ಪಾಡ್ದನ ಅಥವಾ ಸಂಧಿ ಎನ್ನುವ ಕಾವ್ಯ ಪ್ರಕಾರವು ತುಳು ಜನಪದ ಸಾಹಿತ್ಯದ ಅನನ್ಯತೆಯ ಒಂದು ವಿಶಿಷ್ಟ ರೂಪ. ತುಳುವಿನಲ್ಲಿ ಪಾಡ್ದನವನ್ನು ಪಾರ್ದನ, ಪಾರ್ದನೊ ಎಂದೂ ಕರೆಯುತ್ತಾರೆ. ನಮಗೆಲ್ಲಾ ತಿಳಿದಿರುವಂತೆ ತುಳುನಾಡಿನ ಪುರಾಣಲೋಕದ ದೇಸೀಯ ಸಾಂಸ್ಕೃತಿಕ ರರ, ರರಮಣಿಯರ ಸುತ್ತ ಹೆಣೆದ ದುರಂತ ವಸ್ತುವಿರುವ, ಮೌಖಿಕ ಸಂಪ್ರದಾಯದ ಗೀತ ಪ್ರಕಾರವನ್ನು ಪಾಡ್ದನಗಳು ಅಥವಾ ಸಂಧಿಗಳೆಂದು ಕರೆಯುತ್ತಾರೆ. “ಪಾಡ್ದನಗಳು ಕೇವಲ ನಿಶ್ಚಲ ಗತವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ಭೂತ ವರ್ತಮಾನಗಳ ಚಲನಶೀಲ ಸಂಬಂಧವನ್ನು ಪ್ರತಿನಿಧಿಸುತ್ತವೆ” (ಕ್ಲಾಸ್, ಕನ್ನಡಕ್ಕೆ : ಎ.ವಿ. ನಾವಡ, ಸುಭಾಶ್ಚಂದ್ರ : ೧೯೮೭:೪೨). ಪಾಡ್ದನಗಳು ಪ್ರದರ್ಶನ ಸಂಪ್ರದಾಯಕ್ಕೆ ಸೇರಿದ್ದು, ಪ್ರದರ್ಶನದ ಸಂದರ್ಭದಲ್ಲಿ ಅದು ತನ್ನ ಆಕಾರ ಹಾಗೂ ನಿರೂಪಣಾ ವಿಧಾನವನ್ನು ನಿರ್ಧರಿಸಿಕೊಳ್ಳುತ್ತದೆ. ಇಂತಹ ಪಾಡ್ದನ ಅಥವಾ ಸಂಧಿಗಳನ್ನು ಜಾನಪದ ಅಧ್ಯಯನದ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಪರಿಭಾಷೆಯಲ್ಲಿ ಯಾವ ರೀತಿ ಗುರುತಿಸಬೇಕೆನ್ನುವ ಕುರಿತಂತೆ ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಖಂಡ ಕಾವ್ಯ, ಮಹಾಕಾವ್ಯ, ಐತಿಹ್ಯ, ಪುರಾಣ, ಆರಾಧನಾ ಪಠ್ಯ, ಸಾಂಸ್ಕೃತಿಕ ಪಠ್ಯಹೀಗೆ ಅನೇಕ ನೆಲೆಗಳಲ್ಲಿ ಇದನ್ನು ಪರಿಭಾವಿಸಲಾಗಿದೆ. ಸಾಮಾನ್ಯವಾಗಿ ಪಾಡ್ದನಗಳನ್ನು ತುಳುನಾಡಿನ ಪುರಾಣಗಳೆಂದೂ ಜನಪದ ಮಹಾಕಾವ್ಯಗಳೆಂದು ವಿದ್ವಾಂಸರು ಕರೆದಿದ್ದಾರೆ.

ಇಂತಹ ಪಾಡ್ದನಗಳು, ವ್ಯಕ್ತಿಯೊಬ್ಬ ಸಾಮಾನ್ಯರಿಗಿಂತ ಭಿನ್ನವಾಗಿ ಮತ್ತು ಅಸಾಮಾನ್ಯ ರೀತಿಯಲ್ಲಿ ಪ್ರತಿಕ್ರಿಯಿಸುವ ಕ್ರಿಯಾತ್ಮಕ ಪ್ರವೃತ್ತಿಯಿಂದ ರತ್ವವನ್ನು ಹೊಂದುವುದನ್ನು, ಈ ಕ್ರಿಯಾತ್ಮಕತೆ ಸ್ಥಾಪಿತ ರೂಢಿಗಳನ್ನು ಮುರಿದು ಹೊಸ ಮೌಲ್ಯಗಳ ಸ್ಥಾಪನೆಗಾಗಿ ತುಡಿಯುವುದನ್ನು ತಿಳಿಸುತ್ತವೆ. ಪಾಡ್ದನಗಳಲ್ಲಿ ಹೆಣ್ಣು ದುರಂತಕ್ಕೆ, ದಬ್ಬಾಳಿಕೆಗೆ, ದೌರ್ಜನ್ಯಕ್ಕೆ, ಶೋಷಣೆಗೆ ಬಲಿಯಾಗುವ ಸಂದರ್ಭಗಳು ಹೆಚ್ಚಾಗಿ ಕಾಣಿಸುತ್ತವೆ. ಈ ದುರಂತಕ್ಕೆ ಸಮಾಜ ವ್ಯವಸ್ಥೆ ಹಾಗೂ ಗಂಡು ಮುಖ್ಯ ಕಾರಣವಾಗುವುದನ್ನು ಅದು ಸ್ಪಷ್ಟಪಡಿ ಸುತ್ತದೆ. ಇಂತಹ ಒಂದು ಕತೆಯನ್ನು ನಿರೂಪಿಸುವ ಸುಧೀರ್ಘ ತುಳು ಜನಪದ ಮಹಾಕಾವ್ಯ ಸಿರಿ ಸಂಧಿ / ಪಾಡ್ದನ. ಸಿರಿ ಸಂಧಿಯನ್ನು ಆಧರಿಸಿ ಕಾದಂಬರಿ, ಕತೆಗಳು ಕೂಡಾ ರಚನೆ ಯಾಗಿವೆ. ಸಿರಿ ಪಠ್ಯದ ಸಂಗ್ರಹದಲ್ಲಿ ಹೆಸರಿಸಬಹುದಾದ ಕೆಲವು ಮುಖ್ಯ ಕೃತಿಗಳಿವೆ.  ಅಮೃತ ಸೋಮೇಶ್ವರ ಅವರು ಸಂಪಾದಿಸಿರುವ ತುಳು ಪಾಡ್ದನ ಸಂಪುಟದಲ್ಲಿ ‘ಸತ್ಯನಾಪುರದ ಸಿರಿ’ ಎಂಬ ಭಾಗವು ತುಳು ಪಠ್ಯದೊಂದಿಗೆ ಕನ್ನಡಾನುವಾದವನ್ನೂ ಒಳಗೊಂಡಿದೆ. ಫಿನ್ಲೆಂಡಿನ  ಲೌರಿ ಹಾಂಕೊ ಅವರ ನಾಯಕತ್ವದಲ್ಲಿ  ಬಿ.ಎ. ವಿವೇಕ ರೈ,  ಚಿನ್ನಪ್ಪ ಗೌಡ ಕೆ. ಹಾಗೂ ಶ್ರೀಮತಿ ಅನ್ನೇಲಿ ಹಾಂಕೊ ಅವರು ಬೆಳ್ತಂಗಡಿಯ ಮಾಚಾರು ಗೋಪಾಲ ನಾಯ್ಕರಿಂದ ಸಿರಿ ಪಾಡ್ದನವನ್ನು ಸಮಗ್ರ ಹಾಗೂ ವೈಜ್ಞಾನಿಕ ದಾಖಲಾತಿಯ ಪ್ರಕ್ರಿಯೆಯ ಮೂಲಕ ಸಂಗ್ರಹಿಸಿದ್ದಾರೆ. ಈ ಗ್ರಂಥದ ಪ್ರಕಟಣೆಯ ಮೂಲಕ ತುಳುವ ಪರಿಕಲ್ಪನಾತ್ಮಕ ಜಗತ್ತನ್ನು ಮತ್ತೆ ಹೊಸದಾಗಿ ನಿರ್ವಚಿಸಬಹುದಾಗಿದೆ ಎಂಬ ಅಭಿಪ್ರಾಯವಿದೆ. ಸಿರಿ ಆಚರಣೆಯ ಪಾಲುದಾರ ಕುಮಾರನ ಪುರುಷಪಠ್ಯವನ್ನು  ಲೌರಿ ಹಾಂಕೊ ತಂಡದವರು ಒದಗಿಸಿದರೆ, ನಾಟಿ ಗದ್ದೆಯಲ್ಲಿ ಉತ್ಪನ್ನಗೊಂಡು ವಿಸ್ತಾರಗೊಳ್ಳುವ ಮಹಿಳಾ ಪಠ್ಯವನ್ನು ಶ್ರೀಮತಿ ಗಿಡಿಕೆರೆ ರಾಮಕ್ಕ ಮುಗ್ಗೇರ್ತಿಯಿಂದ ಸಂಗ್ರಹಿಸಿ, ಸಂಪಾದಿಸಿ  ಎ.ವಿ. ನಾವಡ ಅವರು ನೀಡಿದ್ದಾರೆ. ಹೀಗೆ ಎರಡು ಭಿನ್ನ ಸಂದರ್ಭ ಹಾಗೂ ಸಂಪ್ರದಾಯದ ಮಹತ್ವದ, ಸುದಿರ್ಘ ವಾದ ಎರಡು ಭಿನ್ನ ಪಠ್ಯಗಳು ನಮಗೆ ಲಭಿಸುತ್ತವೆ. ಹೀಗೆ ಒಂದು ಮಹಾಕಾವ್ಯ ಭಿನ್ನ ಭಿನ್ನ ಸಂದರ್ಭಗಳಲ್ಲಿ ಹುಟ್ಟಿಕೊಂಡಾಗ ಸಂಸ್ಕೃತಿಯ ವೈವಿಧ್ಯವನ್ನು ಅರ್ಥೈಸಿಕೊಳ್ಳಲು ಸಾಧ್ಯ. ಸಿರಿ ಪಠ್ಯವನ್ನು ವಿದ್ವಾಂಸರು ವಿಭಿನ್ನ ನೆಲೆಗಳಲ್ಲಿ ಈಗಾಗಲೇ ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ ಈ ಲೇಖನದಲ್ಲಿ ನಾನು ಸಿರಿ ಜನಪದ ಮಹಾಕಾವ್ಯ, ರಾಜಕೀಯ ಸಂಘರ್ಷ ಎಂಬ ವಿಷಯದ ಕುರಿತಂತೆ ಅಭಿಪ್ರಾಯವನ್ನು ಮಂಡಿಸುತ್ತಿದ್ದೇನೆ.

ಸಿರಿ ಪಾಡ್ದನವು ಕೃಷಿಕರಾದ ಬಂಟ ಜಾತಿಯ ಕುಟುಂಬವೊಂದರ ನಾಲ್ಕು ತಲೆಮಾರುಗಳ ಏಳುಬೀಳುಗಳನ್ನು ವಿವರಿಸುವ ಸುದೀರ್ಘ ಪಠ್ಯ. ಹೆಣ್ಣು ತನಗಾದ ಅನ್ಯಾಯಕ್ಕಾಗಿ ಹೋರಾಡಿದುದನ್ನು, ಪ್ರತಿಭಟಿಸಿದುದನ್ನು ಸಿರಿ ಪಾಡ್ದನದಲ್ಲಿ ಗಮನಿಸಬಹುದು. ಸಿರಿ ಪಾಡ್ದನದಲ್ಲಿ ಕುಟುಂಬ ಪದ್ಧತಿಗೆ ಸೀಮಿತವಾದ ಬದುಕಿನಲ್ಲಿ ಪುರುಷ ಪ್ರಧಾನ ವ್ಯವಸ್ಥೆ ದುರಂತಕ್ಕೆ ದಾರಿಮಾಡಿಕೊಟ್ಟದ್ದು ಕಂಡು ಬರುತ್ತದೆ. ಇದರ ನಡುವೆ ಅಸ್ತಿತ್ವಕ್ಕಾಗಿ ಹೋರಾಡಿದ ಹೆಣ್ಣು ಸಿರಿ. ಆಕೆ ಸ್ವಾಭಿಮಾನಿ, ಅಡ್ಡಿ ಆತಂಕದ ಸಮಾಜವ್ಯವಸ್ಥೆಯನ್ನು ಖಂಡಿಸಿ, ಪ್ರತಿಭಟಿಸಿದವಳು. ಹಾಗಾಗಿ ಪುರುಷನ ದೃಷ್ಟಿಯಲ್ಲಿ ಆತನ ಅಧೀನಕ್ಕೆ ಸಿಗದೆ ಎಲ್ಲೆ ಮೀರಿದ ಹೆಣ್ಣಾಗಿ, ಕಾಣಿಸಿಕೊಳ್ಳುತ್ತಾಳೆ.

ಇಡೀ ಸಿರಿ ಪಾಡ್ದನದ ಕತೆಯಲ್ಲಿ ಸಂಘರ್ಷಗಳ ಮೊತ್ತವಿದೆ. ಅನೇಕ ಬಿಕ್ಕಟ್ಟುಗಳಿವೆ, ಸಮಸ್ಯೆಗಳಿವೆ. ಸಮಸ್ಯೆ ಕಾಣಿಸಿಕೊಳ್ಳುವುದು ಮತ್ತು ಪರಿಹಾರ, ಕೊರತೆ ಕಾಣಿಸಿಕೊಳ್ಳುವುದು ಮತ್ತು ಕೊರತೆಗಳನ್ನು ನೀಗುವ ಪ್ರಯತ್ನಗಳು ಸಿರಿ ಪಾಡ್ದನದಲ್ಲಿವೆ. ಪಾಡ್ದನದ ಆರಂಭ ದಲ್ಲಿಯೇ ಕೌಟುಂಬಿಕ ಬಿಕ್ಕಟ್ಟು ಇದೆ. ಇದು ಸಂತಾನಕ್ಕೆ ಸಂಬಂಧಿಸಿದ್ದು. ಪಾಡ್ದನದ ಮೊದಲಲ್ಲೇ ಆದಿ ಆಲಡೆಯ ನಾಶದಿಂದ ಲೌಕಿಕದ ಬಿರ್ಮುಪಾಲವ (ಅಜ್ಜೆರು) ಮತ್ತು ಅಲೌಕಿಕದ ಬಿರ್ಮೇರ್ ಸಂಬಂಧ ಹದಗೆಡುವುದು ಕೂಡ ಒಂದು ಸಂಘರ್ಷದ ನೆಲೆ. ಮಕ್ಕಳಿಲ್ಲದೆ ಅಜ್ಜರು ಕೊರಗಿ ಹಾಸಿಗೆ ಹಿಡಿದ ಸಂದರ್ಭದಲ್ಲಿ ಹದಗೆಟ್ಟ ಸಂಬಂಧವನ್ನು ಪುನರ್ ಸ್ಥಾಪಿಸುವಲ್ಲಿ ಬೆರ್ಮೆರ್ ಪರಿಹಾರ ಸೂಚಿಸುತ್ತಾನೆ. ಪಾಳುಬಿದ್ದ ಆದಿ ಆಲಡೆಯನ್ನು ಜೀರ್ಣೋದ್ಧಾರ ಮಾಡಿ, ತಕ್ಕ ವ್ಯವಸ್ಥೆ ಮಾಡಿದರೆ ಸಂತಾನ ಪ್ರಾಪ್ತಿಯಾಗುವ ಬಗ್ಗೆ ಬೆರ್ಮೆರ್ ಆಜ್ಜೆರುವಿಗೆ ಪರಿಹಾರ ಸೂಚಿಸುವುದು, ಜೀರ್ಣೋದ್ಧಾರದ ಬಳಿಕ ಪ್ರಸಾದ ರೂಪದಲ್ಲಿ ಪಡೆದ ಹಿಂಗಾರದ ಹಾಳೆಯಿಂದ ಸಿರಿ ಹುಟ್ಟುವುದು – ಇಂತಹ ಘಟನೆಗಳು ಪಾಡ್ದನದಲ್ಲಿ ಕಂಡು ಬರುತ್ತದೆ. ಇಲ್ಲಿ ಸಂತಾನಕ್ಕೆ ಸಂಬಂಧಿಸಿದ ಬಿಕ್ಕಟ್ಟಿಗೆ ಬೆರ್ಮೆರ್ ಬ್ರಾಹ್ಮಣರೂಪದಲ್ಲಿ ಬಂದು ಪರಿಹಾರ ಸೂಚಿಸುವ ಮೂಲಕ ಸಿರಿಯ ಹುಟ್ಟೇ ಅಲೌಕಿಕ ಎಂಬುದನ್ನು ತಿಳಿಸಲಾಗಿದೆ. ಹಿಂಗಾರದ ಹಾಳೆಯಲ್ಲಿ ಹುಟ್ಟುವ ಮೂಲಕ ಅವಳ ಹುಟ್ಟೇ ನಿಗೂಢ ಎನ್ನಲಾಗಿದೆ. ಬೆರ್ಮೆರ್‌ಗೆ ಹೇಳಿದ ಹರಕೆ ಸಲ್ಲಿಸದೆ ಇದ್ದುದರಿಂದ ಸೊನ್ನೆ ಗಿಂಡೆಯರ ದುರಂತ ಮರಣದ ಸಂದರ್ಭದಲ್ಲಿಯೂ ಲೌಕಿಕ – ಅಲೌಕಿಕ ವ್ಯಕ್ತಿಗಳ ನಡುವಿನ ಸಂಘರ್ಷವಿದೆ. ಇದು ಕೂಡ ಒಂದು ಬಗೆಯ ರಾಜಕೀಯವೆ. ತುಳು ಕಥಾನಕಗಳಲ್ಲಿ ಇಂತಹ ಅನೇಕ ನಿಗೂಢಗಳಿವೆ, ಸಂಘರ್ಷಗಳಿವೆ, ರಾಜಕೀಯ ಮೇಲಾಟಗಳಿವೆ. ಆಶಯಗಳ ದೃಷ್ಟಿಯಿಂದ ಗಮನಿಸಿದಾಗ, ರಾಜಕೀಯ ಪಾಡ್ದನಗಳೆನ್ನಬಹುದಾದ ಕೋಟಿಚೆನ್ನಯ, ಕಲ್ಕುಡ ಕಲ್ಲುರ್ಟಿ ಪಾಡ್ದನಗಳು ತುಳುನಾಡಿನ ಅರಸುಮನೆತನಗಳ ನಡುವಣ ಸಂಘರ್ಷ, ರಾಜಕೀಯ ಮೇಲಾಟಗಳನ್ನು ವಿವರಿಸುತ್ತವೆ. ಕಾರ್ಕಳದ ಭೈರರಸ ತನ್ನ ರಾಜ್ಯದಲ್ಲಿ ಕೆಲಸ ಮಾಡಿದ ಕಲ್ಕುಡ ಇನ್ನೊಂದು ರಾಜ್ಯದಲ್ಲಿ ಕೆಲಸಮಾಡಬಾರದು ಎಂಬ ಇರಾದೆಯಿಂದ, ಅಂದರೆ ಕಾರ್ಕಳದಲ್ಲಿ ನಿರ್ಮಿಸಿದ ಗೊಮ್ಮಟನಂತಹ ಪ್ರತಿಮೆಯನ್ನು ಬೀರುಕಲ್ಕುಡ ತುಳು ನಾಡಿನಲ್ಲಿ ಬೇರೆಲ್ಲಿಯೂ ನಿರ್ಮಿಸಬಾರದು ಎಂಬ ಸ್ವಾರ್ಥ ಮನೋಭಾವನೆಯಿಂದ ಕಲ್ಕುಡನ ಎಡಗೈ ಮತ್ತು ಬಲಗಾಲನ್ನು ಕಡಿದು ಹಾಕಿದ ವಿವರಗಳನ್ನು ಕಲ್ಕುಡ ಕಲ್ಲುರ್ಟಿ ಪಾಡ್ದನವು ತಿಳಿಸುತ್ತದೆ. ತುಳುನಾಡಿನ ಎರಡು ರಾಜಕೀಯ ಅರಸೋತ್ತಿಗೆಗಳು ಪಾಲ್ಗೊಂಡಿ ರುವ ಕಾರ್ಕಳ ಹಾಗೂ ವೇಣೂರಿನ ಗೊಮ್ಮಟ ಸ್ಥಾಪನೆಯ ಹಿಂದಿನ ಘಟನೆ, ರಾಜಕೀಯ ಇರಾದೆಯನ್ನು ಈ ಪಾಡ್ದನ ಅಭಿವ್ಯಕ್ತಿಸುತ್ತದೆ. ಅರಸರ ಈ ರಾಜಕೀಯ ಮೇಲಾಟಕ್ಕೆ ಬಲಿಯಾದ ಒಬ್ಬ ಅಮಾಯಕ ಶಿಲ್ಪಿಯ ದಾರುಣ ಬದುಕನ್ನು ವ್ಯಕ್ತಪಡಿಸುವಂತೆಯೇ ವಾಸ್ತವದಲ್ಲಿ ಸಾಧ್ಯವಾಗದ ಪ್ರತಿಭಟನೆಯನ್ನು ಅಲೌಕಿಕದಲ್ಲಿ ತನ್ನ ತಂಗಿಯ ಜೊತೆಗೂಡಿ ವ್ಯಕ್ತಪಡಿಸುವುದು ಗಮನಾರ್ಹ. ಅಂತೆಯೇ ಎರಡು ಗುತ್ತುಗಳ ಅಥವಾ ಬೀಡಿನ ಅರಸು ಬಲ್ಲಾಳರ ನಡುವಿನ ರಾಜಕೀಯ ಸಂಘರ್ಷವನ್ನು ಮುಖ್ಯವಾಗಿ ಕೋಟಿಚೆನ್ನಯ ಪಾಡ್ದನ ತಿಳಿಸುತ್ತದೆ. ಈ ಸಂಘರ್ಷದಲ್ಲಿ ರರಾಗಿ ಹೋರಾಡಿ ಕುತಂತ್ರಕ್ಕೆ ಬಲಿಯಾಗಿ ದಾರುಣ ಮರಣವನ್ನು ಕಂಡ ಕೋಟಿಚೆನ್ನಯರ ಬಗ್ಗೆ ಈ ಪಾಡ್ದನ ವಿವರಿಸುತ್ತದೆ. ಈ ಅರ್ಥದಲ್ಲಿ ನೋಡಿದರೆ, ಸಾಮಾಜಿಕ ಪಾಡ್ದನವಾದ ಸಿರಿಪಾಡ್ದನವು ಇಂತಹ ಅರಸುಮನೆತನಗಳ ನಡುವಿನ ರಾಜಕೀಯ ಸಂಘರ್ಷದ ಕತೆಯಲ್ಲ. ನಾಲ್ಕು ತಲೆಮಾರಿನ ಕೌಟುಂಬಿಕವೂ ಸಾಮಾಜಿಕವೂ ಆದ ಕತೆಯನ್ನೊಳಗೊಂಡ ಸಿರಿ ಮಹಾಕಾವ್ಯದಲ್ಲಿ ಕೌಟುಂಬಿಕ ರಾಜಕೀಯವು ಪ್ರಧಾನ ಪಾತ್ರವಹಿಸಿರುವುದು ಕಂಡುಬರುತ್ತದೆ. ಪುರುಷಪ್ರಧಾನ ವ್ಯವಸ್ಥೆಯ ರಾಜಕೀಯ ನೆಲೆಯನ್ನು ಈ ಕಾವ್ಯ ಸಮರ್ಥವಾಗಿ ಮುಂದಿಡುತ್ತದೆ. ಈ ವ್ಯವಸ್ಥೆಯನ್ನು ಧಿಕ್ಕರಿಸಿ, ಪ್ರತಿಭಟಿಸಿ ತನ್ನತನವನ್ನು ಕಾಯ್ದುಕೊಳ್ಳಲು ಸಿರಿಮಾಡುವ ಹೋರಾಟವು ಇಲ್ಲಿ ಮುಖ್ಯವಾಗುತ್ತದೆ.

ವಿಶಾಲವಾದ ಅರ್ಥದಲ್ಲಿ, ಸಿರಿ ಕಥಾನಕದ ಎಲ್ಲ ಸಂಘರ್ಷಗಳೂ ರಾಜಕೀಯವೆ. ಅಂದರೆ ಕೌಟುಂಬಿಕ ರಾಜಕೀಯ. ಅದು ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಘರ್ಷ – ಗಂಡ ಹೆಂಡತಿ, ತಾಯಿಮಗ, ಅತ್ತೆ ಸೊಸೆ …. ಹೀಗೆ. ಕಾಂತುಪೂಂಜನ ನೈತಿಕತೆಯ ಪ್ರಶ್ನೆ ಬಂದಾಗ ಸಿರಿ ತಿದ್ದುವುದು, ಕಾಂತುಪೂಂಜ ತಿದ್ದಿಕೊಳ್ಳದಿರುವುದು, ಆತ ಅದನ್ನು ಅವಮಾನ ಎಂದು ತಿಳಿದುಕೊಳ್ಳುವುದು. ಕಾಂತುಪೂಂಜನ ನೈತಿಕ ಅಧಃಪತನ ಪರಾಕಾಷ್ಠೆಗೇರುವುದು ಸಿರಿಯ ಬಯಕೆ ಸೀರೆಯನ್ನು ಸೂಳೆಸಿದ್ದು ಮೈಲಿಗೆ ಮಾಡುವಲ್ಲಿ. ಹೀಗೆ ಕುಟುಂಬದ ಒಳಗಿನ ಗಂಡ ಹೆಂಡತಿಯ ನಡುವಿನ ಸಂಘರ್ಷ ಮುಂದೆ ರಾಜಕೀಯದ, ಅಧಿಕಾರದ, ಆಡಳಿತದ ಪ್ರಶ್ನೆಯಾಗುತ್ತದೆ – ರಾಜಕೀಯ ಸಂಘರ್ಷವಾಗುತ್ತದೆ. ಇಲ್ಲಿ ನಮಗೆ ಮುಖ್ಯವಾಗುವ ಇನ್ನೊಂದು ಅಂಶವೆಂದರೆ, ಸಿರಿಪಾಡ್ದನದಲ್ಲಿ ರಾಜಕೀಯ, ಆಡಳಿತದ, ನ್ಯಾಯಕ್ಕೆ ಸಂಬಂಧಿಸಿದ ಒಂದು ಘಟಕವಾಗಿ ಪತ್ತೇರಿಕೂಟದ ಪ್ರಸ್ತಾವ ಬರುತ್ತದೆ. ಅಜ್ಜರ ಮರಣದ ಬಳಿಕ, ಶವಸಂಸ್ಕಾರ ನಡೆಸಲು ಬರುವಂತೆ ಸಿರಿಯು ಗಂಡನಿಗೆ ಒಲೆ ಬರೆಯುತ್ತಾಳೆ. ಆದರೆ ಆತ ಬರಲು ನಿರಾಕರಿಸುತ್ತಾನೆ. ಸಿರಿಯು ದಾರುವಿನ ಸಹಾಯದಿಂದ ತಾನೇ ಅಜ್ಜರ ಶವ ಹೊತ್ತು ಶವ ಸಂಸ್ಕಾರ ಮತ್ತು ಇತರ ಕ್ರಿಯೆಗಳನ್ನು ನಡೆಸುತ್ತಾಳೆ. ಅಜ್ಜರ ಕುಟುಂಬದ ರಕ್ತಸಂಬಂಧಿ ಶಂಕರಾಳ್ವ ಸತ್ಯನಾಪುರದ ಅಧಿಕಾರ ತನಗೆ ಸೇರಿದ್ದೆಂದು ಹಕ್ಕು ಸ್ಥಾಪಿಸಲು ಬರುತ್ತಾನೆ. ಕಾಂತುಪೂಂಜ ಹಾಗೂ ಶಂಕರಾಳ್ವ ಒಳಸಂಚು ನಡೆಸಿ ಅರಮನೆಯ ಪಟ್ಟದ ಅಧಿಕಾರದ ಪ್ರಶ್ನೆಯನ್ನು ಮುಂದಿಟ್ಟು ಪತ್ತೇರಿಕೂಟ (ಪಂಚಾಯತಿ ಕೂಟ) ಸೇರಿಸುತ್ತಾರೆ. ಸಿರಿಯನ್ನು ಕೂಟದ ಕಟ್ಟೆಗೆ ಕರೆಸುತ್ತಾರೆ. ಅಜ್ಜರಿಂದ ತೆರವಾದ ಪಟ್ಟವನ್ನು ಆಳಲು ಗಂಡಸರ ನೇಮಕ ಮಾಡುವ ಕುರಿತಂತೆ ಅಲ್ಲಿ ಚರ್ಚೆ ನಡೆಯುತ್ತದೆ. ಸಿರಿಯು ಕುಮಾರ ದೊಡ್ಡವ ನಾಗುವವರೆಗೆ ತಾನೇ ಅಜ್ಜರ ಮುತ್ತುಮುದ್ರೆ ಉಂಗುರವನ್ನಿಟ್ಟು ಅಜ್ಜರು ಹಿಡಿಯುವ ಪಟ್ಟದ ಕತ್ತಿ ಹಿಡಿದು ಅಜ್ಜರ ಪಟ್ಟವಾಳುತ್ತೇನೆ ಎಂದು ತನ್ನ ಗಂಡನಿಗೂ ಪಟ್ಟದ ಅಧಿಕಾರವನ್ನು ನಿರಾಕರಿಸುತ್ತಾಳೆ. ಗಂಡಸರು ಆಳಿಕೊಂಡು ಬಂದ ಪಟ್ಟದಲ್ಲಿ ಹೆಂಗಸರಿಗೆ ಅಧಿಕಾರ ಇಲ್ಲ, ಹೆಂಗಸು ಪಟ್ಟವಾಳಲು ಸಾಧ್ಯವಿಲ್ಲವೆಂದು ಕೂಟದಲ್ಲಿ ತೀರ್ಮಾನ ವಾಗುತ್ತದೆ. ಹೊರಗಿನ ಆಳ್ವಿಕೆ, ಲೆಕ್ಕಪತ್ರ, ಮಾರುವ, ಕೊಡು ಅಧಿಕಾರ ಶಂಕರಾಳ್ವನಿಗೆ, ಒಡಾಡಳಿತ ಸಿರಿಗೆ ಎಂದು ತೀರ್ಮಾನವಾಗುತ್ತದೆ. ಇದನ್ನು ಒಪ್ಪದ ಸಿರಿ ಅಜ್ಜರ ಮೋಹದ ಪುಳ್ಳಿ / ಮಗಳು ತಾನಿರುವಾಗ ತನಗಲ್ಲದೆ ಅಜ್ಜರ ಪಟ್ಟದ ಅಧಿಕಾರವನ್ನು ಇನ್ಯಾರಿಗೂ ಬಿಟ್ಟುಕೊಡಲಾರೆನೆಂದು ಕೂಟದ ಕಳದಿಂದ ಇಳಿದುಹೋಗುತ್ತಾಳೆ. “ಸತ್ಯನಾಪುರದ ನೆಲ ಬಂಜರು ಬೀಳಲಿ, ಅರಮನೆ ಸುಟ್ಟುಹೋಗಲಿ” ಎಂದು ಶಾಪಹಾಕಿ ಪುರುಷಾಧಿಕಾರ ಮತ್ತು ಅಧಿಕಾರದ ನೆಲೆಯಾದ ಅರಮನೆಯನ್ನು ನಾಶಮಾಡಿ ಕುಮಾರ ಮತ್ತು ಕೆಲಸದಾಕೆ ದಾರುವಿನೊಂದಿಗೆ ಬಸ್ರೂರು ಗುತ್ತಿಗೆ ಬರುತ್ತಾಳೆ. ಗಂಡನ ಸ್ವೇಚ್ಛಾಚಾರವನ್ನು ಪ್ರತಿಭಟಿಸಿ ಕತ್ತಿನ ಕರಿಮಣಿ ಕಡಿದು, ಮೂಗಿನ ಮೂಗುತಿ ಕಿತ್ತು ಅರಮನೆಯ ಕಂಬಕ್ಕೆ ಕಟ್ಟಿ, ಕೈಬಳೆಗಳನ್ನು ಒಡೆದುಹಾಕಿ ಗಂಡನಿಗೆ ವಿಚ್ಛೇದನ ಹೇಳುವ ಮೂಲಕ ಪುರುಷಪ್ರಧಾನ ಸಮಾಜಕ್ಕೆ ಸವಾಲೆಸೆಯುತ್ತಾಳೆ. ಸಿರಿ ಸಮಾಜದ ಕಟ್ಟುಪಾಡುಗಳನ್ನು ಒಂದು ಹಂತದವರೆಗೆ ಗೌರವಿಸುತ್ತಾಳೆ. ಆ ಸಾಮಾಜಿಕ ಕಟ್ಟುಪಾಡುಗಳು ಕೌಟುಂಬಿಕ ಸಂಬಂಧಗಳಿಗೆ ಅಂದರೆ ಮಾನವ ಸಂಬಂಧಗಳಿಗೆ, ಅಡ್ಡಿಯಾದಾಗ, ಒತ್ತು ನೀಡದಾಗ ಅದನ್ನು ಮುರಿದು ದಿಟ್ಟತನ ದಿಂದ ಪ್ರತಿಭಟಿಸಿ ಮುಂದುವರಿಯುತ್ತಾಳೆ.

ಇಲ್ಲಿ ಈ ಪತ್ತೇರಿಕೂಟ (ಪಂಚಾಯಿತಿ ಕೂಟ) ಎನ್ನುವುದು ತುಳುನಾಡಿನ ನ್ಯಾಯ ವ್ಯವಸ್ಥೆಗೆ ಸಂಬಂಧಿಸಿದಂತೆ ಇರುವಂತಹದ್ದು. ಇದೊಂದು ರಾಜಕೀಯ ಘಟಕ, ಒಂದು ಆಡಳಿತ ಘಟಕ, ಒಂದು ನ್ಯಾಯ ವ್ಯವಸ್ಥೆ. ಸಿರಿ ಪಾಡ್ದನದಲ್ಲಿ ಗಂಡ ಕಾಂತಪೂಂಜ ಹಾಗೂ ಶಂಕರಾಳ್ವ ಕೂಟದ ಮಂದಿಗೆ ಲಂಚ ನೀಡಿರುವುದರಿಂದ ಪತ್ತೇರಿಕೂಟದ ನಿರ್ಣಯವು ಪೂರ್ವನಿರ್ಧಾರಿತವಾಗಿರುತ್ತದೆ. ಕೂಟವನ್ನು ಕರೆಯುವ, ಅದನ್ನು ನಿರ್ವಹಿಸುವ, ನಿರ್ಣಯಿಸುವ ಅಧಿಕಾರ, ಪ್ರಾತಿನಿಧ್ಯವೂ ಪುರುಷರಿಗಿರುವುದು ಇಲ್ಲಿ ಕಂಡುಬರುತ್ತದೆ. ಹಾಗಾಗಿ ಇಡೀ ನ್ಯಾಯಕೂಟವೇ ಪುರುಷಪ್ರಧಾನ ವ್ಯವಸ್ಥೆಯ ಒಂದು ಭಾಗವಾಗಿ ಕಂಡು ಬರುತ್ತದೆ. ಅಂತಿಮವಾಗಿ, ಅಲ್ಲಿ ನಡೆಯುವುದು ಪುರುಷಪ್ರಧಾನ ಮತ್ತು ಮಾತೃಪ್ರಧಾನ (ಮಾತೃಮೂಲೀಯ) ಕುಟುಂಬ ವ್ಯವಸ್ಥೆಯ ನಡುವಿನ ಸಂಘರ್ಷ ಎನ್ನುವುದು ಒಂದು ಅಂಶ.

ಎರಡನೆಯದಾಗಿ, ಕಾಂತುಪೂಂಜ ಗುತ್ತಿನವ. ಹಾಗಾಗಿ ಸಹಜವಾಗಿ ಗುತ್ತಿನಿಂದ ಬರುವ ರಾಜಕೀಯ ಅಧಿಕಾರ ಆತನಿಗಿದೆ. ಈ ಅಧಿಕಾರ ಆತನ ಯೋಗ್ಯತೆಯಿಂದ ಬಂದದ್ದಲ್ಲ. ಗುತ್ತಿನಿಂದ ದಕ್ಕಿದ ರಾಜಕೀಯ ಅಧಿಕಾರವನ್ನು ಆತ ಆ ಬಳಿಕ ಬಳಸುವ ರೀತಿ ಕೂಡಾ ರಾಜಕೀಯವೆ. ಉದಾಹರಣೆಗೆ, ಓಡದ ಕುಂಇನಿಗೆ ಸೂಚನೆಕೊಟ್ಟು ಸಿರಿಗೆ ದೋಣಿ ಬಿಡದಂತೆ, ಹೊಳೆದಾಟಲು ಸಹಕರಿಸದಂತೆ ಮಾಡುವುದು ಕೂಡ ಆತನ ರಾಜಕೀಯವೆ. ಆದರೆ ಅದನ್ನು ಮತ್ತೆ ಬೇರೆಯದೇ ಆದ ಕ್ರಮದಲ್ಲಿ ಸಿರಿ ಎದುರುಸುತ್ತಾಳೆ. ಇಲ್ಲಿ ಗಂಡ ಹೆಂಡತಿ ಜಗಳ ಕೊನೆಗೆ ಅವರವರು ಪಡೆದ ಅಧಿಕಾರ ಕೇಂದ್ರ ಅಥವಾ ಶಕ್ತಿಕೇಂದ್ರಿತ ಜಗಳಗಳಾಗಿ ಪರಿವರ್ತಿತವಾಗುತ್ತದೆ. ಕುಟುಂಬದ ಜಗಳ ರಾಜಕೀಯ ಅಂದರೆ ಅಧಿಕಾರದ, ಆಡಳಿತದ ಜಗಳವಾಗುತ್ತದೆ.

ಪತ್ತೇರಿ ಕೂಟದಲ್ಲಿ ಮುಖ್ಯವಾದ ಪ್ರಶ್ನೆ ಇರುವುದೇ ಮನೆಯೊಳಗಿನ ಅಧಿಕಾರ ಮತ್ತು ಹೊರಗಿನ ಅಧಿಕಾರದ ಬಗ್ಗೆ. ಇದು ರಾಜಕೀಯ ಅಂದರೆ ಅಧಿಕಾರ ಮತ್ತು ಆಡಳಿತಕ್ಕೆ ಸಂಬಂಧಪಟ್ಟದ್ದು. ಸತ್ಯನಾಪುರದ ಒಳಗಿನ ಆಡಳಿತ ಮತ್ತು ಅರಮನೆಯ ಹೊರಗಿನ ಆಡಳಿತವನ್ನು ತೀರ್ಮಾನಿಸುವುದಕ್ಕೆ ಪತ್ತೇರಿಕೂಟ ಇರುವುದು. ಇವರು ಹೆಣ್ಣಿಗೆ ಆರ್ಥಿಕತೆಯ ಹಕ್ಕನ್ನು, ಆಸ್ತಿಯ ಹಕ್ಕನ್ನು ನಿರಾಕರಿಸುತ್ತಾರೆ. ಕುಟುಂಬದ ಹಕ್ಕನ್ನು ಕೊಡು ತ್ತಾರೆ. ಮನೆಯ ಒಳಗಿನ ಅಧಿಕಾರವನ್ನು ಮಾತ್ರ ಕೊಟ್ಟಾಗ ಸಿರಿ ಸಾರಾಸಗಟಾಗಿ ಅದನ್ನು ತಿರಸ್ಕರಿಸುತ್ತಾಳೆ. ರಾಜಕೀಯ ಅಧಿಕಾರ ಅಂದರೆ ಅದನ್ನು ಒಡೆಯುವುದಲ್ಲ, ಒಳಗಿನ ಮತ್ತು ಹೊರಗಿನ ಅಧಿಕಾರವೆರಡನ್ನೂ ಕೊಡಬೇಕೆನ್ನುವುದು ಸಿರಿಯ ನಿಲುವು. ಮನೆಯ ಒಳಗಿನ ಮತ್ತು ಹೊರಗಿನ ಅಧಿಕಾರ ಎನ್ನುವುದು ಒಂದು ದೊಡ್ಡ ರಾಜಕೀಯ ಪ್ರಶ್ನೆ. ಆರ್ಥಿಕತೆಯಿಲ್ಲದ ಸ್ವಾತಂತ್ರ್ಯ ಅಥವಾ ಅಧಿಕಾರಕ್ಕೆ ಅರ್ಥವಿಲ್ಲ ಎನ್ನುವುದು ಇಲ್ಲಿ ಸಿರಿಯ ನಿಲುವು. ಪುರುಷಪ್ರಧಾನ ವ್ಯವಸ್ಥೆಯ ನ್ಯಾಯವನ್ನು ಅಥವಾ ಪರಂಪರೆಯಿಂದ ಬಂದದ್ದೆ ನ್ನುವುದನ್ನು ಆಕೆ ವಿರೋಧಿಸುವುದು. ರಾಜಕೀಯ ಅಂದರೆ ಆಡಳಿತ, ಅಧಿಕಾರ ಅಂತ ಅಂದ್ಕೊಂಡ್ರೆ ಸಿರಿಯ ಹೋರಾಟವೂ ರಾಜಕೀಯವೆ. ಈ ಅಧಿಕಾರಕ್ಕಾಗಿ ಅಂದರೆ political powerಗಾಗಿಯೇ ಸಿರಿ ಹೋರಾಡುವುದು. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಕಳೆದುಕೊಂಡ ದನಿಯನ್ನು ಆಕೆ ಸ್ಥಾಪಿಸಲು ಹೊರಟಿದ್ದಾಳೆ. ಅಂದರೆ, ಆಕೆ ಮಾತನಾಡಲು ತೊಡಗಿದ್ದಾಳೆ. ಈ ಮಾತೇ ಒಂದು ರಾಜಕೀಯ. ಇಲ್ಲಿ ರಾಜಕೀಯ ಅಂದ್ರೆ ಕೆಟ್ಟ ಅರ್ಥದಲ್ಲಿ ಅಲ್ಲ. ಇಲ್ಲಿ ಕುತಂತ್ರ ಕಾಣಿಸುವುದಿಲ್ಲ. ಸಿರಿಯ ರಾಜಕೀಯ ಒಳ್ಳೆಯ ಅರ್ಥವುಳ್ಳದ್ದು, ಒಳ್ಳೆಯ ಉದ್ದೇಶವುಳ್ಳದ್ದು. ರಾಜಕೀಯ ಅಂದ್ರೆ ತನ್ನ ಅಸ್ತಿತ್ವವನ್ನು ಪ್ರಕಟಿಸುವ ರೀತಿ, ತನ್ನನ್ನು ಅಂಚಿಗೆ ಸರಿಸುವವರ ವಿರುದ್ಧ ದನಿ ಎತ್ತುವ ರೀತಿ. ತನಗೆ ನ್ಯಾಯವಾಗಿ ಸಲ್ಲ ಬೇಕಾದ್ದು ತನಗೇ ಸಲ್ಲಬೇಕು ಎಂಬ ಆಶಯವನ್ನು ಪ್ರತಿಪಾದಿಸುವ ರೀತಿ. ಪುರುಷರು ಮಾಡುವುದು ತಪ್ಪು ಎಂದು ದನಿ ಎತ್ತುವ ಮೂಲಕ ಇದು ತಪ್ಪು ಇದು ಸರಿ ಅನ್ನುವುದೂ ಒಂದು ರಾಜಕೀಯವೆ. ಇದನ್ನು ಮಹಿಳಾಪರ, ಸ್ತ್ರೀಪರವಾದ ಹೋರಾಟದ ರಾಜಕೀಯ ಎನ್ನಬಹುದು. ಈ ರಾಜಕೀಯ ಹೋರಾಟಕ್ಕಾಗಿ ಸಿರಿ ನಮಗೆ ಮುಖ್ಯವಾಗುತ್ತಾಳೆ.

ಮಾತೃಪ್ರಧಾನ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆ ಎನ್ನುವುದು ಸಾಮಾಜಿಕ ಕುಟುಂಬ ಪದ್ಧತಿಯ ಎರಡು ಮುಖ್ಯ ವ್ಯವಸ್ಥೆಗಳು. ಮೂಲತಃ ಇದ್ದಂತಹ ಮಾತೃಮೂಲೀಯ / ಮಾತೃಪ್ರಧಾನ ವ್ಯವಸ್ಥೆಯ ಮೇಲೆ ಪುರುಷಪ್ರಧಾನ ವ್ಯವಸ್ಥೆ ಆಕ್ರಮಣವನ್ನು ಮಾಡಲು  ಆಕ್ರಮಣವನ್ನು ಮಾಡಲು ಪ್ರಯತ್ನಿಸಿದಾಗ, ಅದರ ಮೇಲೆ ಅಧಿಕಾರ ಸ್ಥಾಪಿಸಿದ ಕಾಲದಲ್ಲಿ (ಅಂದರೆ ಕುಟುಂಬ, ಸಂತಾನ, ಆಸ್ತಿ ಇತ್ಯಾದಿಗಳ ಮೇಲೆ) ಅದಕ್ಕೆ ಪ್ರತಿರೋಧವನ್ನು ಒಡ್ಡಿ ದವಳು ಸಿರಿ. ಹಾಗಾಗಿ ತನ್ನ ಗಂಡ ಇರುವಾಗಲೇ ವಿಚ್ಛೇದನವನ್ನು ಕೊಟ್ಟು ಮರುಮದುವೆ ಯಾಗುವುದು ಕೂಡ ಹೆಚ್ಚು ಮುಖ್ಯವಾಗುತ್ತದೆ. ಅವಳ ಪ್ರತಿರೋಧದ ಸಂಘರ್ಷವಿರುವುದು ಮಾತೃಮೂಲೀಯ ವ್ಯವಸ್ಥೆಯ ಸ್ತ್ರೀಪರ ಕಾಳಜಿಗಳನ್ನು ಎತ್ತಿಹಿಡಿಯುವುದು ಮತ್ತು ಅದು ಕುಸಿಯದ ಹಾಗೆ ನೋಡಿಕೊಳ್ಳುವಲ್ಲಿ. ಸಿರಿಯ ಇಡಿಯ ಹೋರಾಟವೇ ಪುರುಷಪ್ರಧಾನ ವ್ಯವಸ್ಥೆಯ ಬಗ್ಗೆ ಹಾಗೂ ಪುರುಷರ ಕ್ರಮದಲ್ಲಿ ಯೋಚಿಸುವ ಮಹಿಳೆಯರ ವಿರುದ್ಧವೂ ಇದೆ. ಸಮಾಜದ ಕಟ್ಟುಪಾಡುಗಳನ್ನು ಒಂದು ಹಂತದವರೆಗೆ ಆಕೆ ಗೌರವಿಸುತ್ತಾಳೆ. ಆ ಸಾಮಾಜಿಕ ಕಟ್ಟುಪಾಡುಗಳು ಮಾನವ ಸಂಬಂಧಗಳಿಗೆ ಅಡ್ಡಿಯಾದಾಗ ಅದನ್ನು ಮುರಿದು ಮುಂದುವರಿಯುತ್ತಾಳೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ, ಮಾತೃಮೂಲೀಯ ಹಾಗೂ ಪಿತೃಮೂಲೀಯ ಹಾಗೂ ಪಿತೃಮೂಲೀಯ ವ್ಯವಸ್ಥೆಗಳು ಭಿನ್ನವೂ ವಿರುದ್ಧವೂ ಆದ ನಿಲುವು ಮತ್ತು ಧೋರಣೆಗಳನ್ನು ಹೊಂದಿರುವ ವ್ಯವಸ್ಥೆಗಳು, ಹಾಗಾಗಿ ಸಂಘರ್ಷವಿರುವುದು ಎರಡು ವ್ಯವಸ್ಥೆಗಳ ನಡುವೆ. ಆಗ ಪಾತ್ರಗಳು ಮತ್ತು ಘಟನೆಗಳು ಬರುತ್ತವೆ. ಮಾತೃಪ್ರಧಾನ ವ್ಯವಸ್ಥೆಯ ಸಂಕೇತವಾಗಿ ಸಿರಿ ಅಂದರೆ ಹೆಣ್ಣು ಕಂಡುಬಂದರೆ, ಪಿತೃಪ್ರಧಾನ ವ್ಯವಸ್ಥೆಯ ಸಂಕೇತವಾಗಿ ಕಾಂತುಪೂಂಜ ಅಂದರೆ ಗಂಡು ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಗಾಯಕನ ದೃಷ್ಟಿ ಇರುವುದು ಈ ಎರಡು ವ್ಯವಸ್ಥೆಗಳು ಮುಖಾಮುಖಿಯಾದ ಪರಿಣಾಮದ ಬಗ್ಗೆ. ಇದು ಮಾತೃಪ್ರಧಾನ ವ್ಯವಸ್ಥೆಯ ಮೇಲೆ ಪಿತೃಪ್ರಧಾನ ಪದ್ಧತಿ ಅಧಿಕಾರ ಸ್ಥಾಪಿಸ ಹೊರಟಾಗ ಉಂಟಾದ ಸಂಘರ್ಷ. ಪುರುಷಪ್ರಧಾನ ವ್ಯವಸ್ಥೆಯ ಸಾಂಸ್ಕೃತಿಕ ಹುನ್ನಾರಗಳನ್ನು ಪ್ರತಿಭಟಿ ಸುವ ಮತ್ತು ಪ್ರಶ್ನಿಸುವ ಕೆಲಸವನ್ನು ಈ ವ್ಯವಸ್ಥೆ ಮಾಡುತ್ತದೆ. ಹಾಗಾಗಿ ಇದು ತುಳುನಾಡಿನ ಸಾಂಸ್ಕೃತಿಕ ರಾಜಕೀಯವೂ ಹೌದು.