ಸಿರಿ ಪಂಥವು ತುಳುನಾಡಿನ ಸಾಮೂಹಿಕ ಮೈದುಂಬುವಿಕೆಯ ಆರಾಧನಾ ಸಂಪ್ರದಾಯ. ಸಿರಿ ಆರಾಧನೆಯು ಇಲ್ಲಿನ ಅತ್ಯಂತ ವ್ಯಾಪಕ ಹಾಗೂ ಅನನ್ಯ ಆಚರಣೆ ಯಾಗಿದೆ. ಸಿರಿ ಆರಾಧನಾ ಪಂಥವು ಸುದೀರ್ಘ ಸಿರಿ ಪುರಾಣ ಪಠ್ಯ – ಸಂಧಿ/ಪಾಡ್ದನವನ್ನು ಹೊಂದಿದ್ದು ಅದು ವಿವರಿಸುವಂತೆ ಸಿರಿ ಬಳಗವು ಮಾತೃವಂಶೀಯ ಕುಟುಂಬವೊಂದರ ನಾಲ್ಕು ತಲೆಮಾರುಗಳ ದೈವತ್ವೀಕರಣಗೊಂಡ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಒಳಗೊಂಡಿದೆ.  ಈ ಆರಾಧನೆಯು ವಾರ್ಷಿಕವಾಗಿ ನಡೆಯುವ ಪ್ರಾದೇಶಿಕ ನೆಲೆಯನ್ನು ಹೊಂದಿದ, ಪುರಾಣಪಠ್ಯ – ಪಾಡ್ದನವನ್ನು ಹೊಂದಿದ ಸಾಮೂಹಿಕ ಮೈದುಂಬು ವಿಕೆಯ ಆಚರಣೆಯಾಗಿದೆ.  ಫೆಬ್ರವರಿಯಿಂದ ಮೇ ತಿಂಗಳ ತನಕ ಹುಣ್ಣಿಮೆಯ ರಾತ್ರಿ ಈ ವಿಧಿ ಆಚರಣೆ ಹತ್ತಿಪ್ಪತ್ತು ಸಿರಿ ಆರಾಧನಾ ಕೇಂದ್ರಗಳಲ್ಲಿ ನಡೆಯುತ್ತದೆ. ಸಿರಿ ಆರಾಧನಾ ಕೇಂದ್ರ – ಆಲಡೆಯ ಪರಿಸರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸ್ತ್ರೀಪುರುಷರು ಸಿರಿಸಂಧಿಯನ್ನು ಹಾಡುತ್ತ ಸಾಮೂಹಿಕ ಮೈದುಂಬುವಿಕೆಗೆ ಒಳಗಾಗುತ್ತಾರೆ. ಆ ಮೂಲಕ ನಿರ್ಮಿತವಾಗುವ ಮಧ್ಯಂತರ ಜಗತ್ತಿನಲ್ಲಿಸಿರಿ ಕುಟುಂಬವಾಗಿ ಪರಿವರ್ತಿತವಾಗುತ್ತಾರೆ. ತಾತ್ಕಾಲಿಕ ಸಿರಿ ಕುಟುಂಬದ ಬಂಧುಗಳಾಗಿ ಸಂಬಂಧವನ್ನು ಕಟ್ಟಿಕೊಳ್ಳುತ್ತಾರೆ. ಅಲ್ಲಿ ಸಾಧ್ಯವಾಗುವ ವ್ಯಕ್ತಿತ್ವ ಪಲ್ಲಟದ ಮೂಲಕ ತಮ್ಮ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಅದು ಹೆಣ್ಣೊಬ್ಬಳು ಆವೇಶಗೊಂಡು ಮಾನಸಿಕ ಬಿಡುಗಡೆ ಪಡೆಯುವ ಮತ್ತು ಶಕ್ತಿಯನ್ನು ತುಂಬಿ ಕೊಳ್ಳುವ ಪರ್ಯಾಯ ವ್ಯವಸ್ಥೆಯಾಗಿ ಸಿರಿ ಆರಾಧನೆ ಸಂಕೀರ್ಣತೆಯನ್ನು ಪಡೆದುಕೊಂಡು ಸೂಕ್ಷ್ಮ ಅಧ್ಯಯನವನ್ನು ಕೋರುತ್ತದೆ.

ಸಿರಿ ಮೈದುಂಬುವಿಕೆಯ ಪ್ರಕ್ರಿಯೆಇಲ್ಲೆಚ್ಚಿನ ದಲಿಯ

ಸಿರಿ ಮೈದುಂಬುವಿಕೆಗೆ ಒಳಗಾಗುವ ಸಾವಿರಾರು ಮಹಿಳೆಯರು ತುಳುನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿದ್ದಾರೆ. ಸಾಮಾನ್ಯವಾಗಿ ಹೆಣ್ಣು ಮೈನೆರೆಯುವ ಹಿಂದು ಮುಂದಿನ ದಿನಗಳಲ್ಲಿ, ವಿವಾಹಪೂರ್ವೋತ್ತರ ಕಾಲದಲ್ಲಿ ಹಾಗೂ ಹೆರಿಗೆಯ ಆಚೀಚಿನ ಸಂದರ್ಭಗಳಲ್ಲಿ ಸಿರಿ ಮೈದುಂಬುವಿಕೆಗೆ ವಿಶೇಷವಾಗಿ ಒಳಗಾಗುವುದು ಕಂಡುಬರುತ್ತದೆ. ನನ್ನ ಕ್ಷೇತ್ರಾಧ್ಯಯನ ಮಾಹಿತಿ ಹೇಳುವಂತೆ ಸುಮಾರು ೧೫ ರಿಂದ ೨೫ ವರ್ಷ ವಯೋಮಾನದ ಗುಂಪು ಈ ಪ್ರಕ್ರಿಯೆಗೆ ಒಳಗಾಗುತ್ತದೆ. ಈ ಯಾವುದೇ ಹಂತದಲ್ಲಿರುವ ಮಹಿಳೆ ಅತೀವ ಸಂಕಟ, ಒತ್ತಡ ಅಥವಾ ಅನಾರೋಗ್ಯಕ್ಕೆ ಪಕ್ಕಾಗುವ ಘಟನೆಗಳು ಸಂಭವಿಸಿದಾಗ ಇದನ್ನು ಸಂರಕ್ಷಣಾತ್ಮಕ ಲೌಕಿಕ ನೆಲೆ ತಪ್ಪಿದ ಸ್ಥಿತಿಯಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಆಕೆ ಸಹಜವಾಗಿಯೇ ಅಲೌಕಿಕ ನೆಲೆಯ ಸಂರಕ್ಷಣೆಗಾಗಿ ಹಾತೊರೆಯುತ್ತಾಳೆ. ಈ ಹಾತೊರೆಯು ವಿಕೆಯು ಅವಳಲ್ಲಿ ಆತಂಕ, ತುಮುಲವನ್ನು ಉಂಟುಮಾಡುತ್ತದೆ. ಆತಂಕ, ತುಮುಲ, ಉದ್ವೇಗಗಳು ಅಸಹನೀಯ ಯಾತನೆಯನ್ನು ತರುತ್ತಲೆ ಆಕೆ ಯಾವುದೋ ಒಂದು ಇಂತಹ ಕ್ಷಣದಲ್ಲಿ ಮೈದುಂಬುವಿಕೆಗೆ ಒಳಗಾಗುತ್ತಾಳೆ ಮತ್ತು ಇದು ನಿರೀಕ್ಷಿತ ಸ್ಥಿತಿ ಕೂಡಾ ಆಗುತ್ತದೆ ಆಕೆಗೆ.  ಮೈದುಂಬುವಿಕೆಗೆ ಒಳಗಾದ ವ್ಯಕ್ತಿಗಳ ಪರಿಭಾಷೆಯಲ್ಲಿ ಈ ಪ್ರಕ್ರಿಯೆಯನ್ನು ವಿವರಿಸುವುದಾದರೆ ಇದೊಂದು ದೈವ ಕೃಪೆ ಹಾಗೂ ಬದುಕಿಗೆ ಒದಗಿ ಬಂದ ಶ್ರೀರಕ್ಷೆ.

ಮಹಿಳೆಯ ಬದುಕಿನ ಸೂಕ್ಷ್ಮ ಸಂವೇದಿ ಘಟ್ಟಗಳಲ್ಲಿ ಆಕೆ ಆತಂಕ ಹಾಗೂ ತುಮುಲದ ಒತ್ತಡಕ್ಕೆ ಸುಲಭವಾಗಿ ಸಿಲುಕುತ್ತಾಳೆ. ಹಾಗೇನೆ ತನ್ನ ಬಯಕೆಯ ಲೌಕಿಕ ನೆಮ್ಮದಿ ಹಾಗೂ ಸಂರಕ್ಷಣೆಯ ನೆಲೆ ತಪ್ಪಿದಾಗಲೂ ಆಕೆ ಇದೇ ಬಗೆಯ ಒತ್ತಡಕ್ಕೆ ಒಳಗಾಗುತ್ತಾಳೆ. ಈ ಬಗೆಯ ಒತ್ತಡದಿಂದ ದೈನಂದಿನ ದಿನಚರಿಗೆ ತೊಡಕುಂಟಾಗಿ ಆಕೆಗೆ ದೈಹಿಕ ಅಥವಾ ಮಾನಸಿಕ ಅಸ್ವಾಸ್ಥ್ಯ ಕಾಡಬಹುದು ಇಲ್ಲವೆ ಮೈದುಂಬುವಿಕೆ ಕಾಣಿಸಿಕೊಳ್ಳಬಹುದು. ಹೀಗೆ ಹೆಣ್ಣೊಬ್ಬಳಲ್ಲಿ ಈ ಬಗೆಯ ಲಕ್ಷಣಗಳು ಕಾಣಿಸಿಕೊಂಡಾಗ ಆಕೆಯ ಕುಟುಂಬದವರು ಅವಳನ್ನು ‘ಕುಮಾರ’ನಲ್ಲಿಗೆ ಕರೆದೊಯ್ದು ‘ದಲಿಯ’ದ ಮುಖಾಂತರ ಆಕೆ ಸಿರಿ ಎನಿಸಿ ಸಿರಿ ಸಂಥಾನುಯಾಯಿ ಆಗುತ್ತಾಳೆ. ಹೀಗೆ ಹೆಣ್ಣೊಬ್ಬಳಿಗೆ ಸಿರಿ ಬಳಗದ ಸದಸ್ಯತ್ವ ನೀಡಿ ಬರಮಾಡಿಕೊಳ್ಳುವ ಆಚರಣೆಯನ್ನು ದಲಿಯ ಎನ್ನುತ್ತಾರೆ. ದಲಿಯ ಸೇವೆ ಎರಡು ವಿಧವಾಗಿ ನಡೆಯುತ್ತದೆ. ಒಂದು ಇಲ್ಲೆಚ್ಚಿನ ದಲಿಯ, ಇನ್ನೊಂದು ಜಾತ್ರೆ ದಲಿಯ ಇಲ್ಲೆಚ್ಚಿನ ದಲಿಯ ಅನಿರ್ದಿಷ್ಟವಾಗಿ ಅಗತ್ಯ ಸನ್ನಿವೇಶದಲ್ಲಿ ನಡೆಯುವ ವಿಧಿಯಾದರೆ ‘ಜಾತ್ರೆ ದಲಿಯ’ ವಾರ್ಷಿಕ ವಾಗಿ ನಿರ್ದಿಷ್ಟವಾಗಿ ನಡೆಯುವ ವಿಧಿ ಆಚರಣೆಯಾಗಿದೆ.

ಇಲ್ಲೆಚ್ಚಿನ ದಲಿಯ ಮನೆಯಲ್ಲಿ ನಡೆಯುವಂಥದು. ಸಾಮಾನ್ಯವಾಗಿ ಮೈದುಂಬುವಿಕೆಗೆ ಒಳಗಾದ ಹೆಣ್ಣಿನ ಮನೆಯಲ್ಲಿ ಈ ಆಚರಣೆ ನಡೆಯುತ್ತದೆ. ದಲಿಯ ವಿಧಿ ನಡೆಸಿಕೊಡುವ ಕುಮಾರನ ಮನೆಯಲ್ಲಿ ಅಥವಾ ಅನುಭವಿ ಸಿರಿಗಳ ಮನೆಗಳಲ್ಲಿ ನಡೆಯುವುದೂ ಇದೆ. ಹೊಸ ಹೆಣ್ಣೊಬ್ಬಳನ್ನು ಸಿರಿ ಪಂಥಕ್ಕೆ ಸೇರಿಸುವ ಇಲ್ಲೆಚ್ಚಿನ ದಲಿಯ ಆಚರಣೆಯಲ್ಲಿ ಆ ನಿರ್ದಿಷ್ಟ ಸಿರಿ ಕೇಂದ್ರದ ಎಲ್ಲ ಸಿರಿಗಳು ಹಾಗೂ ಕುಮಾರರು ಸೇರುತ್ತಾರೆ.  ದಲಿಯದಲ್ಲಿ ಪಾಲ್ಗೊಳ್ಳುವ ಸಿರಿಗಳು, ಕುಮಾರರು ಶೌಚವನ್ನು ಕಾಪಾಡಬೇಕಾಗುತ್ತದೆ.  ಸಂಭೋಗ, ಮಧ್ಯಪಾನ, ಮಾಂಸಾಹಾರವನ್ನು ವರ್ಜಿಸುವ ಮೂಲಕ ಹಾಗೂ ತಲೆ ಮೈಗೆ ಎಣ್ಣೆ ಸ್ನಾನ ಮಾಡುವಲ್ಲಿ ಶೌಚವನ್ನು ಪಾಲಿಸಲಾಗುತ್ತದೆ. ದಲಿಯ ನಡೆಯುವ ಮನೆಯನ್ನು ಶುದ್ದೀಕರಿ ಸುವ ಮೂಲಕ ನಿರ್ದಿಷ್ಟ ಸ್ಥಳವನ್ನು ನಿರ್ಮಿಸಲಾಗುತ್ತದೆ. ಆಚರಣೆಗೆ ರಾತ್ರಿಯನ್ನು ಆಯ್ದು ಕೊಳ್ಳುವಲ್ಲಿ ಕಾಲವನ್ನು ನಿರ್ದಿಷ್ಟಗೊಳಿಸಲಾಗುತ್ತದೆ. ಶೌಚದ ಮೂಲಕ ವ್ಯಕ್ತಿಯನ್ನು ನಿರ್ದಿಷ್ಟಕ್ಕೊಳಪಡಿಸಲಾಗುವುದು. ಹೀಗೆ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವ ಪ್ರಕ್ರಿಯೆಯು ಆರಾಧನಾ ವಿಧಿಗೆ ಅಗತ್ಯವಾದ ಭೂಮಿಕೆಯನ್ನು ಸಿದ್ಧಪಡಿಸುತ್ತದೆ.

ಸಂಜೆ ಹೊತ್ತಿಗೆ ದಲಿಯ ನಡೆಸುವ ಮನೆಯನ್ನು ಸಿರಿಗಳು, ಕುಮಾರರು ಮತ್ತು ಹೊಸದಾಗಿ ಸಿರಿ ಪಂಥಕ್ಕೆ ಸೇರಲಿರುವ ಹೆಣ್ಣು ಮತ್ತು ಆಕೆಯ ಕುಟುಂಬದವರು ಸೇರುತ್ತಾರೆ. ಹೀಗೆ ಸೇರಿದ ಎಲ್ಲರೂ ಕೂಡಿ ಉಂಡು ಸ್ನಾನ ಮಾಡಿ ಬರುತ್ತಾರೆ. ಸಿರಿಗಳು ಸಾಮಾನ್ಯವಾಗಿ ಬಿಳಿ ಸೀರೆ ರವಕೆ, ಕುಮಾರರು ಕೆಂಪು ಪಟ್ಟೆ ತೊಟ್ಟು ದಲಿಯಕ್ಕೆ ಸಿದ್ಧರಾಗುತ್ತಾರೆ. ಬಿಳಿ ಬಟ್ಟೆಯ ಮಡಿಹಾಸಿನ ಮೇಲೆ ಸಿರಿಗಳು ಸಾಲಾಗಿ ನಿಲ್ಲುವರು. ಕುಮಾರ ಪ್ರಾರ್ಥನೆ ಮಾಡಿ ಹಿಂಗಾರದ ಹೂ ಹಿಡಿದು ‘ಅಜ್ಜೆರ ಸಂಧಿ’ ಹಾಡುತ್ತ ಮೈದುಂಬುವನು. ‘ಹಿಂಗಾರದ ಹೂಗೂನೆ ಯಲ್ಲಿ ಗಂಧದ ಗುಳಿಗೆಯಲ್ಲಿ ಸಿರಿಹುಟ್ಟಿನ ಸಿರಿಸಂಧಿಯನ್ನು ಹಾಡುತ್ತ ಹಿಂಗಾರವನ್ನು ಆರಂಭಿಕಳ ಕೈಗೆ ನೀಡುವನು. ಇತರ ಸಿರಿಗಳಿಗೆ ಹಾಗೂ ಕುಮಾರರಿಗೆ ‘ಹೂ’ ಕೊಡುತ್ತಾರೆ. ಸಿರಿಯ ಹುಟ್ಟಿನ ಅಲೌಕಿಕತೆ ಆಕೆಗೆ ‘ಜೋಗ’ವನ್ನು ತೆರೆಯುತ್ತಲೆ ಹಿಂಗಾರದ ಸ್ಪರ್ಶ ಸಿರಿಯೊಂದಿಗೆ ಅವಿನಾಭಾವ ಸಂಬಂಧವನ್ನು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ಈ ಹಂತ ದಲ್ಲಿ ಅವರು ಸಾಮೂಹಿಕ ಮೈದುಂಬುವಿಕೆಗೆ ಒಳಗಾಗುತ್ತಾರೆ. ಕುಮಾರ ಸಿರಿಸಂಧಿಯ ಭಾಗವನ್ನು ಹಾಡುತ್ತ ಸಂಘರ್ಷದ ಸಂದರ್ಭವನ್ನು ತಲುಪಿದಾಗ ಅವರಲ್ಲಿ ಆವಾಹನೆ ತೀವ್ರತರವನ್ನು ಮುಟ್ಟುತ್ತದೆ. ಇಲ್ಲೆಚ್ಚಿನ ದಲಿಯ ಹಾಗೂ ಜಾತ್ರೆ ದಲಿಯ ಎರಡು ಸಂದರ್ಭ ದಲ್ಲೂ ಸಿರಿ ಸಂಧಿಯನ್ನು ಪೂರ್ಣವಾಗಿ ಹಾಡಲಾಗುವುದಿಲ್ಲ. ಮತ್ತು ಕ್ರಮಾನುಗತ ನಿರೂಪಣೆ ಇರುವುದಿಲ್ಲ. ಸಿರಿಬಳಗದ ಬದುಕಿನ ವಿಶಿಷ್ಟ ಸಂಘರ್ಷದ ಸಂದರ್ಭವನ್ನಷ್ಟೇ ಹಾಡಲಾಗುತ್ತದೆ. ಇಂತಹ ಸಂಘರ್ಷದ ಹಂತದ ವಿವರಗಳು ಮೈದುಂಬಿದ ವ್ಯಕ್ತಿಗಳು ತಮ್ಮ ವೈಯಕ್ತಿಕ ವ್ಯಕ್ತಿತ್ವವನ್ನು ಕಳೆದುಕೊಂಡು ಸಿರಿಕುಟುಂಬದ ಸದಸ್ಯರಾಗಿ ಪಲ್ಲಟ ಗೊಳ್ಳಲು ಸಹಕಾರಿಯಾಗುತ್ತವೆ. ಸಿರಿ ಬಳಗವಾಗಿ ಮಾರ್ಪಟ್ಟು ಪರಸ್ಪರ ಮುಖಾಮುಖಿ ಸಂವಾದ ನಡೆಸುತ್ತಾರೆ. ಸಿರಿ ಪಾಡ್ದನದ ರೂಪದಲ್ಲಿ, ಅಂದರೆ ಕುಮಾರನ ಪ್ರಶ್ನೆಗೆ ಮೈದುಂಬಿದ ಹೆಣ್ಣೊಬ್ಬಳು ಸಿರಿಯಾಗಿ ಅಥವಾ ಸೊನ್ನೆಯಾಗಿ, ಅಥವಾ ಅಬ್ಬಗ ಅಥವಾ ದಾರಗಳಾಗಿ ತನ್ನನ್ನು ಗುರುತಿಸಿಕೊಳ್ಳುತ್ತಾಳೆ, ಆ ಬಂಧುತ್ವದ ನೆಲೆಯಲ್ಲಿ ಕುಮಾರನ ಪ್ರಶ್ನೆಗೆ ಉತ್ತರಿಸುತ್ತಾಳೆ. ಹೀಗೆ ತನ್ನ ವೈಯಕ್ತಿಕತೆಯನ್ನು ಕಳೆದುಕೊಳ್ಳುತ್ತ ಸಿರಿ ಬಳಗದ ಹೊಸ ವ್ಯಕ್ತಿತ್ವ ಪಡೆದುಕೊಳ್ಳುತ್ತ ಕುಮಾರನಿಗೆ ಉತ್ತರ ಹೇಳುವಲ್ಲಿ ಸಿರಿಯ ನಿಲುವನ್ನು ಮಾದರಿ ಯಾಗಿ ಸ್ವೀಕರಿಸುತ್ತಾಳೆ ಮತ್ತು ಪ್ರತಿಪಾದಿಸುತ್ತಾಳೆ. ಸಿರಿಯನ್ನು ಸಮರ್ಥಿಸಿಕೊಳ್ಳುತ್ತಲೆ ಪುರುಷ ಮೌಲ್ಯಗಳನ್ನು ಪ್ರಶ್ನೆಗೊಡ್ಡುತ್ತಾಳೆ. ಹೀಗೆ ದಲಿಯದಲ್ಲಿ ಹೆಣ್ಣೊಬ್ಬಳು ತನ್ನನ್ನು ಸಿರಿ ಬಳಗದ ನಿರ್ದಿಷ್ಟ ಸದಸ್ಯೆಯಾಗಿ ಸ್ಥಾಪಿಸಿಕೊಂಡ ನಂತರ ಪ್ರತಿ ವರ್ಷ ಸಿರಿಜಾತ್ರೆಗೆ ಬಂದು ‘ದಲಿಯ ಸೇವೆ’ ಸಲ್ಲಿಸಬೇಕು.

ಜಾತ್ರೆ ದಲಿಯ

ಸಿರಿ ಜಾತ್ರೆ ದಲಿಯ ಸಿರಿ ಆರಾಧನಾ ಕೇಂದ್ರ (ಆಲಡೆ) ಗಳಲ್ಲಿ ನಡೆಯುವ ವಾರ್ಷಿಕ ಆರಾಧನೆ. ಆಲಡೆ ಎಂದು ಕರೆಯಲಾಗುವ ಈ ಆರಾಧನಾ ಕೇಂದ್ರಗಳು ಸಂಕೀರ್ಣ ಸ್ವರೂಪ ವನ್ನು ಹೊಂದಿವೆ.

ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳುಗಳ ನಿರ್ದಿಷ್ಟ ಹುಣ್ಣಿಮೆಯ ರಾತ್ರೆ ನಿಗದಿತ ಸಿರಿ ಆರಾಧನಾ ಕೇಂದ್ರಗಳಲ್ಲಿ ಸಿರಿ ಜಾತ್ರೆ ನಡೆಯುತ್ತದೆ. ಪಾಂಗಾಳ, ಕವತ್ತಾರು, ಹಿರಿಯಡಕ, ಬೊಳ್ಯುಟ್ಟು, ನಂದಳಿಕೆ, ಮುಜಲೊಟ್ಟು, ಅತ್ರಿಜಾಲ್, ಮಾಲಾಡಿ, ದೈವಬೆಟ್ಟು, ಕೊಟ್ರಾಡಿ, ಕಂಡೇವು, ಕುತ್ರೊಟ್ಟು, ಉರುಂಬಿದೊಟ್ಟು, ಉರ್ಕಿತೋಟ, ಜರೆಗುಡ್ಡೆ, ಇತ್ಯಾದಿ ಕೇಂದ್ರಗಳಲ್ಲಿ ಸಿರಿ ಜಾತ್ರೆ ನಡೆಯುತ್ತದೆ.

ಸಿರಿ ಆರಾಧನಾ ಕೇಂದ್ರ ಆಲಡೆಯ ಮುಂದೆ ಶೈಕರಣಕ್ಕೊಳಗಾದುದು ಸ್ಪಷ್ಟವಾಗಿ ಗೋಚರಿಸುತ್ತದೆ. ಶಿವದೇವಾಲಯದ ಆವರಣದಲ್ಲಿಯೇ ಇವತ್ತು ಸಿರಿ ಕೇಂದ್ರ ಸಿರಿ ಗುಂಡ ಇದೆ. ದೇವಾಲಯದ ಗರ್ಭಗುಡಿಯಲ್ಲಿ ಶಿವ ಹಾಗು ಪರಿವಾರ ದೇವತೆಗಳಿದ್ದರೆ, ಸುತ್ತಿನ ಆವರಣದಲ್ಲಿ ಸಿರಿ ಗುಂಡದಲ್ಲಿ ಸಿರಿ ಹಾಗೂ ಆಕೆಯ ಬಳಗ ಇರುತ್ತದೆ. ಸಿರಿಜಾತ್ರೆ ಆ ಶೈವ ದೇವಾಲಯದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿಯೆ ನಡೆಯುತ್ತದೆ. ಸ್ಥಳದ ದೈವಗಳಿಗೆ ನೇಮ, ಕೋಲ ನಡೆಯುತ್ತದೆ. ಆದರೂ ಶಿಷ್ಟದೇವರಾದ ಶಿವನಿಗೂ ಸಿರಿಗೂ ಯಾವುದೇ ಸಂಬಂಧವಿಲ್ಲ. ಶಿವದೇವಾಲಯದ ದೇವತೆಗಳಿಗೆ ಆಗಮ ಸ್ವರೂಪದಲ್ಲಿ ಬ್ರಾಹ್ಮಣರಿಂದ ಪೂಜಾವಿಧಿ ನಡೆಯುತ್ತದೆ. ಸಿರಿ ಹಾಗೂ ಸ್ಥಳದ ದೈವ ಪರಿವಾರಗಳಿಗೆ ನಡೆಯುವ ಆರಾಧನಾ ವಿಧಿವಿಧಾನಗಳನ್ನು ಬ್ರಾಹ್ಮಣೇತರ ವರ್ಗದವರು ಪ್ರಧಾನವಾಗಿ ನಿರ್ವಹಿಸುತ್ತಾರೆ ಹಾಗೂ ಆಗಮೋಕ್ತ ಪೂಜಾವಿಧಾನ ಇವುಗಳಿಗಿಲ್ಲ. ಸಿರಿ ಗುಂಡ ದೇವಾಲಯದ ಹೊರ ಆವರಣದಲ್ಲಿದ್ದು ಅದಕ್ಕೆ ಆಗಮ ರೀತಿಯ ಪೂಜೆ ಇಲ್ಲ. ಸಿರಿಗುಂಡ ಎಂದು ಕರೆಯಲಾಗುವ ಸಿರಿ ಆರಾಧನಾ ಗುಡಿಗಳಲ್ಲಿ ಸಿರಿಯ ಮರದ ಉರು ಅಥವಾ ಲೋಹದ ಮೂರ್ತಿ ಪ್ರತಿಷ್ಠಾಪಿತವಾಗಿಲ್ಲ. ಅಲ್ಲಿರುವುದು ಸಿರಿ ಬಳಗದ ಕುಮಾರ, ಸೊನ್ನೆ ಅಬ್ಬಗ, ದಾರಗರ ಬಿಂಬಗಳು, ಸಿರಿಯ ಸಂಕೇತವಾಗಿ ಉರುವೊಂದು ನಾನು ಸಂದರ್ಶಿಸಿದ ಮಾಲಾಡಿಯಲ್ಲಿ ಇತ್ತು.

ಸಿರಿ ಜಾತ್ರೆ ದಲಿಯ ಸಿರಿ ಆರಾಧನಾ ಕೇಂದ್ರದ ಪರಿಸರದಲ್ಲಿ ನಡೆಯುತ್ತದೆ. ಇಲ್ಲೆಚ್ಚಿನ ದಲಿಯದಂತೆಯೇ ಮುಸ್ಸಂಜೆಯಿಂದಲೇ ಸಿರಿಗಳು, ಕುಮಾರರು, ಅವರ ಬಳಗದವರು, ಭಕ್ತ ಸಮುದಾಯದವರು ಆರಾಧನಾ ಕೇಂದ್ರದಲ್ಲಿ ಬಂದು ನೆರೆಯುತ್ತಾರೆ. ಮೈದುಂಬುವಿಕೆಗೆ ಅಗತ್ಯವಾದ ಎಲ್ಲ ‘ಪೂರ್ವರಂಗ’ ಇಲ್ಲೆಚ್ಚಿನ ದಲಿಯದಂತೆಯೇ ಸಿದ್ಧವಾಗುತ್ತದೆ. ಸ್ಥಳ, ಕಾಲ, ವ್ಯಕ್ತಿಗಳ ಪ್ರತ್ಯೇಕೀಕರಣ ನಡೆದು ‘ದಲಿಯ’ಕ್ಕೆ ಸಾಲಾಗಿ ಅಥವಾ ಗುಂಪಾಗಿ ಸಿರಿಗಳು ಮತ್ತು ಕುಮಾರರು ನಿಂತು ಹಿಂಗಾರದ ಹೂಗೊನೆ ಹಿಡಿದಿರುತ್ತಾರೆ. ಒಂದೊಂದು ತಂಡದಲ್ಲಿ ಸಾಮಾನ್ಯವಾಗಿ ಒಬ್ಬ ಕುಮಾರನಿಗೆ ನಾಲ್ಕಾರು ಸಿರಿಗಳಿರುವಂತೆ ಐದಾರು ಕುಮಾರಗೆ ಇಪ್ಪತ್ತರಿಂದ ಮೂವತ್ತು ಮಂದಿ ಸಿರಿಗಳು ಇರುತ್ತಾರೆ. ಕುಮಾರರಲ್ಲಿ ಸ್ಥಳ ಕುಮಾರ ಪ್ರಧಾನ ನಿಯಂತ್ರಕನಾಗಿದ್ದು ಅವನ ನಿರ್ದೇಶನಕ್ಕೆ ಒಳಪಟ್ಟು ಅಧೀನ ಕುಮಾರರು ಇರುತ್ತಾರೆ. ಹಾಗೇನೆ ಸಿರಿಗಳಲ್ಲಿ ಅನುಭವಿ ಸಿರಿಗಳು ಮತ್ತು ಆರಂಭಿಕ ಸಿರಿಗಳು ಎಂಬ ವರ್ಗೀಕರಣ ಕಾಣಿಸುತ್ತದೆ. ಕುಮಾರನಿಂದ ‘ಹೂ'(ಹಿಂಗಾರ ಗಂಧ) ಪಡೆದು ಸಿರಿ ಪಾಡ್ದನ ಹಾಡಿಕೆಯೊಂದಿಗೆ ಸಿರಿಗಳು ಮೈದುಂಬುವಿಕೆಗೆ ಒಳಗಾಗುತ್ತಾರೆ. ಸಿರಿ ಬಳಗದ ಮೈದುಂಬು ವಿಕೆಗೆ ಒಳಗಾದ ಈ ಮಹಿಳೆಯರು ಮಧ್ಯಂತರ ಜಗತ್ತಿಗೆ ಪ್ರವೇಶ ಪಡೆಯುತ್ತಲೆ ತಮ್ಮ ವೈಯಕ್ತಿಕತೆಯನ್ನು ಕಳೆದುಕೊಂಡು ಸಿರಿಬಳಗದ ಸದಸ್ಯರಾಗಿ ಪರಿವರ್ತನೆಗೊಳ್ಳುತ್ತಾರೆ. ಆ ನೆಲೆಯಲ್ಲೆ ಪ್ರಶ್ನೆ ಉತ್ತರ, ವಾದ – ಸಂವಾದ ನಡೆಸುತ್ತಾರೆ.  ಮೈದುಂಬುವಿಕೆಯ ನಿರಂತರ ಸ್ಥಿತಿಯಲ್ಲಿ, ಸಿರಿ ಪಾಡ್ದನದ ಹಾಡುಗಾರಿಕೆಯ ಹಿನ್ನೆಲೆಯಲ್ಲಿ ಸಿರಿಬಳಗದ ನಿರ್ದಿಷ್ಟ ಹೆಣ್ಣಿನೊಂದಿಗೆ ತನ್ನ ಸಾಮ್ಯವನ್ನು ಗುರುತಿಸಿಕೊಂಡ ಆಕೆ ತಾನು ಸಿರಿಯೊ, ಸೊನ್ನೆಯೊ, ಅಬ್ಬಗಳೋ, ದಾರಗಳೊ ಎಂದು ಹೇಳುತ್ತಾಳೆ. ಪಾಡ್ದನದಲ್ಲಿ ಸಿರಿ, ಸೊನ್ನೆ, ಅಬ್ಬಗ, ದಾರಗರು ಅನುಭವಿಸಿದ ವಿಶಿಷ್ಟ ಸಂಕಟದ ಸನ್ನಿವೇಶಗಳಿಗೂ ತನ್ನ ಕೌಟುಂಬಿಕ ಬದುಕಿನ ಸಂದರ್ಭಗಳಿಗೂ ಸಾಮ್ಯತೆ ಏರ್ಪಟ್ಟಾಗ ಆಕೆ ತೀವ್ರತರವಾದ ಆವಾಹನೆಗೆ ಒಳಗಾಗುತ್ತಾಳೆ. ಅದು ಸಿರಿಯ ಬದುಕಿಗೆ ಎದುರಾದ ಗಂಡನ ಶೋಷಣೆ ಇರಬಹುದು, ಅವನ ವಿವಾಹೇತರ ಅನೈತಿಕತೆ ಇರಬಹುದು, ವಿಚ್ಛೇದನ ಇರಬಹುದು ಅಥವಾ ಅಬ್ಬಗ ದಾರಗ ಅವಳಿ ಸೋದರಿ ಯರ ನಡುವಿನ ಹೊಡೆದಾಟ ಮತ್ತು ದುರಂತ ಸಾವು ಇರಬಹುದು. ಹೀಗೆ ಯಾವುದೂ ಇರಬಹುದು. ಇಂತಹದೇ ಇಕ್ಕಟ್ಟುಗಳಿಗೆ ಒಳಗಾದ ಹೆಣ್ಣು ಪಾಡ್ದನದ ಸಿರಿ ಬಳಗದ ನೋವಿಗೆ ಅತ್ಯಂತ ತೀವ್ರವಾಗಿ ಸ್ಪಂದಿಸುತ್ತಾಳೆ, ಸಂವೇದಿಸುತ್ತಾಳೆ. ತನ್ನ ಎಲ್ಲ ವೈಯಕ್ತಿಕತೆ ಗಳು ಕರಗಿ ಪಾಡ್ದನದ ಸಿರಿಯೊ ಸೊನ್ನೆಯೊ ಅಬ್ಬಗ ದಾರಗಳೊ ಆಗಿ ಪರಿವರ್ತನೆ ಹೊಂದು ವಲ್ಲಿ ಈ ಬಗೆಯ ಆಪ್ತತೆ ಪೂರಕವಾಗಿ ದುಡಿಯುತ್ತದೆ. ಒಂದೊಮ್ಮೆ ಹೊಸದಾಗಿ ದಲಿಯಕ್ಕೆ ನಿಂತ ಆರಂಭಿಕ ಹೆಣ್ಣು ಮಧ್ಯಂತರ ಜಗತ್ತಿನಲ್ಲಿ ವ್ಯಕ್ತಿತ್ವ ಪಲ್ಲಟಗೊಳ್ಳಲು ಅಂದರೆ ತನ್ನನ್ನು ಸಿರಿ ಬಳಗದ ನಿರ್ದಿಷ್ಟ ಸದಸ್ಯಳಾಗಿ ಕಂಡುಕೊಳ್ಳಲು ಸುಲಭ ಸಾಧ್ಯವಾಗದಾಗ ಅನುಭವಿ ಸಿರಿಗಳು ಮತ್ತು ಕುಮಾರರು ಸಾಕಷ್ಟು ಸಾಂತ್ವನ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಅವರ ಈ ಪ್ರಯತ್ನಗಳು ಸೋತಾಗ ಕುಮಾರ ಆಕೆಯ ‘ಬಾಯಿ ಬಿಡಿಸುವ’ ಕ್ರಿಯೆಗೆ ಮುಂದಾಗುತ್ತಾನೆ. ಹೀಗೆ ಬಾಯಿ ಬಿಡಿಸುವಲ್ಲಿ ದೈಹಿಕವಾಗಿ ಎಳೆದಾಡುವ, ಬೆದರಿಕೆ ಒಡ್ಡುವ ಪ್ರಸಂಗವೂ ಇದೆ. ಕೊನೆಗೂ ಆಕೆ ಬಾಯಿ ಬಿಟ್ಟಾಗ ಅವಳನ್ನು ಸಿರಿ ಬಳಗದ ನಿರ್ದಿಷ್ಟ ಸದಸ್ಯೆಯಾಗಿ ನೆರೆದ ಸಿರಿಗಳು, ಕುಮಾರರು ಸ್ವಾಗತಿಸುತ್ತಾರೆ. ಅದು ಅವರಿಗೆ ಒಂದು ಸಂಭ್ರಮದ ಕ್ಷಣವಾಗಿರುತ್ತದೆ. ಯಾಕೆಂದರೆ ವ್ಯಕ್ತಿಯೊಬ್ಬರ ದೇಶ ಮತ್ತು ಮನಸ್ಸಿನ ಪರಿಶುದ್ಧ ಸ್ಥಿತಿಯಲ್ಲಿ ಮಾತ್ರ ಸಿರಿ ಮೈದುಂಬುವುದು ಸಾಧ್ಯ ಎಂಬ ನಂಬಿಕೆ ಬಲವಾಗಿದೆ. ಹೀಗಾಗಿ ಹೆಣ್ಣೊಬ್ಬಳಿಗೆ ಸಿರಿಯಾಗುವುದು ಎಂದರೆ ಅವಳ ಸಚ್ಚಾರಿತ್ರ್ಯ ಮತ್ತು ಪಾವಿತ್ರ್ಯದ ಸಂಕೇತವೆಂದು ಭಾವಿಸಲಾಗುವುದು.

ರಾತ್ರಿ ಇಡೀ ನಡೆಯುವ ಸಿರಿ ಜಾತ್ರೆ ದಲಿಯದಲ್ಲಿ ಸಿರಿ ಸಂಧಿಯ ಉತ್ಕಟ ಸನ್ನಿವೇಶದ ಭಾಗಗಳನ್ನು ಹಾಡುತ್ತ, ಪರಸ್ಪರ ಸಂವಾದ ನಡೆಸುತ್ತ, ಹಿಂಗಾರವನ್ನು ಮುಖಕ್ಕೆ ಉಜ್ಜಿ ಕೊಳ್ಳುತ್ತ, ನಿಂತಲ್ಲಿ ತಲೆ ಸೊಂಟವನ್ನು ವೃತ್ತಾಕಾರವಾಗಿ ತಿರುಗಿಸುತ್ತ, ಸ್ಸೊ ಸ್ಸೊ ಸ್ಸೊ ಎಂದು ನಿಟ್ಟುಸಿರು ಬಿಡುತ್ತ ಅಟ್ಟಹಾಸ ತೋರುತ್ತ ಮೈದುಂಬುವ ಪ್ರಕ್ರಿಯೆ ಸಾಗುತ್ತದೆ.  ಜಾತ್ರೆ ದಲಿಯದಲ್ಲಿಯೂ ಸಿರಿ ಪಾಡ್ದನದ ಪೂರ್ಣಪಾಠವನ್ನು ಅಥವಾ ಕ್ರಮಾನುಗತ ನಿರೂಪಣೆಯ ಹಾಡಿಕೆ ನಡೆಸುವುದಿಲ್ಲ. ಸಿರಿಯ ಸಂಕಷ್ಟದ ಸಂಘರ್ಷವನ್ನು ಹೇಳುವ ಪಾಡ್ದನದ ಭಾಗವನ್ನಷ್ಟೆ ಹಾಡುವ ಮೂಲಕ ಮೈದುಂಬುವಿಕೆಯ ತೀವ್ರತೆಯನ್ನು ಕಾಯ್ದು ಕೊಳ್ಳಲಾಗುವುದು. ಇಂತಹ ಉತ್ಕಟ ಸನ್ನಿವೇಶಗಳಲ್ಲಿ ಸಿರಿ ಕುಮಾರರ ಮೈದುಂಬುವಿಕೆಯೂ ತೀವ್ರಗೊಳ್ಳುತ್ತದೆ, ಮತ್ತೆ ತಿಳಿಯಾಗುತ್ತದೆ. ಉತ್ಕಟ ಸಂದರ್ಭದಲ್ಲಿನ ಮೈದುಂಬುವಿಕೆಯ ತೀವ್ರತೆ ಎಷ್ಟಿರುತ್ತದೆಂದರೆ ಕೆಲವೊಮ್ಮೆ ನೆಲಕ್ಕೆ ಉರುಳುವ ಹಂತಕ್ಕೆ ಮುಟ್ಟುತ್ತದೆ. ಹೀಗೆ ಅಲ್ಲಿ ಉತ್ಕಟತೆ ಹಾಗೂ ಅಲ್ಲಲ್ಲಿ ನಿಲುಗಡೆ ಕಾಣಿಸಿದರೂ ರಾತ್ರಿ ಇಡೀ ಮೈದುಂಬುವಿಕೆಯ ನಿರಂತರತೆಯಲ್ಲಿ ಸಿರಿ ಜಾತ್ರೆ ನಡೆಯುತ್ತದೆ. ತೀವ್ರ ಆವೇಶದಿಂದ ಬಿಡುಗಡೆಗೊಂಡಾಗ ಸಿರಿ ಪಾಡ್ದನ ಹಾಡಿಕೆ ಪುನರಾರಂಭವಾಗುತ್ತದೆ. ಪಾಡ್ದನದ ಉತ್ಕಟ ಸನ್ನಿವೇಶ ಬಂದಾಗ ಮತ್ತೆ ಆವೇಶ ತೀವ್ರಗೊಳ್ಳುತ್ತದೆ. ಹೀಗೆ ಪಾಡ್ದನ ಹಾಡಿಕೆ – ತೀವ್ರ ಆವೇಶ – ಬಿಡುಗಡೆ ಈ ಆವರ್ತದ ಹಲವು ಹಂತಗಳಲ್ಲಿ ಪುನರಾವರ್ತನೆಗೊಳ್ಳುತ್ತದೆ. ರಾತ್ರಿ ಕಳೆದು ಮುಂಜಾನೆ ತಂತ್ರಿಯಿಂದ ತೀರ್ಥ ಪ್ರಸಾದ ಸ್ವೀಕರಿಸಿದಾಗ ಆವೇಶಿತ ಸಿರಿಬಳಗದ ಮೈದುಂಬಿದ ಶಕ್ತಿ ಮೈಬಿಟ್ಟು ಹೋಗುತ್ತದೆ.

ಸಿರಿ ಪಠ್ಯಪ್ರದರ್ಶನ ಮತ್ತು ಮಹಿಳಾ ಬದುಕು ನಡುವಿನ ಅಂತರ್ ಸಂಬಂಧ

ಪುರುಷಾಧಿಕಾರದ ವಿರುದ್ಧ ಹೋರಾಡಿದ, ಅಧಿಕಾರಿಯ ಪ್ರಭುತ್ವವನ್ನು ಪ್ರಶ್ನಿಸಿದ, ಲಿಂಗವ್ಯವಸ್ಥೆಯನ್ನು ನಿರಚನಗೊಳಿಸಿದ, ಮಾತೃರೂಪಿ ಸಂಸ್ಕೃತಿಯನ್ನು ಹುಟ್ಟುಹಾಕಿದ ಸಿರಿ ಎಲ್ಲ ಮಾತೃವಂಶೀಯ ತುಳುವ ಹೆಣ್ಣುಗಳ ಆರಾಧ್ಯದೇವತೆ. ಬಹಳ ಸುದೀರ್ಘ ಹಾಗೂ ವಿಶಿಷ್ಟ ಪಾಡ್ದನವನ್ನು ಹೊಂದಿದ್ದು, ಸಾಮೂಹಿಕ ಮೈದುಂಬುವಿಕೆಯ ಆಚರಣೆ ಯನ್ನು ಹೊಂದಿದ, ಅಲ್ಲಿ ಸೃಷ್ಟಿಯಾಗುವ ಮಧ್ಯಂತರ ಜಗತ್ತಿನಲ್ಲಿಸಾಧ್ಯವಾಗುವ ವ್ಯಕ್ತಿತ್ವದ ಪಲ್ಲಟ – ಆನುಭಾವಿಕ ಬಂಧುತ್ವ ಹಾಗೂ ವಾಸ್ತವ ಬದುಕಿನ ಸವಾಲುಗಳನ್ನು ಮೀರಲು ಅದು ತುಂಬಿಕೊಡುವ ಶಕ್ತಿ. ಇವೆಲ್ಲ ಬಹು ಆಯಾಮಗಳಿಂದ ಕೂಡಿದ ಸಂಕೀರ್ಣ ಸಿರಿ ಪಂಥವನ್ನು ಸುಲಭವಾಗಿ ಪ್ರವೇಶ ಮಾಡುವುದು ಮತ್ತು ಅರ್ಥೈಸುವುದು ಸಾಧ್ಯವಾಗ ಲಾರದು. ಸಿರಿ ಪಂಥ ಒಂದು ಧಾರ್ಮಿಕ ನಂಬಿಕೆಯ ಜಗತ್ತು. ಅದು ಅಲೌಕಿಕ ಜಗತ್ತಿನ ಸಂಗತಿ ಎಂದುಕೊಂಡರೂ ಹತ್ತು ಹಲವು ಆಯಾಮಗಳಲ್ಲಿ ವಾಸ್ತವದೊಂದಿಗೆ ಸಂಬಂಧ ಹೊಂದಿದೆ. ಹೀಗಿದ್ದರೂ ಸಿರಿ ಪಂಥದ ಅನುಯಾಯಿಗಳನ್ನು ಮಾತನಾಡಿಸಿದಾಗೆಲ್ಲ ಅವರ ಮಾತುಕತೆ ಧಾರ್ಮಿಕ ನೆಲೆಗೆ ಸರಿಯುತ್ತಿತ್ತು. ಈ ಬಗೆಯ ಅಪಾಯದ ಅರಿವಿನಲ್ಲಿ ಸಿರಿ ಸಂಧಿ, ಜಾತ್ರೆ ಮತ್ತು ಮಹಿಳಾ ಬದುಕಿಗಿರುವ ಅಂತರ್ ಸಂಬಂಧವನ್ನು ಸೂಕ್ಷ್ಮವಾಗಿ ಬಗೆಯುವುದು ಇಲ್ಲಿನ ಆಶಯವಾಗಿದೆ.

ಸಿರಿ ಸಂಧಿ ತುಳುವ ಬಂಟ ಸಮುದಾಯದ ಮೂರು ತಲೆಮಾರುಗಳ ಹೆಣ್ಣುಗಳ ಸಂಕಟ, ಸಂಘರ್ಷ, ಶೋಷಣೆ, ಹೋರಾಟವನ್ನು ಅತ್ಯಂತ ಸಮರ್ಥವಾಗಿ ಕಟ್ಟಿಕೊಡುವ ಬಹು ವಿಸ್ತಾರವಾದ ಕಾವ್ಯ. ವಿವೇಕ ರೈ ಅವರು ಹೇಳುವಂತೆ “ಸಿರಿ ಪುರಾಣ ಕಥೆಯ ಕೆಲವು ಸಾಮಾಜಿಕ ಮತ್ತು ನೈತಿಕ ತತ್ವಗಳನ್ನು ಪ್ರಧಾನವಾಗಿ ಆಧರಿಸಿದೆ. ಅದು ಸ್ತ್ರೀಮೂಲದ ಬಂಧುತ್ವ ಮತ್ತು ಕುಟುಂಬದಲ್ಲಿ ಸ್ತ್ರೀಯರ ಸ್ಥಾನಮಾನಗಳನ್ನು ನಿರ್ದೇಶಿಸುತ್ತದೆ. ಅದು ಮಾತೃಮೂಲೀಯ ಕುಟುಂಬ ಪದ್ಧತಿಯನ್ನು ಸಮರ್ಥಿಸಿ ಸ್ಥಾಪಿಸುತ್ತದೆ. ಜೊತೆಗೆ ಇಂತಹ ಪದ್ಧತಿಯ ಅನೇಕ ಲೋಪದೋಷಗಳ ಕಡೆಗೂ ಬೆಟ್ಟು ಮಾಡಿ ತೋರಿಸುತ್ತದೆ. ಮನುಷ್ಯನ ಮೂಲಭೂತ ಮಾನಸಿಕ ವಿಕಾರಗಳಿಂದ ಕಾಮ, ಸ್ವಾರ್ಥ, ಅತ್ಯಾಸೆ, ದೌರ್ಬಲ್ಯ – ಇವುಗಳೆಲ್ಲಾ ಈ ಪಾಡ್ದನದಲ್ಲಿ ಬಹಳ ಶಕ್ತಿಪೂರ್ಣವಾಗಿ ಕ್ರಿಯಾತ್ಮಕವಾಗಿ ಕಾಣಿಸುತ್ತವೆ. ಹೆಂಗಸರು ತಮ್ಮ ಸಂತಾನವನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಲು ಮತ್ತು ಮುಂದುವರಿಸಿ ಕೊಂಡು ಹೋಗಲು ಹೆಣಗಾಡುವುದನ್ನು ಇಲ್ಲಿ ಕಾಣಬಹುದು. ನಿಸ್ಸಹಾಯಕತೆ, ಕೆಟ್ಟ ವ್ಯವಸ್ಥೆ, ಅಗಲುವಿಕೆ – ಇವುಗಳಿಂದ ಉಂಟಾಗುವ ಕಾತರಗಳು ಸಮಸ್ಯೆಗಳ ರೂಪದಲ್ಲಿ ವ್ಯಕ್ತಿಗಳನ್ನು ಕಾಡುತ್ತವೆ. ಆದ್ದರಿಂದಲೆ ಸಿರಿಯ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಇಂತಹ ದುರಂತದ ಪರಿಣಾಮಗಳನ್ನು ಅಭಿನಯಿಸಿ ಜೊತೆಗೆ ಸಾಮೂಹಿಕವಾಗಿ ಇವು ಕಾಣಿಸಿ ಕೊಳ್ಳುವಾಗ ಹೆಚ್ಚು ಸಾಂತ್ವನ ವಾತಾವರಣ ಮೂಡಿಸುವಲ್ಲಿ ಅನುಕೂಲ ಎನ್ನುವ ತತ್ವವನ್ನು ಧ್ವನಿಸಲಾಗಿದೆ (ವಿವೇಕ ರೈ ೧೯೮೫ ಪು. ೭೨)”.

ಚಿನ್ನಪ್ಪಗೌಡರು ಪರಿಭಾವಿಸುವಂತೆ “……ತಾತ್ಕಾಲಿಕವಾದಿ ಮಧ್ಯಂತರ ಜಗತ್ತಿನಲ್ಲಿ ವ್ಯವಹರಿಸಿ ತಮ್ಮ ವಾಸ್ತವಕ್ಕೇ ಪ್ರತಿಕ್ರಿಯಿಸಿ, ನಿಜ ಬದುಕಿನ ನೋವುಗಳಿಂದ ಪಾರಾಗುವ, ಪುರುಷ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರಯತ್ನಗಳೆಂಬಂತೆ ಈ ಸಿರಿ ಜಾತ್ರೆಯನ್ನು ಪರಿಗಣಿಸ ಬೇಕಾಗುತ್ತದೆ. ಅಲೌಕಿಕಕ್ಕೆ ಅಂಟಿಕೊಂಡಿರುವ ಸಿರಿ, ಅಬ್ಬಯ್ಯ, ದಾರಯ ಸೊನ್ನೆ, ಗಿಂಡೆ ಮುಂತಾದ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ, ಅಲ್ಲಿನ ಮಾನವ ಸಂಬಂಧಗಳಿಂದುಂಟಾಗುವ ವೈಪರೀತ್ಯಗಳನ್ನು ಪ್ರಕಟಿಸುತ್ತಲೇ ಅದರ ಜೊತೆಗೇ ಲೌಕಿಕದ ಸಮಸ್ಯೆ ಗಳನ್ನು ಪ್ರಕಟಪಡಿಸುವ ಸಿರಿ ಜಾತ್ರೆಯು ಮಹಿಳೆಯರ ಮನೋಲೋಕದ ಸಂಕೀರ್ಣ ಪ್ರತಿಮೆ ಯೆಂಬಂತೆ ಗೋಚರಿಸುತ್ತದೆ.” (ಚಿನ್ನಪ್ಪಗೌಡ ೨೦೦೩ ಪು. ೧೩).

ಗಾಯತ್ರಿ ನಾವಡ ಅವರು ವಿಶ್ಲೇಷಿಸುವಂತೆ “ವಾಸ್ತವ ಬದುಕಿನಲ್ಲಿ ತನ್ನ ತುಮುಲ ತಲ್ಲಣಗಳಿಗೆ ಮೂಕ ಅಥವಾ ಮೌನವಾಗಿರಬೇಕಾದ ಸಂದರ್ಭ ಹೆಣ್ಣೊಬ್ಬಳ ಮೇಲೆ ಅಸಹನೀಯ ಒತ್ತಡವನ್ನು ತರುತ್ತದೆ. ಸಿರಿ ಜಾತ್ರೆಯಲ್ಲಿ ಮೈದುಂಬುವಿಕೆಗೆ ಒಳಗಾಗುವ ಹೆಣ್ಣು ತನ್ನ ಯಾತನೆ ತಳಮಳಗಳನ್ನು ಸಿರಿ ಕುಟುಂಬದ ಜೊತೆಗೆ ಹಂಚಿಕೊಳ್ಳುತ್ತಾಳೆ.  ಅವರಿಂದ ಆಕೆಗೆ ಸಮಾಧಾನ, ವಿಶ್ವಾಸ ಹಾಗೂ ಬೆಂಬಲಗಳು ದೊರೆಯುತ್ತವೆ. ಸತ್ಯ ಮತ್ತು ಸಚ್ಚಾರಿತ್ರ್ಯಗಳ ಪ್ರತೀಕವಾದಿ ಸಿರಿ ಮೈಮೇಲೆ ಬರುವುದು ತುಳುವ ಹೆಣ್ಣೊಬ್ಬಳ ಸತ್ಯ ಹಾಗೂ ಪರಿಶುದ್ಧತೆಯ ಸತ್ವ ಪರೀಕ್ಷೆಯೂ ಹೌದು. ಇದು ಅವಳಲ್ಲಿ ತನ್ನ ಸ್ತ್ರೀತ್ವದ ಬಗೆಗೆ ಅಭಿಮಾನ ಹಾಗೂ ಹೊಸ ಶಕ್ತಿಯನ್ನು ತುಂಬಿಕೊಡುತ್ತದೆ. ಹೊಸ ಶಕ್ತಿಯ ಸಂಚನ ಯಲ್ಲಿ ಅವರು ನಿಜಲೋಕದ ಸಂಘರ್ಷಗಳಿಗೆ ಮುಖಾಮುಖಿಯಾಗಿ ನಿಲ್ಲುತ್ತಾರೆ. (ಗಾಯತ್ರಿ ನಾವಡ ೧೯೯೭ ಪು. ೧೦೧)”.

ಮೇಲಿನ ಈ ಮೂವರು ವಿದ್ವಾಂಸರ ಮಾತುಗಳು ಸಿರಿಸಂಧಿ, ಆರಾಧನೆ ಹಾಗೂ ಮಹಿಳಾ ಬದುಕಿಗಿರುವ ಅಂತರ್‌ಸಂಬಂಧವನ್ನು ಬಹಳ ಸಮರ್ಥವಾಗಿ ನಿರೂಪಿಸುತ್ತವೆ.

ಸಿರಿ ಪಂಥವನ್ನು ಸಿರಿ ಸಂಧಿ, ಜಾತ್ರೆಯಲ್ಲಷ್ಟೆ ಮುಂದಿಟ್ಟು ನೋಡಲಾಗದು. ಅದು ಹೆಣೆದುಕೊಂಡಿರುವ ಮಹಿಳಾ ಬದುಕಿನ ಆಯಾಮವನ್ನು ಒಟ್ಟಿಗೆ ಗ್ರಹಿಸಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಯಾಕೆಂದರೆ ಪಠ್ಯ ಮತ್ತು ಪ್ರದರ್ಶನ (ಜಾತ್ರೆ) ದ ಆಚೆಗೆ ಕಾಣಿಸುವ ಮಹಿಳೆಯ ಸಾಮಾಜಿಕ, ಕೌಟುಂಬಿಕ ಸಂಬಂಧಗಳ ಹಿನ್ನೆಲೆಯನ್ನು ಪರಿಭಾವಿಸಬೇಕು. ಇಲ್ಲದೆ ಹೋದರೆ ಸಿರಿ ಪಂಥದ ಸಮಗ್ರತೆ ದಕ್ಕದೆ ಹೋಗುತ್ತದೆ.

ಸಿರಿ ಸಂಧಿಯ ಪಾತ್ರಗಳು, ಘಟನೆಗಳು ಆಚರಣೆಯ ಸಂದರ್ಭದಲ್ಲಿ ಪುನರಭಿನಯ ಗೊಳ್ಳುತ್ತವೆ. ಹೀಗೆ ಸಂಧಿಯು ಜಾತ್ರೆಗೊಂದು ಸನ್ನದಿನಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಜಾತ್ರೆಯ ಸ್ವರೂಪವನ್ನು ನಿರ್ಧರಿಸುತ್ತದೆ. ಇನ್ನೊಂದು ನೆಲೆಯಲ್ಲಿ ಆಚರಣೆಯ ಸಂದರ್ಭದಲ್ಲಿ ಸಿರಿ ಬಳಗದ ಮೈದುಂಬುವಿಕೆಗೆ ಒಳಗಾಗುವ ಹೆಣ್ಣುಗಳ ಬದುಕಿನ ಸಂಕಟ, ಶೋಷಣೆ, ಹಿಂಸೆ, ತುಮುಲ, ತಲ್ಲಣಗಳು ಜಾತ್ರೆಯ ಪ್ರದರ್ಶನವನ್ನು ನಿಯಂತ್ರಿಸುತ್ತದೆ. ಆಚರಣೆಯ ಸಂದರ್ಭದಲ್ಲಿ ಸೃಷ್ಟಿಯಾಗುವ ಮಧ್ಯಂತರ ಜಗತ್ತಿನಲ್ಲಿ ವ್ಯಕ್ತಿತ್ವ ಪಲ್ಲಟದ ಮೂಲದ ನಿಜ ಬದುಕಿನ ನೋವು ಒತ್ತಡಗಳಿಂದ ಪಾರಾಗುವ, ಬಿಡುಗಡೆ ಪಡೆಯುವಲ್ಲಿ ಹಾಗೂ ಶೋಷಕ ಸಂರಚನೆಯನ್ನು ಪ್ರಶ್ನಿಸುವ ಮತ್ತು ಅಂತಃಶಕ್ತಿಯನ್ನು ಕಟ್ಟಿಕೊಳ್ಳುವ ನೆಲೆಯಲ್ಲಿ ಮಹಿಳಾ ಬದುಕನ್ನು ನೇರವಾಗಿ ಪ್ರಭಾವಿಸುತ್ತದೆ.

ಸಿರಿ ಸಂಧಿಯ ನಿಕಟ ಪರಿಚಯ ಹೊಂದಿರುವ ತುಳುವ ಮಹಿಳೆಯರು ಸಿರಿ ಸಂಧಿಯ ಪಾತ್ರಗಳೊಂದಿಗೆ ತಾದಾತ್ಮ್ಯ ಹೊಂದಿದ್ದು ಮೈದುಂಬುವಿಕೆಗೆ ಒಳಗಾಗುವ ಮೂಲಕ ಸಿರಿ ಜಾತ್ರೆಯ ಪರಂಪರೆಯ ನಿರಂತರ ಮುಂದುವರಿಕೆಗೆ ಕಾರಣರಾಗುತ್ತಾರೆ. ಜಾತ್ರೆ ದಲಿಯಕ್ಕೆ ಹೊಸದಾಗಿ ಪ್ರವೇಶ ಪಡೆದ ಮಹಿಳೆಯರು ಸಿರಿ ಪಾಡ್ದನ ಕಲಿಯುವಲ್ಲಿ ಪಾಡ್ದನ ಸಂಪ್ರದಾಯದ ಮುಂದುವರಿಕೆಗೆ ಈ ಜಾತ್ರೆ ಭೂಮಿಕೆಯಾಗಿ ದುಡಿಯುತ್ತದೆ, ಪಾಡ್ದನದ ಪುನರ್‌ಸೃಷ್ಟಿಗೆ ಕಾರಣವಾಗುತ್ತದೆ. ಸಿರಿ ಪಾಡ್ದನ ಬಿತ್ತರಿಸುವ ಮೌಲ್ಯಗಳು, ತುಳುವ ಬದುಕಿಗೆ ಅಲ್ಲಿನ ಸಾಮಾಜಿಕ ಕೌಟುಂಬಿಕ ವ್ಯವಸ್ಥೆಗೆ ನೀತಿ ಸಂಹಿತೆಯಂತೆ ಕೆಲಸ ಮಾಡುತ್ತದೆ. ವರ್ಷ ವರ್ಷ ಜರಗುವ ಜಾತ್ರೆ ತುಳುವ ಮಹಿಳೆಗೆ ತನ್ನೊಳಗನ್ನು ತೆರೆದಿಡುವ ವೇದಿಕೆಯಾಗಿ, ಬಿಡುಗಡೆಯ ಒಂದು ಅವಕಾಶವಾಗಿ ಒದಗಿ ಬರುತ್ತದೆ. ಸಿರಿಯನ್ನು ಸ್ತ್ರೀ ಶಕ್ತಿಯ ಮಾದರಿಯಾಗಿ ಕಂಡುಕೊಳ್ಳುವ ಮಹಿಳೆಯರು ತಮ್ಮ ದಮನವನ್ನು ದಾಟುವ ಶಕ್ತಿಯನ್ನು ಪಡೆದು ಕೊಳ್ಳುವಲ್ಲಿ ಪ್ರೇರಕವಾಗಿ ನಿಲ್ಲುತ್ತದೆ.

ಬದಲಾದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಸಂದರ್ಭದಲ್ಲಿ ಸಿರಿ ಜಾತ್ರೆ ಮತ್ತು ಸಿರಿ ಸಂಧಿಯ ‘ಸಿರಿ ಸಂಸ್ಕೃತಿ ಲೋಕ’ ಹೆಣ್ಣಿನ ಸಬಲೀಕರಣವನ್ನು ಕಟ್ಟುವಲ್ಲಿ ಇತ್ಯಾತ್ಮಕವಾಗಿ ಪರಿಗಣಿತವಾಗುತ್ತದೆ. ಹೀಗಿದ್ದೂ ಸಿರಿ ಸಂಧಿಯಲ್ಲಿ ಸಿರಿ ಅತ್ಯಂತ ಸಮರ್ಥ ಹಾಗೂ ಶಕ್ತಿಯುತ ಹೆಣ್ಣಾಗಿ ಕಂಡುಬಂದರೂ ಈಚೆಗೆ ಇಡೀ ಜಾತ್ರೆಯ ನಿಯಂತ್ರಕ ಶಕ್ತಿಯಾಗಿ ಕುಮಾರ ಕಾಣಿಸಿಕೊಳ್ಳುತ್ತಿದ್ದಾನೆ. ಪುರುಷ ಪ್ರಾಬಲ್ಯ ಮತ್ತು ಅಧಿಕಾರದ ಪ್ರತಿನಿಧಿ ಯಾಗಿ ಕುಮಾರ ಪ್ರಕಟವಾಗುತ್ತಿದ್ದಾನೆ. ಸಿರಿ ಸಂಧಿ ಹಾಗೂ ಸಿರಿ ಜಾತ್ರೆ ಒಂದಕ್ಕೊಂದು ಪೂರಕವಾಗಿ ದುಡಿಯಬೇಕಾದ ನಿಜಕ್ಕೆ ಬದಲಾಗಿ ಪರಸ್ವರ ದ್ವಂದ್ವವಾಗಿ ನಿಲ್ಲುತ್ತದೆ. ಅಂದರೆ ನಾನು ಹೇಳುತ್ತಿರುವುದು ಸಿರಿ ಪಾಡ್ದನದಲ್ಲಿ ಸಿರಿ ಅತ್ಯಂತ ಮಹತ್ವದ ಮತ್ತು ಗಟ್ಟಿ ಹೆಣ್ಣಾಗಿ ಪ್ರತಿನಿಧೀಕರಣಗೊಂಡರೆ ಸಿರಿ ಜಾತ್ರೆಯ ಸಿರಿಬಳಗ ಕುಮಾರನ ಅಧೀನತೆಗೆ ಒಳಪಟ್ಟು ಪ್ರಕಟವಾಗುತ್ತಿರುವುದು ಮಹಿಳಾ ಬದುಕಿಗೆ ಒಡ್ಡಿದ ಆತಂಕ ಅನಿಸುತ್ತದೆ.

ಸಿರಿ ಆರಾಧನಾ ಪಂಥದ ಅನನ್ಯತೆ

ಮೈದುಂಬುವಿಕೆಯ ಪ್ರಕ್ರಿಯೆ, ಅದು ಮೈದುಂಬುವ ಬಗೆ, ಪ್ರದರ್ಶನ ಜಗತ್ತು ಹಾಗೂ ಪರಿಣಾಮಗಳ ಅಧ್ಯಯನಕ್ಕೆ ತುಳುನಾಡಿನ ಸಾಮೂಹಿಕ ಮಹಿಳಾ ಮೈದುಂಬುವಿಕೆಯ ಸಿರಿ ಆರಾಧನಾ ಪಂಥವನ್ನು ಒಂದು ಪ್ರಾಯೋಗಿಕ ಮಾದರಿಯಾಗಿ ತೆಗೆದುಕೊಳ್ಳುವುದು ಮೈದುಂಬುವಿಕೆಯ ವಿಶ್ಲೇಷಣೆಗೆ ಹೆಚ್ಚು ಉಪಯುಕ್ತವಾಗಬಹುದು. ಮೈದುಂಬುವ ಅಲೌಕಿಕ ಶಕ್ತಿಗಳ ಬಗೆಗಳು. ಅವುಗಳ ನಡುವಿನ ಸಂಬಂಧ ಹಾಗೂ ವೈರುಧ್ಯಗಳು ಹಾಗೂ ಅವುಗಳ ಗುಣ ಸ್ವಭಾವವನ್ನು ಅರ್ಥೈಸಲು ಇದು ನೆರವಾಗಬಹುದು.

ಈ ವಿಶ್ಲೇಷಣೆಗೆ ತೊಡಗುವ ಮುನ್ನ ಸಿರಿ ಆರಾಧನಾ ಪಂಥದ ವಿವರ ಹಾಗೂ ಅನನ್ಯತೆ ಯನ್ನು ಪರಿಭಾವಿಸಬೇಕು. ನಾನು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅಧ್ಯಯನ ದೃಷ್ಟಿಯಿಂದ ಪ್ರೇಕ್ಷಕಳಾಗಿ ಹಿರಿಯಡಕ, ನಂದಳಿಕೆ, ಕವತ್ತಾರು ಹಾಗೂ ನಿಡ್ಗಲ್ಲು ಸಿರಿ ಜಾತ್ರೆಗಳಲ್ಲಿ ನಾಲ್ಕಾರು ಬಾರಿ ಪಾಲ್ಗೊಂಡಿದ್ದೇನೆ. ನನ್ನ ಈ ಪರಿಕ್ಷಣೆಯು ಸಿರಿ ಆರಾಧನಾ ಪಂಥವು ತುಳುನಾಡಿನ ಇತರ ಆರಾಧನಾ ಸಂಪ್ರದಾಯಗಳಾದ ನಾಗಾರಾಧನೆ, ಕಾಡ್ಯನಾಟ, ಪಾಣಾರಾಟ, ದೈವಾರಾಧನೆ (ಭೂತಾರಾಧನೆ) ಹಾಗೂ ವೈದಿಕ ದೇವಾಲಯಗಳ ಉತ್ಸವ ಆಚರಣೆಗಿಂತ ಅನೇಕ ನೆಲೆಗಳಿಂದ ಭಿನ್ನವಾಗಿದೆ ಮತ್ತು ವಿಶಿಷ್ಟವಾಗಿದೆ ಎಂಬುದನ್ನು ಕಂಡುಕೊಂಡಿದ್ದೇನೆ.

ತುಳುನಾಡಿನಲ್ಲಿ ಪಿತೃರೂಪಿ ಅಧಿಕಾರವನ್ನು ಭಂಜನಗೊಳಿಸಿ ಮಾತೃವಂಶೀಯತೆಯನ್ನು ಹುಟ್ಟುಹಾಕಿದಳೆಂದು ಭಾವಿಸಲಾಗುವ ಸಿರಿ ಜಾತಿ ಬಾಂಧವ್ಯದ ನೆಲೆಯನ್ನು ಮೀರಿ ತುಳು ನಾಡಿನ ಇಡಿಯ ಬ್ರಾಹ್ಮಣೇತರ ಮಾತೃರೂಪಿ ಸಂಸ್ಕೃತಿಯ ಹೆಣ್ಣುಗಳೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳುವುದು, ಸಿರಿ ಬದುಕು, ಸಾಹಸ, ಸವಾಲು, ಪ್ರತಿಭಟನೆ ಮತ್ತು ಪರಿಚಲನೆಯನ್ನು ಹೇಳುವ ಸಿರಿ ಸಂಧಿಯ ಹಾಡುಗಾರಿಕೆ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ವಾಗಿ ಸಿರಿ ಮೈದುಂಬುವಿಕೆಗೆ ಒಳಗಾಗುವುದು, ವಿಭಿನ್ನ ಜಾತಿವರ್ಗದ ಅಪರಿಚಿತ ಮಹಿಳೆ ಯರು ಆರಾಧನೆಯ ಸಂದರ್ಭದಲ್ಲಿ ಸಿರಿ ಕುಟುಂಬವಾಗಿ ಪಲ್ಲಟಗೊಳ್ಳುವುದು, ಸಾಮಾಜಿಕ ವಾಗಿ ಹಾಗೂ ಕೌಟುಂಬಿಕವಾಗಿ ಈ ಮಹಿಳೆಯರು ಅನುಭವಿಸುವ ಶೋಷಣೆಗೂ ಸಿರಿ ಆರಾಧನಾ ಪಂಥಕ್ಕೂ ಇರುವ ಅಂತರ್ ಸಂಬಂಧ, ಆರಾಧನೆಯಲ್ಲಿ ಸಿರಿಮೈದುಂಬುವ ಮೂಲಕ ನಿರ್ಮಾಣವಾಗುವ ಮಧ್ಯಂತರ ಜಗತ್ತಿನಲ್ಲಿ ತಮ್ಮ ಲೌಕಿಕ ಬದುಕಿನ ಬವರ, ಬವಣೆ, ಬಯಕೆಗಳಿಗೆ, ನೋವು ಅವಮಾನಗಳಿಗೆ ಈ ಪಲ್ಲಟದ ಮೂಲಕ ಪರಿಹಾರದ ದಾರಿ ಕಂಡುಕೊಳ್ಳುವುದು, ಸಿರಿ ಕುಟುಂಬದ ಮೈದುಂಬುವಿಕೆಗೆ ಒಳಗಾಗುವ ಮೂಲಕ ಹೆಣ್ಣೊಬ್ಬಳು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಪಡೆದುಕೊಳ್ಳುವ ಮಾನಸಿಕ ನೆಮ್ಮದಿ ಹಾಗೂ ಗೌರವ ಮನ್ನಣೆಗಳು ಹಾಗೂ ವೈಯಕ್ತಿಕವಾಗಿ ಕಟ್ಟಿಕೊಳ್ಳುವ ಅಂತಃಶಕ್ತಿ ಅದರಿಂದ ಸಾಧ್ಯವಾಗುವ ಪ್ರತಿಭಟನೆಯ ದನಿಯಿಂದಾಗಿ ಇದೊಂದು ಅತ್ಯಂತ ವಿಶಿಷ್ಟ ಆರಾಧನಾ ಪಂಥವಾಗಿ ಗಮನ ಸೆಳೆಯುತ್ತದೆ.

ಲಿಂಗಭೇದ ವ್ಯವಸ್ಥೆಯ ಒಳಸೂಕ್ಷ್ಮದೊಂದಿಗೆ ಸಿರಿ ಮೈದುಂಬುವಿಕೆಯಂತಹ ಆರಾಧನಾ ಪಂಥಗಳ ಸಂಬಂಧವನ್ನು ಗ್ರಹಿಸಬಹುದು. ಸಿರಿ ಆರಾಧನೆಯಲ್ಲಿ ಭಾಗವಹಿಸುವ ಮಹಿಳೆ ಯರ ಆರ್ಥಿಕ ಸಾಮಾಜಿಕ ಸ್ಥಿತಿಗತಿ, ಕೌಟುಂಬಿಕ ಸಂಬಂಧಗಳಲ್ಲಿನ ಬಿರುಕು, ಹೆಣ್ಣಿನ ಕುರಿತು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಇರುವ ಗ್ರಹಿಕೆ ಮತ್ತು ನಿರೀಕ್ಷೆಗಳಾದ ಮದುವೆ, ಪಾತಿವ್ರತ್ಯ, ತಾಯ್ತನ, ನೀತಿನಿಯಮದ ಕಟ್ಟುನಿಟ್ಟುಗಳು, ಸ್ತ್ರೀತ್ವದ ಕುರಿತ ತಿಳುವಳಿಕೆಗಳು ಹೆಣ್ಣೊಬ್ಬಳನ್ನು ಸಾಕಷ್ಟು ಆತಂಕಕ್ಕೆ ತಳ್ಳುತ್ತವೆ, ಆತ್ಮವಿಶ್ವಾಸವನ್ನು ಇಂಗಿಸುತ್ತವೆ. ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಆಘಾತದಲ್ಲಿ ಆಕೆ ಹೊಸ ಅಸ್ತಿತ್ವ ಕ್ಕಾಗಿ ಹುಡುಕಾಟ ನಡೆಸುತ್ತಾಳೆ. ಸಿರಿ ಆರಾಧನೆಯ ಸಂಕೀರ್ಣತೆಯನ್ನು ಗುರುತಿಸುವ ಸಂದರ್ಭದಲ್ಲಿ ಚಿನ್ನಪ್ಪಗೌಡರು ಹೇಳಿದಂತೆ “ಉತ್ಸವ ರೂಪದಲ್ಲಿನಡೆಯುವ ಮಹಿಳೆಯ ಸಾಮೂಹಿಕ ಆವೇಶ ಮತ್ತು ಸಿರಿ ಸಂಧಿಯ ಹಾಡುವಿಕೆ ಈ ವ್ಯವಸ್ಥೆಯ ಒಂದು ಮುಖ ವಾದರೆ, ಸಿರಿ ಹೆಂಗಸರ ವೈಯಕ್ತಿಕ ಬದುಕಿನ ಇತಿಹಾಸ, ಕುಟುಂಬ ಪದ್ಧತಿ, ಸಿರಿ ಬಳಗದ ಸದಸ್ಯೆಯಾಗಿ ನೇಮಕಗೊಳ್ಳುವ ದಲಿಯ ಸೇವೆ, ನಿತ್ಯಜೀವನದಲ್ಲಿ ಅನುಸರಿಸಬೇಕಾದ ವಿಧಿ ನಿಯಮಗಳು, ಅನುಭವಿ ಸಿರಿ ಹೆಂಗಸರಿಂದ ಮತ್ತು ಕುಮಾರನ ಸಹಾಯದಿಂದ ಸಿರಿ ಸಂಧಿಯನ್ನು ಕಲಿತುಕೊಳ್ಳುವ ಬಗೆ – ಇವುಗಳು ಈ ವ್ಯವಸ್ಥೆಯ ಇತರ ಮುಖಗಳಾಗಿವೆ. ಅಂದರೆ ಈ ಸಿರಿ ಆರಾಧನೆಯು ಒಂದು ಕುಟುಂಬದ, ಒಂದು ಜನಾಂಗದ, ಒಂದು ಪ್ರದೇಶದ ವ್ಯಾಪ್ತಿಯನ್ನು ಮೀರಿ ಸಾಂಸ್ಕೃತಿಕ ಘಟಕವಾಗಿರುವ ತುಳುನಾಡಿನ ಹಲವು ಕುಟುಂಬಗಳ, ಹಲವು ಜನಾಂಗಗಳ ಅಂತರ್ ಸಂಬಂಧವನ್ನು ಪಡೆದುಕೊಂಡಿರುವ ವ್ಯವಸ್ಥೆಯಾಗಿದೆ. ಈ ಕಾರಣದಿಂದಾಗಿಯೇ ಸಿರಿ ಜಾತ್ರೆಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಸಮಾಜ ಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ರಾಜಕೀಯ ಶಾಸ್ತ್ರ, ಇತಿಹಾಸ, ಸಾಹಿತ್ಯ, ಜಾನಪದ ಶಿಸ್ತುಗಳ ತಿಳುವಳಿಕೆಗಳು ಅಗತ್ಯವಾಗಿ ಬೇಕಾಗುತ್ತವೆ” (ಚಿನ್ನಪ್ಪಗೌಡ ೨೦೦೩ ಪು. ೩).

ಒಬ್ಬ ಸ್ತ್ರೀವಾದಿಯಾಗಿ ಮಹಿಳಾ ಸಬಲೀಕರಣದ ಚಿಂತನೆಯಲ್ಲಿ ನನಗೆ ಮುಖ್ಯವಾಗು ವುದು ಸಿರಿ ಬಳಗದ ಮೈದುಂಬುವಿಕೆಗೆ ಒಳಗಾಗುವ ಮೂಲಕ ಹೆಣ್ಣೊಬ್ಬಳು ತನ್ನ ವಾಸ್ತವ ಬದುಕಿನ ಸಮಸ್ಯೆ ಸವಾಲುಗಳನ್ನು ಎದುರಿಸುವ, ಅನ್ಯಾಯವನ್ನು ಪ್ರತಿಭಟಿಸುವ ದನಿಯನ್ನು, ಶಕ್ತಿಯನ್ನು ಪಡೆದುಕೊಳ್ಳುವುದು. ತನ್ನ ಏಕಾಕಿತನಕ್ಕೆ ಸಿರಿ ಬಳಗದ ಪ್ರೀತಿಯ ಸಾಂತ್ವನ ಪಡೆಯುವುದು, ಅನುಭಾವಿಕ ಬಂಧುತ್ವದ ಸೃಷ್ಟಿ ತಂದುಕೊಡುವ ಬೆಂಬಲ, ಕುಟುಂಬದ ಒಳಗೆ ಮತ್ತು ಹೊರಗೆ ನಿರ್ಲಕ್ಷ್ಯಕ್ಕೆ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಸಿರಿ ಆವೇಶದ ಮೂಲಕ ಪಡೆಯುವ ಬಿಡುಗಡೆ ಹಾಗೂ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಗೌರವ ಮನ್ನಣೆ ಪಡೆಯುವಂತಾಗುವುದು ಬಹಳ ಮಹತ್ವದ್ದೆನಿಸುತ್ತದೆ. ಹೀಗಾಗಿ ಸ್ತ್ರೀವಾದಿ ದೃಷ್ಟಿಕೋನದ ಅಧ್ಯಯನದ ಅಗತ್ಯವನ್ನು ಈ ಪ್ರಕ್ರಿಯೆ ಕೋರುತ್ತದೆ. ಹೆಣ್ಣೊಬ್ಬಳು ಸಿರಿ ಮೈದುಂಬುವ ಮೂಲಕ ಹೊಸ ಶಕ್ತಿ, ಸಾಮರ್ಥ್ಯದ ವ್ಯಕ್ತಿತ್ವವನ್ನು ಪಡೆದುಕೊಳ್ಳುವುದು ಮಹಿಳಾ ಸಬಲೀ ಕರಣದ ತಾತ್ವಿಕತೆಯ ಆನ್ವಯಿಕತೆಗೆ ಒತ್ತಾಯಿಸುತ್ತದೆ.

ಫ್ರೀಡರ್ ಹಾಗೂ ಹಾರ್ಪರ್ ಅವರು ಮೈದುಂಬುವಿಕೆಯ ಪರಿಕಲ್ಪನೆ ಕುರಿತು ವ್ಯಕ್ತಿಯ ತೀವ್ರ ಮಾನಸಿಕ ತುಮುಲ ಹಾಗೂ ಒತ್ತಡದ ಸಂದರ್ಭ ಮತ್ತು ಬದುಕಿನ ಸಂಕ್ರಮಣ ಘಟ್ಟದಂತಹ ಸನ್ನಿವೇಶಗಳು ಈ ಪ್ರಕ್ರಿಯೆಗೆ ಕಾರಣ ಎಂದು ಗುರುತಿಸುತ್ತಾರೆ. (ಉದ್ಧೃತ : ಕ್ಲಾಸ್ : ೧೯೮೭ ಪು. ೧೬ – ೨೯) ಮೈದುಂಬುವಿಕೆಯು ಒಂದು ವಿಸ್ತೃತ ಸಾಂಸ್ಕೃತಿಕ ವೈಚಾರಿಕ ಚೌಕಟ್ಟಿನ ಮೇಲೆ ನಿಂತ ಒಂದು ಸಾಂಸ್ಕೃತಿಕ ನಿರೀಕ್ಷೆಯು ಬದುಕಿನ ಕೆಲವೊಂದು ಸಂಕ್ರಮಣ ಕಾಲಗಳೊಂದಿಗೆ ಹಾಗೂ ಘಟನೆಗಳೊಂದಿಗೆ ಸಹಯೋಗವನ್ನು ಹೊಂದಿದ್ದು ಮೈದುಂಬುವಿಕೆಯಂತಹ ವರ್ತನೆ ತೋರುತ್ತಾರೆ ಎಂದು ಅಭಿಪ್ರಾಯ ಪಡುತ್ತಾರೆ. “ಮಹಿಳೆಯರು ವಿಶೇಷವಾಗಿ ಫಲವಂತಿಕೆಯ ವರ್ಷಗಳಲ್ಲಿ ಅದರಲ್ಲೂ ಮೊದಲಬಾರಿ ರಜಸ್ವಲೆ ಯಾದ ಹಿಂಚು ಮುಂಚಿನ ಕಾಲಾವಧಿಯಲ್ಲಿ ಹಾಗೂ ಬಸುರಿ ಬಾಣಂತಿಯಾಗಿರುವ ಸಮಯ ದಲ್ಲಿ ಅಲೌಕಿಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗುವ ಅಪಾಯ ಅಧಿಕ ಎಂದು ನಂಬಲಾಗಿದೆ. ಆ ಮಹಿಳೆಯರ ತಂದೆ, ಸಹೋದರರು, ಹಾಗೂ ಗಂಡ ಇವರುಗಳು ಆಕೆಯ ಶುಭಾಶುಭ ಗಳಿಗೆ ಬಾಧ್ಯರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಬಾಹ್ಯಕ್ಲೇಶಗಳಿಂದ ಆಕೆಯ ಸಂತಾನ ಶಕ್ತಿಯ, ಸಾಮರ್ಥ್ಯದ ರಕ್ಷಣೆಗೆ ಅವರು ಹೊಣೆಗಾರರೆಂದು ತಿಳಿಯಲಾಗಿದೆ. ಈ ಬಗೆಯ ಪುರುಷ ಸಂರಕ್ಷಣೆ, ನಿಯಂತ್ರಣ ಹಾಗೂ ಬೆಂಬಲದ ಕೊರತೆ ಏರ್ಪಟ್ಟಾಗ ಹೆಣ್ಣು ಅಲೌಕಿಕ ಆಕ್ರಮಣದ ಎದುರು ತಾನು ಅರಕ್ಷಿತಳೆಂದು ತಿಳಿದುಕೊಳ್ಳುತ್ತಾಳೆ (ಉದ್ದೃತ : ಕ್ಲಾಸ್, ಅನು : ನಾವಡ, ಸುಭಾಶ್ಚಂದ್ರ ೧೯೮೭ ಪು. ೧೫).

ಹೆಣ್ಣೊಬ್ಬಳಿಗೆ ಪುರುಷರ ಸಂರಕ್ಷಣಾತ್ಮಕ ಬೆಂಬಲದ ಕೊರತೆಯು ದೈವ ಮೈದುಂಬುವಿಕೆಗೆ ಕಾರಣ ಎಂಬುದಾಗಿ ಫ್ರೀಡರ್ ಹಾಗೂ ಹಾರ್ಪರ್ ಗುರುತಿಸುತ್ತಾರಾದರೂ ಅದನ್ನೊಂದು ಅಲೌಕಿಕ ಆಕ್ರಮಣ ಎಂಬ ನಿಲುವಿನಲ್ಲಿ ಆ ಹೆಣ್ಣು ಇಂತಹ ಅಲೌಕಿಕ ಆಕ್ರಮಣದ ಎದುರು ತಾನು ಆರಕ್ಷಿತಳೆಂದು ಭಯ ಅಥವಾ ಭೀತಿಗೆ ಒಳಗಾಗುತ್ತಾಳೆಂದು ಭಾವಿಸುತ್ತಾರೆ. ಆದರೆ ನನ್ನ ಕ್ಷೇತ್ರಾಧ್ಯಯನ ಮಾಹಿತಿಗಳಿಂದ ನಾನು ಕಂಡುಕೊಂಡಂತೆ ತುಳುನಾಡಿನ ಮಹಿಳೆಯರ ಲೋಕದೃಷ್ಟಿಯಲ್ಲಿ ಹೆಣ್ಣಿನ ಬದುಕಿನ ಸಂರಕ್ಷಣಾತ್ಮಕ ನೆಲೆ ಎರಡು : ಒಂದು, ಲೌಕಿಕ ಜಗತ್ತಿನ ತಾನು ನಂಬಿದ ಬಂಧುತ್ವದ ನೆಲೆ. ಇನ್ನೊಂದು ಅಲೌಕಿಕ ಜಗತ್ತಿನ ತಾನು ನಂಬಿದ ದೈವ ನೆಲೆ. ಮಾತೃವಂಶೀಯ ಕುಟುಂಬದಲ್ಲಿನ ಬಂಧುತ್ವ ನೆಲೆ ಗಂಡ, ಮಗ, ಸೋದರ ಮಾವಂದಿರಾದರೆ ಪಿತೃವಂಶೀಯ ಕುಟುಂಬದಲ್ಲಿ ಅದು ಗಂಡ, ತಂದೆ, ಮಗಂದಿರು ಆಗುತ್ತಾರೆ. ಈ ಬಗೆಯ ಸಂರಕ್ಷಣಾತ್ಮಕ ಲೌಕಿಕ ನೆಲೆ ತಪ್ಪಿದಾಗ, ಅಥವಾ ಸಂರಕ್ಷಣೆಗೆ ಭಂಗ ಉಂಟಾದಾಗ ಹೆಣ್ಣೊಬ್ಬಳು ಸಂರಕ್ಷಣೆಗಾಗಿ ತಾವು ನಂಬಿದ ದೈವದ ಮೊರೆ ಹೋಗುತ್ತಾಳೆ. ಅವಳ ಮೊರೆ ಧರ್ಮಸಮ್ಮತವಾದಾಗ, ಸತ್ಯ, ನ್ಯಾಯದ ಬೆಂಬಲವಿದ್ದಾಗ ನಂಬಿದ ದೈವ ಅವಳ ಸಂರಕ್ಷಣೆಗೆ ಮುಂದಾಗುತ್ತದೆ ಎಂದು ನಂಬಲಾಗು ತ್ತದೆ. ಈ ಬಗೆಯ ಸಂರಕ್ಷಣೆಯು ದೈವ ಆಕೆಯ ಮೈದುಂಬುವ ಮೂಲಕ ಪ್ರಕಟವಾಗುತ್ತದೆ ಹಾಗೂ ಆಕೆಗೆ ಸಂರಕ್ಷಣೆ ನೀಡಬೇಕಾಗಿದ್ದ ಪುರುಷ ನೆಲೆಗೆ ಆತನ ಕರ್ತವ್ಯ ಭ್ರಷ್ಟತೆ ಬಗೆಗೆ ಎಚ್ಚರಿಕೆ ನೀಡುತ್ತದೆ ಮತ್ತು ಅಗತ್ಯ ಕಂಡಲ್ಲಿ ಶಿಕ್ಷೆ ವಿಧಿಸುತ್ತದೆ. ಒಬ್ಬ ಹೆಣ್ಣಿನ ಬದುಕಿನ ಸಂದಿಗ್ದ ಕಾಲಾವಧಿಯಲ್ಲಿ ಸಂರಕ್ಷಣೆ ಮತ್ತು ಬೆಂಬಲದ ನಿರೀಕ್ಷೆಯನ್ನು ಒದಗಿಸುವ ಇಂತಹ ವಿಸ್ತೃತ ಸಾಂಸ್ಕೃತಿಕ ತಾತ್ವಿಕತೆಯನ್ನು ಈ ಇಬ್ಬರು ವಿದ್ವಾಂಸರು ಗ್ರಹಿಸುವುದಿಲ್ಲ.

ಸಾಮಾನ್ಯವಾಗಿ ಹೆಣ್ಣು ಮೈ ನೆರೆಯುವ ಹಿಂದುಮುಂದಿನ ದಿನಗಳಲ್ಲಿ ಅಂದರೆ ಹದಿಹರೆ ಯದ ಹಂತದಲ್ಲಿ, ವಿವಾಹ ಪೂರ್ವೋತ್ತರ ಕಾಲದಲ್ಲಿ, ಹಾಗೂ ಹೆರಿಗೆಯ ಆಚೀಚಿನ ಸಂದರ್ಭಗಳಲ್ಲಿ ಸಿರಿ ಮೈದುಂಬುವಿಕೆಗೆ ಒಳಗಾಗುವುದನ್ನು ಗುರುತಿಸಿದ್ದೇನೆ. ನನ್ನ ಕ್ಷೇತ್ರಾಧ್ಯಯನ ಮಾಹಿತಿ ಹೇಳುವಂತೆ ಸುಮಾರು ೧೫ ರಿಂದ ೨೫ ವರ್ಷ ವಯೋಮಾನದ ಗುಂಪು ಮೈದುಂಬುವಿಕೆಗೆ ಒಳಗಾಗುತ್ತದೆ. ಈ ಯಾವುದೇ ಹಂತದಲ್ಲಿರುವ ಮಹಿಳೆ ಅತೀವ ಸಂಕಟ, ಒತ್ತಡ ಅಥವಾ ಅನಾರೋಗ್ಯಕ್ಕೆ ಪಕ್ಕಾಗುವ ಘಟನೆಗಳು ಸಂಭವಿಸಿದಾಗ ಇದನ್ನು ಸಂರಕ್ಷಣಾತ್ಮಕ ಲೌಕಿಕ ನೆಲೆ ತಪ್ಪಿದ ಸ್ಥಿತಿಯಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಆಕೆ ಸಹಜವಾಗಿಯೇ ಅಲೌಕಿಕ ನೆಲೆಯ ಸಂರಕ್ಷಣೆಗಾಗಿ ಹಾತೊರೆಯುತ್ತಾಳೆ. ಈ ಹಾತೊರೆಯುವಿಕೆಯು, ತಹತಹಿಕೆಯು ಅವಳಲ್ಲಿ ತುಮುಲ ತಲ್ಲಣಗಳನ್ನು ಉಂಟುಮಾಡುತ್ತದೆ.  ಈ ಅನುಭವಗಳು ಅಸಹನೀಯ ಯಾತನೆಯನ್ನು ತರುತ್ತಲೆ ಉಚ್ಛ್ರಾಯದ ಯಾವುದೋ ಒಂದು ಹಂತದಲ್ಲಿ ಆಕೆ ಮೈದುಂಬುವಿಕೆಗೆ ಒಳಗಾಗುತ್ತಾಳೆ. ಇದು ಒಂದು ನಿರೀಕ್ಷಿತ ಸ್ಥಿತಿ ಕೂಡಾ ಆಗುತ್ತದೆ ಆಕೆಗೆ. ಈ ಪ್ರಕ್ರಿಯೆಯನ್ನು ಮೈದುಂಬುವಿಕೆಗೆ ಒಳಗಾದ ವ್ಯಕ್ತಿಗಳ ಪರಿಭಾಷೆಯಲ್ಲಿ ವಿವರಿಸುವುದಾದರೆ ‘ಇಂದೊಂದು ದೈವ ಕೃಪೆ’ ಹಾಗೂ ‘ಬದುಕಿಗೆ ಒದಗಿ – ಬಂದ ಶ್ರೀರಕ್ಷೆ.’

ಮಹಿಳೆ ತನ್ನ ಬದುಕಿನ ಸಂವೇದಿ ಘಟ್ಟಗಳಲ್ಲಿ ಆತಂಕ, ಒತ್ತಡಕ್ಕೆ ಸಿಲುಕಿದಾಗಷ್ಟೇ ಅಲ್ಲ ತನ್ನ ಬಯಕೆಯ ಲೌಕಿಕ ಬದುಕು ಒದಗಿ ಬಾರದಾಗ ಹಾಗೂ ಸಂರಕ್ಷಣೆಯ ನೆಲೆ ತಪ್ಪಿದಾಗಲೂ ಆಕೆ ಇದೇ ಬಗೆಯ ಒತ್ತಡಕ್ಕೆ ಒಳಗಾಗುತ್ತಾಳೆ. ಈ ಬಗೆಯ ಒತ್ತಡ ತಲ್ಲಣಗಳಿಂದ ದೈನಂದಿನ ದಿನಚರಿಗೆ ತೊಡಕುಂಟಾಗಿ ಆಕೆಗೆ ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆ ಕಾಡಬಹುದು, ಮೈದುಂಬುವಿಕೆ ಕಾಣಿಸಿಕೊಳ್ಳಬಹುದು. ಆದರೆ ಈ ಬಗೆಯ ಪ್ರಕರಣವನ್ನು ಉನ್ಮಾದರೋಗ ಅಥವಾ ಮಾನಸಿಕ ರೋಗ ಎಂದು ಸುಲಭ ತೀರ್ಮಾನ ನೀಡಿ ತಳ್ಳಿ ಹಾಕಬರುವುದಿಲ್ಲ. ಇದಕ್ಕೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಮಾನಸಿಕ ಹೀಗೆ ಬಹುನೆಲೆಯ ಆಯಾಮಾವೂ ಇವೆ ಎನ್ನುವುದನ್ನು ನಾವು ಮರೆಯು ವಂತಿಲ್ಲ.

ಭಾರತೀಯ ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಮೈದುಂಬುವ ಮೈದುಂಬುವಿಕೆಯ ಪ್ರಕ್ರಿಯೆಯನ್ನು ಆ ಸಿದ್ಧಾಂತದ ಶ್ರೇಣೀಕರಣದ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳಬೇಕಾಗುತ್ತದೆ. ಮೈದುಂಬುವ ಪ್ರಕ್ರಿಯೆಯಲ್ಲಿ ಮುಖ್ಯ ಮೂರು ಬಿಂದುಗಳಿವೆ. ಶ್ರೇಣೀಕರಣಕ್ಕೊಳಪಟ್ಟ ಇದರ ಕೆಳತುದಿ ಬಿಂದುವಿನಲ್ಲಿ ಲೌಕಿಕ ವ್ಯಕ್ತಿ ಇದ್ದಾನೆ/ಳೆ. ಮೇಲುತುದಿ ಬಿಂದುವಿನಲ್ಲಿ ಅಲೌಕಿಕ ಶಕ್ತಿ ಇದೆ. ಈ ಎರಡು ಬಿಂದುಗಳ ನಡುವಿನ ಮಧ್ಯಂತರ ಬಿಂದುವಿನಲ್ಲಿ ಮೈದುಂಬುವಿಕೆ ಪ್ರದರ್ಶನ ಅಥವಾ ಪ್ರಕಟನೆ ಇದೆ. ಮೈದುಂಬುವಿಕೆಯ ಪ್ರಕ್ರಿಯೆಯನ್ನು ಪಾಶ್ಚತ್ಯ ವ್ಯಾಖ್ಯಾನಗಳು ವ್ಯಕ್ತಿ ನೆಲೆಯಿಂದ ಮೈದುಂಬುವಿಕೆಯ ಪ್ರಕಟಣೆಯತ್ತ ಪಯಣ ಎಂದು ಗುರುತಿಸುತ್ತದೆ.  ಹೀಗಾಗಿ ಮೈದುಂಬುವಿಕೆ ಎನ್ನುವಂತಹದು ಒಬ್ಬ ವ್ಯಕ್ತಿ ಮಾನಸಿಕ ಒತ್ತಡದ ಬಿಡುಗಡೆಗೆ ಕಂಡುಕೊಂಡ ತಂತ್ರ ಎಂದು ನಿರ್ವಚಿಸುತ್ತದೆ. ಆದರೆ ದೇಶೀಯ ಲೋಕದೃಷ್ಟಿ ಇದಕ್ಕೆ ವಿರುದ್ಧವಾದ ನೆಲೆಯಿಂದ ಹೊರಡುತ್ತದೆ. ಅಂದರೆ ಮೈದುಂಬುವಿಕೆ ಪ್ರಕ್ರಿಯೆಯನ್ನು ಅಲೌಕಿಕ ಶಕ್ತಿ ನೆಲೆಯಿಂದ ಮೈದುಂಬುವಿಕೆಯ ಪ್ರಕಟಣೆಯತ್ತ ಪಯಣವಾಗಿ ಗುರುತಿಸುತ್ತದೆ. ವ್ಯಕ್ತಿ ಸಂರಕ್ಷಣೆಗಾಗಿ ನಂಬಿದ ದೈವದ ಮೊರೆ ಹೋದಾಗ ಅಲೌಕಿಕ ಶಕ್ತಿ ವ್ಯಕ್ತಿಯಲ್ಲಿ ಮೈದುಂಬುವ ಮೂಲಕ ಅಭಿವ್ಯಕ್ತವಾಗುತ್ತದೆ. ಮೈದುಂಬುವಿಕೆ ಯನ್ನು ಹೇಳುವ ಪರ್ಯಾಯ ಪದಗಳು ದರ್ಶನ, ಆವಾಹನೆ, ಆಳುವುದು, ಮೈಮೇಲೆ ಬರುವುದು ಎಲ್ಲವೂ ಮೈದುಂಬುವ ವಿದ್ಯಮಾನವನ್ನು ಅಲೌಕಿಕ ಶಕ್ತಿಯ ಬಿಂದುವಿನಿಂದ ಹೊರಟು ವ್ಯಕ್ತಿಯಲ್ಲಿ ಪ್ರಕಟವಾಗುವ ಪ್ರಕ್ರಿಯೆಯಾಗಿ ಅರ್ಥೈಸುತ್ತದೆ. ಅಂದರೆ ಮೈದುಂಬು ವಿಕೆಯ ಪ್ರಕ್ರಿಯೆಯನ್ನು ಎರಡು ವಿರುದ್ಧ ನೆಲೆಯಿಂದ ಪಾಶ್ಚಾತ್ಯ ವಿದ್ವಾಂಸರು ಹಾಗೂ ನಂಬಿದ ಸಮುದಾಯದವರು ಗ್ರಹಿಸುತ್ತಾರೆ. ಮೈದುಂಬುವಿಕೆಗೆ ಒಳಗಾಗುವ ಮುನ್ನ ವ್ಯಕ್ತಿ ಅತ್ಯಂತ ಮಾನಸಿಕ ಒತ್ತಡ ಹಾಗೂ ಆತಂಕಕ್ಕೆ ಗುರಿಯಾಗಿರುವುದು ಹೌದಾದರೂ ಅದನ್ನು ಮರ‍್ಲು, ಹುಚ್ಚು ಎಂಬ ರೋಗದ ಪರಿಭಾಷೆಯಲ್ಲಿ ಪರಿಗಣಿಸುವುದಿಲ್ಲ. ಮೈದುಂಬುವಿಕೆಗೆ ರೋಗದ ದೇಶೀಯ ಹೆಸರಿಲ್ಲ ಎನ್ನುವುದು ಗಮನಾರ್ಹ. ಇನ್ನೊಂದು ಬಗೆಯಲ್ಲಿ ಇದನ್ನು ವಿವರಿಸುವುದಾದರೆ ಎಷ್ಟೋ ಪ್ರಕರಣಗಳಲ್ಲಿ ಬದುಕಿನುದ್ದಕ್ಕೂ ಮನೋರೋಗ ಅಥವಾ ಖಿನ್ನತೆಯಿಂದ, ಉನ್ಮಾದರೋಗದಿಂದ ನರಳುವ ವ್ಯಕ್ತಿಗಳು ಮೈದುಂಬುವಿಕೆಗೆ ಒಳಗಾಗು ವುದಿಲ್ಲ. ಅಲ್ಲದೆ ಯಾವುದೇ ಮನೋರೋಗ ಅಥವಾ ಅಂತಹ ರೋಗಿಗಳ ವರ್ತನೆಗಳು ಮೈದುಂಬುವ ವಿದ್ಯಮಾನದಲ್ಲಿನಂತೆ ಒಂದು ನಿರ್ದಿಷ್ಟತೆಗೆ ಒಳಗಾಗಿ ಪ್ರಕಟವಾಗುವುದಿಲ್ಲ. ಆದರೆ  ಮೈದುಂಬಿಕೆಗೆ ಒಳಗಾಗುವ ವ್ಯಕ್ತಿಗಳು ಮೈದುಂಬಿದ ನಿರ್ದಿಷ್ಟ ಸಂದರ್ಭಗಳಿಗೆ ಹೊರತಾಗಿ ಇನ್ನೆಲ್ಲ ಕಾಲದಲ್ಲೂ ಸಾಮಾನ್ಯ ಮನೋಸ್ಥಿತಿ ಹೊಂದಿದವರಾಗಿರುವರು ಹಾಗೂ ತಮ್ಮ ಎಲ್ಲ ಕೆಲಸ ಕಾರ್ಯ ಜವಾಬ್ದಾರಿಗಳನ್ನು, ಬಸುರಿ, ಹೆರಿಗೆಯಂತಹ ಜೈವಿಕ ಸಾಮರ್ಥ್ಯ ವನ್ನು ಪರಿಣತರಾಗಿಯೇ ನಿರ್ವಹಿಸುವರು ಎಂಬುದನ್ನು ನಾನು ಕಂಡಿದ್ದೇನೆ. ಈ ಎಲ್ಲ ತಿಳುವಳಿಕೆಗಳು ಮೈದುಂಬುವಿಕೆಯನ್ನು ದೇಶೀಯ ಪರಿಭಾಷೆಯಲ್ಲಿ ಗ್ರಹಿಸುತ್ತವೆ. ಅದಕ್ಕಿರುವ ಸಾಮಾಜಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ ಅಂಶಗಳ ಆಯಾಮವನ್ನು ಗುರುತಿಸುತ್ತವೆ.  ಆದರೆ ಮೈಮೇಲೆ ಬರುವಿಕೆಯ ಸಂದರ್ಭದಲ್ಲಿನ ತುಮುಲವು ಅಲೌಕಿಕ ಶಕ್ತಿಗಳ ಆಕ್ರಮಣದ ಸಾಧ್ಯತೆಯ ಭಯದಿಂದ ಉಂಟಾಗಿದೆ ಎಂಬ ವೈಚಾರಿಕ ಮನೋವೃತ್ತಿ ಯನ್ನು ಬೆಳೆಸಿಕೊಂಡ ಪಾಶ್ಚಾತ್ಯರಿಗೆ ಇದನ್ನು ನಂಬಲು ಕಷ್ಟವಾಗಬಹುದು.  ಹಾಗಾಗಿ ಪಾಶ್ಚಾತ್ಯ ತಾತ್ವಿಕತೆಯು ಮೈದುಂಬುವಿಕೆಯಂತಹ ಧಾರ್ಮಿಕ ಸಾಂಸ್ಕೃತಿಕ ಸಂಗತಿಯೊಂದನ್ನು ಪರಿಗ್ರಹಿಸುವ ನೋಟ ಹಾಗೂ ಶೋಧಿಸುವ ಅರ್ಥ ಎರಡೂ ಮೈದುಂಬುವಿಕೆಯ ಸಂಕೀರ್ಣತೆಯನ್ನು ಕಟ್ಟಿಕೊಡುವಲ್ಲಿ ವಿಫಲವಾಗುತ್ತದೆ. ಯಾಕೆಂದರೆ ಮೈದುಂಬುವಿಕೆ ಒಂದು ಸಂಕೀರ್ಣ ವಿದ್ಯಮಾನವಾಗಿದ್ದು ಅದನ್ನು ಕೇವಲ ವೈಚಾರಿಕ ತರ್ಕ ಅಥವಾ ತಾತ್ವಿಕತೆಯಿಂದಷ್ಟೆ ಗ್ರಹಿಸುವುದು ಸಾಧ್ಯವಾಗದು. ಹೀಗೆ ವೈಚಾರಿಕ ತಾತ್ವಿಕತೆಯಲ್ಲಿ ಮಾತ್ರ ಗ್ರಹಿಸುವುದೆಂದರೆ ಮೈದುಂಬುವಿಕೆಯಲ್ಲಿನ ಎಲ್ಲ ಸಂಕೀರ್ಣತೆಯನ್ನು ಮುಚ್ಚಿ ಹಾಕಿ ಮನೋರೋಗದ ನೆಲೆಯಲ್ಲಿ ಅರ್ಥೈಸುವ ಸಾಧ್ಯತೆಗಳನ್ನು ತೆರೆಯುತ್ತದೆ ಅಷ್ಟೆ.

ಹೆಣ್ಣೊಬ್ಬಳು ಅಥವಾ ಯಾವುದೇ ವ್ಯಕ್ತಿಯೊಬ್ಬ ಲೌಕಿಕವನ್ನು ದಾಟುವ ಸಂದರ್ಭದಲ್ಲಿ ಅಲೌಕಿಕ ಆಕರ್ಷಣೆ, ತೀವ್ರತೆ ಯಾಕೆ ಅನಿವಾರ‍್ಯವಾಗುತ್ತದೆ ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮೈದುಂಬುವಿಕೆ ಪ್ರಕ್ರಿಯೆಯನ್ನು ಕಾಣಬೇಕಾಗಿದೆ. ಬ್ರಹ್ಮಾಂಡದ ಪರಿಕಲ್ಪನೆಯ ಪರಂಪರೆಯ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬ ಲೌಕಿಕದಲ್ಲಿನ ಅಸಹನೀಯ ಸಂರಚನೆಗಳು, ಸನ್ನಿವೇಶಗಳು ಅಪೇಕ್ಷಿತ ಅಲೌಕಿಕವನ್ನು ಅವನ ಮುಂದೆ ತೆರೆದುಕೊಳ್ಳುತ್ತವೆ. ಅಂದರೆ ಲೌಕಿಕ ನೆಲೆ ಅಭದ್ರ ಮತ್ತು ಅನಪೇಕ್ಷಿತವಾಗುವ ಸ್ಥಿತಿಯಲ್ಲಿ ಲೌಕಿಕದಿಂದ ಬಿಡುಗಡೆ ಹೊಂದಲು ಆವೇಶದ ಅಲೌಕಿಕ ನೆಲೆ ಪರ್ಯಾಯವಾಗುತ್ತದೆ. ಹೀಗೆ ಅಲೌಕಿಕ ಲೋಕದ ಸೃಷ್ಟಿ ಲೌಕಿಕಕ್ಕೆ ಒಂದು ಬಗೆಯ ಪ್ರತಿಭಟನೆಯೂ ಆಗುತ್ತದೆ. ಯಾಕೆಂದರೆ ಇಲ್ಲಿ ಸೃಷ್ಟಿಯಾಗುವ ಮಧ್ಯಂತರ ಜಗತ್ತಿನೊಳಗೆ ಅಲೌಕಿಕ ಶಕ್ತಿಯು ಮೈದುಂಬುವ ಮೂಲಕ ಹೊಸ ವ್ಯಕ್ತಿತ್ವವನ್ನು ಪಡೆದು ಕೊಳ್ಳುವುದು ಮತ್ತು ಅದು ಅಭೌತಿಕ ಸ್ವರೂಪದಲ್ಲಿರುವಲ್ಲಿ ಲೌಕಿಕದ ಅಧಿಕಾರದ ಪ್ರಭುತ್ವದ ಹಿಡಿತಕ್ಕೆ ನಿಲುಕದಿರುವುದು ಅತ್ಯಂತ ಮಹತ್ವದ ಅಂಶವಾಗುತ್ತದೆ. ಇದು ವ್ಯಕ್ತಿ ರೂಪಿಸಿಕೊಂಡ ಸಿರಿ ಆವೇಶಗೊಳ್ಳುವ ಮಹಿಳೆ ಲೌಕಿಕ ವ್ಯಕ್ತಿತ್ವ ನಿರಸನದ ಮೂಲಕ ಅಸ್ತಿತ್ವವಿಲ್ಲದ ಹೆಣ್ಣೊಬ್ಬಳು ಹೊಸ ಅಸ್ತಿತ್ವನ್ನು, ವ್ಯಕ್ತಿತ್ವವನ್ನು ಪಡೆದುಕೊಳ್ಳುವುದು ಮತ್ತು ಹೀಗೆ ಸಾಧ್ಯವಾದ ವ್ಯಕ್ತಿತ್ವದ ನೆಲೆಯಿಂದ ತನಗೆದುರಾದ ಬದುಕಿನ ಸವಾಲನ್ನು ಮೀರುವ ಸಾಮರ್ಥ್ಯಗಳಿಸುವುದು ವಿಶೇಷವಾಗಿ ಗಮನಿಸುವಂತಹದು. ಈ ಬಗೆಯ ಲೌಕಿಕ – ಅಲೌಕಿಕಗಳ ತಾತ್ವಿಕ ಸಂಬಂಧವನ್ನು ಬಗೆದಾಗ ಬಿಡುಗಡೆಯ ರಚನೆಗಳಾಗಿ ಮೈದುಂಬುವಿಕೆ ಯನ್ನು ಕಾಣುವ ಆಚೆಗೆ ಸಬಲೀಕರಣದ ಹೊಸ ಸಾಧ್ಯತೆಯಾಗಿಯೂ ಕಂಡುಬರುತ್ತದೆ.

ಸಾಂಸ್ಕೃತಿಕ ಸಬಲೀಕರಣದ ಪ್ರಶ್ನೆ ಮತ್ತು ರೂಪಿಕೆಯಾಗಿ ಸಿರಿ

ಮೈದುಂಬುವಿಕೆಯ ಪ್ರಕ್ರಿಯೆಯನ್ನು ತೀರಾ ವೈಚಾರಿಕಕ್ಕೆಳೆದು ಅರ್ಥೈಸುವುದು ಅದನ್ನು ತೀರಾ ಸರಳೀಕರಿಸಿದಂತಾಗುತ್ತದೆ. ಧಾರ್ಮಿಕ ನೆಲೆಯಿಂದಷ್ಟೇ ನೋಡುವುದು ಅದನ್ನು ತೀರಾ ವೈಭಕರಿಸಿದಂತಾಗುತ್ತದೆ. ಈ ಎರಡೂ ಸಂದರ್ಭಗಳಲ್ಲೂ ಸತ್ಯ ನಮ್ಮ ಕೈಗೆ ಸಿಗದೇ ಹೋಗುವ ಅಪಾಯವಿದೆ. ಈ ಎರಡು ಅತಿರೇಕಗಳ ನಡುವೆ ಅಡಗಿರುವ ಸತ್ಯವನ್ನು ಶೋಧಿಸಬೇಕಾಗಿದೆ. ಹಾಗೆಂದು ಈ ಎರಡನ್ನು ಗಡಿಬೇಲಿ ಹಾಕಿಕೊಂಡು ಒಂದಕ್ಕೆ ಇನ್ನೊಂದು ವಿರುದ್ಧವೆಂಬ ಗ್ರಹಿಕೆಯಲ್ಲಿ ಪರಿಭಾವಿಸುವುದು ಕೂಡಾ ಈ ಪ್ರಕ್ರಿಯೆಯ ಸಂಕೀರ್ಣತೆಯನ್ನು ಮುಚ್ಚಿ ಹಾಕಿಬಿಡುತ್ತದೆ. ಹೀಗಾಗಿ ಮೈದುಂಬುವಿಕೆ ಪ್ರಕ್ರಿಯೆಯು ಒಂದು ಉನ್ಮಾದ ರೋಗ ಎನ್ನುವ ವೈಚಾರಿಕ ಗ್ರಹಿಕೆ ಹಾಗೂ ಇದೊಂದು ಅಲೌಕಿಕ ವ್ಯಾಪಾರ ಎನ್ನುವ ಅಭಿಪ್ರಾಯ ಗಳು ಪುನರ್ ವ್ಯಾಖ್ಯಾನಕ್ಕೆ ಒಳಗಾಗಬೇಕಾಗಿದೆ. ಮೈದುಂಬುವಿಕೆ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ, ಮಾನಸಿಕ ಆಯಾಮಗಳು ಸಂಕೀರ್ಣತೆಯಲ್ಲಿಟ್ಟು ಪರಿಶೋಧಿಸ ಬೇಕಾಗಿದೆ. ಈ ಅಂಶಗಳ ಹಿನ್ನೆಲೆಯಲ್ಲಿಯೇ ನಮ್ಮ  ಸಾಂಸ್ಕೃತಿಕ ಪ್ರಶ್ನೆಗಳನ್ನು ಬಿಡಿಸಿಕೊಳ್ಳ ಬೇಕು. ಮಹಿಳಾ ಮೈದುಂಬುವಿಕೆಯ ಸೂಕ್ಷ್ಮಕ್ಕೆ ಲಿಂಗನೆಲೆಯ ಆಯಾಮವೂ ಇದೆ ಎನ್ನುವು ದನ್ನು ಗಮನಿಸಬೇಕು. ಇದು ಮೈದುಂಬುವಿಕೆಯನ್ನು ವಿವರಿಸಿಕೊಳ್ಳುವಲ್ಲಿರುವ ತುರ್ತು. ನನ್ನ ಅಧ್ಯಯನದ ತಾತ್ವಿಕತೆ ಕೂಡಾ ಇದೇ ಆಗಿದೆ. ಈ ನೆಲೆಯಲ್ಲಿ ನನಗೆ ಬಹುಮಂದಿಯ ಕುತೂಹಲದಂತೆ ಮೈದುಂಬುವಿಕೆ ವಿದ್ಯಮಾನ ಅಥವಾ ಪ್ರಕ್ರಿಯೆ ನಿಜವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗಳಲ್ಲಿ ಆಸಕ್ತಿ ಇಲ್ಲ. ಹೀಗಾಗಿಯೇ ಮೈದುಂಬುವಿಕೆಯ ಸಂದರ್ಭದಲ್ಲಿ ಅಲೌಕಿಕ ಶಕ್ತಿ ನಿಜಕ್ಕೂ ಲೌಕಿಕ ವ್ಯಕ್ತಿಯೊಬ್ಬನಲ್ಲಿ ಆವಾಹನೆಗೊಳ್ಳುತ್ತದೆ ಎನ್ನುವ ದೇಶೀಯ ನಿಲುವಾಗಲಿ, ಭೌತಿಕ ವ್ಯಕ್ತಿಯೊಬ್ಬನಲ್ಲಿ ಯಾವುದೇ ಹೊರಗಿನ ಅಲೌಕಿಕ ಶಕ್ತಿಗಳು ಆವಾಹನೆಗೊಳ್ಳುವುದು ನಿಜವಾದರೆ ಆ ಶಕ್ತಿ ಎಷ್ಟು ಹೊತ್ತು ಇರುತ್ತದೆ? ಅಥವಾ ಇದೆಲ್ಲ ಪೂರ್ಣ ಮೋಸ ಅಥವಾ ಉನ್ಮಾದ ರೋಗವೆ ಎನ್ನುವ ಚರ್ಚೆಗಳು ನನಗೆ ಮುಖ್ಯವಾಗು ವುದಿಲ್ಲ. ನನಗಿರುವ ಪ್ರಧಾನ ಕಾಳಜಿ ಹೆಣ್ಣೊಬ್ಬಳು ಮೈದುಂಬುವಿಕೆಗೆ ಯಾಕೆ ಒಳಗಾಗು ತ್ತಾಳೆ? ಮತ್ತು ಮಹಿಳೆಯರು ಯಾಕೆ ಹೆಚ್ಚಾಗಿ ಮೈದುಂಬುವಿಕೆಗೆ ಒಳಗಾಗುತ್ತಾರೆ? ಹೇಗೆ ಒಳಗಾಗುತ್ತಾರೆ? ಯಾವಾಗ ಒಳಗಾಗುತ್ತಾರೆ ಎನ್ನುವ ಬಗೆಗೆ ಮತ್ತು ಹೀಗೆ ಮೈದುಂಬುವಿಕೆಗೆ ಒಳಗಾಗುವ ಮುನ್ನಿನ ಅವಳ ಸ್ಥಿತಿ ಏನು? ಮೈದುಂಬುವಿಕೆಗೆ ಒಳಗಾದ ಸಂದರ್ಭದಲ್ಲಿ ಅವಳ ಸ್ಥಿತಿ ಏನು? ಹಾಗೂ ಮೈದುಂಬುವಿಕೆಗೆ ಆಚೆಗೆ ಅವಳ ಸ್ಥಿತಿ ಏನು? ಈ ಮೂರು ಹಂತಗಳಲ್ಲಿ ಅವಳ ಸ್ಥಾನಮಾನದ, ಐಡೆಂಡಿಟಿಯ ಬದಲಾವಣೆ ಯಾವ ಬಗೆಯದಾಗಿದೆ ಎನ್ನುವ ಸಂಗತಿಗಳು ನನಗೆ ಅತ್ಯಂತ ಮುಖ್ಯವಾಗುತ್ತದೆ. ಹೆಣ್ಣೊಬ್ಬಳ ಮಾನಸಿಕ, ಸಾಮಾಜಿಕ, ಆರ್ಥಿಕ ಜಗತ್ತಿನ ಸಂದರ್ಭದಲ್ಲಿಟ್ಟು ಈ ಬದಲಾವಣೆಯ ಪರಿಯನ್ನು ಗುರುತಿಸುವುದು ನನ್ನ ಆಶಯವಾಗಿದೆ. ಮೈದುಂಬುವಿಕೆಯ ಪ್ರಕ್ರಿಯೆನ್ನು ಈ ವಿಸ್ತಾರದ ಗ್ರಹಿಕೆಯನಿಟ್ಟುಕೊಂಡು ಅರ್ಥೈಸುವ ಪ್ರಯತ್ನಕ್ಕೆ ಹೊರಟಿದ್ದೇನೆ. ಸಾಮೂಹಿಕ ಮಹಿಳಾ ಮೈದುಂಬುವಿಕೆಯ ಸಿರಿ ಆರಾಧನಾ ಪಂಥದ ಮೂಲಕ ಸಾಸಂಸ್ಕೃತಿಕ ಸಬಲೀಕರಣ ಎನ್ನುವ ಪರಿಕಲ್ಪನೆಯನ್ನು ಕಟ್ಟುವುದು ಸಾಧ್ಯವೇ? ಮತ್ತು ಅದರ ಅಗತ್ಯ ಏನು ಎನ್ನುವ ಬಗೆಗೆ ವಿವಕ್ಷೆ ನಡೆಸಲು ಬಯಸಿದ್ದೇನೆ. ಹೀಗೆ ಹೊರಡುವುದು ಎಂದರೆ ಅದು ಬರಿಯ ಸಂಕೇತ ವಲ್ಲ, ಸಂಸ್ಕೃತಿಯ ಅರ್ಥ ನಿರ್ಮಿತಿಯ ಪ್ರಕ್ರಿಯೆಯೂ ಸಂಕಥನವೂ ಹೌದು.

ಸಿರಿ ಜಾತ್ರೆಯ ಸಂದರ್ಭದಲ್ಲಿ ಹಾಗೂ ಜಾತ್ರೆಯ ಹೊರಗೆ ನಾನು ಸಂದರ್ಶಿಸಿದ ಸಿರಿಗಳ ಅನುಭವವನ್ನು ಬಿಟ್ಟು ಗ್ರಹಿಸಿ ಹೇಳುವುದಾದರೆ ಸಿರಿ ಮೈದುಂಬುವಿಕೆಗೆ ಒಳಗಾಗುವ ಮುನ್ನ ಈ ಎಲ್ಲ ಹೆಣ್ಣುಗಳು ಅತ್ಯಂತ ಸಂಕಟದ ಒತ್ತಡಕ್ಕೆ ಸಿಲುಕಿಕೊಂಡವರು ಮತ್ತು ದೈಹಿಕ ಅಥವಾ ಮಾನಸಿಕ ಅಸ್ವಾಸ್ಥ್ಯಕ್ಕೆ ಗುರಿಯಾದವರು. ತಮ್ಮ ಬದುಕಿನ ದುರಂತಕ್ಕೂ ಸಿರಿ ಮೈದುಂಬುವಿಕೆಗೂ ತೀರ ಸಂಬಂಧವಿದೆ ಎನ್ನುವುದು ಇವರು ಯಾರೂ ಒಪ್ಪಕೊಳ್ಳಲಿಲ್ಲ ವಾದರೂ ಮಾತುಕತೆಯಲ್ಲಿ ಕೌಟುಂಬಿಕ ಹಿಂಸೆ ಹಾಗೂ ಸಂಬಂಧಗಳ ಬಿರುಕನ್ನು ತೆರೆದಿಟ್ಟರು. ತೀವ್ರ ಅಸ್ವಾಸ್ಥ್ಯಕ್ಕೆ ಒಳಗಾಗಿದ್ದುದನ್ನು ಒಪ್ಪಿಕೊಂಡರು.  ಕೆಲವರು ತಾವು ಆತ್ಮಹತ್ಯೆಗೆ ಮನಸ್ಸು ಮಾಡಿದುದನ್ನು ನೆನಪು ಮಾಡಿದರು. ಮಾನವ ಬದುಕಿನ ಅತ್ಯಂತ ಕ್ರಿಯಾಶೀಲ ಘಟ್ಟ ಅಂದರೆ ೧೮ ರಿಂದ ೨೫ ವರ್ಷ ವಯೋಮಾನದಲ್ಲಿ ತಾವು ಸಿರಿ ಮೈದುಂಬುವಿಕೆಗೆ ಒಳಗಾದುದನ್ನು ಹೇಳಿದರು.

ಈ ಎಲ್ಲ ಅಂಶಗಳನ್ನು ಪರಿಗ್ರಹಿಕೆಗೆ ತಂದುಕೊಂಡಾಗ ಲಿಂಗವ್ಯವಸ್ಥೆಯ ಕ್ರೌರ್ಯಗಳು, ನೀತಿ ನಿಯಮಗಳು, ವಿಧಿನಿಷೇಧಗಳು, ನಿರೀಕ್ಷೆಗಳು ಹೆಣ್ಣನ್ನು ಒತ್ತೆ ಇಟ್ಟಿರುವುದು ಒಡೆದು ಕಾಣುವ ಸತ್ಯ. ಶೀಲದ ಪಾವಿತ್ರ್ಯವನ್ನು ಕಾಪಾಡಿಕೊಳ್ಳವ ಆತಂಕ ಹಾಗೂ ಪುರುಷನ ಅನೈತಿ ಕತೆಯ ಭಯ ಅವಳನ್ನು ತೀವ್ರವಾಗಿ ಕಾಡುತ್ತದೆ. ಮಾತೃರೂಪಿ ಬಂಧುತ್ವ ವ್ಯವಸ್ಥೆಯಲ್ಲಿ ರಕ್ತಬಾಂಧವ್ಯ ಕುಟುಂಬದೊಳಗೆ ಸಂಬಂಧಗಳು ಗಾಢವಾಗಿದ್ದು ಹೆಣ್ಣೊಬ್ಬಳಿಗೆ ನೆಮ್ಮದಿ ಹಾಗೂ ಸಂತೋಷ ತರುವ ಸಂಗಾತಿಯಾಗಿರುತ್ತದೆ. ಈ ಬಗೆಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಾಗ ಆಕೆಗೆ ಅತಂತ್ರತೆ ಹಾಗೂ ಒಂಟಿತನಗಳು ತೀವ್ರತರವಾದ ನೋವನ್ನು ತಂದೊಡ್ಡುತ್ತವೆ. ವಿವಾಹ ಸಂಬಂಧಿ ಕುಟುಂಬದಲ್ಲಿ ಅತ್ತೆ, ಮಾವ, ಗಂಡ ಇತ್ಯಾದಿ ಬಂಧು ಗಳಿಂದ ಹಿಂಸೆ, ನಿರ್ಲಕ್ಷ್ಯ, ಅವಮಾನಗಳಿಗೆ ತುತ್ತಾಗುವಳು. ಇವು ಬಹುತೇಕ ಭಾರತೀಯ ಹೆಣ್ಣುಗಳ ಸಮಸ್ಯೆ. ಈ ಎಲ್ಲವೂ ಅಂದರೆ ಶೀಲದ ಪಾವಿತ್ರ್ಯದ ಆತಂಕ, ಪುರುಷ ದೌರ್ಜನ್ಯ, ಅನೈತಿಕತೆ, ಹೆಣ್ಣಿನ ಅತಂತ್ರ ಹಾಗೂ ಒಂಟಿತನದಂತಹ ಪ್ರಶ್ನೆಗಳು ಸಿರಿಯ ಬದುಕಿನ ಅನುಭವಗಳೂ ಆಗಿವೆ ಎನ್ನುವುದನ್ನು ಗಮನಿಸಬೇಕು.

“ಮಾತೃರೂಪಿ ತುಳುವ ಕುಟುಂಬದ ಹೆಣ್ಣೊಬ್ಬಳಿಗೆ ಸಿರಿ ಬದುಕಿನ ಕತೆ ಪರಿಚಿತವಾಗಿಯೇ ಇರುತ್ತದೆ. ಸಿರಿಯನ್ನು ತುಳುವ ಸಂಸ್ಕೃತಿಯಲ್ಲಿ ಅತ್ಯಂತ ಪೂಜ್ಯಕತೆಯಿಂದ, ಗೌರವದಿಂದ ಕಾಣಲಾಗುತ್ತದೆ. ಆಕೆ ಪಟ್ಟ ಕಷ್ಟಕ್ಕೆ ಗುರಿಯಾದ ಹಿಂಸೆಗೆ, ತೋರಿದ ಧೈರ್ಯಕ್ಕೆ, ಅಧರ್ಮದ ವಿರುದ್ಧದ ಹೋರಾಟಕ್ಕೆ ಸಹಜವಾಗಿಯೇ ತುಳುವ ಹೆಣ್ಣುಗಳು ಆಪ್ತತೆಯನ್ನು ಬೆಸೆದುಕೊಳ್ಳು ತ್ತಾರೆ. ಸಿರಿ ಅನುಭವಿಸಿದ ಕಷ್ಟ ಪರಂಪರೆಗಳು ತನ್ನ ದಿನನಿತ್ಯದ ಬದುಕಿನ ಅನುಭವವೂ ಆಗಿರುವಲ್ಲಿ ಆಪ್ತತೆ ಅಂತರವನ್ನು ಕಳೆದುಕೊಳ್ಳುತ್ತದೆ. ಶಕ್ತಿ ತಾಯಿ ಸಿರಿಯೇ ಅನುಭವಿಸಿದ ಕಷ್ಟ ಕೋಟಲೆಗಳ ಮುಂದೆ ನಮ್ಮದೇನು ಮಹಾ” ಎನ್ನುತ್ತಾರೆ ಕೊಟ್ರಪಾಡಿ ಗುತ್ತಿನ ೬೮ ವರ್ಷದ ಸುಪ್ರೇಮ ಅವರು (ವೈಯಕ್ತಿಕ ಸಂದರ್ಶನ: ೨೦೦೩, ಜನವರಿ ೪) ಹೀಗೆ ಸಿರಿಯ ಕಷ್ಟ ಹಾಗೂ ನೋವುಗಳಿಗೂ ಸಾಮ್ಯತೆ ಕಂಡುಕೊಂಡ ತುಳುವ ಹೆಣ್ಣು ಸಿರಿ ಅದನ್ನು ಮೀರಿ ನಿಂತ ನಿಲುವಿನಿಂದ ಪ್ರೇರಿತಳಾಗುತ್ತಾಳೆ. ಸಿರಿಯ ಕಡೆ ಸೆಳೆತಕ್ಕೆ ಒಳಗಾಗುವ ಈ ಮನೋಪ್ರವೃತ್ತಿ ಆಕೆಯ ಮುಂದೆ ಸಿರಿಪಂಥದ ಆಕರ್ಷಣೆಯನ್ನು ತೆರೆದಿಡುತ್ತದೆ.

ಆಕರ್ಷಣೆ ಅಂತರ ಅಳಿದ ಆಪ್ತತೆಯಲ್ಲಿ ಆಕೆ ಸಿರಿ ಮೈದುಂಬುವಿಕೆಗೆ ಒಳಗಾಗುತ್ತಾಳೆ. ಹೀಗೆ ಸಿರಿ ಪಂಥಕ್ಕೆ ಸೇರಿದ ಹೆಣ್ಣು ಸಿರಿ ನಡೆದ ದಾರಿಯು ತನ್ನ ಬದುಕಿಗೂ ಮಾದರಿ ಎಂದು ಸ್ವೀಕರಿಸುತ್ತಾಳೆ. ಆ ಸಂಸ್ಕೃತಿಯಲ್ಲಿ ಸಿರಿಯ ಬಗೆಗಿರುವ ನಿಷ್ಠೆ ಮತ್ತು ನಂಬಿಕೆಯ ನೆಲೆಯಲ್ಲಿ ಸಿರಿ ಮೈದುಂಬುವಿಕೆಗೆ ಒಳಗಾದ ವ್ಯಕ್ತಿಯನ್ನು ಅದೇ ನಿಷ್ಠೆಯಿಂದ ಕಾಣಲಾ ಗುತ್ತದೆ. ಸಿರಿಯನ್ನು ಸತ್ಯ ಸಚ್ಚಾರಿತ್ರ್ಯ ಮತ್ತು ಪರಿಶುದ್ಧತೆಯ ಸಂಕೇತವಾಗಿ ಗುರುತಿಸಲಾಗು ವುದರಿಂದ ಸಿರಿ ಮೈದುಂಬುವ ಹೆಣ್ಣನ್ನು ಹಾಗೆಯೇ ಅರ್ಥೈಸಲಾಗುತ್ತದೆ.  ಸಿರಿ ಪರಿಶುದ್ಧ ಳಾಗಿರುವುದರಿಂದ ಆಕೆ ಮೈಲಿಗೆ ಅಥವಾ ಹೊಲೆಯಾದ ದೇಹದಲ್ಲಿ ಆವಾಹನೆಗೊಳ್ಳುವುದಿಲ್ಲ ಎಂದು ಭಾವಿಸಲಾಗುತ್ತದೆ. ಅಂದರೆ ಒಬ್ಬ ಹೆಣ್ಣು ಸಿರಿ ಮೈದುಂಬುವಿಕೆಗೆ ಒಳಗಾದಳು ಎಂದರೆ ಆಕೆ ಸಿರಿಯಂತೆಯೇ ಪವಿತ್ರಳು, ಪರಿಶುದ್ಧಳು ಎಂದು ಬಗೆಯಲಾಗುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ ಹೆಂಡತಿಯ ಶೀಲದ ಮೇಲೆ ಅಪನಂಬಿಕೆ ಇರುವ ಗಂಡ ಅದೇ ಹೆಣ್ಣು ಸಿರಿ ಅವಾಹನೆಗೆ ಒಳಗಾದ ಕ್ಷಣದಿಂದ ಅಪನಂಬಿಕೆಯನ್ನು ಬಿಟ್ಟು ಕೊಟ್ಟು ಆಕೆಯನ್ನು ಪವಿತ್ರಳು ಎಂದು ಸ್ವೀಕರಿಸುತ್ತಾನೆ.  ಅದುವರೆಗೆ ಕುಟುಂಬದ ಒಳಗೆ ತೀರಾ ನಿರ್ಲಕ್ಷ್ಯಕ್ಕೆ ಗುರಿಯಾದ ಶೋಷಿತ ಸೊಸೆ ಸಿರಿಯಾದ ನಂತರ ಕುಟುಂಬದ ಎಲ್ಲ ಶುಭಾಶುಭಗಳಿಗೆ ಸಂಬಂಧಿಸಿದ ಪ್ರಶ್ನೆಗಳಲ್ಲಿ, ಆಗು ಹೋಗುಗಳ ನಿರ್ಧಾರಗಳಲ್ಲಿ ಅವಳ ಮಾರ್ಗದರ್ಶನವನ್ನು ಪಡೆಯಲಾಗುತ್ತದೆ. ಕುಟುಂಬದ ಹೊರಗೆ ವಿವಾಹ, ಸೀಮಿತದಂತಹ ಸಂದರ್ಭಗಳಲ್ಲಿ ಸಿರಿಗೆ ಳ್ಯಪಟ್ಟಿ ನೀಡಿ ಮನ್ನಣೆ ಸಲ್ಲಿಸಲಾಗುವುದು. ಕೌಟುಂಬಿಕವಾಗಿ ಅಷ್ಟೇ ಅಲ್ಲ, ಸಾಮಾಜಿಕವಾಗಿಯೂ ಆಕೆಯನ್ನು ಮುಟ್ಟುಚಟ್ಟು ತಗುಲದಂತೆ ಪಾವಿತ್ರ್ಯ ಕಾಪಾಡುವಲ್ಲಿ ವಿಶೇಷ ಕಾಳಜಿ ತೋರುತ್ತದೆ. ಅಂದರೆ ಸಿರಿ ಮೈದುಂಬುವ ಮೂಲಕ ಈ ಹೆಣ್ಣಿಗೆ ಒಂದು ವಿಶೇಷ ಬಗೆಯ ಐಡೆಂಟಿಟಿ ಪ್ರಾಪ್ತವಾಗುತ್ತದೆ. ಹೀಗೆ ಸಿರಿ ಮೈದುಂಬುವ ಮೂಲಕ ಹೆಣ್ಣೊಬ್ಬಳು ಅಲಕ್ಷಿತ ಶೋಧಿತ ಸ್ಥಿತಿಯಿಂದ ಅಪೇಕ್ಷಿತ ಗೌರವದ ಸ್ಥಿತಿ ತಲುವುವಲ್ಲಿ ನಿರ್ಮಾಣವಾಗುವ ಸಬಲೀಕರಣವನ್ನು ಮುಖ್ಯವಾಗಿ ಗಮನಿಸಬೇಕು. ಇದರ ಜೊತೆ ಜೊತೆಗೆ ಅದುವರೆಗೆ ಹಿಂಸೆಗೆ, ದಮನಕ್ಕೆ ಒಳಗಾಗಿ ದನಿ ಇಲ್ಲದ, ಬಾಯಿ ಬಿಡಲಾರದ ಹಂತದಲ್ಲಿರುವ ಹೆಣ್ಣು ಸಿರಿ ಮೈದುಂಬುವಿಕೆಗೆ ಒಳಗಾಗುವ ಮೂಲಕ ತನಗಾದ ಅನ್ಯಾಯ ವನ್ನು, ಶೋಷಣೆಯನ್ನು ಪ್ರಶ್ನಿಸುವ ಮತ್ತು ತನ್ನ ಮೇಲೆ ನಡೆಯುವ ಅಧಿಕಾರಶಾಹಿ ದೌರ್ಜನ್ಯವನ್ನು ಪ್ರತಿಭಟಿಸುವ ಹಂತಕ್ಕೆ ಬೆಳೆಯುತ್ತಾಳೆ. ಹೆಣ್ಣೊಬ್ಬಳು ಬಾಗಿದ ದೈನ್ಯ ಸ್ಥಿತಿಯಿಂದ ಎದ್ದು ನಿಲ್ಲುವ ಸ್ಥಿತಿಗೆ ಬೆಳೆದು ನಿಲ್ಲುತ್ತಾಳೆ ಎಂದರೆ ಅದು ಹೆಣ್ಣಿನ ಸಬಲೀಕರಣ ವಾಗಿಯೇ ಕಂಡುಕೊಳ್ಳಬೇಕು.

ದಲಿಯ ಸೇವೆಗೆ ನಿಂತ ಸಿರಿ ಮೈದುಂಬಿದ ಹೆಣ್ಣು ಸಿರಿಸಂಧಿಯನ್ನು ಹಾಡತೊಡಗುತ್ತಾಳೆ.  ಹೀಗೆ ಹಾಡತೊಡಗುವುದೆಂದರೆ ಅದು ಮೌಖಿಕ ಲೋಕದಲ್ಲಿ ಅದು ಕವಿಯೊಬ್ಬನ ಸೃಷ್ಟಿಕಾರ್ಯದಂತೆಯ ಕಾವ್ಯ ಮರುಸೃಷ್ಟಿ ಆಗುತ್ತಲೆ ಹೋಗುತ್ತದೆ. ಹಲವು ವರ್ಷಗಳಿಂದ ಸಿರಿ ಜಾತ್ರೆಯ ದಲಿಯ ಸೇವೆಯಿಂದ ಹಾಗೂ ಸಿರಿ ಕುಮಾರರಿಂದ ಪಾಡ್ದನ ತರಬೇತಿ ಪಡೆಯುವ ಮೂಲಕ ಆಕೆ ಒಬ್ಬ ಸಮರ್ಥ ಕವಿಯಾಗಿ, ಗಾಯಕಳಾಗಿ ತನ್ನನ್ನು ಸ್ಥಾಪಿಸಿ ಕೊಳ್ಳುತ್ತಾಳೆ. ಇದರಿಂದ ಆಕೆ ಸಾಮಾಜಿಕ ಸಾಂಸ್ಕೃತಿಕ ಮನ್ನಣೆ ಪಡೆಯುವುದು ಅತ್ಯಂತ ಮಹತ್ವದ್ದೆನಿಸುತ್ತದೆ. ಇದು ಅದುವರೆಗೆ ಆಕೆಯಲ್ಲಿ ತುಂಬಿದ್ದ ಕೀಳಿರಿಮೆಯನ್ನು ದೂರಮಾಡಿ ಹೊಸ ಆತ್ಮ ವಿಶ್ವಾಸವನ್ನು ಕಟ್ಟಿಕೊಡುತ್ತದೆ. ಅನುಭವಿ ಸಿರಿ ಇಲ್ಲೆಚ್ಚಿನ ದಲಿಯ ನಡೆಸುವವಳಾಗಿ ಆರ್ಥಿಕ ಚೈತನ್ಯವನ್ನು ಕೂಡಾ ಪಡೆಯುತ್ತಾಳೆ. ಇದು ನಿಜವಾಗಿ ಹೆಣ್ಣಿನ ಸ್ವಸಾಮರ್ಥ್ಯದ ಕಟ್ಟುವಿಕೆ ಅಥವಾ ಸಬಲೀಕರಣ ಪ್ರಕ್ರಿಯೆ ಆಗಿದೆ. ಲಿಂಗ ವ್ಯವಸ್ಥೆ ಯಲ್ಲಿ ದುಡಿಯುವ ಮಹಿಳೆ ಹತ್ತು ಹಲವು ಬಗೆಯ ಶೋಷಣೆಗೆ, ಹುನ್ನಾರಗಳಿಗೆ ಒಳಗಾದ ಸ್ಥಿತಿಯಿಂದ ಈ ಎಲ್ಲ ಹಂತಗಳನ್ನು ದಾಟುವ ಮತ್ತು ಬದಲಾಯಿಸುವ ಶಕ್ತಿ ಪಡೆಯುತ್ತಾಳೆ ಎಂದರೆ ತನ್ನ ಸ್ವಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಐಡೆಂಟಿಟಿ ಸ್ಥಾಪಿಸಿಕೊಳ್ಳುವುದು ಸಾಧ್ಯ ವೆಂದಾಗುವ ಪ್ರಕ್ರಿಯೆಯನ್ನು ಸಬಲೀಕರಣದ ಪರಿಭಾಷೆಯಲ್ಲಿ ಅರ್ಥೈಸಿಕೊಳ್ಳಬೇಕು. ಸಿರಿ ಮೈದುಂಬುವಿಕೆಯು ತಂದುಕೊಡುವ ಶಕ್ತಿ ಸಾಮರ್ಥ್ಯ, ಆತ್ಮ ವಿಶ್ವಾಸ ಹಾಗೂ ಸಮಸ್ಯೆ ಗಳನ್ನು ದಾಟುವ, ಬದುಕನ್ನು ಸುಗಮಗೊಳಿಸುವ ಪ್ರಕ್ರಿಯೆಯನ್ನು ಸಬಲೀಕರಣ ಪರಿಕಲ್ಪನೆಗಳು ದಕ್ಕಿಸಿಕೊಳ್ಳಬೇಕು. ಆದೂ ಭಾರತದಂತಹ ಸಾಮಾಜಿಕ ಸಾಂಸ್ಕೃತಿಕ ಸಂದರ್ಭದಲ್ಲಿ ಸಬಲೀಕರಣದ ತಾತ್ವಿಕತೆ, ಆರ್ಥಿಕ ರಾಜಕೀಯ ನೆಲೆಯಿಂದ ಸಾಂಸ್ಕೃತಿಕ ನೆಲೆಗೂ ಅನುಸಂಧಾನಗೊಳ್ಳಬೇಕಾಗಿದೆ. ಯಾಕೆಂದರೆ ಮಹಿಳಾ ಬದುಕನ್ನು ಆರ್ಥಿಕ ರಾಜಕೀಯ ನೆಲೆಗಿಂತ ದೊಡ್ಡಮಟ್ಟದಲ್ಲಿ ನಿಯಂತ್ರಿಸುವುದು ಮತ್ತು ವಿಸ್ತರಿಸುವುದು ಸಾಂಸ್ಕೃತಿಕ ನೆಲೆ. ಹೀಗಾಗಿ ಮಹಿಳಾ ಸಬಲೀಕರಣ ಎನ್ನುವುದು ಅವರ ಸಾಂಸ್ಕೃತಿಕ ಅನನ್ಯತೆಯ, ದರ್ಶನದ ಸಾಧ್ಯತೆಗಳೊಂದಿಗೂ ಸಂವಾದ ನಡೆಸಬೇಕಾದ ಅಗತ್ಯವಿದೆ.

ಹಿರಿಯಡಕ ಸಿರಿಜಾತ್ರೆ (೨೦೦೨) ಯಲ್ಲಿ ನಾನು ಕ್ಷಿಸಿದ ಘಟನೆಯನ್ನು ಇಲ್ಲಿ ಹೇಳಲು ಅಪೇಕ್ಷಿಸುತ್ತೇನೆ. ಸುಮಾರು ೪೦ ವರ್ಷ ವಯಸ್ಸಿನ ಸಿರಿ ಮೈದುಂಬಿದ ವಿವಾಹಿತ ಮಹಿಳೆ ಯೊಬ್ಬರು ತನ್ನ ಗಂಡ ಅತ್ತೆಯ ಹಿಂಸೆ ದೌರ್ಜನ್ಯಗಳನ್ನು ಗಂಡನ ಮುಂದಿಟ್ಟು, ಸೆಟೆದು ನಿಂತು ಬಿರುಸು ಮಾತಿನಲ್ಲಿಜರಿದು ಭಂಗಿಸುತ್ತಿದ್ದುದನ್ನು ಕಂಡಿದ್ದೇನೆ. ಆಕೆಯ ಸವಾಲಿಗೆ ಗಂಡ ತಪ್ಪೊಪ್ಪಿಕೊಂಡು ಮುಂದೆ ಚೆನ್ನಾಗಿ ನೋಡಿಕೊಳ್ಳುವ ಭರವಸೆಯ ಮಾತುಕೊಟ್ಟು ದನ್ನು ಗಮನಿಸಿದ್ದೇನೆ. ಬಹಳ ಅನುಭವಿ ಸಿರಿ ಕರ್ಗಿ ಶೆಡ್ತಿ ತನ್ನ ಬದುಕನ್ನು ನನ್ನ ಮುಂದೆ ಈ ರೀತಿ ತೆರೆದಿಟ್ಟಿದ್ದರು. (ವೈಯಕ್ತಿಕ ಮಾತುಕತೆ ಅಳದಂಗಡಿಯಲ್ಲಿ ೨೦೦೩ ಏಪ್ರಿಲ್ ೫ ರಂದು) “ನನ್ನ ಗಂಡ ಬಹಳ ಕುಡುಕ, ಕೆಟ್ಟ ಚಾಳಿ ಇತ್ತು. ದಿನವೂ ಮನೆಯಲ್ಲಿ ಹೊಡೆತ ಬಡಿತ ರಾದ್ಧಾಂತ. ಆತನ ದುಶ್ಚಟ ಬಿಡಿಸಲು ಏನೆಲ್ಲ ಪ್ರಯತ್ನ ಮಾಡಿದೆ.  ಯಾವುದೂ ಫಲಕಾರಿಯಾಗಲಿಲ್ಲ. ನನಗೆ ಜೀವನವೇ ಬೇಡ ಎಂಬಷ್ಟು ಕಷ್ಟವಾಗಿತ್ತು. ಆಗಲೆ ನಾನು ಸಿರಿಯ ಕೃಪೆಗೆ ಒಳಗಾಗಿ ದಲಿಯಕ್ಕೆ ನಿಂತುದು. ನಾನು ಸಿರಿ ಆದ ಮೇಲೆ ಅವರನ್ನು ದುಶ್ಚಟಗಳಿಂದ ಬಿಡಿಸುವುದು ಸಾಧ್ಯವಾಗಿದೆ. ಆ ಬಳಿಕವೇ ಮನೆಯಲ್ಲಿ ನಾನೊಂದು ಮನುಷ್ಯ ಎಂದಾದುದು. ಇಲ್ಲಿ ಕರ್ಗಿ ಶೆಡ್ತಿಯವರ ಮಾತಿನಲ್ಲಿ ವ್ಯಕ್ತವಾಗುವ ಮಹತ್ವದ ಅಂಶ ಎಂದರೆ ಸಿರಿ ಮೈದುಂಬುವ ಮೂಲಕ ಕುಟುಂಬದೊಳಗೆ ಅವಳ ಸ್ಥಾನ ಪಲ್ಲಟವಾದುದು ಹಾಗೂ ಅಧಿಕಾರದ ವಿಸ್ತಾರ. ಕರ್ಗಿ ಶೆಡ್ತಿ ತನ್ನ ಅಧೀನ ಸ್ಥಿತಿಯನ್ನು ದಾಟಿ ನಿಯಂತ್ರಕ ಶಕ್ತಿಯಾಗಿ ಮಾರ್ಪಾಡುವ ಬಗೆಯನ್ನು ಸಾಂಸ್ಕೃತಿಕ ಸಬಲೀಕರಣವಾಗಿ ಗುರುತಿಸಬೇಕಾಗಿದೆ.  ಇದರರ್ಥ ಜನತೆಯ ನಂಬಿಕೆಯ ಲೋಕ ಸಮಸ್ತದ ಸಮರ್ಥನೆ ಅಲ್ಲ. ಈ ನಂಬಿಕೆಯ ಹಾಗೂ ಶ್ರದ್ಧೆಯ ಲೋಕದೊಳಗೆ ಆಪ್ತತೆಯಿಂದ ನಾವು ಪ್ರವೇಶಿಸಬೇಕು. ಜನಸಮುದಾ ಯದ ಜ್ಞಾನದ ಗ್ರಹಿಕೆಯ ವಲಯಗಳು ತೆರೆಯುವ ಇಂತಹ ಕಥನಗಳನ್ನು ಎಚ್ಚರದಿಂದ ಶೋಧಿಸಬೇಕಾಗಿದೆ. ಇಲ್ಲದೆ ಹೋದರೆ ಆ ಲೋಕದೊಳಗಿನ ಶಕ್ತಿಕೇಂದ್ರಗಳ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗುತ್ತದೆ. ಈ ಮಾತಿಗೆ ಇನ್ನಷ್ಟು ಸೂಕ್ಷ್ಮ ಸ್ತರಗಳಿವೆ. ಅದನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಾಂಸ್ಕೃತಿಕ ಅರಿವಿನ ಸಂವೇದನೆ ಜತೆಗಿರಬೇಕು.

ಸಾಂಸ್ಕೃತಿಕ ಲೋಕದ ಈ ವಿಸ್ತಾರ ಹಾಗೂ ನಿಯಂತ್ರಣ ಎರಡೂ, ಹೆಣ್ಣಿನ ಬದುಕಿ ನೊಡನೆ ಒಡಬೆರೆತಿರುವ ಸತ್ಯವನ್ನು ನಮಗೆ ಗ್ರಹಿಸುವುದು ಸಾಧ್ಯವಾದರೆ ಈಗಿರುವ ಸಬಲೀ ಕರಣ ಪರಿಕಲ್ಪನೆಯ ಮಿತಿಯ ಅರಿವು ನಮಗಾಗುತ್ತದೆ. ಈಗ ಆಗಬೇಕಾದದ್ದು ಇವೆರಡರ ಆರ್ಥಿಕ ಸಾಂಸ್ಕೃತಿಕ ನೆಲೆಯ ಅನುಸಂಧಾನ, ಹಾಗೆ ನೋಡಿದರೆ ನಮ್ಮ ಅನುಭಾವ, ಮೈದುಂಬುವಿಕೆಯ ದರ್ಶನಗಳು, ಚಿಂತನೆಗಳೊಂದಿಗೆ ಆಧುನಿಕ ಪಶ್ಚಿಮಮುಖಿಯಾದ ಸಿದ್ಧಾಂತಗಳು ಗಂಭೀರವಾದ ಮುಖಾಮುಖಿ ನಡೆಸಲೇ ಇಲ್ಲ ಎನ್ನುವುದು ಒಂದು ದೊಡ್ಡ ವಿಸ್ಮಯವೆಂದೇ ನಾನು ಭಾವಿಸುತ್ತೇನೆ. ರೂಢಿಯ ಗರ್ಭದೊಳಗಿರುವ ಜನರ ನಂಬಿಕೆಯ ಒಡಲೊಗಿರುವ ಇಂತಹ ಸಾಂಸ್ಕೃತಿಕ ಆತ್ಮವನ್ನು ತಾತ್ವಿಕ ಆಕೃತಿಯಾಗಿ ಕಂಡುಕೊಳ್ಳಬೇಕು. ಹಾಗೆಂದರೆ ಇದರರ್ಥ ಪಶ್ಚಿಮದ ಸೈದ್ಧಾಂತಿಕ ನೆಲೆಯನ್ನು ನಿರಾಕರಿಸಿದಂತೆ ಅಲ್ಲ ಅಥವಾ ವಿರೋಧಿಸುವುದು ಅಲ್ಲ. ಯಾವುದೇ ತಾತ್ವಿಕತೆಯನ್ನು ಜನಸಮೂಹಕ್ಕೆ ಮುಖಾಮುಖಿ ಯಾಗಿಟ್ಟು ಅದರ ದರ್ಶನದ ಬೆಳಕಿನಲ್ಲಿ ಅರ್ಥ ಹೊರಡಿಸಬೇಕು. ಇಲ್ಲದೆ ಹೋದರೆ ಚರ್ಚೆಗಳು ತೀರಾ ತಾತ್ವಿಕವಾಗಿ ಬಿಟ್ಟು ಜೀವನವನ್ನು ಕಾಣದೆ ಹೋಗುವ ಅಪಾಯವಿದೆ. ಇಂತಹ ಹತಾರಗಳಿಂದ ಸಾಂಸ್ಕೃತಿಕ ಸಂಕಲ್ಪದ ರೂಪಕಗಳ ರಚನೆಗಳನ್ನು ಅರ್ಥಮಾಡಿ ಕೊಳ್ಳಲಾಗದು.