Categories
ಡಾ|| ಕೆ. ಮಂಜಪ್ಪ ಲೇಖನಗಳು

ಸಿಹಿನೀರು ಸೀಗಡಿ ಮತ್ತು ಮೀನು ಸಾಕಣೆ

ಸಿಹಿನೀರು ಸೀಗಡಿ ಮತ್ತು ಮೀನು ಸಾಕಣೆ

ಭಾರತದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಸಿಹಿನೀರು ಸೀಗಡಿ ಪ್ರಭೇದಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಮ್ಯಾಕ್ರೋಬೇಕಿಯಂ ರೋಸೆನ್ ಬರ್ಗಿ ಎಂಬ ತಳಿಯು ವಾಣಿಜ್ಯ ಬೆಳೆಗೆ ಸೂಕ್ತವಾಗಿ ಕಂಡುಬಂದಿರುತ್ತದೆ. ಇದು ತನ್ನ ಜೀವಿತದ ಹೆಚ್ಚು ಕಾಲ ಸಿಹಿ ನೀರಿನಲ್ಲಿ ಬೆಳಯಲ್ಪಟ್ಟರೂ ವಂಶಾಭಿವೃದ್ಧಿಯ ಸಮಯದಲ್ಲಿ ಉಪ್ಪುನೀರಿನ ಸಹಯೋಗದೊಂದಿಗೆ ಮರಿಮಾಡುವ ಗುಣಲಕ್ಷಣಗಳನ್ನು ಪಡೆದುಕೊಂಡಿರುತ್ತದೆ. ಇದರ ಕೋಶಾವಸ್ಥೆಯ ಮರಿಗಳು ಉಪ್ಪುನೀರಿನಲ್ಲಿ ಬೆಳೆಯಲ್ಪಟ್ಟು ಅವುಗಳು ಸಣ್ಣ ಮರಿಗಳಾಗುತ್ತಿದ್ದಂತೆ ಸಿಹಿನೀರಿನೊಂದಿಗೆ ಬೆಳೆಯುವ ಗುಣವಿಶೇಷತೆಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿಯೇ ಇದನ್ನು ಸಿಹಿನೀರು ಸೀಗಡಿ ಎಂದು ಕರೆಯಲಾಗುವುದು. ಮ್ಯಾಕ್ರೊಬ್ರೇಕಿಯಂ ರೋಸೆನ್ ಬರ್ಗಿ ಸೀಗಡಿಯು ಮಿಶ್ರಹಾರಿಯಾಗಿದ್ದು, ಕೃತಕ ಆಹಾರವನ್ನು ಸಹ ಸೇವಿಸಬಲ್ಲದು. ಈ ಸೀಗಡಿಯನ್ನು ಏಕತಳಿ ಹಾಗೂ ಮಿಶ್ರತಳಿಯಾಗಿಯೂ ಮೀನುಗಳೊಂದಿಗೆ ಪಾಲನೆ ಮಾಡಬಹುದು. ಈ ಸೀಗಡಿಯು ಒಂದು ವರ್ಷದಲ್ಲಿ ೨೫೦ ಗ್ರಾಂವರೆಗೂ ಬೆಳೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿದೇಶ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಭಾರತದಲ್ಲಿ ೩೦ ಸಾವಿರ ಟನ್‌ಗೂ ಹೆಚ್ಚು ಸಿಹಿನೀರು ಸೀಗಡಿ ಉತ್ಪಾದನೆಯಾಗುತ್ತಿದ್ದು, ಕೃಷಿಗೆ ಪೂರಕವಾದ ಜಲ ಸಂಪನ್ಮೂಲಗಳು ಲಭ್ಯವಿರುವುದರಿಂದ ಇದರ ಕೃಷಿಯನ್ನು ಮೀನು ಕೃಷಿಕರು ಅಳವಡಿಸಿಕೊಳ್ಳಬೇಕಾಗಿದೆ.

ಸಿಹಿನೀರು ಸೀಗಡಿ ಕೆರೆಗಳು ಹಾಗೂ ನಿರ್ವಹಣೆ

ಸಿಹಿನೀರು ಸೀಗಡಿ ಸಾಕಣೆಗೆ ಕೆರೆಗಳು ಆಯತಾಕರವಾಗಿದ್ದು, ಅರ್ಧ ಎಕರೆಯಿಂದ ೩ಎಕರೆ ವಿಸ್ತೀರ್ಣ ಹೊಂದಿದ್ದರೆ ಒಳ್ಳೆಯದು. ನೀರಿನ ಆಳ ಸುಮಾರು ೪ ಅಡಿಗೆ ನಿಗದಿಪಡಿಸಿಕೊಳ್ಳುವುದು ಸೂಕ್ತಕರವಾಗಿರುತ್ತದೆ. ನೀರಿನ ಗುಣಧರ್ಮಗಳಲ್ಲಿ ನೀರಿನ ರಸಸಾರ ೬.೫ರಿಂದ ೮.೫, ಗಡಸುತನ ೪೦ ರಿಂದ ೨೦೦ ಪಿ.ಪಿ.ಎಂ., ಕ್ಷಾರತೆ ೮೦ರಿಂದ ೧೪೦ ಪಿ.ಪಿ.ಎಂ, ಕರಗಿರುವ ಆಮ್ಲಜನಕದ ಅಂಶ ೫ರಿಂದ ೧೨ ಪಿ.ಪಿ.ಎಂ. ಅಳತೆ ಪ್ರಮಾಣಗಳಲ್ಲಿ ನಿರ್ವಹಿಸತಕ್ಕದ್ದು. ಪಾಲನೆ ಮಾಡುವ ಮುನ್ನ ಕೆರೆಗಳನ್ನು ಬಿಸಿಲಿಗೆ ಒಣಗಿಸಿ, ಆಮ್ಲಿಯತೆಗೆ ತಕ್ಕಂತೆ ಸುಣ್ಣವನ್ನು ಪ್ರತಿ ಎಕರೆಗೆ ೨೦೦-೩೦೦ ಕಿ.ಗ್ರಾಂ.ನಂತೆ ಕೆರೆಗಳಿಗೆ ನೀರು ಹಾಯಿಸುವ ಮುನ್ನ ಹಾಕಬೇಕು. ಕೆರೆಗಳ ಹೊರ ಹಾಗೂ ಒಳಕಿಂಡಿಗಳನ್ನು ಬಲೆಯಿಂದ ಸುರಕ್ಷಿತಗೊಳಿಸಿ ಇತರೆ ಮೀನುಗಳ ಒಳನುಸುಳುವಿಕೆಯಿಂದ ಸಂರಕ್ಷಿಸಿ ಕೊಂಡಿರಬೇಕು. ಹಳೆ ಕೆರೆಗಳಾಗಿದ್ದಲ್ಲಿ ಜಲ ಕಳೆಗಳು ಆವೃತಗೊಂಡು ಮೀನಿನ ಉತ್ಪಾದನೆಗೆ ಧಕ್ಕೆ ತರುವಂತಾಗಿರುತ್ತವೆ. ಭಕ್ಷಕ ಮೀನುಗಳಿದ್ದಲ್ಲಿ ಸಾಕಣೆಯ ಸೀಗಡಿ ಹಾಗೂ ಮೀನು ಮರಿಗಳನ್ನು ಕಬಳಿಸಿ ತಿನ್ನುವ ಪ್ರವೃತ್ತಿಯನ್ನುಹೊಂದಿರುತ್ತವೆ. ಆದ ಕಾರಣ ಇವುಗಳ ನಿರ್ವಹಣೆಯ ಕಾರ್ಯವನ್ನು ಸೀಗಡಿ ಹಾಗೂ ಮೀನು ಮರಿಗಳನ್ನು ಕೆರೆಗಳಿಗೆ ಬಿತ್ತುವ ಮುನ್ನ ಕೈಗೊಳ್ಳುವುದು ಸೂಕ್ತ. ಪಾಲನಾ ಕೆರೆಗಳಲ್ಲಿ ನೈಸರ್ಗಿಕ ಆಹಾರದ ಉತ್ಪಾದನೆಗೆ ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಪ್ರಾರಂಭದಲ್ಲಿ ಎಕರೆಗೆ ೧೬೦೦ಕಿ.ಗ್ರಾಂ. ದನದ ಸಗಣಿ, ೮ಕಿ.ಗ್ರಾಂ, ಯೂರಿಯಾ, ೧೨ಕಿ.ಗ್ರಾಂ ಸೂಫರ್ ಪ್ರಾಸ್ಪೇಟ್ ಗೊಬ್ಬರಗಳನ್ನು ಸೀಗಡಿ ಹಾಗೂ ಮೀನು ಮರಿಗಳನ್ನು ಬಿತ್ತುವ ಒಂದು ವಾರ ಮುಂಚಿತವಾಗಿ ಪಾಲನಾ ಕೆರೆಗಳಿಗೆ ಹಾಕಬೇಕು. ನಂತರ ನೀರನ್ನು ಹಂತ ಹಂತವಾಗಿ ಸುಮಾರು ೪ಅಡಿಗಳವರೆಗೆ ತುಂಬಿಸಬೇಕು. ನೈಸರ್ಗಿಕ ಆಹಾರದ ಸ್ಥಿರತೆಗೆ ಮೇಲೆ ತಿಳಿಸಿದ ಗೊಬ್ಬರಗಳಲ್ಲಿ ಅರ್ಧದಷ್ಟು ಪ್ರತಿ ತಿಂಗಳು ಪಾಲನಾ ಕೆರೆಗಳಿಗೆ ಹಾಕುವುದರಿಂದ ನೀರಿನ ಫಲವತ್ತತೆಯನ್ನು ಕಾಪಾಡಿಕೊಂಡಂತಾಗುತ್ತದೆ. ನೀರಿನ  ಬಣ್ಣ ೬ರಿಂದ ೭ ದಿನಗಳಲ್ಲಿ ತಿಳಿ ಹಸಿರು ಬಣ್ಣಕ್ಕೆ ತಿರುಗಿದಾಗ ಸೀಗಡಿ ಹಾಗೂ ಮೀನು ಮರಿಗಳನ್ನು ಬಿತ್ತುವುದು ಸೂಕ್ತ.

ಸೀಗಡಿ ಮರಿಗಳ ಶುಶ್ರೂಷಣೆ

ಆರೋಗ್ಯವಂತ ಸೀಗಡಿ ಮರಿಗಳನ್ನು ಉತ್ಪಾದನಾ ಕೇಂದ್ರಗಳಿಂದ ಪಡೆದು ತರಬೇಕು. ಸುಮಾರು ೧೦ ರಿಂದ ೧೫ ದಿನದ ಚಿಕ್ಕ ಸೀಗಡಿ ಮರಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಾಗಾಣೆ ಮಾಡಿ ತಂದ ನಂತರ ನೇರವಾಗಿ ಕೆರೆಗಳಿಗೆ ಬಿಡದೆ ಕೆಲ ದಿವಸ ನರ್ಸರಿ ಕೊಳಗಳಲ್ಲಿ ಅಥವಾ ಹಾಪಗಳಲ್ಲಿ ಶುಶ್ರೂಷಣೆ ಮಾಡುವುದು ಸೂಕ್ತ. ಸೀಗಡಿ ಮರಿಗಳ ಶುಶ್ರೂಷಣೆಯ ಕೊಳಗಳು ಚಿಕ್ಕದಿದ್ದಷ್ಟು ಉತ್ತಮ. ಇವುಗಳಲ್ಲಿ ನೈಸರ್ಗಿಕ ಆಹಾರವರ್ಧನೆಗೆ ಪ್ರತಿ ಚದುರ ಮೀಟರ‍್ಗೆ ಸಗಣಿ ಗೊಬ್ಬರ, ಯೂರಿಯಾ ಹಾಗೂ ಸೂಪರ್ ಫಾಸ್ಟೇಟ್ ಗೊಬ್ಬರಗಳನ್ನು ಕ್ರಮವಾಗಿ ೪೦೦ ಗ್ರಾಂ, ೨ ಗ್ರಾಂ ಮತ್ತು ೩ಗ್ರಾಂ ನಂತೆ ಕೊಳಕ್ಕೆ ಹಾಕಿ ನೀರಿನ ಫಲವತ್ತೆಯನ್ನು ಮಾಡಿಕೊಳ್ಳಬೇಕು. ಶುಶ್ರೂಷಣೆಯನ್ನು ೪೦ ರಿಂದ ೫೦ ದಿನಗಳ ಕಾಲ ಮಾಡುವುದರಿಂದ ಸಾಕಣೆಯ ಕೆರೆಗಳಲ್ಲಿ ಸೀಗಡಿ ಮರಿಗಳ ಬದುಕುಳಿಯುವಿಕೆಯನ್ನು ಹೆಚ್ಚಿಸಿಕೊಳ್ಳಬಹುದು. ಗುಣಮಟ್ಟದ ಕೃತಕ ಆಹಾರವನ್ನು ಪ್ರತಿ ದಿವಸ ೨ರಿಂದ ೩ಬಾರಿ ಸೀಗಡಿಯ ಸಣ್ಣ ಮರಿಗಳಿಗೆ ಕೊಡಬೇಕು. ಶುಶ್ರೂಷಣೆ ಅವಧಿಯಲ್ಲಿಯೂ ಕೂಡ ಸೀಗಡಿ ಮರಿಗಳಿಗೆ ಕೃತಕ ಗೂಡುಗಳನ್ನು ಒದಗಿಸುವುದು ಸೂಕ್ತ.

ಕೃತಕ ಗೂಡುಗಳ ಅಳವಡಿಕೆ

ಸೀಗಡಿ ಮರಿಗಳನ್ನು ಪಾಲನಾ ಕೆರೆಗಳಿಗೆ ಬಿತ್ತುವ ಮುನ್ನ ಕೆರೆಗಳ ನಾಲ್ಕಾರು ಕಡೆಗಳಲ್ಲಿ ಕೃತಕ ಗೂಡುಗಳನ್ನು ಒದಗಿಸಬೇಕು. ಕೃತಕ ಗೂಡುಗಳನ್ನು ಒದಗಿಸಲು ಅಷ್ಟೇನು ಖರ್ಚಿಲ್ಲದ ಅನುಪಯುಕ್ತ ವಸ್ತುಗಳನ್ನು ಆಯ್ಕೆಮಾಡಿ ಗೂಡುಗಳನ್ನು ನಿರ್ಮೀಸಬಹುದು. ಇವುಗಳಲ್ಲಿ ಹಳೆಯ ಟೈರುಗಳು, ಪ್ಲಾಸ್ಟಿಕ್ ಪೈಪುಗಳ ತುಣುಕುಗಳು, ತೆಂಗಿನ ರಟ್ಟೆ ನಾಡಹಂಚುಗಳನ್ನು ಉಪಯೋಗಿಸಿ ಗೂಡುಗಳನ್ನಾಗಿ ಮಾಡಿಕೊಳ್ಳಬಹುದು.

ಸೀಗಡಿ ಮರಿಗಳು ಹಾಗೂ ಸೀಗಡಿಗಳು ತಮ್ಮ ಬೆಳವಣಿಗೆಯ ವಿಕಾಸದಲ್ಲಿ ದೇಹದ ಹೊರಕವಚ (ಸಿಪ್ಪೆ)ವನ್ನು ಕಳಚುವ ಪ್ರಕ್ರಿಯೆ ನೈಸರ್ಗಿಕವಾಗಿ ಆಗುತ್ತಿರುತ್ತದೆ. ಈ ಸಂದರ್ಭದಲ್ಲಿ ಅವುಗಳ ದೇಹ ಮೃದುವಾಗಿದ್ದು ಸ್ವಯಂ ಸೀಗಡಿಗಳಿಂದ ಅಥವಾ ಇತರೆ ಭಕ್ಷಕ ಮೀನುಗಳಿಂದ ದಾಳಿಗೆ ತುತ್ತಾಗುವ ಸಂಭವವಿರುತ್ತದೆ. ಈ ಹಂತದಲ್ಲಿ ಪೊರೆ ಕಳಚಿಕೊಂಡ ಸೀಗಡಿಗಳಿಗೆ ಗೂಡುಗಳು ಆಶ್ರಯ ತಾಣವಾಗಿರುವುದರಿಂದ ಕೃತಕ ಗೂಡುಗಳ ಅಳವಡಿಕೆ ಅಗತ್ಯವಾಗಿರಬೇಕು.

ಸೀಗಡಿ ಮತ್ತು ಮೀನು ಮರಿಗಳ ಬಿತ್ತನೆ

ಪೂರ್ವಸಿದ್ಧತೆಪಡಿಸಿಕೊಂಡ ಪಾಲನಾ ಕೆರೆಗಳಿಗೆ ೦.೪ ರಿಂದ ೦.೫ ಗ್ರಾಂ. ತೂಕದ ಸೀಗಡಿ ಮರಿಗಳನ್ನು ಬಿತ್ತಬೇಕು. ಉತ್ಪಾದನಾ ಕೇಂದ್ರಗಳಿಂದ ಸೀಗಡಿ ಮರಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಸಾಗಣೆ ಮಾಡಿ ತದ ನಂತರ ಅವುಗಳನ್ನು ಸುಮಾರು ೨೦-೩೦ ನಿಮಿಷಗಳ ಕಾಲ ಕೆರೆಗಳ ನೀರನಲ್ಲಿ ತೇಲಿಬಿಡಬೇಕು. ನಂತರ ಚೀಲದ ಬಾಯನ್ನು ಬಿಚ್ಚಿಕೊಳದ ಸ್ವಲ್ಪ ನೀರನ್ನು ಸೀಗಡಿ ಇರುವ ಚೀಲಗಳಿಗೆ ತುಂಬಿಸಿ ತದನಂತರ ಸಾಕಣೆಯ ಕೆರೆಗಳಿಗೆ ಬಿಡಬೇಕು. ಈ ವಿಧಾನದಿಂದ ಸೀಗಡಿ ಮರಿಗಳು ನೀರಿನ ಉಷ್ಣಾಂಶದ ಏರು ಪೇರುಗೆ ಹೊಂದಿಕೊಳ್ಳಲು ಸಹಾಯವಾಗುತ್ತದೆ. ಆಹಾರ ಮತ್ತು ನೀರಿನ ಗುಣಧರ್ಮಗಳ ನಿರ್ವಹಣೆಯೊಂದಿಗೆ ಏಕತಳಿ ಸೀಗಡಿ ಕೃಷಿಯಾಗಿದ್ದಲ್ಲಿ ಎಕರೆಗೆ ೨೦,೦೦೦ ಸೀಗಡಿ ಮರಿಗಳನ್ನು ಮಾತ್ರಬಿತ್ತಿ ಬೆಳೆಯಬಹುದು. ಸಂಯೋಜಿತ ಸೀಗಡಿ ಹಾಗೂ ಮೀನು ಕೃಷಿಯಲ್ಲಿ ಮಿಶ್ರ ಮೀನುಗಳಾದ ಕಾಟ್ಲ ಮತ್ತು ರೋಹು ಹಾಗೂ ಸೀಗಡಿ ಮರಿಗಳನ್ನು ಒಂದು ಎಕರೆಗೆ ಕ್ರಮವಾಗಿ ೨೦೦೦ ಮತ್ತು ೮೦೦೦ ಮರಿಗಳನ್ನು ಬಿತ್ತಿ ಬೆಳೆಯಬಹುದು. ಈ ರೀತಿಯ ಮಿಶ್ರ ಬೆಳೆಯಲ್ಲಿ ಬೆರಳುದ್ದ ಗಾತ್ರದ ಕಾಟ್ಲ ಹಾಗೂ ರೋಹು ಮೀನು ಮರಿಗಳನ್ನು ೩:೨ರ ಪ್ರಮಾಣದಲ್ಲಿ ಬಿತ್ತುವುದು ಸೂಕ್ತ. ಬಹುತೇಕ ಮಳೆಯಾಧಾರಿತ ಕೆರೆಗಳು ಮೀನು ಸಾಕಣೆಗೊಳಪಟ್ಟಿದ್ದರೂ ಅವುಗಳು ಪೂರ್ವಸಿದ್ಧತೆಗಳಿಗೆ ಒಳಪಟ್ಟಿರುವುದಿಲ್ಲ. ಇಂತಹ ಕೆರೆಗಳು ನೈಸರ್ಗಿಕ ಆಹಾರದ ಕೊರತೆ ಕಂಡುಬರುತ್ತದೆ. ಪೂರಕ ಆಹಾರ ಮತ್ತು ನೀರಿನ ಗುಣಧರ್ಮಗಳ ನಿರ್ವಹಣೆಯಲ್ಲಿ ಅಸಮರ್ಪಕವಾಗಿರುವುದರಿಂದ ಉತ್ಪಾದನೆಯಲ್ಲಿ ಕುಂಠಿತ ಕಂಡಿರುತ್ತವೆ. ಈ ಕೆರೆಗಳು ಮೀನು ಹಾಗೂ ಸೀಗಡಿ ಸಾಕಣೆಗೂ ಯೋಗ್ಯವಾಗಿರುವುದರಿಂದ ಎಕರೆಗೆ ೪೦೦೦ ಸೀಗಡಿ ಮರಿಗಳೊಂದಿಗೆ ಕಾಟ್ಲ ಹಾಗೂ ರೋಹು ಬಿತ್ತನೆ ಮೀನು ಮರಿಗಳನ್ನು ೨೦೦೦ದ ವರೆಗು ೩:೨ರ ಪ್ರಮಾಣದಲ್ಲಿ ಬಿತ್ತಿ ಬೆಳೆಯಬಹುದು. ಅಸಮರ್ಪಕ ನಿರ್ವಹಣೆಯ ಕೆರೆಗಳಲ್ಲಿ ಸುಮಾರು ೪೦೦ ಕಿ.ಗ್ರಾಂ. ಮೀನು ಹಾಗೂ ೭೦ ಕಿ.ಗ್ರಾಂ. ಸೀಗಡಿ ಬೆಳೆಯನ್ನು ಬೆಳೆಯಬಹುದಾಗಿದೆ.

ಆಹಾರ ನೀಡುವಿಕೆ

ಪಾಲನಾ ಕೆರೆಗಳಲ್ಲಿ ದೊರೆಯುವ ಕೇವಲ ನೈಸರ್ಗಿ ಆಹಾರದ ಮೇಲೆ ಸೀಗಡಿ ಹಾಗೂ ಮೀನುಮರಿಗಳು ಅವಲಂಬಿತಗೊಂಡಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸಲಾಗದು. ವಿವಿಧ ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳನ್ನು ಬಳಸಿ, ತಯಾರಿಸಿದ ಕೃತಕ ಆಹಾರವನ್ನು ನೀಡುವುದರಿಂದ ಉತ್ತಮ ಬೆಳವಣಿಗೆಯನ್ನು ಪಡೆಯಬಹುದು. ಈ ದಿಸೆಯಲ್ಲಿ ಶೇಂಗಾ ಹಿಂಡಿ ಶೇ. ೪೦, ಸೋಯ ಹಿಂಡಿ ಶೇ ೨೦, ಮೀನಿನ ಹಿಂಡಿ ಶೇ ೨೦, ಅಕ್ಕಿತೌಡು ಶೇ ೧೭ ಹಾಗೂ ವಿಟಮಿನ್ ಮತ್ತು ಲವಣಾಂಶಗಳು ಶೇ ೩ರಂತೆ ಆಹಾರ ಪದಾರ್ಥಗಳನ್ನು ಬಳಸಿಕೊಳ್ಳುವುದು ಸೂಕ್ತ. ಈ ಆಹಾರ ಪದಾರ್ಥಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಬೇಯಿಸಬೇಕು. ನಂತರ ಚಪಾತಿ ಹಿಟ್ಟಿನ ಹದಕ್ಕೆ ಮಿದ್ದು ಜರಡಿಯಂತ್ರದ ಸಹಾಯದಿಂದ ಆಹಾರದ ತುಣುಕಗಳನ್ನು ಪಡೆದು ಒಣಗಿಸಿಟ್ಟುಕೊಳ್ಳಬೇಕು. ಈ ಆಹಾರವನ್ನು ಸೀಗಡಿ ಮರಿಗಳಿಗೆ ಅವುಗಳ ದೇಹದ ತೂಕದ ಶೇ ೧೦ರಂತೆ ಪ್ರಾರಂಭದಲ್ಲಿ ನೀಡಿ ನಂತರದ ತಿಂಗಳುಗಳಲ್ಲಿ ಶೇ.೩ರಷ್ಟು ಆಹಾರವನ್ನು ಕೊಡಬೇಕು. ಮಿಶ್ರ ಪಾಲನೆಯ ಕ್ರಮದಲ್ಲಿ ಮೀನುಗಳಿಗೆ ಪೂರಕ ಆಹಾರವಾದ ಶೇಂಗಾ ಹಿಂಡಿ ಮತ್ತು ಅಕ್ಕಿತೌಡನ್ನು ೧:೧ ಪ್ರಮಾಣದಲ್ಲಿ ಮೀನಿನ ತೂಕದ ಶೇ ೨ರಷ್ಟು ಆಹಾರವನ್ನು ಬೆಳಗಿನ ಸಮಯದಲ್ಲಿ ನೀಡಬೇಕು. ಸೀಗಡಿಯ ಆಹಾರದ ತುಣುಕುಗಳನ್ನು ಸಾಯಂಕಾಲದ ಹೊತ್ತಿನಲ್ಲಿ ಕೊಡುವುದು ಸೂಕ್ತವಾಗಿರುತ್ತದೆ. ಆಹಾರವನ್ನು ಸುಮಾರು ೭-೮ ತಿಂಗಳು ಕೊಡುವುದು ಒಳ್ಳೆಯದು.

ಸೀಗಡಿ ಮತ್ತು ಮೀನು ಉತ್ಪಾದನೆ

ಪೂರ್ವಸಿದ್ಧತೆ ಹಾಗೂ ಸಮರ್ಪಕ ಪಾಲನಾ ಕೆರೆಗಳಲ್ಲಿ ಸೀಗಡಿ ಹಾಗೂ ಮೀನು ಕೃಷಿಯನ್ನು ೭ರಿಂದ ೮ ತಿಂಗಳುಗಳ ಕಾಲ ಸಾಕಣೆಯ ನಿರ್ವಹಣೆಯನ್ನು  ಮಾಡಿದಾಗ ಸೀಗಡಿಯು ಸರಾಸರಿ ೫೦ ಗ್ರಾಂ. ತೂಕ ಬೆಳವಣಿಗೆಯಾಗುತ್ತದೆ ಹಾಗೆಯೇ ಮೀನಿನ ತೂಕ ಸರಾಸರಿ ೦.೭೫ ಕಿ.ಗ್ರಾಂ.ವರೆಗೂ ಬೆಳವಣಿಗೆಯಾಗುತ್ತದೆ. ಎಕರೆಗೆ ೧೧೦೦ ಕಿ.ಗ್ರಾಂ ಮೀನು ಹಾಗೂ ೨೦೦ ಕಿ.ಗ್ರಾಂ. ಸೀಗಡಿ ಉತ್ಪಾದನೆಯನ್ನು ಪಡೆಯಬಹುದು.

ಸೀಗಡಿ ಮತ್ತು ಮೀನು ಬೆಳೆಯ ನಿರ್ವಹಣಾ ವೆಚ್ಚ

(ಪ್ರತಿ ಎಕರೆಗೆ)

ಕೊಳದ ತಯಾರಿ

ರೂ. ೨,೦೦೦-೦೦

ಸುಣ್ಣ ಹಾಗೂ ಗೊಬ್ಬರಗಳು

ರೂ. ೪,೦೦೦-೦೦

ಮೀನು ಮರಿಗಳು

ರೂ. ೪,೦೦೦-೦೦

ಸೀಗಡಿ ಮರಿಗಳು

ರೂ. ೮,೦೦೦-೦೦

ಪೂರಕ ಆಹಾರ

ರೂ. ೩೦,೦೦೦-೦೦

ಸೀಗಡಿ ಹಾಗೂ ಮೀನು ಹಿಡಿಯುವುದು

ರೂ. ೩,೦೦೦-೦೦

ಇತರೆ ಖರ್ಚು

ರೂ. ೫,೦೦೦-೦೦

ಒಟ್ಟು ಖರ್ಚು

ರೂ. ೫೬,೦೦೦೦೦

ಆದಾಯ

ಮೀನಿನ ಉತ್ಪಾದನೆ ೧೧೦೦ ಕಿ.ಗ್ರಾಂ ಪ್ರತಿ ಕಿ.ಗ್ರಾಂಗೆ ರೂ. ೫೦ರಂತೆ ಮಾರಿದಾಗ

ರೂ. ೫೫,೦೦೦-೦೦

ಸೀಗಡಿಯ ಉತ್ಪಾದನೆ ೨೦೦ ಕಿ.ಗ್ರಾಂ ಪ್ರತಿ ಕಿ.ಗ್ರಾಂ ಗೆ ರೂ. ೨೫೦ ರಂತೆ ಮಾರಿದಾಗ

ರೂ. ೫೦,೦೦೦-೦೦

ಒಟ್ಟು ಆದಾಯ

ರೂ. ,೦೫,೦೦೦೦೦

ನಿವ್ವಳ ಆದಾಯ ಒಂದು ಎಕರೆಗೆ

ರೂ. ೪೯,೦೦೦೦೦

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ|| ಕೆ.ಮಂಜಪ್ಪ, ಪ್ರಾಧ್ಯಾಪಕರು. ಒಳನಾಡು ಮೀನುಗಾರಿಕೆ ವಿಭಾಗ, ವಲಯ ಕೃಷಿ ಸಂಶೋಧನಾ ಕೇಂದ್ರ, ನವುಲೆ, ಶಿವಮೊಗ್ಗ, ಮೊಬೈಲ್: ೯೯೬೪೮ ೧೮೯೨೨