ಸಹ್ಯಾದ್ರಿ ಶ್ರೇಣಿಯಲ್ಲಿಯೇ ಅತ್ಯಂತ ಮನೋಹರವಾದ ಚಾರ್ಮಾಡಿ ಘಟ್ಟಗಳನ್ನು ದಾಟಿ ಧರ್ಮಸ್ಥಳ ಮತ್ತು ಕಾರ್ಕಳಗಳ ಹಸಿರುವನದಲ್ಲಿ ಹರಿದಾಡುತ್ತ ಮಣಿಪಾಲದ ಬೋರೆಗೆ ಬಂದಾಗ ಇಡೀ ಕರಾವಳಿಯ ದೃಶ್ಯ ಅನುರಣನವಾಗತೊಡಗಿತ್ತು. ದೂರದಲ್ಲಿ ತೆರೆತೆರೆಯಾಗಿ ಕಾಣುತ್ತಿದ್ದ ಕಪ್ಪು ಕಡಲು, ತಂಗಾಳಿಗೆ ಸುಯ್‌ಗುಡುತ್ತಿದ್ದ ತೆಂಗಿನವನ, ಹಾರುವ ಬೆಳ್ಳಕ್ಕಿ, ತೇಲುವ ಬೆಳ್ಮೋಡ ಕರಾವಳಿಯ ವೈಶಿಷ್ಟತೆಯನ್ನು ಮೆರೆಯುತ್ತಿದ್ದವು.  ವಸಂತನಾಗಮನದಿಂದ ಪುಲಕಗೊಂಡಿದ್ದ ಮರಗಿಡಬಳ್ಳಿಗಳು ಚಿಗುರು ತುಂಬಿಕೊಂಡು ಪಡುವಣ ಸೂರ್ಯನ ಮಂದ ರಶ್ಮಿಯಲ್ಲಿ ಹೊಳಯ ತೊಡಗಿದ್ದವು. ಹೇಗಿದ್ದರೂ ಸೂರ್ಯ ಸ್ತದ ಸಮಯಕ್ಕೆ ಬಂದಿದ್ದೇವೆ. ಕಡಲಿನಲ್ಲಿ ಅವನು ನಿರ್ಮಿಸುವ ಹೊಸ ಲೋಕವನ್ನು ನೋಡಿಯೇ ಹೋಗೋಣವೆಂದುಕೊಂಡು ಅಲ್ಲೊಂದು ಕಡೆ ಕಾರು ನಿಲ್ಲಿಸಿ, ಸರಿಯಾದ ಸ್ಥಳದಲ್ಲಿ ಯೋಗಾಸನ ಕುಳಿತವರಂತೆ ಕುಳಿತೆವು. ರವಿಯ ಮುಖ ಗಂಗೆಯ ತುಟಿಯೆಡೆಗೆ ಬಾಗುತ್ತಿದ್ದಂತೆಯೆ ಗಂಗೆಯುಟ್ಟ ಸೀರೆಯ ಪ್ರತಿ ನೆರಿಗೆಯೂ ತೆರೆತೆರೆಯಾಗಿ ಬಿಚ್ಚಿಕೊಳ್ಳುತ್ತಾ ಚಿನ್ನದ ರಂಗು ತುಂಬಿಕೊಳ್ಳತೊಡಗಿತ್ತು. ರವಿಯನ್ನು ಆಲಂಗಿಸಿಕೊಳ್ಳುತ್ತಾ ತನ್ನಲ್ಲಿ ಲೀನ ಮಾಡಿಕೊಳ್ಳುತ್ತಿದ್ದ ಗಂಗೆ ಗೆಲುವು ಸಾಧಿಸತೊಡಗಿದಳು. ಪ್ರಕೃತಿ ರೂಪಿಣಿ ಗಂಗಾಮಾತೆಯ ಆವೇಶಕ್ಕೆ ಸಿಕ್ಕಿ ಬೆವರಿಳೆದು ಹೋದ ರವಿ ಕ್ರಮೇಣ ಅವಳಲ್ಲಿ ಕರಗಿಹೋದ. ಈ ಕಾರ್ಯ ಕರಾವಳಿಯಲ್ಲಿ ದಿನವೂ ಬಹಿರಂಗವಾಗಿಯೇ ನಡೆಯುತ್ತದೆ.

ಆ ದಿನ ಹುಣ್ಣಿಮೆ. ನನ್ನ ಬಂಧು ರವಿ ಲೀನವಾದರೇನಂತೆ, ಗಂಗೆಯನ್ನು ಮತ್ತಷ್ಟು ಹುಚ್ಚೆಬ್ಬಿಸಲು ನಾನಿದ್ದೇನೆ ಎಂಬಂತೆ ಶಶಿ ಪೂರ್ಣ ಪ್ರಮಾಣದಲ್ಲಿ ಹೊಳೆಯುತ್ತ ಉಂಡೆ ಉಂಡೆಯಾಗಿ ಮೇಲೇಳತೊಡಗಿದೆ. ಗಂಗೆಯ ಕಡೆ ದೃಷ್ಟಿ ಬೀರಿ ಗಹಗಹಿಸತೊಡಗಿದ.

ಆ ದಿನದ ವಸಂತ ಹುಣ್ಣಿಮೆ ಎಂದಿನ ಹುಣ್ಣಿಮೆಯಾಗಿರಲಿಲ್ಲ. ಆ ಹುಣ್ಣಿಮೆಯ ವಿಶೇಷಕ್ಕಾಗಿಯೇ ನಾವು ಉಡುಪಿ ಹತ್ತಿರದ ಹಿರಿಯಡ್ಕ ಗ್ರಾಮಕ್ಕೆ ಹೊರಟಿದ್ದೆವು. ಇಡೀ ಹಿರಿಯಡ್ಕ ಅಂದು ಹೊಸದಾಗಿ ಬೆಳಗುತ್ತಿತ್ತು. ಊರ ಜನ ಅಲ್ಪಸಂಖ್ಯಾತರಾಗಿ ಹೊರ ಊರಿನವರೇ ಬಹುಸಂಖ್ಯಾತರಾಗಿ ಮಿಂಚುತ್ತಿದ್ದ ಚೋದ್ಯ ಅಲ್ಲಿ ನಡೆದಿತ್ತು. ಅದರಲ್ಲಿಯೂ ಮಹಿಳಾ ಪ್ರಾಧಾನ್ಯತೆ. ಎಲ್ಲಿ ನೋಡಿದರೂ ಹೆಂಗಸರೇ. ಐವತ್ತಕ್ಕೂ, ನೂರಕ್ಕೋ ಒಬ್ಬ ಗಂಡಸು.

ಏಪ್ರಿಲ್ ತಿಂಗಳಿನ ಚೆಲ್ಲಿದ ತಿಂಗಳು ಬೆಳಕಿನಲ್ಲಿ ನಡೆಯುವ ಹಿರಿಯಡ್ಕದ ‘ಸಿರಿ’ ಜಾತ್ರೆ ಇಡೀ ದಕ್ಷಿಣ ಭಾರತದಲ್ಲಿಯೆ ವೈಶಿಷ್ಟ್ಯಪೂರ್ಣವಾದದ್ದು. ಸಾವಿರಾರು ಹೆಂಗಸರು ಸಾಮೂಹಿಕವಾಗಿ ದೈವಾವೇಶಕ್ಕೆ ಒಳಗಾಗುವ ಮತ್ತು ಇಡೀ ರಾತ್ರಿ ಕುಣಿದು, ಕಿರುಚಿ, ಎದ್ದು ಬಿದ್ದು ತನ್ನ ಮನದಾಳದ ಎಲ್ಲ ದುಗುಡವನ್ನು ಹೊರಚೆಲ್ಲುವ ರಾತ್ರಿ ಅದು. ದಕ್ಷಿಣ ಭಾರತದಲ್ಲೇನು ಬಹುಶಃ ಇಡೀ ದೇಶದಲ್ಲಿ ಈ ರೀತಿಯ ಆಚರಣೆ ಇರಲಾರದು. ಬಹುತೇಕ ಕೆಳವರ್ಗದ ಜನ ಮಾತ್ರ ಆಚರಿಸುವ ಈ ಸಿರಿ ದಕ್ಷಿಣ ಕನ್ನಡದ ಕೆಲವೆಡೆ ಈಗಲೂ ಆಚರಣೆಯಲ್ಲಿರುವ ಅಳಿಯಸಂತಾನದ ಹಿಂದಿನ ಮಾತೃಪ್ರಧಾನ ಕುಟುಂಬದ ಹಿನ್ನೆಲೆವುಳ್ಳದ್ದು. ಈ ಆಚರಣೆ ಅರ್ಥವಾಗಬೇಕಾದರೆ ಒಂದು ಕಥೆ ಹೇಳಲೇ ಬೇಕಾಗುತ್ತದೆ.

ತಮಿಳುನಾಡಿನ ಉತ್ತರ ಭಾಗಕ್ಕೆ ಸೇರಿದ ಲಂಕೆಲೋಕನಾಡಿನ ಸತ್ಯನಾಪುರದಲ್ಲಿ ಬೆರ್ಮ ಆಳ್ವ ಎಂಬ ವಯೋವೃದ್ಧನು ವಿಶಾಲವಾದ ಕೃಷಿ ಯೋಗ್ಯ ಜಮೀನು ಹಾಗೂ ಅನೇಕ ಒಕ್ಕಲುಗಳನ್ನು ಹೊಂದಿದ್ದನು. ಶ್ರೀಮಂತನಾಗಿದ್ದರೂ ಅವನಿಗೆ ಸಂತಾನ ಭಾಗ್ಯವಿರಲಿಲ್ಲ.  ಮುಂದೆ ನಿಂತು ಬೆಂಬಲಿಸುವ ಗಂಡು ಸಂತಾನವಿಲ್ಲ. ಹಿಂದೆ ನಿಂತು ಬೆಂಬಲಿಸುವ ಹೆಣ್ಣು ಸಂತಾನವಿಲ್ಲ. ಪಕ್ಕದಲ್ಲಿ ನಿಲ್ಲಬಲ್ಲ ಅಳಿಯಂದಿರಿಲ್ಲ, ಕಾಲಕೆಳಗೆ ಓಡಾಡಿಕೊಂಡಿರುವ ಮೊಮ್ಮಕ್ಕಳಿಲ್ಲ. ಹೀಗೆ ತನ್ನ ದುಃಸ್ಥಿತಿಯನ್ನು ಕುರಿತು ಹಲುಬುತ್ತಾ ತನಗೆ ಮಕ್ಕಳಾದರೆ ತನ್ನ ಸಂಪತ್ತನ್ನೆಲ್ಲಾ ಧಾನಧರ್ಮಗಳಿಗೆ ವಿನಿಯೋಗಿಸುವುದಾಗಿ ಹರಕೆ ಹೊರುತ್ತಾನೆ. ಒಂದು ದಿನ ಬ್ರಹ್ಮದೇವನು, ಅವನ ಮನೆ ಬಾಗಿಲಿಗೆ ಬೇಡುವನ ರೂಪದಲ್ಲಿ ಬರುತ್ತಾನೆ. ಅವನ ನಿಜಸ್ವರೂಪವನ್ನು ತಿಳಿಯದ ಬೆರ್ಮ ಆಳ್ವನು ತನ್ನ ಮನೆ ಕೆಲಸದಾಕೆಯಲ್ಲಿ ಭಿಕ್ಷೆ ನೀಡುವಂತೆ ಆಜ್ಞಾಪಿಸುತ್ತಾನೆ. ಕೆಲಸದಾಕೆಯ ಕೈಯಿಂದ ಭಿಕ್ಷೆಯನ್ನು ನಿರಾಕರಿಸಿದ ಅವನು ಯಜಮಾನನೇ ಖುದ್ದಾಗಿ ಬಂದು ನೀಡಬೇಕೆಂದು ಒತ್ತಾಯಿಸುತ್ತಾನೆ. ಬೆರ್ಮ ಆಳ್ವನು ಬಂದಾಗ ಅವನು ಖಿನ್ನವಾಗಿರುವುದರ ಕಾರಣ ಕೇಳುತ್ತಾನೆ. ಬೆರ್ಮ ಆಳ್ವನು ತನ್ನ ವ್ಯಥೆಯ ಕಾರಣವನ್ನು ಮುಂದಿರಿಸಿದಾಗ ತಿರುಕರೂಪಿಯಾದ ಬ್ರಹ್ಮನು “ಮೂಲಸ್ಥಾನವನ್ನು ಮರೆತು ಕುಲದೈವಗಳ ಗುಡಿಗಳನ್ನು ಪಾಳು ಬೀಳುವಂತೆ ಮಾಡಿ ಬಾಂಧವರ ಬೇಡಿಕೆಗಳನ್ನು ಪೂರೈಸದಿರುವ ಕಾರಣ ಕುಲದೈವಗಳು ಸಂತಾನಫಲವನ್ನು ನೀಡಿಲ್ಲ” ಎಂಬುದಾಗಿ ತಿಳಿಸಿದ.  ಸಮಸ್ಯೆಯ ಪರಿಹಾರಕ್ಕಾಗಿ ಕುಟುಂಬದ ಮೂಲಸ್ಥಾನ ಹಾಗೂ ಗುಡಿಗಳ ಜೀರ್ಣೋದ್ಧಾರ ಮಾಡುವಂತೆ ಬೆರ್ಮ ಆಳ್ವನಿಗೆ ಸೂಚಿಸಿದ.

ಬೆರ್ಮ ಆಳ್ವ ಅಪಾರ ಸಂಖ್ಯೆಯ ತನ್ನ ಒಕ್ಕಲು ಪರಿವಾರವನ್ನು ಕೂಡಿಕೊಂಡು ಲಂಕೆ – ಲೋಕನಾಡಿಗೆ ಬಂದು ಹಾಳುಬಿದ್ದ ತನ್ನ ಕುಟುಂಬದ ದೈವಗಳ ಗುಡಿಗಳನ್ನು ನಕರಿಸಿದ.  ತನ್ನ ಕುಲದೈವವಾದ ಬೆರ್ಮರ್ ಹಾಗೂ ಇತರ ದೈವಗಳಿಗೆ ಶ್ರದ್ಧಾಭಕ್ತಿಗಳಿಂದ ಉತ್ಸವಾ ಚರಣೆಗಳನ್ನು ನಡೆಸಿದ ಬೆರ್ಮೆರಿಗೆ ಅಡಿಕೆ ಮರದ ಹೂಗೊಂಚಲನ್ನು ಸಮರ್ಪಿಸಿ ತನ್ನ ಈವರೆಗಿನ ಮರೆವನ್ನು ಮನ್ನಿಸಬೇಕಾಗಿ ಬೇಡಿಕೊಂಡ. ಅಷ್ಟರಲ್ಲಿ ಆ ಬಂಗಾರದ ಹಾಳೆ ಬಿಚ್ಚಿಕೊಂಡು ಅದರಲ್ಲಿ ಹೆಣ್ಣು ಶಿಶುವೊಂದು ಕಾಣಿಸಿಕೊಂಡಿತು. ಸಂತೋಷ ಹಾಗೂ ಸತ್ಯದ ಪ್ರತೀಕವಾಗಿ ಜನಿಸಿದ ಆ ಮಗುವಿಗೆ ಮುದುಕ ‘ಸಿರಿ’ ಎಂಬುದಾಗಿ ನಾಮಕರಣ ಮಾಡಿದ.

ಲೋಕಸಾಮಾನ್ಯ ಬೆಳವಣಿಗೆಯನ್ನು ಮೀರಿ ಅತಿಶಯತೆಯನ್ನು ಮೆರೆದ ಸಿರಿಗೆ ಐದು ವರ್ಷವಾಗುತ್ತಲೇ ಮದುವೆಗೆ ಏರ್ಪಾಡು ನಡೆಸತೊಡಗಿದರು. ಕಡೆಯಂಗಡಿಯ ಕಾಂತ ಆಳ್ವನಿಗೆ ಬೆರ್ಮ ಆಳ್ವನು ಸಾಕಷ್ಟು ಭೂಮಿ ಕಾಣಿ ನಗನಾಣ್ಯಗಳ ಕೊಡುಗೆಯೊಂದಿಗೆ ಸಿರಿಯನ್ನು ಮದುವೆಮಾಡಿಕೊಟ್ಟನು. ಆದರೆ ಕಾಂತ ಆಳ್ವನು ಈ ಹಿಂದೆಯೇ ವೇಶ್ಯೆಯೊಬ್ಬಳ ಸಂಪರ್ಕ ಇರಿಸಿಕೊಂಡಿದ್ದನು. ಸಾದ್ವಿಯಾದ ಸಿರಿಯ ಸಹಜ ಸೌಂದರ್ಯ ಹಾಗೂ ಸತೀತ್ವಗಳು ವೇಶ್ಯೆಯಲ್ಲಿ ನೆಟ್ಟ ಕಾಂತ ಆಳ್ವನ ಮನಸ್ಸನ್ನು ಹಿಂದೆಗೆಸುವಲ್ಲಿ ವಿಫಲವಾದುವು. ಆತ ಸಿರಿಯ ಸಕಲ ಸಂಪತ್ತನ್ನು ಆ ವೇಶ್ಯೆಗಾಗಿ ಪೋಲು ಮಾಡಿದ. ಸಿರಿಯು ಗರ್ಭವತಿ ಯಾದಾಗ ಆಕೆಯನ್ನು ಮೊದಲ ಹೆರಿಗೆಗಾಗಿ ತವರುಮನೆಗೆ ಕಳುಹಿಸಬೇಕಾದ ಕರ್ತವ್ಯವನ್ನೂ, ಆಕೆಯನ್ನು ಕಳುಹಿಸಿಕೊಡುವ ಸಂದರ್ಭದಲ್ಲಿ ಗೌರವಿಸಿ ಆಚರಿಸಬೇಕಾದ ಸೀಮಂತವನ್ನು ಆತ ಏರ್ಪಡಿಸಲಿಲ್ಲ. ಎಂಟನೇ ತಿಂಗಳಿಗೆ ಸಿರಿ ತವರಿಗೆ ಬರದೆ ಹೋದಾಗ ಬೆರ್ಮ ಆಳ್ವನೇ ಬಂದು ವಿಚಾರಿಸುತ್ತಾನೆ. ಸೀಮಂತವನ್ನು ನಡೆಸುವಂತೆ ಕಾಂತ ಆಳ್ವನನ್ನು ಒತ್ತಾಯಿಸಿ, ಸಿರಿಯ ಸೀಮಂತದ ಸೀರೆಯ ಬೆಲೆಯನ್ನು ತಾನೇ ನೀಡತ್ತಾನೆ. ಕಾಂತ ಆಳ್ವನು ಒಂದು ಹೊಸ ಸೀರೆಯನ್ನು ಕೊಂಡುಕೊಂಡು ಅದನ್ನು ತನ್ನ ಸೂಳೆಗೆ ನೀಡಿ ಅವಳ ಒಂದು ಕಡುಬಣ್ಣದ ಸೀರೆಯನ್ನು ಸಿರಿಗೆ ಉಡುಗೊರೆಯಾಗಿ ತರುತ್ತಾನೆ. ಗಂಡನ ತಾತ್ಸಾರ ಹಾಗೂ ಅವಜ್ಞಿಯಿಂದ ಅವಮಾನಿತಳಾದ ಸಿರಿ ಒಬ್ಬಂಟಿಯಾಗಿ ತವರಿಗೆ ಬರುತ್ತಾಳೆ. ಸಿರಿ ತನ್ನಲ್ಲಿ ಹುಟ್ಟಿದ ಗಂಡು ಮಗುವಿಗೆ ‘ಕುಮಾರ’ ಎಂಬುದಾಗಿ ಹೆಸರಿಡುತ್ತಾಳೆ. ಹೆತ್ತ ಮಗುವನ್ನು ಕಂಡು ತನ್ನ ಮಗುವೆಂದು ಮಾನ್ಯ ಮಾಡಲು ಅದರ ತಂದೆ ಬಾರದೆ ಹೋದಾಗ ಕುಪಿತಳಾದ ಸಿರಿ ತನ್ನ ಗಂಡನ ಭೂಮಿ ಬಂಜರು ಬೀಳಲಿ, ಕುಟುಂಬ ನಿಸ್ಸಂತತಿಯಾಗಲಿ’ ಎಂದು ಶಪಿಸುತ್ತಾಳೆ.

‘ಬೆರ್ಮ ಆಳ್ವನು ಮಗುವಿನ ಮುಖ ನೋಡಿದಲ್ಲಿ ಅವನು ಒಡನೆಯೇ ಸಾಯುತ್ತಾನೆ. ತಂದೆ ಮನೋರೋಗಿಯಾಗುತ್ತಾನೆ. ತಾಯಿಗೆ ದೂರದ ಊರುಗಳಲ್ಲಿ ಭಿಕ್ಷೆ ಬೇಡುವ ದುಃಸ್ಥಿತಿ ಬರುತ್ತದೆ’ ಎಂಬುದಾಗಿ ಜೋಯಿಸರೊಬ್ಬರು ಮಗು ಹುಟ್ಟಿದ ಸಂದರ್ಭದಲ್ಲಿ ನುಡಿಯುತ್ತಾರೆ.  ಒಂದು ದಿನ ಕುಮಾರನನ್ನು ಮೀಯಿಸುತ್ತಿದ್ದ ಸಿರಿ, ತುಂಡು ಬಟ್ಟೆಗಾಗಿ ಆ ಕೋಣೆಯಿಂದ ಹೊರಬರುತ್ತಾಳೆ. ಮಗು ಕುಮಾರನೊಬ್ಬನೇ ಇದ್ದ ಬಚ್ಚಲಿನ ಬಾಗಿಲ ಬಳಿ ಹಾದುಹೋಗುತ್ತಿದ್ದ ಅಜ್ಜ ಬೆರ್ಮ ಆಳ್ವನಿಗೆ ಆಳುತ್ತಿದ್ದ ಮಗುವಿನ ದನಿ ಕೇಳಿಸುತ್ತದೆ.  ಸಹಜ ಸೆಳೆತದಿಂದ ಕೋಣೆ ಒಳಗೆ ಹೋದ ಅಜ್ಜ ಮಗುವನ್ನು ಎತ್ತಿಕೊಂಡು ಪ್ರೀತಿಯಿಂದ ಎದೆಗೆ ಒತ್ತಿಕೊಳ್ಳುತ್ತಾನೆ. ಸಿರಿ ಒಳಗೆ ಬಂದಾಗ ನೋಡುತ್ತಾಳೆ. ದುಃಖದ ಆವೇಗದಲ್ಲಿ ಸಿರಿ ಮಗುವನ್ನು ಎತ್ತಿಕೊಂಡು ಗೊತ್ತುಗುರಿಯಿಲ್ಲದೆ ಅಲೆಯತೊಡಗುತ್ತಾಳೆ. ಸಿರಿ ಈಗಾಗಲೇ ಗಂಡನೊಂದಿಗೆ ವಿಚ್ಛೇದನ ಮಾಡಿಕೊಂಡಿದ್ದಾಳೆ. ತನ್ನ ಬದುಕಿನ ಏಕೈಕ ಬಂಧು ಅಜ್ಜನನ್ನು ಕಳೆದುಕೊಂಡಿದ್ದಾಳೆ. ಬದುಕು ಭಾಗ್ಯಗಳೆಲ್ಲವನ್ನು ಆಕೆಯ ಗಂಡನ ವೇಶ್ಯೆ ಪೋಲು ಮಾಡಿದ್ದಾಳೆ.

ಸಿರಿ ತೆಂಕನಾಡಿನತ್ತ ಸಾಗುತ್ತಿರಲು ಇಬ್ಬರು ಕ್ಷತ್ರಿಯ ರರು ಆಕೆಗೆ ಎದುರಾಗುತ್ತಾರೆ.  ಮೊದಲೆಗೆ ಅವರಿಬ್ಬರೂ ಈಕೆಯನ್ನು ಬಯಸಿದರೂ ಆಕೆ ಸಾದ್ವಿ ಹೆಣ್ಣು ಎಂಬುದನ್ನು ಗುರುತಿಸಿಕೊಳ್ಳುತ್ತಾರೆ. ಆಕೆ ಅವರಿಬ್ಬರ ನೆರವನ್ನು ಯಾಚಿಸಿ ತನ್ನನ್ನು ಸಹೋದರಿಯಾಗಿ ಕಾಣಬೇಕೆಂದು ಭಿನ್ನವಿಸಿಕೊಳ್ಳುತ್ತಾಳೆ. ನೀವು ನನಗಿಂತ ಹಿರಿಯರಾಗಿದ್ದರೆ ತಂಗಿ ಎಂದು ಕರೆಯಿರಿ. ನನಗಿಂತ ಕಿರಿಯರಾಗಿದ್ದರೆ ಅಕ್ಕ ಎಂಬುದಾಗಿ ಕರಿಯಿರಿ” ಎನ್ನುತ್ತಾಳೆ. ಅವರು ಕೂಟ್ರಪಾಡಿಯ ಕೊಡ್ಸರಾಳ್ವನಲ್ಲಿಗೆ ಆಕೆಯನ್ನು ಕರೆತಂದು ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ‘ಕೈಪತ್ತಾವುನಿ’ ಎಂಬ ವಿಧಿಯ ಪ್ರಕಾರ ಮದುವೆಯಾಗುವುದರಿಂದ ಆ ಹಿಂದೆ ಮದುವೆಯಾಗಿದ್ದರೂ ದೋಷ ತಟ್ಟುವುದಿಲ್ಲ ಎಂಬುದಾಗಿ ಕೊಡ್ಸರಾಳ್ವ ಸಮಾಧಾನ ಹೇಳುತ್ತಾನೆ. ವರದಕ್ಷಿಣೆ, ಬ್ರಾಹ್ಮಣ ಪೌರೋಹಿತ್ಯ, ಊಟೋಪಚಾರ, ಬಂಧುವರ್ಗದವರ ಅನುಮತಿ ಯಾವುದೂ ಈ ತರದ ಮದುವೆಗೆ ಬೇಕಿಲ್ಲ.

ಕೊಡ್ಸರಾಳ್ವನಿಗೆ ಆ ಹಿಂದೆಯೇ ಮದುವೆಯಾಗಿತ್ತು. ಕೈಹಿಡಿದ ಹೆಂಡತಿಗೆ ಗಂಡನ ಮರುಮದುವೆಯ ಇರಾದೆ ತಿಳಿದೊಡನೆ ತಾವು ಹೊತ್ತಿಸಿಟ್ಟ ದೀಪವನ್ನು ಹೊಸದಾಗಿ ಮನೆ ಸೇರುವ ಹೆಣ್ಣು ಸಿರಿ ಕಂಡೊಡನೆ ಅವಳ ಕಣ್ಣು ಕುರುಡಾಗಲಿ ಎಂದು ಶಾಪಯುತ್ತಾಳೆ.  ಕೊಡ್ಸರಾಳ್ವನಿಗೆ ಮದುವೆಯಾದ ಸಂಗತಿ ಹಾಗೂ ಇದೀಗ ಮರುಮದುವೆಯಿಂದ ಮೊದಲ ಹೆಂಡತಿಯ ಮನಸ್ಸು ಕುಪಿತಗೊಳ್ಳಬಹುದಾದುದನ್ನು ಸಿರಿ ತನ್ನ ಅಂತರದೃಷ್ಟಿಯಿಂದ ಅರಿತುಕೊಳ್ಳುತ್ತಾಳೆ. ಕೈಹಿಡಿದ ಹೆಂಡತಿ ಈ ಮರುಮದುವೆಗೆ ಸಮ್ಮತಿ ಸೂಚಿಸಿ ತನ್ನನ್ನು ಮನೆಯೊಳಗೆ ಹಿಡಿದು ಕರೆದುಕೊಂಡು ಬಾರದೆ ತಾನು ಬರಲಾರನೆಂದು ಸಿರಿ ಕೊಡ್ಸರಾಳ್ವನಿಗೆ ಹೇಳುತ್ತಾಳೆ. ಸಿರಿಯ ಪ್ರಾಮಾಣಿಕತೆ ಹಾಗೂ ರುಜುಬುದ್ದಿ ಜೊತೆಗೆ ಅವಳ ದಯನೀಯ ಸ್ಥಿತಿಯನ್ನು ಕಂಡ ಮೊದಲ ಹೆಂಡತಿ ಸಿರಿಯನ್ನು ಮನೆಗೆ ಸ್ವಾಗತಿಸಿ ತನ್ನ ಸವತಿಯಾಗಿ ಸ್ವೀಕರಿಸಿಕೊಳ್ಳುತ್ತಾಳೆ.

ಕೊಡ್ಸರಾಳ್ವನ ಮನೆಯಲ್ಲಿ ಸಿರಿ ಎರಡನೆ ಬಸುರಿಯಾಗುತ್ತಾಳೆ. ಹೆರಿಗೆಯ ಕಾಲಕ್ಕಿಂತ ಸ್ವಲ್ಪ ಮೊದಲು ಆಕೆ ಕಾಡಿನ ಪಕ್ಕದಲ್ಲಿರುವ ಒಂದು ಅಡಿಕೆ ಮರದ ತೋಟದೆಡೆಗೆ ಹೋಗಿ ಅಲ್ಲಿ ಳೆಯದೆಲೆಯ ಹಾಸಿಗೆ ರಚಿಸುತ್ತಾಳೆ. ಮುಸ್ಸಂಜೆಯ ಹೊತ್ತಿಗೆ ಸಿರಿ ಅಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮಯುತ್ತಾಳೆ. ಆ ಮಗುವಿಗೆ ‘ಸೊನ್ನೆ’ ಎಂದು ಹೆಸರಿಡುತ್ತಾಳೆ. ಸಿರಿ ತಾನೇ ತನ್ನ ಹೆರಿಗೆಯ ಮಾಸನ್ನು ಮಣ್ಣಿನೊಳಗೆ ಹುಗಿದಿರಿಸುತ್ತಾಳೆ. ಆದರೆ ರಾತ್ರಿ ಹೊತ್ತು ನರಿಗಳು ಮಣ್ಣನ್ನು ಕೆದಕಿ ಅದನ್ನು ಹೊರಗೆಳೆದು ತಿನ್ನುತ್ತವೆ. ಇನ್ನು ಮುಂದಕ್ಕೆ ನರಿಗಳು ಆ ಪ್ರದೇಶದ ಸಮೀಪಕ್ಕೆ ಹೋಗದಂತೆ ಆಕೆ ಶಪಿಸುತ್ತಾಳೆ. ಮುಂಜಾವದಲ್ಲಿ ಆಕೆ ಆ ಪ್ರದೇಶದಲ್ಲಿ ಭತ್ತ, ತೆಂಗು ಧಾನ್ಯ, ವಿಳೀಯದೆಲೆಗಳು ಸಮೃದ್ಧವಾಗಿ ಬೆಳೆಯಲಿ ಎಂದು ಹರಸುತ್ತಾಳೆ. ಅನಂತರ ಸಿರಿ ಅದೃಶ್ಯಳಾದರೂ ಆಕೆ ದೈವವಾಗಿ ಆ ಪ್ರದೇಶವನ್ನು ಸಂರಕ್ಷಿಸುತ್ತಿದ್ದಾಳೆ ಎಂದು ನಂಬಲಾಗುತ್ತಿದೆ.

ಚಂದಯ್ಯ ಹೆಗ್ಗಡೆಯ ಮನೆಯಲ್ಲಿ ಸೊನ್ನೆ ಬೆಳೆದು ಮುಂದೆ ಉರ್ಕಿ ತೋಟದ ಗುರುಮಾರ್ಲನೊಂದಿಗೆ ಮದುವೆಯಾಗುತ್ತಾಳೆ.  ತಮಗೆ ಮಕ್ಕಳಾದರೆ ಬ್ರಹ್ಮನಿಗೆ ದೊಡ್ಡ ಹರಕೆ ಕೊಡುವುದಾಗಿ ದಂಪತಿಗಳು ಮನಸ್ಸಿನಲ್ಲಿ ಸಂಕಲ್ಪಿಸಿಕೊಳ್ಳುತ್ತಾರೆ. ಸೊನ್ನೆ ಬೇಗನೆ ಬಸೂರಿಯಾಗಿ ಅಬ್ಬಗ – ದಾರಗ ಎಂಬ ಅವಳಿ ಮಕ್ಕಳ ತಾಯಿಯಾಗುತ್ತಾಳೆ. ಕೌಟುಂಬಿಕ ಸುಖ – ಸಂತೋಷದ ಸಂಭ್ರಮದಲ್ಲಿ ಅವರು ಬೆರ್ಮನಿಗೆ ಹೇಳಿಕೊಂಡ ಹರಕೆಯನ್ನು ಮರೆಯುತ್ತಾರೆ. ಸೊನ್ನೆ ಹಾಗೂ ಗುರುಮಾರ್ಲರಿಗೆ ಬೆರ್ಮ ಭವಿಷ್ಯ ನುಡಿಯುವವನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. “ಆಡಿದ ಹರಕೆಯನ್ನು ಮರೆತುದಾದರೆ ಮುಂದೆ ತೀರ್ವ ವ್ಯಥೆಯನ್ನು ಅನುಭವಿಸಬೇಕಾಗಿಬರಬಹುದು.  ಪರಮಾತ್ಮನ ನೀಡಿದುದನ್ನು ಹಿಂದಕ್ಕೆ ತೆಗೆದುಕೊಳ್ಳುವ ಸಾಧ್ಯತೆಯು ಇದೆ. ಪರಸ್ಪರ ಜಗಳವೇ ಮಕ್ಕಳ ಪಥನಕ್ಕೆ ಹೇತುವಾಗಬಹುದು” ಎನ್ನುತ್ತಾನೆ. ಈ ಮಾತುಗಳಿಂದ ಸಿಟ್ಟುಗೊಂಡ ಗುರುಮಾರ್ಲ ಭವಿಷ್ಯ ನುಡಿದವನನ್ನು ಅಬ್ಬರಿಸಿ ಹೊರಟು ಹೋಗುವಂತೆ ಸೂಚಿಸಿದ.

ಸೊನ್ನೆ ಹಾಗೂ ಗುರುಮಾರ್ಲರು ಒಂದು ದಿನ ತಮ್ಮ ಅವಳಿ ಮಕ್ಕಳಿಗೆ ಜಗಳವಾಡದಿರೆ ಎಂದು ಎಚ್ಚರಿಸಿ ಮನೆಯಿಂದ ಹೊರ ಹೋಗುತ್ತಾರೆ. ಆಟದ ಸಂದರ್ಭಗಳಲ್ಲಿ ಅನೇಕ ಬಾರಿ ಪರಸ್ಪರ ಜಗಳವಾಡುತ್ತಿರುವುದನ್ನು ಬಲ್ಲ ತಂದೆತಾಯಿಂದಿರು ಹೆಣ್ಣು ಮಕ್ಕಳ ಪ್ರೀತಿಯ ಆಟದ ಚೆನ್ನೆಮಣೆಯನ್ನು ಭದ್ರವಾದ ಪೆಟ್ಟಿಗೆಯೊಳಗೆ ಇರಿಸಿ ಬೀಗ ಹಾಕಿ ಹೋಗುತ್ತಾರೆ.  ಅಷ್ಟರಲ್ಲಿ ಧರ್ಮನು ಬ್ರಾಹ್ಮಣನ ರೂಪದಲ್ಲಿ ಬಂದು ಪೆಟ್ಟಿಯೊಳಗಿನ ಚೆನ್ನೆಮಣೆಯನ್ನು ಮಕ್ಕಳಿಗೆ ತೆಗೆದುಕೊಟ್ಟು ಆಟವಾಡುವಂತೆ ಸೂಚಿಸುತ್ತಾನೆ.  ಆಟವಾಡುತ್ತಾ ಮಕ್ಕಳೊಳಗೆ ಜಗಳ ಹತ್ತಿತು. ಒಬ್ಬಳು ಮತ್ತೊಬ್ಬಳ ತಲೆಗೆ ಚೆನ್ನೆಮಣೆಯಿಂದ ಹೊಡೆಯುತ್ತಾಳೆ. ಆಕೆ ಕುಸಿದು ಬಿದ್ದು ಸಾಯುತ್ತಾಳೆ. ತನ್ನ ಕೈಯಿಂದ ಘಟಿಸಿಹೋದ ಅತ್ಯಂತ ಹೇಯವಾದ ಕೃತ್ಯದಿಂದ ನೊಂದು ಹಾಗೂ ತಂದೆ ತಾಯಿಂದಿರನ್ನು ಹೇದರಿಸುವ ಭಯದಿಂದ ತತ್ತರಿಸಿ ಇನ್ನೊಬ್ಬ ಹೆಣ್ಣು ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.  ತಂದೆ ತಾಯಿಂದಿರು ಮರಳಿದಾಗ ಆ ಬ್ರಾಹ್ಮಣನು ದೇವರಿಗೆ ಹೇಳಿದ ಹರಕೆಯನ್ನು ಮರೆತ ಫಲವಾಗಿ ಅವರು ನೀಡಿದುದನ್ನು ಮತ್ತೆ ಹಿಂದಕ್ಕೆ ಸೆಳೆದುಕೊಂಡಿದ್ದಾಗಿ ಹೇಳುತ್ತಾನೆ.  (ಪೀಟರ್ ಜೆ. ಕ್ಲಾಸ್. ತುಳುವ ದರ್ಶನ  ಅನು : ಎ. ವಿ. ನಾವಡ ಸುಭಾಶ್ಚಂದ್ರ)

ಈ ವಿಶಿಷ್ಟ ಆಚರಣೆಯನ್ನು ಈಗಾಗಲೇ ವಿದ್ವಾಂಸರಾನೇಕರು ಅಧ್ಯಯನ ಮಾಡಿದ್ದಾರೆ.  ಅವರಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಪೀಟರ್ ಜೆ. ಕ್ಲಾಸ್ ಪ್ರಮುಖರು. ಇತ್ತೀಚೆಗೆ ನಮ್ಮ ನಾಡಿನ ಅನೇಕ ವಿದ್ವಾಂಸರು ಈ ಬಗೆಗಿನ ವೈಜ್ಞಾನಿಕ ಅಧ್ಯಯನದಲ್ಲಿ ತೊಡಗಿದ್ದಾರೆ.  ಜಾತ್ರೆ ನಡೆಯುವ ಹಿರಿಯಡ್ಕದ ರಭದ್ರ ದೇವಸ್ಥಾನದ ಆವರಣಕ್ಕೆ ನಾವು ಹೋದಾಗ ಗುಡಿಯ ವಿಶಾಲ ಅಂಗಳದ ತುಂಬಾ ಬಿಳಿ ಕೆಂಪು ಹರಿಶಿನ ಬಣ್ಣದ ಉಡುಪುಗಳ ಮಹಿಳೆಯರ ಗುಂಪುಗಳು ಮುಡಿ ಬಿಚ್ಚಿ ಕೈಯಲ್ಲಿ ಹಿಂಗಾರ ಹಿಡಿದು ಯಾವುದೊ ವಿಧಿಗಾಗಿ ಕಾಯುತ್ತಾ ನಿಂತಿದ್ದರು. ಇವರಲ್ಲಿ ಹರಯದ, ಮದುವೆಯು ಆಗದ ತರುಣಿಯರಿಂದ ಹಿಡಿದು ಎಪ್ಪತ್ತರ ವಯಸ್ಸಿನ ವೃದ್ಧೆಯರು ಇದ್ದರು. ಹರೆಯದವರ ಕಣ್ಣುಗಳಲ್ಲಿ ಒಂದು ರೀತಿಯ ಅಪರಿಚಿತ ವಾತಾವರಣ ಬೆದರಿಕೆ ಇದ್ದರೆ, ವೃದ್ಧೆಯರು ಇದೆಲ್ಲವೂ ತುಂಬಾ ಸಾಮಾನ್ಯ ಎನ್ನುವಂತೆ ಲೀಲಾಜಾಲವಾಗಿದ್ದರು. ಅವರ ನಡುವೆ ಅಲ್ಲಲ್ಲಿ ಕೆಂಪು ವಸ್ತ್ರ ತೊಟ್ಟ ಗಂಡಸರು ಇರುತ್ತಾರೆ. ಈಗಾಗಲೇ ಇವರೆಲ್ಲರೂ ದೇವಸ್ಥಾನದ ಆವರಣ ದಲ್ಲಿರುವ ಕಲ್ಯಾಣಿಯಲ್ಲಿ ಸ್ನಾನಮಾಡಿ ಮಡಿವಸ್ತ್ರ ಧರಿಸಿ ಮೈದುಂಬಲು ಬಂದು ನಿಂತವರು ಅರ್ಥಾತ್ ಸಿರಿ, ಸೊನ್ನೆ, ಅಬ್ಬಗ ದಾರಗರಾಗಲು ನಿಂತವರು.

ಆಚರಣೆಯ ಮೊದಲ ಹಂತವೆಂದರೆ ಸಿರಿ ಕಥೆಯನ್ನು ನಿಧಾನವಾಗಿ ರೂಪಿಸುವ ತುಳು ಪಾಡ್ದನಗಳನ್ನು ಹಾಡ ತೊಡಗುವುದು. ಕಥೆಯನ್ನು ನಿರೂಪಿಸುತ್ತಾ ಹೋದಂತೆ ಸಿರಿಯ ಕಷ್ಟ ಕಾರ್ಪಣ್ಯ, ಅವಳ ಗಂಡನ ಅನಾಧಾರ, ಅವರ ಅಸಭ್ಯತೆ ಇವರ ಮನತುಂಬುತ್ತಾ ಹೋಗುತ್ತದೆ.  ಮೈ ಅದುರ ತೊಡಗುತ್ತದೆ.  ಹಾಗೇಯೇ ಇಡೀ ದೇಹ ತೂಗ ತೊಡಗುತ್ತದೆ. ಹಾಗೆಯೇ ಇಡೀ ದೇಹ ತೂಗ ತೊಡಗುತ್ತದೆ.  ಕ್ರಮೇಣವಾಗಿ ಆವೇಷ ಹೆಚ್ಚುತ್ತಾ ಹೋದಂತೆ ಪಾಡ್ದನ ಗೌಣವಾಗಿ ಕಿರುಚಾಟ ಹೆಚ್ಚಾಗುತ್ತದೆ. ನಾಲಿಗೆ ಮತ್ತು ತುಟಿಯ ನಡುವೆ ಟಿಸ್ ಟಿಸ್………. ಶಬ್ದದೊಡನೆ ಏಕಾಏಕಿ ಕೂಗಿಕೊಳ್ಳುವ ಕುಣಿಯುವ ಅವಸ್ಥೆಗೆ ತಲುಪುತ್ತಿ ದ್ದಂತೆ ಇನ್ನೇನು ಬೀಳುವ ಸ್ಥಿತಿಗೆ ಬಂದ ಮಹಿಳೆಯರನ್ನು ಸಂಬಂಧಿಕರು ಹಿಡಿಯುತ್ತಾರೆ.  ಹಿಡಿದಷ್ಟು ತಡೆದಷ್ಟು ಆವೇಷ ಹೆಚ್ಚುತ್ತದೆ.  ದೈವಾವೇಶಕ್ಕೆ ಒಳಗಾದವರು ಹೊಸಬರಾದರೆ, ವೃದ್ಧೆಯರು ಅಥವಾ ಗುಂಪಿನ ನಡುವೆ ಅಲ್ಲಲ್ಲಿ ಕಂಡುಬರುವ ಕೆಂಪು ವಸ್ತ್ರದ ಕುಮಾರರು ಹೊಸಬಳನ್ನು  ಪ್ರಶ್ನಿಸುತ್ತಾರೆ. “ಯಾರು ನೀನು? ಸಿರಿಯೋ, ಸೊನ್ನೆಯೊ, ಅಬ್ಬಗವೋ, ದಾರಗವೋ ಹೇಳು ಎಂದು ಒತ್ತಾಯಿಸುತ್ತಾರೆ.  ಬಡಪಟ್ಟಿಗೆ ಹೇಳದಿದ್ದರೆ ಬೆದರಿಸಿ ಕೇಳುತ್ತಾರೆ.  ಅವಳು ಯಾವುದಾದರೊಂದು ಹೆಸರು ಹೇಳುತ್ತಾಳೆ. ಅಲ್ಲಿಗೆ ಇವಳು ಇಂಥವಳೇ ಎಂದು ನಿರ್ದಿಷ್ಟಪಡಿಸಲಾಗುತ್ತದೆ. ಮುದಿನ ವರ್ಷದಿಂದ ಖಾಯಂ ಆಗಿ ಬರುವಂತೆ ಪ್ರಮಾಣ ಮಾಡಿಸಲಾಗುತ್ತದೆ.  ಆವೇಶ ಬಂದು ಕೂಗಿ ಬಾಗಿ ಸುಸ್ತಾಗಿ ನೆಲಕ್ಕೆ ಒರಗುತ್ತಾರೆ. ಮತ್ತೆ ಸಿರಿ ಐತಿಹ್ಯ ಪಾಡ್ದನವನ್ನು ಹಾಡಲಾಗುತ್ತದೆ.  ಹಾಡುತ್ತಾ ಹೋದಂತೆ ಬಸವಳಿದು ಬಿದ್ದ ಹೆಣ್ಣು ಮತ್ತೆ ಜೀವ ತುಂಬಿಕೊಳ್ಳುತ್ತಾಳೆ.  ಮತ್ತೆ ಆವೇಶಕ್ಕೆ ಒಳಗಾಗುತ್ತಾಳೆ.  ಕೈಯಲ್ಲಿ ರುವ ಹಿಂಗಾರದ ಅಕ್ಕಿ ಉದುರುವವರೆಗೂ ದೇಹವನ್ನು ನುಲಿಯುತ್ತಾಳೆ.  ಲಯಬದ್ಧವಾಗಿ ಕಿರುಚುತ್ತಾ ತನ್ನ ಆಚರಣೆಯನ್ನು ಮುಂದುವರೆಸುತ್ತಾಳೆ.

ಈ ತೆರೆನಾದ ಆವೇಶಭರಿತ ನೃತ್ಯ ಇಡೀ ರಾತ್ರಿ ನಡೆಯುತ್ತದೆ.  ಈ ಆಚರಣೆಯ ಹಿಂದಿನ ಮನೋಧರ್ಮವನ್ನು ಕೆದಕಿನೋಡಿದಾಗ ಅದರ ಹಿಂದಿನ ಕ್ರೂರ ಸತ್ಯ ನಮ್ಮನ್ನು ಕಲಕುತ್ತದೆ.  ಪುರುಷ ಪ್ರಧಾನ ಸಮಾಜದಲ್ಲಿನ ಹೆಣ್ಣಿನ ಗೊಳಿನ ಪ್ರಕಟಣೆಗೆ ಈ ಆಚರಣೆ ಮಾಧ್ಯಮವಾಗಿದೆ ಎಂಬ ಕಟು ಸತ್ಯದ ಅರಿವಾದಾಗ ಈ ಆಚರಣೆ ಕೇವಲ ಮೂಢನಂಬಿಕೆ ಆಗಿರದೆ ಸಾಮಾಜಿಕ ವ್ಯವಸ್ಥೆಯೊಂದರ ಪ್ರತೀಕವಾಗಿದೆ ಎಂದೆನಿಸುತ್ತದೆ.

(ಗಿರಿಜನ ನಾಡಿಗೆ ಪಯಣ ಕೃತಿಯಿಂದ ಆಯ್ದ ಲೇಖನ)