ತುಳುವಿನಂಥ ಭಾಷೆಗಳಲ್ಲಿ ವಸಾಹತು ಪೂರ್ವ ಸಾಹಿತ್ಯ ಬಹುತೇಕ ಮೌಖಿಕವಾಗಿಯೇ ಇರುವುದರಿಂದ ಕಾಲಕ್ರಮ ವಿಕಾಸವನ್ನು ಗುರುತಿಸುವುದು ಸುಲಭವಲ್ಲ. ಲಿಖಿತ ಚಾರಿತ್ರಿಕ ದಾಖಲೆಗಳು ಇಲ್ಲದಿರುವುದರಿಂದ ಈ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಈ ದಾಖಲೆಗಳು ಇದ್ದಿದ್ದರ ಮೌಖಿಕ ರಚನೆಗಳಲ್ಲಿ ಮಡುಗಟ್ಟಿ ನಿಂತಿರುವ ಸಾಹಿತ್ಯಕ ಬದುಕನ್ನು ವಿಶ್ವಾಸನೀಯವಾಗಿ ಐತಿಹಾಸಿಕ ನೋಟದಲ್ಲಿಟ್ಟು ಅಧ್ಯಯನ ಮಾಡಲು ಸಾಧ್ಯವಾಗುತ್ತಿತ್ತು. ಸಾಲೆತ್ತೂರರಂಥ ಇತಿಹಾಸಕಾರರು ಮೌಖಿಕ ಸಾಹಿತ್ಯದಿಂದ ದೊರೆಯುವ ಸಾಮಗ್ರಿಗಳನ್ನೇ ಅವಲಂಬಿಸಿ ಸಾಮಾಜಿಕ, ಸಾಹಿತ್ಯಕ ಬದುಕನ್ನು ದಾಖಲಿಸಲು ಯತ್ನಿಸಿದ್ದಾರೆ. ಅವರ ಈ ವಿಧಾನ ಚಾರಿತ್ರಿಕ ಅನ್ವೇಷಣಾ ಕ್ರಮಕ್ಕೆ ಅನುಗುಣವಾಗಿದ್ದಿತು; ಆದರೆ ಅದು ತುಳು ಸಾಹಿತ್ಯ ಚರಿತ್ರೆಯ ನಿರ್ಮಾಣ ಕಾರ್ಯಕ್ಕೆ ಪೂರಕವಾಗಲಾರದು. ಸಾಲೆತ್ತೂರರ ವೈಯುಕ್ತಿಕ ಸಂಗ್ರಹದಲ್ಲಿನ ಪಾಡ್ದನಗಳಲ್ಲಿ ಇಲ್ಲಿಯವರೆಗೂ ಅಜ್ಞಾತವಾದ ಕೆಲವು ಪದ್ಯಗಳು ಮತ್ತು ಅವುಗಳ ಪಾಠಾಂಶಗಳು ಇರುವ ಸಾಧ್ಯತೆಯಿದೆ. ಇದರಿಂದ ತುಳು ಸಾಹಿತ್ಯಕ್ಕೆ ಅನುಷಂಗಿಕ ಪ್ರಯೋಜನವಾಗಬಹುದು. ಸಾಲೆತ್ತೂರರ ಸಂಗ್ರಹ ಈಗ ಎಲ್ಲಿದೆ ಮತ್ತು ಅದರ ಮಹತ್ವ ಎಷ್ಟು ಎಂಬುದನ್ನು ತಿಳಿಯಲು ಜನಪದ ಆಚರಣೆಯ ಕಲೆಗಳ ಪ್ರಾದೇಶಿಕ ಸಂಪನ್ಮೂಲ ಕೇಂದ್ರ (Regional Resources Centre for Folk Performing Arts)ದಂಥ ಸಂಸ್ಥೆ ಪ್ರಯತ್ನಿಸುವುದು ಅಪೇಕ್ಷಣೀಯ. ತುಳು ಪಾಡ್ದನಗಳನ್ನು ಒಂದೇ ಸಂಪುಟದಲ್ಲಿ ಪ್ರಕಟಿಸುವ ಅಗತ್ಯ ತುರ್ತಿನದಾಗಿದೆ.

ನಮ್ಮನ್ನು ಪರಿಮಿತಿಗೆ ಒಳಪಡಿಸುತ್ತಿರುವ ಸದ್ಯದ ಸಂದರ್ಭದಲ್ಲಿ ಪಾಡ್ದನಗಳ ಅಧ್ಯಯನವನ್ನು ಸಾಹಿತ್ಯ ಚರಿತ್ರಕಾರನಂತೆ ಮಾಡುವುದು ಸಾಧ್ಯವಿಲ್ಲವಾದ್ದರಿಂದ ಕಾಲಾನುಕ್ರಮಕ್ಕಿಂತ ದೇಶಾನುಕ್ರಮ (Special)ದಲ್ಲಿ ನಡೆಸುವುದು ಹೆಚ್ಚು ಸೂಕ್ತವಾದೀತೆ ಎಂಬುದು ಪರಿಶೀಲನಾರ್ಹವಾಗಿದೆ. ಪ್ರಾಯೋಗಿಕ ಉದ್ದೇಶಗಳಿಗಾಗಿ ಲಭ್ಯವಿರುವ ಎಲ್ಲ ತುಳು ಕೃತಿಗಳನ್ನು ದೇಶಾನುಕ್ರಮದ ಹರಹಿನಲ್ಲಿಟ್ಟು ಪರಿಭಾವಿಸಬಹುದು. ಈ ಬಗೆಯ ದೃಷ್ಟಿ ದೇಶಾನುಕ್ರಮವಾಗಿ ಕಾಣುವುದು ಮೇಲುನೋಟಕ್ಕೆ ಮಾತ್ರ. ಏಕೆಂದರೆ ಅದು ಏಕಕಾಲಿಕ ದೃಷ್ಟಿ (Synchronic)ಯೂ ಆಗುತ್ತದೆ. ಹಾಗೆ ನೋಡಿದಾಗ, ನಿರ್ಧರಿಸಲು ಸಾಧ್ಯವಾಗದ ಬೇರೆಬೇರೆಯ ಕಾಲ ಘಟ್ಟಗಳಲ್ಲಿ ಕೃತಿಗಳು ಬಂದಿದ್ದರೂ, ಅವು ಒಟ್ಟಿಗೆ ಏಕಕಾಲಿಕ ಅಸ್ತಿತ್ವವನ್ನು ಪಡೆಯುತ್ತವೆ. ಆದರೂ ಮೇಲೆ ಸೂಚಿಸಿದ ಈ ವಿಧಾನವು ಸಾಹಿತ್ಯ ವಿಕಾಸವನ್ನು ಕಾಲಾನುಕ್ರಮವಾಗಿ ಗುರುತಿಸುವ ಸಾಹಿತ್ಯ ಚರಿತ್ರಕಾರನ ದೃಷ್ಟಿಗಿಂತ ಭಿನ್ನವಾದದ್ದೆಂಬುದನ್ನು ಪರಿಗಣಿಸಬೇಕು.

ಮುಖ್ಯವಾಗಿ ವಿಶ್ಲೇಷಣೆ, ತುಲನೆ, ವೈದೃಶ್ಯಗಳಿಗೆ ಈ ದೇಶಾನುಕ್ರಮ – ಏಕಕಾಲಿಕ (spatial – sychronic) ದೃಷ್ಟಿ ವಿಶೇಷವಾಗಿ ಅನುಕೂಲಕರವಾಗಿದೆ. ಏಕೆಂದರೆ ಈ ವಿಧಾನದಲ್ಲಿ ಕಾಲಾನುಕ್ರಮವನ್ನು ಅನ್ವಯಿಸಿದ ತೌಲನಿಕ ಅಧ್ಯಯನ ಮಾಡಲಾಗುತ್ತದೆ. ಜೊತೆಗೆ ತುಳುಕೃತಿ ಸಮೂಹದ ಆಚೆಗೂ ಹೋದರೆ ತೌಲನಿಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನಕ್ಕೆ ದೊರಕುವ ವ್ಯಾಪ್ತಿ ಹಿಗ್ಗುತ್ತಾ ಹೋಗುತ್ತದೆ.

ತುಳು ಸಾಹಿತ್ಯ ಸಂದರ್ಭವನ್ನೇ ಗಮನದಲ್ಲಿಟ್ಟು ಹೇಳುವುದಾದರೆ, ‘ಕುಪ್ಪೆ ಪಂಜರ್ಲಿ’ ಪಾಡ್ದನದ ಒಂದು ಪಾಠದ ಪ್ರಕಾರ, ಪಂಜುರ್ಲಿಯನ್ನು ತನ್ನ ವಠಾರದಲ್ಲಿ ಪ್ರತಿಷ್ಠಾಪಿಸಿದ ಒಂದೆರಡು ವರ್ಷಗಳಲ್ಲಿಯೇ ಬೊಮ್ಮಣ್ಣ ಬಲ್ಲಾಳನು ಬೇಕಾದಷ್ಟು ತೊಂದರೆಯನ್ನು ಅನುಭವಿಸಿದ್ದರಿಂದ ಒಬ್ಬ ಮಂತ್ರವಾದಿಯನ್ನು ಕರಸಿ ಭೂತವನ್ನು ಒಂದು ಕೊಳದಲ್ಲಿ ಹೂತುಹಾಕಿ ತನ್ನ ಕುಟುಂಬಕ್ಕೆ ಕಾಟ ಕೊಡದಂತೆ ಅಪ್ಪಣೆ ಮಾಡಿಸುತ್ತಾನೆ : “ನಮ್ಮ ಕಾಲದಲ್ಲಿ ಎದ್ದು ಬರಬೇಡ. ನೀರಿಗೆ ಮೀನಾಗು, ಕಾಡಿಗೆ ಹಂದಿಯಾಗಿರು” (‘ಎಂಕುಳೆ ಕಾಲೊಡು ಲಕ್ಕಡ. ನೀರಿಗೆ ಮಿನಾಲಾ, ಕಾಡಿಗ್ ಪಂಜಿಯಾದ್ ಇಪ್ಪುಲಾ” ಪಂಡರ್).

ಕೆಲವು ಸಮಯಾನಂತರ ಹೆಂಡ ಇಳಿಸುವ ಕಸುಬಿನ ಕುಪ್ಪೆ ಕೋಡಿ ಬೈದ್ಯ ಮತ್ತು ಅವನ ಸೋದರ ಚೆನ್ನಯ ಆ ಕೊಳದಿಂದ ಹಂದಿಮುಖದ ಮೀನನ್ನು ಹಿಡಿಯುತ್ತಾರೆ. ಆ ಮೀನಿನ ಹುಳಿ ತಯಾರಿಸಿದ ಹೆಂಗಸರು ರಕ್ತ ಕಾರುತ್ತಾರೆ. ಪಂಜುರ್ಲಿ ಭೂತ ಮತ್ತೆ ಎದ್ದು ಬಂದಿದೆ ಎಂದು ಇನ್ನೊಬ್ಬ ಮಂತ್ರವಾದಿ ಘೋಷಿಸುತ್ತಾನೆ. ಹಂದಿಮೀನಿನ ಆಕೃತಿಯಲ್ಲಿ ರುವ ಆ ಪಂಜುರ್ಲಿ ಇನ್ನೊಮ್ಮೆ ಎಲ್ಲರ ಗಮನವನ್ನು ಸೆಳೆಯುತ್ತದೆ. ಅದರ ಆರಾಧನೆ ಪ್ರಾರಂಭವಾಗುತ್ತದೆ.

ತುಳು ಇತಿಹಾಸದಲ್ಲಿ ಲಾಂಛನವಾಗಿ ಮೀನು ಹೇಗೆ ಬಂತು ಎಂಬುದನ್ನು ಇಲ್ಲಿ ವಿವರಿಸ ಬೇಕಾಗಿಲ್ಲ. ಇತಿಹಾಸಕಾರರು (ರಮೇಶ ಶರ್ಮ, ೧೯೭೮) ಮಾಡಿರುವ ಸಂಶೋಧನೆಯನ್ನು ಸಾಹಿತ್ಯ ವಿದ್ವಾಂಸರು (ವಿವೇಕ ರೈ, ೧೯೮೦) ಮಾನ್ಯ ಮಾಡಿದ್ದಾರೆ. ಹಂದಿಮೀನಿನ ಇಂಗಿತಾರ್ಥವನ್ನು ಚಾರಿತ್ರಿಕ ದೃಷ್ಟಿಯಿಂದ ನೋಡುವುದಕ್ಕಿಂತಲೂ ದೇಶಾನುಕ್ರಮ ದೃಷ್ಟಿಯಿಂದ ಪರೀಕ್ಷಿಸುವುದು ಇಲ್ಲಿ ಅಗತ್ಯವಾಗುತ್ತದೆ. ತುಳುವರ ಬದುಕಿನಲ್ಲಿ ಪೂರ್ವದ ಪರ್ವತ ಶ್ರೇಣಿ, ಪಶ್ಚಿಮದ ಅರಬ್ಬಿ ಸಮುದ್ರ ಪ್ರಮುಖ ಪಾತ್ರ ವಹಿಸಿವೆ. ತುಳುವರ ಪಾಲಿಗೆ ಅವು ಜೀವನಾಧಾರವಾಗಿರುವಂತೆ ಅಪಾಯದ ಆಕರಗಳೂ ಆಗಿವೆ. ಅವುಗಳ ಮುಖಾಂತರವೇ ತುಳುವರಿಗೆ ಆಹಾರ, ವಾಣಿಜ್ಯ, ಖಾಯಿಲೆ, ಯುದ್ಧ, ಬೆಳೆಗೋ ಧರ್ಮಕ್ಕೋ ಉಂಟಾಗುವ ಬೆದರಿಕೆ – ಇವೆಲ್ಲ ಬರುವಂಥವು. ಪರ್ವತದಿಂದ ಕೆಳಗಿಳಿಯುವ ಹಂದಿ, ಕಡಲಿನಿಂದ ಮೇಲೇರುವ ಮೀನು – ಇವೆರಡನ್ನೂ ಹಂದಿಮೀನಿನ ಪ್ರತೀಕದಲ್ಲಿ ಮೇಳೈಸಲಾಗಿದೆ. ತುಳುವರ ಇಂಥ ಒಂದು ಭಾವನಾತ್ಮಕ ಮತ್ತು ವ್ಯಾವಹಾರಿಕ ಸಂಬಂಧ ವಾದ ಪ್ರಬಲ ಮನೋವ್ಯಾಪಾರಕ್ಕೆ ಈ ದೇಶಾನುಕ್ರಮ ರೂಪಕವು ಸಮರ್ಥ ವಸ್ತು ಪ್ರತಿರೂಪವಾಗುತ್ತಿದೆ.

ಇಲ್ಲಿ ಪ್ರಕೃತವಾದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳು ಹಂದಿಮೀನನ್ನು  ‘ಅಟಿಕಳಂಜ’ ದೊಂದಿಗೆ ಹೋಲಿಸಲು ಪ್ರೇರೇಪಿಸುತ್ತವೆ. ತುಂಬ ಕಷ್ಟಕವಾದ ಆಟಿ (ಆಷಾಢ) \ಂಗಳಲ್ಲಿ ಬೇರೆಲ್ಲ ಭೂತಗಳು ತಮ್ಮ ತಮ್ಮ ಸ್ಥಾನಗಳಲ್ಲೇ ಕುಳಿತಿರುವಾಗ ಕಳಂಜವೊಂದೇ ಹೊರಗಡೆ ತಿರುಗುತ್ತಿರುತ್ತದೆ. ಕಳಂಜವು ಮನೆಮನೆಯಲ್ಲೂ ಭಕ್ತಿಪೂರ್ವಕವಾದ ಪೂಜೆಯನ್ನು ಸ್ವೀಕರಿಸುವ ಜೊತೆಜೊತೆಯಲ್ಲೇ ಸಾಂಕೇತಿಕವಾಗಿ ಪರ್ವತಾವಳಿಯಿಂದ ಅವರತ್ತ ಸಾಗಿಬರುವ ರೋಗರುಜಿನಗಳನ್ನು ಮತ್ತು ದುಷ್ಟಶಕ್ತಿಯಾದ ಮಾರಿಯನ್ನು ಒಟ್ಟುಗೂಡಿಸಿ ಸಮುದ್ರಕ್ಕೆ ಎಸೆಯುವ ಕೆಲಸವನ್ನೂ ಅದು ಮಾಡಬೇಕಾಗುತ್ತದೆ :

ಮೂಡಲ ಬಾಗಿಲ ಕಳಂಜ
ಮಾರಿಕಳೆಯುವ ಕಳಂಜ
ಪಡುವಣ ಸಮುದ್ರಕ್ಕೆ ಕಳಂಜ
ಹೊತ್ತು ಹಾಕು ಕಳಂಜ.
ಮೂಡಾಯಿ ಬಾಕಿಲ್ದ್ ಕಳಂಜೆ
ಮಾರಿಕಳಪ್ಪನ ಕಳಂಜೆ
ಪಡ್ಡೇಯಿ ಸಮುದ್ರೊಗು ಕಳಂಜೆ
ಕೊಂಡುಪಾಡ್ಲ (ಕಳಂಜ)

ಹಂದಿಮೀನಿನ ಪ್ರತಿಮೆಯಲ್ಲಿ ಅಸ್ಪಷ್ಟವಾಗಿ ಸೂಚಿಸಲಾಗಿರುವ ದಿಕ್ಕುಗಳನ್ನು ಆಟಿಕಳಂಜ ಹಾಡಿನಲ್ಲಿ ಸ್ಪಷ್ಟಗೊಳಿಸಲಾಗಿದೆ.

ಸಾಮಾನ್ಯವಾಗಿ ಈ ಭೂತಗಳು ದಿಕ್ಕೆಡಿಸುವ ಮತ್ತು ಸರಿಪಡಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವುದರ ಮೂಲಕ ತಮ್ಮ ಇರುವಿಕೆಯನ್ನು ಪ್ರಕಟಗೊಳಿಸುವ ಸ್ವಭಾವದವಾಗಿವೆ.  ಆದ್ದರಿಂದ ಪಾಡ್ದನಗಳಲ್ಲಿ ನಿರೂಪಿಸಲಾಗಿರುವ ಬೇರೆ ಬೇರೆ ದಿಕ್ಕುಗಳ ಕಡೆಗೆ ಸಾಗುವ ಚಲನೆಗಳು ಅರ್ಥಪೂರ್ಣವಾಗುತ್ತವೆ. ಈ ಚಲನಗಳು ಏಕಕಾಲದಲ್ಲಿ ಭೌತಿಕ ಹಾಗೂ ಪಾರಮಾರ್ಥಿಕವಾಗಿವೆ. ಏಕೆಂದರೆ, ಈ ವಸ್ತು ದೇವತಾದೃಷ್ಟಿ (animistic) ಮತ್ತು ದೇವತೆಗಳಲ್ಲಿ ಮನುಷ್ಯರೂಪಾರೋಪಣದೃಷ್ಟಿ (anthropomorphic)ಗಳಿಂದ ಕೂಡಿದ ಆರಾಧನೆಯ ಹಿನ್ನೆಲೆ ಹಾಗೂ ಇವಕ್ಕೆ ಸಂಬಂಧಪಟ್ಟ ಮಹಾಕಾವ್ಯ ಮತ್ತು ಇತರ ಸಾಹಿತ್ಯ ಕೃತಿಗಳಲ್ಲಿ ಬರುವ ಚಿತ್ರಣ ಇವುಗಳಲ್ಲಿ ಅವತಾರದ ಕಲ್ಪನೆಯಿದೆ. ಉದಾಹರಣೆಗೆ, ಬೊಬ್ಬರ್ಯನ ಪಾಡ್ದನವು ಸಮುದ್ರದಲ್ಲಿ ವ್ಯಾಪಾರಿವರ್ಗದ ಒಡನಾಟ ಮತ್ತು ಬದುಕಿಗಾಗಿ ಸಮುದ್ರವನ್ನು ಅವಲಂಬಿಸಿರುವ ಜನರಿಗೆ ಒದಗುವ ಅಪಾಯಗಳನ್ನು ನಿರೂಪಿಸುತ್ತದೆ. ಈ ಪಾಡ್ದನವು ಸಮುದ್ರ ವ್ಯಾಪಾರದಲ್ಲಿ ತೊಡಗಿದ್ದ ಮುಸ್ಲಿಂ ಜನಾಂಗ ಹಾಗೂ ಸ್ಥಳೀಯ ಜನಸಮೂಹದ ಜೊತೆಗಿನ ವ್ಯವಹಾರದಿಂದಾಗಿ ಉಂಟಾದ ಸಾಮಾಜಿಕ ಬದಲಾವಣೆಗಳನ್ನು ಕುರಿತಾಗಿಯೂ ಒಳನೋಟಗಳನ್ನು ಕೊಡುತ್ತದೆ. ಮುರುವಬ್ಯಾರಿ ಒಬ್ಬ ಜೈನ ಮಹಿಳೆಯನ್ನು ಮದುವೆಯಾದಾಗ ಜನ ಹುಬ್ಬೇರಿಸುತ್ತಾರೆ. ಜೈನ ತಾಯಿ ಹಾಗೂ ಮುಸ್ಲಿಂ ತಂದೆಗೆ ಹುಟ್ಟಿದ ಒಬ್ಬ ವ್ಯಕ್ತಿ ತನ್ನ ದೈವಿಕ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡು, ಬೆಸ್ತ ಜನಾಂಗದ ಆರಾಧ್ಯ ದೈವನಾದ ಬೊಬ್ಬರ್ಯ ಅಥವಾ ಬೊಬ್ಬುಸ್ವಾಮಿಯ ಸ್ಥಾನಕ್ಕೆ ಏರಿದ್ದನ್ನು ತೋರಿಸುವುದೇ ಈ ಪಾಡ್ದನದ ಮುಖ್ಯ ಆಶಯವಾಗಿದೆ.

ಈ ಚಲನೆಗಳು ಕರಾರುವಕ್ಕಾಗಿ ಭೌತಿಕವಾದವುಗಳಲ್ಲ ಎಂಬ ಕಾರಣದಿಂದಾಗಿಯೂ ಹೆಚ್ಚಿನ ಸಂದರ್ಭಗಳಲ್ಲಿ ಅವುಗಳ ದಿಕ್ಕುಗಳನ್ನು ನಿರ್ದಿಷ್ಟವಾಗಿ ಪಟ್ಟಿಮಾಡಲು ಸಾಧ್ಯವಾಗು ವುದಿಲ್ಲ.  ಅದರೆ, ದಿಕ್ಕುಗಳನ್ನು ಗುರುತಿಸುವುದು ಎಲ್ಲಿ ಸಾಧ್ಯವಾಗುತ್ತದೆಯೋ ಅಲ್ಲಿ ಆ ದಿಕ್ಕುಗಳ ಇಂಗಿತಾರ್ಥವನ್ನು ಅಭ್ಯಸಿಸುವುದು ಪ್ರಯೋಜನಕಾರಿಯಾಗಿದೆ. ಮೌಖಿಕ, ಲಿಖಿತ ಕಾವ್ಯ/ಕಥಾಸಾಹಿತ್ಯ – ಈ ಸಾಹಿತ್ಯ ಪ್ರಕಾರಗಳಲ್ಲಿ ಬಂದಿರುವ ಒಂದು ಕೃತಿಯ ಗುಣಮಟ್ಟ ವನ್ನು ನಿರ್ಧರಿಸುವ, ಆ ಕೃತಿಗಳಲ್ಲಿ ನಿರೂಪಿತವಾಗಿರುವ ಚಲನೆಗಳನ್ನು ನಿರ್ವಹಿಸುವ ರೀತಿಯನ್ನು ಅಭ್ಯಸಿಸುವುದು ಒಂದು ವಿಧಾನವಾಗಿದೆ. ಈ ಪಾಡ್ದನಗಳನ್ನು ನಮ್ಮ ಅಭ್ಯಾಸದ ಸೌಲಭ್ಯಕ್ಕಾಗಿ ತಾತ್ಕಾಲಿಕವಾಗಿ ಅವುಗಳ ಸಾವಯವ ಸಂಬಂಧಗಳಿಂದ ಬೇರ್ಪಡಿಸಿ ನೋಡ ಬಹುದು; ಅವುಗಳನ್ನು ಏಕಕಾಲಿಕವಾಗಿ ಶಾಬ್ದಿಕ ಕಲಾಕೃತಿಗಳನ್ನಾಗಿ ಗಮನಿಸಬಹುದು, ಹಾಗೆ ಮಾಡಿ ಅವುಗಳಲ್ಲಿ ಸಾಹಿತ್ಯಕವಾಗಿ ಯಾವುದು ಶ್ರೇಷ್ಟ ಪಾಠ ಎಂದು ನಿರ್ಧರಿಸ ಬೇಕಾದರೆ ಅವುಗಳನ್ನು ಸಾಹಿತ್ಯ ವಿಮರ್ಶೆಯ ಒರೆಗಲ್ಲಿಗೆ ಹಚ್ಚಬೇಕಾಗುತ್ತದೆ. ಈ ಬಗೆಯ ಅಧ್ಯಯನದ ಫಲಿತಾಂಶವು ವಿದ್ಯುಕ್ತ ರಂಗಭೂಮಿಯ ಮೇಲೆ ಕಾಲಕ್ರಮದಲ್ಲಿ ಪರಿಣಾಮ ವನ್ನುಂಟುಮಾಡಬಹುದು. ಯಾಕೆಂದರೆ ವಿದ್ಯುಕ್ತ ರಂಗಭೂಮಿಯ ನಟರು ಈಗಿನ ಕಾಲ ದಲ್ಲಿ ಶಿಷ್ಟವರ್ಗದ ಪ್ರೇಕ್ಷಕರ ಮುಂದೆ ಅಭಿನಯಿಸಬೇಕಾದಾಗ ಈ ಚಲನೆಗಳ ನಿಖರ ಅರ್ಥವಂತಿಕೆ ಹಾಗೂ ಸೂಕ್ಷ್ಮ ವ್ಯತ್ಯಾಸಗಳನ್ನು ಪ್ರದರ್ಶಿಸಬೇಕಾಗುತ್ತದೆ.

ಚಲನೆಗಳನ್ನು ನಿರ್ವಹಿಸುವ ರೀತಿಯನ್ನು ಪರೀಕ್ಷಿಸುವುದು ಸಾಹಿತ್ಯ ಕೃತಿಯ ಮೌಲ್ಯ ವನ್ನು ನಿರ್ಧರಿಸುವ ಸಮಂಜಸವಾದ ಹಲವು ಪರೀಕ್ಷಾ ವಿಧಾನಗಳಲ್ಲಿ ಒಂದು. ಗುಣಾಂಶ ವನ್ನು ಗುರುತಿಸುವಾಗ ಸಾಹಿತ್ಯ ವಿಮರ್ಶೆ ಕೃತಿಯಲ್ಲಿನ ಸಾಂಸ್ಕೃತಿಕ ಆಯಾಮವನ್ನು ಹೊರತು ಪಡಿಸಿ ನೋಡುವಂತಿಲ್ಲ. ಹಾಗೆ ಮಾಡುವುದು ಸಾಧ್ಯವೂ ಇಲ್ಲ. ಬಹುಪಾಲು ಮೌಖಿಕವಾದ ಒಂದು ಸಾಹಿತ್ಯ ಪರಂಪರೆಯನ್ನು ಅಭ್ಯಸಿಸುವಾಗ, ಆ ಸಾಹಿತ್ಯದ ಕೃತಿಗಳನ್ನು ಅಥವಾ ಪರಂಪರೆಯ ವಿಕಾಸವನ್ನು ಕಾಲಾನುಕ್ರಮದಲ್ಲಿ ಇಟ್ಟು ನೋಡುವುದ ಸಾಧ್ಯವಾಗಲಾರದು ಎಂಬುದನ್ನು ಸೂಚಿಸುವುದೇ ನನ್ನ ಲೇಖನದ ಪ್ರಾಸ್ತಾವಿಕ ಮಾತುಗಳ ಉದ್ದೇಶ. ಉದಾ ಹರಣೆಗೆ ‘ಮೂಕಾಂಬಿ ಜೇವು’ ಪಾಡ್ದನದಲ್ಲಿನ ಬ್ರಾಹ್ಮಣರು ಉತ್ತರದಿಂದ ದಕ್ಷಿಣಕ್ಕೆ ಸಾಗುವ ಚಲನೆಯನ್ನು ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಬಹುದು. ಪೌರೋಹಿತ್ಯಕ್ಕೆ (ಶಾಂತಿ ಪೂಜೆಗೆ) ಬ್ರಾಹ್ಮಣರು ಕೇರಳಕ್ಕೆ ವಲಸೆ ಹೋದದ್ದಕ್ಕೆ ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ ಒಂದು ಪ್ರಮಾಣದ ಮಹತ್ವವಿದೆ. ಇದರ ಬೇರೆ ಬೇರೆ ಪರಿಣಾಮಗಳನ್ನು ಬಹುಶಃ ಇನ್ನೂ ವಿವರವಾಗಿ ಅಭ್ಯಸಿಸಬೇಕಾಗಿದೆ. ತುಳುಸಾಹಿತ್ಯದ ಪರಿಮಿತ ಸಂದರ್ಭದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ೧೭ನೆಯ ಶತಮಾನದ ಗ್ರಂಥಲಿಪಿಯಲ್ಲಿರುವ ತುಂಗನ ‘ಬಾಗವತೊ’ ಗ್ರಂಥದ ಹಿನ್ನೆಲೆಯಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತವಾಗಬಹುದು. ಆದರೂ ಇದರಲ್ಲಿ ಒಂದು ‘ರೆ’ ಅಂಶ ಇದ್ದೇ ಇದೆ. ತುಳುನಾಡಿನಿಂದ ವಲಸೆಬಂದ ಪೋತಿಗಳೂ ತುಳು ಮಲೆಯಾಳಂ ಲಿಪಿಯ ಬೆಳವಣಿಗೆಯಲ್ಲಿಪಾತ್ರವಹಿಸಿದರು ಎನ್ನುವುದು ನಿಜವಾದರೆ, ಬ್ರಾಹ್ಮಣರು ದಕ್ಷಿಣ ದಿಕ್ಕಿಗೆ ವಲಸೆ ಹೋಗಿರುವುದು ತುಳು ಭಾಷೆಯಲ್ಲಿ ಲಿಖಿತ ಸಂಪ್ರದಾಯ ಪಾರಂಭವಾಗು ವುದಕ್ಕೆ ಕಾರಣವಾಯಿತು ಎಂದು ಗ್ರಹಿಸಬಹುದಾಗಿದೆ. ಹಾಗಾದಲ್ಲಿ ಅವರ ಆ ಚಲನೆಗೆ ಹೆಚ್ಚಿನ ಮಹತ್ವ ಪ್ರಾಪ್ತವಾಗುತ್ತದೆ.

ಸಿರಿ ಪಾಡ್ದನದ ಸಿರಿಯು ಉತ್ತರದಿಂದ ದಕ್ಷಿಣಕ್ಕೆ ಚಲಿಸುವುದಕ್ಕಿರುವ ಮಹತ್ವವೇನು ಎಂಬುದು ನನಗಿನ್ನೂ ಖಚಿತವಾಗಿ ಗೊತ್ತಾಗಿಲ್ಲ. ‘ಬ್ರಾಹ್ಮಣ ಕೊಳೆತರೆ ದಕ್ಷಿಣಕ್ಕೆ ಹೋಗುತ್ತಾನೆ, ಬಂಟ ಕೊಳೆತರೆ ಉತ್ತರಕ್ಕೆ ಹೋಗುತ್ತಾನೆ’ (ಬ್ರಾಣಿ ಸೆಟ್ಟಂಡ ತಂಕಾಯಿ ಪೋಪೆ, ಬಂಟೆ ಸೆಟ್ಟಂಡ ಬಡಕಾಯಿ ಪೋಪೆ) ಎಂಬ ಗಾದೆ ತುಳು ಜನಪದ ಸಾಹಿತ್ಯ ಒದಗಿಸುವ ದೇಶಾವಕಾಶದ/ದೇಶಾನುಕ್ರಮದ (spatial) ಅರ್ಥವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಚಲನೆಗಳ ಐತಿಹಾಸಿಕತೆಯನ್ನು ಜನಪದ ಸಾಹಿತ್ಯ ದೃಢೀಕರಿಸುತ್ತದೆಯಾದರೂ ಅದರಿಂದ ಆ ಚಲನೆಗಳ ಕಾಲಾನುಕ್ರಮ ವಿವರಣೆ ದೊರೆಯುವುದಿಲ್ಲವೆಂಬುದು ನೆನಪಿನಲ್ಲಿಡಬೇಕಾದ ಸಂಗತಿ.

ಭೂತಗಳ ಉಗಮ ಮತ್ತು ಪ್ರತಾಪಗಳಿಗಿಂತ ಮುಖ್ಯವಾಗಿ ಅವುಗಳ ಪ್ರಸಾರವನ್ನು ಕುರಿತು ಹೇಳುವ ಪಾಡ್ದನಗಳು ಸಾಧಾರಣವಾಗಿ ಭೂತಗಳು ತಮಗೆ ನೆಲೆ ಹಾಗೂ ಆರಾಧನೆ ಗಳನ್ನು ಪಡೆಯುವ ಸಲುವಾಗಿ ಚಲಿಸಿದ ದಿಕ್ಕುಗಳನ್ನು ಸೂಚಿಸುತ್ತವೆ. ಪಾಡ್ದನದಲ್ಲಿನ ಚಲನೆಯ ನಿರ್ವಹಣೆ ಅದರ ಮೌಲಿಕತೆಯನ್ನು ಸೂಚಿಸುತ್ತದೆ ಎಂದು ಭಾವಿಸುವವರಿಗೆ ಭೂತವೊಂದರ ಉಗಮ ಮತ್ತು ಪ್ರತಾಪಗಳು ಪಾಡ್ದನಗಳ ಮೂಲ ಆಶಯವಾಗಿರುವುದರಿಂದ ಆ ಆಶಯಕ್ಕೆ ಸಂಬಂಧಿಸಿದ ಚಲನೆಯನ್ನು ಗುರುತಿಸುವುದು ಮುಖ್ಯವಾಗುತ್ತದೆ; ಭೂತದ ಪ್ರಸಾರಕ್ಕೆ ಸಂಬಂಧಪಟ್ಟ ಚಲನೆಗಳು ಅಷ್ಟು ಮುಖ್ಯವಾಗುವುದಿಲ್ಲ. ಕಲ್ಕುಡ – ಕಲ್ಲುರ್ಟಿ ಪಾಡ್ದನಚಕ್ರ ಈ ದೃಷ್ಟಿಯಿಂದ ಪರಿಶೀಲನಾರ್ಹವಾಗಿದೆ.

ಶಿಲ್ಪಿ ಸಮ್ಮು ಅಚ್ಚವ ಮಾರ‍್ನಾಡಿನ ಕೆಲ್ಲಪುತ್ತಿಗೆಯಿಂದ ಕಾರ್ಯಾರ್ಥವಾಗಿ ಪೂರ್ವ ದಿಕ್ಕಿಗಿರುವ ಬೆಳ್ಕುಡ ವಂಶದ ಪಾಳೇಗಾರ ಪಟ್ಟಿಗೆ ಪ್ರಯಾಣಿಸುತ್ತಾನೆ. ಇದೇ ಪಾಡ್ದನ ಚಕ್ರದ ಪ್ರಾರಂಭಿಕ ಚಲನೆ. ಅನಂತರ ಅವನ ಕಿರಿಯ ಮಗ ಬೀರು ತಂದೆಯನ್ನು ಹುಡುಕಿ ಕೊಂಡು ಹೊರಡುತ್ತಾನೆ. ತಂದೆಯನ್ನು ಭೇಟಿ ಮಾಡಿ ಅವನು ನಿರ್ಮಿಸಿದ ಶಿಲ್ಪಕೃತಿಗಳನ್ನು ವಿಮರ್ಶಾತ್ಮಕವಾಗಿ ನೋಡಿ ಅವುಗಳ ತಾಂತ್ರಿಕ ದೋಷಗಳನ್ನು ಕುರಿತು ನಿರ್ಭಿಡೆಯಿಂದ ಟೀಕಿಸುತ್ತಾನೆ. ಪಾಳೇಗಾರನಿಗೆ ತೃಪ್ತಿಯಾಗುವಂತೆ ತನ್ನ ಕೆಲಸವನ್ನು ಮಾಡಿ ಮುಗಿಸಿದ್ದೇನೆ, ಹಾಗೂ ಅದಕ್ಕೆ ತಕ್ಕ ಸಂಭಾವನೆ ಕೂಡ ತನಗೆ ಸಂದಾಯವಾಗಿದೆ ಎಂಬ ಸಂತೃಪ್ತ ಭಾವನೆ ಯಲ್ಲಿದ್ದ ಸಮ್ಮು ಅಚ್ಚವನಿಗೆ ತನ್ನ ಮಗನ ಬಾಯಿಯಿಂದ ಬಂದ ಸತ್ಯ ಅಸಹನೀಯ ವಾಗುತ್ತದೆ. ಅವನು ಉಳಿಯಿಂದ ತನ್ನನ್ನು ಕೊಂದುಕೊಳ್ಳುವ ಮುನ್ನ ಹೀಗೆನ್ನುತ್ತಾನೆ :

“ನನ್ನ ಇಂದ್ರಿಯಕ್ಕೆ ಹುಟ್ಟಿದ ಮಗನೆ, ನನ್ನ ಕೆಲಸಕ್ಕೆ ಊನ ಹೇಳಿದೆ. ಅರಸನಿಗೆ ತೃಪ್ತಿಯಾಗಿ ಹೋಯಿತು. ನೀನು ಊನ ಹೇಳಿದೆಯಲ್ಲ” (ಕನರಾಡಿ ವಾದಿರಾಜ ಭಟ್, ೧೯೭೪ : ೧೮೪). ಈ ದಿಗ್ಭ್ರಮೆಗೊಳಿಸುವ ಬೆಳವಣಿಗೆಗೆ ಬೀರುವಿನ ಪ್ರತಿಕ್ರಿಯೆ ಅಷ್ಟೇ ಅರ್ಥಪೂರ್ಣವಾಗಿದೆ.  ಸಮ್ಮು ಕೊನೆಯುಸಿರುಳೆಯುವ ಮುನ್ನ ಬೀರು ಅವನ ದೇಹದಿಂದ ಉಳಿಯನ್ನು ಹೊರಗೆಳೆದು ನುಡಿಯುತ್ತಾನೆ : “ನಿಮ್ಮ ಇಂದ್ರಿಯಕ್ಕೆ ಹುಟ್ಟಿದ ಮಗನಾದರೆ ನೀವು ಮಾಡಿದ ಕೆಲಸ ನಾನು ಮಾಡಿಯೇನು” (ಕನರಾಡಿ ವಾದಿರಾಜ ಭಟ್ ೧೯೭೪ : ೧೮೪).

ಈ ಸಂದರ್ಭದ ತಂದೆ ಮತ್ತು ಮಗನ ನಡುವಣ ಸಂಘರ್ಷ ಹಾಗೂ ಅದಕ್ಕೆ ಪೂರಕವಾದ ಚಲನೆಗಳಿಗೆ ಒಂದು ಸಂಕೀರ್ಣ ತೇಜಸ್ಸಿರುವುದನ್ನು ಗುರುತಿಸಬಹುದು. ಕಾಯಾರ್ಥವಾಗಿ ಮತ್ತು ಮಾನ್ಯತೆಗಾಗಿ ತಂದೆ ಪೂರ್ವದಿಕ್ಕಿನತ್ತ ಚಲಿಸುವುದು, ಹಿರಿಯ ಪೀಳಿಗೆಯ ಸಿದ್ದಿಯ ಬಗ್ಗೆ ಕಿರಿಯರ ಬಿಚ್ಚುಮನಸ್ಸಿನ ಪಿತೃಘಾತಕವಾಗಬಹುದಾದ ಟೀಕೆ, ತಂದೆಯ ಉಪಕರಣ ಗಳನ್ನು ಮಗ ಕೈಗೆತ್ತಿಕೊಳ್ಳುವುದರ ಮೂಲಕ ಸೂಚಿತವಾದ ಒಂದು ಸಮುದಾಯದ ಕಲಾಪದ್ಧತಿಯ ಸಾತತ್ಯ, ಅವಿಮರ್ಶಕವಾಗಿ ಒಪ್ಪಿಕೊಳ್ಳದ ಸ್ಪರ್ಧಾಮನೋಬಾವವನ್ನು ಪ್ರೇರೇಪಿಸುವ ಗುಣಮಟ್ಟದ ಬಗೆಗಿನ ಕಾಳಜಿ – ಹೀಗೆ ಅತ್ಯಂತ ವ್ಯಾಪಕವಾದ ಧ್ವನಿತರಂಗ ಗಳನ್ನು ಇಲ್ಲಿ ಗಮನಿಸಬಹುದಾಗಿದೆ.

ಈ ಪಾಡ್ದನದಲ್ಲಿ ಬರುವ ಎರಡನೆಯ ಸಂಘರ್ಷ ಬೀರು ಅಚ್ಚವ ಮತ್ತು ಅವನ ಆಶ್ರಯದಾತ ದೊರೆ ಬೈರಸೂಡವ – ಇವರ ನಡುವೆ ಕಾರ್ಕಳದಲ್ಲಿ ನಡೆಯುತ್ತದೆ. ಗೊಮ್ಮಟನ ಮೂರ್ತಿಯನ್ನು ಕೆಡೆದು ಮುಗಿಸಿದ ಬೀರು ತನಗೆ ಬರಬೇಕಾಗಿದ್ದ ಪ್ರತಿಫಲ ವನ್ನು ಕೇಳುತ್ತಾನೆ. ತೋರಿಕೆಗೆ ಯುವಶಿಲ್ಪಿಯನ್ನು ಅಭಿನಂದಿಸುವ ಸಲುವಾಗ ದೊರೆ ಕರೆದ ಸಭೆಯಲ್ಲಿ ಒಂದು ಘೋರ ದೃಶ್ಯ ನಡೆದು ಹೋಗುತ್ತದೆ : “ಬಂಗಾರದ ಬಳೆ ನಿನಗೆ ಬಹುಮಾನವೆಂದು ಬಲದ ಕೈ ತೆಗೆದರು. ಕಾಲಿಗೆ ಕಡವು ಎಂದು ಎಡಗಾಲು ತೆಗೆದರು ” (ಕನರಾಡಿ ವಾದಿರಾಜ ಭಟ್ ೧೯೭೪ : ೧೮೫).  ಪಿತೃಹತ್ಯೆಯ ಪಾಪ ಮಾಡಿದವರು ಶಿಕ್ಷೆ ಅನುಭವಿಸುವುದು ಅನಿವಾರ್ಯ ಎಂದು ದೊರೆ ತನ್ನನ್ನು ಸಮರ್ಥಿಸಿಕೊಳ್ಳುತ್ತಾನೆ. ಆದರೆ ಈ ಘಟನೆಯ ಹಿಂದೆ ಬೇರೆ ಆಶಯಗಳೂ ಇರುವುದನ್ನು ಗಮನಿಸಬಹುದು. ಬೀರು ಅಚ್ಚವನ ಕೈಕಾಲು ಕಡಿಯುವುದರ ಮೂಲಕ ತನ್ನಲ್ಲಿರುವಂಥ ಶ್ರೇಷ್ಠ ಕಲಾಕೃತಿ ಬೇರೆ ಕಡೆ ಇನ್ನೊಮ್ಮೆ ಸೃಷ್ಟಿಯಾಗದಂತೆ ದೊರೆ ನೋಡಿಕೊಳ್ಳುತ್ತಾನೆ. ಕ್ರೂರಿಗಳೂ ಐಲುತನದವರೂ ಆಗಿರುವ ಆಳುವವರ ಮರ್ಜಿಯನ್ನು ಅವಲಂಬಿಸಿಯೇ ಕಲಾವಿದರು ಬದುಕಬೇಕಾದ ಸ್ಥಿತಿ ಇಲ್ಲಿ ಧ್ವನಿತವಾಗುತ್ತದೆ. ಬೆಳ್ಕುಳದ ಘಟನೆ ಮತ್ತು ಕಾರ್ಕಳದ ಘಟನೆಗಳನ್ನು ಕಾರ್ಯ – ಕಾರಣ ಹಾಗೂ ಅಪರಾಧ – ಶಿಕ್ಷೆಗಳ ನೆಲೆಯಲ್ಲಿ ಸಂಬಂಧಿಸಿ ನೋಡಬಹುದು. ಇದಲ್ಲದೆ ಅವುಗಳ ನಡುವೆ ಆಶಯದ ನೆಲೆಯಲ್ಲೂ ಇನ್ನೊಂದು ಸಂಬಂಧವನ್ನು ಕಾಣಬಹುದು. ವ್ಯಕ್ತಿಯನ್ನು ಮೀರಿನಿಂತ ಕಲೆಯ ಆಶಯಕ್ಕಾಗಿ ಕಲಾವಿದನ ವ್ಯಯ (expendable) ವಾಗುವುದು; ಕಲೆ ತನ್ನ ಮಟ್ಟವನ್ನು ಎತ್ತರಿಸಿಕೊಳ್ಳುವುದಕ್ಕಾಗಿ ವ್ಯಕ್ತಿಮಾಧ್ಯಮವಾದ ಕಲಾವಿದನ ಬಲಿಯನ್ನು ಒತ್ತಾಯಿಸುವುದು ಈ ಎರಡೂ ಘಟನೆಗಳ ಹಿಂದಿರುವ ಸಾಮಾನ್ಯ ಆಶಯ.

ಈ ಮೇಲಿನ ವಿಶ್ಲೇಷಣೆಯಲ್ಲಿ ಅತಿವಸ್ತುನಿಷ್ಠತೆಯನ್ನು ಮೀರಿ ಸಾಧ್ಯತೆಗಳನ್ನು ಅನ್ವೇಷಿಸುವ ಕಲ್ಪನೆಯ (speculative imagination) ಕೈವಾಡವಿರುವ ಅರಿವು ನನಗಿದೆ.  ಆದರೆ, ಒಂದು ಅಂಶವನ್ನು ಮರೆಯಬಾರದು : ಸಾಹಿತ್ಯದಲ್ಲಿ ಅನುಭವ/ಪ್ರತಿಮಾ ವಿಧಾನದಲ್ಲಿ ಸಂಘಟಿತವಾಗುವಾಗ ನಡೆಯುವ ಅಲ್ಲಿನ ವಿಶ್ಲೇಷಣಾ ಕ್ರಿಯೆ ಕೇವಲ ವಸ್ತುನಿಷ್ಠವಾಗಿರುವುದಿಲ್ಲ; ಕಲ್ಪನೆಯನ್ನು ಮೀರಿ ನಿಂತಿರುವುದಿಲ್ಲ. ಆದ್ದರಿಂದ ವಿಮರ್ಶೆ ಕವನದಿಂದ ಆರಂಭವಾಗಿ ಕವನಕ್ಕೆ ಹಿಂತಿರುಗುತ್ತದೆ ಎನ್ನುವುದನ್ನು ಮರೆಯದಿರುವವರಿಗೆ ವಿಮರ್ಶೆಯ ವಿಶ್ಲೇಷಣಾ ಪ್ರಕ್ರಿಯೆಯಲ್ಲಿ ಕನಿಷ್ಠ ಪ್ರಮಾಣದ ಕಲ್ಪನೆ (Speculation) ಅನಿವಾರ್ಯವೂ ಸಿಂಧುವಾದದೂ ಆಗಿರುತ್ತದೆ ಎನ್ನಬಹುದು.

ತನ್ನ ಕಳೆದುಹೋದ ಸಹೋದರನನ್ನು ಕಲ್ಲುರ್ಟಿ ಹುಡುಕುವಾಗ ನಡೆಸುವ ಚಲನವಲನಗಳಲ್ಲಿ ಬೇರೆ ಅಂಶಗಳು (theme) ಗೋಚರಿಸುತ್ತವೆ. ಮೊದಲನೆಯದಾಗಿ ಮಾತೃಪ್ರಧಾನ ವ್ಯವಸ್ಥೆಯಲ್ಲಿನ ಸಹೋದರ ಸಹೋದರಿಯರ ಸಂಬಂಧದ ವೈಶಿಷ್ಟ್ಯ. ಈ ಹಿನ್ನೆಲೆಯಲ್ಲಿ ಕೋಟಿ ಚನ್ನಯ ಪಾಡ್ದನದಲ್ಲಿನ ದಾರು ಮತ್ತು ಅವಳ ಅವಳಿ ಸೋದರರ ಅರ್ದ್ರವಾದ ಭೇಟಿ – ಆ ಪಾಡ್ದನದಲ್ಲಿನ ಕ್ರೌರ್ಯದ ಸರಣಿಯಿಂದ ಬಿಡುಗಡೆ ನೀಡುತ್ತದೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕಲ್ಲುರ್ಟಿ ಪಾಡ್ದನದಲ್ಲಿ ಬೀರುವಿಗೋಸ್ಕರ ಅವನ ತಂಗಿ ಕಲ್ಲುರ್ಟಿ ನಡೆಸುವ ದೀರ್ಘ ಹುಡುಕಾಟ ಹೃದಯಸ್ಪರ್ಶಿಯಾದ ಅಭಿಜ್ಞಾನ ದಲ್ಲಿ ಕೊನೆಗೊಳ್ಳುತ್ತದೆ. ಆಕೆಯ ಸೋದರನ ಕೈಕಾಲುಗಳನ್ನು ಕಡಿದು ಹಾಕಿರುವುದು ಮಾತ್ರವಲ್ಲ, ಆ ಸ್ಥಿತಿಯಲ್ಲಿಯೂ ಅವನು ವೇಣೂರಿನಲ್ಲಿ ಇನ್ನೊಂದು ಗೊಮ್ಮಟ ಮೂರ್ತಿ ಯನ್ನು ಕೆಡೆದಿದ್ದಕ್ಕಾಗಿ ಭೈರಸೂಡವ ಅವನಿಗೆ ಇನ್ನೂ ಹೆಚ್ಚಿನ ಶಿಕ್ಷೆ ನೀಡುವ ಬೆದರಿಕೆ ಹಾಕಿರುತ್ತಾನೆ. ಈ ಅಭಿಜ್ಞಾನದ ಆಘಾತ ಸೋದರಿಯ ಕೋಮಲ ಪ್ರೀತಿಯನ್ನು ಪ್ರತೀಕಾರಕ್ಕೆ ಪ್ರೇರೇಪಿಸುವಂಥ ಕ್ರೋಧವನ್ನಾಗಿ ಪರಿವರ್ತಿಸುತ್ತದೆ. ಆ ಸೋದರ – ಸೋದರಿಯರಿಗೆ ಭೌತಿಕ ವಾಗಿ ದೊರೆಯೊಂದಿಗೆ ಸ್ಪರ್ಧಿಸುವುದಕ್ಕೆ ಸಾಧ್ಯವಿಲ್ಲದಿರುವುದರಿಂದ ಅವರು ಅಲೌಕಿಕ ಜಗತ್ತನ್ನು (ಮಾಯೆ) ಪ್ರವೇಶಿಸಿ ಭೂತಗಳಾಗಿ ದೊರೆಯ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಈ ಅತಿಕ್ರಮಣ – ಮುಯ್ಯಿಗಳ ಚಕ್ರ ಮುಂದುವರೆದು ಕೊನೆಗೆ ಭೂತಗಳು ತೃಪ್ತರಾಗಿ ಸಂರಕ್ಷಕ ದೇವತೆಗಳಾಗುತ್ತವೆ. ಈ ಮೇಲಿನ ವಿಶ್ಲೇಷಣೆಯು ಕಲ್ಲುರ್ಟಿ, ಕಲ್ಕುಡಗಳ ಚಲನೆಗಳ ಸಂಕೀರ್ಣತೆಗಳನ್ನು ತೋರಿಸುವುದರ ಮೂಲಕ ಸಂಬಂಧಪಟ್ಟ ಪಾಡ್ದನಗಳ ಗುಣಮಟ್ಟವನ್ನು ದೃqsಕರಿಸುತ್ತದೆ. ಈ ಕಲ್ಲುರ್ಟಿ, ಕಲ್ಕುಡ ಚಕ್ರದಲ್ಲಿರುವ ಚಲನೆಯನ್ನು ಕುರಿತ ಚರ್ಚೆ ಯನ್ನು ಮುಗಿಸುವ ಮುನ್ನ ಈ ಪಾಡ್ದನದ ಒಂದು ಅವೃತ್ತಿಯಲ್ಲಿರುವ ಕೃಷ್ಣ ಮತ್ತು ಕಲ್ಲುರ್ಟಿಯರ ಭೇಟಿಯನ್ನು ಪ್ರಸ್ತಾಪಿಸಬಹುದು. ಕೃಷ್ಣ ತಾನು ಕಲ್ಲುರ್ಟಿಯ ಸೋದರ ಬೀರು ಎಂದು ಹೇಳಿಕೊಂಡು ಅವಳನ್ನು ಮುಟ್ಟುತ್ತಾನೆ. ಆದರೆ ಕಲ್ಲುರ್ಟಿ ತಕ್ಷಣ ಮೋಸಗಾರನನ್ನು ಗುರುತಿಸುತ್ತಾಳೆ. ಸೋದರನಿಗಾಗಿ ಹುಚ್ಚಾಗಿದ್ದವಳು ತನ್ನನ್ನು ಹೇಗೆ ಗುರುತಿಸಿದಳೆಂದು ಕೃಷ್ಣ ಕೇಳಿದಾಗ ಅವಳು ಸಿಡಿದು ಹೇಳುತ್ತಾಳೆ : “ನೀವು ನಾಟಕದವರು, ನಿಮ್ಮ ಹಾಗೆಯೆ ನಾನು ಕಪಟ ನಾಟಕದವಳು! ನೀವು ಹೋಗಿ ವಸಂತದಲ್ಲಿ ಓಲಗವಾಗಿ, ನಾನು ಹೋಗುತ್ತೇನೆ ಅಣ್ಣನೆ ಹುಡುಕಾಟಕ್ಕೆ ಎಂದಳು” (ಈರ್ ಕಪಟನಾಟಕದಾರ್, ಈರೆ ಲೆಕ್ಕಣೆ ಯಾನ್ ಕಪಟ ನಾಟಕದಾಳ್. ಈರ್‌ಪೋಲೆ ವಸಂತೊಡು ಓಲಗಾಲೆ, ಯಾನ್ ಪೋಪೆ ಅಣ್ಣೆರೆ ನಾಟೊಗು ಪಂಡೊಲ’) (ಕನೆರಾಡಿ ವಾದಿರಾಜ ಭಟ್ ೧೯೭೪ : ೧೨೩ – ೨೪). ಇಲ್ಲಿ ಕೃಷ್ಣ ಕಲ್ಲುರ್ಟಿಯರ ಸಮಾನತೆ ಸಾಂದರ್ಭಿಕವಾಗಿ ಪ್ರತಿಪಾದಿತವಾಗಿದೆ. ಈ ಪ್ರತಿಪಾದನೆಯು, ಸಾಮಾನ್ಯವಾಗಿ ಪರಂಪರೆಯನ್ನು ತೃಪ್ತಿಗೊಳಿಸುವ ತುಳು ಜಾನಪದ ಅದಕ್ಕೆ ಭಿನ್ನವಾಗಿ ಸಂಸ್ಕೃತಿ ವಿರೋಧಿ ಪ್ರತಿಹೇಳಿಕೆಗಳನ್ನೂ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.

ನಾಗಸಿರಿ ಪಾಡ್ದನದಲ್ಲಿ ಈ ಬಗೆಯ ಸಮಾನೆತೆ ಇಷ್ಟು ಸಾಂದರ್ಭಿಕವಾಗಿರದೆ ಇನ್ನಷ್ಟು ವಿಸ್ತಾರವಾಗಿ ಪ್ರತಿಪಾದಿತವಾಗಿದೆ. ಈ ಪಾಡ್ದನದಲ್ಲಿ ಮುಖ್ಯ ಚಲನೆ ಊರ್ಧ್ವಮುಖವಾಗಿದೆ.  ತುಳುನಾಡಿಗೆ ಮೂಲವಾಗಿರುವ ನಾಗವಂಶದ ಅಂತಸ್ತನ್ನು ಏರಿಸುವುದಕ್ಕಾಗಿ ದೇವಕನ್ಯೆ ಯೊಬ್ಬಳನ್ನು ಹುಡುಕುವುದು, ಬ್ರಹ್ಮಲೋಕಕ್ಕೆ ನಡೆಯುವ ಈ ಊರ್ಧ್ವಮುಖ ಚಲನೆಯ ಉದ್ದೇಶ. ಸಾಕಷ್ಟು ಚೌಕಾಶಿಯ ಅನಂತರ ಒಂದು ಸಂಬಂಧ ಏರ್ಪಡುತ್ತದೆ. ಅ ವಧು ಬ್ರಹ್ಮಪುತ್ರಿ ನಾಗಸಿರಿ. ಅವಳು ತನ್ನ ಗಂಡ ದುಗ್ಗಣ ರಾಜನ ಆಪ್ತಸ್ನೇಹಿತನಾದ ಉಡುಪಿಯ ಕೃಷ್ಣನನ್ನು ಎದುರಿಸಬೇಕಾಗುತ್ತದೆ. ಮದುವೆಯಾದ ಸ್ವಲ್ಪ ಸಮಯದ ಅನಂತರ ಆ ಗೆಳೆಯ ರಿಬ್ಬರೂ ಉಡುಪಿಯಲ್ಲಿ ಸಿಂಹಾಸನದ ಮೇಲೆ ಒಟ್ಟಿಗೆ ಕುಳಿತಿರುವುದನ್ನು ಪಾಡ್ದನ ಹೇಳುತ್ತದೆ. ಆಗ ತನ್ನ ಸ್ನೇಹಿತನ ಹೆಂಡತಿಯನ್ನು ವಿಧವಿಧವಾಗಿ ಪರೀಕ್ಷಿಸುವ ನಿರ್ಧಾರವನ್ನು ಸ್ವತಃ ಕೃಷ್ಣನೇ ಕೈಗೊಳ್ಳುವುದು ಅನಿರೀಕ್ಷಿತವೇನಲ್ಲ. ಪಾಡ್ದನದ ಕೊನೆಯ ದೃಶ್ಯದಲ್ಲಿ ಕೃಷ್ಣನೆ ಎಲ್ಲಾ ಪರೀಕ್ಷೆಗಳಲ್ಲಿ ಗೆದ್ದ ನಾಗಸಿರಿ ಜ್ವಾಲೆಯ ನಡುವೆ ಸ್ವಲ್ಪವೂ ಘಾಸಿಗೊಳ್ಳದೆ ಮಲಗಿರುತ್ತಾಳೆ. ಸ್ವತಃ ಕೃಷ್ಣನೇ ಜೊತೆಯಲ್ಲಿರುತ್ತಾನೆ. ತಂಟೆಕೋರ ಕೃಷ್ಣನಿಗೆ ಅವಳು ಬಳಸುವ ಗುಣವಾಚಕಗಳು ಕೃಷ್ಣನನ್ನು ಕುರಿತ ಕಲ್ಲುರ್ಟಿಯ ಕೆಣಕು ಮಾತುಗಳಿಗಿಂತ ಭಿನ್ನವಾಗಿವೆ. ಆದರೆ ವಾಸ್ತವವಾಗಿ ಇವರಿಬ್ಬರ ಮಾತುಗಳು ಸ್ಥಳೀಯ ದೇವತೆಗಳ ಮೇಲೆ ಆರ್ಯ ದೇವತೆಗಳು ನಡೆಸುವ ಅಧಿಪತ್ಯವನ್ನು ಪ್ರಶ್ನಿಸುವಂಥವು. ಇಲ್ಲಿ ಕಾಣುವ ಸಮಾನತೆ ತುಳು ಜನಪದದಲ್ಲಿ ಭೂತಗಳು ಸಾಮಾನ್ಯವಾಗಿ ಅರ್ಯ ದೇವತೆಗಳ ಪ್ರಭುತ್ವವನ್ನು ಒಪ್ಪಿಕೊಂಡು ಮಾಡುವ ರಾಜಿಯ ಧಾಟಿಯದಲ್ಲ. ದೇವತೆಗಳಲ್ಲಿ ಮತ್ತು ಮುನುಷ್ಯರಲ್ಲಿ ರುವ ಜಾತಿ ಮೇಲ್ಮೆಯ ಸರಣಿಯನ್ನು ಎತ್ತಿ ಹಿಡಿಯುವಂತೆ ಕಾಣುವ ತುಳು ಜನಪದ ಸಾಹಿತ್ಯ ಅದನ್ನು ತಲೆಕೆಳಗೂ ಮಾಡಬಲ್ಲುದು, ಕಡಿಮೆ ಪ್ರಮಾಣದಲ್ಲಿರುವ ಪಕ್ಷಪಾತಗಳ ಪರಿಸರವನ್ನು ಹುಡುಕುವ ಸುಪ್ತ ಆಶಯದ ಪರೋಕ್ಷ ಅಭಿವ್ಯಕ್ತಿ ತುಳು ಜನಪದದಲ್ಲಿ ಕಂಡುಬರುತ್ತದೆ.

ಹೋಲಿಕೆ ಮತ್ತು ವಿಶ್ಲೇಷಣೆಗಳಿಗಾಗಿ ತುಳು ಸಾಹಿತ್ಯದ ಹೊರಗೆ ಕಣ್ಣು ಹಾಯಿಸಿದಾಗ ಅದರ ಅತ್ಯಂತ ಸಮೀಪದಲ್ಲಿರುವ ಜ್ಞಾತಿಭಾಷೆಯಾದ ಕನ್ನಡದಲ್ಲಿ ಸಂಗತ ಸಾಮ್ಯಗಳು ದೊರೆಯುತ್ತವೆ. ಈ ಸಂದರ್ಭದಲ್ಲಿ ಪಂಜುರ್ಲಿ ಪಾಡ್ದನದ ಒಂದು ಪಾಠದಲ್ಲಿ ಕಂಡು ಬರುವ ಪರ್ನಾಮ ಎಂಬ ಅಪರೂಪದ ಪದದ ಕಡೆ ಗಮನ ಹರಿಸಬಹುದು. ಕಾಡುಹಂದಿ ಯೊಂದು ಮರಿಹಾಕುವುದರ ಸಲುವಾಗಿ ಬಯಲು ಪ್ರದೇಶಕ್ಕೆ ಬರುತ್ತದೆ. ಅದಕ್ಕೆ ಪ್ರಸವ ವೇದನೆ ಪ್ರಾರಂಭವಾದಾಗ ಶಿವ ಭೇಟೆ ನಾಯಿಗಳಿಗಾಗಿ ನಾಯಿದ ಮಲ್ಲೋಡಿ ಬಳಿಗೆ ಧೂತನೊಬ್ಬನನ್ನು ಕಳುಹಿಸುತ್ತಾನೆ. ದೂತ ಘಟ್ಟದ ಮೇಲಿನ ಮಾವಿನತೋಪಿಗೆ ಬಂದಾಗ ಮಧ್ಯಾಹ್ನದ ಊಟ ಮುಗಿಸಿ ಮಲ್ಲೋಡಿ ಮಲಗಿರುತ್ತಾನೆ. ಅವನ ನಿದ್ರೆ ಮಧ್ಯಾಹ್ನದ ಮಂಪರಿನಂತಲ್ಲ, ಗಾಢನಿದ್ರೆ (‘ಪರ್ನಾಮದ ನಿದ್ರೆ’) ಯಾಗಿರುತ್ತದೆ. ಮಲ್ಲೋಡಿ ಈ ಜಗತ್ತನ್ನೇ ಮರೆತು ಮಲಗಿರುತ್ತಾನೆ. ಅವನನ್ನು ಎಬ್ಬಿಸುವ ಕಲೆಯನ್ನು ಅವನ ಪತ್ನಿ ದೂತನಿಂದ ತಿಳಿದುಕೊಳ್ಳುತ್ತಾಳೆ, ತನ್ನ ಗಂಡನನ್ನು ಪಂಚದರ್ಭೆಯ ಕೊನೆಯಿಂದ ಚುಚ್ಚುತ್ತಾಳೆ, ಸಿರಿಗಿಂಡೆಯಿಂದ ತಣ್ಣೀರನ್ನು ಎರೆಯುತ್ತಾಳೆ. ಇಷ್ಟಾದ ಮೇಲೆ ಮಲ್ಲೋಡಿ ತಟಕ್ಕನೆ ಚಿಮ್ಮಿ ಅಬ್ಬೆಗಾಲು (ಚಕ್ಕಾಳಬಕ್ಕಾಳ) ಹಾಕಿ ಕುಳಿತುಕೊಳ್ಳುತ್ತಾಳೆ.******* ಪಾಡ್ದನಗಳಲ್ಲಿ ಇಂಥವೇ ಕೆಲವು ಸಂದರ್ಭಗಳಲ್ಲಿ ಪರ್ನಾಮದ ನಿದ್ರೆ ಎಂಬ ಮಾತು ಬರುತ್ತದೆ. ತನ್ನ ಸುತ್ತಲಿನ ಅರಿವಿಲ್ಲದಂತೆ ಆನಂದದಲ್ಲಿ ಆಳವಾಗಿ ಮುಳುಗಿರುವ ವ್ಯಕ್ತಿಯ ಮನಃಸ್ಥಿತಿಯನ್ನು ಸೂಚಿಸಲು ಪರಿಣಾಮೀ ಎಂಬ ಪದವನ್ನು ಅಕ್ಕಮಹಾದೇವಿ ಬಳಸಿದ್ದಾಳೆ : ‘ಉಭಯ ಸಂಗವನು ಅರಿಯದೆ ಪರಿಣಾಮಿಯಾದೆನು’ (ಎಲ್. ಬಸವರಾಜು, ೧೯೬೯ : ೧೭೩). ಪಾಡ್ದನದಲ್ಲಿ ಬರುವ ಪರ್ನಾಮದ ನಿದ್ರೆ ಹಾಗೂ ವಚನದ ‘ಪರಿಣಾಮಿ’ಗಳ ನಡುವಣ ಅರ್ಥ ಸಾಮೀಪ್ಯ ಗಮನಾರ್ಹವಾಗಿದೆ. ಎರಡೂ ಕಡೆಗಳಲ್ಲಿ ಈ ಪದವನ್ನು ಹೆಚ್ಚು ಕಡಿಮೆ ತಾಂತ್ರಿಕವಾಗಿ ಬಳಸಲಾಗಿದೆ. ತುಳುವಿನ ಭೂತಾರಾಧನೆಯ ಸಾಹಿತ್ಯ ಮತ್ತು ಕನ್ನಡ ವಚನಗಳಿಂದ ಸಂವಹನವಾಗುವ ತಿಳುವಳಿಕೆ ಅಶಿಷ್ಟವಾದುದಲ್ಲ. ಪಾಡ್ದನ ಮತ್ತು ವಚನಗಳ ಭಾಷೆ ಆಡುಮಾತನ್ನು ಆಧರಿಸಿದೆ. ಅದು ಲಯಬದ್ಧವಾಗಿದ್ದರೂ ಪ್ರಾಸ, ಛಂದಸ್ಸುಗಳ ನಿಯಮಗಳಿಂದ ಮುಕ್ತವಾಗಿದೆ. ಪಾಡ್ದನಗಳು ವಚನಗಳ ಮತ್ತೊಂದು ರೂಪ ಎಂಬ ಎಂ. ಗೋವಿಂದ ಪೈ ಅವರ ಅಭಿಪ್ರಾಯವನ್ನು ಕನರಾಡಿ ವಾದಿರಾಜ ಭಟ್ಟರು ಸಮರ್ಥಿಸಿದ್ದಾರೆ (೧೯೭೪ : ೧೭). ಪಾಡ್ದನ ಮತ್ತು ವಚನಗಳಲ್ಲಿನ ಈ ಬಗೆಯ ಅರ್ಥ ಸಾಮೀಪ್ಯ ಮತ್ತು ಇತರ ಸಾದೃಶ್ಯಗಳು ಜನಪದದಲ್ಲಿ ಬಲವಾಗಿ ಬೇರುಬಿಟ್ಟಿದ್ದ ಹಾಗೂ ರಹಸ್ಯವಿದ್ಯೆಯ ಅರಿವಿದ್ದ ಯಾವುದೋ ಎರಡು ಗುಂಪುಗಳ ಸಾಂಕರ್ಯದಿಂದ ಕಾಣಿಸಿ ಕೊಂಡಿವೆ ಎಂದು ತೀರ್ಮಾನಿಸಲು ಸಾಧ್ಯವಾಗುವುದಿಲ್ಲ. ತುಳು ನಿಘಂಟು ಪೂರ್ಣ ಗೊಂಡಾಗ ತುಳು ಕನ್ನಡಗಳಲ್ಲಿರುವ ಇನ್ನಷ್ಟು ಸಮಾನಾರ್ಥ ಪದಗಳು ಬೆಳಕಿಗೆ ಬರಬಹುದು.

ತಂಗಿನ ಸುಳಿ(ತಿರಿ/ಸಿರಿ)ಗೆ ಸಂಬಂಧಿಸಿದಂತೆ ತುಳುನಾಡಿನಲ್ಲಿ ಪ್ರಸಿದ್ಧವಾಗಿರುವ ಧಾರ್ಮಿಕ ಆಚರಣೆಯ ಆಶಯ ದ್ರಾವಿಡ ಸಂಪ್ರದಾಯದ ಹೊರಗೂ ಹೋಲಿಕೆಗಳನ್ನು ಹುಡುಕುವಂತೆ ಪ್ರೇರೇಪಿಸುತ್ತದೆ. ಪಶ್ಚಿಮ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸ್ತೋಮ ಉಲಿತಿಯಲ್ಲಿನ ಜನಪದ ಕಥೆಗಳನ್ನು ಸಂಗ್ರಹಿಸಿರುವ ವಿಲಿಯಂ ಎಲೆನ್ಸಾ (೧೯೭೬) ಅವರು ಉಲಿತಿ ಜನಪದ ಸಂಪ್ರದಾಯದಲ್ಲಿರುವ ತೆಂಗಿನ ಸುಳಿಯ ಉಪಯೋಗಗಳನ್ನು ವಿವರಿಸಿದ್ದಾರೆ. “ತೆರೆದು ಕೊಳ್ಳುವ ಮೊದಲು ಹೊರಗೆ ಕಾಣಿಸಿಕೊಳ್ಳುವ ಬಿಳಿಯ ತೆಂಗಿನ ಸುಳಿಯನ್ನು ಉಲ್ಬತ್ ಎನ್ನುತ್ತಾರೆ.  ಆಲಂಕರಿಸಿಕೊಳ್ಳುವುದಕ್ಕಲ್ಲದೆ ಯಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಅದನ್ನು ಕಟ್ಟುವ ಮೂಲಕ ನಿರ್ದಿಷ್ಟ ಮಾಂತ್ರಿಕ ಶಕ್ತಿಯನ್ನು ನೀಡುವುದಕ್ಕೆ ತೆಂಗಿನ ಸುಳಿಯ ಎಳೆಗರಿಗಳನ್ನು ಬಳಸುತ್ತಾರೆ.” ತುಳು ವಿಧ್ಯುಕ್ತ (ritualistic) ರಂಗಭೂಮಿಗೆ ಸಂಬಂಧಿಸಿದ ಭೌಗೋಳಿಕ – ಪೌರಾಣಿಕ ವಲಯಗಳನ್ನು ಅನ್ವೇಷಿಸುವ ಯೋಜನೆಯನ್ನು ಜನಪದ ಸಂಪ್ರ ದಾಯಗಳನ್ನು ವಿಶೇಷವಾಗಿ ಅಧ್ಯಯನ ಮಾಡುವ ಸಂಸ್ಥೆಗಳು ಕೈಗೆತ್ತಿಕೊಳ್ಳಬಹುದಾಗಿದೆ.

ಈ ಲೇಖನದಲ್ಲಿ ಈಗಾಗಲೇ ಸ್ಪಷ್ಟಪಡಿಸಿರುವಂತೆ ಈ ಬಗೆಯ ದೇಶಾನುಕ್ರಮ – ಏಕಕಾಲಿಕ ಅಧ್ಯಯನ ವಿಧಾನವು ಫಲಪ್ರದ ಖಂಡಾಂತರ (inter continental) ಹೋಲಿಕೆಗಳಿದ್ದಲ್ಲಿ ಅವನ್ನು ಅಧ್ಯಯನ ಮಾಡುವ ಸಾಹಸ ಮಾಡುತ್ತದೆ. ಈಗ ದೊರೆತಿರುವ ಆಧಾರಗಳ ಪ್ರಕಾರ ತುಳು ಸಾಹಿತ್ಯ ಚರಿತ್ರೆಯಲ್ಲಿ ಸಾಹಿತ್ಯವು ಮೌಖಿಕದಿಂದ ಲಿಖಿತ ಹಂತಕ್ಕೆ ಬರುವ ಸ್ಥಿತಿಯು ತಾಂತ್ರಿಕವಾಗಿ ತುಂಗನ ಬಾಗವತೊದೊಂದಿಗೆ ಪ್ರಾರಂಭ ವಾಗಿದ್ದರೂ ಈ ಪರಿವರ್ತನೆ ಇಂದಿಗೂ ಸಮರ್ಪಕವಾಗಿ ಆಗಿಲ್ಲ. ಈ ದಿಕ್ಕಿನಲ್ಲಿ ಕಳೆದ ಶತಮಾನದ ಉತ್ತರಾರ್ಧದಲ್ಲಿ ಪಾದ್ರಿಗಳು ಮಾಡಿದ ದೃಢಪ್ರಯತ್ನ ಮತ್ತು ೧೯೩೦ರ ದಶಕದ ಹಾಗೂ ಆಮೇಲೆ ಕಾಣಿಸಿಕೊಂಡ ಸಾಹಿತ್ಯ ಚಟುವಟಿಕೆಗಳ ಆನಂತರವೂ ಈ ಪ್ರಕ್ರಿಯೆ ಅಪೂರ್ಣವಾಗಿಯೇ ಉಳಿದಿದೆ, ಆರಂಭದ ಹಂತವೇ ಇನ್ನೂ ಪೂರ್ಣವಾಗಿಲ್ಲ ಎನ್ನಬಹುದು. ಈ ಪರಿವರ್ತನೆ ಆದಷ್ಟು ಬೇಗ ನಿರ್ಣಾಯಕವಾಗಿ ಕಾರ್ಯಗತವಾಗು ತ್ತದೆಂದು ಆಶಿಸಬಹುದು. ಆದರೆ ಒಂದು ಸಂಪ್ರಾದಯ ಸ್ಥಿರಗೊಂಡಿದೆ ಎಂದು ಹೇಳುವುದಕ್ಕೆ ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಮನಾರ್ಹ ಕೃತಿಗಳು ನಿರ್ಮಾಣವಾಗಿರಬೇಕು. ತುಳುವಿನ ಈ ದೀರ್ಘ ಪ್ರಸವವನ್ನು ಶೀಘ್ರವಾಗಿ ಹಾಗೂ ಸಲೀಸಾಗಿ ನೈಜೀರಿಯಾದಲ್ಲಿ ನಡೆದ ಮೌಖಿಕದಿಂದ ಲಿಖಿತಕ್ಕೆ ಆದ ಪರಿವರ್ತನೆ ಜೊತೆ ಹೋಲಿಸಿದಾಗ ಕಾಣುವ ವೈದೃಶ್ಯ ಅಚ್ಚರಿ ಹುಟ್ಟಿಸುತ್ತದೆ. ಈಗಾಗಲೇ ಅಭಿಜಾತ ಸಾಹಿತಿಯೆನಿಸಿಕೊಂಡಿರುವ ನೈಜೀರಿಯದ ಇಂಗ್ಲಿಷ್ ಕಾದಂಬರಿಕಾರ ಚಿನುವ ಅಚೇಬೆ (ಜ. ೧೯೩೦)ಯ ಉದಾಹರಣೆ ತುಳು ಸಾಹಿತ್ಯ ಸಂದರ್ಭದಲ್ಲಿ ಅಪ್ರಸ್ತುತವಾಗಲಾರದು. ನಮ್ಮ ಸಮಕಾಲಿನ ಸಾಹಿತಿ ಅಚೇಬೆ ಸೃಜನಶೀಲ ವಾಗಿ ಬಳಸಿಕೊಂಡ ವಾಚಿಕ ಆಕರದ ಮುಖ್ಯಭಾಗವೆಂದರೆ ಮುಖವಾಡ ಧರಿಸುವ ಭೂತಗಳ ವ್ಯವಸ್ಥೆಗೆ ಸಂಬಂಧಿಸಿದ ಆಚರಣೆಗಳು. ತುಳುನಾಡಿನ ಭೂತಗಳಂತೆಯೇ ನೈಜೀರಿಯದ ಇಬೊಲ್ಯಾಂದಿನ ಈ ಭೂತಗಳು ಜನಜೀವನದಲ್ಲಿ ಬಹುಮುಖ ಪಾತ್ರ ವಹಿಸುತ್ತವೆ. ಹಿಂದೆ ಆಫ್ರಿಕಾ ಖಂಡದಲ್ಲಿ ಈ ಬಗೆಯ ಮುಖವಾಡದ ಭೂತಗಳಿಗೆ ಎಂಥ ಬಿಕ್ಕಟ್ಟನ್ನೂ ನಿಭಾಯಿಸುವ ಕೌಶಲವಿತ್ತು. ಆದರೆ ತ್ವರಿತವಾಗಿ ಬದಲಾದ ಆಫ್ರಿಕಾದ ಸಂದರ್ಭದಲ್ಲಿ ಈ ಭೂತಗಳು ತಮ್ಮಷ್ಟೇ ಶಕ್ತರಾದ, ನಿಗೂಢರಾದ ಬಿಳಿಯ ಮನುಷ್ಯನೆಂಬ ಹೊಸಭೂತ ವನ್ನು ಎದುರಿಸ ಬೇಕಾಯಿತು. ಈ ಹೊಸ ಭೂತದ ಸ್ಥಳೀಯ ಪ್ರತಿನಿಧಿಗಳು ಮುಖವಾಡದ ಭೂತಗಳ ಪ್ರತಿನಿಧಿಗಳಷ್ಟೇ ಪ್ರತಾಪವುಳ್ಳವರಾಗಿದ್ದು ಜನರನ್ನು ಕಾಡತೊಡಗಿದರು. ಆಚೇಬೆಯ Arrow of God ಕಾದಂಬರಿಯಲ್ಲಿ ಕರಿಯ ಪೋಲಿಸನೊಬ್ಬ ಉಲು ದೈವದ ಮುಖ್ಯ ಆರ್ಚಕನಾದ ಎಜ್ಯೂಲುವನ್ನು ಬಂಧಿಸಲು ಬರುತ್ತಾನೆ. ಆದರೆ ಎಜ್ಯೂಲು ಈಗಾಗಲೇ ತನ್ನ ಬಂಧನವನ್ನು ಆಜ್ಞಾಪಿಸಿದ ಬಿಳಿಯ ಮನುಷ್ಯನನ್ನು ಭೇಟಿಮಾಡಲು ಹೊರಟ್ಟಿದ್ದಾನೆಂದು ಅವನಿಗೆ ತಿಳಿಯುತ್ತದೆ. ಆಗ ಎಜ್ಯೂಲುನ ಬಂಧುಗಳಿಗೆ ಪೋಲಿಸಿ ನವನು ಹೇಳುತ್ತಾನೆ : “ನಾವು ಸುಮ್ಮನೆ ಬರಿಗೈನಲ್ಲಿ ಬಂದು ಹೋಗುವವರಲ್ಲ, ಮುಖ ವಾಡದ ಭೂತ ನಿಮ್ಮಲ್ಲಿಗೆ ಬಂದಾಗ ನೀವು ಅದಕ್ಕೆ ಪಾದಕಾಣಿಕೆಗಳನ್ನಿಟ್ಟು ತೃಪ್ತಿ ಪಡಿಸುತ್ತೀರಿ. ಬಿಳಿಯ ಮನುಷ್ಯನ ಇಂದಿನ ಮುಖವಾಡದ ಭೂತ”. ಜನಪದ ಅಂಶವನ್ನು ವಿವೇಚನೆಯಿಲ್ಲದೆ ಅವಿಮರ್ಶಕವಾಗಿ ಸಾಹಿತ್ಯದಲ್ಲಿ ಬಳಸಬಾರದು, ನಿಜ. ಆದರೆ ಆಚೇಬೆ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡ ಎರಡನೆಯ ಪೀಳಿಗೆಯವನಾಗಿದ್ದರೂ ತನ್ನ ಆಫ್ರಿಕನ್ ಪಿತಾಮಹರ ಸಂಪ್ರದಾಯವನ್ನು ಯಾವಾಗಲೂ ವ್ಯಂಗ್ಯವಾಗಿಯೇ ನೋಡುವುದಿಲ್ಲ ಎಂಬುದನ್ನು ಮರೆಯುವಂತಿಲ್ಲ. ಅಚೇಬೆಯ ಕಾದಂಬರಿಯಲ್ಲಿ ಹೊಸ ಚಂದ್ರನನ್ನು ನೋಡಿದ ಆನಂತರ ಮುಖ್ಯ ಪೂಜಾರಿ ಮಾಡುವ ಪ್ರಾರ್ಥನೆಯ ನಿರೂಪಣೆ ತುಂಬ ಶಕ್ತಿಶಾಲಿ ಯಾಗಿದೆ :

ಉಲು ದೇವತೆಯೇ ಇನ್ನೊಂದು ಹೊಸ ಚಂದ್ರನನ್ನು ನೋಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಿನಗೆ ವಂದನೆ. ನಾನು ಪುನಃ ಪುನಃ ಅದನ್ನು ನೋಡುವಂತಾಗಲಿ. ಈ ಕುಟುಂಬ ಆರೋಗ್ಯ, ಸಮೃದ್ದಿಗಳನ್ನು ಹೊಂದಲಿ. ಈ ನಾಟಿಯ ಚಂದ್ರನ ಕೃಪೆಯಿಂದ ನಮ್ಮ ಆರು ಹಳ್ಳಿಗಳಲ್ಲಿ ಒಳ್ಳೆ ಬೆಳೆ ಬರಲಿ. ಗದ್ದೆಯಲ್ಲಿ ನಾವು ಹಾವು ಚೇಳುಗಳಿಂದ ಪಾರಾಗುವಂತಾಗಲಿ.  ಮಚ್ಚು, ಗುದ್ದಲಿಗಳಿಂದ ನಮ್ಮ ಮೊಣಕಾಲು ಮುರಿಯದಿರಲಿ. ನಮ್ಮ ಹೆಂಡಂದಿರು ಗಂಡು ಮಕ್ಕಳನ್ನು ಹಡೆಯಲಿ. ಮುಂದಿನ ಜನಗಣತಿಯಲ್ಲಿ ಸಂಖ್ಯೆ ಹೆಚ್ಚಾಗಲಿ. ಅದರಿಂದ ನಿನಗೆ ಕಳೆದ ವರ್ಷ ಯಾಮ್ ಹಬ್ಬದಲ್ಲಿ ನೀಡಿದ ಬರಿ ಕೋಳಿಯ ಬದಲು ಈ ಬಾರಿ ಹಸುವನ್ನು ಬಲಿಕೊಡುವಂತಾಗಲಿ. ಮಕ್ಕಳು ತಮ್ಮ ತಂದೆಯನ್ನು ಹೂಳಲಿ, ತಂದೆಯೇ ಮಕ್ಕಳನ್ನು ಮಣ್ಣುಮಾಡುವಂತಾಗದಿರಲಿ. ಎಲ್ಲ ಸ್ತ್ರೀಪುರುಷರೂ ಶುಭವನ್ನೇ ಕಾಣಲಿ. ಶುಭವು ನದೀಜನರಿಗೂ ಕಾಡಿನ ಮಕ್ಕಳಿಗೂ ಬರಲಿ.

ಭಾರತೀಯ ಮನಸ್ಸಿಗೆ ಮೇಲಿನ ಉದ್ದೃತ ಮಾತುಗಳು ಸಂವಾದಿ ಸ್ಮರಣೆಗಳನ್ನು ಪ್ರಚೋದಿಸುತ್ತವೆ. ನೈಜೀರಿಯದ ಲೇಖಕರು ಕೇವಲ ಮೂರು ದಶಕಗಳಲ್ಲಿ ಜೀವಂತ ವಾಗಿರುವ ಕೃತಿ ಸಮುದಾಯವನ್ನು ಸೃಷ್ಟಿಸಿದ್ದಾರೆ. ಅವು ಇಂಗ್ಲಿಷ್ ಮಾತನಾಡುವ ಜಗತ್ತಿನ ಜನರ ಮನಸ್ಸನ್ನೂ ಮಾರುಕಟ್ಟೆಯನ್ನೂ ಸೂರೆಗೊಂಡಿವೆ. ಮೌಖಿಕ ಪರಂಪರೆಯ ಆಕರ ವನ್ನು ಸೃಜನಶೀಲವಾಗಿ ಬಳಸಿಕೊಂಡಿರುವುದೇ ಈ ಲೇಖಕರ ಯಶಸ್ಸಿಗೆ ಕೀಲಿಕ್ಕೆಯಾಗಿದೆ. ತುಳು ಪಾಡ್ದನಗಳು ಸೃಜನಶೀಲ ಲೇಖಕರಿಗೆ ಮುಖ್ಯ ಆಕರವನ್ನೂ ಮಾದರಿಗಳನ್ನೂ ಒದಗಿಸುವುದಾಗಿದ್ದು ಇಂದಿಗೂ ತುಳು ಲೇಖಕರಿಗೆ ಪಾಡ್ದನಗಳೇ ಮುಖ್ಯ ಆಕರ ಹಾಗೂ ಮಾದರಿಯಾಗಿ ಮುಂದುವರೆದಿವೆ.

ಅನುವಾದ :
ಎನ್. ಶ್ರೀನಿವಾಸ ಉಡುಪ, ಎನ್. ಎಸ್. ಶ್ರೀಕಾಂತ
(ಆಯಾಮಗಳು ಕೃತಿಯಿಂದ ಆಯ್ದ ಲೇಖನ)