ಜನಪದ ಮಹಾಕಾವ್ಯಗಳ ಅಧ್ಯಯನದಲ್ಲಿ ಮತ್ತೆ ಮತ್ತೆ ಕಾಡುತ್ತಿರುವ ಒಂದು ಪ್ರಶ್ನೆ ಜನಪದರು ಮತ್ತು ಅಧ್ಯಯನಕಾರರ ನಡುವಿನ ಆಲೋಚನೆಗಳ ಭಿನ್ನತೆ. ಅಧ್ಯಯನ ಕಾರರಿಗೆ ಆಧುನಿಕತೆ ನಿರ್ಮಾಣ ಮಾಡಿದ ವಸಾಹತುಶಾಹಿ ಶಿಕ್ಷಣ, ಉದ್ಯೋಗ ಇತ್ಯಾದಿಗಳ ನಡುವೆ ನಮ್ಮ ಪರಂಪರೆಗಳ ವಿಸ್ಮೃತಿ ಉಂಟಾಗುತ್ತಿದೆ ಎಂಬ ಆತಂಕ.  ಜನಪದರಿಗೆ ಈ ಆರಾಧನೆ ನಂಬಿಕೆಯಿಂದಲೇ ಬದುಕನ್ನು ಕಟ್ಟಿಕೊಳ್ಳುವಷ್ಟು ದೇಸಿ ವ್ಯವಸ್ಥೆ ಇಲ್ಲದೆ ಜಾಗತೀ ಕರಣದಿಂದ ದಿಕ್ಕೆಟ್ಟ ವಾತಾವರಣ. ಅಧ್ಯಯನಕಾರರಿಗೆ ದೇಸಿಯತೆಯ ಅಧ್ಯಯನದ ಸೆಳೆತ, ಜನಪದರಿಗೆ ಬಿಡುಗಡೆಗೊಳ್ಳುವ ಸೆಳೆತ. ಇವೆರಡು ವಾಸ್ತವಗಳ ನಡುವೆ ಜನಪದ ಅಧ್ಯಯನಗಳು ಎಚ್ಚರದಿಂದ ಸಾಗಬೇಕಾಗಿದೆ. ಕರ್ನಾಟಕದಲ್ಲಿ ಸಿರಿಯ ಬಗ್ಗೆ ನಡೆದಿರುವಷ್ಟು ಅಧ್ಯಯನಗಳು ಬೇರಾವ ಜನಪದ ಮಹಾಕಾವ್ಯದ ಬಗ್ಗೆಯೂ ನಡೆದಿಲ್ಲ.

ವಸಾಹತುಶಾಹಿ ಶಿಕ್ಷಣವನ್ನು ಭಾರತಕ್ಕೆ ಪರಿಚಯಿಸಿದ ಬ್ರಿಟಿಷರಿಗೆ ಮೊದಲು ಕಾಡಿದ ಪ್ರಶ್ನೆ ಭಾರತದ ಸಂಸ್ಕೃತಿ ಎಂದರೆ ಪುರೋಹಿತಶಾಹಿ ಸಂಸ್ಕೃತಿ ಎಂಬುದಷ್ಟೇ ಅಲ್ಲ ಎಂಬ ಸತ್ಯ.  ಅದಕ್ಕೆ ಕರ್ನಾಟಕಕ್ಕೆ ಬಂದ ಎಲ್ಲ ಮಿಷಿನರಿಗಳು ಬೆಚ್ಚಿದ್ದು ಅವರಿಗೆ ಅರ್ಥವಾಗದ ಆಗಾಧ ಪ್ರಮಾಣದಲ್ಲಿ ಜನಮಾನಸದಲ್ಲಿ ಉಳಿದುಕೊಂಡಿದ್ದ ಈ ನಂಬಿಕೆಗಳು ಆಚರಣೆಗಳು ಅದನ್ನು ಒಳಗೊಳ್ಳುವ ಅಸಂಖ್ಯಾತ ಜನ ಸಮೂಹ. ಇವುಗಳನ್ನು ಅಧ್ಯಯನ ವ್ಯಾಪ್ತಿಗೆ ತಂದುಕೊಳ್ಳಲು ರೂಪಿಸಿಕೊಂಡ ಅಧ್ಯಯನ ಮಾದರಿಗಳು ಜನಪದರಿಗೆ ಅಧ್ಯಯನಕಾರರಿಗೆ ಅಂತರಗಳು ನಿರ್ಮಾಣವಾಗಲು ಕಾರಣವಾದವು. ಸಿರಿ ಅಧ್ಯಯನವನ್ನೇ ಮುಖ್ಯ ನೆಲೆಗೆ ತಂದುಕೊಂಡು ನೋಡುವುದಾದರೆ :

ಘಟನೆ ಯಾವ ಕಾಲದಲ್ಲಿ ನಡೆದಿದೆ ಎಂಬ ಚಾರಿತ್ರಿಕತೆಯನ್ನು ಹುಡುಕುವುದು.

ಪ್ರಸ್ತುತ ಈ ಸಂಕಲನದಲ್ಲಿ ಎಸ್. ಎ. ಕೃಷ್ಣಯ್ಯನವರು ಸು. ಕ್ರಿ. ಶ. ೧೪೬೦ ರಿಂದ ೧೪೮೦ ರ ಕಾಲದ ನಿಡ್ಗಲ್ ಶಾಸನವನ್ನು ಉಲ್ಲೇಖಿಸಿ ‘ಸಿರಿ ಕತೆ’ ಈ ಕಾಲದಲ್ಲಿ ನಡೆದಿರಬಹುದೆಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಸಿರಿ ವಿಜಯನಗರೊತ್ತರ ಕಾಲದ ಕತೆ ಎಂಬ ಸೂಕ್ಷ್ಮ ಹೊಳಹುಗಳು ಇದ್ದರೂ ಅದು ಚರಿತ್ರೆ ಪೂರ್ವದ ಆದಿಮ ಆಚರಣೆಗಳಾದ ಭೂತ ಪ್ರೇತಾದಿಗಳನ್ನು ಸಂಪ್ರೀತಗೊಳಿಸುವ ಆಚರಣೆಗಳನ್ನು ಸೇರಿಸಿಕೊಂಡಿದೆ. ಆದ್ದರಿಂದ ಸಿರಿ ಪಠ್ಯ, ಸಿರಿ ಆಚರಣೆ, ಸಿರಿ ಅಧ್ಯಯನಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿದರೆ ತಲುಪುವ ಫಲಿತಗಳು ಭಿನ್ನವಾಗಿ ಬಿಡುತ್ತದೆ. ಅಂದರೆ ಎರನಾಳಸ್ವಾಮಿ ಮತ್ತು ಸಿರಿಯನ್ನು ಸಿರಿಗಾಗಿಯೇ ಹುಟ್ಟಿಕೊಂಡ ಆಚರಣೆಯ ತರ ಕತೆಯಲ್ಲಿ ಬೆರೆತು ಹೋಗಿದೆ. ಅಂದರೆ ಕಾಲಬದ್ಧವಾದ ಒಂದು ಘಟನೆಯನ್ನು ಸಂಯೋಜಿಸಿಕೊಂಡಿದೆ. ಅದು ರಾಗ ದ್ವೇಷಗಳು ಇರುವ ಸ್ತ್ರೀ ಪುರುಷ ಪಾತ್ರಗಳು, ವಿಘಟಿತ ಸಂಸಾರ, ಆಸ್ತಿ ವಿವಾದ, ಆಕ್ರೋಶ, ಶಾಪ, ಕೊನೆಗೆ ಮನುಷ್ಯ ವರ್ತನೆಗಳಿಂದ ಬಿಡುಗಡೆಗೊಂಡು ದೈವವಾಗಿ ಬಿಡುವುದು. ಸಿರಿ ಕರ್ನಾಟಕದ ಇತರ ಜನಪದ ಮಹಾಕಾವ್ಯಗಳಿಗಿಂತ ಹೆಚ್ಚು ಆಕರ್ಷಕವಾಗಿರುವುದು ಈ ಲೌಖಿಕ, ಸಂಸಾರಿಕ ಕಾರಣಗಳಿಂದಲೇ, ಮಂಟೇಸ್ವಾಮಿ, ತಿಪ್ಪೇಸ್ವಾಮಿ, ಮಾದಪ್ಪ, ಇವರು ಹುಟ್ಟಿನಿಂದಲೇ ಅತಿಮಾನುಷರು ಅವರಿಗೆ ಸಂಸಾರ ಒಂದು ಸಮಸ್ಯೆಯಾಗಿ ಕಾಡಿಲ್ಲ. ಸಿರಿ ಮನುಷ್ಯನ ಎಲ್ಲ ಕಾಲದ ವರ್ತನೆಗಳ ಕಾವ್ಯವಾದ್ದರಿಂದ ಆಕರ್ಷಣೆಯ ಕತೆಯಾಗಿ ಅಧ್ಯಯನಕಾರರ ಗಮನ ಸೆಳೆದಿದೆ. ಈ ಘಟನೆಯ ನಂತರದ ಕಾಲಘಟ್ಟಕ್ಕೂ ಅನ್ವಯಿಸುವ ಮನುಷ್ಯನ ಆಶಯಾತ್ಮಕತೆಗಳು ಸೇರಿ ಕೊಂಡಿರುವುದರಿಂದ ಚರಿತ್ರೆ ಗೌಣವಾದರೂ ಕತೆ ಜೀವಂತವಾಗಿ ಉಳಿಯುತ್ತದೆ. ಆಚರಣೆಗಳೆಂಬ ಭೂತಕಾಲ, ಕತೆಯೆಂಬ ಚರಿತ್ರೆ, ಮನುಷ್ಯನ ವರ್ತನೆಗಳೆಂಬ ಭವಿಷ್ಯಗಳೆಲ್ಲ ಮೇಳೈಸುವ ಸೂಕ್ಷ್ಮ ಬಂಧ ಕಾವ್ಯದ ನೇಯ್ಗೆಯಲ್ಲಿ ಇರುವುದರಿಂದ ದೇಶ ಕಾಲ ಬದ್ಧವಾದ ಚಿಂತನಾ ವಿಧಾನಗಳಿಂದ ನುಣಿಚಿಕೊಂಡು ಉಳಿಯುವ ಶಕ್ತಿ ಈ ಕಾವ್ಯಕ್ಕೆ ಇದೆ. ಆದ್ದರಿಂದ ಅಧ್ಯಯನಕಾರರಿಗೆ ಮುಖ್ಯವಾಗುವ ಚರಿತ್ರೆಯ ಹಂಗು ಜನಪದರಿಗೆ ಮುಖ್ಯವಾಗುವುದಿಲ್ಲ.

ಜನಪದ ಮಹಾಕಾವ್ಯವೇ ?

ಕರ್ನಾಟಕದ ಜನಪದ ಮಹಾಕಾವ್ಯಗಳ ಲಕ್ಷಣಗಳ ಬಗ್ಗೆ ಇನ್ನು ಒಂದು ನಿಲುವಿಗೆ ಬರಲು ಸಾಧ್ಯವಾಗಿಲ್ಲ. ಶಿಷ್ಟ ಮಹಾಕಾವ್ಯಗಳ ಲಕ್ಷಣಗಳನ್ನು ಇದಕ್ಕೆ ಯಥಾವತ್ತಾಗಿ ಅನ್ವಯಿಸಲಾಗುವುದಿಲ್ಲ. ಆದರೂ ಸೃಷ್ಟಿ ಸ್ಥಿತಿ ಲಯ ಎನ್ನುವ ಬಂಧದಲ್ಲಿ ಇರುವ ಜನಪದ ಕಾವ್ಯಗಳನ್ನು ಮಹಾಕಾವ್ಯಗಳೆಂದು ಕರೆದುಕೊಂಡಿದ್ದೇವೆ. ಕರ್ನಾಟಕದ ಮೌಖಿಕ ಪರಂಪರೆಯ ಕಾವ್ಯಗಳನ್ನು ಸ್ಥೂಲವಾಗಿ ವಿಂಗಡಿಸಿಕೊಂಡರೆ ಎರಡು ಎದ್ದು ಕಾಣುವ ವಿಭಾಗಗಳು ಒಂದು : ಚರಿತ್ರೆ ಪೂರ್ವದ ಕಥನಗಳು, ಇನ್ನೊಂದು : ಚಾರಿತ್ರಿಕ ಕಾಲಘಟ್ಟದಲ್ಲಿ ನಡೆದಿರುವ ಕಥನಗಳು. ಎಲ್ಲಮ್ಮ, ಮೈಲಾರ, ಜುಂಜಪ್ಪ, ಬೀರಪ್ಪ ಮುಂತಾದವು ಚರಿತ್ರೆ ಪೂರ್ವದ ಕತೆಗಳಾಗಿವೆ. ಅಂದರೆ ಪೌರಾಣಿಕತೆಯೇ ಮುಖ್ಯವಾಗಿ ಪುರಾಣ ದೈವಗಳ ಕತೆಗಳಾಗಿವೆ. ಆನಂತರದಲ್ಲಿ ಅದರಲ್ಲೂ ಹನ್ನೆರಡನೆಯ ಶತಮಾನದ ಕಲ್ಯಾಣದ ಕ್ರಾಂತಿಯ ನಂತರ ಕಾಣಿಸಿಕೊಂಡ ಚಾರಿತ್ರಿಕ ಕಾಲ ಘಟ್ಟದಲ್ಲಿ ಬದುಕಿದ್ದ ಪವಾಡ ಪುರುಷರ / ಸ್ತ್ರೀಯರ ಕತೆಗಳು ಉದಾ : ಮಂಟೇಸ್ವಾಮಿ, ಮಾದಪ್ಪ, ಕುಮಾರರಾಮ, ಗೋಣಿಬಸಪ್ಪ, ಕೊಟ್ಟೂರೇಶ್ವರ, ಮದ್ದಾನೇಶ್ವರ, ತಿಪ್ಪೇಸ್ವಾಮಿ, ನಿರ್ವಾಣಸ್ವಾಮಿ, ಮೌನೇಶ, ಸಾವಳಗಿ ಶಿವಲಿಂಗ, ವಡಬಾಳನಾಗನಾಥ, ಗುಡಗುಂಡೇಶ್ವರ, ಈ ಕಾಲಘಟ್ಟದಲ್ಲಿ ಗುರುತಿಸ ಬಹುದಾಗಿದೆ. ಕರ್ನಾಟಕದ ಇತರ ಜನಪದ ಮಹಾಕಾವ್ಯಗಳಲ್ಲಿ ಸಾಂಸ್ಕೃತಿಕ ನಾಯಕರು ತಾವೇ ಭೂಮಿಯನ್ನು ಸೃಷ್ಟಿಸುವ ಅತಿಮಾನುಷರಾಗಿದ್ದಾರೆ. ಅಲ್ಲಿ ಸೃಷ್ಟಿಗೆ ಸಂಬಂಧಿಸಿದಂತೆ ಭೂಮಿ ಉತ್ಪತ್ತಿಯ ಕತೆ, ಸ್ಥಿತಿಗೆ ಸಂಬಂಧಿಸಿದಂತೆ ಲೋಕ ನಿರ್ಮಾಣ ನಂತರ ಕಾಲಜ್ಞಾನ ಅರ್ಥಾತ್ ಪ್ರಳಯದ ಕತೆಯಿರುತ್ತದೆ. ಇದು ಸಿರಿ ಪಠ್ಯದಲ್ಲಿ ಇಲ್ಲ. ಹಲವು ಪಾಡ್ದನಗಳಲ್ಲಿ ಇದು ಒಂದು. ಆದರೆ ಉಳಿದೆಲ್ಲಾ ಪಾಡ್ಡನಗಳಿಗಿಂತ ಅಕ್ಷರಲೋಕದಲ್ಲಿ ಹೆಚ್ಚು ಪ್ರಚಲಿತ ವಾದದ್ದು ಸಿರಿ ಮಾತ್ರ. ಕೋಟಿ ಚೆನ್ನಯ್ಯ – ಸಿರಿ ಅವಳಿ ಜನಪದ ಮಹಾಕಾವ್ಯಗಳೆಂದದ್ದು ಅಧ್ಯಯನಗಳಿಂದ ಉಂಟಾದ ಒತ್ತಡವೆಂದು ಮಹಾಲಿಂಗಭಟ್ಟ ಅವರು ಗುರುತಿಸಿರುವುದು ಈ ರೀತಿ “ವಿವೇಕ ರೈ ಅವರ ಸಂಶೋಧನ ಪ್ರಬಂಧ ಕೋಟಿ ಚೆನ್ನಯ್ಯ ಸಿರಿಪಾಡ್ದನಗಳನ್ನು ತುಳುನಾಡಿನ ಅವಳಿ (ಈ ಅವಳಿ ಎನ್ನುವ ಪದಪ್ರಯೋಗವನ್ನು ಜೀ.ಶಂ.ಪ. ಮಂಟೇಸ್ವಾಮಿ ಮಹಾಕಾವ್ಯ – ಮಾದೇಶ್ವರರ ಮಹಾಕಾವ್ಯಕ್ಕೆ ಮೊದಲು ಬಳಸಿದ್ದರು) ಜನಪದ ಮಹಾಕಾವ್ಯ ಗಳೆಂದು ಸಾರುತ್ತದೆ. ಇಲ್ಲಿ ಕೆಲಸ ಮಾಡಿರುವುದು ಲಿಖಿತ ಸಾಹಿತ್ಯದ ಮಹಾಕಾವ್ಯ ಕಲ್ಪನೆಗಳು. ಅವಳಿ ಜನಪದ ಮಹಾಕಾವ್ಯಗಳೆನ್ನುವುದು ಮೌಖಿಕ ಪರಂಪರೆಯದ್ದಲ್ಲ. ಯಾವುದೇ ಪಾಡ್ದನವನ್ನು ಇನ್ನೊಂದು ಪಾಡ್ದನಕ್ಕಿಂತ ಉತ್ತಮವೆಂದಾಗಲೀ ಕೋಟಿ ಚೆನ್ನಯ್ಯ – ಸಿರಿಪಾಡ್ಡನಗಳನ್ನು ಅವಳಿಗಳಾಗಿ ಕಂಡುದಾಗಲೀ ತುಳು ಜನಪದರ ತೀರ್ಮಾನಗಳಲ್ಲ. ಅದು ಅಧ್ಯಯನಕಾರರು ರೂಪಿಸಿದ ಸಮೀಕರಣ” ಎ. ವಿ. ನಾವಡರಿಗೆ ಸಿರಿಯನ್ನು ಮಹಾಕಾವ್ಯವೆಂದು ಕರೆಯುವ ಬಗ್ಗೆ ಸಮ್ಮತಿ ಇಲ್ಲ. ಅಂದರೆ ಇದು ಸಹ ಅಧ್ಯಯನಕಾರರು ಅಧ್ಯಯನ ಸಂದರ್ಭದಲ್ಲಿ ಸೃಷ್ಟಿಸಿಕೊಂಡ ಒಂದು ಅಧ್ಯಯನದ ಅಗತ್ಯವೇ ಹೊರತು ಜನಪದರ ಸೃಷ್ಟಿಯಲ್ಲ. ಸಿರಿ ಕಾವ್ಯದಲ್ಲಿ ಸೃಷ್ಟಿಗೆ ಸಂಬಂಧಿಸಿದಂತೆ ಬೆರ್ಮರು ಕುಲಮೂಲದ ಒಂದು ಅದಿಮ ಪ್ರಶ್ನೆ ಬಂದು ಅದು ಸಿರಿಯ ಜನ್ಮಾಂತರಕ್ಕೆ ಕಾರಣವಾಗುವುದು ಇದ್ದರು, ಸಿರಿ ಅತಿಮಾನುಷಳಾಗಿ ಕಾವ್ಯದಲ್ಲಿ ಸ್ಥಾಪಿತಗೊಳ್ಳದೇ ಸಹಜ ರಾಗದ್ವೇಷದ ಹೆಣ್ಣಾಗೆ ಉಳಿದುಕೊಳ್ಳುತ್ತಾಳೆ. ಸ್ಥಿತಿಗೆ ಸಂಬಂಧಿಸಿದಂತೆ ಪ್ರತಿಭಟನೆಯ ಲಕ್ಷಣವಿದ್ದರು ಅದರಿಂದಲೇ ಒಂದು ವ್ಯಕ್ತಿತ್ವ ರೂಪುಗೊಳ್ಳದೇ ಈಗಾಗಲೇ ಸಾಮುವಿನ ಗಂಡನಾದ ಕೊಡ್ಸರಾಳ್ವನನ್ನು ಮದುವೆಯಾಗುತ್ತಾಳೆ. ಮಗನಾದ ಕುಮಾರನನ್ನು ಮಾಯಕ ಮಾಡುವುದು ಈ ಲೌಕಿಕಾಸಕ್ತಿ ಯಿಂದಲೇ. ಮಹಾತಾಯಿಯಾಗಿ ಉಳಿಯದೇ ಮುಂದಿನ ತಲೆಮಾರಿಗೆ ಮೌಲ್ಯಗಳನ್ನು ವರ್ಗಾಯಿಸುವ ಅಪೂರ್ಣ ವ್ಯಕ್ತಿತ್ವದ ಪಾತ್ರವಾಗಿ ಸಿರಿ ಉಳಿದುಕೊಳ್ಳುತ್ತಾಳೆ. ಅಂದರೆ ಸಿರಿ ಮಹಾಕಾವ್ಯದ ನಾಯಕಿಯಾಗಿ ನಿಲ್ಲದೇ ಲೌಖಿಕಾಸಕ್ತಿಯ ಹೆಣ್ಣಾಗೆ ಉಳಿದು ಬಿಡುತ್ತಾಳೆ.

ಅಧ್ಯಯನಗಳುಸಿರಿಯನ್ನು ಸ್ತ್ರೀವಾದದ ಪ್ರತಿನಿಧಿಯಾಗಿ ನಿಲ್ಲಿಸುವುದು.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ದಲಿತ ಬಂಡಾಯ ಚಳುವಳಿಗಳು ಪ್ರವರ್ಧ ಮಾನದಲ್ಲಿದ್ದವು. ಕೆಳವರ್ಗಗಳ ಸಾಂಸ್ಕೃತಿಕ ನಾಯಕರ ಹುಡುಕಾಟ, ಅಲಕ್ಷಿತ ಕ್ಷೇತ್ರಗಳನ್ನು ಕುರಿತ ಅಧ್ಯಯನ, ಸ್ತ್ರೀವಾದ, ಸಾಂಸ್ಕೃತಿಕ ಅನನ್ಯತೆ ಇತ್ಯಾದಿ ವೈಚಾರಿಕ ಆಕೃತಿಗಳು ಹೆಚ್ಚು ಪ್ರಚಲಿತವಾಗಿದ್ದು. ಇದರಲ್ಲಿ ಸಿರಿ ಪಠ್ಯವನ್ನು ಸ್ತ್ರೀವಾದಿ ಪಠ್ಯವಾಗಿ ನೋಡುವ ವಿಮರ್ಶೆಗಳು ಬಂದಿವೆ. ಇದಕ್ಕೆ ಗಾಯತ್ರಿನಾವಡ ಅವರ ಈ ಉಲ್ಲೇಖವನ್ನು ಗಮನಿಸಬಹುದು. “ತುಳು ಜನಪದ ಪುರಾಣವಾದ ಸಿರಿ ಸಂಧಿ ಅಥವಾ ಸಿರಿಪಾಡ್ದನದ ಮಹಿಳೆಯ ಅಂತಸ್ಸತ್ವದ ಪ್ರತೀಕ, ಹೆಣ್ಣಿನ ಹಕ್ಕಿನ ಹೊಸ ಹುಡುಕಾಟದ ಅಭಿವ್ಯಕ್ತಿ. ಸಿರಿ ಪಿತೃ ಪ್ರಧಾನ ಸಂಸ್ಕೃತಿಯ ಮೌಲ್ಯಗಳಾದ ಪಾತಿವ್ರತ್ಯ, ಮಾತೃತ್ವ, ಪುರುಷ ಪ್ರಭುತ್ವಗಳ ಪರಿಕಲ್ಪನೆಗಳನ್ನು ಒಡೆದ ಸಂಕೇತ. ಶರತ್ತನ್ನು ಒಡ್ಡಿ ಮದುವೆಯಾಗುವ, ಗಂಡನ ಸ್ವೇಚ್ಛಾಚಾರ ಹಾಗೂ ತನಗಾದ ಅವಮಾನವನ್ನು ಸಾರ್ವಜನಿಕವಾಗಿ ಪ್ರತಿಭಟಿಸುವ, ಪಂಚಾಯ್ತಿ ಕೂಟದ ನ್ಯಾಯಬಾಹಿರ ತೀರ್ಮಾನವನ್ನು ನಿರಾಕರಿಸುವ, ಪುರುಷಾಧಿಕಾರ ಹಾಗೂ ಆ ಅಧಿಕಾರದ ನೆಲೆಯಾದ ಅರಮನೆಯನ್ನು ನಾಶಗೊಳಿಸುವ ಮೂಲಕ ಹೊಸ ರಿವಾಜೊಂದನ್ನು ಹುಟ್ಟಾಕುತ್ತಾಳೆ. ಕತ್ತಿನ ಕರಿಮಣಿ, ಮೂಗಿನ ಮೂಗುತಿ ಕಿತ್ತು ಅರಮನೆಯ ಕಂಬಕ್ಕೆ ಕಟ್ಟಿ, ಕೈ ಬಳೆಗಳನ್ನು ಒತ್ತಿ ಒಡೆದು ಗಂಡನಿಗೆ ವಿಚ್ಛೇದನ ಹೇಳುವ ಸಿರಿ ಪುರುಷನ ಸಾಂಸ್ಕೃತಿಕ ಅಹಂ ಹಾಗೂ ಭೌತಿಕ ಅಹಂ ಎರಡನ್ನು ಹೊಡೆಯುತ್ತಾಳೆ. ತನ್ನ ಮರು ಮದುವೆ ಮಗ ಕುಮಾರ ಒಡ್ಡುವ ಪ್ರತಿರೋಧವನ್ನು ನಿರಾಕರಿಸಿ (ಮಾಯಾ ಮಾಡಿ) ಕೊಡ್ಸರಾಳ್ವನೊಂದಿಗೆ ಮದುವೆಯಾಗು ವಲ್ಲಿ ತಾಯ್ತನದ ರೂಢಿಗತ ರೀವಾಜುಗಳ ದ್ವಂದ್ವಗಳಿಗೆ ಸಿರಿ ಪರಿಹಾರದ ಪ್ರವರ್ಥಕಳಾಗು ತ್ತಾಳೆ. ಸಿರಿ ಪಾತ್ರಿಣಿಯಾಗಿರುವ ಮಹಿಳೆಯರು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಪಡೆದುಕೊಳ್ಳುವ ದನಿ, ಗೌರವ ಮನ್ನಣೆಗಳು ವಾಸ್ತವದಲ್ಲಿ ಹೆಣ್ಣೊಬ್ಬಳು ಕಳೆದುಕೊಂಡ ಶಕ್ತಿಯ ಮರುಸ್ಥಾಪನೆ ಭೂಮಿಕೆಯಾಗಿ ದುಡಿಯುತ್ತದೆ. (ಗಾಯತ್ರಿ ನಾವಡ ೨೦೦೩ ಪು. ೨೪. ೨೫)

ಈ ಅಧ್ಯಯನದ ಮುಖ್ಯ ದೃಷ್ಟಿಕೋನ ಸಿರಿಯನ್ನು ಕನ್ನಡದ ಸ್ತ್ರೀವಾದದ ಚರ್ಚೆಗೆ ಬಳಸಿರುವುದು. ಪುರುಷ ಪ್ರಧಾನ ಸಮಾಜ ಅವಳನ್ನು ಶೋಷಣೆಯ ವಸ್ತುವಾಗಿ ಬಳಸಿದಾಗಲೆಲ್ಲಾ ಅವಳು ಪ್ರತಿಭಟಿಸಿ ಹೊರಬರುವುದು ಎದ್ದು ಕಾಣುತ್ತದೆ. ಈ ಕಾರಣವೇ ಆಕೆಯನ್ನು ಸ್ತ್ರೀವಾದದ ಚರ್ಚೆಗೆ ಹೆಚ್ಚು ಬಳಸಲಾಗಿದೆ. ಇದರಾಚೆಗೂ ಸಿರಿ ಪಠ್ಯದ ಹಲವು ಸಂಗತಿಗಳು ಬೆಳಕಿಗೆ ಬರುತ್ತವೆ.

ಮೊದಲೇ ಗುರುತಿಸಿದ ಹಾಗೆ ಸಿರಿ ಕಾವ್ಯದ ಆಚರಣೆಗಳನ್ನೇ ಒಂದು ಅಧ್ಯಯನವಾಗಿ  ತೆಗೆದುಕೊಂಡರೇ  ಅದು  ಕರಾವಳಿ  ಭಾಗದ  ಸ್ತ್ರೀಯರ ಸ್ಥಿತಿಗತಿಗಳ ಸಂಕಥನವಾಗಿಯೂ ನೋಡುವ ಸಾಧ್ಯತೆಗಳಿವೆ. ಈ ಭಾಗದ ಕೆಳವರ್ಗದ ಹೆಣ್ಣುಮಕ್ಕಳ ಮನೋವೈಜ್ಞಾನಿಕ ಸಮಸ್ಯೆಗಳಿಗೆ ಉತ್ತರ ರೂಪಿಯಾಗಿಯೂ ಆಚರಣೆಯನ್ನಿಟ್ಟುಕೊಂಡು ವಿಶ್ಲೇಷಿಸುವ ಸಾಧ್ಯತೆಗಳಿವೆ. ಸಿರಿ ಕಾವ್ಯದ ಹಾಡುಗಾರಿಕೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯವಿದ್ದರೇ ಸಿರಿ ಬರುವ ಆಚರಣೆಯಲ್ಲಿ ಪುರುಷ ಪ್ರಾಧಾನ್ಯತೆ ಇದೆ. ಕುಮಾರ ಈ ಆಚರಣೆಯ ಕೇಂದ್ರ ವ್ಯಕ್ತಿಯಾಗಿದ್ದಾನೆ. ಈ ಸ್ಥಿತ್ಯಂತರವೇ ಒಂದು ಸಮಾಜದ ಚಾರಿತ್ರಿಕ ನಡೆಯನ್ನು ತೋರಿಸು ತ್ತದೆ. ಪಠ್ಯದಲ್ಲಿ ಸಿರಿ ಆದರ್ಶವಾಗದೇ ಉಳಿದುಕೊಂಡರು ಆಚರಣೆಯಲ್ಲಿ ಅವಳ ತಲ್ಲಣ ಗಳು ಜೀವಂತವಾಗಿವೆ. ಈ ನಿಟ್ಟಿನಲ್ಲಿ ಕಾವ್ಯ ಆಚರಣೆಗಳ ಸಮೀಕರಣ ಸಾಧ್ಯವೇ ಇಲ್ಲ. ಪಠ್ಯದಲ್ಲಿ ಅವಳು ಭೂಮಿ – ಮನೆ ಒಡೆತನವನ್ನು ಹೊಂದಿರುವ ಬಂಟರ ಮನೆತನದ ಹೆಣ್ಣು ಮಗಳು ಆದರೆ ಅವಳು ಮೈದುಂಬುವುದು ಕೆಳವರ್ಗದ ಹೆಣ್ಣು ಮಕ್ಕಳಿಗೆ ಮಾತ್ರ ಏಕೆ ? ಕತೆ ಮತ್ತು ಆಚರಣೆಗಳ ನಡುವೆ ಇರುವ ಈ ಸ್ಥಿತ್ಯಂತರಗಳನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ. ಆಚರಣೆಯಲ್ಲಿ ಅದಿಮ ಜನರ ಹಕ್ಕುಗಳ ಪ್ರತಿಪಾದನೆ, ಕತೆಯಲ್ಲಿ ಬಂಟರ ಕುಲದ ಪ್ರಾತಿನಿಧ್ಯ. ಅಧ್ಯಯನಗಳಲ್ಲಿ ಹೆಣ್ಣಿನ ಹಕ್ಕುಗಳ ಪ್ರತಿನಿಧಿಯಾಗಿ ಸಿರಿ ಕತೆ ನಡೆದುಬಂದಿದೆ. ಹೊಸ ಕಾಲದಲ್ಲೂ ಸಿರಿ ಬೇರೆ ಬೇರೆ ವೈಚಾರಿಕ ಆಕೃತಿಗಳಲ್ಲಿ ಹುಟ್ಟಿ ಬರುತ್ತಿದ್ದಾಳೆ ಎಂಬುದನ್ನು ಈ ಕೃತಿಯಲ್ಲಿರುವ ಲೇಖನಗಳು ಸಾಬೀತು ಪಡಿಸುತ್ತವೆ.

* ಗಿಡಗೇರಿ ರಾಮಕ್ಕ ಮುಗೇರ್ತಿ ಹಾಡಿದ  ಸಿರಿ ಪಾಡ್ದನದ ಗದ್ಯರೂಪ ಸಂ. ಗಾಯತ್ರಿ ನಾವಡ

ಲಂಕೆ ಲೋಕೆನಾಡಿನ ಸತ್ಯನಾಪುರದ ಅರಮನೆಯಲ್ಲಿ ಬೆರ್ಮುಆಳ್ವನು ವಾಸವಾಗಿದ್ದನು. ಎಲ್ಲರೂ ಅವನನ್ನು ‘ಆಜ್ಜೆರ್ ‘(ಅಜ್ಜ) ಎಂದು ಕರೆಯುತ್ತಿದ್ದರು. ಶ್ರೀಮಂತನಾಗಿದ್ದರೂ ಸಂತಾನವಿರಲಿಲ್ಲ ಎಂಬ ಕೊರಗು ಅವನನ್ನು ಬಾಧಿಸುತ್ತಿತ್ತು. ಒಂದು ದಿನ ಕುಲದೇವರು ಬೆರ್ಮೆರ್ ಬ್ರಾಹ್ಮಣ ಭಿಕ್ಷುಕನ ರೂಪದಲ್ಲಿ ಬಂದು ಭಿಕ್ಷೆ ಬೇಡುತ್ತಾನೆ. ಬೆರ್ಮು ಆಳ್ವನ ವ್ಯಸನದ ಕಾರಣವನ್ನು ಕೇಳುತ್ತಾನೆ. ಆದಿ ಆಲಡೆ ಹಾಳು ಬಿದ್ದಿದೆ. ಅದನ್ನು ಜೀರ್ಣೋದ್ಧಾರ ಮಾಡಿದರೆ ಬೆರ್ಮರ್ ಸಂತಾನ ಸಿರಿ ಫಲವನ್ನು ಕರುಣಿಸುತ್ತೇನೆ ಎಂದು ಹೇಳಿ ಮಾಯವಾಗು ತ್ತಾನೆ. ಅದರಂತೆ ಆಳ್ವ ಆಲಡೆಯ ಗುಡಿಯನ್ನು ನಕರಿಸಿದ. ಸುಗ್ಗಿ ಹುಣ್ಣಿಮೆಯ ದಿನ ಜಾತ್ರೆ ಏರ್ಪಡಿಸಿದ. ಆರ್ಚಕರು ಪ್ರಸಾದರೂಪವಾಗಿ ನೀಡಿದ ಸಿಂಗಾರದ ಹೂವು, ಗಂಧದ ಗುಳಿಗೆಗಳನ್ನು ಅರಮನೆಗೆ ತಂದು ತನ್ನ ಕಲ್ಲಕಲೆಂಬಿಯೊಳಗೆ ಇಡುತ್ತಾನೆ. ಅಲ್ಲಿ ಆ ಸಿಂಗಾರದ ಹೂವು ಬಿಚ್ಚಿಕೊಂಡು ಅದರಲ್ಲಿ ಹೆಣ್ಣು ಮಗುವೊಂದು ಕಾಣಿಸಿಕೊಳ್ಳುತ್ತದೆ. ಸತ್ಯದ ಮಗುವಾದುದರಿಂದ ಆಳ್ವನು ಮಗುವಿಗೆ ಸತ್ಯನಾಲೋಕದ ಸಿರಿ ಎಂದು ಹೆಸರಿಡುತ್ತಾನೆ.

ಬಸ್ರೂರು ಗುತ್ತಿನ ಸಂಕರು ಪೂಂಜೆದಿಯ ಮಗ ಕಾಂತುಪೂಂಜನೊಂದಿಗೆ ಸಿರಿಯ ಮದುವೆ ನಡೆಯುತ್ತದೆ. ಸಿರಿ ಬಸುರಿಯಾಗುತ್ತಾಳೆ. ಸತ್ಯನಾಪುರದ ಅರಮನೆಯಲ್ಲಿ ಬಯಕೆ ಮದುವೆ (ಸೀಮಂತ)ಗೆ ಏರ್ಪಾಡುಗುತ್ತದೆ. ಬಸುರಿಗೆ ಕೊಡಬೇಕಾದ ‘ಬಯಕೆ ಸೀರೆ’ ಯನ್ನು ಕಾಂತುಪೂಂಜನ ಸೂಳೆ ಸಿದ್ದು ಉಟ್ಟು ಮಡಿ ಕೆಡಿಸುತ್ತಾಳೆ. ಬಯಕೆ ಮದುವೆಯ ದಿನ ಆ ಸೀರೆಯನ್ನು ಉಡಲು ಸಿರಿ ನಿರಾಕರಿಸುತ್ತಾಳೆ. ತಿಂಗಳು ತುಂಬಿ ಸಿರಿ ಗಂಡು ಮಗುವನ್ನು ಹಡೆಯುತ್ತಾಳೆ. ಮಗುವಿಗೆ ಕುಮಾರನೆಂದು ಹೆಸರಿಡುತ್ತಾಳೆ. ಹುಟ್ಟಿದ ಮಗುವನ್ನು ನೋಡಲು ಹೆಸರಿಡಲು ತಂದೆ ಕಾಂತುಪೂಂಜನು ಸತ್ಯನಾಪುರಕ್ಕೆ ಬರುವುದಿಲ್ಲ. ಮಗು ಹುಟ್ಟಿದ ಘಳಿಗೆ ನೋಡಿದ ಜೋಯಿಸರು ಅಜ್ಜ ಮಗುವಿನ ಮುಖ ನೋಡಿದರೆ ಅಜ್ಜನಿಗೆ ಮರಣ, ತಾಯಿಗೆ ದೇಶಾಂತರ ಯೋಗ, ತಂದೆಗೆ ದಿನಕ್ಕೊಂದು ಬುದ್ದಿ ಎಂದು ಹೇಳಿದರು. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ತೊಟ್ಟಿಲಲ್ಲಿ ಮಗು ಅಳುತ್ತದೆ. ಮನಸ್ಸು ತಡೆಯದೇ ಅಜ್ಜ ಮಗುವನ್ನು ಎತ್ತಿಕೊಳ್ಳುತ್ತಾನೆ. ಕುಸಿದು ಸಾವನ್ನಪ್ಪುತ್ತಾನೆ.

ಅಜ್ಜರ ಶವ ಸಂಸ್ಕಾರ ನಡೆಸಲು ಬರುವಂತೆ ಸಿರಿ ಗಂಡನಿಗೆ ಓಲೆ ಬರೆಯುತ್ತಾಳೆ. ಆತ ನಿರಾಕರಿಸುತ್ತಾನೆ. ಅಷ್ಟರಲ್ಲಿ ಅಜ್ಜರ ಕುಟುಂಬದ ರಕ್ತಬಂಧು ಸೂಡದ ಶಂಕರ ಆಳ್ವ ಸತ್ಯನಾಪುರದ ಅರಮನೆಯ ಅಧಿಕಾರ ತನಗೆ ಸೇರಿದ್ದೆಂದು ಹಕ್ಕು ಸ್ಥಾಪಿಸಲು ಬರುತ್ತಾನೆ. ಸಿರಿ ಅಜ್ಜರ ಮಗಳಾಗಿ ನಾನಿರುವಾಗ ನನಗಲ್ಲದೇ ಅಜ್ಜರ ಮನೆಯ ಪಟ್ಟದ ಅಧಿಕಾರ ಇನ್ಯಾರಿಗೂ ಬಿಟ್ಟುಕೊಡಲಾರೆ ಎನ್ನುತ್ತಾಳೆ. ತಾನೇ ಸ್ವತಃ ಅಜ್ಜರ ಶವ ಹೊತ್ತು ಶವ ಸಂಸ್ಕಾರ ಮಾಡುತ್ತಾಳೆ.

ಕಾಂತುಪೂಂಜ ಹಾಗೂ ಶಂಕರ ಆಳ್ವ ಒಳಸಂಚು ನಡೆಸಿ ಅರಮನೆಯ ಪಟ್ಟದ ಅಧಿಕಾರದ ಪ್ರಶ್ನೆಯನ್ನು ಮುಂದಿಟ್ಟು ಪಂಚಾಯಿತಿ ಕೂಟ ಸೇರಿಸುತ್ತಾರೆ. ಸಿರಿಯನ್ನು ಕೂಟದ ಕಟ್ಟೆಗೆ ಕರೆಸುತ್ತಾರೆ. ಗಂಡಸರು ಆಳಿಕೊಂಡು ಬಂದ ಸಿಂಹಾಸನದಲ್ಲಿ ಹೆಂಗಸರಿಗೆ ಅಧಿಕಾರ ಇಲ್ಲವೆಂದು ಕೂಟದಲ್ಲಿ ತೀರ್ಮಾನವಾಗುತ್ತದೆ. ಅವಮಾನಿತಳಾದ ಸಿರಿ ಕೂಟದ ಕಟ್ಟೆ ಇಳಿದು ಹೋಗುತ್ತಾಳೆ. ‘ಸತ್ಯನಾಪುರದ ನೆಲ ಬಂಜರು ಬೀಳಲಿ ಅರಮನೆ ಸುಟ್ಟು ಹೋಗಲಿ’ ಎಂದು ಶಾಪ ಹಾಕಿ ಕುಮಾರ ಮತ್ತು ಕೆಲಸದಾಕೆ ದಾರುವಿನೊಂದಿಗೆ ಬಸ್ರೂರ ಗುತ್ತಿಗೆಗೆ ಬರುತ್ತಾಳೆ. ಅರಮನೆಯ ಅಂಗಳದಲ್ಲಿ ನಿಂತು ಗಂಡನಿಗೆ ‘ಬರ’ (ವಿಚ್ಛೇದನ) ಹೇಳುತ್ತಾಳೆ. ‘ಇನ್ನು ಮುಂದಾದರೂ ದುಷ್ಟ ಗಂಡನೊಂದಿಗೆ ಬಾಳುವ ಹೆಣ್ಣಿನ ಗೋಳು ತಪ್ಪಬೇಕು. ಅಂಥ ಹೆಣ್ಣಿಗೆ ಮರು ಮದುವೆಯಾಗುವ ನಿಯಮ ಇಂದಿನಿಂದಲೇ ಬರಬೇಕು. ಒಮ್ಮೆ ವಿಧವೆಯಾದವಳು ಮತ್ತೊಮ್ಮೆ ಮುತ್ತೈದೆಯಾಗುವ ಭಾಗ್ಯ ಬರಬೇಕು’ ಎಂದು ಹೇಳಿ ಹೊರಟುಹೋಗುತ್ತಾಳೆ.

ಮುಂದೆ ತೆಂಕನಾಡಿನತ್ತ ಸಾಗುತ್ತಿರಲು ಇಬ್ಬರು ಕ್ಷತ್ರಿಯ ಸೋದರರು ಕರಿಯ ಕಾಳಿಂಗ, ಬೋಳಿಯ ದೇಸಿಂಗ ಎದುರಾಗುತ್ತಾರೆ. ‘ನಿನ್ನನ್ನು ತಂಗಿಯಾಗಿ ನೋಡಿಕೊಳ್ಳುತ್ತೇವೆ. ನಮ್ಮ ಅರಮನೆಗೆ ಬಾ’ ಎನ್ನುತ್ತಾರೆ. ಸಿರಿ ಸಮ್ಮತಿಸುತ್ತಾಳೆ. ಆಗ ಮಗು ಕುಮಾರ ಎದ್ದು ಕುಳಿತು ಸಿರಿಯ ಬದುಕಿನ ಮುಂದಿನ ಘಟನೆಗಳನ್ನೆಲ್ಲ ಹೇಳುತ್ತಾನೆ. ‘ಒಬ್ಬ ತಂದೆಗೆ ಹುಟ್ಟಿ ಇನ್ನೊಬ್ಬನನ್ನು ತಂದೆಯೆಂದು ಕರೆಯಲಾರೆ’ ಎನ್ನುತ್ತಾನೆ. ಕುಮಾರ ಮತ್ತು ದಾರುವಿನ ಕೋರಿಕೆಯಂತೆ ಸಿರಿ ಅವರಿಬ್ಬರನ್ನು ಮಾಯ ಮಾಡುತ್ತಾಳೆ.

ಕ್ಷತ್ರಿಯ ಸೋದರರು ಪಲ್ಲಕ್ಕಿಯಲ್ಲಿ ಸಿರಿಯನ್ನು ತಮ್ಮ ಅರಮನೆಗೆ ಕರೆತರುತ್ತಾರೆ. ಸಿರಿಯನ್ನು ಕೊಟ್ರಪಾಡಿ ಕೊಡ್ಸರಾಳ್ವನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಕೊಡ್ಸರಾಳ್ವನಿಗೆ ಈಗಾಗಲೇ ಮದುವೆಯಾಗಿತ್ತು. ಹೆಂಡತಿ ಸಾಮು ಆಳ್ವದಿ ಗಂಡನ ಮರುಮದುವೆಯ ಸಂಗತಿಯನ್ನು ತಿಳಿದು ಪ್ರತಿಭಟಿಸುತ್ತಾಳೆ. ಹೊಸ್ತಿಲಲ್ಲಿ ದೀಪ ಹೊತ್ತಿಸಿಟ್ಟು ‘ಈ ದೀಪ ನಂದಬಾರದು. ಸಿರಿ ಕಂಡೊಡನೆ ಅವಳ ಕಣ್ಣು ಕುರುಡಾಗಲಿ’ಎಂದು ಶಾಪ ಹಾಕಿ ತನ್ನ ತವರಿಗೆ ಹೊರಟು ಹೋಗುತ್ತಾಳೆ. ‘ಸಾಮು ಆಳ್ವದಿ ಸ್ವತಃ ಬಂದು ತಂಗಿ ಎಂದು ಕೈ ಹಿಡಿದು ಮನೆಯೊಳಗೆ ಕರೆದೊಯ್ಯದೇ ನಾನು ಬಾರೆನು’ ಎಂದು ಸಿರಿ ಹೇಳುತ್ತಾಳೆ. ಅದರಂತೆ ಸಾಮು ಆಳ್ವದಿ ಸಿರಿಯನ್ನು ಸವತಿಯಾಗಿ ಸ್ವೀಕರಿಸಿ ಮನೆಗೆ ಸ್ವಾಗತಿಸುತ್ತಾಳೆ.

ಸಿರಿ ಬಸುರಿಯಾಗುತ್ತಾಳೆ. ಸಾಮು ಆಳ್ವದಿಯ ತವರು ಮನೆಯಲ್ಲಿ ಬಸುರಿಗೆ ಬಯಕೆ ಸನ್ಮಾನ ನಡೆಯುತ್ತದೆ. ಬಯಕೆ ಊಟ ಮುಗಿಸಿ ಅಲ್ಲಿಂದ ಮರಳುವಾಗ ದಾರಿ ಮಧ್ಯದಲ್ಲೇ ಸಿರಿಗೆ ಹೆರಿಗೆ ಬೇನೆ ಬರುತ್ತದೆ. ಹೆರಿಗೆಯಾಗುತ್ತದೆ. ಬಡಬ್ರಾಹ್ಮಣನ ವೇಷದಲ್ಲಿ ಕುಮಾರ ಕಾಣಿಸಿಕೊಂಡು ಪ್ರವಾಹ ಸೃಷ್ಟಿಸುತ್ತಾನೆ. ಆ ಪ್ರವಾಹದಲ್ಲಿ ತೇಲುತ್ತಾ ಕುಟುಂಬದ ಅಜ್ಜರಾದ ಕಾನಬೆಟ್ಟು ಅಜ್ಜನಲ್ಲಿಗೆ ಹೋಗುವಂತೆ ಹುಟ್ಟಿದ ಮಗುವಿಗೆ ಹೇಳುತ್ತಾನೆ. ಸಿರಿಯನ್ನು ಮಾಯ ಮಾಡುತ್ತಾನೆ.

ಆ ಮಗು ಸೊನ್ನೆ ಕಾನಬೆಟ್ಟು ಅಜ್ಜನಲ್ಲಿ ಬೆಳೆಯುತ್ತದೆ. ಅಜ್ಜನಿಗೆ ಕಾಡಲ್ಲಿ ಸಿಕ್ಕಿದ ಹೆಣ್ಣುಮಗು ಗಿಂಡೆ, ಸೊನ್ನೆಯ ಅವಳಿ ಮಕ್ಕಳು ಅಬ್ಬಗ – ದಾರರ ನಾಲ್ಕು ತಲೆಮಾರುಗಳ ಬದುಕಿನೊಂದಿಗೆ ಕಥಾನಕದ ಹರವು ಹಬ್ಬಿಕೊಂಡಿದೆ.