ್ಚಾಗಿ ಶೋಧದಲ್ಲಿ ತೊಡಗಿದರೆ, ಅಮೃತರು ಕನ್ನಡಾಂತರ್ಗತ ತುಳುನಾಡಿನಲ್ಲಿ ಹೆಚ್ಚಾಗಿ ಕಾಣಿಸಿ ಕೊಂಡರು. ಭಾರತವೆಂಬ ದೇಶ – ಅದರಲ್ಲಿ ‘ವಿವಿಧತೆಯಲ್ಲಿ ಏಕತೆ’ಯನ್ನು ಆರೋಪಿಸಿ ಕೊಂಡ ಸಂಸ್ಕೃತಿ ಪರ ದೃಷ್ಟಿ – ಇವುಗಳೆಲ್ಲ ಸಾಮಾಜಿಕ ರಾಜಕೀಯ ಮೌಲ್ಯಗಳಾಗಿ ರೂಪು ಗೊಂಡ ಕಾಲವಿದು. ಜಾನಪದ ಅಧ್ಯಯನವೆನ್ನುವುದು ಅಕಡೆಮಿಕ್ ಅಧ್ಯಯನವಾಗಿ ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಅಂಬೆಗಾಲಿಕ್ಕ ತೊಡಗಿದ ಕಾಲವಿದು.  ಇಂತಹಾ ಕಾಲಘಟ್ಟದಲ್ಲಿ ಅಮೃತರ ಹುಡುಕಾಟ ವೈದಿಕ ಮೂಲಸೆಲೆಯಿರದ ಸ್ಥಳೀಯ ದೇಸಿ ವಿನ್ಯಾಸಗಳನ್ನು ಪ್ರೀತಿಸಿದ್ದರಿಂದ ರೂಪುಪಡೆಯಿತು. ೧೯೬೨ರ ಕಾಲಕ್ಕೇ ಅವರು ಸೃಜಿಸುವ “ತುಳುನಾಡಿನ ಭೂತಪೂಜೆ” ಎಂಬ ಲೇಖನ ಈ ನಿಟ್ಟಿನಲ್ಲಿ ಗಮನ ಸೆಳೆಯುವಂಥದ್ದು[2] ಅದುವರೆಗೆ ಭೂತಾರಾಧನೆಯು ಕೇವಲ ಪೂರಕ ವಿಚಾರವಾಗಿ ಕರಾವಳಿಯ ಅಧ್ಯಯನಗಳಲ್ಲಿ ಪ್ರಸ್ತಾವನೆಯಾಗುತ್ತಿದ್ದರೆ, ಅಮೃತರು ಅದನ್ನು ಅನನ್ಯ ಆರಾಧನಾ ಪಂಥವಾಗಿ ಪರಿಗಣಿಸುತ್ತಾರೆ. ‘ಅಂಚಿನ ಸಂಸ್ಕೃತಿಯ ಅಧ್ಯಯನ’ – ಎಂಬ ಪಾರಿಭಾಷಿಕ ಪದಗಳು ರೂಪುಗೊಳ್ಳುವ ಪೂರ್ವದಲ್ಲಿ ಇದು ಅದೇ ಆಗಿಬಿಡುವುದು ಅಮೃತರ ಮಣ್ಣಿನ ಮಿಡಿತದ ಮೇಲಿನ ಪ್ರೀತಿಯ ನೋಟದಿಂದ. ‘ಅವಿಲು’ಗ್ರಂಥದಲ್ಲಿ ‘ಸಿರಿಗಳ ಸಂಧಿಯಲ್ಲಿ ಸಮಾಜ’ (೧೯೭೩ – ಲೇಖನ ರಚನೆಯ ವರ್ಷ) ಎಂಬುದಾಗಿ ಅಮೃತರು ಪಾಡ್ದನದ ವಿವರಗಳಿಂದ ಪೋಣಿಸಲಾದ ತುಳು ಸಂಸ್ಕೃತಿಯನ್ನು ನಿರ್ಮಿಸಿಕೊಡುತ್ತಾರೆ. ಸಿರಿ ಪಾಡ್ದನದ ಮೂಲಕ ತುಳು ಸಂಸ್ಕೃತಿಯ ಚಹರೆಗಳನ್ನು ಪುನರ್ರಚನೆ ಮಾಡುವ ಈ ಕ್ರಮಕ್ಕೂ, ಶೀನಪ್ಪ ಹೆಗ್ಡೆಯವರ ಕ್ರಮಕ್ಕೂ ವ್ಯತ್ಯಾಸ ಸ್ಪಷ್ಟವಿದೆ. ಹೆಗ್ಡೆಯವರು ಮೊದಲಾಗಿ ಆರ್ಯಾವರ್ತವನ್ನು ಘೋಷಿಸಿ, ಸಂಸ್ಕೃತ ಸಾಲುಗಳನ್ನು ಉಲ್ಲೇಖಿಸಿ, ಬಳಿಕ ತುಳುನಾಡಿಗೆ ಇಳಿದುಬಂದು ತುಳು ಬದುಕಿನ ಚಹರೆ ಕಟ್ಟಿದರೆ; ಅಮೃತರು ದೇಸಿಯ ಪಾಡ್ದನ ದನಿಯ ಪಲುಕುಗಳಿಂದ ರೂಪಿತವಾದ ತುಳು ಬದುಕಿನ ಸೊಗಡನ್ನು ಸ್ಥಳಿಯವಾಗಿಯೇ ಕಟ್ಟತೊಡಗುತ್ತಾರೆ.

ಯಕ್ಷಗಾನ, ಭೂತಾರಾಧನೆ, ತುಳುಭಾಷೆ, ತುಳು ಮೌಖಿಕ ಪರಂಪರೆಗಳು – ಇವೆಲ್ಲ ತಮ್ಮ ಸಂಕೀರ್ಣತೆಗಳಲ್ಲಿ ಅಮೃತರ ಪ್ರಧಾನ ಆಸಕ್ತಿಗಳಾದವು. ಶೀನಪ್ಪ ಹೆಗ್ಡೆಯವರಲ್ಲಿ ಆಧುನಿಕ ಯುಗದ ಮನಸ್ಸೊಂದು ತುಳು ಸಂಸ್ಕೃತಿ ಎಂಬ ಅನನ್ಯ ಆಕಾರವೊಂದನ್ನು ಸ್ಥೂಲವಾಗಿ ಹುಡುಕುತ್ತಿರುವಾಗ ಸಂಭವಿಸಿದ ಫಲಿತಗಳು ಕಂಡರೆ, ಅಮೃತರು ‘ತುಳು ಸಂಸ್ಕೃತಿ’ಯ ಸೂಕ್ಷ್ಮ ಸ್ವರೂಪಗಳನ್ನು ನಿರ್ವಚಿಸುವ ಕಾಲಘಟ್ಟದಲ್ಲಿ ಕಾಣಿಸಿಕೊಳ್ಳುತ್ತಾರೆ.  ಅವರ ಕೆಲಸದ ಕ್ರಮ ಮಣ್ಣಿನ ಆಳದ ತಂಪಿನ ಕಡೆಗೆ ಸದ್ದಿಲ್ಲದೆ ನಡೆಯುವ ಎರೆಹುಳದ ಕ್ರಮದ್ದು. ಕಾಲೇಜು ಅಧ್ಯಾಪಕರಾಗಿದ್ದ ಅಮೃತರ ಜಾನಪದ ಅಧ್ಯಯನ ಕ್ರಮಗಳು ಬೆಳೆಯುತ್ತ ಬಂದಂತೆ ಕರಾವಳಿಯಲ್ಲಿ ಹುಟ್ಟಿಕೊಂಡ ಜಾನಪದದ ಅಕಡೆಮಿಕ್ ಅಧ್ಯಯನ ಕ್ರಮಗಳು ಅವರಿಂದ ಸಾಕಷ್ಟು ಪ್ರೇರಣೆ ಪಡೆದುವು – ಹಾಗೆಯೇ ಅಮೃತರೂ ಮುಂದೆ ತಮ್ಮ ಕ್ರಮಗಳನ್ನು ಹೊಸತಾಗಿ ಬಂದ ಅಕಡೆಮಿಕ್ ಶಿಸ್ತಿನ ಜೊತೆ ಸೂಕ್ಷ್ಮವಾಗಿ ಬೆಸೆಸಿ ಕೊಂಡರು. ಬಿ. ಎ. ವಿವೇಕರೈಯವರು ತುಳು ಜಾನಪದ ಸಾಹಿತ್ಯವನ್ನು ಅಕಡೆಮಿಕ್ ಅಧ್ಯಯನಕ್ಕಾಗಿ ಆರಿಸಿಕೊಂಡರು ; ಅದು ಅವರ ಡಾಕ್ಟರೇಟ್ ಸಂಶೋಧನೆಯ ಗುರಿ. ಮಂಗಳೂರು ವಿ.ವಿ.ಯ ಕನ್ನಡ ವಿಭಾಗದಲ್ಲಿ ಜನಪದ ಅಧ್ಯಯನದ ಶಾಖೆಗಳು ಆರಂಭ ಗೊಂಡಾಗ, ಬ್ರಾಹ್ಮಣೇತರ ಸಮುದಾಯಗಳಿಗೆ ಸೇರಿದ ಯುವ ತಲೆಮಾರು ತಮ್ಮ ಸಾಮುದಾಯಿಕ ಸಾಂಸ್ಕೃತಿಕ ಚಹರೆಗಳನ್ನು ಆಧುನಿಕ ಶಿಕ್ಷಣದ ಸಂಶೋಧನದೊಳಗೆ ಸ್ಥಾಪಿಸುವ ಪ್ರಕ್ರಿಯೆಗೆ ಈ ಅಧ್ಯಯನಾವಕಾಶಗಳನ್ನು ರೂಢಿಸಿಕೊಂಡಿತು. ಇದು ಎಂಬತ್ತು ಮತ್ತು ಆ ದಶಕದ ನಂತರದ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಸಿರಿ ಪಾಡ್ದನ ಪಠ್ಯ ಸಂಪಾದನೆಯ ಕಡೆಗೆ ಬರೋಣ.

೧೯೭೨ರ ಕಾಲದಲ್ಲಿ ದಿ. ರಾಮ ಕುಂಜತ್ತೂರು ಇವರಿಂದ ‘ಸತ್ಯನಾಪುರದ ಸಿರಿ’ ಪಾಡ್ದನ ವನ್ನು ಅಮೃತರು ಸಂಗ್ರಹಿಸಿದರು. ಯಾವುದೇ ಆಧುನಿಕ ಜನಪದ ಸಿದ್ಧಾಂತಗಳು ಆಧುನಿಕ ಯಂತ್ರೋಪಕರಣಗಳು ಅವರ ಜೊತೆಗಿಲ್ಲ. ಹಾಗಾಗಿ ಕಲಾವಿದನೆದುರು ಅಧ್ಯಯನಕಾರನು ನೇರವಾಗಿ ಕುಳಿತು ಪಾಡ್ದನ ಬರೆದುಕೊಳ್ಳುವ ಈ ಸಂದರ್ಭದಲ್ಲಿ ಪಾಡ್ದನವು ಹೆಚ್ಚು ದೀರ್ಘತೆ ಪಡೆಯುವುದಿಲ್ಲ. “ಒಂದೊಂದು ಪಾಡ್ದನಕ್ಕೆ ಹಲವಾರು ಪಾಠಾಂತರಗಳನ್ನು ನೀಡಿ, ಶಾಬ್ದಿಕ ವ್ಯತ್ಯಾಸಗಳನ್ನೂ ಉಚ್ಛಾರ ವೈಚಿತ್ರ್ಯಗಳನ್ನು ಪರಿಗಣಿಸಿ ಸೂಕ್ಷ್ಮವಾಗಿ ಅಧ್ಯಯನ ಮಾಡುವ ರೀತಿ ಇಲ್ಲಿಲ್ಲ. ಇಲ್ಲಿ ಒಂದೊಂದು ಪಾಡ್ದನದ ಒಂದೊಂದು ಪಠ್ಯ ವನ್ನು ಮಾತ್ರ ಮುಖ್ಯವಾಗಿ ಗಮನಿಸಿ ಉಳಿದ ವಿಷಯಗಳನ್ನು ಪೂರಕವಾಗಿ ಟಿಪ್ಪಣಿ ರೂಪದಲ್ಲಿ ನೀಡಲಾಗಿದೆ. ಪಾಠಾಂತರ ವಿಚಾರಗಳನ್ನು ಮಿತವಾಗಿ ಕೊಡಲಾಗಿದೆ. ಆಲಾಪನೆ, ಉಚ್ಚಾರ ಶೈಥಿಲ್ಯ ಅಥವಾ ಅಕ್ಷರ ವ್ಯತ್ಯಾಸಗಳನ್ನು ಇಲ್ಲಿ ಯಥಾವತ್ತಾಗಿ ಸಂಕೇತಿಸಿಲ್ಲ.”[3]

ಅಮೃತರು ತಮ್ಮ ಸಂಪಾದನೆಯನ್ನು ಮೇಲಿನಂತೆ ವಿವರಿಸಬೇಕಾಗಿ ಬರುವುದು – ಅಧ್ಯಯನ ವಿಧಾನಗಳು ಅವರ ಸಂಗ್ರಹದ ಬಳಿಕ ಬಹುರೂಪಿ ಪಠ್ಯ, ಸಂದರ್ಭ, ಪ್ರದರ್ಶಕ ಸಿದ್ಧಾಂತಗಳಿಗೆ ಹೊರಳಿದ್ದರಿಂದ.  ಸಿರಿಗಳ ಪೂರ್ತಿ ಕಥಾನಕವು ಪಾಡ್ದನದ ಆಕಾರದಲ್ಲಿ ಮೊದಲಾಗಿ ಸಿಗುತ್ತಿರುವುದೇ ಅಮೃತರಲ್ಲಿ. ಇದರ ಕನ್ನಡ ಭಾಷಾಂತರವನ್ನು ತುಳು ಪಾಡ್ದನದ ಜೋಡಣಾ ಕ್ರಮದಲ್ಲಿಯೇ ಅಮೃತರು ನೀಡಿದ್ದಾರೆ. ಇದೇಕೆ ಹೀಗೆ ? ಪಾಡ್ದನ ಪಠ್ಯವನ್ನು ಪ್ರಸರಿಸುತ್ತಿರುವುದು ಹಂಪಿಯ ಕನ್ನಡ ವಿವಿ. ಇದು ನಡೆಯುತ್ತಿರುವುದು ಅಖಿಲ ಕರ್ನಾಟಕದ ಕನ್ನಡಿಗರಿಗಾಗಿ. ತುಳುವಿನ ಅಧ್ಯಾಯನವು ಕನ್ನಡದ ನೆರಳಿನ ಅಡಿಯಲ್ಲಿಯೇ ನಡೆದ ಸಂಕೀರ್ಣ ಸಂದರ್ಭಕ್ಕೆ ಇದೊಂದು ರೂಪಕ.

ತುಳುವಿನ ಜಾನಪದ ಅಧ್ಯಯನವು ತುಳುವಿನಲ್ಲಿಯೇ ಆದುದು ತೀರಾ ಅಲ್ಪ.  ಕನ್ನಡವು ಇಲ್ಲಿ ಅಧ್ಯಯನಕಾರನ ಭಾಷೆ. ತುಳು ಸಂಸ್ಕೃತಿಯ ನಿರ್ವಚನವನ್ನು ಅಖಿಲ ಕರ್ನಾಟಕದ ‘ರಾಜ್ಯ ಸಂಸ್ಕೃತಿಯ’ ಆಕಾರದೊಳಗೆ ಹಿಂದಿನಿಂದಲೂ ಇರಿಸಲಾಗಿದೆ. ಅರ್ಧ ತುಳುನಾಡನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಕೇರಳದ ಮಲೆಯಾಳ ರಾಜ್ಯ ಸಂಸ್ಕೃತಿ ಈ ಸತ್ಯವನ್ನು ತಡವಾಗಿ ಮನಗಂಡು, ಸಂಸ್ಕೃತಿ ಮತ್ತು ರಾಜಕೀಯವನ್ನು ಬೆರೆಸುವ ಹೊಸ ಸಮೀಕರಣ ಹತ್ತ್ಯಾರುಗಳನ್ನು ಇತ್ತೀಚೆಗೆ ರೂಢಿಸತೊಡಗಿದೆ. ಅಮೃತರು ರೂಪಿಸಿದ ಈ ಕನ್ನಡ ಪಾಡ್ದನ ಪಠ್ಯವು ಮಂಗಳೂರು ವಿವಿಯ ಕನ್ನಡ ಬೋಧನಾ ಪಠ್ಯವಾದುದರ ಒಳಬಲಗಳ ಬಗ್ಗೆ ಮುಂದೆ ಚರ್ಚಿಸಲಾಗುವುದು.

) ಪ್ರೊ. ಬಿ. ಎ. ವಿವೇಕರೈಯವರ ಸಿರಿಪಾಡ್ದನ ಪಠ್ಯ ಸಂಪಾದನೆಯು (ಪಿ.ಹೆಚ್.ಡಿ. ಸಂಶೋಧನೆ ೧೯೮೧ ; ಪ್ರಬಂಧ ಪ್ರಕಟಣೆ ೧೯೮೫) `ತುಳು ಜನಪದ ಸಾಹಿತ್ಯ’ ಎಂಬ ವಿಶಾಲ ತಳಹದಿಯಲ್ಲಿ ತುಳು ಮೌಖಿಕ ಪರಂಪರೆಯನ್ನು ಗ್ರಹಿಸಿಬಿಟ್ಟು ; ಪಾಡ್ದನ – ಒಗಟು – ಗಾದೆಮಾತು – ಜನಪದಕತೆ – ಕಬಿತ – ಕುಣಿತದ ಹಾಡು ಹೀಗೆ ಈ `ತುಳು ಜನಪದ ಸಾಹಿತ್ಯ’ವನ್ನು ವಿಭಜಿಸಿ ನೋಡಿ ; ಈ ತುಂಡುಗಳ ವ್ಯವಸ್ಥೆಯೊಳಗೆ ಸಿರಿ ಪಾಡ್ದನದ ಆಸನ ವನ್ನು ಸ್ಥಿರೀಕರಿಸುವುದು ಇಲ್ಲಿ ಕಂಡುಬರುತ್ತದೆ. ಮೌಖಿಕ ಕ್ರಮವು ಪರಂಪರೆಯನ್ನು ‘ಜನಪದ ಸಾಹಿತ್ಯ’ವಾಗಿ ಕಾಣುವ ಈ ಕ್ರಮವು ಒಂದು ಖಚಿತ ಸಂದರ್ಭದ ಘಟನಾವಳಿಗಳ ಜೊತೆಗಾರನಾಗಿ ಮೌಖಿಕ ಪರಂಪರೆಯನ್ನು ಕಂಡಿರುವುದಿಲ್ಲ. ಬದಲಾಗಿ ‘ಲಿಖಿತ ಸಾಹಿತ್ಯ’ ವನ್ನು ನೋಡುವ ಆ ಕಾಲದ ಪ್ರಧಾನ ಯೋಚನಾ ಕ್ರಮಗಳೇ ಬಹು ಸಂದರ್ಭಗಳಲ್ಲಿ ಕೈಯಾಡಿಸಿವೆ. ಉದಾಹರಣೆಗೆ ಪಾಠಾಂತರ ಪರಿಕಲ್ಪನೆ, ಸಾಲುಗಳನ್ನು ‘ ಕಟ್ ಅಂಡ್ ಪೇಸ್ಟ್’ ವಿಧಾನಕ್ಕೆ ಒಳಪಡಿಸಿ ಸಂಸ್ಕೃತಿಯನ್ನು ವಿವರಿಸುವ ಕ್ರಮ ಇತ್ಯಾದಿ.

ಕೋಟಿ ಚೆನ್ನಯ ಮತ್ತು ಸಿರಿಪಾಡ್ದನಗಳನ್ನು ತುಳುನಾಡಿನ ‘ಅವಳಿ ಜನಪದ ಮಹಾಕಾವ್ಯ’ಗಳೆಂದು ಈ ಸಂಶೋಧನಾ ಪ್ರಬಂಧ ಸಾರುತ್ತದೆ. ಇಲ್ಲಿ ಕೆಲಸಮಾಡಿರುವುದು ಲಿಖಿತ ಸಾಹಿತ್ಯದ ಮಹಾಕಾವ್ಯ ಕಲ್ಪನೆಗಳು. ಅವಳಿ ಮತ್ತು ಜನಪದ ಮಹಾಕಾವ್ಯಗಳೆಂಬ ಪರಿಕಲ್ಪನೆ ಮೌಖಿಕ ಪರಂಪರೆಯದ್ದಲ್ಲ. ಯಾವುದೇ ಪಾಡ್ದನವನ್ನು ಇನ್ನೊಂದು ಪಾಡ್ದನ ಕ್ಕಿಂತ ಉತ್ತಮವೆಂದಾಗಲೀ, ಸಿರಿ ಹಾಗೂ ಕೋಟಿ ಚೆನ್ನಯರ ಪಾಡ್ದನಗಳನ್ನು ಅವಳಿಗಳಾಗಿ ಕಂಡುದಾಗಲೀ ತುಳು ಜನಪದರ ತೀರ್ಮಾನವಲ್ಲ. ಅದು ಅಧ್ಯಯನಕಾರರು ರೂಪಿಸಿದ ಸಮೀಕರಣ.

ಪಾಡ್ದನಗಳನ್ನು ಅತಿಮಾನುಷ ಮತ್ತು ಅಲೌಕಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಪಾಡ್ದನ ಗಳೆಂಬುದಾಗಿ ವರ್ಗೀಕರಿಸಿಕೊಂಡ ವಿವೇಕರೈಯವರ ಪ್ರಬಂಧ ಇದನ್ನು ಹೀಗೆ ವಿಶ್ಲೇಷಿ ಸುತ್ತದೆ.

“ಅತಿ ಮಾನುಷ ವಸ್ತುವುಳ್ಳ ಪಾಡ್ದನಗಳಲ್ಲಿ ಭೂತಗಳ ಪಾಡ್ದನಗಳನ್ನು ಬಿಟ್ಟು ಇನ್ನು ಕೆಲವು ಪಾಡ್ದನಗಳು ಸಿಗುತ್ತವೆ. ಜೀವಂತವಾಗಿರುವಾಗ ಸಾಹಸಿಗಳಾಗಿದ್ದು ಅಥವಾ ಅಲೌಕಿಕ ವಾಗಿದ್ದು ಸತ್ತ ಬಳಿಕ ಆರಾಧನೆಗೊಳ್ಳುವ ವ್ಯಕ್ತಿಗಳಿಗೆ ಭೂತಗಳು ಎಂದು ಕರೆಯುವುದಿಲ್ಲ. ಸಾಂಸ್ಕೃತಿಕ ರರು (Cultural heroes) ಅಥವಾ ಅಲೌಕಿಕ ಮಹಿಳೆಯರು ಈ ವರ್ಗ ದಲ್ಲಿ ಕಾಣಿಸಿಕೊಳ್ಳುತ್ತಾರೆ. ತುಳುನಾಡಿನಲ್ಲಿ ಬಹಳ ಜನಪ್ರಿಯರಾಗಿರುವ ಮತ್ತು ಸಾರ್ವತ್ರಿಕ ವಾಗಿರುವ ‘ಕೋಟಿ ಚೆನ್ನಯ ಪಾಡ್ದನ’ ಮತ್ತು ‘ಸಿರಿಪಾಡ್ದನ’ವನ್ನು ಈ ಗುಂಪಿಗೆ ಸೇರಿಸ ಬಹುದು. ರಚನೆಯ ದೃಷ್ಟಿಯಿಂದ ನೋಡಿದಾಗ ಈ ಎರಡು ಪಾಡ್ದನಗಳು ದೀರ್ಘವಾಗಿದ್ದು ಅಧ್ಯಾಯ ರೂಪದ ಸಂಧಿಗಳನ್ನು ಒಳಗೊಂಡಿದೆ.  …………ಆದರೆ ವಸ್ತುವಿನ ದೃಷ್ಟಿಯಿಂದ ಮತ್ತು ಘಟನೆಗಳ ದೃಷ್ಟಿಯಿಂದ ಈ ಎಲ್ಲ ಸಂಧಿಗಳು ಒಂದೇ ಪಾಡ್ದನದ ಭಾಗಗಳಾಗಿ ರುತ್ತವೆ. ಈ ರೀತಿ ಅತಿಮಾನುಷತೆ ಉಳ್ಳ ದೀರ್ಘವಾದ ಪಾಡ್ದನವನ್ನು ‘ಜನಪದ ಮಹಾಕಾವ್ಯ’ ಅಥವಾ ‘flok epic’ ಎಂದು ಕರೆಯಬಹುದು. ………… ಸಿರಿಯ ಪಾಡ್ದನವು ತನ್ನ ದೀರ್ಘತೆ ಮತ್ತು ಬೇರೆ ಬೇರೆ ಸಂಧಿಗಳ ರಚನೆಯಿಂದಾಗಿ  ಇದೇ ರೀತಿ ಜನಪದ ಮಹಾಕಾವ್ಯ ಎಂಬ ವರ್ಗಕ್ಕೆ ಸೇರುತ್ತದೆ. ಸಿರಿಯ ಪಾಡ್ಡನದಲ್ಲಿ ಅಕ್ಕೆರಸು ಸಿರಿ, ಸೊನ್ನೆ, ಗಿಂಡೆ ಮತ್ತು ಅಬ್ಬಗೆ ದಾರಣೆ ಎನ್ನುವ ದೃಷ್ಟಿಯಿಂದ ಈ ಎಲ್ಲ ಪಾಡ್ದನಗಳೂ ಒಂದು ಜನಪದ ಮಹಾಕಾವ್ಯದ ಕಾಲಾನುಕ್ರಮಣಿಕೆಯ ರೂಪದ ಅಧ್ಯಾಯಗಳಾಗಿರುತ್ತವೆ.[4]

ಪಾಡ್ದನ ಪಠ್ಯದ ಅಧ್ಯಯನದ ತಾತ್ವಿಕತೆಗಳು ಸಿರಿಗೆ ಸಂಬಂಧಿಸಿದ ಹಲವು ಸಂಧಿಗಳ ಗೊಂಚಲನ್ನು ‘ಮಹಾಕಾವ್ಯದ’ ಅಧ್ಯಾಯಗಳು ಎಂಬುದಾಗಿ ಪರಿಕಲ್ಪಿಸಿ, ಜೋಡಿಸಿ, ಬೆಸೆದುಕೊಂಡಿವೆ. ಸಂಧಿಗಳಾಗಿದ್ದ ಪಾಡ್ದನಗಳನ್ನು ಹೀಗೆ ಹೊಸಬಗೆಯಲ್ಲಿ ಒಟ್ಟಾಗಿ ಪರಿಭಾವಿಸುವ ಕ್ರಮವು ಜನಪದ ಮಹಾಕಾವ್ಯ ಎಂಬ ಹೊಸ ನೆಲೆಯೊಂದನ್ನು ಸ್ಥಿರೀಕರಿಸಲು ಕಾರಣವಾಗಿದೆ. ಕೋಟಿ ಚೆನ್ನಯ ಹಾಗೂ ಸಿರಿಗೆ ಸಂಬಂಧಿಸಿ ‘ಪ್ರಾತಿನಿಧಿಕ ಜನಪದ ಮಹಾಕಾವ್ಯ’ಗಳೆಂದು ಕೊಟ್ಟ ಶೀರ್ಷಿಕೆ ಮುಂದಿನ ಎಲ್ಲಾ ಸಂಕಥನಗಳಲ್ಲಿ ಹಾಸುಹೊಕ್ಕಾಗಿ ಬೆಳೆಯಿತು. ಹೀಗೆ ಅಧ್ಯಯನಕಾರರು ಬೆಳೆಸಿದ ಹೊಸ ಸಂಕಥನಗಳಲ್ಲಿ ಇತರ ಪಾಡ್ದನ ಪಾತ್ರಗಳಿಗಿಂತ ಕೋಟಿ ಚೆನ್ನಯ ಹಾಗೂ ಸಿರಿ ಹೆಚ್ಚು ಗಾಢಗೊಳ್ಳುತ್ತಾ ಹೋದರು.

‘ಅಕ್ಕೆರಸು ಪೂಜೆದಿ’ಯಲ್ಲಿ ಸ್ವಾಭಿಮಾನ ಸಹಜ ಧಿಕ್ಕರಿಸುವ ಗುಣವನ್ನು; ಪಾಡ್ದನದಲ್ಲಿ ದುರಂತ ದನಿಯನ್ನು; ಈ ದುರಂತದ ಬೇಹ ಮಾತೃಮೂಲೀಯ ಕುಟುಂಬ ರಚನೆಯಲ್ಲಿರು ವುದನ್ನು ವಿವೇಕರೈಯವರ ಪಾಡ್ದನದ ‘ಓದು’ ಕಂಡುಕೊಳ್ಳುತ್ತದೆ. ಸ್ವತಃ ವಿವೇಕರೈಯವರು ಬಳಿಕ ಕೈಗೊಂಡ ಅಧ್ಯಾಯನಗಳೂ ಸೇರಿ, ನಂತರದ ಅಧ್ಯಯನಕಾರರೆಲ್ಲ ಸಿರಿಯ ಅಧ್ಯಯನಕ್ಕೆ ಆಧುನಿಕ ಜನಪದ / ಮಾನವಿಕ ಸಿದ್ಧಾಂತಗಳನ್ನು ಬಳಸುವತ್ತ ಆಕರ್ಷಿತ ರಾಗುತ್ತಾರೆ.

ಸಿದ್ಧಾಂತಿಗಳ ಅಧ್ಯಯನ

) ಡಾ. ಪೀಟರ್ .ಜೆ. ಕ್ಲಾಸ್ ಇವರು ಅರುವತ್ತರ ದಶಕದಲ್ಲಿ ತುಳುನಾಡಿಗೆ ಬಂದು, ಇಲ್ಲಿ ವರುಷಗಟ್ಟಲೆ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸಿ, ತುಳು ಕಲಿತು ಉನ್ನತ ಸಂಶೋಧನೆ ಗಳನ್ನು ಮಾಡಿದರು. ಕರಾವಳಿಯ ಜಿಜ್ಞಾಸುಗಳು ತುಳು ಸಂಸ್ಕೃತಿಯ ಅಧ್ಯಯನದಲ್ಲಿ ಅರ್ಥಪೂರ್ಣತೆಯನ್ನು ಕಾಣಲು ಈ ನಡೆಯು ಒಂದು ಪರೋಕ್ಷ ಕಾರಣ. ಮಾನವಶಾಸ್ತ್ರದ ಪ್ರಾಧ್ಯಾಪಕರಾದ ಶ್ರೀಯುತ ಕ್ಲಾಸ್ ಅವರು ತಮ್ಮ ಲೇಖನಗಳ ಹಿಂದಿನ ಸೈದ್ಧಾಂತಿಕತೆಯನ್ನು ಹೀಗೆ ಹೇಳಿಕೊಂಡಿದ್ದಾರೆ : “The background theory which informs them is drawn mostly from British social anthropology, French structuralism and contemparay American hermeneuties”[5]

ಹಲವು ಜ್ಞಾನಶಾಖೆಗಳ ದಾರಿಗಳನ್ನು ಖಚಿತಗೊಳಿಸಿಕೊಂಡು ಪ್ರವೇಶಿಸುವ ವಿದ್ವಾಂಸ ಪೀಟರ್‌ಕ್ಲಾಸ್, ಅವರ ಯೋಚನೆಗಳು ಸಿರಿ ಪಾಡ್ದನ ಮತ್ತು ಆಚರಣೆಯ ಅಕಡೆಮಿಕ್ ಅಧ್ಯಯನವನ್ನು ಹೊಸ ರೀತಿಯಲ್ಲಿ ಬೆಳೆಸುವಷ್ಟು ಪ್ರಭಾವಶಾಲಿಯಾದದ್ದು. ಮಾನವ ಶಾಸ್ತ್ರದ ಗಟ್ಟಿ ಬುನಾದಿಯಲ್ಲಿ ಕಟ್ಟಿದ ಅವರ ಸೂಕ್ಷ್ಮದೃಷ್ಟಿಗಳು ತುಳು ಜನಪದರ ಲೋಕ ದೃಷ್ಟಿಗಳನ್ನು ದಕ್ಷಿಣ ಭಾರತೀಯ ನೆಲೆಯಲ್ಲಿ, ಕೆಲವೊಮ್ಮೆ ದಕ್ಷಿಣ ಏಷ್ಯಾದ ನೆಲೆಗಟ್ಟಲ್ಲಿ, ಇನ್ನು ಕೆಲವೊಮ್ಮೆ ಪ್ರಪಂಚದ ವಿವಿಧ ಮಾನವಕುಲಗಳ ಅರಿವಿನಲ್ಲಿ ಹೋಲಿಸಿ ಓಡಾಡು ತ್ತವೆ. ಸಿರಿ ಆಚರಣೆಯನ್ನು ಒಂದು ಆರಾಧನಾ ಪಂಥ (cult) ಎಂಬುದಾಗಿ ಗ್ರಹಿಸಿದ ಅವರು, ಆಕೆ ಬಂಟ ಸಮಾಜದ ಮೂಲಸ್ತ್ರೀ ಎಂಬ ಪರಿಕಲ್ಪನೆಯನ್ನು ರೂಪಿಸುತ್ತಾರೆ. ‘ಮಾತೃವಂಶೀಯ ಸಂಸ್ಥೆಗೆ ಸಿರಿ ಐತಿಹಾಸ್ಯವು ಒಂದು ಶಾಸನದಂತಿದೆ’[6] ಎಂಬ ಅವರ ನಿಲುವು ಸಿರಿ ಪಾಡ್ದನ ಪಠ್ಯ ಮತ್ತು ಸಿರಿ ಆರಾಧನೆಯನ್ನು ಮಾತೃವಂಶೀಯ ಕುಲವ್ಯವಸ್ಥೆಯ ರೂಪಕವಾಗಿ ಕಟ್ಟಿದ್ದರಿಂದ ಸಂಭವಿಸಿದ್ದು. ಪಾಡ್ದನವೊಂದು ಕುಲವ್ಯವಸ್ಥೆಯ ಶಾಸನವಾಗ ಬಲ್ಲುದೇ? ಎಂಬುದು ಇಲ್ಲಿ ಎತ್ತಬೇಕಾಗಿರುವ ಖಚಿತ ಪ್ರಶ್ನೆ. ಪಾಡ್ದನವನ್ನು ಸಿರಿ ಆರಾಧನೆಯ ಸಂದರ್ಭದಲ್ಲಿ ಸಿರಿ ಆರಾಧನೆಯನ್ನು ತುಳುವರ ಸಂಕಿರ್ಣ ಕುಲ ಮೂಲೀಯ ವ್ಯವಸ್ಥೆಯಲ್ಲಿ ಹೆಣೆದಿರಿಸಿ ಪೀಟರ್ ಬೌದ್ದಿಕವಾಗಿ ಚಿಂತಿಸುತ್ತಾರೆ. ಅಧ್ಯಯನದ ಇತರ ಹಲವು ಸಂದರ್ಭಗಳಲ್ಲಾದಂತೆ ಪಾಡ್ದನದ ಒಂದು ಸ್ಥಿರೀಕೃತ ಪಠ್ಯವನ್ನು ಕ್ಲಾಸ್ ಅವರ ನೋಟವು ತುಳುತನದ ಲಾಂಛನವಾಗಿ ಹೆಚ್ಚು ವಿಜೃಂಭಣೆಗೆ ಈಡು ಮಾಡದಿರಲು ಅವರು ಆರಿಸಿದ್ದ ಈ ಸಂಕೀರ್ಣ ಹೆಣಿಗೆಯೇ ಕಾರಣ. ಜಟಿಲ ವಿಶ್ಲೇಷಣೆಯ ದಾರಿಯ ಪೀಟರ್‌ಗೆ ತುಳು ಬದುಕು ಮತ್ತು ಪಾಡ್ದನದ ಜೀವದ ನಿಯಮಿಡಿತಕ್ಕಿರುವ ಅಗಾಧತೆ ಮತ್ತು ಸಂಕೀರ್ಣತೆಯ ಅರಿವಿದೆ. ಅವರು ಹೇಳುತ್ತಾರೆ “….I have only taken three or four villages, in as many different regions of the district, to be more or less representative of the rest. As facts drawn from other villages prove to be contrary to those drawn from these three, it will be the obligation of others to reconcile and explain the differences.[7]

(ಅನು : ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಂದ ನಾನು ಮೂರು ಅಥವಾ ನಾಲ್ಕು ಗ್ರಾಮಗಳನ್ನು ಆರಿಸಿದ್ದೇನೆ. ಅವು ಹೆಚ್ಚು ಕಡಿಮೆ ಬಾಕಿ ಉಳಿದ ಗ್ರಾಮಗಳನ್ನು ಪ್ರತಿನಿಧಿಸು ವಂತಿದೆ. ಈ ಮೂರರಿಂದ ಪಡೆದ ವಿಚಾರಗಳಿಗೆ ಇನ್ನಿತರ ಗ್ರಾಮಗಳಿಂದ ತೆಗೆಯಲಾದ ವಿಚಾರಗಳು ವಿರುದ್ಧವೆನಿಸುವುದನ್ನು ಒಪ್ಪಿಕೊಂಡು, ಈ ವ್ಯತ್ಯಾಸಗಳನ್ನು ವಿವರಿಸುವುದು ಇತರರ ಕರ್ತವ್ಯ)

ಪೀಟರ್ ಅವರ ಈ ಮಾತು ವಿವಿಧ ಊರುಗಳಿಗೆ ಸಂಬಂಧಿಸಿದಂತೆ ಮಾತ್ರ ನಿಜವಲ್ಲ, ವಿವಿಧ ಸಮುದಾಯಗಳಿಗೆ ಸಂಬಂಧಿಸಿದಂತೆ ಕೂಡಾ ನಿಜವೇ. ಅವರ ಅಧ್ಯಯನದ ಒಳನೋಟಗಳು ತುಳುನಾಡಿನ ವಿವಿಧ ಜನಾಂಗಗಳ ಅದರಲ್ಲೂ ಕೆಳಶೂದ್ರ ಮತ್ತು ದಲಿತ ಜನಾಂಗಗಳ ಲೋಕದೃಷ್ಟಿಯನ್ನು ಒಳಗೊಂಡವು ಅಲ್ಲ. ತಮ್ಮ ಪಿಹೆಚ್‌ಡಿ ಅಧ್ಯಯನದ ಪ್ರಧಾನ ಗುರಿಯಾಗಿ ಬಂಟ ಸಮುದಾಯದವನ್ನಿರಿಸಿ ಕಟ್ಟಿಕೊಂಡ ಅರಿವಿನ ಬುನಾದಿಯಲ್ಲಿ ಅವರು ತುಳು ಜನಪದದ ಮಹಾಅಲೆಯನ್ನು ಎದುರಿಸಿದ್ದಾರೆ. ಅವರ ಅಧ್ಯಯನದ ಗುರಿ ಹಾಗೂ ಫಲಿತಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗಳಷ್ಟೇ ಇವು ಗಮನಕ್ಕೆ ಬರಬಲ್ಲುದು. ಪೀಟರ್ ಅವರು ಅರವತ್ತು ಎಪ್ಪತ್ತರ ದಶಕದಲ್ಲಿ ಪಾಡ್ದನದ ಜೀವದನಿಯನ್ನರಸಿ ಹೊರಟು, ಕಂಡುಕೊಂಡ ಹೊಳಹುಗಳ ಪ್ರಭೆ ತೀಕ್ಷ್ಣವಾಗಿದೆ, ಇಂದಿಗೂ ಮಸುಕಿಲ್ಲ ಎಂಬುದು ನಿಜ. ಪಾಡ್ದನದ ಜೀವದನಿಯನ್ನು ಆಲಿಸಲು ಅವರು ನಿಂತ ನೆಲೆ ಇಲ್ಲಿಯ ಪ್ರಧಾನ ಜಮೀನ್ದಾರ ಬಂಟ ಸಮುದಾಯ ಎಂಬುದೂ ಅಷ್ಟೇ ನಿಜ. ಅವರ ಅಧ್ಯಯನಗಳ ಉದ್ದಕ್ಕೆ ಅವರ ಜೊತೆಗೆ ವಿವಿಧ ಜ್ಞಾನಶಾಖೆಗಳು ಎಷ್ಟೊಂದು ಒಡನಾಡಿಗಳಾಗಿವೆಯೆಂದರೆ ಪಾಡ್ದನ ಪಠ್ಯಕ್ಕಿಂತ ಜ್ಞಾನಶಾಖೆಗಳು, ಹೆಚ್ಚು ಮೆರೆದು ಹೋಗುತ್ತವೆ. ಮುಂದೆ ಇದು ಲೌರಿಹಾಂಕೋ ಅವರ ಅಧ್ಯಯನ ಸಂದರ್ಭದ ಪ್ರಧಾನ ತಕರಾರು ಆಯಿತು.

‘ಸಿರಿ’ ಯ ವಿದೇಶೀ ಅಧ್ಯಯನಕಾರರಲ್ಲಿ, ಪಾಡ್ದನದ ಜೀವದನಿಯ ಬೆಂಬೆತ್ತಿ ಹೊರಟ ವರಲ್ಲಿ ಪೀಟರ್ ಜೆ ಕ್ಲಾಸ್ ಮತ್ತು ಲೌರಿ ಹಾಂಕೋ ಎರಡು ಗಟ್ಟಿ ಹೆಸರು. ಲೌರಿ ಹಾಂಕೋ ತಮ್ಮ ಸಂಪಾದನೆಯ ತಾತ್ವಿಕತೆಗಳನ್ನು ನಿರ್ವಚಿಸಿಕೊಂಡಾಗ  “ಪೀಟರ್ ಅವರ ಅಧ್ಯಯನೋಪಕರಣಗಳ ವಿಜೃಂಭಣೆಯಲ್ಲಿ ಪಾಡ್ದನ ಪಠ್ಯದ ಅನನ್ಯತೆಗೆ ಎಲ್ಲಿ ನೆಲೆ ಇದೆ?” ಎಂಬ ಪ್ರಶ್ನೆ ಎದ್ದು ಬರುವಂತಾಯಿತು. ಇದನ್ನು ಈ ಲೇಖನದ ಮುಂದಿನ ಪುಟ ಗಳಲ್ಲಿ ಕಾಣಬಹುದು.

)  ವಿಲ್ಲಿ. ಆರ್. ಡಿ. ಸಿಲ್ವ ಇವರ `ಋತದಿಂದ ಧರ್ಮದವರೆಗೆ’ (from Rta to Dharma) ಎಂಬ ಪಿಹೆಚ್‌ಡಿ ಪ್ರಬಂಧವು ಪಶ್ಚಿಮ ಜರ್ಮನಿಯ ಹ್ಯಾಂಬರ್ಗ್ ವಿ.ವಿ. ಗೆ. ಸಲ್ಲಿತ. ಅದು ೧೯೮೫ರಲ್ಲಿ ಮುದ್ರಿತವಾಯಿತು. ಭಾರತದ ಪಶ್ಚಿಮ ಕರಾವಳಿಯ ಸಮುದಾಯಗಳ ಜಟಿಲ ವಿಶ್ಲೇಷಣೆಯ ಈ ಪ್ರಬಂಧವು ಪೀಟರ್ ಅವರಂತೆ ಹಲವು ಶಿಸ್ತುಗಳನ್ನು ಜೋಡಿಸಿಕೊಂಡ ವಿದ್ವತ್ಪೂರ್ಣ ಪ್ರತಿಭೆಯುಳ್ಳದ್ದು. ಗ್ರಂಥದ ಅಧ್ಯಾಯ `Cult of Bhuta’ದಲ್ಲಿ ಮೂರು ‘ಭೂತ ಲೆಜಂಡ್’ಗಳ ಪ್ರಸ್ತಾಪವಿದೆ. ಅದರಲ್ಲಿ ಅಬ್ಬಗ ದಾರಗೆಯರನ್ನು ಸಿರಿ ಪಾಡ್ಡನದ ಜೊತೆಯಲ್ಲಿ ಚರ್ಚಿಸಲಾಗಿದೆ. ಭೂತಗಳೆಂಬ ದೊಡ್ಡ ಚೌಕಟ್ಟಿನಲ್ಲಿ ಸಿರಿ ಸೇರಿಹೋಗಿದ್ದಾಳೆ. ಅಬ್ಬಗ ದಾರಗೆಯರು ಸಿರಿಯ ಮಕ್ಕಳು ಎಂಬಂತೆ ಡಾ. ವಿಲ್ಲಿಯವರು ಪ್ರಸ್ತಾಪಿಸಿದ್ದಾರೆ (ಪುಟ ೧೯೦).

ಕರಾವಳಿಯ ಆರಾಧನಾ ಪಂಥಗಳನ್ನು ರಾಷ್ಟ್ರೀಯ ನೆಲೆಯನ್ನಿಟ್ಟುಕೊಂಡು ಒಟ್ಟಾಗಿ ನೋಡಹೊರಟಾಗ, ಸಾಮಾನ್ಯೀಕರಣವು ಸಂಭವಿಸಿ ಸಿರಿಯ ಸೂಕ್ಷ್ಮ ನೆಲೆಗಳು ಮಸುಕಾಗು ವುದೂ ಇದೆ. ಮಾದರಿಗಾಗಿ ದೆಹಲಿಯ ಕೇಂದ್ರ ಸಂUತ ನಾಟಕ ಅಕಾಡೆಮಿಯು ೧೯೮೮ ರಲ್ಲಿ ಶ್ರೀ ಬಿ.ವಿ. ಕಾರಂತರ ನಿರ್ದೇಶನದಲ್ಲಿ `ಭೂತ ಆರಾಧನೆ’ ಎಂಬ ಸಾಕ್ಷ್ಯಚಿತ್ರ ತಯಾರಿ ಸಿತು. ಸಿರಿಯು ಇಲ್ಲಿ ಭೂತಗಳಿಗಿಂತ ಭಿನ್ನ ಆರಾಧನಾ ಪಂಥವಾಗದೆ ಹಲವು ಭೂತಗಳ ನಡುವೆ ತಾನೂ ಒಂದಾಗಿ ಹೋಗುತ್ತಾಳೆ. ಪಾಡ್ದನ, ಮೈಗೆ ಆವಾಹಿಸಿಕೊಳ್ಳುವ ಕ್ರಿಯೆ, ಆರಾಧನೆ ಇತ್ಯಾದಿಗಳು ಎರಡರಲ್ಲಿ ಸಾಮಾನ್ಯವಾದುದರಿಂದ ಈ ಬಗೆಯ ಸರಳೀಕರಣ ಸಂಭವಿಸಿರುತ್ತದೆ; ಮತ್ತು ಕರಾವಳಿಯೆಂಬ ದೊಡ್ಡ ಪರಿಪ್ರೇಕ್ಷ್ಯ ಆರಿಸಿದಾಗ ಇಂತಹಾ ಸೂಕ್ಷ್ಮತೆಗೆ ಎಡೆಯಿಲ್ಲ – ಎಂಬ ಎರಡು ಸಮಜಾಯಿಷಿಗಳನ್ನು ಇದಕ್ಕೆ ಕೊಡಬಹುದಾದರೂ ವಾಸ್ತವದಲ್ಲಿ ಸಿರಿಯ ನೆಲೆ ಭೂತಕ್ಕಿಂತ ಬೇರೆಯೇ. ಅಧ್ಯಯನದಲ್ಲಿ ತೊಡಗಿದ  ಮನಸ್ಸು ಅವೈದಿಕ ಪಂಥಗಳ ಸೂಕ್ಷ್ಮಗ್ರಹಿಕೆಗಳಲ್ಲಿ ಕೊಂಚ ಎಡುವುವ ಸಾಧ್ಯತೆ ಇರುತ್ತದೆ ಎಂಬುದು ಇಲ್ಲಿ ಸೇರಿಸಬಹುದಾದ ವಿಚಾರ.[1] ತುಳುನಾಡಿನ ಸಿರಿ; ತುಳು ಯಕ್ಷಗಾನ ಡಿಯೋ ; ೨೦೦೫, ಶ್ರೀದೇವಿ ಇಲೆಕ್ಟ್ರಾನಿಕ್ಸ್, ಬಸವನಗುಡಿ, ಬೆಂಗಳೂರು – ೪.

[2] ಪುಟ ೧೨೬ ; ಅವಿಲು; ಅಮೃತ ಸೋಮೇಶ್ವರ ; ೧೯೭೮, ಕನ್ನಡ ಸಂಘ, ವಿವೇಕಾನಂದ ಕಾಲೇಜು, ಪುತ್ತೂರು.

[3] ಪುಟ ೫-೭; ತುಳು ಪಾಡ್ದನ ಸಂಪುಟ ; ಸಂ. ಅಮೃತ ಸೋಮೇಶ್ವರ ; ೧೯೯೭, ಪ್ರಸಾರಂಗ, ಕನ್ನಡ ವಿ.ವಿ., ಹಂಪಿ.

[4] ಪುಟ ೩೩ ಮತ್ತು ೩೪; ಬಿ. ಎ. ವಿವೇಕ ರೈ; ೧೯೮೫; ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

[5] ‘ತುಳುವ ದರ್ಶನ’ ಗ್ರಂಥದಲ್ಲಿ author’s note ; ಡಾ. ಪೀಟರ್. ಜೆ. ಕ್ಲಾಸ್; ೧೯೮೭; ಪ್ರಾದೇಶಿಕ ವ್ಯಾಸಂಗ, ಕುಂದಾಪುರ.

[6] ಪುಟ ೯೭; ಪೀಟರ್ ಜೆ ಕ್ಲಾಸ್; ತುಳುವ ದರ್ಶನ; ಉಳಿದುದು ಮೇಲಿನಂತೆ.

[7] ಪುಟ ೯೭; ತುಳುವ ದರ್ಶನ; ಉಳಿದುದು ಮೇಲಿನ ೧೯ ರಂತೆ.