ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು “ಪ್ರಾಚೀನ ಕೃತಿಗಳ ಸಾಂಸ್ಕೃತಿಕ ಮುಖಾಮುಖಿ” ಸಂವಾದ ಕಾರ್ಯಕ್ರಮವನ್ನು ೧೯೯೯ರಲ್ಲಿ ಪ್ರಾರಂಭಿಸಿ ಇದುವರೆಗೆ ಇಪ್ಪತ್ತು ಕೃತಿಗಳ ಮೇಲೆ ವಿಚಾರ ಸಂಕಿರಣಗಳನ್ನು ನಡೆಸಿದೆ ಹಾಗೂ ಹದಿನಾರು ಕೃತಿಗಳನ್ನು ಪ್ರಕಟಿಸಿದೆ. ಈ ಕೃತಿಗಳನ್ನು ಸಾಹಿತ್ಯಾಸಕ್ತರು, ಚಿಂತಕರು, ಸಾಹಿತ್ಯ ವಿದ್ಯಾರ್ಥಿಗಳು ಬಳಸುತ್ತ ಬಂದಿದ್ದಾರೆ. ಈ ಯೋಜನೆಯ ಉದ್ದೇಶ ಪ್ರಾಚೀನ, ಮಧ್ಯಕಾಲೀನ ಆಧುನಿಕ ಕೃತಿಗಳು ಯಾವ ಸಾಂಸ್ಕೃತಿಕ ಒತ್ತಡಗಳಲ್ಲಿ ಹುಟ್ಟಿವೆ ಎಂಬ ಚಾರಿತ್ರಿಕ ಸಂಗತಿಗಳನ್ನು ನೋಡುವುದರ ಜೊತೆಗೆ, ನಮ್ಮ ಕಾಲದ ಸಾಂಸ್ಕೃತಿಕ ಒತ್ತಡಗಳ ಹಿನ್ನೆಲೆಯಲ್ಲಿ ಇದನ್ನು ಅರ್ಥೈಸುವ ಬಗೆ ಹೇಗೆಂಬುದು.

ಈ ಮೂಲ ಉದ್ದೇಶದಿಂದ ಹುಟ್ಟಿದ ಈ ಮಾಲಿಕೆ ಪ್ರಾಚೀನ ಕೃತಿಗಳಿಂದ ಆಧುನಿಕ ಪಠ್ಯಗಳವರೆಗೆ ವಿಸ್ತರಿಸಿಕೊಂಡು ಅಗತ್ಯವಾದ ಹೊಸ ಉದ್ದೇಶಗಳನ್ನು ಸೇರಿಸಿಕೊಂಡು ಸಾಹಿತ್ಯ ಆಸಕ್ತರ ಮೆಚ್ಚುಗೆಯನ್ನು ಪಡೆದು ಮುನ್ನೆಡೆದಿದೆ. ವಿಭಾಗವು ತನ್ನ ೧೪ನೇ ಸಾಂಸ್ಕೃತಿಕ ಮುಖಾಮುಖಿ ಕಾರ‍್ಯಕ್ರಮಕ್ಕೆ ‘ಸಿರಿ ಜನಪದ ಕಾವ್ಯ’ವನ್ನು ಆಯ್ಕೆ ಮಾಡಿತು. ಕನ್ನಡದಲ್ಲಿ ಜನಪದ ಸಾಹಿತ್ಯ ಸಂಪಾದನೆ ಮತ್ತು ಅಧ್ಯಯನಕ್ಕೆ ೧೫೦ ವರ್ಷಗಳ ಚರಿತ್ರೆಯಿದೆ. ಈ ಸಾಹಿತ್ಯ, ಸಂಗ್ರಹ/ಸಂಪಾದನೆಗಳಿಗೆ ನಿರ್ದಿಷ್ಟ ತಾತ್ವಿಕತೆಗಳು ಬಳಕೆಯಾಗುತ್ತಿವೆ. ಆದರೆ ಅವನ್ನು ನಾವು ನಮ್ಮದೆ ಆದ ಸಾಹಿತ್ಯ ಮತ್ತು ಸಂಸ್ಕೃತಿ ತತ್ವಗಳ ಹಿನ್ನೆಲೆಯಲ್ಲಿ ಪರಿಪೂರ್ಣವಾಗಿ ಗ್ರಹಿಸಲು ಸಾಧ್ಯವಾಗಿಲ್ಲ. ಅವು ಮುಖ್ಯವಾಗಿ ಪಾಶ್ಚಾತ್ಯ ಅಧ್ಯಯನ ಮಾದರಿ ಸಿದ್ಧಾಂತಗಳು, ಶಿಷ್ಟ ಹಾಗೂ ಸಂಸ್ಕೃತ ಗ್ರಂಥ ಸಂಪಾದನೆಯ ಮಾದರಿಗಳಾಗಿವೆ. ಇವುಗಳನ್ನು ಯಥಾವತ್ತಾಗಿ ಜನಪದ ಪಠ್ಯ ಸಂಪಾದನೆಗೂ ಅನ್ವಯಿಸಿ ಅನೇಕ ಬಿಕ್ಕಟ್ಟುಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಉದಾ : ಜನಪದ ಸಾಹಿತ್ಯದ ಕಾಫಿರೈಟ್ ಯಾರಿಗೆ ಕೊಡಬೇಕೆಂಬ ಸಮಸ್ಯೆ, ಜನಪದವೇ ಬೇರೆ, ಸಾಹಿತ್ಯವೇ ಬೇರೆ, ಎಂಬ ವಿಭಾUಕರಣ ಅನಕ್ಷರಸ್ಥರ ಅನಾಮಧೇಯರ ಸೃಷ್ಟಿಯೆನ್ನುವ ಅಪಕಲ್ಪನೆ, ಶಿಷ್ಟ ಸಾಹಿತ್ಯ ಕೃತಿಗಳನ್ನು ಅಳೆಯುವ ಮಾನದಂಡಗಳನ್ನೇ ಜನಪದ ಕೃತಿಗಳಿಗೆ ಅನ್ವಯಿಸಿ ಸಾಹಿತ್ಯಕವಾಗಿ ಶ್ರೇಷ್ಟವಲ್ಲ ಎಂದು ಹೊರಗಿಡುವ ಧೋರಣೆ. ಈ ಎಲ್ಲಾ ಸಾಂಸ್ಕೃತಿಕ ರಾಜಕಾರಣದ ಹಿನ್ನೆಲೆಯಲ್ಲಿ ಜನಪದ ಶಾಸ್ತ್ರಶಿಸ್ತುಗಳ ಪುನರ್ ನಿರ್ಮಾಣವು ನಮ್ಮ ಕಾಲದ ಅಗತ್ಯವಾಗಿದೆ.

“ಮೌಖಿಕ ಪಠ್ಯವು ಲಿಖಿತಪಠ್ಯವಾಗಿ ರೂಪಾಂತರವಾದರೆ ಅದರ ಬೆಳವಣಿಗೆ ನಿಂತುಹೋಗುತ್ತದೆ ಆಧುನಿಕತೆಯಿಂದ ಜನಪದ ನಾಶವಾಗುತ್ತಿದೆ” ಎನ್ನುವ ಬೀಸು ಹೇಳಿಕೆಗಳನ್ನು ಪತ್ರಿಕೆಗಳಲ್ಲಿ ದಿನನಿತ್ಯ ಓದುತ್ತಿದ್ದೇವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹಿಂದೆಂದಿಗಿಂತಲೂ ಇಂದು ಮೌಖಿಕ ಪಠ್ಯಗಳು ಹೆಚ್ಚು ಮುದ್ರಣವಾಗುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಜನಪದ ಅಧ್ಯಯನಗಳು ಹೆಚ್ಚಾಗುತ್ತಿವೆ. ಮತ್ತೊಂದು ಕಡೆ ಜನಪದದ ಜಾತ್ರೆಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನಪದ ಸಂUತ, ಉಡುಪು, ಜನಪದ ಕಥಾವಸ್ತುವನ್ನೇ ಇಟ್ಟುಕೊಂಡ ಸಿನಿಮಾ, ಸೀರಿಯಲ್‌ಗಳು ಹೆಚ್ಚು ಯಶಸ್ವಿಯಾಗುತ್ತಿವೆ. ಒಂದು ಸಮುದಾಯದ ಆಚರಣೆಯಲ್ಲಿ ಮಾತ್ರ ಸಂವಹನವಾಗುತ್ತಿದ್ದ ಜನಪದ ಕಾವ್ಯಗಳು ಇಂದು ಟಿವಿ, ಸಿನಿಮಾ, ಕ್ಯಾಸೆಟ್ ಮತ್ತು ಗ್ರಂಥಗಳ ಮೂಲಕ ಬೇರೆ ಬೇರೆ ಸಮುದಾಯ ಹಾಗೂ ವರ್ಗಗಳಲ್ಲೂ ಸಂವಹನಗೊಳ್ಳುತ್ತಿದೆ. ಆದರೆ ಆಧುನಿಕ ಕಾಲದಲ್ಲಿ ಜನಪದವು ಯಾವ ರೂಪಾಂತರಗಳಲ್ಲಿ ತನ್ನ ಚಲನೆಯನ್ನು ಮುಂದುವರಿಸಿದೆ ಎಂಬುದು ನಮ್ಮ ಅಧ್ಯಯನಗಳಲ್ಲಿ ಸ್ಪಷ್ಟವಾಗಿಲ್ಲ. ಈ ಪ್ರಶ್ನೆಗಳನ್ನೂ ಸಿರಿ ಪಠ್ಯದ ಚರ್ಚೆಗೆ ಪೂರಕವಾಗಿ ಎತ್ತಿಕೊಳ್ಳುವುದು ಈ ಸಂವಾದ ಕಾರ‍್ಯಕ್ರಮದ ಉದ್ದೇಶವಾಗಿತ್ತು.

ಈ ಚರ್ಚೆಯಲ್ಲಿ ಮುನ್ನೆಲೆಗೆ ಬಂದ ವಿಚಾರಗಳೆಂದರೆ ಸಿರಿಪಠ್ಯದ ಬಗ್ಗೆ ಆಗಿರುವ ಅಪಾರ ಅಧ್ಯಯನಗಳ ಮರುಪರಿಶೀಲನೆ. ಅಧ್ಯಯನಗಳು ಮತ್ತು ಆಚರಣೆಯಲ್ಲಿ ಭಾಗವಹಿಸುವ ಸಮುದಾಯಗಳ ನಡುವಿನ ಅಂತರ, ಪಾಶ್ಚಾತ್ಯ ವಿದ್ವಾಂಸರ ಅಧ್ಯಯನ ಮಾದರಿಗಳು ಕರ್ನಾಟಕದ ಜನಪದ ಅಧ್ಯಯನದ ಮೇಲೆ ಉಂಟು ಮಾಡಿರುವ ತೊಡಕುಗಳು. ದೇಸಿ ಸಂಸ್ಕೃತಿ ಅಧ್ಯಯನದ ಉತ್ಸಾಹದಲ್ಲಿಸಿರಿ ಪಠ್ಯದ ಒಳಗೆ ಇದ್ದ ವೈರುಧ್ಯಗಳು ಮುಚ್ಚಿ ಹೋಗಿರುವುದು. ಇನ್ನೂ ಹಲವು ಹತ್ತು ಪ್ರಶ್ನೆಗಳು ಎರಡು ದಿನಗಳ ಕಾಲ ಚರ್ಚೆಗೆ ಒಳಗಾದವು. ಈ ಮೇಲ್ಕಂಡ ತಾತ್ವಿಕ ಸಂಗತಿಗಳು ಮುನ್ನೆಲೆಗೆ ಬಂದರೂ, ಇತರ ಸಂಗತಿಗಳು ಚರ್ಚೆಯಾಗಿವೆ. ಯಾವುದಕ್ಕೂ ಚರಮUತೆಯನ್ನು ಹಾಡಿಲ್ಲ. ಈ ಎಲ್ಲಾ ವಿಚಾರಗಳು ಮುಂದಿನ ಸಾಂಸ್ಕೃತಿಕ ಮುಖಾಮುಖಿಯ ಅನಿವಾರ್ಯತೆಯನ್ನು ಬಯಸಿದೆ ಎಂದು ನಂಬಿದ್ದೇನೆ.

ದಿನಾಂಕ ೨೪, ೨೫ ಮಾರ್ಚ್ ೨೦೦೭ ರಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಪ್ರೊ. ಕೆ. ಎಂ. ಕಾವೇರಿಯಪ್ಪ. ಆಶಯ ಭಾಷಣ ಮಾಡಿದವರು ಡಾ. ಅಮೃತ ಸೋಮೇಶ್ವರವರು. ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಪ್ರೊ. ಬಿ. ಎ. ವಿವೇಕ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಪಾಲ್ತಾಡಿ ರಾಮಕೃಷ್ಣ ಆಚಾರ್, ಡಾ. ಪ್ರಭಾಕರ ಜೋಷಿ, ಡಾ. ಚಂದ್ರಕಲಾ ನಂದಾವರ ಇವರುಗಳು ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ. ಕೆ. ಚಿನ್ನಪ್ಪಗೌಡರು ಸಮಾರೋಪ ಭಾಷಣ ಮಾಡಿದರು. ಈ ವಿದ್ವಾಂಸರೆಲ್ಲಾ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಕೆಲಸ ಮಾಡಿದವರು. ವಿಚಾರ ಸಂಕಿರಣದಲ್ಲಿ ಕಾಲಾವಕಾಶ ಕಡಿಮೆ ಇದ್ದಿದ್ದರಿಂದ ಅವರಾಡಿದ ಮಾತುಗಳು ಸಿರಿಯ ಸೂಕ್ತಿಗಳಂತೆ ಇದ್ದವು. ಅವುಗಳನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಸಿರಿ ಜನಪದ ಮಹಾಕಾವ್ಯದ ಬಗ್ಗೆ ಅಧ್ಯಯನ ಮಾಡಿರುವ ಹಾಗೂ ಅಧ್ಯಯನ ಮಾಡುತ್ತಿರುವ ಹೊಸ ತಲೆಮಾರಿನ ವಿದ್ವಾಂಸರೆಲ್ಲ ಈ ಎರಡು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಮೇಲ್ಕಂಡ ಎಲ್ಲಾ ಗಣ್ಯರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಪುಸ್ತಕ ಪ್ರಕಟಣೆ ವಿಳಂಬವಾದುದಕ್ಕೆ ಎರಡು ಸಂಗತಿಗಳನ್ನು ನಾನು ಇಲ್ಲಿ ಹೇಳಲೇಬೇಕಾಗಿದೆ. ಶ್ರೀ ಮಹಾಲಿಂಗಭಟ್ಟರ ಸಿರಿಯ ಕುರಿತ ಲೇಖನ ಅದರ ವ್ಯಾಪ್ತಿಯನ್ನು ಮೀರಿ ಯೋಜನೆಯಾಗುವಷ್ಟು ವಿಸ್ತಾರವಾದದ್ದು. ಅವರು ತಿಂಗಳಿಗೊಮ್ಮೆ ಕಂತಿನಂತೆ ನನಗೆ ಲೇಖನ ಕಳುಹಿಸಿಕೊಟ್ಟರು. ಅವರ ಅಪಾರ ಶ್ರಮ, ವಿದ್ವತ್ಫೂರ್ಣ ಲೇಖನಕ್ಕಾಗಿ ಕಾಯಲೇಬೇಕಾಯಿತು. ಎರಡನೆಯದು ವಿಚಾರ ಸಂಕಿರಣಕ್ಕೆ ಬಂದು ಪ್ರಬಂಧವನ್ನು ಮಂಡಿಸಿ ನಂತರ ಅನೇಕ ಬಾರಿ ಪತ್ರ ಬರೆದರು. ಕೆಲವು ವಿದ್ವಾಂಸರು ಲೇಖನವನ್ನು ಕೊನೆಗೂ ಕೊಡಲಿಲ್ಲ. ಇವರು ವಿಶ್ವವಿದ್ಯಾಲಯಗಳ ವಿದ್ವಾಂಸರೇ ಆಗಿದ್ದು ಸಕಾಲದಲ್ಲಿ ಲೇಖನ ತಲುಪಿಸದೇ ಇದ್ದದ್ದು ಪ್ರಕಟಣೆಗೆ ತಡವಾಯಿತು. ಇದು ಪುಸ್ತಕ ರೂಪವಾಗಿ ಬರುವುದಕ್ಕೆ ಕಾರಣವಾದ ಈಗಿನ ಕುಲಪತಿಗಳಾದ ಪ್ರೊ. ಎ. ಮುರಿಗೆಪ್ಪನವರಿಗೆ, ಕುಲಸಚಿವರಾದ ಪ್ರೊ. ಮಂಜುನಾಥ ಬೇವಿನಕಟ್ಟೆಯವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮೋಹನ ಕುಂಟಾರರವರಿಗೆ, ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಯವರಿಗೆ, ಕಲಾವಿದ ಮಕಾಳಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  ಪುಸ್ತಕವನ್ನು ಡಿ.ಟಿ.ಪಿ. ಮಾಡಿದ ಯಶಸ್ವಿ ಪ್ರಿಂಟರ್ರ‍್ಸ್‌ನ  ಶ್ರೀ ಯೋಗೇಶ್, ಪುಟವಿನ್ಯಾಸ ಮಾಡಿದ ಶ್ರೀ ಜೆ. ಶಿವಕುಮಾರ್ ಅವರಿಗೆ, ಬಾಲು ಮತ್ತು ದೇಸಿ ಸಂಸ್ಕೃತಿ ಅಧ್ಯಯನ ಕೇಂದ್ರದ ಕಛೇರಿ ಸಹಾಯಕರಾದ ಶ್ರೀ ಎಂ. ನಿಂಗಪ್ಪ, ಶ್ರೀ ಪ್ರಕಾಶ್ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ.

ವೆಂಕಟೇಶ ಇಂದ್ವಾಡಿ