ತುಳು ಸಿರಿಕಾವ್ಯದ ಸಂಪಾದನದ ಹಿಂದಿನ ತಾತ್ವಿಕತೆ ಮತ್ತು ವೈಧಾನಿಕತೆಯನ್ನು ಕುರಿತು ಮಾತನಾಡುವ ಮುನ್ನ ಮೌಖಿಕ ಕಾವ್ಯದ ಸ್ವರೂಪ, ಕಾವ್ಯ ಸಂಯೋಜನ ಪ್ರಕ್ರಿಯೆಯ ಅನನ್ಯತೆ, ಸಂಪಾದನದ ಸಾಂಪ್ರದಾಯಿಕ ವಿಧಾನ ಮತ್ತು ಆಧುನಿಕ ವಿಧಾನದ ತಾತ್ವಿಕಾಂಶಗಳು, ಬಹುಮುಖೀ ದಾಖಲಾತಿಯ ಸ್ವರೂಪ ಹಾಗೂ ವೈಜ್ಞಾನಿಕತೆ, ಕಾವ್ಯಗಾಯಕ ಕವಿ ಹಾಗೂ ಸಂಶೋಧಕನ ಸಂಬಂಧ, ಕಾವ್ಯಕಟ್ಟುಗ/ಳ ಸಮಗ್ರ ಬದುಕಿನ ಪ್ರತಿಭಾ ವಿಶೇಷದ ಪರಿಶೀಲನೆ, ಲೋಕದೃಷ್ಟಿಯ ವಿವೇಚನೆ ಸಮಗ್ರವಾಗಿ ನಡೆಯಬೇಕಾಗಿದೆ. ಜನಪದ ಕಾವ್ಯ ಸಂಪಾದಕನಿಗೆ ಕಾವ್ಯದ ಶಾಬ್ದಿಕ ಪಠ್ಯವನ್ನು ಪಡೆಯುವುದಷ್ಟೇ ಗುರಿಯಾಗದೆ ಕಾವ್ಯದ ಬೃಹತ್ ಪಠ್ಯವನ್ನು ದಾಖಲಿಸಿಕೊಂಡು ಆ ಮೂಲಕವೇ ಅಮೂರ್ತವಾದ ಮಾನಸಿಕ ಪಠ್ಯವು ಗಾಯಕನಿಂದ/ಕವಿಯಿಂದ ಶಬ್ದಾವತರಣಗೊಂಡು ಮುಂದೆ ಅಕ್ಷರ ಸಂಕೇತಕ್ಕೊಳ ಗಾಗುವ ಪ್ರಕ್ರಿಯೆಯನ್ನು ಗಮನಿಸಬೇಕಾಗಿದೆ.

ಅಕ್ಷರ ಲೋಕಕ್ಕೆ ಹೊರತಾದ ಜಾನಪದ ಲೋಕದ ಕೆಲವೊಂದು ಪರಿಭಾಷೆಗಳನ್ನು ಮೊದಲಿಗೆ ನಿರ್ವಚಿಸಿಕೊಳ್ಳಬೇಕಾಗಿದೆ. ಜಾನಪದ ಅಧ್ಯಯನದಲ್ಲಿ ಪಠ್ಯ ಎಂದರೇನು, ಅದರ ಸ್ವರೂಪವೇನು ಎಂಬುದನ್ನು ಮೊದಲಿಗೆ ಖಚಿತಗೊಳಿಸಿಕೊಳ್ಳಬೇಕು. ಅಕ್ಷರ ಪ್ರಪಂಚದಲ್ಲಿ ಪಠ್ಯವೆಂದರೆ ಬರವಣಿಗೆಯ ರೂಪದಲ್ಲಿ ದಾಖಲು ಮಾಡಿಕೊಂಡಿರುವುದು ಎಂದು ತಿಳಿಯಲಾಗುತ್ತದೆ. ಫಿನ್ನಿಶ್ ಚಾರಿತ್ರಿಕ ಭೌಗೋಳಿಕ ವಿಧಾನದಲ್ಲಿ ಪಠ್ಯದ ಮೂಲ ರೂಪವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಿತು. ಪ್ರಾಚೀನವಾದ ಒಂದು ಪಠ್ಯ ಅಧಿಕೃತ ವಾದುದೆಂದೂ, ಉಳಿದ ಪಠ್ಯಗಳು ಅದರ ಭಿನ್ನರೂಪ ಅಥವಾ ರೂಪಾಂತರಗಳೆಂದೂ ತಿಳಿಯಲಾಗುತ್ತಿತ್ತು.  ಗ್ರಂಥ ಸಂಪಾದನ ಶಾಸ್ತ್ರದಲ್ಲಿ ಒಬ್ಬ ಕವಿಯ ಲಿಖಿತ ಪಠ್ಯದಲ್ಲಿ ಅತ್ಯಂತ ಪ್ರಾಚೀನವಾದ ಪಠ್ಯವೇ ಮೂಲಪಠ್ಯ ಅಥವಾ ಅಧಿಕೃತ ಪಠ್ಯ ಎಂಬ ಅಭಿಪ್ರಾಯ ವಿದೆ. ಮೂಲಪಠ್ಯ ಕಾಲಾನುಕ್ರಮದಲ್ಲಿ ಪ್ರತಿಕಾರರ ದೋಷದಿಂದಾಗಿ ಬದಲಾವಣೆಗೆ ಒಳಗಾಗುತ್ತಾ ಹೋಗುತ್ತದೆ. ಈ ಪಾಠಾಂತರಗಳ ತೌಲನಿಕ ಅಧ್ಯಯನದ ಮೂಲಕ ಮೂಲ ಪಾಠ ಅಥವಾ ಕವಿಪಾಠಕ್ಕೆ ಸಮೀಪವಾದ ಪಾಠವನ್ನು ಪುನರ್ರಚಿಸುವುದಕ್ಕೆ ಬೇಕಾದ ಎಲ್ಲ ವಿಧಾನಗಳನ್ನು ರೂಪಿಸಲಾಯಿತು. ಜಾನಪದ ಕ್ಷೇತ್ರದಲ್ಲಿ ಮೊನ್ನೆ ಮೊನ್ನಿನ ತನಕ ಪ್ರಾಚೀನ ಕಾಲದ ಶುದ್ಧರೂಪದ ಮೂಲ ಜಾನಪದವೊಂದು ಇದ್ದು ಅದು ಕಾಲಕಾಲಕ್ಕೆ ಕೈಗಾರಿಕೀ ಕರಣ, ನಗರೀಕರಣ ಹಾಗೂ ಸಾಂಸ್ಕೃತಿಕ ಮಿಶ್ರರೂಪದ ಮೂಲಕ ಅಪಮೌಲೀಕರಣಕ್ಕೆ ಒಳಗಾಗುತ್ತಿದೆ ಎಂಬ ಹಳಹಳಿಕೆ ಚಾಲ್ತಿಯಲ್ಲಿತ್ತು. ಹೀಗಾಗಿ ಗ್ರಂಥಸಂಪಾದನೆಯ ಎಲ್ಲ ವಿಧಿವಿಧಾನಗಳನ್ನು ಜಾನಪದಕ್ಕೆ ಅಳವಡಿಸಿ ಅಶಿಕ್ಷಿತರೂ ತಿಳಿವಳಿಕೆ ಇಲ್ಲದವರೂ ಆದ ಜನಪದರು ಕಿವಿಯಿಂದ ಕೇಳಿಸಿಕೊಂಡುದಲ್ಲಿ ಮಾನಸಿಕ ಸ್ತರದಲ್ಲಿ ಉಳಿಸಿಕೊಂಡು ಮತ್ತೆ ಗಂಟಲ ಮೂಲಕ ಒಪ್ಪಿಸುವಾಗ ವಿಕಾಸಗೊಳಿಸುತ್ತಾರೆಂದೂ ಅವರ ಜಾನಪದವನ್ನು ತಿದ್ದಿ ತೀಡಿ ಪರಿಷ್ಕರಿಸಿ ಪ್ರಕಟಿಸಬೇಕೆಂದೂ ಛಂದಸ್ಸಿಗೆ ಹೊಂದಿಸಿ ಪ್ರಕಟಿಸಿದರು.

ಜನಪದ ಕವಿಗಳು / ಕಲಾವಿದರು ಮಾನಸಿಕ ಪಠ್ಯದ ರೂಪದಲ್ಲಿ ತಮ್ಮಲ್ಲಿರುವ  ಜನಪದ ಪಠ್ಯವನ್ನು ಯಾವುದೇ ಬದಲಾವಣೆ ಇಲ್ಲದೆ ಒಪ್ಪಿಸುತ್ತಾರೆ., ಪುನರಾವೃತ್ತಿಸುತ್ತಾರೆ ಎಂದೂ ಹಾಗೇನಾದರೂ ಬದಲಾವಣೆ ಆದರೆ ಅದಕ್ಕೆ ‘ಮರಹು ಆಲಸ್ಯ’ಗಳೇ ಕಾರಣವೆಂದು ತಿಳಿಯಲಾಗುತ್ತಿತ್ತು. ಆದರೆ ಇತ್ತೀಚಿನ ತಿಳಿವಳಿಕೆಯಿಂದಾಗಿ ಈ ಪಠ್ಯದ ಪರಿಕಲ್ಪನೆ ಬೇರೆ ಯಾಗಿದೆ. ಜನಪದ ಕವಿ / ಕಲಾವಿದ / ಕತೆಗಾರನಲ್ಲಿ ಮಾನಸಿಕ ಪಠ್ಯದ ರೂಪದಲ್ಲಿದ್ದ ಜನಪದ ಪ್ರಕಾರವೊಂದು ತನ್ನ ಅವತರಣ ಕ್ರಿಯೆಯ ವಿಶಿಷ್ಟ ಮುಹೂರ್ತ ಹಾಗೂ ಎದುರಿರುವ ಪ್ರೇಕ್ಷಕರಿಗನುಗುಣವಾಗಿ ಭಿನ್ನ ಆಕೃತಿಯನ್ನು ತಳೆಯುತ್ತದೆ. ಒಂದೇ ಪಠ್ಯವನ್ನು ವಿಭಿನ್ನ ಸಾಮಾಜಿಕ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಕವಿ / ಗಾಯಕರು ವಿಭಿನ್ನ ಸಂದರ್ಭ ಗಳಲ್ಲಿ ಪ್ರದರ್ಶಿಸಿದಾಗ ಹಾಗೂ ಒಂದೇ ಪಠ್ಯವನ್ನು ಒಬ್ಬನೇ ಕಲಾವಿದ ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ಪ್ರೇಕ್ಷಕ / ಶ್ರೋತೃಗಳ ಎದುರು ಸಾದರಪಡಿಸಿದಾಗ ಪಠ್ಯದ ಸ್ವರೂಪದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ, ಈ ಮೂಲಕ ಜಾನಪದ ಪಠ್ಯವೊಂದು ಚಲನಶೀಲವಾದುದು ಎಂಬ ನಿಲುಮೆ ಪ್ರಕಟವಾಯಿತು. ಇದನ್ನು ಇನ್ನಷ್ಟು ಖಚಿತವಾಗಿ ಹೀಗೆ ಸ್ಪಷ್ಟಪಡಿಸಬಹುದು. ಕಲಾವಿದನೊಬ್ಬನು ಪ್ರಬುದ್ಧ ಕಲಾವಿದನಾಗಿ ಬೆಳೆದು ಸಾರ್ವಜನಿಕ ಪ್ರದರ್ಶನಕ್ಕೆ ಸನ್ನದ್ಧನಾಗುವ ಹೊತ್ತಿಗಾಗಲೇ ಪರಂಪರೆಯ ಬಳುವಳಿಯ ಫಲವಾಗಿ ಒಂದು ಮಾನಸಿಕ ಪಠ್ಯವನ್ನು ತನ್ನಲ್ಲಿ ರೂಪಿಸಿಕೊಂಡಿರುತ್ತಾನೆ. ಅದನ್ನು ಪ್ರಯೋಗ ಅಥವಾ ಪ್ರದರ್ಶನದ ಸಂದರ್ಭದಲ್ಲಿ ಪುನರ್ ಸೃಷ್ಟಿಸುತ್ತಾ ಹೋಗುತ್ತಾನೆ. ಅಂದರೆ ಕವಿ / ಕಲಾವಿದನು ತಾನು ಪರಂಪರೆಯಿಂದ ಅಂತಸ್ಥಗೊಳಿಸಿಕೊಂಡುದನ್ನು ಹಾಗೆಯೇ ಒಪ್ಪಿಸುವುದಿಲ್ಲ. ಪಠ್ಯವು ಕಂಠಪಾಠದ ರೂಪದಲ್ಲಿ ಅವನೊಳಗಿರುವುದಿಲ್ಲ.  ಪುನರಾವರ್ತನೆಗೊಳ್ಳುವ ಸೂತ್ರಗಳು, ವಾಕ್ಯಖಂಡಗಳು, ನುಡಿಗಟ್ಟುಗಳು ಘಟನೆ (episode)ಗಳಂತಹ ಬಹುರೂಪಗಳು (multiform) ಅವನೊಳಗಿದ್ದು ಪ್ರದರ್ಶನದ ಸಂದರ್ಭದಲ್ಲಿ ಪುನರ್ ಸಂಯೋಜನೆಗೊಳ್ಳುತ್ತಾ ಹೋಗುತ್ತವೆ. ಈ ಬಗೆಯ ಅಧ್ಯಯನದಿಂದ ಜನಪದ ಪಠ್ಯಗಳು ಕೇವಲ ಸ್ಥಿರ ಸಿದ್ಧವಸ್ತುಗಳಲ್ಲ, ಅದೊಂದು ಪ್ರಕ್ರಿಯೆ ಎಂಬ ನಿಲುಮೆ ಪ್ರಕಟವಾಯಿತು.

ಇಂಡೊ ಫಿನ್ನಿಶ್ ಜಾನಪದ ದಾಖಲಾತಿ ಯೋಜನೆಯ ಶ್ರಮಪೂರ್ಣ ಪ್ರಯತ್ನದ ಫಲವಾಗಿ ತುಳು ಸಿರಿ ಮಹಾಕಾವ್ಯ ಸಂಪುಟಗಳು ರೂಪುಗೊಂಡವು (೧೯೯೯). ಫಿನ್ಲೆಂಡಿನ ಪ್ರೊ. ಲೌರಿ ಹಾಂಕೊ ಹಾಗೂ ಅನೆಲಿ ಹಾಂಕೊ; ತುಳುನಾಡಿನ ಇಬ್ಬರು ಹಿರಿಯ ಜಾನಪದ ತಜ್ಞರಾದ ಡಾ. ವಿವೇಕ ರೈ ಹಾಗೂ ಡಾ. ಕೆ. ಚಿನ್ನಪ್ಪ ಗೌಡರು ಈ ಮಹಾನ್ ಸಾಧನೆಯ ಹಿಂದಿನ ಕೈಗಳು.  ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಮಾಚಾರು ಗ್ರಾಮದ ಶ್ರೀ ಗೋಪಾಲ ನಾಯ್ಕರು ಕಟ್ಟಿ ಹಾಡಿರುವ ಸಿರಿ ಮಹಾಕಾವ್ಯದ ಬೃಹತ್ ಮಾಹಿತಿ ಶರೀರವನ್ನು ದಾಖಲಿಸುವ ವಿಶಿಷ್ಟ ಕಾರ‍್ಯ ಸಾಕಾರಗೊಂಡಿತು. ಮಹಾಕಾವ್ಯವನ್ನು ನಿರೂಪಿಸಿದ ಗೋಪಾಲ ನಾಯಕರನ್ನು ಒಬ್ಬ ಸಹ ಸಂಶೋಧಕ ಎಂಬ ನೆಲೆಯಲ್ಲಿ ಸ್ವೀಕರಿಸಿದದು ಜಾನಪದ ಸಂಶೋಧನೆಯ ಹಾದಿಯಲ್ಲಿ ಒಂದು ಮೈಲಿಗಲ್ಲು. ಅವರು ನಡೆಸಿದ ಬಹುಮುಖಿ ದಾಖಲಾತಿಯ ಮುನ್ನ ನಡೆಸಬೇಕಾದ ಕ್ಷೇತ್ರಕಾರ‍್ಯದ ಬಗೆಗೆ ವಿಶೇಷ ಪೂರ್ವಸಿದ್ಧತೆ ನಡೆಸಲಾಗಿತ್ತು. ದಾಖಲಾತಿಯ ಹಿಂದಿನ ವಿಧಾನ ಹಾಗೂ ತಾತ್ವಿಕತೆಯನ್ನು ಕುರಿತು  ಚಿನ್ನಪ್ಪ ಗೌಡರು ಹೀಗೆ ಬರೆಯುತ್ತಾರೆ.

“ಆಡಿಯೊ ವಿಡಿಯೊ ಕ್ಯಾಮರಗಳ ಪರಿಣಾಮಕಾರಿ ಬಳಕೆ, ಕಲಾವಿದ, ಗಾಯಕ ಶ್ರೀ ಗೋಪಾಲ ನಾಯ್ಕರ ಸಾಂಸ್ಕೃತಿಕ ಜಗತ್ತಿನ ನೈತಿಕ ಮೌಲ್ಯಗಳ ರಕ್ಷಣೆ – ಹೀಗೆ ಇಡಿಯ ಸಿರಿ ಯೋಜನೆಯನ್ನು ಅಂತಾರಾಷ್ಟ್ರೀಯ ಜಾನಪದ ಸಂರಕ್ಷಣೆ ಮತ್ತು ಅಧ್ಯಯನ ಶಿಸ್ತಿಗೆ ಅನುಗುಣವಾಗಿ ರೂಪಿಸಲಾಗಿತ್ತು. ವಿದ್ವಾಂಸರಿಗಿಂತ ಅಥವಾ ಅವರಷ್ಟೇ ಮಹಾಕಾವ್ಯ ಗಾಯನ ಪರಂಪರೆಯ ಕಲಾವಿದರು ಬುದ್ದಿವಂತರು ತಿಳಿವಳಿಕೆಯುಳ್ಳವರು ಎಂಬ ಎಚ್ಚರ ವನ್ನು ಈ ಯೋಜನೆಯಲ್ಲಿ ಅಕ್ಷರಶಃ ಪಾಲಿಸಲಾಗಿದೆ.” (Chinnappa Gowda ೧೯೯೧ : ೨೬).

ಈ ವೈಧಾನಿಕತೆಯನ್ನು ಜಾನಪದ ದಾಖಲಾತಿ ಹಾಗೂ ಪಠ್ಯೀಕರಣದಲ್ಲಿ ಅನುಸರಿಸಿದ ಫಲವಾಗಿ ಸಾಕಾರಗೊಂಡ ಜಾನಪದ ಪಠ್ಯಕ್ಕೆ ಹೊಸ ಆಯಾಮ ದೊರಕಿತು. ಕಾವ್ಯವನ್ನು ಕಟ್ಟಿ ನಿರೂಪಿಸಿದ ಕಲಾವಿದ ಬಗೆಗಿನ ದೃಷ್ಟಿಕೋನದಲ್ಲಿ ಬದಲಾವಣೆ ಆಯಿತು. ಪಠ್ಯ ನಿರ್ಮಾಣ ಕೌಶಲ್ಯದ ನಿಲುವು ಬದಲಾಯಿತು.

ಸಿರಿಕಾವ್ಯ  ಬಹುಮುಖಿ ದಾಖಲಾತಿಯ ಸ್ವರೂಪ

ಸಿರಿಕಾವ್ಯದ ಪಠ್ಯಶರೀರವನ್ನು ದಾಖಲಿಸುವ ಸಂದರ್ಭದಲ್ಲಿ ಬಹುಮುಖೀ ದಾಖಲಾತಿ ವಿಧಾನವನ್ನು ಅನುಸರಿಸಲಾಗಿದೆ. ಲೌರಿ ಹಾಂಕೊ ಬಳಗ ಅನುಸರಿಸಿದ ವಿಧಾನವನ್ನು ಕಂಡರೆ ಅದು ‘ಸಮಗ್ರ ದಾಖಲಾತಿ’ಯ ಸ್ವರೂಪವನ್ನು ಪಡೆದಿದೆ. ವಿಧಾನವನ್ನು ಹೀಗೆ ಅಡಕಗೊಳಿಸ ಬಹುದು.

೧. ಸಿರಿಕಾವ್ಯವನ್ನು ಗೋಪಾಲ ನಾಯಕರು ನಿರೂಪಿಸಿದಾಗ ಲೌರಿ ಹಾಂಕೊ ಅವರು ಡಿಯೊ ದಾಖಲಾತಿ ನಡೆಸಿದರು.

೨. ಶ್ರೀಮತಿ ಅನೆಲಿ ಹಾಂಕೊ ಪಠ್ಯವನ್ನು ಎರಡು ಟೇಪ್ ರೆಕಾರ್ಡರ್‌ಗಳಲ್ಲಿ ದಾಖಲಿಸಿಕೊಂಡರು. ಯಾವುದೇ ಕಾರಣಕ್ಕಾಗಿ ಹಾಡಿನ ಒಂದು ಸಾಲೂ ಜಾರಿಹೋಗದಂತೆ ಈ ಮೂಲಕ ಎಚ್ಚರ ವಹಿಸಲಾಗಿದೆ.

೩. ಏಕಕಾಲಕ್ಕೆ ಕಪ್ಪು ಬಿಳುಪು ಚಿತ್ರಗಳನ್ನು ತೆಗೆಯುತ್ತಿದ್ದರು.

೪. ಹಾಡಿನ ಗತಿಯನ್ನು ಟಿಪ್ಪಣಿಗಳಲ್ಲಿ ದಾಖಲಿಸಿಕೊಳ್ಳಲಾಗುತ್ತಿತ್ತು.

೫. ಸಿರಿ ಪಠ್ಯವು ರೂಪುಗೊಳ್ಳುತ್ತಿದ್ದ ವಿವಿಧ ಸಂದರ್ಭಗಳಲ್ಲಿ ಪಠ್ಯವನ್ನು ದೃಶ್ಯ – ಶ್ರವ್ಯ ಮಾಧ್ಯಮಗಳಲ್ಲಿ ದಾಖಲಿಸಿಕೊಳ್ಳಲಾಗುತ್ತಿತ್ತು. ಜಾತ್ರೆಯ ಸಂದರ್ಭದಲ್ಲಿ ರೂಪು ಗೊಳ್ಳುತ್ತಿದ್ದ ಸಂಭಾಷಣಾ ರೂಪದ ಪಠ್ಯವನ್ನು ದೃಶ್ಯ – ಶ್ರವ್ಯ ಮಾಧ್ಯಮಗಳಲ್ಲಿ ದಾಖಲಿಸಲಾಗುತ್ತಿತ್ತು.

೬. ಹಾಡಿನ ರೂಪದ – ಸಂಭಾಷಣೆಯ ರೂಪದ ಪಠ್ಯದ ಜೊತೆಗೆ ಸಿರಿಗೆ ಹಾಗೂ ಸಿರಿ ಆಚರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಗೋಪಾಲ ನಾಯ್ಕರಿಂದ ಸಂಗ್ರಹಿಸ ಲಾಗಿತ್ತು.

೭. ಸಿರಿಯ ಬದುಕಿಗೆ ಸಂಬಂಧಿಸಿದ ಪ್ರಾದೇಶಿಕ ಚಹರೆ (ಸತ್ಯನಾಪುರದ ಅರಮನೆಯಿದ್ದ ಜಾಗ, ಬಿರ್ಮುಪಾಲವರು ಜೀರ್ಣೋದ್ಧಾರ ಮಾಡಿದ ಆಲಡೆ, ಸಿರಿ ಬಟ್ಟೆ ತೊಳೆದ ಸ್ಥಳ ಇತ್ಯಾದಿ) ಗಳೆಡೆಗೆ ತೆರಳಿ ಚಿತ್ರೀಕರಿಸುವ ಕೆಲಸ ಮಾಡಿದ್ದಾರೆ.

೮. ದಾಖಲಾತಿ ಕ್ರಿಯೆ ಒಂದು ಬಾರಿ ಮಾತ್ರ ನಡೆದುದಲ್ಲ. ದಾಖಲಾತಿಯನ್ನು ಆವರ್ತನ ರೂಪದಲ್ಲಿ ನಡೆಸಿದ್ದಾರೆ.

೯. ಸಿರಿ ಕಾವ್ಯದ ರಚನೆ, ಕಲಿಕೆ, ಪ್ರಸರಣದ ವಿವಿಧ ಸಂದರ್ಭ ಹಾಗೂ ಆಶಯವನ್ನು  ಕುರಿತಂತೆ ಗೋಪಾಲ ನಾಯ್ಕರನ್ನು ಹಲವಾರು ಬಾರಿ ಸಂದರ್ಶಿಸಿ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗಿದೆ.

೧೦. ಗೋಪಾಲ ನಾಯ್ಕರ ಸಿರಿತಂಡದ ಸದಸ್ಯರನ್ನು ಭೇಟಿಮಾಡಿ ಸಿರಿ ಆಚರಣೆ, ಸಿರಿ ಕಾವ್ಯ ಪಠ್ಯದ ಬಗೆಗಿನ ಅವರ ಲೋಕದೃಷ್ಟಿಯನ್ನು ಕುರಿತು ವಿವರಗಳನ್ನು ದಾಖಲಿಸಿ ಕೊಳ್ಳಲಾಗಿದೆ.

ಸಿರಿ ಮಹಾಕಾವ್ಯಸಿರಿ ಪರಂಪರೆಯ ಉತ್ಪನ್ನ

ಸಿರಿ ಮಹಾಕಾವ್ಯದ ದಾಖಲಾತಿ ಹಾಗೂ ಪಠ್ಯೀಕರಣ ಸುದಿರ್ಘಕಾಲಾವಧಿಯಲ್ಲಿ ನಡೆದ ಪ್ರಕ್ರಿಯೆ, ೧೫,೬೮೨ ಸಾಲುಗಳ ಸಿರಿ ಮಹಾಕಾವ್ಯವನ್ನು ಒಂಬತ್ತು ದಿನಗಳ ಅವಧಿಯಲ್ಲಿ ಗೋಪಾಲನಾಯ್ಕ ಹಾಡಿದ್ದರು. ಈ ಬೃಹತ್ ಮಹಾಕಾವ್ಯವನ್ನು ಅಜ್ಜೆರು ಸಂಧಿ, ಸಿರಿ ಸಂಧಿ, ಸೊನ್ನೆ ಗಿಂಡ್ಯೆಸಂಧಿ, ಅಬ್ಬಯ ದಾರಯ ಸಂಧಿ ಎಂದು ಒಳವರ್ಗೀಕರಣ ಮಾಡಿ ದ್ದಾರೆ. ಕಾವ್ಯ ಸಂಗ್ರಹದ ಹಿನ್ನೆಲೆಯಲ್ಲಿ ಕಾವ್ಯ ಗಾಯಕ ಗೋಪಾಲನಾಯ್ಕರ ಜನಪದ ಕುಣಿತ, ಜನಪದ ವೈದ್ಯ, ಕೃಷಿ ಜ್ಞಾನ, ಮುಂತಾದ ದೇಸಿಯ ಜ್ಞಾನ ಪರಂಪರೆಯನ್ನು ಸಮಗ್ರವಾಗಿ ದಾಖಲಿಸಿಕೊಂಡಿದ್ದಾರೆ.  ಈ ಸಮೃದ್ಧ ಬಹುರೂಪೀ ಜೀವನಾನುಭವದ ಉತ್ಪನ್ನವಾಗಿ ಸಿರಿ ಕಾವ್ಯರೂಪುಗೊಂಡಿರುವುದನ್ನು ಇಲ್ಲಿ ಗಮನಿಸಬೇಕು.

ಸಿರಿ ಮಹಾಕಾವ್ಯವು ಕ್ಯಾಸೆಟ್‌ಗಳಲ್ಲಿ ದಾಖಲುಗೊಂಡಿದ್ದುವಷ್ಟೇ ಅವುಗಳನ್ನು ಸಂಪಾದಕರು ಅಂತಾರಾಷ್ಟ್ರೀಯ ಧ್ವನಿಲಿಪಿಯನ್ನು ಬಳಸಿ ಲಿಪಿಕರಣಗೊಳಿಸಿದರು. ಗೆರೆಗಳ ದೀರ್ಘತೆಯನ್ನು ನಿರ್ಧರಿಸಲು, ಗಾಯಕ ಗೋಪಾಲನಾಯಕ ಉಚ್ಚರಿಸಿದುದನ್ನು ಯಥಾಪ್ರಕಾರ ಲಿಪಿಗಿಳಿಸುವ ಸಲುವಾಗಿ ಹಲವಾರು ಬಾರಿ ಶ್ರವ್ಯರೂಪದ ಕ್ಯಾಸೆಟುಗಳನ್ನು ಹಲವಾರು ಬಾರಿ ಕೇಳಿಸಿಕೊಂಡ ಲಿಪ್ಯಂತರ ಕೆಲಸ ಮುಗಿದ ಮೇಲೆ ಇಂಗ್ಲೀಷ್ ಭಾಷೆಗೆ ಭಾಷಾಂತರಿಸುವ ಕೆಲಸ ಮಾಡಿದರು. ಸಿರಿ ಮಹಾಕಾವ್ಯವನ್ನು ಪಠ್ಯೀಕರಣಕ್ಕೆ ಒಳಪಡಿಸುವ ಮೂಲಕ ಸಂಪಾದಕರು ತುಳುವ ಸಂಸ್ಕೃತಿಯ ಬಹುಮುಖೀ ನೆಲೆಗಳನ್ನು ಶೋಧಿಸುವ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. ಹಾಂಕೊ ಅವರು ತುಳುವ ದೇಶೀ ವಿದ್ವಾಂಸರ ಸಹಯೋಗ ದೊಂದಿಗೆ ಸಿರಿ ಮಹಾಕಾವ್ಯವನ್ನು ಸಂಪಾದಿಸಿದ್ದಲ್ಲದೆ ‘Textualision The Siri Epic’ ಎಂಬ ಸ್ವತಂತ್ರ ವಿದ್ವತ್ ಗ್ರಂಥವನ್ನು ಬರೆದಿದ್ದಾರೆ. ಜಾಗತಿಕ ಮಹಾಕಾವ್ಯದ ಪರಿಪ್ರೇಕ್ಷ್ಯ ದಲ್ಲಿ ಭಾರತೀಯ ಅದರಲ್ಲೂ ತುಳು ಜನಪದ ಮಹಾಕಾವ್ಯವನ್ನಿರಿಸಿ ಅದರ ಅನನ್ಯತೆಯನ್ನು ಗುರುತಿಸುವ ಕೆಲಸಮಾಡಿದ್ದಾರೆ. ಜನಪದ ಮಹಾಕಾವ್ಯದ ಸ್ವರೂಪ, ಅದು ಸಂಯೋಜನೆ ಗೊಳ್ಳುವ ಪ್ರಕ್ರಿಯೆಯ ವಿವರ, ಪಠ್ಯ ಮತ್ತು ಪ್ರದರ್ಶನದ ಸ್ವರೂಪ, ಅವುಗಳ ನಡುವಿನ ಸಂಬಂಧ, ಮಹಾಕಾವ್ಯ ಗಾಯಕ / ಕವಿಯ ವ್ಯಕ್ತಿವಿಶಿಷ್ಟ ಸಂಗತಿಗಳು, ಸಂದರ್ಭಕ್ಕನುಸರಿಸಿ ಪಠ್ಯದಲ್ಲಾಗುವ ಬದಲಾವಣೆ, ಆಧಿಜಾನಪದ, ಮೌಖಿಕ ಸಾಹಿತ್ಯ ವಿಮರ್ಶೆ, ಮಾನಸಿಕ ಪಠ್ಯದ ಪರಿಕಲ್ಪನೆ, ಸೂತ್ರಾತ್ಮಕ ನುಡಿಗಟ್ಟುಗಳು, ಬಹುರೂಪಗಳು, ಜನಪದ ಮಹಾಕಾವ್ಯ ಗಳ ಪಠ್ಯೀಕರಣದ ಸಮಸ್ಯೆಗಳು – ಇಂತಹ ಸಂಪಾದನದ ತಾತ್ವಿಕತೆಯನ್ನು ತುಂಬ ವೈಜ್ಞಾನಿಕವಾಗಿ ಪರಿಶೀಲಿಸಿದ್ದಾರೆ. ಆದರೆ ಈ ಸಿರಿ  ಮಹಾಕಾವ್ಯಕ್ಕೆ ಬರೆದ ಪ್ರಸ್ತಾವನೆಯಲ್ಲಿ ಕಾವ್ಯದ ಸಾಮಾಜಿಕ ಮೌಲ್ಯ ಪ್ರಸರಣವನ್ನು ಕುರಿತು ಸಂಪಾದಕರು ಏನೇನೂ ವಿವೇಚಿಸಲು ಹೋಗಲಿಲ್ಲ. ಅದೇಕೋ ಅವರಿಗೆ ಅದು ಮಹತ್ವದ ಸಂಗತಿಯಾಗಿ ಕಾಣಲಿಲ್ಲ. ಅಂದರೆ ಲೌರಿ ಹಾಂಕೊ ಅವರಿಗೆ ಮೌಖಿಕ ಮಹಾಕಾವ್ಯದ ಬಂಧ ಹಾಗೂ ಸಂರಚನೆಯ ವಿನ್ಯಾಸದ ಬಗೆಗೆ ವಿಶೇಷವಾದ ಒಲವು ಸಿರಿ ಕಾವ್ಯ ಸಂಪಾದನೆಯಲ್ಲಿ ಅವರ ಈ ದೃಷ್ಟಿಕೋನ ಗಾಢವಾದ ಪ್ರಭಾವ ಬೀರಿದೆ.

. ವಿ. ನಾವಡರು ಸಂಪಾದಿಸಿದ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ

ಪ್ರಕೃತ ಈ ಲೇಖನದ ರಚಕನಾದ ನಾನು (ಪ್ರೊ. ಎ. ವಿ. ನಾವಡ) ಮಂಗಳೂರಿಗೆ ಸಮೀಪದ ಕಟೀಲಿನ ಶ್ರೀಮತಿ ರಾಮಕ್ಕ ಮುಗ್ಗೇರ‍್ತಿಯವರಿಂದ ದಾಖಲಿಸಿಕೊಂಡ ಸಿರಿ ಪಾಡ್ದನವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟಿಸಿದ್ದೇನೆ. (೧೯೯೯). ರಾಮಕ್ಕ ಮುಗ್ಗೇರ‍್ತಿಯವರ ಮನೆಯ ಜಗಲಿಯಲ್ಲೇ ಕುಳಿತು ಇಡಿಯ ಸಿರಿಪಾಡ್ದನವನ್ನು ದಾಖಲಿಸಿ ಕೊಳ್ಳಲಾಯಿತು. ಜಾನಪದ ಶಾಬ್ದಿಕ ಪಠ್ಯವನ್ನು ಸಂಗ್ರಹಿಸುವುದರ ಜತೆಗೆ ಅವರಿಂದ ಸಿರಿಕಾವ್ಯವನ್ನು ಕುರಿತಂತೆ ಆಧಿಜಾನಪದವನ್ನು ಮೌಖಿಕವಾಗಿ ಸಂಗ್ರಹಿಸಲಾಯಿತು. ಪಠ್ಯದೊಳಗಿನ ಘಟನೆಗೆ ಸಂಬಂಧಿಸಿದಂತೆ ವಿವರವಾದ ಜನಪದ ವ್ಯಾಖ್ಯಾನವನ್ನು ದಾಖಲಿಸಿ ಕೊಳ್ಳಲಾಯಿತು.

ಜಾನಪದ ಪಠ್ಯವನ್ನು ಅದು ವಾಸ್ತವಿಕವಾಗಿ ಪ್ರದರ್ಶನಗೊಳ್ಳುವ ಸಂದರ್ಭದಲ್ಲೇ ದಾಖಲಿಸಿಕೊಳ್ಳಬೇಕೆನ್ನುವುದು ಇತ್ತೀಚಿನ ವಿದ್ವಾಂಸರ ನಿಲುವು. ಸಂದರ್ಭದ ಹೊರಗೆ ಮಾಡುವ ಪಠ್ಯದಾಖಲಾತಿ ಅವೈಜ್ಞಾನಿಕ ಎನ್ನುವ ತಿಳಿವಳಿಕೆ ಇದೆ. ಆದರೆ ಪಠ್ಯದಾಖಲಾತಿಯ ಸಂದರ್ಭ ಹಾಗೂ ತಾಂತ್ರಿಕತೆಯ ಬಗೆಗೆ ಹೊಸ ಆಲೋಚನೆಗಳು ಜಾನಪದ ಲೋಕದಲ್ಲಿ ಇತ್ತೀಚೆಗೆ ಚಾಲ್ತಿಗೆ ಬರುತ್ತಿವೆ. ಆ ಮೂಲಕ ‘ಸಂದರ್ಭ’ ದ ಬಗೆಗೆ ಹೊಸ ನಿರ್ವಚನವನ್ನು ನೀಡಲಾಗಿದೆ. ಪಠ್ಯವೊಂದರ ಕ್ರಿಯಾತ್ಮಕ ಸಂದರ್ಭವಷ್ಟೇ ಸಂದರ್ಭವಲ್ಲ. ಇನ್ನಾವುದೋ ಸಂದರ್ಭದಲ್ಲಿ ಪ್ರೇಕ್ಷಕರೆದುರು ಪುನರ್ ಸೃಷ್ಟಿಗೊಂಡ ಪಠ್ಯವನ್ನು ಅಧಿಕೃತ ಪಠ್ಯವೆಂದೇ ಪರಿಗಣಿಸಬೇಕು ಎನ್ನುವ ಅಭಿಪ್ರಾಯ ಪ್ರಕಟವಾಗಿದೆ. (ವೈಯಕ್ತಿಕ ಸಂಭಾಷಣೆ : ಡಾ. ಬಿ. ಎ. ವಿವೇಕ ರೈ ೩೦.೩.೯೯) ಈ ಮಾನ್ಯತೆಯ ಫಲವಾಗಿ ಪ್ರೇರಿತ ಸಂದರ್ಭದಲ್ಲಿ (ಸಂದರ್ಭ ದ ಹೊರಗೆ) ದಾಖಲಿತವಾದ ಪಠ್ಯ ಸಂಗ್ರಹಗಳಿಗಿದ್ದ ‘ಶಾಪ’ ಪರಿಹಾರವಾದಂತಾಯಿತು.  ಅನುಕೂಲವಾದ ಒಂದು ಸ್ಥಳದಲ್ಲಿ ಕವಿಗಾಯಕನೊಬ್ಬನನ್ನು ಕುಳ್ಳಿರಿಸಿ ಸೀಮಿತ ಪ್ರೇಕ್ಷಕರೆ ದುರು ಹಾಡಿಸಿದಾಗ ದೊರೆವ ಪಠ್ಯವನ್ನು ‘ಪ್ರೇರಿತ ಸಂದರ್ಭ’ ದ್ದೆಂದು ಕರೆಯದೆ ಅದನ್ನೇಕೆ ಒಂದು ವಿಶಿಷ್ಟ ಸಂದರ್ಭ ಎಂದು ಪರಿಗಣಿಸಬಾರದು? ಜಾತ್ರೆ, ಆಚರಣೆ ಮುಂತಾದ ಕ್ರಿಯಾತ್ಮಕ ಸಂದರ್ಭದಲ್ಲಿ ರೂಪುಗೊಳ್ಳುವ ಎಷ್ಟೋ ಪಠ್ಯಗಳು ಆಯಾ ಸಂದರ್ಭ, ಸ್ಥಳ, ಕಾಲಕ್ಕನುಸರಿಸಿ ಮೊಟಕುಗೊಳ್ಳುವುದು ಅನಿವಾರ‍್ಯವಾಗುತ್ತದೆ. ಆಗ ಒಂದು ಕಾವ್ಯದ ಹಾಡಿಕೆ ಪ್ರಕ್ರಿಯೆಯ ಪೂರ್ಣ ಪಠ್ಯ ಲಭ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ‘ಪ್ರೇರಿತ’ ವೆಂದು ಗ್ರಹಿಸಲಾದ ಪಠ್ಯದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ. ಈ ತಾತ್ವಿಕತೆಯ ಹಿನ್ನೆಲೆ ಯಲ್ಲಿ ನಾನು (ಎ. ವಿ. ನಾವಡ) ರಾಮಕ್ಕ ಮುಗ್ಗೇರ‍್ತಿಯ ಸಿರಿ ಪಾಡ್ದನವನ್ನು ಮೂರುಕೂರು ಗಳಲ್ಲಿ ಅವರ ಕೌಟುಂಬಿಕ ಪರಿಸರದಲ್ಲಿ ದಾಖಲು ಮಾಡಿಕೊಂಡೆನು.

೧೯೯೬ ಆಗಸ್ಟ್‌ನಿಂದ ೧೯೯೭ ಮಾರ್ಚ್ ತಿಂಗಳ ನಡುವೆ ಸಂಗ್ರಹಕಾರ‍್ಯ ನಡೆಯಿತು.  ಒಂದೊಂದು ಮೂರು ನಾಲ್ಕು ಅಥವಾ ಐದು ದಿನಗಳಷ್ಟು ದೀರ್ಘವಾಗಿತ್ತು. ಬೆಳಗಿನಿಂದ ಸಂಜೆಯ ತನಕ ಎಡೆಬಿಡದೆ ದಾಖಲು ಕೆಲಸ ನಡೆಯುತ್ತಿರಲಿಲ್ಲ. ಪಾಡ್ದನಕಾರ‍್ತಿ ರಾಮಕ್ಕ ಮನೆಯ ಯಜಮಾನತಿ. ಮನೆಯ ಅಡುಗೆ, ನಾಟಿಗದ್ದೆಗಳಲ್ಲಿ ನಾಟಿ ಮನೆಯ ಇನ್ನಿತರ ಕೆಲಸಗಳನ್ನು ಆಕೆಯೇ ನಿಭಾಯಿಸಿಕೊಳ್ಳ ಬೇಕಾಗುತ್ತಿತ್ತು. ಹೀಗಾಗಿ ನಾನು ಮುಂಜಾನೆ ಅವರ ಮನೆಗೆ ತೆರಳಿ ಆಕೆಯ ಮನೆಯ ಹೊರಜಗಲಿಯಲ್ಲಿ ಕುಳಿತರೆ ಸಮಯಾವಕಾಶ ವಾದಾಗಲೆಲ್ಲ ಆಕೆಯಿಂದ ಟೇಪ್‌ರೆಕಾರ್ಡ್‌ನಲ್ಲಿ ಧ್ವನಿಗ್ರಹಣ ಮಾಡುತ್ತಾ ಸಂಜೆ ದಾಟಿ ಕತ್ತಲೆಯ ತನಕ ತಂಗುತ್ತಿದ್ದೆ. ಪಾಡ್ದನದ ಬಹುಪಾಲನ್ನು ರಾಮಕ್ಕ ಒಬ್ಬರೇ ಹಾಡಿದರು. ಆದರೆ ಕೆಲವೊಮ್ಮೆ ಅವರ ಅತ್ತಿಗೆ ಸ್ವರ ಸೇರಿಸುತ್ತಿದ್ದದ್ದೂ ಇತ್ತು. ಆಕೆ ರಾಮಕ್ಕನಷ್ಟು ಪರಿಣತ ಕಥಾನಿರೂಪಕಿ ಅಲ್ಲ. ಹೀಗಾಗಿ ಲಿಪ್ಯಂತರ ಮಾಡುವಾಗ ಸಹಗಾಯಕಿಯ ಸಾಲು ಗಳನ್ನು ನಾನು ಬರೆದುಕೊಳ್ಳಲಿಲ್ಲ.

ನಡುನಡುವೆ ವಿರಾಮದೊಂದಿಗೆ ಪಾಡ್ದನ ಹಾಡುತ್ತಿರುವುದು ಕಥಾ ಸರಣಿಯ ಸಂಯೋಜನೆಗೆ ತಡೆಯಾಗುವುದಿಲ್ಲವೇ ಎಂಬ ನನ್ನ ಪ್ರಶ್ನೆಗೆ ‘ಇಲ್ಲ’ ಎನ್ನುತ್ತಿದ್ದರು. “ಕಥೆಯ ಪೂರ್ಣ ಚಿತ್ರ ನನ್ನ ಮನಸ್ಸಿನಲ್ಲಿದೆ. ಕಥೆ ಎಲ್ಲಿ ನಿಂತಿದೆ ಎನ್ನುವುದನ್ನು ನೀವು ಟೇಪ್‌ರೆಕಾರ್ಡ್ ಚಾಲು ಮಾಡಿ ಕೇಳಿಸಿದರೆ ಮುಂದಿನ ಘಟನಾವಳಿಗಳನ್ನು ಮನಸ್ಸಿನಲ್ಲಿ ಕಟ್ಟಿಕೊಳ್ಳುತ್ತೇನೆ. ಆಗ ಹಾಡಿನ ಸಾಲುಗಳು ರೂಪುಗೊಂಡು ಸಿರಿಪಾಡ್ದನ ವಿಶಿಷ್ಟ ಲಯದಲ್ಲಿ ಹೊರಹೊಮ್ಮು ತ್ತದೆ” ಎನ್ನುತ್ತಾರೆ.

“ಮನೆಯಲ್ಲಿ ನಿಮ್ಮ ಮಕ್ಕಳ, ಬಂಧುಗಳ ಎದುರು ಹಾಡುವುದಕ್ಕೂ ಗದ್ದೆಗಳಲ್ಲಿ ನಾಟಿ ಮಾಡುತ್ತಾ ಪಾಡ್ದನ ಹಾಡುವುದಕ್ಕೂ ವ್ಯತ್ಯಾಸ ಇಲ್ಲವೇ?” ಎಂದು ಕೇಳಿದಾಗ “ನಾಟಿ ಗದ್ದೆಗಳಲ್ಲಿ ಹತ್ತಾರು ಮಂದಿ ಸಹವಂದಿಗರ ಜತೆ ಹಾಡುವುದೇ ಒಂದು ಗಮ್ಮತ್ತು.  ಅಲ್ಲಿ ಉಲ್ಲಾಸ ಇರುತ್ತದೆ. ಕಥೆ ನಡೆಸುತ್ತಾ ಹೋಗುವಾಗ ಕೆಲಸದ ಶ್ರಮವೂ ಮರೆತು ಹೋಗು ತ್ತದೆ. ಇಲ್ಲಿ ನಿಮಗಾಗಿ ಟೇಪ್‌ರೆಕಾರ್ಡ್‌ನ ಮುಂದೆ ಹಾಡಿದಾಗ ಕಥೆಯ ವಿವರಗಳ ಕಡೆಗೇ ನನ್ನ ಧ್ಯಾನ. ಎಲ್ಲವನ್ನು ವಿವರವಾಗಿ ಸಾವಧಾನವಾಗಿ ಕಟ್ಟುತ್ತಾ ಹೋಗುತ್ತೇನೆ.  ಮಧ್ಯೆ ಮಧ್ಯೆ ಹಾಡನ್ನು ನಿಲ್ಲಿಸುವುದರಿಂದ ಮತ್ತೆ ಮುಂದುವರಿಸುವುದು ಸ್ವಲ್ಪ ತೊಡಕಾಗುವುದು ಹೌದು. ಆದರೆ ಅನೇಕ ವರ್ಷಗಳಿಂದ ಈ ‘ಕಥೆ’ಯನ್ನು ನಾಟಿಗದ್ದೆಗಳಲ್ಲಿ ಹಾಡಿಕೊಂಡು ಬಂದ ನನಗೆ ಕಥೆಯ ಒಂದೊಂದು ವಿವರವೂ ಸ್ಪಷ್ಟವಾಗಿದೆ. ಅದನ್ನು ಪಾಡ್ದನದ ಧಾಟಿಗೆ ಹೊಂದಿಸಿ ಕಟ್ಟುತ್ತಾ ಹೋಗುತ್ತೇನೆ.

ಪಾಡ್ದನ (ಯಾವುದೇ ಮೌಖಿಕ ಕಾವ್ಯ)ದ್ದು ಪೂರ್ವನಿರ್ಧಾರಿತ ಪಠ್ಯ ಅಲ್ಲ ಎನ್ನುವುದನ್ನು ನನ್ನ ಪಠ್ಯದಾಖಲಾತಿ ಸಂದರ್ಭದಿಂದ ವಿವರಿಸಲು ಪ್ರಯತ್ನಿಸುತ್ತೇನೆ. ನಾನು ದಾಖಲು ಮಾಡಿಕೊಂಡು ಬಂದ ಹದಿನಾಲ್ಕನೆಯ ಕ್ಯಾಸೆಟಿನ ‘ಬಿ’ ಭಾಗದಲ್ಲಿ ಅರ್ಧಾಂಶದಷ್ಟು ಮಾತ್ರ ದಾಖಲಾಗಿತ್ತು. ಅದು ಕಾರಣಾಂತರಗಳಿಂದ ನನ್ನ ಕೈಯಲ್ಲಿ ಮಾಯಿಸಿ ಹೋಯಿತು. ಅಬ್ಬಗ ದಾರಗರ ಜನನದಿಂದ ತೊಡಗಿದ ಈ ಭಾಗವನ್ನು ನನ್ನ ಗೆಳೆಯರ ಸಹಕಾರದಿಂದ ರಾಮಕ್ಕ ಮುಗ್ಗೇರ‍್ತಿಯವರಲ್ಲಿ ಮತ್ತೆ ಹಾಡಿಸಿ ದಾಖಲಿಸಿಕೊಂಡಾಗ ಅದು ಮೂರು ಕ್ಯಾಸೆಟುಗಳಿಗೆ (ತಲಾ ೬೦ ನಿಮಿಷ) ವಿಸ್ತರಗೊಂಡಿತು. ಈ ಕ್ರಿಯೆ ರಾಮಕ್ಕ ಮುಗ್ಗೇರ‍್ತಿಯವರಿಂದ ಬುದ್ದಿ ಪೂರ್ವಕ ಆದುದಲ್ಲ. ಅದು ಮೌಖಿಕ ಕಾವ್ಯ ಸಂಯೋಜನ ಪ್ರಕ್ರಿಯೆಯ ಒಂದು ಲಕ್ಷಣ. ನಿಂತ ನೆಲದ, ಕಾಲದ, ಸನ್ನಿವೇಶದ ಫಲ. ಸೃಜನಶೀಲತೆಯ ಸಂಕೇತ.

ಜಾನಪದ ಪಠ್ಯವೊಂದನ್ನು ತಿದ್ದುವ, ತೀಡುವ, ಪರಿಷ್ಕರಿಸುವ ಹಕ್ಕು ಸಂಪಾದಕನಿಗಿಲ್ಲ ಎಂದು ಜಾನಪದ ಮಿಮಾಂಸೆ ಹೇಳುತ್ತದೆ. ಹೀಗಾಗಿ ನಾನು ರಾಮಕ್ಕ ಮುಗ್ಗೇರ‍್ತಿ ಹೇಳಿದ ಪಠ್ಯವನ್ನು ಯಥಾಪ್ರಕಾರ ನೀಡಿದ್ದೇನೆ. ತುಳುವಿನ ಪ್ರಾದೇಶಿಕ ಭೇದದಲ್ಲೂ ಅವರ ಉಚ್ಚಾ ರಾಂಶಗಳಿಗೆ ಬದ್ಧನಾಗಿದ್ದೇನೆ. ಬಾಯಿ ತಪ್ಪಿನಿಂದಾಗಿ ಉಂಟಾದ ವ್ಯಕ್ತಿ, ಸ್ಥಳಗಳ ಹೆಸರು ಗಳನ್ನು ಬದಲಾಯಿಸುವ ಕೆಲಸ ಮಾಡಿದ್ದೇನೆ. ಅರ್ಥಸಂದಿಗ್ಧತೆ ತಲೆದೋರಿದಾಗ ಲಿಪ್ಯಂತರ ಮಾಡಿದ ಪಠ್ಯವನ್ನು ಅವರಿಗೆ ಮತ್ತೆ ಓದಿ ಹೇಳಿ ಪರಿಹಾರ ಪಡೆದುಕೊಂಡಿದ್ದೇನೆ.  ವಾಕ್ಯ ಫಲಕಗಳ ನಿರ್ಣಯದಲ್ಲಿ ಗಾಯಕಿಯು ಹಾಡಿನಲ್ಲಿ ಬಳಸಿದ ಪ್ಲುತಕ್ಕೂ ದೀರ್ಘವಾದ ಏ…………. ಆ………….. ದನಿಯೇ ಮಾನದಂಡ ವಾಗಿರುತ್ತದೆ. ಈ ದೀರ್ಘಸ್ವರವನ್ನು ಮೂರು ಬಿಂದು (…) ಗಳ ಮೂಲಕ ಸೂಚಿಸಲಾಗಿದೆ. ಸಾಲುಗಳ ಅಂತ್ಯವನ್ನು ನಿರ್ಧರಿ ಸುವಲ್ಲಿ ಉಸಿದಾಕಣಗಳನ್ನೇ ಆಧಾರವಾಗಿ ಇರಿಸಿಕೊಂಡಿದ್ದೇನೆ.

ನಾನು ಸಂಗ್ರಹಿಸಿದ ಸಿರಿಪಾಡ್ದನದಲ್ಲಿ ೭೦,೫೬೧  ಸಾಲುಗಳಿವೆ. ಈ ಸಾಲುಗಳ ಸಂಖ್ಯೆ ಪೂರ್ವ ನಿಗದಿಯಾಗಿ ಇರುವುದಿಲ್ಲ. ಪಾಡ್ದನಕಾರರ ಸೃಜನಾಭಿವ್ಯಕ್ತಿಯು ಭಿನ್ನ ಭಿನ್ನ ಸಂದರ್ಭಗಳಲ್ಲಿ ಬೇರೆ ಬೇರೆ ದೀರ್ಘತೆಯನ್ನು ಪಡೆದುಕೊಳ್ಳುತ್ತದೆ. ಇದುವೇ ಮೌಖಿಕತೆಯ ಅನನ್ಯತೆ, ಸಿರಿಕಾವ್ಯವನ್ನು ಈ ಚಹರೆಯ ಹಿನ್ನೆಲೆಯಲ್ಲಿ ಸಂಪಾದಿಸಲಾಗಿದೆ.

ಕೊನೆ ಟಿಪ್ಪಣಿ

ಫಿನ್ಲೆಂಡಿನ ಮಹಾಕಾವ್ಯ ಕಲೆವಾಲ. ಇದನ್ನು ಸಂಪಾದಿಸಿದವನು ಎಲಿಯಾಸ್ ಲೆನ್ರೂಟ್ (೧೮೦೨ – ೧೮೮೪) ಈ ಕಾವ್ಯ ಏಕ ಕವಿ ಕರ್ತೃವಲ್ಲ. ಹಲವು ಕವಿಗಳ ಸೃಜನಶೀಲ ಬೌದ್ದಿಕತೆಯ ಫಲವಾಗಿ ಈ ಕಾವ್ಯ ರೂಪುಗೊಂಡಿದೆ. ಅನೇಕ ಗಾಯಕರ ಹಾಡುಗಳನ್ನು ಸಂಪಾದಕರು ವ್ಯವಸ್ಥಿತವಾಗಿ ಸಂಪಾದಿಸಿ ಅದಕ್ಕೆ ಮಹಾಕಾವ್ಯದ ಸ್ವರೂಪ ನೀಡಿದರು. ಅವರ ಸಂಪಾದನ ವಿಧಾನವನ್ನು ಹೀಗೆ ಅಡಕಗೊಳಿಸಬಹುದು.

* ಎಲಿಯಾಸ್ ಅನೇಕ ಹಾಡುಗಾರರಿಂದ ಕರೆಲಿಯಾದ ಭಿನ್ನ ಭಿನ್ನ ಪ್ರದೇಶದಲ್ಲಿ ಹಾಡುಗಳನ್ನು ಸಂಗ್ರಹಿಸಿದರು ಒಂದೇ ಹಾಡಿನ ಭಿನ್ನ ಭಿನ್ನ ರೂಪಗಳನ್ನು ಸಂಗ್ರಹಿಸಿ ದರು.  ಆಗ ಅದರೊಳಗೆ ಅನೇಕ ಸಾಂಸ್ಕೃತಿಕ ರರ ಕತೆಗಳು ದೊರಕಿದವು. ಕಾವ್ಯಗುಣ ವನ್ನು ಗಮನದಲ್ಲಿರಿಸಿಕೊಂಡು ಯಾವ ಪಠ್ಯ ಎಲ್ಲಿಗೆ ಸರಿಹೋಗುತ್ತದೆಯೋ ಅದನ್ನು ಜೋಡಿಸಿ ಒಂದು ಸಮಗ್ರ ಪಠ್ಯವನ್ನು ರೂಪಿಸಿದರು. ಹೀಗೆ ಸಂಪಾದನಾ ಕಾರ‍್ಯವನ್ನು ನಡೆಸುವ ಸಂದರ್ಭದಲ್ಲಿ ಎಲಿಯಾಸ್ ಲೆನ್ರೂಟ್ ಸ್ವತಃ ಬರೆದು ಸೇರಿಸಿದ ಸಾಲುಗಳು ಶೇಕಡಾ ಮೂರರಷ್ಟಿದ್ದುವಂತೆ.  ಹಲವು ಗಾಯಕರ ಹಾಡುಗಳನ್ನು ಒಂದು ವ್ಯವಸ್ಥೆ ಯೊಳಗೆ ಪೋಶಿಸಿದ ಫಲ ಕಲೇವಾಲ ಕಾವ್ಯ.  ಹೀಗಾಗಿ ಒಬ್ಬ ಗಾಯಕ ಸಹಜವಾಗಿ ಹಾಡಿದ ಪೂರ್ಣರೂಪದ ಕಾವ್ಯ ಇದಲ್ಲ. ಅಂದರೆ ಒಂದು ಬಗೆಯಲ್ಲಿ ಕೃತಕವಾಗಿ ಸೃಷ್ಟಿಸಿದ ಮಹಾಕಾವ್ಯ ಇದು. ಕರ್ನಾಟಕದಲ್ಲಿ ಡಾ. ಪಿ. ಕೆ. ರಾಜಶೇಖರ ಅವರು ಸಂಪಾದಿಸಿದ ಮಲೆಮಾದೇಶ್ವರ, ಮಂಟೇಸ್ವಾಮಿ ಕಾವ್ಯಗಳು ಈ ಮಾದರಿಯವು. ಕಲೇವಾಲದ ವೈಧಾನಿಕತೆಯನ್ನೇ ಅವರು ಬಳಸಿಕೊಂಡಿದ್ದಾರೆ.

 • ಇಂಡೋ ಫಿನ್ನಿಶ್ ಯೋಜನೆಯಡಿ ರೂಪುಗೊಂಡ ಸಿರಿಕಾವ್ಯವು ಮೂರು ಸಂಪುಟ ಗಳಲ್ಲಿವೆ.  ಅವುಗಳ ವಿವರ :
 • Lauri Honko 1998
  Textualising the Siri Epic Pub: Folklore Fellows’ Communications FFe Editorial Office P.O. Box 14, FIN – 20501 Turku Finland.
 • Lauri Honko  and others 1998
  The Siri Epic as performed by Gopala Naika Part – 1
  Pub : Folklore Fellows’ Communications FFe Editorial Office P. O. Box 14, FIN – 20501
 • Lauri Honko and Others 1998
  The Siri Epic as performed by Gopala Naika Part – 11
  Pub : Folklore Fellows’ Communications.
 • ಪ್ರೊ. . ವಿ. ನಾವಡ  : ೧೯೯೯ : ರಾಮಕ್ಕ ಮುಗ್ಗೇರ‍್ತಿ ಕಟ್ಟಿದ ಸಿರಿಪಾಡ್ದನ ಪ್ರ. : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
 • ಚಿನ್ನಪ್ಪ ಗೌಡ  : ೧೯೯೯ : Finnish India Oral Epics Project Siri Pub : RRC Udupi