೧೮೧೬ರ ಹೊತ್ತಿಗೆ ಕನ್ನಡ ಜಾನಪದ ಸಂಗ್ರಹಕಾರ್ಯ ಶುರುವಾಯಿತು ಎಂದು ವಿದ್ವಾಂಸರು ಗುರುತಿಸುತ್ತಾರೆ. ಇಲ್ಲಿ ತಮ್ಮ ನಾಡು, ಪ್ರದೇಶ ತನ್ನೊಂದಿಗಿನ ಸಮುದಾಯಗಳ ತನ್ನತನವನ್ನು ಹುಡುಕುವ, ಗುರುತಿಸುವ ಪ್ರಯತ್ನ ಮೊದಲಾಯಿತು. ಹೀಗೆ ಜಾನಪದವನ್ನು ಅಧ್ಯಯನದ ವಿಶೇಷ ಆಕರವನ್ನಾಗಿ ಮಾಡಿಕೊಳ್ಳಲಾಯಿತು.

ಕನ್ನಡ ಜಾನಪದ ಕ್ಷೇತ್ರ ಹೇಗೆ ಕಾರ‍್ಯಾರಂಭವಾಯಿತೋ ಹಾಗೆ ಇತರ ಉಪಭಾಷೆಗಳ ಪ್ರಾದೇಶಿಕ ಜಾನಪದ ಸಂಗ್ರಹಕಾರ‍್ಯವೂ ಶುರುವಾಯಿತು. ಈ ನಿಟ್ಟಿನಲ್ಲಿ ತುಳು – ಜನಪದ ಕಾವ್ಯ ಸಂಗ್ರಹಕಾರ್ಯವೂ ಮಹತ್ವದ್ದು.

ತುಳುನಾಡಿನ ಪ್ರಮುಖ ಭೂತಗಳು ಮತ್ತು ಸಾಂಸ್ಕೃತಿಕ ರರ ಕುರಿತ ಮಹಾಕಾವ್ಯಗಳ ಸಂಗ್ರಹ ಒಂದು ಪರಂಪರೆಯ ರೂಪದಲ್ಲಿ ನೋಂಪಿಯಂತೆ ಸಾಗಿ ಬಂದಿದೆ. ಮಹಾಕಾವ್ಯಗಳ ಪ್ರಾತಿನಿಧಿಕ ಸಂಕಲನ, ಒಂದು ಮಹಾಕಾವ್ಯದ ಹಲವು ಪಠ್ಯಗಳ ಸಂಕಲನ, ಒಬ್ಬನೇ ಹಾಡುಗಾರನಿಂದ ಸಂಗ್ರಹಿಸಿದ ಮಹಾಕಾವ್ಯದ ಸಂಪುಟ, ಪ್ರಾದೇಶಿಕ ಪ್ರಾತಿನಿಧ್ಯವುಳ್ಳ ಮಹಾಕಾವ್ಯಗಳ ಸಂಪುಟ ಹೀಗೆ ತುಳು ಮಹಾಕಾವ್ಯಗಳ ಸಂಪುಟಗಳನ್ನು ಪ್ರಕಟಿಸಲಾಗಿದೆ. ಇವುಗಳಲ್ಲಿ ಪರಿಚಯಾತ್ಮಕ ಪ್ರಾಸ್ತಾವನೆ, ಜೊತೆಗೆ ಸೂಕ್ಷ್ಮ ಒಳನೋಟಗಳಿರುವುದನ್ನು ಕಾಣಬಹುದು.

ವಿದೇಶಿಯ ಮತ್ತು ದೇಶಿಯ ವಿದ್ವಾಂಸರನ್ನೊಳಗೊಂಡಂತೆ ಈ ನಿಟ್ಟಿನಲ್ಲಿ ಕೆಲಸ ಮಾಡಿದ ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಜಾನಪದ ಅಧ್ಯಯನ ಕೇಂದ್ರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳೂರು ವಿಶ್ವವಿದ್ಯಾಲಯ, ತುಳು ಕೂಟದಂತಹ ಸಂಘಟನೆಗಳು, ಅಗೋಳಿ ಮಂಜಣ ಅಧ್ಯಯನ ಕೇಂದ್ರ, ಇವು ತುಳು ಜಾನಪದ ಅಧ್ಯಯನಕ್ಕೆ ಸಾಂಸ್ಥಿಕ ರೂಪವನ್ನು ಕೊಟ್ಟಿವೆ. ಹಾಗೆಯೇ ಕಟೀಲಿನ ‘ರಾಶಿ’ ಪತ್ರಿಕಾ ಬಳಗ, ಸುರತ್ಕಲ್ಲಿನ ಚಾವಡಿ, ಕೆಲವು ಕಾಲೇಜುಗಳ ತುಳು ಸಂಘಗಳು ಪ್ರಸಾರದ ಮೂಲಕ ಜನಪ್ರಿಯಗೊಳಿಸುವ ಕೆಲಸವನ್ನು ಮಾಡಿರುವುದು ಮಹತ್ವ ದ್ದಾಗಿದೆ.

ತುಳು ಜನಪದ ಸಂಗ್ರಹಗಳಲ್ಲಿ ಗಾದೆ, ಒಗಟು, ಪಾಡ್ದನಗಳು ಹೆಚ್ಚು ಸಂಗ್ರಹವಾಗಿವೆ.  ಇವುಗಳ ಸಂಪಾದನೆ, ಅಧ್ಯಯನಗಳಲ್ಲಿ ಅನೇಕ ಮಗ್ಗುಲುಗಳಿಂದ ಚಿಂತಿಸಲಾಗಿದೆ. ಆದರೆ ಇಲ್ಲಿ ‘ಸಿರಿ ಜನಪದ’ ಕಾವ್ಯ ಸಂಗ್ರಹ, ಸಂಪಾದನೆ, ಮತ್ತು ಅಧ್ಯಯನ ವಿಧಾನಗಳ ಸ್ವರೂಪ ಮತ್ತು ಸಮಸ್ಯೆಗಳನ್ನು ಸ್ಥೂಲವಾಗಿ ಸಮೀಕ್ಷಿಸಲಾಗಿದೆ. ಕೊನೆಗೆ ಈ ಕುರಿತ ಅಧ್ಯಯನಗಳ ಸೂಚಿಯನ್ನು ಅಕಾರಾಧಿಯಾಗಿ ಕೊಡದೇ ಅವುಗಳು ಪ್ರಕಟಗೊಂಡ ವರ್ಷದ ಹಿನ್ನೆಲೆಯಲ್ಲಿ ಜೋಡಿಸಲಾಗಿದೆ. ಹೀಗೆ ಕೊಡುವುದರಿಂದ ಅಧ್ಯಯನಗಳ ನಡೆಯನ್ನು ತಿಳಿಯಲು ಸಹಾಯಕ ವಾಗಬಹುದು.

ಕನ್ನಡ ಜನಪದ ಮಹಾಕಾವ್ಯಗಳಿಗೆ ಹೋಲಿಸಿದರೆ ತುಳುನಾಡಿನ ಜನಪದ ಮಹಾಕಾವ್ಯ ‘ಸಿರಿಪಾಡ್ದನ’ ಮೇಲಿನ ಅಧ್ಯಯನಗಳು ಸಾಕಷ್ಟು ನಡೆದಿವೆ. ಈ ಅಧ್ಯಯನಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಿಕೊಳ್ಳಬಹುದಾಗಿದೆ.

೧) ವಿದೇಶಿ ವಿದ್ವಾಂಸರ ಅಧ್ಯಯನಗಳು, ೨) ವಿದೇಶಿ ಮತ್ತು ದೇಶಿಯ ವಿದ್ವಾಂಸರ ಅಧ್ಯಯನಗಳು ಮತ್ತು ೩) ದೇಶಿಯ ವಿದ್ವಾಂಸರ ಅಧ್ಯಯನಗಳು.

ವಿದೇಶಿ ವಿದ್ವಾಂಸರ ಅಧ್ಯಯನಗಳು

೧೮೮೬ರಲ್ಲಿ ಪ್ರಕಟವಾದ ಎ. ಮ್ಯಾನರ್‌ರ ‘ತುಳು ಪಾಡ್ದನಗಳ’ (ಪಾಡ್ದೊನಗಳು) ಸಂಗ್ರಹದಲ್ಲಿ ಹಾಗೂ ಎ. ಸಿ. ಬರ್ನೆಲರ ‘ಪಾಡ್ದನಗಳ’ (೧೮೯೪) ಸಂಗ್ರಹಗಳಲ್ಲಿ ಸಿರಿಪಾಡ್ದನ ವಿಲ್ಲ. ಅಬ್ಬಗ, ದಾರಗ, ಗಿಂಡೆ, ಸೊನ್ನೆಯರ ಪ್ರಾಸ್ತಾಪವಿದ್ದರೂ ಪಾಡ್ದನವು ಸಂಗ್ರಹವಾಗಿಲ್ಲ. ಇದಕ್ಕೆ ಆಗ – “ಇಡೀ ದೇಶ ಸ್ವಾತಂತ್ರ್ಯ ಚಳವಳಿಗೆ ಸಜ್ಜಾಗುತ್ತಿತ್ತು. ಬ್ರಿಟಿಷರಿಗೆ ಇಲ್ಲಿನ ಸಂಸ್ಕೃತಿಗಳ ಅದರಲ್ಲೂ ರಮರಣವನ್ನಪ್ಪಿದ ಸಾಂಸ್ಕೃತಿಕ ನಾಯಕರ ಮಾಹಿತಿಗಳ ಅಗತ್ಯವಿತ್ತು.  ಮ್ಯಾನರ್‌ರವರು ಈ ಪಾಡ್ದನಗಳ ಸಂಗ್ರಹಿಸುವ ಹತ್ತು ವರ್ಷದ ಹಿಂದೆ ಪ್ಲೀಟರು ಕೆಲವು ಲಾವಣಿಗಳನ್ನು ಸಂಗ್ರಹ ಮಾಡಿ ‘ಇಂಡಿಯನ್ ಆಂಟಿಕ್ವಿಟಿ’ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದು ಸಹ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರ ಲಾವಣಿ ಗಳೇ ಆಗಿವೆ. ಅಂದರೆ ಈ ಸಂಗ್ರಹಗಳ ಹಿಂದಿನ ಧೋರಣೆ ಅದನ್ನು ಭಾರತೀಯ ಪ್ರಾಚೀನ ಸಂಸ್ಕೃತಿಯ ಭಾಗವಾಗಿ ನೋಡುವುದು ಮತ್ತು ಆ ಮೂಲಕ ಭಾರತದಲ್ಲಿ ಪ್ರಭುತ್ವವನ್ನು ನಿರ್ವಹಿಸುವ, ತಿಳುವಳಿಕೆ ಪಡೆಯುವ ಭಾಗವಾಗಿ ತುಳುನಾಡಿನ ಮೊದಲ ಘಟ್ಟದ ಜನಪದ ಸಂಗ್ರಹಗಳು, ಅಧ್ಯಯನಗಳು, ಪ್ರಾರಂಭವಾಗಿವೆ.” ಎಂಬ ಸರಿಯಾದ ಕಾರಣವನ್ನು ವೆಂಕಟೇಶ್ ಇಂದ್ವಾಡಿಯವರು ‘ಅಧ್ಯಯನಗಳನ್ನು ಮೀರಿನಿಂತ ಸಿರಿಜನಪದ ಕಾವ್ಯ’ ಎಂಬ ಲೇಖನದಲ್ಲಿ ಗುರುತಿಸಿದ್ದಾರೆ.

ನಂತರದಲ್ಲಿ ಪೀಟರ್ ಜೇ. ಕ್ಲಾಸ್ ೧೯೭೫ರಲ್ಲಿ ಅವರು ಬರೆದ ‘The siri myth and ritual : A mass possession cult of South India’ ಲೇಖನ ಸಿರಿ ಆಚರಣೆ ಮತ್ತು ಪುರಾಣ ಕುರಿತ ಮಹತ್ವದ ಬರಹ. ಇದು ಸಿರಿಯ ಕುರಿತ ಮನೋವಿಜ್ಞಾನಿಕ ಅಧ್ಯಯನವಾಗಿದೆ.  ಇದನ್ನು ೧೯೮೭ರಲ್ಲಿ ಎ. ವಿ. ನಾವಡ, ಮತ್ತು ಸುಭಾಶ್ಚಂದ್ರ ಅವರು ಕನ್ನಡದಲ್ಲಿ ಅನುವಾದಿಸಿ ಜಾನಪದ ಚರ್ಚೆಯನ್ನು ವಿಸ್ತೃತಗೊಳಿಸಿದರು.

ಲೌರಿಹಾಂಕೋ ಅವರು ‘Textualising the siri Epic” ಎಂಬ ಸ್ವತಂತ್ರವಾದ ವಿದ್ವತ್‌ಪೂರ್ಣವಾದ ಗ್ರಂಥವನ್ನು ಪ್ರಕಟಿಸಿದರು. ಇದರಲ್ಲಿ ನಾಲ್ಕು ಭಾಗಗಳಿವೆ.  ಸಿರಿ ಕಾವ್ಯದ ಸಂಪಾದನೆಯಲ್ಲಿ ಎದುರಿಸಿದ ಸವಾಲುಗಳನ್ನು ವಿವರಿಸಿದ್ದಾರೆ.

ಈ ಮೇಲಿನ ವಿದೇಶಿ ವಿದ್ವಾಂಸರ ಅಧ್ಯಯನಗಳೆಲ್ಲವೂ ಸಂಪಾದನೆಯ ಸೈದ್ಧಾಂತಿಕ ಚರ್ಚೆಯನ್ನು ಒಳಗೊಂಡಿವೆ. ಇತರ ಮಹಾಕಾವ್ಯಗಳ ಸಂಪಾದನೆಯ ವಿಧಾನಕ್ಕಿಂತ ಇದು ಹೇಗೆ ಭಿನ್ನ ಎನ್ನುವುದನ್ನು ಹೇಳಿದ್ದಾರೆ. ಕ್ಷೇತ್ರಕಾರ‍್ಯ, ಹಾಡುಗಾರ, ಸಂದರ್ಭ, ಪುರಾಣ, ಆಚರಣೆಯ ನೆಲೆಗಳು, ತುಳು ಸಂಸ್ಕೃತಿಯ ಪರಿಚಯ ಈ ಮುಂತಾದ ನೆಲೆಯಲ್ಲಿ ಅಧ್ಯಯನಗಳು ನಡೆದಿವೆ. ಈ ಸಿರಿ ಅಧ್ಯಯನದ ಮೂಲಕ ಹಾಂಕೋ ‘ಬಹುರೂಪಗಳು’ (Multiforms) ಎಂಬ ಪರಿಕಲ್ಪನೆಯನ್ನು ರೂಪಿಸಿದರು. ಈ ಮೂಲಕ ಹಾಡುಗಾರನು ಪುನರಾವರ್ತನೆಯಿಂದ ಕಾವ್ಯದ ಹಿಗ್ಗುವಿಕೆ ಹೇಗೆ ರೂಢಿಸಿಕೊಂಡಿದ್ದಾನೆ ಎಂಬುದನ್ನು ಹಾಂಕೋ ಪ್ರತಿ ಪಾದಿಸಿದ ಹಾಗೆಯೇ ಮ್ಯಾನರ್‌ನು ಕ್ಷೇತ್ರ ಕಾರ‍್ಯದ ಮೂಲಕ ಆಚರಣಾತ್ಮಕ ಸ್ವರೂಪಕ್ಕೆ ಸಂಬಂಧಿಸಿದಂತೆ ಅಧ್ಯಯನಕ್ಕೆ ಹೊಸ ಹೊಳಹನ್ನು ಸೃಷ್ಟಿಸಿದ.

ಹೀಗೆ ಪಾಶ್ಚಾತ್ಯ ವಿದ್ವಾಂಸರ ವಿಶ್ಲೇಷಣಾತ್ಮಕ ಅಧ್ಯಯನಗಳು ದೇಶಿಯ ವಿದ್ವಾಂಸರ ಗಮನ ಸೆಳೆದವು. ಇವರು ಭಿನ್ನ ನೆಲೆಯಿಂದ ಅಧ್ಯಯನ ನಡೆಸಲು ಪ್ರೇರಕವಾದವು.

ವಿದೇಶಿ ಮತ್ತು ದೇಶಿಯ ವಿದ್ವಾಂಸರ ಅಧ್ಯಯನಗಳು

ಲೌರಿಹಾಂಕೋ ಈ ಹಂತದಲ್ಲಿ ಗೋಪಾಲನಾಯ್ಕ ಹಾಡಿದ ‘ಸಿರಿ ಪಾಡ್ದನ’ ದಿಂದ ಪ್ರಭಾವಿತರಾಗಿ ಚಿನ್ನಪ್ಪಗೌಡ, ವಿವೇಕ ರೈ ಜೊತೆಗೂಡಿ ಈ ಕಾವ್ಯವನ್ನು ಸಮಗ್ರವಾಗಿ ಸಂಗ್ರಹ ಮಾಡಿದರು. ಈ ಸುದೀರ್ಘವಾದ ಮಹಾಕಾವ್ಯವನ್ನು “The Siri Epic as performed by Gopalanaika Part – I ಮತ್ತು Part – II” ಈ ಶೀರ್ಷಿಕೆಯಲ್ಲಿ ಫಿನ್ಲೆಂಡಿನ ಪ್ರತಿಷ್ಠಿತ Folklore Fellows Communications ಮಾಲಿಕೆಯಲ್ಲಿ ಪ್ರಕಟಿಸಲಾಗಿದೆ.

೬೦ ಪುಟಗಳ ಸುದೀರ್ಘ ಪ್ರಾಸ್ತಾವನೆಯಲ್ಲಿ ಈ ಕಾವ್ಯದ ಹಾಡುಗಾರ ಸಂದರ್ಭ, ದಾಖಲಾತಿ ವಿಧಾನ, ತುಳು ಸಂಸ್ಕೃತಿ ಮೊದಲಾದ ವಿಷಯಗಳ ಬಗ್ಗೆ ಅನೇಕ ವಿವರಗಳಿವೆ. ಎಲೆಯಾಟ್ ಲೆನ್ರೂಟ್ ಅನೇಕ ಜನ ಹಾಡಿದ ‘ಕಲೆವಲಾ’ ಜನಪದ ಮಹಾಕಾವ್ಯವನ್ನು ಸಂಪಾದಿಸಿದ್ದಕ್ಕಿಂತ ಭಿನ್ನವಾಗಿ ಹಾಂಕೋ ಸಂಪಾದಿಸಿದ ‘ಸಿರಿ ಮಹಾಕಾವ್ಯ’ ಗೋಪಾಲನಾಯ್ಕ ಮಾತ್ರ ಹಾಡಿದ್ದು. ಇದನ್ನು ಹಾಂಕೋ ಪಾಶ್ಚಾತ್ಯ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಭಿನ್ನವಾಗಿ ಚರ್ಚೆಮಾಡಿ ಜನಪದ ಮಹಾಕಾವ್ಯ ಸಂಪಾದನೆಗಳ ವೈಧಾನಿಕತೆಯನ್ನು ರೂಪಿಸಿದ್ದಾನೆ.

ಎಂ. ಗಣಪತಿರಾವ್‌ಐಗಳ್, (ತುಳು ಪಾಡ್ದನೊಳು – ೧೯೩೩), ಕನರಾಡಿವಾದಿರಾಜ ಭಟ್ಟರ (ಪಾಡ್ದನಗಳು – ೧೯೭೮), ಡಾ.ಯು.ಪಿ. ಉಪಾಧ್ಯಾಯ ಮತ್ತು ಡಾ. ಸುಶೀಲಾ ಅವರ (Bhuta worship : Aspects of Ritualistic Theatre (೧೯೮೪), ಪಿ. ಪದ್ಮನಾಭ ಅವರ ಇಂಗ್ಲೀಷ್ ಲಿಪಿಯಲ್ಲಿರುವ ತುಳು ಪಠ್ಯ (Special study Report on Bhuta cult in South Kanara District (೧೯೭೧) ಹಾಗೂ ಪೀಟರ್ ಜೆ. ಕ್ಲಾಸ್ ಅವರ ಇಂಗ್ಲೀಷ್ ಲೇಖನಗಳ ಕನ್ನಡ ಅನುವಾದ ‘ತುಳುವದರ್ಶನ’ ಹೀಗೆ ಅನೇಕ ಕೃತಿಗಳಲ್ಲಿ ಕಂಡುಬರುವ ಮಹಾಕಾವ್ಯಗಳ ಪಠ್ಯಗಳಲ್ಲದೆ, ಪಾಡ್ದನಗಳನ್ನು ಆಧರಿಸಿದ ಕಥಾ ಸಾರಾಂಶವನ್ನು ಸಂಗ್ರಹಿಸಲಾಗಿದೆ. ಶೀನಪ್ಪ ಹೆಗ್ಡೆ (ಪ್ರಾಚೀನ ತುಳುನಾಡು) ಮತ್ತು ಅಮೃತ ಸೋಮೇಶ್ವರರ ಪಾಡ್ದನ ಕತೆಗಳು ಜನಪ್ರಿಯ ಸಂಪುಟಗಳಾಗಿವೆ. ತುಳು ಸಂಸ್ಕೃತಿ ಚಿಂತನೆಗಳನ್ನು ಕೊಟ್ಟಿರುವ ಈ ಸಂಪುಟಗಳು ಸಂಸ್ಕೃತಿ ಅಧ್ಯಯನಕ್ಕೆ ಅಪೂರ್ವ ಕೊಡುಗೆಯಾಗಿವೆ.

ದೇಶಿಯ ವಿದ್ವಾಂಸರ ಅಧ್ಯಯನಗಳು

ವಿವೇಕ ರೈ ಅವರ ‘ತುಳು ಜನಪದ ಸಾಹಿತ್ಯ’ ಎಂಬ ಅಧ್ಯಯನ ಗ್ರಂಥದಲ್ಲಿನ ‘ಪಾಡ್ದನ ಗಳು’ ಭಾಗದಲ್ಲಿ ಪಾಡ್ದನಗಳ ಸ್ವರೂಪ, ಪಾಡ್ದನಗಳ ವರ್ಗೀಕರಣ, ಪಾಡ್ದನಗಳಲ್ಲಿ ವ್ಯಕ್ತ ವಾಗುವ ತುಳುನಾಡಿನ ಸಂಸ್ಕೃತಿ, ಕಾಲ ಈ ಕುರಿತ ತಾತ್ವಿಕ ವಿಶ್ಲೇಷಣೆ ಇದೆ. ೩೯ ಪಾಡ್ದನಗಳ ವಸ್ತು ವಿವೇಚನೆಯನ್ನು ಮಾಡಿದ್ದಾರೆ. ಅದರಲ್ಲಿ ಸಿರಿಯು ವಿಶೇಷವಾಗಿ ಅಧ್ಯಯನಕ್ಕೊಳಪಟ್ಟಿದೆ. ಬೇರೆ ಬೇರೆ ಶಿಸ್ತುಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವ ಶಾಸ್ತ್ರೀಯ ವಿಶ್ಲೇಷಣೆಯನ್ನು ವಿವೇಕ ರೈ ಅವರು ನಡೆಸಿದ್ದಾರೆ.

ಎ. ವಿ. ನಾವಡ ಅವರ ಗಿಡಿಕೆರೆ ರಾಮಕ್ಕ ಮುಗೇರ‍್ತಿ ಕಟ್ಟಿದ ‘ಸಿರಿ ಪಾಡ್ದನ’ ಇದು ತುಳು ಜನಪದ ಇತಿಹಾಸದಲ್ಲಿ ಗಮನಿಸುವಂತದು. ಅವರ ೯೦ ಪುಟಗಳ ಪ್ರಾಸ್ತಾವನೆಯಲ್ಲಿ ಆಚರಣೆ ಮತ್ತು ಸಿರಿಪಾಡ್ದನ ಕುರಿತ ಅಧ್ಯಯನ ಪೂರ್ಣ ಪ್ರವೇಶಿಕೆ ಬರೆದಿದ್ದಾರೆ.  ದಾಖಲಾತಿ ಪಠ್ಯೀಕರಣ, ಸಂಪಾದನೆ, ವೈಜ್ಞಾನಿಕವಾಗಿದೆ. ತುಳುವಿನ ಸಾಮಾಗ್ರಿಗಳನ್ನು ಬಳಸಿ ಮಹಾಕಾವ್ಯದ ತಾತ್ವಿಕ ಚರ್ಚೆಯನ್ನು ಮಾಡಿದ್ದಾರೆ. ಈ ಸಿರಿಪಾಡ್ದನ ಪಠ್ಯವು ಪೂರ್ತಿಯಾಗಿ ತುಳು ಭಾಷೆಯಲ್ಲಿದ್ದು ಪ್ರಾಸ್ತಾವನೆಯ ಭಾಗದಲ್ಲಿ ಸೇರಿಸಿರುವ ಕಥಾ ಸಾರವು ಕನ್ನಡ ಓದುಗರಿಗೆ ಸಿರಿಕತೆಯನ್ನು ಪರಿಚಯಿಸುವ ದೃಷ್ಟಿಯಿಂದ ಅತ್ಯಂತ ಉಪಯುಕ್ತ ವಾಗಿದೆ. ಇದೇ ಲೇಖಕರ ‘ಮೌಖಿಕ ಕಾವ್ಯದ ವಿಶಿಷ್ಟಾಂಶಗಳು ಹಾಗೂ ಅದರ ಸಂಯೋಜನೆ ಪ್ರಕ್ರಿಯೆ’ ತುಳು ಮೌಖಿಕ ಕಾವ್ಯ ಪರಂಪರೆಗೆ ಅನ್ವಯಿಸಿದಂತೆ (೧೯೯೩), ‘ಪಾಡ್ದನಗಳ ಪ್ರದರ್ಶನ, ವರ್ಗೀಕರಣ (೧೯೯೫), ಮತ್ತು ಬಿ. ದಾಮೋಧರರಾವ್ ಅವರ ತುಳು ಪಾಡ್ದನಗಳು ಪಾಡ್ದನಗಳು ಮಹಾಕಾವ್ಯವಾಗಿ (೧೯೯೫); ಗಾಯಿತ್ರಿ ನಾವಡ ಅವರ ‘ಸಿರಿಪಾಡ್ದನ; ಹೆಣ್ಣಿನ ಅನನ್ಯತೆಯ ಹುಡುಕಾಟ’ ಮೊದಲಾದವು ತುಳು ಜನಪದ ಮಹಾಕಾವ್ಯವನ್ನು ಪರಿಕಲ್ಪನಾತ್ಮಕವಾಗಿ ಚರ್ಚಿಸಿವೆ. ಇತಿಹಾಸ, ಪುರಾಣ ಮತ್ತು ಆರಾಧನೆ ಗಳ ನಡುವಿನ ತಾತ್ವಿಕ ಸಂಬಂಧ, ಪಠ್ಯ ರಚನೆ, ಪ್ರಸಾರ, ಮೊದಲಾದ ದೃಷ್ಟಿಕೋನದ ಅಧ್ಯಯನಗಳೂ ನಡೆದಿವೆ.

ಗಾಯಿತ್ರಿ ನಾವಡ ಅವರು ಇದನ್ನು ಸ್ತ್ರೀವಾದಿ ದೃಷ್ಟಿಕೋನದಿಂದಲೂ ವಿವೇಚಿಸಿದ್ದಾರೆ.  ‘ವಿರಚನೆ’ ಕೃತಿಯಲ್ಲಿ ಸ್ತ್ರೀವಾದದ ಸೈದ್ಧಾಂತಿಕ ಚರ್ಚೆಗೆ ಲೇಖಕಿ ಬಳಸಿಕೊಂಡಿದ್ದಾರೆ. ‘ಲಿಂಗ, ಲಿಂಗ ಪ್ರಬೇಧ ಮತ್ತು ಪಠ್ಯ ಸ್ವರೂಪ, ‘ಪಾಡ್ದನಗಳು ಪ್ರಕಟಿಸುವ ಸ್ತ್ರೀತ್ವದ ಪ್ರತಿನಿಧೀಕರಣ, “ಸಿರಿ ಹೆಣ್ಣಿನ ಅನನ್ಯತೆಯ ಹುಡುಕಾಟ’, ‘ಪಾತಿವ್ರತ್ಯದ ನಿರ್ವಚನ’ ಈ ಲೇಖನಗಳಲ್ಲಿ ಸ್ತ್ರೀ ಪರಚಿಂತನೆ, ಸ್ತ್ರೀ ವಿಮೋಚನೆಯ ಹಾದಿಗಳು ತೆರೆದುಕೊಳ್ಳಬೇಕಾದ ಅಗತ್ಯ ಮತ್ತು ಸಾಧ್ಯತೆಗಳನ್ನು ಚರ್ಚಿಸಿದ್ದಾರೆ.

ಪಿತೃಪ್ರಧಾನ ಸಂಸ್ಕೃತಿಯ ಚಿಂತನೆಗಳನ್ನು ಒಡೆಯುತ್ತಲೇ, ತಿರಸ್ಕರಿಸುತ್ತಲೇ “ಮಾತೃ ವಂಶೀಯತೆಯ ಪ್ರವರ್ತಕಗಳಾಗಿ ಪೂರ್ಣ ಬದುಕಿನ ಹುಡುಕಾಟದಲ್ಲಿ ಹೆಣ್ಣಿನ ಅಂತಸ್ಸತ್ವದ ಶೋಧದಲ್ಲಿ ಸಿರಿ ಎತ್ತುವ ಪ್ರಶ್ನೆಗಳು, ಸ್ಥಾಪಿಸುವ ಧೋರಣೆಗಳು ಹೆಚ್ಚು ಮಾನಯ ವಾಗಿದೆ” (ಪು:೧೪೪) ಎನ್ನುವುದನ್ನು ಗುರುತಿಸುವ ಮೂಲಕ ಮತ್ತೆ ಹೆಣ್ಣಿನ ಅಂತಸ್ಸತ್ವದ ಸೈದ್ಧಾಂತಿಕ ಚರ್ಚೆಗೆ ಎಳೆಯುತ್ತಾರೆ.

ಪ್ರಾದೇಶಿಕ ಅನನ್ಯತೆಯನ್ನು ಗುರುತಿಸಿಕೊಳ್ಳುವ ಅಧ್ಯಯನಗಳೂ ಬಂದಿವೆ. ತುಳು ಮಹಾಕಾವ್ಯಗಳನ್ನು ಪರಿಚಯಾತ್ಮಕವಾಗಿ ಅಷ್ಟೇ ಚರ್ಚಿಸದೆ, ಸಾಮಾಜಿಕ, ರಾಜಕೀಯ, ಸಾಹಿತ್ಯದ ಉದ್ದೇಶಗಳಿಗೆ ಹಿನ್ನೆಲೆಯಾಗಿ ಚರ್ಚಿಸಿರುವುದನ್ನು ಕಾಣಬಹುದು. ಕಿಲ್ಲೆ ಮತ್ತು ಹೆಗ್ಡಯವರ ‘ಪ್ರಾಚೀನ ತುಳುನಾಡು’ ಗಣಪತಿರಾವ್ ಐಗಳ್ ಅವರ ‘ದಕ್ಷಿಣ ಕನ್ನಡ ಜಿಲ್ಲೆ ಪ್ರಾಚೀನ ಇತಿಹಾಸ; ಸಾಲೆತ್ತೂರು ಅವರ ‘Ancient Karnataka Vol – 1, History of Tuluva, ಪ್ರಾದೇಶಿಕ ಇತಿಹಾಸದ ಚಿತ್ರಣವನ್ನು ಸಾಂಸ್ಕೃತಿಕವಾಗಿ ನೀಡಲು ಪ್ರಯತ್ನಿಸಿ ದ್ದಾರೆ.

ಕಾರಂತರ ‘ಭೂತಾರಾಧನೆ (೧೯೭೬) ಪರಿಚಯಾತ್ಮಕ ಚಿಕ್ಕ ಪುಸ್ತಕವಾದರೂ ಪಾಡ್ದನಗಳ ಆಧಾರದಿಂದ ಮಾನವ ದೃಷ್ಟಿಕೋನದ ಅಧ್ಯಯನ ಇದಾಗಿದೆ. ವಿವೇಕ ರೈ ಅವರ ‘ತುಳುನಾಡಿನ ಮೇರರು’ ಒಂದು ಜನಾಂಗದ ಅಧ್ಯಯನದ ಚಿತ್ರಣವನ್ನು ಕೊಡುತ್ತದೆ. ಕನರಾಡಿವಾದಿರಾಜ ಭಟ್ಟರ ‘ಪಾಡ್ದನಗಳು (೧೯೭೪) ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಮಹತ್ವವನ್ನು ಪ್ರತಿನಿರ್ಮಿಸುತ್ತವೆ. ಅಲ್ಲದೆ ಈ ಕುರಿತ ತುಳು ಪಾಡ್ದನ ಕಥಾಸಾರ, ಕಾದಂಬರಿ ಅವತರಣಿಕೆಗಳೂ ಬಂದಿವೆ. ಹಾಗೆಯೇ ‘ಸಿರಿ ಪಾಡ್ದನದ’ ಕತೆಯನ್ನು ಬಳಸಿಕೊಂಡು ಯಕ್ಷಗಾನ, ಪ್ರದರ್ಶನಗಳೂ ನಡೆದಿವೆ. ತುಳು ಭಾಷೆಯಲ್ಲಿ ‘ತುಳುನಾಡ ಸಿರಿ’ ಎನ್ನುವ ಚಲನಚಿತ್ರವೂ ಆಗಿದೆ. ಪಾಡ್ದನಗಳನ್ನು ಮೂಲವಾಗಿಟ್ಟುಕೊಂಡು ಸಿರಿ ಆಚರಣೆ, ಪಾಡ್ದನ ಹಾಗೂ ಅವುಗಳ ನಡುವಿನ ಅಂತರ್ ಸಂಬಂಧವನ್ನು, ಸಂಸ್ಕೃತಿ ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳು ಆಯಾ ಲೋಕದ ದೃಷ್ಟಿಯಲ್ಲಿ ಹೇಗೆ ನಿರ್ಧಾರಾತ್ಮಕವಾಗುತ್ತವೆ ಎನ್ನುವ ಅಂಶಗಳೂ ಚರ್ಚೆಯಾಗಿವೆ. ಈ ಕೆಳಗಿನ ಅಧ್ಯಯನ ಸೂಚಿಯನ್ನು ಗಮನಿಸಿದರೆ ಗೊತ್ತಾಗ ಬಹುದು.